ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೭೧
ಭೀಮಪುರಕ್ಕೆ ಋತುಪರ್ಣನ ಆಗಮನ
ಋತುಪರ್ಣನ ರಥಘೋಷವನ್ನು ಕೇಳಿದ ದಮಯಂತಿಯು ನಲನು ಬಂದಿದ್ದಾನೆಂದು ತಿಳಿದು ಸಂತಸಗೊಂಡಿದುದು (೧-೧೮). ಋತುಪರ್ಣನ ಆಗಮನದಿಂದ ಅಚ್ಚರಿಗೊಂಡ ಭೀಮನು ಸ್ವಯಂವರದ ಸಿದ್ಧತೆಗಳನ್ನು ಕಾಣದೇ ಅಚ್ಚರಿಗೊಂಡ ಋತುಪರ್ಣನನ್ನು ಸತ್ಕರಿಸಿ ವಿಶ್ರಾಂತಿಗೆ ಕಳುಹಿಸಿದುದು (೧೯-೨೭). ಯೋಚಿಸಿದ ದಮಯಂತಿಯು ಬಾಹುಕನಲ್ಲಿಗೆ ದೂತಿಯೋರ್ವಳನ್ನು ಕಳುಹಿಸಲು ನಿರ್ಧರಿಸಿದುದು (೨೮-೩೪).
03071001 ಬೃಹದಶ್ವ ಉವಾಚ|
03071001a ತತೋ ವಿದರ್ಭಾನ್ಸಂಪ್ರಾಪ್ತಂ ಸಾಯಾಹ್ನೇ ಸತ್ಯವಿಕ್ರಮಂ|
03071001c ಋತುಪರ್ಣಂ ಜನಾ ರಾಜ್ಞೇ ಭೀಮಾಯ ಪ್ರತ್ಯವೇದಯನ್||
ಬೃಹದಶ್ವನು ಹೇಳಿದನು: “ಸತ್ಯವಿಕ್ರಮ ಋತುಪರ್ಣನು ಸಾಯಂಕಾಲದಲ್ಲಿ ವಿದರ್ಭವನ್ನು ತಲುಪಿದನು. ಅವನು ಬಂದಿರುವುದರನ್ನು ಜನರು ರಾಜ ಭೀಮನಿಗೆ ತಿಳಿಸಿದರು.
03071002a ಸ ಭೀಮವಚನಾದ್ರಾಜಾ ಕುಂಡಿನಂ ಪ್ರಾವಿಶತ್ಪುರಂ|
03071002c ನಾದಯನ್ರಥಘೋಷೇಣ ಸರ್ವಾಃ ಸೋಪದಿಶೋ ದಶ||
ರಾಜ ಭೀಮನ ವಚನದಂತೆ ತನ್ನ ರಥಘೋಶವು ಎಲ್ಲ ದಶದಿಕ್ಕುಗಳಲ್ಲಿಯೂ ಮೊಳಗುತ್ತಿರಲು ಕುಂಡಿನ ಪುರವನ್ನು ಪ್ರವೇಶಿಸಿದನು.
03071003a ತತಸ್ತಂ ರಥನಿರ್ಘೋಷಂ ನಲಾಶ್ವಾಸ್ತತ್ರ ಶುಶ್ರುವುಃ|
03071003c ಶ್ರುತ್ವಾ ಚ ಸಮಹೃಷ್ಯಂತ ಪುರೇವ ನಲಸನ್ನಿಧೌ||
ನಲನ ಕುದುರೆಗಳು ರಥದ ಧ್ವನಿಯನ್ನು ಕೇಳಿದವು ಮತ್ತು ಕೇಳಿ ಹಿಂದೆ ನಲಸನ್ನಿಧಿಯಲ್ಲಿದ್ದಂತೆ ಹರ್ಷಗೊಂಡವು.
03071004a ದಮಯಂತೀ ಚ ಶುಶ್ರಾವ ರಥಘೋಷಂ ನಲಸ್ಯ ತಂ|
03071004c ಯಥಾ ಮೇಘಸ್ಯ ನದತೋ ಗಂಭೀರಂ ಜಲದಾಗಮೇ||
ಮಳೆಗಾಲದ ಆದಿಯಲ್ಲಿ ಮೇಘದ ಗಂಭೀರ ಗುಡುಗಿನಂತಿದ್ದ ನಲನ ಆ ರಥಘೋಷವನ್ನು ದಮಯಂತಿಯೂ ಕೇಳಿದಳು.
03071005a ನಲೇನ ಸಂಗೃಹೀತೇಷು ಪುರೇವ ನಲವಾಜಿಷು|
03071005c ಸದೃಶಂ ರಥನಿರ್ಘೋಷಂ ಮೇನೇ ಭೈಮೀ ತಥಾ ಹಯಾಃ||
ಹಯಗಳು ಯೋಚಿಸಿದ್ದಂತೆ ಭೈಮಿಯೂ ಕೂಡ ಹಿಂದೆ ನಲನು ತನ್ನ ಕುದುರೆಗಳನ್ನು ಹೂಡಿ ರಥ ಓಡಿಸುತ್ತಿದ್ದ ಹಾಗೆಯೇ ಈ ರಥಘೋಷವೂ ಇದೆ ಎಂದು ಯೋಚಿಸಿದಳು.
03071006a ಪ್ರಾಸಾದಸ್ಥಾಶ್ಚ ಶಿಖಿನಃ ಶಾಲಾಸ್ಥಾಶ್ಚೈವ ವಾರಣಾಃ|
03071006c ಹಯಾಶ್ಚ ಶುಶ್ರುವುಸ್ತತ್ರ ರಥಘೋಷಂ ಮಹೀಪತೇಃ||
03071007a ತೇ ಶ್ರುತ್ವಾ ರಥನಿರ್ಘೋಷಂ ವಾರಣಾಃ ಶಿಖಿನಸ್ತಥಾ|
03071007c ಪ್ರಣೇದುರುನ್ಮುಖಾ ರಾಜನ್ಮೇಘೋದಯಮಿವೇಕ್ಷ್ಯ ಹ||
ಗಚ್ಚಿನ ಮೇಲಿದ್ದ ನವಿಲುಗಳು, ಗಜಶಾಲೆಯಲ್ಲಿದ್ದ ಆನೆಗಳು, ಮತ್ತು ಕುದುರೆಗಳು ಮಹೀಪತಿಯ ಈ ರಥಘೋಶವನ್ನು ಕೇಳಿ, ಮಳೆಗಾಲ ಪ್ರಾರಂಭವಾಯಿತೇನೋ ಎಂದು ನೋಡುವರೀತಿಯಲ್ಲಿ ಮೇಲೆ ನೋಡತೊಡಗಿದವು.
03071008 ದಮಯಂತ್ಯುವಾಚ|
03071008a ಯಥಾಸೌ ರಥನಿರ್ಘೋಷಃ ಪೂರಯನ್ನಿವ ಮೇದಿನೀಂ|
03071008c ಮಮ ಹ್ಲಾದಯತೇ ಚೇತೋ ನಲ ಏಷ ಮಹೀಪತಿಃ||
ದಮಯಂತಿಯು ಹೇಳಿದಳು: “ಮೇದಿನಿಯನ್ನೇ ಆವರಿಸುವಂತಿದ್ದ ಈ ರಥನಿರ್ಘೋಷವು ನನಗೆ ಇಷ್ಟೊಂದು ಸಂತೋಷವನ್ನು ಕೊಡುತ್ತಿದೆಯಾದರೆ ಇವನು ಮಹೀಪತಿ ನಲನೇ ಇರಬೇಕು.
03071009a ಅದ್ಯ ಚಂದ್ರಾಭವಕ್ತ್ರಂ ತಂ ನ ಪಶ್ಯಾಮಿ ನಲಂ ಯದಿ|
03071009c ಅಸಂಖ್ಯೇಯಗುಣಂ ವೀರಂ ವಿನಶಿಷ್ಯಾಮ್ಯಸಂಶಯಂ||
ಇಂದು ಆ ಚಂದ್ರಾಭವಕ್ತ್ರ ಅಸಂಕೇಯಗುಣ ವೀರ ನಲನನ್ನು ನೋಡದೇ ಇದ್ದರೆ ನಾನು ನಿಸ್ಸಂದೇಹವಾಗಿ ನಾಶವಾಗಿ ಹೋಗುತ್ತೇನೆ.
03071010a ಯದಿ ವೈ ತಸ್ಯ ವೀರಸ್ಯ ಬಾಹ್ವೋರ್ನಾದ್ಯಾಹಮಂತರಂ|
03071010c ಪ್ರವಿಶಾಮಿ ಸುಖಸ್ಪರ್ಶಂ ವಿನಶಿಷ್ಯಾಮ್ಯಸಂಶಯಂ||
ಇಂದು ನಾನು ಆ ವೀರನ ಬಾಹುಗಳ ಸುಖಸ್ಪರ್ಷವನ್ನು ಹೊಂದದೇ ಇದ್ದರೆ ನಿಸ್ಸಂದೇಹವಾಗಿ ನಾಶವಾಗಿ ಹೋಗುತ್ತೇನೆ.
03071011a ಯದಿ ಮಾಂ ಮೇಘನಿರ್ಘೋಷೋ ನೋಪಗಚ್ಚತಿ ನೈಷಧಃ|
03071011c ಅದ್ಯ ಚಾಮೀಕರಪ್ರಖ್ಯೋ ವಿನಶಿಷ್ಯಾಮ್ಯಸಂಶಯಂ||
ಇಂದು ಆ ಮೇಘನಿರ್ಘೋಷ, ಬಂಗಾರದಂತೆ ಹೊಳೆಯುವ ನೈಷಧನು ನನ್ನಲ್ಲಿಗೆ ಬರದೇ ಇದ್ದರೆ ನಿಸ್ಸಂದೇಹವಾಗಿ ನಾನು ನಾಶವಾಗುತ್ತೇನೆ.
03071012a ಯದಿ ಮಾಂ ಸಿಂಹವಿಕ್ರಾಂತೋ ಮತ್ತವಾರಣವಾರಣಃ|
03071012c ನಾಭಿಗಚ್ಚತಿ ರಾಜೇಂದ್ರೋ ವಿನಶಿಷ್ಯಾಮ್ಯಸಂಶಯಂ||
ಇಂದು ಮತ್ತಗಜವನ್ನೂ ನಿಲ್ಲಿಸುವಂತಹ ಸಿಂಹವಿಕ್ರಾಂತ ರಾಜೇಂದ್ರನು ಬರದೇ ಇದ್ದರೆ ನಾನು ನಿಸ್ಸಂದೇಹವಾಗಿಯೂ ನಾಶವಾಗುತ್ತೇನೆ.
03071013a ನ ಸ್ಮರಾಮ್ಯನೃತಂ ಕಿಂ ಚಿನ್ನ ಸ್ಮರಾಮ್ಯನುಪಾಕೃತಂ|
03071013c ನ ಚ ಪರ್ಯುಷಿತಂ ವಾಕ್ಯಂ ಸ್ವೈರೇಷ್ವಪಿ ಮಹಾತ್ಮನಃ||
03071014a ಪ್ರಭುಃ ಕ್ಷಮಾವಾನ್ವೀರಶ್ಚ ಮೃದುರ್ದಾಂತೋ ಜಿತೇಂದ್ರಿಯಃ|
03071014c ರಹೋಽನೀಚಾನುವರ್ತೀ ಚ ಕ್ಲೀಬವನ್ಮಮ ನೈಷಧಃ||
ಸುಳ್ಳನ್ನಾಡಿದ್ದೇ ನೆನಪಿಲ್ಲ. ಮಾಡಿದ ತಪ್ಪುಗಳು ಯಾವುದೂ ನೆನಪಿಲ್ಲ. ಆ ಮಹಾತ್ಮನು ತಮಾಷೆಗೆಂದಾದರೂ ಕೊಟ್ಟ ಮಾತನ್ನು ಇಟ್ಟುಕೊಳ್ಳದೇ ಇದ್ದುದು ನೆನಪಿಲ್ಲ. ವೀರನೂ, ಕ್ಷಮಾವಂತನೂ, ಮೃದುಸ್ವಭಾವದವನೂ, ಜಿತೇಂದ್ರಿಯನೂ ಆದ ಆ ನನ್ನ ಪ್ರಭು ನನ್ನ ನೈಷಧನಿಗೆ ಯಾವ ನೀಚ ವೃತ್ತಿಗಳೂ ಇಲ್ಲ.
03071015a ಗುಣಾಂಸ್ತಸ್ಯ ಸ್ಮರಂತ್ಯಾ ಮೇ ತತ್ಪರಾಯಾ ದಿವಾನಿಶಂ|
03071015c ಹೃದಯಂ ದೀರ್ಯತ ಇದಂ ಶೋಕಾತ್ಪ್ರಿಯವಿನಾಕೃತಂ||
ಅವನ ಗುಣಗಳನ್ನು ಸ್ಮರಿಸುತ್ತಾ, ದಿನ ರಾತ್ರಿಯೂ ಅವನ ಕುರಿತೇ ಚಿಂತಿಸುತ್ತಾ, ಪ್ರಿಯನಿಂದ ದೂರವಾದ ಈ ಹೃದಯವು ಶೋಕದಿಂದ ದೀನವಾಗಿದೆ.””
03071016 ಬೃಹದಶ್ವ ಉವಾಚ|
03071016a ಏವಂ ವಿಲಪಮಾನಾ ಸಾ ನಷ್ಟಸಂಜ್ಞೇವ ಭಾರತ|
03071016c ಆರುರೋಹ ಮಹದ್ವೇಶ್ಮ ಪುಣ್ಯಶ್ಲೋಕದಿದೃಕ್ಷಯಾ||
ಬೃಹದಶ್ವನು ಹೇಳಿದನು: “ಭಾರತ! ಈ ರೀತಿ ವಿಲಪಿಸುತ್ತಾ ಬುದ್ದಿ ಕಳೆದುಕೊಂಡವಳಂತೆ ಅವಳು ಪುಣ್ಯಶ್ಲೋಕನನ್ನು ನೋಡಲೋಸುಗ ಅರಮನೆಯ ಮಹಾ ಮಹಡಿಗೆ ಹತ್ತಿ ಹೋದಳು.
03071017a ತತೋ ಮಧ್ಯಮಕಕ್ಷಾಯಾಂ ದದರ್ಶ ರಥಮಾಸ್ಥಿತಂ|
03071017c ಋತುಪರ್ಣಂ ಮಹೀಪಾಲಂ ಸಹವಾರ್ಷ್ಣೇಯಬಾಹುಕಂ||
ಅಲ್ಲಿಂದ ರಥದ ಮಧ್ಯಮ ಕಕ್ಷದಲ್ಲಿ ಬಾಹುಕ ಮತ್ತು ವಾರ್ಷ್ಣೇಯರ ಸಹಿತ ಕುಳಿತಿದ್ದ ಮಹೀಪಾಲ ಋತುಪರ್ಣನನ್ನು ನೋಡಿದಳು.
03071018a ತತೋಽವತೀರ್ಯ ವಾರ್ಷ್ಣೇಯೋ ಬಾಹುಕಶ್ಚ ರಥೋತ್ತಮಾತ್|
03071018c ಹಯಾಂಸ್ತಾನವಮುಚ್ಯಾಥ ಸ್ಥಾಪಯಾಮಾಸತೂ ರಥಂ||
ವಾರ್ಷ್ಣೇಯ ಮತ್ತು ಬಾಹುಕರು ಆ ಉತ್ತಮ ರಥವನ್ನು ನಿಲ್ಲಿಸಿ ರಥದಿಂದಿಳಿದು ಹಯಗಳನ್ನು ಬಿಚ್ಚಿದರು.
03071019a ಸೋಽವತೀರ್ಯ ರಥೋಪಸ್ಥಾದೃತುಪರ್ಣೋ ನರಾಧಿಪಃ|
03071019c ಉಪತಸ್ಥೇ ಮಹಾರಾಜ ಭೀಮಂ ಭೀಮಪರಾಕ್ರಮಂ||
ನರಾಧಿಪ ಋತುಪರ್ಣನು ರಥದಿಂದ ಇಳಿದು ಭೀಮಪರಾಕ್ರಮಿ ಮಹಾರಾಜ ಭೀಮನ ಬಳಿಬಂದನು.
03071020a ತಂ ಭೀಮಃ ಪ್ರತಿಜಗ್ರಾಹ ಪೂಜಯಾ ಪರಯಾ ತತಃ|
03071020c ಅಕಸ್ಮಾತ್ಸಹಸಾ ಪ್ರಾಪ್ತಂ ಸ್ತ್ರೀಮಂತ್ರಂ ನ ಸ್ಮ ವಿಂದತಿ||
ಭೀಮನು ಅಕಸ್ಮಾತ್ತಾಗಿ ಯಾವುದೇ ಕಾರಣವೂ ಇಲ್ಲದೇ ಬಂದಿದ್ದ ಅವನನ್ನು ಉತ್ತಮ ಗೌರವದಿಂದ ಸ್ವಾಗತಿಸಿದನು. ಅವನಿಗೆ ಸ್ತ್ರೀಯರು ಹೂಡಿದ್ದ ಉಪಾಯವು ತಿಳಿದಿರಲಿಲ್ಲ.
03071021a ಕಿಂ ಕಾರ್ಯಂ ಸ್ವಾಗತಂ ತೇಽಸ್ತು ರಾಜ್ಞಾ ಪೃಷ್ಟಶ್ಚ ಭಾರತ|
03071021c ನಾಭಿಜಜ್ಞೇ ಸ ನೃಪತಿರ್ದುಹಿತ್ರರ್ಥೇ ಸಮಾಗತಂ||
ಭಾರತ! ತನ್ನ ಮಗಳ ಸಲುವಾಗಿಯೇ ಆ ನೃಪತಿಯು ಬಂದಿದ್ದಾನೆ ಎಂದು ತಿಳಿಯದೇ, “ಸ್ವಾಗತ! ನನ್ನಿಂದ ಯಾವ ಕಾರ್ಯವಾಗಬೇಕು?” ಎಂದು ರಾಜನು ಕೇಳಿದನು.
03071022a ಋತುಪರ್ಣೋಽಪಿ ರಾಜಾ ಸ ಧೀಮಾನ್ಸತ್ಯಪರಾಕ್ರಮಃ|
03071022c ರಾಜಾನಂ ರಾಜಪುತ್ರಂ ವಾ ನ ಸ್ಮ ಪಶ್ಯತಿ ಕಂ ಚನ|
03071022 ನೈವ ಸ್ವಯಂವರಕಥಾಂ ನ ಚ ವಿಪ್ರಸಮಾಗಮಂ||
ಧೀಮಂತ ಸತ್ಯಪರಾಕ್ರಮಿ ರಾಜ ಋತುಪರ್ಣನಾದರೂ ರಾಜರನ್ನಾಗಲೀ, ರಾಜಪುತ್ರರನ್ನಾಗಲೀ ಯಾರನ್ನೂ ನೋಡಲಿಲ್ಲ. ಸ್ವಯಂವರದ ಮಾತನ್ನೂ ಕೇಳಲಿಲ್ಲ ಮತ್ತು ವಿಪ್ರರ ಸಮಾಗಮವನ್ನೂ ನೋಡಲಿಲ್ಲ.
03071023a ತತೋ ವಿಗಣಯನ್ರಾಜಾ ಮನಸಾ ಕೋಸಲಾಧಿಪಃ|
03071023c ಆಗತೋಽಸ್ಮೀತ್ಯುವಾಚೈನಂ ಭವಂತಮಭಿವಾದಕಃ||
ಮನಸ್ಸಿನಲ್ಲಿಯೇ ಇದನ್ನೆಲ್ಲಾ ಯೋಚಿಸಿ ಕೋಸಲಾಧಿಪನು “ನಿಮ್ಮನ್ನು ಅಭಿನಂದಿಸಲು ನಾನು ಬಂದಿದ್ದೇನೆ!” ಎಂದು ಹೇಳಿದನು.
03071024a ರಾಜಾಪಿ ಚ ಸ್ಮಯನ್ಭೀಮೋ ಮನಸಾಭಿವಿಚಿಂತಯತ್|
03071024c ಅಧಿಕಂ ಯೋಜನಶತಂ ತಸ್ಯಾಗಮನಕಾರಣಂ||
03071025a ಗ್ರಾಮಾನ್ಬಹೂನತಿಕ್ರಮ್ಯ ನಾಧ್ಯಗಚ್ಚದ್ಯಥಾತಥಂ|
03071025c ಅಲ್ಪಕಾರ್ಯಂ ವಿನಿರ್ದಿಷ್ಟಂ ತಸ್ಯಾಗಮನಕಾರಣಂ||
ರಾಜ ಭೀಮನಾದರೂ ಮುಗುಳ್ನಕ್ಕು ತನ್ನ ಮನಸ್ಸಿನಲ್ಲಿಯೇ ಯೋಚಿಸಿದನು: “ಬಹು ಗ್ರಾಮಗಳನ್ನು ಅತಿಕ್ರಮಿಸಿ ಶತಯೋಜನಕ್ಕಿಂತಲೂ ಅಧಿಕ ದೂರ ಬರಲು ಇವನಿಗೆ ಏನಾದರೊಂದು ಕಾರಣವಿರಬಹುದು. ಸುಮ್ಮನೇ ಇಲ್ಲಿಗೆ ಬಂದಿರಲಿಕ್ಕಿಲ್ಲ. ಇವನು ಇಲ್ಲಿಗೆ ಬರಲು ನಿರ್ದಿಷ್ಟವಾದ ಅಲ್ಪಕಾರ್ಯವೊಂದು ಇದ್ದಿರಬಹುದು.”
03071026a ನೈತದೇವಂ ಸ ನೃಪತಿಸ್ತಂ ಸತ್ಕೃತ್ಯ ವ್ಯಸರ್ಜಯತ್|
03071026c ವಿಶ್ರಾಮ್ಯತಾಮಿತಿ ವದನ್ಕ್ಲಾಂತೋಽಸೀತಿ ಪುನಃ ಪುನಃ||
03071027a ಸ ಸತ್ಕೃತಃ ಪ್ರಹೃಷ್ಟಾತ್ಮಾ ಪ್ರೀತಃ ಪ್ರೀತೇನ ಪಾರ್ಥಿವಃ|
03071027c ರಾಜಪ್ರೇಷ್ಯೈರನುಗತೋ ದಿಷ್ಟಂ ವೇಶ್ಮ ಸಮಾವಿಶತ್||
ಆ ನೃಪತಿಯನ್ನು ಸತ್ಕರಿಸಿ “ವಿಶ್ರಮಿಸು!” ಎಂದು ಕಳುಹಿಸಿದನು. “ಸತ್ಕೃತನಾಗಿದ್ದೇನೆ!” ಎಂದು ಪುನಃ ಪುನಃ ಅವನು ಹೇಳಿದನು. ಸತ್ಕಾರದಿಂದ ಹರ್ಷಿತನಾದ ಅವನು ರಾಜನ ಸಹಚರರೊಡಗೂಡಿ ತೋರಿಸಿದ ಅತಿಥಿಗೃಹಕ್ಕೆ ಹೋದನು.
03071028a ಋತುಪರ್ಣೇ ಗತೇ ರಾಜನ್ವಾರ್ಷ್ಣೇಯಸಹಿತೇ ನೃಪೇ|
03071028c ಬಾಹುಕೋ ರಥಮಾಸ್ಥಾಯ ರಥಶಾಲಾಮುಪಾಗಮತ್||
03071029a ಸ ಮೋಚಯಿತ್ವಾ ತಾನಶ್ವಾನ್ಪರಿಚಾರ್ಯ ಚ ಶಾಸ್ತ್ರತಃ|
03071029c ಸ್ವಯಂ ಚೈತಾನ್ಸಮಾಶ್ವಾಸ್ಯ ರಥೋಪಸ್ಥ ಉಪಾವಿಶತ್||
ರಾಜನ್! ವಾರ್ಷ್ಣೇಯನ ಜೊತೆಯಲ್ಲಿ ನೃಪ ಋತುಪರ್ಣನು ಹೋದ ನಂತರ ಬಾಹುಕನು ರಥಶಾಲೆಗೆ ಹೋಗಿ ರಥವನ್ನು ನಿಲ್ಲಿಸಿದನು. ಆ ಅಶ್ವಗಳನ್ನು ಬಿಚ್ಚಿ ಅವುಗಳಿಗೆ ಶಾಸ್ತ್ರೋಕ್ತ ಪರಿಚರಿ ಮಾಡಿದನು. ಅವುಗಳ ನೀಡಿಕೆಗಳನ್ನು ಸ್ವಯಂ ಪೂರೈಸಿ ರಥವನ್ನೇರಿ ಕುಳಿತುಕೊಂಡನು.
03071030a ದಮಯಂತೀ ತು ಶೋಕಾರ್ತಾ ದೃಷ್ಟ್ವಾ ಭಾಂಗಸ್ವರಿಂ ನೃಪಂ|
03071030c ಸೂತಪುತ್ರಂ ಚ ವಾರ್ಷ್ಣೇಯಂ ಬಾಹುಕಂ ಚ ತಥಾವಿಧಂ||
03071031a ಚಿಂತಯಾಮಾಸ ವೈದರ್ಭೀ ಕಸ್ಯೈಷ ರಥನಿಸ್ವನಃ|
03071031c ನಲಸ್ಯೇವ ಮಹಾನಾಸೀನ್ನ ಚ ಪಶ್ಯಾಮಿ ನೈಷಧಂ||
ನೃಪ ಭಾಂಗಸ್ವರಿ, ಸೂತಪುತ್ರ ವಾಷ್ಣೇಯ ಮತ್ತು ಕುರೂಪಿ ಬಾಹುಕನನ್ನು ಕಂಡು ಶೋಕಾರ್ತಳಾದ ವೈದರ್ಭಿ ದಮಯಂತಿಯು ಚಿಂತಿಸತೊಡಗಿದಳು: “ನಲನಂತೆಯೇ ರಥಧ್ವನಿಯನ್ನು ಮಾಡಿದವರು ಯಾರು? ನೈಷಧನೇ ಕಾಣುತ್ತಿಲ್ಲವಲ್ಲ!
03071032a ವಾರ್ಷ್ಣೇಯೇನ ಭವೇನ್ನೂನಂ ವಿದ್ಯಾ ಸೈವೋಪಶಿಕ್ಷಿತಾ|
03071032c ತೇನಾಸ್ಯ ರಥನಿರ್ಘೋಷೋ ನಲಸ್ಯೇವ ಮಹಾನಭೂತ್||
ಬಹುಷಃ ವಾರ್ಷ್ಣೇಯನೇ ಈ ವಿದ್ಯೆಯನ್ನು ಕಲಿತಿರಬಹುದು. ಆದರಿಂದಲೇ ಅವನು ನಲನಂತೆಯೇ ರಥ ನಿರ್ಘೋಷ ಮಾಡಿರಬಹುದು.
03071033a ಆಹೋ ಸ್ವಿದೃತುಪರ್ಣೋಽಪಿ ಯಥಾ ರಾಜಾ ನಲಸ್ತಥಾ|
03071033c ತತೋಽಯಂ ರಥನಿರ್ಘೋಷೋ ನೈಷಧಸ್ಯೇವ ಲಕ್ಷ್ಯತೇ||
ಅಥವಾ ರಾಜ ಋತುಪರ್ಣನು ನಲನಷ್ಟೇ ನಿಪುಣನಿರಬಹುದು. ಆದ್ದರಿಂದ ಅವನ ರಥನಿರ್ಘೋಶವು ನಲನಂತೆಯೇ ಕೇಳಿರಬಹುದು.”
03071034a ಏವಂ ವಿತರ್ಕಯಿತ್ವಾ ತು ದಮಯಂತೀ ವಿಶಾಂ ಪತೇ|
03071034c ದೂತೀಂ ಪ್ರಸ್ಥಾಪಯಾಮಾಸ ನೈಷಧಾನ್ವೇಷಣೇ ನೃಪ||
ವಿಶಾಂಪತೇ! ಈ ರೀತಿ ತರ್ಕಿಸುತ್ತಾ ದಮಯಂತಿಯು ನೃಪ ನೈಷಧನನ್ನು ಹುಡುಕಲೋಸುಗ ದೂತಿಯೊಬ್ಬಳನ್ನು ಕಳುಹಿಸಿದಳು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಋತುಪರ್ಣಸ್ಯ ಭೀಮಪುರಪ್ರವೇಶೇ ಏಕಸಪ್ತತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಋತುಪರ್ಣನ ಭೀಮಪುರಪ್ರವೇಶ ಎನ್ನುವ ಎಪ್ಪತ್ತೊಂದನೆಯ ಅಧ್ಯಾಯವು.
