Aranyaka Parva: Chapter 45

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೪೫

ಇಂದ್ರನ ಅರಮನೆಯಲ್ಲಿ ಅರ್ಜುನನ ವಾಸ

ಪಾಂಡವನು ಅಸ್ತ್ರಗಳನ್ನೂ, ಗಂಧರ್ವ ಚಿತ್ರಸೇನನಿಂದ ಸಂಗೀತ ವಾದ್ಯಗಳನ್ನೂ ಕಲಿತುಕೊಂಡಿದುದು (೧-೮). ಮಹರ್ಷಿ ಲೋಮಶನು ಇಂದ್ರನೊಂದಿಗೆ ಸಿಂಹಾಸನದಲ್ಲಿ ಕುಳಿತಿದ್ದ ಅರ್ಜುನನನ್ನು ನೋಡಿ ವಿಸ್ಮಿತನಾದುದು (೯-೧೪). ಅರ್ಜುನನು ಯಾರೆಂದು ಇಂದ್ರನು ಲೋಮಶನಿಗೆ ಪರಿಚಯಿಸಿದುದು (೧೫-೩೨). ಲೋಮಶನು ಭೂಮಿಗೆ ಹೋಗಿ ಯುಧಿಷ್ಠಿರನನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಬೇಕೆಂದು ಇಂದ್ರನು ಹೇಳಿದುದು (೩೩-೩೮).

03045001 ವೈಶಂಪಾಯನ ಉವಾಚ|

03045001a ತತೋ ದೇವಾಃ ಸಗಂಧರ್ವಾಃ ಸಮಾದಾಯಾರ್ಘ್ಯಮುತ್ತಮಂ|

03045001c ಶಕ್ರಸ್ಯ ಮತಮಾಜ್ಞಾಯ ಪಾರ್ಥಮಾನರ್ಚುರಂಜಸಾ||

ವೈಶಂಪಾಯನನು ಹೇಳಿದನು: “ಶಕ್ರನ ಇಂಗಿತವನ್ನು ತಿಳಿದ ಗಂಧರ್ವರೂ ಕೂಡಿ ದೇವತೆಗಳು ಉತ್ತಮ ಅರ್ಘ್ಯವನ್ನು ಸಿದ್ಧಪಡಿಸಿ ಪಾರ್ಥನನ್ನು ಯಥಾವತ್ತಾಗಿ ಅರ್ಚಿಸಿದರು.

03045002a ಪಾದ್ಯಮಾಚಮನೀಯಂ ಚ ಪ್ರತಿಗ್ರಾಹ್ಯ ನೃಪಾತ್ಮಜಂ|

03045002c ಪ್ರವೇಶಯಾಮಾಸುರಥೋ ಪುರಂದರನಿವೇಶನಂ||

ನೃಪತಾತ್ಮಜನಿಗೆ ಪಾದ್ಯ ಆಚಮನೀಯಗಳನ್ನು ನೀಡಿ ಪುರಂದರನ ಅರಮನೆಯನ್ನು ಪ್ರವೇಶಿಸಲು ಸಹಾಯಮಾಡಿದರು.

03045003a ಏವಂ ಸಂಪೂಜಿತೋ ಜಿಷ್ಣುರುವಾಸ ಭವನೇ ಪಿತುಃ|

03045003c ಉಪಶಿಕ್ಷನ್ಮಹಾಸ್ತ್ರಾಣಿ ಸಸಂಹಾರಾಣಿ ಪಾಂಡವಃ||

ಈ ರೀತಿ ಸಂಪೂಜಿತನಾಗಿ ತನ್ನ ತಂದೆಯ ಅರಮನೆಯಲ್ಲಿ ಎಲ್ಲ ಮಹಾಸ್ತ್ರಗಳನ್ನೂ ಅವುಗಳನ್ನು ಹಿಂತೆಗೆದುಕೊಳ್ಳುವ ವಿಧಾನಗಳ ಜೊತೆಗೆ ಕಲಿಯುತ್ತಾ ಜಿಷ್ಣುವು ವಾಸಿಸಿದನು.

03045004a ಶಕ್ರಸ್ಯ ಹಸ್ತಾದ್ದಯಿತಂ ವಜ್ರಮಸ್ತ್ರಂ ದುರುತ್ಸಹಂ|

03045004c ಅಶನೀಶ್ಚ ಮಹಾನಾದಾ ಮೇಘಬರ್ಹಿಣಲಕ್ಷಣಾಃ||

ಶಕ್ರನ ಕೈಯಿಂದ ಅವನಿಗೆ ಪ್ರಿಯವಾದ ದುರುತ್ಸಹ ವಜ್ರಾಸ್ತ್ರವನ್ನೂ, ಅಕಾಲದಲ್ಲಿಯೂ ಮಹಾನಾದವನ್ನುಂಟುಮಾಡುವ ಸಿಡಿಲುಗಳನ್ನೂ, ನವಿಲು ನೃತ್ಯವಾಡಲು ಪ್ರಚೋದಿಸುವ ಮೇಘಗಳ ನಿರ್ಮಾಣ ಮತ್ತು ನಿವಾರಣ ವಿದ್ಯೆಗಳನ್ನೂ ಕಲಿತುಕೊಂಡನು.

03045005a ಗೃಹೀತಾಸ್ತ್ರಸ್ತು ಕೌಂತೇಯೋ ಭ್ರಾತೄನ್ಸಸ್ಮಾರ ಪಾಂಡವಃ|

03045005c ಪುರಂದರನಿಯೋಗಾಚ್ಚ ಪಂಚಾಬ್ದಮವಸತ್ಸುಖೀ||

ಆ ಅಸ್ತ್ರಗಳನ್ನು ಕಲಿತುಕೊಂಡ ನಂತರ ಕೌಂತೇಯ ಪಾಂಡವನು ತನ್ನ ಸಹೋದರರನ್ನು ನೆನಪಿಸಿಕೊಂದನು. ಆದರೂ ಪುರಂದರನ ನಿಯೋಗದಂತೆ ಅಲ್ಲಿ ಅವನು ಸುಖಿಯಾಗಿ ಐದು ವರ್ಷಗಳು ವಾಸಿಸಿದನು.

03045006a ತತಃ ಶಕ್ರೋಽಬ್ರವೀತ್ಪಾರ್ಥಂ ಕೃತಾಸ್ತ್ರಂ ಕಾಲ ಆಗತೇ|

03045006c ನೃತ್ತಂ ಗೀತಂ ಚ ಕೌಂತೇಯ ಚಿತ್ರಸೇನಾದವಾಪ್ನುಹಿ||

03045007a ವಾದಿತ್ರಂ ದೇವವಿಹಿತಂ ನೃಲೋಕೇ ಯನ್ನ ವಿದ್ಯತೇ|

03045007c ತದರ್ಜಯಸ್ವ ಕೌಂತೇಯ ಶ್ರೇಯೋ ವೈ ತೇ ಭವಿಷ್ಯತಿ||

ಪಾರ್ಥನು ಅಸ್ತ್ರಗಳನ್ನು ಕಲಿತುಕೊಂಡ ನಂತರ, ಸಮಯ ಬಂದಾಗ, ಶಕ್ರನು ಹೇಳಿದನು: “ಕೌಂತೇಯ! ಚಿತ್ರಸೇನನಿಂದ ನೃತ್ಯ ಗೀತಗಳನ್ನು ಮತ್ತು ಮರ್ತ್ಯಲೋಕದಲ್ಲಿ ತಿಳಿಯದೇ ಇದ್ದ ದೇವತೆಗಳ ವಾದ್ಯಸಂಗೀತಗಳನ್ನು ಕಲಿತುಕೋ. ಕೌಂತೇಯ! ಇದನ್ನು ಪಡೆದರೆ ನಿನಗೆ ಮುಂದೆ ಶ್ರೇಯಸ್ಸುಂಟಾಗುತ್ತದೆ.”

03045008a ಸಖಾಯಂ ಪ್ರದದೌ ಚಾಸ್ಯ ಚಿತ್ರಸೇನಂ ಪುರಂದರಃ|

03045008c ಸ ತೇನ ಸಹ ಸಂಗಮ್ಯ ರೇಮೇ ಪಾರ್ಥೋ ನಿರಾಮಯಃ[1]||

ಪುರಂದರನು ಚಿತ್ರಸೇನನನ್ನು ಅವನಿಗೆ ಸಖನಾಗಿ ಕೊಟ್ಟನು ಮತ್ತು ಪಾರ್ಥನು ಅವನನ್ನು ಭೇಟಿಯಾಗಿ ನಿರಾಮಯನಾಗಿ ರಮಿಸಿದನು.

03045009a ಕದಾ ಚಿದಟಮಾನಸ್ತು ಮಹರ್ಷಿರುತ ಲೋಮಶಃ|

03045009c ಜಗಾಮ ಶಕ್ರಭವನಂ ಪುರಂದರದಿದೃಕ್ಷಯಾ||

ಒಮ್ಮೆ ಮಹರ್ಷಿ ಲೋಮಶನು ತಿರುಗಾಡುತ್ತಾ ಪುರಂದರನನ್ನು ನೋಡಲೋಸುಗ ಶಕ್ರಭವನಕ್ಕೆ ಬಂದನು.

03045010a ಸ ಸಮೇತ್ಯ ನಮಸ್ಕೃತ್ಯ ದೇವರಾಜಂ ಮಹಾಮುನಿಃ|

03045010c ದದರ್ಶಾರ್ಧಾಸನಗತಂ ಪಾಂಡವಂ ವಾಸವಸ್ಯ ಹ||

ಆ ಮಹಾಮುನಿಯು ದೇವರಾಜನನ್ನು ಭೇಟಿಯಾಗಿ ನಮಸ್ಕರಿಸಲು ಅಲ್ಲಿ ವಾಸವನೊಂದಿಗೆ ಆಸನದ ಅರ್ಧಭಾಗದಲ್ಲಿ ಕುಳಿತಿದ್ದ ಪಾಂಡವನನ್ನು ಕಂಡನು.

03045011a ತತಃ ಶಕ್ರಾಭ್ಯನುಜ್ಞಾತ ಆಸನೇ ವಿಷ್ಟರೋತ್ತರೇ|

03045011c ನಿಷಸಾದ ದ್ವಿಜಶ್ರೇಷ್ಠಃ ಪೂಜ್ಯಮಾನೋ ಮಹರ್ಷಿಭಿಃ||

ಆಗ ಶಕ್ರನ ಅನುಜ್ಞೆಯಂತೆ ಪೂಜಿಸಲ್ಪಟ್ಟ ಆ ದ್ವಿಜಶ್ರೇಷ್ಠ ಮಹಾ‌ಋಷಿಯು ದರ್ಬಾಸನಯುಕ್ತ ಆಸನದ ಮೇಲೆ ಕುಳಿತುಕೊಂಡನು.

03045012a ತಸ್ಯ ದೃಷ್ಟ್ವಾಭವದ್ಬುದ್ಧಿಃ ಪಾರ್ಥಮಿಂದ್ರಾಸನೇ ಸ್ಥಿತಂ|

03045012c ಕಥಂ ನು ಕ್ಷತ್ರಿಯಃ ಪಾರ್ಥಃ ಶಕ್ರಾಸನಮವಾಪ್ತವಾನ್||

ಇಂದ್ರಾಸನದಲ್ಲಿ ಕುಳಿತಿದ್ದ ಪಾರ್ಥನನ್ನು ನೋಡಿ ಅವನ ಮನಸ್ಸಿನಲ್ಲಿ ಒಂದು ವಿಚಾರವು ಬಂದಿತು: “ಕ್ಷತ್ರಿಯ ಪಾರ್ಥನು ಹೇಗೆ ಇಂದ್ರನ ಆಸನವನ್ನು ಪಡೆದನು?

03045013a ಕಿಂ ತ್ವಸ್ಯ ಸುಕೃತಂ ಕರ್ಮ ಲೋಕಾ ವಾ ಕೇ ವಿನಿರ್ಜಿತಾಃ|

03045013c ಯ ಏವಮುಪಸಂಪ್ರಾಪ್ತಃ ಸ್ಥಾನಂ ದೇವನಮಸ್ಕೃತಂ||

ಅವನ ಯಾವ ಸುಕೃತ ಕರ್ಮದಿಂದಾಗಿ ಈ ಲೋಕಗಳನ್ನು ಗೆದ್ದಿರುವನು ಮತ್ತು ಈ ದೇವನಮಸ್ಕೃತ ಸ್ಥಾನವನ್ನು ಪಡೆದಿದ್ದಾನೆ?”

03045014a ತಸ್ಯ ವಿಜ್ಞಾಯ ಸಂಕಲ್ಪಂ ಶಕ್ರೋ ವೃತ್ರನಿಷೂದನಃ|

03045014c ಲೋಮಶಂ ಪ್ರಹಸನ್ವಾಕ್ಯಮಿದಮಾಹ ಶಚೀಪತಿಃ||

03045015a ಬ್ರಹ್ಮರ್ಷೇ ಶ್ರೂಯತಾಂ ಯತ್ತೇ ಮನಸೈತದ್ವಿವಕ್ಷಿತಂ|

03045015c ನಾಯಂ ಕೇವಲಮರ್ತ್ಯೋ ವೈ ಕ್ಷತ್ರಿಯತ್ವಮುಪಾಗತಃ||

ವೃತ್ರನಿಷೂದನ ಶಚೀಪತಿ ಶಕ್ರನು ಅವನ ವಿಚಾರವನ್ನು ತಿಳಿದು ಮುಗುಳ್ನಗುತ್ತಾ ಲೋಮಶನಿಗೆ ಈ ಮಾತನ್ನಾಡಿದನು: “ಬ್ರಹ್ಮರ್ಷೇ! ನಿನ್ನ ಮನಸ್ಸಿನಲ್ಲಿರುವುದಕ್ಕೆ ಉತ್ತರವನ್ನು ಕೇಳು. ಇವನು ಕ್ಷತ್ರಿಯನಿಗೆ ಹುಟ್ಟಿದ ಕೇವಲ ಮನುಷ್ಯನಲ್ಲ.

03045016a ಮಹರ್ಷೇ ಮಮ ಪುತ್ರೋಽಯಂ ಕುಂತ್ಯಾಂ ಜಾತೋ ಮಹಾಭುಜಃ|

03045016c ಅಸ್ತ್ರಹೇತೋರಿಹ ಪ್ರಾಪ್ತಃ ಕಸ್ಮಾಚ್ಚಿತ್ಕಾರಣಾಂತರಾತ್||

ಮಹರ್ಷೇ! ಈ ಮಹಾಭುಜನು ನನ್ನ ಪುತ್ರನಾಗಿ ಕುಂತಿಯಲ್ಲಿ ಜನಿಸಿದನು ಮತ್ತು ಕಾರಣಾಂತರದಿಂದ ಅಸ್ತ್ರಗಳನ್ನು ಪಡೆಯಲು ಇಲ್ಲಿಗೆ ಬಂದಿದ್ದಾನೆ.

03045017a ಅಹೋ ನೈನಂ ಭವಾನ್ವೇತ್ತಿ ಪುರಾಣಮೃಷಿಸತ್ತಮಂ|

03045017c ಶೃಣು ಮೇ ವದತೋ ಬ್ರಹ್ಮನ್ಯೋಽಯಂ ಯಚ್ಚಾಸ್ಯ ಕಾರಣಂ||

ಈ ಪುರಾಣ ಋಷಿಸತ್ತಮನನನ್ನು ನೀನು ತಿಳಿದಿಲ್ಲವೇ? ಹಾಗಾದರೆ ಬ್ರಹ್ಮನ್! ಇವನು ಯಾರು ಮತ್ತು ಇವನ ಉದ್ದೇಶವೇನು ಎನ್ನುವುದನ್ನು ನಾನು ಹೇಳುತ್ತೇನೆ. ಕೇಳು.

03045018a ನರನಾರಾಯಣೌ ಯೌ ತೌ ಪುರಾಣಾವೃಷಿಸತ್ತಮೌ|

03045018c ತಾವಿಮಾವಭಿಜಾನೀಹಿ ಹೃಷೀಕೇಶಧನಂಜಯೌ||

ಪುರಾಣ ಋಷಿಸತ್ತಮರಾದ ನರ ಮತ್ತು ನಾರಾಯಣರೀರ್ವರು ಈಗ ಧನಂಜಯ ಮತ್ತು ಹೃಷೀಕೇಶರಾಗಿದ್ದಾರೆ ಎಂದು ತಿಳಿ.

03045019a ಯನ್ನ ಶಕ್ಯಂ ಸುರೈರ್ದ್ರಷ್ಟುಮೃಷಿಭಿರ್ವಾ ಮಹಾತ್ಮಭಿಃ|

03045019c ತದಾಶ್ರಮಪದಂ ಪುಣ್ಯಂ ಬದರೀ ನಾಮ ವಿಶ್ರುತಂ||

03045020a ಸ ನಿವಾಸೋಽಭವದ್ವಿಪ್ರ ವಿಷ್ಣೋರ್ಜಿಷ್ಣೋಸ್ತಥೈವ ಚ|

03045020c ಯತಃ ಪ್ರವವೃತೇ ಗಂಗಾ ಸಿದ್ಧಚಾರಣಸೇವಿತಾ||

ಮಹಾತ್ಮರು ಮತ್ತು ಸುರರಿಗೂ ನೋಡಲು ದುರ್ಲಭವಾದ ಪುಣ್ಯ ಬದರೀ ಎಂಬ ಹೆಸರಿನಿಂದ ವಿಶ್ರುತ ಆ ಆಶ್ರಮಪದದಲ್ಲಿ ವಿಪ್ರ ವಿಷ್ಣು ಮತ್ತು ಜಿಷ್ಣು ಇಬ್ಬರೂ ವಾಸಿಸುತ್ತಿದ್ದರು. ಅಲ್ಲಿಂದಲೇ ಸಿದ್ಧಚಾರಣಸೇವಿತ ಗಂಗೆಯು ಹರಿಯುತ್ತದೆ.

03045021a ತೌ ಮನ್ನಿಯೋಗಾದ್ಬ್ರಹ್ಮರ್ಷೇ ಕ್ಷಿತೌ ಜಾತೌ ಮಹಾದ್ಯುತೀ|

03045021c ಭೂಮೇರ್ಭಾರಾವತರಣಂ ಮಹಾವೀರ್ಯೌ ಕರಿಷ್ಯತಃ||

ಬ್ರಹ್ಮರ್ಷೇ! ನನ್ನ ನಿಯೋಗದಿಂದ ಈ ಮಹಾದ್ಯುತಿ ಮಹಾವೀರರಿಬ್ಬರೂ ಭೂಮಿಗೆ ಹೋಗಿ ಭೂಮಿಯ ಭಾರವನ್ನು ಕಡಿಮೆಮಾಡಲಿದ್ದಾರೆ.

03045022a ಉದ್ವೃತ್ತಾ ಹ್ಯಸುರಾಃ ಕೇ ಚಿನ್ನಿವಾತಕವಚಾ ಇತಿ|

03045022c ವಿಪ್ರಿಯೇಷು ಸ್ಥಿತಾಸ್ಮಾಕಂ ವರದಾನೇನ ಮೋಹಿತಾಃ||

ನಿವಾತಕವಚರೆನ್ನುವ ಕೆಲವು ಅಸುರರು ವರದಾನದಿಂದ ಮೋಹಿತರಾಗಿ ನಮ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.

03045023a ತರ್ಕಯಂತೇ ಸುರಾನ್ ಹಂತುಂ ಬಲದರ್ಪಸಮನ್ವಿತಾಃ|

03045023c ದೇವಾನ್ನ ಗಣಯಂತೇ ಚ ತಥಾ ದತ್ತವರಾ ಹಿ ತೇ||

03045024a ಪಾತಾಲವಾಸಿನೋ ರೌದ್ರಾ ದನೋಃ ಪುತ್ರಾ ಮಹಾಬಲಾಃ|

03045024c ಸರ್ವೇ ದೇವನಿಕಾಯಾ ಹಿ ನಾಲಂ ಯೋಧಯಿತುಂ ಸ್ಮ ತಾನ್||

ಬಲದರ್ಪದಿಂದ ಕೂಡಿದ ಅವರು ಸುರರನ್ನು ಸಂಹರಿಸಲು ಯೋಚಿಸುತ್ತಿದ್ದಾರೆ. ಮತ್ತು ಕೊಟ್ಟ ವರದಿಂದಾಗಿ ಅವರು ದೇವತೆಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ದನುವಿನ ಪುತ್ರರಾದ ಆ ಮಹಾಬಲಶಾಲಿ ರೌದ್ರರು ಪಾತಾಲದಲ್ಲಿ ವಾಸಿಸುತ್ತಿದ್ದು ದೇವತೆಗಳ ಎಲ್ಲ ಸೇನೆಯೂ ಅವರೊಂದಿಗೆ ಹೋರಾಡಲು ಅಸಮರ್ಥವಾಗಿವೆ. 

03045025a ಯೋಽಸೌ ಭೂಮಿಗತಃ ಶ್ರೀಮಾನ್ವಿಷ್ಣುರ್ಮಧುನಿಷೂದನಃ|

03045025c ಕಪಿಲೋ ನಾಮ ದೇವೋಽಸೌ ಭಗವಾನಜಿತೋ ಹರಿಃ||

03045026a ಯೇನ ಪೂರ್ವಂ ಮಹಾತ್ಮಾನಃ ಖನಮಾನಾ ರಸಾತಲಂ|

03045026c ದರ್ಶನಾದೇವ ನಿಹತಾಃ ಸಗರಸ್ಯಾತ್ಮಜಾ ವಿಭೋ||

03045027a ತೇನ ಕಾರ್ಯಂ ಮಹತ್ಕಾರ್ಯಮಸ್ಮಾಕಂ ದ್ವಿಜಸತ್ತಮ|

03045027c ಪಾರ್ಥೇನ ಚ ಮಹಾಯುದ್ಧೇ ಸಮೇತಾಭ್ಯಾಮಸಂಶಯಂ||

ದ್ವಿಜಸತ್ತಮ! ಭೂಮಿಗೆ ಹೋಗಿರುವ, ಮಧುನಿಷೂದನ, ಶ್ರೀಮಾನ್, ವಿಷ್ಣು, ಹಿಂದೆ ರಸಾತಲವನ್ನು ಅಗೆಯುತ್ತಿದ್ದ ಸಗರನ ಮಕ್ಕಳನ್ನು ನೋಟಮಾತ್ರದಿಂದ ಭಸ್ಮಮಾಡಿದ ಕಪಿಲನಾಮದಿಂದ ಇದ್ದ ಭಗವಾನ್ ದೇವ ಅಜಿತ ಹರಿಯು ಪಾರ್ಥನೊಂದಿಗೆ ಮಹಾಯುದ್ಧದಲ್ಲಿ ನಮ್ಮ ಈ ಮಹಾಕಾರ್ಯವನ್ನು ಮಾಡಿಕೊಡುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03045028a ಅಯಂ ತೇಷಾಂ ಸಮಸ್ತಾನಾಂ ಶಕ್ತಃ ಪ್ರತಿಸಮಾಸನೇ|

03045028c ತಾನ್ನಿಹತ್ಯ ರಣೇ ಶೂರಃ ಪುನರ್ಯಾಸ್ಯತಿ ಮಾನುಷಾನ್||

ಅವರಿಗೆ ಸರಿಸಮಾನನಾದ ಇವನು ಅವರೆಲ್ಲರನ್ನೂ ಸಂಹರಿಸಬಲ್ಲ, ಮತ್ತು ರಣದಲ್ಲಿ ಅವರನ್ನು ಸಂಹರಿಸಿ ಈ ಶೂರನು ಪುನಃ ಮನುಷ್ಯರಲ್ಲಿಗೆ ಹೋಗುತ್ತಾನೆ.

03045029a ಭವಾಂಶ್ಚಾಸ್ಮನ್ನಿಯೋಗೇನ ಯಾತು ತಾವನ್ಮಹೀತಲಂ|

03045029c ಕಾಮ್ಯಕೇ ದ್ರಕ್ಷ್ಯಸೇ ವೀರಂ ನಿವಸಂತಂ ಯುಧಿಷ್ಠಿರಂ||

ನನ್ನ ನಿಯೋಗದಿಂದ ನೀನು ಮಹೀತಲಕ್ಕೆ ಹೋಗಿ ಕಾಮ್ಯಕವನದಲ್ಲಿ ವಾಸಿಸುತ್ತಿರುವ ವೀರ ಯುಧಿಷ್ಠಿರನನ್ನು ಕಾಣಬೇಕು.

03045030a ಸ ವಾಚ್ಯೋ ಮಮ ಸಂದೇಶಾದ್ಧರ್ಮಾತ್ಮಾ ಸತ್ಯಸಂಗರಃ|

03045030c ನೋತ್ಕಂಠಾ ಫಲ್ಗುನೇ ಕಾರ್ಯಾ ಕೃತಾಸ್ತ್ರಃ ಶೀಘ್ರಮೇಷ್ಯತಿ||

ಆ ಸತ್ಯಸಂಗರ ಧರ್ಮಾತ್ಮನಿಗೆ ನನ್ನ ಈ ಮಾತುಗಳನ್ನು ತಿಳಿಸಬೇಕು: “ಫಾಲ್ಗುನನಿಲ್ಲವೆಂದು ಬೇಸರಿಸಬೇಡ! ಅವನು ಅಸ್ತ್ರಗಳನ್ನು ಪಡೆದು ತನ್ನ ಕೆಲಸವನ್ನು ಪೂರೈಸಿ ಶೀಘ್ರದಲ್ಲಿಯೇ ಹಿಂದಿರುಗುತ್ತಾನೆ.

03045031a ನಾಶುದ್ಧಬಾಹುವೀರ್ಯೇಣ ನಾಕೃತಾಸ್ತ್ರೇಣ ವಾ ರಣೇ|

03045031c ಭೀಷ್ಮದ್ರೋಣಾದಯೋ ಯುದ್ಧೇ ಶಕ್ಯಾಃ ಪ್ರತಿಸಮಾಸಿತುಂ||

ತನ್ನ ಬಾಹುವೀರ್ಯವನ್ನು ಶುದ್ಧಪಡಿಸಿಕೊಳ್ಳದೇ ಮತ್ತು ಅಸ್ತ್ರಗಳ ಪ್ರವೀಣತೆಯನ್ನು ಪಡೆಯದೇ ಅವನು ರಣದಲ್ಲಿ ಭೀಷ್ಮ ದ್ರೋಣಾದಿಗಳನ್ನು ಎದುರಿಸಿ ಯುದ್ಧಮಾಡಲು ಶಕ್ಯನಿಲ್ಲ.

03045032a ಗೃಹೀತಾಸ್ತ್ರೋ ಗುಡಾಕೇಶೋ ಮಹಾಬಾಹುರ್ಮಹಾಮನಾಃ|

03045032c ನೃತ್ತವಾದಿತ್ರಗೀತಾನಾಂ ದಿವ್ಯಾನಾಂ ಪಾರಮೇಯಿವಾನ್||

ಮಹಾಬಾಹು ಮಹಾತ್ಮ ಗುಡಾಕೇಶನು ಅಸ್ತ್ರಗಳನ್ನು ಕಲಿತುಕೊಂಡಿದ್ದಾನೆ ಮತ್ತು ದಿವ್ಯ ನೃತ್ಯ ವಾದ್ಯ ಗೀತಗಳಲ್ಲಿಯೂ ಪರಿಣತಿಯನ್ನು ಪಡೆದುಕೊಳ್ಳುತ್ತಿದ್ದಾನೆ.

03045033a ಭವಾನಪಿ ವಿವಿಕ್ತಾನಿ ತೀರ್ಥಾನಿ ಮನುಜೇಶ್ವರ|

03045033c ಭ್ರಾತೃಭಿಃ ಸಹಿತಃ ಸರ್ವೈರ್ದ್ರಷ್ಟುಮರ್ಹತ್ಯರಿಂದಮ||

ಅರಿಂದಮ! ಮನುಜೇಶ್ಚರ! ನೀನಾದರೂ ನಿನ್ನ ಭ್ರಾತೃಗಳೊಂದಿಗೆ ಎಲ್ಲ ವಿವಿಧ ತೀರ್ಥಗಳನ್ನೂ ಭೇಟಿಮಾಡಬೇಕು.

03045034a ತೀರ್ಥೇಷ್ವಾಪ್ಲುತ್ಯ ಪುಣ್ಯೇಷು ವಿಪಾಪ್ಮಾ ವಿಗತಜ್ವರಃ|

03045034c ರಾಜ್ಯಂ ಭೋಕ್ಷ್ಯಸಿ ರಾಜೇಂದ್ರ ಸುಖೀ ವಿಗತಕಲ್ಮಷಃ||

ತೀರ್ಥಗಳಲ್ಲಿ ಸ್ನಾನಮಾಡಿ ನೀನು ಪುಣ್ಯಗಳನ್ನು ಪಡೆದು ನಿನ್ನ ಚಿಂತೆಯನ್ನೂ ಕಳೆದುಕೊಳ್ಳುವೆ. ರಾಜೇಂದ್ರ! ನಿನ್ನ ಪಾಪಗಳನ್ನು ತೊಳೆದುಕೊಂಡು ರಾಜ್ಯವನ್ನು ಸುಖವಾಗಿ ಭೋಗಿಸುತ್ತೀಯೆ.”

03045035a ಭವಾಂಶ್ಚೈನಂ ದ್ವಿಜಶ್ರೇಷ್ಠ ಪರ್ಯಟಂತಂ ಮಹೀತಲೇ|

03045035c ತ್ರಾತುಮರ್ಹತಿ ವಿಪ್ರಾಗ್ರ್ಯ ತಪೋಬಲಸಮನ್ವಿತಃ||

ದ್ವಿಜಶ್ರೇಷ್ಠ! ವಿಪ್ರಾಗ್ರ್ಯ! ನೀನೂ ಕೂಡ ಮಹೀತಲದಲ್ಲಿ ತಿರುಗಾಡುತ್ತಿರುವಾಗ ಅವನನ್ನು ನಿನ್ನ ತಪೋಬಲದಿಂದ ಕಾಯಬೇಕಾಗುತ್ತದೆ.

03045036a ಗಿರಿದುರ್ಗೇಷು ಹಿ ಸದಾ ದೇಶೇಷು ವಿಷಮೇಷು ಚ|

03045036c ವಸಂತಿ ರಾಕ್ಷಸಾ ರೌದ್ರಾಸ್ತೇಭ್ಯೋ ರಕ್ಷೇತ್ಸದಾ ಭವಾನ್||

ಗಿರಿದುರ್ಗಗಳಲ್ಲಿ ಮತ್ತು ವಿಷಮ ಪ್ರದೇಶಗಳಲ್ಲಿ ಸದಾ ರೌದ್ರ ರಾಕ್ಷಸರು ವಾಸಿಸುತ್ತಿರುತ್ತಾರೆ, ನೀನು ಸದಾ ಅವರನ್ನು ಅವರಿಂದ ರಕ್ಷಿಸಬೇಕು.”

03045037a ಸ ತಥೇತಿ ಪ್ರತಿಜ್ಞಾಯ ಲೋಮಶಃ ಸುಮಹಾತಪಾಃ|

03045037c ಕಾಮ್ಯಕಂ ವನಮುದ್ದಿಶ್ಯ ಸಮುಪಾಯಾನ್ಮಹೀತಲಂ||

03045038a ದದರ್ಶ ತತ್ರ ಕೌಂತೇಯಂ ಧರ್ಮರಾಜಮರಿಂದಮಂ|

03045038c ತಾಪಸೈರ್ಭ್ರಾತೃಭಿಶ್ಚೈವ ಸರ್ವತಃ ಪರಿವಾರಿತಂ||

ಹಾಗೆಯೇ ಆಗಲೆಂದು ವಚನವನ್ನಿತ್ತು ಸುಮಹಾತಪ ಲೋಮಶನು ಮಹೀತಲವನ್ನು ಸೇರಿ ಕಾಮ್ಯಕ ವನಕ್ಕೆ ಬಂದು ಅಲ್ಲಿ ತಾಪಸರಿಂದಲೂ ಭ್ರಾತೃಗಳಿಂದಲೂ ಎಲ್ಲಕಡೆಯಿಂದಲೂ ಸುತ್ತುವರೆಯಲ್ಪಟ್ಟ ಅರಿಂದಮ ಕೌಂತೇಯ ಧರ್ಮರಾಜನನ್ನು ಕಂಡನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ಲೋಮಶಗಮನೇ ಪಂಚಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ಲೋಮಶಗಮನವೆಂಬ ನಲ್ವತ್ತೈದನೆಯ ಅಧ್ಯಾಯವು.

Related image

[1]ಗೋರಖಪುರ ಸಂಪುಟದಲ್ಲಿ ಈ ಶ್ಲೋಕದ ನಂತರ ಒಟ್ಟು ೮೨ ಶ್ಲೋಕಗಳಲ್ಲಿ ಅರ್ಜುನನಿಗೆ ಊರ್ವಶಿಯಿಂದಾದ ಶಾಪದ ವರ್ಣನೆಯಿದೆ. ಪುಣೆಯ ಸಂಪುಟದಲ್ಲಿರದ ಈ ಶ್ಲೋಕಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

Comments are closed.