ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ
Contents
Toggle೧೬೭
ಹಲವಾರು ನಿವಾತಕವಚರು ಹತರಾಗಲು ಅವರು ಅರ್ಜುನನೊಂದಿಗೆ ಮಾಯಾ ಯುದ್ಧವನ್ನು ಪ್ರಾರಂಭಿಸಿದುದು (೧-೨೮).
03167001 ಅರ್ಜುನ ಉವಾಚ|
03167001a ತತೋ ನಿವಾತಕವಚಾಃ ಸರ್ವೇ ವೇಗೇನ ಭಾರತ|
03167001c ಅಭ್ಯದ್ರವನ್ಮಾಂ ಸಹಿತಾಃ ಪ್ರಗೃಹೀತಾಯುಧಾ ರಣೇ||
ಅರ್ಜುನನು ಹೇಳಿದನು: “ಭಾರತ! ಆಗ ನಿವಾತಕವಚರು ಎಲ್ಲರೂ ಒಟ್ಟಿಗೆ ವೇಗದಿಂದ ಆಯುಧಗಳು ಹಿಡಿದು ರಣದಲ್ಲಿ ನನ್ನಕಡೆ ಧಾವಿಸಿ ಬಂದರು.
03167002a ಆಚ್ಚಿದ್ಯ ರಥಪನ್ಥಾನಮುತ್ಕ್ರೋಶಂತೋ ಮಹಾರಥಾಃ|
03167002c ಆವೃತ್ಯ ಸರ್ವತಸ್ತೇ ಮಾಂ ಶರವರ್ಷೈರವಾಕಿರನ್||
ಮಹಾರಥಿಗಳು ನನ್ನ ರಥದ ದಾರಿಯನ್ನು ಕತ್ತರಿಸಿದರು ಮತ್ತು ಜೋರಾಗಿ ಕೂಗುತ್ತಾ ನನ್ನನ್ನು ಎಲ್ಲಕಡೆಯಿಂದಲೂ ಮುತ್ತಿ ಶರಗಳ ಮಳೆಯನ್ನು ಸುರಿಸಿದರು.
03167003a ತತೋಽಪರೇ ಮಹಾವೀರ್ಯಾಃ ಶೂಲಪಟ್ಟಿಶಪಾಣಯಃ|
03167003c ಶೂಲಾನಿ ಚ ಭುಶುಂಡೀಶ್ಚ ಮುಮುಚುರ್ದಾನವಾ ಮಯಿ||
ಇತರ ಮಹಾವೀರ್ಯ ದಾನವರು ಶೂಲಪಟ್ಟಿಶಗಳನ್ನು ಹಿಡಿದು ಶೂಲ ಭುಶುಂಡಿಗಳನ್ನು ನನ್ನ ಮೇಲೆ ಎಸೆದರು.
03167004a ತಚ್ಶೂಲವರ್ಷಂ ಸುಮಹದ್ಗದಾಶಕ್ತಿಸಮಾಕುಲಂ|
03167004c ಅನಿಶಂ ಸೃಜ್ಯಮಾನಂ ತೈರಪತನ್ಮದ್ರಥೋಪರಿ||
ಒಂದೇ ಸಮನೆ ಪ್ರಯೋಗಿಸಲ್ಪಟ್ಟ ಗದೆ, ಶಕ್ತಿಗಳಿಂದ ಕೂಡಿದ್ದ ಆ ಮಹಾ ಶೂಲವರ್ಷವು ನನ್ನ ರಥದ ಮೇಲೆ ಬಿದ್ದವು.
03167005a ಅನ್ಯೇ ಮಾಮಭ್ಯಧಾವಂತ ನಿವಾತಕವಚಾ ಯುಧಿ|
03167005c ಶಿತಶಸ್ತ್ರಾಯುಧಾ ರೌದ್ರಾಃ ಕಾಲರೂಪಾಃ ಪ್ರಹಾರಿಣಃ||
ಯುದ್ಧದಲ್ಲಿ ಇತರ ರೌದ್ರರೂ, ಕಾಲರೂಪಿ ಪ್ರಹಾರಿಗಳೂ ಆದ ನಿವಾತಕವಚರು ಹರಿತವಾದ ಅಸ್ತ್ರ ಆಯುಧಗಳನ್ನು ಹಿಡಿದು, ನನ್ನ ಮೇಲೆ ಓಡಿಬಂದೆರಗಿದರು.
03167006a ತಾನಹಂ ವಿವಿಧೈರ್ಬಾಣೈರ್ವೇಗವದ್ಭಿರಜಿಹ್ಮಗೈಃ|
03167006c ಗಾಂಡೀವಮುಕ್ತೈರಭ್ಯಘ್ನಮೇಕೈಕಂ ದಶಭಿರ್ಮೃಧೇ||
03167006e ತೇ ಕೃತಾ ವಿಮುಖಾಃ ಸರ್ವೇ ಮತ್ಪ್ರಯುಕ್ತೈಃ ಶಿಲಾಶಿತೈಃ||
ಅವುಗಳನ್ನು ನಾನು ಗಾಂಡೀವದಿಂದ ಪ್ರಯೋಗಿಸಲ್ಪಟ್ಟ, ವೇಗವಾಗಿ ನೇರವಾಗಿ ಹೋಗುವ ಹತ್ತು ವಿವಿಧ ಬಾಣಗಳಿಂದ ಪತಿಯೊಬ್ಬರಿಗೂ ಹೊಡೆದೆನು. ನನ್ನ ಆ ಶಿಲಾಶಿತ ಬಾಣಗಳು ಅವರೆಲ್ಲರನ್ನೂ ವಿಮುಖರನ್ನಾಗಿ ಮಾಡಿತು.
03167007a ತತೋ ಮಾತಲಿನಾ ತೂರ್ಣಂ ಹಯಾಸ್ತೇ ಸಂಪ್ರಚೋದಿತಾಃ|
03167007c ರಥಮಾರ್ಗಾದ್ಬಹೂಂಸ್ತತ್ರ ವಿಚೇರುರ್ವಾತರಂಹಸಃ||
03167007e ಸುಸಮ್ಯತಾ ಮಾತಲಿನಾ ಪ್ರಾಮಥ್ನಂತ ದಿತೇಃ ಸುತಾನ್||
ಆಗ ಮಾತಲಿಯು ಕುದುರೆಗಳನ್ನು ಪುಸಲಾಯಿಸಲು ರಥಮಾರ್ಗದಲ್ಲಿ ಬಹಳ ನೆಗೆತಗಳನ್ನು ಹಾರಿ ಮಾತಲಿಯ ಮಾರ್ಗದರ್ಶನದಲ್ಲಿ ಅವು ದಿತಿಯ ಮಕ್ಕಳನ್ನು ತುಳಿದವು.
03167008a ಶತಂ ಶತಾಸ್ತೇ ಹರಯಸ್ತಸ್ಮಿನ್ಯುಕ್ತಾ ಮಹಾರಥೇ|
03167008c ತದಾ ಮಾತಲಿನಾ ಯತ್ತಾ ವ್ಯಚರನ್ನಲ್ಪಕಾ ಇವ||
ನೂರು ನೂರು ಕುದುರೆಗಳನ್ನು ಆ ಮಹಾರಥಕ್ಕೆ ಕಟ್ಟಲಾಗಿತ್ತು. ಆದರೂ ಮಾತಲಿಯು ಅವುಗಳನ್ನು ಕೆಲವೇ ಇವೆಯೋ ಎನ್ನುವಂತೆ ತಿರುಗಿಸುತ್ತಿದ್ದನು.
03167009a ತೇಷಾಂ ಚರಣಪಾತೇನ ರಥನೇಮಿಸ್ವನೇನ ಚ|
03167009c ಮಮ ಬಾಣನಿಪಾತೈಶ್ಚ ಹತಾಸ್ತೇ ಶತಶೋಽಸುರಾಃ||
ಅವುಗಳ ಕಾಲ ತುಳಿತದಿಂದ, ರಥದ ಚಲಿಕೆಯ ಘೋಷದಿಂದ ಮತ್ತು ನನ್ನ ಬಾಣಗಳಿಂದ ಆ ಅಸುರರು ನೂರು ನೂರು ಪಟ್ಟು ಹತರಾದರು.
03167010a ಗತಾಸವಸ್ತಥಾ ಚಾನ್ಯೇ ಪ್ರಗೃಹೀತಶರಾಸನಾಃ|
03167010c ಹತಸಾರಥಯಸ್ತತ್ರ ವ್ಯಕೃಷ್ಯಂತ ತುರಂಗಮೈಃ||
ಜೀವವಿಂಗಿದ ಮತ್ತು ಸಾರಥಿಗಳನ್ನು ಕಳೆದುಕೊಂಡ ಅನ್ಯ ಧನುಷ್ಪಾಣಿಗಳನ್ನು ಅವರ ಕುದುರೆಗಳು ಎತ್ತಿಕೊಂಡು ಹೋದವು.
03167011a ತೇ ದಿಶೋ ವಿದಿಶಃ ಸರ್ವಾಃ ಪ್ರತಿರುಧ್ಯ ಪ್ರಹಾರಿಣಃ|
03167011c ನಿಘ್ನಂತಿ ವಿವಿಧೈಃ ಶಸ್ತ್ರೈಸ್ತತೋ ಮೇ ವ್ಯಥಿತಂ ಮನಃ||
ಆ ಪ್ರಹಾರಿಗಳು ದಿಕ್ಕುಗಳ ಎಲ್ಲ ಕೋನೆಗಳನ್ನೂ ಎಲ್ಲ ರೀತಿಯ ಶಸ್ತ್ರಗಳಿಂದ ಹೊಡೆದು ನನ್ನ ಮನಸ್ಸನ್ನು ವ್ಯಥಿತಗೊಳಿಸಿದರು.
03167012a ತತೋಽಹಂ ಮಾತಲೇರ್ವೀರ್ಯಮಪಶ್ಯಂ ಪರಮಾದ್ಭುತಂ|
03167012c ಅಶ್ವಾಂಸ್ತಥಾ ವೇಗವತೋ ಯದಯತ್ನಾದಧಾರಯತ್||
ಆಗ ನಾನು ವೇಗದಲ್ಲಿ ಹೋಗುತ್ತಿರುವ ಕುದುರೆಗಳನ್ನು ನಿಯಂತ್ರಿಸುವ ಅವನ ಪರಮಾಧ್ಭುತ ಯತ್ನವನ್ನು ನೋಡಿದೆನು.
03167013a ತತೋಽಹಂ ಲಘುಭಿಶ್ಚಿತ್ರೈರಸ್ತ್ರೈಸ್ತಾನಸುರಾನ್ರಣೇ|
03167013c ಸಾಯುಧಾನಚ್ಚಿನಂ ರಾಜಂ ಶತಶೋಽಥ ಸಹಸ್ರಶಃ||
ರಾಜನ್! ಆಗ ನಾನು ವಿಚಿತ್ರ ಲಘು ಬಾಣಗಳನ್ನು ಬಿಟ್ಟು ರಣದಲ್ಲಿ ಆಯುಧಪಾಣಿ ಅಸುರರನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಕಡಿದುರಿಳಿಸಿದೆನು.
03167014a ಏವಂ ಮೇ ಚರತಸ್ತತ್ರ ಸರ್ವಯತ್ನೇನ ಶತ್ರುಹನ್|
03167014c ಪ್ರೀತಿಮಾನಭವದ್ವೀರೋ ಮಾತಲಿಃ ಶಕ್ರಸಾರಥಿಃ||
ಶತ್ರುಹನ್! ಹೀಗೆ ನಾನು ಸರ್ವಯತ್ನದಿಂದ ನಡೆಯುತ್ತಿರಲು ಶಕ್ರನ ವೀರ ಸಾರಥಿ ಮಾತಲಿಯು ಸಂತೋಷಗೊಂಡನು.
03167015a ವಧ್ಯಮಾನಾಸ್ತತಸ್ತೇ ತು ಹಯೈಸ್ತೇನ ರಥೇನ ಚ|
03167015c ಅಗಮನ್ಪ್ರಕ್ಷಯಂ ಕೇ ಚಿನ್ನ್ಯವರ್ತಂತ ತಥಾಪರೇ||
ಕುದುರೆಗಳಿಂದ ಮತ್ತು ರಥಗಳಿಂದ ಅವರು ಹತರಾದರೆ ಮತ್ತೆ ಕೆಲವರು ಯುದ್ಧಮಾಡುವುದನ್ನು ನಿಲ್ಲಿಸಿದರು.
03167016a ಸ್ಪರ್ಧಮಾನಾ ಇವಾಸ್ಮಾಭಿರ್ನಿವಾತಕವಚಾ ರಣೇ|
03167016c ಶರವರ್ಷೈರ್ಮಹದ್ಭಿರ್ಮಾಂ ಸಮಂತಾತ್ಪ್ರತ್ಯವಾರಯನ್||
ರಣದಲ್ಲಿ ನಮ್ಮೊಂದಿಗೆ ಸ್ಪರ್ಧಿಸುತ್ತಿರುವರೋ ಎನ್ನುವಂತೆ ನಿವಾತಕವಚರು ಶರವರ್ಷಗಳಿಂದ ನನ್ನನ್ನು ಎಲ್ಲ ಕಡೆಯಿಂದಲೂ ಮುತ್ತಿಗೆಹಾಕಿದರು.
03167017a ತತೋಽಹಂ ಲಘುಭಿಶ್ಚಿತ್ರೈರ್ಬ್ರಹ್ಮಾಸ್ತ್ರಪರಿಮಂತ್ರಿತೈಃ|
03167017c ವ್ಯಧಮಂ ಸಾಯಕೈರಾಶು ಶತಶೋಽಥ ಸಹಸ್ರಶಃ||
ಆಗ ನಾನು ಲಘುವಾದ ವಿಚಿತ್ರ ಬಾಣಗಳನ್ನು ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿ ಅವರನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದೆನು.
03167018a ತತಃ ಸಂಪೀಡ್ಯಮಾನಾಸ್ತೇ ಕ್ರೋಧಾವಿಷ್ಟಾ ಮಹಾಸುರಾಃ|
03167018c ಅಪೀಡಯನ್ಮಾಂ ಸಹಿತಾಃ ಶರಶೂಲಾಸಿವೃಷ್ಟಿಭಿಃ||
ಆಗ ಪೀಡಿತರಾಗಿ ಕ್ರೋಧಾವಿಷ್ಟರಾದ ಆ ಮಹಾಸುರರು ನನ್ನನ್ನು ಶರ, ಶೂಲ ಮತ್ತು ಶಿಲೆಗಳ ಮಳೆಯಿಂದ ಹೊಡೆಯತೊಡಗಿದರು.
03167019a ತತೋಽಹಮಸ್ತ್ರಮಾತಿಷ್ಠಂ ಪರಮಂ ತಿಗ್ಮತೇಜಸಂ|
03167019c ದಯಿತಂ ದೇವರಾಜಸ್ಯ ಮಾಧವಂ ನಾಮ ಭಾರತ||
ಭಾರತ! ಆಗ ನಾನು ದೇವರಾಜನಿಗೆ ಪ್ರಿಯವಾದ ಪರಮ ತಿಗ್ಮತೇಜಸ್ಸಿನ ಮಾಧವ ಎಂಬ ಹೆಸರಿನ ಅಸ್ತ್ರವನ್ನು ಹಿಡಿದೆನು.
03167020a ತತಃ ಖಡ್ಗಾಂಸ್ತ್ರಿಶೂಲಾಂಶ್ಚ ತೋಮರಾಂಶ್ಚ ಸಹಸ್ರಶಃ|
03167020c ಅಸ್ತ್ರವೀರ್ಯೇಣ ಶತಧಾ ತೈರ್ಮುಕ್ತಾನಹಮಚ್ಚಿನಂ||
03167021a ಚಿತ್ತ್ವಾ ಪ್ರಹರಣಾನ್ಯೇಷಾಂ ತತಸ್ತಾನಪಿ ಸರ್ವಶಃ|
03167021c ಪ್ರತ್ಯವಿಧ್ಯಮಹಂ ರೋಷಾದ್ದಶಭಿರ್ದಶಭಿಃ ಶರೈಃ||
ಆ ಅಸ್ತ್ರದ ವೀರ್ಯದಿಂದ ನಾನು ಅವರು ಪ್ರಯೋಗಿಸಿದ ಸಹಸ್ರಾರು ಖಡ್ಗ, ತ್ರಿಶೂಲ ಮತ್ತು ತೋಮರಗಳನ್ನು ನೂರಾರು ತುಂಡುಗಳನ್ನಾಗಿ ಕತ್ತರಿಸಿದೆ. ಅವರ ಪ್ರಹರಣಗಳನ್ನು ತುಂಡರಿಸಿ ನಾನು ರೋಷದಿಂದ ಪ್ರತಿಯೊಬ್ಬರಿಗೆ ಹತ್ತರಂತೆ ಬಾಣಗಳಿಂದ ಚುಚ್ಚಿದೆನು.
03167022a ಗಾಂಡೀವಾದ್ಧಿ ತದಾ ಸಂಖ್ಯೇ ಯಥಾ ಭ್ರಮರಪಂಕ್ತಯಃ|
03167022c ನಿಷ್ಪತಂತಿ ತಥಾ ಬಾಣಾಸ್ತನ್ ಮಾತಲಿರಪೂಜಯತ್||
ಆ ಯುದ್ಧದಲ್ಲಿ ಗಾಂಡೀವದಿಂದ ಜೇನುಹುಳುಗಳ ಗುಂಪಿನಂತೆ ಬಾಣಗಳು ಹೊರಬರುತ್ತಿದ್ದುದನ್ನು ನೋಡಿ ಮಾತಲಿಯು ಪ್ರೋತ್ಸಾಹಿಸಿದನು.
03167023a ತೇಷಾಮಪಿ ತು ಬಾಣಾಸ್ತೇ ಬಹುತ್ವಾಚ್ಶಲಭಾ ಇವ|
03167023c ಅವಾಕಿರನ್ಮಾಂ ಬಲವತ್ತಾನಹಂ ವ್ಯಧಮಂ ಶರೈಃ||
ಅವರು ಕೂಡ ಬಹು ಮಿಡಿತೆಗಳಂತೆ ಬಾಣಗಳಿಂದ ನನ್ನನ್ನು ಮುಚ್ಚಿದರು. ಆದರೆ ನಾನು ಅವುಗಳನ್ನು ನನ್ನ ಬಲದ ಶರಗಳಿಂದ ಚದುರಿಸಿದೆನು.
03167024a ವಧ್ಯಮಾನಾಸ್ತತಸ್ತೇ ತು ನಿವಾತಕವಚಾಃ ಪುನಃ|
03167024c ಶರವರ್ಷೈರ್ಮಹದ್ಭಿರ್ಮಾಂ ಸಮಂತಾತ್ಪರ್ಯವಾರಯನ್||
ಈ ಆಕ್ರಮಣದಡಿಯಲ್ಲಿ ನಿವಾತಕವಚರು ಪುನಃ ನನ್ನ ಸುತ್ತಲೂ ಶರವರ್ಷಗಳಿಂದ ಮುತ್ತಿಗೆ ಹಾಕಿದರು.
03167025a ಶರವೇಗಾನ್ನಿಹತ್ಯಾಹಮಸ್ತ್ರೈಃ ಶರವಿಘಾತಿಭಿಃ|
03167025c ಜ್ವಲದ್ಭಿಃ ಪರಮೈಃ ಶೀಘ್ರೈಸ್ತಾನವಿಧ್ಯಂ ಸಹಸ್ರಶಃ||
ವೇಗವಾಗಿ ಬರುತ್ತಿದ್ದ ಆ ಶರಗಳನ್ನು ನಾನು ಪರಮಶೀಘ್ರವಾಗಿ ಹೋಗಬಲ್ಲ, ಸಹಸ್ರಾರು ಜ್ವಲಿಸುವ ಅಸ್ತ್ರಗಳಿಂದ ತುಂಡರಿಸಿದೆನು.
03167026a ತೇಷಾಂ ಚಿನ್ನಾನಿ ಗಾತ್ರಾಣಿ ವಿಸೃಜಂತಿ ಸ್ಮ ಶೋಣಿತಂ|
03167026c ಪ್ರಾವೃಷೀವಾತಿವೃಷ್ಟಾನಿ ಶೃಂಗಾಣೀವ ಧರಾಭೃತಾಂ||
ಅವರ ತುಂಡಾದ ದೇಹಗಳಿಂದ ಚಿಮ್ಮಿದ ರಕ್ತವು ಮಳೆಗಾಲದಲ್ಲಿ ಸಿಡಿಲಿಗಿ ಸಿಲುಕಿದ ಪರ್ವತ ಶಿಖರಗಳಂತೆ ಕಂಡುಬಂದವು.
03167027a ಇಂದ್ರಾಶನಿಸಮಸ್ಪರ್ಶೈರ್ವೇಗವದ್ಭಿರಜಿಹ್ಮಗೈಃ|
03167027c ಮದ್ಬಾಣೈರ್ವಧ್ಯಮಾನಾಸ್ತೇ ಸಮುದ್ವಿಗ್ನಾಃ ಸ್ಮ ದಾನವಾಃ||
ಇಂದ್ರನ ವಜ್ರಸಮಾನವಾದ ನನ್ನ ಶೀಘ್ರ, ನೇರವಾಗಿ ಹೋದ ಬಾಣಗಳಿಂದ ಹೊಡೆಯಲ್ಪಟ್ಟ ದಾನವರು ಉದ್ವಿಗ್ನರಾದರು.
03167028a ಶತಧಾ ಭಿನ್ನದೇಹಾಂತ್ರಾಃ ಕ್ಷೀಣಪ್ರಹರಣೌಜಸಃ|
03167028c ತತೋ ನಿವಾತಕವಚಾ ಮಾಮಯುಧ್ಯಂತ ಮಾಯಯಾ||
ಆಗ ದೇಹ ಮತ್ತು ಕರುಳುಗಳು ನೂರಾರು ತುಂಡುಗಳಾದ, ಆಯುಧ- ಸತ್ವವನ್ನು ಕಳೆದುಕೊಂಡ ನಿವಾತಕವಚರು ನನ್ನೊಂದಿಗೆ ಮಾಯಾಯುದ್ಧವನ್ನು ಪ್ರಾರಂಭಿಸಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಸಪ್ತಷಷ್ಟ್ಯಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ನೂರಾಅರವತ್ತೇಳನೆಯ ಅಧ್ಯಾಯವು.
