ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
Contents
Toggle೩೨೬
ಶ್ವೇತದ್ವೀಪದಲ್ಲಿ ನಾರದನಿಗೆ ಭಗವಂತನ ದರ್ಶನ (1-16); ಭಗವಂತನಿಂದ ವಾಸುದೇವ-ಸಂಕರ್ಷಣಾದಿ ವ್ಯೂಹರೂಪಗಳ ಪರಿಚಯ (17-27); ಭವಿಷ್ಯದಲ್ಲಿ ಆಗುವ ಅವತಾರಗಳ ಸೂಚನೆ (28-100); ಕಥಾಶ್ರವಣದ ಮಹಿಮೆ (101-124).
12326001 ಭೀಷ್ಮ ಉವಾಚ|
12326001a ಏವಂ ಸ್ತುತಃ ಸ ಭಗವಾನ್ಗುಹ್ಯೈಸ್ತಥ್ಯೈಶ್ಚ ನಾಮಭಿಃ|
12326001c ತಂ ಮುನಿಂ ದರ್ಶಯಾಮಾಸ ನಾರದಂ ವಿಶ್ವರೂಪಧೃಕ್||
ಭೀಷ್ಮನು ಹೇಳಿದನು: “ಹೀಗೆ ಅವನು ಗುಹ್ಯ ಯಥಾರ್ಥ ನಾಮಗಳಿಂದ ಸ್ತುತಿಸಲು ವಿಶ್ವರೂಪಧರ ಭಗವಾನನು ನಾರದ ಮುನಿಗೆ ಕಾಣಿಸಿಕೊಂಡನು.
12326002a ಕಿಂ ಚಿಚ್ಚಂದ್ರವಿಶುದ್ಧಾತ್ಮಾ ಕಿಂ ಚಿಚ್ಚಂದ್ರಾದ್ವಿಶೇಷವಾನ್|
12326002c ಕೃಶಾನುವರ್ಣಃ ಕಿಂ ಚಿಚ್ಚ ಕಿಂ ಚಿದ್ಧಿಷ್ಣ್ಯಾಕೃತಿಃ ಪ್ರಭುಃ||
ಆ ಪ್ರಭುವು ಕೆಲವೊಂದೆಡೆ ಚಂದ್ರನಂತೆಯೇ ವಿಶುದ್ಧಾತ್ಮನಾಗಿದ್ದರೆ ಇನ್ನು ಕೆಲವೆಡೆ ಚಂದ್ರನನ್ನೂ ಮೀರಿದ್ದನು. ಕೆಲವೆಡೆ ಅಗ್ನಿಯ ಬಣ್ಣವನ್ನು ಹೊಂದಿದ್ದರೆ ಇನ್ನು ಕೆಲವೆಡೆ ನಕ್ಷತ್ರದ ಛಾಯೆಯೂ ಇದ್ದಿತು.
12326003a ಶುಕಪತ್ರವರ್ಣಃ ಕಿಂ ಚಿಚ್ಚ ಕಿಂ ಚಿತ್ ಸ್ಫಟಿಕಸಪ್ರಭಃ|
12326003c ನೀಲಾಂಜನಚಯಪ್ರಖ್ಯೋ ಜಾತರೂಪಪ್ರಭಃ ಕ್ವ ಚಿತ್||
ಕೆಲವೆಡೆ ಗಿಳಿಯ ಬಣ್ಣಗಳಿದ್ದರೆ ಕೆಲವೆಡೆ ಸ್ಪಟಿಕದ ಪ್ರಭೆಯಿತ್ತು. ಇನ್ನೂ ಕೆಲವೆಡೆ ನೀಲಾಂಜನದ ಕಪ್ಪಿನಿಂದ ಕೂಡಿದ್ದರೆ ಕೆಲವೆಡೆ ಬಂಗಾರದ ಪ್ರಭೆಯಿದ್ದಿತು.
12326004a ಪ್ರವಾಲಾಂಕುರವರ್ಣಶ್ಚ ಶ್ವೇತವರ್ಣಃ ಕ್ವ ಚಿದ್ಬಭೌ|
12326004c ಕ್ವ ಚಿತ್ಸುವರ್ಣವರ್ಣಾಭೋ ವೈಡೂರ್ಯಸದೃಶಃ ಕ್ವ ಚಿತ್||
ಕೆಲವೆಡೆ ನೂತನ ಚಿಗುರುಗಳ ವರ್ಣಗಳಿದ್ದರೆ ಇನ್ನೂ ಕೆಲವೆಡೆ ಬಿಳಿಯ ಬಣ್ಣವಿದ್ದಿತು. ಕೆಲವೊಂದೆಡೆ ಸುವರ್ಣವರ್ಣರ್ಣವಿದ್ದರೆ ಕೆಲವು ಕಡೆ ವೈಡೂರ್ಯದಂತೆಯೇ ತೋರುತ್ತಿತ್ತು.
12326005a ನೀಲವೈಡೂರ್ಯಸದೃಶ ಇಂದ್ರನೀಲನಿಭಃ ಕ್ವ ಚಿತ್|
12326005c ಮಯೂರಗ್ರೀವವರ್ಣಾಭೋ ಮುಕ್ತಾಹಾರನಿಭಃ ಕ್ವ ಚಿತ್||
ಅವನ ಕೆಲವು ಶರೀರಗಳು ನೀಲವೈಡೂರ್ಯಗಳಂತಿದ್ದರೆ ಇನ್ನು ಕೆಲವು ಇಂದ್ರನೀಲದಂತೆ ಹೊಳೆಯುತ್ತಿದ್ದವು. ಕೆಲವು ನವಿಲಿನ ಕುತ್ತಿಗೆಯ ಬಣ್ಣವನ್ನು ತಳೆದಿದ್ದರೆ ಇನ್ನು ಕೆಲವು ಮುತ್ತಿನ ಮಾಲೆಯಂತೆ ಕಾಂತಿಯುಕ್ತವಾಗಿದ್ದವು.
12326006a ಏತಾನ್ವರ್ಣಾನ್ಬಹುವಿಧಾನ್ರೂಪೇ ಬಿಭ್ರತ್ಸನಾತನಃ|
12326006c ಸಹಸ್ರನಯನಃ ಶ್ರೀಮಾನ್ ಶತಶೀರ್ಷಃ ಸಹಸ್ರಪಾತ್||
ಈ ವರ್ಣಗಳಿಂದ ಬಹುವಿಧದ ರೂಪಗಳಲ್ಲಿ ಆ ಸನಾತನನು ಬೆಳಗುತ್ತಿದ್ದನ್ನು. ಅವನಿಗೆ ಸಹಸ್ರ ಕಣ್ಣುಗಳಿದ್ದವು. ನೂರು ತಲೆಗಳಿದ್ದವು. ಸಹಸ್ರ ಪಾದಗಳಿದ್ದವು.
12326007a ಸಹಸ್ರೋದರಬಾಹುಶ್ಚ ಅವ್ಯಕ್ತ ಇತಿ ಚ ಕ್ವ ಚಿತ್|
12326007c ಓಂಕಾರಮುದ್ಗಿರನ್ವಕ್ತ್ರಾತ್ಸಾವಿತ್ರೀಂ ಚ ತದನ್ವಯಾಮ್||
ಸಹಸ್ರ ಹೊಟ್ಟೆಗಳು ಬಾಹುಗಳಿದ್ದ ಅವನು ಕೆಲವೆದೇ ಅವ್ಯಕ್ತನಾಗಿದ್ದನು. ಅವನ ಒಂದು ಮುಖದಿಂದ ಓಂಕಾರವೂ ಮತ್ತುಅ ದನ್ನು ಅನುಸರಿಸಿ ಸಾವಿತ್ತ್ರಿಯೂ ಹೊರಹೊಮ್ಮುತ್ತಿತ್ತು.
12326008a ಶೇಷೇಭ್ಯಶ್ಚೈವ ವಕ್ತ್ರೇಭ್ಯಶ್ಚತುರ್ವೇದೋದ್ಗತಂ ವಸು|
12326008c ಆರಣ್ಯಕಂ ಜಗೌ ದೇವೋ ಹರಿರ್ನಾರಾಯಣೋ ವಶೀ||
ಎಲ್ಲವನ್ನೂ ತನ್ನ ವಶದಲ್ಲಿಟ್ಟುಕೊಂಡಿರುವ ದೇವ ಹರಿ ನಾರಾಯಣನು ಉಳಿದ ವಕ್ತ್ರಗಳಿಂದ ಚತುರ್ವೇದಗಳು ಮತ್ತು ಆರಣ್ಯಕಗಳನ್ನು ಪಠಿಸುತ್ತಿದ್ದನು.
12326009a ವೇದೀಂ ಕಮಂಡಲುಂ ದರ್ಭಾನ್ಮಣಿರೂಪಾನಥೋಪಲಾನ್|
12326009c ಅಜಿನಂ ದಂಡಕಾಷ್ಠಂ ಚ ಜ್ವಲಿತಂ ಚ ಹುತಾಶನಮ್|
12326009e ಧಾರಯಾಮಾಸ ದೇವೇಶೋ ಹಸ್ತೈರ್ಯಜ್ಞಪತಿಸ್ತದಾ||
ಆ ದೇವೇಶ ಯಜ್ಞಪತಿಯು ಆಗ ತನ್ನಕೈ ಗಳಲ್ಲಿ ಯಜ್ಞವೇದಿಯನ್ನೂ, ಕಮಂಡಲುವನ್ನೂ, ದರ್ಭೆಗಳನ್ನೂ, ಮಣಿರತ್ನಗಳನ್ನೂ, ಮೃಗಚರ್ಮವನ್ನೂ, ಕಾಷ್ಠದಂಡವನ್ನೂ, ಪ್ರಜ್ವಲಿಸುತ್ತಿದ್ದ ಯಜ್ಞೇಶ್ವರನನ್ನು ಹಿಡಿದಿದ್ದನು.
12326010a ತಂ ಪ್ರಸನ್ನಂ ಪ್ರಸನ್ನಾತ್ಮಾ ನಾರದೋ ದ್ವಿಜಸತ್ತಮಃ|
12326010c ವಾಗ್ಯತಃ ಪ್ರಯತೋ ಭೂತ್ವಾ ವವಂದೇ ಪರಮೇಶ್ವರಮ್|
12326010e ತಮುವಾಚ ನತಂ ಮೂರ್ಧ್ನಾ ದೇವಾನಾಮಾದಿರವ್ಯಯಃ||
ಆ ಪ್ರಸನ್ನ ಪರಮೇಶ್ವರನನ್ನು ಪ್ರಸನ್ನಾತ್ಮಾ ದ್ವಿಜಸತ್ತಮ ನಾರದನು ಮೌನದಿಂದಲೇ ತಲೆಬಾಗಿ ವಂದಿಸಿದನು. ಆಗ ಆದಿದೇವ ಅವ್ಯಯನು ತಲೆಬಾಗಿ ನಮಸ್ಕರಿಸುತ್ತಿದ್ದ ನಾರದನಿಗೆ ಹೇಳಿದನು:
12326011a ಏಕತಶ್ಚ ದ್ವಿತಶ್ಚೈವ ತ್ರಿತಶ್ಚೈವ ಮಹರ್ಷಯಃ|
12326011c ಇಮಂ ದೇಶಮನುಪ್ರಾಪ್ತಾ ಮಮ ದರ್ಶನಲಾಲಸಾಃ||
“ಮಹರ್ಷಿಗಳಾದ ಏಕತ, ದ್ವಿತ ಮತ್ತು ತ್ರಿತರು ನನ್ನನ್ನು ನೋಡಲು ಬಯಸಿ ಈ ಪ್ರದೇಶವನ್ನು ತಲುಪಿದ್ದರು.
12326012a ನ ಚ ಮಾಂ ತೇ ದದೃಶಿರೇ ನ ಚ ದ್ರಕ್ಷ್ಯತಿ ಕಶ್ಚನ|
12326012c ಋತೇ ಹ್ಯೇಕಾಂತಿಕಶ್ರೇಷ್ಠಾತ್ತ್ವಂ ಚೈವೈಕಾಂತಿಕೋ ಮತಃ||
ಆದರೆ ಅವರಿಗೆ ನಾನು ಕಾಣಿಸಲಿಲ್ಲ. ನನ್ನಲ್ಲಿ ಏಕಾಂತಿಕ ಭಕ್ತಿಯನ್ನಿಟ್ಟ ಶ್ರೇಷ್ಠರ ಹೊರತಾಗಿ ಯಾರೂ ನನ್ನನ್ನು ಕಾಣುವುದಿಲ್ಲ. ಆದರೆ ನೀನು ನನ್ನಲ್ಲಿ ಏಕಾಂತಿಕ ಭಕ್ತಿಯನ್ನಿಟ್ಟುರುವೆ ಎಂದು ತಿಳಿದಿದೆದೆ.
12326013a ಮಮೈತಾಸ್ತನವಃ ಶ್ರೇಷ್ಠಾ ಜಾತಾ ಧರ್ಮಗೃಹೇ ದ್ವಿಜ|
12326013c ತಾಸ್ತ್ವಂ ಭಜಸ್ವ ಸತತಂ ಸಾಧಯಸ್ವ ಯಥಾಗತಮ್||
ದ್ವಿಜ! ಧರ್ಮನ ಮನೆಯಲ್ಲಿ ಹುಟ್ಟಿರುವ ಆ ಶ್ರೇಷ್ಠರು ನನ್ನದೇ ಶರೀರಗಳು. ಬಂದ ಹಾಗೆಯೇ ಹಿಂದಿರುಗಿ ಅವರನ್ನು ನೀನು ಸತತವೂ ಭಜಿಸಿ ಸಾಧಿಸು.
12326014a ವೃಣೀಷ್ವ ಚ ವರಂ ವಿಪ್ರ ಮತ್ತಸ್ತ್ವಂ ಯಮಿಹೇಚ್ಚಸಿ|
12326014c ಪ್ರಸನ್ನೋಽಹಂ ತವಾದ್ಯೇಹ ವಿಶ್ವಮೂರ್ತಿರಿಹಾವ್ಯಯಃ||
ವಿಪ್ರ! ನನ್ನಿಂದ ಬಯಸುವ ವರವನ್ನು ಕೇಳು. ವಿಶ್ವಮೂರ್ತಿಯೂ ಅವ್ಯಯನೂ ಆದ ನಾನು ಇಂದು ನಿನ್ನಮೇಲೆ ಪ್ರಸನ್ನನಾಗಿದ್ದೇನೆ.”
12326015 ನಾರದ ಉವಾಚ|
12326015a ಅದ್ಯ ಮೇ ತಪಸೋ ದೇವ ಯಮಸ್ಯ ನಿಯಮಸ್ಯ ಚ|
12326015c ಸದ್ಯಃ ಫಲಮವಾಪ್ತಂ ವೈ ದೃಷ್ಟೋ ಯದ್ಭಗವಾನ್ಮಯಾ||
ನಾರದನು ಹೇಳಿದನು: “ಭಗವನ್! ದೇವ! ಇಂದು ನನ್ನ ತಪಸ್ಸು, ಯಮ-ನಿಯಮಗಳ ಫಲವು ದೊರಕಿತು. ಈಗ ನಿನ್ನನ್ನು ನಾನು ನೋಡುತ್ತಿದ್ದೇನೆ.
12326016a ವರ ಏಷ ಮಮಾತ್ಯಂತಂ ದೃಷ್ಟಸ್ತ್ವಂ ಯತ್ಸನಾತನಃ|
12326016c ಭಗವಾನ್ವಿಶ್ವದೃಕ್ಸಿಂಹಃ ಸರ್ವಮೂರ್ತಿರ್ಮಹಾಪ್ರಭುಃ||
ಸನಾತನ ಭಗವಾನ್ ವಿಶ್ವದೃಕ್ ಸಿಂಹ ಸರ್ವಮೂರ್ತಿ ಮಹಾಪ್ರಭು ನಿನ್ನನ್ನು ಕಂಡೆ ಎನ್ನುವುದೇ ನನ್ನ ಅತ್ಯಂತ ವರವಾಗಿದೆ.””
12326017 ಭೀಷ್ಮ ಉವಾಚ|
12326017a ಏವಂ ಸಂದರ್ಶಯಿತ್ವಾ ತು ನಾರದಂ ಪರಮೇಷ್ಠಿಜಮ್|
12326017c ಉವಾಚ ವಚನಂ ಭೂಯೋ ಗಚ್ಚ ನಾರದ ಮಾಚಿರಮ್||
ಭೀಷ್ಮನು ಹೇಳಿದನು: “ಹೀಗೆ ಪರಮೇಷ್ಠಿಜ ನಾರದನಿಗೆ ಕಾಣಿಸಿಕೊಂಡು ಭಗವಂತನು ಪುನಃ ಹೇಳಿದನು: “ನಾರದ! ಕೂಡಲೇ ಹೋಗು.
12326018a ಇಮೇ ಹ್ಯನಿಂದ್ರಿಯಾಹಾರಾ ಮದ್ಭಕ್ತಾಶ್ಚಂದ್ರವರ್ಚಸಃ|
12326018c ಏಕಾಗ್ರಾಶ್ಚಿಂತಯೇಯುರ್ಮಾಂ ನೈಷಾಂ ವಿಘ್ನೋ ಭವೇದಿತಿ||
ನನ್ನ ಭಕ್ತರಾಗಿರುವ ಈ ಚಂದ್ರವರ್ಚಸರು ಇಂದ್ರಿಯ ರಹಿತರೂ ನಿರಾಹಾರರೂ ಆಗಿದ್ದಾರೆ. ಇವರು ನನ್ನನ್ನೇ ಏಕಾಗ್ರರಾಗಿ ಧ್ಯಾನಿಸುತ್ತಿದ್ದಾರೆ. ಅವರ ಈ ಧ್ಯಾನಕ್ಕೆ ವಿಘ್ನವುಂಟಾಗಬಾರದು.
12326019a ಸಿದ್ಧಾಶ್ಚೈತೇ ಮಹಾಭಾಗಾಃ ಪುರಾ ಹ್ಯೇಕಾಂತಿನೋಽಭವನ್|
12326019c ತಮೋರಜೋವಿನಿರ್ಮುಕ್ತಾ ಮಾಂ ಪ್ರವೇಕ್ಷ್ಯಂತ್ಯಸಂಶಯಮ್||
ಹಿಂದೆ ನನ್ನ ಏಕಾಂತ ಭಕ್ತರಾಗಿದ್ದ ಈ ಮಹಾಭಾಗರು ತಮೋ-ರಜ ಗುಣಗಳಿಂದ ವಿಮುಕ್ತರಾಗಿ ನಿಃಸಂಶಯವಾಗಿ ನನ್ನನ್ನು ಪ್ರವೇಶಿಸುತ್ತಾರೆ.
12326020a ನ ದೃಶ್ಯಶ್ಚಕ್ಷುಷಾ ಯೋಽಸೌ ನ ಸ್ಪೃಶ್ಯಃ ಸ್ಪರ್ಶನೇನ ಚ|
12326020c ನ ಘ್ರೇಯಶ್ಚೈವ ಗಂಧೇನ ರಸೇನ ಚ ವಿವರ್ಜಿತಃ||
12326021a ಸತ್ತ್ವಂ ರಜಸ್ತಮಶ್ಚೈವ ನ ಗುಣಾಸ್ತಂ ಭಜಂತಿ ವೈ|
12326021c ಯಶ್ಚ ಸರ್ವಗತಃ ಸಾಕ್ಷೀ ಲೋಕಸ್ಯಾತ್ಮೇತಿ ಕಥ್ಯತೇ||
ಯಾರನ್ನು ಕಣ್ಣುಗಳಿಂದ ನೋಡಲಿಕ್ಕಾಗುವುದಿಲ್ಲವೂ, ಯಾರನ್ನು ತ್ವಚೆಯಿಂದ ಸ್ಪರ್ಶಿಸಲಾಗುವುದಿಲ್ಲವೋ, ಯಾರನ್ನು ಘ್ರಾಣೇಂದ್ರಿಯದಿಂದ ಆಘ್ರಾಣಿಸಲು ಸಾಧ್ಯವಿಲ್ಲವೋ, ಯಾವನು ರಸನೇಂದ್ರಿಯದಿಂದ ಅತೀತನಾಗಿರುವನೋ, ಸತ್ತ್ವ-ರಜಸ್-ತಮೋಗುಣಗಳು ಯಾರ ಬಳಿಸಾರಲಾರವೋ ಮತ್ತು ಯಾರು ಸರ್ವದಲ್ಲಿಯೂ ಇದ್ದುಕೊಂಡು ಸಾಕ್ಷಿಯಾಗಿರುವನೋ ಅವನನ್ನೇ ಲೋಕದ ಆತ್ಮವೆಂದು ಹೇಳುತ್ತಾರೆ.
12326022a ಭೂತಗ್ರಾಮಶರೀರೇಷು ನಶ್ಯತ್ಸು ನ ವಿನಶ್ಯತಿ|
12326022c ಅಜೋ ನಿತ್ಯಃ ಶಾಶ್ವತಶ್ಚ ನಿರ್ಗುಣೋ ನಿಷ್ಕಲಸ್ತಥಾ||
12326023a ದ್ವಿರ್ದ್ವಾದಶೇಭ್ಯಸ್ತತ್ತ್ವೇಭ್ಯಃ ಖ್ಯಾತೋ ಯಃ ಪಂಚವಿಂಶಕಃ|
12326023c ಪುರುಷೋ ನಿಷ್ಕ್ರಿಯಶ್ಚೈವ ಜ್ಞಾನದೃಶ್ಯಶ್ಚ ಕಥ್ಯತೇ||
ಭೂತಗ್ರಾಮಗಳಿಂದ ಉಂಟಾಗಿರುವ ಶರೀರಗಳು ನಾಶಹೊಂದಿದರೂ ಯಾವುದು ವಿನಾಶವಾಗುವುದಿಲ್ಲವೋ ಆ ಅಜ, ನಿತ್ಯ, ಶಾಶ್ವತ, ನಿರ್ಗುಣ, ನಿಷ್ಕಲ, ಇಪ್ಪತ್ನಾಲ್ಕು ತತ್ತ್ವಗಳಿಗೂ ಅತೀತನಾಗಿರುವ ಇಪ್ಪತ್ತೈದನೆಯವನು ನಿಷ್ಕ್ರಿಯ ಪುರುಷ. ಅವನನ್ನು ಜ್ಞಾನದೃಷ್ಟಿಯಿಂದ ಮಾತ್ರ ಕಾಣಬಹುದು ಎಂದು ಹೇಳುತ್ತಾರೆ.
12326024a ಯಂ ಪ್ರವಿಶ್ಯ ಭವಂತೀಹ ಮುಕ್ತಾ ವೈ ದ್ವಿಜಸತ್ತಮ|
12326024c ಸ ವಾಸುದೇವೋ ವಿಜ್ಞೇಯಃ ಪರಮಾತ್ಮಾ ಸನಾತನಃ||
ದ್ವಿಜಸತ್ತಮ! ಯಾರನ್ನು ಪ್ರವೇಶಿಸಿ ಮುಕ್ತರಾಗುತ್ತಾರೋ ಅವನೇ ವಾಸುದೇವ ಸನಾತನ ಪರಮಾತ್ಮನೆಂದು ತಿಳಿದುಕೊಳ್ಳಬೇಕು.
12326025a ಪಶ್ಯ ದೇವಸ್ಯ ಮಾಹಾತ್ಮ್ಯಂ ಮಹಿಮಾನಂ ಚ ನಾರದ|
12326025c ಶುಭಾಶುಭೈಃ ಕರ್ಮಭಿರ್ಯೋ ನ ಲಿಪ್ಯತಿ ಕದಾ ಚನ||
ನಾರದ! ಯಾರನ್ನು ಶುಭಾಶುಭ ಕರ್ಮಗಳು ಎಂದೂ ಅಂಟಿಕೊಳ್ಳದಿರುವ ಆ ದೇವನ ಮಹಾತ್ಮೆ ಮಹಿಮೆಗಳನ್ನು ನೋಡು.
12326026a ಸತ್ತ್ವಂ ರಜಸ್ತಮಶ್ಚೈವ ಗುಣಾನೇತಾನ್ ಪ್ರಚಕ್ಷತೇ|
12326026c ಏತೇ ಸರ್ವಶರೀರೇಷು ತಿಷ್ಠಂತಿ ವಿಚರಂತಿ ಚ||
ಸರ್ವ ಶರೀರಗಳಲ್ಲಿದ್ದುಕೊಂಡು ಚಲಿಸುವ ಸತ್ತ್ವ, ರಜಸ್ ಮತ್ತು ತಮಸ್ಸುಗಳನ್ನು ಗುಣಗಳೆಂದು ಹೇಳುತ್ತಾರೆ.
12326027a ಏತಾನ್ಗುಣಾಂಸ್ತು ಕ್ಷೇತ್ರಜ್ಞೋ ಭುಂಕ್ತೇ ನೈಭಿಃ ಸ ಭುಜ್ಯತೇ|
12326027c ನಿರ್ಗುಣೋ ಗುಣಭುಕ್ಚೈವ ಗುಣಸ್ರಷ್ಟಾ ಗುಣಾಧಿಕಃ||
ಕ್ಷೇತ್ರಜ್ಞನು ಈ ಗುಣಗಳನ್ನು ಭುಂಜಿಸುವನೇ ಹೊರತು ಇವು ಎಂದೂ ಅವನನ್ನು ಅನುಭವಿಸುವುದಿಲ್ಲ. ಏಕೆಂದರೆ ಅವನು ನಿರ್ಗುಣನು. ಗುಣಗಳನ್ನು ಭೋಗಿಸುವವನು. ಗುಣಗಳನ್ನು ಸೃಷ್ಟಿಸಿದವನು. ಮತ್ತು ಗುಣಗಳಿಗಿಂತಲೂ ಅಧಿಕನಾದವನು.
12326028a ಜಗತ್ಪ್ರತಿಷ್ಠಾ ದೇವರ್ಷೇ ಪೃಥಿವ್ಯಪ್ಸು ಪ್ರಲೀಯತೇ|
12326028c ಜ್ಯೋತಿಷ್ಯಾಪಃ ಪ್ರಲೀಯಂತೇ ಜ್ಯೋತಿರ್ವಾಯೌ ಪ್ರಲೀಯತೇ||
ದೇವರ್ಷೇ! ಜಗತ್ತು ಪ್ರತಿಷ್ಠವಾಗಿರುವ ಪೃಥಿವೀ ತತ್ತ್ವವು ಜಲತತ್ತ್ವದಲ್ಲಿ ಲೀನವಾಗುತ್ತದೆ. ಜಲತತ್ತ್ವವು ಜ್ಯೋತಿತತ್ತ್ವದಲ್ಲಿ ಲೀನವಾಗುತ್ತದೆ. ಮತ್ತು ಜ್ಯೋತಿತತ್ತ್ವವು ವಾಯುತತ್ತ್ವದಲ್ಲಿ ಲೀನವಾಗುತ್ತದೆ.
12326029a ಖೇ ವಾಯುಃ ಪ್ರಲಯಂ ಯಾತಿ ಮನಸ್ಯಾಕಾಶಮೇವ ಚ|
12326029c ಮನೋ ಹಿ ಪರಮಂ ಭೂತಂ ತದವ್ಯಕ್ತೇ ಪ್ರಲೀಯತೇ||
ವಾಯುವು ಆಕಾಶದಲ್ಲಿ ಪ್ರಲಯವಾಗುತ್ತದೆ. ಆಕಾಶವು ಮನಸ್ಸಿನಲ್ಲಿ ಪ್ರಲಯವಾಗುತ್ತದೆ. ಪರಮ ಭೂತವಾದ ಮನಸ್ಸು ಅವ್ಯಕ್ತದಲ್ಲಿ ಪ್ರಲಯವಾಗುತ್ತದೆ.
12326030a ಅವ್ಯಕ್ತಂ ಪುರುಷೇ ಬ್ರಹ್ಮನ್ನಿಷ್ಕ್ರಿಯೇ ಸಂಪ್ರಲೀಯತೇ|
12326030c ನಾಸ್ತಿ ತಸ್ಮಾತ್ಪರತರಂ ಪುರುಷಾದ್ವೈ ಸನಾತನಾತ್||
ಬ್ರಹ್ಮನ್! ಅವ್ಯಕ್ತವು ನಿಷ್ಕ್ರಿಯ ಪುರುಷನಲ್ಲಿ ಪ್ರಲಯವಾಗುತ್ತದೆ. ಸನಾತನ ಪುರುಷನಿಗಿಂತ ಉತ್ಕೃಷ್ಟವಾದುದು ಬೇರೆ ಯಾವುದೂ ಇಲ್ಲ.
12326031a ನಿತ್ಯಂ ಹಿ ನಾಸ್ತಿ ಜಗತಿ ಭೂತಂ ಸ್ಥಾವರಜಂಗಮಮ್|
12326031c ಋತೇ ತಮೇಕಂ ಪುರುಷಂ ವಾಸುದೇವಂ ಸನಾತನಮ್|
12326031e ಸರ್ವಭೂತಾತ್ಮಭೂತೋ ಹಿ ವಾಸುದೇವೋ ಮಹಾಬಲಃ||
ಆ ಸನಾತನ ಪುರುಷ ವಾಸುದೇವನನ್ನು ಬಿಟ್ಟರೆ ಈ ಜಗತ್ತಿನಲ್ಲಿ ನಿತ್ಯವಾಗಿರುವ ಯಾವ ಸ್ಥಾವರ ಜಂಗಮ ಭೂತವೂ ಇಲ್ಲ. ಮಹಾಬಲ ವಾಸುದೇವನು ಸರ್ವಭೂತಗಳಲ್ಲಿಯೂ ಇರುವ ಆತ್ಮಭೂತ.
12326032a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್|
12326032c ತೇ ಸಮೇತಾ ಮಹಾತ್ಮಾನಃ ಶರೀರಮಿತಿ ಸಂಜ್ಞಿತಮ್||
ಪೃಥ್ವಿ, ವಾಯು, ಆಕಾಶ, ಆಪ ಮತ್ತು ಐದನೆಯದಾಗಿ ಜ್ಯೋತಿ ಈ ಮಹಾಭೂತಗಳು ಸೇರಿಕೊಂಡಾಗ ಶರೀರವಾಗುತ್ತದೆ.
12326033a ತದಾವಿಶತಿ ಯೋ ಬ್ರಹ್ಮನ್ನದೃಶ್ಯೋ ಲಘುವಿಕ್ರಮಃ|
12326033c ಉತ್ಪನ್ನ ಏವ ಭವತಿ ಶರೀರಂ ಚೇಷ್ಟಯನ್ ಪ್ರಭುಃ||
ಬ್ರಹ್ಮನ್! ಆಗ ಅದನ್ನು ಅದೃಶ್ಯ ಲಘುವಿಕ್ರಮ ಪ್ರಭುವು ಉತ್ಪನ್ನ ಶರೀರವನ್ನು ಪ್ರವೇಶಿಸಿ, ಚಲಿಸುವಂತೆ ಮಾಡುತ್ತಾನೆ.
12326034a ನ ವಿನಾ ಧಾತುಸಂಘಾತಂ ಶರೀರಂ ಭವತಿ ಕ್ವ ಚಿತ್|
12326034c ನ ಚ ಜೀವಂ ವಿನಾ ಬ್ರಹ್ಮನ್ ಧಾತವಶ್ಚೇಷ್ಟಯಂತ್ಯುತ||
ಧಾತುಗಳಾದ ಪಂಚಭೂತಗಳ ಸಮಾಗಮವಿಲ್ಲದೇ ಯಾವ ಶರೀರವೂ ಉತ್ಪನ್ನವಾಗುವುದಿಲ್ಲ. ಬ್ರಹ್ಮನ್! ಜೀವವಿಲ್ಲದೇ ಈ ಪಂಚಭೂತಗಳು ಚಲಿಸುವುದೂ ಇಲ್ಲ.
12326035a ಸ ಜೀವಃ ಪರಿಸಂಖ್ಯಾತಃ ಶೇಷಃ ಸಂಕರ್ಷಣಃ ಪ್ರಭುಃ|
12326035c ತಸ್ಮಾತ್ಸನತ್ಕುಮಾರತ್ವಂ ಯೋ ಲಭೇತ ಸ್ವಕರ್ಮಣಾ||
ಆ ಜೀವವನ್ನು ಶೇಷ ಅಥವಾ ಪ್ರಭು ಸಂಕರ್ಷಣ ಎಂದು ಕರೆಯುತ್ತಾರೆ. ತನ್ನ ಕರ್ಮಗಳಿಂದ ಸಂಕರ್ಷಣನು ಸನತ್ಕುಮಾರತ್ವವನ್ನು ಪಡೆದುಕೊಳ್ಳುತ್ತಾನೆ.
12326036a ಯಸ್ಮಿಂಶ್ಚ ಸರ್ವಭೂತಾನಿ ಪ್ರಲಯಂ ಯಾಂತಿ ಸಂಕ್ಷಯೇ|
12326036c ಸ ಮನಃ ಸರ್ವಭೂತಾನಾಂ ಪ್ರದ್ಯುಮ್ನಃ ಪರಿಪಠ್ಯತೇ||
ಸಂಕ್ಷಯದಲ್ಲಿ ಸರ್ವಭೂತಗಳೂ ಯಾವುದರಲ್ಲಿ ಪ್ರಲಯಹೊಂದುತ್ತವೆಯೋ ಅದೇ ಸರ್ವಭೂತಗಳ ಮನಸ್ಸು. ಅದನ್ನು ಪ್ರದ್ಯುಮ್ನ ಎಂದು ಕರೆಯುತ್ತಾರೆ.
12326037a ತಸ್ಮಾತ್ಪ್ರಸೂತೋ ಯಃ ಕರ್ತಾ ಕಾರ್ಯಂ ಕಾರಣಮೇವ ಚ|
12326037c ಯಸ್ಮಾತ್ಸರ್ವಂ ಪ್ರಭವತಿ ಜಗತ್ ಸ್ಥಾವರಜಂಗಮಮ್|
12326037e ಸೋಽನಿರುದ್ಧಃ ಸ ಈಶಾನೋ ವ್ಯಕ್ತಿಃ ಸಾ ಸರ್ವಕರ್ಮಸು||
ಪ್ರದ್ಯುಮ್ನನಿಂದ ಹುಟ್ಟಿದವನು ಕರ್ತ, ಕಾರ್ಯ ಮತ್ತು ಕಾರಣ ಕೂಡ/ ಅವನಿಂದ ಜಗತ್ತಿನ ಸ್ಥಾವರಜಂಗಮಗಳೆಲ್ಲವೂ ಹುಟ್ಟಿಕೊಳ್ಳುತ್ತವೆ. ಸರ್ವಕರ್ಮಗಳಲ್ಲಿ ವ್ಯಕ್ತಿಯಾಗಿರುವವನೇ ಈಶಾನ ಅಥವಾ ಅನಿರುದ್ಧ.
12326038a ಯೋ ವಾಸುದೇವೋ ಭಗವಾನ್ ಕ್ಷೇತ್ರಜ್ಞೋ ನಿರ್ಗುಣಾತ್ಮಕಃ|
12326038c ಜ್ಞೇಯಃ ಸ ಏವ ಭಗವಾನ್ಜೀವಃ ಸಂಕರ್ಷಣಃ ಪ್ರಭುಃ||
ನಿರ್ಗುಣಾತ್ಮಕನಾದ ಭಗವಾನ್ ಕ್ಷೇತ್ರಜ್ಞನು ವಾಸುದೇವ ಮತ್ತು ಜೀವವೇ ಪ್ರಭು ಭಗವಾನ್ ಸಂಕರ್ಷಣ ಎಂದು ತಿಳಿ.
12326039a ಸಂಕರ್ಷಣಾಚ್ಚ ಪ್ರದ್ಯುಮ್ನೋ ಮನೋಭೂತಃ ಸ ಉಚ್ಯತೇ|
12326039c ಪ್ರದ್ಯುಮ್ನಾದ್ಯೋಽನಿರುದ್ಧಸ್ತು ಸೋಽಹಂಕಾರೋ ಮಹೇಶ್ವರಃ||
ಸಂಕರ್ಷಣನಿಂದಾದ ಪ್ರದ್ಯುಮ್ನನನ್ನು ಮನೋಭೂತ ಎಂದು ಹೇಳುತ್ತಾರೆ. ಪ್ರದ್ಯುಮ್ನನಿಂದಾದ ಅನಿರುದ್ಧನಾದರೋ ಅಹಂಕಾರ ಮಹೇಶ್ವರನು.
12326040a ಮತ್ತಃ ಸರ್ವಂ ಸಂಭವತಿ ಜಗತ್ ಸ್ಥಾವರಜಂಗಮಮ್|
12326040c ಅಕ್ಷರಂ ಚ ಕ್ಷರಂ ಚೈವ ಸಚ್ಚಾಸಚ್ಚೈವ ನಾರದ||
ನಾರದ! ಸಕಲ ಜಗತ್ತೂ, ಸ್ಥಾವರಜಂಗಮಗಳೂ, ಜೀವ-ಪ್ರಕೃತಿ, ಸತ್-ಅಸತ್ ಎಲ್ಲವೂ ನನ್ನಿಂದಲೇ ಹುಟ್ಟುತ್ತವೆ.
12326041a ಮಾಂ ಪ್ರವಿಶ್ಯ ಭವಂತೀಹ ಮುಕ್ತಾ ಭಕ್ತಾಸ್ತು ಯೇ ಮಮ|
12326041c ಅಹಂ ಹಿ ಪುರುಷೋ ಜ್ಞೇಯೋ ನಿಷ್ಕ್ರಿಯಃ ಪಂಚವಿಂಶಕಃ||
ನನ್ನ ಭಕ್ತರು ನನ್ನನ್ನು ಪ್ರವೇಶಿಸಿ ಮುಕ್ತರಾಗುತ್ತಾರೆ. ನಾನೇ ಆ ತಿಳಿಯಬೇಕಾಗಿರುವ ಇಪ್ಪತ್ತೈದನೆಯವನಾದ ನಿಷ್ಕ್ರಿಯ ಪುರುಷ.
12326042a ನಿರ್ಗುಣೋ ನಿಷ್ಕಲಶ್ಚೈವ ನಿರ್ದ್ವಂದ್ವೋ ನಿಷ್ಪರಿಗ್ರಹಃ|
12326042c ಏತತ್ತ್ವಯಾ ನ ವಿಜ್ಞೇಯಂ ರೂಪವಾನಿತಿ ದೃಶ್ಯತೇ|
12326042e ಇಚ್ಚನ್ಮುಹೂರ್ತಾನ್ನಶ್ಯೇಯಮೀಶೋಽಹಂ ಜಗತೋ ಗುರುಃ||
ನಾನು ನಿರ್ಗುಣ. ನಿಷ್ಕಲ, ನಿರ್ದ್ವಂದ್ವ. ಮತ್ತು ನಿಷ್ಪರಿಗ್ರಹ. ನಿನಗೆ ಕಾಣಿಸಿಕೊಂಡ ಮಾತ್ರಕ್ಕೆ ನಾನು ರೂಪವನ್ನು ಪಡೆದವನು ಎಂದು ತಿಳಿಯಬಾರದು. ಇಚ್ಛಿಸಿದರೆ ಮುಹೂರ್ತಮಾತ್ರದಲ್ಲಿ ಅದೃಶ್ಯನಾಗಬಲ್ಲ ನಾನು ಈಶ. ಜಗತ್ತಿನ ಗುರು.
12326043a ಮಾಯಾ ಹ್ಯೇಷಾ ಮಯಾ ಸೃಷ್ಟಾ ಯನ್ಮಾಂ ಪಶ್ಯಸಿ ನಾರದ|
12326043c ಸರ್ವಭೂತಗುಣೈರ್ಯುಕ್ತಂ ನೈವಂ ತ್ವಂ ಜ್ಞಾತುಮರ್ಹಸಿ|
12326043e ಮಯೈತತ್ಕಥಿತಂ ಸಮ್ಯಕ್ತವ ಮೂರ್ತಿಚತುಷ್ಟಯಮ್||
ನಾರದ! ಯಾವ ನನ್ನ ವಿಶ್ವರೂಪವನ್ನು ನೀನು ಕಾಣುತ್ತಿದ್ದೀಯೋ ಅದು ನನ್ನಿಂದಲೇ ಸೃಷ್ಟಿಸಲ್ಪಟ್ಟ ಮಾಯೆ. ನಾನು ಸರ್ವಭೂತಗುಣಗಳಿಂದಲೂ ಕೂಡಿರುವೆನೆಂದು ನೀನು ನನ್ನನ್ನು ತಿಳಿದುಕೊಳ್ಳಬಾರದು. ನಾನು ನಿನಗೆ ನಾಲ್ಕು ಮೂರ್ತಿಗಳ ಕುರಿತಾಗಿ ಎಲ್ಲವನ್ನೂ ಹೇಳಿದ್ದೇನೆ.
12326044a ಸಿದ್ಧಾ ಹ್ಯೇತೇ ಮಹಾಭಾಗಾ ನರಾ ಹ್ಯೇಕಾಂತಿನೋಽಭವನ್|
12326044c ತಮೋರಜೋಭ್ಯಾಂ ನಿರ್ಮುಕ್ತಾಃ ಪ್ರವೇಕ್ಷ್ಯಂತಿ ಚ ಮಾಂ ಮುನೇ||
ಮುನೇ! ಶ್ವೇತದ್ವೀಪದ ಮಹಾಭಾಗ ನರರು ನನ್ನಲ್ಲಿಯೇ ಅನನ್ಯಭಕ್ತಿಯನ್ನಿಟ್ಟುಕೊಂಡ ಸಿದ್ಧರು. ತಮ-ರಜೋಗುಣಗಳಿಂದ ವಿಮುಕ್ತರಾಗ ಅವರು ನನ್ನನ್ನೇ ಪ್ರವೇಶಿಸುತ್ತಾರೆ.
12326045a ಅಹಂ ಕರ್ತಾ ಚ ಕಾರ್ಯಂ ಚ ಕಾರಣಂ ಚಾಪಿ ನಾರದ|
12326045c ಅಹಂ ಹಿ ಜೀವಸಂಜ್ಞೋ ವೈ ಮಯಿ ಜೀವಃ ಸಮಾಹಿತಃ|
12326045e ಮೈವಂ ತೇ ಬುದ್ಧಿರತ್ರಾಭೂದ್ದೃಷ್ಟೋ ಜೀವೋ ಮಯೇತಿ ಚ||
ನಾರದ! ನಾನೇ ಕರ್ತ. ಕಾರ್ಯ, ಮತ್ತು ಕಾರಣನೂ ಕೂಡ. ನಾನು ಜೀವ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತೇನೆ. ನನ್ನಲ್ಲಿಯೇ ಜೀವವು ನೆಲೆಸಿದೆ. ಆದರೆ ಜೀವನನ್ನು ನೋಡಿಬಿಟ್ಟೆನೆಂಬ ಬುದ್ಧಿಯು ಮಾತ್ರ ನಿನಗೆ ಉಂಟಾಗದಿರಲಿ.
12326046a ಅಹಂ ಸರ್ವತ್ರಗೋ ಬ್ರಹ್ಮನ್ಭೂತಗ್ರಾಮಾಂತರಾತ್ಮಕಃ|
12326046c ಭೂತಗ್ರಾಮಶರೀರೇಷು ನಶ್ಯತ್ಸು ನ ನಶಾಮ್ಯಹಮ್||
ಬ್ರಹ್ಮನ್! ನಾನು ಸರ್ವವ್ಯಾಪಿ. ಭೂತಗ್ರಾಮಗಳ ಅಂತರಾತ್ಮಕನು. ಭೂತಗ್ರಾಮಗಳ ಶರೀರಗಳು ನಶಿಸಿದರೂ ನಾನು ನಾಶವಾಗುವುದಿಲ್ಲ.
12326047a ಹಿರಣ್ಯಗರ್ಭೋ ಲೋಕಾದಿಶ್ಚತುರ್ವಕ್ತ್ರೋ ನಿರುಕ್ತಗಃ|
12326047c ಬ್ರಹ್ಮಾ ಸನಾತನೋ ದೇವೋ ಮಮ ಬಹ್ವರ್ಥಚಿಂತಕಃ||
ಲೋಕಗಳ ಆದಿ ಚತುರ್ಮುಖ ಅನಿರ್ವಚನೀಯ ಸನಾತನ ದೇವ ಬ್ರಹ್ಮನೇ ಹಿರಣ್ಯಗರ್ಭ. ಅವನು ನನ್ನ ಅನೇಕ ಕಾರ್ಯಗಳನ್ನು ಚಿಂತಿಸುತ್ತಿರುತ್ತಾನೆ.
12326048a ಪಶ್ಯೈಕಾದಶ ಮೇ ರುದ್ರಾನ್ದಕ್ಷಿಣಂ ಪಾರ್ಶ್ವಮಾಸ್ಥಿತಾನ್|
12326048c ದ್ವಾದಶೈವ ತಥಾದಿತ್ಯಾನ್ವಾಮಂ ಪಾರ್ಶ್ವಂ ಸಮಾಸ್ಥಿತಾನ್||
ನನ್ನ ಬಲಭಾಗದಲ್ಲಿ ಉಪಸ್ಥಿತರಾಗಿರುವ ಏಕಾದಶ ರುದ್ರರನ್ನು ನೋಡು. ಹಾಗೆಯೇ ನನ್ನ ಎಡಭಾಗದಲ್ಲಿ ಸಮಾಸ್ಥಿತರಾಗಿರುವ ದ್ವಾದಶ ಆದಿತ್ಯರನ್ನು ನೋಡು.
12326049a ಅಗ್ರತಶ್ಚೈವ ಮೇ ಪಶ್ಯ ವಸೂನಷ್ಟೌ ಸುರೋತ್ತಮಾನ್|
12326049c ನಾಸತ್ಯಂ ಚೈವ ದಸ್ರಂ ಚ ಭಿಷಜೌ ಪಶ್ಯ ಪೃಷ್ಠತಃ||
ಸುರೋತ್ತಮರಾದ ಅಷ್ಟವಸುಗಳು ನನ್ನ ಮುಂದೆ ಇರುವುದನ್ನು ನೋಡು. ನನ್ನ ಹಿಂಭಾಗದಲ್ಲಿರುವ ನಾಸತ್ಯ ಮತ್ತು ದಸ್ರರೆಂಬ ವೈದ್ಯರನ್ನು ನೋಡು.
12326050a ಸರ್ವಾನ್ಪ್ರಜಾಪತೀನ್ಪಶ್ಯ ಪಶ್ಯ ಸಪ್ತ ಋಷೀನಪಿ|
12326050c ವೇದಾನ್ಯಜ್ಞಾಂಶ್ಚ ಶತಶಃ ಪಶ್ಯಾಮೃತಮಥೌಷಧೀಃ||
ಸರ್ವಪ್ರಜಾಪತಿಗಳನ್ನೂ, ಸಪ್ತ ಋಷಿಗಳನ್ನೂ, ವೇದಗಳು, ಯಜ್ಞಗಳು ಮತ್ತು ನೂರಾರು ಅಮೃತ ಔಷಧಿಗಳನ್ನು ನೋಡು.
12326051a ತಪಾಂಸಿ ನಿಯಮಾಂಶ್ಚೈವ ಯಮಾನಪಿ ಪೃಥಗ್ವಿಧಾನ್|
12326051c ತಥಾಷ್ಟಗುಣಮೈಶ್ವರ್ಯಮೇಕಸ್ಥಂ ಪಶ್ಯ ಮೂರ್ತಿಮತ್||
ತಪಸ್ಸುಗಳನ್ನೂ, ನಾನಾ ವಿಧದ ಯಮ-ನಿಯಮಗಳನ್ನೂ, ಅಷ್ಟಗುಣೈಶ್ವರ್ಯಗಳೂ ಒಂದೇ ಮೂರ್ತಿಮತ್ತಾಗಿ ನಿಂತಿರುವುದನ್ನು ನೋಡು.
12326052a ಶ್ರಿಯಂ ಲಕ್ಷ್ಮೀಂ ಚ ಕೀರ್ತಿಂ ಚ ಪೃಥಿವೀಂ ಚ ಕಕುದ್ಮಿನೀಮ್|
12326052c ವೇದಾನಾಂ ಮಾತರಂ ಪಶ್ಯ ಮತ್ಸ್ಥಾಂ ದೇವೀಂ ಸರಸ್ವತೀಮ್||
ನನ್ನಲ್ಲಿ ನೆಲೆಸಿರುವ ಶ್ರೀ, ಲಕ್ಷ್ಮೀ, ಕೀರ್ತಿ, ಪರ್ವತಗಳಿಂದ ಕೂಡಿರುವ ಪೃಥ್ವಿ, ವೇದಗಳ ಮಾತೆ ದೇವೀ ಸರಸ್ವತಿ ಇವರನ್ನು ನೋಡು.
12326053a ಧ್ರುವಂ ಚ ಜ್ಯೋತಿಷಾಂ ಶ್ರೇಷ್ಠಂ ಪಶ್ಯ ನಾರದ ಖೇಚರಮ್|
12326053c ಅಂಭೋಧರಾನ್ಸಮುದ್ರಾಂಶ್ಚ ಸರಾಂಸಿ ಸರಿತಸ್ತಥಾ||
ನಾರದ! ನಕ್ಷತ್ರಗಳಲ್ಲಿ ಶ್ರೇಷ್ಠ ಕೇಚರ ಧ್ರುವನನ್ನು ನೋಡು. ಮೇಘಗಲೂ, ಸಮುದ್ರಗಳೂ, ಸರೋವರಗಳೂ ಮತ್ತು ಹಾಗೆಯೇ ನದಿಗಳನ್ನೂ ನೋಡು.
12326054a ಮೂರ್ತಿಮಂತಃ ಪಿತೃಗಣಾಂಶ್ಚತುರಃ ಪಶ್ಯ ಸತ್ತಮ|
12326054c ತ್ರೀಂಶ್ಚೈವೇಮಾನ್ಗುಣಾನ್ಪಶ್ಯ ಮತ್ಸ್ಥಾನ್ಮೂರ್ತಿವಿವರ್ಜಿತಾನ್||
ಸತ್ತಮ! ನಾಲ್ಕು ಪ್ರಕಾರದ ಪಿತೃಗಣಗಳು ಮೂರ್ತಿಮಂತರಾಗಿರುವುದನ್ನು ನೋಡು. ಶರೀರಗಳಿಲ್ಲದಿರುವ ಮೂರು ಗುಣಗಳು ಮೂರ್ತಿಮತ್ತಾಗಿ ನನ್ನಲ್ಲಿರುವುದನ್ನು ನೋಡು.
12326055a ದೇವಕಾರ್ಯಾದಪಿ ಮುನೇ ಪಿತೃಕಾರ್ಯಂ ವಿಶಿಷ್ಯತೇ|
12326055c ದೇವಾನಾಂ ಚ ಪಿತೃಣಾಂ ಚ ಪಿತಾ ಹ್ಯೇಕೋಽಹಮಾದಿತಃ||
ಮುನೇ! ದೇವಕಾರಕ್ಕಿಂತಲೂ ಪಿತೃಕಾರ್ಯವು ಶ್ರೇಷ್ಠವಾದುದು. ದೇವತೆಗಳಿಗೂ ಮತ್ತು ಪಿತೃಗಳಿಗೂ ನಾನೊಬ್ಬನೇ ಏಕಮಾತ್ರ ಪಿತೃಅಗಿದ್ದೇನೆ.
12326056a ಅಹಂ ಹಯಶಿರೋ ಭೂತ್ವಾ ಸಮುದ್ರೇ ಪಶ್ಚಿಮೋತ್ತರೇ|
12326056c ಪಿಬಾಮಿ ಸುಹುತಂ ಹವ್ಯಂ ಕವ್ಯಂ ಚ ಶ್ರದ್ಧಯಾನ್ವಿತಮ್||
ನಾನು ಹಯಗ್ರೀವರೂಪವನ್ನು ಧರಿಸಿ ಸಮುದ್ರದ ವಾಯುವ್ಯದಿಕ್ಕಿನಲ್ಲಿದ್ದುಕೊಂಡು ಶದ್ಧಯಾನ್ವಿತರಾಗಿ ಉತ್ತಮ ಹೋಮಮಾಡಿದ ಹವ್ಯ ಕವ್ಯಗಳನ್ನು ಕುಡಿಯುತ್ತೇನೆ.
12326057a ಮಯಾ ಸೃಷ್ಟಃ ಪುರಾ ಬ್ರಹ್ಮಾ ಮದ್ಯಜ್ಞಮಯಜತ್ಸ್ವಯಮ್|
12326057c ತತಸ್ತಸ್ಮೈ ವರಾನ್ಪ್ರೀತೋ ದದಾವಹಮನುತ್ತಮಾನ್||
ಹಿಂದೆ ನನ್ನಿಂದಲೇ ಸೃಷ್ಟನಾದ ಬ್ರಹ್ಮನು ನನಗಾಗಿ ನನ್ನದೇ ಯಜ್ಞವನ್ನು ಮಾಡಿದನು. ಅದರಿಂದ ಪ್ರೀತನಾದ ನಾನು ಅವನಿಗೆ ಈ ಅನುತ್ತಮ ವರಗಳನ್ನಿತ್ತೆನು:
12326058a ಮತ್ಪುತ್ರತ್ವಂ ಚ ಕಲ್ಪಾದೌ ಲೋಕಾಧ್ಯಕ್ಷತ್ವಮೇವ ಚ|
12326058c ಅಹಂಕಾರಕೃತಂ ಚೈವ ನಾಮ ಪರ್ಯಾಯವಾಚಕಮ್||
“ಪ್ರತಿಯೊಂದು ಕಲ್ಪದ ಆದಿಯಲ್ಲಿಯೂ ನೀನು ನನ್ನ ಪುತ್ರನಾಗಿಯೇ ಹುಟ್ಟುತ್ತೀಯೆ. ಪ್ರತಿಯೊಂದು ಕಲ್ಪದಲ್ಲಿಯೂ ನಿನಗೇ ಲೋಕಾಧ್ಯಕ್ಷತ್ವವು ದೊರೆಯುತ್ತದೆ. “ಅಹಂಕಾರ ಕರ್ತಾ” ಎನ್ನುವ ಪರ್ಯಾಯ ನಾಮವೂ ನಿನಗಾಗುತ್ತದೆ.
12326059a ತ್ವಯಾ ಕೃತಾಂ ಚ ಮರ್ಯಾದಾಂ ನಾತಿಕ್ರಾಮ್ಯತಿ ಕಶ್ಚನ|
12326059c ತ್ವಂ ಚೈವ ವರದೋ ಬ್ರಹ್ಮನ್ವರೇಪ್ಸೂನಾಂ ಭವಿಷ್ಯಸಿ||
ನೀನು ಮಾಡಿತ್ತ ಮರ್ಯಾದೆಗಳನ್ನು ಯಾರೂ ಅತಿಕ್ರಮಿಸುವುದಿಲ್ಲ. ಬ್ರಹ್ಮನ್! ನೀನು ವರಗಳನ್ನು ಬಯಸುವವರಿಗೆ ವರದನೂ ಆಗುತ್ತೀಯೆ.
12326060a ಸುರಾಸುರಗಣಾನಾಂ ಚ ಋಷೀಣಾಂ ಚ ತಪೋಧನ|
12326060c ಪಿತೃಣಾಂ ಚ ಮಹಾಭಾಗ ಸತತಂ ಸಂಶಿತವ್ರತ|
12326060e ವಿವಿಧಾನಾಂ ಚ ಭೂತಾನಾಂ ತ್ವಮುಪಾಸ್ಯೋ ಭವಿಷ್ಯಸಿ||
ತಪೋಧನ! ಮಹಾಭಾಗ! ಸತತ ಸಂಶಿತವ್ರತ! ಸುರಾಸುರಗಣಗಳ, ಋಷಿಗಳ, ಪಿತೃಗಳ ಮತ್ತು ವಿವಿಧ ಭೂತಗಳ ಉಪಾಸ್ಯನಾಗುತ್ತೀಯೆ.
12326061a ಪ್ರಾದುರ್ಭಾವಗತಶ್ಚಾಹಂ ಸುರಕಾರ್ಯೇಷು ನಿತ್ಯದಾ|
12326061c ಅನುಶಾಸ್ಯಸ್ತ್ವಯಾ ಬ್ರಹ್ಮನ್ನಿಯೋಜ್ಯಶ್ಚ ಸುತೋ ಯಥಾ||
ಸುರಕಾರ್ಯಗಳಿಗಾಗಿ ನಾನು ನಿತ್ಯವೂ ಪ್ರಾದುರ್ಭವಿಸುತ್ತಿರುತ್ತೇನೆ. ಬ್ರಹ್ಮನ್! ಆಗ ನಾನು ನಿನ್ನ ಅನುಶಾಸನದಲ್ಲಿರುತ್ತೇನೆ. ಆಗ ಮಗನನ್ನು ಹೇಗೋ ಹಾಗೆ ನೀನು ನನ್ನನ್ನು ನಿಯೋಜಿಸಿಕೊಳ್ಳಬಹುದು.”
12326062a ಏತಾಂಶ್ಚಾನ್ಯಾಂಶ್ಚ ರುಚಿರಾನ್ಬ್ರಹ್ಮಣೇಽಮಿತತೇಜಸೇ|
12326062c ಅಹಂ ದತ್ತ್ವಾ ವರಾನ್ಪ್ರೀತೋ ನಿವೃತ್ತಿಪರಮೋಽಭವಮ್||
ಆ ಅಮಿತತೇಜಸ್ವಿ ಬ್ರಹ್ಮನಿಗೆ ಇವೇ ಮೊದಲಾದ ಅನ್ಯ ಸುಂದರ ಅನೇಕ ವರಗಳನ್ನು ವರಗಳನ್ನಿತ್ತು ಪ್ರೀತನಾಗಿ ಪರಮ ನಿವೃತ್ತನಾದೆನು.
12326063a ನಿರ್ವಾಣಂ ಸರ್ವಧರ್ಮಾಣಾಂ ನಿವೃತ್ತಿಃ ಪರಮಾ ಸ್ಮೃತಾ|
12326063c ತಸ್ಮಾನ್ನಿವೃತ್ತಿಮಾಪನ್ನಶ್ಚರೇತ್ಸರ್ವಾಂಗನಿರ್ವೃತಃ||
ಸರ್ವಧರ್ಮಗಳಿಂದ ನಿವೃತ್ತಿಯನ್ನು ಹೊಂದುವುದೇ ಪರಮ ನಿವೃತ್ತಿಯೆಂದು ತಿಳಿಯಲ್ಪಟ್ಟಿದೆ. ಆದುದರಿಂದ ಸರ್ವಾಂಗನಿವೃತ್ತನಾಗಿ ನಿವೃತ್ತಿಯನ್ನು ಆಶ್ರಯಿಸಿ ಸಂಚರಿಸುತ್ತಿರಬೇಕು.
12326064a ವಿದ್ಯಾಸಹಾಯವಂತಂ ಮಾಮಾದಿತ್ಯಸ್ಥಂ ಸನಾತನಮ್|
12326064c ಕಪಿಲಂ ಪ್ರಾಹುರಾಚಾರ್ಯಾಃ ಸಾಂಖ್ಯನಿಶ್ಚಿತನಿಶ್ಚಯಾಃ||
ಸಾಂಖ್ಯದ ನಿಶ್ಚಿತ-ನಿಶ್ಚಯಗಳನ್ನು ತಿಳಿದಿರುವ ಆಚಾರ್ಯರು ನಾನೇ ಆ ವಿದ್ಯಾಸಹಾಯವಂತ ಆದಿತ್ಯಸ್ಥ ಸನಾತನ ಕಪಿಲನೆಂದು ಹೇಳುತ್ತಾರೆ.
12326065a ಹಿರಣ್ಯಗರ್ಭೋ ಭಗವಾನೇಷ ಚಂದಸಿ ಸುಷ್ಟುತಃ|
12326065c ಸೋಽಹಂ ಯೋಗಗತಿರ್ಬ್ರಹ್ಮನ್ಯೋಗಶಾಸ್ತ್ರೇಷು ಶಬ್ದಿತಃ||
ಬ್ರಹ್ಮನ್! ಚಂದಗಳಲ್ಲಿ ಸ್ತುತಿಸಲ್ಪಟ್ಟಿರುವ ಭಗವಾನ್ ಹಿರಣ್ಯಗರ್ಭನು ನಾನೇ. ಯೋಗಶಾಸ್ತ್ರಗಳಲ್ಲಿ ಶಬ್ದಿತನಾಗಿರುವ ಯೋಗಗತಿಯೂ ನಾನೇ.
12326066a ಏಷೋಽಹಂ ವ್ಯಕ್ತಿಮಾಗಮ್ಯ ತಿಷ್ಠಾಮಿ ದಿವಿ ಶಾಶ್ವತಃ|
12326066c ತತೋ ಯುಗಸಹಸ್ರಾಂತೇ ಸಂಹರಿಷ್ಯೇ ಜಗತ್ಪುನಃ|
12326066e ಕೃತ್ವಾತ್ಮಸ್ಥಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ||
ಶಾಶ್ವತನಾದ ನಾನು ಈಗ ವ್ಯಕ್ತರೂಪವನ್ನು ಧರಿಸಿ ದಿವಿಯಲ್ಲಿ ನಿಂತಿದ್ದೇನೆ. ಸಹಸ್ರ ಚತುರ್ಯುಗಗಳ ಅಂತ್ಯದಲ್ಲಿ ಪುನಃ ನಾನು ಸ್ಥಾವರ-ಜಂಗಮ ಭೂತಗಳೆಲ್ಲವನ್ನೂ ನನ್ನ ಆತ್ಮದಲ್ಲಿ ಇರಿಸಿಕೊಂಡು ಜಗತ್ತನ್ನು ಸಂಹರಿಸುತ್ತೇನೆ.
12326067a ಏಕಾಕೀ ವಿದ್ಯಯಾ ಸಾರ್ಧಂ ವಿಹರಿಷ್ಯೇ ದ್ವಿಜೋತ್ತಮ|
12326067c ತತೋ ಭೂಯೋ ಜಗತ್ಸರ್ವಂ ಕರಿಷ್ಯಾಮೀಹ ವಿದ್ಯಯಾ||
ದ್ವಿಜೋತ್ತಮ! ಆಗ ವಿದ್ಯೆಯೊಡನೆ ಏಕಾಕಿಯಾಗಿ ವಿಹರಿಸುತ್ತಿರುತ್ತೇನೆ. ಅನಂತರ ಅದೇ ವಿದ್ಯೆಯಿಂದ ಪುನಃ ಸರ್ವ ಜಗತ್ತನ್ನೂ ಸೃಷ್ಟಿಸುತ್ತೇನೆ.
12326068a ಅಸ್ಮನ್ಮೂರ್ತಿಶ್ಚತುರ್ಥೀ ಯಾ ಸಾಸೃಜಚ್ಚೇಷಮವ್ಯಯಮ್|
12326068c ಸ ಹಿ ಸಂಕರ್ಷಣಃ ಪ್ರೋಕ್ತಃ ಪ್ರದ್ಯುಮ್ನಂ ಸೋಽಪ್ಯಜೀಜನತ್||
ನನ್ನ ಈ ನಾಲ್ಕು ಮೂರ್ತಿಗಳಲ್ಲಿ ನಾಲ್ಕನೆಯವನಾದ ವಾಸುದೇವನು ಅವ್ಯಯ ಶೇಷನನ್ನು ಸೃಷ್ಟಿಸುತ್ತಾನೆ. ಅವನನ್ನೇ ಸಂಕರ್ಷಣ ಎಂದೂ ಕರೆಯುತ್ತಾರೆ. ಸಂಕರ್ಷಣನು ಪ್ರದ್ಯುಮ್ನನನ್ನು ಸೃಷ್ಟಿಸುತ್ತಾನೆ.
12326069a ಪ್ರದ್ಯುಮ್ನಾದನಿರುದ್ಧೋಽಹಂ ಸರ್ಗೋ ಮಮ ಪುನಃ ಪುನಃ|
12326069c ಅನಿರುದ್ಧಾತ್ತಥಾ ಬ್ರಹ್ಮಾ ತತ್ರಾದಿಕಮಲೋದ್ಭವಃ||
ಪ್ರದ್ಯುಮ್ನನಿಂದ ಪುನಃ ನಾನೇ ಅನಿರುದ್ಧನಾಗಿ ಹುಟ್ಟುತೇನೆ. ಪುನಃ ಪುನಃ ಆಗುವ ಈ ಸೃಷ್ಟಿಯು ನನ್ನದೇ ಆಗಿದೆ. ಹಾಗೆಯೇ ಅನಿರುದ್ಧನಿಂದ ಕಮಲೋದ್ಭವ ಬ್ರಹ್ಮನು ಹುಟ್ಟುತ್ತಾನೆ.
12326070a ಬ್ರಹ್ಮಣಃ ಸರ್ವಭೂತಾನಿ ಚರಾಣಿ ಸ್ಥಾವರಾಣಿ ಚ|
12326070c ಏತಾಂ ಸೃಷ್ಟಿಂ ವಿಜಾನೀಹಿ ಕಲ್ಪಾದಿಷು ಪುನಃ ಪುನಃ||
ಬ್ರಹ್ಮನಿಂದ ಚರ-ಸ್ಥಾವರ ಸರ್ವಭೂತಗಳೂ ಉತ್ಪನ್ನವಾಗುತ್ತವೆ. ಪ್ರತಿಯೊಂದು ಕಲ್ಪದ ಆದಿಯಲ್ಲಿಯೂ ಪುನಃ ಪುನಃ ಈ ರೀತಿಯ ಸೃಷ್ಟಿಯು ನಡೆಯುತ್ತಿರುತ್ತದೆ ಎನ್ನುವುದನ್ನು ತಿಳಿ.
12326071a ಯಥಾ ಸೂರ್ಯಸ್ಯ ಗಗನಾದುದಯಾಸ್ತಮಯಾವಿಹ|
12326071c ನಷ್ಟೌ ಪುನರ್ಬಲಾತ್ಕಾಲ ಆನಯತ್ಯಮಿತದ್ಯುತಿಃ|
12326071e ತಥಾ ಬಲಾದಹಂ ಪೃಥ್ವೀಂ ಸರ್ವಭೂತಹಿತಾಯ ವೈ||
ಗಗನದಲ್ಲಿ ಸೂರ್ಯನ ಉದಯ-ಅಸ್ತಗಳು ಹೇಗೆ ಆಗುತ್ತವೆಯೋ ಹಾಗೆ ಮತ್ತು ಅಮಿತದ್ಯುತಿ ಕಾಲನು ಹೇಗೆ ಅಸ್ತನಾದ ಸೂರ್ಯನನ್ನು ಪುನಃ ಬಲದಿಂದ ಸೆಳೆದು ತರುತ್ತಾನೋ ಹಾಗೆ ಸರ್ವಭೂತಗಳ ಹಿತಕ್ಕಾಗಿ ನಾನು ನಶಿಸಿಹೋದ ಪೃಥ್ವಿನನ್ನು ಬಲದಿಂದ ಉದ್ಧರಿಸುತ್ತೇನೆ.
12326072a ಸತ್ತ್ವೈರಾಕ್ರಾಂತಸರ್ವಾಂಗಾಂ ನಷ್ಟಾಂ ಸಾಗರಮೇಖಲಾಮ್|
12326072c ಆನಯಿಷ್ಯಾಮಿ ಸ್ವಂ ಸ್ಥಾನಂ ವಾರಾಹಂ ರೂಪಮಾಸ್ಥಿತಃ||
12326073a ಹಿರಣ್ಯಾಕ್ಷಂ ಹನಿಷ್ಯಾಮಿ ದೈತೇಯಂ ಬಲಗರ್ವಿತಮ್|
ಸಾಗರವನ್ನೇ ಒಡ್ಯಾಣವನ್ನಾಗಿ ಪಡೆದಿರುವ ಮತ್ತು ಸರ್ವ ಪ್ರಾಣಿಗಳಿಂದ ನಿಬಿಡವಾಗಿರುವ ಭೂಮಿಯು ನಷ್ಟವಾದಾಗ ನಾನು ವರಾಹ ರೂಪವನ್ನು ತಾಳಿ ಅದನ್ನು ಸ್ವಸ್ಥಾನಕ್ಕೆ ತರುತ್ತೇನೆ. ಬಲಗರ್ವಿತನಾದ ದೈತ್ಯ ಹಿರಣ್ಯಾಕ್ಷನನ್ನು ಸಂಹರಿಸುತ್ತೇನೆ.
12326073c ನಾರಸಿಂಹಂ ವಪುಃ ಕೃತ್ವಾ ಹಿರಣ್ಯಕಶಿಪುಂ ಪುನಃ|
12326073e ಸುರಕಾರ್ಯೇ ಹನಿಷ್ಯಾಮಿ ಯಜ್ಞಘ್ನಂ ದಿತಿನಂದನಮ್||
ಪುನಃ ಸುರಕಾರ್ಯಕ್ಕಾಗಿ ನರಸಿಂಹನ ರೂಪವನ್ನು ತಾಳಿ ಯಜ್ಞಘ್ನ ದಿತಿನಂದನ ಹಿರಣ್ಯಕಶಿಪುವನ್ನು ಸಂಹರಿಸುತ್ತೇನೆ.
12326074a ವಿರೋಚನಸ್ಯ ಬಲವಾನ್ಬಲಿಃ ಪುತ್ರೋ ಮಹಾಸುರಃ|
12326074c ಭವಿಷ್ಯತಿ ಸ ಶಕ್ರಂ ಚ ಸ್ವರಾಜ್ಯಾಚ್ಚ್ಯಾವಯಿಷ್ಯತಿ||
ವಿರೋಚನನ ಬಲವಾನ್ ಪುತ್ರ ಮಹಾಸುರ ಬಲಿಯು ಶಕ್ರನನ್ನು ಸ್ವರಾಜ್ಯದಿಂದ ಭ್ರಷ್ಟನನ್ನಾಗಿ ಮಾಡುತ್ತಾನೆ.
12326075a ತ್ರೈಲೋಕ್ಯೇಽಪಹೃತೇ ತೇನ ವಿಮುಖೇ ಚ ಶಚೀಪತೌ|
12326075c ಅದಿತ್ಯಾಂ ದ್ವಾದಶಃ ಪುತ್ರಃ ಸಂಭವಿಷ್ಯಾಮಿ ಕಶ್ಯಪಾತ್||
ಬಲಿಯು ತ್ರೈಲೋಕ್ಯಗಳನ್ನು ಅಪಹರಿಸಲು ಮತ್ತು ಶಚೀಪತಿಯು ವಿಮುಖನಾಗಲು ನಾನು ಕಶ್ಯಪನಿಂದ ಅದಿತಿಯಲ್ಲಿ ಹನ್ನೆರಡನೆಯ ಪುತ್ರನಾಗಿ ಹುಟ್ಟುತ್ತೇನೆ.
12326076a ತತೋ ರಾಜ್ಯಂ ಪ್ರದಾಸ್ಯಾಮಿ ಶಕ್ರಾಯಾಮಿತತೇಜಸೇ|
12326076c ದೇವತಾಃ ಸ್ಥಾಪಯಿಷ್ಯಾಮಿ ಸ್ವೇಷು ಸ್ಥಾನೇಷು ನಾರದ|
12326076e ಬಲಿಂ ಚೈವ ಕರಿಷ್ಯಾಮಿ ಪಾತಾಲತಲವಾಸಿನಮ್||
ನಾರದ! ಅನಂತರ ನಾನು ಅಮಿತತೇಜಸ್ವೀ ಶಕ್ರನಿಗೆ ರಾಜ್ಯವನ್ನು ಕೊಡಿಸುತ್ತೇನೆ. ಮತ್ತು ದೇವತೆಗಳನ್ನು ಅವರವರ ಸ್ಥಾನಗಳಲ್ಲಿ ಸ್ಥಾಪಿಸುತ್ತೇನೆ. ಬಲಿಯನ್ನೂ ಕೂಡ ಪಾತಾಲತಲವಾಸಿನಿಯನ್ನಾಗಿ ಮಾಡುತ್ತೇನೆ.
12326077a ತ್ರೇತಾಯುಗೇ ಭವಿಷ್ಯಾಮಿ ರಾಮೋ ಭೃಗುಕುಲೋದ್ವಹಃ|
12326077c ಕ್ಷತ್ರಂ ಚೋತ್ಸಾದಯಿಷ್ಯಾಮಿ ಸಮೃದ್ಧಬಲವಾಹನಮ್||
ತ್ರೇತಾಯುಗದಲ್ಲಿ ನಾನು ಭೃಗುಕುಲೋದ್ವಹ ರಾಮನಾಗುತ್ತೇನೆ ಮತ್ತು ಬಲವಾಹನಗಳಿಂದ ಸಮೃದ್ಧವಾಗಿರುವ ಕ್ಷತ್ರಿಯರನ್ನು ಸಂಹರಿಸುತ್ತೇನೆ.
12326078a ಸಂಧೌ ತು ಸಮನುಪ್ರಾಪ್ತೇ ತ್ರೇತಾಯಾಂ ದ್ವಾಪರಸ್ಯ ಚ|
12326078c ರಾಮೋ ದಾಶರಥಿರ್ಭೂತ್ವಾ ಭವಿಷ್ಯಾಮಿ ಜಗತ್ಪತಿಃ||
ತ್ರೇತ ಮತ್ತು ದ್ವಾಪರ ಯುಗಗಳ ಸಂಧಿಯಲ್ಲಿ ದಾಶರಥಿ ರಾಮನಾಗಿ ಜಗತ್ಪತಿಯಾಗುತ್ತೇನೆ.
12326079a ತ್ರಿತೋಪಘಾತಾದ್ವೈರೂಪ್ಯಮೇಕತೋಽಥ ದ್ವಿತಸ್ತಥಾ|
12326079c ಪ್ರಾಪ್ಸ್ಯತೋ ವಾನರತ್ವಂ ಹಿ ಪ್ರಜಾಪತಿಸುತಾವೃಷೀ||
ಪ್ರಜಾಪತಿಯ ಮಕ್ಕಳಾದ ದ್ವಿತ ಮತ್ತು ಏಕತ ಎಂಬ ಋಷಿಗಳು ತ್ರಿತನಿಗೆ ದ್ರೋಹವನ್ನೆಸಗುವುದರಿಂದ ವೈರೂಪ್ಯವನ್ನು ಪಡೆದು ವಾನರತ್ವವನ್ನು ಹೊಂದುತ್ತಾರೆ.
12326080a ತಯೋರ್ಯೇ ತ್ವನ್ವಯೇ ಜಾತಾ ಭವಿಷ್ಯಂತಿ ವನೌಕಸಃ|
12326080c ತೇ ಸಹಾಯಾ ಭವಿಷ್ಯಂತಿ ಸುರಕಾರ್ಯೇ ಮಮ ದ್ವಿಜ||
ದ್ವಿಜ! ಅವರಿಬ್ಬರ ಕುಲಗಳಲ್ಲಿ ಹುಟ್ಟಿದವರು ವನೌಕಸರಾಗುತ್ತಾರೆ. ಅವರು ಸುರಕಾರ್ಯದಲ್ಲಿ ನನ್ನ ಸಹಾಯಕರಾಗುತ್ತಾರೆ.
12326081a ತತೋ ರಕ್ಷಃಪತಿಂ ಘೋರಂ ಪುಲಸ್ತ್ಯಕುಲಪಾಂಸನಮ್|
12326081c ಹನಿಷ್ಯೇ ರಾವಣಂ ಸಂಖ್ಯೇ ಸಗಣಂ ಲೋಕಕಂಟಕಮ್||
ಅನಂತರ ರಾಕ್ಷಸರಾಜ ಪುಲಸ್ತ್ಯನ ಕುಲಪಾಂಸನ ಲೋಕಕಂಟಕ ರಾವಣನನ್ನು ಅವನ ಗಣಗಳೊಂದಿಗೆ ಯುದ್ಧದಲ್ಲಿ ಸಂಹರಿಸುತ್ತೇನೆ.
12326082a ದ್ವಾಪರಸ್ಯ ಕಲೇಶ್ಚೈವ ಸಂಧೌ ಪರ್ಯವಸಾನಿಕೇ|
12326082c ಪ್ರಾದುರ್ಭಾವಃ ಕಂಸಹೇತೋರ್ಮಥುರಾಯಾಂ ಭವಿಷ್ಯತಿ||
ದ್ವಾಪರ ಮತ್ತು ಕಲಿಯುಗಳ ಸಂಧಿಯಲ್ಲಿ, ದ್ವಾಪರದ ಅಂತ್ಯದಲ್ಲಿ, ಕಂಸನ ವಧೆಗಾಗಿ ಮಥುರೆಯಲ್ಲಿ ನನ್ನ ಪ್ರಾದುರ್ಭಾವವಾಗುತ್ತದೆ.
12326083a ತತ್ರಾಹಂ ದಾನವಾನ್ ಹತ್ವಾ ಸುಬಹೂನ್ದೇವಕಂಟಕಾನ್|
12326083c ಕುಶಸ್ಥಲೀಂ ಕರಿಷ್ಯಾಮಿ ನಿವಾಸಂ ದ್ವಾರಕಾಂ ಪುರೀಮ್||
ಆಗ ನಾನು ಅನೇಕ ದೇವಕಂಟಕ ದಾನವರನ್ನು ಸಂಹರಿಸಿ ಕುಶಸ್ಥಲಿಯಲ್ಲಿ ದ್ವಾರಕಾ ಪುರಿಯಲ್ಲಿ ನನ್ನ ನಿವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತೇನೆ.
12326084a ವಸಾನಸ್ತತ್ರ ವೈ ಪುರ್ಯಾಮದಿತೇರ್ವಿಪ್ರಿಯಂಕರಮ್|
12326084c ಹನಿಷ್ಯೇ ನರಕಂ ಭೌಮಂ ಮುರಂ ಪೀಠಂ ಚ ದಾನವಮ್||
ಆ ಪುರಿಯಲ್ಲಿ ವಾಸಿಸುತ್ತಿರುವಾಗ ಅದಿತಿಗೆ ಅಪ್ರಿಯವಾದುದನ್ನು ಮಾಡುತ್ತಿರುವ ಭೂಮಿಪುತ್ರ ನರಕ, ಮುರ ಮತ್ತು ಪೀಠರೆಂಬ ದಾನವರನ್ನು ಸಂಹರಿಸುತ್ತೇನೆ.
12326085a ಪ್ರಾಗ್ಜ್ಯೋತಿಷಪುರಂ ರಮ್ಯಂ ನಾನಾಧನಸಮನ್ವಿತಮ್|
12326085c ಕುಶಸ್ಥಲೀಂ ನಯಿಷ್ಯಾಮಿ ಹತ್ವಾ ವೈ ದಾನವೋತ್ತಮಾನ್||
ಆ ದಾನವೋತ್ತಮರನ್ನು ಸಂಹರಿಸಿ ನಾನಾಧನ ಸಮೃದ್ಧವಾದ ರಮ್ಯ ಪ್ರಾಗ್ಜ್ಯೋತಿಷಪುರವನ್ನೇ ಕುಶಸ್ಥಲಿಗೆ ತಂದುಬಿಡುತ್ತೇನೆ.
12326086a ಶಂಕರಂ ಚ ಮಹಾಸೇನಂ ಬಾಣಪ್ರಿಯಹಿತೈಷಿಣಮ್|
12326086c ಪರಾಜೇಷ್ಯಾಮ್ಯಥೋದ್ಯುಕ್ತೌ ದೇವಲೋಕನಮಸ್ಕೃತೌ||
ನನ್ನೊಡನೆ ಯುದ್ಧಕ್ಕೆ ಬರುವ ಬಾಣಾಸುರನ ಪ್ರಿಯರೂ ಹಿತೈಷಿಗಳೂ ಆದ, ದೇವಲೋಕನಮಸ್ಕೃತರಾದ ಶಂಕರ ಮತ್ತು ಮಹಾಸೇನರನ್ನು ಪರಾಜಯಗೊಳಿಸುತ್ತೇನೆ.
12326087a ತತಃ ಸುತಂ ಬಲೇರ್ಜಿತ್ವಾ ಬಾಣಂ ಬಾಹುಸಹಸ್ರಿಣಮ್|
12326087c ವಿನಾಶಯಿಷ್ಯಾಮಿ ತತಃ ಸರ್ವಾನ್ಸೌಭನಿವಾಸಿನಃ||
ಅನಂತರ ಬಲಿಯ ಪುತ್ರ ಸಹಸ್ರ ಬಾಹುಗಳ ಬಾಣನನ್ನು ಗೆದ್ದು ಸೌಭನಿವಾಸಿಗಳೆಲ್ಲರನ್ನೂ ನಾಶಗೊಳಿಸುತ್ತೇನೆ.
12326088a ಯಃ ಕಾಲಯವನಃ ಖ್ಯಾತೋ ಗರ್ಗತೇಜೋಭಿಸಂವೃತಃ|
12326088c ಭವಿಷ್ಯತಿ ವಧಸ್ತಸ್ಯ ಮತ್ತ ಏವ ದ್ವಿಜೋತ್ತಮ||
ದ್ವಿಜೋತ್ತಮ! ಗರ್ಗನ ತೇಜಸ್ಸಿನಿಂದ ಕೂಡಿರುವ ಕಾಲಯವನನೆಂದು ಖ್ಯಾತನಾಗುವವನ ವಧೆಯೂ ನನ್ನಿಂದಲೇ ನಡೆಯುತ್ತದೆ.
12326089a ಜರಾಸಂಧಶ್ಚ ಬಲವಾನ್ಸರ್ವರಾಜವಿರೋಧಕಃ|
12326089c ಭವಿಷ್ಯತ್ಯಸುರಃ ಸ್ಫೀತೋ ಭೂಮಿಪಾಲೋ ಗಿರಿವ್ರಜೇ|
12326089e ಮಮ ಬುದ್ಧಿಪರಿಸ್ಪಂದಾದ್ವಧಸ್ತಸ್ಯ ಭವಿಷ್ಯತಿ||
ಗಿರಿವ್ರಜದಲ್ಲಿ ಬಲವಾನ್ ಸರ್ವರಾಜರಿಗೆ ವಿರೋಧಕನಾದ ಸಮೃದ್ಧನಾದ ಅಸುರ ಭೂಮಿಪಾಲನಾಗುತ್ತಾನೆ. ನನ್ನ ಬುದ್ಧಿಕೌಶಲದಿಂದಲೇ ಅವನ ವಧೆಯೂ ಆಗುತ್ತದೆ.
12326090a ಸಮಾಗತೇಷು ಬಲಿಷು ಪೃಥಿವ್ಯಾಂ ಸರ್ವರಾಜಸು|
12326090c ವಾಸವಿಃ ಸುಸಹಾಯೋ ವೈ ಮಮ ಹ್ಯೇಕೋ ಭವಿಷ್ಯತಿ||
ಪೃಥ್ವಿಯ ಸರ್ವರಾಜರೂ ಸೇನೆಗಳೊಂದಿಗೆ ಸೇರಿದಾಗ ವಾಸವಿಯೊಬ್ಬನೇ ನನ್ನ ಸುಸಾಹಾಯಕನಾಗುತ್ತಾನೆ.
12326091a ಏವಂ ಲೋಕಾ ವದಿಷ್ಯಂತಿ ನರನಾರಾಯಣಾವೃಷೀ|
12326091c ಉದ್ಯುಕ್ತೌ ದಹತಃ ಕ್ಷತ್ರಂ ಲೋಕಕಾರ್ಯಾರ್ಥಮೀಶ್ವರೌ||
ಆಗ ಜನರೆಲ್ಲರೂ “ಲೋಕಹಿತಾರ್ಥಕ್ಕಾಗಿ ಮಹರ್ಷಿಗಳೂ ಈಶ್ವರರೂ ಳಾದ ನರ-ನಾರಯಣರು ಕ್ಷತ್ರಿಯರ ವಿನಾಶಕಾರ್ಯದಲ್ಲಿ ತೊಡಗಿರುವರು” ಎಂದು ಹೇಳುತ್ತಾರೆ.
12326092a ಕೃತ್ವಾ ಭಾರಾವತರಣಂ ವಸುಧಾಯಾ ಯಥೇಪ್ಸಿತಮ್|
12326092c ಸರ್ವಸಾತ್ವತಮುಖ್ಯಾನಾಂ ದ್ವಾರಕಾಯಾಶ್ಚ ಸತ್ತಮ|
12326092e ಕರಿಷ್ಯೇ ಪ್ರಲಯಂ ಘೋರಮಾತ್ಮಜ್ಞಾತಿವಿನಾಶನಮ್||
ಸತ್ತಮ! ವಸುಧೆಯು ಬಯಸಿದಂತೆ ಅವಳ ಭಾರವನ್ನು ಕಡಿಮೆಮಾಡಿ ಸರ್ವಸಾತ್ವತಮುಖ್ಯರ ಮತ್ತು ದ್ವಾರಕೆಯ ಘೋರ ಸ್ವಬಂಧುವಿನಾಶರೂಪವಾದ ಘೋರಕರ್ಮವನ್ನು ಮಾಡುತ್ತೇನೆ.
12326093a ಕರ್ಮಾಣ್ಯಪರಿಮೇಯಾನಿ ಚತುರ್ಮೂರ್ತಿಧರೋ ಹ್ಯಹಮ್|
12326093c ಕೃತ್ವಾ ಲೋಕಾನ್ಗಮಿಷ್ಯಾಮಿ ಸ್ವಾನಹಂ ಬ್ರಹ್ಮಸತ್ಕೃತಾನ್||
ಚತುರ್ಮೂರ್ತಿಧನನಾದ ನಾನು ಈ ಅಪರಿಮೇಯ ಕರ್ಮಗಳನ್ನು ಮಾಡಿ ಬ್ರಹ್ಮನಿಂದ ಸತ್ಕೃತನಾಗಿ ನನ್ನದೇ ಲೋಕಕ್ಕೆ ಹಿಂದಿರುಗುತ್ತೇನೆ.
12326094a ಹಂಸೋ ಹಯಶಿರಾಶ್ಚೈವ ಪ್ರಾದುರ್ಭಾವಾ ದ್ವಿಜೋತ್ತಮ|
12326094c ಯದಾ ವೇದಶ್ರುತಿರ್ನಷ್ಟಾ ಮಯಾ ಪ್ರತ್ಯಾಹೃತಾ ತದಾ|
12326094e ಸವೇದಾಃ ಸಶ್ರುತೀಕಾಶ್ಚ ಕೃತಾಃ ಪೂರ್ವಂ ಕೃತೇ ಯುಗೇ||
ದ್ವಿಜೋತ್ತಮ! ಹಂಸ ಮತ್ತು ಹಯಗ್ರೀವರಾಗಿಯೂ ನಾನು ಪ್ರಾದುರ್ಭವಿಸುತ್ತೇನೆ. ವೇದಶೃತಿಗಳ ನಷ್ಟವಾದಗಲೆಲ್ಲಾ ನಾನು ಅವುಗಳನ್ನು ಉದ್ಧರಿಸುತ್ತೇನೆ. ನಾನೇ ಹಿಂದೆ ಕೃತಯುಗದಲ್ಲಿ ವೇದಸಹಿತವಾದ ಶ್ರುತಿಗಳನ್ನು ಪ್ರಕಟಪಡಿಸಿದ್ದೆನು.
12326095a ಅತಿಕ್ರಾಂತಾಃ ಪುರಾಣೇಷು ಶ್ರುತಾಸ್ತೇ ಯದಿ ವಾ ಕ್ವ ಚಿತ್|
12326095c ಅತಿಕ್ರಾಂತಾಶ್ಚ ಬಹವಃ ಪ್ರಾದುರ್ಭಾವಾ ಮಮೋತ್ತಮಾಃ|
12326095e ಲೋಕಕಾರ್ಯಾಣಿ ಕೃತ್ವಾ ಚ ಪುನಃ ಸ್ವಾಂ ಪ್ರಕೃತಿಂ ಗತಾಃ||
ಕೆಲವೊಮ್ಮೆ ನೀನು ಪುರಾಣಗಳಲ್ಲಿ ಮುಗಿದುಹೋಗಿರುವ ನನ್ನ ಅವತಾರಗಳ ಕುರಿತು ಕೇಳಿರಬಹುದು. ನನ್ನ ಅನೇಕ ಉತ್ತಮ ಅವತಾರಗಳು ಆಗಿ ಹೋಗಿವೆ. ಲೋಕಕಾರ್ಯಗಳನ್ನು ಪೂರೈಸಿ ಅವು ಪುನಃ ನನ್ನ ಪ್ರಕೃತಿಯನ್ನೇ ಸೇರಿವೆ.
12326096a ನ ಹ್ಯೇತದ್ಬ್ರಹ್ಮಣಾ ಪ್ರಾಪ್ತಮೀದೃಶಂ ಮಮ ದರ್ಶನಮ್|
12326096c ಯತ್ತ್ವಯಾ ಪ್ರಾಪ್ತಮದ್ಯೇಹ ಏಕಾಂತಗತಬುದ್ಧಿನಾ||
ಅನನ್ಯಭಕ್ತಿಭಾವ ಬುದ್ಧಿಗಳಿಂದ ಕೂಡಿರುವ ನಿನಗೆ ಇಂದು ಯಾವ ವಿಶ್ವರೂಪದರ್ಶನವಾಗಿದೆಯೋ ಆ ದಿವ್ಯ ದರ್ಶನವು ಬ್ರಹ್ಮನಿಗೂ ಪ್ರಾಪ್ತವಾಗಿಲ್ಲ.
12326097a ಏತತ್ತೇ ಸರ್ವಮಾಖ್ಯಾತಂ ಬ್ರಹ್ಮನ್ಭಕ್ತಿಮತೋ ಮಯಾ|
12326097c ಪುರಾಣಂ ಚ ಭವಿಷ್ಯಂ ಚ ಸರಹಸ್ಯಂ ಚ ಸತ್ತಮ||
ಬ್ರಹ್ಮನ್! ಸತ್ತಮ! ನನ್ನಲ್ಲಿ ಅನನ್ಯ ಭಕ್ತಿಯನ್ನಿಟ್ಟಿರುವ ನಿನಗೆ ರಹಸ್ಯಗಳೊಂದಿಗೆ ಹಿಂದಾದ ಮತ್ತು ಮುಂದೆ ನಡೆಯುವ ನನ್ನ ಅವತಾರಗಳ ಕುರಿತು ಎಲ್ಲವನ್ನೂ ಹೇಳಿದ್ದೇನೆ.”
12326098a ಏವಂ ಸ ಭಗವಾನ್ದೇವೋ ವಿಶ್ವಮೂರ್ತಿಧರೋಽವ್ಯಯಃ|
12326098c ಏತಾವದುಕ್ತ್ವಾ ವಚನಂ ತತ್ರೈವಾಂತರಧೀಯತ||
ಹೀಗೆ ಹೇಳಿ ಆ ಭಗವಾನ್ ದೇವ ವಿಶ್ವಮೂರ್ತಿಧರ ಅವ್ಯಯನು ಅಲ್ಲಿಯೇ ಅಂತರ್ಧಾನನಾದನು.
12326099a ನಾರದೋಽಪಿ ಮಹಾತೇಜಾಃ ಪ್ರಾಪ್ಯಾನುಗ್ರಹಮೀಪ್ಸಿತಮ್|
12326099c ನರನಾರಾಯಣೌ ದ್ರಷ್ಟುಂ ಪ್ರಾದ್ರವದ್ಬದರಾಶ್ರಮಮ್||
ಮಹತೇಜಸ್ವಿ ನಾರದನಾದರೋ ತಾನು ಬಯಸಿದ ಅನುಗ್ರಗವನ್ನು ಪಡೆದುಕೊಂಡು ನರ-ನಾರಾಯಣರನ್ನು ನೋಡಲು ಬದರಿಕಾಶ್ರಮಕ್ಕೆ ತೆರಳಿದನು.
12326100a ಇದಂ ಮಹೋಪನಿಷದಂ ಚತುರ್ವೇದಸಮನ್ವಿತಮ್|
12326100c ಸಾಂಖ್ಯಯೋಗಕೃತಂ ತೇನ ಪಂಚರಾತ್ರಾನುಶಬ್ದಿತಮ್||
12326101a ನಾರಾಯಣಮುಖೋದ್ಗೀತಂ ನಾರದೋಽಶ್ರಾವಯತ್ ಪುನಃ|
12326101c ಬ್ರಹ್ಮಣಃ ಸದನೇ ತಾತ ಯಥಾ ದೃಷ್ಟಂ ಯಥಾ ಶ್ರುತಮ್||
ಮಗೂ! ನಾರಾಯಣನ ಮುಖದಿಂದ ಹೊರಹೊಮ್ಮಿದ, ನಾಲ್ಕುವೇದಗಳಿಂದ ಕೂಡಿರುವ, ಸಾಂಖ್ಯಯೋಗ ಸಿದ್ಧಾಂತವನ್ನೊಳಗೊಂಡಿರುವ, ಪಂಚರಾತ್ರ ಎಂದು ಕರೆಯಲ್ಪಟ್ಟಿರುವ ಈ ಮಹೋಪನಿಷತ್ತನ್ನು ನಾರದನು ಬ್ರಹ್ಮಸದನದಲ್ಲಿ ಶ್ವೇತದ್ವೀಪದಲ್ಲಿ ತಾನು ಹೇಗೆ ನೋಡಿದನೋ ಮತ್ತು ಕೇಳಿದನೋ ಹಾಗೆಯೇ ಪುನಃ ಪ್ರವಚನಮಾಡಿದನು.”
12326102 ಯುಧಿಷ್ಠಿರ ಉವಾಚ|
12326102a ಏತದಾಶ್ಚರ್ಯಭೂತಂ ಹಿ ಮಾಹಾತ್ಮ್ಯಂ ತಸ್ಯ ಧೀಮತಃ|
12326102c ಕಿಂ ಬ್ರಹ್ಮಾ ನ ವಿಜಾನೀತೇ ಯತಃ ಶುಶ್ರಾವ ನಾರದಾತ್||
ಯುಧಿಷ್ಠಿರನು ಹೇಳಿದನು: “ಧೀಮಂತ ನಾರಾಯಣನ ಈ ಮಹಾತ್ಮೆಯು ಅತ್ಯಾಶ್ಚರ್ಯಮಯವಾದುದು. ಬ್ರಹ್ಮನು ನಾರದನಿಂದ ಇದನ್ನು ಕೇಳಬೇಕಾದರೆ ಅವನಿಗೆ ಇದಕ್ಕೂ ಮೊದಲು ಈ ವಿಷಯವು ತಿಳಿದಿರಲಿಲ್ಲವೇ?
12326103a ಪಿತಾಮಹೋ ಹಿ ಭಗವಾಂಸ್ತಸ್ಮಾದ್ದೇವಾದನಂತರಃ|
12326103c ಕಥಂ ಸ ನ ವಿಜಾನೀಯಾತ್ಪ್ರಭಾವಮಮಿತೌಜಸಃ||
ಭಗವಾನ್ ಪಿತಾಮಹನಾದರೋ ನಾರಾಯಣನಿಂದ ಹುಟ್ಟಿದವನು. ಅವನಿಗೆ ನಂತರದವನು. ಆ ಅಮಿತತೇಜಸ್ವಿಗೆ ನಾರಾಯಣನ ಪ್ರಭಾವವು ಹೇಗೆ ತಿಳಿದಿರಲಿಲ್ಲ?”
12326104 ಭೀಷ್ಮ ಉವಾಚ|
12326104a ಮಹಾಕಲ್ಪಸಹಸ್ರಾಣಿ ಮಹಾಕಲ್ಪಶತಾನಿ ಚ|
12326104c ಸಮತೀತಾನಿ ರಾಜೇಂದ್ರ ಸರ್ಗಾಶ್ಚ ಪ್ರಲಯಾಶ್ಚ ಹ||
ಭೀಷ್ಮನು ಹೇಳಿದನು: “ರಾಜೇಂದ್ರ! ಇದೂವರೆಗೆ ನೂರಾರು ಸಹಸ್ರಾರು ಮಹಾಕಲ್ಪಗಳೂ ಸೃಷ್ಟಿ ಪ್ರಲಯಗಳೂ ಆಗಿ ಹೋಗಿವೆ.
12326105a ಸರ್ಗಸ್ಯಾದೌ ಸ್ಮೃತೋ ಬ್ರಹ್ಮಾ ಪ್ರಜಾಸರ್ಗಕರಃ ಪ್ರಭುಃ|
12326105c ಜಾನಾತಿ ದೇವಪ್ರವರಂ ಭೂಯಶ್ಚಾತೋಽಧಿಕಂ ನೃಪ|
12326105e ಪರಮಾತ್ಮಾನಮೀಶಾನಮಾತ್ಮನಃ ಪ್ರಭವಂ ತಥಾ||
ನೃಪ! ಸೃಷ್ಟಿಯ ಆದಿಯಲ್ಲಿ ಪ್ರಭು ಬ್ರಹ್ಮನೇ ಪ್ರಜೆಗಳನ್ನು ಸೃಷ್ಟಿಮಾಡುವವನು ಎಂದು ಹೇಳಲ್ಪಟ್ಟಿದೆ. ತನ್ನ ಉತ್ಪತ್ತಿಗೆ ಕಾರಣಭೂತನಾದ ದೇವಶ್ರೇಷ್ಠ ಪರಮಾತ್ಮ ಈಶಾನ ನಾರಾಯಣನ ಮಹಾತ್ಮೆಯನ್ನು ಇದಕ್ಕಿಂತಲೂ ಅಧಿಕವಾಗಿಯೇ ತಿಳಿದಿರುತ್ತಾನೆ.
12326106a ಯೇ ತ್ವನ್ಯೇ ಬ್ರಹ್ಮಸದನೇ ಸಿದ್ಧಸಂಘಾಃ ಸಮಾಗತಾಃ|
12326106c ತೇಭ್ಯಸ್ತಚ್ಚ್ರಾವಯಾಮಾಸ ಪುರಾಣಂ ವೇದಸಂಮಿತಮ್||
ಬ್ರಹ್ಮಸದನದಲ್ಲಿ ಬಂದು ಸೇರಿದ್ದ ಅನ್ಯ ಸಿದ್ಧಸಂಘಗಳಿಗೆ ಈ ವೇದಸಮ್ಮಿತ ಪುರಾಣವನ್ನು ಬ್ರಹ್ಮನು ನಾರದನ ಮೂಲಕ ಕೇಳಿಸಿದನು.
12326107a ತೇಷಾಂ ಸಕಾಶಾತ್ಸೂರ್ಯಶ್ಚ ಶ್ರುತ್ವಾ ವೈ ಭಾವಿತಾತ್ಮನಾಮ್|
12326107c ಆತ್ಮಾನುಗಾಮಿನಾಂ ಬ್ರಹ್ಮ ಶ್ರಾವಯಾಮಾಸ ಭಾರತ||
12326108a ಷಟ್ಷಷ್ಟಿರ್ಹಿ ಸಹಸ್ರಾಣಿ ಋಷೀಣಾಂ ಭಾವಿತಾತ್ಮನಾಮ್|
ಭಾರತ! ಭಾವಿತಾತ್ಮರಾದ ಆ ಸಿದ್ಧರ ಮೂಲಕ ಸೂರ್ಯನು ಇದನ್ನು ಕೇಳಿ ನಂತರ ತನ್ನನ್ನೇ ಅನುಸರಿಸಿ ಬರುತ್ತಿದ್ದ ಅರವತ್ತಾರು ಸಾವಿರ ಭಾವಿತಾತ್ಮ ಋಷಿಗಳಿಗೆ ಋಷಿಗಳಿಗೆ ಇದನ್ನು ಹೇಳಿದನು.
12326108c ಸೂರ್ಯಸ್ಯ ತಪತೋ ಲೋಕಾನ್ನಿರ್ಮಿತಾ ಯೇ ಪುರಃಸರಾಃ|
12326108e ತೇಷಾಮಕಥಯತ್ಸೂರ್ಯಃ ಸರ್ವೇಷಾಂ ಭಾವಿತಾತ್ಮನಾಮ್||
ಸೂರ್ಯನ ಮುಂದೆ ಯಾರು ಹೋಗುತ್ತಿದ್ದರೋ ಆ ಎಲ್ಲ ಶುದ್ಧಾಂತಃಕರಣರಿಗೆ ಸೂರ್ಯನು ಈ ದಿವ್ಯ ಮಹಾತ್ಮೆಯನ್ನು ಹೇಳಿದನು.
12326109a ಸೂರ್ಯಾನುಗಾಮಿಭಿಸ್ತಾತ ಋಷಿಭಿಸ್ತೈರ್ಮಹಾತ್ಮಭಿಃ|
12326109c ಮೇರೌ ಸಮಾಗತಾ ದೇವಾಃ ಶ್ರಾವಿತಾಶ್ಚೇದಮುತ್ತಮಮ್||
ಅಯ್ಯಾ! ಸೂರ್ಯನನ್ನೇ ಅನುಸರಿಸುವ ಆ ಮಹಾತ್ಮ ಋಷಿಗಳು ಈ ಉತ್ತಮ ವಿಷಯವನ್ನು ಮೇರುಪರ್ವತದಲ್ಲಿ ಸೇರಿದ್ದ ದೇವತೆಗಳಿಗೆ ಹೇಳಿದರು.
12326110a ದೇವಾನಾಂ ತು ಸಕಾಶಾದ್ವೈ ತತಃ ಶ್ರುತ್ವಾಸಿತೋ ದ್ವಿಜಃ|
12326110c ಶ್ರಾವಯಾಮಾಸ ರಾಜೇಂದ್ರ ಪಿತೃಣಾಂ ಮುನಿಸತ್ತಮಃ||
ರಾಜೇಂದ್ರ! ದೇವತೆಗಳ ಬಳಿಯಿಂದ ಇದನ್ನು ದ್ವಿಜ ಅಸಿತನು ಕೇಳಿದನು. ಆ ಮುನಿಸತ್ತಮನು ಇದನ್ನು ಪಿತೃಗಳಿಗೆ ಹೇಳಿದನು.
12326111a ಮಮ ಚಾಪಿ ಪಿತಾ ತಾತ ಕಥಯಾಮಾಸ ಶಂತನುಃ|
12326111c ತತೋ ಮಯೈತಚ್ಚ್ರುತ್ವಾ ಚ ಕೀರ್ತಿತಂ ತವ ಭಾರತ||
ಭಾರತ! ಅಯ್ಯಾ! ನನ್ನ ತಂದೆ ಶಂತನುವು ಇದನ್ನು ನನಗೆ ಹೇಳಿದನು. ನಾನು ಕೇಳಿದುದನ್ನು ನಿನಗೆ ಹೇಳಿದ್ದೇನೆ.
12326112a ಸುರೈರ್ವಾ ಮುನಿಭಿರ್ವಾಪಿ ಪುರಾಣಂ ಯೈರಿದಂ ಶ್ರುತಮ್|
12326112c ಸರ್ವೇ ತೇ ಪರಮಾತ್ಮಾನಂ ಪೂಜಯಂತಿ ಪುನಃ ಪುನಃ||
ಸುರರಾಗಲೀ, ಮುನಿಗಳಾಗಲೀ ಯಾರ್ಯಾರು ಈ ಪುರಾಣವನ್ನು ಕೇಳಿದರೋ ಅವರೆಲ್ಲರೂ ಪುನಃ ಪುನಃ ಪರಮಾತ್ಮನನ್ನು ಪೂಜಿಸುತ್ತಾರೆ.
12326113a ಇದಮಾಖ್ಯಾನಮಾರ್ಷೇಯಂ ಪಾರಂಪರ್ಯಾಗತಂ ನೃಪ|
12326113c ನಾವಾಸುದೇವಭಕ್ತಾಯ ತ್ವಯಾ ದೇಯಂ ಕಥಂ ಚನ||
ನೃಪ! ಈ ಆರ್ಷೇಯ ಆಖ್ಯಾನವು ಪಾರಂಪರಾಗತವಾಗಿ ಬಂದಿದೆ. ವಾಸುದೇವನ ಭಕ್ತರಲ್ಲದವರಿಗೆ ನೀನು ಎಂದೂ ಇದನ್ನು ಉಪದೇಶಿಸಬಾರದು.
12326114a ಮತ್ತೋಽನ್ಯಾನಿ ಚ ತೇ ರಾಜನ್ನುಪಾಖ್ಯಾನಶತಾನಿ ವೈ|
12326114c ಯಾನಿ ಶ್ರುತಾನಿ ಧರ್ಮ್ಯಾಣಿ ತೇಷಾಂ ಸಾರೋಽಯಮುದ್ಧೃತಃ||
ರಾಜನ್! ನನ್ನಿಂದ ನೀನು ಯಾವ ಅನ್ಯ ನೂರಾರು ಆಖ್ಯಾನಗಳನ್ನು ಕೇಳಿರುವೆಯೋ ಅವುಗಳ ಧರ್ಮಸಾರವನ್ನು ಇದು ಎತ್ತಿ ಹೇಳುತ್ತದೆ.
12326115a ಸುರಾಸುರೈರ್ಯಥಾ ರಾಜನ್ನಿರ್ಮಥ್ಯಾಮೃತಮುದ್ಧೃತಮ್|
12326115c ಏವಮೇತತ್ಪುರಾ ವಿಪ್ರೈಃ ಕಥಾಮೃತಮಿಹೋದ್ಧೃತಮ್||
ರಾಜನ್! ಸುರಾಸುರರು ಹೇಗೆ ಮಥಿಸಿ ಅಮೃತವನ್ನು ಮೇಲೆತ್ತಿದರೋ ಅದೇ ರೀತಿ ಹಿಂದೆ ವಿಪ್ರರು ಈ ಕಥಾಮೃತವನ್ನು ಮೇಲೆತ್ತಿದರು.
12326116a ಯಶ್ಚೇದಂ ಪಠತೇ ನಿತ್ಯಂ ಯಶ್ಚೇದಂ ಶೃಣುಯಾನ್ನರಃ|
12326116c ಏಕಾಂತಭಾವೋಪಗತ ಏಕಾಂತೇ ಸುಸಮಾಹಿತಃ||
ನಿತ್ಯವೂ ಇದನ್ನು ಪಠಿಸುವ ಅಥವಾ ಕೇಳುವ ನರನು ಅನನ್ಯ ಭಕ್ತಿಯಿಂದ ಕೂಡಿದವನಾಗಿ ನಾರಾಯಣನೊಂದಿಗೆ ಏಕಾಂತಭಾವವನ್ನು ಹೊಂದುತ್ತಾನೆ.
12326117a ಪ್ರಾಪ್ಯ ಶ್ವೇತಂ ಮಹಾದ್ವೀಪಂ ಭೂತ್ವಾ ಚಂದ್ರಪ್ರಭೋ ನರಃ|
12326117c ಸ ಸಹಸ್ರಾರ್ಚಿಷಂ ದೇವಂ ಪ್ರವಿಶೇನ್ನಾತ್ರ ಸಂಶಯಃ||
ಅವನು ಶ್ವೇತ ಮಹಾದ್ವೀಪವನ್ನು ತಲುಪಿ ಚಂದ್ರಪ್ರಭೆಯ ನರನಾಗಿ ಆ ಸಹಸ್ರಾರ್ಚಿಷ ದೇವನನ್ನು ಪ್ರವೇಶಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
12326118a ಮುಚ್ಯೇದಾರ್ತಸ್ತಥಾ ರೋಗಾಚ್ಚ್ರುತ್ವೇಮಾಮಾದಿತಃ ಕಥಾಮ್|
12326118c ಜಿಜ್ಞಾಸುರ್ಲಭತೇ ಕಾಮಾನ್ಭಕ್ತೋ ಭಕ್ತಗತಿಂ ವ್ರಜೇತ್||
ಈ ಕಥೆಯನ್ನು ಮೊದಲಿನಿಂದ ಕೇಳುವವನು ಸಂಕಷ್ಟದಿಂದ ಮತ್ತು ರೋಗಗಳಿಂದ ವಿಮುಕ್ತನಾಗುತ್ತಾನೆ. ಇದರ ಕುರಿತು ಜಿಜ್ಞಾಸೆಮಾಡುವವನು ಬಯಸಿದ್ದನ್ನು ಪಡೆದುಕೊಳ್ಳುತ್ತಾನೆ ಮತ್ತು ಭಕ್ತನು ಪರಮ ಗತಿಯನ್ನು ಹೊಂದುತ್ತಾನೆ.
12326119a ತ್ವಯಾಪಿ ಸತತಂ ರಾಜನ್ನಭ್ಯರ್ಚ್ಯಃ ಪುರುಷೋತ್ತಮಃ|
12326119c ಸ ಹಿ ಮಾತಾ ಪಿತಾ ಚೈವ ಕೃತ್ಸ್ನಸ್ಯ ಜಗತೋ ಗುರುಃ||
ರಾಜನ್! ನೀನೂ ಕೂಡ ಸತತವೂ ಪುರುಷೋತ್ತಮನನ್ನು ಅರ್ಚಿಸು. ಅವನೇ ಸಂಪೂರ್ಣ ಜಗತ್ತಿನ ಮಾತಾ, ಪಿತಾ ಮತ್ತು ಗುರು ಕೂಡ.
12326120a ಬ್ರಹ್ಮಣ್ಯದೇವೋ ಭಗವಾನ್ಪ್ರೀಯತಾಂ ತೇ ಸನಾತನಃ|
12326120c ಯುಧಿಷ್ಠಿರ ಮಹಾಬಾಹೋ ಮಹಾಬಾಹುರ್ಜನಾರ್ದನಃ||
ಯುಧಿಷ್ಠಿರ! ಮಹಾಬಾಹೋ! ಬ್ರಹ್ಮಣ್ಯ ದೇವ ಭಗವಾನ್ ಸನಾತನ ಮಹಾಬಾಹು ಜನಾರ್ದನನು ನಿನ್ನ ಮೇಲೆ ಪ್ರೀತನಾಗಲಿ.””
12326121 ವೈಶಂಪಾಯನ ಉವಾಚ|
12326121a ಶ್ರುತ್ವೈತದಾಖ್ಯಾನವರಂ ಧರ್ಮರಾಡ್ ಜನಮೇಜಯ|
12326121c ಭ್ರಾತರಶ್ಚಾಸ್ಯ ತೇ ಸರ್ವೇ ನಾರಾಯಣಪರಾಭವನ್||
ವೈಶಂಪಾಯನನು ಹೇಳಿದನು: “ಜನಮೇಜಯ! ಈ ಶ್ರೇಷ್ಠ ಆಖ್ಯಾನವನ್ನು ಕೇಳಿ ಧರ್ಮರಾಜನು ಮತ್ತು ಅವನ ಎಲ್ಲ ಸಹೋದರರೂ ನಾರಾಯಣನ ಪರಮ ಭಕ್ತರಾದರು.
12326122a ಜಿತಂ ಭಗವತಾ ತೇನ ಪುರುಷೇಣೇತಿ ಭಾರತ|
12326122c ನಿತ್ಯಂ ಜಪ್ಯಪರಾ ಭೂತ್ವಾ ಸರಸ್ವತೀಮುದೀರಯನ್||
ಭಾರತ! ನಿತ್ಯವೂ ಜಪದಲ್ಲಿಯೇ ನಿರತರಾಗಿ “ಆ ಭಗವಂತ ಪುರುಷನಿಂದ ಎಲ್ಲವೂ ಜಯಿಸಲ್ಪಟ್ಟಿದೆ” ಎಂಬ ಜಯವಾಣಿಯನ್ನು ಹೇಳುತ್ತಿದ್ದರು.
12326123a ಯೋ ಹ್ಯಸ್ಮಾಕಂ ಗುರುಃ ಶ್ರೇಷ್ಠಃ ಕೃಷ್ಣದ್ವೈಪಾಯನೋ ಮುನಿಃ|
12326123c ಸ ಜಗೌ ಪರಮಂ ಜಪ್ಯಂ ನಾರಾಯಣಮುದೀರಯನ್||
ನನ್ನ ಪರಮ ಗುರುಗಳಾದ ಮುನಿ ಕೃಷ್ಣದ್ವೈಪಾಯನರೂ ಕೂಡ ನಿರಂತರವಾಗಿ ನಾರಾಯಣನ ಮಂತ್ರವನ್ನು ಜಪಿಸುತ್ತಿದ್ದರು.
12326124a ಗತ್ವಾಂತರಿಕ್ಷಾತ್ಸತತಂ ಕ್ಷೀರೋದಮಮೃತಾಶಯಮ್|
12326124c ಪೂಜಯಿತ್ವಾ ಚ ದೇವೇಶಂ ಪುನರಾಯಾತ್ಸ್ವಮಾಶ್ರಮಮ್||
ಅವನು ಅಂತರಿಕ್ಷ ಮಾರ್ಗದಲ್ಲಿ ಅಮೃತಾಶಯ ಕ್ಷೀರಸಾಗರಕ್ಕೆ ಹೋಗಿ ದೇವೇಶನನ್ನು ಪೂಜಿಸಿ ಪುನಃ ಆಶ್ರಮಕ್ಕೆ ಬರುತ್ತಿದ್ದರು.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ಷಡ್ವಿಂಶಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವ ದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಇಪ್ಪತ್ತಾರನೇ ಅಧ್ಯಾಯವು.
