Harivamsha: Chapter 63

ಹರಿವಂಶ: ವಿಷ್ಣುಪರ್ವಃ

೬೩

ವೃಕವರ್ಣನಮ್

ಶ್ರೀಕೃಷ್ಣ-ಬಲರಾಮರ ಬಾಲಚರ್ಯೆ (1-7). ಶ್ರೀಕೃಷ್ಣನು ವ್ರಜದ ಜನರನ್ನು ಬೇರೆಕಡೆ ಕೊಂಡೊಯ್ಯಲು ಬಯಸಿದುದು (8-29) ಮತ್ತು ತನ್ನ ಶರೀರದಿಂದ ತೋಳಗಳನ್ನು ಹುಟ್ಟಿಸಿ ಅವುಗಳಿಂದ ವ್ರಜದ ಜನರನ್ನು ಬೆದರಿಸಿದುದು (30-39).

19063001  ವೈಶಂಪಾಯನ ಉವಾಚ |

19063001a ಏವಂ ತೌ ಬಾಲ್ಯಮುತ್ತೀರ್ಣೌ ಕೃಷ್ಣಸಂಕರ್ಷಣಾವುಭೌ |

19063001c ತಸ್ಮಿನ್ನೇವ ವ್ರಜಸ್ಥಾನೇ ಸಪ್ತವರ್ಶೌ ಬಭೂವತುಃ ||

ವೈಶಂಪಾಯನನು ಹೇಳಿದನು: “ಹೀಗೆ ಕೃಷ್ಣ-ಸಂಕರ್ಷಣರು ವ್ರಜಸ್ಥಾನದಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಅಲ್ಲಿಯೇ ಅವರಿಗೆ ಏಳು ವರ್ಷಗಳಾದವು.

19063002a ನೀಲಪೀತಾಂಬರಧರೌ ಪೀತಶ್ವೇತಾನುಲೇಪನೌ |

19063002c ಬಭೂವತುರ್ವತ್ಸಪಾಲೌ ಕಾಕಪಕ್ಷಧರಾವುಭೌ ||

ಅವರು ನೀಲಿ ಮತ್ತು ಹಳದೀ ಬಣ್ಣದ ವಸ್ತ್ರಗಳನ್ನು ಉಡುತ್ತಿದ್ದರು[1]. ಬಿಳಿಯ ಮತ್ತು ಹಳದೀ ಗಂಧಗಳನ್ನು ಹಚ್ಚಿಕೊಳ್ಳುತ್ತಿದ್ದರು. ಅವರು ಗೋ-ಕರುಗಳನ್ನು ಕಾಯುತ್ತಿದ್ದರು ಮತ್ತು ಇಬ್ಬರೂ ನವಿಲುಗರಿಗಳನ್ನು ಧರಿಸುತ್ತಿದ್ದರು.

19063003a ಪರ್ಣವಾದ್ಯಂ ಶ್ರುತಿಸುಖಂ ವಾದಯಂತೌ ವರಾನನೌ |

19063003c ಶುಶುಭಾತೇ ವನಗತೌ ತ್ರಿಶೀರ್ಷಾವಿವ ಪನ್ನಗೌ ||

ಸುಂದರ ಮುಖದ ಅವರು ಕೇಳಲಿಕ್ಕೆ ಸುಖಕರವಾಗಿದ್ದ ಎಲೆಗಳಿಂದ ಮಾಡಿದ ಪೀಪಿಗಳನ್ನು ಊದುತ್ತಿದ್ದರು. ವನದಲ್ಲಿ ತಿರುಗಾಡುತ್ತಿದ್ದ ಅವರು ಮೂರು ಹೆಡೆಗಳ ಹಾವುಗಳಂತೆ ಶೋಭಿಸುತ್ತಿದ್ದರು.

19063004a ಮಯೂರಾಂಗದಕರ್ಣೌ ತು ಪಲ್ಲವಾಪೀಡಧಾರಿಣೌ |

19063004c ವನಮಾಲಾಕುಲೋರಸ್ಕೌ ದ್ರುಮಪೋತಾವಿವೋದ್ಗತೌ ||

ಅವರ ಅಂಗದ-ಓಲೆಗಳು ನವಿಲುಗರಿಗಳಿಂದ ಮಾಡಲ್ಪಟ್ಟಿದ್ದವು. ಎಲೆಗಳಿಂದ ಮಾಡಿದ ಕಿರೀಟವನ್ನು ಧರಿಸುತ್ತಿದ್ದರು. ಎದೆಗಳ ಮೇಲೆ ವನಮಾಲೆಗಳನ್ನು ಧರಿಸಿ ಹೂಬಿಟ್ಟ ವೃಕ್ಷಗಳಂತೆ ಶೋಭಿಸುತ್ತಿದ್ದರು. 

19063005a ಅರವಿಂದಕೃತಾಪೀಡೌ ರಜ್ಜುಯಜ್ಞೋಪವೀತಿನೌ |

19063005c ಸಶಿಕ್ಯತುಂಬಕರಕೌ ಗೋಪವೇಣುಪ್ರವಾದಕೌ ||

ಶಿರೋಭೂಷಣಗಳು ಕಮಲದ ಹೂವಿನದ್ದಾಗಿದ್ದವು. ಹಗ್ಗಗಳ ಯಜ್ಞೋಪವೀತಗಳಿದ್ದವು. ಗೋಪಾಲಕರಂತೆ ಅವರ ಹೆಗಲುಗಳ ಮೇಲೆ ಎರಡೂ ತುದಿಗಳಲ್ಲಿ ಗಡಿಗೆಗಳನ್ನು ಕಟ್ಟಿದ್ದ ಬೆತ್ತಗಳಿದ್ದವು ಮತ್ತು ಕೊಳಲನ್ನು ಊದುತ್ತಿದ್ದರು. 

19063006a ಕ್ವಚಿದ್ಧಸಂತಾವನ್ಯೋನ್ಯಂ ಕ್ರೀಡಮಾನೌ ಕ್ವಚಿತ್ಕ್ವಚಿತ್ |

19063006c ಪರ್ಣಶಯ್ಯಾಸು ಸಂಸುಪ್ತೌ ಕ್ವಚಿನ್ನಿದ್ರಾಂತರೇಕ್ಷಣೌ ||

ದನಕರುಗಳನ್ನು ಕಾಯುತ್ತಿದ್ದಾಗ ಕೆಲವೊಮ್ಮೆ ಅನ್ಯೋನ್ಯರೊಡನೆ ನಗುತ್ತಿದ್ದರು. ಕೆಲವೊಮ್ಮೆ ಯಾವುದಾದರೂ ಆಟವಾಡುತ್ತಿದ್ದರು. ಕೆಲವೊಮ್ಮೆ ಎಲೆಯ ಹಾಸಿಗೆಯ ಮೇಲೆ ಮಲಗುತ್ತಿದ್ದರು. ಕೆಲವೊಮ್ಮೆ ನಿದ್ದೆಮಾಡುತ್ತಿದ್ದರು.

19063007a ಏವಂ ವತ್ಸಾನ್ಪಾಲಯಂತೌ ಶೋಭಯಂತೌ ಮಹಾವನಮ್ |

19063007c ಚಂಚೂರ್ಯಂತೌ ರಮಂತೌ ಸ್ಮ ಕಿಶೋರಾವಿವ ಚಂಚಲೌ ||

ಹೀಗೆ ದನಕರುಗಳನ್ನು ಮಹಾವನದಲ್ಲಿ ಸುತ್ತಾಡಿಸುತ್ತಾ ಕಾಯುತ್ತಾ ಶೋಭಿಸುತ್ತಿದ್ದರು. ಕಿಶೋರರಂತೆ ಚಂಚಲರಾಗಿದ್ದ ಅವರು ತಿರುಗಾಡುವುದರಲ್ಲಿಯೇ ರಮಿಸುತ್ತಿದ್ದರು.

19063008a ಅಥ ದಾಮೋದರಃ ಶ್ರೀಮಾನ್ಸಂಕರ್ಷಣಮುವಾಚ ಹ |

19063008c ಆರ್ಯ ನಾಸ್ಮಿನ್ವನೇ ಶಕ್ಯಂ ಗೋಪಾಲೈಃ ಸಹ ಕ್ರೀಡಿತುಮ್ ||

ಒಮ್ಮೆ ಶ್ರೀಮಾನ್ ದಾಮೋದರನು ಸಂಕರ್ಷಣನಿಗೆ ಹೇಳಿದನು: “ಆರ್ಯ! ಈ ವನದಲ್ಲಿ ಗೋಪಾಲಕರೊಡನೆ ಆಟವಾಡಲು ಶಕ್ಯವಿಲ್ಲ.

19063009a ಅವಗೀತಮಿದಂ ಸರ್ವಮಾವಾಭ್ಯಾಂ ಭುಕ್ತಕಾನನಮ್ |

19063009c ಪ್ರಕ್ಷೀಣತೃಣಕಾಷ್ಠಂ ಚ ಗೋಪೈರ್ಮಥಿತಪಾದಪಮ್ ||

ಈ ಪ್ರದೇಶದ ಕುರಿತು ನಾವು ಎಲ್ಲವನ್ನೂ ತಿಳಿದುಕೊಂಡಿದ್ದಾಗಿದೆ ಮತ್ತು ಈ ಕಾನನವನ್ನು ಸಂಪೂರ್ಣವಾಗಿ ಭೋಗಿಸಿಯಾಗಿದೆ. ಗೋಪರು ಮರಗಳನ್ನು ಕಡಿದುದರಿಂದ ಇಲ್ಲಿ ಹುಲ್ಲು-ಕಟ್ಟಿಗೆಗಳೂ ಕಡಿಮೆಯಾಗುತ್ತಿವೆ.

19063010a ಘನೀಭೂತಾನಿ ಯಾನ್ಯಾಸನ್ಕಾನನಾನಿ ವನಾನಿ ಚ |

19063010c ತಾನ್ಯಾಕಾಶನಿಕಾಶಾನಿ ದೃಶ್ಯಂತೇಽದ್ಯ ಯಥಾಸುಖಮ್ ||

ಈ ಕಾನನ ವನಗಳು ಹಿಂದೆ ದಟ್ಟವಾಗಿದ್ದವು. ಇಂದು ಇವು ಆಕಾಶದಂತೆ ಶೂನ್ಯವಾಗಿ ಕಾಣುತ್ತಿವೆ.

19063011a ಗೋವಾಟೇಷ್ವಪಿ ಯೇ ವೃಕ್ಷಾಃ ಪರಿವೃತ್ತಾರ್ಗಲೇಷು ಚ |

19063011c ಸರ್ವೇ ಗೋಷ್ಠಾಗ್ನಿಷು ಗತಾಃ ಕ್ಷಯಮಕ್ಷಯವರ್ಚಸಃ ||

ಹಸುವಿನ ಕೊಟ್ಟಿಗೆಯ ಸುತ್ತಮುತ್ತಲೂ ಅಕ್ಷಯವೋ ಎಂಬಂತಿದ್ದ ಮರಗಳೆಲ್ಲವನ್ನೂ ಗೋಪರು ಕಟ್ಟಿಗೆಯಾಗಿ ಸುಟ್ಟುಹಾಕಿರುವುದರಿಂದ ಅವೂ ಕ್ಷಯವಾಗಿಬಿಟ್ಟಿವೆ.

19063012a ಸಂನಿಕೃಷ್ಟಾನಿ ಯಾನ್ಯಾಸನ್ಕಾಷ್ಠಾನಿ ಚ ತೃಣಾನಿ ಚ |

19063012c ತಾನಿ ದೂರಾವಕೃಷ್ಟಾಸು ಮಾರ್ಗಿತವ್ಯಾನಿ ಭೂಮಿಷು ||

ಹತ್ತಿರದಲ್ಲಿಯೇ ದೊರೆಯುತ್ತಿದ್ದ ಹುಲ್ಲು-ಕಟ್ಟಗೆಗಳನ್ನು ಈಗ ದೂರ ಪ್ರದೇಶಗಳಲ್ಲಿ ಹುಡುಕಬೇಕಾಗಿದೆ.

19063013a ಅರಣ್ಯಮಿದಮಲ್ಪೋದಮಲ್ಪಕಕ್ಷಂ ನಿರಾಶ್ರಯಮ್ |

19063013c ಅನ್ವೇಷಿತವ್ಯವಿಶ್ರಾಮಂ ದಾರುಣಂ ವಿರಲದ್ರುಮಮ್ ||

ಈ ಅರಣ್ಯದಲ್ಲಿ ಸ್ವಲ್ಪವೇ ನೀರು ಮತ್ತು ಕಟ್ಟಗೆಗಳು ಉಳಿದುಕೊಂಡಿವೆ. ಇದರ ಮೂಲವೇ ನಾಶವಾದಂತಿದೆ. ಮರಗಳು ಕಡಿಮೆಯಾಗಿರುವುದರಿಂದ ನೆರಳಿಗೆ ಹುಡುಕಬೇಕಾಗಿದೆ. ಇದು ಕಷ್ಟವಾಗುತ್ತಿದೆ.

19063014a ಅಕರ್ಮಣ್ಯೇಷು ವೃಕ್ಷೇಷು ಸ್ಥಿತವಿಪ್ರಸ್ಥಿತದ್ವಿಜಮ್ |

19063014c ಸಂವಾಸಸ್ಯಾಸ್ಯ ಮಹತೋ ಜನೇನೋತ್ಸಾದಿತದ್ರುಮಮ್ ||

ಮರಗಳಲ್ಲಿ ವಾಸಿಸುತ್ತಿದ್ದ ಪಕ್ಷಿಗಳು ಬಿಟ್ಟು ಹೊರಟುಹೋಗಿವೆ. ಈಗ ಈ ಮರಗಳಿಗೆ ಯಾವ ಕೆಲಸವೂ ಇಲ್ಲದಂತಾಗಿದೆ. ಈ ವಿಶಾಲ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಮರಗಳನ್ನು ಕಡಿದುಹಾಕಿಬಿಟ್ಟಿದ್ದಾರೆ.

19063015a ನಿರಾನಂದಂ ನಿರಾಸ್ವಾದಂ ನಿಷ್ಪ್ರಯೋಜನಮಾರುತಮ್ |

19063015c ನಿರ್ವಿಹಂಗಮಿದಂ ಶೂನ್ಯಂ ನಿರ್ವ್ಯಂಜನಮಿವಾಶನಮ್ ||

ಇಲ್ಲಿ ಆನಂದವಿಲ್ಲ. ಸ್ವಾದವಿಲ್ಲ. ಇಲ್ಲಿಯ ಗಾಳಿಯೂ ನಿಷ್ಪ್ರಯೋಜಕವಾಗಿದೆ. ಪಕ್ಷಿಗಳೇ ಇಲ್ಲದ ಈ ವನವು ವ್ಯಂಜನಪದಾರ್ಥಗಳಿಲ್ಲದ ಊಟದಂತೆ ಶೂನ್ಯವೆನಿಸುತ್ತಿದೆ.

19063016a ವಿಕ್ರೀಯಮಾಣೈಃ ಕಾಷ್ಠೈಶ್ಚ ಶಾಕೈಶ್ಚ ವನಸಂಭವೈಃ |

19063016c ಉಚ್ಛಿನ್ನಸಂಚಯತೃಣೈರ್ಘೋಷೋಽಯಂ ನಗರಾಯತೇ ||

ವನದಲ್ಲಿ ಸಿಗುತ್ತಿದ್ದ ಕಟ್ಟಿಗೆ ಮತ್ತು ಆಹಾರಗಳನ್ನು ಮಾರಿಯಾಗಿದೆ. ಹುಲ್ಲಿನ ಅಭಾವವಾಗಿರುವ ಈ ಗೋವಲವು ನಗರದಂತೆ ಕಾಣುತ್ತಿದೆ.

19063017a ಶೈಲಾನಾಂ ಭೂಷಣಂ ಘೋಷೋ ಘೋಷಾಣಾಂ ಭೂಷಣಂ ವನಮ್ |

19063017c ವನಾನಾಂ ಭೂಷಣಂ ಗಾವಸ್ತಾಶ್ಚಾಸ್ಮಾಕಂ ಪರಾ ಗತಿಃ ||

ಗುಡ್ಡ-ಬೆಟ್ಟಗಳಿಗೆ ಹುಲ್ಲುಗಾವಲೇ ಭೂಷಣ. ಹುಲ್ಲುಗಾವಲಿಗೆ ವನವೇ ಭೂಷಣ. ವನಗಳಿಗೆ ಗೋವುಗಳೇ ಭೂಷಣ. ಮತ್ತು ಗೋವುಗಳು ನಮ್ಮ ಪರಮ ಗತಿ.

19063018a ತಸ್ಮಾದನ್ಯದ್ವನಂ ಯಾಮಃ ಪ್ರತ್ಯಗ್ರಯವಸೇಂಧನಮ್ |

19063018c ಇಚ್ಛಂತ್ಯನುಪಭುಕ್ತಾನಿ ಗಾವೋ ಭೋಕ್ತುಂ ತೃಣಾನಿ ಚ ||

ಆದುದರಿಂದ ಹುಲ್ಲು-ಕಟ್ಟಿಗೆಗಳು ಅಧಿಕವಾಗಿರುವ ಅನ್ಯ ವನಕ್ಕೆ ಹೋಗೋಣ. ನಮ್ಮ ಈ ಗೋವುಗಳು ಹೊಸ ಹುಲ್ಲನ್ನು ತಿನ್ನಲು ಬಯಸುತ್ತಿವೆ.

19063019a ತಸ್ಮಾದ್ವನಂ ನವತೃಣಂ ಗಚ್ಛಂತು ಧನಿನೋ ವ್ರಜಾಃ |

19063019c ನ ದ್ವಾರಬಂಧಾವರಣಾ ನ ಗೃಹಕ್ಷೇತ್ರಿಣಸ್ತಥಾ |

19063019e ಪ್ರಶಸ್ತಾ ವೈ ವ್ರಜಾ ಲೋಕೇ ಯಥಾ ವೈ ಚಕ್ರಚಾರಿಣಃ ||

ಆದುದರಿಂದ ಹೊಸ ಹುಲ್ಲುಗಳಿಂದ ಸಮೃದ್ಧವಾಗಿರುವ ವ್ರಜದ ಅನ್ಯ ವನಗಳಿಗೆ ಹೋಗೋಣ. ಅಲ್ಲಿ ಮನೆಯ ಬಾಗಿಲುಗಳನ್ನು ಮುಚ್ಚಬೇಕಾಗುವುದಿಲ್ಲ ಮತ್ತು ಸುತ್ತಲೂ ಬೇಲಿಗಳನ್ನು ಕಟ್ಟಬೇಕಾಗುವುದಿಲ್ಲ. ಸ್ವಚ್ಛಂದವಾಗಿ ತಿರುಗಾಡಲು ವ್ರಜವು ಲೋಕದಲ್ಲಿಯೇ ಪ್ರಶಸ್ತವಾಗಿದೆ.

19063020a ಶಕೃನ್ಮೂತ್ರೇಷು ತೇಷ್ವೇವ ಜಾತಕ್ಷಾರರಸಾಯನಮ್ |

19063020c ನ ತೃಣಂ ಭುಂಜತೇ ಗಾವೋ ನಾಪಿ ತತ್ಪಯಸೇ ಹಿತಮ್ ||

ಮಲಮೂತ್ರಗಳಿಂದ ಇಲ್ಲಿ ಕ್ಷಾರ ರಸಾಯನವು ಹುಟ್ಟಿಕೊಂಡಿದೆ. ಗೋವುಗಳು ಇಲ್ಲಿಯ ಹುಲ್ಲನ್ನು ತಿನ್ನಲು ಇಷ್ಟಪಡುವುದಿಲ್ಲ, ಮತ್ತು ಇದು ಹಾಲಿಗೆ ಒಳ್ಳೆಯದಲ್ಲ.

19063021a ಸ್ಥಲೀಪ್ರಾಯಾಸು ರಥ್ಯಾಸು ನವಾಸು ವನರಾಜಿಷು |

19063021c ಚರಾವಃ ಸಹಿತೌ ಗೋಭಿಃ ಕ್ಷಿಪ್ರಂ ಸಂವಾಹ್ಯತಾಂ ವ್ರಜಃ ||

ಹೊಸ ಸುಂದರ ವನರಾಜಿಗಳು ಈಗ ಬಯಲಾಗಿಬಿಟ್ಟಿವೆ. ಬೇಗನೇ ಗೋವುಗಳ ಸಹಿತ ಹೋಗಿ ಇನ್ನೊಂದು ಕಡೆ ವ್ರಜವನ್ನು ನೆಲೆಸೋಣ.

19063022a ಶ್ರೂಯತೇ ಹಿ ವನಂ ರಮ್ಯಂ ಪರ್ಯಾಪ್ತಂ ತೃಣಸಂಸ್ತರಮ್ |

19063022c ನಾಮ್ನಾ ವೃಂದಾವನಂ ನಾಮ ಸ್ವಾದುವೃಕ್ಷಫಲೋದಕಮ್ ||

ವಿಶಾಲ ಹುಲ್ಲುಗಾವಲಿರುವ ರಮ್ಯ ವನವಿದೆಯೆಂದು ಕೇಳಿದ್ದೇವೆ. ರುಚಿಕರ ಹಣ್ಣುಗಳಿರುವ ಮರಗಳು ಮತ್ತು ನೀರಿರುವ ಅದರ ಹೆಸರು ವೃಂದಾವನ.

19063023a ಅಝಿಲ್ಲಿಕಂಟಕವನಂ ಸರ್ವೈರ್ವನಗುಣೈರ್ಯುತಮ್ |

19063023c ಕದಂಬಪಾದಪಪ್ರಾಯಂ ಯಮುನಾತೀರಸಂಶ್ರಿತಮ್ ||

ಕೀಟಗಳೂ ಮುಳ್ಳುಗಳೂ ಇರದ ಅದು ಸರ್ವ ವನಗುಣಗಳಿಂದ ಕೂಡಿದೆ. ಕದಂಬವೃಕ್ಷಗಳನ್ನು ಹೊಂದಿರುವ ಅದು ಯಮುನಾ ತೀರದಲ್ಲಿದೆ.

19063024a ಸ್ನಿಗ್ಧಶೀತಾನಿಲವನಂ ಸರ್ವರ್ತುನಿಲಯಂ ಶುಭಮ್ |

19063024c ಗೋಪೀನಾಂ ಸುಖಸಂಚಾರಂ ಚಾರುಚಿತ್ರವನಾಂತರಮ್ ||

ಆ ವನದಲ್ಲಿ ಕೋಮಲ ಶೀತಲ ಶುಭಕರ ಗಾಳಿಯು ಎಲ್ಲ ಕಡೆಗಳಿಂದ ಬೀಸುತ್ತದೆ. ಸುಂದರವೂ ಅದ್ಭುತವೂ ಆಗಿರುವ ಆ ವನದಲ್ಲಿ ಗೋಪಿಗಳು ಸುಖವಾಗಿ ಸಂಚರಿಸುತ್ತಾರೆ.

19063025a ತತ್ರ ಗೋವರ್ಧನೋ ನಾಮ ನಾತಿದೂರೇ ಗಿರಿರ್ಮಹಾನ್ |

19063025c ಭ್ರಾಜತೇ ದೀರ್ಘಶಿಖರೋ ನಂದನಸ್ಯೇವ ಮಂದರಃ ||

ಅದರ ಹತ್ತಿರದಲ್ಲಿಯೇ ಗೋವರ್ಧನ ಎಂಬ ಹೆಸರಿನ ಮಹಾ ಗಿರಿಯೊಂದಿದೆ. ಅದರ ಎತ್ತರ ಶಿಖರವು ನಂದನದಲ್ಲಿರುವ ಮಂದರದಂತೆ ಹೊಳೆಯುತ್ತದೆ.

19063026a ಮಧ್ಯೇ ಚಾಸ್ಯ ಮಹಾಶಾಖೋ ನ್ಯಗ್ರೋಧೋ ಯೋಜನೋಚ್ಛ್ರಿತಃ |

19063026c ಭಾಂಡೀರೋ ನಾಮ ಶುಶುಭೇ ನೀಲಮೇಘ ಇವಾಂಬರೇ ||

ಆ ವನದ ಮಧ್ಯದಲ್ಲಿ ವಿಶಾಲ ಶಾಖೆಗಳನ್ನುಳ್ಳ ಒಂದು ಯೋಜನ ಎತ್ತರದ ನ್ಯಗ್ರೋಧ ವೃಕ್ಷವಿದೆ. ಭಾಂಡೀರ ಎಂಬ ಹೆಸರಿನ ಅದು ಅಂಬರದಲ್ಲಿರುವ ನೀಲಮೇಘದಂತೆ ಶೋಭಿಸುತ್ತದೆ.

19063027a ಮಧ್ಯೇನ ಚಾಸ್ಯ ಕಾಲಿಂದೀ ಸೀಮಂತಮಿವ ಕುರ್ವತೀ |

19063027c ಪ್ರಯಾತಾ ನಂದನಸ್ಯೇವ ನಲಿನೀ ಸರಿತಾಂ ವರಾ ||

ನಂದನವನದಲ್ಲಿ ನದಿಗಳಲ್ಲಿ ಶ್ರೇಷ್ಠೆ ನಲಿನಿಯು ಹರಿಯುವಂತೆ ಕಾಲಿಂದೀ ನದಿಯು ವೃಂದಾವನದ ಮಧ್ಯದಲ್ಲಿ ತಲೆಯ ಬೈತಲೆಯಂತೆ ಹರಿಯುತ್ತದೆ.

19063028a ತತ್ರ ಗೋವರ್ಧನಂ ಚೈವ ಭಾಂಡೀರಂ ಚ ವನಸ್ಪತಿಮ್ |

19063028c ಕಾಲಿಂದೀಂ ಚ ನದೀಂ ರಮ್ಯಾಂ ದ್ರಕ್ಷ್ಯಾವಶ್ಚರತಃ ಸುಖಮ್ ||

ಅಲ್ಲಿ ನಾವು ಗೋವರ್ಧನ ಪರ್ವತ, ಭಾಂಡೀರ ವೃಕ್ಷ ಮತ್ತು ರಮ್ಯ ಕಾಲಿಂದೀ ನದಿಯನ್ನು ನೋಡುತ್ತಾ ಸುಖವಾಗಿ ಸುತ್ತಾಡಬಹುದು.

19063029a ತತ್ರಾಯಂ ಕಲ್ಪ್ಯತಾಂ ಘೋಷಸ್ತ್ಯಜ್ಯತಾಂ ನಿರ್ಗುಣಂ ವನಮ್ |

19063029c ಸಂತ್ರಾಸಯಾವೋ ಭದ್ರಂ ತೇ ಕಿಂಚಿದುತ್ಪಾದ್ಯ ಕಾರಣಮ್ ||

ಅಲ್ಲಿಯೇ ಈ ಗೋವಲವನ್ನು ನೆಲೆಸೋಣ ಮತ್ತು ನಿರ್ಗುಣವಾದ ಈ ವನವನ್ನು ತ್ಯಜಿಸೋಣ. ನಿನಗೆ ಮಂಗಳವಾಗಲಿ! ಯಾವುದಾದರೂ ಕಾರಣವನ್ನು ಹುಟ್ಟಿಸಿ ಈ ವ್ರಜವಾಸಿಗಳನ್ನು ಹೆದರಿಸೋಣ.”

19063030a ಏವಂ ಕಥಯತಸ್ತಸ್ಯ ವಾಸುದೇವಸ್ಯ ಧೀಮತಃ |

19063030c ಪ್ರಾದುರ್ಬಭೂವುಃ ಶತಶೋ ರಕ್ತಮಾಂಸವಸಾಶನಾಃ ||

19063031a ಘೋರಾಶ್ಚಿಂತಯತಸ್ತಸ್ಯ ಸ್ವತನೂರುಹಜಾಸ್ತದಾ |

19063031c ವಿನಿಷ್ಪೇತುರ್ಭಯಕರಾಃ ಸರ್ವಶಃ ಶತಶೋ ವೃಕಾಃ ||

ಧೀಮಂತ ವಾಸುದೇವನು ಹೀಗೆ ಹೇಳುತ್ತಿರುವಾಗಲೇ ರಕ್ತ-ಮಾಂಸ-ಮಜ್ಜೆಗಳನ್ನು ತಿನ್ನುವ ನೂರಾರು ತೋಳಗಳು ಕಾಣಿಸಿಕೊಂಡವು. ಅವುಗಳ ಕುರಿತು ಯೋಚಿಸುತ್ತಿದ್ದಂತೆಯೇ ಅವನದೇ ಶರೀರದ ರೋಮರೋಮಗಳಿಂದ ನೂರಾರು ಘೋರ, ಭಯಂಕರ ತೋಳಗಳು ಹೊರಬಿದ್ದು ಎಲ್ಲ ಕಡೆ ಕಾಣಿಸಿಕೊಂಡವು.

19063032a ನಿಷ್ಪತಂತಿ ಸ್ಮ ಬಹವೋ ವ್ರಜಸ್ಯೋತ್ಸಾದನಾಯ ವೈ |

19063032c ವೃಕಾನ್ನಿಷ್ಪತಿತಾಂದೃಷ್ಟ್ವಾ ಗೋಷು ವತ್ಸೇಷ್ವಥೋ ನೃಷು ||

19063033a ಗೋಪೀಷು ಚ ಯಥಾಕಾಮಂ ವ್ರಜೇ ತ್ರಾಸೋಽಭವನ್ಮಹಾನ್ |

ವ್ರಜದಿಂದ ಹೋಗುವಂತೆ ಮಾಡಲು ಕೃಷ್ಣನು ರಚಿಸಿದ ಅನೇಕ ತೋಳಗಳು ಕಾಣಿಸಿಕೊಂಡವು. ಪ್ರಕಟವಾಗುತ್ತಿದ್ದ ಆ ತೋಳಗಳನ್ನು ನೋಡಿ ವ್ರಜದಲ್ಲಿ ಸುಖವಾಗಿದ್ದ ಗೋವುಗಳು, ಕರುಗಳು, ಗಂಡಸರು ಮತ್ತು ಗೋಪಿಯರಲ್ಲಿ ಮಹಾ ಭಯವು ಹುಟ್ಟಿಕೊಂಡಿತು.

19063033c ತೇ ವೃಕಾಃ ಪಂಚಬದ್ಧಾಶ್ಚ ದಶಬದ್ಧಾಸ್ತಥ ಪರೇ ||

19063034a ತ್ರಿಂಶದ್ವಿಂಶತಿಬದ್ಧಾಶ್ಚ ಶತಬದ್ಧಾಸ್ತಥಾ ಪರೇ |

19063034c ನಿಶ್ಚೇರುಸ್ತಸ್ಯ ಗಾತ್ರೇಭ್ಯಃ ಶ್ರೀವತ್ಸಕೃತಲಕ್ಷಣಾಃ ||

ಆ ತೋಳಗಳು ಐದರ ಗುಂಪುಗಳಲ್ಲಿ, ಹತ್ತರ ಗುಂಪುಗಳಲ್ಲಿ, ಇನ್ನು ಕೆಲವು ಮೂವತ್ತು, ಇಪ್ಪತ್ತು ಮತ್ತು ಕೆಲವು ನೂರರ ಗುಂಪುಗಳಲ್ಲಿ ಕೃಷ್ಣನ ಶರೀರದಿಂದ ಹೊರಬಂದವು. ಅವುಗಳಲ್ಲಿ ಶ್ರೀವತ್ಸದ ಚಿಹ್ನೆಗಳಿದ್ದವು.

19063035a ಕೃಷ್ಣಸ್ಯ ಕೃಷ್ಣವದನಾ ಗೋಪಾನಾಂ ಭಯವರ್ಧನಾಃ |

19063035c ಭಕ್ಷಯದ್ಭಿಶ್ಚ ತೈರ್ವತ್ಸಾಂಸ್ತ್ರಾಸಯದ್ಭಿಶ್ಚ ಗೋವ್ರಜಾನ್ ||

19063036a ನಿಶಿ ಬಾಲಾನ್ ಹರದ್ಭಿಶ್ಚ ವೃಕೈರುತ್ಸಾದ್ಯತೇ ವ್ರಜಃ |

ಕೃಷ್ಣನಿಂದ ಪ್ರಕಟಗೊಂಡ ಆ ಕಪ್ಪುಮುಖದ ತೋಳಗಳು ಗೋಪರ ಭಯವನ್ನು ಹೆಚ್ಚಿಸಿದವು. ಅವು ಕರುಗಳನ್ನು ತಿನ್ನುತ್ತಿದ್ದವು. ಗೋವ್ರಜರನ್ನು ಬೆದರಿಸುತ್ತಿದ್ದವು. ರಾತ್ರಿಯಲ್ಲಿ ಬಾಲಕರನ್ನು ಅಪಹರಿಸುತ್ತಿದ್ದವು. ಹೀಗೆ ತೋಳಗಳು ಅವರು ವ್ರಜವನ್ನು ಬಿಟ್ಟುಹೋಗುವಂತೆ ಮಾಡಿದವು.

19063036c ನ ವನೇ ಶಕ್ಯತೇ ಗಂತುಂ ನ ಗಾಶ್ಚ ಪರಿರಕ್ಷಿತುಮ್ ||

19063037a ನ ವನಾತ್ಕಿಂಚಿದಾಹರ್ತುಂ ನ ಚ ವಾ ತರಿತುಂ ನದೀಮ್ |

ವನಕ್ಕೆ ಹೋಗಲು ಶಕ್ಯವಾಗಲಿಲ್ಲ. ಗೋವುಗಳನ್ನು ಕಾಯುವುದು ಸಾಧ್ಯವಾಗಲಿಲ್ಲ. ವನದಿಂದ ಏನನ್ನೂ ತರಲಿಕ್ಕಾಗುತ್ತಿರಲಿಲ್ಲ ಮತ್ತು ನದಿಯನ್ನು ದಾಟಲಿಕ್ಕಾಗುತ್ತಿರಲಿಲ್ಲ.

19063038c ತ್ರಸ್ತಾ ಹ್ಯುದ್ವಿಗ್ನಮನಸೋಽಗತಾಸ್ತಸ್ಮಿನ್ವನೇಽವಸನ್ ||

19063039a ಏವಂ ವೃಕೈರುದೀರ್ಣೈಸ್ತು ವ್ಯಾಘ್ರತುಲ್ಯಪರಾಕ್ರಮೈಃ |

19063039c ವ್ರಜೋ ನಿಷ್ಪಂದಚೇಷ್ಟಸ್ಯ ಏಕಸ್ಥಾನಚರಃ ಕೃತಃ ||

ಆ ವನದಲ್ಲಿ ವಾಸಿಸುತ್ತಿದ್ದ ಅವರು ಉದ್ವಿಗ್ನ ಮನಸ್ಕರಾಗಿ ಭಯಗ್ರಸ್ತರಾದರು. ಹುಲಿಯಂತೆ ಪರಾಕ್ರಮವಿದ್ದ ಆ ತೋಳಗಳಿಂದ ಪೀಡಿಸಲ್ಪಟ್ಟ ವ್ರಜದ ಜನರು ಎಲ್ಲಿಯೂ ಹೋಗಲಾರದಂತೆ ಎಲ್ಲರೂ ಒಂದೇ ಸ್ಥಳದಲ್ಲಿರುವಂತೆ ಆದರು.”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಶಿಶುಚರ್ಯಾಯಾಂ ತ್ರಿಷಷ್ಟಿತಮೋಽಧ್ಯಾಯಃ

[1] ಬಲರಾಮನು ನೀಲಿ ಮತ್ತು ಕೃಷ್ಣನು ಹಳದೀ ಬಣ್ಣದ ವಸ್ತ್ರಗಳನ್ನು ಉಡುತ್ತಿದ್ದರು.

Comments are closed.