ಹರಿವಂಶ: ಹರಿವಂಶ ಪರ್ವ
Contents
Toggle೪೨
ವಿಷ್ಣೋರೀಶ್ವರತ್ವಕಥನಮ್
ವಿಷ್ಣುವಿನ ಈಶ್ವರತ್ವದ ವರ್ಣನೆ ಮತ್ತು ಅದ್ಭುತ ತಾರಕಾಮಯ ಸಂಗ್ರಾಮದ ಕಥಾರಂಭ.
ವೈಶಂಪಾಯನ ಉವಾಚ|
ವಿಶ್ವತ್ವಂ ಶೃಣು ಮೇ ವಿಷ್ಣೋರ್ಹರಿತ್ವಂ ಚ ಕೃತೇ ಯುಗೇ |
ವೈಕುಂಠತ್ವಂ ಚ ದೇವೇಷು ಕೃಷ್ಣತ್ವಂ ಮಾನುಷೇಷು ಚ ||೧-೪೨-೧
ಈಶ್ವರತ್ವಂ ಚ ತಸ್ಯೇದಂ ಗಹನಾಂ ಕರ್ಮಣಾಂ ಗತಿಮ್ |
ಸಂಪ್ರತ್ಯತೀತಾಂ ಭಾವ್ಯಾಂ ಚ ಶೃಣು ರಾಜನ್ಯಥಾತಥಮ್ ||೧-೪೨-೨
ವೈಶಂಪಾಯನನು ಹೇಳಿದನು: “ರಾಜನ್! ಕೃತಯುಗದಲ್ಲಿ ವಿಷ್ಣುವಿನ ವಿಶ್ವತ್ವ ಮತು ಹರಿತ್ವದ ಕುರಿತು, ದೇವತೆಗಳಲ್ಲಿ ಅವನ ವೈಕುಂಠತ್ವ ಮತ್ತು ಮನುಷ್ಯರಲ್ಲಿ ಅವನ ಕೃಷ್ಣತ್ವ, ಅವನ ಈಶ್ವರತ್ವ ಮತ್ತು ಅವನ ಭೂತ-ಭವಿಷ್ಯ-ವರ್ತಮಾನ ಕರ್ಮಗಳ ಗಹನ ಗತಿಯ ಕುರಿತು ಯಥಾರ್ಥವಾಗಿ ಕೇಳು.
ಅವ್ಯಕ್ತೋ ವ್ಯಕ್ತಲಿಂಗಸ್ಥೋ ಯತ್ರೈವ ಭಗವಾನ್ಪ್ರಭುಃ |
ನಾರಾಯಣೋ ಹ್ಯನಂತಾತ್ಮಾ ಪ್ರಭವೋಽವ್ಯಯ ಏವ ಚ ||೧-೪೨-೩
ಭಗವಾನ್ ಪ್ರಭು ನಾರಾಯಣನು ಅವ್ಯಕ್ತನಾಗಿದ್ದರೂ ತನ್ನ ಮೂರ್ತಿಯನ್ನು ವ್ಯಕ್ತಗೊಳಿಸುತ್ತಾನೆ. ಏಕೆಂದರೆ ಅವನು ಅನಂತಾತ್ಮಾ ಮತ್ತು ಎಲ್ಲದರ ಉತ್ಪತ್ತಿಸ್ಥಾನ ಮತ್ತು ಅವ್ಯಯನು.
ಏಷ ನಾರಾಯಣೋ ಭೂತ್ವಾ ಹರಿರಾಸೀತ್ಕೃತೇ ಯುಗೇ |
ಬ್ರಹ್ಮಾ ಶಕ್ರಶ್ಚ ಸೋಮಶ್ಚ ಧರ್ಮಃ ಶುಕ್ರೋ ಬೃಹಸ್ಪತಿಃ ||೧-೪೨-೪
ಕೃತಯುಗದಲ್ಲಿ ಇವನು ನಾರಾಯಣನಾಗಿ ಇವನೇ ಹರಿ, ಬ್ರಹ್ಮ, ಶಕ್ರ, ಸೋಮ, ಧರ್ಮ, ಶುಕ್ರ ಮತ್ತು ಬೃಹಸ್ಪತಿಯರಾಗಿದ್ದನು.
ಅದಿತೇರಪಿ ಪುತ್ರತ್ವಮೇತ್ಯ ಯಾದವನಂದನಃ |
ಏಷ ವಿಷ್ಣುರಿತಿ ಖ್ಯಾತ ಇಂದ್ರಾದವರಜೋಽಭವತ್ ||೧-೪೨-೫
ಈ ಯಾದವನಂದನನು ಅದಿತಿಯ ಪುತ್ರತ್ವವನ್ನೂ ಪಡೆದುಕೊಂಡು ವಿಷ್ಣುವೆಂದು ಖ್ಯಾತನಾಗಿ ಇಂದ್ರನ ತಮ್ಮನಾದನು.
ಪ್ರಸಾದಜಂ ಹ್ಯಸ್ಯ ವಿಭೋರದಿತ್ಯಾಃ ಪುತ್ರಜನ್ಮ ತತ್ |
ವಧಾರ್ಥಂ ಸುರಶತ್ರೂಣಾಂ ದೈತ್ಯದಾನವರಕ್ಷಸಾಮ್ ||೧-೪೨-೬
ಸುರರ ಶತ್ರುಗಳಾಗಿದ್ದ ದೈತ್ಯ-ದಾನವ-ರಾಕ್ಷಸರ ವಧೆಗಾಗಿ ವಿಭುವು ಅದಿತಿಯ ಪುತ್ರನಾಗಿ ಜನ್ಮವನ್ನು ಪಡೆದುದು ಅವನ ಪ್ರಸಾದರೂಪವಾಗಿತ್ತು.
ಪ್ರಧಾನಾತ್ಮಾ ಪುರಾ ಹ್ಯೇಷ ಬ್ರಹ್ಮಾಣಮಸೃಜತ್ಪ್ರಭುಃ |
ಸೋಽಸೃಜತ್ಪೂರ್ವಪುರುಷಃ ಪುರಾ ಕಲ್ಪೇ ಪ್ರಜಾಪತೀನ್ ||೧-೪೨-೭
ಹಿಂದೆ ಈ ಪ್ರಭುವೇ ಪ್ರಧಾನಾತ್ಮನಾಗಿ ಬ್ರಹ್ಮನನ್ನು ಸೃಷ್ಟಿಸಿದನು. ಇವನೇ ಹಿಂದಿನ ಕಲ್ಪಗಳಲ್ಲಿ ಪ್ರಜಾಪತಿಗಳನ್ನು ಸೃಷ್ಟಿಸಿದ ಪೂರ್ವಪುರುಷನು[1].
ತೇ ತನ್ವಾನಾಸ್ತನೂಸ್ತತ್ರ ಬ್ರಹ್ಮವಂಶಾನನುತ್ತಮಾನ್ |
ತೇಭ್ಯೋಽಭವನ್ಮಹಾತ್ಮಭ್ಯೋ ಬಹುಧಾ ಬ್ರಹ್ಮ ಶಾಶ್ವತಮ್ ||೧-೪೨-೮
ಆ ಪ್ರಜಾಪತಿಗಳ ತನುವಿನಿಂದ ಉತ್ತಮ ಬ್ರಹ್ಮವಂಶಗಳು ಉತ್ಪನ್ನವಾದವು. ಆ ಮಹಾತ್ಮರಿಂದಲೇ ಶಾಶ್ವತ ಬ್ರಹ್ಮವು ಅನೇಕವಾಯಿತು.
ಏತದಾಶ್ಚರ್ಯಭೂತಸ್ಯ ವಿಷ್ಣೋರ್ನಾಮಾನುಕೀರ್ತನಮ್ |
ಕೀರ್ತನೀಯಸ್ಯ ಲೋಕೇಷು ಕೀರ್ತ್ಯಮಾನಂ ನಿಬೋಧ ಮೇ ||೧-೪೨-೯
ಲೋಕದಲ್ಲಿ ಕೀರ್ತನೀಯನಾದ ಈ ಆಶ್ಚರ್ಯಭೂತ ವಿಷ್ಣುವಿನ ನಾಮಾನುಕೀರ್ತನೆಯನ್ನು ನಾನು ಮಾಡುವುದನ್ನು ಕೇಳು.
ವೃತ್ತೇ ವೃತ್ರವಧೇ ತಾತ ವರ್ತಮಾನೇ ಕೃತೇ ಯುಗೇ |
ಆಸೀತ್ತ್ರೈಲೋಕ್ಯವಿಖ್ಯಾತಃ ಸಂಗ್ರಾಮಸ್ತಾರಕಾಮಯಃ ||೧-೪೨-೧೦
ಅಯ್ಯಾ! ಕೃತಯುಗದಲ್ಲಿ ವೃತ್ರವಧೆಯು ನಡೆದನಂತರ ನಡೆದ ವೃತ್ತಾಂತವಿದು. ಆಗ ತ್ರೈಲೋಕ್ಯವಿಖ್ಯಾತವಾದ ತಾರಕಾಮಯ ಸಂಗ್ರಮವು ನಡೆಯಿತು.
ತತ್ರಾಸಂದಾನವಾ ಘೋರಾಃ ಸರ್ವೇ ಸಂಗ್ರಾಮದರ್ಪಿತಾಃ |
ಘ್ನಂತಿ ದೇವಗಣಾನ್ಸರ್ವಾನ್ಸಯಕ್ಷೋರಗರಾಕ್ಷಸಾನ್ ||೧-೪೨-೧೧
ಅಲ್ಲಿ ಘೋರದಾನವರು, ಎಲ್ಲರೂ ಸಂಗ್ರಾಮದರ್ಪಿತರೇ, ಯಕ್ಷೋರಗರಾಕ್ಷಸ[2]ರೊಡನೆ ದೇವಗಣಗಳೆಲ್ಲವನ್ನೂ ಸಂಹರಿಸಿದ್ದರು.
ತೇ ವಧ್ಯಮಾನಾ ವಿಮುಖಾಃ ಕ್ಷೀಣಪ್ರಹರಣಾ ರಣೇ |
ತ್ರಾತಾರಂ ಮನಸಾ ಜಗ್ಮುರ್ದೇವಂ ನಾರಾಯಣಂ ಹರಿಮ್ ||೧-೪೨-೧೨
ಹೀಗೆ ವಧಿಸಲ್ಪಡುತ್ತಿದ್ದ ಮತ್ತು ಆಯಸ್ಸನ್ನು ಕಳೆದುಕೊಂಡ ಅವರು ರಣದಿಂದ ವಿಮುಖರಾಗಿ ಮನಸಾ ದೇವ ನಾರಾಯಣ ಹರಿಯ ಶರಣುಹೊಕ್ಕರು.
ಏತಸ್ಮಿನ್ನಂತರೇ ಮೇಘಾ ನಿರ್ವಾಣಾಂಗಾರವರ್ಷಿಣಃ |
ಸಾರ್ಕಚಂದ್ರಗ್ರಹಗಣಂ ಛಾದಯಂತೋ ನಭಸ್ತಲಮ್ ||೧-೪೨-೧೩
ಈ ಮಧ್ಯದಲ್ಲಿ ಮೇಘಗಳು ಜ್ವಾಲಾರಹಿತ ಅಂಗಾರೆಗಳನ್ನು ಸುರಿಸತೊಡಗಿದವು. ಅವು ಸೂರ್ಯ-ಚಂದ್ರ ಮೊದಲಾದ ಗ್ರಹಗಣಸಹಿತ ನಭಸ್ತಲವನ್ನೇ ಮುಸುಕಿತ್ತು.
ಚಂಚದ್ವಿದ್ಯುದ್ಗಣಾವಿದ್ಧಾ ಘೋರಾ ನಿಹ್ರಾದಕಾರಿಣಃ |
ಅನ್ಯೋನ್ಯವೇಗಾಭಿಹತಾಃ ಪ್ರವವುಃ ಸಪ್ತ ಮಾಋತಾಃ ||೧-೪೨-೧೪
ಕುಪಿತ ವಿದ್ಯುತ್ ಜ್ವಾಲೆಗಳಂತೆ ಹರಡಿಕೊಂಡಿದ್ದ ಆ ಘೋರ ಮೋಡಗಳು ಜೋರಾಗಿ ಗರ್ಜಿಸುತ್ತಿದ್ದವು ಮತ್ತು ಸಪ್ತಮಾರುತಗಳಿಂದ ಬೀಸಲ್ಪಟ್ಟು ವೇಗದಿಂದ ಪರಸ್ಪರರನ್ನು ಘರ್ಷಿಸುತ್ತಿದ್ದವು.
ದೀಪ್ತತೋಯಾಶನೀಪಾತೈರ್ವಜ್ರವೇಗಾನಿಲಾಕುಲೈಃ |
ರರಾಸ ಘೋರೈರುತ್ಪಾತೈರ್ದಹ್ಯಮಾನಮಿವಾಂಬರಮ್ ||೧-೪೨-೧೫
ಉರಿಯುತ್ತಿರುವ ಸಿಡಿಲುಗಳು ಬೀಳುತ್ತಿರಲು ವಜ್ರವೇಗದ ಗಾಳಿಯು ಬೀಸುತ್ತಿರಲು ಅಂಬರವೇ ಹತ್ತಿ ಉರಿಯುತ್ತಿದೆಯೋ ಎನ್ನುವಂತೆ ಘೋರ ಉತ್ಪಾತಗಳು ಕಾಣಿಸಿಕೊಂಡವು.
ಪೇತುರುಲ್ಕಾಸಹಸ್ರಾಣಿ ಮುಹುರಾಕಾಶಗಾನ್ಯಪಿ |
ನ್ಯುಬ್ಜಾನಿ ಚ ವಿಮಾನಾನಿ ಪ್ರಪತಂತ್ಯುತ್ಪತಂತಿ ಚ ||೧-೪೨-೧೬
ಸಹಸ್ರಾರು ಉಲ್ಕೆಗಳು ಬೀಳುತ್ತಿದ್ದವು ಮತ್ತು ಪುನಃ ಆಕಾಶಕ್ಕೆ ಹಾರುತ್ತಿದ್ದವು. ವಿಮಾನಗಳು ಕೂಡ ಕೆಳಕ್ಕೆ ಬೀಳುತ್ತಿದ್ದವು ಮತ್ತು ಪುನಃ ಮೇಲಕ್ಕೆ ಪುಟಿಯುತ್ತಿದ್ದವು.
ಚತುರ್ಯುಗಾಂತಪರ್ಯಾಯೇ ಲೋಕಾನಾಂ ಯದ್ಭಯಂ ಭವೇತ್ |
ತಾದೃಶಾನ್ಯೇವ ರೂಪಾಣಿ ತಸ್ಮಿನ್ನುತ್ಪಾತಲಕ್ಷಣೇ ||೧-೪೨-೧೭
ಚತುರ್ಯುಗಾಂತಗಳ ಕೊನೆಯಲ್ಲಿ ಲೋಕಗಳಿಗೆ ಯಾವ ಭಯವುಂಟಾಗುವುದೋ ಅದರಂತೆಯೇ ಕಾಣುವ ಉತ್ಪಾತಲಕ್ಷಣಗಳು ಕಂಡುಬಂದವು.
ತಮಸಾ ನಿಷ್ಪ್ರಭಂ ಸರ್ವಂ ನ ಪ್ರಾಜ್ಞಾಯತ ಕಿಂಚನ |
ತಿಮಿರೌಘಪರಿಕ್ಷಿಪ್ತಾ ನ ರೇಜುಶ್ಚ ದಿಶೋ ದಶ ||೧-೪೨-೧೮
ಕತ್ತೆಲಿಯಿಂದ ಎಲ್ಲವೂ ನಿಷ್ಪ್ರಭೆಗೊಂಡಿತು. ಯಾವುದೂ ತಿಳಿಯಂದಾಯಿತು. ಘನ ಕತ್ತಲೆಯಿಂದ ಮುಚ್ಚಿಕೊಂಡಿದ್ದ ಹದ್ದು ದಿಕ್ಕುಗಳೂ ಕಾಣುತ್ತಿರಲಿಲ್ಲ.
ನಿಶೇವ ರೂಪಿಣೀ ಕಾಲೀ ಕಾಲಮೇಘಾವಗುಂಠಿತಾ |
ದ್ಯೌರ್ನ ಭಾತ್ಯಭಿಭೂತಾರ್ಕಾ ಘೋರೇಣ ತಮಸಾ ವೃತಾ || ೧-೪೨-೧೯
ಕಾಲಮೇಘಗಳು ತುಂಬಿರುವ ರಾತ್ರಿಯು ಹೇಗೆ ಕಪ್ಪಾಗಿರುವುದೋ ಆಗೆ ಆಕಾಶವೇ ಕಾಣುತ್ತಿರಲಿಲ್ಲ. ಸೂರ್ಯನು ಘೋರ ಕತ್ತಲೆಯಿಂದ ಆವೃತನಾಗಿದ್ದನು.
ತಾನ್ಘನೌಘಾನ್ಸತಿಮಿರಾಂದೋರ್ಭ್ಯಾಮುತ್ಕ್ಷಿಪ್ಯ ಸ ಪ್ರಭುಃ |
ವಪುಃ ಸಂದರ್ಶಯಾಮಾಸ ದಿವ್ಯಂ ಕೃಷ್ಣವಪುರ್ಹರಿಃ ||೧-೪೨-೨೦
ಆಗ ಪ್ರಭು ಕೃಷ್ಣವಪು ಹರಿಯು ಆ ಘನೋಘನ ತಿಮಿರಾಂಧ ಮೋಡಗಳನ್ನು ತನ್ನ ಎರಡೂ ಬಾಹುಗಳಿಂದ ಮೇಲೆತ್ತಿ ತನ್ನ ರೂಪವನ್ನು ತೋರಿಸಿದನು.
ಬಲಾಹಕಾಂಜನನಿಭಂ ಬಲಾಹಕತನೂರುಹಮ್ |
ತೇಜಸಾ ವಪುಷಾ ಚೈವ ಕೃಷ್ಣಂ ಕೃಷ್ಣಮಿವಾಚಲಮ್ ||೧-೪೨-೨೧
ಆಗ ಕೃಷ್ಣನು ಕಪ್ಪುಮೋಡಗಳಂತಿದ್ದನು. ಅವನ ತಲೆಗೂದಲು ಮೋಡಗಳಂತಿದ್ದವು. ತೇಜಸ್ಸು ಮತ್ತು ರೂಪದಲ್ಲಿ ಅವನು ಕಪ್ಪು ಪರ್ವತದಂತಿದ್ದನು.
ದೀಪ್ತಪೀತಾಂಬರಧರಂ ತಪ್ತಕಾಂಚನಭೂಷಣಮ್ |
ಧೂಮಾಂಧಕಾರವಪುಷಾ ಯುಗಾಂತಾಗ್ನಿಮಿವೋತ್ಥಿತಮ್ ||೧-೪೨-೨೨
ಬೆಳಗುತ್ತಿದ್ದ ಪೀತಾಂಬರವನ್ನು ಉಟ್ಟಿದ್ದನು. ಕಾಯಿಸಿದ ಕಾಂಚನ ಭೂಷಣಗಳನ್ನು ಧರಿಸಿದ್ದನು. ಹೊಗೆಯ ಅಂಧಕಾರದಂತೆ ಅವನ ಮುಖವು ಯುಗಾಂತದ ಅಗ್ನಿಯನ್ನು ಹೊರಹೊಮ್ಮುತ್ತಿದೆಯೋ ಎಂದು ಕಾಣುತ್ತಿತ್ತು.
ಚತುರ್ದ್ವಿಗುಣಪೀನಾಂಸಂ ಬಲಾಕಾಪಂಕ್ತಿಭೂಷಣಮ್ |
ಚಾಮೀಕರಕರಾಕಾರೈರಾಯುಧೈರುಪಶೋಭಿತಮ್ ||೧-೪೨-೨೩
ಅವನು ಚತುರ್ಭುಜಿಯಾಗಿದ್ದನು. ಬಲಾಕಪಕ್ಷಿಗಳ ಸಾಲಿನಿಂದ ಭೂಷಿತನಾಗಿದ್ದನು. ಚಾಮೀಕರಕರಾಕಾರ ಆಯುಧಗಳಿಂದ ಉಪಶೋಭಿತನಾಗಿದ್ದನು.
ಚಂದ್ರಾರ್ಕಕಿರಣೋದ್ದ್ಯೋತಂ ಗಿರಿಕೂಟಂ ಶಿಲೋಚ್ಚಯಮ್ |
ನಂದಕಾನಂದಿತಕರಂ ಶರಾಶೀವಿಷಧಾರಿಣಮ್ ||೧-೪೨-೨೪
ಸೂರ್ಯಚಂದ್ರರ ಕಿರಣಗನ್ನು ಸೂಸುವ ಗಿರಿಕೂಟ ಶಿಲೋಚ್ಚಯನಂತಿದ್ದನು. ನಂದಕವೆಂಬ ಖಡ್ಗವನ್ನು ಹಿಡಿದಿದ್ದನು. ಸರ್ಪಾಕಾರದ ಬಾಣಾವನ್ನು ಹಿಡಿದಿದ್ದನು.
ಶಕ್ತಿಚಿತ್ರಂ ಹಲೋದಗ್ರಂ ಶಂಖಚಕ್ರಗದಾಧರಮ್ |
ವಿಷ್ಣುಶೈಲಂ ಕ್ಷಮಾಮೂಲಂ ಶ್ರೀವೃಕ್ಷಂ ಶಾಙ್ರಧನ್ವಿನಮ್ ||೧-೪೨-೨೫
ಚಿತ್ರಿತ ಶಕ್ತಿಯನ್ನೂ, ಹಲಾಯುಧವನ್ನು, ಶಂಖ-ಚಕ್ರ-ಗದಾಯುಧಗಳನ್ನೂ ಧರಿಸಿದ್ದನು. ಆ ವಿಷ್ಣುಶೈಲ ಕ್ಷಮಾಮೂಲ ಶ್ರೀವೃಕ್ಷನು ಶಾಂಙ್ರಧನುಸ್ಸನ್ನು ಹಿಡಿದಿದ್ದನು.
ಹರ್ಯಶ್ವರಥಸಂಯುಕ್ತೇ ಸುಪರ್ಣಧ್ವಜಶೋಭಿತೇ |
ಚಂದ್ರಾರ್ಕಚಕ್ರರುಚಿರೇ ಮಂದರಾಕ್ಷವೃತಾಂತರೇ ||೧-೪೨-೨೬
ಹಸಿರುಬಣ್ಣದ ಕುದುರೆಗಳನ್ನು ಕಟ್ಟಿದ್ದ, ಗರುಡನು ಧ್ವಜದಲ್ಲಿ ಶೋಭಿಸುತ್ತಿದ್ದ, ಸೂರ್ಯ-ಚಂದ್ರರೇ ಚಕ್ರಗಳಾಗಿದ್ದ, ಸುಂದರ ರಥದಲ್ಲಿ ಕುಳಿತಿದ್ದನು. ಮಂದರಾಚಲವೇ ಅದರ ಮೂಕಿಯಾಗಿತ್ತು.
ಅನಂತರಶ್ಮಿಸಂಯುಕ್ತೇ ದದೃಶೇ ಮೇರುಕೂಬರೇ |
ತಾರಕಾಚಿತ್ರಕುಸುಮೇ ಗ್ರಹನಕ್ಷತ್ರಬಂಧುರೇ ||೧-೪೨-೨೭
ಅನಂತನೇ ಆ ರಥದ ಕಡಿವಾಣಗಳಾಗಿದ್ದನು. ಮೇರುಪರ್ವತವು ಅದರ ನೊಗವಾಗಿತ್ತು. ತಾರೆಗಳೇ ಅದರ ಮೇಲೆ ಕುಸುಮಗಳಾಗಿ ಚಿತ್ರಿತಗೊಂಡಿದ್ದವು. ಗ್ರಹನಕ್ಷತ್ರಗಳು ಹಗ್ಗವಾಗಿ ಆ ಕುಸುಮಗಳನ್ನು ಪೋಣಿಸಿದ್ದವು.
ಭಯೇಷ್ವಭಯದಂ ವ್ಯೋಮ್ನಿ ದೇವಾ ದೈತ್ಯಪರಾಜಿತಾಃ |
ದದೃಶುಸ್ತೇ ಸ್ಥಿತಂ ದೇವಂ ದಿವ್ಯಲೋಕಮಯೇ ರಥೇ ||೧-೪೨-೨೮
ದೈತ್ಯರಿಂದ ಪರಾಜಿತರಾದ ದೇವತೆಗಳು ಆಕಾಶದಲ್ಲಿ ದಿವ್ಯಲೋಕಮಯ ರಥದಲ್ಲಿ ನಿಂತಿದ್ದ ಭಯದಲ್ಲಿ ಅಭಯವನ್ನು ನೀಡುವ ದೇವನನ್ನು ನೋಡಿದರು.
ತೇ ಕೃತಾಂಜಲಯಃ ಸರ್ವೇ ದೇವಾಃ ಶಕ್ರಪುರೋಗಮಾಃ |
ಜಯಶಬ್ದಂ ಪುರಸ್ಕೃತ್ಯ ಶರಣ್ಯಂ ಶರಣಂ ಗತಾಃ ||೧-೪೨೨-೨೯
ಆ ಸರ್ವ ದೇವತೆಗಳೂ, ಶಕ್ರನನ್ನು ಮುಂದಿರಿಸಿಕೊಂಡು, ಜಯಕಾರ ಮಾಡುತ್ತಾ ಶರಣ್ಯನ ಶರಣುಹೊಕ್ಕರು.
ಸ ತೇಷಾಂ ತಾ ಗಿರಃ ಶ್ರುತ್ವಾ ವಿಷ್ಣುರ್ದಯಿತದೇವತಃ |
ಮನಶ್ಚಕ್ರೇ ವಿನಾಶಾಯ ದಾನವಾನಾಂ ಮಹಾಮೃಧೇ ||೧-೪೨-೩೦
ಅವರ ಆ ಮಾತನ್ನು ಕೇಳಿ ಪ್ರೀತಿಯ ದೇವತೆ ವಿಷ್ಣುವು ಮಹಾರಣದಲ್ಲಿ ದಾನವರನ್ನು ವಿನಾಶಗೊಳಿಸುವ ಮನಸ್ಸು ಮಾಡಿದನು.
ಆಕಾಶೇ ತು ಸ್ಥಿತೋ ವಿಷ್ಣುಃ ಸೋತ್ತಮೇ ಪುರುಷೋತ್ತಮಃ |
ಉವಾಚ ದೇವತಾಃ ಸರ್ವಾಃ ಸಪ್ರತಿಜ್ಞಮಿದಂ ವಚಃ ||೧-೪೨-೩೧
ಉತ್ತಮ ಆಕಾಶದಲ್ಲಿ ನಿಂತಿತ್ತ ಪುರುಷೋತ್ತಮ ವಿಷ್ಣುವು ದೇವತೆಗಳೆಲ್ಲರಿಗೂ ಈ ಪ್ರತಿಜ್ಞಾಪೂರ್ವಕ ಮಾತನ್ನಾಡಿದನು:
ಶಾಂತಿಂ ಭಜತ ಭದ್ರಂ ವೋ ಮಾ ಭೈಷ್ಟಾ ಮರುತಾಂ ಗಾಣಾಃ |
ಜಿತಾ ಮೇ ದಾನವಾಃ ಸರ್ವೇ ತ್ರೈಲೋಕ್ಯಾಂ ಪ್ರತಿಗೃಹ್ಯತಾಮ್ ||೧-೪೨-೩೨
“ಮರುದ್ಗಣಗಳೇ! ನಿಮಗೆ ಮಂಗಳವಾಗಲಿ! ಈಗ ನೀವು ಶಾಂತರಾಗಿರಿ! ಭಯಪಡದಿರಿ! ಈ ದಾನವರೆಲ್ಲರನ್ನೂ ಗೆದ್ದು ತ್ರೈಲೋಕ್ಯವನ್ನು ಪಡೆದುಕೊಳ್ಳಿ.”
ತೇ ತಸ್ಯ ಸತ್ಯಸಂಧಸ್ಯ ವಿಷ್ಣೋರ್ವಾಕ್ಯೇನ ತೋಷಿತಾಃ |
ದೇವಾಃ ಪ್ರೀತಿಂ ಪರಾಂ ಜಗ್ಮುಃ ಪ್ರಾಪ್ಯೇವಾಮೃತಮುತ್ಥಿತಮ್ ||೧-೪೨-೩೩
ಸತ್ಯಸಂಧ ವಿಷ್ಣುವಿನ ಆ ಮಾತನ್ನು ಕೇಳಿ ತೃಪ್ತರಾದ ದೇವತೆಗಳು ಕ್ಷೀರಸಾಗರದಿಂದ ಉತ್ಪನ್ನವಾದ ಅಮೃತವು ದೊರಕಿದಷ್ಟೇ ಪರಮ ಪ್ರೀತರಾದರು.
ತತಸ್ತಮಃ ಸಂಹ್ರಿಯತೇ ವಿನೇಶುಶ್ಚ ಬಲಾಹಕಾಃ |
ಪ್ರವವುಶ್ಚ ಶಿವಾ ವಾತಾಃ ಪ್ರಸನ್ನಾಶ್ಚ ದಿಶೋ ದಶ ||೧-೪೨-೩೪
ಆಗ ಕತ್ತಲೆಯು ದೂರವಾಯಿತು. ಮೋಡಗಳು ಚದುರಿಹೋದವು. ಮಂಗಳಕರ ಗಾಳಿಯು ಬೀಸತೊಡಗಿತು ಮತ್ತು ಹತ್ತು ದಿಕ್ಕುಗಳೂ ತಿಳಿಯಾದವು.
ಸುಪ್ರಭಾಣಿ ಚ ಜ್ಯೋತೀಂಷಿ ಚಂದ್ರಂ ಚಕ್ರುಃ ಪ್ರದಕ್ಷಿಣಮ್ |
ದೀಪ್ತಿಮಂತಿ ಚ ತೇಜಾಂಸಿ ಚಕ್ರುರರ್ಕಂ ಪ್ರದಕ್ಷಿಣಮ್ || ೧-೪೨-೩೫
ಸುಪ್ರಭೆಯ ನಕ್ಷತ್ರಗಳು ಚಂದ್ರನನ್ನು ಪ್ರದಕ್ಷಿಣೆಮಾಡತೊಡಗಿದವು. ಪ್ರಕಾಶಮಾನ ಗ್ರಹಗಳು ಸೂರ್ಯನನ್ನು ಪ್ರದಕ್ಷಿಣೆಮಾಡತೊಡಗಿದವು.
ನ ವಿಗ್ರಹಂ ಗ್ರಹಾಶ್ಚಕ್ರುಃ ಪ್ರಸನ್ನಾಶ್ಚಾಪಿ ಸಿಂಧವಃ |
ನೀರಜಸ್ಕಾ ಬಭುರ್ಮಾರ್ಗಾ ನಾಕಮಾರ್ಗಾದಯಸ್ತ್ರಯಃ ||೧-೪೨-೩೬
ಗ್ರಹಗಳು ಒಂದಕ್ಕೊಂಡು ಹೊಡೆಯುವುದನ್ನು ನಿಲ್ಲಿಸಿದವು. ನದಿಗಳು ಪ್ರಸನ್ನವಾದವು. ದೇವಯಾನ, ಪಿತೃಯಾನ ಮತ್ತು ಮೋಕ್ಷಮಾರ್ಗಗಳೆಂಬ ಮೂರು ಮಾರ್ಗಗಳೂ ಧೂಳಿನಿಂದ ರಹಿತವಾಗಿ ನಿರ್ಮಲವಾದವು.
ಯಥಾರ್ಥಾಮೂಹುಃ ಸರಿತೋ ನಾಪಿ ಚುಕ್ಷುಭಿರೇಽರ್ಣವಾಃ |
ಆಸಂಶುಭಾನೀಂದ್ರಿಯಾಣಿ ನರಾಣಾಮಂತರಾತ್ಮಸು ||೧-೪೨-೩೭
ನದಿಗಳು ಸರಿಯಾಗಿ ಹರಿಯತೊಡಗಿದವು. ಸಮುದ್ರಗಳು ಕ್ಷೋಭೆಗೊಳ್ಳುವುದು ನಿಂತಿತು. ಮನುಷ್ಯರ ಅಂತರಾತ್ಮದಲ್ಲಿ ಇಂದ್ರಿಗಳು ಶುಭ ಕರ್ಮಗಳಲ್ಲಿ ತೊಡಗಲು ಬಯಸಿದವು.
ಮಹರ್ಷಯೋ ವೀತಶೋಕಾ ವೇದಾನುಚ್ಚೈರಧೀಯತ |
ಯಜ್ಞೇಷು ಚ ಹವಿಃ ಸ್ವಾದು ಶಿವಮಶ್ನಾತಿ ಪಾವಕಃ ||೧-೪೨-೩೮
ಮಹರ್ಷಿಗಳು ಶೋಕರಹಿತರಾಗಿ ವೇದಗಳನ್ನು ಉಚ್ಚರಿಸತೊಡಗಿದರು. ಪಾವಕನು ಯಜ್ಞಗಳಲ್ಲಿನ ಪವಿತ್ರ ಮತ್ತು ಸ್ವಾದು ಹವಿಸ್ಸನ್ನು ಭಕ್ಷಿಸತೊಡಗಿದನು.
ಪ್ರವೃತ್ತಧರ್ಮಾಃ ಸಂವೃತ್ತಾ ಲೋಕಾ ಮುದಿತಮಾನಸಾಃ |
ಪ್ರೀತ್ಯಾ ಪರಮಯಾ ಯುಕ್ತಾ ದೇವದೇವಸ್ಯ ಭೂಪತೇ |
ವಿಷ್ಣೋಃ ಸತ್ಯಪ್ರತಿಜ್ಞಸ್ಯ ಶ್ರುತ್ವಾರಿನಿಧನೇ ಗಿರಮ್ ||೧-೪೨-೩೯
ಭೂಪತೇ! ಸತ್ಯಪ್ರತಿಜ್ಞ ದೇವದೇವ ವಿಷ್ಣುವಿನ ಈ ಶತ್ರುನಾಶನ ಪ್ರತಿಜ್ಞೆಯನ್ನು ಕೇಳಿ ಲೋಕಗಳು ಮುದಿತಮಾನಸಗೊಂಡು ಪರಮ ಪ್ರೀತಿಯಿಂದ ಪ್ರವೃತ್ತಧರ್ಮದಲ್ಲಿ ತೊಡಗಿತು.”
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಆಶ್ಚರ್ಯತಾರಕಾಮಯೇ ದ್ವಿಚತ್ವಾರಿಂಶೋಽಧ್ಯಾಯಃ
[1] ಪುರುಷಸೂಕ್ತದಲ್ಲಿ ಹೇಳಿದ ಸಹಸ್ರಶೀರ್ಷಾ ಪುರುಷಃ!
[2] ಆಗ (ಕೃತಯುಗದಲ್ಲಿ) ರಾಕ್ಷಸರನ್ನೂ ದೇವಗಣಗಳೆಂದು ಎಣಿಸಲಾಗಿತ್ತು.