ಹರಿವಂಶ: ಹರಿವಂಶ ಪರ್ವ
Contents
Toggle೪೯
ಲೋಕವರ್ಣನಮ್
ಜನಮೇಜಯ ಉವಾಚ |
ಬ್ರಹ್ಮನಾ ದೇವದೇವೇನ ಸಾರ್ಧಂ ಸಲಿಲಯೋನಿನಾ |
ಬ್ರಹ್ಮಲೋಕಗತೋ ಬ್ರಹ್ಮನ್ವೈಕುಂಠಃ ಕಿಂ ಚಕಾರ ಹ ||೧-೪೯-೧
ಜನಮೇಜಯನು ಹೇಳಿದನು: “ಬ್ರಹ್ಮನ್! ದೇವದೇವ ಸಲಿಲಯೋನಿ ಬ್ರಹ್ಮನೊಡನೆ ಬ್ರಹ್ಮಲೋಕಕ್ಕೆ ಹೋದ ವೈಕುಂಠನು ಏನು ಮಾಡಿದನು?
ಕಿಮರ್ಥೇ ಚಾದಿದೇವೇನ ನೀತಃ ಕಮಲಯೋನಿನಾ |
ವಿಷ್ಣುರ್ದೈತ್ಯವಧೇ ವೃತ್ತೇ ದೇವೈಶ್ಚ ಕೃತಸತ್ಕ್ರಿಯಃ ||೧-೪೯-೨
ವಿಷ್ಣುವು ದೈತ್ಯವಧೆಯನ್ನು ನಡೆಸಿದ ಮತ್ತು ದೇವತೆಗಳು ಅವನನ್ನು ಸತ್ಕರಿಸಿದ ನಂತರ ಆದಿದೇವ ಕಮಲಯೋನಿಯು ಅವನನ್ನು ಏಕೆ ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋದನು?
ಬ್ರಹ್ಮಲೋಕೇ ಚ ಕಿಂ ಸ್ಥಾನಂ ಕಂ ವಾ ಯೋಗಮುಪಾಸ್ತ ಸಃ |
ಕಂ ವಾ ದಧಾರ ನಿಯಮಂ ಸ ವಿಭುರ್ಭೂತಭಾವನಃ ||೧-೪೯-೩
ಬ್ರಹ್ಮಲೋಕದಲ್ಲಿ ವಿಭು ಭೂತಭಾವನ ವಿಷ್ಣುವು ಯಾವ ಸ್ಥಾನವನ್ನು ಅಲಂಕರಿಸಿದನು? ಅಥವಾ ಯಾವ ಯೋಗವನ್ನು ಆಶ್ರಯಿಸಿದ್ದನು. ಅವನು ಯಾವ ನಿಯಮ ಧಾರಣೆಯನ್ನು ಮಾಡಿದ್ದನು?
ಕಥಂ ತಸ್ಯಾಽಽಸತಸ್ತತ್ರ ವಿಶ್ವಂ ಜಗದಿದಂ ಮಹತ್ |
ಶ್ರಿಯಮಾಪ್ನೋತಿ ವಿಪುಲಾಂ ಸುರಾಸುರನರಾರ್ಚಿತಾಮ್ ||೧-೪೯-೪
ಅಲ್ಲಿ ಅವನು ಇರುವಾಗ ಈ ಜಗತ್ತು ಸುರಾಸುರನರರು ಅರ್ಚಿಸುವ ಅವನ ವಿಪುಲ ಶ್ರೀಯನ್ನು ಹೇಗೆ ಪಡೆದುಕೊಳ್ಳುತ್ತಿತ್ತು?
ಕಥಂ ಸ್ವಪಿತಿ ಘರ್ಮಾಂತೇ ಬುಧ್ಯತೇ ಚಾಂಬುದಪ್ಲವೇ |
ಕಥಂ ಚ ಬ್ರಹ್ಮಲೋಕಸ್ಥೋ ಧುರಂ ವಹತಿ ಲೌಕಿಕಾಮ್ ||೧-೪೯-೫
ಗ್ರೀಷ್ಮಋತುವಿನ ಅಂತ್ಯದಲ್ಲಿ[1] ಅವನು ಹೇಗೆ ನಿದ್ರಿಸುತ್ತಾನೆ? ವರ್ಷಾಕಾಲ ಕಳೆದನಂತರ[2] ಹೇಗೆ ಜಾಗೃತನಾಗುತ್ತಾನೆ? ಮತ್ತು ಬ್ರಹ್ಮಲೋಕದಲ್ಲಿದ್ದುಕೊಂಡು ಅವನು ಸಂಪೂರ್ಣ ಜಗತ್ತಿನ ರಕ್ಷಣೆಯ ಭಾರವನ್ನು ಹೇಗೆ ಹೊರುತ್ತಾನೆ?
ಚರಿತಂ ತಸ್ಯ ವಿಪ್ರೇಂದ್ರ ದಿವ್ಯಂ ಭಗವತೋ ದಿವಿ |
ವಿಸ್ತರೇಣ ಯಥಾತತ್ತ್ವಂ ಸರ್ವಮಿಚ್ಛಾಮಿ ವೇದಿತುಮ್ ||೧-೪೯-೬
ವಿಪ್ರೇಂದ್ರ! ದಿವಿಯಲ್ಲಿ ಭಗವಂತನ ದಿವ್ಯ ಚರಿತೆಯನ್ನು ವಿಸ್ತಾರವಾಗಿ ಯಥಾತತ್ತ್ವವಾಗಿ ಎಲ್ಲವನ್ನೂ ಕೇಳ ಬಯಸುತ್ತೇನೆ.[3]”
ವೈಶಂಪಾಯನ ಉವಾಚ |
ಶೃಣು ನಾರಾಯಣಸ್ಯಾದೌ ವಿಸ್ತರೇಣ ಪ್ರವೃತ್ತಯಃ |
ಬ್ರಹ್ಮಲೋಕಂ ಯಥಾರೂಢೋ ಬ್ರಹ್ಮಣಾ ಸಹ ಮೋದತೇ ||೧-೪೯-೭
ವೈಶಂಪಾಯನನು ಹೇಳಿದನು: “ಮೊದಲು ವಿಸ್ತಾರವಾಗಿ ಬ್ರಹ್ಮಲೋಕದಲ್ಲಿ ಯಥಾರೂಢನಾಗಿ ಬ್ರಹ್ಮನೊಂದಿಗೆ ಮೋದಿಸುವ ನಾರಾಯಣನ ಪ್ರವೃತ್ತಿಯ ಕುರಿತು ಕೇಳು.
ಕಾಮಂ ತಸ್ಯ ಗತಿಃ ಸೂಕ್ಷ್ಮಾ ದೇವೈರಪಿ ದುರಾಸದಾ |
ಯತ್ತು ವಕ್ಷ್ಯಾಮ್ಯಹಂ ರಾಜಂಸ್ತನ್ಮೇ ನಿಗದತಃ ಶೃಣು ||೧-೪೯-೮
ರಾಜನ್! ಅವನ ಗತಿಯು ಅವನು ಬಯಸಿದಂತೆಯೇ ನಡೆಯುತ್ತದೆ. ಸೂಕ್ಷ್ಮನಾದ ಅವನು ದೇವತೆಗಳಿಗೂ ದುರಾಸದನು. ಆದರೂ ಅದರ ಕುರಿತು ನಾನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು.
ಏಷ ಲೋಕಮಯೋ ದೇವೋ ಲೋಕಾಶ್ಚೈತನ್ಮಯಾಸ್ತ್ರಯಃ |
ಏಷ ದೇವಮಯಶ್ಚೈವ ದೇವಾಶ್ಚೈತನ್ಮಯಾ ದಿವಿ ||೧-೪೯-೯
ವಿಷ್ಣುವು ಲೋಕಮಯನು ಮತ್ತು ಈ ಮೂರೂ ಲೋಕಗಳೂ ಆ ದೇವಮಯವಾಗಿದೆ. ಇವನು ದೇವಮಯನು ಮತ್ತು ದಿವಿಯಲ್ಲಿರುವ ದೇವತೆಗಳು ವಿಷ್ಣುಮಯರು.
ತಸ್ಯ ಪಾರಂ ನ ಪಶ್ಯಂತಿ ಬಹವಃ ಪಾರಚಿಂತಕಾಃ |
ಏಷ ಪಾರಂ ಪರಂ ಚೈವ ಲೋಕಾನಾಂ ವೇದ ಮಾಧವಃ ||೧-೪೯-೧೦
ಪ್ರತ್ಯೇಕ ವಸ್ತುಗಳ ಪಾರತತ್ತ್ವದ ಚಿಂತನೆಮಾಡುವ ಅನೇಕ ವಿಚಾರಕರು ಈ ಭಗವಂತನ ಪಾರತತ್ತ್ವವನ್ನು ಕಾಣಲಾರರು. ಆದರೆ ಈ ಮಾಧವನು ಸಂಪೂರ್ಣ ಜಗತ್ತಿನ ಪರಮ ಪಾರವನ್ನು ತುಂಬಾ ಚೆನ್ನಾಗಿ ಅರಿತಿದ್ದಾನೆ.
ಅಸ್ಯ ದೇವಾಂಧಕಾರಸ್ಯ ಮಾರ್ಗಿತವ್ಯಸ್ಯ ದೈವತೈಃ |
ಶೃಣು ವೈ ಯತ್ತದಾ ವೃತ್ತಂ ಬ್ರಹ್ಮಲೋಕೇ ಪುರಾತನಮ್ ||೧-೪೯-೧೧
ಇಂದ್ರಿಯಗಳಿಗೆ ಅವಿಷಯನಾಗಿರುವ, ಮತು ಸಂಪೂರ್ಣ ದೇವತೆಗಳು ಅನುಸಂಧಾನ ಮಾಡುತ್ತಿರುವ ಭಗವಾನ್ ವಿಷ್ಣುವಿನ ಆ ಸಮಯ ಬ್ರಹ್ಮಲೋದದಲ್ಲಿ ಘಟಿಸಿದ ಪ್ರಾಚೀನ ವೃತ್ತಾಂತವನ್ನು ಕೇಳು.
ಸ ಗತ್ವಾ ಬ್ರಹ್ಮಣೋ ಲೋಕಂ ದೃಷ್ಟ್ವಾ ಪೈತಾಮಹಂ ಪದಮ್ |
ವವಂದೇ ತಾನೃಷೀನ್ಸರ್ವಾನ್ವಿಷ್ಣುರಾರ್ಷೇಣ ಕರ್ಮಣಾ ||೧-೪೯-೧೨
ಅವನು ಬ್ರಹ್ಮಲೋಕಕ್ಕೆ ಹೋಗಿ ಪಿತಾಮಹನ ನಿವಾಸಸ್ಥಾನವನ್ನು ನೋಡಿ ವೇದೋಕ್ತ ವಿಧಿಯಿಂದ ಬ್ರಹ್ಮ ಮತ್ತು ಸರ್ವ ಋಷಿಗಳನ್ನೂ ನಮಸ್ಕರಿಸಿದನು.
ಸೋಽಗ್ನಿಂ ಪ್ರಾಕ್ಸವಣೇ ದೃಷ್ಟ್ವಾ ಹೂಯಮಾನಂ ಮಹರ್ಷಿಭಿಃ |
ಅವಂದತ ಮಹಾತೇಜಾಃ ಕೃತ್ವಾ ಪೌರ್ವಾಹ್ನಿಕೀಂ ಕ್ರಿಯಾಮ್ ||೧-೪೯-೧೩
ಆ ಮಹಾತೇಜಸ್ವಿಯು ಪೂರ್ವಾಹ್ಣದ ಕ್ರಿಯೆಗಳನ್ನು ಪೂರೈಸಿ ಪ್ರಾತಃ ಸವನದ ಸಮಯದಲ್ಲಿ ಮಹರ್ಷಿಗಳು ನೀಡಿದ ಆಹುತಿಯನ್ನು ಗ್ರಹಣಮಾಡುತ್ತಿರುವ ಅಗ್ನಿದೇವನ ದರ್ಶನ ಮಾಡಿ ಅವನಿಗೆ ವಂದಿಸಿದನು.
ಸ ದದರ್ಶ ಮಖೇಷ್ವಾಜ್ಯೈರಿಜ್ಯಮಾನಂ ಮಹರ್ಷಿಭಿಃ |
ಭಾಗಂ ಯಜ್ಞಿಯಮಶ್ನಾನಂ ಸ್ವದೇಹಮಪರಂ ಸ್ಥಿತಮ್ ||೧-೪೯-೧೪
ಅವನು ಅಲ್ಲಿ ತನ್ನದೇ ದೇಹದ ಇನ್ನೊಂದು ಮೂರ್ತಿಯು ವಿರಾಜಮಾನವಾಗಿದ್ದುದನ್ನು ಕಂಡನು. ಯಜ್ಞಗಳಲ್ಲಿ ಮಹರ್ಷಿಗಳು ಆಜ್ಯದಿಂದ ಅವನಿಗೆ ಆಹುತಿಗಳನ್ನು ನೀಡುತ್ತಿದ್ದರು ಮತ್ತು ಆ ಮೂರ್ತಿಯು ಯಜ್ಞಭಾಗಗಳನ್ನು ಸ್ವಯಂ ಗ್ರಹಣಮಾಡುತ್ತಿದ್ದನು.
ಅಭಿವಾದ್ಯಾಭಿವಾದ್ಯಾನಾಮೃಷೀಣಾಂ ಬ್ರಹ್ಮವರ್ಚಸಾಮ್ |
ಪರಿಚಕ್ರಾಮ ಸೋಽಚಿಂತ್ಯೋ ಬ್ರಹ್ಮಲೋಕಂ ಸನಾತನಮ್ ||೧-೪೯-೧೫
ಆ ಅಚಿಂತ್ಯಸ್ವರೂಪನು ಬ್ರಹ್ಮತೇಜಸ್ಸಿನಿಂದ ಸಂಪನ್ನರಾಗಿದ್ದ ಮತ್ತು ವಂದನೀಯ ಋಷಿಗಳಿಗೆ ಪ್ರಣಾಮಮಾಡುತ್ತಾ ಆ ಸನಾತನ ಬ್ರಹ್ಮಲೋಕದಲ್ಲಿ ತಿರುಗಾಡ ತೊಡಗಿದನು.
ಸ ದದರ್ಶೋಚ್ಛ್ರಿತಾನ್ಯೂಪಾಂಶ್ಚಷಾಲಾಗ್ರವಿಭೂಷಿತಾನ್ |
ಮಖೇಷು ಚ ಬ್ರಹ್ಮರ್ಷಿಭಿಃ ಶತಶಃ ಕೃತಲಕ್ಷಣಾನ್ ||೧-೪೯-೧೬
ಅಲ್ಲಿ ಅವನು ಯಜ್ಞಗಳಲ್ಲಿ ಸ್ಥಾಪಿತಗೊಂಡ ಷಾಲಾಗ್ರವಿಭೂಷಿತವಾದ ಎತ್ತರ ಯೂಪಗಳನ್ನು ನೋಡಿದನು. ಬ್ರಹ್ಮರ್ಷಿಗಳು ಅವುಗಳ ಮೇಲೆ ನೂರಾರು ಚಿಹ್ನೆಗಳನ್ನು ಅಂಕಿತಗೊಳಿಸಿದ್ದರು.
ಆಜ್ಯಧೂಮಂ ಸಮಾಘ್ರಾಯ ಶೃಣ್ವನ್ವೇದಾಂದ್ವಿಜೇರಿತಾನ್ |
ಯಜ್ಞೈರಿಜ್ಯಂ ತಮಾತ್ಮಾನಂ ಪಶ್ಯಂಸ್ತತ್ರ ಚಚಾರ ಹ ||೧-೪೯-೧೭
ಆವನು ಅಜ್ಯಧೂಮವನ್ನು ಆಘ್ರಾಣಿಸುತ್ತಾ, ದ್ವಿಜರು ಉಚ್ಛರಿಸುತ್ತಿದ್ದ ವೇದಗಳನ್ನು ಕೇಳುತ್ತಾ ಮತ್ತು ಯಜ್ಞಗಳಿಂದ ನಡೆಯುತ್ತಿದ್ದ ತನ್ನದೇ ಆರಾಧನೆಯನ್ನು ನೋಡುತ್ತಾ ವಿಚರಿಸಿದನು.
ಊಚುಸ್ತಮೃಷಯೋ ದೇವಾಃ ಸದಸ್ಯಾಃ ಸದಸಿ ಸ್ಥಿತಾಃ |
ಅರ್ಘ್ಯೋದ್ಯತಭುಜಾಃ ಸರ್ವೇ ಪವಿತ್ರಾಂತರಪಾಣಯಃ ||೧-೪೯-೧೮
ಆ ಯಜ್ಞಮಂಡಪದಲ್ಲಿ ಸದಸ್ಯರೂಪದಲ್ಲಿ ವಿರಾಜಮಾನರಾಗಿದ್ದ ಎಲ್ಲ ದೇವತೆಗಳೂ ಮತ್ತು ಋಷಿಗಳೂ ಕೈಯಲ್ಲಿ ಪವಿತ್ರಧಾರಣೆ ಮಾಡಿಕೊಂದು ಅರ್ಘ್ಯವನ್ನೀಯಲು ಎರಡೂ ಭುಜಗಳನ್ನೂ ಮೇಲೆತ್ತಿ ಆ ಭಗವಂತನ ಕುರಿತು ಪರಸ್ಪರ ಹೀಗೆ ಮಾತನಾಡಿಕೊಳ್ಳುತ್ತಿದ್ದರು:
ದೇವೇಷು ವರ್ತತೇ ಯದ್ವೈ ತದ್ಧಿ ಸರ್ವಂ ಜನಾರ್ದನಾತ್ |
ಯತ್ಪ್ರವೃತ್ತಂ ಚ ದೇವೇಭ್ಯಸ್ತದ್ವಿದ್ಧಿ ಮಧುಸೂದನಾತ್ ||೧-೪೯-೧೯
“ದೇವತೆಗಳಲ್ಲಿ ಇರುವ ಶಕ್ತಿ-ಸಾಮರ್ಥ್ಯಗಳೆಲ್ಲವೂ ಜನಾರ್ದನನಿಂದ ಪ್ರಾಪ್ತವಾಗಿವೆ. ದೇವತೆಗಳಿಗೆ ಪ್ರಾಪ್ತವಾಗುವುದೆಲ್ಲ ಮಧುಸೂದನನ ಪ್ರಸಾದವೆಂದೇ ತಿಳಿಯಬೇಕು.
ಅಗ್ನೀಷೋಮಮಯಂ ಲೋಕಂ ಯಂ ವಿದುರ್ವಿದುಷೋ ಜನಾಃ |
ತಂ ಸೋಮಮಗ್ನಿಂ ಲೋಕಂ ಚ ವೇದ ವಿಷ್ಣುಂ ಸನಾತನಮ್ ||೧-೪೯-೨೦
ಈ ಲೋಕವು ಅಗ್ನೀಷೋಮಮಯವೆಂದು ಯಾವ ವಿದುಷರು ತಿಳಿದಿದ್ದಾರೋ ಆ ಸೋಮ ಮತ್ತು ಅಗ್ನಿಗಳು ಮತ್ತು ಈ ಲೋಕ ಎಲ್ಲವೂ ಸನಾತನ ವಿಷ್ಣುವೆಂದು ತಿಳಿಯಬೇಕು.
ಕ್ಷೀರಾದ್ಯಥಾ ದಧಿ ಭವೇದ್ದಧ್ನಃ ಸರ್ಪಿರ್ಭವೇದ್ಯಥಾ |
ಮಥ್ಯಮಾನೇಷು ಭೂತೇಷು ತಥಾ ಲೋಕೋ ಜನಾರ್ದನಾತ್ ||೧-೪೯-೨೧
ಕ್ಷೀರದಿಂದ ಹೇಗೆ ಮೊಸರಾಗುತ್ತದೆಯೋ ಮತ್ತು ಮೊಸರನ್ನು ಕಡೆದಾಗ ಹೇಗೆ ಬೆಣ್ಣೆಯಾಗುತ್ತದೆಯೋ ಹಾಗೆ ಚಿಂತಿಸಿದರೆ ಭೂತಗಳು ಮತ್ತು ಲೋಕಗಳು ಜನಾರ್ದನನಿಂದಲೇ ಪ್ರಕಟವಾಗಿವೆ ಎನ್ನುವುದು ತಿಳಿಯುತ್ತದೆ.
ಯಥೇಂದ್ರಿಯೈಶ್ಚ ಭೂತೈಶ್ಚ ಪರಮಾತ್ಮಾ ವಿಧೀಯತೇ |
ತಥಾ ದೇವೈಶ್ಚ ವೇದೈಶ್ಚ ಲೋಕೈಶ್ಚ ವಿಹಿತೋ ಹರಿಃ ||೧-೪೯-೨೨
ಇಂದ್ರಿಯಗಳಿಂದ ಮತ್ತು ಶರೀರದಿಂದ ಹೇಗೆ ಪರಮಾತ್ಮನ ಅರಿವಾಗುತ್ತದೆಯೋ ಹಾಗೆ ದೇವತೆಗಳು, ವೇದಗಳು ಮತ್ತು ಲೋಕಗಳಿಂದ ಹರಿಯ ಜ್ಞಾನವುಂಟಾಗುತ್ತದೆ.
ಯಥಾ ಭೂತೇಂದ್ರಿಯಾವಾಪ್ತಿರ್ವಿಹಿತಾ ಭುವಿ ದೇಹಿನಾಮ್ |
ತಥಾ ಪ್ರಾಣೇಶ್ವರಾವಾಪ್ತಿರ್ದೇವಾನಾಂ ದಿವಿ ವೈಷ್ಣವೀ ||೧-೪೯-೨೩
ಭೂಮಿಯಲ್ಲಿರುವ ದೇಹಿಗಳಿಗೆ ಹೇಗೆ ಶರೀರ ಮತ್ತು ಇಂದ್ರಿಯಗಳು ಪ್ರಾಪ್ತವಾಗಿವೆಯೋ ಮತ್ತು ಅವುಗಳ ಸಂಬಂಧವು ಪಾರ್ಥಿವ ಶರೀರದೊಡನೆ ಇದೆಯೋ ಹಾಗೆ ಸ್ವರ್ಗಲೋಕದಲ್ಲಿ ದೇವತೆಗಳ ಪಲ ಮತ್ತು ಐಶ್ವರ್ಯಗಳು ಪ್ರಾಪ್ತವಾಗಿವೆ ಮತ್ತು ಅವುಗಳ ಸಂಬಂಧವು ವಿಷ್ಣುವಿನೊಡನೆ ಇದೆ.
ಸತ್ರಿಣಾಂ ಸತ್ರಫಲದಃ ಪವಿತ್ರಂ ಪರಮಾತ್ಮವಾನ್ |
ಲೋಕತಂತ್ರಧರೋ ಹ್ಯೇಷ ಮಂತ್ರೈರ್ಮಂತ್ರ ಇವೋಚ್ಯತೇ |೧-೪೯-೨೪
ಯಜ್ಞಮಾಡುವವರಿಗೆ ಯಜ್ಞಫಲವನ್ನು ನೀಡುವವನು ಇವನೇ. ಇವನು ಪರಮ ಪವಿತ್ರ ಮತ್ತು ಸ್ವತಂತ್ರನು. ಇವನು ಲೋಕತಂತ್ರಧರನು. ವಾಣಿಯ ಮಾಧುರ್ಯವನ್ನು ವರ್ಣಿಸುವುದು ಹೇಗೆ ವಾಣಿಯಿಂದಲೇ ಸಾಧ್ಯವಾಗುತ್ತದೆಯೋ ಹಾಗೆ ವಿಷ್ಣುವಿನ ಸ್ವರೂಪವನ್ನು ಸ್ವಯಂ ವಿಷ್ಣುವೇ ಮಾಡಬಲ್ಲನು. ಬೇರೆ ಯಾರಿಗೂ ಅವನ ಮಹಿಮೆಯು ಅನಿರ್ವಚನೀಯವು.”
ಋಷಯ ಊಚುಃ |
ಸ್ವಾಗತಂ ತೇ ಸುರಶ್ರೇಷ್ಠ ಪದ್ಮನಾಭ ಮಹಾದ್ಯುತೇ |
ಇದಂ ಯಜ್ಞಿಯಮಾತಿಥ್ಯಂ ಮಂತ್ರತಃ ಪರಿಗೃಹ್ಯತಾಮ್ ||೧-೪೯-೨೫
ಋಷಿಗಳು ಹೇಳಿದರು: “ಸುರಶ್ರೇಷ್ಠ! ಪದ್ಮನಾಭ! ಮಹಾದ್ಯುತೇ! ನಿನಗೆ ಸ್ವಾಗತವು! ವೇದಮಂತ್ರಗಳಿಂದ ಈ ಯಜ್ಞಸಂಬಂಧೀ ಆತಿಥ್ಯವನ್ನು ಸ್ವೀಕರಿಸು!
ತ್ವಮಸ್ಯ ಯಜ್ಞಪೂತಸ್ಯ ಪಾತ್ರಂ ಪಾದ್ಯಸ್ಯ ಪಾವನಃ |
ಅತಿಥಿಸ್ತ್ವಂ ಹಿ ಮಂತ್ರೋಕ್ತಃ ಸ ದೃಷ್ಟಃ ಸಂತತಂ ಮತಃ ||೧-೪೯-೨೬
ಈ ಯಜ್ಞಪೂತ ಪಾದ್ಯಕ್ಕೆ ಪಾವನನಾದ ನೀನೇ ಪಾತ್ರನು. ಮಂತ್ರಗಳು ಹೇಳುವಂತೆ ನೀನು ಅತಿಥಿಯು. ನಿನ್ನ ಕುರಿತು ಸತತವೂ ಚಿಂತಿಸುತ್ತಿರುವ ನಮಗೆ ಇಂದು ನಿನ್ನ ಪ್ರತ್ಯಕ್ಷ ದರ್ಶನವಾಯಿತು!
ತ್ವಯಿ ಯೋದ್ಧುಂ ಗತೇ ವಿಷ್ಣೌ ನ ಪ್ರಾವರ್ತಂತ ನಃ ಕ್ರಿಯಾಃ |
ಅವೈಷ್ಣವಸ್ಯ ಯಜ್ಞಸ್ಯ ನ ಹಿ ಕರ್ಮ ವಿಧೀಯತೇ ||೧-೪೯-೨೭
ವಿಷ್ಣು ನೀನು ಯುದ್ಧಕ್ಕೆ ಹೋದಾಗ ನಮ್ಮ ಯಜ್ಞಕರ್ಮವು ಸರಿಯಾಗಿ ನಡೆಯುತ್ತಿರಲಿಲ್ಲ. ಅವೈಷ್ಣವ ಯಜ್ಞವು ಯಜ್ಞಕರ್ಮವೆಂದೆನಿಸಿಕೊಳ್ಳುವುದಿಲ್ಲ.
ಸದಕ್ಷಿಣಸ್ಯ ಯಜ್ಞಸ್ಯ ತ್ವತ್ಪ್ರಸೂತಿಃ ಫಲಂ ಭವೇತ್ |
ಅದ್ಯಾತ್ಮಾನಮಿಹಾಸ್ಮಾಭಿರಿಜ್ಯಮಾನಂ ನಿರೀಕ್ಷ್ಯಸೇ ||೧-೪೯-೨೮
ನೀನು ಪ್ರಕಟನಾಗಿದ್ದುದೇ ದಕ್ಷಿಣೆಗಳಿಂದ ಕೂಡಿದ ಯಜ್ಞದ ಫಲವು. ಇಂದು ನಾವು ನಿನ್ನನ್ನು ಪೂಜಿಸುವುದನ್ನು ನೀನು ನೋಡುತ್ತೀಯೆ.”
ಏವಮಸ್ತ್ವಿತಿ ತಾನ್ಸರ್ವಾನ್ಭಗವಾನ್ಪ್ರತ್ಯಪೂಜಯತ್ |
ಮುಮುದೇ ಬಹ್ಮಲೋಕಸ್ಥೋ ಬ್ರಹ್ಮಾ ಲೋಕಪಿತಾಮಹಃ ||೧-೪೯-೨೯
ಹಾಗೆಯೇ ಆಗಲೆಂದು ಹೇಳಿ ಭಗವಂತನು ಅವರೆಲ್ಲರೂ ಸಮ್ಮಾನಿಸಿದನು. ಬ್ರಹ್ಮಲೋಕಸ್ಥ ಲೋಕಪಿತಾಮಹ ಬ್ರಹ್ಮನು ಮುದಿತನಾದನು.”
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಲೋಕವರ್ಣನಂ ನಾಮ ಏಕೋನಪಂಚಾಶತ್ತಮೋಽಧ್ಯಾಯಃ
[1] ಆಷಾಢ ಶುಕ್ಲ ಏಕಾದಶಿಯಂದು (ಗೀತಾ ಪ್ರೆಸ್).
[2] ಕಾರ್ತೀಕ ಶುಕ್ಲ ಏಕಾದಶಿಯಂದು (ಗೀತಾ ಪ್ರೆಸ್).
[3] ಇಲ್ಲಿ ಒಟ್ಟು ಎಂಟು ಪ್ರಶ್ನೆಗಳನ್ನು ಜನಮೇಜಯನು ಕೇಳುತ್ತಾನೆ. ಒಂದನೇ ಶ್ಲೋಕದಲ್ಲಿರುವ ಮೊದಲನೇ ಪ್ರಶ್ನೆಗೆ ಉತ್ತರವು ಇದೇ ಅಧ್ಯಾಯದ ಶ್ಲೋಕ ೧೨-೧೭ ರಲ್ಲಿ ಇದೆ. ಎರಡನೇ ಶ್ಲೋಕದಲ್ಲಿರುವ ಎರಡನೇ ಪ್ರಶ್ನೆಗೆ ಉತ್ತರವು ಇದೇ ಅಧ್ಯಾಯದ ಶ್ಲೋಕ ೨೫-೨೮ರಲ್ಲಿ ಇದೆ. ಮೂರನೇ ಶ್ಲೋಕದಲ್ಲಿ ಪ್ರಶ್ನೆ ಮೂರು, ನಾಲ್ಕು ಮತ್ತು ಐದನೇ ಪ್ರಶ್ನೆಗಳಿವೆ. ಅವುಗಳಲ್ಲಿ ಮೂರನೇ ಪ್ರಶ್ನೆಗೆ ಉತ್ತರವು ಅಧ್ಯಾಯ ೫೦ರ ಶ್ಲೋಕ ೧-೬ರಲ್ಲಿ ದೊರೆಯುತ್ತದೆ. ಪ್ರಶ್ನೆ ೪ ಮತ್ತು ೫ ರ ಉತ್ತರಗಳೂ ಕೂಡ ಅಧ್ಯಾಯ ೫೦ರ ಶ್ಲೋಕ ೭-೯ ರಲ್ಲಿ ದೊರೆಯುತ್ತವೆ. ನಾಲ್ಕನೇ ಶ್ಲೋಕದಲ್ಲಿರುವ ಆರನೇ ಪ್ರಶ್ನೆಗೆ ಉತ್ತರವು ೫೦ನೇ ಅಧ್ಯಾಯದ ಶ್ಲೋಕ ೧೨-೨೨ರಲ್ಲಿ ಬಂದಿದೆ. ಏಳನೇ ಮತ್ತು ಎಂಟನೇ ಪ್ರಶ್ನೆಗಳು ಆರನೇ ಶ್ಲೋಕದಲ್ಲಿವೆ. ಏಳನೇ ಪ್ರಶ್ನೆಗೆ ಉತ್ತರವು ೫೦ ನೇ ಅಧ್ಯಾಯದ ಶ್ಲೋಕ ೨೨-೪೩ರಲ್ಲಿ ಬಂದಿದೆ. ಚರಿತ್ರವಿಷಯದ ಎಂಟನೇ ಪ್ರಶ್ನೆಗೆ ಉತ್ತರವು ೫೦ನೇ ಅಧ್ಯಾಯದ ೪೪ನೇ ಶ್ಲೋಕದಿಂದ ಆರಂಭಗೊಂಡು ಮುಂದಿನ ಎಲ್ಲಅ ಧ್ಯಾಯಗಳಲ್ಲಿಯೂ ಇದೆ (ಗೀತಾ ಪ್ರೆಸ್).