Shanti Parva: Chapter 330

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೩೦

ಭಗವನ್ನಾಮ ನಿರ್ವಚನ

ಶ್ರೀಕೃಷ್ಣನು ತನ್ನ ನಾಮಗಳ ಅರ್ಥಗಳನ್ನು ಅರ್ಜುನನಿಗೆ ತಿಳಿಸಿದುದು (1-79).

12330001 ಶ್ರೀಭಗವಾನುವಾಚ|

12330001a ಸೂರ್ಯಾಚಂದ್ರಮಸೌ ಶಶ್ವತ್ಕೇಶೈರ್ಮೇ ಅಂಶುಸಂಜ್ಞಿತೈಃ[1]|

12330001c ಬೋಧಯಂಸ್ತಾಪಯಂಶ್ಚೈವ ಜಗದುತ್ತಿಷ್ಠತಃ ಪೃಥಕ್||

ಶ್ರೀ ಭಗವಂತನು ಹೇಳಿದನು: “ಸೂರ್ಯ-ಚಂದ್ರರ ಕಿರಣಗಳೇ ನನ್ನ ಕೇಶಗಳೆಂದು ಹೇಳಲ್ಪಟ್ಟಿವೆ. ಅವರಿಬ್ಬರೂ ಅನುಕ್ರಮವಾಗಿ ಜಗತ್ತನ್ನು ಎಚ್ಚರಗೊಳಿಸುತ್ತಾ ಮತ್ತು ಅದಕ್ಕೆ ತಾಪವನ್ನುಂಟುಮಾಡುತ್ತಾ ಪ್ರತ್ಯೇಕ ಪ್ರತ್ಯೇಕವಾಗಿ ಉದಯಿಸುತ್ತಾರೆ.

12330002a ಬೋಧನಾತ್ತಾಪನಾಚ್ಚೈವ ಜಗತೋ ಹರ್ಷಣಂ ಭವೇತ್|

12330002c ಅಗ್ನೀಷೋಮಕೃತೈರೇಭಿಃ ಕರ್ಮಭಿಃ ಪಾಂಡುನಂದನ|

12330002e ಹೃಷೀಕೇಶೋಽಹಮೀಶಾನೋ ವರದೋ ಲೋಕಭಾವನಃ||

ಪಾಂಡುನಂದನ! ಅವರ ಭೋಧನ-ತಾಪನಗಳಿಂದ ಜಗತ್ತಿಗೆ ಹರ್ಷವುಂಟಾಗುತ್ತದೆ. ಅಗ್ನೀಷೋಮರು ಮಾಡುವ ಈ ಕರ್ಮಗಳಿಂದಲೇ ನಾನು ಈಶಾನನೂ, ವರದನೂ, ಲೋಕಭಾವನನೂ ಆದ ಹೃಷೀಕೇಶನಾಗಿದ್ದೇನೆ.

12330003a ಇಡೋಪಹೂತಯೋಗೇನ ಹರೇ ಭಾಗಂ ಕ್ರತುಷ್ವಹಮ್|

12330003c ವರ್ಣಶ್ಚ ಮೇ ಹರಿಶ್ರೇಷ್ಠಸ್ತಸ್ಮಾದ್ಧರಿರಹಂ ಸ್ಮೃತಃ||

ಇಡೋಪಹೂತಯೋಗದಿಂದ ನಾನು ಕ್ರತುವಿನ ಭಾಗವನ್ನು ಪರಿಗ್ರಹಿಸುತ್ತೇನೆ. ನನ್ನ ವರ್ಣವು ಶ್ರೇಷ್ಠ ಹರಿನ್ಮಣಿಯಂತೆ (ಪಚ್ಚೆಮಣಿಯಂತೆ) ಇರುವುದರಿಂದಲೂ ನಾನು ’ಹರಿ’ ಎಂದು ಕರೆಯಲ್ಪಡುತ್ತೇನೆ.

12330004a ಧಾಮ ಸಾರೋ ಹಿ ಲೋಕಾನಾಮೃತಂ ಚೈವ ವಿಚಾರಿತಮ್|

12330004c ಋತಧಾಮಾ ತತೋ ವಿಪ್ರೈಃ ಸತ್ಯಶ್ಚಾಹಂ ಪ್ರಕೀರ್ತಿತಃ||

“ಧಾಮ”ವು ಲೋಕಗಳ ಸಾರ. ”ಋತ”ವು ವಿಚಾರಿಸಿ ಕೈಗೊಂಡ ನಿರ್ಣಯ. ಆದುದರಿಂದ ವಿಪ್ರರು ನನ್ನನ್ನು ಋತಧಾಮನೆಂದೂ ಸತ್ಯನೆಂದೂ ವರ್ಣಿಸಿದ್ದಾರೆ.

12330005a ನಷ್ಟಾಂ ಚ ಧರಣೀಂ ಪೂರ್ವಮವಿಂದಂ ವೈ ಗುಹಾಗತಾಮ್|

12330005c ಗೋವಿಂದ ಇತಿ ಮಾಂ ದೇವಾ ವಾಗ್ಭಿಃ ಸಮಭಿತುಷ್ಟುವುಃ||

ಹಿಂದೆ ಧರಣಿಯು ನಷ್ಟಳಾಗಿ ಗುಹಾಗತಳಾಗಿದ್ದಾಗ ಅವಳನ್ನು ಮೇಲೆತ್ತಿದುದರಿಂದ ದೇವತೆಗಳು ನನ್ನನ್ನು ಗೋವಿಂದ[2] ಎಂದು ಸ್ತುತಿಸಿ ತೃಪ್ತಿಪಡಿಸಿದರು.

12330006a ಶಿಪಿವಿಷ್ಟೇತಿ ಚಾಖ್ಯಾಯಾಂ ಹೀನರೋಮಾ ಚ ಯೋ ಭವೇತ್|

12330006c ತೇನಾವಿಷ್ಟಂ ಹಿ ಯತ್ಕಿಂ ಚಿಚ್ಚಿಪಿವಿಷ್ಟಂ ಹಿ ತತ್ ಸ್ಮೃತಮ್||

ಶಿಪಿವಿಷ್ಟನೆಂಬ ನನ್ನ ಹೆಸರು ಹೀನರೋಮ ಅರ್ಥಾತ್ ಅಂಶಗಳಿಲ್ಲದವನು; ಅವಯವಗಳಿಲ್ಲವನು-ಶಿಪಿ ಎಂದಾಗುತ್ತದೆ. ಅಂಥಹ ಶಿಪಿಯಿಂದ ಈ ಜಗತ್ತು ಆವಿಷ್ಟಗೊಂಡಿದೆ. ಆದುದರಿಂದಲೇ ನಾನು ಶಿಪಿವಿಷ್ಟ ಎಂದು ಪ್ರಸಿದ್ಧನಾಗಿದ್ದೇನೆ.

12330007a ಯಾಸ್ಕೋ ಮಾಮೃಷಿರವ್ಯಗ್ರೋ ನೈಕಯಜ್ಞೇಷು ಗೀತವಾನ್|

12330007c ಶಿಪಿವಿಷ್ಟ ಇತಿ ಹ್ಯಸ್ಮಾದ್ಗುಹ್ಯನಾಮಧರೋ ಹ್ಯಹಮ್||

ಋಷಿ ಅವ್ಯಗ್ರ ಯಾಸ್ಕನು ಅನೇಕ ಯಜ್ಞಗಳಲ್ಲಿ ನನ್ನನ್ನು ಶಿಪಿವಿಷ್ಟ ಎಂಬ ನಾಮದಿಂದಲೇ ಸ್ತುತಿಸಿದ್ದಾನೆ. ಆ ಕಾರಣದಿಂದಲೂ ನಾನು ಆ ಗುಹ್ಯನಾಮವನ್ನು ಧರಿಸಿದ್ದೇನೆ.

12330008a ಸ್ತುತ್ವಾ ಮಾಂ ಶಿಪಿವಿಷ್ಟೇತಿ ಯಾಸ್ಕೋ ಋಷಿರುದಾರಧೀಃ|

12330008c ಮತ್ಪ್ರಸಾದಾದಧೋ ನಷ್ಟಂ ನಿರುಕ್ತಮಭಿಜಗ್ಮಿವಾನ್||

ನನ್ನನ್ನು ಶಿಪಿವಿಷ್ಟ ಎಂದು ಸ್ತುತಿಸಿ ಉದಾರಧೀ ಋಷಿ ಯಾಸ್ಕನು ನನ್ನ ಪ್ರಸಾದದಿಂದ ನಷ್ಟವಾಗಿದ್ದ ನಿರುಕ್ತಶಾಸ್ತ್ರವನ್ನು ಪುನಃ ಪಡೆದುಕೊಂಡನು.

12330009a ನ ಹಿ ಜಾತೋ ನ ಜಾಯೇಽಹಂ ನ ಜನಿಷ್ಯೇ ಕದಾ ಚನ|

12330009c ಕ್ಷೇತ್ರಜ್ಞಃ ಸರ್ವಭೂತಾನಾಂ ತಸ್ಮಾದಹಮಜಃ ಸ್ಮೃತಃ||

ನಾನು ಹಿಂದೆಂದೂ ಹುಟ್ಟಿದವನಲ್ಲ; ಈಗಲೂ ಹುಟ್ಟಿರುವುದಿಲ್ಲ; ಮುಂದೆ ಹುಟ್ಟುವುದೂ ಇಲ್ಲ. ನಾನು ಸರ್ವಭೂತಗಳ ಕ್ಷೇತ್ರಜ್ಞ. ಆದುದರಿಂದ ನನ್ನನ್ನು ಅಜ ಎಂದೂ ಕರೆಯುತ್ತಾರೆ.

12330010a ನೋಕ್ತಪೂರ್ವಂ ಮಯಾ ಕ್ಷುದ್ರಮಶ್ಲೀಲಂ ವಾ ಕದಾ ಚನ|

12330010c ಋತಾ ಬ್ರಹ್ಮಸುತಾ ಸಾ ಮೇ ಸತ್ಯಾ ದೇವೀ ಸರಸ್ವತೀ||

ಯಾವಾಗಲೂ ನಾನು ಕ್ಷುದ್ರ ಅಥವಾ ಅಶ್ಲೀಲ ಮಾತನಾಡಿಲ್ಲ. ಋತಾ, ಬ್ರಹ್ಮಸುತಾ, ಸತ್ಯಾ ದೇವೀ ಸರಸ್ವತಿಯೇ ನನ್ನ ವಾಣಿಯು.

12330011a ಸಚ್ಚಾಸಚ್ಚೈವ ಕೌಂತೇಯ ಮಯಾವೇಶಿತಮಾತ್ಮನಿ|

12330011c ಪೌಷ್ಕರೇ ಬ್ರಹ್ಮಸದನೇ ಸತ್ಯಂ ಮಾಮೃಷಯೋ ವಿದುಃ||

ಕೌಂತೇಯ! ಸತ್ತು ಮತ್ತು ಅಸತ್ತುಗಳು ನನ್ನಲ್ಲಿಯೇ ನೆಲೆಸಿವೆ. ಆದುದರಿಂದ ಪುಷ್ಕರದ ಬ್ರಹ್ಮಸದನದಲ್ಲಿ ಋಷಿಗಳು ನನ್ನನ್ನು ಸತ್ಯ ಎಂದು ತಿಳಿದಿದ್ದಾರೆ.

12330012a ಸತ್ತ್ವಾನ್ನ ಚ್ಯುತಪೂರ್ವೋಽಹಂ ಸತ್ತ್ವಂ ವೈ ವಿದ್ಧಿ ಮತ್ಕೃತಮ್|

12330012c ಜನ್ಮನೀಹಾಭವತ್ಸತ್ತ್ವಂ ಪೌರ್ವಿಕಂ ಮೇ ಧನಂಜಯ||

ಯಾವಾಗಲೂ ನಾನು ಸತ್ತ್ವದಿಂದ ಚ್ಯುತನಾಗಿಲ್ಲ. ಸತ್ತ್ವವನ್ನು ನಾನೇ ಮಾಡಿದ್ದುದು ಎಂದು ತಿಳಿದುಕೋ. ಧನಂಜಯ! ಹಿಂದಿನ ನನ್ನ ಆ ಸತ್ತ್ವವು ಈ ಜನ್ಮದಲ್ಲಿಯೂ ನನ್ನಲ್ಲಿದೆ.

12330013a ನಿರಾಶೀಃಕರ್ಮಸಂಯುಕ್ತಂ ಸಾತ್ವತಂ ಮಾಂ ಪ್ರಕಲ್ಪಯ|

12330013c ಸಾತ್ವತಜ್ಞಾನದೃಷ್ಟೋಽಹಂ ಸಾತ್ವತಃ ಸಾತ್ವತಾಂ ಪತಿಃ||

ನಿರಾಶೀ ಕರ್ಮಸಂಯುಕ್ತನಾಗಿರುವ ಸಾತ್ವತನೆಂದು ನನ್ನನ್ನು ತಿಳಿ. ಸಾತ್ವತಜ್ಞಾನವನ್ನು ತೋರಿಸಿಕೊಡುವವನು ನಾನು. ಸಾತ್ವತ. ಸಾತ್ವತರ ಪತಿ.

12330014a ಕೃಷಾಮಿ ಮೇದಿನೀಂ ಪಾರ್ಥ ಭೂತ್ವಾ ಕಾರ್ಷ್ಣಾಯಸೋ ಮಹಾನ್|

12330014c ಕೃಷ್ಣೋ ವರ್ಣಶ್ಚ ಮೇ ಯಸ್ಮಾತ್ತಸ್ಮಾತ್ ಕೃಷ್ಣೋಽಹಮರ್ಜುನ||

ಪಾರ್ಥ! ಕಬ್ಬಿಣದ ಮಹಾ ನೇಗಿಲಾಗಿ ನಾನು ಮೇದಿನಿಯನ್ನು ಹೂಳುತ್ತೇನೆ. ನನ್ನ ಬಣ್ಣವೂ ಕೃಷ್ಣವರ್ಣ. ಅರ್ಜುನ! ಈ ಕಾರಣಗಳಿಂದ ನಾನು ಕೃಷ್ಣನಾಗಿದ್ದೇನೆ.

12330015a ಮಯಾ ಸಂಶ್ಲೇಷಿತಾ ಭೂಮಿರದ್ಭಿರ್ವ್ಯೋಮ ಚ ವಾಯುನಾ|

12330015c ವಾಯುಶ್ಚ ತೇಜಸಾ ಸಾರ್ಧಂ ವೈಕುಂಠತ್ವಂ ತತೋ ಮಮ||

ನಾನೇ ಭೂಮಿಯನ್ನು ನೀರಿನಿಂದಲೂ, ವ್ಯೋಮವನ್ನು ವಾಯುವಿನಿಂದಲೂ, ವಾಯುವನ್ನು ತೇಜಸ್ಸಿನೊಂದಿಗೂ ಸೇರಿಸಿದ್ದೇನೆ. ಆದು ನನ್ನ ವೈಕುಂಠತ್ವ[3].

12330016a ನಿರ್ವಾಣಂ ಪರಮಂ ಸೌಖ್ಯಂ[4] ಧರ್ಮೋಽಸೌ ಪರ ಉಚ್ಯತೇ|

12330016c ತಸ್ಮಾನ್ನ ಚ್ಯುತಪೂರ್ವೋಽಹಮಚ್ಯುತಸ್ತೇನ ಕರ್ಮಣಾ||

ಪರಮ ಶಾಂತಿಮಯ ಸೌಖ್ಯವೇ ಪರಮಧರ್ಮ ಎನ್ನುತ್ತಾರೆ. ಆ ಪರಮ ಧರ್ಮದಿಂದ ನಾನು ಎಂದೂ ಚ್ಯುತನಾಗಿಲ್ಲ. ನನ್ನ ಆ ಕರ್ಮದಿಂದ ನಾನು ಅಚ್ಯುತ.

12330017a ಪೃಥಿವೀನಭಸೀ ಚೋಭೇ ವಿಶ್ರುತೇ ವಿಶ್ವಲೌಕಿಕೇ[5]|

12330017c ತಯೋಃ ಸಂಧಾರಣಾರ್ಥಂ ಹಿ ಮಾಮಧೋಕ್ಷಜಮಂಜಸಾ||

ಪೃಥ್ವಿ ಆಕಾಶಗಳು ವಿಶ್ವಲೌಕಿಕಗಳೆಂದು ಪ್ರಸಿದ್ಧವಾಗಿವೆ. ಅವೆರಡನ್ನೂ ನಾನು ಧರಿಸಿರುವುದರಿಂದ ನನ್ನನ್ನು ಅಧೋಕ್ಷಜನೆಂದು ಕರೆಯುತ್ತಾರೆ.

12330018a ನಿರುಕ್ತಂ ವೇದವಿದುಷೋ ಯೇ ಚ ಶಬ್ದಾರ್ಥಚಿಂತಕಾಃ|

12330018c ತೇ ಮಾಂ ಗಾಯಂತಿ ಪ್ರಾಗ್ವಂಶೇ ಅಧೋಕ್ಷಜ ಇತಿ ಸ್ಥಿತಿಃ||

ಶಬ್ದಾರ್ಥಚಿಂತಕ ವೇದವಿದುಷರು ಪ್ರಾಗ್ವಂಶದಲ್ಲಿ[6] ಕಲೆತು ಅಧೋಕ್ಷಜ[7] ಎಂಬ ಹೆಸರಿನ ಮೂಲಕ ನನ್ನ ಮಹಿಮೆಯನ್ನು ಕೊಂಡಾಡುತ್ತಾರೆ.

12330019a ಶಬ್ದ ಏಕಮತೈರೇಷ ವ್ಯಾಹೃತಃ ಪರಮರ್ಷಿಭಿಃ|

12330019c ನಾನ್ಯೋ ಹ್ಯಧೋಕ್ಷಜೋ ಲೋಕೇ ಋತೇ ನಾರಾಯಣಂ ಪ್ರಭುಮ್||

ಪರಮಋಷಿಗಳು ಅಧೋಕ್ಷಜ ಶಬ್ದವನ್ನು ಮೂರು ಪ್ರತ್ಯೇಕಪದಗಳ ಸಮುದಾಯವೆನ್ನುತ್ತಾರೆ. ಅ-ಧೋಕ್ಷ-ಜ. ಅ ಎಂದರೆ ಲಯಸ್ಥಾನ. ಧೋಕ್ಷ ಎಂದರೆ ಪಾಲನಸ್ಥಾನ. ಜ ಎಂದರೆ ಉತ್ಪತ್ತಿ ಸ್ಥಾನ. ಸೃಷ್ಟಿ-ಸ್ಥಿತಿ-ಲಯಗಳಿಗೆ ಆಶ್ರಯನಾಗಿರುವವನು ಲೋಕದಲ್ಲಿ ನಾರಾಯಣನ ಹೊರತಾಗಿ ಬೇರೆ ಯಾರೂ ಇಲ್ಲ. ಆದುದರಿಂದ ಅಧೋಕ್ಷಜ ಎಂಬ ಹೆಸರು ಪ್ರಭು ನಾರಾಯಣನಿಗೆ ಹೊರತಾಗಿ ಬೇರೆ ಯಾರಿಗೂ ಇಲ್ಲ.

12330020a ಘೃತಂ ಮಮಾರ್ಚಿಷೋ ಲೋಕೇ ಜಂತೂನಾಂ ಪ್ರಾಣಧಾರಣಮ್|

12330020c ಘೃತಾರ್ಚಿರಹಮವ್ಯಗ್ರೈರ್ವೇದಜ್ಞೈಃ ಪರಿಕೀರ್ತಿತಃ||

ಲೋಕದಲ್ಲಿ ಜಂತುಗಳ ಪ್ರಾಣಧಾರಣೆಮಾಡುವ ಘೃತವು ನನ್ನ ಜ್ವಾಲೆಯೇ ಆಗಿದೆ. ಆದುದರಿಂದ ಅವ್ಯಗ್ರ ವೇದಜ್ಞರು ನನ್ನನ್ನು ಘೃತಾರ್ಚಿ ಎಂದು ಸ್ತೋತ್ರಮಾಡುತ್ತಾರೆ.

12330021a ತ್ರಯೋ ಹಿ ಧಾತವಃ ಖ್ಯಾತಾಃ ಕರ್ಮಜಾ ಇತಿ ಚ ಸ್ಮೃತಾಃ|

12330021c ಪಿತ್ತಂ ಶ್ಲೇಷ್ಮಾ ಚ ವಾಯುಶ್ಚ ಏಷ ಸಂಘಾತ ಉಚ್ಯತೇ||

12330022a ಏತೈಶ್ಚ ಧಾರ್ಯತೇ ಜಂತುರೇತೈಃ ಕ್ಷೀಣೈಶ್ಚ ಕ್ಷೀಯತೇ|

12330022c ಆಯುರ್ವೇದವಿದಸ್ತಸ್ಮಾತ್ತ್ರಿಧಾತುಂ ಮಾಂ ಪ್ರಚಕ್ಷತೇ||

ಕರ್ಮಗಳಿಂದ ಹುಟ್ಟಿದ ಮೂರು ಧಾತುಗಳು ಖ್ಯಾತವಾಗಿವೆ: ಪಿತ್ತ, ಕಫ ಮತ್ತು ವಾತ. ಈ ಮೂರು ಧಾತುಗಳ ಸಮುದಾಯವನ್ನು ತ್ರಿಧಾತು ಎನ್ನುತ್ತಾರೆ. ಜಂತುವು ಇವುಗಳಿಂದಲೇ ಜೀವಿಸಿರುತ್ತದೆ. ಇವು ಕ್ಷೀಣಿಸಲು ಪ್ರಾಣಿಯೂ ಕ್ಷೀಣಿಸುತ್ತದೆ. ಆದುದರಿಂದ ಆಯುರ್ವೇದವಿದರು ನನ್ನನ್ನು ತ್ರಿಧಾತು ಎಂದು ಹೇಳುತ್ತಾರೆ.

12330023a ವೃಷೋ ಹಿ ಭಗವಾನ್ಧರ್ಮಃ ಖ್ಯಾತೋ ಲೋಕೇಷು ಭಾರತ|

12330023c ನೈಘಂಟುಕಪದಾಖ್ಯಾತಂ ವಿದ್ಧಿ ಮಾಂ ವೃಷಮುತ್ತಮಮ್||

ಭಾರತ! ಭಗವಾನ್ ಧರ್ಮನು ಲೋಕಗಳಲ್ಲಿ ವೃಷ ಎಂದು ಖ್ಯಾತನಾಗಿದ್ದಾನೆ. ಶಬ್ದಕೋಶದಲ್ಲಿ ಹೇಳಿರುವಂತೆ ನನ್ನನ್ನು ಉತ್ತಮ ವೃಷ ಎಂದು ತಿಳಿ.

12330024a ಕಪಿರ್ವರಾಹಃ ಶ್ರೇಷ್ಠಶ್ಚ ಧರ್ಮಶ್ಚ ವೃಷ ಉಚ್ಯತೇ|

12330024c ತಸ್ಮಾದ್ವೃಷಾಕಪಿಂ ಪ್ರಾಹ ಕಶ್ಯಪೋ ಮಾಂ ಪ್ರಜಾಪತಿಃ||

ಕಪಿ ಎಂದರೆ ವರಾಹ ಮತ್ತು ಶ್ರೇಷ್ಠ. ಧರ್ಮವನ್ನು ವೃಷ ಎಂದು ಕರೆಯುತ್ತಾರೆ. ಆದುದರಿಂದ ಪ್ರಜಾಪತಿ ಕಶ್ಯಪನು ನನ್ನನ್ನು ವೃಷಾಕಪಿ ಎಂದು ಕರೆದನು.

12330025a ನ ಚಾದಿಂ ನ ಮಧ್ಯಂ ತಥಾ ನೈವ ಚಾಂತಂ

ಕದಾ ಚಿದ್ವಿದಂತೇ ಸುರಾಶ್ಚಾಸುರಾಶ್ಚ|

12330025c ಅನಾದ್ಯೋ ಹ್ಯಮಧ್ಯಸ್ತಥಾ ಚಾಪ್ಯನಂತಃ

ಪ್ರಗೀತೋಽಹಮೀಶೋ ವಿಭುರ್ಲೋಕಸಾಕ್ಷೀ||

ಸುರಾಸುರರಾಗಲೀ ಯಾರೂ ಎಂದೂ ನನ್ನ ಆದಿ, ಮಧ್ಯ ಮತ್ತು ಅಂತ್ಯಗಳನ್ನು ತಿಳಿದಿಲ್ಲ. ಆದುದರಿಂದ ನಾನು ಅನಾದಿ, ಅಮಧ್ಯ ಮತ್ತು ಅನಂತನೆಂದು ಸ್ತುತಿಸಲ್ಪಡುತ್ತೇನೆ. ನಾನು ಈಶ. ವಿಭು. ಮತ್ತು ಲೋಕಸಾಕ್ಷೀ.

12330026a ಶುಚೀನಿ ಶ್ರವಣೀಯಾನಿ ಶೃಣೋಮೀಹ ಧನಂಜಯ|

12330026c ನ ಚ ಪಾಪಾನಿ ಗೃಹ್ಣಾಮಿ ತತೋಽಹಂ ವೈ ಶುಚಿಶ್ರವಾಃ||

ಧನಂಜಯ! ಶುಚಿಯಾದ ಮತ್ತು ಕೇಳಲು ಯೋಗ್ಯವಾದ ಮಾತುಗಳನ್ನೇ ಕೇಳುತ್ತೇನೆ. ಪಾಪಪೂರ್ಣ ಮಾತುಗಳನ್ನು ಗ್ರಹಿಸುವುದಿಲ್ಲ. ಆದುದರಿಂದ ನಾನು ಶುಚಿಶ್ರವನು.

12330027a ಏಕಶೃಂಗಃ ಪುರಾ ಭೂತ್ವಾ ವರಾಹೋ ದಿವ್ಯದರ್ಶನಃ|

12330027c ಇಮಾಮುದ್ಧೃತವಾನ್ಭೂಮಿಮೇಕಶೃಂಗಸ್ತತೋ ಹ್ಯಹಮ್||

ಹಿಂದೆ ನಾನು ಏಕಶೃಂಗನಾದ ದಿವ್ಯದರ್ಶನ ವರಾಹನಾಗಿ ಈ ಭೂಮಿಯನ್ನು ಮೇಲೆತ್ತಿದ್ದೆ. ಆದುದರಿಂದ ನಾನು ಏಕಶೃಂಗ.

12330028a ತಥೈವಾಸಂ ತ್ರಿಕಕುದೋ ವಾರಾಹಂ ರೂಪಮಾಸ್ಥಿತಃ|

12330028c ತ್ರಿಕಕುತ್ತೇನ ವಿಖ್ಯಾತಃ ಶರೀರಸ್ಯ ತು ಮಾಪನಾತ್||

ಹಾಗೆಯೇ ನಾನು ವರಾಹರೂಪಿಯಾಗಿದ್ದಾಗ ಮೂರು ಹಿಳಲುಗಳನ್ನು ಹೊಂದಿದ್ದೆನು. ಶರೀರವನ್ನು ಅಳೆಯುವಾಗ ನಾನು ತ್ರಿಕಕುತ್ ಎಂದು ವಿಖ್ಯಾತನಾದೆನು.

12330029a ವಿರಿಂಚ ಇತಿ ಯಃ ಪ್ರೋಕ್ತಃ ಕಪಿಲಜ್ಞಾನಚಿಂತಕೈಃ|

12330029c ಸ ಪ್ರಜಾಪತಿರೇವಾಹಂ ಚೇತನಾತ್ಸರ್ವಲೋಕಕೃತ್||

ಕಪಿಲಜ್ಞಾನಚಿಂತಕರು ಯಾರನ್ನು ವಿರಿಂಚ ಎಂದು ಹೇಳಿದ್ದಾರೋ ಆ ಪ್ರಜಾಪತಿ, ಸರ್ವಲೋಕೃತ್ ಚೇತನವು ನಾನೇ.

12330030a ವಿದ್ಯಾಸಹಾಯವಂತಂ ಮಾಮಾದಿತ್ಯಸ್ಥಂ ಸನಾತನಮ್|

12330030c ಕಪಿಲಂ ಪ್ರಾಹುರಾಚಾರ್ಯಾಃ ಸಾಂಖ್ಯಾ ನಿಶ್ಚಿತನಿಶ್ಚಯಾಃ||

ಸಾಂಖ್ಯಗಳನ್ನು ನಿಶ್ಚಿತವಾಗಿ ನಿಶ್ಚಯಿಸುವ ಆಚಾರ್ಯರು ಆದಿತ್ಯನಲ್ಲಿರುವ ವಿದ್ಯೆಯ ಸಹಾಯವನ್ನು ಪಡೆದಿರುವ ನನ್ನನ್ನು ಸನಾತನ ಕಪಿಲ ಎಂದು ಕರೆಯುತ್ತಾರೆ.

12330031a ಹಿರಣ್ಯಗರ್ಭೋ ದ್ಯುತಿಮಾನೇಷ ಯಶ್ಚಂದಸಿ ಸ್ತುತಃ|

12330031c ಯೋಗೈಃ ಸಂಪೂಜ್ಯತೇ ನಿತ್ಯಂ ಸ ಏವಾಹಂ ವಿಭುಃ ಸ್ಮೃತಃ||

ಯಾರನ್ನು ದ್ಯುತಿಮಾನ್ ಹಿರಣ್ಯಗರ್ಭನೆಂದು ಚಂದಗಳು ಸ್ತುತಿಸುತ್ತವೆಯೋ ಮತ್ತು ಯೋಗಿಗಳು ನಿತ್ಯವೂ ಪೂಜಿಸುತ್ತಾರೋ ಆ ವಿಭುವು ನಾನೇ ಆಗಿದ್ದೇನೆ.

12330032a ಏಕವಿಂಶತಿಶಾಖಂ[8] ಚ ಋಗ್ವೇದಂ ಮಾಂ ಪ್ರಚಕ್ಷತೇ|

12330032c ಸಹಸ್ರಶಾಖಂ ಯತ್ಸಾಮ ಯೇ ವೈ ವೇದವಿದೋ ಜನಾಃ|

12330032e ಗಾಯಂತ್ಯಾರಣ್ಯಕೇ ವಿಪ್ರಾ ಮದ್ಭಕ್ತಾಸ್ತೇಽಪಿ ದುರ್ಲಭಾಃ||

ಇಪ್ಪತ್ತೊಂದು ಶಾಖೆಗಳಿರುವ ಋಗ್ವೇದವು ನಾನು ಎನ್ನುತ್ತಾರೆ. ಸಹಸ್ರಶಾಖೆಗಳಿರುವ ಸಾಮವನ್ನೂ ನಾನೇ ಎಂದು ವೇದವಿದ ಜನರು ತಿಳಿದಿದ್ದಾರೆ. ನನ್ನ ಭಕ್ತರಾದ ದುರ್ಲಭ ವಿಪ್ರರು ನನ್ನನ್ನು ಅರಣ್ಯಕಗಳಲ್ಲಿ ಸ್ತೋತ್ರಮಾಡುತ್ತಾರೆ.

12330033a ಷಟ್ಪಂಚಾಶತಮಷ್ಟೌ ಚ ಸಪ್ತತ್ರಿಂಶತಮಿತ್ಯುತ|

12330033c ಯಸ್ಮಿನ್ಶಾಖಾ ಯಜುರ್ವೇದೇ ಸೋಽಹಮಾಧ್ವರ್ಯವೇ ಸ್ಮೃತಃ||

ಐವತ್ತಾರು, ಎಂಟು ಮತ್ತು ಮೂವತ್ತೇಳು – ಒಟ್ಟು ನೂರಾಒಂದು ಶಾಖೆಗಳಿರುವ ಅಧ್ವರ್ಯಶಾಖೆ ಯಜುರ್ವೇದದಲ್ಲಿಯೂ ನಾನೇ ಸ್ತುತಿಸಲ್ಪಟ್ಟಿದ್ದೇನೆ.

12330034a ಪಂಚಕಲ್ಪಮಥರ್ವಾಣಂ ಕೃತ್ಯಾಭಿಃ ಪರಿಬೃಂಹಿತಮ್|

12330034c ಕಲ್ಪಯಂತಿ ಹಿ ಮಾಂ ವಿಪ್ರಾ ಅಥರ್ವಾಣವಿದಸ್ತಥಾ||

ಅಥರ್ವವೇದವಿದು ವಿಪ್ರರು ಪಂಚಕಲ್ಪ ಕೃತ್ಯಗಳಿಂದ ಕೂಡಿರುವ ಅಥರ್ವವೇದವೂ ನಾನೇ ಎಂದು ತಿಳಿದಿದ್ದಾರೆ.

12330035a ಶಾಖಾಭೇದಾಶ್ಚ ಯೇ ಕೇ ಚಿದ್ಯಾಶ್ಚ ಶಾಖಾಸು ಗೀತಯಃ|

12330035c ಸ್ವರವರ್ಣಸಮುಚ್ಚಾರಾಃ ಸರ್ವಾಂಸ್ತಾನ್ವಿದ್ಧಿ ಮತ್ಕೃತಾನ್||

ವೇದಗಳಲ್ಲಿರುವ ಶಾಖಭೇದಗಳನ್ನೂ ಶಾಖೆಗಳಲ್ಲಿರುವ ಗೀತೆಗಳನ್ನೂ, ಗೀತೆಗಳಲ್ಲಿರುವ ಸ್ವರ-ವರ್ಣ-ಉಚ್ಚಾರಣಗಳನ್ನು ಎಲ್ಲವನ್ನೂ ನಾನೇ ರಚಿಸಿದ್ದೇನೆ ಎಂದು ತಿಳಿ.

12330036a ಯತ್ತದ್ಧಯಶಿರಃ ಪಾರ್ಥ ಸಮುದೇತಿ ವರಪ್ರದಮ್|

12330036c ಸೋಽಹಮೇವೋತ್ತರೇ ಭಾಗೇ ಕ್ರಮಾಕ್ಷರವಿಭಾಗವಿತ್||

ಪಾರ್ಥ! ವರಪ್ರದ ಹಯಶಿರನಾಗಿ ಅವತರಿಸಿದ ನಾನೇ ಸಂಹಿತೆಯ ಉತ್ತರಭಾಗದಲ್ಲಿ ಕ್ರಮಾಕ್ಷರವಿಭಾಗವನ್ನು ತಿಳಿದವನಾಗಿದ್ದೇನೆ.

12330037a ರಾಮಾದೇಶಿತಮಾರ್ಗೇಣ[9] ಮತ್ಪ್ರಸಾದಾನ್ಮಹಾತ್ಮನಾ|

12330037c ಪಾಂಚಾಲೇನ ಕ್ರಮಃ ಪ್ರಾಪ್ತಸ್ತಸ್ಮಾದ್ಭೂತಾತ್ಸನಾತನಾತ್|

ರಾಮನು ಉಪದೇಶಿಸಿದ ಮಾರ್ಗದ ಮೂಲಕ ನನ್ನನ್ನು ಆರಾಧಿಸಿ ಸನಾತನ ಮಹಾಭೂತನೆಂದು ಖ್ಯಾತನಾದ ನನ್ನ ಅನುಗ್ರಹದಿಂದ ಮಹಾತ್ಮ ಪಾಂಚಾಲನು ವೇದಗಳ ಕ್ರಮಪಾಠವನ್ನು ಪಡೆದುಕೊಂಡನು.

12330037e ಬಾಭ್ರವ್ಯಗೋತ್ರಃ ಸ ಬಭೌ ಪ್ರಥಮಃ ಕ್ರಮಪಾರಗಃ||

12330038a ನಾರಾಯಣಾದ್ವರಂ ಲಬ್ಧ್ವಾ ಪ್ರಾಪ್ಯ ಯೋಗಮನುತ್ತಮಮ್|

12330038c ಕ್ರಮಂ ಪ್ರಣೀಯ ಶಿಕ್ಷಾಂ ಚ ಪ್ರಣಯಿತ್ವಾ ಸ ಗಾಲವಃ||

ಬಾಭ್ರವ್ಯಗೋತ್ರದ ಗಾಲವನು ನಾರಾಯಣನಿಂದ ವರವನ್ನು ಪಡೆದು ಉತ್ತಮ ಯೋಗವನ್ನು ಹೊಂದಿ ವೇದಗಳ ಕ್ರಮವಿಭಾಗವನ್ನು ಮಾಡಿ ಶಿಕ್ಷೆಯನ್ನು ರಚಿಸಿ ಮೊಟ್ಟಮೊದಲನೆಯ ಕ್ರಮಪಾಠಿಯಾದನು.

12330039a ಕಂಡರೀಕೋಽಥ ರಾಜಾ ಚ ಬ್ರಹ್ಮದತ್ತಃ ಪ್ರತಾಪವಾನ್|

12330039c ಜಾತೀಮರಣಜಂ ದುಃಖಂ ಸ್ಮೃತ್ವಾ ಸ್ಮೃತ್ವಾ ಪುನಃ ಪುನಃ|

12330039e ಸಪ್ತಜಾತಿಷು ಮುಖ್ಯತ್ವಾದ್ಯೋಗಾನಾಂ ಸಂಪದಂ ಗತಃ||

ಕಂಡರೀಕ ರಾಜಾ ಪ್ರತಾಪವಾನ್ ಬ್ರಹ್ಮದತ್ತನು ಏಳು ಜನ್ಮಗಳಲ್ಲಿ ಪುನಃ ಪುನಃ ಹುಟ್ಟು-ಮರಣಗಳಿಂದ ಉತ್ಪನ್ನ ದುಃಖವನ್ನು ಸ್ಮರಿಸಿಕೊಳ್ಳುತ್ತಾ ಯೋಗೈಶ್ವರ್ಯವನ್ನು ಪಡೆದುಕೊಂಡನು.

12330040a ಪುರಾಹಮಾತ್ಮಜಃ ಪಾರ್ಥ ಪ್ರಥಿತಃ ಕಾರಣಾಂತರೇ|

12330040c ಧರ್ಮಸ್ಯ ಕುರುಶಾರ್ದೂಲ ತತೋಽಹಂ ಧರ್ಮಜಃ ಸ್ಮೃತಃ||

ಪಾರ್ಥ! ಕುರುಶಾರ್ದೂಲ! ಹಿಂದೆ ನಾನು ಕಾರಣಾಂತರದಿಂದ ಧರ್ಮನ ಪುತ್ರನೆಂದು ಪ್ರಥಿತನಾಗಿದ್ದೆನು. ಆದುದರಿಂದ ನನ್ನನ್ನು ಧರ್ಮಜ ಎಂದೂ ಕರೆಯುತ್ತಾರೆ.

12330041a ನರನಾರಾಯಣೌ ಪೂರ್ವಂ ತಪಸ್ತೇಪತುರವ್ಯಯಮ್|

12330041c ಧರ್ಮಯಾನಂ ಸಮಾರೂಢೌ ಪರ್ವತೇ ಗಂಧಮಾದನೇ||

ಹಿಂದೆ ನರ-ನಾರಾಯಣರು ಧರ್ಮಯಾನವನ್ನು ಏರಿ ಗಂಧಮಾದನ ಪರ್ವತದಲ್ಲಿ ಅವ್ಯಯ ತಪಸ್ಸನ್ನು ತಪಿಸುತ್ತಿದ್ದರು.

12330042a ತತ್ಕಾಲಸಮಯಂ ಚೈವ ದಕ್ಷಯಜ್ಞೋ ಬಭೂವ ಹ|

12330042c ನ ಚೈವಾಕಲ್ಪಯದ್ಭಾಗಂ ದಕ್ಷೋ ರುದ್ರಸ್ಯ ಭಾರತ||

ಭಾರತ! ಅದೇ ಸಮಯದಲ್ಲಿ ದಕ್ಷನ ಯಜ್ಞವೂ ನಡೆಯಿತು. ಅದರಲ್ಲಿ ದಕ್ಷನು ರುದ್ರನಿಗೆ ಯಜ್ಞಭಾಗವನ್ನು ಕಲ್ಪಿಸಲಿಲ್ಲ.

12330043a ತತೋ ದಧೀಚಿವಚನಾದ್ದಕ್ಷಯಜ್ಞಮಪಾಹರತ್|

12330043c ಸಸರ್ಜ ಶೂಲಂ ಕ್ರೋಧೇನ ಪ್ರಜ್ವಲಂತಂ ಮುಹುರ್ಮುಹುಃ||

ಆಗ ದಧೀಚಿಯ ಮಾತಿನಂತೆ ರುದ್ರನು ದಕ್ಷಯಜ್ಞವನ್ನು ಧ್ವಂಸಗೊಳಿಸಲು ಕ್ರೋಧದಿಂದ ಪ್ರಜ್ವಲಿಸುತ್ತಿರುವ ಶೂಲವನ್ನು ಮತ್ತೆ ಮತ್ತೆ ಪ್ರಯೋಗಿಸಿದನು.

12330044a ತಚ್ಚೂಲಂ ಭಸ್ಮಸಾತ್ ಕೃತ್ವಾ ದಕ್ಷಯಜ್ಞಂ ಸವಿಸ್ತರಮ್|

12330044c ಆವಯೋಃ ಸಹಸಾಗಚ್ಚದ್ಬದರ್ಯಾಶ್ರಮಮಂತಿಕಾತ್|

12330044e ವೇಗೇನ ಮಹತಾ ಪಾರ್ಥ ಪತನ್ನಾರಾಯಣೋರಸಿ||

ಆ ಶೂಲವು ವಿಸ್ತಾರವಾಗಿದ್ದ ದಕ್ಷಯಜ್ಞವನ್ನು ಸುಟ್ಟು ಭಸ್ಮವನ್ನಾಗಿ ಮಾಡಿ ಎಮ್ಮೆಲೇ ಬದರಿಕಾಶ್ರಮದಲ್ಲಿದ್ದ ನಮ್ಮ ಬಳಿಯೂ ಬಂದಿತು. ಪಾರ್ಥ! ಮಹಾ ವೇಗದಿಂದ ಬಂದ ಅದು ನಾರಾಯಣನ ಎದೆಯಲ್ಲಿ ನೆಟ್ಟಿತು.

12330045a ತತಃ ಸ್ವತೇಜಸಾವಿಷ್ಟಾಃ ಕೇಶಾ ನಾರಾಯಣಸ್ಯ ಹ|

12330045c ಬಭೂವುರ್ಮುಂಜವರ್ಣಾಸ್ತು ತತೋಽಹಂ ಮುಂಜಕೇಶವಾನ್||

ಅದರ ತೇಜಸ್ಸಿನಿಂದ ಆವಿಷ್ಟವಾದ ನಾರಾಯಣನ ಕೂದಲುಗಳು ನೊಜೆಹುಲ್ಲಿನ ಬಣ್ಣವನ್ನು ಹೊಂದಿದವು. ಆಗ ನಾನು ಮುಂಜಕೇಶನಾದೆನು.

12330046a ತಚ್ಚ ಶೂಲಂ ವಿನಿರ್ಧೂತಂ ಹುಂಕಾರೇಣ ಮಹಾತ್ಮನಾ|

12330046c ಜಗಾಮ ಶಂಕರಕರಂ ನಾರಾಯಣಸಮಾಹತಮ್||

ಮಹಾತ್ಮ ನಾರಾಯಣನ ಹುಂಕಾರದಿಂದ ಹೊರಬಂದು ನಾರಾಯಣನಿಂದ ಪುನಃ ಪ್ರಯೋಗಿಸಲ್ಪಟ್ಟು ಅದು ಶಂಕರನ ಕರವನ್ನು ಸೇರಿತು.

12330047a ಅಥ ರುದ್ರ ಉಪಾಧಾವತ್ತಾವೃಷೀ ತಪಸಾನ್ವಿತೌ|

12330047c ತತ ಏನಂ ಸಮುದ್ಧೂತಂ ಕಂಠೇ ಜಗ್ರಾಹ ಪಾಣಿನಾ|

12330047e ನಾರಾಯಣಃ ಸ ವಿಶ್ವಾತ್ಮಾ ತೇನಾಸ್ಯ ಶಿತಿಕಂಠತಾ||

ಕೂಡಲೇ ರುದ್ರನು ತಪಸಾನ್ವಿತರಾದ ಆ ಋಷಿಗಳ ಬಳಿ ಧಾವಿಸಿ ಬಂದನು. ತಮ್ಮ ಮೇಲೆ ಬೀಳುತ್ತಿದ್ದ ಅವನ ಕಂಠವನ್ನು ವಿಶ್ವಾತ್ಮ ನಾರಾಯಣನು ತನ್ನ ಕೈಗಳಿಂದ ಹಿಡಿದನು. ಅದರಿಂದ ರುದ್ರನು ಶಿತಿಕಂಠನಾದನು.

12330048a ಅಥ ರುದ್ರವಿಘಾತಾರ್ಥಮಿಷೀಕಾಂ ಜಗೃಹೇ ನರಃ|

12330048c ಮಂತ್ರೈಶ್ಚ ಸಂಯುಯೋಜಾಶು ಸೋಽಭವತ್ಪರಶುರ್ಮಹಾನ್||

ಕೂಡಲೇ ನರನು ರುದ್ರನನ್ನು ಪ್ರಹರಿಸಲು ಜಂಬುಹುಲ್ಲನ್ನು ಹಿಡಿದು ಮಂತ್ರಗಳಿಂದ ಅಭಿಮಂತ್ರಿಸಲು ಅದು ಮಹಾ ಪರಶುವಾಯಿತು.

12330049a ಕ್ಷಿಪ್ತಶ್ಚ ಸಹಸಾ ರುದ್ರೇ ಖಂಡನಂ ಪ್ರಾಪ್ತವಾಂಸ್ತದಾ|

12330049c ತತೋಽಹಂ ಖಂಡಪರಶುಃ ಸ್ಮೃತಃ ಪರಶುಖಂಡನಾತ್||

ಎಸೆಯಲ್ಪಟ್ಟ ಆ ಪರಶುವನ್ನು ರುದ್ರನು ಖಂಡಿಸಿದನು. ಪರಶುಖಂಡನನಿಂದ ನಾನು ಖಂಡಪರಶುವಾದೆನು.”

12330050 ಅರ್ಜುನ ಉವಾಚ|

12330050a ಅಸ್ಮಿನ್ಯುದ್ಧೇ ತು ವಾರ್ಷ್ಣೇಯ ತ್ರೈಲೋಕ್ಯಮಥನೇ ತದಾ|

12330050c ಜಯಂ ಕಃ ಪ್ರಾಪ್ತವಾಂಸ್ತತ್ರ ಶಂಸೈತನ್ಮೇ ಜನಾರ್ದನ||

ಅರ್ಜುನನು ಹೇಳಿದನು: “ವಾರ್ಷ್ಣೇಯ! ಜನಾರ್ದನ! ತ್ರೈಲೋಕ್ಯಗಳನ್ನು ಮಥಿಸುವಂಥಹ ಆ ಯುದ್ಧದಲ್ಲಿ ಜಯವು ಯಾರಿಗೆ ಪ್ರಾಪ್ತವಾಯಿತು ಎನ್ನುವುದನ್ನು ನನಗೆ ಹೇಳು.”

12330051 ಶ್ರೀಭಗವಾನುವಾಚ|

12330051a ತಯೋಃ ಸಂಲಗ್ನಯೋರ್ಯುದ್ಧೇ ರುದ್ರನಾರಾಯಣಾತ್ಮನೋಃ|

12330051c ಉದ್ವಿಗ್ನಾಃ ಸಹಸಾ ಕೃತ್ಸ್ನಾ ಲೋಕಾಃ ಸರ್ವೇಽಭವಂಸ್ತದಾ||

ಶ್ರೀಭಗವಂತನು ಹೇಳಿದನು: “ರುದ್ರ-ನಾರಾಯಣರು ಇಬ್ಬರೂ ಯುದ್ಧದಲ್ಲಿ ತೊಡಗಿದಾಗ ಕೂಡಲೇ ಲೋಕಗಳೆಲ್ಲವೂ ಸಂಪೂರ್ಣವಾಗಿ ಉದ್ವಿಗ್ನಗೊಂಡವು.

12330052a ನಾಗೃಹ್ಣಾತ್ಪಾವಕಃ ಶುಭ್ರಂ ಮಖೇಷು ಸುಹುತಂ ಹವಿಃ|

12330052c ವೇದಾ ನ ಪ್ರತಿಭಾಂತಿ ಸ್ಮ ಋಷೀಣಾಂ ಭಾವಿತಾತ್ಮನಾಮ್||

ಪಾವಕನು ಶುಭ್ರವಾದ ಆಹುತಿ ಹವಿಸ್ಸನ್ನು ಸ್ವೀಕರಿಸದಂತಾದನು. ಭಾವಿತಾತ್ಮ ಋಷಿಗಳಿಗೆ ವೇದಗಳು ಹೊಳೆಯಲಿಲ್ಲ.

12330053a ದೇವಾನ್ರಜಸ್ತಮಶ್ಚೈವ ಸಮಾವಿವಿಶತುಸ್ತದಾ|

12330053c ವಸುಧಾ ಸಂಚಕಂಪೇಽಥ ನಭಶ್ಚ ವಿಪಫಾಲ[10] ಹ||

ಆಗ ರಜ-ತಮಗಳು ದೇವತೆಗಳನ್ನು ಪ್ರವೇಶಿಸಿದವು. ವಸುಧೆಯು ಕಂಪಿಸಿತು ಮತ್ತು ನಭವು ಸೀಳಿತು.

12330054a ನಿಷ್ಪ್ರಭಾಣಿ ಚ ತೇಜಾಂಸಿ ಬ್ರಹ್ಮಾ ಚೈವಾಸನಾಚ್ಚ್ಯುತಃ|

12330054c ಅಗಾಚ್ಚೋಷಂ ಸಮುದ್ರಶ್ಚ ಹಿಮವಾಂಶ್ಚ ವ್ಯಶೀರ್ಯತ||

ಗ್ರಹ-ನಕ್ಷತ್ರಗಳು ಪ್ರಭಾಹೀನವಾದವು. ಬ್ರಹ್ಮನು ಆಸನದಿಂದ ಕೆಳಕ್ಕೆ ಬಿದ್ದನು. ಸಮುದ್ರವು ಒಣಗತೊಡಗಿತು ಮತ್ತು ಹಿಮವತ್ಪರ್ವತವು ಸೀಳಿತು.

12330055a ತಸ್ಮಿನ್ನೇವಂ ಸಮುತ್ಪನ್ನೇ ನಿಮಿತ್ತೇ ಪಾಂಡುನಂದನ|

12330055c ಬ್ರಹ್ಮಾ ವೃತೋ ದೇವಗಣೈರೃಷಿಭಿಶ್ಚ ಮಹಾತ್ಮಭಿಃ|

12330055e ಆಜಗಾಮಾಶು ತಂ ದೇಶಂ ಯತ್ರ ಯುದ್ಧಮವರ್ತತ||

ಪಾಂಡುನಂದನ! ಈ ರೀತಿಯ ನಿಮಿತ್ತಗಳು ಉಂಟಾಗಲು ಬ್ರಹ್ಮನು ಮಹಾತ್ಮ ಋಷಿಗಳಿಂದಲೂ ದೇವಗಣಗಳಿಂದಲೂ ಆವೃತನಾಗಿ ಎಲ್ಲಿ ಯುದ್ಧವು ನಡೆಯುತ್ತಿತ್ತೋ ಅಲ್ಲಿಗೆ ಆಗಮಿಸಿದನು.

12330056a ಸಾಂಜಲಿಪ್ರಗ್ರಹೋ ಭೂತ್ವಾ ಚತುರ್ವಕ್ತ್ರೋ ನಿರುಕ್ತಗಃ|

12330056c ಉವಾಚ ವಚನಂ ರುದ್ರಂ ಲೋಕಾನಾಮಸ್ತು ವೈ ಶಿವಮ್|

12330056e ನ್ಯಸ್ಯಾಯುಧಾನಿ ವಿಶ್ವೇಶ ಜಗತೋ ಹಿತಕಾಮ್ಯಯಾ||

ನಿರುಕ್ತಗ ಚತುರ್ವಕ್ತ್ರನು ಕೈಗಳನ್ನು ಮುಗಿದು ಅಂಜಲೀಬದ್ಧನಾಗಿ ಲೋಕಗಳ ಶಿವ ರುದ್ರನಿಗೆ ಈ ಮಾತನ್ನಾಡಿದನು: “ವಿಶ್ವೇಶ! ಜಗತ್ತಿನ ಹಿತವನ್ನು ಬಯಸಿ ಆಯುಧಗಳನ್ನು ಕೆಳಗಿಡು!

12330057a ಯದಕ್ಷರಮಥಾವ್ಯಕ್ತಮೀಶಂ ಲೋಕಸ್ಯ ಭಾವನಮ್|

12330057c ಕೂಟಸ್ಥಂ ಕರ್ತೃನಿರ್ದ್ವಂದ್ವಮಕರ್ತೇತಿ ಚ ಯಂ ವಿದುಃ||

12330058a ವ್ಯಕ್ತಿಭಾವಗತಸ್ಯಾಸ್ಯ ಏಕಾ ಮೂರ್ತಿರಿಯಂ ಶಿವಾ|

ಲೋಕದ ಸೃಷ್ಟಿಗೆ ಕಾರಣವಾದ ಅಕ್ಷರ ಮತ್ತು ಅವ್ಯಕ್ತದ ವ್ಯಕ್ತಿಭಾವಗತನಾಗಿರುವ ಏಕ ಮೂರ್ತಿಯು ಇವನು. ಈಶ, ಕೂಟಸ್ಥ, ಕರ್ತೃ, ನಿಂರ್ದ್ವಂದ್ವ ಮತ್ತು ಅಕರ್ತನೆಂದೂ ಇವನನ್ನು ತಿಳಿಯಲಾಗಿದೆ.

12330058c ನರೋ ನಾರಾಯಣಶ್ಚೈವ ಜಾತೌ ಧರ್ಮಕುಲೋದ್ವಹೌ||

12330059a ತಪಸಾ ಮಹತಾ ಯುಕ್ತೌ ದೇವಶ್ರೇಷ್ಠೌ ಮಹಾವ್ರತೌ|

ಧರ್ಮನ ಕುಲದಲ್ಲಿ ಹುಟ್ಟಿರುವ ಈ ನರ-ನಾರಾಯಣರಿಬ್ಬರೂ ಮಹಾತಪಸ್ಸಿನಿಂದ ಯುಕ್ತರಾಗಿದ್ದಾರೆ. ದೇವಶ್ರೇಷ್ಠರೂ ಮಹಾವ್ರತರೂ ಆಗಿದ್ದಾರೆ.

12330059c ಅಹಂ ಪ್ರಸಾದಜಸ್ತಸ್ಯ ಕಸ್ಮಿಂಶ್ಚಿತ್ಕಾರಣಾಂತರೇ|

12330059e ತ್ವಂ ಚೈವ ಕ್ರೋಧಜಸ್ತಾತ ಪೂರ್ವಸರ್ಗೇ ಸನಾತನಃ||

ಅಯ್ಯಾ! ಯಾವುದೋ ಕಾರಣದಿಂದ ನಾನು ಇವನ ಪ್ರಸಾದದಿಂದ ಹುಟ್ಟಿದ್ದೇನೆ. ಹಿಂದಿನ ಸೃಷ್ಟಿಯಲ್ಲಿ ಸನಾತನನಾದ ನೀನೂ ಕೂಡ ಇವನ ಕ್ರೋಧದಿಂದ ಹುಟ್ಟಿದ್ದೆ.

12330060a ಮಯಾ ಚ ಸಾರ್ಧಂ ವರದಂ ವಿಬುಧೈಶ್ಚ ಮಹರ್ಷಿಭಿಃ|

12330060c ಪ್ರಸಾದಯಾಶು ಲೋಕಾನಾಂ ಶಾಂತಿರ್ಭವತು ಮಾಚಿರಮ್||

ನನ್ನೊಡನೆ ಮತ್ತು ವಿಬುಧರು-ಮಹರ್ಷಿಗಳೊಂದಿಗೆ ಕೂಡಲೇ ಈ ವರದನನ್ನು ಪ್ರಸನ್ನಗೊಳಿಸು. ಲೋಕಗಳಲ್ಲಿ ಶಾಂತಿಯು ನೆಲೆಸಲಿ.”

12330061a ಬ್ರಹ್ಮಣಾ ತ್ವೇವಮುಕ್ತಸ್ತು ರುದ್ರಃ ಕ್ರೋಧಾಗ್ನಿಮುತ್ಸೃಜನ್|

12330061c ಪ್ರಸಾದಯಾಮಾಸ ತತೋ ದೇವಂ ನಾರಾಯಣಂ ಪ್ರಭುಮ್|

12330061e ಶರಣಂ ಚ ಜಗಾಮಾದ್ಯಂ ವರೇಣ್ಯಂ ವರದಂ ಹರಿಮ್||

ಬ್ರಹ್ಮನು ಹೀಗೆ ಹೇಳಲು ರುದ್ರನು ಕ್ರೋಧಾಗ್ನಿಯನ್ನು ಬಿಸುಟು ದೇವ ನಾರಾಯಣ ಪ್ರಭುವನ್ನು ಪ್ರಸನ್ನಗೊಳಿಸತೊಡಗಿದನು ಮತ್ತು ಆ ಆದ್ಯ, ವರೇಣ್ಯ, ವರದ ಹರಿಯ ಶರಣು ಹೊಕ್ಕನು.

12330062a ತತೋಽಥ ವರದೋ ದೇವೋ ಜಿತಕ್ರೋಧೋ ಜಿತೇಂದ್ರಿಯಃ|

12330062c ಪ್ರೀತಿಮಾನಭವತ್ತತ್ರ ರುದ್ರೇಣ ಸಹ ಸಂಗತಃ||

ಅನಂತರ ವರದ ದೇವ ಜಿತಕ್ರೋಧ ಜಿತೇಂದ್ರಿಯ ನಾರಾಯಣನು ಪ್ರೀತಿಮಾನನಾಗಿ ರುದ್ರನೊಡನೆ ಸೇರಿದನು.

12330063a ಋಷಿಭಿರ್ಬ್ರಹ್ಮಣಾ ಚೈವ ವಿಬುಧೈಶ್ಚ ಸುಪೂಜಿತಃ|

12330063c ಉವಾಚ ದೇವಮೀಶಾನಮೀಶಃ ಸ ಜಗತೋ ಹರಿಃ||

ಋಷಿಗಳಿಂದಲೂ, ಬ್ರಹ್ಮನಿಂದಲೂ ಮತ್ತು ವಿಬುಧರಿಂದಲೂ ಪೂಜಿತನಾದ ಜಗತ್ತಿನ ಈಶ ಹರಿಯು ದೇವ ಈಶಾನ ರುದ್ರನಿಗೆ ಹೇಳಿದನು:

12330064a ಯಸ್ತ್ವಾಂ ವೇತ್ತಿ ಸ ಮಾಂ ವೇತ್ತಿ ಯಸ್ತ್ವಾಮನು ಸ ಮಾಮನು|

12330064c ನಾವಯೋರಂತರಂ ಕಿಂ ಚಿನ್ಮಾ ತೇ ಭೂದ್ಬುದ್ಧಿರನ್ಯಥಾ||

“ನಿನ್ನನ್ನು ಯಾರು ತಿಳಿಯುತ್ತಾರೋ ಅವರು ನನ್ನನ್ನೂ ತಿಳಿಯುತ್ತಾರೆ. ಯಾರು ನಿನ್ನನ್ನು ಅನುಸರಿಸುತ್ತಾರೋ ಅವರು ನನ್ನನ್ನೂ ಅನುಸರಿಸಿದಂತೆ. ನಮ್ಮಿಬ್ಬರಲ್ಲಿ ಯಾವುದೇ ಅಂತರವಿಲ್ಲ. ನಿನ್ನ ಮನಸ್ಸಿನಲ್ಲಿಯೂ ಇದಕ್ಕೆ ವಿಪರೀತವಾದ ವಿಚಾರವು ಸುಳಿಯದಿರಲಿ.

12330065a ಅದ್ಯ ಪ್ರಭೃತಿ ಶ್ರೀವತ್ಸಃ ಶೂಲಾಂಕೋಽಯಂ ಭವತ್ವಯಮ್|

12330065c ಮಮ ಪಾಣ್ಯಂಕಿತಶ್ಚಾಪಿ ಶ್ರೀಕಂಠಸ್ತ್ವಂ ಭವಿಷ್ಯಸಿ||

ಇಂದಿನಿಂದ ನನ್ನ ವಕ್ಷದಲ್ಲಿ ಬಿದ್ದಿರುವ ನಿನ್ನ ಶೂಲದ ಚಿಹ್ನೆಯು ಶ್ರೀವತ್ಸ ಎಂಬ ಹೆಸರಿನಿಂದ ಪ್ರಸಿದ್ಧವಾಗಲಿ. ಹಾಗೆಯೇ ನನ್ನ ಹಸ್ತದ ಚಿಹ್ನೆಯನ್ನು ಕತ್ತಿನಲ್ಲಿ ಹೊಂದಿರುವ ನೀನು ಶ್ರೀಕಂಠನೆಂದಾಗುವೆ.”

12330066a ಏವಂ ಲಕ್ಷಣಮುತ್ಪಾದ್ಯ ಪರಸ್ಪರಕೃತಂ ತದಾ|

12330066c ಸಖ್ಯಂ ಚೈವಾತುಲಂ ಕೃತ್ವಾ ರುದ್ರೇಣ ಸಹಿತಾವೃಷೀ|

12330066e ತಪಸ್ತೇಪತುರವ್ಯಗ್ರೌ ವಿಸೃಜ್ಯ ತ್ರಿದಿವೌಕಸಃ||

ಹೀಗೆ ಪರಸ್ಪರ ಶರೀರಗಳಲ್ಲಿ ಮಾಡಿಕೊಂಡಿದ್ದ ಗುರುತುಗಳಿಗೆ ಶುಭಲಕ್ಷಣಗಳ ಸ್ವರೂಪವನ್ನಿತ್ತು ನರ-ನಾರಾಯಣ ಋಷಿಗಳು ರುದ್ರನೊಂದಿಗೆ ಅತುಲ ಸಖ್ಯವನ್ನು ಮಾಡಿಕೊಂಡರು. ತ್ರಿದಿವೌಕಸರನ್ನು ಕಳುಹಿಸಿಕೊಟ್ಟೂ ಅವರು ಉಗ್ರ ತಪಸ್ಸನ್ನು ತಪಿಸಿದರು.

12330067a ಏಷ ತೇ ಕಥಿತಃ ಪಾರ್ಥ ನಾರಾಯಣಜಯೋ ಮೃಧೇ|

12330067c ನಾಮಾನಿ ಚೈವ ಗುಹ್ಯಾನಿ ನಿರುಕ್ತಾನಿ ಚ ಭಾರತ|

12330067e ಋಷಿಭಿಃ ಕಥಿತಾನೀಹ ಯಾನಿ ಸಂಕೀರ್ತಿತಾನಿ ತೇ||

ಪಾರ್ಥ! ಹೀಗೆ ಯುದ್ಧದಲ್ಲಿ ನಾರಾಯಣನ ಜಯದ ಕುರಿತು ನಿನಗೆ ಹೇಳಿದ್ದೇನೆ. ನನ್ನ ಗುಹ್ಯ ನಾಮಗಳನ್ನೂ ಅವುಗಳ ಅರ್ಥಗಳನ್ನೂ ನಿನಗೆ ಹೇಳಿದ್ದೇನೆ. ಋಷಿಗಳು ಸ್ತುತಿಸಿದ ನಾಮಗಳನ್ನೂ ಹೇಳಿದ್ದೇನೆ.

12330068a ಏವಂ ಬಹುವಿಧೈ ರೂಪೈಶ್ಚರಾಮೀಹ ವಸುಂಧರಾಮ್|

12330068c ಬ್ರಹ್ಮಲೋಕಂ ಚ ಕೌಂತೇಯ ಗೋಲೋಕಂ ಚ ಸನಾತನಮ್|

12330068e ಮಯಾ ತ್ವಂ ರಕ್ಷಿತೋ ಯುದ್ಧೇ ಮಹಾಂತಂ ಪ್ರಾಪ್ತವಾನ್ಜಯಮ್||

ಕೌಂತೇಯ! ಹೀಗೆ ಬಹುವಿಧದ ರೂಪಗಳಲ್ಲಿ ನಾನು ವಸುಂಧರೆಯಲ್ಲಿ, ಬ್ರಹ್ಮಲೋಕದಲ್ಲಿ ಮತ್ತು ಸನಾತನ ಗೋಲೋಕಗಳಲ್ಲಿ ಸಂಚರಿಸುತ್ತಿರುತ್ತೇನೆ. ನನ್ನಿಂದ ರಕ್ಷಿತನಾದ ನೀನು ಮಹಾಯುದ್ಧದಲ್ಲಿ ಜಯವನ್ನು ಗಳಿಸಿದ್ದೀಯೆ.

12330069a ಯಸ್ತು ತೇ ಸೋಽಗ್ರತೋ ಯಾತಿ ಯುದ್ಧೇ ಸಂಪ್ರತ್ಯುಪಸ್ಥಿತೇ|

12330069c ತಂ ವಿದ್ಧಿ ರುದ್ರಂ ಕೌಂತೇಯ ದೇವದೇವಂ ಕಪರ್ದಿನಮ್||

ಕೌಂತೇಯ! ಯುದ್ಧದಲ್ಲಿ ಯಾರು ನಿನ್ನ ಮುಂಭಾಗದಲ್ಲಿ ಹೋಗುತ್ತಿದ್ದನೋ ಅವನೇ ರುದ್ರ, ದೇವದೇವ, ಕಪರ್ದಿನಿಯೆಂದು ತಿಳಿ.

12330070a ಕಾಲಃ ಸ ಏವ ಕಥಿತಃ ಕ್ರೋಧಜೇತಿ ಮಯಾ ತವ|

12330070c ನಿಹತಾಂಸ್ತೇನ ವೈ ಪೂರ್ವಂ ಹತವಾನಸಿ ವೈ ರಿಪೂನ್||

ನನ್ನ ಕ್ರೋಧದಿಂದ ಹುಟ್ಟಿದ ಅವನನ್ನು ಕಾಲ ಎಂದೂ ಕರೆಯುತ್ತಾರೆ. ನೀನು ಯಾವ ಶತ್ರುಗಳನ್ನು ಸಂಹರಿಸಿದೆಯೋ ಅವರೆಲ್ಲರನ್ನೂ ಅದಕ್ಕೂ ಮೊದಲೇ ರುದ್ರನು ಸಂಹರಿಸಿದ್ದನು.

12330071a ಅಪ್ರಮೇಯಪ್ರಭಾವಂ ತಂ ದೇವದೇವಮುಮಾಪತಿಮ್|

12330071c ನಮಸ್ವ ದೇವಂ ಪ್ರಯತೋ ವಿಶ್ವೇಶಂ ಹರಮವ್ಯಯಮ್||

ಆ ಅಪ್ರಮೇಯ ಪ್ರಭಾವೀ ದೇವದೇವ ಉಮಾಪತಿ ವಿಶ್ವೇಶ ಹರ ಅವ್ಯಯ ದೇವನನ್ನು ಪ್ರಯತನಾಗಿ ನಮಸ್ಕರಿಸು.””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ತ್ರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಮೂವತ್ತನೇ ಅಧ್ಯಾಯವು.

EPS Illustration - Asian ethnic floral retro doodle black and white  background pattern in vector. islam, arabic, indian, ottoman motifs design  tribal pattern. zentangle circles for printing on fabric or paper. Vector

[1] ಸೂರ್ಯಾಚಂದ್ರಮಸೌ ಚಕ್ಷುಃ ಕೇಶಾಶ್ಚೈವಾಂಶವಃ ಸ್ಮೃತಾಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಗಾಂ ವಿಂದತ ಇತಿ ಗೋವಿಂದಃ|

[3] ವಿಗತಾ ಕುಂಠಾ ಪಂಚಾನಾಂ ಭೂತಾನಾಂ ಮೇಲನೇ ಅಸಾಮರ್ಥ್ಯಂ ಯಸ್ಯ ಸಃ ವಿಕುಂಠಃ=ವಿಕುಂಠ ಏವ ವೈಕುಂಠಃ (ಪಂಚಭೂತಗಳ ಸಂಯೋಜನೆಯಲ್ಲಿ ಅಸಾಮರ್ಥ್ಯವು ಯಾವನಿಗಿಲ್ಲವೋ ಅವನು ವಿಕುಂಠ. ಅವನೇ ವೈಕುಂಠ) – ನೀಲಕಂಠೀಯ ಭಾಷ್ಯ.

[4] ಬ್ರಹ್ಮ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ವಿಶ್ವತೋಮುಖೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಯಜಮಾನ ಮತ್ತು ಋತ್ವಿಕ್ಕುಗಳು ಇರುವ ಮನೆ.

[7] ಅಧೋ ನ ಕ್ಷಿಯತೇ ಯಸ್ಮಾದ್ವದಂತನ್ಯೇ ಹ್ಯಧೋಕ್ಷಜಮ್ (ಯಾವನ ಅನುಗ್ರಹದಿಂದ ಜೀವರು ಅಧೋಗತಿಗೆ ಬಿದ್ದು ಹಾಳಾಗುವುದಿಲ್ಲವೋ ಅಂಥವನು ಅಧೋಕ್ಷಜನೆಂದು ಇತರ ವಿದ್ವಾಂಸರು ಅಧೋಕ್ಷಜ ಶಬ್ದಕ್ಕೆ ನಿರುಕ್ತವನ್ನು ಹೇಳಿರುತ್ತಾರೆ. ಅಕ್ಷಾನ್=ಇಂದ್ರಿಯಗಳನ್ನು ಅಧಃ=ಕೆಳಗೆ ತಳ್ಳಿ ಜಃ=ಅವತರಿಸಿರುವನು ಎಂದೂ ಅರ್ಥಮಾಡಬಹುದು.

[8] ಏಕವಿಂಶತಿಸಾಹಸ್ರಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[9] ವಾಮಾದೇಶಿತಮಾರ್ಗೇಣ ಎಂಬ ಪಾಠಾಂತರವಿದೆ (ಭಾರತ ದರ್ಶನ).

[10] ವಿಚಚಾಲ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.