ಅನುಶಾಸನ ಪರ್ವ: ದಾನಧರ್ಮ ಪರ್ವ
Contents
Toggle೨
ಸುದರ್ಶನೋಪಾಖ್ಯಾನ
“ಗೃಹಸ್ಥಧರ್ಮವನ್ನು ಆಶ್ರಯಿಸಿ ಮೃತ್ಯುವನ್ನು ಗೆದ್ದವರ್ಯಾರು?” ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಸುದರ್ಶನನ ಉಪಾಖ್ಯಾನವನ್ನು ಉದಾಹರಿಸಿದುದು (೧-೯೫).
13002001 ಯುಧಿಷ್ಠಿರ ಉವಾಚ|
13002001a ಪಿತಾಮಹ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ|
13002001c ಶ್ರುತಂ ಮೇ ಮಹದಾಖ್ಯಾನಮಿದಂ ಮತಿಮತಾಂ ವರ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಮತಿಮತರಲ್ಲಿ ಶ್ರೇಷ್ಠ! ಈ ಮಹಾ ಆಖ್ಯಾನವನ್ನು ಕೇಳಿದೆ.
13002002a ಭೂಯಸ್ತು ಶ್ರೋತುಮಿಚ್ಚಾಮಿ ಧರ್ಮಾರ್ಥಸಹಿತಂ ನೃಪ|
13002002c ಕಥ್ಯಮಾನಂ ತ್ವಯಾ ಕಿಂ ಚಿತ್ತನ್ಮೇ ವ್ಯಾಖ್ಯಾತುಮರ್ಹಸಿ||
ನೃಪ! ಧರ್ಮಾರ್ಥಸಂಹಿತ ನಿನ್ನ ಮಾತುಗಳನ್ನು ಇನ್ನೂ ಕೇಳಬಯಸುತ್ತೇನೆ. ಬೇರೆ ಏನನ್ನಾದರೂ ಹೇಳು.
13002003a ಕೇನ ಮೃತ್ಯುರ್ಗೃಹಸ್ಥೇನ ಧರ್ಮಮಾಶ್ರಿತ್ಯ ನಿರ್ಜಿತಃ|
13002003c ಇತ್ಯೇತತ್ಸರ್ವಮಾಚಕ್ಷ್ವ ತತ್ತ್ವೇನ ಮಮ ಪಾರ್ಥಿವ||
ಪಾರ್ಥಿವ! ಗೃಹಸ್ಥಧರ್ಮವನ್ನು ಆಶ್ರಯಿಸಿ ಮೃತ್ಯುವನ್ನು ಗೆದ್ದವರು ಯಾರು? ಇದರ ಕುರಿತು ಸರ್ವ ತತ್ತ್ವವನ್ನೂ ನನಗೆ ಹೇಳು.”
13002004 ಭೀಷ್ಮ ಉವಾಚ|
13002004a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
13002004c ಯಥಾ ಮೃತ್ಯುರ್ಗೃಹಸ್ಥೇನ ಧರ್ಮಮಾಶ್ರಿತ್ಯ ನಿರ್ಜಿತಃ||
ಭೀಷ್ಮನು ಹೇಳಿದನು: “ಗೃಹಸ್ಥಧರ್ಮವನ್ನು ಆಶ್ರಯಿಸಿ ಮೃತ್ಯುವನ್ನು ಜಯಿಸಿದ ಕುರಿತು ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
13002005a ಮನೋಃ ಪ್ರಜಾಪತೇ ರಾಜನ್ನಿಕ್ಷ್ವಾಕುರಭವತ್ಸುತಃ|
13002005c ತಸ್ಯ ಪುತ್ರಶತಂ ಜಜ್ಞೇ ನೃಪತೇಃ ಸೂರ್ಯವರ್ಚಸಃ||
ರಾಜನ್! ಪ್ರಜಾಪತಿ ಮನುವಿಗೆ ಇಕ್ಷ್ವಾಕುವು ಸುತನಾದನು. ಆ ನೃಪತಿಗೆ ಸೂರ್ಯವರ್ಚಸ ನೂರು ಪುತ್ರರು ಜನಿಸಿದರು.
13002006a ದಶಮಸ್ತಸ್ಯ ಪುತ್ರಸ್ತು ದಶಾಶ್ವೋ ನಾಮ ಭಾರತ|
13002006c ಮಾಹಿಷ್ಮತ್ಯಾಮಭೂದ್ರಾಜಾ ಧರ್ಮಾತ್ಮಾ ಸತ್ಯವಿಕ್ರಮಃ||
ಭಾರತ! ಅವರಲ್ಲಿ ಹತ್ತನೆಯ ಪುತ್ರನು ದಶಾಶ್ವ ಎಂಬ ಹೆಸರಿನವನು. ಆ ಧರ್ಮಾತ್ಮಾ ಸತ್ಯವಿಕ್ರಮನು ಮಾಹಿಷ್ಮತಿಗೆ ರಾಜನಾದನು.
13002007a ದಶಾಶ್ವಸ್ಯ ಸುತಸ್ತ್ವಾಸೀದ್ರಾಜಾ ಪರಮಧಾರ್ಮಿಕಃ|
13002007c ಸತ್ಯೇ ತಪಸಿ ದಾನೇ ಚ ಯಸ್ಯ ನಿತ್ಯಂ ರತಂ ಮನಃ||
ದಶಾಶ್ವನ ಮಗನು ಪರಮಧಾರ್ಮಿಕ ರಾಜನಾಗಿದ್ದನು. ನಿತ್ಯವೂ ಅವನ ಮನಸ್ಸು ಸತ್ಯ, ತಪಸ್ಸು ಮತ್ತು ದಾನಗಳಲ್ಲಿ ನಿರತವಾಗಿತ್ತು.
13002008a ಮದಿರಾಶ್ವ ಇತಿ ಖ್ಯಾತಃ ಪೃಥಿವ್ಯಾಂ ಪೃಥಿವೀಪತಿಃ|
13002008c ಧನುರ್ವೇದೇ ಚ ವೇದೇ ಚ ನಿರತೋ ಯೋಽಭವತ್ಸದಾ||
ಪೃಥ್ವಿಯಲ್ಲಿ ಮದಿರಾಶ್ವನೆಂದು ಖ್ಯಾತನಾದ ಆ ಪೃಥಿವೀಪತಿಯು ಸದಾ ಧನುರ್ವೇದ ಮತ್ತು ವೇದಗಳಲ್ಲಿ ನಿರತನಾಗಿದ್ದನು.
13002009a ಮದಿರಾಶ್ವಸ್ಯ ಪುತ್ರಸ್ತು ದ್ಯುತಿಮಾನ್ನಾಮ ಪಾರ್ಥಿವಃ|
13002009c ಮಹಾಭಾಗೋ ಮಹಾತೇಜಾ ಮಹಾಸತ್ತ್ವೋ ಮಹಾಬಲಃ||
ಮದಿರಾಶ್ವನ ಪುತ್ರನಾದರೋ ದ್ಯುತಿ ಎಂಬ ಹೆಸರಿನ ಪಾರ್ಥಿವನು. ಅವನು ಮಹಾಭಾಗನೂ ಮಹಾತೇಜಸ್ವಿಯೂ ಮಹಾಸತ್ತ್ವಯುತನೂ ಮಹಾಬಲಶಾಲಿಯೂ ಆಗಿದ್ದನು.
13002010a ಪುತ್ರೋ ದ್ಯುತಿಮತಸ್ತ್ವಾಸೀತ್ಸುವೀರೋ ನಾಮ ಪಾರ್ಥಿವಃ|
13002010c ಧರ್ಮಾತ್ಮಾ ಕೋಶವಾಂಶ್ಚಾಪಿ ದೇವರಾಜ ಇವಾಪರಃ||
ದ್ಯುತಿಮತನಿಗೆ ಪಾರ್ಥಿವ ಸುವೀರನೆಂಬ ಹೆಸರಿನ ಪುತ್ರನಿದ್ದನು. ಇನ್ನೊಬ್ಬ ದೇವರಾಜನಂತಿದ್ದ ಅವನು ಧರ್ಮಾತ್ಮನೂ ಕೋಶವಾನನೂ ಆಗಿದ್ದನು.
13002011a ಸುವೀರಸ್ಯ ತು ಪುತ್ರೋಽಭೂತ್ಸರ್ವಸಂಗ್ರಾಮದುರ್ಜಯಃ|
13002011c ದುರ್ಜಯೇತ್ಯಭಿವಿಖ್ಯಾತಃ ಸರ್ವಶಾಸ್ತ್ರವಿಶಾರದಃ||
ಸುವೀರನ ಪುತ್ರನು ಸರ್ವಸಂಗ್ರಾಮ ದುರ್ಜಯನಾದ ಸರ್ವಶಾಸ್ತ್ರವಿಶಾರದನಾದ ದುರ್ಜಯ ಎಂಬ ಹೆಸರಿನಿಂದ ವಿಖ್ಯಾತನು.
13002012a ದುರ್ಜಯಸ್ಯೇಂದ್ರವಪುಷಃ ಪುತ್ರೋಽಗ್ನಿಸದೃಶದ್ಯುತಿಃ|
13002012c ದುರ್ಯೋಧನೋ ನಾಮ ಮಹಾನ್ರಾಜಾಸೀದ್ರಾಜಸತ್ತಮ||
ರಾಜಸತ್ತಮ! ದುರ್ಜಯನಿಗೆ ಇಂದ್ರನಂಥಹ ಶರೀರವಿದ್ದ ಅಗ್ನಿಸದೃಶದ್ಯುತಿಯಾಗಿದ್ದ ದುರ್ಯೋಧನ ಎಂಬ ಹೆಸರಿನ ಮಹಾರಾಜನು ಪುತ್ರನಾದನು.
13002013a ತಸ್ಯೇಂದ್ರಸಮವೀರ್ಯಸ್ಯ ಸಂಗ್ರಾಮೇಷ್ವನಿವರ್ತಿನಃ|
13002013c ವಿಷಯಶ್ಚ ಪ್ರಭಾವಶ್ಚ ತುಲ್ಯಮೇವಾಭ್ಯವರ್ತತ||
ವೀರ್ಯದಲ್ಲಿ ಇಂದ್ರನ ಸಮನಾಗಿದ್ದ ಮತ್ತು ಸಂಗ್ರಾಮದಿಂದ ಹಿಮ್ಮೆಟ್ಟದಿದ್ದ ಅವನ ರಾಜ್ಯದ ಪ್ರಭಾವವು ಸರಿಸಾಟಿಯಿಲ್ಲದಂತೆ ಇದ್ದಿತ್ತು.
13002014a ರತ್ನೈರ್ಧನೈಶ್ಚ ಪಶುಭಿಃ ಸಸ್ಯೈಶ್ಚಾಪಿ ಪೃಥಗ್ವಿಧೈಃ|
13002014c ನಗರಂ ವಿಷಯಶ್ಚಾಸ್ಯ ಪ್ರತಿಪೂರ್ಣಂ ತದಾಭವತ್||
ಅವನ ರಾಜ್ಯ ಮತ್ತು ನಗರಗಳು ನಾನಾವಿಧದ ರತ್ನ, ಧನ, ಪಶುಗಳು, ಸಸ್ಯಗಳಿಂದ ಪರಿಪೂರ್ಣವಾಗಿದ್ದವು.
13002015a ನ ತಸ್ಯ ವಿಷಯೇ ಚಾಭೂತ್ಕೃಪಣೋ ನಾಪಿ ದುರ್ಗತಃ|
13002015c ವ್ಯಾಧಿತೋ ವಾ ಕೃಶೋ ವಾಪಿ ತಸ್ಮಿನ್ನಾಭೂನ್ನರಃ ಕ್ವ ಚಿತ್||
ಅವನ ರಾಜ್ಯದಲ್ಲಿ ಯಾವ ನರನೂ ಕೃಪಣನಾಗಲೀ ದುರ್ಗತನಾಗಲೀ ವ್ಯಾಧಿತನಾಗಲೀ ಕೃಶನಾಗಲೀ ಆಗಿರಲಿಲ್ಲ.
13002016a ಸುದಕ್ಷಿಣೋ ಮಧುರವಾಗನಸೂಯುರ್ಜಿತೇಂದ್ರಿಯಃ|
13002016c ಧರ್ಮಾತ್ಮಾ ಚಾನೃಶಂಸಶ್ಚ ವಿಕ್ರಾಂತೋಽಥಾವಿಕತ್ಥನಃ||
ದುರ್ಯೋಧನನು ಉದಾರನೂ, ಮಧುರಭಾಷಿಯೂ, ಅನಸೂಯನೂ, ಜಿತೇಂದ್ರಿಯನೂ, ಧರ್ಮಾತ್ಮನೂ, ಅಕ್ರೂರಿಯೂ, ವಿಕ್ರಾಂತನೂ ಆಗಿದ್ದು ಅವನು ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುತ್ತಿರಲಿಲ್ಲ.
13002017a ಯಜ್ವಾ ವದಾನ್ಯೋ ಮೇಧಾವೀ ಬ್ರಹ್ಮಣ್ಯಃ ಸತ್ಯಸಂಗರಃ|
13002017c ನ ಚಾವಮಂತಾ ದಾತಾ ಚ ವೇದವೇದಾಂಗಪಾರಗಃ||
ಅವನು ಯಾಗಶೀಲನೂ, ಮೇಧಾವಿಯೂ, ಬ್ರಹ್ಮಣ್ಯನೂ, ಸತ್ಯಸಂಗರನೂ, ವೇದವೇದಾಂಗಪಾರಂಗತನೂ ದಾನಶೀಲನೂ ಆಗಿದ್ದು ಯಾರನ್ನೂ ಅಪಮಾನಿಸುತ್ತಿರಲಿಲ್ಲ.
13002018a ತಂ ನರ್ಮದಾ ದೇವನದೀ ಪುಣ್ಯಾ ಶೀತಜಲಾ ಶಿವಾ|
13002018c ಚಕಮೇ ಪುರುಷಶ್ರೇಷ್ಠಂ ಸ್ವೇನ ಭಾವೇನ ಭಾರತ||
ಭಾರತ! ದೇವನದೀ ಪುಣ್ಯೆ ಶೀತಜಲಾ ಶಿವೆ ನರ್ಮದೆಯು ಆ ಪುರುಷಶ್ರೇಷ್ಠನನ್ನು ತನ್ನ ಬಯಕೆಯಂತೆಯೇ ವಿವಾಹವಾದಳು.
13002019a ತಸ್ಯ ಜಜ್ಞೇ ತದಾ ನದ್ಯಾಂ ಕನ್ಯಾ ರಾಜೀವಲೋಚನಾ|
13002019c ನಾಮ್ನಾ ಸುದರ್ಶನಾ ರಾಜನ್ರೂಪೇಣ ಚ ಸುದರ್ಶನಾ||
ರಾಜನ್! ಅವನಿಗೆ ಆ ನದಿಯಲ್ಲಿ ರೂಪದಲ್ಲಿ ಸುಂದರಳಾಗಿದ್ದ ರಾಜೀವಲೋಚನೆ ಸುದರ್ಶನಾ ಎಂಬ ಕನ್ಯೆಯು ಜನಿಸಿದಳು.
13002020a ತಾದೃಗ್ರೂಪಾ ನ ನಾರೀಷು ಭೂತಪೂರ್ವಾ ಯುಧಿಷ್ಠಿರ|
13002020c ದುರ್ಯೋಧನಸುತಾ ಯಾದೃಗಭವದ್ವರವರ್ಣಿನೀ||
ಯುಧಿಷ್ಠಿರ! ದುರ್ಯೋಧನಸುತೆ ಆ ವರವರ್ಣಿನಿಯು ಎಷ್ಟು ಸುಂದರಿಯಾಗಿದ್ದಳೆಂದರೆ ಅದಕ್ಕೆ ಹಿಂದೆ ನಾರಿಯರಲ್ಲಿ ಅಷ್ಟೊಂದು ರೂಪವತಿಯರು ಯಾರೂ ಇರಲಿಲ್ಲ.
13002021a ತಾಮಗ್ನಿಶ್ಚಕಮೇ ಸಾಕ್ಷಾದ್ರಾಜಕನ್ಯಾಂ ಸುದರ್ಶನಾಮ್|
13002021c ಭೂತ್ವಾ ಚ ಬ್ರಾಹ್ಮಣಃ ಸಾಕ್ಷಾದ್ವರಯಾಮಾಸ ತಂ ನೃಪಮ್||
ರಾಜಕನ್ಯೆ ಸುದರ್ಶನೆಯನ್ನು ಸಾಕ್ಷಾದ್ ಅಗ್ನಿಯೇ ಬಯಸಿ ಬ್ರಾಹ್ಮಣನ ವೇಷಧರಿಸಿ ಸಾಕ್ಷಾದ್ ರಾಜನಲ್ಲಿ ಅವಳನ್ನು ವಿವಾಹದಲ್ಲಿ ಕೊಡುವಂತೆ ಕೇಳಿಕೊಂಡನು.
13002022a ದರಿದ್ರಶ್ಚಾಸವರ್ಣಶ್ಚ ಮಮಾಯಮಿತಿ ಪಾರ್ಥಿವಃ|
13002022c ನ ದಿತ್ಸತಿ ಸುತಾಂ ತಸ್ಮೈ ತಾಂ ವಿಪ್ರಾಯ ಸುದರ್ಶನಾಮ್||
“ಇವನು ದರಿದ್ರ ಮತ್ತು ನನ್ನ ವರ್ಣಕ್ಕೆ ಸೇರಿದವನಲ್ಲ!” ಎಂದು ಪಾರ್ಥಿವನು ತನ್ನ ಸುತೆ ಸುದರ್ಶನಳನ್ನು ಆ ವಿಪ್ರನಿಗೆ ಕೊಡಲಿಲ್ಲ.
13002023a ತತೋಽಸ್ಯ ವಿತತೇ ಯಜ್ಞೇ ನಷ್ಟೋಽಭೂದ್ಧವ್ಯವಾಹನಃ|
13002023c ತತೋ ದುರ್ಯೋಧನೋ ರಾಜಾ ವಾಕ್ಯಮಾಹರ್ತ್ವಿಜಸ್ತದಾ||
ಆಗ ಕುಪಿತನಾದ ಹವ್ಯವಾಹನನು ರಾಜನು ಮಾಡುತ್ತಿದ್ದ ಯಜ್ಞದಲ್ಲಿ ಅದೃಶ್ಯನಾಗಿ ಹೋದನು. ಆಗ ರಾಜಾ ದುರ್ಯೋಧನನು ಋತ್ವಿಜರಲ್ಲಿ ಕೇಳಿದನು:
13002024a ದುಷ್ಕೃತಂ ಮಮ ಕಿಂ ನು ಸ್ಯಾದ್ಭವತಾಂ ವಾ ದ್ವಿಜರ್ಷಭಾಃ|
13002024c ಯೇನ ನಾಶಂ ಜಗಾಮಾಗ್ನಿಃ ಕೃತಂ ಕುಪುರುಷೇಷ್ವಿವ||
“ದ್ವಿಜರ್ಷಭರೇ! ನನ್ನಿಂದಾಗಲೀ ನಿಮ್ಮಿಂದಾಗಲೀ ಯಾವುದೇ ದುಷ್ಕೃತವು ನಡೆದುಹೋಗಿಲ್ಲ ತಾನೇ? ಕೆಟ್ಟಪುರುಷರಿಗೆ ಮಾಡಿದ ಉಪಕಾರವು ಹಾಳಾಗಿಹೋಗುವಂತೆ ಯಾವ ಕೃತ್ಯದಿಂದ ಈ ಅಗ್ನಿಯು ನಾಶವಾಗಿಹೋಯಿತು?
13002025a ನ ಹ್ಯಲ್ಪಂ ದುಷ್ಕೃತಂ ನೋಽಸ್ತಿ ಯೇನಾಗ್ನಿರ್ನಾಶಮಾಗತಃ|
13002025c ಭವತಾಂ ವಾಥ ವಾ ಮಹ್ಯಂ ತತ್ತ್ವೇನೈತದ್ವಿಮೃಶ್ಯತಾಮ್||
ಅಲ್ಪ ದುಷ್ಕೃತ್ಯಕಾಗಿ ಈ ಅಗ್ನಿಯು ನಾಶಹೊಂದಲಿಲ್ಲ. ನನ್ನಿಂದ ಅಥವಾ ನಿಮ್ಮಿಂದ ಏನಾದರೂ ದುಷ್ಕರ್ಮವು ನಡೆದುಹೋಯಿತೇ ಎಂದು ನೀವು ವಿಮರ್ಶಿಸಬೇಕು.”
13002026a ಏತದ್ರಾಜ್ಞೋ ವಚಃ ಶ್ರುತ್ವಾ ವಿಪ್ರಾಸ್ತೇ ಭರತರ್ಷಭ|
13002026c ನಿಯತಾ ವಾಗ್ಯತಾಶ್ಚೈವ ಪಾವಕಂ ಶರಣಂ ಯಯುಃ||
ಭರತರ್ಷಭ! ರಾಜನ ಈ ಮಾತನ್ನು ಕೇಳಿ ಆ ವಿಪ್ರರು ನಿಯಮದಿಂದಲೂ ಮಂತ್ರಗಳಿಂದಲೂ ಪಾವಕನಿಗೇ ಶರಣು ಹೋದರು.
13002027a ತಾನ್ದರ್ಶಯಾಮಾಸ ತದಾ ಭಗವಾನ್ ಹವ್ಯವಾಹನಃ|
13002027c ಸ್ವಂ ರೂಪಂ ದೀಪ್ತಿಮತ್ಕೃತ್ವಾ ಶರದರ್ಕಸಮದ್ಯುತಿಃ||
ಭಗವಾನ್ ಹವ್ಯವಾಹನನು ತನ್ನ ರೂಪವನ್ನು ಶರತ್ಕಾಲದ ಸೂರ್ಯನಂತೆ ದೀಪ್ತವನ್ನಾಗಿಸಿಕೊಂಡು ಬೆಳಗುತ್ತಾ ಅವರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡನು.
13002028a ತತೋ ಮಹಾತ್ಮಾ ತಾನಾಹ ದಹನೋ ಬ್ರಾಹ್ಮಣರ್ಷಭಾನ್|
13002028c ವರಯಾಮ್ಯಾತ್ಮನೋಽರ್ಥಾಯ ದುರ್ಯೋಧನಸುತಾಮಿತಿ||
ಆಗ ಮಹಾತ್ಮ ದಹನನು ಬ್ರಾಹ್ಮಣರ್ಷಭರಿಗೆ “ದುರ್ಯೋಧನನ ಸುತೆಯನ್ನು ನನಗಾಗಿ ನಾನು ವರಿಸಿದ್ದೇನೆ” ಎಂದನು.
13002029a ತತಸ್ತೇ ಕಾಲ್ಯಮುತ್ಥಾಯ ತಸ್ಮೈ ರಾಜ್ಞೇ ನ್ಯವೇದಯನ್|
13002029c ಬ್ರಾಹ್ಮಣಾ ವಿಸ್ಮಿತಾಃ ಸರ್ವೇ ಯದುಕ್ತಂ ಚಿತ್ರಭಾನುನಾ||
ಚಿತ್ರಭಾನುವು ಹೇಳಿದುದನ್ನು ಕೇಳಿ ಬ್ರಾಹ್ಮಣರೆಲ್ಲರೂ ವಿಸ್ಮಿತರಾದರು. ಬೆಳಿಗ್ಗೆ ಎದ್ದು ಅವರು ಅದನ್ನು ರಾಜನಿಗೆ ನಿವೇದಿಸಿದರು.
13002030a ತತಃ ಸ ರಾಜಾ ತಚ್ಚ್ರುತ್ವಾ ವಚನಂ ಬ್ರಹ್ಮವಾದಿನಾಮ್|
13002030c ಅವಾಪ್ಯ ಪರಮಂ ಹರ್ಷಂ ತಥೇತಿ ಪ್ರಾಹ ಬುದ್ಧಿಮಾನ್||
ಬ್ರಹ್ಮವಾದಿಗಳ ಆ ಮಾತನ್ನು ಕೇಳಿ ಬುದ್ಧಿಮಾನ್ ರಾಜನು ಪರಮ ಹರ್ಷವನ್ನು ತಾಳಿ “ಹಾಗೆಯೇ ಆಗಲಿ!” ಎಂದನು.
13002031a ಪ್ರಾಯಾಚತ ನೃಪಃ ಶುಲ್ಕಂ ಭಗವಂತಂ ವಿಭಾವಸುಮ್|
13002031c ನಿತ್ಯಂ ಸಾಂನಿಧ್ಯಮಿಹ ತೇ ಚಿತ್ರಭಾನೋ ಭವೇದಿತಿ|
13002031e ತಮಾಹ ಭಗವಾನಗ್ನಿರೇವಮಸ್ತ್ವಿತಿ ಪಾರ್ಥಿವಮ್||
“ಚಿತ್ರಭಾನೋ! ನಿತ್ಯವೂ ಇಲ್ಲಿ ನಿನ್ನ ಸಾನ್ನಿಧ್ಯವು ಇರಲಿ!” ಎಂದು ನೃಪನು ಶುಲ್ಕವಾಗಿ ಭಗವಂತ ವಿಭಾವಸುವಿನಲ್ಲಿ ಯಾಚಿಸಿದನು. ಭಗವಾನ್ ಅಗ್ನಿಯೂ ಕೂಡ ಪಾರ್ಥಿವನಿಗೆ “ಹಾಗೆಯೇ ಆಗಲಿ” ಎಂದನು.
13002032a ತತಃ ಸಾಂನಿಧ್ಯಮಧ್ಯಾಪಿ ಮಾಹಿಷ್ಮತ್ಯಾಂ ವಿಭಾವಸೋಃ|
13002032c ದೃಷ್ಟಂ ಹಿ ಸಹದೇವೇನ ದಿಶೋ ವಿಜಯತಾ ತದಾ||
ಮಾಹಿಷ್ಮತಿಯಲ್ಲಿ ಸಾನ್ನಿಧ್ಯನಾಗಿದ್ದ ವಿಭಾವಸುವನ್ನು ದಿಗ್ವಿಜಯದ ಸಮಯದಲ್ಲಿ ಸಹದೇವನು ಕಂಡಿದ್ದನಷ್ಟೇ!
13002033a ತತಸ್ತಾಂ ಸಮಲಂಕೃತ್ಯ ಕನ್ಯಾಮಹತವಾಸಸಮ್|
13002033c ದದೌ ದುರ್ಯೋಧನೋ ರಾಜಾ ಪಾವಕಾಯ ಮಹಾತ್ಮನೇ||
ಆಗ ರಾಜಾ ದುರ್ಯೋಧನನು ಆ ಕನ್ಯೆಯನ್ನು ಮಹುಮೂಲ್ಯ ವಸ್ತ್ರಗಳಿಂದ ಸಮಲಂಕರಿಸಿ ಮಹಾತ್ಮ ಪಾವಕನಿಗೆ ನೀಡಿದನು.
13002034a ಪ್ರತಿಜಗ್ರಾಹ ಚಾಗ್ನಿಸ್ತಾಂ ರಾಜಪುತ್ರೀಂ ಸುದರ್ಶನಾಮ್|
13002034c ವಿಧಿನಾ ವೇದದೃಷ್ಟೇನ ವಸೋರ್ಧಾರಾಮಿವಾಧ್ವರೇ||
ಅಗ್ನಿಯು ರಾಜಪುತ್ರಿ ಸುದರ್ಶನೆಯನ್ನು ವೇದದೃಷ್ಟ ವಿಧಿಗಳಿಂದ ಅಧ್ವರದಲ್ಲಿ ವಸೋರ್ಧಾರೆಯನ್ನು ಹೇಗೋ ಹಾಗೆ ಸ್ವೀಕರಿಸಿದನು.
13002035a ತಸ್ಯಾ ರೂಪೇಣ ಶೀಲೇನ ಕುಲೇನ ವಪುಷಾ ಶ್ರಿಯಾ|
13002035c ಅಭವತ್ಪ್ರೀತಿಮಾನಗ್ನಿರ್ಗರ್ಭಂ ತಸ್ಯಾಂ ಸಮಾದಧೇ||
ಅವಳ ರೂಪ, ಶೀಲ, ಕುಲ ಮತ್ತು ಮುಖದ ಕಾಂತಿಯಿಂದ ಅತ್ಯಂತ ಪ್ರೀತಿಮಾನನಾದ ಅಗ್ನಿಯು ಅವಳಲ್ಲಿ ಗರ್ಭವನ್ನಿರಿಸಿದನು.
13002036a ತಸ್ಯಾಂ ಸಮಭವತ್ಪುತ್ರೋ ನಾಮ್ನಾಗ್ನೇಯಃ ಸುದರ್ಶನಃ|
13002036c ಶಿಶುರೇವಾಧ್ಯಗಾತ್ಸರ್ವಂ ಸ ಚ ಬ್ರಹ್ಮ ಸನಾತನಮ್||
ಅವಳಲ್ಲಿ ಅಗ್ನಿಯ ಮಗ ಸುದರ್ಶನ ಎಂಬ ಹೆಸರಿನ ಪುತ್ರನು ಜನಿಸಿದನು. ಶಿಶುವಾಗಿದ್ದಾಗಲೇ ಅವನು ಸರ್ವ ಸನಾತನ ಬ್ರಹ್ಮ[1]ವನ್ನೂ ಅಧ್ಯಯನ ಮಾಡಿದನು.
13002037a ಅಥೌಘವಾನ್ನಾಮ ನೃಪೋ ನೃಗಸ್ಯಾಸೀತ್ಪಿತಾಮಹಃ|
13002037c ತಸ್ಯಾಪ್ಯೋಘವತೀ ಕನ್ಯಾ ಪುತ್ರಶ್ಚೌಘರಥೋಽಭವತ್||
ಅದೇ ಕಾಲದಲ್ಲಿ ನೃಗನ ಪಿತಾಮಹ ಓಘವಾನ್ ಎಂಬ ಹೆಸರಿನ ರಾಜನಿದ್ದನು. ಅವನಿಗೆ ಓಘವತೀ ಎಂಬ ಕನ್ಯೆಯೂ ಓಘರಥನೆಂಬ ಪುತ್ರನೂ ಆದರು.
13002038a ತಾಮೋಘವಾನ್ದದೌ ತಸ್ಮೈ ಸ್ವಯಮೋಘವತೀಂ ಸುತಾಮ್|
13002038c ಸುದರ್ಶನಾಯ ವಿದುಷೇ ಭಾರ್ಯಾರ್ಥೇ ದೇವರೂಪಿಣೀಮ್||
ಸ್ವಯಂ ಓಘವಾನನು ತನ್ನ ಸುತೆ ದೇವರೂಪಿಣೀ ಓಘವತಿಯನ್ನು ಸುದರ್ಶನನಿಗೆ ಪತ್ನಿಯನ್ನಾಗಿ ನೀಡಿದನು.
13002039a ಸ ಗೃಹಸ್ಥಾಶ್ರಮರತಸ್ತಯಾ ಸಹ ಸುದರ್ಶನಃ|
13002039c ಕುರುಕ್ಷೇತ್ರೇಽವಸದ್ರಾಜನ್ನೋಘವತ್ಯಾ ಸಮನ್ವಿತಃ||
ರಾಜನ್! ಓಘವತಿಯನ್ನು ಕೂಡಿ ಗೃಹಸ್ಥಾಶ್ರಮನಿರತನಾದ ಸುದರ್ಶನನು ಕುರುಕ್ಷೇತ್ರದಲ್ಲಿ ವಾಸಿಸುತ್ತಿದ್ದನು.
13002040a ಗೃಹಸ್ಥಶ್ಚಾವಜೇಷ್ಯಾಮಿ ಮೃತ್ಯುಮಿತ್ಯೇವ ಸ ಪ್ರಭೋ|
13002040c ಪ್ರತಿಜ್ಞಾಮಕರೋದ್ಧೀಮಾನ್ದೀಪ್ತತೇಜಾ ವಿಶಾಂ ಪತೇ||
ಪ್ರಭೋ! ವಿಶಾಂಪತೇ! ಗೃಹಸ್ಥಾಶ್ರಮದಲ್ಲಿದ್ದುಕೊಂಡು ಮೃತ್ಯುವನ್ನು ಜಯಿಸುತ್ತೇನೆ ಎಂಬ ಪ್ರತಿಜ್ಞೆಯನ್ನು ಆ ಧೀಮಾನ್ ದೀಪ್ತತೇಜಸ್ವಿಯು ಮಾಡಿದ್ದನು.
13002041a ತಾಮಥೌಘವತೀಂ ರಾಜನ್ಸ ಪಾವಕಸುತೋಽಬ್ರವೀತ್|
13002041c ಅತಿಥೇಃ ಪ್ರತಿಕೂಲಂ ತೇ ನ ಕರ್ತವ್ಯಂ ಕಥಂ ಚನ||
ರಾಜನ್! ಆ ಪಾವಕಸುತನು ಓಘವತಿಗೆ ಹೇಳಿದನು: “ಅತಿಥಿಗಳಿಗೆ ಪ್ರತಿಕೂಲವಾಗುವಂಥಹುದನ್ನು ಎಂದೂ ನೀನು ಮಾಡಬಾರದು.
13002042a ಯೇನ ಯೇನ ಚ ತುಷ್ಯೇತ ನಿತ್ಯಮೇವ ತ್ವಯಾತಿಥಿಃ|
13002042c ಅಪ್ಯಾತ್ಮನಃ ಪ್ರದಾನೇನ ನ ತೇ ಕಾರ್ಯಾ ವಿಚಾರಣಾ||
ಅತಿಥಿಯು ಯಾವುದರಿಂದ ತೃಪ್ತಿಹೊಂದುತ್ತಾನೋ ಅದನ್ನು ನಿತ್ಯವೂ ಅವನಿಗೆ ನೀಡಬೇಕು. ಒಂದು ವೇಳೆ ನಿನ್ನನ್ನು ನೀನು ಕೊಡಬೇಕಾಗಿ ಬಂದರೂ ಅದರಲ್ಲಿ ವಿಚಾರಮಾಡಬಾರದು.
13002043a ಏತದ್ವ್ರತಂ ಮಮ ಸದಾ ಹೃದಿ ಸಂಪರಿವರ್ತತೇ|
13002043c ಗೃಹಸ್ಥಾನಾಂ ಹಿ ಸುಶ್ರೋಣಿ ನಾತಿಥೇರ್ವಿದ್ಯತೇ ಪರಮ್||
ಈ ವ್ರತವು ಸದಾ ನನ್ನ ಹೃದಯದಲ್ಲಿರುತ್ತದೆ. ಸುಶ್ರೋಣಿ! ಗೃಹಸ್ಥರಿಗೆ ಅತಿಥಿಯೇ ಎಲ್ಲಕ್ಕಿಂತ ಹೆಚ್ಚಿನವನು.
13002044a ಪ್ರಮಾಣಂ ಯದಿ ವಾಮೋರು ವಚಸ್ತೇ ಮಮ ಶೋಭನೇ|
13002044c ಇದಂ ವಚನಮವ್ಯಗ್ರಾ ಹೃದಿ ತ್ವಂ ಧಾರಯೇಃ ಸದಾ||
ವಾಮೋರು! ಶೋಭನೇ! ನನ್ನ ಮಾತು ನಿನಗೆ ಪ್ರಮಾಣಯುಕ್ತವಾಗಿದ್ದರೆ ಈ ಮಾತನ್ನು ಅನನ್ಯ ಮನಸ್ಕಳಾಗಿ ಸದಾ ನಿನ್ನ ಹೃದಯದಲ್ಲಿ ಇಟ್ಟುಕೊಂಡಿರು.
13002045a ನಿಷ್ಕ್ರಾಂತೇ ಮಯಿ ಕಲ್ಯಾಣಿ ತಥಾ ಸಂನಿಹಿತೇಽನಘೇ|
13002045c ನಾತಿಥಿಸ್ತೇಽವಮಂತವ್ಯಃ ಪ್ರಮಾಣಂ ಯದ್ಯಹಂ ತವ||
ಕಲ್ಯಾಣಿ! ಅನಘೇ! ಒಂದು ವೇಳೆ ನಾನು ಪ್ರಾಮಾಣಭೂತನೆಂದೆನಿಸಿದರೆ ನಾನು ಹೊರಗಿರಲಿ ಅಥವಾ ನಿನ್ನ ಜೊತೆಯೇ ಇರಲಿ ಅತಿಥಿಯನ್ನು ನೀನು ಅಪಮಾನಿಸಬಾರದು.”
13002046a ತಮಬ್ರವೀದೋಘವತೀ ಯತಾ ಮೂರ್ಧ್ನಿ ಕೃತಾಂಜಲಿಃ|
13002046c ನ ಮೇ ತ್ವದ್ವಚನಾತ್ಕಿಂ ಚಿದಕರ್ತವ್ಯಂ ಕಥಂ ಚನ||
ಓಘವತಿಯು ತನ್ನ ನೆತ್ತಿಯ ಮೇಲೆ ಕೈಜೋಡಿಸಿ “ನಿನ್ನ ಮಾತಿನಂತೆ ಎಂದೂ ನಾನು ಮಾಡದೇ ಇರುವುದಿಲ್ಲ” ಎಂದು ಅವನಿಗೆ ಹೇಳಿದಳು.
13002047a ಜಿಗೀಷಮಾಣಂ ತು ಗೃಹೇ ತದಾ ಮೃತ್ಯುಃ ಸುದರ್ಶನಮ್|
13002047c ಪೃಷ್ಠತೋಽನ್ವಗಮದ್ರಾಜನ್ರಂಧ್ರಾನ್ವೇಷೀ ತದಾ ಸದಾ||
ಆಗ ಸುದರ್ಶನನ ಗೃಹಸ್ಥಧರ್ಮವನ್ನು ಪರೀಕ್ಷಿಸಲು ಮೃತ್ಯುವು ಸದಾ ಅವನ ಹಿಂದೆಯೇ ಇದ್ದು ಅವನಲ್ಲುಂಟಾಗಬಹುದಾದ ನ್ಯೂನತೆಗಳನ್ನೇ ಹುಡುಕುತ್ತಿದ್ದನು.
13002048a ಇಧ್ಮಾರ್ಥಂ ತು ಗತೇ ತಸ್ಮಿನ್ನಗ್ನಿಪುತ್ರೇ ಸುದರ್ಶನೇ|
13002048c ಅತಿಥಿರ್ಬ್ರಾಹ್ಮಣಃ ಶ್ರೀಮಾಂಸ್ತಾಮಾಹೌಘವತೀಂ ತದಾ||
ಅಗ್ನಿಪುತ್ರ ಸುದರ್ಶನನು ಸಮಿತ್ತಿಗಾಗಿ ಹೋಗಿರಲು ಶ್ರೀಮಾನ್ ಅತಿಥಿ ಬ್ರಾಹ್ಮಣನೊಬ್ಬನು ಓಘವತಿಯಲ್ಲಿ ಹೇಳಿದನು:
13002049a ಆತಿಥ್ಯಂ ದತ್ತಮಿಚ್ಚಾಮಿ ತ್ವಯಾದ್ಯ ವರವರ್ಣಿನಿ|
13002049c ಪ್ರಮಾಣಂ ಯದಿ ಧರ್ಮಸ್ತೇ ಗೃಹಸ್ಥಾಶ್ರಮಸಂಮತಃ||
“ವರವರ್ಣಿನಿ! ಗೃಹಸ್ಥಾಶ್ರಮ ಸಮ್ಮತ ಧರ್ಮವು ನಿನಗೆ ಪ್ರಮಾಣಭೂತವಾಗಿದ್ದರೆ ನಿನ್ನಿಂದ ಇಂದು ಆತಿಥ್ಯವನ್ನು ಪಡೆಯಲು ಇಚ್ಛಿಸುತ್ತೇನೆ.”
13002050a ಇತ್ಯುಕ್ತಾ ತೇನ ವಿಪ್ರೇಣ ರಾಜಪುತ್ರೀ ಯಶಸ್ವಿನೀ|
13002050c ವಿಧಿನಾ ಪ್ರತಿಜಗ್ರಾಹ ವೇದೋಕ್ತೇನ ವಿಶಾಂ ಪತೇ||
ವಿಶಾಂಪತೇ! ಆ ವಿಪ್ರನು ಹೀಗೆ ಹೇಳಲು ಯಶಸ್ವಿನೀ ರಾಜಪುತ್ರಿಯು ವೇದೋಕ್ತ ವಿಧಿಗಳಿಂದ ಅವನನ್ನು ಸ್ವಾಗತಿಸಿದಳು.
13002051a ಆಸನಂ ಚೈವ ಪಾದ್ಯಂ ಚ ತಸ್ಮೈ ದತ್ತ್ವಾ ದ್ವಿಜಾತಯೇ|
13002051c ಪ್ರೋವಾಚೌಘವತೀ ವಿಪ್ರಂ ಕೇನಾರ್ಥಃ ಕಿಂ ದದಾಮಿ ತೇ||
ದ್ವಿಜಾತಿಯವನಿಗೆ ಆಸನ, ಪಾದ್ಯಗಳನ್ನಿತ್ತು ಓಘವತಿಯು ವಿಪ್ರನಿಗೆ “ನಿನಗೆ ಏನನ್ನು ಕೊಡಲಿ?” ಎಂದು ಕೇಳಿದಳು.
13002052a ತಾಮಬ್ರವೀತ್ತತೋ ವಿಪ್ರೋ ರಾಜಪುತ್ರೀಂ ಸುದರ್ಶನಾಮ್|
13002052c ತ್ವಯಾ ಮಮಾರ್ಥಃ ಕಲ್ಯಾಣಿ ನಿರ್ವಿಶಂಕೇ ತದಾಚರ||
ಆ ರಾಜಪುತ್ರಿ ಸುಂದರಿಗೆ ಹೇಳಿದನು: “ಕಲ್ಯಾಣೀ! ನೀನು ನನಗಾಗಿ ನಿರ್ವಿಶಂಕಳಾಗಿ ಈ ಕಾರ್ಯವನ್ನು ಮಾಡಿಕೊಡು.
13002053a ಯದಿ ಪ್ರಮಾಣಂ ಧರ್ಮಸ್ತೇ ಗೃಹಸ್ಥಾಶ್ರಮಸಂಮತಃ|
13002053c ಪ್ರದಾನೇನಾತ್ಮನೋ ರಾಜ್ಞಿ ಕರ್ತುಮರ್ಹಸಿ ಮೇ ಪ್ರಿಯಮ್||
ಒಂದು ವೇಳೆ ಗೃಹಸ್ಥಾಶ್ರಮ ಸಮ್ಮತ ಧರ್ಮದ ಪ್ರಮಾಣವು ನಿನ್ನಲ್ಲಿದ್ದರೆ ನಿನ್ನನ್ನು ನೀನು ನನಗೆ ಕೊಡು. ರಾಜ್ಞಿ! ನನ್ನನ್ನು ಪ್ರೀತಿಸು!”
13002054a ತಥಾ ಸಂಚಂದ್ಯಮಾನೋಽನ್ಯೈರೀಪ್ಸಿತೈರ್ನೃಪಕನ್ಯಯಾ|
13002054c ನಾನ್ಯಮಾತ್ಮಪ್ರದಾನಾತ್ಸ ತಸ್ಯಾ ವವ್ರೇ ವರಂ ದ್ವಿಜಃ||
ಆ ನೃಪಕನ್ಯೆಯು ಬೇರೆ ಯಾವುದನ್ನಾದರೂ ಇಚ್ಛಿಸು ಎಂದು ಎಷ್ಟೇ ಕೇಳಿಕೊಂಡರೂ ಆತ್ಮಪ್ರದಾನವಲ್ಲದೇ ಬೇರೆ ಯಾವುದನ್ನೂ ಅವಳಿಂದ ಆ ದ್ವಿಜನು ಕೇಳಲಿಲ್ಲ.
13002055a ಸಾ ತು ರಾಜಸುತಾ ಸ್ಮೃತ್ವಾ ಭರ್ತುರ್ವಚನಮಾದಿತಃ|
13002055c ತಥೇತಿ ಲಜ್ಜಮಾನಾ ಸಾ ತಮುವಾಚ ದ್ವಿಜರ್ಷಭಮ್||
ಆ ರಾಜಸುತೆಯಾದರೋ ಮೊದಲೇ ಹೇಳಿದ್ದ ಪತಿಯ ವಚನವನ್ನು ನೆನಪಿಸಿಕೊಂಡು ಲಜ್ಜಿತಳಾಗಿ ದ್ವಿಜರ್ಷಭನಿಗೆ “ಹಾಗೆಯೇ ಆಗಲಿ!” ಎಂದಳು.
13002056a ತತೋ ರಹಃ ಸ ವಿಪ್ರರ್ಷಿಃ ಸಾ ಚೈವೋಪವಿವೇಶ ಹ|
13002056c ಸಂಸ್ಮೃತ್ಯ ಭರ್ತುರ್ವಚನಂ ಗೃಹಸ್ಥಾಶ್ರಮಕಾಂಕ್ಷಿಣಃ||
ಗೃಹಸ್ಥಾಶ್ರಮದಲ್ಲಿ ಆಸಕ್ತನಾಗಿದ್ದ ಪತಿಯ ಮಾತನ್ನು ಗೌರವಿಸಿ ಅವಳು ಒಪ್ಪಿಕೊಂಡಳು. ಆಗ ವಿಪ್ರರ್ಷಿಯು ನಸುನಗುತ್ತಾ ಅವಳೊಡನೆ ಮನೆಯನ್ನು ಪ್ರವೇಶಿಸಿದನು.
13002057a ಅಥೇಧ್ಮಾನ್ಸಮುಪಾದಾಯ ಸ ಪಾವಕಿರುಪಾಗಮತ್|
13002057c ಮೃತ್ಯುನಾ ರೌದ್ರಭಾವೇನ ನಿತ್ಯಂ ಬಂಧುರಿವಾನ್ವಿತಃ||
ಅಷ್ಟರಲ್ಲಿ ಸಮಿತ್ತುಗಳನ್ನು ಎತ್ತಿಕೊಂಡು ಪಾವಕಿಯು ಹಿಂದಿರುಗಿದನು. ರೌದ್ರಭಾವದ ಮೃತ್ಯುವು ನಿತ್ಯದಂತೆ ಅವನ ಬಂಧುವಿನಂತೆ ಹಿಂಬಾಲಿಸಿ ಬಂದನು.
13002058a ತತಸ್ತ್ವಾಶ್ರಮಮಾಗಮ್ಯ ಸ ಪಾವಕಸುತಸ್ತದಾ|
13002058c ತಾಮಾಜುಹಾವೌಘವತೀಂ ಕ್ವಾಸಿ ಯಾತೇತಿ ಚಾಸಕೃತ್||
ಆಶ್ರಮಕ್ಕೆ ಬಂದು ಪಾವಕಸುತನು “ಓಘವತೀ! ಎಲ್ಲಿದ್ದೀಯೆ?” ಎಂದು ಕೂಗಿ ಕರೆದನು.
13002059a ತಸ್ಮೈ ಪ್ರತಿವಚಃ ಸಾ ತು ಭರ್ತ್ರೇ ನ ಪ್ರದದೌ ತದಾ|
13002059c ಕರಾಭ್ಯಾಂ ತೇನ ವಿಪ್ರೇಣ ಸ್ಪೃಷ್ಟಾ ಭರ್ತೃವ್ರತಾ ಸತೀ||
ಆಗ ಆ ವಿಪ್ರನ ಕೈಗಳಿಂದ ಮುಟ್ಟಲ್ಪಟ್ಟ ಪತಿವ್ರತೆ ಸತಿಯು ಪತಿಗೆ ಪ್ರತ್ಯುತ್ತರವನ್ನು ನೀಡಲಿಲ್ಲ.
13002060a ಉಚ್ಚಿಷ್ಟಾಸ್ಮೀತಿ ಮನ್ವಾನಾ ಲಜ್ಜಿತಾ ಭರ್ತುರೇವ ಚ|
13002060c ತೂಷ್ಣೀಂಭೂತಾಭವತ್ಸಾಧ್ವೀ ನ ಚೋವಾಚಾಥ ಕಿಂ ಚನ||
ತಾನು ಉಚ್ಚಿಷ್ಟಳಾಗಿಬಿಟ್ಟೆ ಎಂದು ಲಜ್ಜಿತಳಾದ ಆ ಸಾಧ್ವಿಯು ಸುಮ್ಮನಾಗಿದ್ದು ಪತಿಗೆ ಏನನ್ನೂ ಹೇಳಲಿಲ್ಲ.
13002061a ಅಥ ತಾಂ ಪುನರೇವೇದಂ ಪ್ರೋವಾಚ ಸ ಸುದರ್ಶನಃ|
13002061c ಕ್ವ ಸಾ ಸಾಧ್ವೀ ಕ್ವ ಸಾ ಯಾತಾ ಗರೀಯಃ ಕಿಮತೋ ಮಮ||
ಆಗ ಸುದರ್ಶನನು ಪುನಃ ಅವಳನ್ನು ಕರೆದು ಹೇಳಿದನು: “ಸಾಧ್ವೀ ಎಲ್ಲಿರುವೆ? ನನಗಿಂತಲೂ ಹೆಚ್ಚಿನದು ಏನಿದೆ?
13002062a ಪತಿವ್ರತಾ ಸತ್ಯಶೀಲಾ ನಿತ್ಯಂ ಚೈವಾರ್ಜವೇ ರತಾ|
13002062c ಕಥಂ ನ ಪ್ರತ್ಯುದೇತ್ಯದ್ಯ ಸ್ಮಯಮಾನಾ ಯಥಾ ಪುರಾ||
ನಿತ್ಯವೂ ನನ್ನ ಸೇವೆಯಲ್ಲಿಯೇ ನಿರತಳಾಗಿರುವ ಪತಿವ್ರತೆ ಸತ್ಯಶೀಲೆಯು ಇಂದು ಹೇಗೆ ನಗುತ್ತಾ ನನ್ನನ್ನು ಎದಿರುಗೊಳ್ಳುತ್ತಿಲ್ಲ?”
13002063a ಉಟಜಸ್ಥಸ್ತು ತಂ ವಿಪ್ರಃ ಪ್ರತ್ಯುವಾಚ ಸುದರ್ಶನಮ್|
13002063c ಅತಿಥಿಂ ವಿದ್ಧಿ ಸಂಪ್ರಾಪ್ತಂ ಪಾವಕೇ ಬ್ರಾಹ್ಮಣಂ ಚ ಮಾಮ್||
ಒಳಗಿದ್ದ ವಿಪ್ರನು ಸುದರ್ಶನನಿಗೆ ಪ್ರತ್ಯುತ್ತರಿಸಿದನು: “ಪಾವಕೇ! ನಾನು ನಿನ್ನ ಮನೆಗೆ ಬಂದಿರುವ ಅತಿಥಿ ಬ್ರಾಹ್ಮಣನೆಂದು ತಿಳಿ.
13002064a ಅನಯಾ ಚಂದ್ಯಮಾನೋಽಹಂ ಭಾರ್ಯಯಾ ತವ ಸತ್ತಮ|
13002064c ತೈಸ್ತೈರತಿಥಿಸತ್ಕಾರೈರಾರ್ಜವೇಽಸ್ಯಾ ದೃಢಂ ಮನಃ||
ಸತ್ತಮ! ಈ ನಿನ್ನ ಭಾರ್ಯೆಯು ಅತಿಥಿಸತ್ಕಾರದ ಮೂಲಕ ನನ್ನ ಇಚ್ಛೆಯನ್ನು ಪೂರೈಸುವುದಾಗಿ ಹೇಳಿದಳು. ಅಗ ದೃಢ ಮನಸ್ಸಿನಿಂದ ನಾನು ಇವಳನ್ನೇ ವರಿಸಿದೆ.
13002065a ಅನೇನ ವಿಧಿನಾ ಸೇಯಂ ಮಾಮರ್ಚತಿ ಶುಭಾನನಾ|
13002065c ಅನುರೂಪಂ ಯದತ್ರಾದ್ಯ ತದ್ಭವಾನ್ವಕ್ತುಮರ್ಹತಿ||
ಈ ಶುಭಾನನೆಯು ವಿಧಿವತ್ತಾಗಿ ನನ್ನೊಡನಿದ್ದಾಳೆ. ಈ ಸಮಯದಲ್ಲಿ ನಿನಗೆ ಅನುರೂಪವಾಗಿ ಕಂಡದ್ದನ್ನು ಹೇಳಬಹುದು.”
13002066a ಕೂಟಮುದ್ಗರಹಸ್ತಸ್ತು ಮೃತ್ಯುಸ್ತಂ ವೈ ಸಮನ್ವಯಾತ್|
13002066c ಹೀನಪ್ರತಿಜ್ಞಮತ್ರೈನಂ ವಧಿಷ್ಯಾಮೀತಿ ಚಿಂತಯನ್||
“ಈಗ ಪ್ರತಿಜ್ಞಾಹೀನನಾಗುವ ಇವನನ್ನು ವಧಿಸುತ್ತೇನೆ” ಎಂದು ಯೋಚಿಸಿ ಮೃತ್ಯುವು ಲೋಹದ ದಂಡವನ್ನು ಹಿಡಿದು ಅವನ ಹಿಂದೆಯೇ ನಿಂತಿದ್ದನು.
13002067a ಸುದರ್ಶನಸ್ತು ಮನಸಾ ಕರ್ಮಣಾ ಚಕ್ಷುಷಾ ಗಿರಾ|
13002067c ತ್ಯಕ್ತೇರ್ಷ್ಯಸ್ತ್ಯಕ್ತಮನ್ಯುಶ್ಚ ಸ್ಮಯಮಾನೋಽಬ್ರವೀದಿದಮ್||
ಸುದರ್ಶನನಾದರೋ ಮನಸ್ಸು-ಕರ್ಮ-ಕಣ್ಣು ಮತ್ತು ಮಾತುಗಳಿಂದ ಈರ್ಷ್ಯೆ-ಕೋಪಗಳನ್ನು ತ್ಯಜಿಸಿ ಮುಗುಳ್ನಗುತ್ತಾ ಈ ಮಾತನ್ನಾಡಿದನು:
13002068a ಸುರತಂ ತೇಽಸ್ತು ವಿಪ್ರಾಗ್ರ್ಯ ಪ್ರೀತಿರ್ಹಿ ಪರಮಾ ಮಮ|
13002068c ಗೃಹಸ್ಥಸ್ಯ ಹಿ ಧರ್ಮೋಽಗ್ರ್ಯಃ ಸಂಪ್ರಾಪ್ತಾತಿಥಿಪೂಜನಮ್||
“ವಿಪ್ರಾಗ್ರ್ಯ! ನಿನ್ನ ಸುರತೇಚ್ಛೆಯು ಪೂರ್ಣವಾಗಲಿ. ಇದರಿಂದ ನನಗೆ ಪರಮ ಸಂತೋಷವೇ ಆಗಿದೆ. ಆಗಮಿಸಿದ ಅತಿಥಿಯ ಪೂಜೆಯೇ ಗೃಹಸ್ಥನ ಅಗ್ರ ಧರ್ಮವಾಗಿದೆ.
13002069a ಅತಿಥಿಃ ಪೂಜಿತೋ ಯಸ್ಯ ಗೃಹಸ್ಥಸ್ಯ ತು ಗಚ್ಚತಿ|
13002069c ನಾನ್ಯಸ್ತಸ್ಮಾತ್ಪರೋ ಧರ್ಮ ಇತಿ ಪ್ರಾಹುರ್ಮನೀಷಿಣಃ||
ಯಾರ ಮನೆಯಿಂದ ಪೂಜಿತನಾಗಿ ಅತಿಥಿಯು ಹೋಗುವನೋ ಅವನ ಧರ್ಮಕ್ಕಿಂತ ಹೆಚ್ಚಿನ ಧರ್ಮವು ಬೇರೆಯಿಲ್ಲ ಎಂದು ಮನೀಷಿಣರು ಹೇಳುತ್ತಾರೆ.
13002070a ಪ್ರಾಣಾ ಹಿ ಮಮ ದಾರಾಶ್ಚ ಯಚ್ಚಾನ್ಯದ್ವಿದ್ಯತೇ ವಸು|
13002070c ಅತಿಥಿಭ್ಯೋ ಮಯಾ ದೇಯಮಿತಿ ಮೇ ವ್ರತಮಾಹಿತಮ್||
ನನ್ನ ಪ್ರಾಣ, ಪತ್ನಿ ಮತ್ತು ಸಂಪತ್ತು ಎಲ್ಲವನ್ನೂ ಹಿಂದು-ಮುಂದು ನೋಡದೇ ಅತಿಥಿಗಳಿಗೆ ಕೊಡಬೇಕೆಂಬುದು ನನ್ನ ವ್ರತವಾಗಿದೆ.
13002071a ನಿಃಸಂದಿಗ್ಧಂ ಮಯಾ ವಾಕ್ಯಮೇತತ್ತೇ ಸಮುದಾಹೃತಮ್|
13002071c ತೇನಾಹಂ ವಿಪ್ರ ಸತ್ಯೇನ ಸ್ವಯಮಾತ್ಮಾನಮಾಲಭೇ||
ನಿನಗೆ ಹೇಳಿರುವ ಈ ಮಾತುಗಳನ್ನು ನಾನು ಸಂದಿಗ್ಧತೆಯಲ್ಲದೇ ಸಂತೋಷದಿಂದ ಹೇಳತ್ತಿದ್ದೇನೆ. ವಿಪ್ರ! ಸ್ವಯಂ ನನ್ನ ಮೇಲೆ ಆಣೆಯಿಟ್ಟು ಈ ಸತ್ಯವನ್ನು ಹೇಳುತ್ತಿದ್ದೇನೆ.
13002072a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್|
13002072c ಬುದ್ಧಿರಾತ್ಮಾ ಮನಃ ಕಾಲೋ ದಿಶಶ್ಚೈವ ಗುಣಾ ದಶ||
13002073a ನಿತ್ಯಮೇತೇ ಹಿ ಪಶ್ಯಂತಿ ದೇಹಿನಾಂ ದೇಹಸಂಶ್ರಿತಾಃ|
13002073c ಸುಕೃತಂ ದುಷ್ಕೃತಂ ಚಾಪಿ ಕರ್ಮ ಧರ್ಮಭೃತಾಂ ವರ||
ಧರ್ಮಭೃತರಲ್ಲಿ ಶ್ರೇಷ್ಠ! ಪೃಥ್ವಿ, ವಾಯು, ಆಕಾಶ, ಆಪ, ಮತ್ತು ಐದನೆಯದಾದ ಜ್ಯೋತಿ, ಬುದ್ಧಿ, ಆತ್ಮ, ಮನಸ್ಸು, ಕಾಲ ಮತ್ತು ದಿಕ್ಕುಗಳು – ಈ ಹತ್ತು ಗುಣಗಳು ನಿತ್ಯವೂ ಪ್ರಾಣಿಗಳ ದೇಹದಲ್ಲಿದ್ದುಕೊಂಡು ಅವುಗಳು ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನು ನೋಡುತ್ತಾ ಇರುತ್ತವೆ.
13002074a ಯಥೈಷಾ ನಾನೃತಾ ವಾಣೀ ಮಯಾದ್ಯ ಸಮುದಾಹೃತಾ|
13002074c ತೇನ ಸತ್ಯೇನ ಮಾಂ ದೇವಾಃ ಪಾಲಯಂತು ದಹಂತು ವಾ||
ಇಂದು ನಾನು ಸಂತೋಷದಿಂದ ಆಡಿದ ಈ ಮಾತು ಸತ್ಯವಾಗಿದ್ದರೆ ದೇವತೆಗಳು ನನ್ನನ್ನು ಪರಿಪಾಲಿಸಲಿ ಅಥವಾ ಸುಳ್ಳಾಗಿದ್ದರೆ ದಹಿಸಲಿ.”
13002075a ತತೋ ನಾದಃ ಸಮಭವದ್ದಿಕ್ಷು ಸರ್ವಾಸು ಭಾರತ|
13002075c ಅಸಕೃತ್ಸತ್ಯಮಿತ್ಯೇವ ನೈತನ್ಮಿಥ್ಯೇತಿ ಸರ್ವಶಃ||
ಭಾರತ! ಆಗ “ಇವನು ಸತ್ಯವನ್ನೇ ಹೇಳಿದ್ದಾನೆ. ಇದರಲ್ಲಿ ಸ್ವಲ್ಪವೂ ಸುಳ್ಳಿಲ್ಲ!” ಎಂದು ಎಲ್ಲ ದಿಕ್ಕುಗಳಿಂದ ಹಲವಾರು ನಾದಗಳು ಕೇಳಿಬಂದವು.
13002076a ಉಟಜಾತ್ತು ತತಸ್ತಸ್ಮಾನ್ನಿಶ್ಚಕ್ರಾಮ ಸ ವೈ ದ್ವಿಜಃ|
13002076c ವಪುಷಾ ಖಂ ಚ ಭೂಮಿಂ ಚ ವ್ಯಾಪ್ಯ ವಾಯುರಿವೋದ್ಯತಃ||
13002077a ಸ್ವರೇಣ ವಿಪ್ರಃ ಶೈಕ್ಷೇಣ ತ್ರೀಽಲ್ಲೋಕಾನನುನಾದಯನ್|
13002077c ಉವಾಚ ಚೈನಂ ಧರ್ಮಜ್ಞಂ ಪೂರ್ವಮಾಮಂತ್ರ್ಯ ನಾಮತಃ||
ಆಗ ಒಳಗಿದ್ದ ಆ ದ್ವಿಜನು ಹೊರಬಂದನು. ವಾಯುವಿನಂತೆಯೇ ಅವನು ತನ್ನ ಶರೀರದಿಂದ ಭೂಮ್ಯಾಕಾಶಗಳೆರಡನ್ನೂ ವ್ಯಾಪಿಸಿದ್ದನು. ಆ ವಿಪ್ರನು ಶಿಕ್ಷಾಸ್ವರದಲ್ಲಿ ಮೂರು ಲೋಕಗಳನ್ನೂ ಮೊಳಗಿಸುತ್ತಾ ಮೊದಲು ಧರ್ಮಜ್ಞ ಸುದರ್ಶನನ ಹೆಸರನ್ನು ಹೇಳಿ ಸಂಬೋಧಿಸಿ ಹೇಳಿದನು:
13002078a ಧರ್ಮೋಽಹಮಸ್ಮಿ ಭದ್ರಂ ತೇ ಜಿಜ್ಞಾಸಾರ್ಥಂ ತವಾನಘ|
13002078c ಪ್ರಾಪ್ತಃ ಸತ್ಯಂ ಚ ತೇ ಜ್ಞಾತ್ವಾ ಪ್ರೀತಿರ್ಮೇ ಪರಮಾ ತ್ವಯಿ||
“ಅನಘ! ನಾನು ಧರ್ಮ! ನಿನಗೆ ಮಂಗಳವಾಗಲಿ! ನಿನ್ನನ್ನು ಪರೀಕ್ಷಿಸಲು ಬಂದಿದ್ದೆ. ನಿನ್ನ ಈ ಸತ್ಯವನ್ನು ತಿಳಿದು ನಿನ್ನ ಮೇಲೆ ಪರಮ ಪ್ರೀತನಾಗಿದ್ದೇನೆ.
13002079a ವಿಜಿತಶ್ಚ ತ್ವಯಾ ಮೃತ್ಯುರ್ಯೋಽಯಂ ತ್ವಾಮನುಗಚ್ಚತಿ|
13002079c ರಂಧ್ರಾನ್ವೇಷೀ ತವ ಸದಾ ತ್ವಯಾ ಧೃತ್ಯಾ ವಶೀಕೃತಃ||
ನಿನ್ನಲ್ಲಿ ನ್ಯೂನತೆಯನ್ನು ಹುಡುಕುತ್ತಾ ನಿನ್ನ ಹಿಂದೆಯೇ ಬರುತ್ತಿರುವ ಮೃತ್ಯುವನ್ನು ನೀನು ಜಯಿಸಿದ್ದೀಯೆ. ಧೈರ್ಯದಿಂದ ಅವನನ್ನು ನೀನು ವಶಪಡಿಸಿಕೊಂಡಿರುವೆ.
13002080a ನ ಚಾಸ್ತಿ ಶಕ್ತಿಸ್ತ್ರೈಲೋಕ್ಯೇ ಕಸ್ಯ ಚಿತ್ಪುರುಷೋತ್ತಮ|
13002080c ಪತಿವ್ರತಾಮಿಮಾಂ ಸಾಧ್ವೀಂ ತವೋದ್ವೀಕ್ಷಿತುಮಪ್ಯುತ||
ಪುರುಷೋತ್ತಮ! ಮೂರು ಲೋಕಗಳಲ್ಲಿ ಯಾರಿಗೇ ಆಗಲೀ ಪತಿವ್ರತೆಯಾಗಿರುವ ಈ ಸಾಧ್ವಿಯನ್ನು ಕಣ್ಣೆತ್ತಿ ನೋಡಲೂ ಕೂಡ ಶಕ್ತಿಯಿಲ್ಲ.
13002081a ರಕ್ಷಿತಾ ತ್ವದ್ಗುಣೈರೇಷಾ ಪತಿವ್ರತಗುಣೈಸ್ತಥಾ|
13002081c ಅಧೃಷ್ಯಾ ಯದಿಯಂ ಬ್ರೂಯಾತ್ತಥಾ ತನ್ನಾನ್ಯಥಾ ಭವೇತ್||
ನಿನ್ನ ಗುಣಗಳು ಮತ್ತು ತನ್ನ ಪತಿವ್ರತಗುಣಗಳಿಂದ ರಕ್ಷಿತಳಾದ ಇವಳು ಏನನ್ನೇ ಹೇಳಿದರೂ ಅದು ಸತ್ಯವಾಗುತ್ತದೆ. ಅನ್ಯಥಾ ಆಗುವುದಿಲ್ಲ.
13002082a ಏಷಾ ಹಿ ತಪಸಾ ಸ್ವೇನ ಸಂಯುಕ್ತಾ ಬ್ರಹ್ಮವಾದಿನೀ|
13002082c ಪಾವನಾರ್ಥಂ ಚ ಲೋಕಸ್ಯ ಸರಿಚ್ಚ್ರೇಷ್ಠಾ ಭವಿಷ್ಯತಿ||
ತನ್ನದೇ ತಪಸ್ಸಿನಿಂದ ಸಂಯುಕ್ತಳಾಗಿರುವ ಈ ಬ್ರಹ್ಮವಾದಿನಿಯು ಲೋಕವನ್ನು ಪಾವನಗೊಳಿಸಲೋಸುಗ ಶ್ರೇಷ್ಠ ನದಿಯಾಗುವಳು.
13002083a ಅರ್ಧೇನೌಘವತೀ ನಾಮ ತ್ವಾಮರ್ಧೇನಾನುಯಾಸ್ಯತಿ|
13002083c ಶರೀರೇಣ ಮಹಾಭಾಗಾ ಯೋಗೋ ಹ್ಯಸ್ಯಾ ವಶೇ ಸ್ಥಿತಃ||
ಅರ್ಧ ಶರೀರದಿಂದ ಇವಳು ಓಘವತೀ ಎಂಬ ನದಿಯಾಗುತ್ತಾಳೆ. ಇನ್ನೊಂದು ಅರ್ಧದಿಂದ ನಿನ್ನ ಸೇವೆಗೈಯುತ್ತಾಳೆ. ಯೋಗವು ಈ ಮಹಾಭಾಗೆಯ ವಶದಲ್ಲಿರುತ್ತದೆ.
13002084a ಅನಯಾ ಸಹ ಲೋಕಾಂಶ್ಚ ಗಂತಾಸಿ ತಪಸಾರ್ಜಿತಾನ್|
13002084c ಯತ್ರ ನಾವೃತ್ತಿಮಭ್ಯೇತಿ ಶಾಶ್ವತಾಂಸ್ತಾನ್ಸನಾತನಾನ್||
ಇವಳೊಂದಿಗೆ ನೀನು ಕೂಡ ತಪಸ್ಸಿನಿಂದ ಗಳಿಸಿದ ಈ ಪ್ರಪಂಚಕ್ಕೆ ಹಿಂದುರುಗಬೇಕಾಗದ ಶಾಶ್ವತ ಸನಾತನ ಲೋಕಗಳಿಗೆ ಹೋಗುತ್ತೀಯೆ.
13002085a ಅನೇನ ಚೈವ ದೇಹೇನ ಲೋಕಾಂಸ್ತ್ವಮಭಿಪತ್ಸ್ಯಸೇ|
13002085c ನಿರ್ಜಿತಶ್ಚ ತ್ವಯಾ ಮೃತ್ಯುರೈಶ್ವರ್ಯಂ ಚ ತವೋತ್ತಮಮ್||
ನಿನ್ನ ಈ ದೇಹದಿಂದಲೇ ನೀನು ಲೋಕಗಳಿಗೆ ಹೋಗುತ್ತೀಯೆ. ನೀನು ಮೃತ್ಯುವನ್ನು ಜಯಿಸಿದ್ದೀಯೆ. ಉತ್ತಮ ಐಶ್ವರ್ಯವು ನಿನ್ನದಾಗುತ್ತದೆ.
13002086a ಪಂಚ ಭೂತಾನ್ಯತಿಕ್ರಾಂತಃ ಸ್ವವೀರ್ಯಾಚ್ಚ ಮನೋಭವಃ|
13002086c ಗೃಹಸ್ಥಧರ್ಮೇಣಾನೇನ ಕಾಮಕ್ರೋಧೌ ಚ ತೇ ಜಿತೌ||
ನೀನು ನಿನ್ನ ವೀರ್ಯಾತಿಶಯದಿಂದ ಪಂಚಭೂತಗಳನ್ನೂ ಅತಿಕ್ರಮಿಸಿ ಮನಸ್ಸಿನ ವೇಗದಲ್ಲಿ ಪ್ರಯಾಣಮಾಡಲೂ ಸಮರ್ಥನಾಗುವೆ. ಈ ಗೃಹಸ್ಥಧರ್ಮದಿಂದ ನೀನು ಕಾಮ-ಕ್ರೋಧಗಳನ್ನೂ ಜಯಿಸಿದ್ದೀಯೆ.
13002087a ಸ್ನೇಹೋ ರಾಗಶ್ಚ ತಂದ್ರೀ ಚ ಮೋಹೋ ದ್ರೋಹಶ್ಚ ಕೇವಲಃ|
13002087c ತವ ಶುಶ್ರೂಷಯಾ ರಾಜನ್ರಾಜಪುತ್ರ್ಯಾ ವಿನಿರ್ಜಿತಾಃ||
ರಾಜನ್! ನಿನ್ನ ಶುಶ್ರೂಷೆಯಿಂದ ಈ ರಾಜಪುತ್ರಿಯು ಸ್ನೇಹ, ಅನುರಾಗ, ಆಲಸ್ಯ, ಮೋಹ ಮತ್ತು ದ್ರೋಹ ಇವೇ ಮೊದಲಾದವುಗಳನ್ನು ಗೆದ್ದಿದ್ದಾಳೆ.””
13002088 ಭೀಷ್ಮ ಉವಾಚ
13002088a ಶುಕ್ಲಾನಾಂ ತು ಸಹಸ್ರೇಣ ವಾಜಿನಾಂ ರಥಮುತ್ತಮಮ್|
13002088c ಯುಕ್ತಂ ಪ್ರಗೃಹ್ಯ ಭಗವಾನ್ವ್ಯವಸಾಯೋ ಜಗಾಮ ತಮ್||
ಭೀಷ್ಮನು ಹೇಳಿದನು: “ಆಗ ಭಗವಾನನು ಸಹಸ್ರ ಕುದುರೆಗಳನ್ನು ಕಟ್ಟಿದ್ದ ಉತ್ತಮ ರಥದಲ್ಲಿ ಅವರಿಬ್ಬರನ್ನೂ ಕರೆದುಕೊಂಡು ಹೋದನು.
13002089a ಮೃತ್ಯುರಾತ್ಮಾ ಚ ಲೋಕಾಶ್ಚ ಜಿತಾ ಭೂತಾನಿ ಪಂಚ ಚ|
13002089c ಬುದ್ಧಿಃ ಕಾಲೋ ಮನೋ ವ್ಯೋಮ ಕಾಮಕ್ರೋಧೌ ತಥೈವ ಚ||
ಹೀಗೆ ಸುದರ್ಶನನು ಮೃತ್ಯು, ಆತ್ಮ, ಲೋಕಗಳು. ಪಂಚಭೂತಗಳು, ಬುದ್ಧಿ, ಕಾಲ, ಮನಸ್ಸು, ಆಕಾಶ, ಮತ್ತು ಕಾಮ-ಕ್ರೋಧಗಳನ್ನೂ ಗೆದ್ದನು.
13002090a ತಸ್ಮಾದ್ಗೃಹಾಶ್ರಮಸ್ಥಸ್ಯ ನಾನ್ಯದ್ದೈವತಮಸ್ತಿ ವೈ|
13002090c ಋತೇಽತಿಥಿಂ ನರವ್ಯಾಘ್ರ ಮನಸೈತದ್ವಿಚಾರಯ||
ನರವ್ಯಾಘ್ರ! ಆದುದರಿಂದ ಗೃಹಸ್ಥಾಶ್ರಮಸ್ಥನಿಗೆ ಅತಿಥಿಯನ್ನು ಬಿಟ್ಟು ಬೇರೆ ಯಾವ ದೈವವೂ ಇಲ್ಲ. ಇದರ ಕುರಿತು ಮನಸ್ಸಿನಲ್ಲಿ ವಿಚಾರಿಸಬೇಡ.
13002091a ಅತಿಥಿಃ ಪೂಜಿತೋ ಯಸ್ಯ ಧ್ಯಾಯತೇ ಮನಸಾ ಶುಭಮ್|
13002091c ನ ತತ್ಕ್ರತುಶತೇನಾಪಿ ತುಲ್ಯಮಾಹುರ್ಮನೀಷಿಣಃ||
ಮನಸ್ಸಿನಲ್ಲಿ ಶುಭವನ್ನೇ ಧ್ಯಾನಿಸುತ್ತಾ ಮಾಡಿದ ಅತಿಥಿಪೂಜನೆಗೆ ನೂರು ಕ್ರತುಗಳೂ ಸಮವಲ್ಲ ಎಂದು ಮನೀಷಿಣರು ಹೇಳುತ್ತಾರೆ.
13002092a ಪಾತ್ರಂ ತ್ವತಿಥಿಮಾಸಾದ್ಯ ಶೀಲಾಢ್ಯಂ ಯೋ ನ ಪೂಜಯೇತ್|
13002092c ಸ ದತ್ತ್ವಾ ಸುಕೃತಂ ತಸ್ಯ ಕ್ಷಪಯೇತ ಹ್ಯನರ್ಚಿತಃ||
ಗೃಹಸ್ಥನು ಸುಪಾತ್ರನೂ ಶೀಲವಂತನೂ ಆದ ಅತಿಥಿಯು ಬಂದಾಗ ಅವನನ್ನು ಪೂಜಿಸದಿದ್ದರೆ ಆ ಅತಿಥಿಯು ತಾನು ಮಾಡಿದ ಪಾಪಗಳನ್ನು ಗೃಹಸ್ಥನಿಗೆ ಕೊಟ್ಟು ಗೃಹಸ್ಥನ ಪುಣ್ಯಗಳನ್ನು ಪಡೆದುಕೊಂಡು ಹೋಗುತ್ತಾನೆ.
13002093a ಏತತ್ತೇ ಕಥಿತಂ ಪುತ್ರ ಮಯಾಖ್ಯಾನಮನುತ್ತಮಮ್|
13002093c ಯಥಾ ಹಿ ವಿಜಿತೋ ಮೃತ್ಯುರ್ಗೃಹಸ್ಥೇನ ಪುರಾಭವತ್||
ಪುತ್ರ! ಹೀಗೆ ನಾನು ಹಿಂದೆ ನಡೆದಂತೆ ಗೃಹಸ್ಥನು ಮೃತ್ಯುವನ್ನು ಗೆದ್ದ ಈ ಅನುತ್ತಮ ಆಖ್ಯಾನವನ್ನು ಹೇಳಿದ್ದೇನೆ.
13002094a ಧನ್ಯಂ ಯಶಸ್ಯಮಾಯುಷ್ಯಮಿದಮಾಖ್ಯಾನಮುತ್ತಮಮ್|
13002094c ಬುಭೂಷತಾಭಿಮಂತವ್ಯಂ ಸರ್ವದುಶ್ಚರಿತಾಪಹಮ್||
ಈ ಉತ್ತಮ ಆಖ್ಯಾನವು ಧನ, ಯಶಸ್ಸು, ಆಯುಷ್ಯಗಳನ್ನು ನೀಡುತ್ತದೆ. ಸಕಲ ದುಷ್ಕರ್ಮಗಳನ್ನೂ ನಾಶಪಡಿಸುತ್ತದೆ. ಏಳ್ಗೆಯನ್ನು ಬಯಸುವವನು ಇದನ್ನು ಕೇಳಬೇಕು.
13002095a ಯ ಇದಂ ಕಥಯೇದ್ವಿದ್ವಾನಹನ್ಯಹನಿ ಭಾರತ|
13002095c ಸುದರ್ಶನಸ್ಯ ಚರಿತಂ ಪುಣ್ಯಾಽಲ್ಲೋಕಾನವಾಪ್ನುಯಾತ್||
ಭಾರತ! ಸುದರ್ಶನನ ಈ ಚರಿತೆಯನ್ನು ಪ್ರತಿದಿನವೂ ಹೇಳುವ ವಿದ್ವಾನನು ಪುಣ್ಯ ಲೋಕಗಳನ್ನು ಪಡೆಯುತ್ತಾನೆ.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸುದರ್ಶನೋಪಾಖ್ಯಾನೇ ದ್ವಿತೀಯೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸುದರ್ಶನೋಪಾಖ್ಯಾನ ಎನ್ನುವ ಎರಡನೇ ಅಧ್ಯಾಯವು.

[1] ವೇದಗಳು.