Aranyaka Parva: Chapter 223

ಆರಣ್ಯಕ ಪರ್ವ: ದ್ರೌಪದೀಸತ್ಯಭಾಮಾಸಂವಾದ ಪರ್ವ

೨೨೩

ಪತಿಯ ಚಿತ್ತವನ್ನು ಹಿಡಿದಿಟ್ಟುಕೊಳ್ಳುವ ದೋಷವಿಲ್ಲದ ಮಾರ್ಗವನ್ನು ದ್ರೌಪದಿಯು ಸತ್ಯಭಾಮೆಗೆ ಹೇಳುವುದು (೧-೧೨).

03223001 ದ್ರೌಪದ್ಯುವಾಚ|

03223001a ಇಮಂ ತು ತೇ ಮಾರ್ಗಮಪೇತದೋಷಂ|

         ವಕ್ಷ್ಯಾಮಿ ಚಿತ್ತಗ್ರಹಣಾಯ ಭರ್ತುಃ|

03223001c ಯಸ್ಮಿನ್ಯಥಾವತ್ಸಖಿ ವರ್ತಮಾನಾ|

         ಭರ್ತಾರಮಾಚ್ಚೇತ್ಸ್ಯಸಿ ಕಾಮಿನೀಭ್ಯಃ||

ದ್ರೌಪದಿಯು ಹೇಳಿದಳು: “ಪತಿಯ ಚಿತ್ತವನ್ನು ಹಿಡಿದಿಟ್ಟುಕೊಳ್ಳುವ ದೋಷವಿಲ್ಲದ ಈ ಮಾರ್ಗವನ್ನು ನಾನು ನಿನಗೆ ಹೇಳುತ್ತೇನೆ. ಸಖೀ! ಈ ರೀತಿ ಸರಿಯಾಗಿ ನಡೆದು ಕೊಳ್ಳುವುದರಿಂದ ನಿನ್ನ ಪತಿಯನ್ನು ಇತರ ಕಾಮಿನಿಯರಿಂದ ದೂರವಿಡಬಹುದು.

03223002a ನೈತಾದೃಶಂ ದೈವತಮಸ್ತಿ ಸತ್ಯ|

         ಸರ್ವೇಷು ಲೋಕೇಷು ಸದೈವತೇಷು|

03223002c ಯಥಾ ಪತಿಸ್ತಸ್ಯ ಹಿ ಸರ್ವಕಾಮಾ|

         ಲಭ್ಯಾಃ ಪ್ರಸಾದೇ ಕುಪಿತಶ್ಚ ಹನ್ಯಾತ್||

ಸತ್ಯೇ! ಎಲ್ಲ ಲೋಕಗಳಲ್ಲಿಯೂ ಎಲ್ಲ ದೇವತೆಗಳಲ್ಲಿಯೂ ಪತಿಯ ಸಮಾನನಾದ ದೇವರಿಲ್ಲ! ಅವನು ಒಲಿದರೆ ಸರ್ಮಕಾಮಗಳೂ ಪ್ರಾಪ್ತವಾಗುತ್ತವೆ. ಮುನಿದರೆ ಸತ್ತಹಾಗೆ!

03223003a ತಸ್ಮಾದಪತ್ಯಂ ವಿವಿಧಾಶ್ಚ ಭೋಗಾಃ|

         ಶಯ್ಯಾಸನಾನ್ಯದ್ಭುತದರ್ಶನಾನಿ|

03223003c ವಸ್ತ್ರಾಣಿ ಮಾಲ್ಯಾನಿ ತಥೈವ ಗಂಧಾಃ|

         ಸ್ವರ್ಗಶ್ಚ ಲೋಕೋ ವಿಷಮಾ ಚ ಕೀರ್ತಿಃ||

ಅವನಿಂದ ಮಕ್ಕಳನ್ನು, ವಿವಿಧ ಭೋಗಗಳನ್ನು, ಹಾಸಿಗೆ, ಆಸನ, ಅದ್ಭುತ ನೋಟಗಳು, ವಸ್ತ್ರಗಳು, ಮಾಲೆಗಳು, ಹಾಗೆಯೇ ಸುಗಂಧಗಳು, ಸ್ವರ್ಗಲೋಕ ಮತ್ತು ವಿಷಮ ಕೀರ್ತಿಗಳು ದೊರೆಯುತ್ತವೆ.

03223004a ಸುಖಂ ಸುಖೇನೇಹ ನ ಜಾತು ಲಭ್ಯಂ|

         ದುಃಖೇನ ಸಾಧ್ವೀ ಲಭತೇ ಸುಖಾನಿ|

03223004c ಸಾ ಕೃಷ್ಣಮಾರಾಧಯ ಸೌಹೃದೇನ|

         ಪ್ರೇಂಣಾ ಚ ನಿತ್ಯಂ ಪ್ರತಿಕರ್ಮಣಾ ಚ||

ಸುಖದಿಂದ ಸುಖವು ಇಲ್ಲಿ ದೊರೆಯುವುದಿಲ್ಲ. ಸಾಧ್ವಿಯು ದುಃಖದಿಂದ ಸುಖಗಳನ್ನು ಪಡೆಯುತ್ತಾಳೆ. ಆದುದರಿಂದ ಕೃಷ್ಣನನ್ನು ಒಳ್ಳೆಯ ಹೃದಯದಿಂದ ಆರಾಧಿಸು. ನಿತ್ಯವೂ ಪ್ರೇಮದಿಂದ ಉಪಚರಿಸು.

03223005a ತಥಾಶನೈಶ್ಚಾರುಭಿರಗ್ರ್ಯಮಾಲ್ಯೈರ್|

         ದಾಕ್ಷಿಣ್ಯಯೋಗೈರ್ವಿವಿಧೈಶ್ಚ ಗಂಧೈಃ|

03223005c ಅಸ್ಯಾಃ ಪ್ರಿಯೋಽಸ್ಮೀತಿ ಯಥಾ ವಿದಿತ್ವಾ|

         ತ್ವಾಮೇವ ಸಂಶ್ಲಿಷ್ಯತಿ ಸರ್ವಭಾವೈಃ||

ರುಚಿಯಾದ ಅಡುಗೆಗಳ ಮೂಲಕ, ಸುಂದರ ಮಾಲೆಗಳ ಮೂಲಕ, ದಾಕ್ಷಿಣ್ಯ ಯೋಗಗಳ ಮೂಲಕ, ವಿವಿಧ ಸುಗಂಧಗಳ ಮೂಲಕ ತಾನು ಇವಳಿಗೆ ಪ್ರೀತಿಯವನು ಎಂದು ಅವನು ತಿಳಿದು ಅವನೇ ಸರ್ವಭಾವಗಳಿಂದ ನಿನ್ನನ್ನು ಆಲಂಗಿಸುತ್ತಾನೆ.

03223006a ಶ್ರುತ್ವಾ ಸ್ವರಂ ದ್ವಾರಗತಸ್ಯ ಭರ್ತುಃ|

         ಪ್ರತ್ಯುತ್ಥಿತಾ ತಿಷ್ಠ ಗೃಹಸ್ಯ ಮಧ್ಯೇ|

03223006c ದೃಷ್ಟ್ವಾ ಪ್ರವಿಷ್ಟಂ ತ್ವರಿತಾಸನೇನ|

         ಪಾದ್ಯೇನ ಚೈವ ಪ್ರತಿಪೂಜಯ ತ್ವಂ||

ಬಾಗಿಲಿನಲ್ಲಿ ನಿನ್ನ ಪತಿಯ ಸ್ವರವನ್ನು ಕೇಳಿದೊಡನೆಯೇ ಮೇಲೆದ್ದು ಮನೆಯ ಮಧ್ಯದಲ್ಲಿ ನಿಲ್ಲು. ಅವನು ಒಳ ಪ್ರವೇಶಿಸಿದನ್ನು ನೋಡಿ ಬೇಗನೇ ಆಸನದಿಂದ ಮತ್ತು ಪಾದ್ಯದಿಂದ ಅವನನ್ನು ಪೂಜಿಸು.

03223007a ಸಂಪ್ರೇಷಿತಾಯಾಮಥ ಚೈವ ದಾಸ್ಯಾಂ|

         ಉತ್ಥಾಯ ಸರ್ವಂ ಸ್ವಯಮೇವ ಕುರ್ಯಾಃ|

03223007c ಜಾನಾತು ಕೃಷ್ಣಸ್ತವ ಭಾವಮೇತಂ|

         ಸರ್ವಾತ್ಮನಾ ಮಾಂ ಭಜತೀತಿ ಸತ್ಯೇ||

ಈಗ ದಾಸಿಯನ್ನು ಕಳುಹಿಸಿಕೊಡು. ಎದ್ದು ಎಲ್ಲವನ್ನೂ ಸ್ವಯಂ ನೀನೇ ಮಾಡು. ಸತ್ಯೇ! ಆಗ ಕೃಷ್ಣನು ನಿನ್ನ ಭಾವವನ್ನು ತಿಳಿಯುತ್ತಾನೆ. ಇವಳು ಸಂಪೂರ್ಣವಾಗಿ ನನ್ನನ್ನೇ ಪ್ರೀತಿಸುತ್ತಾಳೆ ಎಂದು ಯೋಚಿಸುತ್ತಾನೆ.

03223008a ತ್ವತ್ಸನ್ನಿಧೌ ಯತ್ಕಥಯೇತ್ಪತಿಸ್ತೇ|

         ಯದ್ಯಪ್ಯಗುಹ್ಯಂ ಪರಿರಕ್ಷಿತವ್ಯಂ|

03223008c ಕಾ ಚಿತ್ಸಪತ್ನೀ ತವ ವಾಸುದೇವಂ|

         ಪ್ರತ್ಯಾದಿಶೇತ್ತೇನ ಭವೇದ್ವಿರಾಗಃ||

ನಿನ್ನ ಸನ್ನಿಧಿಯಲ್ಲಿ ನಿನ್ನ ಪತಿಯು ಏನನ್ನೇ ಹೇಳಿದರೂ, ಗುಟ್ಟಲ್ಲದಿದ್ದರೂ, ಗುಟ್ಟಾಗಿಯೇ ಇಡು. ನಿನ್ನ ಸವತಿಯೋರ್ವಳು ನಿನ್ನ ಕುರಿತು ವಾಸುದೇವನಿಗೆ ಹೇಳಿ ನಿನ್ನ ಕುರಿತು ವಿರಾಗನಾಗಬಹುದು.

03223009a ಪ್ರಿಯಾಂಶ್ಚ ರಕ್ತಾಂಶ್ಚ ಹಿತಾಂಶ್ಚ ಭರ್ತುಸ್|

         ತಾನ್ಭೋಜಯೇಥಾ ವಿವಿಧೈರುಪಾಯೈಃ|

03223009c ದ್ವೇಷ್ಯೈರಪಕ್ಷೈರಹಿತೈಶ್ಚ ತಸ್ಯ|

         ಭಿದ್ಯಸ್ವ ನಿತ್ಯಂ ಕುಹಕೋದ್ಧತೈಶ್ಚ||

ವಿವಿಧ ಉಪಾಯಗಳನ್ನು ಬಳಸಿ ನಿನ್ನ ಪತಿಯ ಪ್ರೀತಿಪಾತ್ರರನ್ನು, ವಿಧೇಯರನ್ನು, ಹಿತೈಷಿಗಳನ್ನು ಭೋಜನಕ್ಕೆ ಕರೆ. ಅವನ ದ್ವೇಷಿಗಳನ್ನು, ವಿರುದ್ಧ ಪಕ್ಷದಲ್ಲಿರುವವರನ್ನು, ಹಿತೈಷಿಗಳಲ್ಲದವರನ್ನು, ಕುಹಕರನ್ನು, ಉದ್ಧಟರಾಗಿ ನಡೆದುಕೊಳ್ಳುವವರನ್ನು ನಿತ್ಯವೂ ಬೇರೆಯಾಗಿಡು.

03223010a ಮದಂ ಪ್ರಮಾದಂ ಪುರುಷೇಷು ಹಿತ್ವಾ|

         ಸಮ್ಯಚ್ಚ ಭಾವಂ ಪ್ರತಿಗೃಹ್ಯ ಮೌನಂ|

03223010c ಪ್ರದ್ಯುಮ್ನಸಾಂಬಾವಪಿ ತೇ ಕುಮಾರೌ|

         ನೋಪಾಸಿತವ್ಯೌ ರಹಿತೇ ಕದಾ ಚಿತ್||

ನಿನ್ನ ಪುರುಷನು ಮತ್ತಿನಲ್ಲಿ ಏನಾದರೂ ಪ್ರಮಾದವನ್ನೆಸಗಿದರೆ ನಿನ್ನ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಂಡು ಮೌನವನ್ನು ತಾಳು. ಪ್ರದ್ಯುಮ್ನ- ಸಾಂಬ[1] ಇಬ್ಬರೂ ನಿನ್ನ ಪುತ್ರರೇ. ಎಂದೂ ಅವರನ್ನು ಬೇರೆ ಬೇರೆಯಾಗಿ ನೋಡಿಕೊಳ್ಳಬೇಡ.

03223011a ಮಹಾಕುಲೀನಾಭಿರಪಾಪಿಕಾಭಿಃ|

         ಸ್ತ್ರೀಭಿಃ ಸತೀಭಿಸ್ತವ ಸಖ್ಯಮಸ್ತು|

03223011c ಚಂಡಾಶ್ಚ ಶೌಂಡಾಶ್ಚ ಮಹಾಶನಾಶ್ಚ|

         ಚೌರಾಶ್ಚ ದುಷ್ಟಾಶ್ಚಪಲಾಶ್ಚ ವರ್ಜ್ಯಾಃ||

ಉತ್ತಮ ಕುಲದಲ್ಲಿ ಜನಿಸಿದ, ಕೆಟ್ಟವರಲ್ಲದ, ಸತೀ ಸ್ತ್ರೀಯರೊಂದಿಗೆ ಸಖ್ಯವನ್ನು ಮಾಡು. ಚಂಡರೂ, ಶುಂಡರೂ, ತುಂಬಾ ಊಟಮಾಡುವವರೂ, ಕಳ್ಳರೂ, ದುಷ್ಟರೂ, ಚಪಲರೂ ಆದವರನ್ನು ದೂರವಿಡು.

03223012a ಏತದ್ಯಶಸ್ಯಂ ಭಗವೇದನಂ ಚ|

         ಸ್ವರ್ಗ್ಯಂ ತಥಾ ಶತ್ರುನಿಬರ್ಹಣಂ ಚ|

03223012c ಮಹಾರ್ಹಮಾಲ್ಯಾಭರಣಾಂಗರಾಗಾ|

         ಭರ್ತಾರಮಾರಾಧಯ ಪುಣ್ಯಗಂಧಾ||

ಇದು ಉತ್ತಮವಾದ, ಸ್ವರ್ಗಸುಖವನ್ನು ನೀಡುವ, ಶತ್ರುಗಳನ್ನು ದೂರವಿಡುವ ದಾಂಪತ್ಯ ಜೀವನದ ಗುಟ್ಟು. ಬೆಲೆಬಾಳುವ ಮಾಲೆಗಳನ್ನು, ಆಭರಣಗಳನ್ನು, ಪುಣ್ಯ ಸುಗಂಧಗಳನ್ನು ಧರಿಸಿ ನಿನ್ನ ಪತಿಯನ್ನು ಆರಾಧಿಸು.””

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಸತ್ಯಭಾಮಾಸಂವಾದ ಪರ್ವಣಿ ತ್ರಿವಿಂಶತ್ಯಾಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಸತ್ಯಭಾಮಾಸಂವಾದ ಪರ್ವದಲ್ಲಿ ಇನ್ನೂರಾಇಪ್ಪತ್ಮೂರನೆಯ ಅಧ್ಯಾಯವು.

Related image

[1] ಪ್ರದ್ಯುಮ್ನನು ರುಕ್ಮಿಣಿಯ ಮಗ ಮತ್ತು ಸಾಂಬನು ಜಾಂಬವತಿಯ ಮಗ.

Comments are closed.