Aranyaka Parva: Chapter 232

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೩೨

ಪಾಂಡವರು ಕೌರವರನ್ನು ಗಂಧರ್ವರ ಸೆರೆಯಿಂದ ಬಿಡುಗಡೆಗೊಳಿಸಿದ್ದುದು

ಗಡುಸಾಗಿ ಮಾತನಾಡಬಾರದೆಂದು ಭೀಮನಿಗೆ ಹೇಳಿ ಯುಧಿಷ್ಠಿರನು ತಮ್ಮಂದಿರಿಗೆ ದುರ್ಯೋಧನಾದಿಗಳನ್ನು ಗಂಧರ್ವರ ಸೆರೆಯಿಂದ ಬಿಡಿಸಿಕೊಂಡು ಬರಲು ಆದೇಶಿಸಿದುದು (೧-೧೮). ಅರ್ಜುನನು ಕೌರವರನ್ನು ಬಿಡುಗಡೆಗೊಳಿಸುವ ಪ್ರತಿಜ್ಞೆಮಾಡಿದುದು (೧೯-೨೧).

03232001 ಯುಧಿಷ್ಠಿರ ಉವಾಚ|

03232001a ಅಸ್ಮಾನಭಿಗತಾಂಸ್ತಾತ ಭಯಾರ್ತಾಂ ಶರಣೈಷಿಣಃ|

03232001c ಕೌರವಾನ್ವಿಷಮಪ್ರಾಪ್ತಾನ್ಕಥಂ ಬ್ರೂಯಾಸ್ತ್ವಮೀದೃಶಂ||

ಯುಧಿಷ್ಠಿರನು ಹೇಳಿದನು: “ಕಷ್ಟದಲ್ಲಿರುವ, ಭಯಾರ್ತರಾಗಿ ನಮ್ಮ ಶರಣು ಬಂದಿರುವ ಇವರಿಗೆ ನೀನು ಏಕೆ ಈ ರೀತಿ ಮಾತನಾಡಬೇಕು ಮಗೂ!

03232002a ಭವಂತಿ ಭೇದಾ ಜ್ಞಾತೀನಾಂ ಕಲಹಾಶ್ಚ ವೃಕೋದರ|

03232002c ಪ್ರಸಕ್ತಾನಿ ಚ ವೈರಾಣಿ ಜ್ಞಾತಿಧರ್ಮೋ ನ ನಶ್ಯತಿ||

ವೃಕೋದರ! ದಾಯಾದಿಗಳಲ್ಲಿ ಭೇದ ಕಲಹಗಳು ನಡೆಯುತ್ತವೆ. ವೈರತ್ವವು ಮುಂದುವರೆದರೂ ಕುಟುಂಬ ಧರ್ಮವು ನಶಿಸುವುದಿಲ್ಲ.

03232003a ಯದಾ ತು ಕಶ್ಚಿಜ್ಞಾತೀನಾಂ ಬಾಹ್ಯಃ ಪ್ರಾರ್ಥಯತೇ ಕುಲಂ|

03232003c ನ ಮರ್ಷಯಂತಿ ತತ್ಸಂತೋ ಬಾಹ್ಯೇನಾಭಿಪ್ರಮರ್ಷಣಂ||

ಆದರೆ ಹೊರಗಿನವರು ಯಾರಾದರೂ ಕುಲದವರನ್ನು ಆಕ್ರಮಿಸಿದರೆ ಸಂತರು ಆ ಹೊರಗಿನವರ ಉದ್ಧಟತನವನ್ನು ಸಹಿಸುವುದಿಲ್ಲ.

03232004a ಜಾನಾತಿ ಹ್ಯೇಷ ದುರ್ಬುದ್ಧಿರಸ್ಮಾನಿಹ ಚಿರೋಷಿತಾನ್|

03232004c ಸ ಏಷ ಪರಿಭೂಯಾಸ್ಮಾನಕಾರ್ಷೀದಿದಮಪ್ರಿಯಂ||

ಈ ದುರ್ಬುದ್ಧಿ ಗಂಧರ್ವನು ನಾವು ಇಲ್ಲಿ ಬಹುಕಾಲದಿಂದ ಉಳಿದುಕೊಂಡಿದ್ದೇವೆ ಎಂದು ತಿಳಿದಿದ್ದಾನೆ. ಆದರೂ ಅವನು ನಮ್ಮನ್ನು ನಿರ್ಲಕ್ಷಿಸಿ ನಮಗೆ ಅಪ್ರಿಯವಾದುದನ್ನು ಮಾಡಿದ್ದಾನೆ.

03232005a ದುರ್ಯೋಧನಸ್ಯ ಗ್ರಹಣಾದ್ಗಂಧರ್ವೇಣ ಬಲಾದ್ರಣೇ|

03232005c ಸ್ತ್ರೀಣಾಂ ಬಾಹ್ಯಾಭಿಮರ್ಶಾಚ್ಚ ಹತಂ ಭವತಿ ನಃ ಕುಲಂ||

ಗಂಧರ್ವರು ರಣದಲ್ಲಿ ಬಲವನ್ನುಪಯೋಗಿಸಿ ದುರ್ಯೋಧನನನ್ನು ಸೆರೆಹಿಡಿದುದರಿಂದ ಮತ್ತು ಹೊರಗಿನವರು ಸ್ತ್ರೀಯರನ್ನು ಅತಿಕ್ರಮಿಸಿರುವುದರಿಂದ ನಮ್ಮ ಕುಲಕ್ಕೆ ಪೆಟ್ಟು ಕೊಟ್ಟ ಹಾಗೆ ಆಗಲಿಲ್ಲವೇ?

03232006a ಶರಣಂ ಚ ಪ್ರಪನ್ನಾನಾಂ ತ್ರಾಣಾರ್ಥಂ ಚ ಕುಲಸ್ಯ ನಃ|

03232006c ಉತ್ತಿಷ್ಠಧ್ವಂ ನರವ್ಯಾಘ್ರಾಃ ಸಜ್ಜೀಭವತ ಮಾಚಿರಂ||

ಶರಣು ಬಂದಿರುವವರನ್ನು ರಕ್ಷಿಸಲು ಮತ್ತು ಕುಲವನ್ನು ಉಳಿಸಲು ಎದ್ದೇಳು! ನರವ್ಯಾಘ್ರ! ಬೇಗನೇ ಸಿದ್ಧನಾಗು!

03232007a ಅರ್ಜುನಶ್ಚ ಯಮೌ ಚೈವ ತ್ವಂ ಚ ಭೀಮಾಪರಾಜಿತಃ|

03232007c ಮೋಕ್ಷಯಧ್ವಂ ಧಾರ್ತರಾಷ್ಟ್ರಂ ಹ್ರಿಯಮಾಣಂ ಸುಯೋಧನಂ||

ಅರ್ಜುನ, ಯಮಳರು ಮತ್ತು ಅಪರಾಜಿತ ಭೀಮ ನೀನೂ ಕೂಡ ಧಾರ್ತರಾಷ್ಟ್ರ ಸುಯೋಧನನನ್ನು ಸೆರೆಯಿಂದ ಬಿಡುಗಡೆ ಮಾಡಿಸಬೇಕು.

03232008a ಏತೇ ರಥಾ ನರವ್ಯಾಘ್ರಾಃ ಸರ್ವಶಸ್ತ್ರಸಮನ್ವಿತಾಃ|

03232008c ಇಂದ್ರಸೇನಾದಿಭಿಃ ಸೂತೈಃ ಸಮ್ಯತಾಃ ಕನಕಧ್ವಜಾಃ||

ನರವ್ಯಾಘ್ರರೇ! ಇಗೋ ಸರ್ವ ಶಸ್ತ್ರಗಳನ್ನೊಡಗೂಡಿದ, ಕನಕ ಧ್ವಜಗಳನ್ನು ಹೊಂದಿದ, ಇಂದ್ರಸೇನನೇ ಮೊದಲಾದ ಸೂತರು ನಡೆಸುವ ರಥಗಳಿವೆ.

03232009a ಏತಾನಾಸ್ಥಾಯ ವೈ ತಾತ ಗಂಧರ್ವಾನ್ಯೋದ್ಧುಮಾಹವೇ|

03232009c ಸುಯೋಧನಸ್ಯ ಮೋಕ್ಷಾಯ ಪ್ರಯತಧ್ವಮತಂದ್ರಿತಾಃ||

ತಮ್ಮಂದಿರೇ! ಇವುಗಳನ್ನು ಏರಿ ಗಂಧರ್ವರೊಡನೆ ಯುದ್ಧಮಾಡಿ ಸುಯೋಧನನನ್ನು ಬಿಡುಗಡೆಗೊಳಿಸಲು ಎಡೆಬಿಡದೆ ಪ್ರಯತ್ನಿಸಿ.

03232010a ಯ ಏವ ಕಶ್ಚಿದ್ರಾಜನ್ಯಃ ಶರಣಾರ್ಥಮಿಹಾಗತಂ|

03232010c ಪರಂ ಶಕ್ತ್ಯಾಭಿರಕ್ಷೇತ ಕಿಂ ಪುನಸ್ತ್ವಂ ವೃಕೋದರ||

ವೃಕೋದರ! ರಾಜನು ಯಾರೇ ಆದರೂ ಶರಣಾರ್ತಿಯಾಗಿ ಬಂದಿರುವವರನ್ನು ರಕ್ಷಿಸುವಾಗ ಪರಮ ಶಕ್ತಿಯುತನಾಗಿರುವ ನೀನು ಏಕೆ ರಕ್ಷಿಸುವುದಿಲ್ಲ?

03232011a ಕ ಇಹಾನ್ಯೋ ಭವೇತ್ತ್ರಾಣಮಭಿಧಾವೇತಿ ಚೋದಿತಃ|

03232011c ಪ್ರಾಂಜಲಿಂ ಶರಣಾಪನ್ನಂ ದೃಷ್ಟ್ವಾ ಶತ್ರುಮಪಿ ಧ್ರುವಂ||

ಇಲ್ಲಿರುವ ಯಾರು ತಾನೇ ಬಿಡುಗಡೆ ಮಾಡು ಎಂದು ಪ್ರಚೋದನೆಗೊಳಪಟ್ಟು, ಅವನು ಹಿಂದೆ ಶತ್ರುವೇ ಆಗಿರಲಿ, ಈಗ ಕೈಮುಗಿದು ಶರಣು ಬಂದಾಗ, ಬೇರೆ ಮಾಡಿಯಾನು?

03232012a ವರಪ್ರದಾನಂ ರಾಜ್ಯಂ ಚ ಪುತ್ರಜನ್ಮ ಚ ಪಾಂಡವ|

03232012c ಶತ್ರೋಶ್ಚ ಮೋಕ್ಷಣಂ ಕ್ಲೇಶಾತ್ತ್ರೀಣಿ ಚೈಕಂ ಚ ತತ್ಸಮಂ||

ಪಾಂಡವ! ವರಪ್ರದಾನ, ರಾಜ್ಯ, ಪುತ್ರಜನ್ಮ, ಶತ್ರುವನ್ನು ಕಷ್ಟದಿಂದ ಬಿಡುಗಡೆಮಾಡುವುದು ಇವುಗಳಲ್ಲಿ ಕೊನೆಯದು ಮೊದಲ ಮೂರಕ್ಕೆ ಸಮನಾದದ್ದು.

03232013a ಕಿಂ ಹ್ಯಭ್ಯಧಿಕಮೇತಸ್ಮಾದ್ಯದಾಪನ್ನಃ ಸುಯೋಧನಃ|

03232013c ತ್ವದ್ಬಾಹುಬಲಮಾಶ್ರಿತ್ಯ ಜೀವಿತಂ ಪರಿಮಾರ್ಗತಿ||

ಸುಯೋಧನನು ಸಹಾಯವನ್ನು ಕೇಳುತ್ತಿದ್ದಾನೆ ಮತ್ತು ಅವನು ಜೀವಂತನಾಗಿರಲು ನಿನ್ನ ಬಾಹುಬಲವನ್ನು ಆಶ್ರಯಿಸಿದ್ದಾನೆ ಎನ್ನುವುದಕ್ಕಿಂದ ಹೆಚ್ಚಿನದು ಏನಿದೆ?

03232014a ಸ್ವಯಮೇವ ಪ್ರಧಾವೇಯಂ ಯದಿ ನ ಸ್ಯಾದ್ವೃಕೋದರ|

03232014c ವಿತತೋಽಯಂ ಕ್ರತುರ್ವೀರ ನ ಹಿ ಮೇಽತ್ರ ವಿಚಾರಣಾ||

ವೃಕೋದರ! ವೀರ! ಈ ಯಜ್ಞವು ನಡೆಯದೇ ಇರುತ್ತಿದ್ದರೆ ಸ್ವಯಂ ನಾನೇ ಅವಸರಮಾಡಿ ಹೋಗುತ್ತಿದ್ದೆ. ಅದರಲ್ಲಿ ವಿಚಾರಮಾಡುವುದು ಏನೂ ಇಲ್ಲ.

03232015a ಸಾಮ್ನೈವ ತು ಯಥಾ ಭೀಮ ಮೋಕ್ಷಯೇಥಾಃ ಸುಯೋಧನಂ|

03232015c ತಥಾ ಸರ್ವೈರುಪಾಯೈಸ್ತ್ವಂ ಯತೇಥಾಃ ಕುರುನಂದನ||

ಭೀಮ! ಕುರುನಂದನ! ಸಾಮದಿಂದಲೇ ಸುಯೋಧನನನ್ನು ಬಿಡುಗಡೆಗೊಳಿಸಲು ಎಲ್ಲ ಉಪಾಯಗಳನ್ನೂ ಬಳಸು.

03232016a ನ ಸಾಮ್ನಾ ಪ್ರತಿಪದ್ಯೇತ ಯದಿ ಗಂಧರ್ವರಾಡಸೌ|

03232016c ಪರಾಕ್ರಮೇಣ ಮೃದುನಾ ಮೋಕ್ಷಯೇಥಾಃ ಸುಯೋಧನಂ||

ಆದರೆ ಸಾಮದಿಂದ ಗಂಧರ್ವರಾಜನು ಅವನನ್ನು ಹಿಂದಿರುಗಿಸದೇ ಇದ್ದರೆ ಮೃದುವಾದ ಪರಾಕ್ರಮವನ್ನು ಉಪಯೋಗಿಸಿ ಸುಯೋಧನನನ್ನು ಬಿಡುಗಡೆಗೊಳಿಸು.

03232017a ಅಥಾಸೌ ಮೃದುಯುದ್ಧೇನ ನ ಮುಂಚೇದ್ಭೀಮ ಕೌರವಾನ್|

03232017c ಸರ್ವೋಪಾಯೈರ್ವಿಮೋಚ್ಯಾಸ್ತೇ ನಿಗೃಹ್ಯ ಪರಿಪಂಥಿನಃ||

ಭೀಮ! ಮೃದು ಯುದ್ಧಕ್ಕೂ ಅವನು ಕೌರವನನ್ನು ಬಿಡುಗಡೆಗೊಳಿಸದೇ ಇದ್ದರೆ ಸರ್ವ ಉಪಾಯಗಳಿಂದ ಶತ್ರುವನ್ನು ನಿಗ್ರಹಿಸಿ ಅವನನ್ನು ಬಿಡುಗಡೆಮಾಡಿ ಬಾ.

03232018a ಏತಾವದ್ಧಿ ಮಯಾ ಶಕ್ಯಂ ಸಂದೇಷ್ಟುಂ ವೈ ವೃಕೋದರ|

03232018c ವೈತಾನೇ ಕರ್ಮಣಿ ತತೇ ವರ್ತಮಾನೇ ಚ ಭಾರತ||

ವೃಕೋದರ! ಭಾರತ! ನನ್ನ ಈ ಕರ್ಮಗಳು ನಡೆಯುವವರೆಗೆ ನಾನು ಈ ಆದೇಶವನ್ನು ನಿನಗೆ ಕೊಡಬಲ್ಲೆ.””

03232019 ವೈಶಂಪಾಯನ ಉವಾಚ|

03232019a ಅಜಾತಶತ್ರೋರ್ವಚನಂ ತಚ್ಚ್ರುತ್ವಾ ತು ಧನಂಜಯಃ|

03232019c ಪ್ರತಿಜಜ್ಞೇ ಗುರೋರ್ವಾಕ್ಯಂ ಕೌರವಾಣಾಂ ವಿಮೋಕ್ಷಣಂ||

ವೈಶಂಪಾಯನನು ಹೇಳಿದನು: “ಅಜಾತಶತ್ರುವಿನ ಆ ಮಾತನ್ನು ಕೇಳಿದ ಧನಂಜಯನು ಕೌರವರನ್ನು ಬಿಡುಗಡೆಗೊಳಿಸುವ ಆ ಗುರುವಾಕ್ಯದಂತೆ ಈ ಪ್ರತಿಜ್ಞೆಯನ್ನು ಮಾಡಿದನು.

03232020 ಅರ್ಜುನ ಉವಾಚ|

03232020a ಯದಿ ಸಾಮ್ನಾ ನ ಮೋಕ್ಷ್ಯಂತಿ ಗಂಧರ್ವಾ ಧೃತರಾಷ್ಟ್ರಜಾನ್|

03232020c ಅದ್ಯ ಗಂಧರ್ವರಾಜಸ್ಯ ಭೂಮಿಃ ಪಾಸ್ಯತಿ ಶೋಣಿತಂ||

ಅರ್ಜುನನು ಹೇಳಿದನು: “ಒಂದುವೇಳೆ ಗಂಧರ್ವನು ಸಾಮದಿಂದ ಧೃತರಾಷ್ಟ್ರನ ಮಕ್ಕಳನ್ನು ಬಿಡುಗಡೆ ಮಾಡದೇ ಇದ್ದರೆ ಇಂದು ಗಂಧರ್ವರಾಜನ ರಕ್ತವು ಭೂಮಿಯ ಮೇಲೆ ಬೀಳುತ್ತದೆ!””

03232021 ವೈಶಂಪಾಯನ ಉವಾಚ|

03232021a ಅರ್ಜುನಸ್ಯ ತು ತಾಂ ಶ್ರುತ್ವಾ ಪ್ರತಿಜ್ಞಾಂ ಸತ್ಯವಾದಿನಃ|

03232021c ಕೌರವಾಣಾಂ ತದಾ ರಾಜನ್ಪುನಃ ಪ್ರತ್ಯಾಗತಂ ಮನಃ||

ವೈಶಂಪಾಯನನು ಹೇಳಿದನು: “ರಾಜನ್! ಸತ್ಯವಾದಿ ಅರ್ಜುನನ ಈ ಪ್ರತಿಜ್ಞೆಯನ್ನು ಕೇಳಿ ಕೌರವರ ಮನಸ್ಸು ಪುನಃ ಹಿಂದಿರುಗಿತು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಮೋಚನಾನುಜ್ಞಾಯಾಯಾಂ ದ್ವಿತ್ರಿಂಶದಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಮೋಚನಾನುಜ್ಞೆಯಲ್ಲಿ ಇನ್ನೂರಾಮೂವತ್ತೆರಡನೆಯ ಅಧ್ಯಾಯವು.

Related image

Comments are closed.