ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೭೯
ಅರ್ಜುನನಿಗಾಗಿ ದ್ರೌಪದಿಯೊಡನೆ ಪಾಂಡವರ ಚಿಂತೆ
ಅರ್ಜುನನು ಹೊರಟು ಹೋದ ನಂತರ ಪಾಂಡವರು ಖುಷಿಯಿಲ್ಲದೇ ವಾಸಿಸಿದ್ದುದು (೧-೧೦). ಅರ್ಜುನನನ್ನು ನೆನಪಿಸಿಕೊಂಡು ದ್ರೌಪದಿ, ಭೀಮಸೇನ, ನಕುಲ ಮತ್ತು ಸಹದೇವರು ಅವನ ವರ್ಣನೆ ಮಾಡಿದ್ದುದು (೧೧-೨೯).
03079001 ಜನಮೇಜಯ ಉವಾಚ|
03079001a ಭಗವನ್ಕಾಮ್ಯಕಾತ್ಪಾರ್ಥೇ ಗತೇ ಮೇ ಪ್ರಪಿತಾಮಹೇ|
03079001c ಪಾಂಡವಾಃ ಕಿಮಕುರ್ವಂತ ತಮೃತೇ ಸವ್ಯಸಾಚಿನಂ||
ಜನಮೇಜಯನು ಹೇಳಿದನು: “ಭಗವನ್! ನನ್ನ ಪ್ರಪಿತಾಮಹ ಪಾರ್ಥನು ಹೊರಟು ಹೋದ ನಂತರ ಕಾಮ್ಯಕದಲ್ಲಿ ಪಾಂಡವರು, ಸವ್ಯಸಾಚಿಯಿಲ್ಲದೇ ಏನು ಮಾಡಿದರು?
03079002a ಸ ಹಿ ತೇಷಾಂ ಮಹೇಷ್ವಾಸೋ ಗತಿರಾಸೀದನೀಕಜಿತ್|
03079002c ಆದಿತ್ಯಾನಾಂ ಯಥಾ ವಿಷ್ಣುಸ್ತಥೈವ ಪ್ರತಿಭಾತಿ ಮೇ||
ಯಾಕೆಂದರೆ ನನ್ನ ಅಭಿಪ್ರಾಯದಲ್ಲಿ ಆ ಮಹೇಷ್ವಾಸ ಅನೀಕಜಿತುವು ಆದಿತ್ಯರಿಗೆ ವಿಷ್ಣುವು ಹೇಗಿದ್ದನೋ ಹಾಗೆಯೇ ಅವರಿಗೆ ಗತಿಯಾಗಿದ್ದನು.
03079003a ತೇನೇಂದ್ರಸಮವೀರ್ಯೇಣ ಸಂಗ್ರಾಮೇಷ್ವನಿವರ್ತಿನಾ|
03079003c ವಿನಾಭೂತಾ ವನೇ ವೀರಾಃ ಕಥಮಾಸನ್ಪಿತಾಮಹಾಃ||
ವೀರ್ಯದಲ್ಲಿ ಇಂದ್ರನಿಗೆ ಸಮನಾದ ಮತ್ತು ಸಂಗ್ರಾಮದಿಂದ ಎಂದೂ ಓಡಿಹೋಗದೇ ಇದ್ದ ಅವನು ಇಲ್ಲದೇ ನನ್ನ ವೀರ ಪಿತಾಮಹರು ಆ ವನದಲ್ಲಿ ಹೇಗೆ ಇದ್ದರು?”
03079004 ವೈಶಂಪಾಯನ ಉವಾಚ|
03079004a ಗತೇ ತು ಕಾಮ್ಯಕಾತ್ತಾತ ಪಾಂಡವೇ ಸವ್ಯಸಾಚಿನಿ|
03079004c ಬಭೂವುಃ ಕೌರವೇಯಾಸ್ತೇ ದುಃಖಶೋಕಪರಾಯಣಾಃ||
ವೈಶಂಪಾಯನನು ಹೇಳಿದನು: “ಮಗು! ಆ ಸವ್ಯಸಾಚಿ ಪಾಂಡವನು ಕಾಮ್ಯಕದಿಂದ ಹೊರಟುಹೋದ ನಂತರ ಆ ಕೌರವರು ದುಃಖ ಮತ್ತು ಶೋಕದಲ್ಲಿ ಮುಳುಗಿಹೋದರು.
03079005a ಆಕ್ಷಿಪ್ತಸೂತ್ರಾ ಮಣಯಶ್ಚಿನ್ನಪಕ್ಷಾ ಇವ ದ್ವಿಜಾಃ|
03079005c ಅಪ್ರೀತಮನಸಃ ಸರ್ವೇ ಬಭೂವುರಥ ಪಾಂಡವಾಃ||
ಆ ಎಲ್ಲ ಪಾಂಡವರೂ ದಾರ ಕಡಿದ ಮಣಿಗಳಂತೆ ಅಥವಾ ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿಗಳಂತೆ ಅಪ್ರೀತಮನಸ್ಕರಾಗಿದ್ದರು.
03079006a ವನಂ ಚ ತದಭೂತ್ತೇನ ಹೀನಮಕ್ಲಿಷ್ಟಕರ್ಮಣಾ|
03079006c ಕುಬೇರೇಣ ಯಥಾ ಹೀನಂ ವನಂ ಚೈತ್ರರಥಂ ತಥಾ||
ಅಕ್ಲಿಷ್ಟಕರ್ಮಣಿಯನ್ನು ಕಳೆದುಕೊಂಡ ಆ ವನವು ಕುಬೇರನನ್ನು ಕಳೆದುಕೊಂಡ ಚೈತ್ರರಥದಂತೆ ಆಗಿತ್ತು.
03079007a ತಮೃತೇ ಪುರುಷವ್ಯಾಘ್ರಂ ಪಾಂಡವಾ ಜನಮೇಜಯ|
03079007c ಮುದಮಪ್ರಾಪ್ನುವಂತೋ ವೈ ಕಾಮ್ಯಕೇ ನ್ಯವಸಂಸ್ತದಾ||
ಜನಮೇಜಯ! ಆ ಪುರುಷವ್ಯಾಘ್ರನಿಲ್ಲದೇ ಪಾಂಡವರು ಕಾಮ್ಯಕದಲ್ಲಿ ಸಂತೋಷವೇ ಇಲ್ಲದೇ ವಾಸಿಸುತ್ತಿದ್ದರು.
03079008a ಬ್ರಾಹ್ಮಣಾರ್ಥೇ ಪರಾಕ್ರಾಂತಾಃ ಶುದ್ಧೈರ್ಬಾಣೈರ್ಮಹಾರಥಾಃ|
03079008c ನಿಘ್ನಂತೋ ಭರತಶ್ರೇಷ್ಠ ಮೇಧ್ಯಾನ್ಬಹುವಿಧಾನ್ಮೃಗಾನ್||
ಭರತಶ್ರೇಷ್ಠ! ಆ ಪರಾಕ್ರಾಂತ ಮಹಾರಥರು ಬಾಹ್ಮಣರಿಗೋಸ್ಕರ ಬಹುವಿಧದ ಮೇದ್ಯ ಮೃಗಗಳನ್ನು ಶುದ್ಧ ಬಾಣಗಳಿಂದ ಸಂಹರಿಸಿಸುತ್ತಿದ್ದರು[1].
03079009a ನಿತ್ಯಂ ಹಿ ಪುರುಷವ್ಯಾಘ್ರಾ ವನ್ಯಾಹಾರಮರಿಂದಮಾಃ|
03079009c ವಿಪ್ರಸೃತ್ಯ ಸಮಾಹೃತ್ಯ ಬ್ರಾಹ್ಮಣೇಭ್ಯೋ ನ್ಯವೇದಯನ್||
ನಿತ್ಯವೂ ಆ ಪುರುಷವ್ಯಾಘ್ರ ಅರಿಂದಮರು ವನದಲ್ಲಿ ದೂರ ದೂರ ಹೋಗಿ ಆಹಾರಗಳನ್ನು ತಂದು ಬ್ರಾಹ್ಮಣರಿಗೆ ನಿವೇದಿಸುತ್ತಿದ್ದರು.
03079010a ಏವಂ ತೇ ನ್ಯವಸಂಸ್ತತ್ರ ಸೋತ್ಕಂಠಾಃ ಪುರುಷರ್ಷಭಾಃ|
03079010c ಅಹೃಷ್ಟಮನಸಃ ಸರ್ವೇ ಗತೇ ರಾಜನ್ಧನಂಜಯೇ||
ರಾಜನ್! ಹೀಗೆ ಧನಂಜಯನು ಹೊರಟು ಹೋದ ನಂತರ ಆ ಪುರುಷರ್ಷಭರು ಖುಷಿಯೇ ಇಲ್ಲದೇ ಅಹೃಷ್ಠಮನಸ್ಕರಾಗಿ ಅಲ್ಲಿ ವಾಸಿಸುತ್ತಿದ್ದರು.
03079011a ಅಥ ವಿಪ್ರೋಷಿತಂ ವೀರಂ ಪಾಂಚಾಲೀ ಮಧ್ಯಮಂ ಪತಿಂ|
03079011c ಸ್ಮರಂತೀ ಪಾಂಡವಶ್ರೇಷ್ಠಮಿದಂ ವಚನಮಬ್ರವೀತ್||
ಆಗ ಪಾಂಚಾಲಿಯು ಜೊತೆಯಲ್ಲಿ ಇಲ್ಲದ ತನ್ನ ಮಧ್ಯಮ ಪತಿ ವೀರನನ್ನು ಸ್ಮರಿಸುತ್ತಾ ಪಾಂಡವಶ್ರೇಷ್ಠನಿಗೆ (ಹಿರಿಯ ಪಾಂಡವನಿಗೆ) ಈ ಮಾತುಗಳನ್ನು ಹೇಳಿದಳು:
03079012a ಯೋಽರ್ಜುನೇನಾರ್ಜುನಸ್ತುಲ್ಯೋ ದ್ವಿಬಾಹುರ್ಬಹುಬಾಹುನಾ|
03079012c ತಮೃತೇ ಪಾಂಡವಶ್ರೇಷ್ಠಂ ವನಂ ನ ಪ್ರತಿಭಾತಿ ಮೇ|
“ಪಾಂಡವಶ್ರೇಷ್ಠ! ಬಹುರ್ಬಾಹು ಅರ್ಜುನನ[2] ಸರಿಸಮನಾದ ಆ ದ್ವಿಬಾಹು ಅರ್ಜುನನಿಲ್ಲದೇ ಈ ವನವು ನನಗೆ ಹಿಡಿಸುತ್ತಿಲ್ಲ.
03079012e ಶೂನ್ಯಾಮಿವ ಚ ಪಶ್ಯಾಮಿ ತತ್ರ ತತ್ರ ಮಹೀಮಿಮಾಂ||
03079013a ಬಹ್ವಾವಾಶ್ಚರ್ಯಮಿದಂ ಚಾಪಿ ವನಂ ಕುಸುಮಿತದ್ರುಮಂ|
03079013c ನ ತಥಾ ರಮಣೀಯಂ ಮೇ ತಮೃತೇ ಸವ್ಯಸಾಚಿನಂ||
ಈ ಮಹಿಯು ಎಲ್ಲೆಡೆಯಲ್ಲಿಯೂ ಶೂನವಾಗಿ ಕಾಣುತ್ತಿದೆ. ಕುಸುಮ ದ್ರುಮಗಳಿಂದ ಕೂಡಿದ ಬಹು ಆಶ್ಚರ್ಯದಾಯಕ ಈ ವನವೂ ಕೂಡ ಸವ್ಯಸಾಚಿಯು ಇಲ್ಲದಿದರಿಂದ ರಮಣೀಯವಾಗಿ ತೋರುತ್ತಿಲ್ಲ.
03079014a ನೀಲಾಂಬುದಸಮಪ್ರಖ್ಯಂ ಮತ್ತಮಾತಂಗವಿಕ್ರಮಂ|
03079014c ತಮೃತೇ ಪುಂಡರೀಕಾಕ್ಷಂ ಕಾಮ್ಯಕಂ ನಾತಿಭಾತಿ ಮೇ||
ಮಳೆಯ ಮೋಡಗಳಂತೆ ಕತ್ತಲೆಯಿಂದೊಡಗೂಡಿದ, ಮತ್ತಮಾತಂಗಗಳಿಂದೊಡಗೂಡಿದ ಈ ಕಾಮ್ಯಕವು ಆ ಪುಂಡರೀಕಾಕ್ಷನಿಲ್ಲದೇ ಸಂತಸವನ್ನು ಕೊಡುತ್ತಿಲ್ಲ.
03079015a ಯಸ್ಯ ಸ್ಮ ಧನುಷೋ ಘೋಷಃ ಶ್ರೂಯತೇಽಶನಿನಿಸ್ವನಃ|
03079015c ನ ಲಭೇ ಶರ್ಮ ತಂ ರಾಜನ್ಸ್ಮರಂತೀ ಸವ್ಯಸಾಚಿನಂ||
ರಾಜನ್! ಯಾರ ಧನುರ್ಘೋಷವು ಸಿಡಿಲಿನಂತೆ ಕೇಳಿಬರುತ್ತಿತ್ತೋ ಆ ಸವ್ಯಸಾಚಿಯನ್ನು ಸ್ಮರಿಸುತ್ತಿರುವ ನನಗೆ ಆಸರೆಯೇ ಇಲ್ಲದಂತಾಗಿದೆ.”
03079016a ತಥಾ ಲಾಲಪ್ಯಮಾನಾಂ ತಾಂ ನಿಶಮ್ಯ ಪರವೀರಹಾ|
03079016c ಭೀಮಸೇನೋ ಮಹಾರಾಜ ದ್ರೌಪದೀಮಿದಮಬ್ರವೀತ್||
ಮಹಾರಾಜ! ಈ ರೀತಿ ಲಲಾಪಿಸುತ್ತಿರುವ ದ್ರೌಪದಿಯನ್ನು ಕುರಿತು ಶತ್ರುವೀರರ ಸಂಹಾರಿ ಭೀಮಸೇನನು ಹೇಳಿದನು:
03079017a ಮನಃಪ್ರೀತಿಕರಂ ಭದ್ರೇ ಯದ್ಬ್ರವೀಷಿ ಸುಮಧ್ಯಮೇ|
03079017c ತನ್ಮೇ ಪ್ರೀಣಾತಿ ಹೃದಯಮಮೃತಪ್ರಾಶನೋಪಮಂ||
“ಸುಮದ್ಯಮೇ! ಭದ್ರೇ! ನೀನು ಏನನ್ನು ಹೇಳುತ್ತಿದ್ದೇಯೋ ಅದು ನನ್ನ ಮನಸ್ಸನ್ನು ಸಂತಸಗೊಳಿಸುತ್ತಿದೆ ಮತ್ತು ನನ್ನ ಹೃದಯಕ್ಕೆ ಅಮೃತದ ರುಚಿಯನ್ನು ಇತ್ತಹಾಗೆ ಆಗಿದೆ.
03079018a ಯಸ್ಯ ದೀರ್ಘೌ ಸಮೌ ಪೀನೌ ಭುಜೌ ಪರಿಘಸಮ್ನಿಭೌ|
03079018c ಮೌರ್ವೀಕೃತಕಿಣೌ ವೃತ್ತೌ ಖಡ್ಗಾಯುಧಗದಾಧರೌ||
03079019a ನಿಷ್ಕಾಂಗದಕೃತಾಪೀಡೌ ಪಂಚಶೀರ್ಷಾವಿವೋರಗೌ|
03079019c ತಮೃತೇ ಪುರುಷವ್ಯಾಘ್ರಂ ನಷ್ಟಸೂರ್ಯಮಿದಂ ವನಂ||
ಅವನ ಎರಡೂ ಭುಜಗಳು ಉದ್ದವಾಗಿದ್ದವು, ನುಣುಪಾಗಿದ್ದವು ಮತ್ತು ಪರಿಘದಂತೆ ದಷ್ಠಪುಷ್ಠವಾಗಿದ್ದವು, ಬಿಲ್ಲು, ಖಡ್ಗ, ಮತ್ತು ಗದಾಯುಧಗಳನ್ನು ಹಿಡಿದ ಗುರುತುಗಳಿದ್ದವು, ಹಾಗೂ ಮೇಲ್ತೋಳಿನ ಬಿಗಿಯಾದ ಬಳೆಗಳಿಂದ ಕೂಡಿದವುಗಳಾಗಿ ಐದು ತಲೆಯ ನಾಗನಂತೆ ತೋರುತ್ತಿದ್ದವು. ಅಂತಹ ಪುರುಷವ್ಯಾಘ್ರನಿಲ್ಲದೇ ಈ ವನವು ತನ್ನ ಸೂರ್ಯನನ್ನು ಕಳೆದುಕೊಂಡಂತಿದೆ.
03079020a ಯಮಾಶ್ರಿತ್ಯ ಮಹಾಬಾಹುಂ ಪಾಂಚಾಲಾಃ ಕುರವಸ್ತಥಾ|
03079020c ಸುರಾಣಾಮಪಿ ಯತ್ತಾನಾಂ ಪೃತನಾಸು ನ ಬಿಭ್ಯತಿ||
ಪಾಂಚಾಲರು ಮತ್ತು ಕುರುಗಳು ಆ ಮಹಾಬಾಹುವಿನ ಆಶ್ರಯದಲ್ಲಿಯೇ ಇದ್ದಾರೆ ಮತ್ತು ಅವನ ಎದಿರು ಸುರರನ್ನು ತಂದು ಕೂಡಿಸಿದರೂ ಹಿಂಜರಿಯುವವನಲ್ಲ.
03079021a ಯಸ್ಯ ಬಾಹೂ ಸಮಾಶ್ರಿತ್ಯ ವಯಂ ಸರ್ವೇ ಮಹಾತ್ಮನಃ|
03079021c ಮನ್ಯಾಮಹೇ ಜಿತಾನಾಜೌ ಪರಾನ್ಪ್ರಾಪ್ತಾಂ ಚ ಮೇದಿನೀಂ||
ನಾವೆಲ್ಲರೂ ಆ ಮಹಾತ್ಮನ ಬಾಹುಗಳಲ್ಲಿ ಆಶ್ರಯವನ್ನು ಪಡೆದಿದ್ದೆವು ಮತ್ತು ಶತ್ರುಗಳನ್ನು ಯದ್ಧದಲ್ಲಿ ಗೆದ್ದು ಮೇದಿನಿಯನ್ನು ಪಡೆಯುವ ಯೋಚನೆಯಲ್ಲಿದ್ದೆವು.
03079022a ತಮೃತೇ ಫಲ್ಗುನಂ ವೀರಂ ನ ಲಭೇ ಕಾಮ್ಯಕೇ ಧೃತಿಂ|
03079022c ಶೂನ್ಯಾಮಿವ ಚ ಪಶ್ಯಾಮಿ ತತ್ರ ತತ್ರ ಮಹೀಮಿಮಾಂ||
ವೀರ ಫಾಲ್ಗುನನಿಲ್ಲದೇ ಕಾಮ್ಯಕದಲ್ಲಿ ಮನಸ್ಸಿಲ್ಲ ಮತ್ತು ಈ ಮಹಿಯ ಎಲ್ಲೆಡೆ ನೋಡಿದರೂ ಖಾಲಿ ಖಾಲಿ ಕಾಣಿಸುತ್ತಿದೆ.”
03079023 ನಕುಲ ಉವಾಚ|
03079023a ಯ ಉದೀಚೀಂ ದಿಶಂ ಗತ್ವಾ ಜಿತ್ವಾ ಯುಧಿ ಮಹಾಬಲಾನ್|
03079023c ಗಂಧರ್ವಮುಖ್ಯಾಂ ಶತಶೋ ಹಯಾಽಲ್ಲೇಭೇ ಸ ವಾಸವಿಃ||
03079024a ರಾಜಂಸ್ತಿತ್ತಿರಿಕಲ್ಮಾಷಾಂ ಶ್ರೀಮಾನನಿಲರಂಹಸಃ|
03079024c ಪ್ರಾದಾದ್ಭ್ರಾತ್ರೇ ಪ್ರಿಯಃ ಪ್ರೇಮ್ಣಾ ರಾಜಸೂಯೇ ಮಹಾಕ್ರತೌ||
ನಕುಲನು ಹೇಳಿದನು: “ರಾಜನ್! ಆ ಶ್ರೀಮಾನ್ ವಾಸವಿಯು ಉತ್ತರದಿಶೆಯಲ್ಲಿ ಹೋಗಿ ಮಹಾಬಲರನ್ನು ಯುದ್ಧದಲ್ಲಿ ಗೆದ್ದು ಅಕಲ್ಮಶ ತಿತ್ತಿರಿ ಬಣ್ಣದ, ವಾಯುವಿನಷ್ಟೇ ವೇಗಗಳುಳ್ಳ ನೂರಾರು ಗಂಧರ್ವ ಹಯಗಳನ್ನು ಪಡೆದು ರಾಜಸೂಯ ಮಹಾಕ್ರತುವಿನಲ್ಲಿ ತನ್ನ ಪ್ರಿಯ ಅಣ್ಣನಿಗೆ ಪ್ರೇಮದಿಂದ ಒಪ್ಪಿಸಿದನು.
03079025a ತಮೃತೇ ಭೀಮಧನ್ವಾನಂ ಭೀಮಾದವರಜಂ ವನೇ|
03079025c ಕಾಮಯೇ ಕಾಮ್ಯಕೇ ವಾಸಂ ನೇದಾನೀಮಮರೋಪಮಂ||
ಭೀಮಧನುಸ್ಸನ್ನು ಹಿಡಿದ, ಅಮರರ ಸಮಾನ, ಭೀಮಸೇನನ ಅನುಜನಿಲ್ಲದೇ ಈ ಕಾಮ್ಯಕದಲ್ಲಿ ವಾಸಿಸಲು ಇಷ್ಟವಾಗುತ್ತಿಲ್ಲ.”
03079026 ಸಹದೇವ ಉವಾಚ|
03079026a ಯೋ ಧನಾನಿ ಚ ಕನ್ಯಾಶ್ಚ ಯುಧಿ ಜಿತ್ವಾ ಮಹಾರಥಾನ್|
03079026c ಆಜಹಾರ ಪುರಾ ರಾಜ್ಞೇ ರಾಜಸೂಯೇ ಮಹಾಕ್ರತೌ||
ಸಹದೇವನು ಹೇಳಿದನು: “ಹಿಂದೆ ಅವನು ಯುದ್ಧದಲ್ಲಿ ಮಹಾರಥಿಗಳನ್ನು ಗೆದ್ದು ಧನ-ಕನ್ಯೆಯರನ್ನು ತಂದು ಮಹಾಕ್ರತು ರಾಜಸೂಯದಲ್ಲಿ ರಾಜನಿಗೆ ಸಮರ್ಪಿಸಿದನು.
03079027a ಯಃ ಸಮೇತಾನ್ಮೃಧೇ ಜಿತ್ವಾ ಯಾದವಾನಮಿತದ್ಯುತಿಃ|
03079027c ಸುಭದ್ರಾಮಾಜಹಾರೈಕೋ ವಾಸುದೇವಸ್ಯ ಸಮ್ಮತೇ||
ಆ ಅಮಿತದ್ಯುತಿಯು ವಾಸುದೇವನ ಸಮ್ಮತಿಯಂತೆ ಸೇರಿರುವ ಯಾದವರನ್ನೆಲ್ಲಾ ಒಬ್ಬನೇ ಯುದ್ಧದಲ್ಲಿ ಗೆದ್ದು ಸುಭದ್ರೆಯನ್ನು ಅಪಹರಿಸಿಕೊಂಡು ಬಂದ.
03079028a ತಸ್ಯ ಜಿಷ್ಣೋರ್ಬೃಸೀಂ ದೃಷ್ಟ್ವಾ ಶೂನ್ಯಾಮುಪನಿವೇಶನೇ|
03079028c ಹೃದಯಂ ಮೇ ಮಹಾರಾಜ ನ ಶಾಮ್ಯತಿ ಕದಾ ಚನ||
ಮಹಾರಾಜ! ನಮ್ಮ ಈ ನಿವೇಶನದಲ್ಲಿ ಆ ಜಿಷ್ಣುವಿನ ಬರಿದಾದ ಹಾಸಿಗೆಯನ್ನು ನೋಡಿ ನನ್ನ ಹೃದಯಕ್ಕೆ ಶಾಂತಿಯೇ ಇಲ್ಲವಾಗಿದೆ.
03079029a ವನಾದಸ್ಮಾದ್ವಿವಾಸಂ ತು ರೋಚಯೇಽಹಮರಿಂದಮ|
03079029c ನ ಹಿ ನಸ್ತಮೃತೇ ವೀರಂ ರಮಣೀಯಮಿದಂ ವನಂ||
ಅರಿಂದಮ! ಈ ವನದಲ್ಲಿ ಇನ್ನು ವಾಸಿಸಬಾರದು ಎಂದು ನನ್ನ ಯೋಚನೆ. ಯಾಕೆಂದರೆ ಆ ವೀರನಿಲ್ಲದೆ ಈ ವನವು ನಮಗೆಲ್ಲರಿಗೂ ರಮಣೀಯವೆನಿಸುತ್ತಿಲ್ಲ.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಗಮನಪರ್ವಣಿ ಅರ್ಜುನಾನುಶೋಚನೇ ಏಕೋನಶೀತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಗಮನಪರ್ವದಲ್ಲಿ ಅರ್ಜುನನ ಕುರಿತು ಶೋಕ ಎನ್ನುವ ಎಪ್ಪತ್ತೊಂಭತ್ತನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಗಮನಪರ್ವಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಗಮನಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೩೨/೧೦೦, ಅಧ್ಯಾಯಗಳು-೩೭೬/೧೯೯೫, ಶ್ಲೋಕಗಳು-೧೨೩೦೮/೭೩೭೮೪

[1]ಬ್ರಾಹ್ಮಣರಿಗೆ ಮೃಗಗಳನ್ನು ಬೇಟೆಯಾಡಿ ತರುತ್ತಿದ್ದರೇ?
[2]ಸಹಸ್ರಬಾಹುಗಳನ್ನು ಹೊಂದಿದ್ದ ಕಾರ್ತಿವೀರ್ಯಾರ್ಜುನ
Kannada translation of Indralokabhigamana Parva, by Chapter:
- ಇಂದ್ರಲೋಕಾಭಿಗಮನ ಪರ್ವ
- ಇಂದ್ರಸಭಾದರ್ಶನ
- ಲೋಮಶಗಮನ
- ಧೃತರಾಷ್ಟ್ರಖೇದ
- ಪಾರ್ಥಾಹಾರಕಥನ
- ಧೃತರಾಷ್ಟ್ರವಿಲಾಪ
- ನಲೋಪಾಖ್ಯಾನ
- ನಲೋಪಾಖ್ಯಾನ-ಹಂಸದಮಯಂತೀಸಂವಾದ
- ನಲೋಪಾಖ್ಯಾನ-ಇಂದ್ರನಾರದಸಂವಾದ
- ನಲೋಪಾಖ್ಯಾನ-ನಲಸ್ಯ ದೇವದೌತ್ಯ
- ನಲೋಪಾಖ್ಯಾನ-ನಲಕರ್ತುಕದೇವದೌತ್ಯ
- ನಲೋಪಾಖ್ಯಾನ-ದಮಯಂತೀಸ್ವಯಂವರ
- ನಲೋಪಾಖ್ಯಾನ-ಕಲಿದೇವಸಂವಾದ
- ನಲೋಪಾಖ್ಯಾನ-ನಲದ್ಯೂತ
- ನಲೋಪಾಖ್ಯಾನ-ಕುಂಡಿನಂಪ್ರತಿಕುಮಾರಯೋಪ್ರಸ್ಥಾಪನ
- ನಲೋಪಾಖ್ಯಾನ-ನಲವನಯಾತ್ರಾ
- ನಲೋಪಾಖ್ಯಾನ-ದಮಯಂತೀಪರಿತ್ಯಾಗ
- ನಲೋಪಾಖ್ಯಾನ-ಅಜಗರಗ್ರಸ್ತದಮಯಂತೀಮೋಚನ
- ನಲೋಪಾಖ್ಯಾನ-ದಮಯಂತೀಸಾರ್ಥವಾಹಸಂಗಮ
- ನಲೋಪಾಖ್ಯಾನ-ದಮಯಂತೀಚೇದಿರಾಜಗೃಹವಾಸ
- ನಲೋಪಾಖ್ಯಾನ-ನಲಕಾರ್ಕೋಟಕಸಂವಾದ
- ನಲೋಪಾಖ್ಯಾನ-ನಲವಿಲಾಪ
- ನಲೋಪಾಖ್ಯಾನ-ದಮಯಂತೀಸುದೇವಸಂವಾದ-೧
- ನಲೋಪಾಖ್ಯಾನ-ದಮಯಂತೀಸುದೇವಸಂವಾದ-೨
- ನಲೋಪಾಖ್ಯಾನ-ನಲಾನ್ವೇಷಣೆ
- ನಲೋಪಾಖ್ಯಾನ-ದಮಯಂತೀಪುನಃಸ್ವಯಂವರಕಥನ
- ನಲೋಪಾಖ್ಯಾನ-ಋತುಪರ್ಣವಿದರ್ಭಗಮನ
- ನಲೋಪಾಖ್ಯಾನ-ಕಲಿನಿರ್ಗಮನ
- ನಲೋಪಾಖ್ಯಾನ-ಋತುಪರ್ಣಸ್ಯಭೀಮಪುರಪ್ರವೇಶ
- ನಲೋಪಾಖ್ಯಾನ-ನಲಕೇಶಿನೀಸಂವಾದ
- ನಲೋಪಾಖ್ಯಾನ-ಕನ್ಯಾಪುತ್ರದರ್ಶನ
- ನಲೋಪಾಖ್ಯಾನ-ನಲದಮಯಂತೀಸಮಾಗಮ-೧
- ನಲೋಪಾಖ್ಯಾನ-ನಲದಮಯಂತೀಸಮಾಗಮ-೨
- ನಲೋಪಾಖ್ಯಾನ-ಋತುಪರ್ಣಸ್ವದೇಶಗಮನ
- ನಲೋಪಾಖ್ಯಾನ-ಪುಷ್ಕರಪರಾಭವಪೂರ್ವಕರಾಜ್ಯಪ್ರತ್ಯಾನಯನ
- ನಲೋಪಾಖ್ಯಾನ-ಬೃಹದಶ್ವಗಮನ
- ಅರ್ಜುನಾನುಶೋಚನ