ಆದಿ ಪರ್ವ: ವೈವಾಹಿಕ ಪರ್ವ
Contents
Toggle೧೮೯
ಹಿಂದೆ ದೇವಲೋಕದಲ್ಲಿ ನಡೆದ ಘಟನೆಗಳನ್ನೂ, ಪಾಂಡವರು ಐವರು ಇಂದ್ರರೆನ್ನುವುದನ್ನೂ ಹೇಳಿ ವ್ಯಾಸನು ದ್ರುಪದನಿಗೆ ಅವರನ್ನು ತೋರಿಸುವುದು (೧-೪೦). ದ್ರೌಪದಿಯ ಪೂರ್ವಜನ್ಮವೃತ್ತಾಂತವನ್ನು ಹೇಳುವುದು (೪೧-೪೯).
01189001 ವ್ಯಾಸ ಉವಾಚ|
01189001a ಪುರಾ ವೈ ನೈಮಿಷಾರಣ್ಯೇ ದೇವಾಃ ಸತ್ರಮುಪಾಸತೇ|
01189001c ತತ್ರ ವೈವಸ್ವತೋ ರಾಜಂಶಾಮಿತ್ರಮಕರೋತ್ತದಾ||
ವ್ಯಾಸನು ಹೇಳಿದನು: “ರಾಜನ್! ಬಹಳ ಹಿಂದೆ ದೇವತೆಗಳು ನೈಮಿಷಾರಣ್ಯದ ಸತ್ರವೊಂದರಲ್ಲಿ ಉಪಸ್ಥಿತರಿದ್ದರು. ವೈವಸ್ವತನು ಅದರಲ್ಲಿ ಋತ್ವಿಕನಾಗಿದ್ದನು.
01189002a ತತೋ ಯಮೋ ದೀಕ್ಷಿತಸ್ತತ್ರ ರಾಜನ್|
ನಾಮಾರಯತ್ಕಿಂ ಚಿದಪಿ ಪ್ರಜಾಭ್ಯಃ|
01189002c ತತಃ ಪ್ರಜಾಸ್ತಾ ಬಹುಲಾ ಬಭೂವುಃ|
ಕಾಲಾತಿಪಾತಾನ್ಮರಣಾತ್ಪ್ರಹೀಣಾಃ||
ರಾಜನ್! ದೀಕ್ಷೆಗೊಂಡಿದ್ದ ಆ ಸಮಯದಲ್ಲಿ ಯಮನು ಪ್ರಜೆಗಳ್ಯಾರನ್ನೂ ಕೊಲ್ಲಲಿಲ್ಲ. ಹಾಗಾಗಿ ಕಾಲದ ಹೊಡೆತ ಮತ್ತು ಮರಣದಿಂದ ತಪ್ಪಿಸಿಕೊಂಡ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರ್ಧಿಸಿದರು.
01189003a ತತಸ್ತು ಶಕ್ರೋ ವರುಣಃ ಕುಬೇರಃ|
ಸಾಧ್ಯಾ ರುದ್ರಾ ವಸವಶ್ಚಾಶ್ವಿನೌ ಚ|
01189003c ಪ್ರಣೇತಾರಂ ಭುವನಸ್ಯ ಪ್ರಜಾಪತಿಂ|
ಸಮಾಜಗ್ಮುಸ್ತತ್ರ ದೇವಾಸ್ತಥಾನ್ಯೇ||
ಆಗ ಶಕ್ರ, ವರುಣ, ಕುಬೇರ, ಸಾಧ್ಯರು, ರುದ್ರರು, ವಸುಗಳು, ಅಶ್ವಿನಿಯರು ಮತ್ತು ಅನ್ಯ ದೇವತೆಗಳು ಭುವನ ಪ್ರಜಾಪತಿಯ ಬಳಿ ಹೋಗಿ ಸೇರಿದರು.
01189004a ತತೋಽಬ್ರುವಽಲ್ಲೋಕಗುರುಂ ಸಮೇತಾ|
ಭಯಂ ನಸ್ತೀವ್ರಂ ಮಾನುಷಾಣಾಂ ವಿವೃದ್ಧ್ಯಾ|
01189004c ತಸ್ಮಾದ್ಭಯಾದುದ್ವಿಜಂತಃ ಸುಖೇಪ್ಸವಃ|
ಪ್ರಯಾಮ ಸರ್ವೇ ಶರಣಂ ಭವಂತಂ||
ಅಲ್ಲಿ ಸಮೇತರಾದ ಅವರು ಲೋಕಗುರುವಿಗೆ ಹೇಳಿದರು: “ಮನುಷ್ಯರು ವೃದ್ಧಿಯಾಗುತ್ತಿರುವುದರನ್ನು ನೋಡಿದರೆ ನಮಗೆ ತೀವ್ರ ಭಯವುಂಟಾಗಿದೆ. ಆ ಭಯದಿಂದ ನಡುಗುತ್ತಾ, ಸುಖವನ್ನರಸುತ್ತಾ ನಿನ್ನ ಶರಣರಾಗಿ ನಾವೆಲ್ಲರೂ ಬಂದಿದ್ದೇವೆ.”
01189005 ಬ್ರಹ್ಮೋವಾಚ|
01189005a ಕಿಂ ವೋ ಭಯಂ ಮಾನುಷೇಭ್ಯೋ ಯೂಯಂ ಸರ್ವೇ ಯದಾಮರಾಃ|
01189005c ಮಾ ವೋ ಮರ್ತ್ಯಸಕಾಶಾದ್ವೈ ಭಯಂ ಭವತು ಕರ್ಹಿ ಚಿತ್||
ಬ್ರಹ್ಮನು ಹೇಳಿದನು: “ಅಮರರಾಗಿರುವ ನೀವೆಲ್ಲರೂ ಮನುಷ್ಯರಿಂದ ಏಕೆ ಭಯಪಡಬೇಕು? ಮರ್ತ್ಯರಿಂದ ನಿಮಗೆ ಎಂದೂ ಭಯವಾಗದಿರಲಿ.”
01189006 ದೇವಾ ಊಚುಃ|
01189006a ಮರ್ತ್ಯಾ ಹ್ಯಮರ್ತ್ಯಾಃ ಸಂವೃತ್ತಾ ನ ವಿಶೇಷೋಽಸ್ತಿ ಕಶ್ಚನ|
01189006c ಅವಿಶೇಷಾದುದ್ವಿಜಂತೋ ವಿಶೇಷಾರ್ಥಮಿಹಾಗತಾಃ||
ದೇವತೆಗಳು ಹೇಳಿದರು: “ಮರ್ತ್ಯರು ಅಮರ್ತ್ಯರಾಗಿದ್ದುದರಿಂದ ನಮ್ಮೀರ್ವರಲ್ಲಿ ವ್ಯತ್ಯಾಸವೇ ಇಲ್ಲದಂತಾಗಿದೆ. ನಮ್ಮೀರ್ವರಲ್ಲಿ ವ್ಯತ್ಯಾಸವಿರಬೇಕೆಂದು ಕೇಳಿಕೊಂಡೇ ನಾವು ನಿನ್ನಲ್ಲಿಗೆ ಬಂದಿದ್ದೇವೆ.”
01189007 ಬ್ರಹ್ಮೋವಾಚ|
01189007a ವೈವಸ್ವತೋ ವ್ಯಾಪೃತಃ ಸತ್ರಹೇತೋಸ್|
ತೇನ ತ್ವಿಮೇ ನ ಮ್ರಿಯಂತೇ ಮನುಷ್ಯಾಃ|
01189007c ತಸ್ಮಿನ್ನೇಕಾಗ್ರೇ ಕೃತಸರ್ವಕಾರ್ಯೇ|
ತತ ಏಷಾಂ ಭವಿತೈವಾಂತಕಾಲಃ||
ಬ್ರಹ್ಮನು ಹೇಳಿದನು: “ವೈವಸ್ವತನು ಸತ್ರದಲ್ಲಿ ಮಗ್ನನಾಗಿದ್ದಾನೆ. ಆದುದರಿಂದಲೇ ಮನುಷ್ಯರು ಸಾಯುತ್ತಿಲ್ಲ. ಏಕಾಗ್ರಚಿತ್ತದಿಂದ ಆ ಕಾರ್ಯಗಳೆಲ್ಲವನ್ನೂ ಮುಗಿಸಿದ ನಂತರ ಆ ಅಂತಕಾಲನು ಅವರಿದ್ದಲ್ಲಿಗೆ ಹಿಂದಿರುಗುತ್ತಾನೆ.
01189008a ವೈವಸ್ವತಸ್ಯಾಪಿ ತನುರ್ವಿಭೂತಾ|
ವೀರ್ಯೇಣ ಯುಷ್ಮಾಕಮುತ ಪ್ರಯುಕ್ತಾ|
01189008c ಸೈಷಾಮಂತೋ ಭವಿತಾ ಹ್ಯಂತಕಾಲೇ|
ತನುರ್ಹಿ ವೀರ್ಯಂ ಭವಿತಾ ನರೇಷು||
ನಿಮ್ಮ ವೀರ್ಯಗಳಿಂದ ಪ್ರಚೋದನೆಗೊಂಡ ವೈವಸ್ವತನ ದೇಹವು ಪುಷ್ಟಿಯಾಗುತ್ತದೆ. ಆಗ ಅವನು ನರರಲ್ಲಿ ಹಿಂದಿರುಗಿ ಕಾಲವು ಅಂತ್ಯವಾಗುತ್ತದೆಯೋ ಎನ್ನುವಂತೆ ಬಹುಜನರ ನಾಶಮಾಡುತ್ತಾನೆ[1].””
01189009 ವ್ಯಾಸ ಉವಾಚ|
01189009a ತತಸ್ತು ತೇ ಪೂರ್ವಜದೇವವಾಕ್ಯಂ|
ಶ್ರುತ್ವಾ ದೇವಾ ಯತ್ರ ದೇವಾ ಯಜಂತೇ|
01189009c ಸಮಾಸೀನಾಸ್ತೇ ಸಮೇತಾ ಮಹಾಬಲಾ|
ಭಾಗೀರಥ್ಯಾಂ ದದೃಶುಃ ಪುಂಡರೀಕಂ||
ವ್ಯಾಸನು ಹೇಳಿದನು: “ಪೂರ್ವಜನ ದೇವವಾಕ್ಯವನ್ನು ಕೇಳಿದ ಮಹಾಬಲಿ ದೇವತೆಗಳು, ದೇವತೆಗಳು ಯಜ್ಞಮಾಡುತ್ತಿರುವ ಸ್ಥಳಕ್ಕೆ ಹೋಗಿ ಒಟ್ಟಿಗೇ ಕುಳಿತುಕೊಂಡರು. ಆಗ ಅವರು ಭಾಗೀರಥಿಯಲ್ಲಿ ತೇಲುತ್ತಿದ್ದ ಒಂದು ಪುಂಡರೀಕವನ್ನು ಕಂಡರು.
01189010a ದೃಷ್ಟ್ವಾ ಚ ತದ್ವಿಸ್ಮಿತಾಸ್ತೇ ಬಭೂವುಸ್|
ತೇಷಾಮಿಂದ್ರಸ್ತತ್ರ ಶೂರೋ ಜಗಾಮ|
01189010c ಸೋಽಪಶ್ಯದ್ಯೋಷಾಮಥ ಪಾವಕಪ್ರಭಾಂ|
ಯತ್ರ ಗಂಗಾ ಸತತಂ ಸಂಪ್ರಸೂತಾ||
ಅದನ್ನು ನೋಡಿದ ಅವರು ವಿಸ್ಮಿತರಾದರು. ಅವರಲ್ಲಿ ಶೂರ ಇಂದ್ರನು ಅಲ್ಲಿಗೆ ಹೋದನು. ಸತತ ಹರಿಯುವ ಗಂಗೆಯಲ್ಲಿ ಅವನು ಅಗ್ನಿಸಮಾನ ಓರ್ವ ಸ್ತ್ರೀಯನ್ನು ಕಂಡನು.
01189011a ಸಾ ತತ್ರ ಯೋಷಾ ರುದತೀ ಜಲಾರ್ಥಿನೀ|
ಗಂಗಾಂ ದೇವೀಂ ವ್ಯವಗಾಹ್ಯಾವತಿಷ್ಠತ್|
01189011c ತಸ್ಯಾಶ್ರುಬಿಂದುಃ ಪತಿತೋ ಜಲೇ ವೈ|
ತತ್ಪದ್ಮಮಾಸೀದಥ ತತ್ರ ಕಾಂಚನಂ||
ಜಲಾರ್ಥಿನಿಯಾದ ಅವಳು ದೇವಿ ಗಂಗೆಯಲ್ಲಿ ಇಳಿದು ನಿಂತು ಅಳುತ್ತಿದ್ದಾಗ ಅವಳ ಕಣ್ಣೀರು ನೀರಿನಲ್ಲಿ ಬಿದ್ದು ಕಾಂಚನದ ಕಮಲಗಳಾಗಿ ತೇಲುತ್ತಿದ್ದವು.
01189012a ತದದ್ಭುತಂ ಪ್ರೇಕ್ಷ್ಯ ವಜ್ರೀ ತದಾನೀಂ|
ಅಪೃಚ್ಛತ್ತಾಂ ಯೋಷಿತಮಂತಿಕಾದ್ವೈ|
01189012c ಕಾ ತ್ವಂ ಕಥಂ ರೋದಿಷಿ ಕಸ್ಯ ಹೇತೋರ್|
ವಾಕ್ಯಂ ತಥ್ಯಂ ಕಾಮಯೇಹ ಬ್ರವೀಹಿ||
ಆ ಅದ್ಭುತವನ್ನು ನೋಡಿದ ವಜ್ರಿಯು ಅವಳ ಬಳಿಬಂದು ಅವಳನ್ನು ಪ್ರಶ್ನಿಸಿದನು: “ನೀನು ಯಾರು ಮತ್ತು ಯಾವ ಕಾರಣಕ್ಕಾಗಿ ನೀನು ಅಳುತ್ತಿರುವೆ? ನಿನಗೆ ಇಷ್ಟವಾದರೆ ಸತ್ಯವೇನೆಂದು ಹೇಳು.”
01189013 ಸ್ತ್ರೀ ಉವಾಚ|
01189013a ತ್ವಂ ವೇತ್ಸ್ಯಸೇ ಮಾಮಿಹ ಯಾಸ್ಮಿ ಶಕ್ರ|
ಯದರ್ಥಂ ಚಾಹಂ ರೋದಿಮಿ ಮಂದಭಾಗ್ಯಾ|
01189013c ಆಗಚ್ಛ ರಾಜನ್ಪುರತೋಽಹಂ ಗಮಿಷ್ಯೇ|
ದ್ರಷ್ಟಾಸಿ ತದ್ರೋದಿಮಿ ಯತ್ಕೃತೇಽಹಂ||
ಸ್ತ್ರೀಯು ಹೇಳಿದಳು: “ಶಕ್ರ! ನಾನು ಯಾರು ಮತ್ತು ಯಾವ ಕಾರಣಕ್ಕಾಗಿ ಮಂದಭಾಗ್ಯೆ ನಾನು ರೋದಿಸುತ್ತಿದ್ದೇನೆ ಎಂದು ನಿನಗೆ ತಿಳಿದಿರಲೇ ಬೇಕು. ರಾಜನ್! ನಾನು ಮುಂದೆ ಹೋಗುತ್ತೇನೆ. ನೀನು ನನ್ನನ್ನು ಹಿಂಬಾಲಿಸಿ ಬಾ. ನಾನು ಏಕೆ ಅಳುತ್ತಿದ್ದೇನೆ ಎನ್ನುವುದನ್ನು ನೀನೇ ನೋಡುವೆಯಂತೆ.””
01189014 ವ್ಯಾಸ ಉವಾಚ|
01189014a ತಾಂ ಗಚ್ಛಂತೀಮನ್ವಗಚ್ಛತ್ತದಾನೀಂ|
ಸೋಽಪಶ್ಯದಾರಾತ್ತರುಣಂ ದರ್ಶನೀಯಂ|
01189014c ಸಿಂಹಾಸನಸ್ಥಂ ಯುವತೀಸಹಾಯಂ|
ಕ್ರೀಡಂತಮಕ್ಷೈರ್ಗಿರಿರಾಜಮೂರ್ಧ್ನಿ||
ವ್ಯಾಸನು ಹೇಳಿದನು: “ಅವಳು ಮುಂದೆ ಹೋಗುತ್ತಿರಲು ಅವನು ಅವಳನ್ನು ಹಿಂಬಾಲಿಸಿದನು. ಅಲ್ಲಿಯೇ ಹತ್ತಿರದ ಪರ್ವತ ಶಿಖರದಲ್ಲಿ ಸಿಂಹಾಸನದಲ್ಲಿ ಕುಳಿತು ಯುವತಿಯರ ಜೊತೆ ಪಗಡೆಯಾಡುತ್ತಿದ್ದ ಓರ್ವ ಸುಂದರ ತರುಣನನ್ನು ಅವನು ನೋಡಿದನು.
01189015a ತಮಬ್ರವೀದ್ದೇವರಾಜೋ ಮಮೇದಂ|
ತ್ವಂ ವಿದ್ಧಿ ವಿಶ್ವಂ ಭುವನಂ ವಶೇ ಸ್ಥಿತಂ|
01189015c ಈಶೋಽಹಮಸ್ಮೀತಿ ಸಮನ್ಯುರಬ್ರವೀದ್|
ದೃಷ್ಟ್ವಾ ತಮಕ್ಷೈಃ ಸುಭೃಶಂ ಪ್ರಮತ್ತಂ||
ಅವನು ಪಗಡೆಯಾಟದಲ್ಲಿ ಮಗ್ನನಾಗಿದ್ದುದನ್ನು ಕಂಡು ಸಿಟ್ಟಿಗೆದ್ದು ಹೇಳಿದನು: “ನಾನು ದೇವರಾಜನೆಂದು ತಿಳಿ. ವಿಶ್ವ ಭುವನವೆಲ್ಲ ನನ್ನ ವಶದಲ್ಲಿದೆ. ನಾನೇ ಒಡೆಯ.”
01189016a ಕ್ರುದ್ಧಂ ತು ಶಕ್ರಂ ಪ್ರಸಮೀಕ್ಷ್ಯ ದೇವೋ|
ಜಹಾಸ ಶಕ್ರಂ ಚ ಶನೈರುದೈಕ್ಷತ|
01189016c ಸಂಸ್ತಂಭಿತೋಽಭೂದಥ ದೇವರಾಜಸ್|
ತೇನೇಕ್ಷಿತಃ ಸ್ಥಾಣುರಿವಾವತಸ್ಥೇ||
ಆ ದೇವನು ಕ್ರುದ್ಧ ಶಕ್ರನನ್ನು ನೋಡಿ ನಿಧಾನವಾಗಿ ಮುಗುಳ್ನಕ್ಕು ದಿಟ್ಟಿಸಿ ನೋಡಿದನು. ಅವನ ನೋಟದಡಿಯಲ್ಲಿ ದೇವರಾಜನು ಸಂಸ್ತಂಭಿತನಾಗಿ ಸ್ಥಾಣುವಿನಂತೆ ಅಲ್ಲಿಯೇ ನಿಂತು ಬಿಟ್ಟನು.
01189017a ಯದಾ ತು ಪರ್ಯಾಪ್ತಮಿಹಾಸ್ಯ ಕ್ರೀಡಯಾ|
ತದಾ ದೇವೀಂ ರುದತೀಂ ತಾಮುವಾಚ|
01189017c ಆನೀಯತಾಮೇಷ ಯತೋಽಹಮಾರಾನ್|
ಮೈನಂ ದರ್ಪಃ ಪುನರಪ್ಯಾವಿಶೇತ||
ಕ್ರೀಡೆಯಲ್ಲಿ ಉತ್ಸಾಹವನ್ನು ಕಳೆದುಕೊಂಡ ಅವನು ರೋದಿಸುತ್ತಿರುವ ದೇವಿಯಲ್ಲಿ ಹೇಳಿದನು: “ಅವನನ್ನು ನನ್ನ ಹತ್ತಿರ ಕರೆದುಕೊಂಡು ಬಾ. ಅವನು ತನ್ನ ದರ್ಪದಿಂದ ಇನ್ನೂ ಹೆಚ್ಚು ಆವೇಶಗೊಳ್ಳದ ಹಾಗೆ ನೋಡಿಕೊಳ್ಳುತ್ತೇನೆ.”
01189018a ತತಃ ಶಕ್ರಃ ಸ್ಪೃಷ್ಟಮಾತ್ರಸ್ತಯಾ ತು|
ಸ್ರಸ್ತೈರಂಗೈಃ ಪತಿತೋಽಭೂದ್ಧರಣ್ಯಾಂ|
01189018c ತಮಬ್ರವೀದ್ಭಗವಾನುಗ್ರತೇಜಾ|
ಮೈವಂ ಪುನಃ ಶಕ್ರ ಕೃಥಾಃ ಕಥಂ ಚಿತ್||
ಅವಳ ಸ್ಪರ್ಷಮಾತ್ರದಿಂದಲೇ ಶಕ್ರನು ತನ್ನ ಅಂಗಾಂಗಗಳು ಶಕ್ತಿಯನ್ನೇ ಕಳೆದುಕೊಂಡಂತಾಗಿ ಧರಣಿಯಮೇಲೆ ಕುಸಿದು ಬಿದ್ದನು. ಉಗ್ರತೇಜಸ್ವಿ ಆ ಭಗವಾನನು ಅವನಿಗೆ ಹೇಳಿದನು: “ಶಕ್ರ! ಇನ್ನು ಎಂದೂ ಪುನಃ ಹೀಗೆ ಮಾಡಬೇಡ!
01189019a ವಿವರ್ತಯೈನಂ ಚ ಮಹಾದ್ರಿರಾಜಂ|
ಬಲಂ ಚ ವೀರ್ಯಂ ಚ ತವಾಪ್ರಮೇಯಂ|
01189019c ವಿವೃತ್ಯ ಚೈವಾವಿಶ ಮಧ್ಯಮಸ್ಯ|
ಯತ್ರಾಸತೇ ತ್ವದ್ವಿಧಾಃ ಸೂರ್ಯಭಾಸಃ||
ಬಲ ಮತ್ತು ವೀರ್ಯದಲ್ಲಿ ಅಪ್ರಮೇಯ ನೀನು ಈ ಮಹಾದ್ರಿರಾಜನನ್ನು ತಳ್ಳಿ ಉರುಳಿಸು. ಉರುಳಿಸಿದ ನಂತರ ಅದರ ಮಧ್ಯವನ್ನು ಪ್ರವೇಶಿಸು. ಅಲ್ಲಿ ನಿನ್ನಂತೆ ಸೂರ್ಯಭಾಸ ಇತರರನ್ನು ಕಾಣುತ್ತೀಯೆ.”
01189020a ಸ ತದ್ವಿವೃತ್ಯ ಶಿಖರಂ ಮಹಾಗಿರೇಸ್|
ತುಲ್ಯದ್ಯುತೀಂಶ್ಚತುರೋಽನ್ಯಾನ್ದದರ್ಶ|
01189020c ಸ ತಾನಭಿಪ್ರೇಕ್ಷ್ಯ ಬಭೂವ ದುಃಖಿತಃ|
ಕಚ್ಚಿನ್ನಾಹಂ ಭವಿತಾ ವೈ ಯಥೇಮೇ||
ಮಹಾಗಿರಿಯ ಶಿಖರವನ್ನು ಉರುಳಿಸಿ, ಅಲ್ಲಿ ತನ್ನ ಕಾಂತಿಯನ್ನು ಹೋಲುವ ಇತರರನ್ನು ನೋಡಿದನು. ಅದನ್ನು ನೋಡಿ ಅವನು “ನಾನೂ ಇವರ ಹಾಗೆ ಆಗಿಬಿಡುತ್ತೇನೆಯೇ?” ಎಂದು ದುಃಖಿತನಾದನು.
01189021a ತತೋ ದೇವೋ ಗಿರಿಶೋ ವಜ್ರಪಾಣಿಂ|
ವಿವೃತ್ಯ ನೇತ್ರೇ ಕುಪಿತೋಽಭ್ಯುವಾಚ|
01189021c ದರೀಮೇತಾಂ ಪ್ರವಿಶ ತ್ವಂ ಶತಕ್ರತೋ|
ಯನ್ಮಾಂ ಬಾಲ್ಯಾದವಮಂಸ್ಥಾಃ ಪುರಸ್ತಾತ್||
ಆಗ ಕುಪಿತ ದೇವ ಗಿರೀಶನು ಕಣ್ಣುಗಳನ್ನು ತಿರುಗಿಸುತ್ತಾ ವಜ್ರಪಾಣಿಗೆ ಹೇಳಿದನು: “ಶತಕ್ರತೋ! ನಿನ್ನ ಹುಡುಗಾಟಿಕೆಯಲ್ಲಿ ನನ್ನನ್ನು ಅವಮಾನಿಸಿದ್ದುದರಿಂದ ನೀನೂ ಈ ಬಿಲವನ್ನು ಪ್ರವೇಶಿಸು!”
01189022a ಉಕ್ತಸ್ತ್ವೇವಂ ವಿಭುನಾ ದೇವರಾಜಃ|
ಪ್ರವೇಪಮಾನೋ ಭೃಶಮೇವಾಭಿಷಂಗಾತ್|
01189022c ಸ್ರಸ್ತೈರಂಗೈರನಿಲೇನೇವ ನುನ್ನಂ|
ಅಶ್ವತ್ಥಪತ್ರಂ ಗಿರಿರಾಜಮೂರ್ಧ್ನಿ||
ವಿಭುವು ಈ ರೀತಿ ಹೇಳಿದ ನಂತರ ದೇವರಾಜನು ಆ ಶಾಪದಿಂದ ನಡುಗಿದನು. ಅವನ ಅಂಗಾಂಗಗಳು ಪರ್ವತ ಶಿಖರದ ಮೇಲಿದ್ದ ಅಶ್ವತ್ಥ ವೃಕ್ಷದ ಎಲೆಗಳು ಭಿರುಗಾಳಿಗೆ ಸಿಲುಕಿದರೆ ಹೇಗೋ ಹಾಗೆ ತತ್ತರಿಸಿದವು.
01189023a ಸ ಪ್ರಾಂಜಲಿರ್ವಿನತೇನಾನನೇನ|
ಪ್ರವೇಪಮಾನಃ ಸಹಸೈವಮುಕ್ತಃ|
01189023c ಉವಾಚ ಚೇದಂ ಬಹುರೂಪಮುಗ್ರಂ|
ದ್ರಷ್ಟಾ ಶೇಷಸ್ಯ ಭಗವಂಸ್ತ್ವಂ ಭವಾದ್ಯ||
ಆಗ ಅವನು ಕೈಜೋಡಿಸಿ, ಮುಖವನ್ನು ಕೆಳಮಾಡಿ, ಒಮ್ಮಿಂದೊಮ್ಮಿಗೇ ಬಂದ ಮಾತುಗಳನ್ನು ಕೇಳಿ ಕಂಪಿಸುತ್ತಾ ಆ ಬಹುರೂಪಿ ಉಗ್ರನಿಗೆ ಹೇಳಿದನು: “ಭಗವನ್! ಇಂದು ಇದರಿಂದ ಬಿಡುಗಡೆಯನ್ನು ತೋರಿಸು!”
01189024a ತಮಬ್ರವೀದುಗ್ರಧನ್ವಾ ಪ್ರಹಸ್ಯ|
ನೈವಂಶೀಲಾಃ ಶೇಷಮಿಹಾಪ್ನುವಂತಿ|
01189024c ಏತೇಅಪ್ಯೇವಂ ಭವಿತಾರಃ ಪುರಸ್ತಾತ್|
ತಸ್ಮಾದೇತಾಂ ದರಿಮಾವಿಶ್ಯ ಶೇಧ್ವಂ||
ಆಗ ಆ ಉಗ್ರಧನ್ವಿಯು ನಗುತ್ತಾ ಹೇಳಿದನು: “ಹೀಗೆ ನಡೆದುಕೊಳ್ಳುವವರಿಗೆ ಇಲ್ಲಿಂದ ಬಿಡುಗಡೆಯೇ ಇಲ್ಲ. ಮುಂದೆ ಇವರೂ ಕೂಡ ನಿನ್ನಂತೆ ಆಗುತ್ತಾರೆ. ಆದುದರಿಂದ ಈ ಗುಹೆಯನ್ನು ಪ್ರವೇಶಿಸಿ ಅಲ್ಲಿಯೇ ಇರು.
01189025a ಶೇಷೋಽಪ್ಯೇವಂ ಭವಿತಾ ವೋ ನ ಸಂಶಯೋ|
ಯೋನಿಂ ಸರ್ವೇ ಮಾನುಷೀಮಾವಿಶಧ್ವಂ|
01189025c ತತ್ರ ಯೂಯಂ ಕರ್ಮ ಕೃತ್ವಾವಿಷಃಯಂ|
ಬಹೂನನ್ಯಾನ್ನಿಧನಂ ಪ್ರಾಪಯಿತ್ವಾ||
01189026a ಆಗಂತಾರಃ ಪುನರೇವೇಂದ್ರಲೋಕಂ|
ಸ್ವಕರ್ಮಣಾ ಪೂರ್ವಜಿತಂ ಮಹಾರ್ಹಂ|
01189026c ಸರ್ವಂ ಮಯಾ ಭಾಷಿತಮೇತದೇವಂ|
ಕರ್ತವ್ಯಮನ್ಯದ್ವಿವಿಧಾರ್ಥವಚ್ಚ||
ನಿಮಗೆಲ್ಲ ಇದರಿಂದ ಬಿಡುಗಡೆ ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನೀವೆಲ್ಲರೂ ಮನುಷ್ಯ ಯೋನಿಯನ್ನು ಪ್ರವೇಶಿಸಿ, ಅಲ್ಲಿ ಬಹಳಷ್ಟು ಕಷ್ಟಕರ್ಮಗಳನ್ನು ಅನುಭವಿಸಿ, ಬೇರೆ ಹಲವಾರು ಜನರನ್ನು ಸಂಹರಿಸಿ, ಪುನಃ ಇಂದ್ರಲೋಕವನ್ನು ತೆರಳುತ್ತೀರಿ. ನಿಮ್ಮದೇ ಕರ್ಮಗಳಿಂದ ಈ ಮಹಾಲೋಕವನ್ನು ಪಡೆದಿದ್ದೀರಿ. ನಾನು ಹೇಳಿದ ಇವೆಲ್ಲವನ್ನೂ ಮಾಡಬೇಕಾಗುತ್ತದೆ. ಇದಲ್ಲದೇ ಬೇರೇನೂ ಆಗುವುದಿಲ್ಲ!”
01189027 ಪೂರ್ವೇಂದ್ರಾ ಊಚುಃ|
01189027a ಗಮಿಷ್ಯಾಮೋ ಮಾನುಷಂ ದೇವಲೋಕಾದ್|
ದುರಾಧರೋ ವಿಹಿತೋ ಯತ್ರ ಮೋಕ್ಷಃ|
01189027c ದೇವಾಸ್ತ್ವಸ್ಮಾನಾದಧೀರಂಜನನ್ಯಾಂ|
ಧರ್ಮೋ ವಾಯುರ್ಮಘವಾನಶ್ವಿನೌ ಚ||
ಪೂರ್ವೇಂದ್ರರು ಹೇಳಿದರು: “ದೇವಲೋಕದಿಂದ ಮೋಕ್ಷವು ದುರಾಧರವೆಂದು ವಿಹಿತವಾಗಿರುವ ಮಾನುಷ ಲೋಕಕ್ಕೆ ನಾವು ಹೋಗುತ್ತೇವೆ. ಆದರೆ ಧರ್ಮ, ವಾಯು, ಮಘವತ್ ಮತ್ತು ಅಶ್ವಿನೀ ದೇವತೆಗಳು ನಮ್ಮನ್ನು ನಮ್ಮ ತಾಯಿಯಿಂದ ಪಡೆಯಬೇಕು.””
01189028 ವ್ಯಾಸ ಉವಾಚ|
01189028a ಏತಚ್ಛೃತ್ವಾ ವಜ್ರಪಾಣಿರ್ವಚಸ್ತು|
ದೇವಶ್ರೇಷ್ಠಂ ಪುನರೇವೇದಮಾಹ|
01189028c ವೀರ್ಯೇಣಾಹಂ ಪುರುಷಂ ಕಾರ್ಯಹೇತೋರ್|
ದದ್ಯಾಮೇಷಾಂ ಪಂಚಮಂ ಮತ್ಪ್ರಸೂತಂ||
ವ್ಯಾಸನು ಹೇಳಿದನು: “ಈ ಮಾತುಗಳನ್ನು ಕೇಳಿದ ವಜ್ರಪಾಣಿಯು ದೇವಶ್ರೇಷ್ಠನಲ್ಲಿ ಪುನಃ ಹೇಳಿದನು: “ಈ ಕಾರ್ಯಗಳನ್ನು ನೆರವೇರಿಸುವ ಅವರಲ್ಲಿಯ ಐದನೆಯ ಪುರುಷನನ್ನು ನನ್ನ ವೀರ್ಯದಿಂದ ಮಗನನ್ನಾಗಿ ಪಡೆಯುತ್ತೇನೆ.”
01189029a ತೇಷಾಂ ಕಾಮಂ ಭಗವಾನುಗ್ರಧನ್ವಾ|
ಪ್ರಾದಾದಿಷ್ಟಂ ಸನ್ನಿಸರ್ಗಾದ್ಯಥೋಕ್ತಂ|
01189029c ತಾಂ ಚಾಪ್ಯೇಷಾಂ ಯೋಷಿತಂ ಲೋಕಕಾಂತಾಂ|
ಶ್ರಿಯಂ ಭಾರ್ಯಾಂ ವ್ಯದಧಾನ್ಮಾನುಷೇಷು||
ಉಗ್ರಧನ್ವಿ ಭಗವಂತನು ಅವರ ಇಷ್ಟವನ್ನು ಅವರು ಕೇಳಿದಹಾಗೆಯೇ ಅನುಗ್ರಹಿಸಿದನು. ಲೋಕಕಾಂತೆ ಶ್ರೀಯೇ ಮನುಷ್ಯಲೋಕದಲ್ಲಿ ಅವರ ಭಾರ್ಯೆಯಾಗಲೆಂದು ಅಪ್ಪಣೆ ಮಾಡಿದನು.
01189030a ತೈರೇವ ಸಾರ್ಧಂ ತು ತತಃ ಸ ದೇವೋ|
ಜಗಾಮ ನಾರಾಯಣಮಪ್ರಮೇಯಂ|
01189030c ಸ ಚಾಪಿ ತದ್ವ್ಯದಧಾತ್ಸರ್ವಮೇವ|
ತತಃ ಸರ್ವೇ ಸಂಬಭೂವುರ್ಧರಣ್ಯಾಂ||
ಅವರ ಜೊತೆಗೇ ಆ ದೇವನು ಅಪ್ರಮೇಯ ನಾರಾಯಣನಲ್ಲಿ ಸೇರಿಕೊಂಡನು. ಅವನೂ ಕೂಡ ಎಲ್ಲವೂ ಹಾಗೆಯೇ ಆಗಲೆಂದು ಅನುಮೋದಿಸಿದನು. ನಂತರ ಎಲ್ಲರೂ ಧರಣಿಯಲ್ಲಿ ಜನಿಸಿದರು.
01189031a ಸ ಚಾಪಿ ಕೇಶೌ ಹರಿರುದ್ಬಬರ್ಹ|
ಶುಕ್ಲಮೇಕಮಪರಂ ಚಾಪಿ ಕೃಷ್ಣಂ|
01189031c ತೌ ಚಾಪಿ ಕೇಶೌ ವಿಶತಾಂ ಯದೂನಾಂ|
ಕುಲೇ ಸ್ತ್ರಿಯೌ ರೋಹಿಣೀಂ ದೇವಕೀಂ ಚ|
01189031e ತಯೋರೇಕೋ ಬಲದೇವೋ ಬಭೂವ|
ಕೃಷ್ಣೋ ದ್ವಿತೀಯಃ ಕೇಶವಃ ಸಂಬಭೂವ||
ಆಗ ಹರಿಯು ತನ್ನ ಶಿರದಿಂದ ಎರಡು ಕೂದಲುಗಳನ್ನು ಕಿತ್ತನು. ಅದರಲ್ಲಿ ಒಂದು ಬಿಳಿಯಾಗಿತ್ತು. ಇನ್ನೊಂದು ಕಪ್ಪಾಗಿತ್ತು. ಈ ಕೂದಲುಗಳು ಯದು ಕುಲದ ಸ್ತ್ರೀಯರಾದ ರೋಹಿಣಿ ಮತ್ತು ದೇವಕಿಯರನ್ನು ಪ್ರವೇಶಿಸಿದವು. ಅವುಗಳಲ್ಲಿ ಒಂದು ಬಲದೇವನಾಯಿತು. ಎರಡನೇ ಕಪ್ಪು ಬಣ್ಣದ್ದು ಕೇಶವನಾಗಿ ಜನಿಸಿತು.
01189032a ಯೇ ತೇ ಪೂರ್ವಂ ಶಕ್ರರೂಪಾ ನಿರುದ್ಧಾಸ್|
ತಸ್ಯಾಂ ದರ್ಯಾಂ ಪರ್ವತಸ್ಯೋತ್ತರಸ್ಯ|
01189032c ಇಹೈವ ತೇ ಪಾಂಡವಾ ವೀರ್ಯವಂತಃ|
ಶಕ್ರಸ್ಯಾಂಶಃ ಪಾಂಡವಃ ಸವ್ಯಸಾಚೀ||
ಆ ಪರ್ವತ ಕಣಿವೆಯ ಗುಹೆಯಲ್ಲಿ ಬಂಧಿಗಳಾಗಿದ್ದ ಪೂರ್ವ ಶಕ್ರರೇ ಇಲ್ಲಿ ವೀರ್ಯವಂತ ಪಾಂಡವರಾಗಿ ಜನಿಸಿದ್ದಾರೆ. ಪಾಂಡವ ಸವ್ಯಸಾಚಿಯು ಶಕ್ರನ ಅಂಶದವನು.
01189033a ಏವಮೇತೇ ಪಾಂಡವಾಃ ಸಂಬಭೂವುರ್|
ಯೇ ತೇ ರಾಜನ್ಪೂರ್ವಮಿಂದ್ರಾ ಬಭೂವುಃ|
01189033c ಲಕ್ಷ್ಮೀಶ್ಚೈಷಾಂ ಪೂರ್ವಮೇವೋಪದಿಷ್ಟಾ|
ಭಾರ್ಯಾ ಯೈಷಾ ದ್ರೌಪದೀ ದಿವ್ಯರೂಪಾ||
ರಾಜನ್! ಪೂರ್ವದಲ್ಲಿ ಇಂದ್ರರಾಗಿದ್ದವರೇ ಪಾಂಡವರಾಗಿ ಹುಟ್ಟಿದ್ದಾರೆ. ಪೂರ್ವದಲ್ಲಿಯೇ ಇವರ ಪತ್ನಿಯಾಗಲೆಂದು ನಿರ್ಧರಿಸಲ್ಪಟ್ಟ ಲಕ್ಷ್ಮಿಯು ದಿವ್ಯರೂಪಿ ದ್ರೌಪದಿಯಾಗಿ ಜನಿಸಿದ್ದಾಳೆ.
01189034a ಕಥಂ ಹಿ ಸ್ತ್ರೀ ಕರ್ಮಣೋಽಂತೇ ಮಹೀತಲಾತ್|
ಸಮುತ್ತಿಷ್ಠೇದನ್ಯತೋ ದೈವಯೋಗಾತ್|
01189034c ಯಸ್ಯಾ ರೂಪಂ ಸೋಮಸೂರ್ಯಪ್ರಕಾಶಂ|
ಗಂಧಶ್ಚಾಗ್ರ್ಯಃ ಕ್ರೋಶಮಾತ್ರಾತ್ಪ್ರವಾತಿ||
ದೈವಯೋಗದ ಹೊರತು ಬೇರೆ ಹೇಗೆ ಕರ್ಮಾಂತರದಲ್ಲಿ ಮಹೀತಲದಿಂದ ಸೋಮಸೂರ್ಯಪ್ರಕಾಶದ ರೂಪ ಮತ್ತು ಕೋಶಮಾತ್ರದವರೆಗೆ ಪಸರಿಸುವ ಸುಗಂಧವನ್ನು ಹೊಂದಿದ ಸ್ತ್ರೀಯು ಉದ್ಭವಿಸಬಲ್ಲಳು?
01189035a ಇದಂ ಚಾನ್ಯತ್ಪ್ರೀತಿಪೂರ್ವಂ ನರೇಂದ್ರ|
ದದಾಮಿ ತೇ ವರಮತ್ಯದ್ಭುತಂ ಚ|
01189035c ದಿವ್ಯಂ ಚಕ್ಷುಃ ಪಶ್ಯ ಕುಂತೀಸುತಾಂಸ್ತ್ವಂ|
ಪುಣ್ಯೈರ್ದಿವ್ಯೈಃ ಪೂರ್ವದೇಹೈರುಪೇತಾನ್||
ನರೇಂದ್ರ! ಪ್ರೀತಿಪೂರ್ವಕವಾಗಿ ನಿನಗೆ ಅದ್ಭುತ ವರವನ್ನು ನೀಡುತ್ತೇನೆ. ದಿವ್ಯ ಚಕ್ಷುಗಳಿಂದ ಕುಂತೀಪುತ್ರರನ್ನು ಅವರ ಪುಣ್ಯ ದಿವ್ಯ ಪೂರ್ವ ದೇಹರೂಪಗಳಲ್ಲಿ ನೋಡು!””
01189036 ವೈಶಂಪಾಯನ ಉವಾಚ|
01189036a ತತೋ ವ್ಯಾಸಃ ಪರಮೋದಾರಕರ್ಮಾ|
ಶುಚಿರ್ವಿಪ್ರಸ್ತಪಸಾ ತಸ್ಯ ರಾಜ್ಞಃ|
01189036c ಚಕ್ಷುರ್ದಿವ್ಯಂ ಪ್ರದದೌ ತಾನ್ಸ ಸರ್ವಾನ್|
ರಾಜಾಪಶ್ಯತ್ಪೂರ್ವದೇಹೈರ್ಯಥಾವತ್||
ವೈಶಂಪಾಯನನು ಹೇಳಿದನು: “ಪರಮ ಉದಾರಕರ್ಮಿ ಶುಚಿ ವಿಪ್ರ ವ್ಯಾಸನು ತನ್ನ ತಪಸ್ಸಿನಿಂದ ರಾಜನಿಗೆ ದಿವ್ಯ ದೃಷ್ಟಿಯನ್ನು ನೀಡಿದನು. ರಾಜನು ಅವರೆಲ್ಲರನ್ನೂ ಅವರ ಪೂರ್ವದೇಹದಲ್ಲಿ ಹೇಗಿದ್ದರೋ ಹಾಗೆ ನೋಡಿದನು.
01189037a ತತೋ ದಿವ್ಯಾನ್ ಹೇಮಕಿರೀಟಮಾಲಿನಃ|
ಶಕ್ರಪ್ರಖ್ಯಾನ್ಪಾವಕಾದಿತ್ಯವರ್ಣಾನ್|
01189037c ಬದ್ಧಾಪೀಡಾಂಶ್ಚಾರುರೂಪಾಂಶ್ಚ ಯೂನೋ|
ವ್ಯೂಢೋರಸ್ಕಾಂಸ್ತಾಲಮಾತ್ರಾಂದದರ್ಶ||
ದಿವ್ಯ ಹೇಮಕಿರೀಟಮಾಲೆಗಳನ್ನು ಧರಿಸಿ, ಪಾವಕಾದಿತ್ಯ ವರ್ಣಿಗಳಾದ, ಆಭರಣಗಳನ್ನು ಧರಿಸಿದ್ದ, ವಿಶಾಲ ಎದೆಗಳ, ಎತ್ತರವಾಗಿ, ಇಂದ್ರರಂತಿದ್ದ ಪ್ರತಿಯೊಬ್ಬ ಯುವಕನನ್ನೂ ನೋಡಿದನು.
01189038a ದಿವ್ಯೈರ್ವಸ್ತ್ರೈರರಜೋಭಿಃ ಸುವರ್ಣೈರ್|
ಮಾಲ್ಯೈಶ್ಚಾಗ್ರ್ಯೈಃ ಶೋಭಮಾನಾನತೀವ|
01189038c ಸಾಕ್ಷಾತ್ತ್ರ್ಯಕ್ಷಾನ್ವಸವೋ ವಾಥ ದಿವ್ಯಾನ್|
ಆದಿತ್ಯಾನ್ವಾ ಸರ್ವಗುಣೋಪಪನ್ನಾನ್|
01189038e ತಾನ್ಪೂರ್ವೇಂದ್ರಾನೇವಮೀಈಕ್ಷ್ಯಾಭಿರೂಪಾನ್|
ಪ್ರೀತೋ ರಾಜಾ ದ್ರುಪದೋ ವಿಸ್ಮಿತಶ್ಚ||
ಮಲಿನವಾಗದ ದಿವ್ಯ ಸುವರ್ಣ ವಸ್ತ್ರಗಳನ್ನು ಧರಿಸಿದ್ದ, ಆರಿಸಿದ್ದ ಮಾಲೆಗಳಿಂದ ಅತೀವ ಶೋಭಾಯಮಾನರಾದ, ಸಾಕ್ಷಾತ್ ಮುಕ್ಕಣ್ಣನೋ ಅಥವಾ ದಿವ್ಯ ವಸವರೋ ಎಂದು ತೋರುತ್ತಿದ್ದ, ಆದಿತ್ಯರಂತೆ ಸರ್ವಗುಣೋಪಪನ್ನರಾದ, ಅಭಿರೂಪಿ ಆ ಪೂರ್ವೇಂದ್ರರನ್ನು ನೋಡಿದ ರಾಜ ದ್ರುಪದನು ವಿಸ್ಮಿತನೂ ಸಂಪ್ರೀತನೂ ಆದನು.
01189039a ದಿವ್ಯಾಂ ಮಾಯಾಂ ತಾಮವಾಪ್ಯಾಪ್ರಮೇಯಾಂ|
ತಾಂ ಚೈವಾಗ್ರ್ಯಾಂ ಶ್ರಿಯಮಿವ ರೂಪಿಣೀಂ ಚ|
01189039c ಯೋಗ್ಯಾಂ ತೇಷಾಂ ರೂಪತೇಜೋಯಶೋಭಿಃ|
ಪತ್ನೀಮೃದ್ಧಾಂ ದೃಷ್ಟವಾನ್ಪಾರ್ಥಿವೇಂದ್ರಃ||
ಪಾರ್ಥಿವೇಂದ್ರನು ಅಪ್ಯಾಪ್ರಮೇಯ ದಿವ್ಯ ಮಾಯೆಯಿಂದ ಅವರ ರೂಪತೇಜಸ್ಸು ಮತ್ತು ಯಶಸ್ಸನ್ನು ಹೋಲುವ ಆ ರೂಪಿಣಿ ಶ್ರೀಯನ್ನೂ ನೋಡಿದನು.
01189040a ಸ ತದ್ದೃಷ್ಟ್ವಾ ಮಹದಾಶ್ಚರ್ಯರೂಪಂ|
ಜಗ್ರಾಹ ಪಾದೌ ಸತ್ಯವತ್ಯಾಃ ಸುತಸ್ಯ|
01189040c ನೈತಚ್ಚಿತ್ರಂ ಪರಮರ್ಷೇ ತ್ವಯೀತಿ|
ಪ್ರಸನ್ನಚೇತಾಃ ಸ ಉವಾಚ ಚೈನಂ||
ಆ ಮಹಾದಾಶ್ಚರ್ಯ ರೂಪವನ್ನು ನೋಡಿ ಪ್ರಸನ್ನನಾದ ಅವನು ಸತ್ಯವತೀಸುತನ ಪಾದಗಳನ್ನು ಹಿಡಿದು “ಪರಮರ್ಷಿ! ನಿನಗೆ ಇದು ಅದ್ಭುತವೇನಲ್ಲ!” ಎಂದನು.
01189041 ವ್ಯಾಸ ಉವಾಚ|
01189041a ಆಸೀತ್ತಪೋವನೇ ಕಾ ಚಿದೃಷೇಃ ಕನ್ಯಾ ಮಹಾತ್ಮನಃ|
01189041c ನಾಧ್ಯಗಚ್ಛತ್ಪತಿಂ ಸಾ ತು ಕನ್ಯಾ ರೂಪವತೀ ಸತೀ||
ವ್ಯಾಸನು ಹೇಳಿದನು: “ಒಮ್ಮೆ ಯಾವುದೋ ತಪೋವನದಲ್ಲಿ ಮಹಾತ್ಮನೋರ್ವನ ಮಗಳಿದ್ದಳು. ಸತೀ ರೂಪವತಿಯಾಗಿದ್ದರೂ ಆ ಕನ್ಯೆಗೆ ಪತಿಯು ದೊರೆಯಲಿಲ್ಲ.
01189042a ತೋಷಯಾಮಾಸ ತಪಸಾ ಸಾ ಕಿಲೋಗ್ರೇಣ ಶಂಕರಂ|
01189042c ತಾಮುವಾಚೇಶ್ವರಃ ಪ್ರೀತೋ ವೃಣು ಕಾಮಮಿತಿ ಸ್ವಯಂ||
ಬೇರೆಯವರು ಹೇಳುವಂತೆ ಅವಳು ಉಗ್ರ ತಪಸ್ಸಿನಿಂದ ಶಂಕರನನ್ನು ತೃಪ್ತಿಪಡಿಸಿದಳು. ಪ್ರೀತ ಈಶ್ವರನು ತಾನಾಗಿಯೇ “ನಿನಗಿಷ್ಟ ವರವನ್ನು ಕೇಳು!” ಎಂದನು.
01189043a ಸೈವಮುಕ್ತಾಬ್ರವೀತ್ಕನ್ಯಾ ದೇವಂ ವರದಮೀಶ್ವರಂ|
01189043c ಪತಿಂ ಸರ್ವಗುಣೋಪೇತಮಿಚ್ಛಾಮೀತಿ ಪುನಃ ಪುನಃ||
ವರದ ಈಶ್ವರ ದೇವನಲ್ಲಿ ಆ ಕನ್ಯೆಯು “ಸರ್ವಗುಣೋಪೇತ ಪತಿಯನ್ನು ಬಯಸುತ್ತೇನೆ!” ಎಂದು ಪುನಃ ಪುನಃ ಕೇಳಿಕೊಂಡಳು.
01189044a ದದೌ ತಸ್ಯೈ ಸ ದೇವೇಶಸ್ತಂ ವರಂ ಪ್ರೀತಿಮಾಂಸ್ತದಾ|
01189044c ಪಂಚ ತೇ ಪತಯಃ ಶ್ರೇಷ್ಠಾ ಭವಿಷ್ಯಂತೀತಿ ಶಂಕರಃ||
ಪ್ರೀತಿಮಾನ್ ದೇವ ಶಂಕರನು ಅವಳಿಗೆ “ನಿನಗೆ ಐವರು ಶ್ರೇಷ್ಠ ಪತಿಗಳಾಗುತ್ತಾರೆ!” ಎಂದು ವರವನ್ನಿತ್ತನು.
01189045a ಸಾ ಪ್ರಸಾದಯತೀ ದೇವಮಿದಂ ಭೂಯೋಽಭ್ಯಭಾಷತ|
01189045c ಏಕಂ ಪತಿಂ ಗುಣೋಪೇತಂ ತ್ವತ್ತೋಽರ್ಹಾಮೀತಿ ವೈ ತದಾ|
01189045e ತಾಂ ದೇವದೇವಃ ಪ್ರೀತಾತ್ಮಾ ಪುನಃ ಪ್ರಾಹ ಶುಭಂ ವಚಃ||
ಪುನಃ ಪೂಜಿಸುತ್ತಾ ಅವಳು ದೇವನಿಗೆ ಹೇಳಿದಳು: “ನಿನ್ನಿಂದ ನಾನು ಒಬ್ಬನೇ ಗುಣೋಪೇತ ಪತಿಯನ್ನು ಕೇಳುತ್ತಿದ್ದೇನೆ.” ಆಗ ಆ ಪ್ರೀತಾತ್ಮ ದೇವದೇವನು ಪುನಃ ಈ ಶುಭವಚನಗಳನ್ನಾಡಿದನು:
01189046a ಪಂಚಕೃತ್ವಸ್ತ್ವಯಾ ಉಕ್ತಃ ಪತಿಂ ದೇಹೀತ್ಯಹಂ ಪುನಃ|
01189046c ತತ್ತಥಾ ಭವಿತಾ ಭದ್ರೇ ತವ ತದ್ಭದ್ರಮಸ್ತು ತೇ|
01189046e ದೇಹಮನ್ಯಂ ಗತಾಯಾಸ್ತೇ ಯಥೋಕ್ತಂ ತದ್ಭವಿಷ್ಯತಿ||
“ನೀನು ನನ್ನಲ್ಲಿ ಪತಿಯನ್ನು ಕೊಡು ಎಂದು ಐದು ಬಾರಿ ಪುನಃ ಪುನಃ ಕೇಳಿಕೊಂಡೆ. ಭದ್ರೇ! ಅದು ಹಾಗೆಯೇ ಆಗುತ್ತದೆ. ನಿನಗೆ ಮಂಗಳವಾಗಲಿ. ಅನ್ಯ ದೇಹವನ್ನು ಸೇರಿದಾಗ ನೀನು ಕೇಳಿದಂತೆಯೇ ಆಗುತ್ತದೆ.”
01189047a ದ್ರುಪದೈಷಾ ಹಿ ಸಾ ಜಜ್ಞೇ ಸುತಾ ತೇ ದೇವರೂಪಿಣೀ|
01189047c ಪಂಚಾನಾಂ ವಿಹಿತಾ ಪತ್ನೀ ಕೃಷ್ಣಾ ಪಾರ್ಷತ್ಯನಿಂದಿತಾ||
ದ್ರುಪದ! ಅವಳೇ ನಿನ್ನ ಈ ದೇವರೂಪಿಣಿ ಮಗಳಾಗಿ ಜನಿಸಿದ್ದಾಳೆ. ಕೃಷ್ಣಾ ಪಾಂಚಾಲಿಯು ಐವರ ಪತ್ನಿಯಾಗಿಯೂ ಅನಿಂದಿತೆಯಾಗಿರುತ್ತಾಳೆಂದು ವಿಹಿತವಾಗಿದೆ.
01189048a ಸ್ವರ್ಗಶ್ರೀಃ ಪಾಂಡವಾರ್ಥಾಯ ಸಮುತ್ಪನ್ನಾ ಮಹಾಮಖೇ|
01189048c ಸೇಹ ತಪ್ತ್ವಾ ತಪೋ ಘೋರಂ ದುಹಿತೃತ್ವಂ ತವಾಗತಾ||
ಘೋರ ತಪಸ್ಸನ್ನು ತಪಿಸಿ, ಪಾಂಡವರಿಗಾಗಿ ಸ್ವರ್ಗಶ್ರೀಯು ಮಹಾಮಖದಲ್ಲಿ ನಿನ್ನ ಮಗಳಾಗಿ ಹುಟ್ಟಿದಳು.
01189049a ಸೈಷಾ ದೇವೀ ರುಚಿರಾ ದೇವಜುಷ್ಟಾ|
ಪಂಚಾನಾಮೇಕಾ ಸ್ವಕೃತೇನ ಕರ್ಮಣಾ|
01189049c ಸೃಷ್ಟಾ ಸ್ವಯಂ ದೇವಪತ್ನೀ ಸ್ವಯಂಭುವಾ|
ಶ್ರುತ್ವಾ ರಾಜನ್ದ್ರುಪದೇಷ್ಟಂ ಕುರುಷ್ವ||
ಸ್ವಯಂ ಸ್ವಯಂಭುವನಿಂದ ಸೃಷ್ಟಳಾದ ದೇವತೆಗಳೂ ಬಯಸುವ ಈ ದೇವಪತ್ನಿ ದೇವಿಯು ತಾನೇ ಮಾಡಿದ ಕರ್ಮಗಳಿಂದ ಈ ಐವರಿಗೆ ಒಬ್ಬಳೇ ಪತ್ನಿಯಾಗುವಳು. ರಾಜನ್! ದ್ರುಪದ! ಇದನ್ನು ಕೇಳಿದ ನೀನು ನಿನಗಿಷ್ಟವಾದುದನ್ನು ಮಾಡು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ಪಂಚೇಂದ್ರೋಪಾಖ್ಯಾನೇ ಏಕೋನನವತ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ಪಂಚೇಂದ್ರೋಪಾಖ್ಯಾನದಲ್ಲಿ ನೂರಾಎಂಭತ್ತೊಂಭತ್ತನೆಯ ಅಧ್ಯಾಯವು.
[1] ಕುರುಕ್ಷೇತ್ರದಲ್ಲಿ ಬಹುಜನರು ನಾಶಗೊಂಡಿದ್ದುದಕ್ಕೆ ಕಾರಣ ಇದೇ ಇರಬಹುದೇ? ಯಮನು ಯಜ್ಞದೀಕ್ಷೆಯಲ್ಲಿರುವಾಗ ಜನರನ್ನು ಸಾಯಿಸದೇ ಇದ್ದುದರಿಂದ ಒಂದೇ ಸಮನೆ ಎಲ್ಲರನ್ನೂ ಸಂಹರಿಸುವ ಜಾಲವೇ ಈ ಮಹಾಭಾರತ ಯುದ್ಧವೇ?