ಹರಿವಂಶ: ಹರಿವಂಶ ಪರ್ವ
ಸಪ್ತವಿಂಶೋಽಧ್ಯಾಯಃ
ಅಮಾವಸುವಂಶಕೀರ್ತನಮ್
19027001a ವೈಶಂಪಾಯನ ಉವಾಚ|
19027001a ಐಲಪುತ್ರಾ ಬಭೂವುಸ್ತೇ ಸರ್ವೇ ದೇವಸುತೋಪಮಾಃ |
19027001c ದಿವಿ ಜಾತಾ ಮಹಾತ್ಮಾನ ಆಯುರ್ಧೀಮಾನಮಾವಸುಃ ||
19027002a ವಿಶ್ವಾಯುಶ್ಚೈವ ಧರ್ಮಾತ್ಮಾ ಶ್ರುತಾಯುಶ್ಚ ತಥಾಪರಃ |
19027002c ಧೃಢಾಯುಶ್ಚ ವನಾಯುಶ್ಚ ಶತಾಯುಶ್ಚೋರ್ವಶೀಸುತಾಃ |
19027002e ಅಮಾವಸೋಶ್ಚ ದಾಯಾದೋ ಭೀಮೋ ರಾಜಾಥ ನಗ್ನಜಿತ್||
ವೈಶಂಪಾಯನನು ಹೇಳಿದನು: “ಐಲ ಪುರೂರವನ ಪುತ್ರರೆಲ್ಲರೂ ದೇವಸುತರಂತಿದ್ದರು. ಆ ಮಹಾತ್ಮರು ಸ್ವರ್ಗದಲ್ಲಿ ಹುಟ್ಟಿದ ಉರ್ವಶೀಸುತರಾಗಿದ್ದರು. ಅವರ ಹೆಸರುಗಳು ಇಂತಿವೆ: ಆಯು, ಧೀಮಾನ್ ಅಮಾವಸು, ವಿಶ್ವಾಯು, ಧರ್ಮಾತ್ಮಾ ಶ್ರುತಾಯು, ಅನಂತರ ಧೃಢಾಯು, ವನಾಯು, ಮತ್ತು ಶತಾಯು. ಅಮಾವಸುವಿಗೆ ರಾಜಾ ಭೀಮ ಮತ್ತು ನಗ್ನಜಿತ್ ಇವರು ಪುತ್ರರಾದರು.
19027003a ಶ್ರೀಮಾನ್ಭೀಮಸ್ಯ ದಾಯಾದೋ ರಾಜಾಸೀತ್ಕಾಂಚನಪ್ರಭಃ |
19027003c ವಿದ್ವಾಂಸ್ತು ಕಾಂಚನಸ್ಯಾಪಿ ಸುಹೋತ್ರೋಽಭೂನ್ಮಹಾಬಲಃ ||
ಭೀಮನ ಮಗನು ಶ್ರೀಮಾನ್ ರಾಜಾ ಕಾಂಚನಪ್ರಭನು. ಕಾಂಚನಪ್ರಭನ ಮಗನು ಮಹಾಬಲ ವಿದ್ವಾನ್ ಸುಹೋತ್ರ.
19027004a ಸೌಹೋತ್ರಿರಭವಜ್ಜಹ್ನುಃ ಕೇಶಿನ್ಯಾ ಗರ್ಭಸಂಭವಃ |
19027004c ಆಜಹ್ರೇ ಯೋ ಮಹತ್ಸತ್ರಂ ಸರ್ವಮೇಧಮಹಾಮಖಮ್ ||
ಸುಹೋತ್ರನಿಗೆ ಕೇಶಿನಿಯ ಗರ್ಭದಲ್ಲಿ ಜಹ್ನುವು ಹುಟ್ಟಿದನು. ಅವನು ಸರ್ವಮೇಧವೆನ್ನುವ ಮಹಾಮಖ ಮಹಾ ಸತ್ರವನ್ನು ನೆರವೇರಿಸಿದನು.
19027005a ಪತಿಲೋಭೇನ ಯಂ ಗಂಗಾ ಪತಿತ್ವೇಽಭಿಸಸಾರ ಹ |
19027005c ನೇಚ್ಛತಃ ಪ್ಲಾವಯಾಮಾಸ ತಸ್ಯ ಗಂಗಾ ಚ ತತ್ಸದಃ |
ಅವನನ್ನು ಪತಿಯನ್ನಾಗಿ ಪಡೆಯಲು ಬಯಸಿ ಗಂಗೆಯು ಪತಿತ್ವದಿಂದ ಅವನ ಬಳಿಸಾರಿದ್ದಳು. ಅವನು ಅವಳನ್ನು ಬಯಸದೇ ಇದ್ದಾಗ ಗಂಗೆಯು ಅವನ ಸಭೆಯನ್ನೇ ನೀರಿನಿಂದ ತುಂಬಿಸಿಬಿಟ್ಟಿದ್ದಳು.
19027005e ಸ ತಯಾ ಪ್ಲಾವಿತಂ ದೃಷ್ಟ್ವಾ ಯಜ್ಞವಾಟಂ ಸಮಂತತಃ ||
19027006a ಸೌಹಿತ್ರಿರಬ್ರವೀದ್ಗಂಗಾಂ ಕ್ರುದ್ಧೋ ಭರತಸತ್ತಮ ||
ಭರತಸತ್ತಮ! ಯಜ್ಞವಾಟಿಯನ್ನು ಎಲ್ಲಕಡೆಯಿಂದಲೂ ಮುಳುಗಿಸಿದುದನ್ನು ನೋಡಿ ಸೌಹಿತ್ರಿ ಜಹ್ನುವು ಕ್ರುದ್ಧನಾಗಿ ಗಂಗೆಗೆ ಹೇಳಿದನು:
19027007a ಏಷ ತೇ ವಿಫಲಂ ಯತ್ನಂ ಪಿಬನ್ನಂಭಃ ಕರೋಮ್ಯಹಮ್ |
19027007c ಅಸ್ಯ ಗಂಗೇಽವಲೇಪಸ್ಯ ಸದ್ಯಃ ಫಲಮವಾಪ್ನುಹಿ ||
“ಗಂಗೇ! ನಿನ್ನ ನೀರನ್ನು ಕುಡಿದು ನಾನು ನಿನ್ನ ಈ ಯತ್ನವನ್ನು ವಿಫಲಗೊಳಿಸುತ್ತೇನೆ. ಶೀಘ್ರದಲ್ಲಿಯೇ ನೀನು ನಿನ್ನ ಗರ್ವದ ಫಲವನ್ನು ಅನುಭವಿಸುತ್ತೀಯೆ!”
19027008a ರಾಜರ್ಷಿಣಾ ತತಃ ಪೀತಾಂ ಗಂಗಾಂ ದೃಷ್ಟ್ವಾ ಮಹರ್ಷಯಃ |
19027008c ಉಪನಿನ್ಯುರ್ಮಹಾಭಾಗಾಂ ದುಹಿತತ್ವೇನ ಜಾಹ್ನವೀಮ್ ||
ಆಗ ರಾಜರ್ಷಿಯು ಗಂಗೆಯನ್ನು ಕುಡಿದುದನ್ನು ನೋಡಿ ಮಹರ್ಷಿಗಳು ಮಹಾಭಾಗೆ ಗಂಗೆಯನ್ನು ಜಹ್ನುವಿನ ಮಗಳಾಗಿ ಜಾಹ್ಮವೀ ಎಂಬ ಹೆಸರಿನಿಂದ ಕರೆದರು.
19027009a ಯುವನಾಶ್ವಸ್ಯ ಪುತ್ರೀಂ ತು ಕಾವೇರೀಂ ಜಹ್ನುರಾವಹತ್ |
19027009c ಯುವನಾಶ್ವಸ್ಯ ಶಾಪೇನ ಗಂಗಾಽರ್ಧೇನ ವಿನಿರ್ಮಮೇ ||
19027010a ಕಾವೇರೀಂ ಸರಿತಾಂ ಶ್ರೇಷ್ಠಾಂ ಜಹ್ನೋರ್ಭಾರ್ಯಾಮನಿಂದಿತಾಮ್|
ಜಹ್ನುವು ಯುವನಾಶ್ವನ ಪುತ್ರಿ ಕಾವೇರಿಯನ್ನು ವಿವಾಹವಾಗಿದ್ದನು. ಯುವನಾಶ್ವನ ಶಾಪದಿಂದ ಗಂಗೆಯೇ ತನ್ನ ಅರ್ಧದಿಂದ ಕಾವೇರಿಯನ್ನು ಪ್ರಕಟಪಡಿಸಿದ್ದಳು. ಆ ನದಿಗಳಲ್ಲಿ ಶ್ರೇಷ್ಠೆ ಅನಿಂದಿತೆ ಕಾವೇರಿಯು ಜಹ್ನುವಿನ ಭಾರ್ಯೆಯಾಗಿದ್ದಳು.
19027010c ಜಹ್ನಸ್ತು ದಯಿತಂ ಪುತ್ರಂ ಸುನಹಂ ನಾಮ ಧಾರ್ಮಿಕಮ್ |
19027010e ಕಾವೇರ್ಯಾಂ ಜನಯಾಮಾಸ ಅಜಕಸ್ತಸ್ಯ ಚಾತ್ಮಜಃ ||
ಜಹ್ನುವು ಕಾವೇರಿಯಲ್ಲಿ ಸುನಹ ಎಂಬ ಹೆಸರಿನ ಧಾರ್ಮಿಕ ಪುತ್ರನನ್ನು ಹುಟ್ಟಿಸಿದನು. ಸುನಹನ ಪುತ್ರನು ಅಜಕ.
19027011a ಅಜಕಸ್ಯ ತು ದಾಯಾದೋ ಬಲಾಕಾಶ್ವೋ ಮಹೀಪತಿಃ |
19027011c ಬಭೂವ ಮೃಗಯಾಶೀಲಃ ಕುಶಸ್ತಸ್ಯಾತ್ಮಜೋಽಭವತ್ ||
ಅಜಕನ ಮಗನು ಮಹೀಪತಿ ಬಲಾಕಾಶ್ವನು. ಅವನು ಬೇಟೆಯಲ್ಲಿ ಆಸಕ್ತನಾಗಿದ್ದನು. ಕುಶನು ಅವನ ಮಗನಾದನು.
19027012a ಕುಶಪುತ್ರಾ ಬಭೂವುರ್ಹಿ ಚತ್ವಾರೋ ದೇವವರ್ಚಸಃ |
19027012c ಕುಶಿಕಃ ಕುಶನಾಭಶ್ಚ ಕುಶಾಂಬೋ ಮೂರ್ತಿಮಾಂಸ್ತಥಾ ||
ಕುಶನಿಗೆ ದೇವವರ್ಚಸರಾದ ನಾಲ್ವರು ಪುತ್ರರಾದರು: ಕುಶಿಕ, ಕುಶನಾಭ, ಕುಶಾಂಬ, ಮತ್ತು ಮೂರ್ತಿಮಾನ್.
19027013a ಪಹ್ಲವೈಃ ಸಹ ಸಂವೃದ್ಧಿಂ ರಾಜಾ ವನಚರೈಸ್ತದಾ |
19027013c ಕುಶಿಕಸ್ತು ತಪಸ್ತೇಪೇ ಪುತ್ರಮಿಂದ್ರಸಮಪ್ರಭಮ್ |
19027013e ಲಭೇಯಮಿತಿ ತಂ ಶಕ್ರಸ್ತ್ರಾಸಾದಭ್ಯೇತ್ಯ ಜಜ್ಞಿವಾನ್ ||
ರಾಜಾ ಕುಶಿಕನು ವನಚರರಾದ ಪಹ್ಲವರೊಂದಿಗೆ ಬೆಳೆದನು. ಅವನು ಇಂದ್ರನ ಸಮಪ್ರಭನಾದ ಮಗನನ್ನು ಪಡೆಯಲು ತಪಸ್ಸನ್ನು ತಪಿಸಿದನು. ಇಂದ್ರನು ಅವನ ಭಯದಿಂದ ಇಲ್ಲಿ ಅವನ ಪುತ್ರನಾಗಿ ಹುಟ್ಟಿಕೊಂಡನು.
19027014a ಪೂರ್ಣೇ ವರ್ಷಸಹಸ್ರೇ ವೈ ತಂ ತು ಶಕ್ರೋ ಹ್ಯಪಶ್ಯತ|
19027014c ಅತ್ಯುಗ್ರತಪಸಂ ದೃಷ್ಟ್ವಾ ಸಹಸ್ರಾಕ್ಷಃ ಪುರಂದರಃ ||
19027015a ಸಮರ್ಥಃ ಪುತ್ರಜನನೇ ಸ್ವಮೇವಾಂಶಮವಾಸಯತ್ |
19027015c ಪುತ್ರತ್ವೇ ಕಲ್ಪಯಾಮಾಸ ಸ ದೇವೇಂದ್ರಃ ಸುರೋತ್ತಮಃ ||
ಒಂದು ಸಹಸ್ರವರ್ಷಗಳು ಪೂರ್ಣವಾಗಲು ಕುಶಿಕನ ಉಗ್ರ ತಪಸ್ಸನ್ನು ನೋಡಿ ಸಹಸ್ರಾಕ್ಷ ಪುರಂದರನು ಸಮರ್ಥ ಪುತ್ರನಾಗಲೆಂದು ಅವನಲ್ಲಿ ತನ್ನ ಅಂಶವನ್ನು ಸ್ಥಾಪಿಸಿದನು. ಹೀಗೆ ಸುರೋತ್ತಮ ದೇವೇಂದ್ರನು ಅವನ ಪುತ್ರತ್ವವನ್ನು ಕಲ್ಪಿಸಿಕೊಂಡನು.
19027016a ಸ ಗಾಧಿರಭವದ್ರಾಜಾ ಮಘವಾನ್ಕೌಶಿಕಃ ಸ್ವಯಮ್ |
19027016c ಪೌರುಕುತ್ಸ್ಯಭವದ್ಭಾರ್ಯಾ ಗಾಧಿಸ್ತಸ್ಯಾಮಜಾಯತ ||
ಹೀಗೆ ಮಘವಾನ್ ಇಂದ್ರನು ಸ್ವಯಂ ಕುಶಿಕನ ಮಗ ಗಾಧಿರಾಜನಾಗಿ ಹುಟ್ಟಿದನು. ಕುಶಿಕನ ಪತ್ನಿ ಪುರುಕುತ್ಸನ ಮಗಳಲ್ಲಿ ಗಾಧಿಯು ಹುಟ್ಟಿದನು.
19027017a ಗಾಧೇಃ ಕನ್ಯಾ ಮಹಾಭಾಗಾ ನಾಮ್ನಾ ಸತ್ಯವತೀ ಶುಭಾ |
19027017c ತಾಂ ಗಾಧಿರ್ಭೃಗುಪುತ್ರಾಯ ಋಚೀಕಾಯ ದದೌ ಪ್ರಭುಃ ||
ಗಾಧಿಗೆ ಸತ್ಯವತೀ ಎಂಬ ಹೆಸರಿನ ಮಹಾಭಾಗೆ ಶುಭ ಕನ್ಯೆಯಿದ್ದಳು. ಅವಳನ್ನು ಪ್ರಭು ಗಾಧಿಯು ಭೃಗುಪುತ್ರ ಋಚೀಕನಿಗೆ ಕೊಟ್ಟನು.
19027018a ತಸ್ಯಾಃ ಪ್ರೀತೋಽಭವದ್ಭರ್ತಾ ಭಾರ್ಗವೋ ಭೃಗುನಂದನಃ|
19027018c ಪುತ್ರಾರ್ಥಂ ಕಾರಯಾಮಾಸ ಚರುಂ ಗಾಧೇಸ್ತಥೈವ ಚ ||
ಅವಳ ಮೇಲೆ ಪ್ರೀತನಾದ ಅವಳ ಪತಿ ಭೃಗುನಂದನ ಭಾರ್ಗವನು ಅವಳಿಗೆ ಮತ್ತು ಗಾಧಿಗೆ ಪುತ್ರರಾಗಲೆಂದು ಚರುವನ್ನು ಸಿದ್ಧಪಡಿಸಿದನು.
19027019a ಉವಾಚಾಹೂಯ ತಾಂ ಭರ್ತಾ ಋಚೀಕೋ ಭಾರ್ಗವಸ್ತದಾ|
19027019c ಉಪಯೋಜ್ಯಶ್ಚರುರಯಂ ತ್ವಯಾ ಮಾತ್ರಾ ತ್ವಯಂ ತವ ||
ಪತಿ ಭಾರ್ಗವ ಋಚೀಕನು ಅವಳನ್ನು ಕರೆದು ಹೇಳಿದನು: “ಈ ಚರುವನ್ನು ನೀನು ಉಪಯೋಗಿಸು ಮತ್ತು ನಿನ್ನ ತಾಯಿಗೂ ಉಪಯೋಗಿಸಲು ಹೇಳು.
19027020a ತಸ್ಯಾಂ ಜನಿಷ್ಯತೇ ಪುತ್ರೋ ದೀಪ್ತಿಮಾನ್ಕ್ಷತ್ರಿಯರ್ಷಭಃ |
19027020c ಅಜೇಯಃ ಕ್ಷತ್ರಿಯೈರ್ಲೋಕೇ ಕ್ಷತ್ರಿಯರ್ಷಭಸೂದನಃ ||
ಅವಳಲ್ಲಿ ದೀಪ್ತಿಮಾನ್ ಕ್ಷತ್ರಿಯರ್ಷಭ ಪುತ್ರನು ಜನಿಸುತ್ತಾನೆ. ಆ ಕ್ಷತ್ರಿಯರ್ಷಭಸೂದನನು ಲೋಕದ ಕ್ಷತ್ರಿಯರಿಗೆ ಅಜೇಯನಾಗುತ್ತಾನೆ.
19027021a ತವಾಪಿ ಪುತ್ರಂ ಕಲ್ಯಾಣಿ ಧೃತಿಮಂತಂ ತಪೋನಿಧಿಮ್ |
19027021c ಶಮಾತ್ಮಕಂ ದ್ವಿಜಶ್ರೇಷ್ಠಂ ಚರುರೇಷ ವಿಧಾಸ್ಯತಿ ||
ಕಲ್ಯಾಣೀ! ನೀನಾದರೋ ದೃತಿಮಂತ ತಪೋನಿಧಿಯನ್ನು ಪುತ್ರನನ್ನಾಗಿ ಪಡೆಯುತ್ತೀಯೆ. ಈ ಚರುವು ನಿನಗೆ ಶಮಾತ್ಮಕ ದ್ವಿಜಶ್ರೇಷ್ಠನನ್ನು ನೀಡುತ್ತದೆ.”
19027022a ಏವಮುಕ್ತ್ವಾ ತು ತಾಂ ಭಾರ್ಯಾಮೃಚೀಕೋ ಭೃಗುನಂದನಃ|
19027022c ತಪಸ್ಯಾಭಿರತೋ ನಿತ್ಯಮರಣ್ಯಂ ಪ್ರವಿವೇಶ ಹ ||
ತನ್ನ ಪತ್ನಿಗೆ ಹೀಗೆ ಹೇಳಿ ಭೃಗುನಂದನ ಋಚೀಕನು ನಿತ್ಯವೂ ತಪಸ್ಸಿನಲ್ಲಿಯೇ ತೊಡಗಿಸಿಕೊಳ್ಳಲು ಅರಣ್ಯವನ್ನು ಪ್ರವೇಶಿಸಿದನು.
19027023a ಗಾಧಿಃ ಸದಾರಸ್ತು ತದಾ ಋಚೀಕಾವಾಸಮಭ್ಯಗಾತ್ |
19027023c ತೀರ್ಥಯಾತ್ರಾಪ್ರಸಂಗೇನ ಸುತಾಂ ದ್ರಷ್ಟುಂ ಜನೇಶ್ವರಃ ||
ಅದೇ ಸಮಯದಲ್ಲಿ ಜನೇಶ್ವರ ಗಾಧಿಯಾದರೋ ತನ್ನ ಪತ್ನಿಯೊಡನೆ ಮಗಳನ್ನು ನೋಡಲು ತೀರ್ಥಯಾತ್ರಾಪ್ರಸಂಗದಿಂದ ಋಚೀಕನ ಆಶ್ರಮಕ್ಕೆ ಆಗಮಿಸಿದನು.
19027024a ಚರುದ್ವಯಂ ಗೃಹೀತ್ವಾ ತದೃಷೇಃ ಸತ್ಯವತೀ ತದಾ |
19027024c ಚರುಮಾದಾಯ ಯತ್ನೇನ ಸಾ ತು ಮಾತ್ರೇ ನ್ಯವೇದಯತ್ ||
ಆಗ ಸತ್ಯವತಿಯು ಋಷಿಯು ಕೊಟ್ಟಿದ್ದ ಆ ಎರಡು ಚರುಗಳ ಪಾತ್ರೆಯನ್ನು ತಂದು ತಾಯಿಯ ಮುಂದೆ ಇರಿಸಿದಳು.
19027025a ಮಾತಾ ವ್ಯತ್ಯಸ್ಯ ದೈವೇನ ದುಹಿತ್ರೇ ಸ್ವಂ ಚರುಂ ದದೌ |
19027025c ತಸ್ಯಾಶ್ಚರುಮಥಾಜ್ಞಾನಾದಾತ್ಮಸಂಸ್ಥಂ ಚಕಾರ ಹ ||
ಮಾತೆಯು ದೈವವಶಾತ್ ತನ್ನ ಚರುವನ್ನು ಮಗಳಿಗೆ ಕೊಟ್ಟಳು ಮತ್ತು ಅವಳ ಚರುವನ್ನು ಅಜ್ಞಾನದಿಂದ ತಾನು ತಿಂದಳು.
19027026a ಅಥ ಸತ್ಯವತೀ ಗರ್ಭಂ ಕ್ಷತ್ರಿಯಾಂತಕರಂ ತದಾ
19027026c ಧಾರಯಾಮಾಸ ದೀಪ್ತೇನ ವಪುಷಾ ಘೋರದರ್ಶನಮ್ ||
ಆಗ ಸತ್ಯವತಿಯು ಕ್ಷತ್ರಿಯಾಂತಕ ಗರ್ಭವನ್ನು ಧರಿಸಿ, ಬೆಳಗುತ್ತಿದ್ದ ಮುಖವುಳ್ಳವಳಾಗಿ ಘೋರಳಾಗಿ ಕಾಣುತ್ತಿದ್ದಳು.
19027027a ತಾಮೃಚೀಕಸ್ತತೋ ದೃಷ್ಟ್ವಾ ಯೋಗೇನಾಭ್ಯನುಸೃತ್ಯ ಚ |
19027027c ತಾಮಬ್ರವೀದ್ದ್ವಿಜಶ್ರೇಷ್ಠಃ ಸ್ವಾಂ ಭಾರ್ಯಾಂ ವರವರ್ಣಿನೀಮ್ ||
ಅವಳನ್ನು ನೋಡಿ ಯೋಗದಿಂದಲೇ ಋಚೀಕನು ಎಲ್ಲವನ್ನೂ ತಿಳಿದುಕೊಂಡನು. ಆ ದ್ವಿಜಶ್ರೇಷ್ಠನು ತನ್ನ ವರವರ್ಣಿನೀ ಭಾರ್ಯೆಗೆ ಹೇಳಿದನು:
19027028a ಮಾತ್ರಾಸಿ ವಂಚಿತಾ ಭದ್ರೇ ಚರುವ್ಯತ್ಯಾಸಹೇತುನಾ |
19027028c ಜನಿಷ್ಯತಿ ಹಿ ಪುತ್ರಸ್ತೇ ಕ್ರೂರಕರ್ಮಾತಿದಾರುಣಃ ||
“ಭದ್ರೇ! ತಾಯಿಯಿಂದ ನೀನು ವಂಚಿತಳಾದೆ. ಚರುವಿನಲ್ಲಿ ಅದಲುಬದಲು ಮಾಡಿದುದರಿಂದ ನೀನು ಅತಿದಾರುಣ ಕ್ರೂರಕರ್ಮಿ ಪುತ್ರನನ್ನು ಹುಟ್ಟಿಸುತ್ತೀಯೆ.
19027029a ಭ್ರಾತಾ ಜನಿಷ್ಯತೇ ಚಾಪಿ ಬ್ರಹ್ಮಭೂತಸ್ತಪೋಧನಃ |
19027029c ವಿಶ್ವಂ ಹಿ ಬ್ರಹ್ಮತಪಸಾ ಮಯಾ ತಸ್ಮಿನ್ಸಮರ್ಪಿತಮ್ ||
ನಿನಗೆ ಹುಟ್ಟುವ ತಮ್ಮನು ಬ್ರಹ್ಮಭೂತ ತಪೋಧನನಾಗುತ್ತಾನೆ. ಏಕೆಂದರೆ ನಾನು ಅದರಲ್ಲಿ ಬ್ರಹ್ಮತಪಸ್ಸಿನಿಂದ ವಿಶ್ವವನ್ನೇ ಅರ್ಪಿಸಿದ್ದೆ.”
19027030a ಏವಮುಕ್ತಾ ಮಹಾಭಾಗಾ ಭರ್ತ್ರಾ ಸತ್ಯವತೀ ತದಾ |
19027030c ಪ್ರಸಾದಯಾಮಾಸ ಪತಿಂ ಪುತ್ರೋ ಮೇ ನೇದೃಶೋ ಭವೇತ್|
19027030e ಬ್ರಾಹ್ಮಣಾಪಸದಸ್ತತ್ರ ಇತ್ಯುಕ್ತೋ ಮುನಿರಬ್ರವೀತ್ ||
ಪತಿಯು ಹೀಗೆ ಹೇಳಲು ಮಹಾಭಾಗೆ ಸತ್ಯವತಿಯು “ನನ್ನ ಪುತ್ರನು ಹಾಗೆ ಬ್ರಾಹ್ಮಣಾಧಮನು ಆಗದಿರಲಿ!” ಎಂದು ಅವನನ್ನು ಬೇಡಿಕೊಂಡಳು. ಆಗ ಮುನಿಯು ಹೇಳಿದನು:
19027031a ನೈಷ ಸಂಕಲ್ಪಿತಃ ಕಾಮೋ ಮಯಾ ಭದ್ರೇ ತಥಾಸ್ತ್ವಿತಿ |
19027031c ಉಗ್ರಕರ್ಮಾ ಭವೇತ್ಪುತ್ರಃ ಪಿತುರ್ಮಾತುಶ್ಚ ಕಾರಣಾತ್ |
19027031e ಪುನಃ ಸತ್ಯವತೀ ವಾಕ್ಯಮೇವಮುಕ್ತಾಬ್ರವೀದಿದಂ ||
ಮಾತಾಪಿತೃಗಳ ಕಾರಣದಿಂದಲೇ ಪುತ್ರನು ಉಗ್ರಕರ್ಮಿಯಾಗುತ್ತಾನೆ. ಭದ್ರೇ! ನಾನಾದರೋ ಅದನ್ನು ಬಯಸಿ ಸಂಕಲ್ಪಿಸಿರಲಿಲ್ಲ. ಆದರೆ ಅದು ಹಾಗೆಯೇ ಆಗುತ್ತದೆ.” ಇದನ್ನು ಕೇಳಿದ ಸತ್ಯವತಿಯು ಪುನಃ ಅವನಿಗೆ ಹೇಳಿದಳು:
19027032a ಇಚ್ಛಽನ್ಲೋಕಾನಪಿ ಮುನೇ ಸೃಜೇಥಾಃ ಕಿಂ ಪುನಃ ಸುತಮ್|
19027032c ಶಮಾತ್ಮಕಮೃಜುಂ ತ್ವಂ ಮೇ ಪುತ್ರಂ ದಾತುಮಿಹಾರ್ಹಸಿ ||
“ಮುನೇ! ಇಚ್ಛಿಸಿದರೆ ನೀನು ಲೋಕಗಳನ್ನೂ ಸೃಷ್ಟಿಸಬಲ್ಲೆ. ಇನ್ನು ಮಗನ ಕುರಿತೇನು? ನೀನು ನನಗೆ ಶಮಾತ್ಮಕ ಸರಳ ಪುತ್ರನನ್ನೇ ನೀಡಬೇಕು.
19027033a ಕಾಮಮೇವಂವಿಧಃ ಪೌತ್ರೋ ಮಮ ಸ್ಯಾತ್ತವ ಚ ಪ್ರಭೋ |
19027033c ಯದ್ಯನ್ಯಥಾ ನ ಶಕ್ಯಂ ವೈ ಕರ್ತುಮೇತದ್ದ್ವಿಜೋತ್ತಮ ||
ಪ್ರಭೋ! ದ್ವಿಜೋತ್ತಮ! ಒಂದುವೇಳೆ ಇದನ್ನು ಅನ್ಯಥಾ ಮಾಡಲು ಶಕ್ಯವಿಲ್ಲವೆಂದಾದರೆ ಈ ತರಹದವನು ನಮ್ಮ ಮೊಮ್ಮಗನಾಗಲಿ!”
19027034a ತತಃ ಪ್ರಸಾದಮಕರೋತ್ಸ ತಸ್ಯಾಸ್ತಪಸೋ ಬಲಾತ್ |
19027034c ಭದ್ರೇ ನಾಸ್ತಿ ವಿಶೇಷೋ ಮೇ ಪೌತ್ರೇ ಚ ವರವರ್ಣಿನಿ|
19027034e ತ್ವಯಾ ಯಥೋಕ್ತಂ ವಚನಂ ತಥಾ ಭದ್ರಂ ಭವಿಷ್ಯತಿ ||
ಆಗ ಅವನು ತನ್ನ ತಪೋಬಲದಿಂದ ಅವಳ ಮೇಲೆ ಕೃಪೆದೋರಿ ಹೇಳಿದನು: “ಭದ್ರೇ! ವರವರ್ಣಿನಿ! ನನಗೆ ಪುತ್ರ ಮತ್ತು ಪೌತ್ರರಲ್ಲಿ ವಿಶೇಷ ವ್ಯತ್ಯಾಸವೇನೂ ಕಾಣುವುದಿಲ್ಲ. ಆದರೂ ನೀನು ಏನು ಹೇಳಿದೆಯೋ ಹಾಗೆಯೇ ಆಗುತ್ತದೆ.”
19027035a ತತಃ ಸತ್ಯವತೀ ಪುತ್ರಂ ಜನಯಾಮಾಸ ಭಾರ್ಗವಮ್ |
19027035c ತಪಸ್ಯಾಭಿರತಂ ದಾಂತಂ ಜಮದಗ್ನಿಂ ಶಮಾತ್ಮಕಮ್ ||
ಅನಂತರ ಸತ್ಯವತಿಯು ಜಿತೇಂದ್ರಿಯನೂ, ಮನೋನಿಗ್ರಹನೂ, ತಪಸ್ಸಿನಲ್ಲಿಯೇ ನಿರತನಾಗಿರುವವನೂ ಆದ ಭಾರ್ಗವ ಜಮದಗ್ನಿಗೆ ಜನ್ಮವಿತ್ತಳು.
19027036a ಭೃಗೋಶ್ಚರುವಿಪರ್ಯಾಸೇ ರೌದ್ರವೈಷ್ಣವಯೋಃ ಪುರಾ |
19027036c ಯಜನಾದ್ವೈಷ್ಣವೇಽಥಾಂಶೇ ಜಮದಗ್ನಿರಜಾಯತ ||
ಹಿಂದೆ ಭೃಗುಗಳ ಚರುವಿನಲ್ಲಿ ರುದ್ರ ಮತ್ತು ವಿಷ್ಣುಗಳ ಅಂಶವು ವ್ಯತ್ಯಾಸವಾಗಿದುದರಿಂದ ಆ ವೈಷ್ಣವ ಅಂಶದಿಂದ ಜಮದಗ್ನಿಯು ಹುಟ್ಟಿದನು.
19027037a ಸಾ ಹಿ ಸತ್ಯವತೀ ಪುಣ್ಯಾ ಸತ್ಯಧರ್ಮಪರಾಯಣಾ |
19027037c ಕೌಶಿಕೀತಿ ಸಮಾಖ್ಯಾತಾ ಪ್ರವೃತ್ತೇಯಂ ಮಹಾನದೀ ||
ಸತ್ಯಧರ್ಮಪರಾಯಣೆ ಪುಣ್ಯೆ ಸತ್ಯವತಿಯು ಕೌಶಿಕೀ ಎಂಬ ಹೆಸರಿನಿಂದ ಪ್ರಖ್ಯಾತ ಮಹಾನದಿಯಾದಳು.
19027038a ಇಕ್ಷ್ವಾಕುವಂಶಪ್ರಭವೋ ರೇಣುರ್ನಾಮ ನರಾಧಿಪಃ |
19027038c ತಸ್ಯ ಕನ್ಯಾ ಮಹಾಭಾಗಾ ಕಾಮಲೀ ನಾಮ ರೇಣುಕಾ ||
ಇಕ್ಷ್ವಾಕು ವಂಶದಲ್ಲಿ ರೇಣು ಎಂಬ ನರಾಧಿಪನು ಇದ್ದನು. ಅವನ ಕನ್ಯೆ ಮಹಾಭಾಗೆ ರೇಣುಕಾ ಅಥವಾ ಕಾಮಲೀ ಎಂಬ ಹೆಸರಿನವಳು.
19027039a ರೇಣುಕಾಯಾಂ ತು ಕಾಮಲ್ಯಾಂ ತಪೋವಿದ್ಯಾಸಮನ್ವಿತಃ |
19027039c ಆರ್ಚಿಕೋ ಜನಯಾಮಾಸ ಜಾಮದಗ್ನ್ಯಂ ಸುದಾರುಣಮ್ ||
19027040a ಸರ್ವವಿದ್ಯಾನುಗಂ ಶ್ರೇಷ್ಠಂ ಧನುರ್ವೇದಸ್ಯ ಪಾರಗಮ್ |
19027040c ರಾಮಂ ಕ್ಷತ್ರಿಯಹಂತಾರಂ ಪ್ರದೀಪ್ತಮಿವ ಪಾವಕಮ್ ||
ಋಚೀಕನ ಮಗ ತಪೋವಿದ್ಯಾಸಮನ್ವಿತ ಜಮದಗ್ನಿಯು ರೇಣುಕಾ ಅಥವಾ ಕಾಮಲಿಯಲ್ಲಿ ಸುದಾರುಣ, ಸರ್ವವಿದ್ಯಾನುಗ ಶ್ರೇಷ್ಠ ಧನುರ್ವೇದ ಪಾರಗ ಕ್ಷತ್ರಿಯ ಹಂತಾರ ಮತ್ತು ಪಾವಕನಂತೆ ಪ್ರದೀಪ್ತತೇಜಸ್ವೀ ಜಾಮದಗ್ನಿ ರಾಮನನ್ನು ಹುಟ್ಟಿಸಿದನು.
19027041a ಔರ್ವಸ್ಯೈವಮೃಚೀಕಸ್ಯ ಸತ್ಯವತ್ಯಾಂ ಮಹಾಯಶಾಃ |
19027041c ಜಮದಗ್ನಿಸ್ತಪೋವೀರ್ಯಾಜ್ಜಜ್ಞೇ ಬ್ರಹ್ಮವಿದಾಂ ವರಃ ||
19027042a ಮಧ್ಯಮಶ್ಚ ಶುನಃಶೇಪಃ ಶುನಃಪುಚ್ಛಃ ಕನಿಷ್ಠಕಃ |
ಹೀಗೆ ಔರ್ವನೆಂದೂ ಪ್ರಸಿದ್ಧನಾಗಿದ್ದ ಮಹಾಯಶಸ್ವೀ ಋಚೀಕನಿಗೆ ಅವನ ತಪೋವೀರ್ಯದಿಂದ ಸತ್ಯವತಿಯಲ್ಲಿ ಬ್ರಹ್ಮವಿದರಲ್ಲಿ ಶ್ರೇಷ್ಠ ಜಮದಗ್ನಿಯು ಜನಿಸಿದನು. ಋಚೀಕನ ಮಧ್ಯಮ ಮಗನು ಶುನಃಶೇಪ ಮತ್ತು ಕಿರಿಯವನು ಶುನಃಪುಚ್ಛ.
19027042c ವಿಶ್ವಾಮಿತ್ರಂ ತು ದಾಯಾದಂ ಗಾಧಿಃ ಕುಶಿಕನಂದನಃ ||
19027043a ಜನಯಾಮಾಸ ಪುತ್ರಂ ತು ತಪೋವಿದ್ಯಾಶಮಾತ್ಮಕಮ್ |
19027043c ಪ್ರಾಪ್ಯ ಬ್ರಹ್ಮರ್ಷಿಸಮತಾಂ ಯೋಽಯಂ ಸಪ್ತರ್ಷಿತಾಂ ಗತಃ||
ಕುಶಿಕನಂದನ ಗಾಧಿಯು ತಪೋವಿದ್ಯಾಶಮಾತ್ಮಕ ವಿಶ್ವಾಮಿತ್ರನನ್ನು ಪುತ್ರನನ್ನಾಗಿ ಪಡೆದನು. ಅವನು ಬ್ರಹ್ಮರ್ಷಿಸಮತ್ವವನ್ನು ಪಡೆದು ಸಪ್ತರ್ಷಿಗಳಲ್ಲಿ ಒಬ್ಬನಾದನು.
19027044a ವಿಶ್ವಾಮಿತ್ರಸ್ತು ಧರ್ಮಾತ್ಮಾ ನಾಮ್ನಾ ವಿಶ್ವರಥಃ ಸ್ಮೃತಃ |
19027044c ಜಜ್ಞೇ ಭೃಗುಪ್ರಸಾದೇನ ಕೌಶಿಕಾದ್ವಂಶವರ್ಧನಃ ||
ಧರ್ಮಾತ್ಮಾ ವಿಶ್ವಾಮಿತ್ರನು ವಿಶ್ವರಥ ಎಂಬ ಹೆಸರಿನಿಂದಲೂ ಪ್ರಖ್ಯಾತನಾಗಿದ್ದಾನೆ. ಆ ಕೌಶಿಕರ ವಂಶವರ್ಧನನು ಭಾರ್ಗವ ಋಚೀಕನ ಪ್ರಸಾದದಿಂದ ಜನಿಸಿದನು.
19027045a ವಿಶ್ವಾಮಿತ್ರಸ್ಯ ಚ ಸುತಾ ದೇವರಾತಾದಯಃ ಸ್ಮೃತಾಃ |
19027045c ಪ್ರಖ್ಯಾತಾಸ್ತ್ರಿಷು ಲೋಕೇಷು ತೇಷಾಂ ನಾಮಾನಿ ಮೇ ಶೃಣು||
ವಿಶ್ವಾಮಿತ್ರನಿಗೆ ದೇವರಾತನೇ ಮೊದಲಾದ ಅನೇಕ ಪುತ್ರರಿದ್ದರೆಂದು ಹೇಳುತ್ತಾರೆ. ಮೂರು ಲೋಕಗಳಲ್ಲಿಯೂ ಪ್ರಖ್ಯಾತರಾಗಿದ್ದ ಅವರ ಹೆಸರುಗಳನ್ನು ಕೇಳು.
19027046a ದೇವಶ್ರವಾಃ ಕತಿಶ್ಚೈವ ಯಸ್ಮಾತ್ಕಾತ್ಯಾಯನಾಃ ಸ್ಮೃತಾಃ |
19027046c ಶಾಲಾವತ್ಯಾಂ ಹಿರಣ್ಯಾಕ್ಷೋ ರೇಣೋರ್ಜಜ್ಞೇಽಥ ರೇಣುಮಾನ್ ||
19027047a ಸಾಂಕೃತಿರ್ಗಾಲವಶ್ಚೈವ ಮುದ್ಗಲಶ್ಚೇತಿ ವಿಶ್ರುತಾಃ |
19027047c ಮಧುಚ್ಛಂದೋ ಜಯಶ್ಚೈವ ದೇವಲಶ್ಚ ತಥಾಷ್ಟಕಃ ||
19027048a ಕಚ್ಛಪೋ ಹಾರಿತಶ್ಚೈವ ವಿಶ್ವಾಮಿತ್ರಸ್ಯ ವೈ ಸುತಾಃ |
19027048c ತೇಷಾಂ ಖ್ಯಾತಾನಿ ಗೋತ್ರಾಣಿ ಕೌಶಿಕಾನಾಂ ಮಹಾತ್ಮನಾಮ್ ||
ದೇವಶ್ರವಾ, ಕಾತ್ಯಾಯನ ಗೋತ್ರಪ್ರವರ್ತಕ ಕತಿ, ಮತ್ತು ಹಿರಣ್ಯಾಕ್ಷ – ಈ ಮೂವರೂ ಶಾಲಾವತಿಯ ಗರ್ಭದಲ್ಲಿ ಜನಿಸಿದರು. ರೇಣುವಿನಲ್ಲಿ ರೇಣುಮಾನ್, ಸಾಂಕೃತಿ, ಗಾಲವ, ಮುದ್ಗಲ, ಮದುಚ್ಛಂದ, ಜಯ, ಮತ್ತು ದೇವಲರು ಜನಿಸಿದರು. ಅಷ್ಟಕ[1], ಕಚ್ಛಪ ಮತ್ತು ಹಾರಿತ ಇವರೂ ಕೂಡ ವಿಶ್ವಾಮಿತ್ರನ ಪುತ್ರರು. ಈ ಕೌಶಿಕವಂಶೀ ಮಹಾತ್ಮರ ಗೋತ್ರಗಳು ಇಂತಿವೆ:
19027049a ಪಾಣಿನೋ ಬಭ್ರವಶ್ಚೈವ ಧ್ಯಾನಜಪ್ಯಾಸ್ತಥೈವ ಚ |
19027049c ಪಾರ್ಥಿವಾ ದೇವರಾತಾಶ್ಚ ಶಾಲಂಕಾಯನಬಾಷ್ಕಲಾಃ ||
19027050a ಲೋಹಿತಾ ಯಮದೂತಾಶ್ಚ ತಥಾ ಕಾರೀಷವಃ ಸ್ಮೃತಾಃ |
19027050c ಸೌಶ್ರುತಾಃ ಕೌಶಿಕಾ ರಾಜಂಸ್ತಥಾನ್ಯೇ ಸೈಂಧವಾಯನಾಃ ||
19027051a ದೇವಲಾ ರೇಣವಶ್ಚೈವ ಯಾಜ್ಞ್ಯವಲ್ಕ್ಯಾಘಮರ್ಷಣಾಃ |
19027051c ಔದುಂಬರಾ ಹ್ಯಭಿಷ್ಣಾತಾಸ್ತಾರಕಾಯನಚುಂಚುಲಾಃ ||
19027052a ಶಾಲಾವತ್ಯಾ ಹಿರಣ್ಯಾಕ್ಷಾಃ ಸಾಂಕೃತ್ಯಾ ಗಾಲವಾಸ್ತಥಾ |
19027052c ಬಾದರಾಯಣಿನಶ್ಚಾನ್ಯೇ ವಿಶ್ವಾಮಿತ್ರಸ್ಯ ಧೀಮತಃ ||
ರಾಜನ್! ಪಾಣಿನ, ಬಭ್ರು, ಧ್ಯಾನಜಪ್ಯ, ಪಾರ್ಥಿವ, ದೇವರಾತ, ಶಾಲಂಕಾಯನ, ಬಾಷ್ಕಲ, ಲೋಹಿತಾ, ಯಮದೂತ, ಕಾರೀಷು, ಸೌಶ್ರುತ, ಕೌಶಿಕ, ಸೈಂಧವಾಯನ, ದೇವಲ, ರೇಣು, ಯಾಜ್ಞವಲ್ಕ್ಯ, ಅಘಮರ್ಷಣ, ಔದುಂಬರ, ಅವಿಷ್ಣಾತಾ, ತಾರಕಾಯನ, ಚುಂಚುಲ, ಶಾಲಾವತ್ಯ, ಹಿರಣ್ಯಾಕ್ಷಾ, ಸಾಂಕೃತ್ಯ, ಗಾಲವ ಮತ್ತು ಬಾದರಾಯಣಿ – ಇವರು ಮತ್ತು ಅನ್ಯರು ವಿಶ್ವಾಮಿತ್ರನ ಧೀಮಂತ ಪುತ್ರರು.
19027053a ಋಷ್ಯಂತರವಿವಾಹ್ಯಾಶ್ಚ ಕೌಶಿಕಾ ಬಹವಃ ಸ್ಮೃತಾಃ |
19027053c ಪೌರವಸ್ಯ ಮಹಾರಾಜ ಬ್ರಹ್ಮರ್ಷಿಃ ಕೌಶಿಕಸ್ಯ ಚ |
19027053e ಸಂಬಂಧೋಽಪ್ಯಸ್ಯ ವಂಶೇಽಸ್ಮಿನ್ಬ್ರಹ್ಮಕ್ಷತ್ರಸ್ಯ ವಿಶ್ರುತಃ ||
ಇತರ ಋಷಿಕುಲಗಳೊಂದಿಗೆ ವಿವಾಹಯೋಗ್ಯರಾದ ಕೌಶಿಕರು ಬಹಳ ಎಂದು ಹೇಳುತ್ತಾರೆ. ಮಹಾರಾಜ! ಹೀಗೆ ಪುರೂರವನ ಮತ್ತು ಬ್ರಹ್ಮರ್ಷಿ ಕೌಶಿಕನ ವಂಶದಲ್ಲಿ ಬ್ರಹ್ಮ-ಕ್ಷತ್ರರ ವಿಶ್ರುತ ಸಂಬಂಧವಿತ್ತು.
19027054a ವಿಶ್ವಾಮಿತ್ರಾತ್ಮಜಾನಾಂ ತು ಶುನಃಶೇಪೋಽಗ್ರಜಃ ಸ್ಮೃತಃ |
19027054c ಭಾರ್ಗವಃ ಕೌಶಿಕತ್ವಂ ಹಿ ಪ್ರಾಪ್ತಃ ಸ ಮುನಿಸತ್ತಮಃ ||
ವಿಶ್ವಾಮಿತ್ರನ ಮಕ್ಕಳಲ್ಲಿ ಶುನಃಶೇಪನು ಅಗ್ರಜನೆಂದು ಹೇಳುತ್ತಾರೆ. ಆ ಮುನಿಸತ್ತಮ ಶುನಃಶೇಪನು ಭಾರ್ಗವನಾಗಿದ್ದರೂ ಕೌಶಿಕತ್ವವನ್ನು ಪಡೆದುಕೊಂಡನು[2].
19027055a ವಿಶ್ವಾಮಿತ್ರಸ್ಯ ಪುತ್ರಸ್ತು ಶುನಃಶೇಪೋಽಭವತ್ಕಿಲ |
19027055c ಹರಿದಶ್ವಸ್ಯ ಯಜ್ಞೇ ತು ಪಶುತ್ವೇ ವಿನಿಯೋಜಿತಃ ||
ಹರಿದಶ್ವನ[3] ಯಜ್ಞದಲ್ಲಿ ಪಶುತ್ವದಿಂದ ವಿನಿಯೋಜಿತನಾಗಿದ್ದ ಶುನಃಶೇಪನು ವಿಶ್ವಾಮಿತ್ರನ ಪುತ್ರನಾಗಲಿಲ್ಲವೇ?
19027056a ದೇವೈರ್ದತ್ತಃ ಶುನಃಶೇಪೋ ವಿಶ್ವಾಮಿತ್ರಾಯ ವೈ ಪುನಃ |
19027056c ದೇವೈರ್ದತ್ತಃ ಸ ವೈ ಯಸ್ಮಾದ್ದೇವರಾತಸ್ತತೋಽಭವತ್ ||
ದೇವತೆಗಳು ಶುನಃಶೇಪನನ್ನು ಪುನಃ ವಿಶ್ವಾಮಿತ್ರನಿಗೆ ಕೊಟ್ಟರು. ದೇವತೆಗಳು ಕೊಟ್ಟಿದ್ದುದರಿಂದ ಅವನು ದೇವರಾತ[4]ನಾದನು.
19027057a ದೇವರಾತಾದಯಃ ಸಪ್ತ ವಿಶ್ವಾಮಿತ್ರಸ್ಯ ವೈ ಸುತಾಃ |
19027057c ದೃಷದ್ವತೀಸುತಶ್ಚಾಪಿ ವಿಶ್ವಾಮಿತ್ರಾತ್ತಥಾಷ್ಟಕಃ ||
ದೇವರಾತನೇ ಮೊದಲಾದವರು ವಿಶ್ವಾಮಿತ್ರನ ಏಳು ಪುತ್ರರು. ದೃಷದ್ವತಿ[5]ಯ ಮಗನು ವಿಶ್ವಾಮಿತ್ರನ ಎಂಟನೆಯ ಪುತ್ರ ಅಷ್ಟಕನು.
19027056a ಅಷ್ಟಕಸ್ಯ ಸುತೋ ಲೌಹಿಃ ಪ್ರೋಕ್ತೋ ಜಹ್ನುಗಣೋ ಮಯಾ |
19027056c ಅಥ ಊರ್ಧ್ವಂ ಪ್ರವಕ್ಷ್ಯಾಮಿ ವಂಶಮಾಯೋರ್ಮಹಾತ್ಮನಃ||
ಅಷ್ಟಕನ ಸುತನು ಲೌಹಿ ಎಂದು ಹೇಳುತ್ತಾರೆ. ನಾನು ನಿನಗೆ ಜಹ್ನುಕುಲದ ವರ್ಣನೆಯನ್ನು ಮಾಡಿದೆ. ಇನ್ನು ಮುಂದೆ ಮಹಾತ್ಮ ಆಯುವಿನ ವಂಶದ ಕುರಿತು ಹೇಳುತ್ತೇನೆ.”
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಅಮಾವಸುವಂಶಕೀರ್ತನಂ ನಾಮ ಸಪ್ತವಿಂಶೋಽಧ್ಯಾಯಃ|

[1] ದೃಷದ್ವತೀ ಅಥವಾ ಮಾಧವಿಯ ಪುತ್ರ.
[2] ಶುನಃಶೇಪನು ಜಮದಗ್ನಿಯ ಮಗನಾಗಿದ್ದರೂ ವಿಶ್ವಾಮಿತ್ರನ ಪುತ್ರತ್ವವನ್ನು ಪಡೆದುಕೊಂಡನು.
[3] ಹರಿಶ್ಚಂದ್ರ.
[4] ದೈವೈಃ ರಾತಃ – ದೇವರಾತಃ!
[5] ಯಯಾತಿಯ ಮಗಳು ಮಾಧವಿಯ ಇನ್ನೊಂದು ಹೆಸರು.