ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ
Contents
Toggle೨೫೫
ತನ್ನ ಸೇನೆಯು ನಾಶವಾಗಲು ಜಯದ್ರಥನು ನಡುಗುತ್ತಾ ದ್ರೌಪದಿಯನ್ನು ಬಿಡುಗಡೆ ಮಾಡಿ ಪಲಾಯನ ಮಾಡಿದುದು (೧-೩೩). ಭೀಮಾರ್ಜುನರು ಸೈಂಧವನನ್ನು ಹುಡುಕಿಕೊಂಡು ಹೋಗಲು ಯುಧಿಷ್ಠಿರನು ನಕುಲ-ಸಹದೇವರೊಡನೆ ದ್ರೌಪದಿ-ಧೌಮ್ಯರನ್ನು ಕರೆದುಕೊಂಡು ಆಶ್ರಮಕ್ಕೆ ಮರಳಿದುದು (೩೪-೫೧). ಸೈಂಧವನ ಕುದುರೆಯನ್ನು ಕೊಂದು, ಓಡಿಹೋಗುತ್ತಿದ್ದವನನ್ನು ಭೀಮನು ಹಿಂಬಾಲಿಸಲು ಅವನನ್ನು ಕೊಲ್ಲಬೇಡವೆಂದು ಅರ್ಜುನನು ಹೇಳಿದುದು (೫೨-೫೯).
03255001 ವೈಶಂಪಾಯನ ಉವಾಚ|
03255001a ಸಂತಿಷ್ಠತ ಪ್ರಹರತ ತೂರ್ಣಂ ವಿಪರಿಧಾವತ|
03255001c ಇತಿ ಸ್ಮ ಸೈಂಧವೋ ರಾಜಾ ಚೋದಯಾಮಾಸ ತಾನ್ನೃಪಾನ್||
ವೈಶಂಪಾಯನನು ಹೇಳಿದನು: “ಗಟ್ಟಿಯಾಗಿ ನಿಲ್ಲಿ! ಅವರನ್ನು ಸುತ್ತುವರೆದು ಪ್ರಹರಿಸಿ!” ಎಂದು ರಾಜ ಸೈಂಧವನು ಆ ನೃಪರನ್ನು ಪ್ರಚೋದಿಸಿದನು.
03255002a ತತೋ ಘೋರತರಃ ಶಬ್ದೋ ರಣೇ ಸಮಭವತ್ತದಾ|
03255002c ಭೀಮಾರ್ಜುನಯಮಾನ್ದೃಷ್ಟ್ವಾ ಸೈನ್ಯಾನಾಂ ಸಯುಧಿಷ್ಠಿರಾನ್||
ಆಗ ರಣದಲ್ಲಿ ಭೀಮಾರ್ಜುನರನ್ನು ಮತ್ತು ಯುಧಿಷ್ಠಿರನೊಂದಿಗೆ ಯಮಳರನ್ನು ಕಂಡು ಸೇನೆಯಲ್ಲಿ ಘೋರತರ ಶಬ್ಧವು ಒಂದೇ ಸಮನೆ ಕೇಳಿಬಂದಿತು.
03255003a ಶಿಬಿಸಿಂಧುತ್ರಿಗರ್ತಾನಾಂ ವಿಷಾದಶ್ಚಾಪ್ಯಜಾಯತ|
03255003c ತಾನ್ದೃಷ್ಟ್ವಾ ಪುರುಷವ್ಯಾಘ್ರಾನ್ವ್ಯಾಘ್ರಾನಿವ ಬಲೋತ್ಕಟಾನ್||
ವ್ಯಾಘ್ರದಂತೆ ಬಲೋತ್ಕಟರಾಗಿದ್ದ ಆ ಪುರುಷವ್ಯಾಘ್ರರನ್ನು ನೋಡಿ ಆ ಶಿಬಿ, ಸಿಂಧು, ತ್ರಿಗರ್ತರಲ್ಲಿ ವಿಷಾದವುಂಟಾಯಿತು.
03255004a ಹೇಮಚಿತ್ರಸಮುತ್ಸೇಧಾಂ ಸರ್ವಶೈಕ್ಯಾಯಸೀಂ ಗದಾಂ|
03255004c ಪ್ರಗೃಹ್ಯಾಭ್ಯದ್ರವದ್ಭೀಮಃ ಸೈಂಧವಂ ಕಾಲಚೋದಿತಂ||
ಹೇಮಚಿತ್ರದಂತೆ ಹೊಳೆಯುತ್ತಿರುವ, ಉಕ್ಕಿನ ಎರಕವನ್ನು ಸುರಿದಿದ್ದ ಗದೆಯನ್ನು ಹಿಡಿದು ಭೀಮನು ಕಾಲಚೋದಿತ ಸೈಂಧವನಲ್ಲಿಗೆ ಓಡಿಬಂದನು.
03255005a ತದಂತರಮಥಾವೃತ್ಯ ಕೋಟಿಕಾಶ್ಯೋಽಭ್ಯಹಾರಯತ್|
03255005c ಮಹತಾ ರಥವಂಶೇನ ಪರಿವಾರ್ಯ ವೃಕೋದರಂ||
ಅವರ ಮಧ್ಯದಲ್ಲಿ ಮಹಾ ರಥಗಳ ಸಾಲನ್ನು ತಂದಿರಿಸಿ ಕೋಟಿಕಾಶ್ಯನು ವೃಕೋದರನನ್ನು ತಡೆದನು.
03255006a ಶಕ್ತಿತೋಮರನಾರಾಚೈರ್ವೀರಬಾಹುಪ್ರಚೋದಿತೈಃ|
03255006c ಕೀರ್ಯಮಾಣೋಽಪಿ ಬಹುಭಿರ್ನ ಸ್ಮ ಭೀಮೋಽಭ್ಯಕಂಪತ||
ಹಲವಾರು ಶಕ್ತಿ, ತೋಮರ, ಉಕ್ಕಿನ ಶರಗಳನ್ನು ವೀರಬಾಹುಗಳು ಅವನ ಮೇಲೆ ಸುರಿದರೂ ಭೀಮನು ಸ್ವಲ್ಪವೂ ಅಲುಗಾಡಲಿಲ್ಲ.
03255007a ಗಜಂ ತು ಸಗಜಾರೋಹಂ ಪದಾತೀಂಶ್ಚ ಚತುರ್ದಶ|
03255007c ಜಘಾನ ಗದಯಾ ಭೀಮಃ ಸೈಂಧವಧ್ವಜಿನೀಮುಖೇ||
ಅಲ್ಲದೇ ಭೀಮನು ಗದೆಯಿಂದ ಸೈಂಧವನ ಧ್ವಜದ ಮುಂದೆಯೇ ಆನೆಯನ್ನು, ಆನೆಯನ್ನು ಏರಿದವನನ್ನು ಮತ್ತು ಹದಿನಾಲ್ಕು ಪದಾತಿಗಳನ್ನು ಹೊಡೆದುರುಳಿಸಿದನು.
03255008a ಪಾರ್ಥಃ ಪಂಚಶತಾಂ ಶೂರಾನ್ಪಾರ್ವತೀಯಾನ್ಮಹಾರಥಾನ್|
03255008c ಪರೀಪ್ಸಮಾನಃ ಸೌವೀರಂ ಜಘಾನ ಧ್ವಜಿನೀಮುಖೇ||
ಅವನ ಧ್ವಜದ ಎದುರೇ ಪಾರ್ಥನು ಐದುನೂರು ಶೂರ ಮಹಾರಥಿ ಪರ್ವತವಾಸಿಗಳನ್ನು ಸಂಹರಿಸಿ, ಸೌವೀರವನ್ನು ಸಮೀಪಿಸಿದನು.
03255009a ರಾಜಾ ಸ್ವಯಂ ಸುವೀರಾಣಾಂ ಪ್ರವರಾಣಾಂ ಪ್ರಹಾರಿಣಾಂ|
03255009c ನಿಮೇಷಮಾತ್ರೇಣ ಶತಂ ಜಘಾನ ಸಮರೇ ತದಾ||
ಸ್ವಯಂ ರಾಜಾ ಯುಧಿಷ್ಠಿರನು ಸಮರದಲ್ಲಿ ಆಕ್ರಮಣ ಮಾಡಿದ ನೂರು ಸುವೀರಪ್ರಮುಖರನ್ನು ನಿಮಿಷಮಾತ್ರದಲ್ಲಿ ಸಂಹರಿಸಿದನು.
03255010a ದದೃಶೇ ನಕುಲಸ್ತತ್ರ ರಥಾತ್ಪ್ರಸ್ಕಂದ್ಯ ಖಡ್ಗಧೃಕ್|
03255010c ಶಿರಾಂಸಿ ಪಾದರಕ್ಷಾಣಾಂ ಬೀಜವತ್ಪ್ರವಪನ್ಮುಹುಃ||
ಅಲ್ಲಿ ನಕುಲನು ರಥದಿಂದ ಧುಮುಕಿ ಖಡ್ಗವನ್ನು ಬೀಸಿ ಆನೆಗಳ ಪಾದರಕ್ಷಕರ ಶಿರಗಳನ್ನು ಬೀಜಗಳಂತೆ ತೂರಿದುದು ಕಂಡುಬಂದಿತು.
03255011a ಸಹದೇವಸ್ತು ಸಮ್ಯಾಯ ರಥೇನ ಗಜಯೋಧಿನಃ|
03255011c ಪಾತಯಾಮಾಸ ನಾರಾಚೈರ್ದ್ರುಮೇಭ್ಯ ಇವ ಬರ್ಹಿಣಃ||
ಸಹದೇವನಾದರೋ ರಥದಲ್ಲಿಂದ ಗಜಯೋಧಿಗಳನ್ನು ಉಕ್ಕಿನ ಈಟಿಗಳಿಂದ ನವಿಲುಗಳನ್ನು ಮರಗಳಿಂದ ಕೆಳಗುರುಳಿಸುವಂತೆ ಬೀಳಿಸಿದನು.
03255012a ತತಸ್ತ್ರಿಗರ್ತಃ ಸಧನುರವತೀರ್ಯ ಮಹಾರಥಾತ್|
03255012c ಗದಯಾ ಚತುರೋ ವಾಹಾನ್ರಾಜ್ಞಸ್ತಸ್ಯ ತದಾವಧೀತ್||
ಆಗ ಗದೆಯಲ್ಲಿ ಚತುರನಾದ ತ್ರಿಗರ್ತನು ಧನುಸ್ಸಿನೊಂದಿಗೆ ಮಹಾರಥದಿಂದ ಕೆಳಗಿಳಿದು ಧರ್ಮರಾಜನ ಕುದುರೆಗಳನ್ನು ಹೊಡೆದುರಿಳಿಸಿದನು.
03255013a ತಮಭ್ಯಾಶಗತಂ ರಾಜಾ ಪದಾತಿಂ ಕುಂತಿನಂದನಃ|
03255013c ಅರ್ಧಚಂದ್ರೇಣ ಬಾಣೇನ ವಿವ್ಯಾಧೋರಸಿ ಧರ್ಮರಾಟ್||
ಆಗ ಕುಂತಿನಂದನ ರಾಜಾ ಧರ್ಮರಾಜನು ಅರ್ಧಚಂದ್ರದ ಬಾಣದಿಂದ ಪದಾತಿಯ ಎದೆಗೆ ಹೊಡೆದನು.
03255014a ಸ ಭಿನ್ನಹೃದಯೋ ವೀರೋ ವಕ್ತ್ರಾಚ್ಚೋಣಿತಮುದ್ವಮನ್|
03255014c ಪಪಾತಾಭಿಮುಖಃ ಪಾರ್ಥಂ ಚಿನ್ನಮೂಲ ಇವ ದ್ರುಮಃ||
ಆ ವೀರನು ಹೃದಯವೊಡೆದು, ಬಾಯಿಯಿಂದ ರಕ್ತವನ್ನು ಕಾರಿ, ಬೇರುಕಡಿದ ಮರದಂತೆ ಪಾರ್ಥನ ಎದಿರು ಬಿದ್ದನು.
03255015a ಇಂದ್ರಸೇನದ್ವಿತೀಯಸ್ತು ರಥಾತ್ಪ್ರಸ್ಕಂದ್ಯ ಧರ್ಮರಾಟ್|
03255015c ಹತಾಶ್ವಃ ಸಹದೇವಸ್ಯ ಪ್ರತಿಪೇದೇ ಮಹಾರಥಂ|
ತನ್ನ ಕುದುರೆಗಳು ಹತವಾಗಲು ಧರ್ಮರಾಜನು ಇಂದ್ರಸೇನನ ಸಹಾಯದಿಂದ ರಥದಿಂದ ಕೆಳಗಿಳಿದು ಸಹದೇವನ ಮಹಾರಥವನ್ನು ಏರಿದನು.
03255016a ನಕುಲಂ ತ್ವಭಿಸಂಧಾಯ ಕ್ಷೇಮಂಕರಮಹಾಮುಖೌ|
03255016c ಉಭಾವುಭಯತಸ್ತೀಕ್ಷ್ಣೈಃ ಶರವರ್ಷೈರವರ್ಷತಾಂ||
ಅಷ್ಟರಲ್ಲಿಯೇ ಕ್ಷೇಮಂಕರ ಮತ್ತು ಮಹಾಮುಖರೀರ್ವರು ನಕುಲನನ್ನು ಎದುರಿಸಿ ಇಬ್ಬರೂ ತೀಕ್ಷ್ಣಶರಗಳ ಮಳೆಗಳನ್ನು ಅವನ ಮೇಲೆ ಸುರಿಸಿದರು.
03255017a ತೌ ಶರೈರಭಿವರ್ಷಂತೌ ಜೀಮೂತಾವಿವ ವಾರ್ಷಿಕೌ|
03255017c ಏಕೈಕೇನ ವಿಪಾಠೇನ ಜಘ್ನೇ ಮಾದ್ರವತೀಸುತಃ||
ಮಳೆಗಾಲದ ಮೋಡಗಳಂತೆ ಶರಗಳ ಮಳೆಯನ್ನು ಸುರಿಸುತ್ತಿರುವ ಆ ಇಬ್ಬರನ್ನೂ ಮಾದ್ರವತೀಸುತನು ಒಂದೊಂದು ಅಗಲ ಬಾಣಗಳಿಂದ ಸಂಹರಿಸಿದನು.
03255018a ತ್ರಿಗರ್ತರಾಜಃ ಸುರಥಸ್ತಸ್ಯಾಥ ರಥಧೂರ್ಗತಃ|
03255018c ರಥಮಾಕ್ಷೇಪಯಾಮಾಸ ಗಜೇನ ಗಜಯಾನವಿತ್||
ಆಗ ಗಜಯಾನವನ್ನು ತಿಳಿದಿದ್ದ ತ್ರಿಗರ್ತರಾಜ ಸುರಥನು ರಥಧ್ವಜವನ್ನು ಹಿಡಿದು ನಿಂತು ಆನೆಯಿಂದ ಅವನ ರಥವನ್ನು ಪುಡಿಮಾಡಿದನು.
03255019a ನಕುಲಸ್ತ್ವಪಭೀಸ್ತಸ್ಮಾದ್ರಥಾಚ್ಚರ್ಮಾಸಿಪಾಣಿಮಾನ್|
03255019c ಉದ್ಭ್ರಾಂತಂ ಸ್ಥಾನಮಾಸ್ಥಾಯ ತಸ್ಥೌ ಗಿರಿರಿವಾಚಲಃ||
ಆದರೆ ನಕುಲನು ಭಯಪಡದೇ ರಥದಿಂದ ಕೆಳಗಿಳಿದು ಖಡ್ಗವನ್ನು ಹಿಡಿದು ಬೀಸುತ್ತಾ ಗಿರಿಯಂತೆ ಅಚಲವಾಗಿ ಸ್ಥಾನದಲ್ಲಿ ನಿಂತುಕೊಂಡನು.
03255020a ಸುರಥಸ್ತಂ ಗಜವರಂ ವಧಾಯ ನಕುಲಸ್ಯ ತು|
03255020c ಪ್ರೇಷಯಾಮಾಸ ಸಕ್ರೋಧಮಭ್ಯುಚ್ಚ್ರಿತಕರಂ ತತಃ||
ನಕುಲನ ವಧೆಗೆಂದು ಸುರಥನು ಕ್ರೋಧದಿಂದ ಸೊಂಡಿಲನ್ನು ಮೇಲೆತ್ತಿ ಬರುತ್ತಿರುವ ಶ್ರೇಷ್ಠ ಗಜವೊಂದನ್ನು ಕಳುಹಿಸಿದನು.
03255021a ನಕುಲಸ್ತಸ್ಯ ನಾಗಸ್ಯ ಸಮೀಪಪರಿವರ್ತಿನಃ|
03255021c ಸವಿಷಾಣಂ ಭುಜಂ ಮೂಲೇ ಖಡ್ಗೇನ ನಿರಕೃಂತತ||
ನಕುಲನಾದರೋ ಹತ್ತಿರ ಬರುತ್ತಿರುವ ನಾಗದ ಸೊಂಡಿಲು ದಂತಗಳನ್ನು ಮೂಲವಾಗಿ ಖಡ್ಗದಿಂದ ಕತ್ತರಿಸಿದನು.
03255022a ಸ ವಿನದ್ಯ ಮಹಾನಾದಂ ಗಜಃ ಕಂಕಣಭೂಷಣಃ|
03255022c ಪತನ್ನವಾಕ್ಶಿರಾ ಭೂಮೌ ಹಸ್ತ್ಯಾರೋಹಾನಪೋಥಯತ್||
ಕಂಕಣಗಳಿಂದ ಅಲಂಕೃತವಾಗಿದ್ದ ಆ ಆನೆಯು ಮಹಾನಾದವನ್ನು ಕೂಗಿ ತಲೆಯನ್ನು ಭೂಮಿಯಲ್ಲಿರಿಸಿ ಬಿದ್ದು, ಗಜಾರೋಹಿಗಳನ್ನು ಅಪ್ಪಳಿಸಿತು.
03255023a ಸ ತತ್ಕರ್ಮ ಮಹತ್ಕೃತ್ವಾ ಶೂರೋ ಮಾದ್ರವತೀಸುತಃ|
03255023c ಭೀಮಸೇನರಥಂ ಪ್ರಾಪ್ಯ ಶರ್ಮ ಲೇಭೇ ಮಹಾರಥಃ||
ಆ ಮಹಾಕೃತ್ಯವನ್ನು ಮಾಡಿದ ಶೂರ ಮಾದ್ರವತೀಸುತನು ಭೀಮಸೇನನ ರಥವನ್ನು ಸೇರಿ ಆ ಮಹಾರಥದಲ್ಲಿ ಆಶ್ರಯವನ್ನು ಪಡೆದನು.
03255024a ಭೀಮಸ್ತ್ವಾಪತತೋ ರಾಜ್ಞಃ ಕೋಟಿಕಾಶ್ಯಸ್ಯ ಸಂಗರೇ|
03255024c ಸೂತಸ್ಯ ನುದತೋ ವಾಹಾನ್ ಕ್ಷುರೇಣಾಪಾಹರಚ್ಚಿರಃ||
ರಾಜ ಕೋಟಿಕಾಶ್ಯನೊಂದಿಗೆ ಹೋರಾಡುತ್ತಿದ್ದ ಭೀಮನಾದರೋ ಕದುರೆಗಳನ್ನು ಪುಸಲಾಯಿಸುತ್ತಿದ್ದ ಸೂತನ ಶಿರವನ್ನು ಹರಿತವಾದ ಕತ್ತಿಯಿಂದ ಬೋಳಿಸಿದನು.
03255025a ನ ಬುಬೋಧ ಹತಂ ಸೂತಂ ಸ ರಾಜಾ ಬಾಹುಶಾಲಿನಾ|
03255025c ತಸ್ಯಾಶ್ವಾ ವ್ಯದ್ರವನ್ಸಂಖ್ಯೇ ಹತಸೂತಾಸ್ತತಸ್ತತಃ||
ತನ್ನ ಸೂತನು ಬಾಹುಶಾಲಿಯಿಂದ ಹತನಾದುದು ರಾಜನಿಗೆ ತಿಳಿಯಲೇ ಇಲ್ಲ. ಸೂತನನ್ನು ಕಳೆದುಕೊಂಡ ಆ ಕುದುರೆಗಳು ರಣದಲ್ಲಿ ಎಲ್ಲಾಕಡೆ ಓಡತೊಡಗಿದವು.
03255026a ವಿಮುಖಂ ಹತಸೂತಂ ತಂ ಭೀಮಃ ಪ್ರಹರತಾಂ ವರಃ|
03255026c ಜಘಾನ ತಲಯುಕ್ತೇನ ಪ್ರಾಸೇನಾಭ್ಯೇತ್ಯ ಪಾಂಡವಃ||
ಆಗ ಸೂತನನ್ನು ಕಳೆದುಕೊಂಡ ವಿಮುಖನಾದ ಅವನನ್ನು ಪ್ರಹರಿಗಳಲ್ಲಿ ಶ್ರೇಷ್ಠ ಪಾಂಡವ ಭೀಮನು ಚೂಪಾದ ಪ್ರಾಸದಿಂದ ಹೊಡೆದು ಸಂಹರಿಸಿದನು.
03255027a ದ್ವಾದಶಾನಾಂ ತು ಸರ್ವೇಷಾಂ ಸೌವೀರಾಣಾಂ ಧನಂಜಯಃ|
03255027c ಚಕರ್ತ ನಿಷಿತೈರ್ಭಲ್ಲೈರ್ಧನೂಂಷಿ ಚ ಶಿರಾಂಸಿ ಚ||
ಧನಂಜಯನು ಹರಿತ ಭಲ್ಲಗಳಿಂದ ಎಲ್ಲ ಹನ್ನೆರಡು ಸೌವೀರರ ಧನುಸ್ಸುಗಳನ್ನೂ ಶಿರಗಳನ್ನೂ ತುಂಡರಿಸಿದನು.
03255028a ಶಿಬೀನಿಕ್ಷ್ವಾಕುಮುಖ್ಯಾಂಶ್ಚ ತ್ರಿಗರ್ತಾನ್ಸೈಂಧವಾನಪಿ|
03255028c ಜಘಾನಾತಿರಥಃ ಸಂಖ್ಯೇ ಬಾಣಗೋಚರಮಾಗತಾನ್||
ರಣದಲ್ಲಿ ಬಾಣಗೋಚರಕ್ಕೆ ಬಂದಿದ್ದ ಶಿಬಿ, ಇಕ್ಷ್ವಾಕು, ತ್ರಿಗರ್ತ ಮತ್ತು ಸೈಂಧವ ಪ್ರಮುಖರನ್ನು ಅತಿರಥಿಯು ಸಂಹರಿಸಿದನು.
03255029a ಸಾದಿತಾಃ ಪ್ರತ್ಯದೃಶ್ಯಂತ ಬಹವಃ ಸವ್ಯಸಾಚಿನಾ|
03255029c ಸಪತಾಕಾಶ್ಚ ಮಾತಂಗಾಃ ಸಧ್ವಜಾಶ್ಚ ಮಹಾರಥಾಃ||
ಸವ್ಯಸಾಚಿಯಿಂದ ಕೆಳಗುರುಳಿಸಲ್ಪಟ್ಟ ಬಹುಮಂದಿಗಳು ಅಲ್ಲಿ ಕಂಡುಬಂದರು - ಪತಾಕೆಗಳೊಂದಿಗೆ ಆನೆಗಳು ಮತ್ತು ದ್ವಜಗಳೊಂದಿಗೆ ಮಹಾರಥಿಗಳು.
03255030a ಪ್ರಚ್ಚಾದ್ಯ ಪೃಥಿವೀಂ ತಸ್ಥುಃ ಸರ್ವಮಾಯೋಧನಂ ಪ್ರತಿ|
03255030c ಶರೀರಾಣ್ಯಶಿರಸ್ಕಾನಿ ವಿದೇಹಾನಿ ಶಿರಾಂಸಿ ಚ||
ರಣರಂಗದ ಎಲ್ಲೆಡೆಯೂ ಶಿರಗಳಿಲ್ಲದ ಶರೀರಗಳಿಂದ ಮತ್ತು ದೇಹಗಳಿಲ್ಲದ ಶಿರಗಳಿಂದ ಮುಚ್ಚಿಕೊಂಡಿತು.
03255031a ಶ್ವಗೃಧ್ರಕಂಕಕಾಕೋಲಭಾಸಗೋಮಾಯುವಾಯಸಾಃ|
03255031c ಅತೃಪ್ಯಂಸ್ತತ್ರ ವೀರಾಣಾಂ ಹತಾನಾಂ ಮಾಂಸಶೋಣಿತೈಃ||
ನಾಯಿಗಳು, ಹದ್ದುಗಳು, ಕಾಗೆಗಳು, ಗಿಡುಗಗಳು, ನರಿಗಳು ಮತ್ತು ಪಕ್ಷಿಗಳು ಅಲ್ಲಿ ಹತರಾಗಿದ್ದವರ ರಕ್ತ-ಮಾಂಸಗಳ ಔತಣವನ್ನು ಉಂಡವು.
03255032a ಹತೇಷು ತೇಷು ವೀರೇಷು ಸಿಂಧುರಾಜೋ ಜಯದ್ರಥಃ|
03255032c ವಿಮುಚ್ಯ ಕೃಷ್ಣಾಂ ಸಂತ್ರಸ್ತಃ ಪಲಾಯನಪರೋಽಭವತ್||
ಆ ವೀರರು ಹತರಾಗಲು ಸಿಂಧುರಾಜ ಜಯದ್ರಥನು ನಡುಗುತ್ತಾ ಕೃಷ್ಣೆಯನ್ನು ಬಿಡುಗಡೆ ಮಾಡಿ ಪಲಾಯನಮಾಡಲು ತೊಡಗಿದನು.
03255033a ಸ ತಸ್ಮಿನ್ಸಂಕುಲೇ ಸೈನ್ಯೇ ದ್ರೌಪದೀಮವತಾರ್ಯ ವೈ|
03255033c ಪ್ರಾಣಪ್ರೇಪ್ಸುರುಪಾಧಾವದ್ವನಂ ಯೇನ ನರಾಧಮಃ||
ತನ್ನ ಸೇನೆಯು ಒಡೆದಿರಲು ಆ ನರಾಧಮನು ದ್ರೌಪದಿಯನ್ನು ಕೆಳಗಿಳಿಸಿ ಪ್ರಾಣವನ್ನು ಉಳಿಸಿಕೊಳ್ಳಲು ವನದ ಕಡೆ ಓಡಿದನು.
0325034a ದ್ರೌಪದೀಂ ಧರ್ಮರಾಜಸ್ತು ದೃಷ್ಟ್ವಾ ಧೌಮ್ಯಪುರಸ್ಕೃತಾಂ|
03255034c ಮಾದ್ರೀಪುತ್ರೇಣ ವೀರೇಣ ರಥಮಾರೋಪಯತ್ತದಾ||
ಧೌಮ್ಯನೊಂದಿಗೆ ಬರುತ್ತಿದ್ದ ದ್ರೌಪದಿಯನ್ನು ನೋಡಿ ಧರ್ಮರಾಜನು ಅವರನ್ನು ವೀರ ಮಾದ್ರೀಪುತ್ರನ ರಥದಲ್ಲಿ ತೆಗೆದುಕೊಂಡನು.
03255035a ತತಸ್ತದ್ವಿದ್ರುತಂ ಸೈನ್ಯಮಪಯಾತೇ ಜಯದ್ರಥೇ|
03255035c ಆದಿಶ್ಯಾದಿಶ್ಯ ನಾರಾಚೈರಾಜಘಾನ ವೃಕೋದರಃ||
ಜಯದ್ರಥನು ಇಲ್ಲದ ಸೇನೆಯನ್ನು ಗುರಿಯಿಟ್ಟು ವೃಕೋದರನು ಉಕ್ಕಿನ ಶರಗಳಿಂದ ಹೊಡೆದನು.
03255036a ಸವ್ಯಸಾಚೀ ತು ತಂ ದೃಷ್ಟ್ವಾ ಪಲಾಯಂತಂ ಜಯದ್ರಥಂ|
03255036c ವಾರಯಾಮಾಸ ನಿಘ್ನಂತಂ ಭೀಮಂ ಸೈಂಧವಸೈನಿಕಾನ್||
ಆದರೆ ಓಡಿಹೋಗುತ್ತಿರುವ ಜಯದ್ರಥನನ್ನು ನೋಡಿದ ಸವ್ಯಸಾಚಿಯು ಭೀಮನನ್ನು ಸೈಂಧವನ ಸೇನೆಯನ್ನು ಸಂಹರಿಸುವುದರಿಂದ ತಡೆದನು.
03255037 ಅರ್ಜುನ ಉವಾಚ|
03255037a ಯಸ್ಯಾಪಚಾರಾತ್ಪ್ರಾಪ್ತೋಽಯಮಸ್ಮಾನ್ಕ್ಲೇಶೋ ದುರಾಸದಃ|
03255037c ತಮಸ್ಮಿನ್ಸಮರೋದ್ದೇಶೇ ನ ಪಶ್ಯಾಮಿ ಜಯದ್ರಥಂ||
ಅರ್ಜುನನು ಹೇಳಿದನು: “ಯಾರ ಅಪಚಾರದಿಂದ ನಾವು ಈ ಕೊನೆಯಿಲ್ಲದ ಕ್ಲೇಶವನ್ನು ಪಡೆದಿದ್ದೇವೋ ಆ ಜಯದ್ರಥನನ್ನೇ ಈ ರಣರಂಗದಲ್ಲಿ ನಾನು ಕಾಣುತ್ತಿಲ್ಲ!
03255038a ತಮೇವಾನ್ವಿಷ ಭದ್ರಂ ತೇ ಕಿಂ ತೇ ಯೋಧೈರ್ನಿಪಾತಿತೈಃ|
03255038c ಅನಾಮಿಷಮಿದಂ ಕರ್ಮ ಕಥಂ ವಾ ಮನ್ಯತೇ ಭವಾನ್||
ಅವನನ್ನು ಹುಡುಕು! ನಿನಗೆ ಮಂಗಳವಾಗಲಿ! ಈ ಯೋಧರನ್ನು ಕೊಲ್ಲುವುದೇಕೆ? ಇದರಿಂದ ಏನೂ ಪ್ರಯೋಜನವಿಲ್ಲ! ನಿನಗೇನನ್ನಿಸುತ್ತದೆ?””
03255039 ವೈಶಂಪಾಯನ ಉವಾಚ|
03255039a ಇತ್ಯುಕ್ತೋ ಭೀಮಸೇನಸ್ತು ಗುಡಾಕೇಶೇನ ಧೀಮತಾ|
03255039c ಯುಧಿಷ್ಠಿರಮಭಿಪ್ರೇಕ್ಷ್ಯ ವಾಗ್ಮೀ ವಚನಮಬ್ರವೀತ್||
ವೈಶಂಪಾಯನನು ಹೇಳಿದನು: “ಧೀಮತ ಗುಡಾಕೇಶನು ಹೀಗೆ ಹೇಳಲು ಭೀಮಸೇನನು ಯುಧಿಷ್ಠಿರನನ್ನು ನೋಡಿ ವಾಗ್ಮಿಯ ಈ ಮಾತುಗಳನ್ನಾಡಿದನು.
03255040a ಹತಪ್ರವೀರಾ ರಿಪವೋ ಭೂಯಿಷ್ಠಂ ವಿದ್ರುತಾ ದಿಶಃ|
03255040c ಗೃಹೀತ್ವಾ ದ್ರೌಪದೀಂ ರಾಜನ್ನಿವರ್ತತು ಭವಾನಿತಃ||
“ರಿಪುಗಳು ತಮ್ಮ ಪ್ರವೀರರನ್ನು ಕಳೆದುಕೊಂಡು ದಿಕ್ಕುಪಾಲಾಗಿದ್ದಾರೆ. ರಾಜನ್! ದ್ರೌಪದಿಯನ್ನು ಕರೆದುಕೊಂಡು ನೀನು ಹಿಂದಿರುಗು.
03255041a ಯಮಾಭ್ಯಾಂ ಸಹ ರಾಜೇಂದ್ರ ಧೌಮ್ಯೇನ ಚ ಮಹಾತ್ಮನಾ|
03255041c ಪ್ರಾಪ್ಯಾಶ್ರಮಪದಂ ರಾಜನ್ದ್ರೌಪದೀಂ ಪರಿಸಾಂತ್ವಯ||
ರಾಜೇಂದ್ರ! ಯಮಳರು ಮತ್ತು ಮಹಾತ್ಮ ಧೌಮ್ಯನೊಂದಿಗೆ ಆಶ್ರಮಪದವನ್ನು ಸೇರಿ ದ್ರೌಪದಿಯನ್ನು ಪರಿಸಂತವಿಸಿ.
03255042a ನ ಹಿ ಮೇ ಮೋಕ್ಷ್ಯತೇ ಜೀವನ್ಮೂಢಃ ಸೈಂಧವಕೋ ನೃಪಃ|
03255042c ಪಾತಾಲತಲಸಂಸ್ಥೋಽಪಿ ಯದಿ ಶಕ್ರೋಽಸ್ಯ ಸಾರಥಿಃ||
ಈ ಮೂಢ ಸೈಂಧವ ನೃಪನು ಪಾತಾಲಕ್ಕೆ ಹೋದರೂ ಇಂದ್ರನೇ ಇವನ ಸಾರಥಿಯಾದರೂ ಇಂದು ನನ್ನಿಂದ ಜೀವಂತವಾಗಿ ಉಳಿಯುವುದಿಲ್ಲ!”
03255043 ಯುಧಿಷ್ಠಿರ ಉವಾಚ|
03255043a ನ ಹಂತವ್ಯೋ ಮಹಾಬಾಹೋ ದುರಾತ್ಮಾಪಿ ಸ ಸೈಂಧವಃ|
03255043c ದುಃಶಲಾಮಭಿಸಂಸ್ಮೃತ್ಯ ಗಾಂಧಾರೀಂ ಚ ಯಶಸ್ವಿನೀಂ||
ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ದುಃಶಲೆಯನ್ನು ಮತ್ತು ಯಶಸ್ವಿನೀ ಗಾಂಧಾರಿಯನ್ನು ಗೌರವಿಸಿ, ದುರಾತ್ಮನಾದರೂ ಸೈಂಧವನನ್ನು ಕೊಲ್ಲಬಾರದು.””
03255044 ವೈಶಂಪಾಯನ ಉವಾಚ|
03255044a ತಚ್ಚ್ರುತ್ವಾ ದ್ರೌಪದೀ ಭೀಮಮುವಾಚ ವ್ಯಾಕುಲೇಂದ್ರಿಯಾ|
03255044c ಕುಪಿತಾ ಹ್ರೀಮತೀ ಪ್ರಾಜ್ಞಾ ಪತೀ ಭೀಮಾರ್ಜುನಾವುಭೌ||
ವೈಶಂಪಾಯನನು ಹೇಳಿದನು: “ಅದನ್ನು ಕೇಳಿದ ದ್ರೌಪದಿಯು ವ್ಯಾಕುಲಳಾಗಿ, ಕುಪಿತಳಾಗಿ, ನಾಚಿ, ತಿಳಿದು ತನ್ನ ಪತಿಯಂದಿರು ಭೀಮಾರ್ಜುನರಿಬ್ಬರಿಗೂ ಹೇಳಿದಳು:
03255045a ಕರ್ತವ್ಯಂ ಚೇತ್ಪ್ರಿಯಂ ಮಹ್ಯಂ ವಧ್ಯಃ ಸ ಪುರುಷಾಧಮಃ|
03255045c ಸೈಂಧವಾಪಸದಃ ಪಾಪೋ ದುರ್ಮತಿಃ ಕುಲಪಾಂಸನಃ||
“ನನಗೆ ಪ್ರಿಯವಾದುದನ್ನು ಮಾಡಬೇಕೆಂದಿದ್ದರೆ ಆ ಪುರುಷಾಧಮ, ಸೈಂಧವರ ಗರ್ಭಪಾತಿ, ಪಾಪಿ, ದುರ್ಮತಿ, ಕುಲಪಾಂಸನನನ್ನು ವಧಿಸಿ!
03255046a ಭಾರ್ಯಾಭಿಹರ್ತಾ ನಿರ್ವೈರೋ ಯಶ್ಚ ರಾಜ್ಯಹರೋ ರಿಪುಃ|
03255046c ಯಾಚಮಾನೋಽಪಿ ಸಂಗ್ರಾಮೇ ನ ಸ ಜೀವಿತುಮರ್ಹತಿ||
ವೈರತ್ವವಿಲ್ಲದೇ ಭಾರ್ಯೆಯನ್ನು ಅಪಹರಿಸಿದವನು, ಮತ್ತು ರಾಜ್ಯವನ್ನು ಅಪಹರಿಸಿದ ವೈರಿ ಇವರು ಬೇಡಿದರೂ ಸಂಗ್ರಾಮದಲ್ಲಿ ಜೀವಂತ ಉಳಿಯಬಾರದು.”
03255047a ಇತ್ಯುಕ್ತೌ ತೌ ನರವ್ಯಾಘ್ರೌ ಯಯತುರ್ಯತ್ರ ಸೈಂಧವಃ|
03255047c ರಾಜಾ ನಿವವೃತೇ ಕೃಷ್ಣಾಮಾದಾಯ ಸಪುರೋಹಿತಃ||
ಅವಳು ಹೀಗೆ ಹೇಳಲು ಆ ಇಬ್ಬರು ನರವ್ಯಾಘ್ರರು ಸೈಂಧವನಿದ್ದಲ್ಲಿಗೆ ತೆರಳಿದರು. ರಾಜನು ಪುರೋಹಿತನೊಂದಿಗೆ ಕೃಷ್ಣೆಯನ್ನು ಕರೆದುಕೊಂಡು ಹಿಂದಿರುಗಿದನು.
03255048a ಸ ಪ್ರವಿಶ್ಯಾಶ್ರಮಪದಂ ವ್ಯಪವಿದ್ಧಬೃಸೀಘಟಂ|
03255048c ಮಾರ್ಕಂಡೇಯಾದಿಭಿರ್ವಿಪ್ರೈರನುಕೀರ್ಣಂ ದದರ್ಶ ಹ||
ಆಶ್ರಮಪದವನ್ನು ಪ್ರವೇಶಿಸಿ ಅಲ್ಲಿ ದಿಂಬುಗಳು ಮತ್ತು ಲೋಟಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಹಾಗೂ ಮಾರ್ಕಂಡೇಯನೇ ಮೊದಲಾದ ವಿಪ್ರರು ಅಲ್ಲಿ ಇರುವುದನ್ನು ನೋಡಿದನು.
03255049a ದ್ರೌಪದೀಮನುಶೋಚದ್ಭಿರ್ಬ್ರಾಹ್ಮಣೈಸ್ತೈಃ ಸಮಾಗತೈಃ|
03255049c ಸಮಿಯಾಯ ಮಹಾಪ್ರಾಜ್ಞಃ ಸಭಾರ್ಯೋ ಭ್ರಾತೃಮಧ್ಯಗಃ||
ಅಲ್ಲಿ ನೆರೆದು ದ್ರೌಪದಿಗಾಗಿ ಶೋಕಿಸುತ್ತಿದ್ದ ಬ್ರಾಹ್ಮಣರಲ್ಲಿಗೆ ಆ ಮಹಾಪ್ರಾಜ್ಞನು ಭಾರ್ಯೆಯೊಂದಿಗೆ, ಸಹೋದರರ ಮಧ್ಯೆ ಹೋದನು.
03255050a ತೇ ಸ್ಮ ತಂ ಮುದಿತಾ ದೃಷ್ಟ್ವಾ ಪುನರಭ್ಯಾಗತಂ ನೃಪಂ|
03255050c ಜಿತ್ವಾ ತಾನ್ಸಿಂಧುಸೌವೀರಾನ್ದ್ರೌಪದೀಂ ಚಾಹೃತಾಂ ಪುನಃ||
ಆ ಸಿಂಧು ಸೌವೀರನನ್ನು ಗೆದ್ದು ದ್ರೌಪದಿಯನ್ನು ಪುನಃ ಪಡೆದು ಹಿಂದಿರುಗಿದ ನೃಪನನ್ನು ಕಂಡು ಅವರೆಲ್ಲರೂ ಮುದಿತರಾದರು.
03255051a ಸ ತೈಃ ಪರಿವೃತೋ ರಾಜಾ ತತ್ರೈವೋಪವಿವೇಶ ಹ|
03255051c ಪ್ರವಿವೇಶಾಶ್ರಮಂ ಕೃಷ್ಣಾ ಯಮಾಭ್ಯಾಂ ಸಹ ಭಾಮಿನೀ||
ಅವರೆಲ್ಲರಿಂದ ಪರಿವೃತನಾದ ರಾಜನು ಅಲ್ಲಿಯೇ ಕುಳಿತುಕೊಳ್ಳಲು ಭಾಮಿನೀ ಕೃಷ್ಣೆಯು ಯಮಳರೊಂದಿಗೆ ಆಶ್ರಮವನ್ನು ಪ್ರವೇಶಿಸಿದಳು.
03255052a ಭೀಮಾರ್ಜುನಾವಪಿ ಶ್ರುತ್ವಾ ಕ್ರೋಶಮಾತ್ರಗತಂ ರಿಪುಂ|
03255052c ಸ್ವಯಮಶ್ವಾಂಸ್ತುದಂತೌ ತೌ ಜವೇನೈವಾಭ್ಯಧಾವತಾಂ||
ರಿಪುವು ಕ್ರೋಶಮಾತ್ರ ಹೋಗಿದ್ದಾನೆಂದು ಕೇಳಿ ಭೀಮಾರ್ಜುನರು ಸ್ವಯಂ ಕುದುರೆಗಳನ್ನೇರಿ ಬೇಗನೆ ಅವನನ್ನು ಹಿಂಬಾಲಿಸಿದರು.
03255053a ಇದಮತ್ಯದ್ಭುತಂ ಚಾತ್ರ ಚಕಾರ ಪುರುಷೋಽರ್ಜುನಃ|
03255053c ಕ್ರೋಶಮಾತ್ರಗತಾನಶ್ವಾನ್ಸೈಂಧವಸ್ಯ ಜಘಾನ ಯತ್||
ಇಲ್ಲಿ ಪುರುಷ ಅರ್ಜುನನು ಅತ್ಯದ್ಭುತವಾದುದನ್ನು ಮಾಡಿದನು. ಕ್ರೋಶಮಾತ್ರ ದೂರ ಹೋಗಿದ್ದ ಸೈಂಧವನ ಕುದುರೆಯನ್ನು ಹೊಡೆದನು.
03255054a ಸ ಹಿ ದಿವ್ಯಾಸ್ತ್ರಸಂಪನ್ನಃ ಕೃಚ್ಚ್ರಕಾಲೇಽಪ್ಯಸಂಭ್ರಮಃ|
03255054c ಅಕರೋದ್ದುಷ್ಕರಂ ಕರ್ಮ ಶರೈರಸ್ತ್ರಾನುಮಂತ್ರಿತೈಃ||
ಆ ದಿವ್ಯಾಸ್ತ್ರಸಂಪನ್ನನು ಕಷ್ಟಕಾಲದಲ್ಲಿಯೂ ದಿಗ್ಭ್ರಮೆಗೊಳ್ಳದೇ ಅನುಮಂತ್ರಿತ ಶರಗಳನ್ನು ಬಿಟ್ಟು ಈ ದುಷ್ಕರ ಕರ್ಮವನ್ನೆಸಗಿದನು.
03255055a ತತೋಽಭ್ಯಧಾವತಾಂ ವೀರಾವುಭೌ ಭೀಮಧನಂಜಯೌ|
03255055c ಹತಾಶ್ವಂ ಸೈಂಧವಂ ಭೀತಮೇಕಂ ವ್ಯಾಕುಲಚೇತಸಂ||
ಆ ಭೀಮ-ಧನಂಜಯ ವೀರರಿಬ್ಬರೂ ಅಶ್ವಗಳು ಹತರಾಗಿ, ಏಕಾಂಗಿಯಾಗಿ ಭೀತನೂ ವ್ಯಾಕುಲಚೇತಸನೂ ಆಗಿದ್ದ ಸೈಂಧವನಿದ್ದಲ್ಲಿಗೆ ಓಡಿ ಬಂದರು.
03255056a ಸೈಂಧವಸ್ತು ಹತಾನ್ದೃಷ್ಟ್ವಾ ತಥಾಶ್ವಾನ್ ಸ್ವಾನ್ ಸುದುಃಖಿತಃ|
03255056c ದೃಷ್ಟ್ವಾ ವಿಕ್ರಮಕರ್ಮಾಣಿ ಕುರ್ವಾಣಂ ಚ ಧನಂಜಯಂ|
03255056e ಪಲಾಯನಕೃತೋತ್ಸಾಹಃ ಪ್ರಾದ್ರವದ್ಯೇನ ವೈ ವನಂ||
ಸೈಂಧವನಾದರೋ ಕುದುರೆಗಳು ಹತಗೊಂಡಿರುವುದನ್ನು ನೋಡಿ ಸುದುಃಖಿತನಾಗಿ, ಈ ವಿಕ್ರಮಕರ್ಮವನ್ನು ಮಾಡಿರುವ ಧನಂಜಯನನ್ನು ನೋಡಿ ಪಲಾಯನ ಮಾಡಲು ಮನಸ್ಸುಮಾಡಿ ವನದ ಕಡೆಗೆ ಓಡಿದನು.
03255057a ಸೈಂಧವಂ ತ್ವಭಿಸಂಪ್ರೇಕ್ಷ್ಯ ಪರಾಕ್ರಾಂತಂ ಪಲಾಯನೇ|
03255057c ಅನುಯಾಯ ಮಹಾಬಾಹುಃ ಫಲ್ಗುನೋ ವಾಕ್ಯಮಬ್ರವೀತ್||
ಮಹಾಬಾಹು ಫಲ್ಗುನನು ಸೈಂಧವನು ಸಂಪೂರ್ಣವಾಗಿ ಪಲಾಯನಮಾಡುತ್ತಿದ್ದುದನ್ನು ಕಂಡು, ಅವನನ್ನು ಬೆನ್ನೆತ್ತಿ ಹೋಗಿ ಹೀಗೆ ಹೇಳಿದನು:
03255058a ಅನೇನ ವೀರ್ಯೇಣ ಕಥಂ ಸ್ತ್ರಿಯಂ ಪ್ರಾರ್ಥಯಸೇ ಬಲಾತ್|
03255058c ರಾಜಪುತ್ರ ನಿವರ್ತಸ್ವ ನ ತೇ ಯುಕ್ತಂ ಪಲಾಯನಂ|
03255058e ಕಥಂ ಚಾನುಚರಾನ್ ಹಿತ್ವಾ ಶತ್ರುಮಧ್ಯೇ ಪಲಾಯಸೇ||
“ಈ ವೀರ್ಯವನ್ನಿಟ್ಟುಕೊಂಡು ಸ್ತ್ರೀಯನ್ನು ಏಕೆ ಬಲಾತ್ಕರಿಸಿ ಕೇಳಿದೆ? ರಾಜಪುತ್ರ! ಹಿಂದೆ ಬಾ! ನಿನಗೆ ಪಲಾಯನವು ಸರಿಯಾದುದಲ್ಲ. ಅನುಚರರನ್ನು ಕೊಲ್ಲಿಸಿ ಶತ್ರುಮಧ್ಯದಲ್ಲಿ ಏಕೆ ಪಲಾಯನ ಮಾಡುತ್ತಿರುವೆ?”
03255059a ಇತ್ಯುಚ್ಯಮಾನಃ ಪಾರ್ಥೇನ ಸೈಂಧವೋ ನ ನ್ಯವರ್ತತ|
03255059c ತಿಷ್ಠ ತಿಷ್ಠೇತಿ ತಂ ಭೀಮಃ ಸಹಸಾಭ್ಯದ್ರವದ್ಬಲೀ|
03255059e ಮಾ ವಧೀರಿತಿ ಪಾರ್ಥಸ್ತಂ ದಯಾವಾನಭ್ಯಭಾಷತ||
ಆದರೆ ಪಾರ್ಥನ ಈ ಮಾತಿಗೂ ಸೈಂಧವನು ಹಿಂದಿರುಗಲಿಲ್ಲ. ಆಗ ಬಲೀ ಭೀಮನು “ನಿಲ್ಲು! ನಿಲ್ಲು!” ಎನ್ನುತ್ತಾ ತಕ್ಷಣವೇ ಅವನ ಹಿಂದೆ ಓಡಿಹೋಗಲು, ಅವನನ್ನು ಕೊಲ್ಲಬೇಡ ಎಂದು ದಯಾವಾನ್ ಪಾರ್ಥನು ಅವನಿಗೆ ಹೇಳಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಜಯದ್ರಥಪಲಾಯನೇ ಪಂಚಪಂಚಾಶದಧಿಕದ್ವಿಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಜಯದ್ರಥಪಲಾಯನದಲ್ಲಿ ಇನ್ನೂರಾಐವತ್ತೈದನೆಯ ಅಧ್ಯಾಯವು.
