ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
Contents
Toggle೩೧೮
ನಾರದನು ಶುಕನಿಗೆ ಮೋಕ್ಷಧರ್ಮವನ್ನು ಉಪದೇಶಿಸಿದುದು (1-45). ಶುಕನು ಮೋಕ್ಷವನ್ನು ಪಡೆಯಲು ತಂದೆಯನ್ನು ಪರಿತ್ಯಜಿಸಿ ಸೂರ್ಯಮಂಡಲದ ಕಡೆ ಪ್ರಯಾಣಿಸಿದುದು (46-63).
12318001 ನಾರದ ಉವಾಚ|
12318001a ಸುಖದುಃಖವಿಪರ್ಯಾಸೋ ಯದಾ ಸಮುಪಪದ್ಯತೇ|
12318001c ನೈನಂ ಪ್ರಜ್ಞಾ ಸುನೀತಂ ವಾ ತ್ರಾಯತೇ ನಾಪಿ ಪೌರುಷಮ್||
ನಾರದನು ಹೇಳಿದನು: “ಸುಖದುಃಖಗಳ ವಿಪರ್ಯಾಸ[1]ವುಂಟಾದಾಗ ಪ್ರಜ್ಞೆಯಾಗಲೀ, ಉತ್ತಮ ನೀತಿಯಾಗಲೀ ಅಥವಾ ಪೌರುಷವಾಗಲೀ ಮನುಷ್ಯನನ್ನು ರಕ್ಷಿಸುವುದಿಲ್ಲ.
12318002a ಸ್ವಭಾವಾದ್ಯತ್ನಮಾತಿಷ್ಠೇದ್ಯತ್ನವಾನ್ನಾವಸೀದತಿ|
12318002c ಜರಾಮರಣರೋಗೇಭ್ಯಃ ಪ್ರಿಯಮಾತ್ಮಾನಮುದ್ಧರೇತ್||
ಆದುದರಿಂದ ಸ್ವಾಭಾವಿಕವಾಗಿಯೇ ಜ್ಞಾನಪ್ರಾಪ್ತಿಗೆ ಪ್ರಯತ್ನಿಸಬೇಕು. ಹಾಗೆ ಪ್ರಯತ್ನಿಸುವವನು ನಾಶನಾಗುವುದಿಲ್ಲ. ಪ್ರಿಯ ಆತ್ಮನನ್ನು ಜರಾಮರಣರೋಗಗಳಿಂದ ರಕ್ಷಿಸಿಕೊಳ್ಳಬೇಕು.
12318003a ರುಜಂತಿ ಹಿ ಶರೀರಾಣಿ ರೋಗಾಃ ಶಾರೀರಮಾನಸಾಃ|
12318003c ಸಾಯಕಾ ಇವ ತೀಕ್ಷ್ಣಾಗ್ರಾಃ ಪ್ರಯುಕ್ತಾ ದೃಢಧನ್ವಿಭಿಃ||
ಶಾರೀರಿಕ ಮತ್ತು ಮಾನಸಿಕ ರೋಗಗಳು ದೃಢಧನ್ವಿಯು ಪ್ರಯೋಗಿಸಿದ ತೀಕ್ಷ್ಣಾಗ್ರ ಸಾಯಕಗಳಂತೆ ಶರೀರಗಳನ್ನು ಬಾಧಿಸುತ್ತಲೇ ಇರುತ್ತವೆ.
12318004a ವ್ಯಾಧಿತಸ್ಯ ವಿವಿತ್ಸಾಭಿಸ್ತ್ರಸ್ಯತೋ ಜೀವಿತೈಷಿಣಃ[2]|
12318004c ಅವಶಸ್ಯ ವಿನಾಶಾಯ ಶರೀರಮಪಕೃಷ್ಯತೇ||
ಇಂದ್ರಿಯಗಳಿಗೆ ಅಧೀನನಾಗಿ ಜೀವಿಸಲು ಇಚ್ಛಿಸುವವನ ಶರೀರವನ್ನು ವಿವಿಧ ವ್ಯಾಧಿಗಳು ಕಾಡಿ ವಿನಾಶದೆಡೆಗೆ ಕೊಂಡೊಯ್ಯುತ್ತವೆ.
12318005a ಸ್ರವಂತಿ ನ ನಿವರ್ತಂತೇ ಸ್ರೋತಾಂಸಿ ಸರಿತಾಮಿವ|
12318005c ಆಯುರಾದಾಯ ಮರ್ತ್ಯಾನಾಂ ರಾತ್ರ್ಯಹಾನಿ ಪುನಃ ಪುನಃ||
ನದಿಯ ಪ್ರವಾಹವು ಹಿಂದಕ್ಕೆ ಬರದೇ ಮುಂದು-ಮುಂದಕ್ಕೇ ಹರಿದುಕೊಂಡು ಹೋಗುವಂತೆ ರಾತ್ರಿ-ಹಗಲುಗಳು ಪುನಃ ಪುನಃ ಮುಂದೆ ಹೋಗುತ್ತಾ ಮನುಷ್ಯರ ಆಯುಷ್ಯವನ್ನು ಅಪಹರಿಸುತ್ತಿರುತ್ತವೆ.
12318006a ವ್ಯತ್ಯಯೋ ಹ್ಯಯಮತ್ಯಂತಂ ಪಕ್ಷಯೋಃ ಶುಕ್ಲಕೃಷ್ಣಯೋಃ|
12318006c ಜಾತಂ ಮರ್ತ್ಯಂ ಜರಯತಿ ನಿಮೇಷಂ ನಾವತಿಷ್ಠತೇ||
ನಿಮಿಷಮಾತ್ರವೂ ನಿಲ್ಲದೇ ಸತತವಾಗಿ ಮರುಕಳಿಸುತ್ತಿರುವ ಶುಕ್ಲ-ಕೃಷ್ಣಪಕ್ಷಗಳು ಹುಟ್ಟಿದ ಮನುಷ್ಯನನ್ನು ಮುಪ್ಪಾಗಿಸುತ್ತವೆ.
12318007a ಸುಖದುಃಖಾನಿ ಭೂತಾನಾಮಜರೋ ಜರಯನ್ನಸೌ|
12318007c ಆದಿತ್ಯೋ ಹ್ಯಸ್ತಮಭ್ಯೇತಿ ಪುನಃ ಪುನರುದೇತಿ ಚ||
ಪ್ರತಿನಿತ್ಯವೂ ಅಸ್ತಮಿಸುವ ಮತ್ತು ಪುನಃ ಉದಯಿಸುವ ಸೂರ್ಯನು ಅಜರನಾಗಿದ್ದರೂ ಪ್ರಾಣಿಗಳನ್ನು ಸುಖದುಃಖಗಳ ಮೂಲಕ ಜೀರ್ಣಗೊಳಿಸುತ್ತಿರುತ್ತಾನೆ.
12318008a ಅದೃಷ್ಟಪೂರ್ವಾನಾದಾಯ ಭಾವಾನಪರಿಶಂಕಿತಾನ್|
12318008c ಇಷ್ಟಾನಿಷ್ಟಾನ್ಮನುಷ್ಯಾಣಾಮಸ್ತಂ ಗಚ್ಚಂತಿ ರಾತ್ರಯಃ||
ರಾತ್ರಿಗಳು ಮನುಷ್ಯರಿಗೆ ಅದೃಷ್ಟವೂ ಅಪೂರ್ವವೂ ಆದ ಇಷ್ಟ-ಅನಿಷ್ಟ ಭಾವಗಳನ್ನು ಮೂಡಿಸುತ್ತಾ ಅಸ್ತವಾಗುತ್ತಿರುತ್ತವೆ.
12318009a ಯೋ ಯಮಿಚ್ಚೇದ್ಯಥಾಕಾಮಂ ಕಾಮಾನಾಂ ತತ್ತದಾಪ್ನುಯಾತ್|
12318009c ಯದಿ ಸ್ಯಾನ್ನ ಪರಾಧೀನಂ ಪುರುಷಸ್ಯ ಕ್ರಿಯಾಫಲಮ್||
ಒಂದುವೇಳೆ ಪುರುಷನ ಕ್ರಿಯೆಯ ಫಲಗಳು ಪರಾಧೀನವಾಗಿರದೇ ಇದ್ದಿದ್ದರೆ ಅವನು ಯಾವ್ಯಾವುದನ್ನು ಕಾಮಿಸುತ್ತಿದ್ದನೋ ಆ ಕಾಮನೆಗಳನ್ನು ಪಡೆದುಕೊಳ್ಳುತ್ತಿದ್ದನು.
12318010a ಸಂಯತಾಶ್ಚ ಹಿ ದಕ್ಷಾಶ್ಚ ಮತಿಮಂತಶ್ಚ ಮಾನವಾಃ|
12318010c ದೃಶ್ಯಂತೇ ನಿಷ್ಫಲಾಃ ಸಂತಃ ಪ್ರಹೀಣಾಶ್ಚ ಸ್ವಕರ್ಮಭಿಃ||
ಇಂದ್ರಿಯ ನಿಗ್ರಹಿಗಳೂ ದಕ್ಷರೂ ಮತಿಮಂತರೂ ಆದ ಮಾನವರು ತಮ್ಮ ಕರ್ಮಗಳ ಫಲಗಳಲ್ಲಿ ನಿರತರಾಗಿದ್ದರೂ ಅವುಗಳ ಫಲಗಳನ್ನು ತೊರೆದಿರುವುದು ಕಂಡುಬರುತ್ತದೆ.
12318011a ಅಪರೇ ಬಾಲಿಶಾಃ ಸಂತೋ ನಿರ್ಗುಣಾಃ ಪುರುಷಾಧಮಾಃ|
12318011c ಆಶೀರ್ಭಿರಪ್ಯಸಂಯುಕ್ತಾ ದೃಶ್ಯಂತೇ ಸರ್ವಕಾಮಿನಃ||
ಇನ್ನು ಕೆಲವರು ಮೂರ್ಖರಾಗಿರುತ್ತಾರೆ. ನಿರ್ಗುಣರೂ ಪುರುಷಾಧಮರೂ, ಹಿರಿಯರ ಆಶೀರ್ವಾದಗಳಿಲ್ಲದವರೂ ಆದ ಅವರು ಸರ್ವಕಾಮಗಳನ್ನೂ ಪಡೆದುಕೊಂಡಿರುವುದನ್ನೂ ನಾವು ನೋಡುತ್ತೇವೆ.
12318012a ಭೂತಾನಾಮಪರಃ ಕಶ್ಚಿದ್ಧಿಂಸಾಯಾಂ ಸತತೋತ್ಥಿತಃ|
12318012c ವಂಚನಾಯಾಂ ಚ ಲೋಕಸ್ಯ ಸ ಸುಖೇಷ್ವೇವ ಜೀರ್ಯತೇ||
ಇನ್ನು ಕೆಲವರು ಸತತವೂ ಇತರರ ಹಿಂಸೆಯಲ್ಲಿಯೇ ನಿರತರಾಗಿರುತ್ತಾರೆ. ಜನರನ್ನು ಮೋಸಗೊಳಿಸುತ್ತಾ ಅವರು ಸುಖೋಪಭೋಗಗಳಲ್ಲಿಯೇ ಮುದಿಯಾಗುತ್ತಾರೆ.
12318013a ಅಚೇಷ್ಟಮಾನಮಾಸೀನಂ ಶ್ರೀಃ ಕಂ ಚಿದುಪತಿಷ್ಠತಿ|
12318013c ಕಶ್ಚಿತ್ಕರ್ಮಾನುಸೃತ್ಯಾನ್ಯೋ ನ ಪ್ರಾಪ್ಯಮಧಿಗಚ್ಚತಿ||
ಕೆಲವೊಮ್ಮೆ ಯಾವ ಕೆಲಸವನ್ನೂ ಮಾಡದೇ ಕುಳಿತಿರುವವನ ಬಳಿಗೆ ಸಂಪತ್ತು ತಾನೇ ತಾನಾಗಿ ಹೋಗಿ ಸೇರುತ್ತದೆ. ಮತ್ತೊಬ್ಬನು ಕಷ್ಟಪಟ್ಟು ದುಡಿದರೂ ತಾನು ಹೊಂದಬೇಕಾದ ವಸ್ತುವನ್ನು ಹೊಂದುವುದಿಲ್ಲ.
12318014a ಅಪರಾಧಂ ಸಮಾಚಕ್ಷ್ವ ಪುರುಷಸ್ಯ ಸ್ವಭಾವತಃ|
12318014c ಶುಕ್ರಮನ್ಯತ್ರ ಸಂಭೂತಂ ಪುನರನ್ಯತ್ರ ಗಚ್ಚತಿ||
ಇದರಲ್ಲಿ ಪುರುಷನ ಸ್ವಭಾವತಃ ಅಪರಾಧವನ್ನು ನೋಡು. ವೀರ್ಯವು ಎಲ್ಲಿಯೋ ಹುಟ್ಟುತ್ತದೆ ಮತ್ತು ಪುನಃ ಬೇರೆ ಎಲ್ಲಿಯೋ ಹೋಗುತ್ತದೆ.
12318015a ತಸ್ಯ ಯೋನೌ ಪ್ರಸಕ್ತಸ್ಯ ಗರ್ಭೋ ಭವತಿ ವಾ ನ ವಾ|
12318015c ಆಮ್ರಪುಷ್ಪೋಪಮಾ ಯಸ್ಯ ನಿವೃತ್ತಿರುಪಲಭ್ಯತೇ||
ಯೋನಿಯನ್ನು ಪ್ರವೇಶಿಸಿದ ವೀರ್ಯದಿಂದ ಗರ್ಭವು ಉಂಟಾಗಬಹುದು ಅಥವಾ ಆಗದಿರಬಹುದು. ಮಾವಿನ ಹೂವಿನಂತೆ ಕೆಲವು ವೇಳೆ ಅದು ವ್ಯರ್ಥವಾಗುವುದೂ ಕಂಡುಬರುತ್ತದೆ.
12318016a ಕೇಷಾಂ ಚಿತ್ಪುತ್ರಕಾಮಾನಾಮನುಸಂತಾನಮಿಚ್ಚತಾಮ್|
12318016c ಸಿದ್ಧೌ ಪ್ರಯತಮಾನಾನಾಂ ನೈವಾಂಡಮುಪಜಾಯತೇ||
ಕೆಲವರು ಪುತ್ರಾಪೇಕ್ಷಿಗಳು ತಮ್ಮ ಮಕ್ಕಳಿಗೂ ಮಕ್ಕಳಾಗಬೇಕೆಂದು ಬಯಸಿರುತ್ತಾರೆ. ಅವರು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಅವರಿಗೆ ಒಂದು ಸಂತಾನವೂ ಆಗುವುದಿಲ್ಲ.
12318017a ಗರ್ಭಾಚ್ಚೋದ್ವಿಜಮಾನಾನಾಂ ಕ್ರುದ್ಧಾದಾಶೀವಿಷಾದಿವ|
12318017c ಆಯುಷ್ಮಾನ್ ಜಾಯತೇ ಪುತ್ರಃ ಕಥಂ ಪ್ರೇತಃ ಪಿತೈವ ಸಃ||
ಕೆಲವೊಮ್ಮೆ ಪತ್ನಿಯು ಗರ್ಭಿಣಿಯಾದಳೆಂದರೆ ಕುಪಿತ ಸರ್ಪಕ್ಕೆ ಹೆದರುವಂತೆ ಹೆದರುವವನಿಗೆ ಆಯುಷ್ಮಂತ ಪುತ್ರನೇ ಹುಟ್ಟುತ್ತಾನೆ. ಸಾಯುವುದೇ ಇಲ್ಲವೇನೋ ಎಂಬಂತೆ ಬದುಕಿರುತ್ತಾನೆ.
12318018a ದೇವಾನಿಷ್ಟ್ವಾ ತಪಸ್ತಪ್ತ್ವಾ ಕೃಪಣೈಃ ಪುತ್ರಗೃದ್ಧಿಭಿಃ|
12318018c ದಶ ಮಾಸಾನ್ ಪರಿಧೃತಾ ಜಾಯಂತೇ ಕುಲಪಾಂಸನಾಃ||
ಕೆಲವೊಮ್ಮೆ ದೇವತೆಗಳನ್ನು ಆರಾಧಿಸಿ, ತಪಸ್ಸನ್ನು ತಪಿಸಿ, ಪುತ್ರನ ಆಸೆಯಿಂದ ಕೃಪಣಳಾಗಿ ಹತ್ತು ಮಾಸಗಳು ಗರ್ಭವನ್ನು ಹೊತ್ತವಳಿಗೆ ಕುಲಪಾಂಸನನೇ ಹುಟ್ಟುತ್ತಾನೆ.
12318019a ಅಪರೇ ಧನಧಾನ್ಯಾನಿ ಭೋಗಾಂಶ್ಚ ಪಿತೃಸಂಚಿತಾನ್|
12318019c ವಿಪುಲಾನಭಿಜಾಯಂತೇ ಲಬ್ಧಾಸ್ತೈರೇವ ಮಂಗಲೈಃ||
ಇಂತಹ ಮಂಗಲಕಾರ್ಯಗಳಿಂದ ಹುಟ್ಟಿದ ಕೆಲವು ಪುತ್ರರು ಪಿತೃಸಂಚಿತವಾದ ವಿಪುಲ ಧನ-ಧಾನ್ಯಗಳನ್ನೂ ಭೋಗಗಳನ್ನೂ ಪಡೆದು ಅನುಭವಿಸುತ್ತಲೇ ಇರುತ್ತಾರೆ.
12318020a ಅನ್ಯೋನ್ಯಂ ಸಮಭಿಪ್ರೇತ್ಯ ಮೈಥುನಸ್ಯ ಸಮಾಗಮೇ|
12318020c ಉಪದ್ರವ ಇವಾವಿಷ್ಟೋ ಯೋನಿಂ ಗರ್ಭಃ ಪ್ರಪದ್ಯತೇ||
ಪತಿ-ಪತ್ನಿಯರು ಅನ್ಯೋನ್ಯರೊಡನೆ ಕಲೆತು ಮೈಥುನಕ್ಕೆ ಸಮಾಗಮವಾದಾಗ ಉಪದ್ರವವು ಪ್ರವೇಶಿಸಿದಂತೆ ಗರ್ಭವು ಯೋನಿಯನ್ನು ಸೇರುತ್ತದೆ.
12318021a ಶೀರ್ಣಂ ಪರಶರೀರೇಣ ನಿಚ್ಚವೀಕಂ ಶರೀರಿಣಮ್[3]|
12318021c ಪ್ರಾಣಿನಾಂ ಪ್ರಾಣಸಂರೋಧೇ ಮಾಂಸಶ್ಲೇಷ್ಮವಿಚೇಷ್ಟಿತಮ್||
ಮಾಂಸ-ಕಫಗಳಿಂದ ಪ್ರಾಣಿಯ ಮರಣವಾದಾಗ ಶರೀರಿಗೆ ಬೇರೆಯ ಅಸ್ಥಿರ ಶರೀರವು ಪ್ರಾಪ್ತವಾಗುತ್ತದೆ.
12318022a ನಿರ್ದಗ್ಧಂ ಪರದೇಹೇನ ಪರದೇಹಂ ಚಲಾಚಲಮ್|
12318022c ವಿನಶ್ಯಂತಂ ವಿನಾಶಾಂತೇ ನಾವಿ ನಾವಮಿವಾಹಿತಮ್||
ಯಾವ ರೀತಿಯಲ್ಲಿ ಒಂದು ನೌಕೆಯು ಭಗ್ನವಾದಾಗ ಅದರಲ್ಲಿರುವ ಜನರನ್ನು ತುಂಬಿಕೊಳ್ಳಲು ಮತ್ತೊಂದು ನೌಕೆಯು ಸಿದ್ಧವಾಗಿರುವುದೋ – ಅದೇ ರೀತಿಯಲ್ಲಿ ಶರೀರವು ಭಗ್ನವಾಗಿ ಆ ಶರೀರದಿಂದ ಜೀವನು ಹೊರಬಂದನಂತರ ಆ ಜೀವನ ಕರ್ಮಫಲಾನುಸಾರವಾಗಿ ಅಸ್ಥಿರವಾದ ಮತ್ತೊಂದು ಶರೀರವು ಸಿದ್ಧವಾಗಿಯೇ ಇರುತ್ತದೆ.
12318023a ಸಂಗತ್ಯಾ ಜಠರೇ ನ್ಯಸ್ತಂ ರೇತೋಬಿಂದುಮಚೇತನಮ್|
12318023c ಕೇನ ಯತ್ನೇನ ಜೀವಂತಂ ಗರ್ಭಂ ತ್ವಮಿಹ ಪಶ್ಯಸಿ||
ಮಿಥುನ ಸಮಾಗಮದಿಂದ ಜಠರದಲ್ಲಿ ಇರಿಸಲ್ಪಟ್ಟ ಅಚೇತಸ ರೇತೋ ಬಿಂದುವು ಯಾವ ಪ್ರಯತ್ನದಿಂದ ಜೀವಂತವಾಗುತ್ತದೆ ಎನ್ನುವುದನ್ನು ನೀನು ಇಲ್ಲಿ ಕಾಣುತ್ತೀಯೆ.
12318024a ಅನ್ನಪಾನಾನಿ ಜೀರ್ಯಂತೇ ಯತ್ರ ಭಕ್ಷಾಶ್ಚ ಭಕ್ಷಿತಾಃ|
12318024c ತಸ್ಮಿನ್ನೇವೋದರೇ ಗರ್ಭಃ ಕಿಂ ನಾನ್ನಮಿವ ಜೀರ್ಯತೇ||
ಅನ್ನಪಾನಾದಿಗಳು ಮತ್ತು ಭಕ್ಷಿಸಿದ ಭಕ್ಷಗಳು ಜೀರ್ಣವಾಗುವ ಅದೇ ಉದರದಲ್ಲಿ ಗರ್ಭವು ಏಕೆ ಜೀರ್ಣವಾಗಿ ಹೋಗುವುದಿಲ್ಲ?
12318025a ಗರ್ಭಮೂತ್ರಪುರೀಷಾಣಾಂ ಸ್ವಭಾವನಿಯತಾ ಗತಿಃ|
12318025c ಧಾರಣೇ ವಾ ವಿಸರ್ಗೇ ವಾ ನ ಕರ್ತುರ್ವಿದ್ಯತೇ ವಶಃ||
12318026a ಸ್ರವಂತಿ ಹ್ಯುದರಾದ್ಗರ್ಭಾ ಜಾಯಮಾನಾಸ್ತಥಾಪರೇ|
12318026c ಆಗಮೇನ ಸಹಾನ್ಯೇಷಾಂ ವಿನಾಶ ಉಪಪದ್ಯತೇ||
ಸ್ವಭಾವತಃ ಗರ್ಭ, ಮೂತ್ರ ಮತ್ತು ಪುರೀಷಗಳಿಗೆ ಅವುಗಳದ್ದೇ ಆದ ಮಾರ್ಗಗಳಿವೆ. ಗರ್ಭದ ಧಾರಣೆ ಮತ್ತು ವಿಸರ್ಗವು ಕರ್ತೃವಿನ ವಶದಲ್ಲಿರುವುದಿಲ್ಲ. ಉದರದಿಂದ ಗರ್ಭವು ಹರಿದುಹೋಗಬಹುದು. ಮತ್ತೆ ಕೆಲವು ಹುಟ್ಟುವಾಗಲೇ ಸತ್ತುಹೋಗಿರಬಹುದು. ಇತರ ಕೆಲವು ಹುಟ್ಟಿದ ನಂತರ ನಾಶಹೊಂದುತ್ತವೆ.
12318027a ಏತಸ್ಮಾದ್ಯೋನಿಸಂಬಂಧಾದ್ಯೋ ಜೀವನ್ ಪರಿಮುಚ್ಯತೇ|
12318027c ಪ್ರಜಾಂ ಚ ಲಭತೇ ಕಾಂ ಚಿತ್ಪುನರ್ದ್ವಂದ್ವೇಷು ಮಜ್ಜತಿ||
ಯೋನಿಸಂಬಂಧದಿಂದ ಜೀವಂತವಾಗಿ ಹೊರಬರುವುದು ಸಂತಾನವೆನಿಸಿಕೊಳ್ಳುತ್ತದೆ. ಸಂತಾನವಾದೊಡನೆ ಪುನಃ ಪರಸ್ಪರ ಸಮಾಗಮದಲ್ಲಿ ಮುಳುಗುತ್ತಾರೆ.
12318028a ಶತಸ್ಯ ಸಹಜಾತಸ್ಯ ಸಪ್ತಮೀಂ ದಶಮೀಂ ದಶಾಮ್[4]|
12318028c ಪ್ರಾಪ್ನುವಂತಿ ತತಃ ಪಂಚ ನ ಭವಂತಿ ಶತಾಯುಷಃ||
ನೂರು ವರ್ಷ ಆಯಸ್ಸನ್ನು ಪಡೆದು ಹುಟ್ಟಿದವನೂ ಏಳನೆಯ ಮತ್ತು ಹತ್ತನೆಯ ದಶೆಗಳನ್ನು[5] ಹೊಂದಿ ನಂತರ ನೂರನೇ ವರ್ಷದಲ್ಲಿ ಪಂಚಭೂತಗಳಿಲ್ಲದವನಾಗುತ್ತಾನೆ.
12318029a ನಾಭ್ಯುತ್ಥಾನೇ ಮನುಷ್ಯಾಣಾಂ ಯೋಗಾಃ ಸ್ಯುರ್ನಾತ್ರ ಸಂಶಯಃ|
12318029c ವ್ಯಾಧಿಭಿಶ್ಚ ವಿಮಥ್ಯಂತೇ ವ್ಯಾಲೈಃ ಕ್ಷುದ್ರಮೃಗಾ ಇವ||
ಹಿಂಸಮೃಗಗಳು ಕ್ಷುದ್ರಮೃಗಗಳನ್ನು ಹಿಂಸಿಸುವಂತೆ ನಾನಾವಿಧದ ವ್ಯಾಧಿಗಳು ಮನುಷ್ಯನನ್ನು ತಿಕ್ಕಿ-ತೀಡುತ್ತವೆ. ಆ ಸಮಯದಲ್ಲಿ ಮನುಷ್ಯರಿಗೆ ಮೇಲೇಳಲು ಮತ್ತು ಕುಳಿತುಕೊಳ್ಳಲು ಕೂಡ ಶಕ್ತಿಯಿರುವುದಿಲ್ಲ ಎನ್ನುವುದರಲ್ಲಿ ಸಂಶಯವಿಲ್ಲ.
12318030a ವ್ಯಾಧಿಭಿರ್ಭಕ್ಷ್ಯಮಾಣಾನಾಂ ತ್ಯಜತಾಂ ವಿಪುಲಂ ಧನಮ್|
12318030c ವೇದನಾಂ ನಾಪಕರ್ಷಂತಿ ಯತಮಾನಾಶ್ಚಿಕಿತ್ಸಕಾಃ||
ವ್ಯಾಧಿಗಳು ಹಾಗೆ ತಿನ್ನುತ್ತಿರಲು ಅವರು ವಿಪುಲ ಧನವನ್ನೂ ಖರ್ಚುಮಾಡುತ್ತಾರೆ. ಪ್ರಯತ್ನಿಸಿದರೂ ಚಿಕಿತ್ಸಕರು ಅವರನ್ನು ವೇದನೆಯಿಂದ ಹೊರತರಲು ಶಕ್ಯರಾಗುವುದಿಲ್ಲ.
12318031a ತೇ ಚಾಪಿ ನಿಪುಣಾ ವೈದ್ಯಾಃ ಕುಶಲಾಃ ಸಂಭೃತೌಷಧಾಃ|
12318031c ವ್ಯಾಧಿಭಿಃ ಪರಿಕೃಷ್ಯಂತೇ ಮೃಗಾ ವ್ಯಾಧೈರಿವಾರ್ದಿತಾಃ||
ನಿಪುಣರಾದ ಕುಶಲರಾದ ಮತ್ತು ಉತ್ತಮ ಔಷಧಿಗಳನ್ನು ತಿಳಿದುಕೊಂಡಿರುವ ವೈದ್ಯರೂ ಕೂಡ -ವ್ಯಾಧರಿಂದ ಪ್ರಾಣಿಗಳು ಮರ್ದಿಸಲ್ಪಡುವಂತೆ- ವ್ಯಾಧಿಗಳಿಂದ ಪೀಡಿತರಾಗುತ್ತಾರೆ.
12318032a ತೇ ಪಿಬಂತಃ ಕಷಾಯಾಂಶ್ಚ ಸರ್ಪೀಂಷಿ ವಿವಿಧಾನಿ ಚ|
12318032c ದೃಶ್ಯಂತೇ ಜರಯಾ ಭಗ್ನಾ ನಾಗಾ ನಾಗೈರಿವೋತ್ತಮೈಃ||
ಅವರು ವಿವಿಧ ಕಷಾಯಗಳನ್ನೂ ತುಪ್ಪಗಳನ್ನೂ ಕುಡಿಯುತ್ತಿದ್ದರೂ ದೊಡ್ಡ ದೊಡ್ಡ ಆನೆಗಳಿಂದ ಪರ್ವತಗಳು ಪುಡಿಪುಡಿಯಾಗುವಂತೆ ಮುಪ್ಪಿನಿಂದ ಭಗ್ನರಾಗುವುದನ್ನು ನೋಡುತ್ತೇವೆ.
12318033a ಕೇ ವಾ ಭುವಿ ಚಿಕಿತ್ಸಂತೇ ರೋಗಾರ್ತಾನ್ ಮೃಗಪಕ್ಷಿಣಃ|
12318033c ಶ್ವಾಪದಾನಿ ದರಿದ್ರಾಂಶ್ಚ ಪ್ರಾಯೋ ನಾರ್ತಾ ಭವಂತಿ ತೇ||
ಈ ಭುವಿಯಲ್ಲಿ ರೋಗಾರ್ತರಾಗಿರುವ ಮೃಗಪಕ್ಷಿಗಳಿಗೆ, ಕ್ರೂರ ಪ್ರಾಣಿಗಳಿಗೆ ಮತ್ತು ದರಿದ್ರರಿಗೆ ಯಾರು ತಾನೇ ಚಿಕಿತ್ಸೆಯನ್ನು ಮಾಡುತ್ತಾರೆ? ಪ್ರಾಯಶಃ ಅವುಗಳು ಆರ್ತರೇ ಆಗುವುದಿಲ್ಲ.
12318034a ಘೋರಾನಪಿ ದುರಾಧರ್ಷಾನ್ನೃಪತೀನುಗ್ರತೇಜಸಃ|
12318034c ಆಕ್ರಮ್ಯ ರೋಗ ಆದತ್ತೇ ಪಶೂನ್ ಪಶುಪಚೋ ಯಥಾ[6]||
ಪಶುಭಕ್ಷ ಮೃಗಗಳು ಪಶುಗಳನ್ನು ಆಕ್ರಮಿಸುವಂತೆ ಘೋರ ದುರಾಧರ್ಷ ಉಗ್ರತೇಜಸ್ವೀ ನೃಪತಿಯರನ್ನೂ ಕೂಡ ರೋಗವು ಆಕ್ರಮಣಿಸಿ ಕೊಂಡೊಯ್ಯುತ್ತದೆ.
12318035a ಇತಿ ಲೋಕಮನಾಕ್ರಂದಂ ಮೋಹಶೋಕಪರಿಪ್ಲುತಮ್|
12318035c ಸ್ರೋತಸಾ ಸಹಸಾ ಕ್ಷಿಪ್ತಂ ಹ್ರಿಯಮಾಣಂ ಬಲೀಯಸಾ||
ಹೀಗೆ ಸಂಸಾರವೆಂಬ ನದಿಯಲ್ಲಿ ತಳ್ಳಲ್ಪಟ್ಟು ಮೋಹ-ಶೋಕಗಳಲ್ಲಿಯೇ ಮುಳುಗಿ, ಬಲಿಷ್ಠ ಪ್ರವಾಹದಿಂದ ಬಹುಬೇಗ ಸೆಳೆದುಕೊಂಡು ಹೋಗುತ್ತಿರುವ ಈ ಲೋಕವು ಯಾವ ಕೂಗಾಟವೂ ಇಲ್ಲದೇ ಮುಂದುವರಿಯುತ್ತಲೇ ಇದೆ.
12318036a ನ ಧನೇನ ನ ರಾಜ್ಯೇನ ನೋಗ್ರೇಣ ತಪಸಾ ತಥಾ|
12318036c ಸ್ವಭಾವಾ ವ್ಯತಿವರ್ತಂತೇ ಯೇ ನಿಯುಕ್ತಾಃ ಶರೀರಿಷು||
ಕರ್ಮಫಲಗಳನ್ನು ಉಪಭೋಗಿಸಲು ವಿಧಿಯಿಂದ ನಿಯುಕ್ತರಾಗಿರುವ ಮನುಷ್ಯರಿಗೆ ಧನದಿಂದಾಗಲೀ, ರಾಜ್ಯದಿಂದಾಗಲೀ, ಮತ್ತು ಉಗ್ರ ತಪಸ್ಸಿನಿಂದಾಗಲೀ ಸ್ವಭಾವವನ್ನು ಅತಿಕ್ರಮಿಸಲು ಸಾಧ್ಯವಾಗುವುದಿಲ್ಲ.
12318037a ನ ಮ್ರಿಯೇರನ್ನ ಜೀರ್ಯೇರನ್ಸರ್ವೇ ಸ್ಯುಃ ಸರ್ವಕಾಮಿಕಾಃ|
12318037c ನಾಪ್ರಿಯಂ ಪ್ರತಿಪಶ್ಯೇಯುರುತ್ಥಾನಸ್ಯ ಫಲಂ ಪ್ರತಿ||
ಪ್ರಯತ್ನಕ್ಕೆ ತಕ್ಕ ಫಲವು ಹಸ್ತಗತವಾಗುತ್ತಿದ್ದರೆ ಮನುಷ್ಯರು ಮುದುಕರಾಗುತ್ತಿರಲಿಲ್ಲ, ಸಾಯುತ್ತಲೂ ಇರಲಿಲ್ಲ. ಅಪ್ರಿಯ ಘಟನೆಗಳನ್ನು ಕಾಣುತ್ತಲೂ ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ಕಾಮನೆಗಳನ್ನು ಪಡೆದುಕೊಳ್ಳುತ್ತಿದ್ದರು.
12318038a ಉಪರ್ಯುಪರಿ ಲೋಕಸ್ಯ ಸರ್ವೋ ಭವಿತುಮಿಚ್ಚತಿ|
12318038c ಯತತೇ ಚ ಯಥಾಶಕ್ತಿ ನ ಚ ತದ್ವರ್ತತೇ ತಥಾ||
ಎಲ್ಲರೂ ಮೇಲು-ಮೇಲಿನ ಲೋಕಗಳಿಗೇ ಹೋಗಲು ಇಚ್ಛಿಸುತ್ತಾರೆ. ಯಥಾಶಕ್ತಿ ಪ್ರಯತ್ನಿಸುತ್ತಾರೆ ಕೂಡ. ಆದರೆ ಅದು ಸಾಧ್ಯವಾಗುವುದಿಲ್ಲ.
12318039a ಐಶ್ವರ್ಯಮದಮತ್ತಾಂಶ್ಚ ಮತ್ತಾನ್ಮದ್ಯಮದೇನ ಚ|
12318039c ಅಪ್ರಮತ್ತಾಃ ಶಠಾಃ ಕ್ರೂರಾ[7] ವಿಕ್ರಾಂತಾಃ ಪರ್ಯುಪಾಸತೇ||
ಅಪ್ರಮತ್ತರೂ ಶಠರೂ ಕ್ರೂರರೂ ವಿಕ್ರಾಂತರೂ ಕೂಡ ಐಶ್ವರ್ಯಮದದಿಂದ ಮತ್ತರಾದ ಮತ್ತು ಮದ್ಯಪಾನದಿಂದ ಮತ್ತರಾದವರನ್ನು ಉಪಾಸಿಸುತ್ತಾರೆ.
12318040a ಕ್ಲೇಶಾಃ ಪ್ರತಿನಿವರ್ತಂತೇ ಕೇಷಾಂ ಚಿದಸಮೀಕ್ಷಿತಾಃ|
12318040c ಸ್ವಂ ಸ್ವಂ ಚ ಪುನರನ್ಯೇಷಾಂ ನ ಕಿಂ ಚಿದಭಿಗಮ್ಯತೇ||
ಕೆಲವರಿಗೆ ಕ್ಲೇಶಗಳು ಯಾವ ಪ್ರಯತ್ನವೂ ಇಲ್ಲದೇ ಕಳೆದುಹೋಗುತ್ತವೆ. ಮತ್ತೆ ಕೆಲವರಿಗೆ ತಮ್ಮ ಐಶ್ವರ್ಯವೂ ಸಮಯಗಳಲ್ಲಿ ಉಪಯೋಗಕ್ಕೆ ಬರುವುದಿಲ್ಲ.
12318041a ಮಹಚ್ಚ ಫಲವೈಷಮ್ಯಂ ದೃಶ್ಯತೇ ಕರ್ಮಸಂಧಿಷು|
12318041c ವಹಂತಿ ಶಿಬಿಕಾಮನ್ಯೇ ಯಾಂತ್ಯನ್ಯೇ ಶಿಬಿಕಾಗತಾಃ||
ಕರ್ಮಫಲಗಳಲ್ಲಿ ವಿಶೇಷ ವೈಪರೀತ್ಯವು ಕಂಡುಬರುತ್ತದೆ. ಕೆಲವರು ಪಲ್ಲಕ್ಕಿಗಳನ್ನು ಹೊರುತ್ತಾರೆ ಮತ್ತೆ ಕೆಲವರು ಆ ಪಲ್ಲಕ್ಕಿಗಳಲ್ಲಿ ಕುಳಿತು ಸಂಚರಿಸುತ್ತಾರೆ.
12318042a ಸರ್ವೇಷಾಮೃದ್ಧಿಕಾಮಾನಾಮನ್ಯೇ ರಥಪುರಃಸರಾಃ|
12318042c ಮನುಜಾಶ್ಚ ಶತಸ್ತ್ರೀಕಾಃ ಶತಶೋ ವಿಧವಾಃ ಸ್ತ್ರಿಯಃ||
ಎಲ್ಲರೂ ಅಭಿವೃದ್ಧಿಯನ್ನೇ ಬಯಸುತ್ತಾರೆ. ಆದರೆ ಕೆಲವರು ಮಾತ್ರ ರಥಗಳಲ್ಲಿ ಕುಳಿತು ಹೋಗುತ್ತಾರೆ. ಕೆಲವರು ನೂರಾರು ಸ್ತ್ರೀಯರಲ್ಲಿ ಸುಖವನ್ನು ಪಡೆದರೆ ಇನ್ನು ಕೆಲವರಿಗೆ ಸ್ತ್ರೀಸೌಖ್ಯವೇ ಇರುವುದಿಲ್ಲ.
12318043a ದ್ವಂದ್ವಾರಾಮೇಷು ಭೂತೇಷು ಗಚ್ಚಂತ್ಯೇಕೈಕಶೋ ನರಾಃ|
12318043c ಇದಮನ್ಯತ್ ಪರಂ ಪಶ್ಯ ಮಾತ್ರ ಮೋಹಂ ಕರಿಷ್ಯಸಿ||
ದ್ವಂದ್ವಗಳಲ್ಲಿ ಸಿಲುಕಿದ ಭೂತಗಳಲ್ಲಿ ಕೆಲವರು ದುಃಖವನ್ನು ಅನುಭವಿಸುತ್ತಿದ್ದರೆ ಇನ್ನು ಕೆಲವರು ಸುಖವನ್ನು ಅನುಭವಿಸುತ್ತಿರುತ್ತಾರೆ. ಆದರೆ ಬ್ರಹ್ಮಪದವು ಈ ದ್ವಂದ್ವಗಳಿಗಿಂತಲೂ ಭಿನ್ನವಾದುದು ಮತ್ತು ವಿಲಕ್ಷಣವಾದುದು. ಈ ವಿಷಯದಲ್ಲಿ ನಿನಗೆ ಗೊಂದಲ ಬೇಡ.
12318044a ತ್ಯಜ ಧರ್ಮಮಧರ್ಮಂ ಚ ಉಭೇ ಸತ್ಯಾನೃತೇ ತ್ಯಜ|
12318044c ಉಭೇ ಸತ್ಯಾನೃತೇ ತ್ಯಕ್ತ್ವಾ ಯೇನ ತ್ಯಜಸಿ ತಂ ತ್ಯಜ||
ಧರ್ಮ-ಅಧರ್ಮಗಳೆರಡನ್ನೂ ತ್ಯಜಿಸು. ಸತ್ಯ-ಅನೃತಗಳೆರಡನ್ನೂ ತ್ಯಜಿಸು. ಸತ್ಯಾನೃತಗಳೆರಡನ್ನೂ ತ್ಯಜಿಸಿ ಅವನ್ನು ಯಾವುದರಿಂದ ತ್ಯಜಿಸಿದೆಯೋ ಅದನ್ನೂ ತ್ಯಜಿಸು.
12318045a ಏತತ್ತೇ ಪರಮಂ ಗುಹ್ಯಮಾಖ್ಯಾತಮೃಷಿಸತ್ತಮ|
12318045c ಯೇನ ದೇವಾಃ ಪರಿತ್ಯಜ್ಯ ಮರ್ತ್ಯಲೋಕಂ ದಿವಂ ಗತಾಃ||
ಋಷಿಸತ್ತಮ! ಯಾವುದರಿಂದ ದೇವತೆಗಳು ಮರ್ತ್ಯಲೋಕವನ್ನು ತ್ಯಜಿಸಿ ದಿವಕ್ಕೆ ಹೋದರೋ ಆ ಪರಮ ಗುಹ್ಯ ಆಖ್ಯಾನವನ್ನು ನಿನಗೆ ಹೇಳಿದ್ದೇನೆ.””
12318046 ಭೀಷ್ಮ ಉವಾಚ|
12318046a ನಾರದಸ್ಯ ವಚಃ ಶ್ರುತ್ವಾ ಶುಕಃ ಪರಮಬುದ್ಧಿಮಾನ್|
12318046c ಸಂಚಿಂತ್ಯ ಮನಸಾ ಧೀರೋ ನಿಶ್ಚಯಂ ನಾಧ್ಯಗಚ್ಚತ||
ಭೀಷ್ಮನು ಹೇಳಿದನು: “ನಾರದನ ವಚನವನ್ನು ಕೇಳಿ ಪರಮಬುದ್ಧಿಮಾನ್ ಧೀರ ಶುಕನು ಮನಸ್ಸಿನಲ್ಲಿಯೇ ಯೋಚಿಸಿ ಯಾವ ನಿಶ್ಚಯಕ್ಕೂ ಬರಲಿಲ್ಲ.
12318047a ಪುತ್ರದಾರೈರ್ಮಹಾನ್ಕ್ಲೇಶೋ ವಿದ್ಯಾಮ್ನಾಯೇ ಮಹಾನ್ಶ್ರಮಃ|
12318047c ಕಿಂ ನು ಸ್ಯಾಚ್ಚಾಶ್ವತಂ ಸ್ಥಾನಮಲ್ಪಕ್ಲೇಶಂ ಮಹೋದಯಮ್||
“ಹೆಂಡತಿ-ಮಕ್ಕಳಿಂದ ಮಹಾ ಕ್ಲೇಶವುಂಟಾಗುತ್ತದೆ. ವಿದ್ಯೆಯನ್ನು ಪಡೆದುಕೊಳ್ಳುವುದೂ ಮಹಾ ಶ್ರಮಸಾಧ್ಯವಾದುದು. ಅಲ್ಪಕ್ಲೇಶದಿಂದ ಮಹಾ ಅಭ್ಯುದಯವಾಗುವ ಶಾಶ್ವತ ಸ್ಥಾನವನ್ನು ಹೇಗೆ ಪಡೆದುಕೊಳ್ಳಬಹುದು?”
12318048a ತತೋ ಮುಹೂರ್ತಂ ಸಂಚಿಂತ್ಯ ನಿಶ್ಚಿತಾಂ ಗತಿಮಾತ್ಮನಃ|
12318048c ಪರಾವರಜ್ಞೋ ಧರ್ಮಸ್ಯ ಪರಾಂ ನೈಃಶ್ರೇಯಸೀಂ ಗತಿಮ್||
ಒಂದು ಮುಹೂರ್ತಕಾಲ ಹೀಗೆ ಯೋಚಿಸಿ ಆ ಪರಾವರಜ್ಞನು ಮುಕ್ತಿಯ ಮಾರ್ಗವಾದ ಪರಮ ಧರ್ಮದ ಕುರಿತು ತನ್ನಲ್ಲಿ ತಾನೇ ನಿಶ್ಚಯಿಸಿದನು.
12318049a ಕಥಂ ತ್ವಹಮಸಂಕ್ಲಿಷ್ಟೋ ಗಚ್ಚೇಯಂ ಪರಮಾಂ ಗತಿಮ್|
12318049c ನಾವರ್ತೇಯಂ ಯಥಾ ಭೂಯೋ ಯೋನಿಸಂಸಾರಸಾಗರೇ||
“ಯಾವುದಕ್ಕೂ ಅಂಟಿಕೊಳ್ಳದೇ ಮತ್ತು ಪುನಃ ಈ ಯೋನಿ ಸಂಸಾರಸಾಗರಕ್ಕೆ ಪುನಃ ಹಿಂದಿರುಗದಂತಹ ಆ ಪರಮ ಗತಿಯಲ್ಲಿ ನಾನು ಹೇಗೆ ಹೋಗಲಿ?
12318050a ಪರಂ ಭಾವಂ ಹಿ ಕಾಂಕ್ಷಾಮಿ ಯತ್ರ ನಾವರ್ತತೇ ಪುನಃ|
12318050c ಸರ್ವಸಂಗಾನ್ ಪರಿತ್ಯಜ್ಯ ನಿಶ್ಚಿತಾಂ ಮನಸೋ ಗತಿಮ್||
ಎಲ್ಲಿಂದ ಪುನಃ ಹಿಂದಿರುಗಬೇಕಾಗುವುದಿಲ್ಲವೋ ಆ ಪರಮ ಭಾವವನ್ನು ಹೊಂದಲು ಬಯಸುತ್ತೇನೆ. ಸರ್ವಸಂಗಗಳನ್ನೂ ಪರಿತ್ಯಜಿಸಿ ಮನಸ್ಸಿನ ಮೂಲಕ ಆ ಉತ್ತಮ ಗತಿಯನ್ನು ಪಡೆಯಲು ನಿಶ್ಚಯಿಸಿದ್ದೇನೆ.
12318051a ತತ್ರ ಯಾಸ್ಯಾಮಿ ಯತ್ರಾತ್ಮಾ ಶಮಂ ಮೇಽಧಿಗಮಿಷ್ಯತಿ|
12318051c ಅಕ್ಷಯಶ್ಚಾವ್ಯಯಶ್ಚೈವ ಯತ್ರ ಸ್ಥಾಸ್ಯಾಮಿ ಶಾಶ್ವತಃ||
ಎಲ್ಲಿ ನನ್ನ ಆತ್ಮವು ಶಾಂತಿಯನ್ನು ಪಡೆದುಕೊಳ್ಳುವುದೋ ಅಲ್ಲಿಗೆ ಹೋಗುತ್ತೇನೆ. ಅಲ್ಲಿ ನಾನು ಅಕ್ಷಯನೂ ಅವ್ಯಯನೂ ಮತ್ತು ಶಾಶ್ವತನೂ ಆಗಿರುತ್ತೇನೆ.
12318052a ನ ತು ಯೋಗಮೃತೇ ಶಕ್ಯಾ ಪ್ರಾಪ್ತುಂ ಸಾ ಪರಮಾ ಗತಿಃ|
12318052c ಅವಬಂಧೋ ಹಿ ಮುಕ್ತಸ್ಯ ಕರ್ಮಭಿರ್ನೋಪಪದ್ಯತೇ||
ಯೋಗಮಾರ್ಗವನ್ನು ಬಿಟ್ಟು ಆ ಪರಮ ಗತಿಯನ್ನು ಹೊಂದಲು ಸಾಧ್ಯವಿಲ್ಲ. ಮುಕ್ತನಾದವನು ಕರ್ಮಬಂಧನಗಳಲ್ಲಿ ಸಿಲುಕಬಾರದು.
12318053a ತಸ್ಮಾದ್ಯೋಗಂ ಸಮಾಸ್ಥಾಯ ತ್ಯಕ್ತ್ವಾ ಗೃಹಕಲೇವರಮ್|
12318053c ವಾಯುಭೂತಃ ಪ್ರವೇಕ್ಷ್ಯಾಮಿ ತೇಜೋರಾಶಿಂ ದಿವಾಕರಮ್||
ಆದುದರಿಂದ ಯೋಗವನ್ನೇ ಆಶ್ರಯಿಸಿ ಗೃಹರೂಪವಾಗಿರುವ ಈ ಶರೀರವನ್ನು ತ್ಯಜಿಸಿ ವಾಯುರೂಪನಾಗಿ ತೇಜೋರಾಶಿ ದಿವಾಕರನನ್ನು ಪ್ರವೇಶಿಸುತ್ತೇನೆ.
12318054a ನ ಹ್ಯೇಷ ಕ್ಷಯಮಾಪ್ನೋತಿ ಸೋಮಃ ಸುರಗಣೈರ್ಯಥಾ|
12318054c ಕಂಪಿತಃ ಪತತೇ ಭೂಮಿಂ ಪುನಶ್ಚೈವಾಧಿರೋಹತಿ|
12318054e ಕ್ಷೀಯತೇ ಹಿ ಸದಾ ಸೋಮಃ ಪುನಶ್ಚೈವಾಭಿಪೂರ್ಯತೇ[8]||
ಸುರಗಣಗಳಿಂದ ಸೋಮನು ಕ್ಷಯಹೊಂದುವಂತೆ ಇವನು ಕ್ಷಯವನ್ನು ಹೊಂದುವುದಿಲ್ಲ. ಕಂಪಿತನಾಗಿ ಭೂಮಿಯ ಮೇಲೆ ಬಿದ್ದರೂ ಪುನಃ ಮೇಲೇರುತ್ತಾನೆ. ಸೋಮನು ಸದಾ ಕ್ಷೀಣಿಸುತ್ತಿರುತ್ತಾನೆ. ಪುನಃ ವೃದ್ಧಿಯನ್ನೂ ಹೊಂದುತ್ತಿರುತ್ತಾನೆ.
12318055a ರವಿಸ್ತು ಸಂತಾಪಯತಿ ಲೋಕಾನ್ರಶ್ಮಿಭಿರುಲ್ಬಣೈಃ|
12318055c ಸರ್ವತಸ್ತೇಜ ಆದತ್ತೇ ನಿತ್ಯಮಕ್ಷಯಮಂಡಲಃ||
ರವಿಯಾದರೋ ತನ್ನ ಪ್ರಖರ ಕಿರಣಗಳಿಂದ ಸಮಸ್ತ ಲೋಕಗಳನ್ನೂ ಸಂತಾಪಗೊಳಿಸುತ್ತಾನೆ. ಅವನು ಎಲ್ಲಕಡೆಗಳಿಂದ ತೇಜಸ್ಸನ್ನು ಸಂಗ್ರಹಿಸುತ್ತಾನೆ. ಆದುದರಿಂದ ಅವನ ಮಂಡಲವು ನಿತ್ಯವೂ ಅಕ್ಷಯವಾಗಿರುತ್ತದೆ.
12318056a ಅತೋ ಮೇ ರೋಚತೇ ಗಂತುಮಾದಿತ್ಯಂ ದೀಪ್ತತೇಜಸಮ್|
12318056c ಅತ್ರ ವತ್ಸ್ಯಾಮಿ ದುರ್ಧರ್ಷೋ ನಿಃಸಂಗೇನಾಂತರಾತ್ಮನಾ||
ಆದುದರಿಂದ ದೀಪ್ತತೇಜಸ ಆದಿತ್ಯಮಂಡಲಕ್ಕೆ ಹೋಗಲು ಇಷ್ಟಪಡುತ್ತೇನೆ. ಅಲ್ಲಿ ದುರ್ಧರ್ಷನಾಗಿ ನಿಃಸಂಗನಾಗಿ ಅಂತರಾತ್ಮನಲ್ಲಿ ವಾಸಿಸುತ್ತೇನೆ.
12318057a ಸೂರ್ಯಸ್ಯ ಸದನೇ ಚಾಹಂ ನಿಕ್ಷಿಪ್ಯೇದಂ ಕಲೇವರಮ್|
12318057c ಋಷಿಭಿಃ ಸಹ ಯಾಸ್ಯಾಮಿ ಸೌರಂ ತೇಜೋಽತಿದುಃಸಹಮ್||
ಸೂರ್ಯನ ಸದನದಲ್ಲಿ ಈ ಶರೀರವನ್ನು ಇಟ್ಟು ಋಷಿಗಳೊಂದಿಗೆ ಅತಿ ದುಃಸಹವಾದ ಸೌರ ತೇಜಸ್ಸನ್ನು ಪ್ರವೇಶಿಸುತ್ತೇನೆ.
12318058a ಆಪೃಚ್ಚಾಮಿ ನಗಾನ್ನಾಗಾನ್ಗಿರೀನುರ್ವೀಂ ದಿಶೋ ದಿವಮ್|
12318058c ದೇವದಾನವಗಂಧರ್ವಾನ್ ಪಿಶಾಚೋರಗರಾಕ್ಷಸಾನ್||
ಸೂರ್ಯಲೋಕಕ್ಕೆ ಹೋಗಲು ವೃಕ್ಷಗಳು, ಪರ್ವತಗಳು, ಬೆಟ್ಟಗಳು, ಭೂಮಿ, ದಶದಿಕ್ಕುಗಳು, ಸ್ವರ್ಗ, ದೇವ-ದಾನವ-ಗಂಧರ-ಪಿಶಾಚ-ಉರಗ-ರಾಕ್ಷಸರ ಅನುಮತಿಯನ್ನು ಕೇಳುತ್ತೇನೆ.
12318059a ಲೋಕೇಷು ಸರ್ವಭೂತಾನಿ ಪ್ರವೇಕ್ಷ್ಯಾಮಿ ನಸಂಶಯಃ|
12318059c ಪಶ್ಯಂತು ಯೋಗವೀರ್ಯಂ ಮೇ ಸರ್ವೇ ದೇವಾಃ ಸಹರ್ಷಿಭಿಃ||
ನಿಸ್ಸಂಶಯವಾಗಿ ನಾನು ಲೋಕದ ಸರ್ವಭೂತಗಳನ್ನೂ ಪ್ರವೇಶಿಸುತ್ತೇನೆ. ಋಷಿಗಳೊಂದಿಗೆ ಸರ್ವ ದೇವತೆಗಳೂ ನನ್ನ ಯೋಗವೀರ್ಯವನ್ನು ನೋಡಲಿ.”
12318060a ಅಥಾನುಜ್ಞಾಪ್ಯ ತಮೃಷಿಂ ನಾರದಂ ಲೋಕವಿಶ್ರುತಮ್|
12318060c ತಸ್ಮಾದನುಜ್ಞಾಂ ಸಂಪ್ರಾಪ್ಯ ಜಗಾಮ ಪಿತರಂ ಪ್ರತಿ||
ಲೋಕವಿಶ್ರುತ ಋಷಿ ನಾರದನ ಅನುಮತಿಯನ್ನು ಕೇಳಿ ಪಡೆದು ಅವನು ತನ್ನ ತಂದೆಯ ಬಳಿ ಹೋದನು.
12318061a ಸೋಽಭಿವಾದ್ಯ ಮಹಾತ್ಮಾನಂ ಋಷಿಂ ದ್ವೈಪಾಯನಂ ಮುನಿಮ್|
12318061c ಶುಕಃ ಪ್ರದಕ್ಷಿಣೀಕೃತ್ಯ ಕೃಷ್ಣಮಾಪೃಷ್ಟವಾನ್ಮುನಿಃ||
ಮಹಾತ್ಮ ಮುನಿ ಋಷಿ ದ್ವೈಪಾಯನನನ್ನು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಶುಕ ಮುನಿಯು ಕೃಷ್ಣನಲ್ಲಿ ಅನುಜ್ಞೆಯನ್ನು ಕೇಳಿದನು.
12318062a ಶ್ರುತ್ವಾ ಋಷಿಸ್ತದ್ವಚನಂ ಶುಕಸ್ಯ
ಪ್ರೀತೋ ಮಹಾತ್ಮಾ ಪುನರಾಹ ಚೈನಮ್|
12318062c ಭೋ ಭೋಃ ಪುತ್ರ ಸ್ಥೀಯತಾಂ ತಾವದದ್ಯ
ಯಾವಚ್ಚಕ್ಷುಃ ಪ್ರೀಣಯಾಮಿ ತ್ವದರ್ಥಮ್||
ಶುಕನ ಆ ಮಾತನ್ನು ಕೇಳಿ ಮಹಾತ್ಮ ಋಷಿಯು ಪ್ರೀತನಾಗಿ ಪುನಃ ಅವನಿಗೆ ಇದನ್ನು ಹೇಳಿದನು ಕೂಡ: “ಭೋ!ಭೋ! ಪುತ್ರ! ನಿಲ್ಲು! ಇಂದು ನಿನ್ನನ್ನು ನೋಡುತ್ತಾ ನನ್ನ ಕಣ್ಣುಗಳಿಗೆ ಪ್ರಿಯವಾದುದನ್ನು ಮಾಡಿಕೊಳ್ಳುತ್ತೇನೆ.”
12318063a ನಿರಪೇಕ್ಷಃ ಶುಕೋ ಭೂತ್ವಾ ನಿಃಸ್ನೇಹೋ ಮುಕ್ತಬಂಧನಃ|
12318063c ಮೋಕ್ಷಮೇವಾನುಸಂಚಿಂತ್ಯ ಗಮನಾಯ ಮನೋ ದಧೇ|
12318063e ಪಿತರಂ ಸಂಪರಿತ್ಯಜ್ಯ ಜಗಾಮ ದ್ವಿಜಸತ್ತಮಃ||
ಆದರೆ ಶುಕನು ನಿರಪೇಕ್ಷನೂ ನಿಃಸ್ನೇಹನೂ, ಬಂಧನ ಮುಕ್ತನೂ ಆಗಿ ಮೋಕ್ಷದ ಕುರಿತೇ ಚಿಂತಿಸುತ್ತಾ ಹೋಗಲು ಮನಸ್ಸುಮಾಡಿದನು. ತಂದೆಯನ್ನು ಪರಿತ್ಯಜಿಸಿ ಆ ದ್ವಿಜಸತ್ತಮನು ಹೊರಟುಹೋದನು.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕಾಭಿಗಮನೇ ಅಷ್ಟಾದಶಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕಾಭಿಗಮನ ಎನ್ನುವ ಮುನ್ನೂರಾಹದಿನೆಂಟನೇ ಅಧ್ಯಾಯವು.

[1] ಸುಖವನ್ನೇ ದುಃಖವೆಂಬುದಾಗಿಯೂ ದುಃಖವನ್ನೇ ಸುಖವೆಂಬುದಾಗಿಯೂ ತಿಳಿದುಕೊಳ್ಳುವುದು.
[2] ವ್ಯಥಿತಸ್ಯ ವಿಧಿತ್ಸಾಭಿಸ್ತಾಮೃತೋ ಜೀವಿತೈಷಿಣಃ| ಎಂಬ ಪಾಠಾಂತರವಿದೆ (ಭಾರತದರ್ಶನ).
[3] ಶೀಘ್ರಂ ಪರಶರೀರಾಣಿ ಚ್ಛಿನ್ನಬೀಜಂ ಶರೀರಿಣಮ್| ಎಂಬ ಪಾಠಾಂತರವಿದೆ (ಭಾರತದರ್ಶನ).
[4] ಸ ತಸ್ಯ ಸಹಜಾತಸ್ಯ ಸಪ್ತಮೀಂ ನವಮೀಂ ದಶಾಮ್| ಎಂಬ ಪಾಠಾಂತರವಿದೆ (ಭಾರತದರ್ಶನ).
[5] ಶರೀರದ ಹತ್ತು ದಶೆಗಳು: ಗರ್ಭವಾಸ, ಜನನ, ಬಾಲ್ಯ, ಕೌಮಾರ, ಪೌಗಂಡ (ಐದರಿಂದ ಹತ್ತರವರೆಗಿನ ಸ್ಥಿತಿ), ಯೌವನ, ಏಳನೆಯದಾದ ಸ್ಥಾವಿರ್ಯ (ಮುಪ್ಪು), ಎಂಟನೆಯ ಜರಾವಸ್ಥೆ (ಕಡುಮುಪ್ಪು), ಒಂಭತ್ತನೆಯ ಪ್ರಾಣ ನಿಂತು ಹೋಗುವಿದೆ ಮತ್ತು ಹತ್ತನೆಯದಾಗಿ ಪಂಚಭೂತಗಳ ಅಭಾವ.
[6] ಆಕ್ರಮ್ಯಾದದತೇ ರೋಗಾಃ ಪಶೂನ್ಪಶುಗಣಾ ಯಥಾ| ಎಂಬ ಪಾಠಾಂತರವಿದೆ (ಭಾರತದರ್ಶನ).
[7] ಶಠಾನ್ ಶೂರಾ ಎಂಬ ಪಾಠಾಂತರವಿದೆ (ಭಾರತದರ್ಶನ).
[8] ಭಾರತದರ್ಶನದಲ್ಲಿ ಇದರ ನಂತರ ಈ ಶ್ಲೋಕಾರ್ಧವಿದೆ: ನೇಚ್ಛಾಮ್ಯೇವಂ ವಿದತ್ವೈತೇ ಹ್ರಾಸ್ಸವೃದ್ಧೀ ಪುನಃ ಪುನಃ||