Harivamsha: Chapter 66

ಹರಿವಂಶ: ವಿಷ್ಣುಪರ್ವಃ

66

ಯಮುನಾವರ್ಣನಮ್

ಶ್ರೀಕೃಷ್ಣನ ಯಮುನಾ ವಿಹಾರ ಮತ್ತು ಕಾಲಿಯನಾಗನನ್ನು ನಿಗ್ರಹಿಸುವ ವಿಚಾರ (1-60).

19066001  ವೈಶಂಪಾಯನ ಉವಾಚ

19066001a ಕದಾಚಿತ್ತು ತದಾ ಕೃಷ್ಣೋ ವಿನಾ ಸಂಕರ್ಷಣೇನ ವೈ । 

19066001c ಚಚಾರ ತದ್ವನಂ ರಮ್ಯಂ ಕಾಮರೂಪೀ ವರಾನನಃ ।।   

ವೈಶಂಪಾಯನನು ಹೇಳಿದನು: “ಒಮ್ಮೆ ಕಾಮರೂಪೀ ವರಾನನ ಕೃಷ್ಣನು ಜೊತೆಗೆ ಸಂಕರ್ಷಣನಿಲ್ಲದೇ ಆ ರಮ್ಯ ವನದಲ್ಲಿ ಸಂಚರಿಸುತ್ತಿದ್ದನು.

19066002a ಕಾಕಪಕ್ಷಧರಃ ಶ್ರೀಮಾನ್ ಶ್ಯಾಮಃ ಪದ್ಮದಲೇಕ್ಷಣಃ । 

19066002c ಶ್ರೀವತ್ಸೇನೋರಸಾ ಯುಕ್ತಃ ಶಶಾಂಕ ಇವ ಲಕ್ಷ್ಮಣಾ ।।   

ದ್ದಕೂದಲುಗಳನ್ನು ಬಿಟ್ಟಿದ್ದ ಶ್ರೀಮಾನ್ ಪದ್ಮದಲೇಕ್ಷಣ ಶ್ಯಾಮನು ಎದೆಯಮೇಲೆ ಶ್ರೀವತ್ಸದ ಚಿಹ್ನೆಯೊಂದಿಗೆ ಮೊಲದ ಚಿಹ್ನೆಯಿರುವ ಚಂದ್ರನಂತೆ ಶೋಭಿಸುತ್ತಿದ್ದನು.

19066003a ಸಾಂಗದೇನಾಗ್ರಹಸ್ತೇನ ಪಂಕಜೋದ್ಭಿನ್ನವಕ್ಷಸಾ । 

19066003c ಸುಕುಮಾರಾಭಿತಾಮ್ರೇಣ ಕ್ರಾಂತವಿಕ್ರಾಂತಗಾಮಿನಾ ।।   

ಅಂಗದಗಳಿಂದ ವಿಭೂಷಿತ ಅವನ ಕೈಯ ತುದಿಗಳು ವಿಕಸಿತ ಕಮಲಗಳಂತೆ ಕಾಂತಿಯುಕ್ತವಾಗಿದ್ದವು. ಅವನ ಸುಕುಮಾರ ಕೆಂಪು ಕಾಲುಗಳು ಕ್ರಾಂತವಿಕ್ರಾಂತಗತಿಯಲ್ಲಿ ಚಲಿಸುತ್ತಿರಲು ಅವನಿಗೆ ಅನುಪಮ ಶೋಭೆಯನ್ನು ನೀಡುತ್ತಿದ್ದವು.

19066004a ಪೀತೇ ಪ್ರೀತಿಕರೇ ನೃಣಾಂ ಪದ್ಮಕಿಂಜಲ್ಕಸಪ್ರಭೇ । 

19066004c ಸೂಕ್ಷ್ಮೇ ವಸಾನೋ ವಸನೇ ಸಸಂಧ್ಯ ಇವ ತೋಯದಃ ।।   

ಮನುಷ್ಯರ ಆನಂದವನ್ನು ಹೆಚ್ಚಿಸುವ ಕಮಲ ಕೇಸರ ಸಮಾನ ಹಳದೀ ಬಣ್ಣದ ಎರಡು ಸೂಕ್ಷ್ಮ ವಸ್ತ್ರಗಳನ್ನು ಉಟ್ಟಿದ್ದ ಅವನು ಸಂಧ್ಯಾಕಾಲದ ಚಿನ್ನದ ವರ್ಣದಿಂದ ಕೂಡಿದ ಮೇಘದಂತೆ ಸುಶೋಭಿತನಾಗಿದ್ದನು.

19066005a ವತ್ಸವ್ಯಾಪಾರಯುಕ್ತಾಭ್ಯಾಂ ವ್ಯಗ್ರಾಭ್ಯಾಂ ಗಂಡರಜ್ಜುಭಿಃ । 

19066005c ಭುಜಾಭ್ಯಾಂ ಸಾಧುವೃತ್ತಾಭ್ಯಾಂ ಪೂಜಿತಾಭ್ಯಾಂ ದಿವೌಕಸೈಃ ।।   

ದಿವೌಕಸರಿಂದ ಪೂಜಿತಗೊಂಡಿದ್ದಅವನ ಎರಡೂ ಸುಂದರ ಉರುಟು ಭುಜಗಳು ಕರುಗಳನ್ನು ಮುದ್ದುಮಾಡುವುದರಲ್ಲಿ ಸಂಲಗ್ನವಾಗಿದ್ದವು. ಅವನ ಕುತ್ತಿಗೆಯಲ್ಲಿ ಗಂಟೆಗಳನ್ನು ಕಟ್ಟಿದ್ದ ಹಗ್ಗವು ನೇತಾಡುತ್ತಿತ್ತು.

19066006a ಸದೃಶಂ ಪುಂಡರೀಕಸ್ಯ ಗಂಧೇನ ಕಮಲಸ್ಯ ಚ । 

19066006c ರರಾಜ ಚಾಸ್ಯ ತದ್ಬಾಲ್ಯೇ ರುಚಿರೌಷ್ಠಪುಟಂ ಮುಖಮ್ ।।   

ಬಾಲ್ಯಾವಸ್ಥೆಯ ಸುಂದರ ತುಟಿಗಳಿಂದ ಸುಶೋಭಿತ ಅವನ ಮುಖವು ಕಮಲದಂತೆ ಸುಂದರ ಮತ್ತು ಅದರ ಗಂಧದಿಂದ ಸುವಾಸಿತಗೊಂಡು ತನ್ನ ಅದ್ಭುತ ಶೋಭೆಯನ್ನು ಪಸರಿಸುತ್ತಿತ್ತು.

19066007a ಶಿಖಾಭಿಸ್ತಸ್ಯ ಮುಕ್ತಾಭೀ ರರಾಜ ಮುಖಪಂಕಜಮ್ । 

19066007c ವೃತಂ ಷಟ್ಪದಪಂಕ್ತೀಭಿರ್ಯಥಾ ಸ್ಯಾತ್ಪದ್ಮಮಂಡಲಮ್ ।।   

ದುಂಬಿಗಳಿಂದ ಮುತ್ತಲ್ಪಟ್ಟ ಕಮಲಮಂಡಲದಂತೆ ಅವನ ಮುಖವು ಗುಂಗುರು ಕೂದಲುಗಳಿಂದ ಆವೃತಗೊಂಡು ರಾರಾಜಿಸುತ್ತಿತ್ತು.

19066008a ತಸ್ಯಾರ್ಜುನಕದಂಬಾಢ್ಯಾ ನೀಪಕಂದಲಮಾಲಿನೀ । 

19066008c ರರಾಜ ಮಾಲಾ ಶಿರಸಿ ನಕ್ಷತ್ರಾಣಾಂ ಯಥ ದಿವಿ ।।   

ಅವನ ತಲೆಯ ಮೇಲೆ ಅರ್ಜುನ, ಕದಂಬ, ನೀಪ ಮತ್ತು ನೂತನ ಕುಸುಮ-ಪುಷ್ಪಗಳ ಮಾಲೆಯೊಂದು ದಿವಿಯಲ್ಲಿಯ ನಕ್ಷತ್ರಗಳಂತೆ ರಾರಾಜಿಸುತ್ತಿತ್ತು.

19066009a ಸ ತಯಾ ಮಾಲಯಾ ವೀರಃ ಶುಶುಭೇ ಕಂಠಸಕ್ತಯಾ । 

19066009c ಮೇಘಮಾಲಾಂಬುದಶ್ಯಾಮೋ ನಭಸ್ಯ ಇವ ಮೂರ್ತಿಮಾನ್ ।।   

ಅಂತಹ ಮಾಲೆಯೊಂದು ಆ ವೀರನ ಕಂಠದಲ್ಲಿಯೂ ಶೋಭಿಸುತ್ತಿತ್ತು. ಇದರಿಂದಾಗಿ ಆ ಶ್ಯಾಮನು ಮೇಘಮಾಲೆಗಳ ಶ್ಯಾಮಕಾಂತಿಯುಕ್ತ ಮೂರ್ತಿಮಾನ್ ಭಾದ್ರಪದ ಮಾಸದ ಆಕಾಶದಂತೆ ಶೋಭಿಸುತ್ತಿದ್ದನು.

19066010a ಏಕೇನಾಮಲಪತ್ರೇಣ ಕಂಠಸೂತ್ರಾವಲಂಬಿನಾ । 

19066010c ರರಾಜ ಬರ್ಹಿಪತ್ರೇನ ಮಂದಮಾರುತಕಂಪಿನಾ ।।   

ಮಂದಮಾರುತದ ಬೀಸುವಿಕೆಯಿಂದ ನೇತಾಡುತ್ತಿದ್ದ ಅವನ ಕಂಠಸೂತ್ರದಲ್ಲಿದ್ದ ಒಂದೇ ಒಂದು ನವಿಲುಗರಿಯಿಂದ ಅವನು ರಾರಾಜಿಸುತ್ತಿದ್ದನು.

19066011a ಕ್ವಚಿದ್ಗಾಯಂಕ್ವಚಿತ್ಕ್ರೀಡಂಶ್ಚಂಚೂರ್ಯಂಶ್ಚ ಕ್ವಚಿತ್ಕ್ವಚಿತ್ । 

19066011c ಪರ್ಣವಾದ್ಯಂ ಶ್ರುತಿಸುಖಂ ವಾದಯಂಶ್ಚ ಕ್ವಚಿದ್ವನೇ ।।   

ವನು ವನದಲ್ಲಿ ಒಮ್ಮೆ ಹಾಡುತ್ತಿದ್ದನು, ಒಮ್ಮೆ ಆಡುತ್ತಿದ್ದನು, ಒಮ್ಮೊಮ್ಮೆ ತಿರುಗುತ್ತಿದ್ದನು, ಮತ್ತು ಇನ್ನೊಮ್ಮೆ ಕೇಳಲು ಇಂಪಾದ ಪರ್ಣವಾದ್ಯವನ್ನು ನುಡಿಸುತ್ತಿದ್ದನು.

19066012a ಗೋಪವೇಣುಂ ಸುಮಧುರಂ ಕಾಮಾತ್ತಮಪಿ ವಾದಯನ್ । 

19066012c ಪ್ರಹ್ಲಾದನಾರ್ಥಂ ಚ ಗವಾಂ ಕ್ವಚಿದ್ವನಗತೋ ಯುವಾ ।।   

ಒಮ್ಮೊಮ್ಮೆ ಆ ಯುವಕನು ಗೋವುಗಳನ್ನು ಆನಂದಗೊಳಿಸಲು ಅವನು ವನದಲ್ಲಿ ಇಚ್ಛಾನುಸಾರ ಸುಮಧುರ ಗೋಪವೇಣುವನ್ನು ನುಡಿಸುತ್ತಿದ್ದನು.

19066013a ಗೋಕುಲೇಽಂಬುಧರಶ್ಯಾಮಶ್ಚಚಾರ ದ್ಯುತಿಮಾನ್ಪ್ರಭುಃ । 

19066013c ರೇಮೇ ಚ ತತ್ರ ರಮ್ಯಾಸು ಚಿತ್ರಾಸು ವನರಾಜಿಷು ।।   

ಮಳೆಯ ಮೋಡದಂತೆ ಶ್ಯಾಮ ಮತ್ತು ಕಾಂತಿಯುಕ್ತನಾಗಿದ್ದ ಪ್ರಭು ಕೃಷ್ಣನು ಗೋಕುಲದ ರಮ್ಯ ವಿಚಿತ್ರ ವನರಾಜಿಗಳಲ್ಲಿ ರಮಿಸುತ್ತಿದ್ದನು.

19066014a ಮಯೂರರವಘುಷ್ಟಸು ಮದನೋದ್ದೀಪನೀಷು ಚ । 

19066014c ಮೇಘನಾದಪ್ರತಿವ್ಯೂಹೈರ್ನಾದಿತಾಸು ಸಮಂತತಃ ।।   

ಕಾಮಭಾವವನ್ನು ಉದ್ದೀಪನಗೊಳಿಸುವ ನವಿಲುಗಳ ಕೇಕಾಧ್ವನಿಯು ಅಲ್ಲಿ ಗುಂಜಿಸುತ್ತಿತ್ತು. ಮೋಡಗಳ ಗುಡುಗಿನ ಶಬ್ದದ ಪ್ರತಿಧ್ವನಿಯಿಂದ ಎಲ್ಲಕಡೆ ಕೋಲಾಹಲವೆನಿಸುತ್ತಿತ್ತು.

19066015a ಶಾಡ್ವಲಚ್ಛನ್ನಮಾರ್ಗಾಸು ಶಿಲೀಂಧ್ರಾಭರಣಾಸು ಚ । 

19066015c ಕಂದಲಾಮಲಪತ್ರಾಸು ಸ್ರವಂತೀಷು ನವಂ ಜಲಮ್ ।।   

ಮಾರ್ಗವನ್ನು ಹುಲ್ಲು ಮುಚ್ಚಿತ್ತು ಮತ್ತು ಹಣಬೆಗಳು ಆಭರಣಗಳಂತಿದ್ದವು. ಹೊಸ ಚಿಗುರುಗಳಿಂದ ನೀರು ತೊಟ್ಟಿಕ್ಕುತ್ತಿತ್ತು. 

19066016a ಕೇಸರಾಣಾಂ ನವೈರ್ಗಂಧೈರ್ಮದನಿಃಶ್ವಸಿತೋಪಮೈಃ । 

19066016c ಅಭೀಕ್ಷ್ಣಂ ನಿಃಶ್ವಸಂತೀಷು ಕಾಮಿನೀಷ್ವಿವ ನಿತ್ಯಶಃ ।।   

ಕಾಮಿನಿಯು ಬಿಡುವ ನಿಃಶ್ವಾಸದಂತಿದ್ದ ಕೇಸರಗಳ ಹೊಸ ಪರಿಮಳವನ್ನೇ ವನವು ಎಲ್ಲಕಡೆ ಹೊರಸೂಸುತ್ತಿತ್ತು.

19066017a ಸೇವ್ಯಮಾನೋ ನವೈರ್ವಾತೈರ್ದ್ರುಮಸಂಘಾತನಿಃಸೃತೈಃ । 

19066017c ತಾಸು ಕೃಷ್ಣೋ ಮುದಂ ಲೇಭೇ ಸೌಮ್ಯಾಸು ವನರಾಜಿಷು ।।   

ವೃಕ್ಷಗಳು ಒಂದಕ್ಕೊಂದು ತಿಕ್ಕಿ ಹೊರಸೂಸುತ್ತಿದ್ದ ಹೊಸ ಗಂಧವನ್ನು ಸೇವಿಸುತ್ತಾ ಆ ಸೌಮ್ಯ ವನರಾಜಿಗಳಲ್ಲಿ ಕೃಷ್ಣನು ಆನಂದಿಸಿದನು.

19066018a ಸ ಕದಾಚಿದ್ವನೇ ತಸ್ಮಿಂಗೋಭಿಃ ಸಹ ಪರಿಭ್ರಮನ್ । 

19066018c ದದರ್ಶ ವಿಪುಲೋದಗ್ರಂ ಶಾಖಿನಂ ಶಾಖಿನಾಂ ವರಮ್ ।।   

ಒಮ್ಮೆ ಗೋವುಗಳೊಂದಿಗೆ ತಿರುಗಾಡುತ್ತಿದ್ದಾಗ ಅವನು ಅಲ್ಲಿ ವೃಕ್ಷಗಳಲ್ಲಿಯೇ ಶ್ರೇಷ್ಠವಾಗಿದ್ದ ಒಂದು ಎತ್ತರ ಮತ್ತು ವಿಶಾಲವಾಗಿದ್ದ ಮರವನ್ನು ಕಂಡನು.

19066019a ಸ್ಥಿತಂ ಧರಣ್ಯಾಂ ಮೇಘಾಭಂ ನಿಬಿಡಂ ದಲಸಂಚಯೈಃ । 

19066019c ಗಗನಾರ್ಧೋಚ್ಛ್ರಿತಾಕಾರಂ ಪರ್ವತಾಭೋಗಧಾರಿಣಮ್ ।।   

ನೆಲದ ಮೇಲೆ ನಿಂತಿದ್ದರೂ ಅದರ ನಿಬಿಡ ಎಲೆಗಳ ರಾಶಿಯು ಮಳೆಯನ್ನು ಹೊತ್ತ ಮೇಘದಂತೆ ತೋರುತ್ತಿತ್ತು. ಗಗನವನ್ನೇ ಮುಚ್ಚಿಬಿಡುವಂತೆ ಆಕಾರವಿದ್ದ ಅದು ಪರ್ವತದಂತೆ ವಿಸ್ತೃತವಾಗಿತ್ತು.

19066020a ನೀಲಚಿತ್ರಾಂಗವರ್ಣೈಶ್ಚ ಸೇವಿತಂ ಬಹುಭಿಃ ಖಗೈಃ । 

19066020c ಫಲೈಃ ಪ್ರವಾಲೈಶ್ಚ ಘನೈಃ ಸೇಂದ್ರಚಾಪಘನೋಪಮಮ್ ।।   

ಅದರಲ್ಲಿ ನೀಲಿ ಮತ್ತು ಬಣ್ಣ ಬಣ್ಣದ ರೆಕ್ಕೆಗಳಿದ್ದ ಅನೇಕ ಪಕ್ಷಿಗಳು ವಾಸಿಸುತ್ತಿದ್ದವು. ಕೆಂಪು ಹಣ್ಣುಗಳಿಂದ ಕೂಡಿದ್ದ ಆ ಮರವು ಕಾಮನಬಿಲ್ಲನ್ನು ಹೊಂದಿದ್ದ ಮೋಡದಂತೆ ತೋರುತ್ತಿತ್ತು.

19066021a ಭವನಾಕಾರವಿಟಪಂ ಲತಾಪುಷ್ಪಸುಮಂದಿತಮ್ । 

19066021c ವಿಶಾಲಮೂಲಾವನತಂ ಪವನಾಂಭೋದಧಾರಿಣಮ್ ।।   

ಬಳ್ಳಿ-ಪುಷ್ಪಗಳಿಂದ ತುಂಬಿದ ರೆಂಬೆಗಳು ಭವನಗಳಂತಿದ್ದವು. ವಿಶಾಲ ಬುಡದಿಂದ ಮೇಲೆದ್ದಿದ್ದ ಅದು ಗಾಳಿ ಮತ್ತು ಮೋಡಗಳನ್ನು ಎತ್ತಿಹಿಡಿದಂತಿತ್ತು.

19066022a ಆಧಿಪತ್ಯಮಿವಾನ್ಯೇಷಾಂ ತಸ್ಯ ದೇಶಸ್ಯ ಶಾಖಿನಾಮ್ । 

19066022c ಕುರ್ವಾಣಂ ಶುಭಕರ್ಮಾಣಂ ನಿರಾವರ್ಷಮನಾತಪಮ್ ।।   

ಆ ಪ್ರದೇಶದ ಅನ್ಯ ವೃಕ್ಷಗಳ ಅಧಿಪತಿಯಂತಿದ್ದ ಆ ಮರವು ಮಳೆ ಮತ್ತು ಬಿಸಿಲುಗಳಿಂದ ಆಶ್ರಯವನ್ನಿತ್ತು ಶುಭಕರ್ಮಿಯಾಗಿತ್ತು.

19066023a ನ್ಯಗ್ರೋಧಂ ಪರ್ವತಾಗ್ರಾಭಂ ಭಾಂಡೀರಂ ನಾಮ ನಾಮತಃ । 

19066023c ದೃಷ್ಟ್ವಾ ತತ್ರ ಮತಿಂ ಚಕ್ರೇ ನಿವಾಸಾಯ ತತಃ ಪ್ರಭುಃ ।।   

ಪರ್ವತದಂತಿದ್ದ ಆ ನ್ಯಗ್ರೋಧ ವೃಕ್ಷಕ್ಕೆ ಭಾಂಡೀರ ಎಂಬ ಹೆಸರಿತ್ತು. ಅದನ್ನು ನೋಡಿ ಪ್ರಭುವು ಅಲ್ಲಿ ತಂಗಲು ನಿಶ್ಚಯಿಸಿದನು.

19066024a ಸ ತತ್ರ ವಯಸಾ ತುಲ್ಯೈರ್ವತ್ಸಪಾಲೈಃ ಸಹಾನಘ । 

19066024c ರೇಮೇ ವೈ ವಾಸರಂ ಕೃಷ್ಣಃ ಪುರಾ ಸ್ವರ್ಗಗತೋ ಯಥಾ ।।   

ಅನಘ! ಅಲ್ಲಿ ಅವನು ತನ್ನ ಗೋಪಾಲಕ ಮಿತ್ರರೊಡನೆ ಹಿಂದೆ ಸ್ವರ್ಗದಲ್ಲಿದ್ದಾಗ ಹೇಗೋ ಹಾಗೆ ಅನೇಕ ದಿನಗಳು ರಮಿಸಿದನು.

19066025a ತಂ ಕ್ರೀಡಮಾನಂ ಗೋಪಾಲಾಃ ಕೃಷ್ಣಂ ಭಾಂಡೀರವಾಸಿನಮ್ । 

19066025c ರಮಯಂತಿ ಸ್ಮ ಬಹವೋ ವನ್ಯೈಃ ಕ್ರೀಡನಕೈಸ್ತದಾ ।।   

ಭಾಂಡೀರದಲ್ಲಿ ವಾಸಿಸುತ್ತಿದ್ದ ಕೃಷ್ಣನು ಗೋಪಾಲಕರೊಂದಿಗೆ ಆಟವಾಡಿದನು. ಅವನಿಗೆ ಅನೇಕ ವನ್ಯ ಆಟಿಗೆಗಳನ್ನಿತ್ತು ಗೋಪಾಲಕರು ಅವನನ್ನು ರಮಿಸುತ್ತಿದ್ದರು.

19066026a ಅನ್ಯೇ ಸ್ಮ ಪರಿಗಾಯಂತಿ ಗೋಪಾ ಮುದಿತಮಾನಸಾಃ । 

19066026c ಗೋಪಾಲಾಃ ಕೃಷ್ಣಮೇವಾನ್ಯೇ ಗಾಯಂತಿ ಸ್ಮ ರತಿಪ್ರಿಯಾಃ ।।   

ನ್ಯ ಮುದಿತಮಾನಸ ಗೋಪರು ಹಾಡುತ್ತಿದ್ದರು. ಅನ್ಯ ರತಿಪ್ರಿಯ ಗೋಪಾಲರು ಕೃಷ್ಣನ ಕುರಿತೇ ಹಾಡುತ್ತಿದ್ದರು.

19066027a ತೇಷಾಂ ಸ ಗಾಯತಾಮೇವ ವಾದಯಾಮಾಸ ವೀರ್ಯವಾನ್ । 

19066027c ಪರ್ಣವಾದ್ಯಾಂತರೇ ವೇಣುಂ ತುಂಬೀವೀಣಾಂ ಚ ತತ್ರ ಹ ।।   

ಅವರು ಹಾಡುತ್ತಿದ್ದಾಗ ವೀರ್ಯವಾನ್ ಕೃಷ್ಣನು ಮಧ್ಯದಲ್ಲಿ ಪರ್ಣವಾದ್ಯ ಅಥವಾ ಕೊಳಲು ಅಥವಾ ತಂಬೂರೆಯನ್ನು ಬಾರಿಸುತ್ತಿದ್ದನು.

19066028a ಕದಾಚಿಚ್ಚಾರಯನ್ನೇವ ಗಾಃ ಸ ಗೋವೃಷಭೇಕ್ಷಣಃ । 

19066028c ಜಗಾಮ ಯಮುನಾತೀರಂ ಲತಾಲಂಕೃತಪಾದಪಮ್ ।।   

ಒಮ್ಮೆ ಗೋವುಗಳನ್ನು ಸುತ್ತಾಡಿಸುತ್ತಾ ಆ ಗೋವೃಷಭೇಕ್ಷಣನು ಲತೆಗಳು ಮತ್ತು ವೃಕ್ಷಗಳಿಂದ ಅಲಂಕೃತವಾಗಿದ್ದ ಯಮುನಾತೀರಕ್ಕೆ ಹೋದನು.

19066029a ತರಂಗಾಪಾಂಗಕುಟಿಲಂ ವಾರಿಸ್ಪರ್ಶಸುಖಾನಿಲಾಮ್ । 

19066029c ತಾಂ ಚ ಪದ್ಮೋತ್ಪಲವತೀಂ ದದರ್ಶ ಯಮುನಾಂ ನದೀಮ್ ।।   

ತರಂಗಗಳಿಂದಾಗಿ ಆ ನದಿಯು ವಕ್ರವಾಗಿ ತೋರುತ್ತಿತ್ತು. ಅದರ ನೀರನ್ನು ಸ್ಪರ್ಶಿಸಿದ ಸುಖಕರ ಗಾಳಿಯು ಬೀಸುತ್ತಿತ್ತು. ಕಮಲಗಳು ಮತ್ತು ಕನ್ನೈದಿಲೆಗಳಿಂದ ತುಂಬಿದ್ದ ಆ ಯಮುನಾ ನದಿಯನ್ನು ಅವನು ನೋಡಿದನು.

19066030a ಸುತೀರ್ಥಾಂ ಸ್ವಾದುಸಲಿಲಾಂ ಹ್ರದಿನೀಂ ವೇಗಗಾಮಿನೀಮ್ । 

19066030c ತೋಯವಾತೋದ್ಯತೈರ್ವೇಗೈರವನಾಮಿತಪಾದಪಾಮ್ ।।   

ಅದರ ನೀರು ರುಚಿಯಾಗಿತ್ತು. ಅಲ್ಲಲ್ಲಿ ಹೊಂಡಗಳಿದ್ದವು. ಅದು ವೇಗವಾಗಿ ಪ್ರವಹಿಸುತ್ತಿತ್ತು. ಅದರ ನೀರಿನ ವೇಗ ಮತ್ತು ವಾಯುವಿನ ವೇಗದಿಂದ ಅದರ ದಡದಲ್ಲಿದ್ದ ಮರಗಳು ಬಗ್ಗಿದ್ದವು.

19066031a ಹಂಸಕಾರಂಡವೋದ್ಘುಷ್ಟಾಂ ಸಾರಸೈಶ್ಚ ನಿನಾದಿತಾಮ್ । 

19066031c ಅನ್ಯೋನ್ಯಮಿಥುನೈಶ್ಚೈವ ಸೇವಿತಾಂ ಮಿಥುನೇಚರೈಃ ।।   

ಹಂಸ-ಕಾರಂಡಗಳ ಕೂಗು ಮತ್ತು ಸಾರಸಗಳ ನಿನಾದದಿಂದ ತುಂಬಿತ್ತು. ಜೋಡಿ ಪಕ್ಷಿಗಳು ಅನ್ಯೋನ್ಯ ಮೈಥುನದಲ್ಲಿ ತೊಡಗಿದ್ದವು.

19066032a ಜಲಜೈಃ ಪ್ರಾಣಿಭಿಃ ಕೀರ್ಣಾಂ ಜಲಜೈರ್ಭೂಷಿತಾಂ ಗುಣೈಃ । 

19066032c ಜಲಜೈಃ ಕುಸುಮೈಶ್ಚಿತ್ರಾಂ ಜಲಜೈರ್ಹರಿತೋದಕಾಮ್ ।।   

ಜಲಜ ಪ್ರಾಣಿಗಳಿಂದ ತುಂಬಿದ್ದ, ಜಲಜ ಗುಣಗಳಿಂದ ಭೂಷಿತವಾಗಿದ್ದ, ಜಲಜ ಕುಸುಮಗಳಿಂದಾಗಿ ಬಣ್ಣಬಣ್ಣವಾಗಿ ಕಾಣುತ್ತಿದ್ದ ಆ ನದಿಯು ಜಲಜ ಸಸ್ಯಗಳಿಂದಾಗಿ ಹಸಿರಾಗಿಯೂ ಕಾಣುತ್ತಿತ್ತು.

19066033a ಪ್ರಸೃತಸ್ರೋತಚರಣಾಂ ಪುಲಿನಶ್ರೋಣಿಮಂಡಲಾಮ್ । 

19066033c ಆವರ್ತನಾಭಿಗಂಭೀರಾಂ ಪದ್ಮರೋಮಾಭಿರಂಜಿತಾಮ್ ।।   

ರಿಯುತ್ತಿದ್ದ ನೀರು ಅವಳ ಚರಣಗಳಾಗಿದ್ದವು. ಎರಡೂ ತಟಗಳು ಅವಳ ನಿತಂಬದಂತಿದ್ದವು. ಸುಳಿಗಳು ಅವಳ ಗಂಭೀರ ಹೊಕ್ಕಳಿನಂತಿದ್ದವು. ಪದ್ಮಗಳೇ ಅವಳ ರೋಮಗಳಂತಿದ್ದವು. 

19066034a ತಟಚ್ಛೇದೋದರಾಂ ಕಾಂತಾಂ ತ್ರಿತರಂಗವಲೀಧರಾಮ್ । 

19066034c ಫೇನಪ್ರಹೃಷ್ಟವದನಾಂ ಪ್ರಸನ್ನಾಂ ಹಂಸಹಾಸಿನೀಮ್ ।।   

ತೀರಕ್ಕೆ ಹೊಂದಿಕೊಂಡು ಮೂರು ಅಲೆಗಳನ್ನುಂಟುಮಾಡುತ್ತಿದ್ದ ನೀರು ಅವಳ ಹೊಟ್ಟೆಯ ಮೂರು ಮಡಿಕೆಗಳಂತೆ ತೋರುತ್ತಿತ್ತು. ನೊರೆಯು ಅವಳ ಪ್ರಹೃಷ್ಟವದನವಾಗಿತ್ತು. ಹಂಸಗಳೇ ಆ ಪ್ರಸನ್ನಳ ನಗೆಯಾಗಿದ್ದವು.  

19066035a ರುಚಿರೋತ್ಪಲರಕ್ತೋಷ್ಠೀಂ ನತಭ್ರೂಂ ಜಲಜೇಕ್ಷನಾಮ್ । 

19066035c ಹ್ರದದೀರ್ಘಲಲಾಟಾಂತಾಂ ಕಾಂತಾಂ ಶೈವಲಮೂರ್ಧಜಾಮ್ ।।   

ಕೆಂಪು ಕಮಲಗಳು ಅವಳ ಕಣ್ಣುರೆಪ್ಪೆಗಳಂತೆ ಬಡಿಯುತ್ತಿದ್ದವು. ಕುಂಡಗಳು ಅವಳ ವಿಶಾಲ ಹಣೆಯಾಗಿತ್ತು ಮತ್ತು ಪಾಚೆಗಳು ಅವಳ ಸುಂದರ ಕೂದಲುಗಳಾಗಿದ್ದವು.

19066036a ಚಕ್ರವಾಕಸ್ತನತಟೀಂ ತೀರಪಾರ್ಶ್ವಾಯತಾನನಾಮ್ । 

19066036c ದೀರ್ಘಸ್ರೋತಾಯತಭುಜಾಮಾಭೋಗಶ್ರವಣಾಯತಾಮ್ ।।   

ಕ್ರವಾಕಗಳು ಅವಳ ಸ್ತನಗಳಂತಿದ್ದವು. ಅವಳ ಮುಖವು ಎರಡೂ ತಟಗಳ ನಡುವೆ ವಿಸ್ತೃತವಾಗಿತ್ತು. ಪ್ರವಾಹವು ಅವಳ ನೀಳ ಭುಜಗಳಂತಿದ್ದವು. ತಿರುವುಗಳು ಅವಳ ಉದ್ದ ಕಿವಿಗಳಿಂತಿದ್ದವು.

19066037a ಕಾರಂಡವಾಕುಂಡಲಿನೀಂ ಶ್ರೀಮತ್ಪಂಕಜಲೋಚನಾಮ್ । 

19066037c ತಟಜಾಭರಣೋಪೇತಾಂ ಮೀನನಿರ್ಮಲಮೇಖಲಾಮ್ ।।   

19066038a ವಾರಿಪ್ಲವಪ್ಲವಕ್ಷೌಮಾಂ ಸಾರಸಾರಾವನೂಪುರಾಮ್ । 

19066038c ಕಾಶಚಾಮೀಕರಂ ವಾಸೋ ವಸಾನಾಂ ಹಂಸಲಕ್ಷಣಾಮ್ ।।   

ಬಾತುಕೋಳಿಗಳು ಅವಳ ಕುಂಡಲಗಳಾಗಿದ್ದವು. ಸುಂದರ ಕಮಲಗಳು ಅವಳ ಕಣ್ಣುಗಳಾಗಿದ್ದವು. ತಟದಲ್ಲಿದ್ದ ಮರಗಿಡಗಳು ಅವಳ ಆಭರಣಗಳಾಗಿದ್ದವು. ಮೀನಿನ ಸಾಲುಗಳು ಅವಳ ಕಂಠಹಾರಗಳಂತಿದ್ದವು. ಶುಭ್ರ ನೀರು ಅವಳ ವಸ್ತ್ರವಾಗಿತ್ತು ಮತ್ತು ಸಾರಸಧ್ವನಿಗಳು ಅವಳ ನೂಪುರದ ಧ್ವನಿಗಳಿಂತಿತ್ತು. ಅವಳು ಕಾಶಪುಷ್ಪ, ಹಂಸ ಮತ್ತು ಸುವರ್ಣ ಸಮಾನ ಸುಂದರ ಸ್ವಚ್ಛ ಜಲಮಯ ವಸ್ತ್ರವನ್ನು ಧರಿಸಿದ್ದಳು.

19066039a ಭೀಮನಕ್ರಾನುಲಿಪ್ತಾಂಗೀಂ ಕೂರ್ಮಲಕ್ಷಣಭೂಷಿತಾಮ್ । 

19066039c ನಿಪಾನಶ್ವಾಪದಾಪೀಡಾಂ ನೃಭಿಃ ಪೀನಪಯೋಧರಾಮ್ ।।   

ಭಯಂಕರ ಮೊಸಳೆಗಳು ಅವಳ ಅಂಗಗಳ ಮೇಲಿನ ಚಿಹ್ನೆಗಳಂತಿದ್ದವು. ಅವಳು ಕೂರ್ಮ ಚಿಹ್ನೆಗಳಿಂದ ಶೋಭಿಸುತ್ತಿದ್ದಳು. ಬೇಟೆಯಾಡುವ ಮೃಗಗಳು ಮತ್ತು ನರರು ಪೀನಪಯೋಧರೆಯಂತಿದ್ದ ಅವಳ ನೀರನ್ನು ಕುಡಿಯುತ್ತಿದ್ದರು.

19066040a ಶ್ವಾಪದೋಚ್ಛಿಷ್ಟಸಲಿಲಾಮಾಶ್ರಮಸ್ಥಾನಸಂಕುಲಾಮ್ । 

19066040c ತಾಂ ಸಮುದ್ರಸ್ಯ ಮಹಿಷೀಮೀಕ್ಷಮಾಣಃ ಸಮಂತತಃ ।।   

19066041a ಚಚಾರ ರುಚಿರಂ ಕೃಷ್ಣೋ ಯಮುನಾಮುಪಶೋಭಯನ್ । 

ಪ್ರಾಣಿಗಳು ನೀರುಕುಡಿದು ಎಂಜಲು ಮಾಡಿದ, ಆಶ್ರಮಸ್ಥಾನ ಸಂಕುಲಗಳಿಂದ ಕೂಡಿದ, ಸಮುದ್ರಮಹಿಷೀ ಯಮುನೆಯನ್ನು ಎಲ್ಲಕಡೆಗಳಿಂದ ನೋಡುತ್ತಾ ಸುಂದರ ಕೃಷ್ಣನು ಅವಳನ್ನೂ ಶೋಭಿಸುತ್ತಾ ಸುತ್ತಾಡಿದನು.

19066041c ತಾಂ ಚರನ್ಸ ನದೀಂ ಶ್ರೇಷ್ಠಾಂ ದದರ್ಶ ಹ್ರದಮುತ್ತಮಮ್ ।।   

19066042a ದೀರ್ಘಂ ಯೋಜನವಿಸ್ತಾರಂ ದುಸ್ತರಂ ತ್ರಿದಶೈರಪಿ । 

19066042c ಗಂಭೀರಮಕ್ಷೋಭ್ಯಜಲಂ ನಿಷ್ಕಂಪಮಿವ ಸಾಗರಮ್ ।।   

ನದಿಗಳಲ್ಲಿಯೇ ಶ್ರೇಷ್ಠ ಯಮುನೆಯ ತಟದಲ್ಲಿ ಸಂಚರಿಸುತ್ತಾ ಅವನು ಯೋಜನ ವಿಸ್ತಾರವಾದ ತ್ರಿದಶರಿಗೂ ದುಸ್ತರವಾದ, ಗಂಭೀರವಾದ, ಅಲೆಗಳಿಲ್ಲದ, ಕಂಪನವಿಲ್ಲದ ಸಾಗರದಂತಿದ್ದ ಉತ್ತಮ ಕುಂಡವನ್ನು ಅವನು ನೋಡಿದನು.

19066043a ತೋಯಜೈಃ ಶ್ವಾಪದೈಸ್ತ್ಯಕ್ತಂ ಶೂನ್ಯಂ ತೋಯಚರೈಃ ಖಗೈಃ । 

19066043c ಅಗಾಧೇನಾಂಭಸಾ ಪೂರ್ಣಂ ಮೇಘಪೂರ್ಣಮಿವಾಂಬರಮ್।।   

ಜಲದಲ್ಲಿ ಹುಟ್ಟುವ ಮೊಸಳೆ ಮೊದಲಾದ ಕ್ರೂರ ಮೃಗಗಳೂ ಆ ಕುಂಡವನ್ನು ತೊರೆದಿದ್ದವು. ಜಲಚರ ಪಕ್ಷಿಗಳಿಂದಲೂ ಅದು ಶೂನ್ಯವಾಗಿತ್ತು. ಅಗಾಧ ಸರೋವರದಲ್ಲಿ ತುಂಬಿದ ನೀರಿನಿಂದಾಗಿ ಅದು ಮೇಘಗಳಿಂದ ತುಂಬಿದ ಅಂಬರದಂತೆ ತೋರುತ್ತಿತ್ತು.

19066044a ದುಃಖೋಪಸರ್ಪ್ಯಂ ತೀರೇಷು ಸಸರ್ಪೈರ್ವಿಪುಲೈರ್ಬಿಲೈಃ । 

19066044c ವಿಷಾರಣಿಭವಸ್ಯಾಗ್ನೇರ್ಧೂಮೇನ ಪರಿವೇಷ್ಟಿತಮ್ ।।   

ಅದರ ತೀರಗಳಲ್ಲಿ ದೊಡ್ಡ ದೊಡ್ಡ ಬಿಲಗಳಲ್ಲಿ ಸರ್ಪಗಳು ವಾಸಿಸುತ್ತಿದ್ದುದರಿಂದ ಅಲ್ಲಿಗೆ ಹೋಗಲು ಕಷ್ಟವಾಗುತ್ತಿತ್ತು. ಸರ್ಪಗಳ ವಿಷರೂಪೀ ಅರಣಿಗಳಿಂದ ಅಗ್ನಿ-ಧೂಮಗಳಿಂದ ಆ ಸರೋವರವು ವ್ಯಾಪ್ತವಾಗಿತ್ತು.

19066045a ಅಭೋಗ್ಯಂ ತತ್ಪಶೂನಾಂ ಹಿ ಅಪೇಯಂ ಚ ಜಲಾರ್ಥಿನಾಮ್ । 

19066045c ಉಪಭೋಗೈಃ ಪರಿತ್ಯಕ್ತಂ ಸುರೈಸ್ತ್ರಿಷವಣಾರ್ಥಿಭಿಃ ।।   

ಅದು ಪಶುಗಳಿಗೆ ಅಭೋಗ್ಯವಾಗಿತ್ತು. ಜಲಾರ್ಥಿಗಳಿಗೆ ಅಪೇಯವಾಗಿತ್ತು. ಮೂರೂ ಹೊತ್ತು ಸ್ನಾನಮಾಡ ಬಯಸುವ ದೇವತೆಗಳಗ ಉಪಭೋಗಕ್ಕೂ ಅದು ವರ್ಜಿತವಾಗಿತ್ತು.

19066046a ಆಕಾಶಾದಪ್ಯಸಂಚಾರ್ಯಂ ಖಗೈರಾಕಾಶಗೋಚರೈಃ । 

19066046c ತೃಣೇಷ್ವಪಿ ಪತತ್ಸ್ವಪ್ಸು ಜ್ವಲಂತಮಿವ ತೇಜಸಾ ।।   

ಅದರ ಮೇಲೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ಆಕಾಶಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಅದರ ನೀರಿನಲ್ಲಿ ಒಂದು ಹುಲ್ಲುಕಡ್ಡಿ ಬಿದ್ದರೂ ಅದರ ವಿಷಾಗ್ನಿಯಲ್ಲಿ ಸುಟ್ಟುಹೋಗುತ್ತಿತ್ತು.

19066047a ಸಮಂತಾದ್ಯೋಜನಂ ಸಾಗ್ರಂ ದೇವೈರಪಿ ದುರಾಸದಮ್ । 

19066047c ವಿಷಾನಲೇನ ಘೋರೇಣ ಜ್ವಾಲಾಪ್ರಜ್ವಲಿತದ್ರುಮಮ್ ।।   

ಅದರ ಸುತ್ತಲೂ ಒಂದು ಯೋಜನ ದೂರದವರೆಗೆ ದೇವತೆಗಳಿಗೂ ಓಡಾಡಲು ಕಷ್ಟವಾದಂತಿತ್ತು. ಘೋರ ವಿಷದ ಬೆಂಕಿಯಿಂದಾಗಿ ಹತ್ತಿರದಲ್ಲಿದ್ದ ವೃಕ್ಷಗಳೂ ಸುಟ್ಟು ಭಸ್ಮವಾಗಿದ್ದವು.

19066048a ವ್ರಜಸ್ಯೋತ್ತರತಸ್ತಸ್ಯ ಕ್ರೋಶಮಾತ್ರೇ ನಿರಾಮಯೇ । 

19066048c ತಂ ದೃಷ್ಟ್ವಾ ಚಿಂತಯಾಮಾಸ ಕೃಷ್ಣೋ ವೈ ವಿಪುಲಂ ಹ್ರದಮ್ ।।   

ನಿರಾಮಯವಾಗಿದ್ದ ಅದು ವ್ರಜದ ಉತ್ತರದಿಕ್ಕಿನಲ್ಲಿ ಕ್ರೋಶಮಾತ್ರ ದೂರದಲ್ಲಿಯೇ ಇದ್ದ ಆ ವಿಶಾಲ ಕುಂಡವನ್ನು ನೋಡಿ ಕೃಷ್ಣನು ಹೀಗೆ ಯೋಚಿಸತೊಡಗಿದನು:

19066049a ಅಗಾಧಂ ದ್ಯೋತಮಾನಂ ಚ ಕಸ್ಯಾಯಂ ಮಹತೋ ಹ್ರದಃ । 

19066049c ಅಸ್ಮಿನ್ಸ ಕಾಲಿಯೋ ನಾಮ ಕಾಲಾಂಜನಚಯೋಪಮಃ ।।   

“ಅಗಾಧವೂ ಕಾಂತಿಯುಕ್ತವೂ ಆಗಿರುವ ಈ ವಿಶಾಲ ಸರೋವರವು ಯಾರದ್ದು? ಕಪ್ಪು ಅಂಜನರಾಶಿಯಂತಿರುವ ಕಾಲಿಯ[1] ಎಂಬ ನಾಗನದ್ದು ಇದು.

19066050a ಉರಗಾಧಿಪತಿಃ ಸಾಕ್ಷಾದ್ಧ್ರದೇ ವಸತಿ ದಾರುಣಃ । 

19066050c ಉತ್ಸೃಜ್ಯ ಸಾಗರಾವಾಸಂ ಯೋ ಮಯಾ ವಿದಿತಃ ಪುರಾ ।।   

ಹಿಂದೆ ನಾನು ವಿಹಿಸಿದ್ದ ಸಾಗರಾವಾಸವನ್ನು ತ್ಯಜಿಸಿ ಆ ಉರಗಾಧಿಪತಿಯು ಸಾಕ್ಷಾತ್ ಇದೇ ಸರೋವರದಲ್ಲಿ ವಾಸಿಸಿಕೊಂಡಿದ್ದಾನೆ.

19066051a ಭಯಾತ್ಪತಗರಾಜಸ್ಯ ಸುಪರ್ಣಸ್ಯೋರಗಾಶಿನಃ । 

19066051c ತೇನೇಯಂ ದೂಷಿತಾ ಸರ್ವಾ ಯಮುನಾ ಸಾಗರಂಗಮಾ ।।   

ಸಾಗರವನ್ನು ಸೇರುವ ಈ ಎಲ್ಲ ಯಮುನೆಯನ್ನು ಪತಗರಾಜ ಉರಗಾಶಿನ ಸುಪರ್ಣ ಗರುಡನ ಭಯದಿಂದಲೇ ಅವನು ದೂಷಿತಗೊಳಿಸಿದ್ದಾನೆ.

19066052a ಭಯಾತ್ತಸ್ಯೋರಗಪತೇರ್ನಾಯಂ ದೇಶೋ ನಿಷೇವ್ಯತೇ । 

19066052c ತದಿದಂ ದಾರುಣಾಕಾರಮರಣ್ಯಂ ರೂಢಶಾದ್ವಲಮ್ ।।   

ಆ ಉರಗಪತಿಯ ಭಯದಿಂದಾಗಿ ಈ ಪ್ರದೇಶದಲ್ಲಿ ಯಾರೂ ವಾಸಿಸುತ್ತಿಲ್ಲ. ಆದುದರಿಂದಲೇ ದಾರುಣಾಕಾರದ ಈ ಅರಣ್ಯವು ಎತ್ತರವಾಗಿ ಬೆಳೆದ ಹುಲ್ಲಿನಿಂದ ತುಂಬಿಹೋಗಿದೆ.

19066053a ಸಾವರೋಹದ್ರುಮಂ ಘೋರಂ ಕೀರ್ಣಂ ನಾನಾಲತಾದ್ರುಮೈಃ । 

19066053c ರಕ್ಷಿತಂ ಸರ್ಪರಾಜಸ್ಯ ಸಚಿವೈರಾಪ್ತಕಾರಿಭಿಃ ।।   

ಸರ್ಪರಾಜನ ಆಪ್ತಕಾರೀ ಸಚಿವರಿಂದ ರಕ್ಷಿತವಾಗಿರುವ ಈ ಘೋರ ಪ್ರದೇಶವು ಶ್ರೇಷ್ಠ ವೃಕ್ಷಗಳಿಂದಲೂ ನಾನಾ ಬಳ್ಳಿ-ಮರಗಳಿಂದಲೂ ತುಂಬಿಹೋಗಿದೆ.

19066054a ವನಂ ನಿರ್ವಿಷಯಾಕಾರಂ ವಿಷಾನ್ನಮಿವ ದುಃಸ್ಪೃಶಮ್ । 

19066054c ತೈರಾಪ್ತಕಾರಿಭಿರ್ನಿತ್ಯಂ ಸರ್ವತಃ ಪರಿರಕ್ಷಿತಮ್ ।।   

ಇದರಿಂದಾಗಿಯೇ ಈ ವನವು ಶೂನ್ಯವಾಗಿಬಿಟ್ಟಿದೆ. ವಿಷಾನ್ನದಂತೆ ಮುಟ್ಟಲೂ ಅಸಾಧ್ಯವಾಗಿದೆ. ಅವನ ಆಪ್ತಕಾರಿಗಳಿಂದ ಇದು ಸರ್ವತಃ ರಕ್ಷಿತವಾಗಿದೆ.

19066055a ಶೈವಾಲನಲಿನೈಶ್ಚಾಪಿ ವೃಕ್ಷೈಃ ಕ್ಷುದ್ರಲತಾಕುಲೈಃ ।    

19066055c ಕರ್ತವ್ಯಮಾರ್ಗೌ ಭ್ರಾಜೇತೇ ಹ್ರದಸ್ಯಾಸ್ಯ ತಟಾವುಭೌ ।।   

ಆದುದರಿಂದಲೇ ಈ ಪ್ರದೇಶವು, ಪಾಚಿ, ಮರಗಳು, ಪೊದೆಗಳು ಮತ್ತು ಬಳ್ಳಿಗಳಿಂದ ತುಂಬಿಕೊಂಡಿದೆ. ಈ ಸರೋವರದ ಎರಡೂ ದಡಗಳಲ್ಲಿ ಮಾರ್ಗಗಳನ್ನು ಮಾಡಬೇಕು.

19066056a ತದಸ್ಯ ಸರ್ಪರಾಜಸ್ಯ ಕರ್ತವ್ಯೋ ನಿಗ್ರಹೋ ಮಯಾ । 

19066056c ಯಥೇಯಂ ಸರಿದಂಭೋದಾ ಭವೇಚ್ಛಿವಜಲಾಶಯಾ ।।   

ಆದುದರಿಂದ ಈ ಸರ್ಪರಾಜನನ್ನು ನಿಗ್ರಹಿಸುವುದು ನನ್ನ ಕರ್ತವ್ಯವಾಗಿದೆ. ಇದರಿಂದಾಗಿ ಜಲವನ್ನೀಯುವ ಈ ನದಿಯು ಮಂಗಳ ಜಲಾಶಯವಾಗುತ್ತದೆ.

19066057a ವ್ರಜೋಪಭೋಗ್ಯಾ ಚ ಯಥಾ ನಾಗೇ ಚ ದಮಿತೇ ಮಯಾ । 

19066057c ಸರ್ವತ್ರ ಸುಖಸಂಚಾರಾ ಸರ್ವತೀರ್ಥಸುಖಾಶ್ರಯಾ ।।   

ನನ್ನಿಂದ ಈ ನಾಗನ ದಮನವಾದರೆ ಈ ನದಿಯು ವ್ರಜದ ಜನರ ಉಪಭೋಗಕ್ಕೆ ಯೋಗ್ಯವಾಗುತ್ತದೆ. ಸರ್ವತ್ರ ಸುಖವಾಗಿ ಸಂಚರಿಸಬಹುದು ಮತ್ತು ಇದು ಸರ್ವತೀರ್ಥಗಳು ಮತ್ತು ಸುಖಕ್ಕೆ ಆಶ್ರಯವಾಗುತ್ತದೆ.

19066058a ಏತದರ್ಥಂ ಚ ವಾಸೋಽಯಂ ವ್ರಜೇಽಸ್ಮಿನ್ ಗೋಪಜನ್ಮ ಚ । 

19066058c ಅಮೀಷಾಮುತ್ಪಥಸ್ಥಾನಾಂ ನಿಗ್ರಹಾರ್ಥಂ ದುರಾತ್ಮನಾಮ್ ।।   

ಇದಕ್ಕಾಗಿಯೇ ನಾನು ವ್ರಜದಲ್ಲಿ ವಾಸಿಸುತ್ತಿದ್ದೇನೆ ಮತ್ತು ಗೋಪರಲ್ಲಿ ಜನ್ಮತಾಳಿದ್ದೇನೆ. ದುರಾತ್ಮರನ್ನು ನಿಗ್ರಹಿಸುವುದಕ್ಕಾಗಿಯೇ ಇಲ್ಲಿ ನನ್ನ ಅವತಾರವಾಗಿದೆ.

19066059a ಏನಂ ಕದಂಬಮಾರುಹ್ಯ ತದೇವ ಶಿಶುಲೀಲಯಾ । 

19066059c ವಿನಿಪತ್ಯ ಹ್ರದೇ ಘೋರೇ ದಮಯಿಷ್ಯಾಮಿ ಕಾಲಿಯಮ್ ।।   

19066060a ಏವಂ ಕೃತೇ ಬಾಹುವೀರ್ಯಂ ಲೋಕೇ ಖ್ಯಾತಿಂ ಗಮಿಷ್ಯತಿ ।।  

ಶಿಶುಲೀಲೆಯಿಂದಲೇ ನಾನು ಈ ಕಂದಂಬವನ್ನೇರಿ ಈ ಘೋರ ಸರೋವರದಲ್ಲಿ ಧುಮುಕಿ ಆ ಕಾಲಿಯನನ್ನು ನಿಗ್ರಹಿಸುತ್ತೇನೆ. ಹೀಗೆ ಮಾಡಿದರೆ ನನ್ನ ಬಾಹುವೀರ್ಯವು ಲೋಕದಲ್ಲಿ ಖ್ಯಾತವಾಗುತ್ತದೆ.””

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಯಮುನಾವರ್ಣನಂ ನಾಮ ಷಟ್‌ಷಷ್ಟಿತಮೋಽಧ್ಯಾಯಃ।।

ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ವಿಷ್ಣುಪರ್ವದಲ್ಲಿ ಯಮುನಾವರ್ಣನೆ ಎಂಬ ಅರವತ್ತಾರನೇ ಅಧ್ಯಾಯವು.

[1] ಕನ್ನಡದಲ್ಲಿ ಕಾಳಿಂಗ ಎಂಬ ಅನುವಾದವೂ ಇದೆ. ಆದರೆ ನಾನು ಇಲ್ಲಿ ಸಂಸ್ಕೃತ ಶ್ಲೋಕದಲ್ಲಿದ್ದಂತೆ ಕಾಲಿಯ ಎಂಬ ಹೆಸರನ್ನೇ ಅನುವಾದದಲ್ಲಿ ಬಳಸಿದ್ದೇನೆ.

Comments are closed.