Aranyaka Parva: Chapter 75

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೭೫

ದಮಯಂತಿಯು ನಲನನ್ನು ಹುಡುಕಲು ತಾನು ಮಾಡಿದ ಪ್ರಯತ್ನಗಳನ್ನು ಹೇಳಿಕೊಂಡು ನಿರ್ದೋಷಿಯೆಂದೂ ಹೇಳಿದುದು (೧-೧೦). ವಾಯುವು ದಮಯಂತಿಯ ಮಾತನ್ನು ಧೃಢೀಕರಿಸಿದ್ದುದು (೧೧-೧೬). ನಲನು ನಾಗರಾಜನಿತ್ತಿದ್ದ ವಸ್ತ್ರಗಳನ್ನು ಧರಿಸಿ ಸ್ವರೂಪವನ್ನು ಪಡೆದುದು; ಪರಸ್ಪರರನ್ನು ಬಿಗಿದಪ್ಪಿ ಸಂತಸ ಪಟ್ಟಿದುದು (೧೭-೨೭).

Image result for nala damayanti03075001 ದಮಯಂತ್ಯುವಾಚ|

03075001a ನ ಮಾಮರ್ಹಸಿ ಕಲ್ಯಾಣ ಪಾಪೇನ ಪರಿಶಂಕಿತುಂ|

03075001c ಮಯಾ ಹಿ ದೇವಾನುತ್ಸೃಜ್ಯ ವೃತಸ್ತ್ವಂ ನಿಷಧಾಧಿಪ||

ದಮಯಂತಿಯು ಹೇಳಿದಳು: “ನಿಷಧಾಧಿಪ! ಕಲ್ಯಾಣ! ನನ್ನನ್ನು ಪಾಪಿಯೆಂದು ಪರಿಶಂಕಿಸಬೇಡ. ಯಾಕೆಂದರೆ ನಾನು ದೇವತೆಗಳನ್ನೂ ತಿರಸ್ಕರಿಸಿ ನಿನ್ನನ್ನು ವರಿಸಿದ್ದೇನೆ.

03075002a ತವಾಭಿಗಮನಾರ್ಥಂ ತು ಸರ್ವತೋ ಬ್ರಾಹ್ಮಣಾ ಗತಾಃ|

03075002c ವಾಕ್ಯಾನಿ ಮಮ ಗಾಥಾಭಿರ್ಗಾಯಮಾನಾ ದಿಶೋ ದಶ||

ನಿನ್ನನ್ನು ಬರುವಂತೆ ಮಾಡಲೋಸುಗವೇ ಎಲ್ಲಕಡೆಗೂ ಬ್ರಾಹ್ಮಣರು ಹೋಗಿ ದಶ ದಿಶೆಗಳಲ್ಲಿಯೂ ನನ್ನ ವಾಖ್ಯಗಳನ್ನು ಹಾಡಿ ಹೇಳಿದರು.

03075003a ತತಸ್ತ್ವಾಂ ಬ್ರಾಹ್ಮಣೋ ವಿದ್ವಾನ್ಪರ್ಣಾದೋ ನಾಮ ಪಾರ್ಥಿವ|

03075003c ಅಭ್ಯಗಚ್ಚತ್ಕೋಸಲಾಯಾಂ ಋತುಪರ್ಣನಿವೇಶನೇ||

ಪಾರ್ಥಿವ! ಈ ರೀತಿ ಪರ್ಣಾದ ಎಂಬ ಹೆಸರಿನ ವಿದ್ವಾನ್ ಬ್ರಾಹ್ಮಣನು ಕೋಸಲಕ್ಕೆ ಹೋದಾಗ ಅಲ್ಲಿ ಋತುಪರ್ಣನ ನಿವೇಶನದಲ್ಲಿ ನಿನ್ನನ್ನು ಕಂಡನು.

03075004a ತೇನ ವಾಕ್ಯೇ ಹೃತೇ ಸಮ್ಯಕ್ಪ್ರತಿವಾಕ್ಯೇ ತಥಾಹೃತೇ|

03075004c ಉಪಾಯೋಽಯಂ ಮಯಾ ದೃಷ್ಟೋ ನೈಷಧಾನಯನೇ ತವ||

ನೈಷಧ! ನನ್ನ ವಾಖ್ಯಗಳಿಗೆ ಸರಿಯಾದ ಪ್ರತಿವಾಖ್ಯವನ್ನು ನೀನು ಹೇಳಿದಹಾಗೆಯೇ ಅವನು ತಂದ ನಂತರ ನಿನ್ನನ್ನು ಇಲ್ಲಿಗೆ ಬರುವಂತೆ ಮಾಡುವ ಉಪಾಯವನ್ನು ನಾನು ಕಂಡೆ.

03075005a ತ್ವಾಂ ಋತೇ ನ ಹಿ ಲೋಕೇಽನ್ಯ ಏಕಾಹ್ನಾ ಪೃಥಿವೀಪತೇ|

03075005c ಸಮರ್ಥೋ ಯೋಜನಶತಂ ಗಂತುಮಶ್ವೈರ್ನರಾಧಿಪ||

ಪೃಥಿವೀಪತೇ! ನರಾಧಿಪ! ನಿನ್ನನ್ನು ಬಿಟ್ಟು ಈ ಲೋಕಗಳಲ್ಲಿ ಒಂದು ದಿನದಲ್ಲಿ ನೂರು ಯೋಜನೆಗಳನ್ನು ಅಶ್ವಗಳಮೇಲೆ ಪ್ರಯಾಣ ಮಾಡಲು ಸಮರ್ಥರಾದವರು ಬೇರೆ ಯಾರೊಬ್ಬರೂ ಇಲ್ಲ.

03075006a ತಥಾ ಚೇಮೌ ಮಹೀಪಾಲ ಭಜೇಽಹಂ ಚರಣೌ ತವ|

03075006c ಯಥಾ ನಾಸತ್ಕೃತಂ ಕಿಂ ಚಿನ್ಮನಸಾಪಿ ಚರಾಮ್ಯಹಂ||

ಮಹೀಪಾಲ! ನಿನ್ನ ಈ ಚರಣಗಳನ್ನು ನಾನು ಹೇಗೆ ಅಪ್ಪಿ ಹಿಡಿದಿದ್ದೇನೋ ಹಾಗೆ ಎಂದೂ ನನ್ನ ಮನಸ್ಸಿನಲ್ಲಿಯೂ ನಿನಗೆ ಅಪಕೃತಿಯನ್ನು ಎಸೆಗಲಿಲ್ಲ.

03075007a ಅಯಂ ಚರತಿ ಲೋಕೇಽಸ್ಮಿನ್ಭೂತಸಾಕ್ಷೀ ಸದಾಗತಿಃ|

03075007c ಏಷ ಮುಂಚತು ಮೇ ಪ್ರಾಣಾನ್ಯದಿ ಪಾಪಂ ಚರಾಮ್ಯಹಂ||

ಒಮ್ಮೆಯಾದರೂ ನಾನು ಪಾಪದಿಂದ ನಡೆದುಕೊಂಡಿದ್ದರೆ ಸದಾ ಚಲಿಸುತ್ತಿರುವ, ಈ ಲೋಕದಲ್ಲಿ ಇರುವವೆಲ್ಲವಕ್ಕೂ ಸಾಕ್ಷಿಯಾಗಿರುವ, ಯಾವಾಗಲೂ ಚಲಿಸುತ್ತಿರುವ ವಾಯುವು ನನ್ನ ಪ್ರಾಣವನ್ನು ಹಾರಿಸಲಿ.

03075008a ತಥಾ ಚರತಿ ತಿಗ್ಮಾಂಶುಃ ಪರೇಣ ಭುವನಂ ಸದಾ|

03075008c ಸ ವಿಮುಂಚತು ಮೇ ಪ್ರಾಣಾನ್ಯದಿ ಪಾಪಂ ಚರಾಮ್ಯಹಂ||

ಅದೇರೀತಿ ನಾನು ಎಂದಾದರೂ ಪಾಪದಿಂದ ನಡೆದುಕೊಂಡಿದ್ದರೆ ಬೇರೆಯವರ ಮನೆಗಳಿಗೆ ಸದಾ ಹೋಗುತ್ತಿರುವ ಸೂರ್ಯನು ನನ್ನ ಪ್ರಾಣವನ್ನು ಬಿಡುಗಡೆಮಾಡಲಿ.

03075009a ಚಂದ್ರಮಾಃ ಸರ್ವಭೂತಾನಾಮಂತಶ್ಚರತಿ ಸಾಕ್ಷಿವತ್|

03075009c ಸ ವಿಮುಂಚತು ಮೇ ಪ್ರಾಣಾನ್ಯದಿ ಪಾಪಂ ಚರಾಮ್ಯಹಂ||

ಸರ್ವ ಭೂತಗಳೊಳಗೆ ಸಾಕ್ಷಿಯಾಗಿ ಸಂಚರಿಸುತ್ತಿರುವ ಚಂದ್ರಮನು ನಾನು ಎಂದಾದರೂ ಪಾಪದಿಂದ ನಡೆದುಕೊಂಡಿದ್ದರೆ ನನ್ನ ಪ್ರಾಣವನ್ನು ಕೊಂಡೊಯ್ಯಲಿ.

03075010a ಏತೇ ದೇವಾಸ್ತ್ರಯಃ ಕೃತ್ಸ್ನಂ ತ್ರೈಲೋಕ್ಯಂ ಧಾರಯಂತಿ ವೈ|

03075010c ವಿಬ್ರುವಂತು ಯಥಾಸತ್ಯಮೇತೇ ವಾದ್ಯ ತ್ಯಜಂತು ಮಾಂ||

ಮೂರೂ ಲೋಕಗಳಿಗೆ ಧಾರಕ ಈ ಮೂರೂ ದೇವತೆಗಳು ಸತ್ಯವೇನೆಂದು ಹೇಳುವರು ಅಥವಾ ನನ್ನನ್ನು ಇಲ್ಲಿಯೇ ತ್ಯಜಿಸುವರು.”

03075011a ಏವಮುಕ್ತೇ ತತೋ ವಾಯುರಂತರಿಕ್ಷಾದಭಾಷತ|

03075011c ನೈಷಾ ಕೃತವತೀ ಪಾಪಂ ನಲ ಸತ್ಯಂ ಬ್ರವೀಮಿ ತೇ||

ಹೀಗೆ ಹೇಳುತ್ತಿದ್ದಂತೆಯೇ ಅಂತರಿಕ್ಷದಲ್ಲಿ ವಾಯುವು ಹೇಳಿದನು: “ನಲ! ಇವಳಿಂದ ಯಾವ ಪಾಪವೂ ನಡೆದಿಲ್ಲ. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.

03075012a ರಾಜಂ ಶೀಲನಿಧಿಃ ಸ್ಫೀತೋ ದಮಯಂತ್ಯಾ ಸುರಕ್ಷಿತಃ|

03075012c ಸಾಕ್ಷಿಣೋ ರಕ್ಷಿಣಶ್ಚಾಸ್ಯಾ ವಯಂ ತ್ರೀನ್ಪರಿವತ್ಸರಾನ್||

ರಾಜನ್! ದಮಯಂತಿಯು ತನ್ನ ಶೀಲನಿಧಿಯನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾಳೆ. ಈ ಮೂರು ವರ್ಷಗಳು ಅವಳನ್ನು ರಕ್ಷಿಸುತ್ತಾ ಬಂದಿರುವ ನಾವೇ ಅದಕ್ಕೆ ಸಾಕ್ಷಿ.

03075013a ಉಪಾಯೋ ವಿಹಿತಶ್ಚಾಯಂ ತ್ವದರ್ಥಮತುಲೋಽನಯಾ|

03075013c ನ ಹ್ಯೇಕಾಹ್ನಾ ಶತಂ ಗಂತಾ ತ್ವದೃತೇಽನ್ಯಃ ಪುಮಾನಿಹ||

ನಿನಗಾಗಿ ಬಳಸಿದ ಈ ಉಪಾಯಕ್ಕೆ ಸರಿಸಾಟಿ ಇನ್ನೊಂದಿಲ್ಲ. ಯಾಕೆಂದರೆ ನಿನ್ನನ್ನು ಹೊರತು ಈ ಭೂಮಿಯಲ್ಲಿ ಒಂದೇ ದಿನದಲ್ಲಿ ನೂರು ಯೋಜನೆ ಹೋಗುವಂತವರು ಇನ್ನೊಬ್ಬರಿಲ್ಲ.

03075014a ಉಪಪನ್ನಾ ತ್ವಯಾ ಭೈಮೀ ತ್ವಂ ಚ ಭೈಮ್ಯಾ ಮಹೀಪತೇ|

03075014c ನಾತ್ರ ಶಂಕಾ ತ್ವಯಾ ಕಾರ್ಯಾ ಸಂಗಚ್ಚ ಸಹ ಭಾರ್ಯಯಾ||

ಮಹೀಪತೇ! ಭೈಮಿಯು ನಿನ್ನನ್ನು ಪಡೆದಿದ್ದಾಳೆ. ನೀನು ಅವಳನ್ನು ಪಡೆದಿದ್ದೀಯೆ. ಈ ವಿಷಯದಲ್ಲಿ ಯಾವುದೇ ಸಂಶಯವನ್ನು ತಾಳದಿರು. ನಿನ್ನ ಭಾರ್ಯೆಯನ್ನು ಕೂಡು!”

03075015a ತಥಾ ಬ್ರುವತಿ ವಾಯೌ ತು ಪುಷ್ಪವೃಷ್ಟಿಃ ಪಪಾತ ಹ|

03075015c ದೇವದುಂದುಭಯೋ ನೇದುರ್ವವೌ ಚ ಪವನಃ ಶಿವಃ||

ವಾಯುವು ಹೇಳುತ್ತಿದ್ದ ಹಾಗೆಯೇ ಪುಷ್ಪವೃಷ್ಟಿಯಾಯಿತು, ದೇವ ದುಂದುಭಿಗಳು ಮೊಳಗಿದವು ಮತ್ತು ಮಂಗಲಕರ ಗಾಳಿ ಬೀಸಿತು.

03075016a ತದದ್ಭುತತಮಂ ದೃಷ್ಟ್ವಾ ನಲೋ ರಾಜಾಥ ಭಾರತ|

03075016c ದಮಯಂತ್ಯಾಂ ವಿಶಂಕಾಂ ತಾಂ ವ್ಯಪಾಕರ್ಷದರಿಂದಮಃ||

ಭಾರತ! ಆ ಅದ್ಭುತವನ್ನು ನೋಡಿ ಅರಿಂದಮ ರಾಜ ನಲನು ದಮಯಂತಿಯ ಮೇಲಿದ್ದ ಎಲ್ಲ ಶಂಕೆಗಳನ್ನು ಕಳೆದುಕೊಂಡನು.

03075017a ತತಸ್ತದ್ವಸ್ತ್ರಮರಜಃ ಪ್ರಾವೃಣೋದ್ವಸುಧಾಧಿಪಃ|

03075017c ಸಂಸ್ಮೃತ್ಯ ನಾಗರಾಜಾನಂ ತತೋ ಲೇಭೇ ವಪುಃ ಸ್ವಕಂ||

ವಸುಧಾಧಿಪನು ನಾಗರಾಜನನ್ನು ಸಂಸ್ಮರಿಸುತ್ತಾ ಶುದ್ಧ ವಸ್ತ್ರವನ್ನು ಧರಿಸಿದನು ಮತ್ತು ತನ್ನ ಸ್ವ-ರೂಪವನ್ನು ಹೊಂದಿದನು.

03075018a ಸ್ವರೂಪಿಣಂ ತು ಭರ್ತಾರಂ ದೃಷ್ಟ್ವಾ ಭೀಮಸುತಾ ತದಾ|

03075018c ಪ್ರಾಕ್ರೋಶದುಚ್ಚೈರಾಲಿಂಗ್ಯ ಪುಣ್ಯಶ್ಲೋಕಮನಿಂದಿತಾ||

ಸ್ವರೂಪಿ ತನ್ನ ಪತಿಯನ್ನು ನೋಡಿ ಅನಿಂದಿತೆ ಭೀಮಸುತೆಯು ಗಟ್ಟಿಯಾಗಿ ಕೂಗುತ್ತಾ ಪುಣ್ಯಶ್ಲೋಕನನ್ನು ಆಲಿಂಗಿಸಿದಳು.

03075019a ಭೈಮೀಮಪಿ ನಲೋ ರಾಜಾ ಭ್ರಾಜಮಾನೋ ಯಥಾ ಪುರಾ|

03075019c ಸಸ್ವಜೇ ಸ್ವಸುತೌ ಚಾಪಿ ಯಥಾವತ್ಪ್ರತ್ಯನಂದತ||

ಮೊದಲಿನಂತೆ ಹೊಳೆಯುತ್ತಿದ್ದ ರಾಜ ನಲನೂ ಕೂಡ ಭೈಮಿಯನ್ನು ಆಲಂಗಿಸಿದನು ಮತ್ತು ತನ್ನ ಸುತರೀರ್ವರನ್ನೂ ಆನಂದದಿಂದ ಬರಮಾಡಿಕೊಂಡನು.

03075020a ತತಃ ಸ್ವೋರಸಿ ವಿನ್ಯಸ್ಯ ವಕ್ತ್ರಂ ತಸ್ಯ ಶುಭಾನನಾ|

03075020c ಪರೀತಾ ತೇನ ದುಃಖೇನ ನಿಶಶ್ವಾಸಾಯತೇಕ್ಷಣಾ||

ಅನಂತರ ಆ ಆಯತಾಕ್ಷಿ ಶುಭಾನನೆಯು ತನ್ನ ಮುಖವನ್ನು ಅವನ ಎದೆಯ ಮೇಲಿರಿಸಿ ದುಃಖ ತುಂಬಿಬಂದು ನಿಟ್ಟುಸಿರು ಬಿಟ್ಟಳು.

03075021a ತಥೈವ ಮಲದಿಗ್ಧಾಂಗೀ ಪರಿಷ್ವಜ್ಯ ಶುಚಿಸ್ಮಿತಾ|

03075021c ಸುಚಿರಂ ಪುರುಷವ್ಯಾಘ್ರಂ ತಸ್ಥೌ ಸಾಶ್ರುಪರಿಪ್ಲುತಾ||

ಕೊಳೆಯಿಂದ ಲೇಪಿತಗೊಂಡಿದ್ದ ಆ ಶುಚಿಸ್ಮಿತೆಯು ಕಣ್ಣೀರುತುಂಬಿದವಳಾಗಿ  ಆ ಪುರುಷವ್ಯಾಘ್ರನನ್ನು ತುಂಬಾ ಹೊತ್ತು ಅಪ್ಪಿಕೊಂಡೇ ಇದ್ದಳು.

03075022a ತತಃ ಸರ್ವಂ ಯಥಾವೃತ್ತಂ ದಮಯಂತ್ಯಾ ನಲಸ್ಯ ಚ|

03075022c ಭೀಮಾಯಾಕಥಯತ್ಪ್ರೀತ್ಯಾ ವೈದರ್ಭ್ಯಾ ಜನನೀ ನೃಪ||

ನೃಪ! ಆಗ ವೈದರ್ಭಿಯ ಜನನಿಯು ಭೀಮನಿಗೆ ದಮಯಂತಿ ಮತ್ತು ನಲರ ಮಧ್ಯೆ ನಡೆದುದೆಲ್ಲವನ್ನೂ ಹೇಳಿದಳು.

03075023a ತತೋಽಬ್ರವೀನ್ಮಹಾರಾಜಃ ಕೃತಶೌಚಮಹಂ ನಲಂ|

03075023c ದಮಯಂತ್ಯಾ ಸಹೋಪೇತಂ ಕಾಲ್ಯಂ ದ್ರಷ್ಟಾ ಸುಖೋಷಿತಂ||

ಆಗ ಮಹಾರಾಜನು ಹೇಳಿದನು: “ಸುಖವಾಗಿ ವಿಶ್ರಮಿಸಿ ನಾಳೆ ಶೌಚಾದಿಗಳನ್ನು ಮುಗಿಸಿದನಂತರ ನಲ ಮತ್ತು ದಮಯಂತಿಯರನ್ನು ಒಟ್ಟಿಗೇ ನೋಡುತ್ತೇನೆ!”

03075024a ತತಸ್ತೌ ಸಹಿತೌ ರಾತ್ರಿಂ ಕಥಯಂತೌ ಪುರಾತನಂ|

03075024c ವನೇ ವಿಚರಿತಂ ಸರ್ವಮೂಷತುಮುದಿತೌ ನೃಪ||

ಆ ರಾತ್ರಿಯನ್ನು ಅವರಿಬ್ಬರೂ ಹಿಂದೆ ಅರಣ್ಯದಲ್ಲಿ ನಡೆದುದನ್ನು ಪರಸ್ಪರರಲ್ಲಿ ಹೇಳಿಕೊಳ್ಳುತ್ತಾ ಸಂತೋಷದಿಂದ ಕಳೆದರು.

03075025a ಸ ಚತುರ್ಥೇ ತತೋ ವರ್ಷೇ ಸಂಗಮ್ಯ ಸಹ ಭಾರ್ಯಯಾ|

03075025c ಸರ್ವಕಾಮೈಃ ಸುಸಿದ್ಧಾರ್ಥೋ ಲಬ್ಧವಾನ್ಪರಮಾಂ ಮುದಂ||

ಮೂರು ವರ್ಷಗಳ ನಂತರ ಭಾರ್ಯೆಯನ್ನು ಸೇರಿ ಅವನು ಸರ್ವಕಾಮಗಳನ್ನೂ ಪೂರೈಸಿದಂಥವನಾಗಿ ಪರಮ ಸುಖವನ್ನು ಹೊಂದಿದನು.

03075026a ದಮಯಂತ್ಯಪಿ ಭರ್ತಾರಮವಾಪ್ಯಾಪ್ಯಾಯಿತಾ ಭೃಶಂ|

03075026c ಅರ್ಧಸಂಜಾತಸಸ್ಯೇವ ತೋಯಂ ಪ್ರಾಪ್ಯ ವಸುಂಧರಾ||

ದಮಯಂತಿಯೂ ಕೂಡ ತನ್ನ ಪತಿಯನ್ನು ಕೂಡಿ ಅರ್ಧವೇ ಬೆಳೆದಿರುವ ಸಸಿಗಳ ಮೇಲೆ ಮಳೆ ಬಿದ್ದರೆ ಹೇಗೆ ಭೂಮಿಯು ಹರ್ಷಗೊಳ್ಳುವುದೋ ಹಾಗೆ ಹರ್ಷಿತಳಾದಳು. 

03075027a ಸೈವಂ ಸಮೇತ್ಯ ವ್ಯಪನೀತತಂದ್ರೀ |

         ಶಾಂತಜ್ವರಾ ಹರ್ಷವಿವೃದ್ಧಸತ್ತ್ವಾ||

03075027c ರರಾಜ ಭೈಮೀ ಸಮವಾಪ್ತಕಾಮಾ |

         ಶೀತಾಂಶುನಾ ರಾತ್ರಿರಿವೋದಿತೇನ||

ಅವಳ ಪತಿಯನ್ನು ಪುನಃ ಸೇರಿ, ಆಯಾಸವನ್ನು ಕಳೆದುಕೊಂಡು, ಜ್ವರವು ಶಾಂತವಾಗಿ, ಹೃದಯವು ಹರ್ಷಭರಿತವಾಗಿ, ಎಲ್ಲ ಆಸೆಗಳನ್ನೂ ಪೂರೈಸಿಕೊಂಡವಳಾಗಿ ಭೌಮಿಯು ಉದಯಿಸುತ್ತಿರುವ ಚಂದ್ರನೊಡನಿರುವ ರಾತ್ರಿಯಂತೆ ಕಂಗೊಳಿಸಿದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲದಮಯಂತೀಸಮಾಗಮೇ ಪಂಚಸಪ್ತತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲದಮಯಂತೀಸಮಾಗಮ ಎನ್ನುವ ಎಪ್ಪತ್ತೈದನೆಯ ಅಧ್ಯಾಯವು.

Related image

Kannada translation of Indralokabhigamana Parva, by Chapter:
  1. ಇಂದ್ರಲೋಕಾಭಿಗಮನ ಪರ್ವ
  2. ಇಂದ್ರಸಭಾದರ್ಶನ
  3. ಲೋಮಶಗಮನ
  4. ಧೃತರಾಷ್ಟ್ರಖೇದ
  5. ಪಾರ್ಥಾಹಾರಕಥನ
  6. ಧೃತರಾಷ್ಟ್ರವಿಲಾಪ
  7. ನಲೋಪಾಖ್ಯಾನ
  8. ನಲೋಪಾಖ್ಯಾನ-ಹಂಸದಮಯಂತೀಸಂವಾದ
  9. ನಲೋಪಾಖ್ಯಾನ-ಇಂದ್ರನಾರದಸಂವಾದ
  10. ನಲೋಪಾಖ್ಯಾನ-ನಲಸ್ಯ ದೇವದೌತ್ಯ
  11. ನಲೋಪಾಖ್ಯಾನ-ನಲಕರ್ತುಕದೇವದೌತ್ಯ
  12. ನಲೋಪಾಖ್ಯಾನ-ದಮಯಂತೀಸ್ವಯಂವರ
  13. ನಲೋಪಾಖ್ಯಾನ-ಕಲಿದೇವಸಂವಾದ
  14. ನಲೋಪಾಖ್ಯಾನ-ನಲದ್ಯೂತ
  15. ನಲೋಪಾಖ್ಯಾನ-ಕುಂಡಿನಂಪ್ರತಿಕುಮಾರಯೋಪ್ರಸ್ಥಾಪನ
  16. ನಲೋಪಾಖ್ಯಾನ-ನಲವನಯಾತ್ರಾ
  17. ನಲೋಪಾಖ್ಯಾನ-ದಮಯಂತೀಪರಿತ್ಯಾಗ
  18. ನಲೋಪಾಖ್ಯಾನ-ಅಜಗರಗ್ರಸ್ತದಮಯಂತೀಮೋಚನ
  19. ನಲೋಪಾಖ್ಯಾನ-ದಮಯಂತೀಸಾರ್ಥವಾಹಸಂಗಮ
  20. ನಲೋಪಾಖ್ಯಾನ-ದಮಯಂತೀಚೇದಿರಾಜಗೃಹವಾಸ
  21. ನಲೋಪಾಖ್ಯಾನ-ನಲಕಾರ್ಕೋಟಕಸಂವಾದ
  22. ನಲೋಪಾಖ್ಯಾನ-ನಲವಿಲಾಪ
  23. ನಲೋಪಾಖ್ಯಾನ-ದಮಯಂತೀಸುದೇವಸಂವಾದ-೧
  24. ನಲೋಪಾಖ್ಯಾನ-ದಮಯಂತೀಸುದೇವಸಂವಾದ-೨
  25. ನಲೋಪಾಖ್ಯಾನ-ನಲಾನ್ವೇಷಣೆ
  26. ನಲೋಪಾಖ್ಯಾನ-ದಮಯಂತೀಪುನಃಸ್ವಯಂವರಕಥನ
  27. ನಲೋಪಾಖ್ಯಾನ-ಋತುಪರ್ಣವಿದರ್ಭಗಮನ
  28. ನಲೋಪಾಖ್ಯಾನ-ಕಲಿನಿರ್ಗಮನ
  29. ನಲೋಪಾಖ್ಯಾನ-ಋತುಪರ್ಣಸ್ಯಭೀಮಪುರಪ್ರವೇಶ
  30. ನಲೋಪಾಖ್ಯಾನ-ನಲಕೇಶಿನೀಸಂವಾದ
  31. ನಲೋಪಾಖ್ಯಾನ-ಕನ್ಯಾಪುತ್ರದರ್ಶನ
  32. ನಲೋಪಾಖ್ಯಾನ-ನಲದಮಯಂತೀಸಮಾಗಮ-೧
  33. ನಲೋಪಾಖ್ಯಾನ-ನಲದಮಯಂತೀಸಮಾಗಮ-೨
  34. ನಲೋಪಾಖ್ಯಾನ-ಋತುಪರ್ಣಸ್ವದೇಶಗಮನ
  35. ನಲೋಪಾಖ್ಯಾನ-ಪುಷ್ಕರಪರಾಭವಪೂರ್ವಕರಾಜ್ಯಪ್ರತ್ಯಾನಯನ
  36. ನಲೋಪಾಖ್ಯಾನ-ಬೃಹದಶ್ವಗಮನ
  37. ಅರ್ಜುನಾನುಶೋಚನ

Comments are closed.