ಉದ್ಯೋಗ ಪರ್ವ: ಪ್ರಜಾಗರ ಪರ್ವ
Contents
Toggle೩೯
ವಿದುರನು ಧೃತರಾಷ್ಟ್ರನಿಗೆ ತನ್ನ ನೀತಿವಾಕ್ಯಗಳನ್ನು ಮುಂದುವರಿಸಿದುದು (೧-೭೦).
05039001 ಧೃತರಾಷ್ಟ್ರ ಉವಾಚ|
05039001a ಅನೀಶ್ವರೋಽಯಂ ಪುರುಷೋ ಭವಾಭವೇ
ಸೂತ್ರಪ್ರೋತಾ ದಾರುಮಯೀವ ಯೋಷಾ|
05039001c ಧಾತ್ರಾ ತು ದಿಷ್ಟಸ್ಯ ವಶೇ ಕಿಲಾಯಂ
ತಸ್ಮಾದ್ವದ ತ್ವಂ ಶ್ರವಣೇ ಧೃತೋಽಹಂ||
ಧೃತರಾಷ್ಟ್ರನು ಹೇಳಿದನು: “ಮನುಷ್ಯನು ಆಗುವ ಅಥವಾ ಆಗದಿರುವವುಗಳಿಗೆ ಒಡೆಯನಲ್ಲ. ಅವನು ದಾರಕ್ಕೆ ಕಟ್ಟಿದ ಒಂದು ಮರದ ಗೊಂಬೆಯಂತೆ. ಧಾತನು ಅವನನ್ನು ದೈವದ ವಶನನ್ನಾಗಿ ಮಾಡಿದ್ದಾನೆ. ಆದುದರಿಂದ ನಿನ್ನನ್ನು ಕೇಳಲು ಬಯಸುತ್ತೇನೆ. ಹೇಳು.”
05039002 ವಿದುರ ಉವಾಚ|
05039002a ಅಪ್ರಾಪ್ತಕಾಲಂ ವಚನಂ ಬೃಹಸ್ಪತಿರಪಿ ಬ್ರುವನ್|
05039002c ಲಭತೇ ಬುದ್ಧ್ಯವಜ್ಞಾನಮವಮಾನಂ ಚ ಭಾರತ||
ವಿದುರನು ಹೇಳಿದನು: “ಭಾರತ! ಸಮಯ ಬರುವುದಕ್ಕೆ ಮೊದಲೇ ಮಾತನ್ನು ಹೇಳಿ ಬುದ್ಧಿಮಾನ ಬೃಹಸ್ಪತಿಯೂ ಕೂಡ ಅಜ್ಞಾನಿಯೆಂದು ಅಪಮಾನಿತನಾದ.
05039003a ಪ್ರಿಯೋ ಭವತಿ ದಾನೇನ ಪ್ರಿಯವಾದೇನ ಚಾಪರಃ|
05039003c ಮಂತ್ರಂ ಮೂಲಬಲೇನಾನ್ಯೋ ಯಃ ಪ್ರಿಯಃ ಪ್ರಿಯ ಏವ ಸಃ||
ಕೊಡುವುದರಿಂದ ಪ್ರಿಯರೆನಿಸಿಕೊಂಡರೆ ಇತರರು ಚೆನ್ನಾಗಿ ಮಾತನಾಡುವುದರಿಂದ ಪ್ರಿಯರೆನಿಸಿಕೊಳ್ಳುತ್ತಾರೆ. ಇತರರು ಮಂತ್ರ-ಜಡಿಬೂಟಿಗಳ ಬಲದಿಂದ ಪ್ರಿಯರೆನಿಸಿಕೊಂಡರೆ, ನಿಜವಾದ ಪ್ರಿಯರು ಅವರು ತೋರಿಸುವ ಪ್ರೀತಿಯಿಂದ ಮಾತ್ರ ಪ್ರಿಯರೆನಿಸಿಕೊಳ್ಳುತ್ತಾರೆ.
05039004a ದ್ವೇಷ್ಯೋ ನ ಸಾಧುರ್ಭವತಿ ನ ಮೇಧಾವೀ ನ ಪಂಡಿತಃ|
05039004c ಪ್ರಿಯೇ ಶುಭಾನಿ ಕರ್ಮಾಣಿ ದ್ವೇಷ್ಯೇ ಪಾಪಾನಿ ಭಾರತ||
ಭಾರತ! ದ್ವೇಷಿಸುವವನು ಒಳ್ಳೆಯನಾಗಿರುವುದಿಲ್ಲ, ಮೇಧಾವಿಯಾಗಿರುವುದಿಲ್ಲ, ಪಂಡಿತನಾಗಿರುವುದಿಲ್ಲ. ಪ್ರೀತಿಸುವುದು ಶುಭಕರ್ಮ, ದ್ವೇಷಿಸುವುದು ಪಾಪ ಕರ್ಮ.
05039005a ನ ಸ ಕ್ಷಯೋ ಮಹಾರಾಜ ಯಃ ಕ್ಷಯೋ ವೃದ್ಧಿಮಾವಹೇತ್|
05039005c ಕ್ಷಯಃ ಸ ತ್ವಿಹ ಮಂತವ್ಯೋ ಯಂ ಲಬ್ಧ್ವಾ ಬಹು ನಾಶಯೇತ್||
ಮಹಾರಾಜ! ಯಾವ ಕ್ಷಯವು ವೃದ್ಧಿಯನ್ನು ತರುತ್ತದೆಯೋ ಅದು ಕ್ಷಯವಲ್ಲ. ಯಾವುದನ್ನು ಪಡೆದು ಬಹಳಷ್ಟು ನಾಶವಾಗುತ್ತದೆಯೋ ಅದನ್ನು ಕ್ಷಯವೆಂದು ತಿಳಿಯಬೇಕು.
05039006a ಸಮೃದ್ಧಾ ಗುಣತಃ ಕೇ ಚಿದ್ಭವಂತಿ ಧನತೋಽಪರೇ|
05039006c ಧನವೃದ್ಧಾನ್ಗುಣೈರ್ಹೀನಾನ್ಧೃತರಾಷ್ಟ್ರ ವಿವರ್ಜಯೇತ್||
ಧೃತರಾಷ್ಟ್ರ! ಕೆಲವರು ಗುಣದಿಂದಾಗಿ, ಇತರರು ಧನದಿಂದಾಗಿ ಅಭಿವೃದ್ಧಿ ಹೊಂದುತ್ತಾರೆ. ಆದರೆ ಗುಣಗಳಿಲ್ಲದೇ ಧನದಿಂದಾಗಿ ಅಭಿವೃದ್ಧಿಹೊಂದುವರನ್ನು ತೊರೆಯಬೇಕು.”
05039007 ಧೃತರಾಷ್ಟ್ರ ಉವಾಚ|
05039007a ಸರ್ವಂ ತ್ವಮಾಯತೀಯುಕ್ತಂ ಭಾಷಸೇ ಪ್ರಾಜ್ಞಾಸಮ್ಮತಂ|
05039007c ನ ಚೋತ್ಸಹೇ ಸುತಂ ತ್ಯಕ್ತುಂ ಯತೋ ಧರ್ಮಸ್ತತೋ ಜಯಃ||
ಧೃತರಾಷ್ಟ್ರನು ಹೇಳಿದನು: “ನೀನು ಹೇಳುವುದೆಲ್ಲವೂ ಯುಕ್ತವಾಗಿದೆ. ಪ್ರಾಜ್ಞಸಮ್ಮತವಾದುದನ್ನು ಹೇಳುತ್ತಿದ್ದೀಯೆ. ಆದರೆ ಮಗನನ್ನು ತೊರೆಯಲು ಮನಸ್ಸಿಲ್ಲ. ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯವಾಗುತ್ತದೆ.”
05039008 ವಿದುರ ಉವಾಚ|
05039008a ಸ್ವಭಾವಗುಣಸಂಪನ್ನೋ ನ ಜಾತು ವಿನಯಾನ್ವಿತಃ|
05039008c ಸುಸೂಕ್ಷ್ಮಮಪಿ ಭೂತಾನಾಮುಪಮರ್ದಂ ಪ್ರಯೋಕ್ಷ್ಯತೇ||
ವಿದುರನು ಹೇಳಿದನು: “ಹುಟ್ಟುವಾಗಲೇ ಸ್ವಭಾವದಲ್ಲಿ ಗುಣಸಂಪನ್ನನಾದ ಮತ್ತು ವಿನಯಾನ್ವಿತನಾದವನು ಇರುವವುಗಳ ತುಂಬಾ ಸೂಕ್ಷ್ಮವಾದ ದುಃಖವನ್ನೂ ಕಡೆಗಣಿಸುವುದಿಲ್ಲ.
05039009a ಪರಾಪವಾದನಿರತಾಃ ಪರದುಃಖೋದಯೇಷು ಚ|
05039009c ಪರಸ್ಪರವಿರೋಧೇ ಚ ಯತಂತೇ ಸತತೋತ್ಥಿತಾಃ||
ಪರರನ್ನು ನಿಂದಿಸುವುದರಲ್ಲಿ ನಿರತರಾದವರು, ಸತತವೂ ಪರಸ್ಪರರಲ್ಲಿ ವಿರೋಧವನ್ನುಂಟುಮಾಡಲು ಪ್ರಯತ್ನಿಸುವವರು ಪರರಿಗೆ ದುಃಖವನ್ನೇ ನೀಡುತ್ತಾರೆ.
05039010a ಸದೋಷಂ ದರ್ಶನಂ ಯೇಷಾಂ ಸಂವಾಸೇ ಸುಮಹದ್ಭಯಂ|
05039010c ಅರ್ಥಾದಾನೇ ಮಹಾನ್ದೋಷಃ ಪ್ರದಾನೇ ಚ ಮಹದ್ಭಯಂ||
ಯಾರನ್ನು ನೋಡುವುದು ದೋಷವೋ ಯಾರ ಸಹವಾಸವು ಮಹಾಭಯವನ್ನುಂಟುಮಾಡುತ್ತದೆಯೋ ಅವರಿಗೆ ಆರ್ಥಿಕ ದಾನವನ್ನು ಮಾಡುವುದು ಮಹಾದೋಷ. ಕೊಡುವುದು ಮಹಾ ಭಯ.
05039011a ಯೇ ಪಾಪಾ ಇತಿ ವಿಖ್ಯಾತಾಃ ಸಂವಾಸೇ ಪರಿಗರ್ಹಿತಾಃ|
05039011c ಯುಕ್ತಾಶ್ಚಾನ್ಯೈರ್ಮಹಾದೋಷೈರ್ಯೇ ನರಾಸ್ತಾನ್ವಿವರ್ಜಯೇತ್||
ಯಾರು ಪಾಪಿಗಳೆಂದು ವಿಖ್ಯಾತರಾಗಿದ್ದಾರೋ, ಮಹಾದೋಷಗಳಿಂದ ಕೂಡಿದ್ದಾರೋ, ಅವರ ಜೊತೆ ಸಹವಾಸವನ್ನು ತೊರೆಯಬೇಕು.
05039012a ನಿವರ್ತಮಾನೇ ಸೌಹಾರ್ದೇ ಪ್ರೀತಿರ್ನೀಚೇ ಪ್ರಣಶ್ಯತಿ|
05039012c ಯಾ ಚೈವ ಫಲನಿರ್ವೃತ್ತಿಃ ಸೌಹೃದೇ ಚೈವ ಯತ್ಸುಖಂ||
ಸೌಹಾರ್ದತೆಯು ಕಳೆದುಹೋದಾಗ, ಪ್ರೀತಿಯು ಕಡಿಮೆಯಾದಾಗ, ಆ ಸೌಹಾರ್ದತೆಯಿಂದ ದೊರೆಯುತ್ತಿದ್ದ ಫಲವೂ ಸುಖವೂ ಕಡಿಮೆಯಾಗುತ್ತದೆ.
05039013a ಯತತೇ ಚಾಪವಾದಾಯ ಯತ್ನಮಾರಭತೇ ಕ್ಷಯೇ|
05039013c ಅಲ್ಪೇಽಪ್ಯಪಕೃತೇ ಮೋಹಾನ್ನ ಶಾಂತಿಮುಪಗಚ್ಚತಿ||
ಅವರಿಗೆ ಅಪವಾದವನ್ನು ಹೊರಿಸಿ, ಅವರ ನಾಶದ ಪ್ರಯತ್ನಗಳನ್ನು ಆರಂಭಿಸುತ್ತಾರೆ. ಸ್ವಲ್ಪ ಅಪಕೃತ್ಯವನ್ನು ಮಾಡಿದರೂ ಮೋಹದಿಂದ ಶಾಂತಿಯನ್ನು ಹೊಂದುವುದಿಲ್ಲ.
05039014a ತಾದೃಶೈಃ ಸಂಗತಂ ನೀಚೈರ್ನೃಶಂಸೈರಕೃತಾತ್ಮಭಿಃ|
05039014c ನಿಶಾಮ್ಯ ನಿಪುಣಂ ಬುದ್ಧ್ಯಾ ವಿದ್ವಾನ್ದೂರಾದ್ವಿವರ್ಜಯೇತ್||
ವಿದ್ವಾಂಸನು ದೂರದಿಂದಲೇ ತನ್ನ ನಿಪುಣ ಬುದ್ಧಿಯಿಂದ ಪರೀಕ್ಷಿಸಿ ಇಂತಹ ನೀಚ, ನೃಶಂಸ ಅಕೃತಾತ್ಮರ ಸಂಗವನ್ನು ವರ್ಜಿಸುತ್ತಾನೆ.
05039015a ಯೋ ಜ್ಞಾತಿಮನುಗೃಹ್ಣಾತಿ ದರಿದ್ರಂ ದೀನಮಾತುರಂ|
05039015c ಸ ಪುತ್ರಪಶುಭಿರ್ವೃದ್ಧಿಂ ಯಶಶ್ಚಾವ್ಯಯಮಶ್ನುತೇ||
ಯಾರು ದ್ರರಿದ್ರ, ದೀನ, ಆತುರ ಬಂದುಗಳಿಗೆ ಅನುಗ್ರಹಿಸುತ್ತಾನೋ ಅವನು ಪುತ್ರ-ಪಶುಗಳ ಅಭಿವೃದ್ಧಿಯನ್ನು ಹೊಂದಿ ಶಾಶ್ವತ ಯಶಸ್ಸನ್ನು ಪಡೆಯುತ್ತಾನೆ.
05039016a ಜ್ಞಾತಯೋ ವರ್ಧನೀಯಾಸ್ತೈರ್ಯ ಇಚ್ಚಂತ್ಯಾತ್ಮನಃ ಶುಭಂ|
05039016c ಕುಲವೃದ್ಧಿಂ ಚ ರಾಜೇಂದ್ರ ತಸ್ಮಾತ್ಸಾಧು ಸಮಾಚರ||
ತನಗೆ ಶುಭವಾದುದನ್ನು ಬಯಸುವವನು ತನ್ನ ಬಂಧುಗಳ ಅಭಿವೃದ್ಧಿಯನ್ನೂ ನೋಡಿಕೊಳ್ಳಬೇಕು. ಆದುದರಿಂದ, ರಾಜೇಂದ್ರ! ಸಾಧುವಾದ ಕುಲವೃದ್ಧಿಯನ್ನು ನಡೆಸು.
05039017a ಶ್ರೇಯಸಾ ಯೋಕ್ಷ್ಯಸೇ ರಾಜನ್ಕುರ್ವಾಣೋ ಜ್ಞಾತಿಸತ್ಕ್ರಿಯಾಂ|
05039017c ವಿಗುಣಾ ಹ್ಯಪಿ ಸಂರಕ್ಷ್ಯಾ ಜ್ಞಾತಯೋ ಭರತರ್ಷಭ||
ರಾಜನ್! ನಿನ್ನ ಬಂಧುಗಳಿಗೆ ಒಳ್ಳೆಯದನ್ನು ಮಾಡಿದರೆ ಶ್ರೇಯಸ್ಸನ್ನು ಪಡೆಯುತ್ತೀಯೆ. ಭರತರ್ಷಭ! ಸದ್ಗುಣಿಗಳಲ್ಲದಿದ್ದರೂ ಬಂದುಗಳನ್ನು ಸಂರಕ್ಷಿಸಬೇಕು.
05039018a ಕಿಂ ಪುನರ್ಗುಣವಂತಸ್ತೇ ತ್ವತ್ಪ್ರಸಾದಾಭಿಕಾಂಕ್ಷಿಣಃ|
05039018c ಪ್ರಸಾದಂ ಕುರು ದೀನಾನಾಂ ಪಾಂಡವಾನಾಂ ವಿಶಾಂ ಪತೇ||
ಹೀಗಿರುವಾಗ ಇನ್ನು ನಿನ್ನ ಕರುಣೆಯ ಆಕಾಂಕ್ಷಿಗಳಾದ ಗುಣವಂತರದ್ದೇನು? ವಿಶಾಂಪತೇ! ದೀನ ಪಾಂಡವರ ಮೇಲೆ ಕರುಣೆಯನ್ನು ತೋರು.
05039019a ದೀಯಂತಾಂ ಗ್ರಾಮಕಾಃ ಕೇ ಚಿತ್ತೇಷಾಂ ವೃತ್ತ್ಯರ್ಥಮೀಶ್ವರ|
05039019c ಏವಂ ಲೋಕೇ ಯಶಃಪ್ರಾಪ್ತೋ ಭವಿಷ್ಯಸಿ ನರಾಧಿಪ||
ಈಶ್ವರ! ಅವರ ಹೊಟ್ಟೆಪಾಡಿಗೆಂದು ಕೆಲವು ಗ್ರಾಮಗಳನ್ನಾದರೂ ಕೊಡು. ನರಾಧಿಪ! ಈ ರೀತಿ ನೀನು ಲೋಕದಲ್ಲಿ ಯಶಸ್ಸನ್ನು ಗಳಿಸುತ್ತೀಯೆ.
05039020a ವೃದ್ಧೇನ ಹಿ ತ್ವಯಾ ಕಾರ್ಯಂ ಪುತ್ರಾಣಾಂ ತಾತ ರಕ್ಷಣಂ|
05039020c ಮಯಾ ಚಾಪಿ ಹಿತಂ ವಾಚ್ಯಂ ವಿದ್ಧಿ ಮಾಂ ತ್ವದ್ಧಿತೈಷಿಣಂ||
ನೀನು ವೃದ್ಧ. ಆದುದರಿಂದ ಪುತ್ರರನ್ನು ರಕ್ಷಿಸುವುದು ನಿನ್ನ ಕಾರ್ಯ. ಹಿತವಾಕ್ಯಗಳನ್ನು ನುಡಿಯುವ ನನ್ನನ್ನು ಕೂಡ ನಿನ್ನ ಹಿತೈಷಿಯೆಂದು ತಿಳಿದುಕೋ.
05039021a ಜ್ಞಾತಿಭಿರ್ವಿಗ್ರಹಸ್ತಾತ ನ ಕರ್ತವ್ಯೋ ಭವಾರ್ಥಿನಾ|
05039021c ಸುಖಾನಿ ಸಹ ಭೋಜ್ಯಾನಿ ಜ್ಞಾತಿಭಿರ್ಭರತರ್ಷಭ||
ಅಯ್ಯಾ! ಒಳ್ಳೆಯದನ್ನು ಬಯಸುವವನು ಬಂಧುಗಳೊಂದಿಗೆ ಜಗಳವಾಡಬಾರದು. ಭರತರ್ಷಭ! ಸುಖಗಳನ್ನು ಬಂಧುಗಳ ಜೊತೆಗೂಡಿ ಭೋಗಿಸಬೇಕು.
05039022a ಸಂಭೋಜನಂ ಸಂಕಥನಂ ಸಂಪ್ರೀತಿಶ್ಚ ಪರಸ್ಪರಂ|
05039022c ಜ್ಞಾತಿಭಿಃ ಸಹ ಕಾರ್ಯಾಣಿ ನ ವಿರೋಧಃ ಕಥಂ ಚನ||
ಬಂಧುಗಳೊಡನೆ ಒಟ್ಟಿಗೇ ಊಟಮಾಡಬೇಕು, ಒಟ್ಟಿಗೇ ಪರಸ್ಪರರಲ್ಲಿ ಪ್ರೀತಿಯಿಂದ ಮಾತನಾಡಬೇಕು, ಒಟ್ಟಿಗೇ ಕೆಲಸಮಾಡಬೇಕು. ಎಂದೂ ಪರಸ್ಪರ ವಿರೋಧಿಸಬಾರದು.
05039023a ಜ್ಞಾತಯಸ್ತಾರಯಂತೀಹ ಜ್ಞಾತಯೋ ಮಜ್ಜಯಂತಿ ಚ|
05039023c ಸುವೃತ್ತಾಸ್ತಾರಯಂತೀಹ ದುರ್ವೃತ್ತಾ ಮಜ್ಜಯಂತಿ ಚ||
ಇಲ್ಲಿ ಬಂಧುಗಳೇ ದಾಟಿಸುತ್ತಾರೆ, ಬಂಧುಗಳೇ ಮುಳುಗಿಸುತ್ತಾರೆ ಕೂಡ. ಅವರಲ್ಲಿ ಉತ್ತಮ ನಡತೆಯುಳ್ಳವರು ದಾಟಿಸುತ್ತಾರೆ, ಕೆಟ್ಟ ನಡತೆಯವರು ಮುಳುಗಿಸುತ್ತಾರೆ.
05039024a ಸುವೃತ್ತೋ ಭವ ರಾಜೇಂದ್ರ ಪಾಂಡವಾನ್ಪ್ರತಿ ಮಾನದ|
05039024c ಅಧರ್ಷಣೀಯಃ ಶತ್ರೂಣಾಂ ತೈರ್ವೃತಸ್ತ್ವಂ ಭವಿಷ್ಯಸಿ||
ಮಾನದ! ರಾಜೇಂದ್ರ! ಪಾಂಡವರೊಂದಿಗೆ ಒಳ್ಳೆಯದಾಗಿ ನಡೆದುಕೊಳ್ಳುವವನಾಗು. ಅವರಿಂದ ಸುತ್ತುವರೆಯಲ್ಪಟ್ಟ ನೀನು ನಿನ್ನ ಶತ್ರುಗಳಿಗೆ ಗೆಲ್ಲಲಾರದವನಾಗುತ್ತೀಯೆ.
05039025a ಶ್ರೀಮಂತಂ ಜ್ಞಾತಿಮಾಸಾದ್ಯ ಯೋ ಜ್ಞಾತಿರವಸೀದತಿ|
05039025c ದಿಗ್ಧಹಸ್ತಂ ಮೃಗ ಇವ ಸ ಏನಸ್ತಸ್ಯ ವಿಂದತಿ||
ಶ್ರೀಮಂತ ಬಂಧುವನ್ನು ಸೇರಿ ಯಾವ ಬಂಧುವು, ಬೇಟೆಯಾಡುವವನ ಕೈಗೆ ಸಿಕ್ಕ ಜಿಂಕೆಯಂತೆ ಅವಸಾನವನ್ನು ಹೊಂದುತ್ತಾನೋ, ಅದರ ಪಾಪವು ಶ್ರೀಮಂತನಿಗೆ ಬರುತ್ತದೆ.
05039026a ಪಶ್ಚಾದಪಿ ನರಶ್ರೇಷ್ಠ ತವ ತಾಪೋ ಭವಿಷ್ಯತಿ|
05039026c ತಾನ್ವಾ ಹತಾನ್ಸುತಾನ್ವಾಪಿ ಶ್ರುತ್ವಾ ತದನುಚಿಂತಯ||
ನರಶ್ರೇಷ್ಠ! ಮುಂದೆ ನಿನ್ನ ಮಕ್ಕಳ ಅಥವಾ ಅವರ ಸಾವನ್ನು ಕೇಳಿ ನೀನು ಚಿಂತಿಸುತ್ತೀಯೆ, ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತೀಯೆ.
05039027a ಯೇನ ಖಟ್ವಾಂ ಸಮಾರೂಢಃ ಪರಿತಪ್ಯೇತ ಕರ್ಮಣಾ|
05039027c ಆದಾವೇವ ನ ತತ್ಕುರ್ಯಾದಧ್ರುವೇ ಜೀವಿತೇ ಸತಿ||
ಜೀವನವೇ ನಿರ್ಧಿಷ್ಠವಾಗಿರದಿರುವಾಗ, ಕಷ್ಟದ ಕೋಣೆಗೆ ಹೋಗಿ ಪರಿತಪಿಸಬೇಕಾಗಿ ಬರಬಹುದಾದಂತಹ ಕರ್ಮಗಳನ್ನು ಮೊದಲಿನಿಂದಲೇ ತೊರೆಯಬೇಕು.
05039028a ನ ಕಶ್ಚಿನ್ನಾಪನಯತೇ ಪುಮಾನನ್ಯತ್ರ ಭಾರ್ಗವಾತ್|
05039028c ಶೇಷಸಂಪ್ರತಿಪತ್ತಿಸ್ತು ಬುದ್ಧಿಮತ್ಸ್ವೇವ ತಿಷ್ಠತಿ||
05039029a ದುರ್ಯೋಧನೇನ ಯದ್ಯೇತತ್ಪಾಪಂ ತೇಷು ಪುರಾ ಕೃತಂ|
05039029c ತ್ವಯಾ ತತ್ಕುಲವೃದ್ಧೇನ ಪ್ರತ್ಯಾನೇಯಂ ನರೇಶ್ವರ||
ನರೇಶ್ವರ! ಹಿಂದೆ ದುರ್ಯೋಧನನು ಅವರ ಕುರಿತು ಪಾಪಕೃತ್ಯಗಳನ್ನು ಎಸಗಿದ್ದರೆ ಅವನ್ನು ಸರಿಪಡಿಸುವುದು ಕುಲವೃದ್ಧನಾದ ನಿನ್ನ ಕರ್ತವ್ಯ.
05039030a ತಾಂಸ್ತ್ವಂ ಪದೇ ಪ್ರತಿಷ್ಠಾಪ್ಯ ಲೋಕೇ ವಿಗತಕಲ್ಮಷಃ|
05039030c ಭವಿಷ್ಯಸಿ ನರಶ್ರೇಷ್ಠ ಪೂಜನೀಯೋ ಮನೀಷಿಣಾಂ||
ನರಶ್ರೇಷ್ಠ! ಅವರನ್ನು ಅವರ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ನೀನು ವಿಗತಕಲ್ಮಷನಾಗಿ ಮನುಷ್ಯರಲ್ಲಿ ಪೂಜನೀಯನಾಗುತ್ತೀಯೆ.
05039031a ಸುವ್ಯಾಹೃತಾನಿ ಧೀರಾಣಾಂ ಫಲತಃ ಪ್ರವಿಚಿಂತ್ಯ ಯಃ|
05039031c ಅಧ್ಯವಸ್ಯತಿ ಕಾರ್ಯೇಷು ಚಿರಂ ಯಶಸಿ ತಿಷ್ಠತಿ||
ಧೀರರ ಒಳ್ಳೆಯ ಮಾತುಗಳನ್ನೂ, ಅವುಗಳ ಪರಿಣಾಮಗಳನ್ನೂ ಚೆನ್ನಾಗಿ ಯೋಚಿಸಿ ಕಾರ್ಯಗಳಲ್ಲಿ ತೊಡಗುವವನು ಶಾಶ್ವತ ಯಶಸ್ಸನ್ನು ಪಡೆಯುತ್ತಾನೆ.
05039032a ಅವೃತ್ತಿಂ ವಿನಯೋ ಹಂತಿ ಹಂತ್ಯನರ್ಥಂ ಪರಾಕ್ರಮಃ|
05039032c ಹಂತಿ ನಿತ್ಯಂ ಕ್ಷಮಾ ಕ್ರೋಧಮಾಚಾರೋ ಹಂತ್ಯಲಕ್ಷಣಂ||
ವಿನಯವು ದುರ್ನಡತೆಯನ್ನು ಕೊಲ್ಲುತ್ತದೆ. ಪರಾಕ್ರಮವು ಅನರ್ಥವನ್ನು ಕೊಲ್ಲುತ್ತದೆ. ಕ್ಷಮೆಯು ಯಾವಾಗಲೂ ಕ್ರೋಧವನ್ನು ಕೊಲ್ಲುತ್ತದೆ. ಆಚಾರವು ಅಲಕ್ಷಣವನ್ನು ಕೊಲ್ಲುತ್ತದೆ.
05039033a ಪರಿಚ್ಚದೇನ ಕ್ಷೇತ್ರೇಣ ವೇಶ್ಮನಾ ಪರಿಚರ್ಯಯಾ|
05039033c ಪರೀಕ್ಷೇತ ಕುಲಂ ರಾಜನ್ಭೋಜನಾಚ್ಚಾದನೇನ ಚ||
ರಾಜನ್! ಒಂದು ಕುಲವನ್ನು ಅದರಲ್ಲಿರುವ ಜನರ ಸಂಖ್ಯೆ, ಆಸ್ತಿ, ಮನೆ, ಪರಿಚಾರಕರು, ಭೋಜನ ಮತ್ತು ಉಡುಪುಗಳಿಂದ ಪರೀಕ್ಷಿಸಬೇಕು.
05039034a ಯಯೋಶ್ಚಿತ್ತೇನ ವಾ ಚಿತ್ತಂ ನೈಭೃತಂ ನೈಭೃತೇನ ವಾ|
05039034c ಸಮೇತಿ ಪ್ರಜ್ಞಾಯಾ ಪ್ರಜ್ಞಾ ತಯೋರ್ಮೈತ್ರೀ ನ ಜೀರ್ಯತೇ||
ಯಾರ ಚಿತ್ತವು ಚಿತ್ತದೊಂದಿಗೆ, ಗುಟ್ಟುಗಳು ಗುಟ್ಟುಗಳೊಂದಿಗೆ ಮತ್ತು ಪ್ರಜ್ಞೆಯು ಪ್ರಜ್ಞೆಯೊಂದಿಗೆ ಕೂಡುವುದೋ ಅವರ ಮೈತ್ರಿಯು ಕುಂಠಿತವಾಗುವುದಿಲ್ಲ.
05039035a ದುರ್ಬುದ್ಧಿಮಕೃತಪ್ರಜ್ಞಾಂ ಚನ್ನಂ ಕೂಪಂ ತೃಣೈರಿವ|
05039035c ವಿವರ್ಜಯೀತ ಮೇಧಾವೀ ತಸ್ಮಿನ್ಮೈತ್ರೀ ಪ್ರಣಶ್ಯತಿ||
ಹುಲ್ಲಿನಿಂದ ಮುಚ್ಚಿಕೊಂಡ ಬಾವಿಯಂತಿರುವ ಪ್ರಜ್ಞೆಯಿಲ್ಲದ ದುರ್ಬುದ್ಧಿಯನ್ನು ಮೇಧಾವಿಯು ವರ್ಜಿಸಬೇಕು. ಅವರೊಂದಿಗಿನ ಮೈತ್ರಿಯು ನಾಶವಾಗುತ್ತದೆ.
05039036a ಅವಲಿಪ್ತೇಷು ಮೂರ್ಖೇಷು ರೌದ್ರಸಾಹಸಿಕೇಷು ಚ|
05039036c ತಥೈವಾಪೇತಧರ್ಮೇಷು ನ ಮೈತ್ರೀಮಾಚರೇದ್ಬುಧಃ||
ಜಂಬವಿರುವ, ಮೂರ್ಖ, ರೌದ್ರ ಸಾಹಿಸಿಗಳೊಂದಿಗೆ ಮತ್ತು ಅಧರ್ಮಿಗಳೊಂದಿಗೆ ತಿಳಿದವರು ಮೈತ್ರಿಯನ್ನು ಬೆಳೆಸಬಾರದು.
05039037a ಕೃತಜ್ಞಾಂ ಧಾರ್ಮಿಕಂ ಸತ್ಯಮಕ್ಷುದ್ರಂ ದೃಢಭಕ್ತಿಕಂ|
05039037c ಜಿತೇಂದ್ರಿಯಂ ಸ್ಥಿತಂ ಸ್ಥಿತ್ಯಾಂ ಮಿತ್ರಮತ್ಯಾಗಿ ಚೇಷ್ಯತೇ||
ಕೃತಜ್ಞ, ಧಾರ್ಮಿಕ, ಸತ್ಯವಂತ, ಅಕ್ಷುದ್ರ, ದೃಢಭಕ್ತಿಯುಳ್ಳವ, ಜಿತೇಂದ್ರಿಯ, ಸ್ಥಿರವಾಗಿರುವವನೊಂದಿಗೆ ಮಿತ್ರತ್ವವನ್ನು ಬಯಸಬೇಕು.
05039038a ಇಂದ್ರಿಯಾಣಾಮನುತ್ಸರ್ಗೋ ಮೃತ್ಯುನಾ ನ ವಿಶಿಷ್ಯತೇ|
05039038c ಅತ್ಯರ್ಥಂ ಪುನರುತ್ಸರ್ಗಃ ಸಾದಯೇದ್ದೈವತಾನ್ಯಪಿ||
ಇಂದ್ರಿಯಗಳನ್ನು ಹಿಂದೆ ಎಳೆದಿಟ್ಟುರುವುದು ಸಾವಿಗಿಂತ ಬೇರೆಯದಲ್ಲ. ಅವುಗಳ ಸಂಪೂರ್ಣ ನಿಯಂತ್ರಣವು ದೇವತೆಗಳನ್ನೂ ದೊರಕಿಸುತ್ತದೆ.
05039039a ಮಾರ್ದವಂ ಸರ್ವಭೂತಾನಾಮನಸೂಯಾ ಕ್ಷಮಾ ಧೃತಿಃ|
05039039c ಆಯುಷ್ಯಾಣಿ ಬುಧಾಃ ಪ್ರಾಹುರ್ಮಿತ್ರಾಣಾಂ ಚಾವಿಮಾನನಾ||
ಸರ್ವಭೂತಗಳಲ್ಲಿ ದಯೆ, ಅನಸೂಯೆ, ಕ್ಷಮೆ, ಧೃತಿ, ಮತ್ತು ಮಿತ್ರರನ್ನು ಗೌರವಿಸುವುದು ಇವು ಆಯುಷ್ಯವನ್ನು ವರ್ಧಿಸುವವು ಎಂದು ತಿಳಿದವರು ಹೇಳುತ್ತಾರೆ.
05039040a ಅಪನೀತಂ ಸುನೀತೇನ ಯೋಽರ್ಥಂ ಪ್ರತ್ಯಾನಿನೀಷತೇ|
05039040c ಮತಿಮಾಸ್ಥಾಯ ಸುದೃಢಾಂ ತದಕಾಪುರುಷವ್ರತಂ||
ತನ್ನ ಬುದ್ಧಿಯನ್ನು ಆಧರಿಸಿ ಸರಿಯಾಗಿ ನಡೆದುಕೊಂಡು ಹೋಗುತ್ತಿರದವರನ್ನು ಸರಿಮಾಡುವುದೇ ಉತ್ತಮ ಪುರುಷರ ಜೀವಧೋರಣೆಯಾಗಿರಬೇಕು.
05039041a ಆಯತ್ಯಾಂ ಪ್ರತಿಕಾರಜ್ಞಾಸ್ತದಾತ್ವೇ ದೃಢನಿಶ್ಚಯಃ|
05039041c ಅತೀತೇ ಕಾರ್ಯಶೇಷಜ್ಞೋ ನರೋಽರ್ಥೈರ್ನ ಪ್ರಹೀಯತೇ||
ಭವಿಷ್ಯವನ್ನು ಹೇಗೆ ಎದುರಿಸಬೇಕೆಂದು ತಿಳಿದಿರುವವನು, ವರ್ತಮಾನದಲ್ಲಿ ಧೃಢನಿಶ್ಚಯನಾಗಿರುವವನು ಮತ್ತು ಹಿಂದೆ ಮಾಡಿದ ಕರ್ಮಗಳ ಪರಿಣಾಮಗಳನ್ನು ಅರ್ಥಮಾಡಿಕೊಂಡವನು ತನ್ನ ಸಂಪತ್ತಿನಿಂದ ಎಂದೂ ದೂರನಾಗುವುದಿಲ್ಲ.
05039042a ಕರ್ಮಣಾ ಮನಸಾ ವಾಚಾ ಯದಭೀಕ್ಷ್ಣಂ ನಿಷೇವತೇ|
05039042c ತದೇವಾಪಹರತ್ಯೇನಂ ತಸ್ಮಾತ್ಕಲ್ಯಾಣಮಾಚರೇತ್||
ಕರ್ಮ, ಮನಸ್ಸು ಮತ್ತು ಮಾತುಗಳ ಮೂಲಕ ಏನನ್ನು ಅನುಸರಿಸುತ್ತೀವೋ ಅವೇ ನಮ್ಮನ್ನು ಅಪಹರಿಸಿಕೊಂಡು ಹೋಗುತ್ತವೆ. ಆದುದರಿಂದ ಕಲ್ಯಾಣವಾಗುವ ರೀತಿಯಲ್ಲಿಯೇ ನಡೆದುಕೊಳ್ಳಬೇಕು.
05039043a ಮಂಗಲಾಲಂಭನಂ ಯೋಗಃ ಶ್ರುತಮುತ್ಥಾನಮಾರ್ಜವಂ|
05039043c ಭೂತಿಮೇತಾನಿ ಕುರ್ವಂತಿ ಸತಾಂ ಚಾಭೀಕ್ಷ್ಣದರ್ಶನಂ||
ಮಂಗಲಕರವಾದುದನ್ನು ಮಾಡುವುದು, ಯೋಗ, ಅಧ್ಯಯನ, ಆರ್ಜವ, ಸಂತರ ಸೇವೆ ಇವುಗಳು ಅಭಿವೃದ್ಧಿಯನ್ನು ತರುತ್ತವೆ.
05039044a ಅನಿರ್ವೇದಃ ಶ್ರಿಯೋ ಮೂಲಂ ದುಃಖನಾಶೇ ಸುಖಸ್ಯ ಚ|
05039044c ಮಹಾನ್ಭವತ್ಯನಿರ್ವಿಣ್ಣಃ ಸುಖಂ ಚಾತ್ಯಂತಮಶ್ನುತೇ||
ದುಃಖವು ನಾಶವಾಗುತ್ತದೆ ಎಂದು ತಿಳಿದು ದುಃಖಪಡದೇ ಇರುವುದು ಸುಖ ಮತ್ತು ಸಂಪತ್ತಿನ ಮೂಲ. ಅನಿರ್ವಿಣ್ಣನಾಗಿರುವವನು ಮಹಾತ್ಮನಾಗಿ ಅತ್ಯಂತ ಸುಖವನ್ನು ಹೊಂದುತ್ತಾನೆ.
05039045a ನಾತಃ ಶ್ರೀಮತ್ತರಂ ಕಿಂ ಚಿದನ್ಯತ್ಪಥ್ಯತಮಂ ತಥಾ|
05039045c ಪ್ರಭವಿಷ್ಣೋರ್ಯಥಾ ತಾತ ಕ್ಷಮಾ ಸರ್ವತ್ರ ಸರ್ವದಾ||
ಅಯ್ಯಾ! ಸರ್ವತ್ರವೂ ಸರ್ವದಾ ಕ್ಷಮಿಸುವ ಶಕ್ತಿಶಾಲಿ ಒಡೆಯನಿದ್ದರೆ ಅದಕ್ಕಿಂತಲೂ ಹೆಚ್ಚಿನ ಒಳ್ಳೆಯದು ಮತ್ತು ತೃಪ್ತಿಯು ಬೇರೊಂದಿಲ್ಲ.
05039046a ಕ್ಷಮೇದಶಕ್ತಃ ಸರ್ವಸ್ಯ ಶಕ್ತಿಮಾನ್ಧರ್ಮಕಾರಣಾತ್|
05039046c ಅರ್ಥಾನರ್ಥೌ ಸಮೌ ಯಸ್ಯ ತಸ್ಯ ನಿತ್ಯಂ ಕ್ಷಮಾ ಹಿತಾ||
ಶಕ್ತಿಯಿಲ್ಲದವನು ಎಲ್ಲವನ್ನೂ ಕ್ಷಮಿಸಬೇಕು. ಶಕ್ತಿವಂತನೂ ಧರ್ಮದ ಕಾರಣದಿಂದ ಎಲ್ಲವನ್ನೂ ಕ್ಷಮಿಸಬೇಕು. ಲಾಭ-ನಷ್ಟಗಳು ಸಮನಾಗಿರುವವನು ನಿತ್ಯವೂ ಕ್ಷಮಿಸುತ್ತಾನೆ.
05039047a ಯತ್ಸುಖಂ ಸೇವಮಾನೋಽಪಿ ಧರ್ಮಾರ್ಥಾಭ್ಯಾಂ ನ ಹೀಯತೇ|
05039047c ಕಾಮಂ ತದುಪಸೇವೇತ ನ ಮೂಢವ್ರತಮಾಚರೇತ್||
ಯಾವ ಸುಖವನ್ನು ಅನುಭವಿಸುದರಿಂದ ಧರ್ಮ ಮತ್ತು ಅರ್ಥಗಳೆರಡೂ ಕ್ಷಣಿಸುವುದಿಲ್ಲವೋ ಅಂಥಹ ಕಾಮವನ್ನು ಬಯಸಬೇಕು. ಮೂಢರ ವರ್ತನೆಯಂತೆ ನಡೆದುಕೊಳ್ಳಬಾರದು.
05039048a ದುಃಖಾರ್ತೇಷು ಪ್ರಮತ್ತೇಷು ನಾಸ್ತಿಕೇಷ್ವಲಸೇಷು ಚ|
05039048c ನ ಶ್ರೀರ್ವಸತ್ಯದಾಂತೇಷು ಯೇ ಚೋತ್ಸಾಹವಿವರ್ಜಿತಾಃ||
ದುಃಖಾರ್ತರಾದವರಲ್ಲಿ, ಪ್ರಮತ್ತರಾದವರಲ್ಲಿ, ನಾಸ್ತಿಕರಲ್ಲಿ, ಆಲಸಿಗಳಲ್ಲಿ, ನಿಯಂತ್ರಣವಿಲ್ಲದವರಲ್ಲಿ, ಉತ್ಸಾಹವನ್ನು ತೊರೆದವರಲ್ಲಿ ಅದೃಷ್ಟವು ನೆಲೆಸುವುದಿಲ್ಲ.
05039049a ಆರ್ಜವೇನ ನರಂ ಯುಕ್ತಮಾರ್ಜವಾತ್ಸವ್ಯಪತ್ರಪಂ|
05039049c ಅಶಕ್ತಿಮಂತಂ ಮನ್ಯಂತೋ ಧರ್ಷಯಂತಿ ಕುಬುದ್ಧಯಃ||
ತನ್ನ ಪ್ರಾಮಾಣಿಕತೆಯನ್ನು ಹೆಚ್ಚಾಗಿ ತೋರಿಸಿಕೊಳ್ಳದೇ ಇದ್ದ ಪ್ರಾಮಾಣಿಕನನ್ನು ಕುಬುದ್ಧಿಗಳು ಅಶಕ್ತರೆಂದು ತಿಳಿದು ಹಿಂಸಿಸುತ್ತಾರೆ.
05039050a ಅತ್ಯಾರ್ಯಮತಿದಾತಾರಮತಿಶೂರಮತಿವ್ರತಂ|
05039050c ಪ್ರಜ್ಞಾಭಿಮಾನಿನಂ ಚೈವ ಶ್ರೀರ್ಭಯಾನ್ನೋಪಸರ್ಪತಿ||
ಅತಿಯಾದ ಉದಾರಿ ದಾನಿಯ, ಅತಿಶೂರನಾಗಿರುವ ಶೂರನ, ಮತ್ತು ತನ್ನ ಪ್ರಜ್ಞೆಯ ಕುರಿತು ಅಭಿಮಾನಿಯಾಗಿರುವ ಮೂಢನ ಬಳಿಹೋಗಲು ಅದೃಷ್ಟವು ಭಯಪಡುತ್ತದೆ.
05039051a ಅಗ್ನಿಹೋತ್ರಫಲಾ ವೇದಾಃ ಶೀಲವೃತ್ತಫಲಂ ಶ್ರುತಂ|
05039051c ರತಿಪುತ್ರಫಲಾ ದಾರಾ ದತ್ತಭುಕ್ತಫಲಂ ಧನಂ||
ವೇದಗಳ ಫಲವು ಅಗ್ನಿಹೋತ್ರದಲ್ಲಿದೆ, ವಿದ್ಯೆಯ ಫಲವು ನಡತೆಯಲ್ಲಿದೆ, ಪತ್ನಿಯ ಫಲವು ರತಿಸುಖ ಮತ್ತು ಮಕ್ಕಳಲ್ಲಿದೆ, ಹಾಗೂ ಧನದ ಫಲವು ಕೊಡುವುದರಲ್ಲಿ ಮತ್ತು ಭೋಗಿಸುವುದರಲ್ಲಿದೆ.
05039052a ಅಧರ್ಮೋಪಾರ್ಜಿತೈರರ್ಥೈರ್ಯಃ ಕರೋತ್ಯೌರ್ಧ್ವದೇಹಿಕಂ|
05039052c ನ ಸ ತಸ್ಯ ಫಲಂ ಪ್ರೇತ್ಯ ಭುಂಕ್ತೇಽರ್ಥಸ್ಯ ದುರಾಗಮಾತ್||
ಅಧರ್ಮದಿಂದ ಗಳಿಸಿದ ಧನದಿಂದ ಸಾವಿನ ನಂತರಕ್ಕೆಂದು ಏನೆಲ್ಲ ಮಾಡುತ್ತಾನೋ ಅದರ ಫಲವನ್ನು ಸತ್ತ ನಂತರ ಪಡೆಯುವುದಿಲ್ಲ. ಏಕೆಂದರೆ ಅವನ ಧನವು ಕೆಟ್ಟದರಿಂದ ಬಂದಿರುತ್ತದೆ.
05039053a ಕಾಂತಾರವನದುರ್ಗೇಷು ಕೃಚ್ಚ್ರಾಸ್ವಾಪತ್ಸು ಸಂಭ್ರಮೇ|
05039053c ಉದ್ಯತೇಷು ಚ ಶಸ್ತ್ರೇಷು ನಾಸ್ತಿ ಶೇಷವತಾಂ ಭಯಂ||
ಜೀವವು ಇನ್ನೂ ಉಳಿದಿರುವವರಿಗೆ ಕಾಂತಾರ-ವನ-ದುರ್ಗಗಳಲ್ಲಿ, ಕಷ್ಟ-ಆಪತ್ತುಗಳಲ್ಲಿ, ಉದ್ವೇಗಗಳಲ್ಲಿ, ಮತ್ತು ಮೇಲೆತ್ತಿರುವ ಶಸ್ತ್ರಗಳಿಂದ ಭಯವಿಲ್ಲ.
05039054a ಉತ್ಥಾನಂ ಸಂಯಮೋ ದಾಕ್ಷ್ಯಮಪ್ರಮಾದೋ ಧೃತಿಃ ಸ್ಮೃತಿಃ|
05039054c ಸಮೀಕ್ಷ್ಯ ಚ ಸಮಾರಂಭೋ ವಿದ್ಧಿ ಮೂಲಂ ಭವಸ್ಯ ತತ್||
ಏಳಿಗೆಗಾಗಿ ಪ್ರಯತ್ನ, ಸಂಯಮ, ದಕ್ಷತೆ, ಪ್ರಮಾದಗೊಳ್ಳದಿರುವುದು, ಧೃತಿ, ಸ್ಮೃತಿ, ಸಮೀಕ್ಷೆ ಮತ್ತು ಒಳ್ಳೆಯ ಆರಂಭಗಳು ಏಳಿಗೆಯ ಮೂಲಗಳೆಂದು ತಿಳಿ.
05039055a ತಪೋ ಬಲಂ ತಾಪಸಾನಾಂ ಬ್ರಹ್ಮ ಬ್ರಹ್ಮವಿದಾಂ ಬಲಂ|
05039055c ಹಿಂಸಾ ಬಲಮಸಾಧೂನಾಂ ಕ್ಷಮಾ ಗುಣವತಾಂ ಬಲಂ||
ತಪಸ್ಸು ತಾಪಸರ ಬಲ; ಬ್ರಹ್ಮವು ಬ್ರಹ್ಮವಿದರ ಬಲ; ಹಿಂಸೆಯು ಕೆಟ್ಟವರ ಬಲ ಮತ್ತು ಕ್ಷಮೆಯು ಗುಣವಂತರ ಬಲ.
05039056a ಅಷ್ಟೌ ತಾನ್ಯವ್ರತಘ್ನಾನಿ ಆಪೋ ಮೂಲಂ ಫಲಂ ಪಯಃ|
05039056c ಹವಿರ್ಬ್ರಾಹ್ಮಣಕಾಮ್ಯಾ ಚ ಗುರೋರ್ವಚನಮೌಷಧಂ||
ಈ ಎಂಟು ವ್ರತವನ್ನು ಕೆಡಿಸುವುದಿಲ್ಲ – ನೀರು, ಗೆಡ್ಡೆ, ಹಣ್ಣು, ಹಾಲು, ಹವಿಸ್ಸು, ಬ್ರಾಹ್ಮಣನ ಬಯಕೆ, ಗುರುವಿನ ಮಾತು ಮತ್ತು ಔಷಧ.
05039057a ನ ತತ್ಪರಸ್ಯ ಸಂದಧ್ಯಾತ್ಪ್ರತಿಕೂಲಂ ಯದಾತ್ಮನಃ|
05039057c ಸಂಗ್ರಹೇಣೈಷ ಧರ್ಮಃ ಸ್ಯಾತ್ಕಾಮಾದನ್ಯಃ ಪ್ರವರ್ತತೇ||
ಯಾವುದು ತನಗೆ ಪ್ರತಿಕೂಲವಲ್ಲವೋ ಅದನ್ನು ಇತರರಿಗೆ ಮಾಡಬಾರದು. ಇದೇ ಧರ್ಮದ ಸಾರಾಂಶ. ಇದಕ್ಕೆ ಹೊರತಾದುದು ಕಾಮದಿಂದ ನಡೆಯುತ್ತದೆ.
05039058a ಅಕ್ರೋಧೇನ ಜಯೇತ್ಕ್ರೋಧಮಸಾಧುಂ ಸಾಧುನಾ ಜಯೇತ್|
05039058c ಜಯೇತ್ಕದರ್ಯಂ ದಾನೇನ ಜಯೇತ್ಸತ್ಯೇನ ಚಾನೃತಂ||
ಕ್ರೋಧವನ್ನು ಅಕ್ರೋಧದಿಂದ ಜಯಿಸಬೇಕು; ಅಸಾಧುವಾದುದನ್ನು ಸಾಧುವಾದುದರಿಂದ ಜಯಿಸಬೇಕು; ಜಿಪುಣತೆಯನ್ನು ದಾನದಿಂದ ಜಯಿಸಬೇಕು ಮತ್ತು ಸುಳ್ಳನ್ನು ಸತ್ಯದಿಂದ ಜಯಿಸಬೇಕು.
05039059a ಸ್ತ್ರೀಧೂರ್ತಕೇಽಲಸೇ ಭೀರೌ ಚಂಡೇ ಪುರುಷಮಾನಿನಿ|
05039059c ಚೌರೇ ಕೃತಘ್ನೇ ವಿಶ್ವಾಸೋ ನ ಕಾರ್ಯೋ ನ ಚ ನಾಸ್ತಿಕೇ||
ಸ್ತ್ರೀಯರಲ್ಲಿ. ಧೂರ್ತರಲ್ಲಿ, ಆಲಸಿಯರಲ್ಲಿ, ಹೇಡಿಗಳಲ್ಲಿ, ಚಂಡರಲ್ಲಿ, ಪೌರುಷದ ಮಾತನಾಡುವವರಲ್ಲಿ, ಚೋರರಲ್ಲಿ, ಕೃತಘ್ನರಲ್ಲಿ, ಮತ್ತು ನಾಸ್ತಿಕರಲ್ಲಿ ವಿಶ್ವಾಸವನ್ನಿಡಬಾರದು.
05039060a ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ|
05039060c ಚತ್ವಾರಿ ಸಂಪ್ರವರ್ಧಂತೇ ಕೀರ್ತಿರಾಯುರ್ಯಶೋಬಲಂ||
ಅಭಿವಾದನ ನಡತೆಯುಳ್ಳವನ ಮತ್ತು ವೃದ್ಧರ ಸೇವೆಯಲ್ಲಿರುವವನ ಬಳಿ ನಿತ್ಯವೂ ಈ ನಾಲ್ಕು ವೃದ್ಧಿಯಾಗುತ್ತವೆ - ಕೀರ್ತಿ, ಆಯುಷ್ಯ, ಯಶಸ್ಸು ಮತ್ತು ಬಲ.
05039061a ಅತಿಕ್ಲೇಶೇನ ಯೇಽರ್ಥಾಃ ಸ್ಯುರ್ಧರ್ಮಸ್ಯಾತಿಕ್ರಮೇಣ ಚ|
05039061c ಅರೇರ್ವಾ ಪ್ರಣಿಪಾತೇನ ಮಾ ಸ್ಮ ತೇಷು ಮನಃ ಕೃಥಾಃ||
ತುಂಬಾ ಕಷ್ಟಪಡಬೇಕಾಗಿರುವ, ಅಥವಾ ಧರ್ಮವನ್ನು ಮೀರಿ ನಡೆದುಕೊಳ್ಳಬೇಕಾಗಿರುವ ಅಥವಾ ಶತ್ರುಗಳಿಗೆ ತಲೆಬಾಗಿಸಬೇಕಾಗಿ ಬರುವ ಸಂಪತ್ತಿನ ಮೇಲೆ ಮನಸ್ಸನ್ನಿಡಬೇಡ.
05039062a ಅವಿದ್ಯಃ ಪುರುಷಃ ಶೋಚ್ಯಃ ಶೋಚ್ಯಂ ಮಿಥುನಮಪ್ರಜಂ|
05039062c ನಿರಾಹಾರಾಃ ಪ್ರಜಾಃ ಶೋಚ್ಯಾಃ ಶೋಚ್ಯಂ ರಾಷ್ಟ್ರಮರಾಜಕಂ||
ವಿದ್ಯೆಯಿಲ್ಲದ ಪುರುಷನು ಶೋಚನೀಯ; ಮಕ್ಕಳಿಲ್ಲದ ದಂಪತಿಗಳು ಶೋಚನೀಯರು; ನಿರಾಹಾರರಾಗಿರುವ ಪ್ರಜೆಗಳು ಶೋಚನೀಯರು ಮತ್ತು ರಾಜನಿಲ್ಲದ ರಾಷ್ಟ್ರವು ಶೋಚನೀಯವಾದುದು.
05039063a ಅಧ್ವಾ ಜರಾ ದೇಹವತಾಂ ಪರ್ವತಾನಾಂ ಜಲಂ ಜರಾ|
05039063c ಅಸಂಭೋಗೋ ಜರಾ ಸ್ತ್ರೀಣಾಂ ವಾಕ್ಶಲ್ಯಂ ಮನಸೋ ಜರಾ||
ಪ್ರಯಾಣವು ಶರೀರವಿದ್ದವರನ್ನು ಮುಪ್ಪಾಗಿಸುತ್ತದೆ; ಮಳೆಯು ಪರ್ವತಗಳನ್ನು ಮುಪ್ಪಾಗಿಸುತ್ತದೆ; ಸಂಭೋಗಮಾಡದೇ ಇರುವುದರಿಂದ ಸ್ತ್ರೀಯರು ಮುಪ್ಪಾಗುತ್ತಾರೆ; ಕಠೋರ ಮಾತುಗಳು ಮನಸ್ಸನ್ನು ಮುಪ್ಪಾಗಿಸುತ್ತವೆ.
05039064a ಅನಾಮ್ನಾಯಮಲಾ ವೇದಾ ಬ್ರಾಹ್ಮಣಸ್ಯಾವ್ರತಂ ಮಲಂ|
05039064c ಕೌತೂಹಲಮಲಾ ಸಾಧ್ವೀ ವಿಪ್ರವಾಸಮಲಾಃ ಸ್ತ್ರಿಯಃ||
ಹೇಳದೇ ಇರುವುದರಿಂದ ವೇದಗಳು ಕುಂದುತ್ತವೆ. ವ್ರತಗಳಿಲ್ಲದಿದ್ದರೆ ಬ್ರಾಹ್ಮಣರು ಕುಂದುತ್ತಾರೆ. ಸಾಧ್ವಿಯು ಕುತೂಹಲದಿಂದ ಕುಂದುತ್ತಾಳೆ ಮತ್ತು ಸ್ತ್ರೀಯರು ಮನೆಯ ಹೊರಗೆ ಹೋಗುವುದರಿಂದ ಕುಂದುತ್ತಾರೆ.
05039065a ಸುವರ್ಣಸ್ಯ ಮಲಂ ರೂಪ್ಯಂ ರೂಪ್ಯಸ್ಯಾಪಿ ಮಲಂ ತ್ರಪು|
05039065c ಜ್ಞೇಯಂ ತ್ರಪುಮಲಂ ಸೀಸಂ ಸೀಸಸ್ಯಾಪಿ ಮಲಂ ಮಲಂ||
ಚಿನ್ನವು ಬೆಳ್ಳಿಯಿಂದ ಕೆಡುತ್ತದೆ, ಬೆಳ್ಳಿಯು ತಗಡಿನಿಂದ ಕೆಡುತ್ತದೆ, ತಗಡು ಸೀಸದಿಂದ ಕೆಡುತ್ತದೆ, ಮತ್ತು ಸೀಸವು ಕೊಳೆಯಿಂದ ಕೆಡುತ್ತದೆ.
05039066a ನ ಸ್ವಪ್ನೇನ ಜಯೇನ್ನಿದ್ರಾಂ ನ ಕಾಮೇನ ಸ್ತ್ರಿಯಂ ಜಯೇತ್|
05039066c ನೇಂಧನೇನ ಜಯೇದಗ್ನಿಂ ನ ಪಾನೇನ ಸುರಾಂ ಜಯೇತ್||
ಇನ್ನೂ ಮಲಗುವುದರಿಂದ ನಿದ್ರೆಯನ್ನು ಗೆಲ್ಲಲಾಗದು; ಕಾಮದಿಂದ ಸ್ತ್ರೀಯನ್ನು ಗೆಲ್ಲಲಾಗದು; ಇಂಧನದಿಂದ ಬೆಂಕಿಯನ್ನು ಗೆಲ್ಲಲಾಗದು ಮತ್ತು ಕುಡಿಯುವುದರಿಂದ ಮದ್ಯವನ್ನು ಗೆಲ್ಲಲಾಗದು.
05039067a ಯಸ್ಯ ದಾನಜಿತಂ ಮಿತ್ರಮಮಿತ್ರಾ ಯುಧಿ ನಿರ್ಜಿತಾಃ|
05039067c ಅನ್ನಪಾನಜಿತಾ ದಾರಾಃ ಸಫಲಂ ತಸ್ಯ ಜೀವಿತಂ||
ಕೊಡುವುದರಿಂದ ಮಿತ್ರರನ್ನು ಗಳಿಸಿದವನು, ಶತ್ರುಗಳನ್ನು ಯುದ್ಧದಲ್ಲಿ ಜಯಿಸಿದವನು, ಅನ್ನಪಾನಗಳಿಂದ ಪತ್ನಿಯರನ್ನು ಗೆದ್ದವನ ಜೀವನವು ಸಫಲವಾಗುತ್ತದೆ.
05039068a ಸಹಸ್ರಿಣೋಽಪಿ ಜೀವಂತಿ ಜೀವಂತಿ ಶತಿನಸ್ತಥಾ|
05039068c ಧೃತರಾಷ್ಟ್ರಂ ವಿಮುಂಚೇಚ್ಚಾಂ ನ ಕಥಂ ಚಿನ್ನ ಜೀವ್ಯತೇ||
ಸಾವಿರವಿದ್ದವರೂ ಜೀವಿಸುತ್ತಾರೆ, ಮತ್ತು ಹಾಗೆಯೇ ನೂರಿದ್ದವರೂ ಕೂಡ ಜೀವಿಸುತ್ತಾರೆ. ಆದುದರಿಂದ ಧೃತರಾಷ್ಟ್ರ! ಇಚ್ಛೆಗಳನ್ನು ಬಿಡಬೇಕು. ಬದುಕಲಿಕ್ಕಾಗುವುದಿಲ್ಲ ಎನ್ನುವ ಹಾಗೆ ಏನೂ ಇಲ್ಲ.
05039069a ಯತ್ಪೃಥಿವ್ಯಾಂ ವ್ರೀಹಿಯವಂ ಹಿರಣ್ಯಂ ಪಶವಃ ಸ್ತ್ರಿಯಃ|
05039069c ನಾಲಮೇಕಸ್ಯ ತತ್ಸರ್ವಮಿತಿ ಪಶ್ಯನ್ನ ಮುಹ್ಯತಿ||
ಈ ಭೂಮಿಯಲ್ಲಿರುವ ಅಕ್ಕಿ, ಬಂಗಾರ, ಪಶುಗಳು ಮತ್ತು ಸ್ತ್ರೀಯರು ಎಲ್ಲವೂ ಒಬ್ಬನಿಗೂ ಸಾಕಾಗುವುದಿಲ್ಲ. ಇದನ್ನು ನೋಡಿ ಮೋಸಹೋಗಬೇಡ.
05039070a ರಾಜನ್ಭೂಯೋ ಬ್ರವೀಮಿ ತ್ವಾಂ ಪುತ್ರೇಷು ಸಮಮಾಚರ|
05039070c ಸಮತಾ ಯದಿ ತೇ ರಾಜನ್ಸ್ವೇಷು ಪಾಂಡುಸುತೇಷು ಚ||
ರಾಜನ್! ಇನ್ನೊಮ್ಮೆ ಹೇಳುತ್ತಿದ್ದೇನೆ. ರಾಜನ್! ನಿನ್ನ ಮತ್ತು ಪಾಂಡುವಿನ ಮಕ್ಕಳಲ್ಲಿ ಸಮತೆಯಿಂದ ನೀನು ನಡೆದುಕೊಂಡರೆ ನಿನ್ನ ಮಕ್ಕಳೊಂದಿಗೆ ಚೆನ್ನಾಗಿರಬಲ್ಲೆ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಏಕೋನಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ತೊಂಭತ್ತನೆಯ ಅಧ್ಯಾಯವು.
