Harivamsha: Chapter 25

ಹರಿವಂಶ: ಹರಿವಂಶ ಪರ್ವ

ಪಂಚವಿಂಶೋಽಧ್ಯಾಯಃ

ಸೋಮೋತ್ಪತ್ತಿವರ್ಣನಮ್

19025001 ವೈಶಂಪಾಯನ ಉವಾಚ|

19025001a ಪಿತಾ ಸೋಮಸ್ಯ ವೈ ರಾಜಂಜಜ್ಞೇಽತ್ರಿರ್ಭಗವಾನೃಷಿಃ |

19025001c ಬ್ರಹ್ಮಣೋ ಮಾನಸಾತ್ಪೂರ್ವಂ ಪ್ರಜಾಸರ್ಗಂ ವಿಧಿತ್ಸತಃ ||

ವೈಶಂಪಾಯನನು ಹೇಳಿದನು: “ರಾಜನ್! ಹಿಂದೆ ಬ್ರಹ್ಮನು ಪ್ರಜಾಸೃಷ್ಟಿಯನ್ನು ನಡೆಸುತ್ತಿದ್ದಾಗ ಅವನ ಮನಸ್ಸಿನಿಂದ ಸೋಮನ ಪಿತ ಭಗವಾನ್ ಋಷಿ ಅತ್ರಿಯ ಜನ್ಮವಾಯಿತು.

19025002a ತತ್ರಾತ್ರಿಃ ಸರ್ವಭೂತಾನಾಂ ತಸ್ಥೌ ಸ್ವತನಯೈರ್ಯುತಃ |

19025002c ಕರ್ಮಣಾ ಮನಸಾ ವಾಚಾ ಶುಭಾನ್ಯೇವ ಚಚಾರ ಸಃ ||

ಆಗ ಅತ್ರಿಯು ತನ್ನ ಮಗನೊಂದಿಗೆ, ಕರ್ಮ-ಮನಸ್ಸು-ಮಾತುಗಳಲ್ಲಿ ಸರ್ವಭೂತಗಳಿಗೂ ಶುಭವನ್ನಾಗುವುದನ್ನೇ ಆಚರಿಸುತ್ತಿದ್ದರು.

19025003a ಅಹಿಂಸ್ರಃ ಸರ್ವಭೂತೇಷು ಧರ್ಮಾತ್ಮಾ ಸಂಶಿತವ್ರತಃ |

19025003c ಕಾಷ್ಠಕುಡ್ಯಶಿಲಾಭೂತ ಊರ್ಧ್ವಬಾಹುರ್ಮಹಾದ್ಯುತಿಃ ||

19025004a ಅನುತ್ತರಂ ನಾಮ ತಪೋ ಯೇನ ತಪ್ತಂ ಮಹತ್ಪುರಾ |

19025004c ತ್ರೀಣಿ ವರ್ಷಸಹಸ್ರಾಣಿ ದಿವ್ಯಾನೀತಿ ಹಿ ನಃ ಶ್ರುತಮ್ ||

ಆ ಧರ್ಮಾತ್ಮಾ ಸಂಶಿತವ್ರತ ಮಹಾದ್ಯುತಿ ಅತ್ರಿಯು ಸರ್ವಭೂತಗಳಲ್ಲಿಯೂ ಅಹಿಂಸಾಭಾವದಿಂದ ಬಾಹುಗಳನ್ನು ಮೇಲಕ್ಕೆತ್ತಿ ಕಟ್ಟಿಗೆ, ಗೋಡೆ ಅಥವಾ ಶಿಲೆಯಂತೆ ಮೂರು ಸಹಸ್ರ ದಿವ ವರ್ಷಗಳು ಅನುತ್ತರ ಎಂಬ ಹೆಸರಿನ ಮಹಾ ತಪಸ್ಸನ್ನು ತಪಿಸಿದನು ಎಂದು ಕೇಳಿದ್ದೇವೆ.

19025005a ತತ್ರೋರ್ಧ್ವರೇತಸಸ್ತಸ್ಯ ಸ್ಥಿತಸ್ಯಾನಿಮಿಷಸ್ಯ ಹ |

19025005c ಸೋಮತ್ವಂ ತನುರಾಪೇದೇ ಮಹಾಸತ್ತ್ವಸ್ಯ ಭಾರತ ||

ಭಾರತ! ಆ ಮಹಾಸತ್ತ್ವನು ರೆಪ್ಪೆಬಡಿಯದೇ ಊರ್ಧ್ವರೇತಸನಾಗಿ ನಿಂತಿರಲು ಅವನ ದೇಹವು ಸೋಮತ್ವವನ್ನು ಪಡೆದುಕೊಂಡಿತು.

19025006a ಊರ್ಧ್ವಮಾಚಕ್ರಮೇ ತಸ್ಯ ಸೋಮತ್ವಂ ಭಾವಿತಾತ್ಮನಃ |

19025006c ನೇತ್ರಾಭ್ಯಾಂ ವಾರಿ ಸುಸ್ರಾವ ದಶಧಾ ದ್ಯೋತಯದ್ದಿಶಃ ||

ಆ ಭಾವಿತಾತ್ಮನ ಸೋಮತ್ವವು ಅವನ ಎರಡೂ ಕಣ್ಣುಗಳಿಂದ ನೀರಾಗಿ ಸುರಿದು ಹತ್ತು ದಿಕ್ಕುಗಳನ್ನೂ ಪ್ರಕಾಶಗೊಳಿಸುತ್ತಾ ಆಕಾಶವನ್ನೇರತೊಡಗಿತು.

19025007a ತಂ ಗರ್ಭಂ ವಿಧಿನಾ ಹೃಷ್ಟಾ ದಶ ದೇವ್ಯೋ ದಧುಸ್ತದಾ |

19025007c ಸಮೇತ್ಯ ಧಾರಯಾಮಾಸುರ್ನ ಚ ತಾಃ ಸಮಶಕ್ನುವನ್ ||

ಆ ಗರ್ಭವನ್ನು ವಿಧಿವತ್ತಾಗಿ ದಶದಿಕ್ಕಿನ ದೇವಿಯರು ಹೃಷ್ಟರಾಗಿ ಒಂದಾಗಿ ಧಾರಣೆಮಾಡಿಕೊಂಡರು. ಆದರೆ ಅವರಿಗೆ ಅದನ್ನು ಧಾರಣೆಮಾಡಿಕೊಳ್ಳಲು ಶಕ್ಯವಾಗಲಿಲ್ಲ.

19025008a ಸ ತಾಭ್ಯಃ ಸಹಸೈವಾಥ ದಿಗ್ಭ್ಯೋ ಗರ್ಭಃ ಪ್ರಭಾನ್ವಿತಃ |

19025008c ಪಪಾತ ಭಾಸಯನ್ಲೋಕಾಂಶೀತಾಂಶುಃ ಸರ್ವಭಾವನಃ ||

ಕೂಡಲೇ ಆ ದಿಶಾದೇವಿಯರ ಪ್ರಭಾನ್ವಿತ ಗರ್ಭದಿಂದ ಸರ್ವಭಾವನ ಶೀತಾಂಶುವು ಲೋಕಗಳನ್ನು ಬೆಳಗುತ್ತಾ ಕೆಳಕ್ಕುರುಳಿದನು.

19025009a ಯದಾ ನ ಧಾರಣೇ ಶಕ್ತಾಸ್ತಸ್ಯ ಗರ್ಭಸ್ಯ ತಾ ದಿಶಃ |

19025009c ತತಸ್ತಾಭಿಃ ಸಹೈವಾಶು ನಿಪಪಾತ ವಸುಂಧರಾಮ್ ||

ಅವನ ಗರ್ಭವನ್ನು ಧರಿಸಲು ಅಶಕ್ಯರಾದ ಆ ದಿಶಗಳು ಅವನೊಂದಿಗೆ ಕೂಡಲೇ ಮಸುಂಧರೆಯ ಮೇಲೆ ಬಿದ್ದರು.

19025010a ಪತಿತಂ ಸೋಮಮಾಲೋಕ್ಯ ಬ್ರಹ್ಮಾ ಲೋಕಪಿತಾಮಹಃ |

19025010c ರಥಮಾರೋಪಯಾಮಾಸ ಲೋಕಾನಾಂ ಹಿತಕಾಮ್ಯಯಾ ||

ಬೀಳುತ್ತಿದ್ದ ಸೋಮನನ್ನು ನೋಡಿದ ಲೋಕಪಿತಾಮಹ ಬ್ರಹ್ಮನು ಲೋಕಗಳ ಹಿತವನ್ನು ಬಯಸಿ ಅವನನ್ನು ಒಂದು ರಥದಲ್ಲಿ ಏರಿಸಿದನು.

19025011a ಸ ಹಿ ವೇದಮಯಸ್ತಾತ ಧರ್ಮಾತ್ಮಾ ಸತ್ಯಸಂಗ್ರಹಃ |

19025011c ಯುಕ್ತೋ ವಾಜಿಸಹಸ್ರೇಣ ಸಿತೇನೇತಿ ಹಿ ನಃ ಶ್ರುತಮ್ ||

ಅಯ್ಯಾ! ಆ ರಥವು ವೇದಮಯವೂ, ಧರ್ಮಾತ್ಮವೂ ಮತ್ತು ಸತ್ಯಸಂಗ್ರಹವೂ ಆಗಿದ್ದಿತು. ಅದಕ್ಕೆ ಸಾವಿರ ಶ್ವೇತವರ್ಣದ ಕುದುರೆಗಳನ್ನು ಕಟ್ಟಲಾಗಿತ್ತು ಎಂದು ನಾವು ಕೇಳಿದ್ದೇವೆ.

19025012a ತಸ್ಮಿನ್ನಿಪತಿತೇ ದೇವಾಃ ಪುತ್ರೇಽತ್ರೇಃ ಪರಮಾತ್ಮನಿ |

19025012c ತುಷ್ಟುವುರ್ಬ್ರಹ್ಮಣಃ ಪುತ್ರಾ ಮಾನಸಾಃ ಸಪ್ತ ಯೇ ಶ್ರುತಾಃ ||

ಅತ್ರಿಯ ಪುತ್ರ ಪರಮಾತ್ಮನು ಹಾಗೆ ಬೀಳುತ್ತಿರುವಾಗ ದೇವತೆಗಳು ಮತ್ತು ಬ್ರಹ್ಮನ ಏಳು ವೇದಪಾರಂಗತ ಮಾನಸಪುತ್ರರು ಸ್ತುತಿಸತೊಡಗಿದರು.

19025013a ತಥೈವಾಂಗಿರಸಸ್ತತ್ರ ಭೃಗುರೇವಾತ್ಮಜೈಃ ಸಹ |

19025013c ಋಗ್ಭಿರ್ಯಜುರ್ಭಿರ್ಬಹುಲೈರಥರ್ವಾಂಗಿರಸೈರಪಿ ||

ಹಾಗೆಯೇ ಆಂಗಿರಸ ಮತ್ತು ಭೃಗು ಇವರು ತಮ್ಮ ಮಕ್ಕಳೊಂದಿಗೆ ಋಗ್ವೇದ-ಯಜುರ್ವೇದ-ಅಥರ್ವ ವೇದಗಳಿಂದ ಬಹಳವಾಗಿ ಸೋಮನ ಸ್ತುತಿಗೈದರು.

19025014a ತಸ್ಯ ಸಂಸ್ತೂಯಮಾನಸ್ಯ ತೇಜಃ ಸೋಮಸ್ಯ ಭಾಸ್ವತಃ |

19025014c ಆಪ್ಯಾಯಮಾನಂ  ಲೋಕಾಂಸ್ತ್ರೀನ್ಭಾಸಯಾಮಾಸ ಸರ್ವಶಃ ||

ಅವರು ಹಾಗೆ ಸ್ತುತಿಸುತ್ತಿರಲು ಬೆಳಗುತ್ತಿದ್ದ ಸೋಮನ ತೇಜಸ್ಸು ಮೂರುಲೋಕಗಳನ್ನೂ ಸಂತೋಷಗೊಳಿಸುತ್ತಾ ಎಲ್ಲಕಡೆ ಬೆಳಗತೊಡಗಿತು.

19025015a ಸ ತೇನ ರಥಮುಖ್ಯೇನ ಸಾಗರಾಂತಾಂ ವಸುಂಧರಾಮ್ |

19025015c ತ್ರಿಃಸಪ್ತಕೃತ್ವೋಽತಿಯಶಾಶ್ಚಕಾರಾಭಿಪ್ರದಕ್ಷಿಣಮ್ ||

ಆ ಅತಿಯಶಸ್ವಿಯು ಆ ರಥಮುಖ್ಯದಲ್ಲಿ ಸೋಮನನ್ನು ಇಪ್ಪತ್ತೊಂದು ಬಾರಿ ಸಾಗರಾಂತಿಕೆ ವಸುಂಧರೆಯ ಪ್ರದಕ್ಷಿಣೆಯನ್ನು ಮಾಡಿಸಿದನು.

19025016a ತಸ್ಯ ಯಚ್ಚ್ಯಾವಿತಂ ತೇಜಃ ಪೃಥಿವೀಮನ್ವಪದ್ಯತ |

19025016c ಓಷಧ್ಯಸ್ತಾಃ ಸಮುದ್ಭೂತಾಸ್ತೇಜಸಾ ಪ್ರಜ್ವಲಂತ್ಯುತ ||

ಸೋಮನ ರಥದಿಂದ ಕೆಳಗೆ ಬಿದ್ದ ತೇಜಸ್ಸಿನ ಬಿಂದುಗಳು ಭೂಮಿಯನ್ನು ಸೇರಿ ಪ್ರಕಾಶಪೂರ್ಣ ಓಷಧಿಗಳು ಹುಟ್ಟಿಕೊಂಡವು.

19025017a ತಾಭಿರ್ಧಾರ್ಯಾಸ್ತ್ರಯೋ ಲೋಕಾಃ ಪ್ರಜಾಶ್ಚೈವ ಚತುರ್ವಿಧಾಃ |

19025017c ಪೋಷ್ಟಾ ಹಿ ಭಗವಾನ್ಸೋಮೋ ಜಗತೋ ಜಗತೀಪತೇ ||

ಜಗತೀಪತೇ! ಅವುಗಳಿಂದ ಭೂಲೋಕ-ಭುವರ್ಲೋಕ ಮತ್ತು ಸ್ವರ್ಗಲೋಕಗಳೆಂಬ ಮೂರು ಲೋಕಗಳೂ, ಜರಾಯುಜ-ಅಂಡಜ-ಸ್ವೇದಜ ಮತ್ತು ಉದ್ವಿಜ ಈ ನಾಲ್ಕು ವಿಧದ ಜೀವಿಗಳ ಪೋಷಣೆಯೂ ನಡೆಯುತ್ತದೆ. ಭಗವಾನ್ ಸೋಮನಿಂದಲೇ ಜಗತ್ತಿನ ಪೋಷಣೆಯ ನಡೆಯುತ್ತದೆ.

19025018a ಸ ಲಬ್ಧತೇಜಾ ಭಗವಾನ್ಸಂಸ್ತವೈಸ್ತೈಶ್ಚ ಕರ್ಮಭಿಃ |

19025018c ತಪಸ್ತೇಪೇ ಮಹಾಭಾಗ ಪದ್ಮಾನಾಂ ದಶತೀರ್ದಶ ||

ಅಂಥಹ ಸ್ತವ ಕರ್ಮಗಳಿಂದ ತೇಜಸ್ಸನ್ನು ಪಡೆದ ಭಗವಾನ್ ಸೋಮನು ಒಂದು ಸಾವಿರ ಪದ್ಮ ವರ್ಷಗಳ ಪರ್ಯಂತ ತಪಸ್ಸನ್ನು ತಪಿಸಿದನು.

19025019a ಹಿರಣ್ಯವರ್ಣಾಂ ಯಾ ದೇವ್ಯೋ ಧಾರಯಂತ್ಯಾತ್ಮನಾ ಜಗತ್|

19025019c ನಿಧಿಸ್ತಾಸಾಮಭೂದ್ದೇವಃ ಪ್ರಖ್ಯಾತಃ ಸ್ವೇನ ಕರ್ಮಣಾ ||

ತನ್ನದೇ ಕರ್ಮಗಳಿಂದ ಪ್ರಖ್ಯಾತ ಸೋಮನು ಜಗತ್ತನ್ನು ತಮ್ಮ ಆತ್ಮಗಳಿಂದ ಧರಿಸಿರುವ ಹಿರಣ್ಯವರ್ಣದ ದೇವಿಯರ ನಿಧಿಯಾದನು.

19025020a ತತಸ್ತಸ್ಮೈ ದದೌ ರಾಜ್ಯಂ ಬ್ರಹ್ಮಾ ಬ್ರಹ್ಮವಿದಾಂ ವರಃ |

19025020c ಬೀಜೌಷಧೀನಾಂ ವಿಪ್ರಾಣಾಮಪಾಂ ಚ ಜನಮೇಜಯ ||

ಜನಮೇಜಯ! ಅನಂತರ ಬ್ರಹ್ಮವಿದರಲ್ಲಿ ಶ್ರೇಷ್ಠ ಬ್ರಹ್ಮನು ಸೋಮನಿಗೆ ಬೀಜ, ಔಷಧಿ, ವಿಪ್ರರು ಮತ್ತು ಜಲದ ರಾಜ್ಯಾಧಿಕಾರವನ್ನು ವಹಿಸಿದನು.

19025021a ಸೋಽಭಿಷಿಕ್ತೋ ಮಹಾರಾಜ ರಾಜರಾಜ್ಯೇನ ರಾಜರಾಟ್ |

19025021c ಲೋಕಾಂಸ್ತ್ರೀನ್ಭಾಸಯಾಮಾಸ ಸ್ವಭಾಸಾ ಭಾಸ್ವತಾಂ ವರಃ ||

ಮಹಾರಾಜ! ಹೊಳೆಯುವವರಲ್ಲಿ ಶ್ರೇಷ್ಠನಾದ ಸೋಮನು ರಾಜರಾಜ್ಯದ ರಾಜನಾಗಿ ಅಭಿಷಿಕ್ತನಾಗಲು ತನ್ನದೇ ಕಾಂತಿಯಿಂದ ಮೂರು ಲೋಕಗಳನ್ನೂ ಬೆಳಗತೊಡಗಿದನು.

19025022a ಸಪ್ತವಿಂಶತಿಮಿಂದೋಸ್ತು ದಾಕ್ಷಾಯಣ್ಯೋ ಮಹಾವ್ರತಾಃ |

19025022c ದದೌ ಪ್ರಾಚೇತಸೋ ದಕ್ಷೋ ನಕ್ಷತ್ರಾಣೀತಿ ಯಾ ವಿದುಃ ||

ಪ್ರಾಚೇತಸ ದಕ್ಷನು ಮಹಾವ್ರತೆಯರಾದ ಇಪ್ಪತ್ತೇಳು ದಾಕ್ಷಾಯಿಣಿಯರನ್ನು ಇಂದುವಿಗೆ ಕೊಟ್ಟನು. ಅವರು ನಕ್ಷತ್ರಗಳೆಂದೂ ತಿಳಿಯಲ್ಪಟ್ಟಿದ್ದಾರೆ.

19025023a ಸ ತತ್ಪ್ರಾಪ್ಯ ಮಹದ್ರಾಜ್ಯಂ ಸೋಮಃ ಸೋಮವತಾಂ ವರಃ |

19025023c ಸಮಾಜಹ್ರೇ ರಾಜಸೂಯಂ ಸಹಸ್ರಶತದಕ್ಷಿಣಮ್ ||

ಸೋಮವಂತರಲ್ಲಿ ಶ್ರೇಷ್ಠ ಸೋಮನು ಆ ಮಹಾರಾಜ್ಯವನ್ನು ಪಡೆದುಕೊಂಡು ಲಕ್ಷ ದಕ್ಷಿಣೆಗಳಿದ್ದ ರಾಜಸೂಯವನ್ನು ನೆರವೇರಿಸಿದನು.

19025024a ಹೋತಾಽಸ್ಯ ಭಗವಾನತ್ರಿರಧ್ವರ್ಯುರ್ಭಗವಾನ್ಭೃಗುಃ |

19025024c ಹಿರಣ್ಯಗರ್ಭಶ್ಚೋದ್ಗಾತಾ ಬ್ರಹ್ಮಾ ಬ್ರಹ್ಮತ್ವಮೇಯಿವಾನ್ ||

ಆ ಯಜ್ಞದಲ್ಲಿ ಭಗವಾನ್ ಅತ್ರಿಯು ಹೋತನಾಗಿದ್ದನು. ಭಗವಾನ್ ಭೃಗುವು ಅಧ್ವರ್ಯುವಾಗಿದ್ದನು. ಹಿರಣ್ಯಗರ್ಭನು ಉದ್ಗಾತನಾಗಿದ್ದನು. ವಸಿಷ್ಠನು ಬ್ರಹ್ಮತ್ವವನ್ನು ವಹಿಸಿದ್ದನು.

19025025a ಸದಸ್ಯಸ್ತತ್ರ ಭಗವಾನ್ಹರಿರ್ನಾರಾಯಣಃ ಸ್ವಯಮ್ |

19025025c ಸನತ್ಕುಮಾರಪ್ರಮುಖೈರಾದ್ಯೈರ್ಬ್ರಹ್ಮರ್ಷಿಭಿರ್ವೃತಃ ||

ಅಲ್ಲಿ ಸನತ್ಕುಮಾರರೇ ಮೊದಲಾದ ಆದಿ ಬ್ರಹ್ಮರ್ಷಿಗಳು ಸ್ವಯಂ ಭಗವಾನ್ ಹರಿ ನಾರಾಯಣನನ್ನು ಸದಸ್ಯನನ್ನಾಗಿ ಮಾಡಿದ್ದರು.

19025026a ದಕ್ಷಿಣಾಮದದಾತ್ಸೋಮಸ್ತ್ರೀನ್ಲೋಕಾನಿತಿ ನಃ ಶ್ರುತಮ್ |

19025026c ತೇಭ್ಯೋ ಬ್ರಹ್ಮರ್ಷಿಮುಖ್ಯೇಭ್ಯಃ ಸದಸ್ಯೇಭ್ಯಶ್ಚ ಭಾರತ ||

ಭಾರತ! ಆ ಬ್ರಹ್ಮರ್ಷಿಮುಖ್ಯ ಸದಸ್ಯರಲ್ಲಿ ಕೆಲವರಿಗೆ ಸೋಮನು ಮೂರುಲೋಕಗಳನ್ನೂ ದಕ್ಷಿಣೆಯನ್ನಾಗಿ ಕೊಟ್ಟಿದ್ದನೆಂದು ನಾವು ಕೇಳಿದ್ದೇವೆ.

19025027a ತಂ ಸಿನಿಶ್ಚ ಕುಹೂಶ್ಚೈವ ದ್ಯುತಿಃ ಪುಷ್ಟಿಃ ಪ್ರಭಾ ವಸುಃ

19025027c ಕೀರ್ತಿರ್ಧೃತಿಶ್ಚ ಲಕ್ಶ್ಮೀಶ್ಚ ನವ ದೇವ್ಯಃ ಸಿಷೇವಿರೇ ||

ಆಗ ಸಿನಿವಾಲೀ, ಕುಹೂ, ದ್ಯುತಿ, ಪುಷ್ಟಿ, ಪ್ರಭಾ, ವಸು, ಕೀರ್ತಿ, ಧೃತಿ ಮತ್ತು ಲಕ್ಷ್ಮಿ ಈ ನವ ದೇವಿಯರು ಸೋಮನ ಸೇವೆಗೈಯುತ್ತಿದ್ದರು.

19025028a ಪ್ರಾಪ್ಯಾವಭೃಥಮವ್ಯಗ್ರಃ ಸರ್ವದೇವರ್ಷಿಪೂಜಿತಃ |

19025028c ವಿರರಾಜಾಧಿರಾಜೇಂದ್ರೋ ದಶಧಾ ಭಾಸಯಂದಿಶಃ ||

ಈ ರೀತಿ ಸರ್ವದೇವರ್ಷಿಪೂಜಿತನಾದ ಆ ಅವ್ಯಗ್ರ ಅಧಿರಾಜೇಂದ್ರನು ಅವಭೃತವನ್ನು ಪಡೆದು ಹತ್ತೂ ದಿಕ್ಕುಗಳನ್ನೂ ಬೆಳಗತೊಡಗಿದನು.

19025029a ತಸ್ಯ ತತ್ಪ್ರಾಪ್ಯ ದುಷ್ಪ್ರಾಪ್ಯಮೈಶ್ವರ್ಯಂ ಮುನಿಸತ್ಕೃತಮ್ |

19025029c ವಿಬಭ್ರಾಮ ಮತಿಸ್ತಾತ ವಿನಯಾದನಯಾಽಽಹತಾ ||

ಅಯ್ಯಾ! ಮುನಿಸತ್ಕೃತವಾದ ಅಂತಹ ದುಷ್ಪ್ರಾಪ್ಯ ಐಶ್ವರ್ಯವನ್ನು ಪಡೆದು ಸೋಮನ ಮತಿಯು ವಿನಯದಿಂದ ಭ್ರಷ್ಟಗೊಂಡಿತು ಮತ್ತು ಅನೀತಿಯು ಅವನನ್ನು ಆವರಿತು.

19025030a ಬೃಹಸ್ಪತೇಃ ಸ ವೈ ಭಾರ್ಯಾಂ ತಾರಾಂ ನಾಮ ಯಶಸ್ವಿನೀಮ್ |

19025030c ಜಹಾರ ತರಸಾ ಸರ್ವಾನವಮತ್ಯಾಂಗಿರಃಸುತಾನ್ ||

ಅನಂತರ ಅವನು ಅಂಗಿರಸನ ಮಕ್ಕಳೆಲ್ಲರನ್ನೂ ತಿರಸ್ಕರಿಸಿ ಅವಸರದಲ್ಲಿ ಬೃಹಸ್ಪತಿಯ ಭಾರ್ಯೆ ತಾರಾ ಎಂಬ ಹೆಸರಿನ ಯಶಸ್ವಿನಿಯನ್ನು ಬಲಪೂರ್ವಕವಾಗಿ ಅಪಹರಿಸಿದನು.

19025031a ಸ ಯಾಚ್ಯಮಾನೋ ದೇವೈಶ್ಚ ಯಥಾ ದೇವರ್ಷಿಭಿಃ ಸಹ |

19025031c ನೈವ ವ್ಯಸರ್ಜಯತ್ತಾರಾಂ ತಸ್ಮಾ ಆಂಗಿರಸೇ ತದಾ |

19025031e ಸ ಸಂರಬ್ಧಸ್ತತಸ್ತಸ್ಮಿಂದೇವಾಚಾರ್ಯೋ ಬೃಹಸ್ಪತಿಃ ||

ದೇವತೆಗಳು ಮತ್ತು ದೇವರ್ಷಿಗಳು ಕೂಡಿ ಬೇಡಿಕೊಂಡರೂ ಅವನು ತಾರೆಯನ್ನು ಆಂಗಿರಸನಿಗೆ ಬಿಟ್ಟುಕೊಡಲಿಲ್ಲ. ಆಗ ದೇವತೆಗಳ ಆಚಾರ್ಯ ಬೃಹಸ್ಪತಿಯಾದರೋ ಸೋಮನ ಮೇಲೆ ಅತ್ಯಂತ ಕುಪಿತನಾದನು.

19025032a ಉಶನಾ ತಸ್ಯ ಜಗ್ರಾಹ ಪಾರ್ಷ್ಣಿಮಾಂಗಿರಸಸ್ತದಾ |

19025032c ಸ ಹಿ ಶಿಷ್ಯೋ ಮಹಾತೇಜಾಃ ಪಿತುಃ ಪೂರ್ವೋ ಬೃಹಸ್ಪತೇಃ||

ಆಗ ಉಶನ ಶುಕ್ರನು ಚಂದ್ರನ ಪಕ್ಷವನ್ನೂ ರುದ್ರನು ಆಂಗಿರಸ ಬೃಹಸ್ಪತಿಯ ಪಕ್ಷವನ್ನೂ ಸೇರಿಕೊಂಡರು. ಮಹಾತೇಜಸ್ವೀ ರುದ್ರನು ಹಿಂದೆ ಬೃಹಸ್ಪತಿಯ ತಂದೆಯ ಶಿಷ್ಯನಾಗಿದ್ದನು.

19025033a ತೇನ ಸ್ನೇಹೇನ ಭಗವಾನ್ರುದ್ರಸ್ತಸ್ಯ ಬೃಹಸ್ಪತೇಃ |

19025033c ಪಾರ್ಷ್ಣಿಗ್ರಾಹೋಽಭವದ್ದೇವಃ ಪ್ರಗೃಹ್ಯಾಜಗವಂ ಧನುಃ ||

ಅದೇ ಸ್ನೇಹದಿಂದ ಭಗವನ್ ರುದ್ರ ದೇವನು ಅಜಗವ ಧನುಸ್ಸನ್ನು ಹಿಡಿದು ಬೃಹಸ್ಪತಿಯ ಪಕ್ಷವನ್ನು ಸೇರಿಕೊಂಡನು.

19025034a ತೇನ ಬ್ರಹ್ಮಶಿರೋ ನಾಮ ಪರಮಾಸ್ತ್ರಂ ಮಹಾತ್ಮನಾ |

19025034c ಉದ್ದಿಶ್ಯ ದೈತ್ಯಾನುತ್ಸೃಷ್ಟಂ ಯೇನೈಷಾಂ ನಾಶಿತಂ ಯಶಃ ||

ಮಹಾತ್ಮ ರುದ್ರನು ದೈತ್ಯರನ್ನು ಉದ್ದೇಶಿಸಿ ಬ್ರಹ್ಮಶಿರವೆಂಬ ಹೆಸರಿನ ಪರಮಾಸ್ತ್ರವನ್ನು ಪ್ರಯೋಗಿಸಿ ಅವರ ಯಶಸ್ಸನ್ನು ನಾಶಗೊಳಿಸಿದನು.

19025035a ತತ್ರ ತದ್ಯುದ್ಧಮಭವತ್ಪ್ರಖ್ಯಾತಂ ತಾರಕಾಮಯಮ್ |

19025035c ದೇವಾನಾಂ ದಾನವಾನಾಂ ಚ ಲೋಕಕ್ಷಯಕರಂ ಮಹತ್ ||

ಅಲ್ಲಿ ದೇವತೆಗಳ ಮತ್ತು ದಾನವರ ಲೋಕಕ್ಷಯಕಾರಕ ಮಹಾ ಯುದ್ಧವು ನಡೆಯಿತು. ಆ ಯುದ್ಧವು ತಾರಕಾಮಯ ಯುದ್ಧವೆಂದು ಪ್ರಖ್ಯಾತವಾಯಿತು.

19025036a ತತ್ರ ಶಿಷ್ಟಾಸ್ತು ಯೇ ದೇವಾಸ್ತುಷಿತಾಶ್ಚೈವ ಭಾರತ |

19025036c ಬ್ರಹ್ಮಾಣಂ ಶರಣಂ ಜಗ್ಮುರಾದಿದೇವಂ ಸನಾತನಮ್ ||

ಭಾರತ! ಅಲ್ಲಿ ಅಳಿದುಳಿದ ದೇವ ಮತ್ತು ತುಷಿತ ಗಣಗಳು ಆದಿದೇವ ಸನಾತನ ಬ್ರಹ್ಮನ ಶರಣು ಹೊಕ್ಕರು.

19025037a ತತೋ ನಿವಾರ್ಯೋಶನಸಂ ರುದ್ರಂ ಜ್ಯೇಷ್ಠಂ ಚ ಶಂಕರಮ್ |

19025037c ದದಾವಂಗಿರಸೇ ತಾರಾಂ ಸ್ವಯಮೇವ ಪಿತಾಮಹಃ ||

ಅಗ ಪಿತಾಮಹನು ಉಶಸನ ಮತ್ತು ರುದ್ರ ಜ್ಯೇಷ್ಠ ಶಂಕರರನ್ನು ಯುದ್ಧಮಾಡುವುದರಿಂದ ನಿಲ್ಲಿಸಿ ಸ್ವಯಂ ತಾನೇ ತಾರೆಯನ್ನು ಆಂಗಿರಸ ಬೃಹಸ್ಪತಿಗಿತ್ತನು.

19025038a ತಾಮಂತಃಪ್ರಸವಾಂ ದೃಷ್ಟ್ವಾ ತಾರಾಂ ಪ್ರಾಹ ಬೃಹಸ್ಪತಿಃ|

19025038c ಮದೀಯಾಯಾಂ ನ ತೇ ಯೋನೌ ಗರ್ಭೋ ಧಾರ್ಯಃ ಕಥಂಚನ ||

ಅವಳು ಗರ್ಭಿಣಿಯಾಗಿದ್ದುದನ್ನು ನೋಡಿ ಬೃಹಸ್ಪತಿಯು ತಾರೆಗೆ ಹೇಳಿದನು: “ನನ್ನದಾದ ಯೋನಿಯಲ್ಲಿ ಪರರ ಗರ್ಭವನ್ನು ನೀನು ಎಂದೂ ಧರಿಸಬಾರದು.”

19025039a ಅಯೋನಾವುತ್ಸೃಜತ್ತಂ ಸಾ ಕುಮಾರಂ ದಸ್ಯುಹಂತಮಮ್ |

19025039c ಇಷೀಕಾಸ್ತಂಬಮಾಸಾದ್ಯ ಜ್ವಲಂತಮಿವ ಪಾವಕಮ್ ||

ಆಗ ತಾರೆಯು ಇಷೀಕ ಹುಲ್ಲಿನ ಪ್ರದೇಶಕ್ಕೆ ಹೋಗಿ ಅಲ್ಲಿ ಪಾವಕನಂತೆ ಪ್ರಜ್ವಲಿಸುತ್ತಿದ್ದ ದಸ್ಯುಹಂತಕ ಕುಮಾರನನ್ನು ಹೆತ್ತಳು.

19025040a ಜಾತಮಾತ್ರಃ ಸ ಭಗವಾಂದೇವಾನಾಮಕ್ಷಿಪದ್ವಪುಃ |

19025040c ತತಃ ಸಂಶಯಮಾಪನ್ನಾ ಇಮಾಮಕಥಯನ್ಸುರಾಃ ||

ಹುಟ್ಟುತ್ತಲೇ ಆ ಭಗವಾನನು ತನ್ನ ಶರೀರಕಾಂತಿಯಿಂದ ದೇವತೆಗಳ ಕಾಂತಿಯನ್ನು ಕುಗ್ಗುವಂತೆ ಮಾಡಿದನು. ಆಗ ಸಂಶಯಪಟ್ಟ ಸುರರು ಇದನ್ನು ಹೇಳತೊಡಗಿದರು:

19025041a ಸತ್ಯಂ ಬ್ರುಹಿ ಸುತಃ ಕಸ್ಯ ಸೋಮಸ್ಯಾಥ ಬೃಹಸ್ಪತೇಃ |

19025041c ಪೃಚ್ಛ್ಯಮಾನಾ ಯದಾ ದೇವೈರ್ನಾಹ ಸಾ ಸಾಧ್ವಸಾಧು ವಾ||

“ಸತ್ಯವನ್ನೇ ಹೇಳು. ಇವನು ಯಾರ ಸುತ? ಸೋಮನದ್ದೋ ಅಥವಾ ಬೃಹಸ್ಪತಿಯದ್ದೋ?” ಈ ರೀತಿ ದೇವತೆಗಳು ಕೇಳುತ್ತಿದ್ದರೂ ತಾರೆಯು ಸಾಧುವಾದ ಅಸಾಧುವಾದ ಏನನ್ನೂ ಹೇಳಲೇ ಇಲ್ಲ.

19025042a ತದಾ ತಾಂ ಶಪ್ತುಮಾರಬ್ಧಃ ಕುಮಾರೋ ದಸ್ಯುಹಂತಮಃ |

19025042c ತಂ ನಿವಾರ್ಯ ತತೋ ಬ್ರಹ್ಮಾ ತಾರಾಂ ಪಪ್ರಚ್ಛ ಸಂಶಯಮ್ ||

ಆಗ ದಸ್ಯುಹಂತಕ ಕುಮಾರನು ಅವಳಿಗೆ ಶಾಪವನ್ನು ಕೊಡಲು ಹೊರಟಾಗ ಬ್ರಹ್ಮನು ಅವನನ್ನು ತಡೆದು ತಾರೆಯಲ್ಲಿ ಸಂಶಯವನ್ನು ಕೇಳಿದನು:

19025043a ತದತ್ರ ತಥ್ಯಂ ತದ್ಬ್ರೂಹಿ ತಾರೇ ಕಸ್ಯ ಸುತಸ್ತ್ವಯಮ್  |

19025043c ಸಾ ಪ್ರಾಂಜಲಿರುವಾಚೇದಂ ಬ್ರಹ್ಮಾಣಂ ವರದಂ ಪ್ರಭುಮ್||

“ತಾರೇ! ಇವನು ಯಾರ ಪುತ್ರನು! ನಿಜವಾಗಿ ಹೇಳು!” ಆಗ ಅವಳು ಕೈಮುಗಿದು ವರದ ಪ್ರಭು ಬ್ರಹ್ಮನಿಗೆ ಹೇಳಿದಳು:

19025044a ಸೋಮಸ್ಯೇತಿ ಮಹಾತ್ಮಾನಂ ಕುಮಾರಂ ದಸ್ಯುಹಂತಮಮ್ |

19025044c ತತಸ್ತಂ ಮೂರ್ಧ್ನ್ಯುಪಾಘ್ರಾಯ ಸೋಮೋ ಧಾತಾ ಪ್ರಜಾಪತಿಃ ||

“ಇವನು ಸೋಮನ ಮಗ.” ಆಗ ಪ್ರಜಾಪತಿ ಧಾತಾ ಸೋಮನು ದಸ್ಯುಹಂತಕ ಮಹಾತ್ಮ ಕುಮಾರನ ನೆತ್ತಿಯನ್ನು ಆಘ್ರಾಣಿಸಿದನು.

19025045a ಬುಧ ಇತ್ಯಕರೋನ್ನಾಮ ತಸ್ಯ ಪುತ್ರಸ್ಯ ಧೀಮತಃ |

19025045c ಪ್ರತಿಕೂಲಂ ಚ ಗಗನೇ ಸಮಭ್ಯುತ್ಥಿಷ್ಠತೇ ಬುಧಃ ||

ಆ ಧೀಮಂತ ಪುತ್ರನಿಗೆ ಬುಧ ಎಂದು ನಾಮಕರಣವನ್ನು ಮಾಡಿದನು. ಬುಧನು ಗಗನದಲ್ಲಿ ಪ್ರತಿಕೂಲವನ್ನು ಸೂಚಿಸುತ್ತಾ ಉದಯವಾಗತೊಡಗಿದನು.

19025046a ಉತ್ಪಾದಯಾಮಾಸ ತತಃ ಪುತ್ರಂ ವೈ ರಾಜಪುತ್ರಿಕಾ |

19025046c ತಸ್ಯಾಪತ್ಯಂ ಮಹಾರಾಜೋ ಬಭೂವೈಲಃ ಪುರೂರವಾಃ ||

ಅನಂತರ ಬುಧನು ವೈರಾಜ ಮನುವಿನ ಪುತ್ರಿ ಇಲೆಯಲ್ಲಿ ಪುತ್ರನೋರ್ವನನ್ನು ಹುಟ್ಟಿಸಿದನು. ಅವರ ಆ ಪುತ್ರನು ಮಹಾರಾಜ ಪುರೂರವನಾಗಿದ್ದನು.

19025047a ಊರ್ವಶ್ಯಾಂ ಜಜ್ಞಿರೇ ಯಸ್ಯ ಪುತ್ರಾಃ ಸಪ್ತ ಮಹಾತ್ಮನಃ |

19025046c ಪ್ರಸಹ್ಯ ಧರ್ಷಿತಸ್ತತ್ರ ಸೋಮೋ ವೈ ರಾಜಯಕ್ಷ್ಮಣಾ ||

ಮಹಾತ್ಮ ಪುರೂರವನಿಗೆ ಊರ್ವಶಿಯಲ್ಲಿ ಏಳು ಪುತ್ರರು ಹುಟ್ಟಿದರು. ಇತ್ತ ಹಠದಿಂದಾಗಿ ಸೋಮನು ರಾಜಯಕ್ಷ್ಮದಿಂದ ಪೀಡಿತನಾದನು.

19025048a ತತೋ ಯಕ್ಷ್ಮಾಭಿಭೂತಸ್ತು ಸೋಮಃ ಪ್ರಕ್ಷೀಣಮಂಡಲಃ |

19025048c ಜಗಾಮ ಶರಣಾರ್ಥಾಯ ಪಿತರಂ ಸೋಽತ್ರಿಮೇವ ತು ||

ಯಕ್ಷ್ಮದ ಕಾರಣದಿಂದ ತನ್ನ ಮಂಡಲವನ್ನು ಕಳೆದುಕೊಳ್ಳುತ್ತಿದ್ದ ಸೋಮನು ಶರಣನಾಗಿ ತಂದೆ ಅತ್ರಿಯಲ್ಲಿಗೇ ಹೋದನು.

19025049a ತಸ್ಯ ತತ್ತಾಪಶಮನಂ ಚಕಾರಾತ್ರಿರ್ಮಹಾತಪಾಃ |

19025049c ಸ ರಾಜಯಕ್ಷ್ಮಣಾ ಮುಕ್ತಃ ಶ್ರಿಯಾ ಜಜ್ವಾಲ ಸರ್ವತಃ ||

ಮಹಾತಪಸ್ವಿ ಅತ್ರಿಯು ಅವನ ಆ ತಾಪವನ್ನು ತಣಿಸಿದನು. ಸೋಮನು ರಾಜಯಕ್ಷ್ಮದಿಂದ ಮುಕ್ತನಾಗಿ ಎಲ್ಲ ಕಡೆಯು ಶ್ರೀಯಿಂದ ಪ್ರಜ್ವಲಿಸಿದನು.

19025050a ಏವಂ ಸೋಮಸ್ಯ ವೈ ಜನ್ಮ ಕೀರ್ತಿತಂ ಕೀರ್ತಿವರ್ಧನಮ್ |

19025050c ವಂಶಮಸ್ಯ ಮಹಾರಾಜ ಕೀರ್ತ್ಯಮಾನಂ ಚ ಮೇ ಶೃಣು ||

ಮಹಾರಾಜ! ಇಗೋ ನಾನು ಕೀರ್ತಿಯನ್ನು ವರ್ಧಿಸುವ ಸೋಮನ ಜನ್ಮದ ಕುರಿತು ಹೇಳಿದ್ದೇನೆ. ಅವನ ವಂಶವನ್ನೂ ವರ್ಣಿಸುತ್ತೇನೆ. ಕೇಳು.

19025051a ಧನ್ಯಮಾರೋಗ್ಯಮಾಯುಷ್ಯಂ ಪುಣ್ಯಂ ಸಂಕಲ್ಪಸಾಧನಮ್ |

19025051c ಸೋಮಸ್ಯ ಜನ್ಮ ಶ್ರುತ್ವೈವ ಪಾಪೇಭ್ಯೋ ವಿಪ್ರಮುಚ್ಯತೇ ||

ಸೋಮನ ಜನ್ಮದ ಕುರಿತು ಕೇಳುವುದರಿಂದಲೇ ಮನುಷ್ಯನು ಆರೋಗ್ಯ-ಆಯುಷ್ಯ-ಪುಣ್ಯ ಮತ್ತು ಸಂಕಲ್ಪಸಾಧನೆಗಳಿಂದ ಧನ್ಯನಾಗಿ ಪಾಪಗಳಿಂದಲೂ ವಿಮೋಚನನಾಗುತ್ತಾನೆ.”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಸೋಮೋತ್ಪತ್ತಿಕಥನೇ ಪಂಚವಿಂಶೋಽಧ್ಯಾಯಃ

Beautiful Flower White Daisy On White Background Stock Photo, Picture And  Royalty Free Image. Image 41556534.

Comments are closed.