ಶ್ರೀಮಾರ್ಕಂಡೇಯ ಮಹಾಪುರಾಣ: ಅಧ್ಯಾಯ 44 – ಪ್ರಾಕೃತವೈಕೃತಸರ್ಗವರ್ಣನಮ್

ಕ್ರೌಷ್ಟುಕಿರುವಾಚ ।

ಯಥಾ ಸಸರ್ಜ ವೈ ಬ್ರಹ್ಮಾ ಭಗವಾನಾದಿಕೃತ್ ಪ್ರಜಾಃ ।

ಪ್ರಜಾಪತಿಃ ಪತಿರ್ದೇವಸ್ತನ್ಮೇ ವಿಸ್ತರತೋ ವದ ।। 1 ।।

ಕ್ರೌಷ್ಟುಕಿಯು ಹೇಳಿದನು: “ಪ್ರಜೆಗಳ ಆದಿಕರ್ತ ಭಗವಾನ್ ಪ್ರಜಾಪತಿ ಬ್ರಹ್ಮನು ಹೇಗೆ ಸೃಷ್ಟಿಸಿದನು ಎನ್ನುವುದನ್ನು ವಿಸ್ತಾರವಾಗಿ ಹೇಳು.”

ಮಾರ್ಕಂಡೇಯ ಉವಾಚ

ಕಥಯಾಮ್ಯೇಷ ತೇ ಬ್ರಹ್ಮನ್ಸಸರ್ಜ ಭಗವಾನ್ಯಥಾ

ಲೋಕಕೃಚ್ಛಾಶ್ವತಃ ಕೃತ್ಸ್ನಂ ಜಗತ್ ಸ್ಥಾವರಜಂಗಮಮ್ ।। 2 ।।

ಪದ್ಮಾವಸಾನೇ ಪ್ರಲಯೇ ನಿಶಾಸುಪ್ತೋತ್ಥಿತಃ ಪ್ರಭುಃ

ಸತ್ತ್ವೋದ್ರಿಕ್ತಸ್ತದಾ ಬ್ರಹ್ಮಾ ಶೂನ್ಯಂ ಲೋಕಮವೈಕ್ಷತ ।। 3 ।।

ಇಮಂ ಚೋದಾಹರಂತ್ಯತ್ರ ಶ್ಲೋಕಂ ನಾರಾಯಣಂ ಪ್ರತಿ

ಬ್ರಹ್ಮಸ್ವರೂಪಿಣಂ ದೇವಂ ಜಗತಃ ಪ್ರಭವಾಪ್ಯಯಮ್ ।। 4 ।।

ಆಪೋ ನಾರಾ ಇತಿ ಪ್ರೋಕ್ತಾ ಅಪೋ ವೈ ನರಸೂನವಃ

ತಾಸು ಶೇತೇ ಸ ಯಸ್ಮಾಚ್ಚ ತೇನ ನಾರಾಯಣಃ ಸ್ಮೃತಃ ।। 5 ।।

ಮಾರ್ಕಂಡೇಯನು ಹೇಳಿದನು: “ಬ್ರಹ್ಮನ್! ಲೋಕಕರ್ತು ಶಾಶ್ವತ ಭಗವಾನ್ ಬ್ರಹ್ಮನು ಸ್ಥಾವರ-ಜಂಗಮಗಳಿಂದ ಕೂಡಿದ ಸಮಸ್ತ ಜಗತ್ತನ್ನು ಹೇಗೆ ಸೃಷ್ಟಿಸಿದನು ಎನ್ನುವುದನ್ನು ಹೇಳುತ್ತೇನೆ. ಪದ್ಮಕಲ್ಪದ ಅಂತ್ಯದ ಪ್ರಲಯದ ನಂತರ ಪ್ರಭು ಬ್ರಹ್ಮನು ರಾತ್ರಿಕಳೆಯಲು ಎಚ್ಚೆತ್ತನು. ಸತ್ತ್ವಗುಣದ ಉದ್ರೇಕದಲ್ಲಿದ್ದ ಬ್ರಹ್ಮನು ಲೋಕವು ಶೂನ್ಯವಾದುದನ್ನು ನೋಡಿದನು. ಜಗತ್ಪ್ರಭು ಬ್ರಹ್ಮರೂಪೀ ದೇವನನ್ನು ಹುಟ್ಟಿಸಿದ ನಾರಾಯಣನ ಕುರಿತು ಈ ಶ್ಲೋಕವನ್ನು ಉದಾಹರಿಸುತ್ತಾರೆ. ಪುರುಷರೂಪೀ ಪರಮಾತ್ಮನಿಂದ ಹುಟ್ಟಿದುದರಿಂದ ಜಲತತ್ತ್ವಕ್ಕೆ ನಾರಾ ಎಂದು ಹೆಸರು. ಪರಮಾತ್ಮನು ಕಲ್ಪಾವಸಾನದಲ್ಲಿ ನೀರಿನಲ್ಲಿ ಮಲಗಿದ್ದುದರಿಂದ ನಾರಾ=ಜಲವನ್ನು ಅಯನ=ಆಶ್ರಯಿಸಿದುದರಿಂದ “ನಾರಾಯಣ” ಎಂದಾದನು.

ವಿಬುದ್ಧಃ ಸಲಿಲೇ ತಸ್ಮಿನ್ವಿಧಾಯಾಂತರ್ಗತಾಂ ಮಹೀಮ್

ಅನುಮಾನಾತ್ಸಮುದ್ಧಾರಂ ಕರ್ತುಕಾಮಸ್ತದಾ ಕ್ಷಿತೇ ।। 6 ।।

ಕಲ್ಪಾದಿಯಲ್ಲಿ ಎಚ್ಚರಗೊಂಡ ಪರಮಾತ್ಮನು ಭೂಮಿಯು ಸುತ್ತಲೂ ಇರುವ ಜಲರಾಶಿಯ ಅಡಿಯ ಪಾತಾಳದಲ್ಲಿ ಮುಳುಗಿ ಹೋದುದನ್ನು ಅನುಮಾನ ಪ್ರಮಾಣದಿಂದ ಊಹಿಸಿ, ಭೂಮಿಯನ್ನು ಮೇಲೆತ್ತುವ ಸಂಕಲ್ಪಮಾಡಿದನು.

ಅಕರೋತ್ಸ ತನೂರನ್ಯಾಃ ಕಲ್ಪಾದಿಷು ಯಥಾ ಪುರಾ

ಮತ್ಸ್ಯಕೂರ್ಮಾದಿಕಾಸ್ತದ್ವದ್ವಾರಾಹಂ ವಪುರಾಸ್ಥಿತಃ ।। 7 ।।

ವೇದಯಜ್ಞಮಯಂ ದಿವ್ಯಂ ವೇದಯಜ್ಞಮಯೋ ವಿಭುಃ

ರೂಪಂ ಕೃತ್ವಾ ವಿವೇಶಾಪ್ಸು ಸರ್ವಗಃ ಸರ್ವಸಂಭವಃ ।। 8 ।।

ಸಮುದ್ಧೃತ್ಯ ಚ ಪಾತಾಲಾನ್ಮುಮೋಚ ಸಲಿಲೇ ಭುವಮ್

ಜನಲೋಕಸ್ಥಿತೈಃ ಸಿದ್ಧೈಶ್ಚಿಂತ್ಯಮಾನೋ ಜಗತ್ಪತಿಃ ।। 9 ।।

ತಸ್ಯೋಪರಿ ಜಲೌಘಸ್ಯ ಮಹತೀ ನೌರಿವ ಸ್ಥಿತಾ

ವಿಸ್ತೃತತ್ವಾತ್ತು ದೇಹಸ್ಯ ನ ಮಹೀ ಯಾತಿ ಸಂಪ್ಲವಮ್ ।। 10 ।।

ತತಃ ಕ್ಷಿತಿಂ ಸಮೀಕೃತ್ಯ ಪೃಥಿವ್ಯಾಂ ಸೋಽಸೃಜದ್ಗಿರೀನ್ ।। 11 ।।

ಪ್ರಾಕ್ಸರ್ಗೇ ದಹ್ಯಮಾನೇ ತು ತದಾ ಸಂವರ್ತಕಾಗ್ನಿನಾ

ತೇನಾಗ್ನಿನಾ ವಿಶೀರ್ಣಾಸ್ತೇ ಪರ್ವತಾ ಭುವಿ ಸರ್ವಶಃ ।। 12 ।।

ಶೈಲಾ ಏಕಾರ್ಣವೇ ಮಗ್ನಾ ವಾಯುನಾಪಸ್ತು ಸಂಹತಾಃ

ನಿಷಕ್ತಾ ಯತ್ರ ಯತ್ರಾಸಂಸ್ತತ್ರ ತತ್ರಾಚಲಾಭವನ್ ।। 13 ।।

ಭೂವಿಭಾಗಂ ತತಃ ಕೃತ್ವಾ ಸಪ್ತದ್ವೀಪೋಪಶೋಭಿತಮ್

ಭೂರಾದ್ಯಾಂಶ್ಚತುರೋ ಲೋಕಾನ್ಪೂರ್ವವತ್ಸಮಕಲ್ಪಯತ್ ।। 14 ।।

ಸೃಷ್ಟಿ ಚಿಂತಯತಸ್ತಸ್ಯ ಕಲ್ಪಾದಿಷು ಯಥಾ ಪುರಾ

ಅಬುದ್ಧಿಪೂರ್ವಕಸ್ತಸ್ಮಾತ್ಪ್ರಾದುರ್ಭೂತಸ್ತಮೋಮಯಃ ।। 15 ।।

ಆಗ ಅವನು ಹಿಂದೆ ಅನ್ಯ ಕಲ್ಪಾದಿಗಳಲ್ಲಿ ಮತ್ಸ್ಯಕೂರ್ಮಾದಿ ಶರೀರಗಳನ್ನು ಧರಿಸಿದಂತೆ ಭೂಮಿಯನ್ನು ಮೇಲೆತ್ತಲು ವರಾಹರೂಪವನ್ನು ಧರಿಸಿದನು. ಸರ್ವಸಂಭವ, ಸರ್ವಗ, ಮತ್ತು ವೇದಯಜ್ಞಮಯ ವಿಭುವು ವೇದಯಜ್ಞಮಯ ದಿವ್ಯ ವರಾಹರೂಪವನ್ನು ತಾಳಿ ಜಲರಾಶಿಯನ್ನು ಪ್ರವೇಶಿಸಿದನು. ಜನಲೋಕದಲ್ಲಿದ್ದ ಸಿದ್ಧರಿಂದ ಧ್ಯಾನಿಸಲ್ಪಡುತ್ತಿದ್ದ ಜಗತ್ಪತಿಯು ಪಾತಾಲದಿಂದ ಭೂಮಿಯನ್ನು ಮೇಲಕ್ಕೆತ್ತಿ ಜಲರಾಶಿಯಲ್ಲಿ ಬಿಟ್ಟನು. ವಿಸ್ತಾರವಾದ ಜಲರಾಶಿಯ ಮೇಲೆ ಭೂಮಿಯು ದೋಣಿಯಂತೆ ನಿಂತುಕೊಂಡಿತು. ಭೂಮಿಯ ಆಕಾರವು ಹೆಚ್ಚು ವಿಸ್ತಾರವಾದ್ದರಿಂದ ಅದು ನೀರಿನಲ್ಲಿ ಚಲಿಸದಂತೆ ನಿಂತುಕೊಂಡಿತು. ನಂತರ ಪರಮಾತ್ಮನು ಪಾತಾಲದಿಂದ ಮೇಲೆತ್ತಿ ತಂದ ಭೂಮಿಯನ್ನು ಸಮತಟ್ಟಾಗಿ ಮಾಡಿ ಅಲ್ಲಲ್ಲಿ ಪರ್ವತಗಳನ್ನು ಸೃಷ್ಟಿಸಿದನು. ಹಿಂದಿನ ಸೃಷ್ಟಿಯು ಸಂವರ್ತಕಾಗ್ನಿಯಿಂದ ಸುಟ್ಟುಹೋಗುತ್ತಿದ್ದಾಗ ಆ ಅಗ್ನಿಯಿಂದಾಗಿ ಪರ್ವತಗಳೆಲ್ಲವೂ ಕರಗಿ ಭೂಮಿಯ ಮೇಲೆ ಬಿದ್ದಿದ್ದವು. ವಾಯುವಿನಿಂದ ಹೊಡೆಯಲ್ಪಡುತ್ತಿದ್ದ ಏಕಾರ್ಣವದಲ್ಲಿ ಮುಳುಗಿದ್ದ ಪರ್ವತಗಳು ಎಲ್ಲೆಲ್ಲಿದ್ದವೋ ಅಲ್ಲಲ್ಲೇ ಕಾಣಿಸಿಕೊಂಡವು. ಪರಮಾತ್ಮನು ಸಪ್ತದ್ವೀಪಗಳಿಂದ ಶೋಭಿಸುವಂತೆ ಭೂಮಿಯನ್ನು ವಿಭಜಿಸಿದನು. ಭೂಮಿಯ ಮೇಲಿದ್ದ ನಾಲ್ಕು ಲೋಕಗಳನ್ನು[1] ಹಿಂದಿನಂತೆಯೇ ರಚಿಸಿದನು. ಹಿಂದಿನ ಕಲ್ಪಾದಿಗಳಲ್ಲಿ ಹೇಗೋ ಹಾಗೆ ಈ ಕಲ್ಪದ ಪ್ರಾರಂಭದಲ್ಲಿಯೂ ಸೃಷ್ಟಿಕರ್ತನು ಸೃಷ್ಟಿಕಾರ್ಯದ ಕುರಿತು ಯೋಚಿಸುತ್ತಿದ್ದಾಗ ಅಬುದ್ಧಿಪೂರ್ವಕ ಸೃಷ್ಟಿಯೆಂದು ಕರೆಯುವ ತಮೋಗುಣಮಯವಾದ ವಸ್ತುಗಳ ಸೃಷ್ಟಿಯು ಮೊದಲು ಉದಯಿಸಿತು.

ತಮೋ ಮೋಹೋ ಮಹಾಮೋಹಸ್ತಾಮಿಸ್ರೋ ಹ್ಯಂಧಸಂಜ್ಞಿತಃ

ಅವಿದ್ಯಾ ಪಂಚಪರ್ವೈಷಾ ಪ್ರಾದುರ್ಭೂತಾ ಮಹಾತ್ಮನಃ ।। 16 ।।

ಪಂಚಧಾವಸ್ಥಿತಃ ಸರ್ಗೋ ಧ್ಯಾಯತೋಽಪ್ರತಿಬೋಧವಾನ್

ಬಹಿರಂತಶ್ಚಾಪ್ರಕಾಶಃ ಸಂವೃತಾತ್ಮಾ ನಗಾತ್ಮಕಃ ।। 17 ।।

ಮುಖ್ಯಾ ನಗಾ ಯತಶ್ಚೋಕ್ತಾ ಮುಖ್ಯಸರ್ಗಸ್ತತಸ್ತ್ವಯಮ್ ।  

ಆಗ ಮಹಾತ್ಮನಲ್ಲಿ ತಮಸ್ಸು, ಮೋಹ, ಮಹಾಮೋಹ, ತಾಮಿಸ್ರ ಮತ್ತು ಅಂಧತಾಮಿಸ್ರ ಎಂಬ ಐದು ಬಗೆಯ ಅವಿದ್ಯೆಯು ಪ್ರಾದುರ್ಭವಿಸಿತು. ಸೃಷ್ಟಿರಚನೆಯನ್ನು ಧ್ಯಾನಿಸುತ್ತಿದ್ದ ಅವನಲ್ಲಿ ಜ್ಞಾನಶಕ್ತಿಯಿಲ್ಲದ ಐದು ಅವಿದ್ಯಾಂಶಗಳಿಂದ ತುಂಬಿದ ಸೃಷ್ಟಿಯು ಉಂಟಾಯಿತು. ಆ ಸೃಷ್ಟಿಯು ಒಳಗೆ ಮತ್ತು ಹೊರಗೆ ಪ್ರಕಾಶವಿಲ್ಲದ, ಅಜ್ಞಾನದಿಂದ ಕವಿಯಲ್ಪಟ್ಟ ಆತ್ಮವುಳ್ಳ, ಚಲನೆಯಿಲ್ಲದ ಸೃಷ್ಟಿಯಾಗಿತ್ತು. ಆ ಸೃಷ್ಟಿಯಲ್ಲಿ ಅಚಲಗಳು ಮುಖ್ಯವಾಗಿದ್ದವು. ಪರ್ವತಸೃಷ್ಟಿಯನ್ನು ಮುಖ್ಯ ಸೃಷ್ಟಿಯೆಂದು ಹೇಳುತ್ತಾರೆ.

ತಂ ದೃಷ್ಟ್ವಾಸಾಧಕಂ ಸರ್ಗಮಮನ್ಯದಪರಂ ಪುನಃ ।। 18 ।।

ತಸ್ಯಾಭಿಧ್ಯಾಯತಃ ಸರ್ಗಂ ತಿರ್ಯಕ್ಸ್ರೋತೋ ಹ್ಯವರ್ತತ

ಯಸ್ಮಾತ್ತಿರ್ಯಕ್ಪ್ರವೃತ್ತಿಃ ತಿರ್ಯಕ್ಸ್ರೋತಸ್ತತಃ ಸ್ಮೃತಃ ।। 19 ।।

ಪಶ್ವಾದಯಸ್ತೇ ವಿಖ್ಯಾತಾಸ್ತಮಃ ಪ್ರಾಯಾ ಹ್ಯವೇದಿನಃ

ಅತ್ಪಥಗ್ರಾಹಿನಶ್ಚೈವ ತೇಽಜ್ಞಾನೇ ಜ್ಞಾನಮಾನಿನಃ ।। 20 ।।

ಅಹಂಕೃತಾ ಅಹಂಮಾನಾ ಅಷ್ಟಾವಿಂಶದ್ವಿಧಾತ್ಮಿಕಾಃ

ಅಂತಃ ಪ್ರಕಾಶಾಸ್ತೇ ಸರ್ವೇ ಆವೃತಾಸ್ತು ಪರಸ್ಪರಮ್ ।। 21 ।।

ಆ ಅಚೇತನ ಸೃಷ್ಟಿಯು ಮುಂದುವರಿಯದೇ ನಿಂತಿದುದನ್ನು ನೋಡಿ ಮತ್ತೊಂದು ಬಗೆಯ ಸೃಷ್ಟಿಯನ್ನು ಧ್ಯಾನಿಸಿದನು. ಹಾಗೆ ಧ್ಯಾನಿಸುತ್ತಿದ್ದ ಬ್ರಹ್ಮನಿಂದ ತಿರ್ಯಕ್ಪ್ರಾಣಿಗಳ ಸೃಷ್ಟಿಯು ಹುಟ್ಟಿಕೊಂಡಿತು. ಅಡ್ಡಲಾಗಿ ನಡೆಯುವ ಪ್ರವೃತ್ತಿವುಳ್ಳದ್ದರಿಂದ ಆ ಸೃಷ್ಟಿವರ್ಗವು ತಿರ್ಯಕ್ಸ್ರೋತವೆಂದು ಸ್ಮರಿಸಲ್ಪಟ್ಟಿತು. ತಿರ್ಯಕ್ಸ್ರೋತ ಸೃಷ್ಟಿಯಲ್ಲಿ ತಮೋಗುಣಗಳಿಂದ ತುಂಬಿದ, ಅಜ್ಞಾನವನ್ನೇ ಜ್ಞಾನವೆಂದು ತಿಳಿದಿರುವ, ಸ್ವತಂತ್ರವಾಗಿ ಉನ್ಮಾರ್ಗದಲ್ಲಿ ನಡೆಯುವ ಪಶುಮೊದಲಾದವುಗಳು ಸೇರಿವೆ. ಅಹಂಕಾರಕ್ಕೊಳಗಾಗಿರುವ, ಬುದ್ಧಿಯನ್ನೇ ಪ್ರಮಾಣವೆಂದು ತಿಳಿದಿರುವ, ಅನ್ಯೋನ್ಯ ಆವರಣದಿಂದ ಕೂಡಿರುವ ಮತ್ತು ಅಂತರಂಗದಲ್ಲಿ ಪ್ರಕಾಶವಿರುವ ಆ ಪ್ರಾಣಿಗಳು ಇಪ್ಪತ್ತೆಂಟು ವಿಧಗಳು.  

ತಮಪ್ಯಸಾಧಕಂ ಮತ್ವಾ ಧ್ಯಾಯತೋಽನ್ಯಸ್ತತೋಽಭವತ್

ಊರ್ಧ್ವಸ್ರೋತಸ್ತೃತೀಯಸ್ತು ಸಾತ್ತ್ವಿಕೋರ್ಧ್ವಮವರ್ತತ ।। 22 ।।

ತೇ ಸುಖಪ್ರೀತಿಬಹುಲಾ ಬಹಿರಂತಸ್ತ್ವನಾವೃತಾಃ

ಪ್ರಕಾಶಾ ಬಹಿರಂತಶ್ಚ ಊರ್ಧ್ವಸ್ರೋತಃ ಸಮುದ್ಭವಾಃ ।। 23 ।।

ತುಷ್ಟಾತ್ಮಸ್ತೃತೀಯಸ್ತು ದೇವಸರ್ಗೋ ಹಿ ಸ ಸ್ಮೃತಃ

ತಸ್ಮಿನ್ ಸರ್ಗೇಽಭವತ್ ಪ್ರೀತಿರ್ನಿಷ್ಪನ್ನೇ ಬ್ರಹ್ಮಣಸ್ತದಾ ।। 24 ।।

ಅವೂ ಕೂಡ ಸೃಷ್ಟಿಗೆ ಸಾಧಕಗಳೆಲ್ಲವೆಂದು ಧ್ಯಾನಿಸುತ್ತಿರಲು ಇನ್ನೊಂದು ಸೃಷ್ಟಿಯು ಉಂಟಾಯಿತು. ಮೂರನೆಯ ಸೃಷ್ಟಿಯು ಸತ್ತ್ವಗುಣಪೂರ್ಣವಾದ ಹಿಂದಿನ ಸೃಷ್ಟಿಗಿಂತಲೂ ಮೇಲಾದ ಊರ್ಧ್ವಸ್ರೋತವೆಂಬ ಸೃಷ್ಟಿಯು. ಊರ್ಧ್ವಸ್ರೋತದಲ್ಲಿ ಉದ್ಭವಿಸಿದ ಪ್ರಜೆಗಳು ಅತಿಶಯ ಸುಖ-ಪ್ರೀತಿಯುಳ್ಳವರೂ, ಒಳ-ಹೊರಭಾಗಗಳಲ್ಲಿ ಆವರಣವಿಲ್ಲದವರೂ, ಒಳ-ಹೊರಭಾಗಗಳಲ್ಲಿ ಪ್ರಕಾಶಮಯರೂ ಆಗಿದ್ದರು. ತುಷ್ಟಾತ್ಮರಾದ ದೇವತೆಗಳ ಈ ಮೂರನೆಯ ಸೃಷ್ಟಿಯು ದೇವಸರ್ಗ ಎಂದಾಗಿದೆ. ಆ ಸೃಷ್ಟಿಯಾದಾಗ ಬ್ರಹ್ಮನು ಪರಮಪ್ರೀತನಾಗಿದ್ದನು.

ತತೋಽನ್ಯಂ ಸ ತದಾ ದಧ್ಯೌ ಸಾಧಕಂ ಸರ್ಗಮುತ್ತಮಮ್

ತಥಾಭಿಧ್ಯಾಯತಸ್ತಸ್ಯ ಸತ್ಯಾಭಿಧ್ಯಾಯಿನಸ್ತತಃ ।। 25 ।।

ಪ್ರಾದುರ್ಬಭೌ ತದಾವ್ಯಕ್ತಾದರ್ವಾಕ್ಸ್ರೋತಸ್ತು ಸಾಧಕಃ

ಯಸ್ಮಾದರ್ವಾಗ್ವ್ಯವರ್ತಂತ ತತೋಽರ್ವಾಕ್ಸ್ರೋತಸಸ್ತು ತೇ ।। 26 ।।

ತೇ ಚ ಪ್ರಕಾಶಬಹುಲಾಸ್ತಮೋದ್ರಿಕ್ತಾ ರಜೋಽಧಿಕಾಃ

ತಸ್ಮಾತ್ತೇ ದುಃಖಬಹುಲಾ ಭೂಯೋ ಭೂಯಶ್ಚ ಕಾರಿಣಃ ।। 27 ।।

ಪ್ರಕಾಶಾ ಬಹಿರಂತಶ್ಚ ಮನುಷ್ಯಾಃ ಸಾಧಕಾಶ್ಚ ತೇ ।। 28 ।।

ನಂತರ ಬ್ರಹ್ಮನು ಇನ್ನೊಂದು ಉತ್ತಮ ಪ್ರಜಾವರ್ಗಸಾಧಕವಾದ ಸೃಷ್ಟಿಯನ್ನು ಧ್ಯಾನಿಸಿದನು. ಸತ್ಯಸಂಕಲ್ಪದಿಂದ ಧ್ಯಾನಿಸುತ್ತಿದ್ದಾಗ ಇನ್ನೊಂದು ಬಗೆಯ ಸೃಷ್ಟಿಯು ಉಂಟಾಯಿತು. ಅವ್ಯಕ್ತತತ್ತ್ವದಿಂದ ಸೃಷ್ಟಿವರ್ಗವನ್ನು ಮುಂದುವರಿಸುವ ಅರ್ವಾಕ್ಸ್ರೋತವೆಂಬ ಸೃಷ್ಟಿಯು ನಡೆಯಿತು. ಆ ಸೃಷ್ಟಿಯಲ್ಲಾದ ಪ್ರಜಾವರ್ಗವು ಕೊನೆಯಲ್ಲಿ ಹುಟ್ಟಿದುದರಿಂದ ಅದು ಅರ್ವಾಕ್ಸ್ರೋತ ಸೃಷ್ಟಿಯೆಂದು ಕರೆಯಲ್ಪಟ್ಟಿತು. ಆ ಪ್ರಜೆಗಳು ಉದ್ರಿಕ್ತ ತಮೋಗುಣವುಳ್ಳವರೂ ಮತ್ತು ಅದಿಕ ರಜೋಗುಣದಿಂದ ಕೂಡಿದವರೂ ಆಗಿದ್ದರಿಂದ ಅತಿಶಯ ದುಃಖವುಳ್ಳವರೂ ಮತ್ತೆ ಮತ್ತೆ ಸಾಹಸ-ಉದ್ಯಮಗಳುಳ್ಳವರೂ ಆಗಿದ್ದಾರೆ. ಈ ಸೃಷ್ಟಿಯಲ್ಲಾದ ಮನುಷ್ಯರು ಒಳ-ಹೊರಭಾಗಗಳಲ್ಲಿ ಜ್ಞಾನಪ್ರಕಾಶವುಳ್ಳವರೂ ಎಲ್ಲ ಸೃಷ್ಟಿಗಿಂತಲೂ ಹೆಚ್ಚು ಸೃಷ್ಟಿಯನ್ನು ಸಾಧಿಸುವವರೂ ಆಗಿದ್ದರು.

ಪಂಚಮೋಽನುಗ್ರಹಃ ಸರ್ಗಃ ಸ ಚತುರ್ಧಾ ವ್ಯವಸ್ಥಿತಃ

ವಿಪರ್ಯಯೇಣ ಸಿದ್ಧ್ಯಾ ಚ ಶಾಂತ್ಯಾ ತುಷ್ಟ್ಯಾ ತಥೈವ ಚ ।। 29 ।।

ನಿರ್ವೃತ್ತಂ ವರ್ತಮಾನಂಚ ತೇಽರ್ಥಂ ಜಾನಂತಿ ವೈ ಪುನಃ

ಭೂತಾದಿಕಾನಾಂ ಭೂತಾನಾಂ ಷಷ್ಠಃ ಸರ್ಗ ಸ ಉಚ್ಯತೇ ।। 30 ।।

ತೇ ಪರಿಗ್ರಾಹಿಣಃ ಸರ್ವೇ ಸಂವಿಭಾಗರತಾಸ್ತಥಾ

ಚೋದನಾಶ್ಚಾಪ್ಯಶೀಲಾಶ್ಚ ಜ್ಞೇಯಾ ಭೂತಾದಿಕಾಶ್ಚ ತೇ ।। 31 ।।

ಐದನೆಯದು ಅನುಗ್ರಹ ಸೃಷ್ಟಿಯು. ಅದು ಸ್ವಭಾವ ವೈಷಮ್ಯ, ಕಾರ್ಯಸಿದ್ಧಿ, ಶಾಂತಿ ಮತ್ತು ತುಷ್ಟಿ ಎಂಬ ನಾಲ್ಕು ಗುಣಗಳ ಪ್ರಾಧಾನ್ಯದಿಂದ ನಾಲ್ಕು ಬಗೆಗಳು. ಅನುಗ್ರಹ ಸೃಷ್ಟಿಯಲ್ಲಾದವರು ಭೂತ-ಭವಿಷ್ಯ-ವರ್ತಮಾನಗಳ ಅರ್ಥವನ್ನು ತಿಳಿದಿರುತ್ತಾರೆ. ಭೂತ-ಯಕ್ಷಮೊದಲಾದವುಗಳ ಸೃಷ್ಟಿಯು ಆರನೆಯ ಸೃಷ್ಟಿಯೆಂದು ಹೇಳುತ್ತಾರೆ. ಭೂತಾದಿಗಳ ಆರನೆಯ ಸೃಷ್ಟಿಯಲ್ಲಿಯ ಪ್ರಜೆಗಳು ಎಲ್ಲವನ್ನು ವ್ಯಾಪಿಸಿರುವವರೂ, ಭೋಗಿಗಳೂ, ವಿತರಣಶೀಲವುಳ್ಳವರೂ, ಪರರಿಗೆ ಚೋದಕರೂ, ಶೀಲಾಚಾರವರ್ಜಿತರೂ ಆಗಿರುತ್ತಾರೆ.

ಪ್ರಥಮೋ ಮಹತಃ ಸರ್ಗೋ ವಿಜ್ಞೇಯೋ ಬ್ರಹ್ಮಣಸ್ತು ಸಃ

ತನ್ಮಾತ್ರಾಣಾಂ ದ್ವಿತೀಯಸ್ತು ಭೂತಸರ್ಗಃ ಸ ಉಚ್ಯತೇ ।। 32 ।।

ವೈಕಾರಿಕಸ್ತೃತೀಯಸ್ತು ಸರ್ಗಶ್ಚೈಂದ್ರಿಯಕಃ ಸ್ಮೃತಃ

ಇತ್ಯೇಷ ಪ್ರಾಕೃತಃ ಸರ್ಗಃ ಸಂಭೂತೋಬುದ್ಧಿಪೂರ್ವಕಃ ।। 33 ।।

ಮುಖ್ಯಃ ಸರ್ಗಶ್ಚತುರ್ಥಸ್ತು ಮುಖ್ಯಾ ವೈ ಸ್ಥಾವರಾಃ ಸ್ಮೃತಾಃ

ತಿರ್ಯಕ್ಸ್ರೋತಸ್ತು ಯಃ ಪ್ರೋಕ್ತಸ್ತಿರ್ಯಗ್ಯೋನ್ಯಃ ಸ ಪಂಚಮಃ ।। 34 ।।

ತಥೋರ್ಧ್ವಸ್ರೋತಸಾಂ ಷಷ್ಠೋ ದೇವಸರ್ಗಸ್ತು ಸ ಸ್ಮೃತಃ

ತತೋರ್ವಾಕ್ಸ್ರೋತಸಾಂ ಸರ್ಗಃ ಸಪ್ತಮಃ ಸ ತು ಮಾನುಷಃ ।। 35 ।।

ಅಷ್ಟಮೋಽನುಗ್ರಹಃ ಸರ್ಗಃ ಸಾತ್ತ್ವಿಕಸ್ತಾಮಸಶ್ಚ ಸಃ

ಪಂಚೈತೇ ವೈಕೃತಾಃ ಸರ್ಗಾಃ ಪ್ರಾಕೃತಾಸ್ತು ತ್ರಯಃ ಸ್ಮೃತಾಃ ।। 36 ।।

ಪ್ರಾಕೃತೋ ವೈಕೃತಶ್ಚೈವ ಕೌಮಾರೋ ನವಮಃ ಸ್ಮೃತಃ

ಇತ್ಯೇತೇ ವೈ ಸಮಾಖ್ಯಾತಾ ನವ ಸರ್ಗಾಃ ಪ್ರಜಾಪತೇಃ ।। 37 ।।

ಪ್ರಾಕೃತಾ ವೈಕೃತಾಶ್ಚೈವ ಜಗತೋ ಮೂಲಹೇತವಃ

ಸೃಜತೋ ಜಗದೀಶಸ್ಯ ಕಿಮನ್ಯಚ್ಛ್ರೋತುಮಿಚ್ಛಸಿ ।। 38 ।।

ಹೀಗೆ ನಡೆದ ಬ್ರಹ್ಮನ ಸೃಷ್ಟಿಗಳಲ್ಲಿ ಮೊದಲನೆಯದು ಮಹತ್ತತ್ತ್ವದ ಸೃಷ್ಟಿಯೆಂದು ತಿಳಿಯಬೇಕು. ಎರಡನೆಯದಾದ ತನ್ಮಾತ್ರೆಗಳ ಸೃಷ್ಟಿಯು ಭೂತಸೃಷ್ಟಿಯೆಂದು ಕರೆಯಲ್ಪಟ್ಟಿದೆ. ವೈಕಾರಿಕವೆಂಬ ಮೂರನೆಯ ಸೃಷ್ಟಿಯು ಇಂದ್ರಿಯಗಳ ಸೃಷ್ಟಿಯೆಂದು ಹೇಳುತ್ತಾರೆ. ಕ್ರಮವಾಗಿ ಆದ ಈ ಮೂರು ಸೃಷ್ಟಿಗಳ ವರ್ಗವು ಅಬುದ್ಧಿಪೂರ್ವಕವಾದ ಪ್ರಾಕೃತ ಸರ್ಗ ಎಂದೆನಿಸಿಕೊಂಡಿದೆ. ನಾಲ್ಕನೆಯದು ಮುಖ್ಯಸೃಷ್ಟಿಯು. ಮುಖ್ಯ ಎಂದರೆ ಸ್ಥಾವರಗಳು ಎಂದಿದೆ. ಮೂಕಜಂತುಯೋನಿಯಲ್ಲಿ ಜನಿಸಿರುವುದರಿಂದ ತಿರ್ಯಕ್ಸ್ರೋತವೆಂದು ಕರೆಯಲ್ಪಡುವ ಸೃಷ್ಟಿಯು ಐದನೆಯದು. ನಂತರ ಆರನೆಯ ಸೃಷ್ಟಿಯು ಊರ್ಧ್ವಸ್ರೋತ ಅಥವಾ ದೇವಸರ್ಗವೆಂದು ಕರೆಯಲ್ಪಟ್ಟಿದೆ. ನಂತರದ ಏಳನೆಯದು ಉರ್ವಾಕ್ಸ್ರೋತ ಸೃಷ್ಟಿ. ಮನುಷ್ಯ ಸೃಷ್ಟಿ. ಎಂಟನೆಯದು ಸತ್ತ್ವತಮೋಗುಣಗಳಿಂದ ಕೂಡಿದ ಅನುಗ್ರಹಸೃಷ್ಟಿ. ಹೀಗೆ ಪ್ರಾಕೃತಸರ್ಗವು ಮೂರು ವಿಧವಾಗಿಯೂ ವೈಕೃತಸರ್ಗವು ಐದು ವಿಧವಾಗಿಯೂ ಇವೆ. ಪ್ರಾಕೃತ ಮತ್ತು ವೈಕೃತಸೃಷ್ಟಿಗಳ ಈ ಎಂಟು ಸೃಷ್ಟಿಗಳ ನಂತರದ ಒಂಬತ್ತನೆಯದು ಕೌಮಾರಸೃಷ್ಟಿ. ಹೀಗೆ ಪ್ರಜಾಪತಿಯಿಂದ ಆದ ಒಂಬತ್ತು ಸರ್ಗಗಳ ಕುರಿತು ಹೇಳಿದ್ದಾರೆ. ಜಗತ್ತನ್ನು ಸೃಷ್ಟಿಸಿದ ಈ ಜಗತ್ತಿಗೆ ಪ್ರಾಕೃತ-ವೈಕೃತ ಸೃಷ್ಟಿಗಳೇ ಮೂಲಕಾರಣಗಳಾಗಿವೆ. ಇನ್ನೂ ಏನನ್ನು ಕೇಳಬಯಸುತ್ತೀಯೆ?”


ಇತಿ ಶ್ರೀ ಮಾರ್ಕಂಡೇಯಮಹಾಪುರಾಣೇ ಪ್ರಾಕೃತವೈಕೃತಸರ್ಗವರ್ಣನಂ ನಾಮ ಚತುಶ್ಚತ್ವಾರಿಂಶೋಽಧ್ಯಾಯಃ ।।

[1] ಭುವರ್ಲೋಕ, ಸುವರ್ಲೋಕ, ತಪೋಲೋಕ ಮತ್ತು ಮಹರ್ಲೋಕ.

Leave a Reply

Your email address will not be published. Required fields are marked *