ಹರಿವಂಶ: ವಿಷ್ಣುಪರ್ವಃ
Contents
Toggle65
ಪ್ರಾವೃದ್ವರ್ಣನಮ್
ವರ್ಷಋತುವಿನ ವರ್ಣನೆ (1-43).
19065001 ವೈಶಂಪಾಯನ ಉವಾಚ ।
19065001a ತೌ ತು ವೃಂದಾವನಂ ಪ್ರಾಪ್ತೌ ವಸುದೇವಸುತಾವುಭೌ ।
19065001c ಚೇರತುರ್ವತ್ಸಯೂಥಾನಿ ಚಾರಯಂತೌ ಸುರೂಪಿಣೌ ।।
ವೈಶಂಪಾಯನನು ಹೇಳಿದನು: “ಆ ಸುರೂಪಿಣೀ ವಸುದೇವಸುತರಿಬ್ಬರೂ ವೃಂದಾವನವನ್ನು ತಲುಪಿ ದನಕರುಗಳ ಗುಂಪುಗಳನ್ನು ಕಾಯುತ್ತಾ ತಿರುಗಾಡತೊಡಗಿದರು.
19065002a ಪೂರ್ಣಸ್ತು ಘರ್ಮಸಮಯಸ್ತಯೋಸ್ತತ್ರ ವನೇ ಸುಖಮ್ ।
19065002c ಕ್ರೀಡತೋಃ ಸಹ ಗೋಪಾಲೈರ್ಯಮುನಾಂ ಚಾವಗಾಹತೋಃ ।।
ಗೋಪಾಲಕರೊಂದಿಗೆ ಯಮುನಾ ನದಿಯಲ್ಲಿ ಸ್ನಾನಮಾಡಿ ಆಟವಾಡುತ್ತಾ ಅವರು ಆ ವನದಲ್ಲಿ ಸುಖವಾಗಿಯೇ ಬೇಸಗೆಯನ್ನು ಕಳೆದರು.
19065003a ತತಃ ಪ್ರಾವೃಡನುಪ್ರಾಪ್ತಾ ಮನಸಃ ಕಾಮದೀಪಿನೀ ।
19065003c ಪ್ರವವರ್ಷುರ್ಮಹಾಮೇಘಾಃ ಶಕ್ರಚಾಪಾಂಕಿತೋದರಾಃ ।।
ಆಗ ಮನಸ್ಸಿನಲ್ಲಿ ಕಾಮವನ್ನು ಹೊತ್ತಿಸುವ ಮಳೆಗಾಲವು ಪ್ರಾಪ್ತವಾಯಿತು. ಮಧ್ಯದಲ್ಲಿ ಇಂದ್ರಧನುಷಿನಿಂದ ಅಂಕಿತಗೊಂಡಿದ್ದ ಮಹಾಮೇಘಗಳು ಜೋರಾಗಿ ಮಳೆಸುರಿಸಿದವು.
19065004a ಬಭೂವಾದರ್ಶನಃ ಸೂರ್ಯೋ ಭೂಮಿಶ್ಚಾದರ್ಶನಾ ತೃಣೈಃ ।
19065004c ಪತತಾ ಮೇಘವಾತೇನ ನವತೋಯಾನುಕರ್ಷಿಣಾ ।।
19065005a ಸಂಮಾರ್ಜಿತತಲಾ ಭೂಮಿರ್ಯೌವನಸ್ಥೇವ ಲಕ್ಷ್ಯತೇ ।।
ಸೂರ್ಯನು ಕಾಣದಂತಾದನು. ಹುಲ್ಲುಗಳಿಂದ ತುಂಬಿಹೋಗಿದ್ದ ಭೂಮಿಯೂ ಕಾಣದಂತಾಯಿತು. ಹೊಸನೀರನ್ನು ಹಿಡಿದುಬಂದ ಮೇಘರೂಪೀ ವಾಯುವು ಮಳೆಸುರಿಸಿ ಭೂಮಿಯನ್ನು ತೊಳೆದುಬಿಟ್ಟನು. ಭೂಮಿಯು ಯೌವನಾವಸ್ಥೆಯನ್ನು ತಳೆದಳೋ ಎಂದು ತೋರುತ್ತಿತ್ತು.
19065006a ನ ವವರ್ಷಾವಸಿಕ್ತಾನಿ ಶಕ್ರಗೋಪಕುಲಾನಿ ಚ ।
19065006c ನಷ್ಟದಾವಾಗ್ನಿಧೂಮಾನಿ ವನಾನಿ ಪ್ರಚಕಾಶಿರೇ ।।
ಇಂದ್ರಗೋಪ ಕೀಟಗಳು ಹೊಸಮಳೆಯಿಂದ ತೋಯ್ದುಹೋಗುತ್ತಿದ್ದವು. ದಾವಾಗ್ನಿ ಮತ್ತು ಹೊಗೆಗಳು ನಷ್ಟವಾಗಿ ವನಗಳು ಪ್ರಕಾಶಿತಗೊಂಡವು.
19065007a ನೃತ್ಯವ್ಯಾಪಾರಕಾಲಶ್ಚ ಮಯೂರಾಣಾಂ ಕಲಾಪಿನಾಮ್ ।
19065007c ಮದರಕ್ತಾಃ ಪ್ರವೃತ್ತಾಶ್ಚ ಕೇಕಾಃ ಪಟುರವಾಸ್ತಥಾ ।।
ದೊಡ್ಡ ದೊಡ್ಡ ಗರಿಗಳಿದ್ದ ನವಿಲುಗಳ ನೃತ್ಯವ್ಯಾಪಾರದ ಸಮಯವು ಬಂದಿತು. ಮದಮತ್ತ ಪ್ರವೃತ್ತಿಯ ಅವುಗಳ ಕೇಕೆಗಳು ಕೇಳಲು ಮನೋಹರವಾಗಿದ್ದವು.
19065008a ನವಪ್ರಾವೃಷಿ ಕಾಂತಾನಾಂ ಷಟ್ಪದಾಹಾರದಾಯಿನಾಮ್ ।
19065008c ಯೌವನಸ್ಥಕದಂಬಾನಾಂ ನವಾಭ್ರೈರ್ಭ್ರಾಜತೇ ವಪುಃ ।।
ಹೊಸಮಳೆಯಲ್ಲಿ ಕಮನೀಯವಾಗಿದ್ದ, ದುಂಬಿಗಳಿಗೆ ಆಹಾರವನ್ನು ನೀಡುತ್ತಿದ್ದ ಯೌವನಸ್ಥ ಕದಂಬ ಪುಷ್ಪಗಳು ಹೊಸಮೋಡಗಳಿಂದ ಇನ್ನೂ ಹೆಚ್ಚು ಶೋಭಿಸುತ್ತಿದ್ದವು.
19065009a ಹಾಸಿತಂ ಕುಟಜೈರ್ವೃಕ್ಷೈಃ ಕದಂಬೈರ್ವಾಸಿತಂ ವನಮ್ ।
19065009c ನಾಶಿತಂ ಜಲದೈರುಷ್ಣಂ ತೋಷಿತಾ ವಸುಧಾ ಜಲೈಃ ।
ಆ ವನವು ಕುಟಜ ವೃಕ್ಷಗಳಿಂದ ಸುಂದರಗೊಂಡಿತು ಮತ್ತು ಕದಂಬಪುಷ್ಪಗಳಿಂದ ಸುವಾಸಿತಗೊಂಡಿತು. ಮೋಡಗಳು ಬೇಗೆಯನ್ನು ನಾಶಗೊಳಿಸಿ ಮಳೆಯಿಂದ ವಸುಧೆಯನ್ನು ತೃಪ್ತಿಗೊಳಿಸಿದವು.
19065009e ಸಂತಪ್ತಾ ಭಾಸ್ಕರಕರೈರಭಿತಪ್ತಾ ದವಾಗ್ನಿಭಿಃ ।।
19065010a ಜಲೈರ್ಬಲಾಹಕೋತ್ಸೃಷ್ಟೈರುಚ್ಛ್ವಸಂತೀವ ಪರ್ವತಾಃ ।
ಸೂರ್ಯನ ಬೇಗೆಯಿಂದ ಮತ್ತು ದವಾಗ್ನಿಗಳಿಂದ ಸಂತಪ್ತಗೊಂಡಿದ್ದ ಪರ್ವತಗಳು ಮೋಡಗಳು ಸುರಿಸಿದ ಮಳೆಯಿಂದ ಅಭಿಷಿಕ್ತಗೊಂಡು ಪುನಃ ಉಸಿರಾಡತೊಡಗಿದವು.
19065010c ಮಹಾವಾತಸಮುದ್ಭೂತಂ ಮಹಾಮೇಘಗಣಾರ್ಪಿತಮ್ ।
19065010c ಮಹೀ ಮಹಾರಾಜ ಪುರೈಸ್ತುಲ್ಯಮಾಪದ್ಯತೇ ನಭಃ ।।
ಮಹಾರಾಜ! ಮೇಲೆದ್ದ ಮಹಾಭಿರುಗಾಳಿಯು ಮಹಾಮೇಘಗಣಗಳನ್ನು ಒಂದುಗೂಡಿಸಲು ನಭವು ಮಹಿಯ ಪುರಗಳಂತೆ ತೋರುತ್ತಿತ್ತು.
19065011a ಕ್ವಚಿತ್ಕದಂಬಹಾಸಾಢ್ಯಂ ಶಿಲೀಂಧ್ರಾಭರಣಂ ಕ್ವಚಿತ್ ।
19065011c ಸಂಪ್ರದೀಪ್ತಮಿವಾಭಾತಿ ಫುಲ್ಲನೀಪದ್ರುಮಂ ವನಮ್ ।।
ಕೆಲವೆಡೆ ಕದಂಬ ವೃಕ್ಷಗಳು ಹೂಬಿಟ್ಟವು. ಕೆಲವೆಡೆ ನಾಯಿಕೊಡೆಗಳು ಆಭರಣಗಳಾದವು. ನೀಪವೃಕ್ಷಗಳ ಹೂವುಗಳು ಅರಳಲು ಆ ವನವು ಬೆಂಕಿಯಿಂದ ಬೆಳಗುತ್ತಿದ್ದಂತೆ ತೋರಿತು.
19065012a ಐಂದ್ರೇಣ ಪಯಸಾ ಸಿಕ್ತಂ ಮಾರುತೇನ ಚ ವಿಸ್ತೃತಮ್ ।
19065012c ಪಾರ್ಥಿವಂ ಗಂಧಮಾಘ್ರಾಯ ಲೋಕಃ ಕ್ಷುಭಿತಮಾನಸಃ ।।
ಇಂದ್ರನ ಮಳೆಯಿಂದ ಒದ್ದೆಯಾಗಿ ಮತ್ತು ವಾಯುವಿನಿಂದ ವಿಸ್ತರಿತಗೊಂಡ ಭೂಮಿಯ ಸುಗಂಧವನ್ನು ಸೇವಿಸಿ ಜನರ ಮನಸ್ಸು ಕಾಮಗಳಿಂದ ಕ್ಷೋಭಿತಗೊಂಡಿತು.
19065013a ದೃಪ್ತಸಾರಂಗನಾದೇನ ದರ್ದುರವ್ಯಾಹತೇನ ಚ ।
19065013c ನವೈಶ್ಚ ಶಿಖಿವಿಕ್ರುಷ್ಟೈರವಕೀರ್ಣಾ ವಸುಂಧರಾ ।।
ಮದಿಸಿದ ಸಾರಂಗಗಳ ನಾದದಿಂದ, ಕಪ್ಪೆಗಳ ಕೂಗಿನಿಂದ ಮತ್ತು ನವಿಲುಗಳ ನೂತನ ಕೇಕಾರವದಿಂದ ವಸುಂಧರೆಯು ಪ್ರತಿಧ್ವನಿಸುತ್ತಿತ್ತು.
19065014a ಭ್ರಮತ್ತೂರ್ಣಮಹಾವರ್ತಾ ವರ್ಷಪ್ರಾಪ್ತಮಹಾರಯಾಃ ।
19065014c ಹರಂತ್ಯಸ್ತೀರಜಾನ್ವೃಕ್ಷಾನ್ವಿಸ್ತಾರಂ ಯಾಂತಿ ನಿಮ್ನಗಾಃ ।।
ನದಿಗಳಲ್ಲಿ ತೀವ್ರಗತಿಯಲ್ಲಿ ದೊಡ್ಡ ದೊಡ್ಡ ಅಲೆಗಳು ಏಳುತ್ತಿದ್ದವು. ಮಳೆಯ ಕಾರಣ ಅವುಗಳ ವೇಗವು ಹೆಚ್ಚುತ್ತಿತ್ತು. ತೀರದಲ್ಲಿದ್ದ ಮರಗಳನ್ನು ಕೊಚ್ಚಿ ತೇಲಿಸಿಕೊಂಡು ಹೋಗುತ್ತಿದ್ದ ಅವುಗಳ ವಿಸ್ತೀರ್ಣವು ಹೆಚ್ಚಾಗುತ್ತಲೇ ಇತ್ತು.
19065015a ಸಂತತಾಸಾರನಿರ್ಯತ್ನಾಃ ಕ್ಲಿನ್ನಯತ್ನೋತ್ತರಚ್ಛದಾಃ ।
19065015c ನ ತ್ಯಜಂತಿ ನಗಾಗ್ರಾಣಿ ಶ್ರಾಂತಾ ಇವ ಪತತ್ರಿಣಃ ।।
ನಿರಂತರ ಮಳೆಸುರಿಯುತ್ತಿರುವುದರಿಂದ ರೆಕ್ಕೆಗಳು ತೋಯ್ದು ಹಾರುವುದರಲ್ಲಿ ಅಸಫಲರಾದ ಪಕ್ಷಿಗಳು ಆಯಾಸಗೊಂಡಿವೆಯೋ ಎನ್ನುವಂತೆ ಮರದ ರೆಂಬೆಗಳನ್ನು ಬಿಡುತ್ತಿರಲಿಲ್ಲ.
19065016a ತೋಯಗಂಭೀರಲಂಬೇಷು ಸ್ರವತ್ಸು ಚ ನದತ್ಸು ಚ ।
19065016c ಉದರೇಷು ನವಾಭ್ರಾಣಾಂ ಮಜ್ಜತೀವ ದಿವಾಕರಃ ।।
ದಿವಾಕರನು ನೀರಿನಿಂದ ಘನವಾಗಿ ಸುರಿಸುತ್ತಿದ್ದ ಮತ್ತು ಗರ್ಜಿಸುತ್ತಿದ್ದ ಹೊಸ ಮೋಡಗಳನ್ನು ಉದರಲ್ಲಿಟ್ಟುಕೊಂಡು ಮುಳುಗಿಹೋಗುತ್ತಿದ್ದಾನೋ ಎನ್ನುವಂತೆ ಹೋಗುತ್ತಿದ್ದನು.
19065017a ಮಹೀರುಹೈರುತ್ಪತಿತೈಃ ಸಲಿಲೋತ್ಪೀಡಸಂಕುಲಾ ।
19065017c ಅನ್ವಿಷ್ಯಮಾರ್ಗಾ ವಸುಧಾ ಭಾತಿ ಶಾದ್ವಲಮಾಲಿನೀ ।।
ಭೂಮಿಯು ಒಂದೆಡೆ ಹುಲ್ಲಿನ ಹಾಸಿಗೆಯಿಂದ ಮುಚ್ಚಿಲ್ಪಟ್ಟಿದ್ದರೆ ಇನ್ನೊಂದೆಡೆ ನೀರಿನ ಪ್ರವಾಹದಲ್ಲಿ ಮುಳುಗಿಹೋಗಿತ್ತು. ಮಾರ್ಗಗಳು ತೋರುತ್ತಿರಲಿಲ್ಲ. ರಸ್ತೆಯ ದಡದಲ್ಲಿದ್ದ ಮರಗಳಿಂದಲೇ ಮಾರ್ಗವನ್ನು ಊಹಿಸಬಹುದಾಗಿತ್ತು.
19065018a ವಜ್ರೇಣೇವಾವರುಗ್ಣಾನಾಂ ನಗಾನಾಂ ನಗಶಾಲಿನಾಮ್ ।
19065018c ಸ್ರೋತೋಭಿಃ ಪರಿಕೃತ್ತಾನಿ ಪತಂತಿ ಶಿಖರಾಣ್ಯಧಃ ।।
ವೃಕ್ಷಗಳಿಂದ ಸುಶೋಭಿತ ಪರ್ವತ ಶಿಖರಗಳು ವರ್ಷಾಧಾರೆಗಳಿಂದ , ವಜ್ರಾಘಾತದಿಂದಲೋ ಎಂಬಂತೆ, ತುಂಡಾಗಿ ಕೆಳಗೆ ಬೀಳುತ್ತಿದ್ದವು.
19065019a ಪತತಾ ಮೇಘವರ್ಷೇಣ ಯಥಾ ನಿಮ್ನಾನುಸಾರಿಣಾ ।
19065019c ಪಲ್ವಲೋತ್ಕೀರ್ಣಮುಕ್ತೇನ ಪೂರ್ಯಂತೇ ವನರಾಜಯಃ ।।
ಮೇಘವರ್ಷದಿಂದಾಗಿ ಕೆಳಗೆ ಬಿದ್ದ ನೀರು ತಗ್ಗಿನ ಪ್ರದೇಶಗಳನ್ನೇ ಅನುಸರಿಸಿ ಗುಹೆಗಳನ್ನೂ ತುಂಬಿ, ವನರಾಜಿಗಳನ್ನೂ ತುಂಬಿಸುತ್ತಿತ್ತು.
19065020a ಹಸ್ತೋಚ್ಛ್ರಿತಮುಖಾ ವನ್ಯಾ ಮೇಘನಾದಾನುಸಾರಿಣಃ ।
19065020c ಭ್ರಾಂತಾತಿವೃಷ್ಟ್ಯಾ ಮಾತಂಗಾ ಗಾಂ ಗತಾ ಇವ ತೋಯದಾಃ ।।
ಅತಿವೃಷ್ಟಿಯಿಂದ ಭ್ರಾಂತಗೊಂಡ ಕಾಡಾನೆಗಳು ಮುಖ-ಸೊಂಡಿಲುಗಳನ್ನು ಮೇಲೆಮಾಡಿ ಮೋಡದ ಗರ್ಜನೆಯನ್ನು ಅನುಕರಣೆಮಾಡುತ್ತಿದ್ದವು. ಆಗ ಅವು ಭೂಮಿಗಿಳಿದ ಮೋಡಗಳಂತೆ ತೋರುತ್ತಿದ್ದವು.
19065021a ಪ್ರಾವೃಟ್ಪ್ರವೃತ್ತಿಂ ಸಂದೃಶ್ಯ ದೃಷ್ಟ್ವಾ ಚಾಂಬುಧರಾನ್ಘನಾನ್ ।
19065021c ರೌಹಿಣೇಯೋ ಮಿಥಃ ಕಾಲೇ ಕೃಷ್ಣಂ ವಚನಮಬ್ರವೀತ್ ।।
ವರ್ಷಋತುವಿನ ಆಗಮನ ಮತ್ತು ಆಕಾಶದಲ್ಲಿ ಘನಮೋಡಗಳನ್ನು ನೋಡಿ ರೌಹಿಣೇಯನು ಕೃಷ್ಣನಿಗೆ ಕಾಲಕ್ಕೆ ತಕ್ಕಂತಹ ಈ ಮಾತನ್ನಾಡಿದನು:
19065022a ಪಶ್ಯ ಕೃಷ್ಣ ಘನಾನ್ಕೃಷ್ಣಾನ್ಬಲಾಕೋಜ್ಜ್ವಲಭೂಷಣಾನ್ ।
19065022c ಗಗನೇ ತವ ಗಾತ್ರಸ್ಯ ವರ್ಣಚೋರಾನ್ಸಮುಚ್ಛ್ರಿತಾನ್ ।।
“ಕೃಷ್ಣ! ಗಗನದಲ್ಲಿ ಉಜ್ಜ್ವಲ ಭೂಷಣಗಳಂತಿರುವ ಕಪ್ಪುಬಣ್ಣದ ಘನ ಮೋಡಗಳನ್ನು ನೋಡು.ಅವು ನಿನ್ನ ಅಂಗಕಾಂತಿಯನ್ನು ಅಪಹರಿಸಿದಂತಿವೆ.
19065023a ತವ ನಿದ್ರಾಕರಃ ಕಾಲಸ್ತವ ಗಾತ್ರೋಪಮಂ ನಭಃ ।
19065023c ತ್ವಮಿವಾಜ್ಞಾತವಸತಿಂ ಚಂದ್ರೋ ವಸತಿ ವಾರ್ಷಿಕೀಮ್ ।।
ಇದು ನೀನು ನಿದ್ರಿಸುವ ಸಮಯವು[1]. ಕಪ್ಪು ಮೇಘಗಳಿಂದಾಗ ನಭವು ನಿನ್ನ ಬಣ್ಣವನ್ನೇ ತಾಳಿದೆ. ವರ್ಷಋತುವಿನ ಚಂದ್ರನೂ ಕೂಡ ನಿನ್ನಂತೆ ಅಜ್ಞಾತವಾಸವನ್ನು ಮಾಡುತ್ತಿದ್ದಾನೆ.
19065024a ಏತನ್ನೀಲಾಂಬುದಶ್ಯಾಮಂ ನೀಲೋತ್ಪಲದಲಪ್ರಭಮ್ ।
19065024c ಸಂಪ್ರಾಪ್ತೇ ದುರ್ದಿನೇ ಕಾಲೇ ದುರ್ದಿನಂ ಭಾತಿ ವೈ ನಭಃ ।।
ನೀಲಮೇಘಗಳಿಂದ ಶ್ಯಾಮವರ್ಣವನ್ನು ತಾಳಿರುವ, ನೀಲಕಮಲದಂತೆ ಪ್ರಕಾಶಿಸುತ್ತಿರುವ ಈ ನಭವು ವರ್ಷಾಕಾಲವು ಸಂಪ್ರಾಪ್ತವಾದ ಸಮಯದಲ್ಲಿ ಸ್ವಯಂ ಮೇಘಗಳಿಂದ ಆಚ್ಛಾದಿತವಾಗಿದೆ.
19065025a ಪಶ್ಯ ಕೃಷ್ಣ ಜಲೋದಗ್ರೈಃ ಕೃಷ್ಣೈರುದ್ಗ್ರಥಿತೈರ್ಘನೈಃ ।
19065025c ಗೋವರ್ಧನೋ ಯಥಾ ರಮ್ಯೋ ಭಾತಿ ಗೋವರ್ಧನೋ ಗಿರಿಃ ।।
ಕೃಷ್ಣ! ಕಪ್ಪು ಘನ ಮೋಡಗಳು ಮುತ್ತಿಕೊಂಡಿರುವ ಗೋವುಗಳನ್ನು ಗೋವರ್ಧನ ಗಿರಿಯು ಏಷ್ಟು ರಮ್ಯವಾಗಿದೆ ನೋಡು!
19065026a ಪತಿತೇನಾಂಭಸಾ ಹ್ಯೇತೇ ಸಮಂತಾನ್ಮದದರ್ಪಿತಾಃ ।
19065026c ಭ್ರಾಜಂತೇ ಕೃಷ್ಣಸಾರಂಗಾಃ ಕಾನನೇಷು ಮುದಾನ್ವಿತಾಃ ।।
ಎಲ್ಲಕಡೆ ಮಳೆಸುರಿಯುತ್ತಿರುವುದರಿಂದ ಈ ಕೃಷ್ಣಸಾರಂಗಳು ಮದದರ್ಪಿತರಾಗಿ ಮುದಾನ್ವಿತರಾಗಿ ಕಾನನಗಳಲ್ಲಿ ಶೋಭಿಸುತ್ತಿವೆ.
19065027a ಏತಾನ್ಯಂಬುಪ್ರಹೃಷ್ಟಾನಿ ಹರಿತಾನಿ ಮೃದೂನಿ ಚ ।
19065027c ತೃಣಾನಿ ಶತಪತ್ರಾಕ್ಷ ಪತ್ರೈರ್ಗೂಹಂತಿ ಮೇದಿನೀಮ್ ।।
ಶತಪತ್ರಾಕ್ಷ[2]! ನೀರಿನಿಂದ ತೋಯ್ದು ಹರ್ಷಗೊಂಡು ಈ ಮೃದು ಹಸಿರು ಹುಲ್ಲುಗಳು ತಮ್ಮ ಪತ್ರೆಗಳಿಂದ ಮೇದಿನಿಯನ್ನು ಮುಚ್ಚಿಕೊಂಡಿವೆ.
19065028a ಕ್ಷರಜ್ಜಲಾನಾಂ ಶೈಲಾನಾಂ ವನಾನಾಂ ಜಲದಾಗಮೇ ।
19065028c ಸಸಸ್ಯಾಣಾಂ ಚ ಸೀಮಾನಾಂ ನ ಲಕ್ಷ್ಮೀರ್ವ್ಯತಿರಿಚ್ಯತೇ ।।
ಮೋಡಗಳ ಆಗಮನದಿಂದಾಗಿ ಝರಿಗಳನ್ನು ಹರಿಸುವ ಶೈಲಗಳ, ವನಗಳ, ಮತ್ತು ಸಸ್ಯಸಂಪನ್ನ ಹೊಲಗಳ ಶೋಭಾಲಕ್ಷ್ಮಿಯು ಒಂದೇ ಆಗಿದ್ದಾಳೆ.
19065029a ಶೀಘ್ರವಾತಸಮುದ್ಭೂತಾಃ ಪ್ರೋಷಿತೌತ್ಸುಕ್ಯಕಾರಿಣಃ ।
19065029c ದಾಮೋದರೋದ್ದಾಮರವಾಃ ಪ್ರಾಗಲ್ಭ್ಯಂ ಯಾಂತಿ ತೋಯದಾಃ ।।
ದಾಮೋದರ! ಶೀಘ್ರವಾಯುವಿನಿಂದ ಪ್ರೀರಿತಗೊಂಡು ಮೇಲೆ ಎದ್ದಿರುವ, ಪರದೇಶಗಳಲ್ಲಿರುವ ಪುರುಷರನ್ನು ಮನೆಗೆ ಬರಲು ಉತ್ಸುಕರನ್ನಾಗಿಸುವ ಈ ಮೋಡಗಳು ಪ್ರಚಂಡವಾಗಿ ಗರ್ಜಿಸುತ್ತಾ ತಮ್ಮ ಪ್ರಕಲ್ಭತೆಯನ್ನು ಪರಿಚಯಿಸುತ್ತಿವೆ.
19065030a ಹರೇ ಹರ್ಯಶ್ವಚಾಪೇನ ತ್ರಿವರ್ಣೇನ ತ್ರಿವಿಕ್ರಮ ।
19065030c ವಿಬಾಣಜ್ಯೇನ ರಚಿತಂ ತವೇದಂ ಮಧ್ಯಮಂ ಪದಮ್ ।।
ಹರೇ! ತ್ರಿವಿಕ್ರಮ! ಬಾಣ-ಶಿಂಜನಿಗಳಿಲ್ಲದೇ ತ್ರಿವರ್ಣದ ಇಂದ್ರಧನುಸ್ಸಿನಿಂದ ನಿನ್ನ ಮಧ್ಯಮ ಪದ ಆಂತರಿಕ್ಷವು ಅಲಂಕೃತಗೊಂಡಿದೆ.
19065031a ನಭಸ್ಯೇಷ ನಭಶ್ಚಕ್ಷುರ್ನ ಭಾತ್ಯೇವ ಚರನ್ನಭಃ ।
19065031c ಮೇಷೈಃ ಶೀತಾತಪಕರೋ ವಿರಶ್ಮಿರಿವ ರಶ್ಮಿವಾನ್ ।।
ಶ್ರಾವಣಮಾಸದಲ್ಲಿ ಆಕಾಶದ ನೇತ್ರರೂಪಿಯಾಗಿ ರಶ್ಮಿವಾನ್ ಸೂರ್ಯನು ಪ್ರಭಾಹೀನನಾಗಿದ್ದಾನೆ. ಮೋಡಗಳಿಂದ ಆಚ್ಛಾದಿತನಾಗಿ ಅವನ ತಾಪವನ್ನೀಯುವ ಕಿರಣಗಳು ಶೀತಲವಾಗಿಬಿಟ್ಟಿವೆ.
19065032a ದ್ಯಾವಾಪೃಥಿವ್ಯೋಃ ಸಂಸರ್ಗಃ ಸತತಂ ವಿತತೈಃ ಕೃತಃ ।
19065032c ಅವ್ಯವಚ್ಛಿನ್ನಧಾರೌಘೈಃ ಸಮುದ್ರೌಘಸಮೈರ್ಘನೈಃ ।।
ಸಮುದ್ರದ ದೊಡ್ಡ ದೊಡ್ಡ ಅಲೆಗಳಂತೆ ಆಕಾಶವನ್ನು ಮುಚ್ಚಿರುವ ಈ ಮೋಡಗಳ ಅವಿಚ್ಛಿನ್ನ ಮಳೆಸುರಿಯುವಿಕೆಯಿಂದ ಆಕಾಶ ಮತ್ತು ಭೂಮಿ ಸತತ ಒಂದಕ್ಕೊಂದು ಸೇರಿಕೊಂಡಿವೆಯೋ ಎಂದು ತೋರುತ್ತಿದೆ.
19065033a ನೀಪಾರ್ಜುನಕದಂಬಾನಾಂ ಪೃಥಿವ್ಯಾಂ ಚಾತಿವೃಷ್ಟಿಭಿಃ ।
19065033c ಗಂಧೈಃ ಕೋಲಾಹಲಾ ವಾಂತಿ ವಾತಾ ಮದನದೀಪನಾಃ ।।
ಅತಿವೃಷ್ಟಿಯಿಂದಾಗಿ ನೀಪ, ಅರ್ಜುನ ಮತ್ತು ಕದಂಬಗಳ ಸುವಾಸನೆಗಳನ್ನು ಹೊತ್ತು ಕೋಲಾಹಲಯುಕ್ತ ಗಾಳಿಯು ಕಾಮಿಗಳ ಕಾಮವನ್ನು ಉದ್ದೀಪನಗೊಳಿಸುತ್ತಾ ಬೀಸುತ್ತಿದೆ.
19065034a ಸಂಪ್ರವೃತ್ತಮಹಾವರ್ಷಂ ಲಂಬಮಾನಮಹಾಂಬುದಮ್ ।
19065034c ಭಾತ್ಯಗಾಧಮಪರ್ಯಂತಂ ಸಸಾಗರಮಿವಾಂಬರಮ್ ।।
ಮಹಾವರ್ಷವು ಶುರುವಾಗಿದೆ. ಮಳೆಸುರಿಸಲು ದೊಡ್ಡ ದೊಡ್ಡ ಮೋಡಗಳು ತಲೆತಗ್ಗಿಸಿ ಬಂದಿವೆ. ಇದರಿಂದಾಗಿ ಆಕಾಶವು ಅನಂತ ಮಹಾಸಾಗರದೊಂದಿಗೆ ಠಕ್ಕರಿಸುತ್ತಿದೆಯೋ ಎಂಬಂತೆ ತೋರುತ್ತಿದೆ.
19065035a ಧಾರಾನಿರ್ಮಲನಾರಾಚಂ ವಿದ್ಯುತ್ಕವಚವರ್ಮಿಣಮ್ ।
19065035c ಶಕ್ರಚಾಪಾಯುಧಧರಂ ಯುದ್ಧಸಜ್ಜಮಿವಾಂಬರಮ್ ।।
ಮಳೆಯ ಧಾರೆಗಳ ನಿರ್ಮಲ ನಾರಾಚಶರಗಳು, ವಿದ್ಯುತ್ ರೂಪೀ ಕವಚ ಮತ್ತು ಇಂದ್ರಧನುಸ್ಸಿನ ರೂಪಿನ ಆಯುಧವನ್ನು ಧರಿಸಿ ಅಂಬರವು ಯುದ್ಧಕ್ಕೆ ಅಣಿಯಾಗಿದೆಯೋ ಎನ್ನುವಂತೆ ತೋರುತ್ತಿದೆ.
19065036a ಶೈಲಾನಾಂ ಚ ವನಾನಾಂ ಚ ದ್ರುಮಾಣಾಂ ಚ ವರಾನನ ।
19065036c ಪ್ರತಿಚ್ಛನ್ನಾನಿ ಭಾಸಂತೇ ಶಿಖರಾಣಿ ಘನೈರ್ಘನೈಃ ।।
ವರಾನನ! ಪರ್ವತ ಶಿಖರಗಳು, ವನಗಳು, ಮತ್ತು ವೃಕ್ಷಗಳ ತುದಿಗಳು ಘನಮೋಡಗಳಿಂದ ಆಚ್ಛಾದಿತಗೊಂಡು ಶೋಭಿಸುತ್ತಿವೆ!
19065037a ಗಜಾನೀಕೈರಿವಾಕೀರ್ಣಂ ಸಲಿಲೋದ್ಗಾರಿಭಿರ್ಘನೈಃ ।
19065037c ವರ್ಣಸಾರೂಪ್ಯತಾಂ ಯಾತಿ ಗಗನಂ ಸಾಗರಸ್ಯ ಚ ।।
ತಮ್ಮ ಸೊಂಡಿಲುಗಳಿಂದ ನೀರು ಚೆಲ್ಲುವ ಗಜಸಮೂಹಗಳಂತಿರುವ ಈ ಕಪ್ಪು ಮೋಡಗಳಿಂದ ಆಚ್ಛಾದಿತ ಗಗನವು ರಂಗು-ರೂಪಗಳಲ್ಲಿ ಸಮುದ್ರದ ಸಮಾನವಾಗಿಬಿಟ್ಟಿದೆ.
19065038a ಸಮುದ್ರೋದ್ಧೂತಜನಿತಾ ಲೋಲಶಾಡ್ವಲಕಂಪಿನಃ ।
19065038c ಶೀತಾಃ ಸಪೃಷತೋದ್ದಾಮಾಃ ಕರ್ಕಶಾ ವಾಂತಿ ಮಾರುತಾಃ ।।
ಸಮುದ್ರದ ಅಲೆಗಳಿಂದ ಹುಟ್ಟಿದ ಚಂಚಲ ಹುಲ್ಲುಗಾವಲನ್ನು ಕಂಪುಗೊಳಿಸುವ ಜಲಬಿಂದುಸಹಿತ ಶೀತಲ ಕರ್ಕಶ ಗಾಳಿಯು ಬೀಸುತ್ತಿದೆ.
19065039a ನಿಶಾಸು ಸುಪ್ತಚಂದ್ರಾಸು ಮುಕ್ತತೋಯಾಸು ತೋಯದೈಃ ।
19065039c ಮಗ್ನಸೂರ್ಯಸ್ಯ ನಭಸೋ ನ ವಿಭಾಂತಿ ದಿಶೋ ದಶ ।।
ರಾತ್ರಿ ಚಂದ್ರನು ಮಲಗಿದಂತೆ ಅದೃಶ್ಯನಾಗಿಬಿಟ್ಟಿರುವಾಗ, ಮೋಡಗಳು ಒಂದೇ ಸಮನೆ ಮಳೆಸುರಿಸುತ್ತಿರುವಾಗ, ಆಕಾಶದಲ್ಲಿ ಸೂರ್ಯನೂ ಮುಳುಗಿಹೋಗಿರುವಾಗ ಹತ್ತು ದಿಕ್ಕುಗಳೂ ತೋಚದಂತಾಗಿದೆ.
19065040a ಚೇತನಂ ಪುಷ್ಕರಂ ಕೋಶೈಃ ಕ್ಷುಧಾಧ್ಮಾತೈಃ ಸಮಂತತಃ ।
19065040c ನ ಘೃಣೀನಾಂ ನ ರಮ್ಯಾಣಾಂ ವಿವೇಕಂ ಯಂತಿ ಕೃಷ್ಟಯಃ ।।
ಎಲ್ಲಕಡೆಗಳಲ್ಲಿ ಗಾಳಿಯಿಂದ ಉಪಲಕ್ಷಿತ ಆಕಾಶವು ಚೇತನಾಯುಕ್ತವಾದಂತೆ ತೋರುತ್ತಿದೆ. ಕೃಷಿಕರಿಗೆ ದಿನ ಅಥವಾ ರಾತ್ರಿಯ ವಿವೇಕವೇ ಆಗುತ್ತಿಲ್ಲ.
19065041a ಘರ್ಮದೋಷಪರಿತ್ಯಕ್ತಂ ಮೇಘತೋಯವಿಭೂಷಿತಮ್ ।
19065041c ಪಶ್ಯ ವೃಂದಾವನಂ ಕೃಷ್ಣ ವನಂ ಚೈತ್ರರಥಂ ಯಥಾ ।।
ಕೃಷ್ಣ! ಬೇಸಗೆಯ ದೋಷವಿಲ್ಲದ ಮೇಘಗಳ ಮಳೆಯಿಂದ ವಿಭೂಷಿತ ವೈತ್ರರಥ ವನದಂತೆ ಶೋಭಿಸುವ ವೃಂದಾವನವನ್ನು ನೋಡು!”
19065042a ಏವಂ ಪ್ರಾವೃಡ್ಗುಣಾನ್ಸರ್ವಾಂಛ್ರೀಮಾನ್ಕೃಷ್ಣಸ್ಯ ಪೂರ್ವಜಃ ।
19065042c ಕಥಯನ್ನೇವ ಬಲವಾನ್ವ್ರಜಮೇವ ಜಗಾಮ ಹ ।।
ಹೀಗೆ ಮಳೆಗಾಲದ ಸರ್ವ ಗುಣಗಳನ್ನೂ ವರ್ಣಿಸುತ್ತಾ ಶ್ರೀಮಾನ ಕೃಷ್ಣನ ಪೂರ್ವಜ ಬಲವಾನನು ವ್ರಜಕ್ಕೆ ಹೋದನು.
19065043a ಅನ್ಯೋನ್ಯಂ ರಮಮಾಣೌ ತು ಕೃಷ್ಣಸಂಕರ್ಷಣಾವುಭೌ ।
19065043c ತತ್ಕಾಲಜ್ಞಾತಿಭಿಃ ಸಾರ್ದ್ಧಂ ಚೇರತುಸ್ತದ್ವನಂ ಮಹತ್ ।।
ಅನ್ಯೋನ್ಯರನ್ನು ರಮಿಸುತ್ತಾ ಕೃಷ್ಣ-ಸಂಕರ್ಷಣರಿಬ್ಬರೂ ತತ್ಕಾಲ ಜ್ಞಾತಿಜನರೊಂದಿಗೆ ಆ ಮಹಾವನದಲ್ಲಿ ಸಂಚರಿಸಿದರು.”
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಾಂಶೇ ವಿಷ್ಣುಪರ್ವಣಿ ಪ್ರಾವೃದ್ವರ್ಣನೇ ಪಂಚಷಷ್ಟಿತಮೋಽಧ್ಯಾಯಃ ।।
ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ವಿಷ್ಣುಪರ್ವದಲ್ಲಿ ಪ್ರಾವೃದ್ವರ್ಣನೆಯಲ್ಲಿ ಅರವತ್ತೈದನೇ ಅಧ್ಯಾಯವು.
[1] ಮಳೆಗಾಲದ ನಾಲ್ಕು ತಿಂಗಳು ಭಗವಾನ್ ವಿಷ್ಣುವು ನಿದ್ರಿಸುತ್ತಾನೆ.
[2] ಕಮಲನಯನ!