Aranyaka Parva: Chapter 156

ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ

೧೫೬

ಆರ್ಷ್ಟಿಷೇಣನ ಆಶ್ರಮಕ್ಕೆ ಬಂದುದು (೧-೫). ಆರ್ಷ್ಟಿಷೇಣನು ಉಪದೇಶಿಸಿದುದು (೬-೩೧).

03156001 ವೈಶಂಪಾಯನ ಉವಾಚ|

03156001a ಯುಧಿಷ್ಠಿರಸ್ತಮಾಸಾದ್ಯ ತಪಸಾ ದಗ್ಧಕಿಲ್ಬಿಷಂ|

03156001c ಅಭ್ಯವಾದಯತ ಪ್ರೀತಃ ಶಿರಸಾ ನಾಮ ಕೀರ್ತಯನ್||

ವೈಶಂಪಾಯನನು ಹೇಳಿದನು: “ತಪಸ್ಸಿನಿಂದ ಪಾಪಗಳನ್ನೆಲ್ಲ ಸುಟ್ಟುಹಾಕಿದ್ದ ಅವನ ಬಳಿಸಾರಿ ಯುಧಿಷ್ಠಿರನು ತನ್ನ ಹೆಸರನ್ನು ಹೇಳಿಕೊಂಡು ಸಂತೋಷದಿಂದ ತಲೆಬಾಗಿ ನಮಸ್ಕರಿಸಿದನು.

03156002a ತತಃ ಕೃಷ್ಣಾ ಚ ಭೀಮಶ್ಚ ಯಮೌ ಚಾಪಿ ಯಶಸ್ವಿನೌ|

03156002c ಶಿರೋಭಿಃ ಪ್ರಾಪ್ಯ ರಾಜರ್ಷಿಂ ಪರಿವಾರ್ಯೋಪತಸ್ಥಿರೇ||

ಅನಂತರ ಕೃಷ್ಣೆ, ಭೀಮ ಮತ್ತು ಯಶಸ್ವಿಗಳಾದ ಯಮಳರು ತಲೆಬಾಗಿ ಆ ರಾಜರ್ಷಿಯ ಬಳಿಸಾರಿ ಸುತ್ತುವರೆದರು.

03156003a ತಥೈವ ಧೌಮ್ಯೋ ಧರ್ಮಜ್ಞಃ ಪಾಂಡವಾನಾಂ ಪುರೋಹಿತಃ|

03156003c ಯಥಾನ್ಯಾಯಮುಪಾಕ್ರಾಂತಸ್ತಮೃಷಿಂ ಸಂಶಿತವ್ರತಂ||

ಹಾಗೆಯೇ ಪಾಂಡವರ ಪುರೋಹಿತ ಧರ್ಮಜ್ಞ ಧೌಮ್ಯನು ಯಥಾನ್ಯಾಯವಾಗಿ ಆ ಸಂಶಿತವ್ರತ ಋಷಿಯ ಬಳಿಬಂದನು.

03156004a ಅನ್ವಜಾನಾತ್ಸ ಧರ್ಮಜ್ಞೋ ಮುನಿರ್ದಿವ್ಯೇನ ಚಕ್ಷುಷಾ|

03156004c ಪಾಂಡೋಃ ಪುತ್ರಾನ್ಕುರುಶ್ರೇಷ್ಠಾನಾಸ್ಯತಾಮಿತಿ ಚಾಬ್ರವೀತ್||

ದಿವ್ಯ ದೃಷ್ಟಿಯಿಂದ ಪಾಂಡುವಿನ ಪುತ್ರರಾದ ಆ ಕುರುಶ್ರೇಷ್ಠರನ್ನು ಗುರುತಿಸಿದ ಆ ಧರ್ಮಜ್ಞ ಮುನಿಯು ಕುಳಿತುಕೊಳ್ಳಲು ಹೇಳಿದನು.

03156005a ಕುರೂಣಾಮೃಷಭಂ ಪ್ರಾಜ್ಞಂ ಪೂಜಯಿತ್ವಾ ಮಹಾತಪಾಃ|

03156005c ಸಹ ಭ್ರಾತೃಭಿರಾಸೀನಂ ಪರ್ಯಪೃಚ್ಚದನಾಮಯಂ||

ಆ ಮಹಾತಪಸ್ವಿಯು ಪ್ರಾಜ್ಞ ಕುರುವೃಷಭನನ್ನು ಪೂಜಿಸಿ, ತಮ್ಮಂದಿರೊಡನೆ ಕುಳಿತುಕೊಂಡ ಅವನ ಆರೋಗ್ಯದ ಕುರಿತು ಪ್ರಶ್ನಿಸಿದನು.

03156006a ನಾನೃತೇ ಕುರುಷೇ ಭಾವಂ ಕಚ್ಚಿದ್ಧರ್ಮೇ ಚ ವರ್ತಸೇ|

03156006c ಮತಾಪಿತ್ರೋಶ್ಚ ತೇ ವೃತ್ತಿಃ ಕಚ್ಚಿತ್ಪಾರ್ಥ ನ ಸೀದತಿ||

“ನೀನು ಯಾವಾಗಲೂ ಸುಳ್ಳುಹೇಳುವ ಭಾವನನ್ನು ಇಟ್ಟುಕೊಳ್ಳದೇ ಧರ್ಮದಂತೆ ನಡೆದುಕೊಳ್ಳುತ್ತಿದ್ದೀಯೆ ತಾನೇ? ಪಾರ್ಥ! ನಿನ್ನ ತಂದೆ-ತಾಯಂದಿರ ಕುರಿತಾದ ನಿನ್ನ ವರ್ತನೆಯು ಕ್ಷೀಣಿಸುವುದಿಲ್ಲ ತಾನೇ?

03156007a ಕಚ್ಚಿತ್ತೇ ಗುರವಃ ಸರ್ವೇ ವೃದ್ಧಾ ವೈದ್ಯಾಶ್ಚ ಪೂಜಿತಾಃ|

03156007c ಕಚ್ಚಿನ್ನ ಕುರುಷೇ ಭಾವಂ ಪಾರ್ಥ ಪಾಪೇಷು ಕರ್ಮಸು||

ನೀನು ಎಲ್ಲ ಗುರುಗಳನ್ನೂ, ವೃದ್ಧರನ್ನೂ, ಮತ್ತು ವೈದ್ಯರನ್ನೂ ಪೂಜಿಸುತ್ತೀಯೆ ತಾನೇ? ಪಾರ್ಥ! ನೀನು ಎಂದೂ ಪಾಪಕರ್ಮಗಳನ್ನು ಮಾಡಲು ಬಯಸಿಲ್ಲ ತಾನೇ?

03156008a ಸುಕೃತಂ ಪ್ರತಿಕರ್ತುಂ ಚ ಕಚ್ಚಿದ್ಧಾತುಂ ಚ ದುಷ್ಕೃತಂ|

03156008c ಯಥಾನ್ಯಾಯಂ ಕುರುಶ್ರೇಷ್ಠ ಜಾನಾಸಿ ನ ಚ ಕತ್ಥಸೇ||

ಕುರುಶ್ರೇಷ್ಠ! ಯಥಾನ್ಯಾಯವಾಗಿ ಒಳಿತನ್ನು ಹೇಗೆ ಸ್ವೀಕರಿಸಬೇಕು ಮತ್ತು ದುಷ್ಕೃತವನ್ನು ಹೇಗೆ ಗಮನಿಸಬಾರದು ಎನ್ನುವುದನ್ನು ತಿಳಿದಿದ್ದೀಯೆ ತಾನೇ? ಜಂಬಕೊಚ್ಚಿಕೊಳ್ಳುವುದಿಲ್ಲ ತಾನೇ?

03156009a ಯಥಾರ್ಹಂ ಮಾನಿತಾಃ ಕಚ್ಚಿತ್ತ್ವಯಾ ನಂದಂತಿ ಸಾಧವಃ|

03156009c ವನೇಷ್ವಪಿ ವಸನ್ಕಚ್ಚಿದ್ಧರ್ಮಮೇವಾನುವರ್ತಸೇ||

ಸಾಧುಜನರು ಯಥಾರ್ಹವಾಗಿ ನಿನ್ನಿಂದ ಸಮ್ಮಾನಿತರಾಗಿ ಸಂತೋಷಗೊಳ್ಳುತ್ತಾರೆ ತಾನೇ? ವನದಲ್ಲಿ ವಾಸವಾಗಿದ್ದುಕೊಂಡೂ ಧರ್ಮವನ್ನು ಅನುಸರಿಸುತ್ತಿದ್ದೀಯೆ ತಾನೇ?

03156010a ಕಚ್ಚಿದ್ಧೌಮ್ಯಸ್ತ್ವದಾಚಾರೈರ್ನ ಪಾರ್ಥ ಪರಿತಪ್ಯತೇ|

03156010c ದಾನಧರ್ಮತಪಹ್ಶೌಚೈರಾರ್ಜವೇನ ತಿತಿಕ್ಷಯಾ||

ಪಾರ್ಥ! ಧೌಮ್ಯನು ನಿನ್ನ ಆಚಾರ, ದಾನ, ಧರ್ಮ, ತಪಸ್ಸು, ಶೌಚ, ಆರ್ಜವಗಳ ಕುರಿತು ಖಂಡಿಸುವ ಸನ್ನಿವೇಶಗಳು ಒದಗಿಲ್ಲ ತಾನೇ?

03156011a ಪಿತೃಪೈತಾಮಹಂ ವೃತ್ತಂ ಕಚ್ಚಿತ್ಪಾರ್ಥಾನುವರ್ತಸೇ|

03156011c ಕಚ್ಚಿದ್ರಾಜರ್ಷಿಯಾತೇನ ಪಥಾ ಗಚ್ಚಸಿ ಪಾಂಡವ||

ಪಾರ್ಥ! ತಂದೆ ಮತ್ತು ಅಜ್ಜಂದಿರ ನಡತೆಯನ್ನು ಅನುಸರಿಸುತ್ತೀಯೆ ತಾನೇ? ಪಾಂಡವ! ರಾಜರ್ಷಿಗಳು ನಡೆದ ದಾರಿಯಲ್ಲಿಯೇ ಹೋಗುತ್ತಿದ್ದೀಯೆ ತಾನೇ?

03156012a ಸ್ವೇ ಸ್ವೇ ಕಿಲ ಕುಲೇ ಜಾತೇ ಪುತ್ರೇ ನಪ್ತರಿ ವಾ ಪುನಃ|

03156012c ಪಿತರಃ ಪಿತೃಲೋಕಸ್ಥಾಃ ಶೋಚಂತಿ ಚ ಹಸಂತಿ ಚ||

ತಮ್ಮ ಕುಲದಲ್ಲಿ ಮಗ ಅಥವಾ ಮೊಮ್ಮಗನು ಹುಟ್ಟಿದಾಗಲೆಲ್ಲಾ ಪಿತೃಲೋಕದಲ್ಲಿರುವ ಪಿತೃಗಳು ನಗುತ್ತಾರೆ ಅಥವಾ ದುಃಖಿಸುತ್ತಾರೆ ಎಂದು ಹೇಳುತ್ತಾರೆ.

03156013a ಕಿಂ ನ್ವಸ್ಯ ದುಷ್ಕೃತೇಽಸ್ಮಾಭಿಃ ಸಂಪ್ರಾಪ್ತವ್ಯಂ ಭವಿಷ್ಯತಿ|

03156013c ಕಿಂ ಚಾಸ್ಯ ಸುಕೃತೇಽಸ್ಮಾಭಿಃ ಪ್ರಾಪ್ತವ್ಯಮಿತಿ ಶೋಭನಂ||

ಅವನು ದುಷ್ಟಕರ್ಮಗಳನ್ನೆಸಗಿದರೆ ನಮಗೆ ಏನಾಗುತ್ತದೆ? ಅಥವಾ ಅವನ ಸುಕೃತಗಳಿಂದ ನಮಗೆ ಒಳ್ಳೆಯದಾಗುತ್ತದೆಯೇ? ಎಂದು ಚಿಂತಿಸುತ್ತಿರುತ್ತಾರೆ.

03156014a ಪಿತಾ ಮಾತಾ ತಥೈವಾಗ್ನಿರ್ಗುರುರಾತ್ಮಾ ಚ ಪಂಚಮಃ|

03156014c ಯಸ್ಯೈತೇ ಪೂಜಿತಾಃ ಪಾರ್ಥ ತಸ್ಯ ಲೋಕಾವುಭೌ ಜಿತೌ||

ಪಾರ್ಥ! ತಂದೆ, ತಾಯಿ, ಹಾಗೆಯೇ ಅಗ್ನಿ, ಗುರು ಮತ್ತು ಆತ್ಮ ಈ ಐವರನ್ನು ಪೂಜಿಸುವವನು ಎರಡೂ ಲೋಕಗಳನ್ನು ಗೆಲ್ಲುತ್ತಾರೆ.

03156015a ಅಬ್ಭಕ್ಷಾ ವಾಯುಭಕ್ಷಾಶ್ಚ ಪ್ಲವಮಾನಾ ವಿಹಾಯಸಾ|

03156015c ಜುಷಂತೇ ಪರ್ವತಶ್ರೇಷ್ಠಮೃಷಯಃ ಪರ್ವಸಂಧಿಷು||

ಪರ್ವಸಂಧಿಗಳಲ್ಲಿ (ಹುಣ್ಣಿಮೆ ಅಮವಾಸ್ಯೆಗಳಲ್ಲಿ) ಕೇವಲ ನೀರು ಮತ್ತು ಗಾಳಿಯನ್ನು ಸೇವಿಸುವ ಋಷಿಗಳು ಗಾಳಿಯಲ್ಲಿ ಹಾರಿಕೊಂಡು ಬಂದು ಈ ಪರ್ವತಶ್ರೇಷ್ಠನನ್ನು ಭೇಟಿ ಮಾಡುತ್ತಾರೆ.

03156016a ಕಾಮಿನಃ ಸಹ ಕಾಂತಾಭಿಃ ಪರಸ್ಪರಮನುವ್ರತಾಃ|

03156016c ದೃಶ್ಯಂತೇ ಶೈಲಶೃಂಗಸ್ಥಾಸ್ತಥಾ ಕಿಂಪುರುಷಾ ನೃಪ||

ನೃಪ! ಪರಸ್ಪರರಲ್ಲಿ ಅನುರತರಾದ ಕಿಂಪುರುಷ ಕಾಮಿ-ಕಾಂತೆಯರೂ ಕೂಡ ಈ ಪರ್ವತ ಶಿಖರಗಳಲ್ಲಿ ಕಂಡುಬರುತ್ತಾರೆ.

03156017a ಅರಜಾಂಸಿ ಚ ವಾಸಾಂಸಿ ವಸಾನಾಃ ಕೌಶಿಕಾನಿ ಚ|

03156017c ದೃಶ್ಯಂತೇ ಬಹವಃ ಪಾರ್ಥ ಗಂಧರ್ವಾಪ್ಸರಸಾಂ ಗಣಾಃ||

03156018a ವಿದ್ಯಾಧರಗಣಾಶ್ಚೈವ ಸ್ರಗ್ವಿಣಃ ಪ್ರಿಯದರ್ಶನಾಃ|

03156018c ಮಹೋರಗಗಣಾಶ್ಚೈವ ಸುಪರ್ಣಾಶ್ಚೋರಗಾದಯಃ||

ಪಾರ್ಥ! ಕೊಳೆಯಿಲ್ಲದ ಶುಭ್ರ ರೇಷ್ಮೆ ಬಟ್ಟೆಗಳನ್ನುಟ್ಟು, ಹಾರಗಳನ್ನು ಧರಿಸಿದ ಬಹಳಷ್ಟು ಸುಂದರ ಗಂಧರ್ವ ಅಪ್ಸರ ಗಣಗಳು, ವಿದ್ಯಾಧರರ ಗುಂಪುಗಳು, ಮಹಾ ಉರಗಗಣಗಳು, ಪಕ್ಷಿ ಮತ್ತು ಉರಗಗಣಗಳು ಅಲ್ಲಿ ಕಾಣಿಸುತ್ತಾರೆ.

03156019a ಅಸ್ಯ ಚೋಪರಿ ಶೈಲಸ್ಯ ಶ್ರೂಯತೇ ಪರ್ವಸಂಧಿಷು|

03156019c ಭೇರೀಪಣವಶಂಖಾನಾಂ ಮೃದಂಗಾನಾಂ ಚ ನಿಸ್ವನಃ||

ಆ ಗಿರಿಯ ಶಿಖರದಲ್ಲಿ ಹುಣ್ಣಿಮೆ-ಅಮವಾಸ್ಯೆಗಳಲ್ಲಿ ಭೇರಿ, ಪಣವ, ಶಂಖ ಮತ್ತು ಮೃದಂಗಗಳ ನಿನಾದವು ಕೇಳಿಬರುತ್ತದೆ.

03156020a ಇಹಸ್ಥೈರೇವ ತತ್ಸರ್ವಂ ಶ್ರೋತವ್ಯಂ ಭರತರ್ಷಭಾಃ|

03156020c ನ ಕಾರ್ಯಾ ವಃ ಕಥಂ ಚಿತ್ಸ್ಯಾತ್ತತ್ರಾಭಿಸರಣೇ ಮತಿಃ||

03156021a ನ ಚಾಪ್ಯತಃ ಪರಂ ಶಕ್ಯಂ ಗಂತುಂ ಭರತಸತ್ತಮಾಃ|

03156021c ವಿಹಾರೋ ಹ್ಯತ್ರ ದೇವಾನಾಮಮಾನುಷಗತಿಸ್ತು ಸಾ||

ಭರತರ್ಷಭರೇ! ಇಲ್ಲಿ ನಿಂತುಕೊಂಡರೂ ಆ ಎಲ್ಲವನ್ನೂ ಕೇಳಬಹುದು. ಎಷ್ಟೇ ಮನಸ್ಸು ಮಾಡಿದರೂ ನೀವು ಅದರ ಹತ್ತಿರ ಹೋಗಕೂಡದು. ಭರತಸತ್ತಮರೇ! ಇಲ್ಲಿಂದ ಮುಂದೆ ಹೋಗುವುದು ಅಸಾಧ್ಯ. ಯಾಕೆಂದರೆ, ಅಲ್ಲಿ ದೇವತೆಗಳು ವಿಹರಿಸುತ್ತಾರೆ, ಮತ್ತು ಅದು ಮನುಷ್ಯರ ಗಮನಕ್ಕೆ ಸಿಲುಕುವುದಿಲ್ಲ.

03156022a ಈಷಚ್ಚಪಲಕರ್ಮಾಣಂ ಮನುಷ್ಯಮಿಹ ಭಾರತ|

03156022c ದ್ವಿಷಂತಿ ಸರ್ವಭೂತಾನಿ ತಾಡಯಂತಿ ಚ ರಾಕ್ಷಸಾಃ||

ಭಾರತ! ಇಲ್ಲಿರುವ ಸರ್ವಭೂತಗಳೂ ಸ್ವಲ್ಪವೇ ತಪ್ಪುಮಾಡಿರುವ ಮನುಷ್ಯನನ್ನೂ ದ್ವೇಷಿಸುತ್ತವೆ ಮತ್ತು ರಾಕ್ಷಸರು ಅವನನ್ನು ಒದೆಯುತ್ತಾರೆ.

03156023a ಅಭ್ಯತಿಕ್ರಮ್ಯ ಶಿಖರಂ ಶೈಲಸ್ಯಾಸ್ಯ ಯುಧಿಷ್ಠಿರ|

03156023c ಗತಿಃ ಪರಮಸಿದ್ಧಾನಾಂ ದೇವರ್ಷೀಣಾಂ ಪ್ರಕಾಶತೇ||

ಯುಧಿಷ್ಠಿರ! ಈ ಗಿರಿಯ ಶಿಖರವನ್ನು ದಾಟಿದರೆ ಪರಮಸಿದ್ಧ ದೇವರ್ಷಿಗಳ ಮಾರ್ಗವು ತೋರುತ್ತದೆ.

03156024a ಚಾಪಲಾದಿಹ ಗಚ್ಚಂತಂ ಪಾರ್ಥ ಯಾನಮತಃ ಪರಂ|

03156024c ಅಯಃಶೂಲಾದಿಭಿರ್ಘ್ನಂತಿ ರಾಕ್ಷಸಾಃ ಶತ್ರುಸೂದನ||

ಪಾರ್ಥ! ಶತ್ರುಸೂದನ! ಚಪಲನಾಗಿ ಇಲ್ಲಿಂದ ಮುಂದೆ ಪ್ರಯಾಣಮಾಡಿದರೆ ಅವನನ್ನು ರಾಕ್ಷಸರು ಕಬ್ಬಿಣದ ಶೂಲಗಳಿಂದ ತಿವಿದು ಹೊಡೆಯುತ್ತಾರೆ.

03156025a ಅಪ್ಸರೋಭಿಃ ಪರಿವೃತಃ ಸಮೃದ್ಧ್ಯಾ ನರವಾಹನಃ|

03156025c ಇಹ ವೈಶ್ರವಣಸ್ತಾತ ಪರ್ವಸಂಧಿಷು ದೃಶ್ಯತೇ||

03156026a ಶಿಖರೇ ತಂ ಸಮಾಸೀನಮಧಿಪಂ ಸರ್ವರಕ್ಷಸಾಂ|

03156026c ಪ್ರೇಕ್ಷಂತೇ ಸರ್ವಭೂತಾನಿ ಭಾನುಮಂತಮಿವೋದಿತಂ||

ಮಗೂ! ಹುಣ್ಣಿಮೆ-ಅಮವಾಸ್ಯೆಗಳಲ್ಲಿ ಅಪ್ಸರೆಯರಿಂದ ಪರಿವೃತನಾಗಿ, ಸಮೃದ್ಧನಾದ, ಸರ್ವರಾಕ್ಷಸರ ಒಡೆಯನಾದ ನರವಾಹನ ವೈಶ್ರವಣನು ಇಲ್ಲಿ ಶಿಖರದಲ್ಲಿ ಉದಯಿಸುತ್ತಿರುವ ಸೂರ್ಯನಂತೆ ಬೆಳಗುತ್ತಿರುವ, ರ್ವಭೂತಗಳಿಗೆ ದರ್ಶನನೀಡಿ ಕುಳಿತುಕೊಂಡಿರುವುದನ್ನು ಕಾಣಬಹುದು.

03156027a ದೇವದಾನವಸಿದ್ಧಾನಾಂ ತಥಾ ವೈಶ್ರವಣಸ್ಯ ಚ|

03156027c ಗಿರೇಃ ಶಿಖರಮುದ್ಯಾನಮಿದಂ ಭರತಸತ್ತಮ||

ಭರತಸತ್ತಮ! ಈ ಗಿರಿಶಿಖರವು ಧೇವ-ದಾನವ-ಸಿದ್ಧರು ಮತ್ತು ವೈಶ್ರವಣನ ಉದ್ಯಾನವನವು.

03156028a ಉಪಾಸೀನಸ್ಯ ಧನದಂ ತುಂಬುರೋಃ ಪರ್ವಸಂಧಿಷು|

03156028c ಗೀತಸಾಮಸ್ವನಸ್ತಾತ ಶ್ರೂಯತೇ ಗಂಧಮಾದನೇ||

ಮಗೂ! ಪರ್ವಸಂಧಿಗಳಲ್ಲಿ ತುಂಬುರನು ಉಪಾಸೀನನಾಗಿರುವ ಕುಬೇರನನ್ನು ಗೀತ-ವಾದ್ಯಗಳಿಂದ ಮನೋರಂಜಿಸುವಾಗ ಅದನ್ನು ಗಂಧಮಾದನದಲ್ಲಿ ಕೇಳಬಹುದು.

03156029a ಏತದೇವಂವಿಧಂ ಚಿತ್ರಮಿಹ ತಾತ ಯುಧಿಷ್ಠಿರ|

03156029c ಪ್ರೇಕ್ಷಂತೇ ಸರ್ವಭೂತಾನಿ ಬಹುಶಃ ಪರ್ವಸಂಧಿಷು||

ಮಗೂ! ಯುಧಿಷ್ಠಿರ! ಪರ್ವಸಂಧಿಗಳಲ್ಲಿ ಸರ್ವಭೂತಗಳು ಬಹುಸಂಖ್ಯೆಗಳಲ್ಲಿ ಈ ರೀತಿಯ ಅದ್ಭುತವನ್ನು ನೋಡುತ್ತಾರೆ.

03156030a ಭುಂಜಾನಾಃ ಸರ್ವಭೋಜ್ಯಾನಿ ರಸವಂತಿ ಫಲಾನಿ ಚ|

03156030c ವಸಧ್ವಂ ಪಾಂಡವಶ್ರೇಷ್ಠಾ ಯಾವದರ್ಜುನದರ್ಶನಂ||

ಪಾಂಡವಶ್ರೇಷ್ಠ! ತಿನ್ನಬಹುದಾದ ಎಲ್ಲ ರಸಭರಿತ ಫಲಗಳನ್ನು ಸೇವಿಸುತ್ತಾ ಅರ್ಜುನನನ್ನು ನೋಡುವವರೆಗೆ ಇಲ್ಲಿಯೇ ವಾಸಿಸು.

03156031a ನ ತಾತ ಚಪಲೈರ್ಭಾವ್ಯಮಿಹ ಪ್ರಾಪ್ತೈಃ ಕಥಂ ಚನ|

03156031c ಉಷಿತ್ವೇಹ ಯಥಾಕಾಮಂ ಯಥಾಶ್ರದ್ಧಂ ವಿಹೃತ್ಯ ಚ||

03156031e ತತಃ ಶಸ್ತ್ರಭೃತಾಂ ಶ್ರೇಷ್ಠ ಪೃಥಿವೀಂ ಪಾಲಯಿಷ್ಯಸಿ||

ಮಗೂ! ಇಲ್ಲಿಗೆ ಹೇಗೋ ಬಂದಿದ್ದಾಗಿದೆ. ಚಪಲನಾಗಬೇಡ! ಶಸ್ತ್ರಗಳನ್ನು ಹಿಡಿದವರಲ್ಲಿ ಶ್ರೇಷ್ಠನೇ! ಇಷ್ಟಬಂದಂತೆ ಮತ್ತು ಆಸಕ್ತಿಯಿದ್ದಷ್ಟು ಇಲ್ಲಿ ವಿಹರಿಸಿಕೊಂಡು ವಾಸಿಸಿ ನಂತರ ಭೂಮಿಯನ್ನು ಆಳುತ್ತೀಯೆ.”” 

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ಆರ್ಷ್ಟಿಶೇಣಯುಧಿಷ್ಠಿರಸಂವಾದೇ ಷಟ್‌ಪಂಚಶದಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ಆರ್ಷ್ಟಿಶೇಣಯುಧಿಷ್ಠಿರಸಂವಾದ ದಲ್ಲಿ ನೂರಾಐವತ್ತಾರನೆಯ ಅಧ್ಯಾಯವು.

Related image

Comments are closed.