ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೫೯
ದಮಯಂತೀ ಪರಿತ್ಯಾಗ
ಆಯಾಸಗೊಂಡು ದಮಯಂತಿಯು ನಿದ್ರಿಸುತ್ತಿರುವಾಗ ನಲನು ಚಿಂತಿಸಿ ಅವಳನ್ನು ಬಿಟ್ಟುಹೋಗಲು ನಿರ್ಧರಿಸಿದುದು (೧-೧೩). ಅವಳ ವಸ್ತ್ರವನ್ನು ಅರ್ಧ ತುಂಡುಮಾಡಿ, ಸುತ್ತಿಕೊಂಡು, ಪತ್ನಿಯನ್ನು ಬಿಟ್ಟು ದುಃಖಿತನಾಗಿ ಹೊರಟುಹೋದುದು (೧೪-೨೫).
03059001 ನಲ ಉವಾಚ|
03059001a ಯಥಾ ರಾಜ್ಯಂ ಪಿತುಸ್ತೇ ತತ್ತಥಾ ಮಮ ನ ಸಂಶಯಃ|
03059001c ನ ತು ತತ್ರ ಗಮಿಷ್ಯಾಮಿ ವಿಷಮಸ್ಥಃ ಕಥಂ ಚನ||
ನಲನು ಹೇಳಿದನು: “ಆ ರಾಜ್ಯವು ಹೇಗೆ ನಿನ್ನ ತಂದೆಯದೋ ಹಾಗೆಯೇ ಅದು ನನ್ನದೂ ಹೌದು. ಸಂಶಯವೇ ಇಲ್ಲ. ಆದರೆ ನಾನು ಈ ವಿಷಮ ಪರಿಸ್ಥಿತಿಯಲ್ಲಿ ಹೋಗುವುದಿಲ್ಲ.
03059002a ಕಥಂ ಸಮೃದ್ಧೋ ಗತ್ವಾಹಂ ತವ ಹರ್ಷವಿವರ್ಧನಃ|
03059002c ಪರಿದ್ಯೂನೋ ಗಮಿಷ್ಯಾಮಿ ತವ ಶೋಕವಿವರ್ಧನಃ||
ಹಿಂದೆ ಸಮೃದ್ಧನಾದ ನಾನು ನಿನ್ನ ಸಂತಸವನ್ನು ಹೆಚ್ಚಿಸಲು ಹೋಗಿದ್ದೆ. ಈಗ ಹೇಗೆ ಎಲ್ಲವನ್ನೂ ಕಳೆದುಕೊಂಡು, ನಿನ್ನ ದುಃಖವನ್ನು ಹೆಚ್ಚಿಸುತ್ತಾ ಅಲ್ಲಿಗೆ ಹೋಗಲಿ?””
03059003 ಬೃಹದಶ್ವ ಉವಾಚ|
03059003a ಇತಿ ಬ್ರುವನ್ನಲೋ ರಾಜಾ ದಮಯಂತೀಂ ಪುನಃ ಪುನಃ|
03059003c ಸಾಂತ್ವಯಾಮಾಸ ಕಲ್ಯಾಣೀಂ ವಾಸಸೋಽರ್ಧೇನ ಸಂವೃತಾಂ||
ಬೃಹದಶ್ವನು ಹೇಳಿದನು: “ಅವಳ ಅರ್ಧ ವಸ್ತ್ರವನ್ನು ಸುತ್ತಿಕೊಂಡ ರಾಜ ನಲನು ಈ ರೀತಿ ಕಲ್ಯಾಣಿ ದಮಯಂತಿಗೆ ಪುನಃ ಪುನಃ ಸಂತವಿಸಿದನು.
03059004a ತಾವೇಕವಸ್ತ್ರಸಂವೀತಾವಟಮಾನಾವಿತಸ್ತತಃ|
03059004c ಕ್ಷುತ್ಪಿಪಾಸಾಪರಿಶ್ರಾಂತೌ ಸಭಾಂ ಕಾಂ ಚಿದುಪೇಯತುಃ||
ಇಬ್ಬರೂ ಒಂದೇವಸ್ತ್ರವನ್ನು ಸುತ್ತಿಕೊಂಡು, ಅಲ್ಲಿಲ್ಲಿ ಸುತ್ತಾಡುತ್ತಾ, ಹಸಿವು-ಬಾಯಾರಿಕೆಗಳಿಂದ ಬಳಲಿ, ಯಾವುದೋ ಒಂದು ಭವನವನ್ನು ಸೇರಿದರು.
03059005a ತಾಂ ಸಭಾಮುಪಸಂಪ್ರಾಪ್ಯ ತದಾ ಸ ನಿಷಧಾಧಿಪಃ|
03059005c ವೈದರ್ಭ್ಯಾ ಸಹಿತೋ ರಾಜಾ ನಿಷಸಾದ ಮಹೀತಲೇ||
ರಾಜ! ಆ ಭವನವನ್ನು ತಲುಪಿದೊಡನೆಯೇ ನಿಷಧಾಧಿಪನು ವೈದರ್ಭಿಯ ಸಹಿತ ನೆಲದ ಮೇಲೆಯೇ ಮಲಗಿಕೊಂಡನು.
03059006a ಸ ವೈ ವಿವಸ್ತ್ರೋ ಮಲಿನೋ ವಿಕಚಃ ಪಾಂಸುಗುಂಠಿತಃ|
03059006c ದಮಯಂತ್ಯಾ ಸಹ ಶ್ರಾಂತಃ ಸುಷ್ವಾಪ ಧರಣೀತಲೇ||
ಮಲಿನನಾದ, ತಲೆಕೂದಲು ಕಳೆದುಕೊಂಡ, ಸುಸ್ತಾದ ಅವನು ವಿವಸ್ತ್ರನಾಗಿ ದಮಯಂತಿಯ ಸಹಿತ ಆ ಧರಣಿತಲದಲ್ಲಿಯೇ ಮಲಗಿದನು.
03059007a ದಮಯಂತ್ಯಪಿ ಕಲ್ಯಾಣೀ ನಿದ್ರಯಾಪಹೃತಾ ತತಃ|
03059007c ಸಹಸಾ ದುಃಖಮಾಸಾದ್ಯ ಸುಕುಮಾರೀ ತಪಸ್ವಿನೀ||
ಸುಕುಮಾರಿ, ತಪಸ್ವಿನಿ, ಒಮ್ಮೆಲೇ ಅಸಾದ್ಯ ದುಃಖವನ್ನು ಕಂಡ ಆ ಕಲ್ಯಾಣಿ ದಮಯಂತಿಯೂ ನಿದ್ರೆಯ ವಶಳಾಗಿಬಿಟ್ಟಳು.
03059008a ಸುಪ್ತಾಯಾಂ ದಮಯಂತ್ಯಾಂ ತು ನಲೋ ರಾಜಾ ವಿಶಾಂ ಪತೇ|
03059008c ಶೋಕೋನ್ಮಥಿತಚಿತ್ತಾತ್ಮಾ ನ ಸ್ಮ ಶೇತೇ ಯಥಾ ಪುರಾ||
ವಿಶಾಂಪತೇ! ದಮಯಂತಿಯು ನಿದ್ರೆಮಾಡಿದರೂ ಚಿತ್ತ ಮತ್ತು ಆತ್ಮಗಳು ಶೋಕದಿಂದ ಮಥನವಾಗುತ್ತಿದ್ದ ನಲನು ಮೊದಲಿನ ಹಾಗೆ ನಿದ್ದೆ ಮಾಡಲಿಲ್ಲ.
03059009a ಸ ತದ್ರಾಜ್ಯಾಪಹರಣಂ ಸುಹೃತ್ತ್ಯಾಗಂ ಚ ಸರ್ವಶಃ|
03059009c ವನೇ ಚ ತಂ ಪರಿಧ್ವಂಸಂ ಪ್ರೇಕ್ಷ್ಯ ಚಿಂತಾಮುಪೇಯಿವಾನ್||
ಅವನು ತನ್ನ ರಾಜ್ಯಾಪಹರಣ, ಸ್ನೇಹಿತರು ತನ್ನನ್ನು ತ್ಯಜಿಸಿದುದು ಮತ್ತು ವನದಲ್ಲಿ ತಾನು ಕಾಲಕಳೆಯುತ್ತಿರುವುದು ಈ ಎಲ್ಲದರ ಕುರಿತು ಚಿಂತಿಸತೊಡಗಿದನು.
03059010a ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ|
03059010c ಕಿಂ ನು ಮೇ ಮರಣಂ ಶ್ರೇಯಃ ಪರಿತ್ಯಾಗೋ ಜನಸ್ಯ ವಾ||
“ನಾನು ಇದನ್ನು ಮಾಡಿದರೆ ಹೇಗೆ? ಇದನ್ನು ಮಾಡದಿದ್ದರೆ ಹೇಗೆ? ನಾನು ಸಾಯುವುದು ಒಳ್ಳೆಯದೋ ಅಥವಾ ಈ ಸ್ತ್ರೀಯನ್ನು ಪರಿತ್ಯಜಿಸುವುದು ಒಳ್ಳೆಯದೋ?
03059011a ಮಾಮಿಯಂ ಹ್ಯನುರಕ್ತೇದಂ ದುಃಖಮಾಪ್ನೋತಿ ಮತ್ಕೃತೇ|
03059011c ಮದ್ವಿಹೀನಾ ತ್ವಿಯಂ ಗಚ್ಚೇತ್ಕದಾ ಚಿತ್ಸ್ವಜನಂ ಪ್ರತಿ||
ನನ್ನಲ್ಲೇ ಅನುರಕ್ತಳಾದ ಇವಳು ನನ್ನಿಂದಾಗಿ ದುಃಖವನ್ನು ಹೊಂದಿದ್ದಾಳೆ. ಆದರೆ ನಾನು ಇಲ್ಲದಿದ್ದರೆ ಇವಳು ಮುಂದೆ ಯಾವಾಗಲಾದರೂ ತನ್ನ ಜನರ ಕಡೆ ಹೋಗಿಯಾಳು.
03059012a ಮಯಾ ನಿಃಸಂಶಯಂ ದುಃಖಮಿಯಂ ಪ್ರಾಪ್ಸ್ಯತ್ಯನುತ್ತಮಾ|
03059012c ಉತ್ಸರ್ಗೇ ಸಂಶಯಃ ಸ್ಯಾತ್ತು ವಿಂದೇತಾಪಿ ಸುಖಂ ಕ್ವ ಚಿತ್||
ನಾನು ಜೊತೆಯಲ್ಲಿದ್ದರೆ ಇವಳು ನಿರಂತರವಾಗಿ ದುಃಖವನ್ನು ಅನುಭವಿಸುವುದು ನಿಃಸಂಶಯ. ಬಿಟ್ಟುಹೋದರೆ ಆಪತ್ತು ಬರಬಹುದು. ಆದರೂ ಮುಂದೆ ಯಾವಾಗಲಾದರೂ ಸುಖವನ್ನು ಹೊಂದಬಹುದು.”
03059013a ಸ ವಿನಿಶ್ಚಿತ್ಯ ಬಹುಧಾ ವಿಚಾರ್ಯ ಚ ಪುನಃ ಪುನಃ|
03059013c ಉತ್ಸರ್ಗೇಽಮನ್ಯತ ಶ್ರೇಯೋ ದಮಯಂತ್ಯಾ ನರಾಧಿಪಃ||
ಹೀಗೆ ಪುನಃ ಪುನಃ ಇದೇ ವಿಷಯವನ್ನು ಮನಸ್ಸಿನಲ್ಲಿ ತಿರುವಿ ಹಾಕಿ ಬಹಳಷ್ಟು ಸಾರಿ ನಿಶ್ಚಯ ಮಾಡಿ, ನಂತರ ಆ ನರಾಧಿಪನು ದಮಯಂತಿಯನ್ನು ಬಿಡುವುದೇ ಸರಿಯೆಂದು ನಿರ್ಧರಿಸಿದನು.
03059014a ಸೋಽವಸ್ತ್ರತಾಮಾತ್ಮನಶ್ಚ ತಸ್ಯಾಶ್ಚಾಪ್ಯೇಕವಸ್ತ್ರತಾಂ|
03059014c ಚಿಂತಯಿತ್ವಾಧ್ಯಗಾದ್ರಾಜಾ ವಸ್ತ್ರಾರ್ಧಸ್ಯಾವಕರ್ತನಂ||
ತಾನು ವಿವಸ್ತ್ರನಾಗಿದ್ದುದನ್ನು ಮತ್ತು ಅವಳು ಏಕವಸ್ತ್ರಳಾಗಿದ್ದುದನ್ನು ಚಿಂತಿಸಿ, ಅವಳ ವಸ್ತ್ರವನ್ನು ಅರ್ಧ ತುಂಡುಮಾಡುವುದಾಗಿ ನಿರ್ಧರಿಸಿದನು.
03059015a ಕಥಂ ವಾಸೋ ವಿಕರ್ತೇಯಂ ನ ಚ ಬುಧ್ಯೇತ ಮೇ ಪ್ರಿಯಾ|
03059015c ಚಿಂತ್ಯೈವಂ ನೈಷಧೋ ರಾಜಾ ಸಭಾಂ ಪರ್ಯಚರತ್ತದಾ||
ಆದರೆ “ನನ್ನ ಪ್ರಿಯೆಯನ್ನು ಎಚ್ಚರಿಸದ ಹಾಗೆ ಹೇಗೆ ವಸ್ತ್ರವನ್ನು ಕತ್ತರಿಸುವುದು?” ಎಂದು ಚಿಂತಿಸುತ್ತಾ ರಾಜಾ ನೈಷಧನು ಆ ಭವನದಲ್ಲಿಯೇ ಒಂದೆಡೆಯಿಂದ ಇನ್ನೊಂದೆಡೆ ಓಡಾಡುತ್ತಿದ್ದನು.
03059016a ಪರಿಧಾವನ್ನಥ ನಲ ಇತಶ್ಚೇತಶ್ಚ ಭಾರತ|
03059016c ಆಸಸಾದ ಸಭೋದ್ದೇಶೇ ವಿಕೋಶಂ ಖಡ್ಗಮುತ್ತಮಂ||
ಭಾರತ! ಹೀಗೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದ ನಲನು ಭವನದ ಮೂಲೆಯಲ್ಲಿದ್ದ, ತೆರೆದಿಟ್ಟ ಉತ್ತಮವಾದ ಖಡ್ಗವೊಂದನ್ನು ಕಂಡನು.
03059017a ತೇನಾರ್ಧಂ ವಾಸಸಶ್ಚಿತ್ತ್ವಾ ನಿವಸ್ಯ ಚ ಪರಂತಪಃ|
03059017c ಸುಪ್ತಾಮುತ್ಸೃಜ್ಯ ವೈದರ್ಭೀಂ ಪ್ರಾದ್ರವದ್ಗತಚೇತನಃ||
ಅದರಿಂದ ಪರಂತಪನು ಅವಳ ವಸ್ತ್ರವನ್ನು ಅರ್ಧ ಕತ್ತರಿಸಿ ಸುತ್ತಿಕೊಂಡನು. ನಂತರ ನಿದ್ರಿಸುತ್ತಿದ್ದ ವೈದರ್ಭಿಯನ್ನು ಬಿಟ್ಟು, ಬುದ್ಧಿ ಕಳೆದುಕೊಂಡವನಂತೆ ಓಡಿಹೋದನು.
03059018a ತತೋ ನಿಬದ್ಧಹೃದಯಃ ಪುನರಾಗಮ್ಯ ತಾಂ ಸಭಾಂ|
03059018c ದಮಯಂತೀಂ ತಥಾ ದೃಷ್ಟ್ವಾ ರುರೋದ ನಿಷಧಾಧಿಪಃ||
ಆದರೆ ನಿಬದ್ಧಹೃದಯ ನಿಷಧಾಧಿಪನು ಪುನಃ ಆ ಭವನಕ್ಕೆ ಬಂದು ದಮಯಂತಿಯನ್ನು ನೋಡಿ ಕಣ್ಣೀರಿಟ್ಟನು.
03059019a ಯಾಂ ನ ವಾಯುರ್ನ ಚಾದಿತ್ಯಃ ಪುರಾ ಪಶ್ಯತಿ ಮೇ ಪ್ರಿಯಾಂ|
03059019c ಸೇಯಮದ್ಯ ಸಭಾಮಧ್ಯೇ ಶೇತೇ ಭೂಮಾವನಾಥವತ್||
“ಈ ಮೊದಲು ವಾಯುವಾಗಲೀ ಆದಿತ್ಯನಾಗಲೀ ನನ್ನ ಪ್ರಿಯೆಯನ್ನು ಕಂಡಿರಲಿಲ್ಲ. ಆದರೆ ಈಗ ಅವಳು ಈ ಭವನಮಧ್ಯದಲ್ಲಿ ಬರೀ ನೆಲದ ಮೇಲೆ, ಅನಾಥಳಾಗಿ ಮಲಗಿದ್ದಾಳೆ.
03059020a ಇಯಂ ವಸ್ತ್ರಾವಕರ್ತೇನ ಸಂವೀತಾ ಚಾರುಹಾಸಿನೀ|
03059020c ಉನ್ಮತ್ತೇವ ವರಾರೋಹಾ ಕಥಂ ಬುದ್ಧ್ವಾ ಭವಿಷ್ಯತಿ||
ತುಂಡು ವಸ್ತ್ರವನ್ನು ಸುತ್ತಿಕೊಂಡು ಈ ಚಾರುಹಾಸಿನಿ ವರಾರೋಹೆಯು ಉನ್ಮತ್ತಳಾದಂತೆ ಮಲಗಿದ್ದಾಳೆ. ಎಚ್ಚರವಾದ ನಂತರ ಇವಳು ಹೇಗಿರುವಳು?
03059021a ಕಥಮೇಕಾ ಸತೀ ಭೈಮೀ ಮಯಾ ವಿರಹಿತಾ ಶುಭಾ|
03059021c ಚರಿಷ್ಯತಿ ವನೇ ಘೋರೇ ಮೃಗವ್ಯಾಲನಿಷೇವಿತೇ||
ನನ್ನಿಂದ ವಿರಹಿತಳಾದ ಈ ಶುಭೆ ಸತಿ ಭೈಮಿಯು ಮೃಗವ್ಯಾಲಗಳಿಂದ ತುಂಬಿದ ಈ ಘೋರ ವನದಲ್ಲಿ ಹೇಗೆ ಸಂಚರಿಸುವಳು?”
03059022a ಗತ್ವಾ ಗತ್ವಾ ನಲೋ ರಾಜಾ ಪುನರೇತಿ ಸಭಾಂ ಮುಹುಃ|
03059022c ಆಕೃಷ್ಯಮಾಣಃ ಕಲಿನಾ ಸೌಹೃದೇನಾಪಕೃಷ್ಯತೇ||
ಕಲಿಯಿಂದ ಆಕರ್ಷಿತನಾಗಿ ಮತ್ತು ಸೌಹೃದಯಳಿಂದ ಅಪಕೃಷ್ಯನಾಗಿ ನಲನು ಹೋಗುವುದು, ಪುನಃ ಭವನಕ್ಕೆ ಬರುವುದು, ಮತ್ತೆ ಹೋಗುವುದು ಈ ರೀತಿ ಮಾಡುತ್ತಿದ್ದನು.
03059023a ದ್ವಿಧೇವ ಹೃದಯಂ ತಸ್ಯ ದುಃಖಿತಸ್ಯಾಭವತ್ತದಾ|
03059023c ದೋಲೇವ ಮುಹುರಾಯಾತಿ ಯಾತಿ ಚೈವ ಸಭಾಂ ಮುಹುಃ||
ದುಃಖಿತನಾದ ಅವನ ಹೃದಯವು ಎರಡಾಗಿ ಹರಿದಿತ್ತು; ಉಯ್ಯಾಲೆಯಂತೆ ಅದು ಒಮ್ಮೆ ಭವನದಿಂದ ದೂರ ಮತ್ತು ಇನ್ನೊಮ್ಮೆ ಅದರ ಹತ್ತಿರ ಡೋಲಾಡುತ್ತಿತ್ತು.
03059024a ಸೋಽಪಕೃಷ್ಟಸ್ತು ಕಲಿನಾ ಮೋಹಿತಃ ಪ್ರಾದ್ರವನ್ನಲಃ|
03059024c ಸುಪ್ತಾಮುತ್ಸೃಜ್ಯ ತಾಂ ಭಾರ್ಯಾಂ ವಿಲಪ್ಯ ಕರುಣಂ ಬಹು||
ಕೊನೆಯಲ್ಲಿ ಕಲಿಯಿಂದ ಅಪಕೃಷ್ಟನಾಗಿ ಮೋಹಿತನಾದ ನಲನು ಬಹಳ ಕರುಣದಾಯಕವಾಗಿ ವಿಲಪಿಸುತ್ತಾ ನಿದ್ರಿಸುತ್ತಿರುವ ಭಾರ್ಯೆಯನ್ನು ಬಿಟ್ಟು ಓಡಿ ಹೋದನು.
03059025a ನಷ್ಟಾತ್ಮಾ ಕಲಿನಾ ಸ್ಪೃಷ್ಟಸ್ತತ್ತದ್ವಿಗಣಯನ್ನೃಪಃ|
03059025c ಜಗಾಮೈವ ವನೇ ಶೂನ್ಯೇ ಭಾರ್ಯಾಮುತ್ಸೃಜ್ಯ ದುಃಖಿತಃ||
ಕಲಿಯಿಂದ ಅತ್ಮವನ್ನೇ ಕಳೆದುಕೊಂಡು, ಅದು ಇದು ಎಂದು ಏನನ್ನೂ ಯೊಚಿಸದೇ, ನಿರ್ಜನ ವನದಲ್ಲಿ ಭಾರ್ಯೆಯನ್ನು ಬಿಟ್ಟು ದುಃಖಿತನಾಗಿ ಹೊರಟುಹೋದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀಪರಿತ್ಯಾಗೇ ಏಕೋನಷಷ್ಟಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತೀಪರಿತ್ಯಾಗ ಎನ್ನುವ ಐವತ್ತೊಂಭತ್ತನೆಯ ಅಧ್ಯಾಯವು.
