ಸಭಾ ಪರ್ವ: ದ್ಯೂತ ಪರ್ವ
Contents
Toggle೫೮
ದ್ರೌಪದಿಯನ್ನು ಸೋತುದು
ಮುಂದಿನ ನಾಲ್ಕು ಪಣಗಳನ್ನೂ ಯುಧಿಷ್ಠಿರನು ಸೋತುದು (೧-೧೦). ಮುಂದಿನ ನಾಲ್ಕು ಪಣಗಳಾಗಿ ತಮ್ಮಂದಿರನ್ನೂ ಯುಧಿಷ್ಠಿರನು ಸೋತುದು (೧೧-೨೫). ಯುಧಿಷ್ಠಿರನು ತನ್ನನ್ನೂ, ದ್ರೌಪದಿಯನ್ನೂ ಪಣವಾಗಿಟ್ಟು ಸೋತುದು (೨೬-೪೩).
02058001 ಶಕುನಿರುವಾಚ|
02058001a ಬಹು ವಿತ್ತಂ ಪರಾಜೈಷೀಃ ಪಾಂಡವಾನಾಂ ಯುಧಿಷ್ಠಿರ|
02058001c ಆಚಕ್ಷ್ವ ವಿತ್ತಂ ಕೌಂತೇಯ ಯದಿ ತೇಽಸ್ತ್ಯಪರಾಜಿತಂ||
ಶಕುನಿಯು ಹೇಳಿದನು: “ಯುಧಿಷ್ಠಿರ! ಪಾಂಡವರ ಬಹಳಷ್ಟು ಸಂಪತ್ತನ್ನು ಸೋತಿದ್ದೀಯೆ. ಕೌಂತೇಯ! ಇನ್ನೂ ಸೋಲದೇ ಇದ್ದ ಸಂಪತ್ತು ಇದ್ದರೆ ಹೇಳು.”
02058002 ಯುಧಿಷ್ಠಿರ ಉವಾಚ|
02058002a ಮಮ ವಿತ್ತಮಸಂಖ್ಯೇಯಂ ಯದಹಂ ವೇದ ಸೌಬಲ|
02058002c ಅಥ ತ್ವಂ ಶಕುನೇ ಕಸ್ಮಾದ್ವಿತ್ತಂ ಸಮನುಪೃಚ್ಛಸಿ||
ಯುಧಿಷ್ಠಿರನು ಹೇಳಿದನು: “ಸೌಬಲ! ನನ್ನಲ್ಲಿ ಅಸಂಖ್ಯ ಸಂಪತ್ತಿದೆ ಎಂದು ತಿಳಿ. ಶಕುನಿ! ನನ್ನ ಸಂಪತ್ತಿನ ಕುರಿತು ನೀನೇಕೆ ಕೇಳುತ್ತಿದ್ದೀಯೆ?
02058003a ಅಯುತಂ ಪ್ರಯುತಂ ಚೈವ ಖರ್ವಂ ಪದ್ಮಂ ತಥಾರ್ಬುದಂ|
02058003c ಶಂಖಂ ಚೈವ ನಿಖರ್ವಂ ಚ ಸಮುದ್ರಂ ಚಾತ್ರ ಪಣ್ಯತಾಂ|
02058003e ಏತನ್ಮಮ ಧನಂ ರಾಜಂಸ್ತೇನ ದೀವ್ಯಾಮ್ಯಹಂ ತ್ವಯಾ||
ಪಣವಿಡಲು ಲೆಕ್ಕ ಮಾಡಲಾಗದಷ್ಟು, ತೂಕಮಾಡಲಾಗದಷ್ಟು, ಕೋಟಿಗಟ್ಟಲೆ, ಪದ್ಮಗಟ್ಟಲೆ, ಅರ್ಬುದಗಟ್ಟಲೆ, ಸಮುದ್ರದ ನೀರಿನ ಹನಿಗಳನ್ನು ಹೇಗೆ ಲೆಖ್ಕಮಾಡಲು ಅಸಾಧ್ಯವೋ ಅಷ್ಟು ಧನ ನನ್ನಲ್ಲಿದೆ. ರಾಜನ್! ಈ ನನ್ನ ಧನವನ್ನು ನಾನು ನಿನಗೆ ಕೊಡುತ್ತಿದ್ದೇನೆ.””
02058004 ವೈಶಂಪಾಯನ ಉವಾಚ|
02058004a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02058004c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058005 ಯುಧಿಷ್ಠಿರ ಉವಾಚ|
02058005a ಗವಾಶ್ವಂ ಬಹುಧೇನೂಕಮಸಂಖ್ಯೇಯಮಜಾವಿಕಂ|
02058005c ಯತ್ಕಿಂಚಿದನುವರ್ಣಾನಾಂ ಪ್ರಾಕ್ಸಿಂಧೋರಪಿ ಸೌಬಲ|
02058005e ಏತನ್ಮಮ ಧನಂ ರಾಜಂಸ್ತೇನ ದೀವ್ಯಾಮ್ಯಹಂ ತ್ವಯಾ||
ಯುಧಿಷ್ಠಿರನು ಹೇಳಿದನು: “ನನ್ನಲ್ಲಿ ಅಸಂಖ್ಯ ಹೆಚ್ಚು ಹಾಲನ್ನೀಯುವ ಗೋವುಗಳು, ಕುದುರೆಗಳು ಇವೆ. ಸಿಂಧುವಿನ ಪೂರ್ವಕ್ಕೆ ನಮ್ಮ ಬಣ್ಣದ ಜನರಲ್ಲಿರುವ ಎಲ್ಲವೂ ನನ್ನವೇ. ರಾಜನ್! ನನ್ನ ಈ ಧನವನ್ನೇ ನಿನಗೆ ನಾನು ನೀಡುತ್ತಿದ್ದೇನೆ.””
02058006 ವೈಶಂಪಾಯನ ಉವಾಚ|
02058006a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02058006c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058007 ಯುಧಿಷ್ಠಿರ ಉವಾಚ|
02058007a ಪುರಂ ಜನಪದೋ ಭೂಮಿರಬ್ರಾಹ್ಮಣಧನೈಃ ಸಹ|
02058007c ಅಬ್ರಾಹ್ಮಣಾಶ್ಚ ಪುರುಷಾ ರಾಜಂ ಶಿಷ್ಟಂ ಧನಂ ಮಮ|
02058007e ಏತದ್ರಾಜನ್ಧನಂ ಮಹ್ಯಂ ತೇನ ದೀವ್ಯಾಮ್ಯಹಂ ತ್ವಯಾ||
ಯುಧಿಷ್ಠಿರನು ಹೇಳಿದನು: “ರಾಜನ್! ಇನ್ನು ನನ್ನಲ್ಲಿ ಉಳಿದಿರುವ ಧನವೆಂದರೆ ನನ್ನ ನಗರ, ಜನಪದ, ಬ್ರಾಹ್ಮಣರದ್ದನ್ನು ಬಿಟ್ಟು ಉಳಿದ ಭೂಮಿ, ಬ್ರಾಹ್ಮಣರನ್ನು ಬಿಟ್ಟು ಉಳಿದ ನಾಗರೀಕರು. ರಾಜನ್! ನನ್ನ ಇವೆಲ್ಲವನ್ನೂ ನಿನಗೆ ನಾನು ಕೊಡುತ್ತಿದ್ದೇನೆ.””
02058008 ವೈಶಂಪಾಯನ ಉವಾಚ|
02058008a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02058008c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058009 ಯುಧಿಷ್ಠಿರ ಉವಾಚ|
02058009a ರಾಜಪುತ್ರಾ ಇಮೇ ರಾಜಂ ಶೋಭಂತೇ ಯೇನ ಭೂಷಿತಾಃ|
02058009c ಕುಂಡಲಾನಿ ಚ ನಿಷ್ಕಾಶ್ಚ ಸರ್ವಂ ಚಾಂಗವಿಭೂಷಣಂ|
02058009e ಏತನ್ಮಮ ಧನಂ ರಾಜಂಸ್ತೇನ ದೀವ್ಯಾಮ್ಯಹಂ ತ್ವಯಾ||
ಯುಧಿಷ್ಠಿರನು ಹೇಳಿದನು: “ರಾಜನ್! ಇಗೋ ರಾಜಪುತ್ರರು ಧರಿಸಿ ಶೋಭಿಸುತ್ತಿರುವ ಎಲ್ಲ ಕುಂಡಲಗಳು, ಎದೆ ಕವಚಗಳು, ಅಂಗವಿಭೂಷಣಗಳು. ರಾಜನ್! ಈ ನನ್ನ ಧನವನ್ನು ನಿನಗೆ ನಾನು ಕೊಡುತ್ತಿದ್ದೇನೆ.””
02058010 ವೈಶಂಪಾಯನ ಉವಾಚ|
02058010a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02058010c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058011 ಯುಧಿಷ್ಠಿರ ಉವಾಚ|
02058011a ಶ್ಯಾಮೋ ಯುವಾ ಲೋಹಿತಾಕ್ಷಃ ಸಿಂಹಸ್ಕಂಧೋ ಮಹಾಭುಜಃ|
02058011c ನಕುಲೋ ಗ್ಲಹ ಏಕೋ ಮೇ ಯಚ್ಚೈತತ್ಸ್ವಗತಂ ಧನಂ||
ಯುಧಿಷ್ಠಿರನು ಹೇಳಿದನು: “ಶ್ಯಾಮವರ್ಣಿ ಲೋಹಿತಾಕ್ಷ ಸಿಂಹಸ್ಕಂಧ ಮಹಾಭುಜ ಯುವಕ ನಕುಲ ಮತ್ತು ಅವನ ಒಡೆತನದಲ್ಲಿರುವ ಎಲ್ಲ ಧನವೂ ನನ್ನ ಈ ಒಂದು ಕೈಗೆ.”
02058012 ಶಕುನಿರುವಾಚ|
02058012a ಪ್ರಿಯಸ್ತೇ ನಕುಲೋ ರಾಜನ್ರಾಜಪುತ್ರೋ ಯುಧಿಷ್ಠಿರ|
02058012c ಅಸ್ಮಾಕಂ ಧನತಾಂ ಪ್ರಾಪ್ತೋ ಭೂಯಸ್ತ್ವಂ ಕೇನ ದೀವ್ಯಸಿ||
ಶಕುನಿಯು ಹೇಳಿದನು: “ರಾಜನ್! ಯುಧಿಷ್ಠಿರ! ಆದರೆ ರಾಜಪುತ್ರ ನಕುಲನು ನಿನ್ನ ಪ್ರಿಯಕರನು. ಈ ಪಣವನ್ನೂ ನಾವು ಗೆದ್ದರೆ ನಿನ್ನಲ್ಲಿ ಪಣವಿಡಲು ಬೇರೆ ಏನಿದೆ?””
02058013 ವೈಶಂಪಾಯನ ಉವಾಚ|
02058013a ಏವಮುಕ್ತ್ವಾ ತು ಶಕುನಿಸ್ತಾನಕ್ಷಾನ್ಪ್ರತ್ಯಪದ್ಯತ|
02058013c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಶಕುನಿಯು ದಾಳಗಳೊಂದಿಗೆ ಮಾತನಾಡಿದನು. ನಂತರ ಶಕುನಿಯು ಯುಧಿಷ್ಠಿರನಿಗೆ “ಇದನ್ನೂ ಗೆದ್ದೆ!” ಎಂದು ಕೂಗಿ ಹೇಳಿದನು.
02058014 ಯುಧಿಷ್ಠಿರ ಉವಾಚ|
02058014a ಅಯಂ ಧರ್ಮಾನ್ಸಹದೇವೋಽನುಶಾಸ್ತಿ
ಲೋಕೇ ಹ್ಯಸ್ಮಿನ್ಪಂಡಿತಾಖ್ಯಾಂ ಗತಶ್ಚ|
02058014c ಅನರ್ಹತಾ ರಾಜಪುತ್ರೇಣ ತೇನ
ತ್ವಯಾ ದೀವ್ಯಾಮ್ಯಪ್ರಿಯವತ್ಪ್ರಿಯೇಣ||
ಯುಧಿಷ್ಠಿರನು ಹೇಳಿದನು: “ಈ ಸಹದೇವನು ಧರ್ಮವನ್ನು ಹೇಳಿಕೊಡುತ್ತಾನೆ. ಇವನು ಲೋಕದಲ್ಲಿ ಪಂಡಿತನೆಂದು ಕರೆಯಲ್ಪಟ್ಟಿದ್ದಾನೆ. ಇದಕ್ಕೆ ಅನರ್ಹನಾದ ಈ ಪ್ರಿಯ ರಾಜಪುತ್ರನನ್ನು ಅಪ್ರಿಯನ ಹಾಗೆ ನಾನು ನಿನಗೆ ಕೊಡುತ್ತಿದ್ದೇನೆ.””
02058015 ವೈಶಂಪಾಯನ ಉವಾಚ|
02058015a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02058015c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058016 ಶಕುನಿರುವಾಚ|
02058016a ಮಾದ್ರೀಪುತ್ರೌ ಪ್ರಿಯೌ ರಾಜಂಸ್ತವೇಮೌ ವಿಜಿತೌ ಮಯಾ|
02058016c ಗರೀಯಾಂಸೌ ತು ತೇ ಮನ್ಯೇ ಭೀಮಸೇನಧನಂಜಯೌ||
ಶಕುನಿಯು ಹೇಳಿದನು: “ರಾಜನ್! ನಿನಗೆ ಪ್ರಿಯರಾದ ಮಾದ್ರೀಪುತ್ರರೀರ್ವರನ್ನೂ ನಾನು ಗೆದ್ದೆ. ಆದರೂ ಭೀಮಸೇನ ಮತ್ತು ಧನಂಜಯರಲ್ಲಿ ನಿನಗೆ ಹೆಚ್ಚಿನ ಪ್ರೀತಿಯಿದೆ ಎಂದು ನನಗನ್ನಿಸುತ್ತದೆ.”
02058017 ಯುಧಿಷ್ಠಿರ ಉವಾಚ|
02058017a ಅಧರ್ಮಂ ಚರಸೇ ನೂನಂ ಯೋ ನಾವೇಕ್ಷಸಿ ವೈ ನಯಂ|
02058017c ಯೋ ನಃ ಸುಮನಸಾಂ ಮೂಢ ವಿಭೇದಂ ಕರ್ತುಮಿಚ್ಛಸಿ||
ಯುಧಿಷ್ಠಿರನು ಹೇಳಿದನು: “ನ್ಯಾಯವಾದುದನ್ನು ನೋಡದೇ ಅಧರ್ಮದಲ್ಲಿ ನಡೆದುಕೊಳ್ಳುತ್ತಿದ್ದೀಯೆ. ಮೂಢ! ಸುಮನಸ್ಕರಾದ ನಮ್ಮಲ್ಲಿ ಭೇದವನ್ನು ಉಂಟುಮಾಡಲು ಬಯಸುತ್ತಿದ್ದೀಯೆ.”
02058018 ಶಕುನಿರುವಾಚ|
02058018a ಗರ್ತೇ ಮತ್ತಃ ಪ್ರಪತತಿ ಪ್ರಮತ್ತಃ ಸ್ಥಾಣುಮೃಚ್ಛತಿ|
02058018c ಜ್ಯೇಷ್ಠೋ ರಾಜನ್ವರಿಷ್ಠೋಽಸಿ ನಮಸ್ತೇ ಭರತರ್ಷಭ||
ಶಕುನಿಯು ಹೇಳಿದನು: “ಮತ್ತನಾದವನು ಹಳ್ಳದಲ್ಲಿ ಬೀಳುತ್ತಾನೆ. ಪ್ರಮತ್ತನಾದವನು ಮರಕ್ಕೇ ಎಡವುತ್ತಾನೆ. ರಾಜನ್! ನೀನು ಜ್ಯೇಷ್ಠ. ಹಿರಿಯವನು. ಭರತರ್ಷಭ! ನಿನಗೆ ನನ್ನ ವಂದನೆಗಳು.
02058019a ಸ್ವಪ್ನೇ ನ ತಾನಿ ಪಶ್ಯಂತಿ ಜಾಗ್ರತೋ ವಾ ಯುಧಿಷ್ಠಿರ|
02058019c ಕಿತವಾ ಯಾನಿ ದೀವ್ಯಂತಃ ಪ್ರಲಪಂತ್ಯುತ್ಕಟಾ ಇವ||
ಯುಧಿಷ್ಠಿರ! ಜೂಜಾಡುವವರು ಹುಚ್ಚರಂತೆ ಮಾತನಾಡುತ್ತಾರೆ ಮತ್ತು ಕನಸಿನಲ್ಲಿಯೂ ನನಸಿನಲ್ಲಿಯೂ ಕಂಡಿರದಂಥಹ ದೃಶ್ಯಗಳನ್ನು ಕಾಣುತ್ತಾರೆ.”
02058020 ಯುಧಿಷ್ಠಿರ ಉವಾಚ|
02058020a ಯೋ ನಃ ಸಂಖ್ಯೇ ನೌರಿವ ಪಾರನೇತಾ
ಜೇತಾ ರಿಪೂಣಾಂ ರಾಜಪುತ್ರಸ್ತರಸ್ವೀ|
02058020c ಅನರ್ಹತಾ ಲೋಕವೀರೇಣ ತೇನ
ದೀವ್ಯಾಮ್ಯಹಂ ಶಕುನೇ ಫಲ್ಗುನೇನ||
ಯುಧಿಷ್ಠಿರನು ಹೇಳಿದನು: “ಶಕುನಿ! ಯುದ್ಧದಲ್ಲಿ ನಮ್ಮನ್ನು ನಾವೆಯಂತೆ ಪಾರುಮಾಡಿ ರಿಪುಗಳನ್ನು ಜಯಿಸಿದ ತರಸ್ವೀ ಲೋಕವೀರ ಮತ್ತು ಇದಕ್ಕೆ ಅನರ್ಹನಾದ ಫಲ್ಗುನನನ್ನು ನಿನಗೆ ಕೊಡುತ್ತಿದ್ದೇನೆ.””
02058021 ವೈಶಂಪಾಯನ ಉವಾಚ|
02058021a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02058021c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058022 ಶಕುನಿರುವಾಚ|
02058022a ಅಯಂ ಮಯಾ ಪಾಂಡವಾನಾಂ ಧನುರ್ಧರಃ
ಪರಾಜಿತಃ ಪಾಂಡವಃ ಸವ್ಯಸಾಚೀ|
02058022c ಭೀಮೇನ ರಾಜನ್ದಯಿತೇನ ದೀವ್ಯ
ಯತ್ಕೈತವ್ಯಂ ಪಾಂಡವ ತೇಽವಶಿಷ್ಟಂ||
ಶಕುನಿಯು ಹೇಳಿದನು: “ಇಗೋ! ಈ ಪಾಂಡವ ದನುರ್ಧರ, ಪಾಂಡವ ಸವ್ಯಸಾಚಿಯನ್ನು ನಾನು ಪರಾಜಿತಗೊಳಿಸಿದ್ದೇನೆ. ರಾಜನ್! ಇನ್ನು ಪಣವನ್ನಿಡಲು ನಿನ್ನಲ್ಲಿ ಉಳಿದಿರುವವನು ನಿನ್ನ ಪ್ರೀತಿಯ ಪಾಂಡವ ಭೀಮ.”
02058023 ಯುಧಿಷ್ಠಿರ ಉವಾಚ|
02058023a ಯೋ ನೋ ನೇತಾ ಯೋ ಯುಧಾಂ ನಃ ಪ್ರಣೇತಾ
ಯಥಾ ವಜ್ರೀ ದಾನವಶತ್ರುರೇಕಃ|
02058023c ತಿರ್ಯಕ್ಪ್ರೇಕ್ಷೀ ಸಂಹತಭ್ರೂರ್ಮಹಾತ್ಮಾ
ಸಿಂಹಸ್ಕಂಧೋ ಯಶ್ಚ ಸದಾತ್ಯಮರ್ಷೀ||
02058024a ಬಲೇನ ತುಲ್ಯೋ ಯಸ್ಯ ಪುಮಾನ್ನ ವಿದ್ಯತೇ
ಗದಾಭೃತಾಮಗ್ರ್ಯ ಇಹಾರಿಮರ್ದನಃ|
02058024c ಅನರ್ಹತಾ ರಾಜಪುತ್ರೇಣ ತೇನ
ದೀವ್ಯಾಮ್ಯಹಂ ಭೀಮಸೇನೇನ ರಾಜನ್||
ಯುಧಿಷ್ಠಿರನು ಹೇಳಿದನು: “ವಜ್ರಿ ದಾನವಶತ್ರುವಿನಂತೆ ಒಬ್ಬನೇ ಯುದ್ಧದಲ್ಲಿ ನಮ್ಮ ನಾಯಕನಾಗಿ ನಮಗೆ ಮಾರ್ಗದರ್ಶನ ನೀಡಿದ, ಹುಬ್ಬುಗಳನ್ನು ಬಿಗಿಮಾಡಿ ಕೆಳಗೇ ದಿಟ್ಟಿಟ್ಟು ನೋಡುತ್ತಿರುವ, ಸದಾ ಸಿಟ್ಟಿನಲ್ಲಿರುವ ಆ ಸಿಂಹಸ್ಕಂಧ ಬಲದಲ್ಲಿ ಯಾರೂ ಸರಿಸಾಟಿಯನ್ನು ಹೊಂದದಿದ್ದ ಗದಾಯೋದ್ಧರಲ್ಲಿಯೇ ಶ್ರೇಷ್ಠ ಅರಿಮರ್ದನ ರಾಜಪುತ್ರ ಭೀಮಸೇನನನ್ನು, ಅವನು ಇದಕ್ಕೆ ಅನರ್ಹನಾದರೂ, ರಾಜನ್! ನಾನು ನಿನಗೆ ನೀಡುತ್ತಿದ್ದೇನೆ.””
02058025 ವೈಶಂಪಾಯನ ಉವಾಚ|
02058025a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02058025c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058026 ಶಕುನಿರುವಾಚ|
02058026a ಬಹು ವಿತ್ತಂ ಪರಾಜೈಷೀರ್ಭ್ರಾತೄಂಶ್ಚ ಸಹಯದ್ವಿಪಾನ್|
02058026c ಆಚಕ್ಷ್ವ ವಿತ್ತಂ ಕೌಂತೇಯ ಯದಿ ತೇಽಸ್ತ್ಯಪರಾಜಿತಂ||
ಶಕುನಿಯು ಹೇಳಿದನು: “ಕೌಂತೇಯ! ನೀನು ಬಹಳ ಸಂಪತ್ತನ್ನೂ, ಭ್ರಾತೃಗಳನ್ನೂ, ಆನೆ ಕುದುರೆಗಳನ್ನೂ ಸೋತಿದ್ದೀಯೆ. ಇನ್ನು ಸೋತುಕೊಳ್ಳಲು ಬೇರೆ ಏನಾದರೂ ಇದ್ದರೆ ಹೇಳು.”
02058027 ಯುಧಿಷ್ಠಿರ ಉವಾಚ|
02058027a ಅಹಂ ವಿಶಿಷ್ಟಃ ಸರ್ವೇಷಾಂ ಭ್ರಾತೄಣಾಂ ದಯಿತಸ್ತಥಾ|
02058027c ಕುರ್ಯಾಮಸ್ತೇ ಜಿತಾಃ ಕರ್ಮ ಸ್ವಯಮಾತ್ಮನ್ಯುಪಪ್ಲವೇ||
ಯುಧಿಷ್ಠಿರನು ಹೇಳಿದನು: “ನನ್ನ ಎಲ್ಲ ಭ್ರಾತೃಗಳಿಂದ ಗಾಢವಾಗಿ ಪ್ರೀತಿಸಲ್ಪಟ್ಟ ನಾನೇ ಉಳಿದಿದ್ದೇನೆ. ಗೆದ್ದನಂತರ ನಾವು ನಾಶವಾಗುವವರೆಗೆ ನಿನ್ನ ಸೇವೆ ದಾಸರಾಗಿರುತ್ತೇವೆ.””
02058028 ವೈಶಂಪಾಯನ ಉವಾಚ|
02058028a ಏತಚ್ಛೃತ್ವಾ ವ್ಯವಸಿತೋ ನಿಕೃತಿಂ ಸಮುಪಾಶ್ರಿತಃ|
02058028c ಜಿತಮಿತ್ಯೇವ ಶಕುನಿರ್ಯುಧಿಷ್ಠಿರಮಭಾಷತ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಮೊದಲೇ ನಿಶ್ಚಯಿಸಿದಂತೆ ಮೋಸದಿಂದ ಆಟವಾಡಿದ ಶಕುನಿಯು “ಇದನ್ನೂ ಗೆದ್ದೆ!” ಎಂದು ಯುಧಿಷ್ಠಿರನಿಗೆ ಹೇಳಿದನು.
02058029 ಶಕುನಿರುವಾಚ|
02058029a ಏತತ್ಪಾಪಿಷ್ಠಮಕರೋರ್ಯದಾತ್ಮಾನಂ ಪರಾಜಿತಃ|
02058029c ಶಿಷ್ಟೇ ಸತಿ ಧನೇ ರಾಜನ್ಪಾಪ ಆತ್ಮಪರಾಜಯಃ||
ಶಕುನಿಯು ಹೇಳಿದನು: “ನಿನ್ನನ್ನು ನೀನೇ ಸೋಲಿಸಿಕೊಂಡು ನೀನು ಒಂದು ಪಾಪಿಷ್ಟ ಕಾರ್ಯವನ್ನೇ ಎಸೆಗಿದ್ದೀಯೆ. ರಾಜನ್! ಇನ್ನೂ ಧನವು ಉಳಿದಿರುವಾಗ ತನ್ನನ್ನು ತಾನು ಸೋಲಿಸಿಕೊಳ್ಳುವುದು ಪಾಪ.””
02058030 ವೈಶಂಪಾಯನ ಉವಾಚ|
02058030a ಏವಮುಕ್ತ್ವಾ ಮತಾಕ್ಷಸ್ತಾನ್ಗ್ಲಹೇ ಸರ್ವಾನವಸ್ಥಿತಾನ್|
02058030c ಪರಾಜಯಲ್ಲೋಕವೀರಾನಾಕ್ಷೇಪೇಣ ಪೃಥಕ್ ಪೃಥಕ್||
ವೈಶಂಪಾಯನನು ಹೇಳಿದನು: “ಅಲ್ಲಿ ಕುಳಿತಿದ್ದ ಸರ್ವ ಲೋಕವೀರರನ್ನೂ ಒಂದೊಂದೇ ಎಸೆತದಲ್ಲಿ ಗೆದ್ದಿದ್ದ ಆ ಅಕ್ಷಜ್ಞಾನಿ, ಜೂಜಿನಲ್ಲಿ ಚಾಕಚಕ್ಯತೆಯನ್ನು ಹೊಂದಿದ್ದ ಶಕುನಿಯು ಈ ರೀತಿ ಹೇಳಿದನು:
02058031 ಶಕುನಿರುವಾಚ|
02058031a ಅಸ್ತಿ ವೈ ತೇ ಪ್ರಿಯಾ ದೇವೀ ಗ್ಲಹ ಏಕೋಽಪರಾಜಿತಃ|
02058031c ಪಣಸ್ವ ಕೃಷ್ಣಾಂ ಪಾಂಚಾಲೀಂ ತಯಾತ್ಮಾನಂ ಪುನರ್ಜಯ||
ಶಕುನಿಯು ಹೇಳಿದನು: “ಇನ್ನೂ ಒಂದು ಎಸೆತವನ್ನು ಗೆಲ್ಲಲು ನಿನ್ನ ಪ್ರಿಯ ದೇವಿಯಿದ್ದಾಳೆ. ಕೃಷ್ಣಾ ಪಾಂಚಾಲಿಯನ್ನು ಪಣವನ್ನಾಗಿಟ್ಟು ನಿನ್ನನ್ನು ಪುನಃ ಗೆಲ್ಲು.”
02058032 ಯುಧಿಷ್ಠಿರ ಉವಾಚ|
02058032a ನೈವ ಹ್ರಸ್ವಾ ನ ಮಹತೀ ನಾತಿಕೃಷ್ಣಾ ನ ರೋಹಿಣೀ|
02058032c ಸರಾಗರಕ್ತನೇತ್ರಾ ಚ ತಯಾ ದೀವ್ಯಾಮ್ಯಹಂ ತ್ವಯಾ||
ಯುಧಿಷ್ಠಿರನು ಹೇಳಿದನು: “ಗಾತ್ರದಲ್ಲಿ ಅತಿ ಸಣ್ಣವಳೂ ಅತಿ ದೊಡ್ಡವಳೂ ಆಗಿಲ್ಲದ, ಅತಿ ಕಪ್ಪೂ ಅಥವಾ ಅತಿ ಕೆಂಪೂ ಅಲ್ಲದ, ಪ್ರೇಮದಿಂದ ಕಣ್ಣುಗಳು ಕೆಂಪಾಗಿರುವ ಅವಳನ್ನು ನಾನು ನಿನಗೆ ಪಣವನ್ನಾಗಿ ಇಡುತ್ತಿದ್ದೇನೆ.
02058033a ಶಾರದೋತ್ಪಲಪತ್ರಾಕ್ಷ್ಯಾ ಶಾರದೋತ್ಪಲಗಂಧಯಾ|
02058033c ಶಾರದೋತ್ಪಲಸೇವಿನ್ಯಾ ರೂಪೇಣ ಶ್ರೀಸಮಾನಯಾ||
ರೂಪದಲ್ಲಿ ಶ್ರೀಯ ಸಮಾನ ಅವಳಿಗೆ ಶರತ್ಕಾಲ ಕಮಲದ ಎಸಳುಗಳಂಥಹ ಕಣ್ಣುಗಳಿವೆ. ಅವಳು ಶರತ್ಕಾಲ ಕಮಲದ ಸುಗಂಧವನ್ನು ಸೂಸುತ್ತಾಳೆ, ಶರತ್ಕಾಲ ಕಮಲಗಳನ್ನು ಸೇವಿಸುತ್ತಾಳೆ.
02058034a ತಥೈವ ಸ್ಯಾದಾನೃಶಂಸ್ಯಾತ್ತಥಾ ಸ್ಯಾದ್ರೂಪಸಂಪದಾ|
02058034c ತಥಾ ಸ್ಯಾಚ್ಶೀಲಸಂಪತ್ತ್ಯಾ ಯಾಮಿಚ್ಛೇತ್ಪುರುಷಃ ಸ್ತ್ರಿಯಂ||
ಕ್ರೂರತ್ವವೆನ್ನುವುದೇ ಇಲ್ಲದ ಅವಳು ಪುರುಷರು ಇಚ್ಛಿಸುವ ಸ್ತ್ರೀಯಂತೆ ರೂಪಸಂಪದಳು ಮತ್ತು ಶೀಲಸಂಪದಳು.
02058035a ಚರಮಂ ಸಂವಿಶತಿ ಯಾ ಪ್ರಥಮಂ ಪ್ರತಿಬುಧ್ಯತೇ|
02058035c ಆ ಗೋಪಾಲಾವಿಪಾಲೇಭ್ಯಃ ಸರ್ವಂ ವೇದ ಕೃತಾಕೃತಂ||
ಕೊನೆಯಲ್ಲಿ ಮಲಗಿ ಮೊದಲೇ ಏಳುವ ಅವಳು ಗೋಪಾಲಕರು ಮತ್ತು ಆಡು ಮೇಯಿಸುವ ಯಾರಿಗೆ ಏನನ್ನು ಮಾಡಬೇಕು ಏನನ್ನು ಮಾಡಬಾರದು ಎನ್ನುವುದನ್ನು ತಿಳಿದಿದ್ದಾಳೆ.
02058036a ಆಭಾತಿ ಪದ್ಮವದ್ವಕ್ತ್ರಂ ಸಸ್ವೇದಂ ಮಲ್ಲಿಕೇವ ಚ|
02058036c ವೇದೀಮಧ್ಯಾ ದೀರ್ಘಕೇಶೀ ತಾಮ್ರಾಕ್ಷೀ ನಾತಿರೋಮಶಾ||
ಬೆವರಿದ ಅವಳ ಪದ್ಮವಕ್ತ್ರವು ಮಲ್ಲಿಕದಂತೆ ಬೆಳಗುತ್ತದೆ, ವೇದಿಯಂಥಹ ನಡುವಿರುವ ಅವಳು ದೀರ್ಘಕೇಶೀ ಮತ್ತು ತಾಮ್ರಾಕ್ಷೀ. ಅವಳ ದೇಹದಮೇಲೆ ಸ್ವಲ್ಪವೂ ರೋಮಗಳಿಲ್ಲ.
02058037a ತಯೈವಂವಿಧಯಾ ರಾಜನ್ಪಾಂಚಾಲ್ಯಾಹಂ ಸುಮಧ್ಯಯಾ|
02058037c ಗ್ಲಹಂ ದೀವ್ಯಾಮಿ ಚಾರ್ವಂಗ್ಯಾ ದ್ರೌಪದ್ಯಾ ಹಂತ ಸೌಬಲ||
ರಾಜನ್! ಸೌಬಲ! ಈ ಎಲ್ಲ ವಿವಿಧ ಗುಣಗಳನ್ನು ಹೊಂದಿದ ಸುಮಧ್ಯಮೆ ಚಾರ್ವಾಂಗಿ ದ್ರೌಪದಿ ಪಾಂಚಾಲಿಯನ್ನು ನಾನು ಪಣವಾಗಿ ಇಡುತ್ತಿದ್ದೇನೆ.””
02058038 ವೈಶಂಪಾಯನ ಉವಾಚ|
02058038a ಏವಮುಕ್ತೇ ತು ವಚನೇ ಧರ್ಮರಾಜೇನ ಭಾರತ|
02058038c ಧಿಗ್ಧಿಗಿತ್ಯೇವ ವೃದ್ಧಾನಾಂ ಸಭ್ಯಾನಾಂ ನಿಃಸೃತಾ ಗಿರಃ||
ವೈಶಂಪಾಯನನು ಹೇಳಿದನು: “ಭಾರತ! ಧರ್ಮರಾಜನು ಈ ರೀತಿ ಮಾತನ್ನಾಡಲು ಸಭೆಯಲ್ಲಿರುವ ಹಿರಿಯರೆಲ್ಲರೂ “ಧಿಕ್ಕಾರ! ಧಿಕ್ಕಾರ!” ಎಂದು ಕೂಗಿದರು.
02058039a ಚುಕ್ಷುಭೇ ಸಾ ಸಭಾ ರಾಜನ್ರಾಜ್ಞಾಂ ಸಂಜಜ್ಞಿರೇ ಕಥಾಃ|
02058039c ಭೀಷ್ಮದ್ರೋಣಕೃಪಾದೀನಾಂ ಸ್ವೇದಶ್ಚ ಸಮಜಾಯತ||
ರಾಜನ್! ಆ ಸಭೆಯೇ ಕಂಪಿಸಿತು. ರಾಜರುಗಳು ತಮ್ಮ ತಮ್ಮೊಳಗೇ ಮಾತನಾಡಿಕೊಳ್ಳತೊಡಗಿದರು. ಭೀಷ್ಮ, ದ್ರೋಣ ಕೃಪ ಮೊದಲಾದವರು ಬೆವರಿನಲ್ಲಿ ಮುಳುಗಿದರು.
02058040a ಶಿರೋ ಗೃಹೀತ್ವಾ ವಿದುರೋ ಗತಸತ್ತ್ವ ಇವಾಭವತ್|
02058040c ಆಸ್ತೇ ಧ್ಯಾಯನ್ನಧೋವಕ್ತ್ರೋ ನಿಃಶ್ವಸನ್ಪನ್ನಗೋ ಯಥಾ||
ವಿದುರನು ಶಕ್ತಿಯನ್ನು ಕಳೆದುಕೊಂಡವನಂತೆ ತಲೆಯನ್ನು ಹಿಡಿದುಕೊಂಡು, ಕೆಳಗೆ ನೋಡುತ್ತಾ, ಸರ್ಪದಂತೆ ನಿಟ್ಟಿಸುರು ಬಿಡುತ್ತಾ ಯೋಚನೆಯಲ್ಲಿ ತೊಡಗಿದನು.
02058041a ಧೃತರಾಷ್ಟ್ರಸ್ತು ಸಂಹೃಷ್ಟಃ ಪರ್ಯಪೃಚ್ಛತ್ಪುನಃ ಪುನಃ|
02058041c ಕಿಂ ಜಿತಂ ಕಿಂ ಜಿತಮಿತಿ ಹ್ಯಾಕಾರಂ ನಾಭ್ಯರಕ್ಷತ||
ಆದರೆ ಸಂಹೃಷ್ಟ ಧೃತರಾಷ್ಟ್ರನು ತನ್ನ ಆಕಾರವನ್ನು ರಕ್ಷಿಸಲು ಅಸಮರ್ಥನಾಗಿ ಪುನಃ ಪುನಃ “ಅವನು ಗೆದ್ದನಾ? ಅವನು ಗೆದ್ದನಾ?” ಎಂದು ಕೇಳುತ್ತಿದ್ದನು.
02058042a ಜಹರ್ಷ ಕರ್ಣೋಽತಿಭೃಶಂ ಸಹ ದುಃಶಾಸನಾದಿಭಿಃ|
02058042c ಇತರೇಷಾಂ ತು ಸಭ್ಯಾನಾಂ ನೇತ್ರೇಭ್ಯಃ ಪ್ರಾಪತಜ್ಜಲಂ||
ಕರ್ಣ, ದುಃಶಾಸನ ಮೊದಲಾದವರು ಅತ್ಯಂತ ಹರ್ಷಿತರಾದರು. ಆದರೆ ಸಭೆಯಲ್ಲಿರುವ ಇತರರ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು.
02058043a ಸೌಬಲಸ್ತ್ವವಿಚಾರ್ಯೈವ ಜಿತಕಾಶೀ ಮದೋತ್ಕಟಃ|
02058043c ಜಿತಮಿತ್ಯೇವ ತಾನಕ್ಷಾನ್ಪುನರೇವಾನ್ವಪದ್ಯತ||
ಆದರೆ ಸೌಬಲನು ಏನೂ ವಿಚಾರಮಾಡದೇ ಗೆಲುವಿನ ಮದೋತ್ಕಟನಾಗಿ, “ನಾನು ಗೆದ್ದೆ!” ಎಂದು ಹೇಳುತ್ತಾ ದಾಳಗಳನ್ನು ಉರುಳಿಸಿದನು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದ್ರೌಪದೀಪರಾಜಯೇ ಅಷ್ಟಪಂಚಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದ್ರೌಪದೀಪರಾಜಯ ಎನ್ನುವ ಐವತ್ತೆಂಟನೆಯ ಅಧ್ಯಾಯವು.
