ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
Contents
Toggle೨೧೯
ಸಪ್ತಮಾತೃಕೆಯರನ್ನು ತನ್ನ ತಾಯಂದಿರಾಗಿ ಸ್ಕಂದನು ಸ್ವೀಕರಿಸುವುದು (೧-೧೫). ಮನುಷ್ಯರನ್ನು ಬಾಧಿಸುವ ಗ್ರಹಗಳ ವರ್ಣನೆ (೧೬-೫೮).
03219001a ಶ್ರಿಯಾ ಜುಷ್ಟಂ ಮಹಾಸೇನಂ ದೇವಸೇನಾಪತಿಂ ಕೃತಂ|
03219001c ಸಪ್ತರ್ಷಿಪತ್ನ್ಯಃ ಷಡ್ದೇವ್ಯಸ್ತತ್ಸಕಾಶಮಥಾಗಮನ್||
ಮಾರ್ಕಂಡೇಯನು ಹೇಳಿದನು: “ಮಹಾಸೇನನನ್ನು ಶ್ರೀಯು ಆರಿಸಿದ ಮತ್ತು ಅವನು ದೇವಸೇನಾಪತಿಯಾದ ನಂತರ ಸಪ್ತರ್ಷಿಗಳ ಆರು ದೇವಿ ಪತ್ನಿಯರು ಅವನ ಬಳಿ ಆಗಮಿಸಿದರು.
03219002a ಋಷಿಭಿಃ ಸಂಪರಿತ್ಯಕ್ತಾ ಧರ್ಮಯುಕ್ತಾ ಮಹಾವ್ರತಾಃ|
03219002c ದ್ರುತಮಾಗಮ್ಯ ಚೋಚುಸ್ತಾ ದೇವಸೇನಾಪತಿಂ ಪ್ರಭುಂ||
ಆ ಧರ್ಮಯುಕ್ತ ಮಹಾವ್ರತರು ಋಷಿಗಳಿಂದ ಪರಿತ್ಯಕ್ತರಾಗಿದ್ದರು. ಅವರು ಬೇಗನೇ ಪ್ರಭು ದೇವಸೇನಾಪತಿಯ ಬಳಿಬಂದು ಅವನಿಗೆ ಹೇಳಿದರು:
03219003a ವಯಂ ಪುತ್ರ ಪರಿತ್ಯಕ್ತಾ ಭರ್ತೃಭಿರ್ದೇವಸಮ್ಮಿತೈಃ|
03219003c ಅಕಾರಣಾದ್ರುಷಾ ತಾತ ಪುಣ್ಯಸ್ಥಾನಾತ್ಪರಿಚ್ಯುತಾಃ||
“ಪುತ್ರ! ಅಕಾರಣವಾಗಿ ನಾವು ದೇವಸಮ್ಮತರಾದ ನಮ್ಮ ಪತಿಗಳಿಂದ ಪರಿತ್ಯಕ್ತರಾಗಿದ್ದೇವೆ. ಮಗೂ! ರೋಷಗೊಂಡು ನಮ್ಮನ್ನು ಪುಣ್ಯಸ್ಥಾನದಿಂದ ತಳ್ಳಿದ್ದಾರೆ.
03219004a ಅಸ್ಮಾಭಿಃ ಕಿಲ ಜಾತಸ್ತ್ವಮಿತಿ ಕೇನಾಪ್ಯುದಾಹೃತಂ|
03219004c ಅಸತ್ಯಮೇತತ್ಸಂಶ್ರುತ್ಯ ತಸ್ಮಾನ್ನಸ್ತ್ರಾತುಮರ್ಹಸಿ||
ಕೆಲವರು ನಾವೇ ನಿನ್ನನ್ನು ಹುಟ್ಟಿಸಿದೆವು ಎಂದು ಅಪವಾದವನ್ನು ಹಬ್ಬಿಸಿದರು. ಅವರು ಆ ಅಸತ್ಯವನ್ನು ಕೇಳಿ ನಡೆದುಕೊಂಡರು. ಆದುದರಿಂದ ನೀನು ನಮ್ಮನ್ನು ಪಾರುಮಾಡಬೇಕು.
03219005a ಅಕ್ಷಯಶ್ಚ ಭವೇತ್ಸ್ವರ್ಗಸ್ತ್ವತ್ಪ್ರಸಾದಾದ್ಧಿ ನಃ ಪ್ರಭೋ|
03219005c ತ್ವಾಂ ಪುತ್ರಂ ಚಾಪ್ಯಭೀಪ್ಸಾಮಃ ಕೃತ್ವೈತದನೃಣೋ ಭವ||
ಪ್ರಭೋ! ನಾವು ನಿನ್ನನ್ನು ಪುತ್ರನನ್ನಾಗಿ ಮಾಡಿಕೊಳ್ಳಲು ಬಯಸುತ್ತೇವೆ. ನಿನ್ನ ಈ ಪ್ರಸಾದದಿಂದ ನಮಗೆ ಅಕ್ಷಯ ಸ್ವರ್ಗಸ್ತ್ವವು ದೊರೆಯುತ್ತದೆ. ಇದನ್ನು ಮಾಡಿ ನೀನು ಅನೃಣನಾಗು.”
03219006 ಸ್ಕಂದ ಉವಾಚ|
03219006a ಮಾತರೋ ಹಿ ಭವತ್ಯೋ ಮೇ ಸುತೋ ವೋಽಹಮನಿಂದಿತಾಃ|
03219006c ಯಚ್ಚಾಭೀಪ್ಸಥ ತತ್ಸರ್ವಂ ಸಂಭವಿಷ್ಯತಿ ವಸ್ತಥಾ||
ಸ್ಕಂದನು ಹೇಳಿದನು: “ಅನಿಂದಿತರೇ! ತಾಯಂದಿರೇ! ನಾನು ನಿಮ್ಮ ಮಗನಾಗುತ್ತೇನೆ. ನೀವು ಬಯಸಿದುದೆಲ್ಲವೂ ಹಾಗೆಯೇ ಆಗುತ್ತದೆ.”
03219007 ಮಾರ್ಕಂಡೇಯ ಉವಾಚ|
03219007a ಏವಮುಕ್ತೇ ತತಃ ಶಕ್ರಂ ಕಿಂ ಕಾರ್ಯಮಿತಿ ಸೋಽಬ್ರವೀತ್|
03219007c ಉಕ್ತಃ ಸ್ಕಂದೇನ ಬ್ರೂಹೀತಿ ಸೋಽಬ್ರವೀದ್ವಾಸವಸ್ತತಃ||
ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿದ ನಂತರ ಅವನು ಶಕ್ರನಿಗೆ ಈಗ ಏನು ಮಾಡೋಣವೆಂದು ಕೇಳಿದನು. ಸ್ಕಂದನ ಮಾತಿಗೆ ಅವನು ವಿಶ್ವಾಸದಿಂದ ಹೇಳಿದನು:
03219008a ಅಭಿಜಿತ್ಸ್ಪರ್ಧಮಾನಾ ತು ರೋಹಿಣ್ಯಾ ಕನ್ಯಸೀ ಸ್ವಸಾ|
03219008c ಇಚ್ಚಂತೀ ಜ್ಯೇಷ್ಠತಾಂ ದೇವೀ ತಪಸ್ತಪ್ತುಂ ವನಂ ಗತಾ||
“ದೇವಿ ಕನ್ಯೆ ಅಭಿಜಿತಳು ಅಕ್ಕ ರೋಹಿಣಿಯೊಡನೆ ಸ್ಪರ್ಧಿಸುತ್ತಾ ಹಿರಿಯತನವನ್ನು ಬಯಸಿ ತಪಸ್ಸನ್ನು ಮಾಡಲು ವನಕ್ಕೆ ತೆರಳಿದ್ದಾಳೆ.
03219009a ತತ್ರ ಮೂಢೋಽಸ್ಮಿ ಭದ್ರಂ ತೇ ನಕ್ಷತ್ರಂ ಗಗನಾಚ್ಚ್ಯುತಂ|
03219009c ಕಾಲಂ ತ್ವಿಮಂ ಪರಂ ಸ್ಕಂದ ಬ್ರಹ್ಮಣಾ ಸಹ ಚಿಂತಯ||
ಗಗನದಿಂದ ಕೆಳಗುರುಳಿದ ಈ ನಕ್ಷತ್ರದ ಕುರಿತಾಗಿ ನನಗೇನೂ ತೋಚದಾಗಿದೆ. ನಿನಗೆ ಮಂಗಳವಾಗಲಿ. ಸ್ಕಂದ! ಬ್ರಹ್ಮನೊಂದಿಗೆ ಸಮಾಲೋಚಿಸಲು ಇದು ಉತ್ತಮ ಕಾಲವಾಗಿದೆ.
03219010a ಧನಿಷ್ಠಾದಿಸ್ತದಾ ಕಾಲೋ ಬ್ರಹ್ಮಣಾ ಪರಿನಿರ್ಮಿತಃ|
03219010c ರೋಹಿಣ್ಯಾದ್ಯೋಽಭವತ್ಪೂರ್ವಮೇವಂ ಸಂಖ್ಯಾ ಸಮಾಭವತ್||
ಧನಿಷ್ಠಾದಿ ನಕ್ಷತ್ರಗಳನ್ನು ಕಾಲಾಂತರದಲ್ಲಿ ಬ್ರಹ್ಮನು ನಿರ್ಮಿಸಿದ್ದನು[1]. ಹಿಂದೆಯೇ ರೋಹಿಣಿಯು ಈ ಗುಂಪಿನಲ್ಲಿ ಸೇರಿಕೊಂಡಿದ್ದಳು.”
03219011a ಏವಮುಕ್ತೇ ತು ಶಕ್ರೇಣ ತ್ರಿದಿವಂ ಕೃತ್ತಿಕಾ ಗತಾಃ|
03219011c ನಕ್ಷತ್ರಂ ಶಕಟಾಕಾರಂ ಭಾತಿ ತದ್ವಹ್ನಿದೈವತಂ||
ಶಕ್ರನು ಹೀಗೆ ಹೇಳಲು ಕೃತ್ತಿಕೆಯರು ತ್ರಿದಿವಕ್ಕೆ ಹೋಗಿ ಶಕಟಾಕಾರದ ನಕ್ಷತ್ರವಾಗಿ ಮಿಂಚಿದರು. ಅಗ್ನಿಯು ಅವರ ದೇವತೆಯಾದನು.
03219012a ವಿನತಾ ಚಾಬ್ರವೀತ್ಸ್ಕಂದಂ ಮಮ ತ್ವಂ ಪಿಂಡದಃ ಸುತಃ|
03219012c ಇಚ್ಚಾಮಿ ನಿತ್ಯಮೇವಾಹಂ ತ್ವಯಾ ಪುತ್ರ ಸಹಾಸಿತುಂ||
ವಿನತೆಯೂ ಕೂಡ ಸ್ಕಂದನಿಗೆ ಹೇಳಿದಳು: “ನೀನು ನನಗೆ ಪಿಂಡವನ್ನು ನೀಡುವ ಮಗನಾಗು. ಪುತ್ರ! ನಾನು ಸದಾ ನಿನ್ನ ಜೊತೆ ವಾಸಿಸಲು ಬಯಸುತ್ತೇನೆ.”
03219013 ಸ್ಕಂದ ಉವಾಚ|
03219013a ಏವಮಸ್ತು ನಮಸ್ತೇಽಸ್ತು ಪುತ್ರಸ್ನೇಹಾತ್ಪ್ರಶಾಧಿ ಮಾಂ|
03219013c ಸ್ನುಷಯಾ ಪೂಜ್ಯಮಾನಾ ವೈ ದೇವಿ ವತ್ಸ್ಯಸಿ ನಿತ್ಯದಾ||
ಸ್ಕಂದನು ಹೇಳಿದನು: “ನಿನಗೆ ನಮಸ್ಕಾರ! ಹಾಗೆಯೇ ಆಗಲಿ! ಪುತ್ರಸ್ನೇಹದಿಂದ ನನಗೆ ಮಾರ್ಗದರ್ಶನ ನೀಡು. ದೇವೀ! ಸೊಸೆಯಿಂದ ಪೂಜಿಸಿಕೊಂಡು ಸದಾ ನೀನು ನನ್ನೊಂದಿಗೆ ವಾಸಿಸುತ್ತೀಯೆ.””
03219014 ಮಾರ್ಕಂಡೇಯ ಉವಾಚ|
03219014a ಅಥ ಮಾತೃಗಣಃ ಸರ್ವಃ ಸ್ಕಂದಂ ವಚನಮಬ್ರವೀತ್|
03219014c ವಯಂ ಸರ್ವಸ್ಯ ಲೋಕಸ್ಯ ಮಾತರಃ ಕವಿಭಿಃ ಸ್ತುತಾಃ|
03219014e ಇಚ್ಚಾಮೋ ಮಾತರಸ್ತುಭ್ಯಂ ಭವಿತುಂ ಪೂಜಯಸ್ವ ನಃ||
ಮಾರ್ಕಂಡೇಯನು ಹೇಳಿದನು: “ಆಗ ಮಾತೃಗಣಗಳೆಲ್ಲವೂ ಸ್ಕಂದನಿಗೆ ಹೇಳಿದರು: “ನಾವು ಸರ್ವಲೋಕಗಳ ಮಾತರರೆಂದು ಕವಿಗಳು ಸ್ತುತಿಸುತ್ತಾರೆ. ನಾವು ನಿನ್ನ ಮಾತರರೆಂದೂ ಪೂಜಿಸಿಕೊಳ್ಳಲು ಬಯಸುತ್ತೇವೆ.”
03219015 ಸ್ಕಂದ ಉವಾಚ|
03219015a ಮಾತರಸ್ತು ಭವತ್ಯೋ ಮೇ ಭವತೀನಾಮಹಂ ಸುತಃ|
03219015c ಉಚ್ಯತಾಂ ಯನ್ಮಯಾ ಕಾರ್ಯಂ ಭವತೀನಾಮಥೇಪ್ಸಿತಂ||
ಸ್ಕಂದನು ಹೇಳಿದನು: “ನೀವು ನನ್ನ ಮಾತರರಾಗುವಿರಿ. ನಾನು ನಿಮ್ಮ ಮಗನಾಗುತ್ತೇನೆ. ನಿಮಗಿಷ್ಟವಾದ ಏನನ್ನು ನಾನು ಮಾಡಲಿ ಹೇಳಿ!”
03219016 ಮಾತರ ಊಚುಃ|
03219016a ಯಾಸ್ತು ತಾ ಮಾತರಃ ಪೂರ್ವಂ ಲೋಕಸ್ಯಾಸ್ಯ ಪ್ರಕಲ್ಪಿತಾಃ|
03219016c ಅಸ್ಮಾಕಂ ತದ್ಭವೇತ್ಸ್ಥಾನಂ ತಾಸಾಂ ಚೈವ ನ ತದ್ಭವೇತ್||
ಮಾತರರು ಹೇಳಿದರು: “ಹಿಂದೆ ಯಾರನ್ನು ಈ ಲೋಕಗಳ ಮಾತರರೆಂದು ಪರಿಕಲ್ಪಿಸಲಾಗಿತ್ತೋ ಅವರ ಆ ಸ್ಥಾನವು ನಮಗೆ ದೊರಕುವಂತಾಗಲಿ. ಅವರಿಗೆ ಅದು ಇಲ್ಲದಂತಾಗಲಿ.
03219017a ಭವೇಮ ಪೂಜ್ಯಾ ಲೋಕಸ್ಯ ನ ತಾಃ ಪೂಜ್ಯಾಃ ಸುರರ್ಷಭ|
03219017c ಪ್ರಜಾಸ್ಮಾಕಂ ಹೃತಾಸ್ತಾಭಿಸ್ತ್ವತ್ಕೃತೇ ತಾಃ ಪ್ರಯಚ್ಚ ನಃ||
ಸುರರ್ಷಭ! ಅವರಿಂದ ನಾವು ಲೋಕಗಳಲ್ಲಿ ಪೂಜಿತರಾಗಲಿ. ನಿನ್ನಿಂದಾಗಿ ತೀರಿಕೊಂಡ ನಮ್ಮ ಮಕ್ಕಳನ್ನು ಹಿಂದಿರುಗಿಸು.”
03219018 ಸ್ಕಂದ ಉವಾಚ|
03219018a ದತ್ತಾಃ ಪ್ರಜಾ ನ ತಾಃ ಶಕ್ಯಾ ಭವತೀಭಿರ್ನಿಷೇವಿತುಂ|
03219018c ಅನ್ಯಾಂ ವಃ ಕಾಂ ಪ್ರಯಚ್ಚಾಮಿ ಪ್ರಜಾಂ ಯಾಂ ಮನಸೇಚ್ಚಥ||
ಸ್ಕಂದನು ಹೇಳಿದನು: “ನೀವು ಹಿಂದೆ ಕಳೆದುಕೊಂಡ ಮಕ್ಕಳನ್ನು ಹಿಂದೆ ಪಡೆಯಲು ಶಕ್ಯವಿಲ್ಲ. ನೀವು ಬಯಸುವ ಅನ್ಯಮಕ್ಕಳನ್ನು ನೀಡುತ್ತೇನೆ.”
03219019 ಮಾತರ ಊಚುಃ|
03219019a ಇಚ್ಚಾಮ ತಾಸಾಂ ಮಾತೄಣಾಂ ಪ್ರಜಾ ಭೋಕ್ತುಂ ಪ್ರಯಚ್ಚ ನಃ|
03219019c ತ್ವಯಾ ಸಹ ಪೃಥಗ್ಭೂತಾ ಯೇ ಚ ತಾಸಾಮಥೇಶ್ವರಾಃ||
ಮಾತರರು ಹೇಳಿದರು: “ನಿನ್ನ ಜೊತೆಯಿದ್ದು ಬೇಕಾದ ರೂಪಗಳನ್ನು ತಳೆದು ಆ ಮಾತರರ ಮಕ್ಕಳನ್ನು ತಿನ್ನಲು ಬಯಸುತ್ತೇವೆ. ಅದನ್ನು ನೀಡು.”
03219020 ಸ್ಕಂದ ಉವಾಚ|
03219020a ಪ್ರಜಾ ವೋ ದದ್ಮಿ ಕಷ್ಟಂ ತು ಭವತೀಭಿರುದಾಹೃತಂ|
03219020c ಪರಿರಕ್ಷತ ಭದ್ರಂ ವಃ ಪ್ರಜಾಃ ಸಾಧು ನಮಸ್ಕೃತಾಃ||
ಸ್ಕಂದನು ಹೇಳಿದನು: “ಮಕ್ಕಳನ್ನು ಕೊಡುತ್ತೇನೆ. ಆದರೆ ನೀವು ಹೇಳಿದುದನ್ನು ಕೊಡುವುದು ಕಷ್ಟ. ನಿಮಗೆ ಮಂಗಳವಾಗಲಿ. ಮಕ್ಕಳಿಗೆ ನೀವು ನಮಸ್ಕೃತರಾಗಿ ಚೆನ್ನಾಗಿ ಪರಿರಕ್ಷಸಿ.”
03219021 ಮಾತರ ಊಚುಃ|
03219021a ಪರಿರಕ್ಷಾಮ ಭದ್ರಂ ತೇ ಪ್ರಜಾಃ ಸ್ಕಂದ ಯಥೇಚ್ಚಸಿ|
03219021c ತ್ವಯಾ ನೋ ರೋಚತೇ ಸ್ಕಂದ ಸಹವಾಸಶ್ಚಿರಂ ಪ್ರಭೋ||
ಮಾತರರು ಹೇಳಿದರು: “ಸ್ಕಂದ! ನಿನಗೆ ಮಂಗಳವಾಗಲಿ! ನೀನು ಬಯಸಿದಂತೆ ಮಕ್ಕಳನ್ನು ರಕ್ಷಿಸುತ್ತೇವೆ. ಸ್ಕಂದ! ಪ್ರಭೋ! ನಾವು ಸದಾ ನಿನ್ನೊಡನೆ ವಾಸಿಸಲು ಬಯಸುತ್ತೇವೆ.”
03219022 ಸ್ಕಂದ ಉವಾಚ|
03219022a ಯಾವತ್ಷೋಡಶ ವರ್ಷಾಣಿ ಭವಂತಿ ತರುಣಾಃ ಪ್ರಜಾಃ|
03219022c ಪ್ರಬಾಧತ ಮನುಷ್ಯಾಣಾಂ ತಾವದ್ರೂಪೈಃ ಪೃಥಗ್ವಿಧೈಃ||
ಸ್ಕಂದನು ಹೇಳಿದನು: “ಮಕ್ಕಳು ಹದಿನಾರು ವರ್ಷದ ತರುಣರಾಗುವವರೆಗೆ ವಿವಿಧ ರೂಪಗಳಿಂದ ನೀವು ಮನುಷ್ಯರನ್ನು ಪ್ರಬಾಧಿಸಿ.
03219023a ಅಹಂ ಚ ವಃ ಪ್ರದಾಸ್ಯಾಮಿ ರೌದ್ರಮಾತ್ಮಾನಮವ್ಯಯಂ|
03219023c ಪರಮಂ ತೇನ ಸಹಿತಾ ಸುಖಂ ವತ್ಸ್ಯಥ ಪೂಜಿತಾಃ||
ನಾನು ಕೂಡ ನಿಮಗೆ ಅವ್ಯಯವಾದ ರೌದ್ರ ಆತ್ಮವನ್ನು ದಯಪಾಲಿಸುತ್ತೇನೆ. ಮಕ್ಕಳ ಸಹಿತ ಪೂಜಿತರಾಗಿ ಪರಮ ಸುಖವನ್ನು ಪಡೆಯುತ್ತೀರಿ.””
03219024 ಮಾರ್ಕಂಡೇಯ ಉವಾಚ|
03219024a ತತಃ ಶರೀರಾತ್ಸ್ಕಂದಸ್ಯ ಪುರುಷಃ ಕಾಂಚನಪ್ರಭಃ|
03219024c ಭೋಕ್ತುಂ ಪ್ರಜಾಃ ಸ ಮರ್ತ್ಯಾನಾಂ ನಿಷ್ಪಪಾತ ಮಹಾಬಲಃ||
ಮಾರ್ಕಂಡೇಯನು ಹೇಳಿದನು: “ಆಗ ಸ್ಕಂದನ ಶರೀರದಿಂದ ಮನುಷ್ಯರ ಮಕ್ಕಳನ್ನು ತಿನ್ನುವ ಕಾಂಚನಪ್ರಭೆಯ ಮಹಾಬಲಶಾಲಿ ಪುರುಷನು ಹೊರಬಿದ್ದನು.
03219025a ಅಪತತ್ಸ ತದಾ ಭೂಮೌ ವಿಸಂಜ್ಞೋಽಥ ಕ್ಷುಧಾನ್ವಿತಃ|
03219025c ಸ್ಕಂದೇನ ಸೋಽಭ್ಯನುಜ್ಞಾತೋ ರೌದ್ರರೂಪೋಽಭವದ್ಗ್ರಹಃ|
ಅವನು ಹಸಿವೆಯಿಂದ ಮೂರ್ಛಿತನಾಗಿ ನೆಲದಮೇಲೆ ಬಿದ್ದನು. ಸ್ಕಂದನ ಆಜ್ಞೆಯಂತೆ ಅವನು ರೌದ್ರರೂಪದ ಗ್ರಹವಾದನು.
03219025e ಸ್ಕಂದಾಪಸ್ಮಾರಮಿತ್ಯಾಹುರ್ಗ್ರಹಂ ತಂ ದ್ವಿಜಸತ್ತಮಾಃ||
03219026a ವಿನತಾ ತು ಮಹಾರೌದ್ರಾ ಕಥ್ಯತೇ ಶಕುನಿಗ್ರಹಃ|
03219026c ಪೂತನಾಂ ರಾಕ್ಷಸೀಂ ಪ್ರಾಹುಸ್ತಂ ವಿದ್ಯಾತ್ಪೂತನಾಗ್ರಹಂ||
ದ್ವಿಜಸತ್ತಮರು ಈ ಗ್ರಹವನ್ನು ಸ್ಕಂದಾಪಸ್ಮಾರವೆಂದು ಕರೆಯುತ್ತಾರೆ. ವಿನತೆಯನ್ನು ಮಹಾರೌದ್ರ ಶಕುನಿಗ್ರಹವೆಂದು ಹೇಳುತ್ತಾರೆ. ತಿಳಿದವರು ಪೂತನಿ ರಾಕ್ಷಸಿಯನ್ನು ಪೂತನಾಗ್ರಹವೆಂದು ಹೇಳುತ್ತಾರೆ.
03219027a ಕಷ್ಟಾ ದಾರುಣರೂಪೇಣ ಘೋರರೂಪಾ ನಿಶಾಚರೀ|
03219027c ಪಿಶಾಚೀ ದಾರುಣಾಕಾರಾ ಕಥ್ಯತೇ ಶೀತಪೂತನಾ|
03219027e ಗರ್ಭಾನ್ಸಾ ಮಾನುಷೀಣಾಂ ತು ಹರತೇ ಘೋರದರ್ಶನಾ||
ದಾರುಣರೂಪೀ, ಘೋರರೂಪೀ, ನಿಶಾಚರೀ, ಪಿಶಾಚೀ, ದಾರಣಾಕಾರಿಣೀ ಶೀತಪೂತನಾ ಘೋರದರ್ಶನಳು ಮನುಷ್ಯರ ಗರ್ಭಗಳನ್ನು ಅಪಹರಿಸುತ್ತಾಳೆ.
03219028a ಅದಿತಿಂ ರೇವತೀಂ ಪ್ರಾಹುರ್ಗ್ರಹಸ್ತಸ್ಯಾಸ್ತು ರೈವತಃ|
03219028c ಸೋಽಪಿ ಬಾಲಾಂ ಶಿಶೂನ್ಘೋರೋ ಬಾಧತೇ ವೈ ಮಹಾಗ್ರಹಃ||
ರೇವತಿಯೆಂದೂ ಕರೆಯಲ್ಪಡುವ ಅದಿತಿಯ ಗ್ರಹವನ್ನು ರೈವತವೆಂದು ಕರೆಯುತ್ತಾರೆ. ಈ ಘೋರ ಮಹಾಗ್ರಹವೂ ಕೂಡ ಬಾಲ ಶಿಶುಗಳನ್ನು ಬಾಧಿಸುತ್ತದೆ.
03219029a ದೈತ್ಯಾನಾಂ ಯಾ ದಿತಿರ್ಮಾತಾ ತಾಮಾಹುರ್ಮುಖಮಂಡಿಕಾಂ|
03219029c ಅತ್ಯರ್ಥಂ ಶಿಶುಮಾಂಸೇನ ಸಂಪ್ರಹೃಷ್ಟಾ ದುರಾಸದಾ||
ದೈತ್ಯರ ಮಾತೆ ದಿತಿಯನ್ನು ಮುಖಮಂಡಿಕಾ ಎಂದು ಕರೆಯುತ್ತಾರೆ. ಈ ದುರಾಸದಳು ಶಿಶುಮಾಂಸದಿಂದ ಸಂತುಷ್ಟಳಾಗುತ್ತಾಳೆ.
03219030a ಕುಮಾರಾಶ್ಚ ಕುಮಾರ್ಯಶ್ಚ ಯೇ ಪ್ರೋಕ್ತಾಃ ಸ್ಕಂದಸಂಭವಾಃ|
03219030c ತೇಽಪಿ ಗರ್ಭಭುಜಃ ಸರ್ವೇ ಕೌರವ್ಯ ಸುಮಹಾಗ್ರಹಾಃ||
ಕೌರವ್ಯ! ಸ್ಕಂದನಿಂದ ಹುಟ್ಟಿದ ಕುಮಾರ ಕುಮಾರಿಯರು ಎಲ್ಲರೂ ಮಹಾಗ್ರಹಗಳಾಗಿ ಗರ್ಭವನ್ನು ತಿನ್ನುವವು ಎಂದು ಹೇಳುತ್ತಾರೆ.
03219031a ತಾಸಾಮೇವ ಕುಮಾರೀಣಾಂ ಪತಯಸ್ತೇ ಪ್ರಕೀರ್ತಿತಾಃ|
03219031c ಅಜ್ಞಾಯಮಾನಾ ಗೃಹ್ಣಂತಿ ಬಾಲಕಾನ್ರೌದ್ರಕರ್ಮಿಣಃ||
ಅವರೇ ಆ ಕುಮಾರಿಯರ ಪತಿಗಳೆಂದು ಹೇಳುತ್ತಾರೆ. ಆ ರೌದ್ರಕರ್ಮಿಗಳು ತಿಳಿಯದಂತೆ ಬಾಲಕರನ್ನು ಹಿಡಿಯುತ್ತಾರೆ.
03219032a ಗವಾಂ ಮಾತಾ ತು ಯಾ ಪ್ರಾಜ್ಞೈಃ ಕಥ್ಯತೇ ಸುರಭಿರ್ನೃಪ|
03219032c ಶಕುನಿಸ್ತಾಮಥಾರುಹ್ಯ ಸಹ ಭುಂಕ್ತೇ ಶಿಶೂನ್ಭುವಿ||
ನೃಪ! ಗೋವುಗಳ ಮಾತೆಯೆಂದು ಪ್ರಾಜ್ಞರಿಂದ ಕರೆಯಲ್ಪಡುವ ಸುರಭಿಯು ಶಕುನಿಯನ್ನೇರಿ ಅವಳೊಡನೆ ಭೂಮಿಯಲ್ಲಿ ಶಿಶುಗಳನ್ನು ಭಕ್ಷಿಸುತ್ತಾಳೆ.
03219033a ಸರಮಾ ನಾಮ ಯಾ ಮಾತಾ ಶುನಾಂ ದೇವೀ ಜನಾಧಿಪ|
03219033c ಸಾಪಿ ಗರ್ಭಾನ್ಸಮಾದತ್ತೇ ಮಾನುಷೀಣಾಂ ಸದೈವ ಹಿ||
ಜನಾಧಿಪ! ನಾಯಿಗಳ ಮಾತೆ ಸರಮಾ ಎಂಬ ಹೆಸರಿನ ದೇವಿಯೂ ಕೂಡ ಸದಾ ಮನುಷ್ಯರ ಗರ್ಭಗಳನ್ನು ಕೊಲ್ಲುತ್ತಾಳೆ.
03219034a ಪಾದಪಾನಾಂ ಚ ಯಾ ಮಾತಾ ಕರಂಜನಿಲಯಾ ಹಿ ಸಾ|
03219034c ಕರಂಜೇ ತಾಂ ನಮಸ್ಯಂತಿ ತಸ್ಮಾತ್ಪುತ್ರಾರ್ಥಿನೋ ನರಾಃ||
ವೃಕ್ಷಗಳ ಮಾತಾ ಕರಂಜನಿಲಯಾ. ಆ ಕರಂಜೆಗೆ ಪುತ್ರಾರ್ಥಿಗಳಾದ ನರರು ನಮಸ್ಕರಿಸುತ್ತಾರೆ.
03219035a ಇಮೇ ತ್ವಷ್ಟಾದಶಾನ್ಯೇ ವೈ ಗ್ರಹಾ ಮಾಂಸಮಧುಪ್ರಿಯಾಃ|
03219035c ದ್ವಿಪಂಚರಾತ್ರಂ ತಿಷ್ಠಂತಿ ಸತತಂ ಸೂತಿಕಾಗೃಹೇ||
ಮಾಂಸ ಮತ್ತು ಮದಿರಗಳ ಪ್ರಿಯರಾದ ಈ ಹದಿನೆಂಟು ಗ್ರಹಗಳು ಮತ್ತು ಇತರರು ಸೂತಿಕಾಗೃಹದಲ್ಲಿ ಸತತವಾಗಿ ಹತ್ತು ರಾತ್ರಿಗಳು ನಿಂತಿರುತ್ತಾರೆ.
03219036a ಕದ್ರೂಃ ಸೂಕ್ಷ್ಮವಪುರ್ಭೂತ್ವಾ ಗರ್ಭಿಣೀಂ ಪ್ರವಿಶೇದ್ಯದಾ|
03219036c ಭುಂಕ್ತೇ ಸಾ ತತ್ರ ತಂ ಗರ್ಭಂ ಸಾ ತು ನಾಗಂ ಪ್ರಸೂಯತೇ||
ಕದ್ರುವು ಸೂಕ್ಷರೂಪವನ್ನು ತಳೆದು ಗರ್ಭಿಣಿಯನ್ನು ಪ್ರವೇಶಿಸಿ ಅಲ್ಲಿ ಅವಳು ಗರ್ಭವನ್ನು ನಾಶಪಡಿಸಿ ನಾಗವನ್ನು ಹುಟ್ಟಿಸುತ್ತಾಳೆ.
03219037a ಗಂಧರ್ವಾಣಾಂ ತು ಯಾ ಮಾತಾ ಸಾ ಗರ್ಭಂ ಗೃಹ್ಯ ಗಚ್ಚತಿ|
03219037c ತತೋ ವಿಲೀನಗರ್ಭಾ ಸಾ ಮಾನುಷೀ ಭುವಿ ದೃಶ್ಯತೇ||
ಗಂಧರ್ವರ ಮಾತೆಯು ಗರ್ಭವನ್ನು ಅಪಹರಿಸಿಕೊಂಡು ಹೋಗುತ್ತಾಳೆ. ಆಗ ಅದು ಭೂಮಿಯಲ್ಲಿ ಮನುಷ್ಯರ ಗರ್ಭಪಾತವಾಗಿ ಕಾಣುತ್ತದೆ.
03219038a ಯಾ ಜನಿತ್ರೀ ತ್ವಪ್ಸರಸಾಂ ಗರ್ಭಮಾಸ್ತೇ ಪ್ರಗೃಹ್ಯ ಸಾ|
03219038c ಉಪವಿಷ್ಟಂ ತತೋ ಗರ್ಭಂ ಕಥಯಂತಿ ಮನೀಷಿಣಃ||
ಅಪ್ಸರರ ತಾಯಿಯು ಗರ್ಭವನ್ನು ತೆಗೆಯುತ್ತಾಳೆ. ತಿಳಿದವರು ಅದನ್ನು ಕುಳಿತ ಗರ್ಭವೆಂದು ಕರೆಯುತ್ತಾರೆ.
03219039a ಲೋಹಿತಸ್ಯೋದಧೇಃ ಕನ್ಯಾ ಧಾತ್ರೀ ಸ್ಕಂದಸ್ಯ ಸಾ ಸ್ಮೃತಾ|
03219039c ಲೋಹಿತಾಯನಿರಿತ್ಯೇವಂ ಕದಂಬೇ ಸಾ ಹಿ ಪೂಜ್ಯತೇ||
ಕೆಂಪುಸಮುದ್ರನ ಮಗಳು ಸ್ಕಂದನ ಧಾತ್ರಿಯೆಂದು ಹೇಳುತ್ತಾರೆ. ಅವಳನ್ನು ಲೋಹಿತಾಯನಿಯೆಂದು ಕದಂಬದಲ್ಲಿ ಪೂಜಿಸುತ್ತಾರೆ.
03219040a ಪುರುಷೇಷು ಯಥಾ ರುದ್ರಸ್ತಥಾರ್ಯಾ ಪ್ರಮದಾಸ್ವಪಿ|
03219040c ಆರ್ಯಾ ಮಾತಾ ಕುಮಾರಸ್ಯ ಪೃಥಕ್ಕಾಮಾರ್ಥಮಿಜ್ಯತೇ||
ಪುರುಷರಲ್ಲಿ ರುದ್ರನು ಹೇಗೋ ಹಾಗೆ ಆರ್ಯೆಯು ಸ್ತ್ರೀಯರಲ್ಲಿ ಕಾರ್ಯನಡೆಸುತ್ತಾಳೆ. ಆರ್ಯಳು ಎಲ್ಲಾ ಕುಮಾರರ ಮಾತೆ ಮತ್ತು ಅವರ ರಕ್ಷಣೆಗಾಗಿ ಪೂಜಿತಳಾಗಿದ್ದಾಳೆ.
03219041a ಏವಮೇತೇ ಕುಮಾರಾಣಾಂ ಮಯಾ ಪ್ರೋಕ್ತಾ ಮಹಾಗ್ರಹಾಃ|
03219041c ಯಾವತ್ಷೋಡಶ ವರ್ಷಾಣಿ ಅಶಿವಾಸ್ತೇ ಶಿವಾಸ್ತತಃ||
ನಾನು ಹೇಳಿದ ಈ ಮಹಾಗ್ರಹಗಳು ಕುಮಾರರನ್ನು ಹದಿನಾರು ವರ್ಷಗಳವರೆಗೆ ಕಾಡುತ್ತವೆ ಮತ್ತು ಅದರ ನಂತರ ಅವರ ಮಂಗಳಕ್ಕಾಗಿ ಕೆಲಸಮಾಡುತ್ತವೆ.
03219042a ಯೇ ಚ ಮಾತೃಗಣಾಃ ಪ್ರೋಕ್ತಾಃ ಪುರುಷಾಶ್ಚೈವ ಯೇ ಗ್ರಹಾಃ|
03219042c ಸರ್ವೇ ಸ್ಕಂದಗ್ರಹಾ ನಾಮ ಜ್ಞೇಯಾ ನಿತ್ಯಂ ಶರೀರಿಭಿಃ||
ನಾನು ಹೇಳಿದ ಮಾತೃಗಣಗಳಲ್ಲಿ ಪುರುಷರೂ ಸೇರಿದ್ದಾರೆ. ಈ ಎಲ್ಲ ಗ್ರಹಗಳೂ ಸ್ಕಂದಗ್ರಹಗಳೆಂದು ಕರೆಯಲ್ಪಟ್ಟು ನಿತ್ಯವೂ ಶರೀರಗಳಲ್ಲಿರುತ್ತವೆ.
03219043a ತೇಷಾಂ ಪ್ರಶಮನಂ ಕಾರ್ಯಂ ಸ್ನಾನಂ ಧೂಪಮಥಾಂಜನಂ|
03219043c ಬಲಿಕರ್ಮೋಪಹಾರಶ್ಚ ಸ್ಕಂದಸ್ಯೇಜ್ಯಾ ವಿಶೇಷತಃ||
ಅವರ ಪ್ರಶಮನಕಾರ್ಯವನ್ನು ಸ್ನಾನ, ಧೂಪ, ದೀಪ, ಬಲಿಕರ್ಮೋಪಹಾರಗಳಿಂದ ಮತ್ತು ವಿಶೇಷವಾಗಿ ಸ್ಕಂದನ ಪೂಜೆಯಿಂದ ಮಾಡಬಹುದು.
03219044a ಏವಮೇತೇಽರ್ಚಿತಾಃ ಸರ್ವೇ ಪ್ರಯಚ್ಚಂತಿ ಶುಭಂ ನೃಣಾಂ|
03219044c ಆಯುರ್ವೀರ್ಯಂ ಚ ರಾಜೇಂದ್ರ ಸಮ್ಯಕ್ಪೂಜಾನಮಸ್ಕೃತಾಃ||
ರಾಜನ್! ಈ ರೀತಿ ಅವರನ್ನು ಪೂಜಿಸುವುದರಿಂದ ಎಲ್ಲರೂ ನರರಿಗೆ ಶುಭ, ಆಯಸ್ಸು, ವೀರ್ಯ, ಉತ್ತಮ ಗೌರವ ಪದವಿಗಳನ್ನು ನೀಡುತ್ತಾರೆ.
03219045a ಊರ್ಧ್ವಂ ತು ಷೋಡಶಾದ್ವರ್ಷಾದ್ಯೇ ಭವಂತಿ ಗ್ರಹಾ ನೃಣಾಂ|
03219045c ತಾನಹಂ ಸಂಪ್ರವಕ್ಷ್ಯಾಮಿ ನಮಸ್ಕೃತ್ಯ ಮಹೇಶ್ವರಂ||
ಈಗ ನಾನು ಮಹೇಶ್ವರನಿಗೆ ನಮಸ್ಕರಿಸಿ ನರರು ಹದಿನಾರು ವರ್ಷಗಳನ್ನು ಕಳೆದನಂತರ ಯಾವ ಗ್ರಹಗಳು ಕೆಲಸಮಾಡುತ್ತವೆ ಎನ್ನುವುದನ್ನು ಹೇಳುತ್ತೇನೆ.
03219046a ಯಃ ಪಶ್ಯತಿ ನರೋ ದೇವಾಂ ಜಾಗ್ರದ್ವಾ ಶಯಿತೋಽಪಿ ವಾ|
03219046c ಉನ್ಮಾದ್ಯತಿ ಸ ತು ಕ್ಷಿಪ್ರಂ ತಂ ತು ದೇವಗ್ರಹಂ ವಿದುಃ||
ಯಾವ ನರನು ಜಾಗ್ರತನಾಗಿರುವಾಗ ಮತ್ತು ಮಲಗಿರುವಾಗ ಕೂಡ ದೇವನನ್ನು ಕಾಣುತ್ತಾನೋ ಅವನು ಉನ್ಮಾದದಲ್ಲಿರುತ್ತಾನೆ. ಆಗ ಅದು ದೇವಗ್ರಹವೆಂದು ತಿಳಿಯಬೇಕು.
03219047a ಆಸೀನಶ್ಚ ಶಯಾನಶ್ಚ ಯಃ ಪಶ್ಯತಿ ನರಃ ಪಿತೄನ್|
03219047c ಉನ್ಮಾದ್ಯತಿ ಸ ತು ಕ್ಷಿಪ್ರಂ ಸ ಜ್ಞೇಯಸ್ತು ಪಿತೃಗ್ರಹಃ||
ಕುಳಿತಿರುವಾಗ ಮತ್ತು ಮಲಗಿರುವಾಗ ಯಾವ ನರನು ಪಿತೃಗಳನ್ನು ಕಾಣುತ್ತಾನೋ ಅವನ ಪಿತೃಗ್ರಹದ ಉನ್ಮಾದದಲ್ಲಿದ್ದಾನೆ ಎಂದು ಬೇಗನೆ ತಿಳಿಯಬೇಕು.
03219048a ಅವಮನ್ಯತಿ ಯಃ ಸಿದ್ಧಾನ್ಕ್ರುದ್ಧಾಶ್ಚಾಪಿ ಶಪಂತಿ ಯಂ|
03219048c ಉನ್ಮಾದ್ಯತಿ ಸ ತು ಕ್ಷಿಪ್ರಂ ಜ್ಞೇಯಃ ಸಿದ್ಧಗ್ರಹಸ್ತು ಸಃ||
ಯಾರು ಸಿದ್ಧರನ್ನು ಅವಮಾನಿಸಿ ಅವರ ಸಿಟ್ಟಿನಿಂದ ಶಾಪವನ್ನು ಪಡೆದು ಉನ್ಮಾದಹೊಂದುತ್ತಾರೋ ಅವರನ್ನು ಸಿದ್ಧಗ್ರಹವು ಪೀಡಿಸುತ್ತಿದ್ದೆ ಎಂದು ತಿಳಿಯಬೇಕು.
03219049a ಉಪಾಘ್ರಾತಿ ಚ ಯೋ ಗಂಧಾನ್ರಸಾಂಶ್ಚಾಪಿ ಪೃಥಗ್ವಿಧಾನ್|
03219049c ಉನ್ಮಾದ್ಯತಿ ಸ ತು ಕ್ಷಿಪ್ರಂ ಸ ಜ್ಞೇಯೋ ರಾಕ್ಷಸೋ ಗ್ರಹಃ||
ಯಾರು ವಿವಿಧರೀತಿಯ ವಾಸನೆಗಳನ್ನು ಮತ್ತು ರುಚಿಗಳನ್ನು ಪದೇ ಪದೇ ಅನುಭವಿಸಿ ಉನ್ಮಾದದಲ್ಲಿತ್ತಾರೋ ಅದು ರಾಕ್ಷಸಗ್ರಹವೆಂದು ತಿಳಿಯಬೇಕು.
03219050a ಗಂಧರ್ವಾಶ್ಚಾಪಿ ಯಂ ದಿವ್ಯಾಃ ಸಂಸ್ಪೃಶಂತಿ ನರಂ ಭುವಿ|
03219050c ಉನ್ಮಾದ್ಯತಿ ಸ ತು ಕ್ಷಿಪ್ರಂ ಗ್ರಹೋ ಗಾಂಧರ್ವ ಏವ ಸಃ||
ದಿವ್ಯ ಗಂಧರ್ವರೂ ಕೂಡ ಭೂಮಿಯಲ್ಲಿರುವ ನರರನ್ನು ಮುಟ್ಟಿ ಉನ್ಮಾದಗೊಳಿಸಿದರೆ ಅದು ಗಾಂಧರ್ವಗ್ರಹವೇ ಸರಿ.
03219051a ಆವಿಶಂತಿ ಚ ಯಂ ಯಕ್ಷಾಃ ಪುರುಷಂ ಕಾಲಪರ್ಯಯೇ|
03219051c ಉನ್ಮಾದ್ಯತಿ ಸ ತು ಕ್ಷಿಪ್ರಂ ಜ್ಞೇಯೋ ಯಕ್ಷಗ್ರಹಸ್ತು ಸಃ||
ಕಾಲಪರ್ಯಯದಲ್ಲಿ ಯಕ್ಷರು ಯಾವ ಪುರುಷರನ್ನು ಆವೇಶಗೊಂಡು ಉನ್ಮಾದಿಸುತ್ತಾರೋ ಅದನ್ನು ಯಕ್ಷಗ್ರಹವೆಂದು ತಿಳಿದುಕೊಳ್ಳಬೇಕು.
03219052a ಅಧಿರೋಹಂತಿ ಯಂ ನಿತ್ಯಂ ಪಿಶಾಚಾಃ ಪುರುಷಂ ಕ್ವ ಚಿತ್|
03219052c ಉನ್ಮಾದ್ಯತಿ ಸ ತು ಕ್ಷಿಪ್ರಂ ಪೈಶಾಚಂ ತಂ ಗ್ರಹಂ ವಿದುಃ||
ಪಿಶಾಚಿಗಳು ನಿತ್ಯವೂ ಯಾರಾದರೂ ಪುರುಷರನ್ನು ಏರಿ ಉನ್ಮಾದಗೊಳಿಸುತ್ತಾರೆ. ಆಗ ಅದನ್ನು ಪೈಶಾಚ ಗ್ರಹವೆಂದು ತಿಳಿಯಬೇಕು.
03219053a ಯಸ್ಯ ದೋಷೈಃ ಪ್ರಕುಪಿತಂ ಚಿತ್ತಂ ಮುಹ್ಯತಿ ದೇಹಿನಃ|
03219053c ಉನ್ಮಾದ್ಯತಿ ಸ ತು ಕ್ಷಿಪ್ರಂ ಸಾಧನಂ ತಸ್ಯ ಶಾಸ್ತ್ರತಃ||
ದೋಷಗಳ ಪ್ರಕೋಪದಿಂದ ಚಿತ್ತವನ್ನು ಕಳೆದುಕೊಂಡು ಉನ್ಮಾದದಲ್ಲಿರುವವನಿಗೆ ಕ್ಷಿಪ್ರವಾಗಿ ಶಾಸ್ತ್ರಗಳಲ್ಲಿರುವಂತೆ ಸಾಧನಗಳನ್ನು ಮಾಡಬೇಕು.
03219054a ವೈಕ್ಲವ್ಯಾಚ್ಚ ಭಯಾಚ್ಚೈವ ಘೋರಾಣಾಂ ಚಾಪಿ ದರ್ಶನಾತ್|
03219054c ಉನ್ಮಾದ್ಯತಿ ಸ ತು ಕ್ಷಿಪ್ರಂ ಸತ್ತ್ವಂ ತಸ್ಯ ತು ಸಾಧನಂ||
ಘೋರರೂಪಿಗಳನ್ನು ನೋಡಿ ಭಯದಿಂದ ಹುಚ್ಚಾಗಿ ಓಡಿಕೊಂಡು ಉನ್ಮಾದದಲ್ಲಿರುವವರನ್ನು ಬೇಗನೇ ಸತ್ವವನ್ನು ನೀಡುವ ಸಾಧನವನ್ನು ಮಾಡಬೇಕು.
03219055a ಕಶ್ಚಿತ್ಕ್ರೀಡಿತುಕಾಮೋ ವೈ ಭೋಕ್ತುಕಾಮಸ್ತಥಾಪರಃ|
03219055c ಅಭಿಕಾಮಸ್ತಥೈವಾನ್ಯ ಇತ್ಯೇಷ ತ್ರಿವಿಧೋ ಗ್ರಹಃ||
ಕೆಲವು ಆಟವಾಡುವ ಆಸೆಯನ್ನಿಟ್ಟುಕೊಂಡಿರುತ್ತವೆ, ಇನ್ನು ಕೆಲವು ಭೋಗಿಸಲು ಬಯಸುತ್ತವೆ ಮತ್ತು ಅನ್ಯರು ಅಭಿಕಾಮಿಸುತ್ತವೆ. ಈ ರೀತಿ ಮೂರು ವಿಧದ ಗ್ರಹಗಳಿವೆ.
03219056a ಯಾವತ್ಸಪ್ತತಿವರ್ಷಾಣಿ ಭವಂತ್ಯೇತೇ ಗ್ರಹಾ ನೃಣಾಂ|
03219056c ಅತಃ ಪರಂ ದೇಹಿನಾಂ ತು ಗ್ರಹತುಲ್ಯೋ ಭವೇಜ್ಜ್ವರಃ||
ಮನುಷ್ಯನಿಗೆ ಎಪ್ಪತ್ತುವರ್ಷಗಳಾಗುವವರೆಗೆ ಈ ಗ್ರಹಗಳು ಇರುತ್ತವೆ. ಅದರ ನಂತರ ದೇಹಿಗಳಿಗೆ ಜ್ವರವೇ ಗ್ರಹಗಳ ಸಮಾನವಾಗಿರುತ್ತದೆ.
03219057a ಅಪ್ರಕೀರ್ಣೇಂದ್ರಿಯಂ ದಾಂತಂ ಶುಚಿಂ ನಿತ್ಯಮತಂದ್ರಿತಂ|
03219057c ಆಸ್ತಿಕಂ ಶ್ರದ್ದಧಾನಂ ಚ ವರ್ಜಯಂತಿ ಸದಾ ಗ್ರಹಾಃ||
ಇಂದ್ರಿಯಗಳನ್ನು ಹರಡದೇ ಇಟ್ಟುಕೊಳ್ಳುವುದರಿಂದ, ತಾಳ್ಮೆಯಿಂದಿರುವುದರಿಂದ, ಶುಚಿಯಾಗಿರುವುದರಿಂದ, ನಿತ್ಯವೂ ಆಸ್ತಿಕರನ್ನು, ಶದ್ಧೆ, ದಾನಗಳನ್ನು ಮಾಡುವವರನ್ನು ಸದಾ ಗ್ರಹಗಳು ತೊರೆಯುತ್ತವೆ.
03219058a ಇತ್ಯೇಷ ತೇ ಗ್ರಹೋದ್ದೇಶೋ ಮಾನುಷಾಣಾಂ ಪ್ರಕೀರ್ತಿತಃ|
03219058c ನ ಸ್ಪೃಶಂತಿ ಗ್ರಹಾ ಭಕ್ತಾನ್ನರಾನ್ದೇವಂ ಮಹೇಶ್ವರಂ||
ಮನುಷ್ಯರ ಬಳಿಬರುವ ಈ ಗ್ರಹಗಳ ಕುರಿತು ನಾನು ಹೇಳಿದ್ದೇನೆ. ದೇವ ಮಹೇಶ್ವರನ ಭಕ್ತ ನರರನ್ನು ಗ್ರಹಗಳು ಮುಟ್ಟುವುದಿಲ್ಲ.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಮನುಷ್ಯಗ್ರಹಕಥನೇ ಏಕೋನವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಮನುಷ್ಯಗ್ರಹಕಥನದಲ್ಲಿ ಇನ್ನೂರಾಹತ್ತೊಂಭತ್ತನೆಯ ಅಧ್ಯಾಯವು.

[1]ಈ ಪ್ರಕರಣವನ್ನು ನೋಡಿದರೆ ಈಗಿರುವಂತೆ ಇತರ ಯುಗಗಳಲ್ಲಿಯೂ ನಕ್ಷತ್ರಗಳಲ್ಲಿ ಅಶ್ವಿನಿಯೇ ಮೊದಲ ನಕ್ಷತ್ರವಾಗಿತ್ತೆಂದು ಹೇಳಲಿಕ್ಕಾಗುವುದಿಲ್ಲ [ಭಾರತ ದರ್ಶನ ಪ್ರಕಾಶನ, ಸಂಪುಟ ೭, ಪುಟ ೩೫೫೧].
