Aranyaka Parva: Chapter 243

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೪೩

ಅರ್ಜುನನನ್ನು ಕೊಲ್ಲುವವರೆಗೆ ತಾನೂ ಯಾರಿಂದಲೂ ಪಾದಗಳನ್ನು ತೊಳೆಸಿಕೊಳ್ಳುವುದಿಲ್ಲ ಮತ್ತು ಮಾಂಸವನ್ನು ತಿನ್ನುವುದಿಲ್ಲವೆಂದು ಕರ್ಣನು ಪ್ರತಿಜ್ಞೆ ಮಾಡಿದುದು (೧-೧೭). ಕರ್ಣನ ಕುರಿತು ಯುಧಿಷ್ಠಿರನು ಚಿಂತಿಸಿ ದ್ವೈತವನವನ್ನು ಬಿಟ್ಟುಹೋಗಲು ಯೋಚಿಸುವುದು (೧೮-೨೧). ದುರ್ಯೋಧನನು ಧನದ ಫಲವು ಕೊಡುವುದರಲ್ಲಿ ಮತ್ತು ಭೋಗಿಸುವುದರಲ್ಲಿದೆ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಅದರಂತೆ ನಡೆದುಕೊಂಡಿದುದು (೨೨-೨೪).

03243001 ವೈಶಂಪಾಯನ ಉವಾಚ|

03243001a ಪ್ರವಿಶಂತಂ ಮಹಾರಾಜ ಸೂತಾಸ್ತುಷ್ಟುವುರಚ್ಯುತಂ|

03243001c ಜನಾಶ್ಚಾಪಿ ಮಹೇಷ್ವಾಸಂ ತುಷ್ಟುವೂ ರಾಜಸತ್ತಮಂ||

ವೈಶಂಪಾಯನನು ಹೇಳಿದನು: “ಮಹಾರಾಜನು ಪ್ರವೇಶಿಸುವಾಗ ಸೂತರು ಮತ್ತು ಜನರು ಆ ಅಚ್ಯುತ, ಮಹೇಷ್ವಾಸ ರಾಜಸತ್ತಮನನ್ನು ಹೊಗಳಿದರು.

03243002a ಲಾಜೈಶ್ಚಂದನಚೂರ್ಣೈಶ್ಚಾಪ್ಯವಕೀರ್ಯ ಜನಾಸ್ತದಾ|

03243002c ಊಚುರ್ದಿಷ್ಟ್ಯಾ ನೃಪಾವಿಘ್ನಾತ್ಸಮಾಪ್ತೋಽಯಂ ಕ್ರತುಸ್ತವ||

ಲಾಜ ಚಂದನ ಚೂರ್ಣಗಳನ್ನು ಅವನ ಮೇಲೆ ಎಸೆಯುತ್ತಾ ಜನರು “ನೃಪ! ಅದೃಷ್ಟದಿಂದ ನಿನ್ನ ಕ್ರತುವು ನಿರ್ವಿಘ್ನವಾಗಿ ನಡೆಯಿತು” ಎಂದರು.

03243003a ಅಪರೇ ತ್ವಬ್ರುವಂಸ್ತತ್ರ ವಾತಿಕಾಸ್ತಂ ಮಹೀಪತಿಂ|

03243003c ಯುಧಿಷ್ಠಿರಸ್ಯ ಯಜ್ಞೇನ ನ ಸಮೋ ಹ್ಯೇಷ ತು ಕ್ರತುಃ|

03243003e ನೈವ ತಸ್ಯ ಕ್ರತೋರೇಷ ಕಲಾಮರ್ಹತಿ ಷೋಡಶೀಂ||

ಇನ್ನು ಇತರರು, ಮಾತಿನಲ್ಲಿ ಶೂರರು, ಮಹೀಪತಿಗೆ ಹೇಳಿದರು: “ನಿನ್ನ ಕ್ರತುವು ಯುಧಿಷ್ಠಿರನ ಯಜ್ಞಕ್ಕೆ ಸ್ವಲ್ಪವೂ ಹೋಲುವುದಿಲ್ಲ. ನಿನ್ನ ಈ ಕ್ರತುವು ಹದಿನಾರರಲ್ಲಿ ಒಂದಾಣೆಯಷ್ಟೂ ಅಲ್ಲ.”

03243004a ಏವಂ ತತ್ರಾಬ್ರುವನ್ಕೇ ಚಿದ್ವಾತಿಕಾಸ್ತಂ ನರೇಶ್ವರಂ|

03243004c ಸುಹೃದಸ್ತ್ವಬ್ರುವಂಸ್ತತ್ರ ಅತಿ ಸರ್ವಾನಯಂ ಕ್ರತುಃ||

ಹೀಗೆ ಪರಿಣಾಮದ ಕುರಿತು ಯೋಚಿಸದೇ ಇದ್ದ ಕೆಲವರು ನರೇಶ್ವರನಿಗೆ ಹೇಳಿದರು. ಅವನ ಸುಹೃದಯರು “ಇದು ಎಲ್ಲ ಕ್ರತುಗಳನ್ನೂ ಮಿರಿಸುವಂತಿತ್ತು” ಎಂದು ಹೇಳಿದರು.

03243005a ಯಯಾತಿರ್ನಹುಷಶ್ಚಾಪಿ ಮಾಂಧಾತಾ ಭರತಸ್ತಥಾ|

03243005c ಕ್ರತುಮೇನಂ ಸಮಾಹೃತ್ಯ ಪೂತಾಃ ಸರ್ವೇ ದಿವಂ ಗತಾಃ||

“ಯಯಾತಿ, ನಹುಷ, ಮಾಂಧಾತಾ ಮತ್ತು ಭರತರು ಇಂತಹ ಕ್ರತುವನ್ನು ಪೂರೈಸಿ ಪುಣ್ಯರಾಗಿ ಎಲ್ಲರೂ ಸ್ವರ್ಗಕ್ಕೆ ಹೋದರು.”

03243006a ಏತಾ ವಾಚಃ ಶುಭಾಃ ಶೃಣ್ವನ್ಸುಹೃದಾಂ ಭರತರ್ಷಭ|

03243006c ಪ್ರವಿವೇಶ ಪುರಂ ಹೃಷ್ಟಃ ಸ್ವವೇಶ್ಮ ಚ ನರಾಧಿಪಃ||

ಭರತರ್ಷಭ! ಸುಹೃದಯರ ಈ ಶುಭ ಮಾತುಗಳನ್ನು ಕೇಳಿ ನರಾಧಿಪನು ಸಂತೋಷಗೊಂಡು ಪುರವನ್ನು ಮತ್ತು ಸ್ವಗೃಹವನ್ನು ಪ್ರವೇಶಿಸಿದನು.

03243007a ಅಭಿವಾದ್ಯ ತತಃ ಪಾದೌ ಮಾತಾಪಿತ್ರೋರ್ವಿಶಾಂ ಪತೇ|

03243007c ಭೀಷ್ಮದ್ರೋಣಕೃಪಾಣಾಂ ಚ ವಿದುರಸ್ಯ ಚ ಧೀಮತಃ||

03243008a ಅಭಿವಾದಿತಃ ಕನೀಯೋಭಿರ್ಭ್ರಾತೃಭಿರ್ಭ್ರಾತೃವತ್ಸಲಃ|

03243008c ನಿಷಸಾದಾಸನೇ ಮುಖ್ಯೇ ಭ್ರಾತೃಭಿಃ ಪರಿವಾರಿತಃ||

ವಿಶಾಂಪತೇ! ಆಗ ತಂದೆತಾಯಿಯರ, ಭೀಷ್ಮ, ದ್ರೋಣ, ಕೃಪ, ಮತ್ತು ಧೀಮಂತ ವಿದುರರ ಪಾದಗಳಿಗೆ ವಂದಿಸಿ, ಕಿರಿಯ ಸಹೋದರರಿಂದ ನಮಸ್ಕರಿಸಲ್ಪಟ್ಟು ಆ ಭ್ರಾತೃವತ್ಸಲನು ಸಹೋದರರಿಂದ ಸುತ್ತುವರೆದು ಪ್ರಮುಖ ಆಸನದಲ್ಲಿ ಕುಳಿತುಕೊಂಡನು.

03243009a ತಮುತ್ಥಾಯ ಮಹಾರಾಜ ಸೂತಪುತ್ರೋಽಬ್ರವೀದ್ವಚಃ|

03243009c ದಿಷ್ಟ್ಯಾ ತೇ ಭರತಶ್ರೇಷ್ಠ ಸಮಾಪ್ತೋಽಯಂ ಮಹಾಕ್ರತುಃ||

ಮಹಾರಾಜ! ಆಗ ಮೇಲೆದ್ದು ಸೂತಪುತ್ರನು ಹೇಳಿದನು: “ಭರತಶ್ರೇಷ್ಠ! ನಿನ್ನ ಈ ಮಹಾಕ್ರತುವು ಸಮಾಪ್ತವಾದುದು ಒಳ್ಳೆಯದಾಯಿತು.

03243010a ಹತೇಷು ಯುಧಿ ಪಾರ್ಥೇಷು ರಾಜಸೂಯೇ ತಥಾ ತ್ವಯಾ|

03243010c ಆಹೃತೇಽಹಂ ನರಶ್ರೇಷ್ಠ ತ್ವಾಂ ಸಭಾಜಯಿತಾ ಪುನಃ||

ಆದರೆ ಯುದ್ಧದಲ್ಲಿ ಪಾರ್ಥರು ಹತರಾಗಿ ನೀನು ರಾಜಸೂಯವನ್ನು ನೆರವೇರಿಸಿದಾಗ ನಾನು ನಿನಗೆ ಸಭೆಯಲ್ಲಿ ಪುನಃ ಈ ಜಯಘೋಷವನ್ನು ಹೇಳುತ್ತೇನೆ.”

03243011a ತಮಬ್ರವೀನ್ಮಹಾರಾಜೋ ಧಾರ್ತರಾಷ್ಟ್ರೋ ಮಹಾಯಶಾಃ|

03243011c ಸತ್ಯಮೇತತ್ತ್ವಯಾ ವೀರ ಪಾಂಡವೇಷು ದುರಾತ್ಮಸು||

03243012a ನಿಹತೇಷು ನರಶ್ರೇಷ್ಠ ಪ್ರಾಪ್ತೇ ಚಾಪಿ ಮಹಾಕ್ರತೌ|

03243012c ರಾಜಸೂಯೇ ಪುನರ್ವೀರ ತ್ವಂ ಮಾಂ ಸಂವರ್ಧಯಿಷ್ಯಸಿ||

ಆಗ ಮಹಾರಾಜ ಮಹಾಯಶಸ್ವಿ ಧಾರ್ತರಾಷ್ಟ್ರನು ಅವನಿಗೆ ಹೇಳಿದನು: “ವೀರ! ನೀನು ಸತ್ಯವನ್ನೇ ಹೇಳಿದ್ದೀಯೆ. ನರಶ್ರೇಷ್ಠ! ವೀರ! ದುರಾತ್ಮ ಪಾಂಡವರು ಹತರಾದ ಮೇಲೆ ಆ ಮಹಾಕ್ರತು ರಾಜಸೂಯವನ್ನು ಪೂರೈಸಿದ ನಂತರ ನೀನು ನನ್ನನ್ನು ಪುನಃ ಸತ್ಕರಿಸುವೆ.”

03243013a ಏವಮುಕ್ತ್ವಾ ಮಹಾಪ್ರಾಜ್ಞಃ ಕರ್ಣಮಾಶ್ಲಿಷ್ಯ ಭಾರತ|

03243013c ರಾಜಸೂಯಂ ಕ್ರತುಶ್ರೇಷ್ಠಂ ಚಿಂತಯಾಮಾಸ ಕೌರವಃ||

ಭಾರತ! ಹೀಗೆ ಹೇಳಿ ಆ ಮಹಾಪ್ರಾಜ್ಞನು ಕರ್ಣನನ್ನು ಅಪ್ಪಿಕೊಂಡನು ಮತ್ತು ಕೌರವನು ಆ ಶ್ರೇಷ್ಠ ಕ್ರತು ರಾಜಸೂಯದ ಕುರಿತು ಆಲೋಚಿಸಿದನು.

03243014a ಸೋಽಬ್ರವೀತ್ಸುಹೃದಶ್ಚಾಪಿ ಪಾರ್ಶ್ವಸ್ಥಾನ್ನೃಪಸತ್ತಮಃ|

03243014c ಕದಾ ತು ತಂ ಕ್ರತುವರಂ ರಾಜಸೂಯಂ ಮಹಾಧನಂ|

03243014e ನಿಹತ್ಯ ಪಾಂಡವಾನ್ಸರ್ವಾನಾಹರಿಷ್ಯಾಮಿ ಕೌರವಾಃ||

ಆ ನೃಪಸತ್ತಮನು ಪಕ್ಕದಲ್ಲಿದ್ದ ಸುಹೃದಯರಿಗೂ ಹೇಳಿದನು: “ಕೌರವರೇ! ಪಾಂಡವರೆಲ್ಲರನ್ನೂ ಕೊಂದು ನಂತರ ನಾನು ಆ ಕ್ರತುವರ ಮಹಾಧನದ ರಾಜಸೂಯವನ್ನು ಆಚರಿಸುತ್ತೇನೆ.”

03243015a ತಮಬ್ರವೀತ್ತದಾ ಕರ್ಣಃ ಶೃಣು ಮೇ ರಾಜಕುಂಜರ|

03243015c ಪಾದೌ ನ ಧಾವಯೇ ತಾವದ್ಯಾವನ್ನ ನಿಹತೋಽರ್ಜುನಃ||

ಆಗ ಕರ್ಣನು ಅವನಿಗೆ ಹೇಳಿದನು: “ರಾಜಕುಂಜರ! ನನ್ನನ್ನು ಕೇಳು. ನಾನು ಅರ್ಜುನನನ್ನು ಕೊಲ್ಲುವವರೆಗೆ ನನ್ನ ಪಾದಗಳನ್ನು ತೊಳೆಯಲು ಯಾರಿಗೂ ಬಿಡುವುದಿಲ್ಲ ಮತ್ತು ಮಾಂಸವನ್ನು ತಿನ್ನುವುದಿಲ್ಲ.

03243016a ಅಥೋತ್ಕ್ರುಷ್ಟಂ ಮಹೇಷ್ವಾಸೈರ್ಧಾರ್ತರಾಷ್ಟ್ರೈರ್ಮಹಾರಥೈಃ|

03243016c ಪ್ರತಿಜ್ಞಾತೇ ಫಲ್ಗುನಸ್ಯ ವಧೇ ಕರ್ಣೇನ ಸಂಯುಗೇ|

03243016e ವಿಜಿತಾಂಶ್ಚಾಪ್ಯಮನ್ಯಂತ ಪಾಂಡವಾನ್ಧೃತರಾಷ್ಟ್ರಜಾಃ||

ಯುದ್ಧದಲ್ಲಿ ಫಲ್ಗುನನನ್ನು ವಧಿಸುತ್ತೇನೆ” ಎಂದು ಕರ್ಣನು ಪ್ರತಿಜ್ಞೆಮಾಡಿದಾಗ ಆ ಮಹೇಷ್ವಾಸ ಮಹಾರಥಿ ಧಾರ್ತರಾಷ್ಟ್ರರು ಹರ್ಷೋದ್ಗಾರ ಮಾಡಿದರು. ಧೃತರಾಷ್ಟ್ರನ ಮಕ್ಕಳು ಪಾಂಡವರನ್ನು ಈಗಾಗಲೇ ಗೆದ್ದರೋ ಎನ್ನುವಂತೆ ತೋರಿದರು.

03243017a ದುರ್ಯೋಧನೋಽಪಿ ರಾಜೇಂದ್ರ ವಿಸೃಜ್ಯ ನರಪುಂಗವಾನ್|

03243017c ಪ್ರವಿವೇಶ ಗೃಹಂ ಶ್ರೀಮಾನ್ಯಥಾ ಚೈತ್ರರಥಂ ಪ್ರಭುಃ|

03243017e ತೇಽಪಿ ಸರ್ವೇ ಮಹೇಷ್ವಾಸಾ ಜಗ್ಮುರ್ವೇಶ್ಮಾನಿ ಭಾರತ||

ರಾಜೇಂದ್ರ! ದುರ್ಯೋಧನನಾದರೋ ನರಪುಂಗವರನ್ನು ಕಳುಹಿಸಿ ಪ್ರಭು ಚೈತ್ರರಥನಂತೆ ತನ್ನ ಶ್ರೀಮಂತ ಅರಮನೆಯನ್ನು ಪ್ರವೇಶಿಸಿದನು. ಭಾರತ! ಉಳಿದ ಎಲ್ಲ ಮಹೇಷ್ವಾಸರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

03243018a ಪಾಂಡವಾಶ್ಚ ಮಹೇಷ್ವಾಸಾ ದೂತವಾಕ್ಯಪ್ರಚೋದಿತಾಃ|

03243018c ಚಿಂತಯಂತಸ್ತಮೇವಾರ್ಥಂ ನಾಲಭಂತ ಸುಖಂ ಕ್ವ ಚಿತ್||

ಮಹೇಷ್ವಾಸ ಪಾಂಡವರಾದರೋ ದೂತರ ಮಾತುಗಳನ್ನು ಕೇಳಿ ಪ್ರಚೋದಿತರಾಗಿ ಚಿಂತೆಗೊಳಗಾದರು ಮತ್ತು ಅಂದಿನಿಂದ ಸ್ವಲ್ಪವೂ  ಸುಖವನ್ನು ಹೊಂದಲಿಲ್ಲ.

03243019a ಭೂಯಶ್ಚ ಚಾರೈ ರಾಜೇಂದ್ರ ಪ್ರವೃತ್ತಿರುಪಪಾದಿತಾ|

03243019c ಪ್ರತಿಜ್ಞಾ ಸೂತಪುತ್ರಸ್ಯ ವಿಜಯಸ್ಯ ವಧಂ ಪ್ರತಿ||

ರಾಜೇಂದ್ರ! ವಿಜಯನ ವಧೆಯ ಕುರಿತು ಸೂತಪುತ್ರನ ಪ್ರತಿಜ್ಞೆಯ ವಿಷಯವನ್ನೂ ಚಾರರು ಸಂಗ್ರಹಿಸಿ ವರದಿಮಾಡಿದರು.

03243020a ಏತಚ್ಚ್ರುತ್ವಾ ಧರ್ಮಸುತಃ ಸಮುದ್ವಿಗ್ನೋ ನರಾಧಿಪ|

03243020c ಅಭೇದ್ಯಕವಚಂ ಮತ್ವಾ ಕರ್ಣಮದ್ಭುತವಿಕ್ರಮಂ|

03243020e ಅನುಸ್ಮರಂಶ್ಚ ಸಂಕ್ಲೇಶಾನ್ನ ಶಾಂತಿಮುಪಯಾತಿ ಸಃ||

ನರಾಧಿಪ! ಇದನ್ನು ಕೇಳಿ ಧರ್ಮಸುತನು ಸಮುದ್ವಿಗ್ನನಾದನು. ಕರ್ಣನ ಕವಚವು ಅಭೇದ್ಯ ಮತ್ತು ಅವನು ಅದ್ಭುತ ವಿಕ್ರಮಿಯೆಂದು ತಿಳಿದು ಕಷ್ಟಗಳನ್ನು ನೆನಪಿಸಿಕೊಳ್ಳುತ್ತಾ ಶಾಂತಿಯನ್ನು ಕಳೆದುಕೊಂಡನು.

03243021a ತಸ್ಯ ಚಿಂತಾಪರೀತಸ್ಯ ಬುದ್ಧಿರ್ಜಜ್ಞೇ ಮಹಾತ್ಮನಃ|

03243021c ಬಹುವ್ಯಾಲಮೃಗಾಕೀರ್ಣಂ ತ್ಯಕ್ತುಂ ದ್ವೈತವನಂ ವನಂ||

ಚಿಂತೆಯಿಂದ ಪರಿತಪಿಸುತ್ತಿದ್ದ ಆ ಮಹಾತ್ಮನ ಮನಸ್ಸಿನಲ್ಲಿ, ಬಹಳ ವ್ಯಾಲಮೃಗಗಳಿಂದ ಕೂಡಿದ ದ್ವೈತವನವನ್ನು ಬಿಡುವ, ಯೋಚನೆಯು ಹುಟ್ಟಿತು.

03243022a ಧಾರ್ತರಾಷ್ಟ್ರೋಽಪಿ ನೃಪತಿಃ ಪ್ರಶಶಾಸ ವಸುಂಧರಾಂ|

03243022c ಭ್ರಾತೃಭಿಃ ಸಹಿತೋ ವೀರೈರ್ಭೀಷ್ಮದ್ರೋಣಕೃಪೈಸ್ತಥಾ||

ನೃಪತಿ ಧಾರ್ತರಾಷ್ಟ್ರನಾದರೋ ವೀರ ಭ್ರಾತೃಗಳ ಮತ್ತು ಭೀಷ್ಮ, ದ್ರೋಣ, ಕೃಪರ ಸಹಿತ ವಸುಂಧರೆಯನ್ನು ಆಳಿದನು.

03243023a ಸಂಗಮ್ಯ ಸೂತಪುತ್ರೇಣ ಕರ್ಣೇನಾಹವಶೋಭಿನಾ|

03243023c ದುರ್ಯೋಧನಃ ಪ್ರಿಯೇ ನಿತ್ಯಂ ವರ್ತಮಾನೋ ಮಹೀಪತಿಃ|

03243023e ಪೂಜಯಾಮಾಸ ವಿಪ್ರೇಂದ್ರಾನ್ಕ್ರತುಭಿರ್ಭೂರಿದಕ್ಷಿಣೈಃ||

ಯುದ್ಧದಲ್ಲಿ ಶೋಭಿಸುವ ಸೂತಪುತ್ರ ಕರ್ಣನನ್ನು ಸೇರಿ ಮಹೀಪತಿ ದುರ್ಯೋಧನನು ನಿತ್ಯವೂ ಚೆನ್ನಾಗಿ ನಡೆದುಕೊಂಡಿದ್ದನು ಮತ್ತು ವಿಪ್ರೇಂದ್ರರನ್ನು ಭೂರಿದಕ್ಷಿಣೆಗಳ ಕ್ರತುಗಳಿಂದ ಪೂಜಿಸಿದನು.

03243024a ಭ್ರಾತೄಣಾಂ ಚ ಪ್ರಿಯಂ ರಾಜನ್ಸ ಚಕಾರ ಪರಂತಪಃ|

03243024c ನಿಶ್ಚಿತ್ಯ ಮನಸಾ ವೀರೋ ದತ್ತಭುಕ್ತಫಲಂ ಧನಂ||

ರಾಜನ್! ಆ ಪರಂತಪನು ಧನದ ಫಲವು ಕೊಡುವುದರಲ್ಲಿ ಮತ್ತು ಭೋಗಿಸುವುದರಲ್ಲಿದೆ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಭ್ರಾತೃಗಳಿಗೆ ಪ್ರಿಯವಾದುದನ್ನು ಮಾಡಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಯುಧಿಷ್ಠಿರಚಿಂತಾಯಾಂ ತ್ರಿಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಯುಧಿಷ್ಠಿರಚಿಂತೆಯಲ್ಲಿ ಇನ್ನೂರಾನಲ್ವತ್ಮೂರನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೩೯/೧೦೦, ಅಧ್ಯಾಯಗಳು-೫೪೦/೧೯೯೫, ಶ್ಲೋಕಗಳು-೧೮೦೩೧/೭೩೭೮೪

Related image

Comments are closed.