ಹರಿವಂಶ: ಹರಿವಂಶ ಪರ್ವ
Contents
Toggle೨೩
ಹಂಸಗಳು ಕಾಂಪಿಲ್ಯ ನಗರಿಯಲ್ಲಿ ಬ್ರಹ್ಮದತ್ತನೇ ಮೊದಲಾದವರ ರೂಪದಲ್ಲಿ ಜನಿಸಿದುದು ಮತ್ತು ನಾಲ್ಕು ಹಂಸಗಳು ತಮ್ಮ ಪಿತನ ಆಜ್ಞೆಯನ್ನು ಪಡೆದು ಮುಕ್ತರಾದುದು (೧-೩೬).
ಮಾರ್ಕಂಡೇಯ ಉವಾಚ |
ತೇ ಯೋಗಧರ್ಮನಿರತಾಃ ಸಪ್ತ ಮಾನಸಚಾರಿಣಃ |
ಪದ್ಮಗರ್ಭೋಽರವಿಂದಾಕ್ಷಃ ಕ್ಷೀರಗರ್ಭಃ ಸುಲೋಚನಃ || ೧-೨೩-೧
ಉರುಬಿಂದುಃ ಸುಬಿಂದುಶ್ಚ ಹೈಮಗರ್ಭಸ್ತು ಸಪ್ತಮಃ |
ವಾಯ್ವಂಬುಭಕ್ಷಾಃ ಸತತಂ ಶರೀರಾಣ್ಯುಪಶೋಷಯನ್ || ೧-೨೩-೨
ಮಾರ್ಕಂಡೇಯನು ಹೇಳಿದನು: “ಪದ್ಮಗರ್ಭ, ಅರವಿಂದಾಕ್ಷ, ಕ್ಷೀರಗರ್ಭ, ಸುಲೋಚನ, ಉರುಬಿಂದು, ಸುಬಿಂದು ಮತ್ತು ಏಳನೆಯ ಹೈಮಗರ್ಭ ಈ ಏಳು ಮಾನಸಸರೋವರ ಸಂಚಾರಿಗಳು ಸತತವೂ ಕೇವಲ ಜಲ ಮತ್ತು ವಾಯುವನ್ನು ಸೇವಿಸುತ್ತಾ ತಮ್ಮ ಶರೀರಗಳನ್ನು ಶೋಷಿಸತೊಡಗಿದವು.
ರಾಜಾ ವಿಭ್ರಾಜಮಾನಸ್ತು ವಪುಷಾ ತದ್ವನಂ ತದಾ |
ಚಚಾರಾಂತಃಪುರವೃತೋ ನಂದನಂ ಮಘವಾನಿವ || ೧-೨೩-೩
ಇತ್ತ ರಾಜನು ತನ್ನ ಶರೀರಕಾಂತಿಯನ್ನು ಪಸರುತ್ತಾ ತನ್ನ ಅಂತಃಪುರಸ್ತ್ರೀಯರೊಂದಿಗೆ ನಂದನದಲ್ಲಿ ಮಘವಾನನು ಹೇಗೋ ಹಾಗೆ ಆ ವನದಲ್ಲಿ ವಿಹರಿಸತೊಡಗಿದನು.
ಸ ತಾನಪಶ್ಯತ್ಖಚರಾನ್ಯೋಗಧರ್ಮಾತ್ಮಕಾನ್ನೃಪ |
ನಿರ್ವೇದಾಚ್ಚ ತಮೇವಾರ್ಥಮನುಧ್ಯಾಯನ್ಪುರಂ ಯಯೌ || ೧-೨೩-೪
ನೃಪ! ಆ ಯೋಗಧರ್ಮಾತ್ಮಕ ಪಕ್ಷಿಗಳನ್ನು ನೋಡಿ ಅದರ ಅರ್ಥವನ್ನೇ ಚಿಂತಿಸುತ್ತಾ ತಾನು ಆ ರೀತಿ ಇಲ್ಲವಲ್ಲಾ ಎಂದು ದುಃಖಿಸುತ್ತಾ ತನ್ನ ಪುರಕ್ಕೆ ಹಿಂದಿರುಗಿದನು.
ಅಣುಹೋ ನಾಮ ತಸ್ಯಾಽಽಸೀತ್ಪುತ್ರಃ ಪರಮಧಾರ್ಮಿಕಃ |
ಅಣುರ್ಧರ್ಮರತಿರ್ನಿತ್ಯಮಣುಂ ಸೋಽಧ್ಯಗಮತ್ಪದಮ್ || ೧-೨೩-೫
ಅವನಿಗೆ ಅಣುಹ[1] ಎಂಬ ಹೆಸರಿನ ಪರಮ ಧಾರ್ಮಿಕ ಪುತ್ರನಿದ್ದನು. ಅವನು ಧರ್ಮದ ಸೂಕ್ಷ್ಮ ತತ್ತ್ವಗಳ ಚಿಂತನದಲ್ಲಿ ಅನುರಕ್ತನಾಗಿದ್ದನು. ಆದುದರಿಂದ ಅವನಿಗೆ ಅಣುಪದ[2]ವು ಪ್ರಾಪ್ತವಾಯಿತು.
ಪ್ರಾದಾತ್ಕನ್ಯಾಂ ಶುಕಸ್ತಸ್ಮೈ ಕೃತ್ವೀಂ ಪೂಜಿತಲಕ್ಷಣಾಮ್ |
ಸತ್ಯಶೀಲಗುಣೋಪೇತಾಂ ಯೋಗಧರ್ಮರತಾಂ ಸದಾ || ೧-೨೩-೬
ಶುಕನು ಅವನಿಗೆ ಪೂಜಿತಲಕ್ಷಣಗಳಿದ್ದ ಸತ್ಯಶೀಲಗುಣೋಪೇತಳಾಗಿದ್ದ ಮತ್ತು ಸದಾ ಯೋಗಧರ್ಮನಿರತಳಾಗಿದ್ದ ತನ್ನ ಕೃತ್ವಿಯನ್ನು ನೀಡಿದನು.
ಸಾ ಹ್ಯುದ್ದಿಷ್ಟಾ ಪುರಾ ಭೀಷ್ಮ ಪಿತೃಕನ್ಯಾ ಮನೀಷಿಣೀ |
ಸನತ್ಕುಮಾರೇಣ ತದಾ ಸನ್ನಿಧೌ ಮಮ ಶೋಭನಾ || ೧-೨೩-೭
ಭೀಷ್ಮ! ಈ ಹಿಂದೆ ಸನತ್ಕುಮಾರನು ನನಗೆ ಹೇಳಿದಂತೆ ಆ ಶೋಭನೆ ಮನೀಷಿಣಿಯು ಪಿತೃಕನ್ಯೆಯಾಗಿದ್ದಳು.
ಸತ್ಯಧರ್ಮಭೃತಾಂ ಶ್ರೇಷ್ಠಾ ದುರ್ವಿಜ್ಞೇಯಾ ಕೃತಾತ್ಮಭಿಃ |
ಯೋಗಾ ಚ ಯೋಗಪತ್ನೀ ಚ ಯೋಗಮಾತಾ ತಥೈವ ಚ || ೧-೨೩-೮
ಸತ್ಯಧರ್ಮಭೃತರಲ್ಲಿ ಶ್ರೇಷ್ಠಳಾಗಿದ್ದ ಅವಳನ್ನು ಕೃತಾತ್ಮರೂ ತಿಳಿದುಕೊಳ್ಳಲು ಕಷ್ಟವಾಗುತ್ತಿತ್ತು. ಸ್ವಯಂ ಯೋಗಿನಿಯಾಗಿದ್ದ ಅವಳು ಯೋಗಿಯ ಪತ್ನಿಯೂ ಯೋಗಿಯ ಮಾತೆಯೂ ಆಗಿದ್ದಳು.
ಯಥಾ ತೇ ಕತಿಥಂ ಪೂರ್ವಂ ಪಿತೃಕಲ್ಪೇಷು ವೈ ಮಯಾ |
ವಿಭ್ರಾಜಸ್ತ್ವಣುಹಂ ರಾಜ್ಯೇ ಸ್ಥಾಪಯಿತ್ವಾ ನರೇಶ್ವರಃ || ೧-೨೩-೯
ಆಮಂತ್ರ್ಯ ಪೌರಾನ್ಪ್ರೀತಾತ್ಮಾ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ |
ಪ್ರಾಯಾತ್ಸರಸ್ತಪಶ್ಚರ್ತುಂ ಯತ್ರ ತೇ ಸಹಚಾರಿಣಃ || ೧-೨೩-೧೦
ಪಿತೃಕಲ್ಪದ ಸಮಯದಲ್ಲಿ ಮೊದಲೇ ನಾನು ನಿನಗೆ ಹೇಳಿದ್ದಂತೆ ನರೇಶ್ವರ ವಿಭ್ರಾಜನು ಅಣುಹನನ್ನು ರಾಜ್ಯದಲ್ಲಿ ಸ್ಥಾಪಿಸಿ, ಪೌರರಿಂದ ಅನುಮತಿಯನ್ನು ಪಡೆದು ಬ್ರಾಹ್ಮಣರಿಂದ ಸ್ವಸ್ತಿವಾಚನ ಮಾಡಿಸಿಕೊಂಡು ಪ್ರೀತಾತ್ಮನಾಗಿ ಆ ಸಹಚಾರಿ ಪಕ್ಷಿಗಳಿಂದ ಸರೋವರಕ್ಕೆ ತಪಸ್ಸನ್ನು ಮಾಡಲು ಹೋದನು.
ಸ ವೈ ತತ್ರ ನಿರಾಹಾರೋ ವಾಯುಭಕ್ಷೋ ಮಹಾತಪಾಃ |
ತ್ಯಕ್ತ್ವಾ ಕಾಮಾಂಸ್ತಪಸ್ತೇಪೇ ಸರಸಸ್ತಸ್ಯ ಪಾರ್ಶ್ವತಃ || ೧-೨೩-೧೧
ಆ ಸರೋವರದ ತೀರದಲ್ಲಿ ಅವನು ಕಾಮಗಳನ್ನು ತ್ಯಜಿಸಿ ನಿರಾಹಾರನೂ ವಾಯುಭಕ್ಷನೂ ಆಗಿ ಮಹಾ ತಪಸ್ಸನ್ನು ತಪಿಸಿದನು.
ತಸ್ಯ ಸಂಕಲ್ಪ ಆಸೀಚ್ಚ ತೇಷಾಮೇಕತರಸ್ಯ ವೈ |
ಪುತ್ರತ್ವಂ ಪ್ರಾಪ್ಯ ಯೋಗೇನ ಯುಜ್ಯೇಯಮಿತಿ ಭಾರತ || ೧-೨೩-೧೨
ಭಾರತ! ಆ ಪಕ್ಷಿಗಳಲ್ಲಿ ಒಂದನ್ನಾದರೂ ತನ್ನ ಪುತ್ರನನ್ನಾಗಿ ಪಡೆದು ಯೋಗಯುಕ್ತನಾಗುತ್ತೇನೆ ಎನ್ನುವುದು ಅವನ ಸಂಕಲ್ಪವಾಗಿತ್ತು.
ಕೃತ್ವಾಭಿಸಂಧಿಂ ತಪಸಾ ಮಹತಾ ಸ ಸಮನ್ವಿತಃ |
ಮಹಾತಪಾಃ ಸ ವಿಭ್ರಾಜೋ ವಿರರಾಜಾಂಶುಮಾನಿವ || ೧-೨೩-೧೩
ಈ ಸಂಕಲ್ಪವನ್ನು ಮಾಡಿ ಮಹಾ ತಪಸ್ಸಿನಿಂದ ಸಮನ್ವಿತನಾದ ಆ ಮಹಾತಪಸ್ವೀ ವಿಭ್ರಾಜನು ಸೂರ್ಯನಂತೆ ವಿರಾಜಿಸತೊಡಗಿದನು.
ತತೋ ವಿಭ್ರಾಜಿತಂ ತೇನ ವೈಭ್ರಾಜಂ ನಾಮ ತದ್ವನಮ್ |
ಸರಸ್ತಚ್ಚ ಕುರುಶ್ರೇಷ್ಠ ವೈಭ್ರಾಜಮಿತಿ ಸಂಜ್ಞಿತಮ್ || ೧-೨೩-೧೪
ಕುರುಶ್ರೇಷ್ಠ! ಅವನು ತನ್ನ ಕಾಂತಿಯಿಂದ ಆ ವನವನ್ನೂ ಸರೋವರವನ್ನೂ ವಿಭ್ರಾಜಗೊಳಿಸಿದನು. ಆದುದರಿಂದ ಆ ವನ ಮತ್ತು ಸರೋವರಗಳು ವೈಭ್ರಾಜವೆಂದು ಕರೆಯಲ್ಪಟ್ಟವು.
ಯತ್ರ ತೇ ಶಕುನಾ ರಾಜಂಶ್ಚತ್ವಾರೋ ಯೋಗಧರ್ಮಿಣಃ |
ಯೋಗಭ್ರಷ್ಟಾಸ್ತ್ರಯಶ್ಚೈವ ದೇಹನ್ಯಾಸಕೃತೋಽಭವನ್ || ೧-೨೩-೧೫
ರಾಜನ್! ಆಗ ಅಲ್ಲಿದ್ದ ಯೋಗಧರ್ಮೀ ನಾಲ್ಕು ಪಕ್ಷಿಗಳೂ ಮತ್ತು ಯೋಗಭ್ರಷ್ಟರಾದ ಮೂರು ಪಕ್ಷಿಗಳೂ ದೇಹತ್ಯಾಗಮಾಡಿದವು.
ಕಾಂಪಿಲ್ಯೇ ನಗರೇ ತೇ ತು ಬ್ರಹ್ಮದತ್ತಪುರೋಗಮಾಃ |
ಜಾತಾಃ ಸಪ್ತ ಮಹಾತ್ಮಾನಃ ಸರ್ವೇ ವಿಗತಕಲ್ಮಷಾಃ || ೧-೨೩-೧೬
ಆ ಎಲ್ಲ ಸಪ್ತ ವಿಗತಕಲ್ಮಷ ಮಹಾತ್ಮರೂ ಕಾಂಪಿಲ್ಯ ನಗರದಲ್ಲಿ ಬ್ರಹ್ಮದತ್ತನೇ ಮೊದಲಾದವರಾಗಿ ಜನಿಸಿದರು.
ಜ್ಞಾನಧ್ಯಾನತಪಃಪೂಜಾವೇದವೇದಾಂಗಪಾರಗಾಃ |
ಸ್ಮೃತಿಮಂತೋಽತ್ರ ಚತ್ವಾರಸ್ತ್ರಯಸ್ತು ಪರಿಮೋಹಿತಾಃ || ೧-೨೩-೧೭
ಅವರು ಜ್ಞಾನ-ಧ್ಯಾನ-ತಪಸ್ಸು-ಪೂಜಾ-ವೇದ ಮತ್ತು ವೇದಾಂಗಗಳಲ್ಲಿ ಪಾರಂಗತರಾಗಿದ್ದರು. ಅವರಲ್ಲಿ ನಾಲ್ವರಿಗೆ ಹಿಂದಿನ ಜನ್ಮಗಳ ಸ್ಮರಣೆಯಿತ್ತು. ಆದರೆ ಮೋಹಿತರಾಗಿದ್ದ ಮೂವರಿಗೆ ಪೂರ್ವಜನ್ಮದ ಸ್ಮರಣೆಯಿರಲಿಲ್ಲ.
ಸ್ವತಂತ್ರಸ್ತ್ವಣುಹಾಜ್ಜಜ್ಞೇ ಬ್ರಹ್ಮದತ್ತೋ ಮಹಾಯಶಾಃ |
ಯಥಾ ಹ್ಯಾಸೀತ್ಪಕ್ಷಿಭಾವೇ ಸಂಕಲ್ಪಃ ಪೂರ್ವಚಿಂತಿತಃ |
ಜ್ಞಾನಧ್ಯಾನತಪಃಪೂತೋ ವೇದವೇದಾಂಗಪಾರಗಃ || ೧-೨೩-೧೮
ಸ್ವತಂತ್ರನು ಮೊದಲೇ ತನ್ನ ಪಕ್ಷಿಭಾವದಲ್ಲಿ ಯೋಚಿಸಿ ಸಂಕಲ್ಪಿಸಿದಂತೆ ಮಹಾಯಶಸ್ವೀ ಬ್ರಹ್ಮದತ್ತನಾಗಿ ಅಣುಹನಿಗೆ ಹುಟ್ಟಿದನು. ಅವನು ಜ್ಞಾನ-ಧ್ಯಾನ-ತಪಸ್ಸುಗಳಿಂದ ಪವಿತ್ರನಾಗಿ ವೇದವೇದಾಂಗಪಾರಂಗತನಾಗಿದ್ದನು.
ಛಿದ್ರದರ್ಶೀ ಸುನೇತ್ರಶ್ಚ ತಥಾ ಬಾಭ್ರವ್ಯವತ್ಸಯೋಃ |
ಜಾತೌ ಶ್ರೋತ್ರಿಯದಾಯಾದೌ ವೇದವೇದಾಂಗಪಾರಗೌ || ೧-೨೩-೧೯
ಛಿದ್ರದರ್ಶೀ ಮತ್ತು ಸುನೇತ್ರರು ಶ್ರೋತ್ರಿಯರಾದ ಬಾಭ್ರವ್ಯ ಮತ್ತು ವತ್ಸ ಎಂಬ ಶ್ರೋತ್ರೀಯ ರಾಜಮಂತ್ರಿಗಳ ಮಕ್ಕಳಾಗಿ ಹುಟ್ಟಿದರು. ಅವರೂ ವೇದವೇದಾಂಗಪಾರಗರಾಗಿದ್ದರು.
ಸಹಾಯೌ ಬ್ರಹ್ಮದತ್ತಸ್ಯ ಪೂರ್ವಜಾತಿಸಹೋಷಿತೌ |
ಪಾಂಚಾಲಃ ಪಾಂಚಿಕಶ್ಚೈವ ಕಂಡರೀಕಸ್ತಥಾಪರಃ || ೧-೨೩-೨೦
ಪೂರ್ವಜನ್ಮದಲ್ಲಿ ಅವರು ಬ್ರಹ್ಮದತ್ತನ ಸಹಾಯಕರಾಗಿದ್ದರು ಮತ್ತು ಜೊತೆಯೇ ವಾಸಿಸುತ್ತಿದ್ದರು. ಐದನೆಯವನು ಪಾಂಚಾಲನಾದನು ಮತ್ತು ಇನ್ನೊಬ್ಬನು ಕಂಡರೀಕನಾದನು.
ಪಾಂಚಾಲೋ ಬಹ್ವೃಚಸ್ತ್ವಾಸೀದಾಚಾರ್ಯತ್ವಂ ಚಕಾರ ಹ |
ದ್ವಿವೇದಃ ಕಂಡರೀಕಸ್ತು ಛಂದೋಗೋಽಧ್ವರ್ಯುರೇವ ಚ || ೧-೨೩-೨೧
ಋಗ್ವೇದಿಯಾಗಿದ್ದ ಪಾಂಚಾಲನು ಆಚಾರ್ಯತ್ವವನ್ನು ಪಡೆದುಕೊಂಡನು. ಕಂಡರೀಕನು ಛಂದಗಳನ್ನು ಹಾಡುವ ಸಾಮವೇದೀ ಮತ್ತು ಅದ್ವರ್ಯು (ಯಜುರ್ವೇದಿ) ವಾದನು.
ಸರ್ವಸತ್ತ್ವರುತಜ್ಞಸ್ತು ರಾಜಾಽಽಸೀದಣುಹಾತ್ಮಜಃ |
ಪಾಂಚಾಲಕಂಡರೀಕಾಭ್ಯಾಂ ತಸ್ಯ ಸಖ್ಯಮಭೂತ್ತದಾ || ೧-೨೩-೨೨
ಅಣುಹಾತ್ಮಜ ಬ್ರಹ್ಮದತ್ತನು ಸರ್ವ ಪ್ರಾಣಿಗಳ ಭಾಷೆಯನ್ನು ಅರಿತಿದ್ದನು. ಅವನಿಗೆ ಪಾಂಚಾಲ ಮತ್ತು ಕಂಡರೀಕರೊಡನೆ ಸಖ್ಯವುಂಟಾಯಿತು.
ತೇ ಗ್ರಾಮ್ಯಧರ್ಮಾಭಿರತಾಃ ಕಾಮಸ್ಯ ವಶವರ್ತಿನಃ |
ಪೂರ್ವಜಾತಿಕೃತೇನಾಸಂಧರ್ಮಕಾಮಾರ್ಥಕೋವಿದಾಃ || ೧-೨೩-೨೩
ಅವರು ಗ್ರಾಮ್ಯಧರ್ಮದಲ್ಲಿ ನಿರತರಾಗಿದ್ದರು ಮತ್ತು ಕಾಮದ ವಶವರ್ತಿಗಳಾಗಿದ್ದರು. ಪೂರ್ವಜನ್ಮದಲ್ಲಿ ಮಾಡಿದ ಕರ್ಮಗಳಿಂದ ಧರ್ಮಕಾಮಾರ್ಥಕೋವಿದರಾಗಿದ್ದರು.
ಅಣುಹಸ್ತು ನೃಪಶ್ರೇಷ್ಠೋ ಬ್ರಹ್ಮದತ್ತಮಕಲ್ಮಷಮ್ |
ರಾಜ್ಯೇಽಭಿಷಿಚ್ಯ ಯೋಗಾತ್ಮಾ ಪರಾಂ ಗತಿಮವಾಪ್ತವಾನ್ || ೧-೨೩-೨೪
ನೃಪಶ್ರೇಶ್ಠ ಅಣುಹನಾದರೋ ಅಕಲ್ಮಷ ಬ್ರಹ್ಮದತ್ತನನ್ನು ರಾಜ್ಯದಲ್ಲಿ ಅಭಿಷೇಕಿಸಿ ಯೋಗಾತ್ಮನಾಗಿ ಪರಮ ಗತಿಯನ್ನು ಪಡೆದುಕೊಂಡನು.
ಬ್ರಹ್ಮದತ್ತಸ್ಯ ಭಾರ್ಯಾ ತು ದೇವಲಸ್ಯಾತ್ಮಜಾಭವತ್ |
ಅಸಿತಸ್ಯ ಹಿ ದುರ್ಧರ್ಷಾ ಸನ್ನತಿರ್ನಾಮ ನಾಮತಃ || ೧-೨೩-೨೫
ಅಸಿತ ದೇವಲನ ಪುತ್ರಿ ಸನ್ನತಿ ಎಂಬ ಹೆಸರಿನ ದುರ್ಧರ್ಷೆಯು ಬ್ರಹ್ಮದತ್ತನ ಭಾರ್ಯೆಯಾದಳು.
ತಾಮೇಕಭಾವಸಂಪನ್ನಾಂ ಲೇಭೇ ಕನ್ಯಾಮನುತ್ತಮಾಮ್ |
ಸನ್ನತಿಂ ಸನ್ನತಿಮತೀಂ ದೇವಲಾದ್ಯೋಗಧರ್ಮಿಣೀಮ್ || ೧-೨೩-೨೬
ಆ ಏಕಭಾವಸಂಪನ್ನೆ, ಅನುತ್ತಮ ಕನ್ಯೆ ಸನ್ನತಿಮತಿ ಯೋಗಧರ್ಮಿಣೀ ಸನ್ನತಿಯನ್ನು ಬ್ರಹ್ಮದತ್ತನು ದೇವಲನಿಂದ ಪತ್ನಿಯನ್ನಾಗಿ ಪಡೆದುಕೊಂಡಿದ್ದನು.
ಪಂಚಮಃ ಪಾಂಚಿಕಸ್ತತ್ರ ಸಪ್ತಜಾತಿಷು ಭಾರತ |
ಷಷ್ಠಸ್ತು ಕಂಡರೀಕೋಽಭೂದ್ಬ್ರಹ್ಮದತ್ತಸ್ತು ಸಪ್ತಮಃ || ೧-೨೩-೨೭
ಭಾರತ! ಆ ಏಳನೆಯ ಜನ್ಮದಲ್ಲಿ ಐದನೆಯವನು ಪಂಚಾಲನಾದನು. ಆರನೆಯವನು ಕಂಡರೀಕನಾದನು ಮತ್ತು ಏಳನೆಯವನು ಬ್ರಹ್ಮದತ್ತನಾದನು.
ಶೇಷಾ ವಿಹಂಗಮಾ ಯೇ ವೈ ಕಾಂಪಿಲ್ಯೇ ಸಹಚಾರಿಣಃ |
ತೇ ಜಾತಾಃ ಶ್ರೋತ್ರಿಯಕುಲೇ ಸುದರಿದ್ರೇ ಸಹೋದರಾಃ || ೧-೨೩-೨೮
ಉಳಿದ ಸಹಚಾರೀ ಪಕ್ಷಿಗಳು ಕಾಂಪಿಲ್ಯನಗರದಲ್ಲಿಯೇ ಅತ್ಯಂತ ದರಿತ್ರ ಶ್ರೋತ್ರಿಯಕುಲದಲ್ಲಿ ಸಹೋದರರಾಗಿ ಹುಟ್ಟಿದರು.
ಧೃತಿಮಾನ್ಸುಮನಾ ವಿದ್ವಾಂಸ್ತತ್ತ್ವದರ್ಶೀ ಚ ನಾಮತಃ |
ವೇದಾಧ್ಯಯನಸಂಪನ್ನಾಶ್ಚತ್ವಾರಶ್ಛಿದ್ರದರ್ಶಿನಃ || ೧-೨೩-೨೯
ಆ ನಾಲ್ವರೂ ಧೃತಿಮಾನ್, ಸುಮನಾ, ವಿದ್ವಾನ್ ಮತ್ತು ತತ್ತ್ವದರ್ಶೀ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ವೇದಾಧ್ಯಯನ ಸಂಪನ್ನರಾಗಿದ್ದರು. ಅವರು ಯೋಗಸಾಧನಕ್ಕಾಗಿ ಗೃಹತ್ಯಾಗಮಾಡುವ ಅವಕಾಶವನ್ನು ಹುಡುಕುತ್ತಿದ್ದರು.
ತೇಷಾಂ ಸಂವಿತ್ತಥೋತ್ಪನ್ನಾ ಪೂರ್ವಜಾತಿಕೃತಾ ತದಾ |
ಯೇ ಯೋಗನಿರತಾಃ ಸಿದ್ಧಾಃ ಪ್ರಸ್ಥಿತಾಃ ಸರ್ವ ಏವ ಹಿ || ೧-೨೩-೩೦
ಅವರ ಹಿಂದಿನ ಜನ್ಮದಲ್ಲಿದ್ದ ವೈರಾಗ್ಯ ಬುದ್ಧಿಯು ಈ ಜನ್ಮದಲ್ಲಿಯೇ ಇದ್ದಿತ್ತು. ಅದರಿಂದ ಅವರೆಲ್ಲ ಸಿದ್ಧಪುರುಷರೂ ಯೋಗಪರಾಯಣರಾಗಿ ಮನೆಯಿಂದ ಹೊರಟರು.
ಆಮಂತ್ರ್ಯ ಪಿತರಂ ತಾತ ಪಿತಾ ತಾನಬ್ರವೀತ್ತದಾ |
ಅಧರ್ಮ ಏಷ ಯುಷ್ಮಾಕಂ ಯನ್ಮಾಂ ತ್ಯಕ್ತ್ವಾ ಗಮಿಷ್ಯಥ || ೧-೨೩-೩೧
ಅಯ್ಯಾ! ತಂದೆಯ ಆಜ್ಞೆಯನ್ನು ಕೇಳಲು ತಂದೆಯು ಅವರಿಗೆ ಹೇಳಿದನು: “ನನ್ನನ್ನು ಬಿಟ್ಟು ನೀವು ಹೋದರೆ ಅದು ನಿಮ್ಮ ಪಾಲಿಗೆ ಅಧರ್ಮವೇ ಆಗುತ್ತದೆ.
ದಾರಿದ್ರ್ಯಮನಪಾಕೃತ್ಯ ಪುತ್ರಾರ್ಥಾಂಶ್ಚೈವ ಪುಷ್ಕಲಾನ್ |
ಶುಶ್ರೂಷಾಮಪ್ರಯುಜ್ಯೈವ ಕಥಂ ವೈ ಗಂತುಮರ್ಹಥ || ೧-೨೩-೩೨
ನನ್ನ ದಾರಿದ್ರ್ಯವನ್ನು ಹೋಗಲಾಡಿಸದೇ ಪುಷ್ಕಲ ಪುತ್ರರ ಫಲವಾದ ಶುಶ್ರೂಷೆಯನ್ನೂ ಮಾಡದೇ ನೀವು ಹೇಗೆ ಹೊರಟುಹೋಗುವಿರಿ?”
ತೇ ತಮೂಚುರ್ದ್ವಿಜಾಃ ಸರ್ವೇ ಪಿತರಂ ಪುನರೇವ ಚ |
ಕರಿಷ್ಯಾಮೋ ವಿಧಾನಂ ತೇ ಯೇನ ತ್ವಂ ವರ್ತಯಿಷ್ಯಸಿ || ೧-೨೩-೩೩
ಆಗ ಆ ಎಲ್ಲ ದ್ವಿಜರೂ ತಂದೆಗೆ ಪುನಃ ಹೇಳಿದರು: “ನಾನು ನಿನ್ನ ಜೀವನಿರ್ವಹಣೆಗೆ ವ್ಯವಸ್ಥೆಯನ್ನು ಮಾಡುತ್ತೇವೆ.
ಇಮಂ ಶ್ಲೋಕಂ ಮಹಾರ್ಥಂ ತ್ವಂ ರಾಜಾನಂ ಸಹಮಂತ್ರಿಣಮ್ |
ಶ್ರಾವಯೇಥಾಃ ಸಮಾಗಮ್ಯ ಬ್ರಹ್ಮದತ್ತಮಕಲ್ಮಷಮ್ || ೧-೨೩-೩೪
ನೀನು ಅಕಲ್ಮಷ ರಾಜಾ ಬ್ರಹ್ಮದತ್ತನನ್ನು ಅವನ ಮಂತ್ರಿಗಳೊಂದಿಗೆ ಸಂದರ್ಶಿಸಿ ಮಹಾ ಅರ್ಥವುಳ್ಳ ಈ ಶ್ಲೋಕವನ್ನು ಅವನಿಗೆ ಕೇಳಿಸಬೇಕು.
ಪ್ರೀತಾತ್ಮಾ ದಾಸ್ಯತಿ ಸ ತೇ ಗ್ರಾಮಾನ್ಭೋಗಾಂಶ್ಚ ಪುಷ್ಕಲಾನ್ |
ಯಥೇಪ್ಸಿತಾಂಶ್ಚ ಸರ್ವಾರ್ಥಾನ್ಗಚ್ಛ ತಾತ ಯಥೇಪ್ಸಿತಮ್ || ೧-೨೩-೩೫
ಪ್ರೀತಾತ್ಮನಾದ ಅವನು ನಿನಗೆ ಪುಷ್ಕಲ ಗ್ರಾಮಗಳನ್ನೂ ಭೋಗಗಳನ್ನೂ ನೀನು ಬಯಸಿದ ಎಲ್ಲವನ್ನೂ ನೀಡುತ್ತಾನೆ. ತಂದೇ! ನೀನು ಬಯಸಿದಾಗ ಅವನ ಬಳಿ ಹೋಗು.”
ಏತಾವದುಕ್ತ್ವಾ ತೇ ಸರ್ವೇ ಪೂಜಯಿತ್ವಾ ಚ ತಂ ಗುರುಮ್ |
ಯೋಗಧರ್ಮಮನುಪ್ರಾಪ್ಯ ಪರಾಂ ನಿರ್ವೃತಿಮಾಯಯುಃ || ೧-೨೩-೩೬
ಹೀಗೆ ಹೇಳಿ ಅವರೆಲ್ಲರೂ ಆ ಗುರುವನ್ನು ಪೂಜಿಸಿ ಯೋಗಧರ್ಮವನ್ನು ಹೊಂದಿ ಪರಮ ನಿವೃತ್ತಿಯನ್ನು ಪಡೆದರು.”
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪಿತೃಕಲ್ಪೇ ತ್ರಯೋವಿಂಶೋಽಧ್ಯಾಯಃ

[1] ಸೂಕ್ಷ್ಮ ತತ್ತ್ವಗಳನ್ನು ತಿಳಿದುಕೊಳ್ಳಲು ಸಮರ್ಥನಾದವನು.
[2] ಬ್ರಹ್ಮನ ಸೂಕ್ಷ್ಮ ಸ್ವರೂಪದ ಜ್ಞಾನ (ಗೀತಾ ಪ್ರೆಸ್).