Harivamsha: Chapter 181

ಹರಿವಂಶ: ಭವಿಷ್ಯ ಪರ್ವ

೧೮೧

ಪಾಂಡವವಂಶಪ್ರತಿಷ್ಠಾಕೀರ್ತನಮ್

ಜನಮೇಜಯನ ಸಂತತಿ ಮತ್ತು ಪೌರವ ಹಾಗೂ ಪಾಂಡವ ವಂಶದ ಪ್ರತಿಷ್ಠೆ (1-18).

ಶೌನಕ ಉವಾಚ|

ಜನಮೇಜಯಸ್ಯ ಕೇ ಪುತ್ರಾಃ ಪಠ್ಯಂತೇ ಲೋಮಹರ್ಷಣ |

ಕಸ್ಮಿನ್ಪ್ರತಿಷ್ಠಿತೋ ವಂಶಃ ಪಾಂಡವಾನಾಂ ಮಹಾತ್ಮನಾಮ್ ||೩-೧೮೧-೧

ಶೌನಕನು ಹೇಳಿದನು: “ಲೋಮಹರ್ಷಣ ಪುತ್ರ! ಜನಮೇಜಯನಿಗೆ ಎಷ್ಟು ಪುತ್ರರು ಮತ್ತು ಯಾರು ಎಂದು ಹೇಳುತ್ತಾರೆ? ಮಹಾತ್ಮ ಪಾಂಡವರ ವಂಶವು ಯಾರಲ್ಲಿ ಪ್ರತಿಷ್ಠಿತವಾಯಿತು?

ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ |

ತ್ವತ್ತಃ ಕಥಯತಃ ಸರ್ವಂ ವೇದ್ಮ್ಯಹಂ ತತ್ಪರಿಸ್ಫುಟಮ್ ||೩-೧೮೧-೨

ಇದನ್ನು ಕೇಳ ಬಯಸುತ್ತೇನೆ. ಇದರ ಕುರಿತು ನನ್ನಲ್ಲಿ ಪರಮ ಕುತೂಹಲವುಂಟಾಗಿದೆ. ನೀನು ಹೇಳಿದರೆ ಇವೆಲ್ಲವನ್ನೂ ನಾನು ಸ್ಪಷ್ಟವಾಗಿ ತಿಳಿದುಕೊಳ್ಳಬಲ್ಲೆನು.”

ಸೌತಿರುವಾಚ|

ಪಾರೀಕ್ಷಿತಸ್ಯ ಕಾಶ್ಯಾಯಾಂ ದ್ವೌ ಪುತ್ರೌ ಸಂಬಭೂವತುಃ |

ಚಂದ್ರಾಪೀಡಶ್ಚ ನೃಪತಿಃ ಸೂರ್ಯಾಪೀಡಶ್ಚ ಮೋಕ್ಷವಿತ್ ||೩-೧೮೧-೩

ಸೌತಿಯು ಹೇಳಿದನು: “ಕಾಶಿಕನ್ಯೆಯಲ್ಲಿ ಪಾರೀಕ್ಷಿತ ಜನಮೇಜಯನಿಗೆ ಕಾಶಿರಾಜಕುಮಾರಿಯಲ್ಲಿ ಇಬ್ಬರು ಪುತ್ರರು ಹುಟ್ಟಿದರು: ನೃಪತಿ ಚಂದ್ರಾಪೀಡ ಮತ್ತು ಮೋಕ್ಷವಿದು ಸೂರ್ಯಾಪೀಡ.

ಚಂದ್ರಾಪೀಡಸ್ಯ ಪುತ್ರಾಣಾಂ ಶತಮುತ್ತಮಧನ್ವಿನಾಮ್ |

ಜನಮೇಜಯ ಇತ್ಯೇವಂ ಕ್ಷಾತ್ರಂ ಭುವಿ ಪರಿಶ್ರುತಮ್ ||೩-೧೮೧-೪

ಚಂದ್ರಾಪೀಡನಿಗೆ ನೂರು ಉತ್ತಮ ಧನ್ವೀ ಪುತ್ರರಾದರು. ಕ್ಷತ್ರಿಯರ ಆ ಸಮುದಾಯವು ಜನಮೇಜಯ ಎಂದೇ ಭುವಿಯಲ್ಲಿ ಪ್ರಖ್ಯಾತವಾಯಿತು.

ತೇಷಾಂ ಶ್ರೇಷ್ಠಸ್ತು ರಾಜಾಽಽಸೀತ್ಪುರೇ ವಾರಣಸಾಹ್ವಯೇ |

ಸತ್ಯಕರ್ಣೋ ಮಹಾಬಾಹುರ್ಯಜ್ವಾ ವಿಪುಲದಕ್ಷಿಣಃ ||೩-೧೮೧-೫

ಅವರಲ್ಲಿ ವಾರಣಾಸಿಯಲ್ಲಿ ರಾಜನಾದ ಮಹಾಬಾಹು ಸತ್ಯಕರ್ಣನು ಶ್ರೇಷ್ಠನಾಗಿದ್ದನು. ಅವನು ವಿಪುಲ ದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಮಾಡುವವನಾಗಿದ್ದನು.

ಸತ್ಯಕರ್ಣಸ್ಯ ದಾಯಾದಃ ಶ್ವೇತಕರ್ಣಃ ಪ್ರತಾಪವಾನ್ |

ಅಪುತ್ರಃ ಸ ತು ಧರ್ಮಾತ್ಮಾ ಪ್ರವಿವೇಶ ತಪೋವನಮ್ ||೩-೧೮೧-೬

ಸತ್ಯಕರ್ಣನ ಪುತ್ರ ಪ್ರತಾಪವಾನ್ ಶ್ವೇತಕರ್ಣನಿಗೆ ಮಕ್ಕಳಿರಲಿಲ್ಲ. ಆ ಧರ್ಮಾತ್ಮನು ತಪೋವವನ್ನು ಪ್ರವೇಶಿಸಿದನು.

ತಸ್ಮಾದ್ವನಗತಾದ್ಗರ್ಭಂ ಯಾದವೀ ಪ್ರತ್ಯಪದ್ಯತ |

ಸುಚಾರೋರ್ದುಹಿತಾ ಸುಭ್ರೂರ್ಮಾನಿನೀ ಭ್ರಾತೃಮಾಲಿನೀ ||೩-೧೮೧-೭

ಅವನು ವನಕ್ಕೆ ಹೋದ ನಂತರ ಯಾದವೀ ಸುಚಾರುವಿನ ಪುತ್ರಿ, ಅನೇಕ ಸಹೋದರರನ್ನು ಹೊಂದಿದ್ದ ಸುಂದರ ಹುಬ್ಬಿನ ಮಾನಿನಿಯು ಗರ್ಭವತಿಯಾದಳು.

ಸ ತು ಜನ್ಮನಿ ಗರ್ಭಸ್ಯ ಶ್ವೇತಕರ್ಣಃ ಪ್ರಜೇಶ್ವರಃ |

ಅನ್ವಗಚ್ಛದ್ಗತಂ ಪೂರ್ವೈರ್ಮಹಾಪ್ರಸ್ಥಾನಮಚ್ಯುತಮ್ ||೩-೧೮೧-೮

ಆ ಗರ್ಭದ ಜನ್ಮಸಮಯದಲ್ಲಿ ಪ್ರಜೇಶ್ವರ ಶ್ವೇತಕರ್ಣನು ಹಿಂದೆ ತನ್ನ ಪೂರ್ವಜ ಪಾಂಡವರು ಕೈಗೊಂಡಿದ್ದ ಅಚ್ಯುತ ಮಹಾಪ್ರಸ್ಥಾನವನ್ನು ಅನುಸರಿಸಿ ಹೋದನು.

ಸಾ ದೃಷ್ಟ್ವಾ ಸಂಪ್ರಯಾತಂ ತಂ ಮಾನಿನೀ ಪೃಷ್ಠತೋಽನ್ವಿಯಾತ್ |

ಪಥಿ ಸಾ ಸುಷುವೇ ಸುಭ್ರೂರ್ವನೇ ರಾಜೀವಲೋಚನಮ್ ||೩-೧೮೧-೯

ಅವನು ಮಹಾಪ್ರಸ್ಥಾನಕ್ಕೆ ಹೊರಟಿದುದನ್ನು ನೋಡಿ ಮಾನಿನಿಯೂ ಅವನ ಹಿಂದೆಯೇ ಅನುಸರಿಸಿ ಹೋದಳು. ಸುಂದರ ಹುಬ್ಬಿನ ಅವಳು ಮಾರ್ಗದಲ್ಲಿಯೇ ರಾಜೀವಲೋಚನ ಪುತ್ರನಿಗೆ ಜನ್ಮವಿತ್ತಳು.

ಕುಮಾರಂ ತಂ ಪರಿತ್ಯಜ್ಯ ಭರ್ತಾರಂ ಚಾನ್ವಗಚ್ಛತ |

ಪತಿವ್ರತಾ ಮಹಾಭಾಗಾ ದ್ರೌಪದೀವ ಪುರಾ ಪತೀನ್ ||೩-೧೮೧-೧೦

ಹಿಂದೆ ದ್ರೌಪದಿಯು ತನ್ನ ಪತಿಗಳನ್ನು ಹೇಗೆ ಅನುಸರಿಸಿ ಹೋಗಿದ್ದಳೋ ಹಾಗೆ ಪತಿವ್ರತೆ ಮಹಾಭಾಗೆ ಮಾನಿನಿಯು ಆ ಕುಮಾರನನ್ನು ಪರಿತ್ಯಜಿಸಿ ಪತಿಯನ್ನೇ ಅನುಸರಿಸಿ ಹೋದಳು.

ಸ ತು ರಾಜಕುಮಾರೋಽಸೌ ಗಿರಿಕುಂಜೇ ರುರೋದ ಹ |

ಛಾಯಾರ್ಥಂ ತಸ್ಯ ಮೇಘಾಸ್ತು ಪ್ರಾದುರಾಸನ್ಸಮಂತತಃ ||೩-೧೮೧-೧೧

ಆ ಗಿರಿಕುಂಜರದಲ್ಲಿ ರಾಜಕುಮಾರನು ರೋದಿಸತೊಡಗಿದನು. ಆಗ ಅವನಿಗೆ ನೆರಳನ್ನು ನೀಡಲು ಎಲ್ಲ ಕಡೆಗಳಿಂದ ಮೋಡಗಳು ಪ್ರಕಟವಾದವು.

ಶ್ರವಿಷ್ಠಾಯಾಶ್ಚ ಪುತ್ರೌ ದ್ವೌ ಪಿಪ್ಪಲಾದಶ್ಚ ಕೌಶಿಕಃ |

ದೃಷ್ಟ್ವಾ ಕೃಪಾನ್ವಿತೌ ಗೃಹ್ಯ ತಂ ಪ್ರಕ್ಷಾಲಯತಾಂ ಜಲೈಃ |

ನಿಘೃಷ್ಟೌ ತಸ್ಯ ತೌ ಪಾರ್ಶ್ವೌ ಶಿಲಾಯಾಂ ರುಧಿರಪ್ಲುತೌ ||೩-೧೮೧-೧೨

ಶ್ರವಿಷ್ಠೆಯ ಈರ್ವರು ಪುತ್ರರು – ಪಿಪ್ಪಲಾದ ಮತ್ತು ಕೌಶಿಕ – ಅವನನ್ನು ನೋಡಿ ಕೃಪಾನ್ವಿತರಾಗಿ ಎತ್ತಿಕೊಂಡು ನೀರಿನಿಂದ ತೊಳೆದರು. ಕಲ್ಲಿನ ಘರ್ಷಣೆಯಿಂದ ಆ ಮಗುವಿನ ಎರಡೂ ಪಾರ್ಶ್ವಗಳಲ್ಲಿ ರಕ್ತಸೋರುತಿತ್ತು.

ಅಜಶ್ಯಾಮೌ ತು ಪಾರ್ಶ್ವೌ ತಾವುಭಾವಪಿ ಸಮಾಹಿತೌ |

ತಥೈವ ತು ಸಮಾರೂಢೌ ಅಜಪಾರ್ಶ್ವಸ್ತತೋಽಭವತ್ ||೩-೧೮೧-೧೩

ಅವನ ಆ ಎರಡು ಪಾರ್ಶ್ವಗಳೂ ಆಡಿನಂತೆ ಶ್ಯಾಮಲವರ್ಣವನ್ನು ತಾಳಿದವು. ಹಾಗೆಯೇ ಅವನು ಬೆಳೆಯಲು ಆ ಬಾಲಕನು ಅಜಪಾರ್ಶ್ವನೆಂದಾದನು.

ತತೋಽಜಪಾರ್ಶ್ವ ಇತಿ ತೌ ಚಕ್ರಾತೇ ತಸ್ಯ ನಾಮ ಹ |

ಸ ತು ವೇಮಕಶಾಲಾಯಾಂ ದ್ವಿಜಾಭ್ಯಾಮಭಿವರ್ಧಿತಃ ||೩-೧೮೧-೧೪

ಆದುದರಿಂದ ಆ ಇಬ್ಬರು ದ್ವಿಜರು ಅವನ ಹೆಸರನ್ನು ಅಜಪಾರ್ಶ್ವನೆಂದಿಟ್ಟರು ಮತ್ತು ವೇಮಕಮುನಿಯ ಆಶ್ರಮದಲ್ಲಿ ಅವನ ಪಾಲನ-ಪೋಷಣೆಯನ್ನು ಮಾಡಿದರು.

ವೇಮಕಸ್ಯ ತು ಭಾರ್ಯಾ ತಮುದ್ವಹತ್ಪುತ್ರಕಾರಣಾತ್ |

ವೇಮಕ್ಯಾಃ ಸ ತು ಪುತ್ರೋಽಭೂದ್ಬ್ರಾಹ್ಮಣೌ ಸಚಿವೌ ಚ ತೌ ||೩-೧೮೧-೧೫

ವೇಮಕನ ಭಾರ್ಯೆಯು ಪುತ್ರನು ಬೇಕೆಂಬ ಕಾರಣದಿಂದ ಅವನ ವಿವಾಹವನ್ನು ಮಾಡಿದಳು. ಆ ಬಾಲಕ ಮತ್ತು ಅವನ ಸಹಾಯಕ ಇಬ್ಬರು ಬ್ರಾಹ್ಮಣರೂ ವೇಮಕಿಯ ಪುತ್ರರೆಂದೇ ಪ್ರಸಿದ್ಧರಾದರು.

ತೇಷಾಂ ಪುತ್ರಾಶ್ಚ ಪೌತ್ರಾಶ್ಚ ಯುಗಪತ್ತುಲ್ಯಜೀವಿನಃ |

ಸ ಏಷ ಪೌರವೋ ವಂಶಃ ಪಾಂಡವಾನಾಂ ಪ್ರತಿಷ್ಠಿತಃ ||೩-೧೮೧-೧೬

ಆ ಮೂವರ ಪುತ್ರ-ಪೌತ್ರರು ಒಂದೇ ಕಾಲದಲ್ಲಿ ಆದರು ಮತ್ತು ಸಮಾನ ಕಾಲದವರೆಗೆ ಜೀವಿಸಿದ್ದರು. ಹೀಗೆ ಆ ಪೌರವ ಹಾಗೂ ಪಾಂಡವರ ವಂಶವು ಭುವಿಯಲ್ಲಿ ಪ್ರತಿಷ್ಠಿತವಾಯಿತು.

ಶ್ಲೋಕೋಽಪಿ ಚಾತ್ರ ಗೀತೋಽಯಂ ನಾಹುಷೇಣ ಯಯಾತಿನಾ |

ಜರಾಸಂಕ್ರಮಣೇ ಪೂರ್ವಂ ಭೃಶಂ ಪ್ರೀತೇನ ಧೀಮತಾ ||೩-೧೮೧-೧೭

ಪೂರ್ವಕಾಲದಲ್ಲಿ ಪುರುವಿನ ಶರೀರದಲ್ಲಿ ತನ್ನ ವೃದ್ಧಾವಸ್ಥೆಯ ಸಂಚಾರಸಮಯದಲ್ಲಿ ಅತ್ಯಂತ ಪ್ರಸನ್ನನಾಗಿದ್ದ ಬುದ್ಧಿಮಾನ್ ನಹುಷಕುಮಾರ ಯಯಾತಿಯು ಪೌರವ ವಂಶದ ಕುರಿತು ಈ ಶ್ಲೋಕವನ್ನು ಹಾಡಿದ್ದನು:

ಆಚಂದ್ರಾರ್ಕಗ್ರಹಾ ಭೂಮಿರ್ಭವೇದಪಿ ನ ಸಂಶಯಃ |

ಅಪೌರವಾ ನ ತು ಮಹೀ ಭವಿಷ್ಯತಿ ಕದಾಚನ ||೩-೧೮೧-೧೮

ಈ ಭೂಮಿಯು ಚಂದ್ರ, ಸೂರ್ಯ ಮತ್ತು ಗ್ರಹಗಳ ಪ್ರಕಾಶ ಮತ್ತು ಪ್ರಭಾವಗಳಿಂದ ರಹಿತವಾಗಬಹುದು ಆದರೆ ಎಂದೂ ಈ ಪೌರವ ವಂಶದಿಂದ ಶೂನ್ಯವಾಗುವುದಿಲ್ಲ. ಇದರಲ್ಲಿ ಸಂದೇಹವೇ ಇಲ್ಲ.”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಭವಿಷ್ಯಪರ್ವಣಿ ಪಾಂಡವವಂಶಪ್ರತಿಷ್ಠಾಕೀರ್ತನೇ ಏಕಶೀತ್ಯಧಿಕಶತತಮೋಽಧ್ಯಾಯಃ

Comments are closed.