ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೫೪
ದಮಯಂತೀ ಸ್ವಯಂವರ
ಸ್ವಯಂವರದಲ್ಲಿ ದಮಯಂತಿಯು ಒಂದೇ ರೀತಿ ಕಾಣುವ ಐವರನ್ನು ನೋಡಿ ನಲನು ಯಾರೆಂದು ಗುರುತಿಸಲಿಕ್ಕಾಗದೇ ಸಂದೇಹಕ್ಕೊಳಗಾದುದು (೧-೧೦). ದಮಯಂತಿಯ ಪರಿವೇದನೆಯನ್ನು ಕೇಳಿ ಅವಳು ಕೇಳಿಕೊಂಡಂತೆ ದೇವತೆಗಳು ತಮ್ಮ ಚಿಹ್ನಧಾರಣೆ ಮಾಡಿಕೊಂಡಿದ್ದುದು (೧೧-೨೨). ದಮಯಂತಿಯು ನಲನನ್ನು ವರಿಸಲು, ದೇವತೆಗಳು ನಲನಿಗೆ ವರಗಳನ್ನಿತ್ತುದು (೨೩-೩೨). ನಲನು ದಮಯಂತಿಯನ್ನು ಕೂಡಿ ಸಂತಸದಿಂದ ರಾಜ್ಯವಾಳುತ್ತಿದ್ದುದು (೩೩-೩೮).
03054001 ಬೃಹದಶ್ವ ಉವಾಚ|
03054001a ಅಥ ಕಾಲೇ ಶುಭೇ ಪ್ರಾಪ್ತೇ ತಿಥೌ ಪುಣ್ಯೇ ಕ್ಷಣೇ ತಥಾ|
03054001c ಆಜುಹಾವ ಮಹೀಪಾಲಾನ್ಭೀಮೋ ರಾಜಾ ಸ್ವಯಂವರೇ||
ಬೃಹದಶ್ವನು ಹೇಳಿದನು: “ನಂತರ ಪುಣ್ಯ ತಿಥಿ, ಕ್ಷಣ ಮತ್ತು ಶುಭ ಕಾಲವು ಪ್ರಾಪ್ತಿಯಾದಾಗ, ಭೀಮರಾಜನು ಮಹೀಪಾಲರಿಗೆ ಸ್ವಯಂವರದ ಕರೆಕೊಟ್ಟನು.
03054002a ತಚ್ಛೃತ್ವಾ ಪೃಥಿವೀಪಾಲಾಃ ಸರ್ವೇ ಹೃಚ್ಚಯಪೀಡಿತಾಃ|
03054002c ತ್ವರಿತಾಃ ಸಮುಪಾಜಗ್ಮುರ್ದಮಯಂತೀಮಭೀಪ್ಸವಃ||
ಅದನ್ನು ಕೇಳಿ ಕಾಮ ಪೀಡಿತ ಎಲ್ಲ ಪೃಥಿವೀಪಾಲರೂ ದಮಯಂತಿಯನ್ನು ಗೆಲ್ಲುವ ಭರವಸೆಯಿಂದ ತ್ವರಿತವಾಗಿ ಬಂದು ಸೇರಿದರು.
03054003a ಕನಕಸ್ತಂಭರುಚಿರಂ ತೋರಣೇನ ವಿರಾಜಿತಂ|
03054003c ವಿವಿಶುಸ್ತೇ ಮಹಾರಂಗಂ ನೃಪಾಃ ಸಿಂಹಾ ಇವಾಚಲಂ||
ಕನಕಸ್ತಂಭಗಳಿಂದ ಮತ್ತು ತೋರಣಗಳಿಂದ ವಿರಾಜಿಸುತ್ತಿರುವ ಮಹಾರಂಗವನ್ನು ನೃಪರು ಸಿಂಹಗಳು ಪರ್ವತವನ್ನು ಪ್ರವೇಶಿಸುವಂತೆ ಪ್ರವೇಶಿಸಿದರು.
03054004a ತತ್ರಾಸನೇಷು ವಿವಿಧೇಷ್ವಾಸೀನಾಃ ಪೃಥಿವೀಕ್ಷಿತಃ|
03054004c ಸುರಭಿಸ್ರಗ್ಧರಾಃ ಸರ್ವೇ ಸುಮೃಷ್ಟಮಣಿಕುಂಡಲಾಃ||
ಅಲ್ಲಿ ಪೃಥಿವೀಕ್ಷಿತರು ಪುಷ್ಪಮಾಲೆಗಳನ್ನು ಮತ್ತು ಜಗಜಗಿಸುವ ಮಣಿಕುಂಡಲಗಳನ್ನು ಧರಿಸಿ, ವಿವಿಧ ಆಸನಗಳಲ್ಲಿ ಆಸೀನರಾದರು.
03054005a ತಾಂ ರಾಜಸಮಿತಿಂ ಪೂರ್ಣಾಂ ನಾಗೈರ್ಭೋಗವತೀಮಿವ|
03054005c ಸಂಪೂರ್ಣಾಂ ಪುರುಷವ್ಯಾಘ್ರೈರ್ವ್ಯಾಘ್ರೈರ್ಗಿರಿಗುಹಾಮಿವ||
ಆ ರಾಜ ಸಮಿತಿಯು ಭೋಗವತಿಯು ನಾಗಗಳಿಂದ ಮತ್ತು ಗಿರಿಗುಹೆಯು ವ್ಯಾಘ್ರಗಳಿಂದ ತುಂಬಿರುವ ಹಾಗೆ ನರವ್ಯಾಘ್ರರಿಂದ ತುಂಬಿಕೊಂಡಿತು.
03054006a ತತ್ರ ಸ್ಮ ಪೀನಾ ದೃಶ್ಯಂತೇ ಬಾಹವಃ ಪರಿಘೋಪಮಾಃ|
03054006c ಆಕಾರವಂತಃ ಸುಶ್ಲಕ್ಷ್ಣಾಃ ಪಂಚಶೀರ್ಷಾ ಇವೋರಗಾಃ||
ಅಲ್ಲಿ ಅವರ ಬಾಹುಗಳು ಪರಿಘಗಳಂತೆ ಕಾಣುತ್ತಿದ್ದವು. ಐದುತಲೆಯ ಉರಗಗಳಂತೆ ಆಕಾರಗಳನ್ನು ಹೊಂದಿದ್ದು ನುಣುಪಾಗಿದ್ದವು.
03054007a ಸುಕೇಶಾಂತಾನಿ ಚಾರೂಣಿ ಸುನಾಸಾನಿ ಶುಭಾನಿ ಚ|
03054007c ಮುಖಾನಿ ರಾಜ್ಞಾಂ ಶೋಭಂತೇ ನಕ್ಷತ್ರಾಣಿ ಯಥಾ ದಿವಿ||
ಆಕಾಶದಲ್ಲಿ ನಕ್ಷತ್ರಗಳು ಶೋಭಿಸುವಂತೆ ರಾಜರ ಮುಖಗಳು ಸುಂದರ ಕೇಶಗಳಿಂದ, ಸುಂದರ ಹೊಳೆಯುತ್ತಿರುವ ನಾಸಿಕಗಳಿಂದ ಶೋಭಿಸುತ್ತಿದ್ದವು.
03054008a ದಮಯಂತೀ ತತೋ ರಂಗಂ ಪ್ರವಿವೇಶ ಶುಭಾನನಾ|
03054008c ಮುಷ್ಣಂತೀ ಪ್ರಭಯಾ ರಾಜ್ಞಾಂ ಚಕ್ಷೂಂಷಿ ಚ ಮನಾಂಸಿ ಚ||
ಆಗ ಶುಭಾನನೆ ದಮಯಂತಿಯು ತನ್ನ ಪ್ರಭೆಯಿಂದ ರಾಜರುಗಳ ಕಣ್ಣುಗಳನ್ನೂ, ಮನಸ್ಸುಗಳನ್ನೂ ಕದಿಯುತ್ತಾ ರಂಗವನ್ನು ಪ್ರವೇಶಿಸಿದಳು.
03054009a ತಸ್ಯಾ ಗಾತ್ರೇಷು ಪತಿತಾ ತೇಷಾಂ ದೃಷ್ಟಿರ್ಮಹಾತ್ಮನಾಂ|
03054009c ತತ್ರ ತತ್ರೈವ ಸಕ್ತಾಭೂನ್ನ ಚಚಾಲ ಚ ಪಶ್ಯತಾಂ||
ಅವಳ ಯಾವ ಯಾವ ಅಂಗದ ಮೇಲೆ ಆ ಮಹಾತ್ಮರ ದೃಷ್ಟಿಯು ಬಿದ್ದಿತೋ, ಬೇರೆಲ್ಲಿಯೂ ಹಾಯದಂತೆ ಅಲ್ಲಿಯೇ ಅವರ ದೃಷ್ಟಿಯು ಸಿಲುಕಿಕೊಂಡಿತು.
03054010a ತತಃ ಸಂಕೀರ್ತ್ಯಮಾನೇಷು ರಾಜ್ಞಾಂ ನಾಮಸು ಭಾರತ|
03054010c ದದರ್ಶ ಭೈಮೀ ಪುರುಷಾನ್ಪಂಚ ತುಲ್ಯಾಕೃತೀನಿವ||
ಭಾರತ! ರಾಜರ ಹೆಸರುಗಳ ಸಂಕೀರ್ತನೆ ಮಾಡುತ್ತಿರುವಾಗ ಭೈಮಿಯು ಒಂದೇತರಹ ಕಾಣುತ್ತಿರುವ ಐವರು ಪುರುಷರನ್ನು ನೋಡಿದಳು.
03054011a ತಾನ್ಸಮೀಕ್ಷ್ಯ ತತಃ ಸರ್ವಾನ್ನಿರ್ವಿಶೇಷಾಕೃತೀನ್ ಸ್ಥಿತಾನ್|
03054011c ಸಂದೇಹಾದಥ ವೈದರ್ಭೀ ನಾಭ್ಯಜಾನಾನ್ನಲಂ ನೃಪಂ|
03054011e ಯಂ ಯಂ ಹಿ ದದೃಶೇ ತೇಷಾಂ ತಂ ತಂ ಮೇನೇ ನಲಂ ನೃಪಂ||
ರೂಪದಲ್ಲಿ ಯಾವ ವ್ಯತ್ಯಾಸಗಳೂ ಇಲ್ಲದೇ ಅಲ್ಲಿ ಕುಳಿತಿರುವ ಅವರನ್ನೆಲ್ಲ ನೋಡಿ ವೈದರ್ಭಿಯು ನೃಪ ನಲನು ಯಾರೆಂದು ಗುರುತಿಸಲಾಗದೇ ಸಂದೇಹಕ್ಕೊಳಗಾದಳು. ಯಾಕೆಂದರೆ ಅವರಲ್ಲಿ ಯಾರನ್ನು ನೋಡಿದರೂ ನೃಪ ನಲನನ್ನೇ ನೋಡುತ್ತಿದ್ದೇನೆ ಎಂದು ಅವಳಿಗನ್ನಿಸುತ್ತಿತ್ತು.
03054012a ಸಾ ಚಿಂತಯಂತೀ ಬುದ್ಧ್ಯಾಥ ತರ್ಕಯಾಮಾಸ ಭಾಮಿನೀ|
03054012c ಕಥಂ ನು ದೇವಾಂ ಜಾನೀಯಾಂ ಕಥಂ ವಿದ್ಯಾಂ ನಲಂ ನೃಪಂ||
ಚಿಂತೆಯಿಂದ ಭಾಮಿನಿಯು ಮನಸ್ಸಿನಲ್ಲಿಯೇ ತರ್ಕಿಸತೊಡಗಿದಳು: “ದೇವತೆಗಳು ಯಾರೆಂದು ನಾನು ಹೇಗೆ ತಿಳಿಯಲಿ ಮತ್ತು ಹೇಗೆ ನೃಪ ನಲನನ್ನು ಗುರುತಿಸಲಿ?
03054013a ಏವಂ ಸಂಚಿಂತಯಂತೀ ಸಾ ವೈದರ್ಭೀ ಭೃಶದುಃಖಿತಾ|
03054013c ಶ್ರುತಾನಿ ದೇವಲಿಂಗಾನಿ ಚಿಂತಯಾಮಾಸ ಭಾರತ||
ಭಾರತ! ಹೀಗೆ ದುಃಖಿತಳಾಗಿ ಚಿಂತಿಸುತ್ತಿದ್ದ ಆ ವೈದರ್ಭಿಯು ಕೇಳಿದ್ದ ದೇವಚಿಹ್ನೆಗಳ ಕುರಿತು ಯೋಚಿಸತೊಡಗಿದಳು.
03054014a ದೇವಾನಾಂ ಯಾನಿ ಲಿಂಗಾನಿ ಸ್ಥವಿರೇಭ್ಯಃ ಶ್ರುತಾನಿ ಮೇ|
03054014c ತಾನೀಹ ತಿಷ್ಠತಾಂ ಭೂಮಾವೇಕಸ್ಯಾಪಿ ನ ಲಕ್ಷಯೇ||
“ಇವರೇ ದೇವತೆಗಳು ಎಂದು ಗುರುತಿಸುವಂತಹ ಚಿಹ್ನೆಗಳ ಕುರಿತು ವೃದ್ಧರಿಂದ ಕೇಳಿದ್ದೇನೆ. ಆದರೆ ಅವುಗಳಲ್ಲಿ ಯಾವುದೂ ಭೂಮಿಯಮೇಲಿರುವ ಇವರಲ್ಲಿ ಕಂಡುಬರುತ್ತಿಲ್ಲವಲ್ಲಾ!”
03054015a ಸಾ ವಿನಿಶ್ಚಿತ್ಯ ಬಹುಧಾ ವಿಚಾರ್ಯ ಚ ಪುನಃ ಪುನಃ|
03054015c ಶರಣಂ ಪ್ರತಿ ದೇವಾನಾಂ ಪ್ರಾಪ್ತಕಾಲಮಮನ್ಯತ||
ಪುನಃ ಪುನಃ ಬೇರೆ ಬೇರೆ ರೀತಿಗಳಲ್ಲಿ ವಿಚಾರಿಸುತ್ತಾ ಅವಳು ದೇವತೆಗಳಿಗೆ ಶರಣುಹೋಗುವ ಕಾಲ ಪ್ರಾಪ್ತವಾಗಿದೆ ಎಂದು ಅರಿತಳು.
03054016a ವಾಚಾ ಚ ಮನಸಾ ಚೈವ ನಮಸ್ಕಾರಂ ಪ್ರಯುಜ್ಯ ಸಾ|
03054016c ದೇವೇಭ್ಯಃ ಪ್ರಾಂಜಲಿರ್ಭೂತ್ವಾ ವೇಪಮಾನೇದಮಬ್ರವೀತ್||
ವಾಚಾ-ಮನಸಾ ನಮಸ್ಕರಿಸಿ, ಪ್ರಾಂಜಲಿಬದ್ಧಳಾಗಿ, ನಡುಗುತ್ತಾ ದೇವತೆಗಳನ್ನುದ್ದೇಶಿಸಿ ಪ್ರಾರ್ಥಿಸಿದಳು:
03054017a ಹಂಸಾನಾಂ ವಚನಂ ಶ್ರುತ್ವಾ ಯಥಾ ಮೇ ನೈಷಧೋ ವೃತಃ|
03054017c ಪತಿತ್ವೇ ತೇನ ಸತ್ಯೇನ ದೇವಾಸ್ತಂ ಪ್ರದಿಶಂತು ಮೇ||
“ಹಂಸಗಳ ವಚನವನ್ನು ಕೇಳಿ ನೈಷಧನೇ ನನ್ನ ಪತಿಯಾಗಲಿ ಎಂಬ ನನ್ನ ಈ ಸತ್ಯವು ದೇವತೆಗಳನ್ನು ನನಗೆ ತೋರಿಸಿ ಕೊಡಲಿ!
03054018a ವಾಚಾ ಚ ಮನಸಾ ಚೈವ ಯಥಾ ನಾಭಿಚರಾಮ್ಯಹಂ|
03054018c ತೇನ ಸತ್ಯೇನ ವಿಬುಧಾಸ್ತಮೇವ ಪ್ರದಿಶಂತು ಮೇ||
ವಾಚಾ-ಮನಸಾ ನಾನು ಅಭಿಚರಳಾಗಿಲ್ಲ ಎಂಬ ಈ ಸತ್ಯವು ದೇವತೆಗಳನ್ನು ನನಗೆ ತೋರಿಸಲಿ!
03054019a ಯಥಾ ದೇವೈಃ ಸ ಮೇ ಭರ್ತಾ ವಿಹಿತೋ ನಿಷಧಾಧಿಪಃ|
03054019c ತೇನ ಸತ್ಯೇನ ಮೇ ದೇವಾಸ್ತಮೇವ ಪ್ರದಿಶಂತು ಮೇ||
ದೇವತೆಗಳೇ ನನಗೆ ನಿಷಧಾಧಿಪನು ಪತಿಯಾಗಲಿ ಎಂದು ನಿರ್ಧರಿಸಿದ್ದರೆ, ಈ ಸತ್ಯದ ಮೂಲಕ ದೇವತೆಗಳು ನನಗೆ ಕಾಣಿಸಿಕೊಳ್ಳಲಿ!
03054020a ಸ್ವಂ ಚೈವ ರೂಪಂ ಪುಷ್ಯಂತು ಲೋಕಪಾಲಾಃ ಸಹೇಶ್ವರಾಃ|
03054020c ಯಥಾಹಮಭಿಜಾನೀಯಾಂ ಪುಣ್ಯಶ್ಲೋಕಂ ನರಾಧಿಪಂ||
ನರಾಧಿಪ ಪುಣ್ಯಶ್ಲೋಕನನ್ನು ಗುರುತಿಸಲು ಸಹಾಯವಾಗುವಂತೆ ಈಶ್ವರಸಮೇತ ಈ ಲೋಕಪಾಲಕರು ತಮ್ಮ ಸ್ವರೂಪಗಳನ್ನು ಕಾಣಿಸಲಿ!”
03054021a ನಿಶಮ್ಯ ದಮಯಂತ್ಯಾಸ್ತತ್ಕರುಣಂ ಪರಿದೇವಿತಂ|
03054021c ನಿಶ್ಚಯಂ ಪರಮಂ ತಥ್ಯಮನುರಾಗಂ ಚ ನೈಷಧೇ||
03054022a ಮನೋವಿಶುದ್ಧಿಂ ಬುದ್ಧಿಂ ಚ ಭಕ್ತಿಂ ರಾಗಂ ಚ ಭಾರತ|
03054022c ಯಥೋಕ್ತಂ ಚಕ್ರಿರೇ ದೇವಾಃ ಸಾಮರ್ಥ್ಯಂ ಲಿಂಗಧಾರಣೇ||
ಭಾರತ! ದಮಯಂತಿಯ ಆ ಕರುಣ ಪರಿವೇದನೆಯನ್ನು ಕೇಳಿ ಮತ್ತು ನೈಷಧನ ಕುರಿತು ಅವಳಿಗಿದ್ದ ಪರಮ ನಿಶ್ಚಯ ಮತ್ತು ಅನುರಾಗ, ಅವಳ ಮನೋವಿಶುದ್ಧಿ, ಬುದ್ಧಿ, ಮತ್ತು ಭಕ್ತಿ, ರಾಗವನ್ನು ನೋಡಿ, ಅವಳು ಕೇಳಿಕೊಂಡ ಹಾಗೆ ದೇವತೆಗಳು ತಮ್ಮ ಚಿಹ್ನೆಧಾರಣೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ತೋರಿಸಿದರು.
03054023a ಸಾಪಶ್ಯದ್ವಿಬುಧಾನ್ಸರ್ವಾನಸ್ವೇದಾನ್ಸ್ತಬ್ಧಲೋಚನಾನ್|
03054023c ಹೃಷಿತಸ್ರಗ್ರಜೋಹೀನಾನ್ ಸ್ಥಿತಾನಸ್ಪೃಶತಃ ಕ್ಷಿತಿಂ||
ಬೆವರೇ ಇಲ್ಲದ, ಸ್ತಬ್ಧಲೋಚನರಾದ, ಶುಭ್ರಕುಸುಮಮಾಲೆಗಳನ್ನು ಧರಿಸಿದ, ಮಲಿನತೆಯೇ ಇಲ್ಲದೇ, ಕ್ಷಿತಿಯನ್ನು ಸ್ಪರ್ಶಿಸದೇ ನಿಂತಿರುವ ದೇವತೆಗಳನ್ನು ಅವಳು ನೋಡಿದಳು.
03054024a ಚಾಯಾದ್ವಿತೀಯೋ ಮ್ಲಾನಸ್ರಗ್ರಜಃಸ್ವೇದಸಮನ್ವಿತಃ|
03054024c ಭೂಮಿಷ್ಠೋ ನೈಷಧಶ್ಚೈವ ನಿಮೇಷೇಣ ಚ ಸೂಚಿತಃ||
ಮತ್ತು ನಲನು ತನ್ನ ನೆರಳಿನ ಮೂಲಕ, ಮಲಿನಮಾಲೆಯಿಂದ, ಬೆವರು ಮತ್ತು ಕೊಳೆಯಿಂದ, ಕಣ್ಣುರೆಪ್ಪೆಗಳ ಮಿಡಿತದಿಂದ ಮತ್ತು ಭೂಮಿಯನ್ನು ಮೆಟ್ಟಿ ನಿಂತಿರುವುದರಿಂದ ಗುರುತಿಸಲ್ಪಟ್ಟನು.
03054025a ಸಾ ಸಮೀಕ್ಷ್ಯ ತತೋ ದೇವಾನ್ಪುಣ್ಯಶ್ಲೋಕಂ ಚ ಭಾರತ|
03054025c ನೈಷಧಂ ವರಯಾಮಾಸ ಭೈಮೀ ಧರ್ಮೇಣ ಭಾರತ||
ಭಾರತ! ಈಗ ಭೈಮಿಯು ದೇವತೆಗಳನ್ನು ಮತ್ತು ಪುಣ್ಯಶ್ಲೋಕನನ್ನು ನೋಡಬಹುದಾದುರಿಂದ ಧರ್ಮಪ್ರಕಾರವಾಗಿ ನೈಷಧನನ್ನು ವರಿಸಿದಳು.
03054026a ವಿಲಜ್ಜಮಾನಾ ವಸ್ತ್ರಾಂತೇ ಜಗ್ರಾಹಾಯತಲೋಚನಾ|
03054026c ಸ್ಕಂಧದೇಶೇಽಸೃಜಚ್ಚಾಸ್ಯ ಸ್ರಜಂ ಪರಮಶೋಭನಾಂ|
03054026e ವರಯಾಮಾಸ ಚೈವೈನಂ ಪತಿತ್ವೇ ವರವರ್ಣಿನೀ||
ಆ ವಿಲಜ್ಜಮಾನಿ ಆಯತಲೋಚನೆಯು ಅವನ ವಸ್ತ್ರದ ಅಂಚನ್ನು ಹಿಡಿದಳು ಮತ್ತು ಪರಮ ಶೋಭನೀಯ ಮಾಲೆಯನ್ನು ಅವನ ಸ್ಕಂಧದ ಮೇಲೆ ಹಾಕಿದಳು. ಹೀಗೆ ಆ ವರವರ್ಣಿನಿಯು ಅವನನ್ನೇ ತನ್ನ ಪತಿಯನ್ನಾಗಿ ವರಿಸಿದಳು.
03054027a ತತೋ ಹಾ ಹೇತಿ ಸಹಸಾ ಶಬ್ಧೋ ಮುಕ್ತೋ ನರಾಧಿಪೈಃ|
03054027c ದೇವೈರ್ಮಹರ್ಷಿಭಿಶ್ಚೈವ ಸಾಧು ಸಾಧ್ವಿತಿ ಭಾರತ|
03054027e ವಿಸ್ಮಿತೈರೀರಿತಃ ಶಬ್ಧಃ ಪ್ರಶಂಸದ್ಭಿರ್ನಲಂ ನೃಪಂ||
ಭಾರತ! ನೆರೆದಿದ್ದ ನರಾಧಿಪರೆಲ್ಲರೂ ಹಾಹಾಕಾರ ಮಾಡಿದರು, ಮತ್ತು ದೇವ-ಮಹರ್ಷಿಗಳು ವಿಸ್ಮಿತರಾಗಿ, ನೃಪ ನಲನನ್ನು ಪ್ರಶಂಸಿಸುತ್ತಾ, “ಸಾಧು! ಸಾಧು!” ಎಂದು ಉದ್ಗರಿಸಿದರು.
03054028a ವೃತೇ ತು ನೈಷಧೇ ಭೈಮ್ಯಾ ಲೋಕಪಾಲಾ ಮಹೌಜಸಃ|
03054028c ಪ್ರಹೃಷ್ಟಮನಸಃ ಸರ್ವೇ ನಲಾಯಾಷ್ಟೌ ವರಾನ್ದದುಃ||
ಮಹೌಜಸ ಲೋಕಪಾಲಕರು ಭೈಮ್ಯಳಿಂದ ವರಿಸಿಕೊಂಡ ನೈಷಧನ ಕುರಿತು ಪ್ರಹೃಷ್ಟಮನಸರಾಗಿ, ನಲನಿಗೆ ಒಟ್ಟು ಎಂಟು ವರಗಳನ್ನಿತ್ತರು.
03054029a ಪ್ರತ್ಯಕ್ಷದರ್ಶನಂ ಯಜ್ಞೇ ಗತಿಂ ಚಾನುತ್ತಮಾಂ ಶುಭಾಂ|
03054029c ನೈಷಧಾಯ ದದೌ ಶಕ್ರಃ ಪ್ರೀಯಮಾಣಃ ಶಚೀಪತಿಃ||
ಶಚೀಪತಿ ಶಕ್ರನು ಪ್ರೀತನಾಗಿ ನೈಷಧನಿಗೆ ಯಜ್ಞಗಳಲ್ಲಿ ತನ್ನ ಪ್ರತ್ಯಕ್ಷ್ಯದರ್ಶನದ ಮತ್ತು ನಡೆಯುವಲ್ಲೆಲ್ಲಾ ದಾರಿಯಲ್ಲಿ ವಿಘ್ನಬರದಂತೆ ವರವನ್ನಿತ್ತನು.
03054030a ಅಗ್ನಿರಾತ್ಮಭವಂ ಪ್ರಾದಾದ್ಯತ್ರ ವಾಂಚತಿ ನೈಷಧಃ|
03054030c ಲೋಕಾನಾತ್ಮಪ್ರಭಾಂಶ್ಚೈವ ದದೌ ತಸ್ಮೈ ಹುತಾಶನಃ||
ಹುತಾಶನನು ನೈಷಧನಿಗೆ ಬೇಕಾದಲ್ಲಿ ಅಗ್ನಿಯು ಸ್ವಯಂಭೂತನಾಗುವಹಾಗೆ, ಮತ್ತು ಅಗ್ನಿಯಿಂದ ಪ್ರಭಾವಿತ ಪ್ರದೇಶಗಳಿಗೆ ಪ್ರವೇಶಿಸಬಹುದೆಂಬ ವರವನ್ನಿತ್ತನು.
03054031a ಯಮಸ್ತ್ವನ್ನರಸಂ ಪ್ರಾದಾದ್ಧರ್ಮೇ ಚ ಪರಮಾಂ ಸ್ಥಿತಿಂ|
03054031c ಅಪಾಂಪತಿರಪಾಂ ಭಾವಂ ಯತ್ರ ವಾಂಚತಿ ನೈಷಧಃ||
03054032a ಸ್ರಜಂ ಚೋತ್ತಮಗಂಧಾಢ್ಯಾಂ ಸರ್ವೇ ಚ ಮಿಥುನಂ ದದುಃ|
03054032c ವರಾನೇವಂ ಪ್ರದಾಯಾಸ್ಯ ದೇವಾಸ್ತೇ ತ್ರಿದಿವಂ ಗತಾಃ||
ಯಮನು ಅನ್ನರಸವನ್ನೂ ಮತ್ತು ಧರ್ಮದಲ್ಲಿ ಪರಮಸ್ಥಿತಿಯನ್ನೂ ನೀಡಿದನು. ಅಪಾಂಪತಿಯು ನೈಷಧನು ಬಯಸಿದಲ್ಲಿ ಜಲವು ಇರುವಂತೆ, ಮತ್ತು ಸುಗಂಧದ ಉತ್ತಮ ಮಾಲೆಯನ್ನಿತ್ತನು. ಸರ್ವರೂ ಸೇರಿ ಅವನಿಗೆ ಅವಳಿ ಮಕ್ಕಳನ್ನು ಕೊಟ್ಟರು. ಈ ರೀತಿ ವರಗಳನ್ನಿತ್ತು ದೇವತೆಗಳು ತ್ರಿದಿವಕ್ಕೆ ತೆರಳಿದರು.
03054033a ಪಾರ್ಥಿವಾಶ್ಚಾನುಭೂಯಾಸ್ಯಾ ವಿವಾಹಂ ವಿಸ್ಮಯಾನ್ವಿತಾಃ|
03054033c ದಮಯಂತ್ಯಾಃ ಪ್ರಮುದಿತಾಃ ಪ್ರತಿಜಗ್ಮುರ್ಯಥಾಗತಂ||
ವಿವಾಹವನ್ನು ನೋಡಿದ ಪಾರ್ಥಿವರೆಲ್ಲರೂ ವಿಸ್ಮಯಾನ್ವಿತರಾಗಿ, ದಮಯಂತಿಯ ಸಲುವಾಗಿ ಸಂತೋಷಗೊಂಡು, ಬಂದ ದಾರಿಯಲ್ಲಿಯೇ ಹಿಂತೆರಳಿದರು.
03054034a ಅವಾಪ್ಯ ನಾರೀರತ್ನಂ ತತ್ಪುಣ್ಯಶ್ಲೋಕೋಽಪಿ ಪಾರ್ಥಿವಃ|
03054034c ರೇಮೇ ಸಹ ತಯಾ ರಾಜಾ ಶಚ್ಯೇವ ಬಲವೃತ್ರಹಾ||
ಪಾರ್ಥಿವ ಪುಣ್ಯಶ್ಲೋಕನೂ ಕೂಡ ನಾರೀರತ್ನವನ್ನು ಹೊಂದಿ, ಬಲವೃತ್ರಹನು ಶಚಿಯೊಂದಿಗೆ ರಮಿಸುವಹಾಗೆ ಅವಳೊಂದಿಗೆ ರಮಿಸಿದನು.
03054035a ಅತೀವ ಮುದಿತೋ ರಾಜಾ ಭ್ರಾಜಮಾನೋಽಮ್ಶುಮಾನಿವ|
03054035c ಅರಂಜಯತ್ಪ್ರಜಾ ವೀರೋ ಧರ್ಮೇಣ ಪರಿಪಾಲಯನ್||
ಅತೀವ ಮುದಿತನಾದ ವೀರ ರಾಜನು ಹೊಳೆಯುತ್ತಿರುವ ಅಂಶುಮಾನನಂತೆ ಧರ್ಮದಲ್ಲಿ ರಂಜಿಸುತ್ತಾ ಪ್ರಜೆಗಳನ್ನು ಪರಿಪಾಲಿಸಿದನು.
03054036a ಈಜೇ ಚಾಪ್ಯಶ್ವಮೇಧೇನ ಯಯಾತಿರಿವ ನಾಹುಷಃ|
03054036c ಅನ್ಯೈಶ್ಚ ಕ್ರತುಭಿರ್ಧೀಮಾನ್ಬಹುಭಿಶ್ಚಾಪ್ತದಕ್ಷಿಣೈಃ||
ನಾಹುಷ ಯಯಾತಿಯಂತೆ ಅಶ್ವಮೇಧ ಮತ್ತು ಇನ್ನೂ ಇತರ, ಬಹಳಷ್ಟು ಆಪ್ತದಕ್ಷಿಣೆಗಳನ್ನೊಡಗೂಡಿದ ಕ್ರತುಗಳನ್ನು ಆ ಧೀಮಂತನು ನೆರವೇರಿಸಿದನು.
03054037a ಪುನಶ್ಚ ರಮಣೀಯೇಷು ವನೇಷೂಪವನೇಷು ಚ|
03054037c ದಮಯಂತ್ಯಾ ಸಹ ನಲೋ ವಿಜಹಾರಾಮರೋಪಮಃ||
ಅಮರನಂತೆ ನಲನು ದಮಯಂತಿಯ ಸಹಿತ ಪುನಃ ಪುನಃ ರಮಣೀಯ ವನ-ಉಪವನಗಳಲ್ಲಿ ವಿಹರಿಸಿದನು.
03054038a ಏವಂ ಸ ಯಜಮಾನಶ್ಚ ವಿಹರಂಶ್ಚ ನರಾಧಿಪಃ|
03054038c ರರಕ್ಷ ವಸುಸಂಪೂರ್ಣಾಂ ವಸುಧಾಂ ವಸುಧಾಧಿಪಃ||
ಹೀಗೆ ಯಜ್ಞಗಳನ್ನು ನಡೆಸುತ್ತಾ ಮತ್ತು ವಿಹರಿಸುತ್ತಾ ನರಾಧಿಪ ವಸುಧಾಧಿಪನು ವಸುಸಂಫುರ್ಣ ವಸುಧೆಯನ್ನು ರಕ್ಷಿಸುತ್ತಿದ್ದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀಸ್ವಯಂವರೇ ಚತುಷ್ಪಂಚಾಶತ್ತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತೀಸ್ವಯಂವರ ಎನ್ನುವ ಐವತ್ತ್ನಾಲ್ಕನೆಯ ಅಧ್ಯಾಯವು.
