Aranyaka Parva: Chapter 57

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೫೭

ನಲನು ದ್ಯೂತವಾಡುವುದನ್ನು ನಿಲ್ಲಿಸಬೇಕೆಂದು ದಮಯಂತಿಯು ಪ್ರಯತ್ನಿಸಿ ಸೋತು, ಸೂತ ವಾರ್ಷ್ಣೇಯನೊಂದಿಗೆ ತನ್ನ ಅವಳಿ ಮಕ್ಕಳನ್ನು ತಂದೆ ಭೀಮನ ಮನೆಗೆ ಕಳುಹಿಸಿದುದು (೧-೧೮). ವಾರ್ಷ್ಣೇಯನು ಮಕ್ಕಳನ್ನು ಕುಂಡಿನಪುರದಲ್ಲಿ ಇರಿಸಿ, ಅಯೋಧ್ಯೆಯ ಅರಸ ಋತುಪರ್ಣನಲ್ಲಿ ಸಾರಥಿಯಾಗಿ ಸೇರಿಕೊಂಡಿದುದು (೧೯-೨೩).

03057001 ಬೃಹದಶ್ವ ಉವಾಚ|

03057001a ದಮಯಂತೀ ತತೋ ದೃಷ್ಟ್ವಾ ಪುಣ್ಯಶ್ಲೋಕಂ ನರಾಧಿಪಂ|

03057001c ಉನ್ಮತ್ತವದನುನ್ಮತ್ತಾ ದೇವನೇ ಗತಚೇತಸಂ||

03057002a ಭಯಶೋಕಸಮಾವಿಷ್ಟಾ ರಾಜನ್ಭೀಮಸುತಾ ತತಃ|

03057002c ಚಿಂತಯಾಮಾಸ ತತ್ಕಾರ್ಯಂ ಸುಮಹತ್ಪಾರ್ಥಿವಂ ಪ್ರತಿ||

ಬೃಹದಶ್ವನು ಹೇಳಿದನು: “ನರಾಧಿಪ ಪುಣ್ಯಶ್ಲೋಕನು ಆಟದಲ್ಲಿ ಉನ್ಮತ್ತನಾಗಿ ಚೇತನವನ್ನೇ ಕಳೆದುಕೊಂಡಿರುವುದನ್ನು ಉನ್ಮತ್ತಳಲ್ಲದ ದಮಯಂತಿಯು ನೋಡಿದಳು. ರಾಜ! ನಂತರ ಭಯಶೋಕಸಮಾವಿಷ್ಟಳಾದ ಭೀಮಸುತೆಯು ಪಾರ್ಥಿವನ ಸಲುವಾಗಿ ಸುಮಹತ್ ಕಾರ್ಯದ ಬಗ್ಗೆ ಯೋಚಿಸಿದಳು.

03057003a ಸಾ ಶಂಕಮಾನಾ ತತ್ಪಾಪಂ ಚಿಕೀರ್ಷಂತೀ ಚ ತತ್ಪ್ರಿಯಂ|

03057003c ನಲಂ ಚ ಹೃತಸರ್ವಸ್ವಮುಪಲಭ್ಯೇದಮಬ್ರವೀತ್||

ಅವನ ಪಾಪವನ್ನು ಶಂಕಿಸುತ್ತಾ, ಅವನಿಗೆ ಪ್ರಿಯವಾದುದನ್ನು ಮಾಡುವ ಇಚ್ಛೆಯಿಂದ, ನಲನು ಸರ್ವವನ್ನೂ ಕಳೆದುಕೊಳ್ಳುತ್ತಿದ್ದಾನೆ ಎಂದು ಕೇಳಿ ಅವಳ ಸೇವಕಿಗೆ ಹೇಳಿದಳು:

03057004a ಬೃಹತ್ಸೇನೇ ವ್ರಜಾಮಾತ್ಯಾನಾನಾಯ್ಯ ನಲಶಾಸನಾತ್|

03057004c ಆಚಕ್ಷ್ವ ಯದ್ಧೃತಂ ದ್ರವ್ಯಮವಶಿಷ್ಟಂ ಚ ಯದ್ವಸು||

“ಬೃಹತ್ಸೇನೆ! ನಲನ ಶಾಸನದಂತೆ ಹೋಗಿ ಅಮಾತ್ಯರನ್ನೆಲ್ಲರನ್ನೂ ಕರೆದುಕೊಂಡು ಬಾ. ಯಾವ ವಸ್ತುಗಳನ್ನು ಈಗಾಗಲೇ ಕಳೆದುಕೊಂಡಿದ್ದೇವೆ ಮತ್ತು ಯಾವವು ಇನ್ನೂ ನಮ್ಮ ಹತ್ತಿರ ಇವೆ ಎನ್ನುವುದನ್ನೂ ಅವರಿಗೆ ಹೇಳು.”

03057005a ತತಸ್ತೇ ಮಂತ್ರಿಣಃ ಸರ್ವೇ ವಿಜ್ಞಾಯ ನಲಶಾಸನಂ|

03057005c ಅಪಿ ನೋ ಭಾಗಧೇಯಂ ಸ್ಯಾದಿತ್ಯುಕ್ತ್ವಾ ಪುನರಾವ್ರಜನ್||

ಸರ್ವ ಮಂತ್ರಿಗಳೂ ನಲಶಾಸನವನ್ನು ತಿಳಿದು ಭಾಗ್ಯವು ನಮಗೆ ಈಗ ಮರಳಿಬಂದಿದೆಯೋ ಎನ್ನುತ್ತಾ ಬಂದರು.

03057006a ತಾಸ್ತು ಸರ್ವಾಃ ಪ್ರಕೃತಯೋ ದ್ವಿತೀಯಂ ಸಮುಪಸ್ಥಿತಾಃ|

03057006c ನ್ಯವೇದಯದ್ಭೀಮಸುತಾ ನ ಚ ತತ್ಪ್ರತ್ಯನಂದತ||

ಭೀಮಸುತೆಯು ಅವನಿಗೆ ಪ್ರಜೆಗಳು ಎರಡನೇ ಬಾರಿ ಮತ್ತೆ ಬಂದು ಉಪಸ್ಥಿತರಾಗಿದ್ದಾರೆ ಎಂದು ನಿವೇದಿಸಿದಳು, ಆದರೆ ಇದು ಅವನಿಗೆ ಇಷ್ಟವಾಗಲಿಲ್ಲ.

03057007a ವಾಕ್ಯಮಪ್ರತಿನಂದಂತಂ ಭರ್ತಾರಮಭಿವೀಕ್ಷ್ಯ ಸಾ|

03057007c ದಮಯಂತೀ ಪುನರ್ವೇಶ್ಮ ವ್ರೀಡಿತಾ ಪ್ರವಿವೇಶ ಹ||

ತನ್ನ ಈ ವಾಕ್ಯಗಳು ಪತಿಗೆ ಸಂತಸವನ್ನು ತರಲಿಲ್ಲ ಎಂದು ನೋಡಿದ ದಮಯಂತಿಯು ಬಹು ದುಃಖದಿಂದ ಪುನಃ ತನ್ನ ಮನೆಗೆ ಮರಳಿದಳು.

03057008a ನಿಶಮ್ಯ ಸತತಂ ಚಾಕ್ಷಾನ್ಪುಣ್ಯಶ್ಲೋಕಪರಾಙ್ಮುಖಾನ್|

03057008c ನಲಂ ಚ ಹೃತಸರ್ವಸ್ವಂ ಧಾತ್ರೀಂ ಪುನರುವಾಚ ಹ||

ದಾಳಗಳು ಸತತವಾಗಿ ಪುಣ್ಯಶ್ಲೋಕನಿಗೆ ಪರಾಙ್ಮುಖವಾಗಿದ್ದವು ಮತ್ತು ನಲನು ಸರ್ವಸ್ವವನ್ನೂ ಕಳೆದುಕೊಂಡ ಎನ್ನುವುದನ್ನು ಕೇಳಿ ತನ್ನ ಸೇವಕಿಗೆ ಪುನಃ ಹೇಳಿದಳು.

03057009a ಬೃಹತ್ಸೇನೇ ಪುನರ್ಗಚ್ಚ ವಾರ್ಷ್ಣೇಯಂ ನಲಶಾಸನಾತ್|

03057009c ಸೂತಮಾನಯ ಕಲ್ಯಾಣಿ ಮಹತ್ಕಾರ್ಯಮುಪಸ್ಥಿತಂ||

“ಬೃಹತ್ಸೇನೆ! ನಲಶಾಸನದಂತೆ ಸೂತ ವಾರ್ಷ್ಣೇಯನನ್ನು ಕರೆದುಕೊಂಡು ಬಾ. ಕಲ್ಯಾಣಿ! ಮಹತ್ತರ ಕಾರ್ಯವೊಂದನ್ನು ಮಾಡುವುದಿದೆ.”

03057010a ಬೃಹತ್ಸೇನಾ ತು ತಚ್ಶ್ರುತ್ವಾ ದಮಯಂತ್ಯಾಃ ಪ್ರಭಾಷಿತಂ|

03057010c ವಾರ್ಷ್ಣೇಯಮಾನಯಾಮಾಸ ಪುರುಷೈರಾಪ್ತಕಾರಿಭಿಃ||

ದಮಯಂತಿಯ ಈ ಮಾತುಗಳನ್ನು ಕೇಳಿದ ಬೃಹತ್ಸೇನೆಯು ಆಪ್ತಕಾರಿ ಪುರುಷರ ಮೂಲಕ ವಾರ್ಷ್ಣೇಯನನ್ನು ಕರೆಸಿದಳು.

03057011a ವಾರ್ಷ್ಣೇಯಂ ತು ತತೋ ಭೈಮೀ ಸಾಂತ್ವಯಂ ಶ್ಲಕ್ಷ್ಣಯಾ ಗಿರಾ|

03057011c ಉವಾಚ ದೇಶಕಾಲಜ್ಞಾ ಪ್ರಾಪ್ತಕಾಲಮನಿಂದಿತಾ||

ದೇಶಕಾಲಜ್ಞೆ ಭೈಮಿಯು ಕಾಲವು ಪ್ರಾಪ್ತವಾಗಿದೆ ಎಂದು ತಿಳಿದು ಮೃದುವಾದ ಮಾತುಗಳಲ್ಲಿ, ಸಾಂತ್ವನಿಸುತ್ತಾ ವಾರ್ಷ್ಣೇಯನಿಗೆ ಹೇಳಿದಳು:

03057012a ಜಾನೀಷೇ ತ್ವಂ ಯಥಾ ರಾಜಾ ಸಮ್ಯಗ್ವೃತ್ತಃ ಸದಾ ತ್ವಯಿ|

03057012c ತಸ್ಯ ತ್ವಂ ವಿಷಮಸ್ಥಸ್ಯ ಸಾಹಾಯ್ಯಂ ಕರ್ತುಮರ್ಹಸಿ||

03057013a ಯಥಾ ಯಥಾ ಹಿ ನೃಪತಿಃ ಪುಷ್ಕರೇಣೇಹ ಜೀಯತೇ|

03057013c ತಥಾ ತಥಾಸ್ಯ ದ್ಯೂತೇ ವೈ ರಾಗೋ ಭೂಯೋಽಭಿವರ್ಧತೇ||

“ರಾಜನು ನಿನ್ನ ಕುರಿತು ಹೇಗೆ ಸದಾ ಒಳ್ಳೆಯದಾಗಿ ನಡೆದುಕೊಳ್ಳುತ್ತಿದ್ದನು ಎಂದು ನೀನು ತಿಳಿದಿದ್ದೀಯೆ. ಈ ವಿಷಮ ಸಮಯದಲ್ಲಿ ಅವನಿಗೆ ನೀನು ಸಹಾಯಮಾಡಬೇಕಾಗಿದೆ. ಪುಷ್ಕರನಿಂದ ನೃಪತಿಯು ಜಯಸಲ್ಪಡುತ್ತಾ ಬಂದ ಹಾಗೆ ದ್ಯೂತದಲ್ಲಿ ಅವನ ಆಸಕ್ತಿ ಹೆಚ್ಚಾಗುತ್ತಾ ಬರುತ್ತಿದೆ.

03057014a ಯಥಾ ಚ ಪುಷ್ಕರಸ್ಯಾಕ್ಷಾ ವರ್ತಂತೇ ವಶವರ್ತಿನಃ|

03057014c ತಥಾ ವಿಪರ್ಯಯಶ್ಚಾಪಿ ನಲಸ್ಯಾಕ್ಷೇಷು ದೃಶ್ಯತೇ||

ದಾಳಗಳು ಪುಷ್ಕರನ ವಶದಲ್ಲಿರುವಂತೆ ವರ್ತಿಸುತ್ತಿವೆ. ಹಾಗೆಯೇ ದಾಳಗಳು ನಲನಿಗೆ ವಿನಾಶವನ್ನೇ ತರುತ್ತಿರುವುದು ಕಾಣುತ್ತಿದೆ.

03057015a ಸುಹೃತ್ಸ್ವಜನವಾಕ್ಯಾನಿ ಯಥಾವನ್ನ ಶೃಣೋತಿ ಚ|

03057015c ನೂನಂ ಮನ್ಯೇ ನ ಶೇಷೋಽಸ್ತಿ ನೈಷಧಸ್ಯ ಮಹಾತ್ಮನಃ||

ಸುಹೃದಯರ ಮತ್ತು ಸ್ವಜನರ ವಾಕ್ಯಗಳನ್ನು ಕೇಳಬೇಕಿದ್ದರೂ ಕೇಳುತ್ತಿಲ್ಲ. ಮಹಾತ್ಮ ನೈಷಧನ ಹತ್ತಿರ ಏನೂ ಉಳಿದಿಲ್ಲ ಎಂದು ನನಗನ್ನಿಸುತ್ತಿದೆ.

03057016a ಯತ್ರ ಮೇ ವಚನಂ ರಾಜಾ ನಾಭಿನಂದತಿ ಮೋಹಿತಃ|

03057016c ಶರಣಂ ತ್ವಾಂ ಪ್ರಪನ್ನಾಸ್ಮಿ ಸಾರಥೇ ಕುರು ಮದ್ವಚಃ|

03057016e ನ ಹಿ ಮೇ ಶುಧ್ಯತೇ ಭಾವಃ ಕದಾ ಚಿದ್ವಿನಶೇದಿತಿ||

ಸಾರಥಿ! ಮೋಹಿತ ರಾಜನು ನನ್ನ ಮಾತನ್ನು ಅಭಿನಂದಿಸದೇ ಇದ್ದುದರಿಂದ ನಾನು ನಿನ್ನ ಶರಣು ಬಂದಿದ್ದೇನೆ. ನನ್ನ ಮಾತಿನಂತೆ ಮಾಡು. ಯಾವಾಗಲಾದರೂ ವಿನಾಶವೊದಗುತ್ತದೆ ಎಂದು ನನ್ನ ಮನಸ್ಸಿಗೆ ಶಾಂತಿಯೇ ಇಲ್ಲದಾಗಿದೆ.

03057017a ನಲಸ್ಯ ದಯಿತಾನಶ್ವಾನ್ಯೋಜಯಿತ್ವಾ ಮಹಾಜವಾನ್|

03057017c ಇದಮಾರೋಪ್ಯ ಮಿಥುನಂ ಕುಂಡಿನಂ ಯಾತುಮರ್ಹಸಿ||

ನಲನ ಪ್ರೀತಿಯ ಮಹಾವೇಗವುಳ್ಳ ಅಶ್ವಗಳನ್ನು ರಥಕ್ಕೆ ಕಟ್ಟಿ, ಅದರಲ್ಲಿ ನನ್ನ ಅವಳಿ ಮಕ್ಕಳನ್ನು ಕುಂಡಿನಪುರಕ್ಕೆ ಕರೆದುಕೊಂಡು ಹೋಗು.

03057018a ಮಮ ಜ್ಞಾತಿಷು ನಿಕ್ಷಿಪ್ಯ ದಾರಕೌ ಸ್ಯಂದನಂ ತಥಾ|

03057018c ಅಶ್ವಾಂಶ್ಚೈತಾನ್ಯಥಾಕಾಮಂ ವಸ ವಾನ್ಯತ್ರ ಗಚ್ಚ ವಾ||

ನನ್ನ ಬಂಧುಗಳಲ್ಲಿ ಮಕ್ಕಳನ್ನು, ಕುದುರೆಗಳನ್ನು ಮತ್ತು ರಥವನ್ನು ಇರಿಸಿ, ನೀನು ಅಲ್ಲಿ ಉಳಿಯಬಹುದು ಅಥವಾ ಬೇಕಾದ ಬೇರೆ ಕಡೆ ಹೋಗಬಹುದು.”

03057019a ದಮಯಂತ್ಯಾಸ್ತು ತದ್ವಾಕ್ಯಂ ವಾರ್ಷ್ಣೇಯೋ ನಲಸಾರಥಿಃ|

03057019c ನ್ಯವೇದಯದಶೇಷೇಣ ನಲಾಮಾತ್ಯೇಷು ಮುಖ್ಯಶಃ||

ದಮಯಂತಿಯ ಈ ವಾಖ್ಯಗಳೆಲ್ಲವನ್ನೂ ನಲಸಾರಥಿ ವಾರ್ಷ್ಣೇಯನು ನಲನ ಮುಖ್ಯ ಅಮಾತ್ಯರುಗಳಲ್ಲಿ ನಿವೇದಿಸಿದನು.

03057020a ತೈಃ ಸಮೇತ್ಯ ವಿನಿಶ್ಚಿತ್ಯ ಸೋಽನುಜ್ಞಾತೋ ಮಹೀಪತೇ|

03057020c ಯಯೌ ಮಿಥುನಮಾರೋಪ್ಯ ವಿದರ್ಭಾಂಸ್ತೇನ ವಾಹಿನಾ||

ಮಹೀಪತೇ! ಅವರೆಲ್ಲರೂ ಸೇರಿ ನಿಶ್ಚಯಿಸಿ ಅವನಿಗೆ ಅನುಮತಿಯನ್ನು ಕೊಟ್ಟನಂತರ ಅವನು ಮಿಥುನರನ್ನು ವಾಹನದಲ್ಲಿ ಕುಳ್ಳಿರಿಸಿ ವಿದರ್ಭಕ್ಕೆ ಕರೆದೊಯ್ದನು.

03057021a ಹಯಾಂಸ್ತತ್ರ ವಿನಿಕ್ಷಿಪ್ಯ ಸೂತೋ ರಥವರಂ ಚ ತಂ|

03057021c ಇಂದ್ರಸೇನಾಂ ಚ ತಾಂ ಕನ್ಯಾಮಿಂದ್ರಸೇನಂ ಚ ಬಾಲಕಂ||

ಸೂತನು ಅಲ್ಲಿ ಕನ್ಯೆ ಇಂದ್ರಸೇನೆಯನ್ನು ಮತ್ತು ಬಾಲಕ ಇಂದ್ರಸೇನನನ್ನು ಹಾಗೂ ಕುದುರೆ-ರಥಗಳನ್ನಿರಿಸಿದನು.

03057022a ಆಮಂತ್ರ್ಯ ಭೀಮಂ ರಾಜಾನಮಾರ್ತಃ ಶೋಚನ್ನಲಂ ನೃಪಂ|

03057022c ಅಟಮಾನಸ್ತತೋಽಯೋಧ್ಯಾಂ ಜಗಾಮ ನಗರೀಂ ತದಾ||

ಆರ್ತನಾಗಿ ಶೋಕದಿಂದ ನೃಪ ನಲನ ಕುರಿತು ಭೀಮನಿಗೆ ತಿಳಿಸಿದನು ಮತ್ತು ಹಾಗೆಯೇ ತಿರುಗಾಡುತ್ತಾ ಅಯೋಧ್ಯಾ ನಗರಿಗೆ ಬಂದನು.

03057023a ಋತುಪರ್ಣಂ ಸ ರಾಜಾನಮುಪತಸ್ಥೇ ಸುದುಃಖಿತಃ|

03057023c ಭೃತಿಂ ಚೋಪಯಯೌ ತಸ್ಯ ಸಾರಥ್ಯೇನ ಮಹೀಪತೇ||

ಮಹೀಪತೇ! ದುಃಖಿತನಾಗಿ ಅಲ್ಲಿ ರಾಜ ಋತುಪರ್ಣನನ್ನು ಭೆಟ್ಟಿಮಾಡಿ ಅವನ ಸಾರಥಿಯಾಗಿ ಸೇರಿಕೊಂಡನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಕುಂಡಿನಂಪ್ರತಿ ಕುಮಾರಯೋ ಪ್ರಸ್ಥಾಪನೇ ಸಪ್ತಪಂಚಾಶತ್ತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಕುಂಡಿನದ ಕಡೆ ಕುಮಾರರ ಪ್ರಯಾಣ ಎನ್ನುವ ಐವತ್ತೇಳನೆಯ ಅಧ್ಯಾಯವು.

Related image

Comments are closed.