Sauptika Parva: Chapter 15

ಸೌಪ್ತಿಕಪರ್ವ: ಐಷೀಕ ಪರ್ವ

೧೫

ಮಹರ್ಷಿಗಳೀರ್ವರನ್ನು ಕಂಡ ಅರ್ಜುನನು ಕೂಡಲೇ ತಾನು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ಹಿಂತೆಗೆದುಕೊಂಡಿದುದು (೧-೧೦). ಅಶ್ವತ್ಥಾಮ-ವ್ಯಾಸರ ಸಂವಾದ (೧೧-೩೨). ಅಶ್ವತ್ಥಾಮನು ಅಸ್ತ್ರವನ್ನು ಪಾಂಡವರ ಗರ್ಭದ ಮೇಲೆ ಅಭಿಮಂತ್ರಿಸಿದುದು (೩೩).

10015001 ವೈಶಂಪಾಯನ ಉವಾಚ|

10015001a ದೃಷ್ಟ್ವೈವ ನರಶಾರ್ದೂಲಸ್ತಾವಗ್ನಿಸಮತೇಜಸೌ|

10015001c ಸಂಜಹಾರ ಶರಂ ದಿವ್ಯಂ ತ್ವರಮಾಣೋ ಧನಂಜಯಃ||

ವೈಶಂಪಾಯನನು ಹೇಳಿದನು: “ಅಗ್ನಿಸಮತೇಜಸ್ಸಿನ ಅವರೀರ್ವರನ್ನು ನೋಡಿದೊಡನೆಯೇ ತ್ವರೆಮಾಡಿ ನರಶಾರ್ದೂಲ ಧನಂಜಯನು ತನ್ನ ದಿವ್ಯ ಶರವನ್ನು ಉಪಸಂಹಾರಗೊಳಿಸಿದನು.

10015002a ಉವಾಚ ವದತಾಂ ಶ್ರೇಷ್ಠಸ್ತಾವೃಷೀ ಪ್ರಾಂಜಲಿಸ್ತದಾ|

10015002c ಪ್ರಯುಕ್ತಮಸ್ತ್ರಮಸ್ತ್ರೇಣ ಶಾಮ್ಯತಾಮಿತಿ ವೈ ಮಯಾ||

ಮಾತನಾಡುವವರಲ್ಲಿ ಶ್ರೇಷ್ಠನಾದ ಅವನು ಕೈಮುಗಿದು ಆ ಋಷಿಗಳಿಗೆ ಹೇಳಿದನು: “ಅಸ್ತ್ರದಿಂದ ಅಸ್ತ್ರವು ಪ್ರಶಮನಗೊಳ್ಳಲಿ ಎಂದೇ ನಾನು ಇದನ್ನು ಪ್ರಯೋಗಿಸಿದ್ದೆ.

10015003a ಸಂಹೃತೇ ಪರಮಾಸ್ತ್ರೇಽಸ್ಮಿನ್ಸರ್ವಾನಸ್ಮಾನಶೇಷತಃ|

10015003c ಪಾಪಕರ್ಮಾ ಧ್ರುವಂ ದ್ರೌಣಿಃ ಪ್ರಧಕ್ಷ್ಯತ್ಯಸ್ತ್ರತೇಜಸಾ||

ಪರಮಾಸ್ತ್ರವನ್ನು ಹಿಂದೆ ತೆಗೆದುಕೊಂಡಿದ್ದೇ ಆದರೆ ಪಾಪಕರ್ಮಿ ದ್ರೌಣಿಯು ಅಸ್ತ್ರದ ತೇಜಸ್ಸಿನಿಂದ ನಮ್ಮೆಲ್ಲರನ್ನೂ ಅಶೇಷವಾಗಿ ಭಸ್ಮಮಾಡಿಬಿಡುತ್ತಾನೆ ಎನ್ನುವುದು ನಿಶ್ಚಯ!

10015004a ಅತ್ರ ಯದ್ಧಿತಮಸ್ಮಾಕಂ ಲೋಕಾನಾಂ ಚೈವ ಸರ್ವಥಾ|

10015004c ಭವಂತೌ ದೇವಸಂಕಾಶೌ ತಥಾ ಸಂಹರ್ತುಮರ್ಹತಃ||

ಈ ಸಂದರ್ಭದಲಿ ನಮ್ಮ ಮತ್ತು ಲೋಕಗಳ ಸರ್ವಥಾ ಹಿತವನ್ನು ಗಮನದಲ್ಲಿಟ್ಟುಕೊಂಡು ದೇವಸಂಕಾಶರಾದ ನೀವಿಬ್ಬರೂ ಇದನ್ನು ಬಗೆಹರಿಸಬೇಕಾಗಿದೆ.”

10015005a ಇತ್ಯುಕ್ತ್ವಾ ಸಂಜಹಾರಾಸ್ತ್ರಂ ಪುನರೇವ ಧನಂಜಯಃ|

10015005c ಸಂಹಾರೋ ದುಷ್ಕರಸ್ತಸ್ಯ ದೇವೈರಪಿ ಹಿ ಸಂಯುಗೇ||

ಹೀಗೆ ಹೇಳಿ ಧನಂಜಯನು ಯುದ್ಧದಲ್ಲಿ ದೇವತೆಗಳಿಗೂ ಹಿಂದೆ ತೆಗೆದುಕೊಳ್ಳಲು ಕಷ್ಟಕರವಾದ ಅಸ್ತ್ರವನ್ನು ಪುನಃ ಹಿಂದೆ ತೆಗೆದುಕೊಂಡನು.

10015006a ವಿಸೃಷ್ಟಸ್ಯ ರಣೇ ತಸ್ಯ ಪರಮಾಸ್ತ್ರಸ್ಯ ಸಂಗ್ರಹೇ|

10015006c ನ ಶಕ್ತಃ ಪಾಂಡವಾದನ್ಯಃ ಸಾಕ್ಷಾದಪಿ ಶತಕ್ರತುಃ||

ರಣದಲ್ಲಿ ಪ್ರಯೋಗಿಸಿದ ಪರಮಾಸ್ತ್ರವನ್ನು ಹಿಂದೆ ತೆಗೆದುಕೊಳ್ಳಲು ಪಾಂಡವ ಅರ್ಜುನನಲ್ಲದೇ ಸಾಕ್ಷಾತ್ ಶತಕ್ರತುವಿಗೂ ಸಾಧ್ಯವಾಗುತ್ತಿರಲಿಲ್ಲ.

10015007a ಬ್ರಹ್ಮತೇಜೋಭವಂ ತದ್ಧಿ ವಿಸೃಷ್ಟಮಕೃತಾತ್ಮನಾ|

10015007c ನ ಶಕ್ಯಮಾವರ್ತಯಿತುಂ ಬ್ರಹ್ಮಚಾರಿವ್ರತಾದೃತೇ||

ಬ್ರಹ್ಮತೇಜಸ್ಸಿನಿಂದ ಹುಟ್ಟಿದ್ದ ಅದನ್ನು ಅಕೃತಾತ್ಮನು ಪ್ರಯೋಗಿಸಿದರೆ ಬ್ರಹ್ಮಚರ್ಯವ್ರತದಲ್ಲಿದ್ದವನ ಹೊರತಾಗಿ ಬೇರೆಯಾರಿಗೂ ಅದನ್ನು ಹಿಂದೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

10015008a ಅಚೀರ್ಣಬ್ರಹ್ಮಚರ್ಯೋ ಯಃ ಸೃಷ್ಟ್ವಾವರ್ತಯತೇ ಪುನಃ|

10015008c ತದಸ್ತ್ರಂ ಸಾನುಬಂಧಸ್ಯ ಮೂರ್ಧಾನಂ ತಸ್ಯ ಕೃಂತತಿ||

ಬ್ರಹ್ಮಚರ್ಯವ್ರತನಿಷ್ಠನಾಗಿರದವನು ಅದನ್ನು ಪ್ರಯೋಗಿಸಿ ಪುನಃ ಹಿಂದೆತೆಗೆದುಕೊಳ್ಳಲು ಪ್ರಯತ್ನಿಸಿದರೆ ಅನುಯಾಯಿಗಳೊಂದಿಗೆ ಅವನ ಶಿರವನ್ನು ಅದು ಕತ್ತರಿಸಿಬಿಡುತ್ತದೆ.

10015009a ಬ್ರಹ್ಮಚಾರೀ ವ್ರತೀ ಚಾಪಿ ದುರವಾಪಮವಾಪ್ಯ ತತ್|

10015009c ಪರಮವ್ಯಸನಾರ್ತೋಽಪಿ ನಾರ್ಜುನೋಽಸ್ತ್ರಂ ವ್ಯಮುಂಚತ||

ಅರ್ಜುನನು ಬ್ರಹ್ಮಚಾರಿಯಾಗಿದ್ದನು. ವ್ರತನಿರತನಾಗಿದ್ದನು. ಮಹಾಕಷ್ಟಗಳನ್ನು ಪಡೆದಿದ್ದಾಗಲೂ ಪರಮ ವ್ಯಸನಗಳು ಬಂದಿದ್ದಾದರೂ ಅಸ್ತ್ರವನ್ನು ಇದೂವರೆಗೆ ಪ್ರಯೋಗಿಸದೇ ಇದ್ದನು.

10015010a ಸತ್ಯವ್ರತಧರಃ ಶೂರೋ ಬ್ರಹ್ಮಚಾರೀ ಚ ಪಾಂಡವಃ|

10015010c ಗುರುವರ್ತೀ ಚ ತೇನಾಸ್ತ್ರಂ ಸಂಜಹಾರಾರ್ಜುನಃ ಪುನಃ||

ಅಂತಹ ಸತ್ಯವ್ರತಧರ ಶೂರ ಬ್ರಹ್ಮಚಾರಿ ಮತ್ತು ಗುರುವನ್ನು ಅನುಸರಿಸುತ್ತಿದ್ದ ಪಾಂಡವ ಅರ್ಜುನನು ಅಸ್ತ್ರವನ್ನು ಪುನಃ ಹಿಂದೆತೆಗೆದುಕೊಂಡನು.

10015011a ದ್ರೌಣಿರಪ್ಯಥ ಸಂಪ್ರೇಕ್ಷ್ಯ ತಾವೃಷೀ ಪುರತಃ ಸ್ಥಿತೌ|

10015011c ನ ಶಶಾಕ ಪುನರ್ಘೋರಮಸ್ತ್ರಂ ಸಂಹರ್ತುಮಾಹವೇ||

ದ್ರೌಣಿಗಾದರೋ ತನ್ನ ಎದುರು ನಿಂತಿದ್ದ ಇಬ್ಬರು ಋಷಿಗಳನ್ನು ನೋಡಿ ಯುದ್ಧದಲ್ಲಿ ಪ್ರಯೋಗಿಸಿದ್ದ ಘೋರ ಅಸ್ತ್ರವನ್ನು ಪುನಃ ಹಿಂದೆ ತೆಗೆದುಕೊಳ್ಳಲು ಶಕ್ಯನಾಗಲಿಲ್ಲ.

10015012a ಅಶಕ್ತಃ ಪ್ರತಿಸಂಹಾರೇ ಪರಮಾಸ್ತ್ರಸ್ಯ ಸಂಯುಗೇ|

10015012c ದ್ರೌಣಿರ್ದೀನಮನಾ ರಾಜನ್ದ್ವೈಪಾಯನಮಭಾಷತ||

ರಾಜನ್! ಸಂಯುಗದಲ್ಲಿ ಪರಮಾಸ್ತ್ರವನ್ನು ಪ್ರತಿಸಂಹಾರಮಾಡಲು ಅಶಕ್ತನಾದ ದ್ರೌಣಿಯು ದೀನಮನಸ್ಕನಾಗಿ ದ್ವೈಪಾಯನನಿಗೆ ಹೇಳಿದನು:

10015013a ಉತ್ತಮವ್ಯಸನಾರ್ತೇನ ಪ್ರಾಣತ್ರಾಣಮಭೀಪ್ಸುನಾ|

10015013c ಮಯೈತದಸ್ತ್ರಮುತ್ಸೃಷ್ಟಂ ಭೀಮಸೇನಭಯಾನ್ಮುನೇ||

“ಮುನೇ! ಭೀಮಸೇನನನ ಭಯದ ಉತ್ತಮ ವ್ಯಸನದಿಂದ ಆರ್ತನಾಗಿ ಪ್ರಾಣತ್ರಾಣವನ್ನುಳಿಸಿಕೊಳ್ಳುವುದಕ್ಕಾಗಿ ಅಸ್ತ್ರವನ್ನು ನಾನು ಪ್ರಯೋಗಿಸಿದೆ.

10015014a ಅಧರ್ಮಶ್ಚ ಕೃತೋಽನೇನ ಧಾರ್ತರಾಷ್ಟ್ರಂ ಜಿಘಾಂಸತಾ|

10015014c ಮಿಥ್ಯಾಚಾರೇಣ ಭಗವನ್ಭೀಮಸೇನೇನ ಸಂಯುಗೇ||

ಭಗವನ್! ಭೀಮಸೇನನು ಸಂಯುಗದಲ್ಲಿ ಅಧರ್ಮದಿಂದ ಮತ್ತು ಮಿಥ್ಯಾಚಾರ ಮೋಸದಿಂದ ಧಾರ್ತರಾಷ್ಟ್ರನನ್ನು ಸಂಹರಿಸಿದನು.

10015015a ಅತಃ ಸೃಷ್ಟಮಿದಂ ಬ್ರಹ್ಮನ್ಮಯಾಸ್ತ್ರಮಕೃತಾತ್ಮನಾ|

10015015c ತಸ್ಯ ಭೂಯೋಽದ್ಯ ಸಂಹಾರಂ ಕರ್ತುಂ ನಾಹಮಿಹೋತ್ಸಹೇ||

ಬ್ರಹ್ಮನ್! ಆದುದರಿಂದ ಅಕೃತಾತ್ಮನಾದ ನಾನು ಅಸ್ತ್ರವನ್ನು ಪ್ರಕಟಿಸಿದೆನು. ಆದರೆ ಈಗ ಅಸ್ತ್ರವನ್ನು ಉಪಸಂಹಾರ ಮಾಡಲು ನಾನು ಶಕ್ಯನಿಲ್ಲ.

10015016a ವಿಸೃಷ್ಟಂ ಹಿ ಮಯಾ ದಿವ್ಯಮೇತದಸ್ತ್ರಂ ದುರಾಸದಂ|

10015016c ಅಪಾಂಡವಾಯೇತಿ ಮುನೇ ವಹ್ನಿತೇಜೋಽನುಮಂತ್ರ್ಯ ವೈ||

ಮುನೇ! ಪಾಂಡವರಿಲ್ಲದಂತಾಗಲಿ ಎಂದು ಹೇಳಿ ಅಗ್ನಿತೇಜಸ್ಸನ್ನು ಅನುಮಂತ್ರಿಸಿ ದುರಾಸದ ದಿವ್ಯ ಅಸ್ತ್ರವನ್ನು ನಾನು ಪ್ರಕಟಿಸಿದೆನು.

10015017a ತದಿದಂ ಪಾಂಡವೇಯಾನಾಮಂತಕಾಯಾಭಿಸಂಹಿತಂ|

10015017c ಅದ್ಯ ಪಾಂಡುಸುತಾನ್ಸರ್ವಾಂಜೀವಿತಾದ್ಭ್ರಂಶಯಿಷ್ಯತಿ||

ಪಾಂಡವೇಯರ ಅಂತ್ಯವಾಗಲೆಂದು ಅಭಿಮಂತ್ರಿಸಿದ್ದ ಇದು ಇಂದು ಪಾಂಡುಸುತರೆಲ್ಲರನ್ನೂ ಜೀವಹೀನರನ್ನಾಗಿ ಮಾಡುತ್ತದೆ.

10015018a ಕೃತಂ ಪಾಪಮಿದಂ ಬ್ರಹ್ಮನ್ರೋಷಾವಿಷ್ಟೇನ ಚೇತಸಾ|

10015018c ವಧಮಾಶಾಸ್ಯ ಪಾರ್ಥಾನಾಂ ಮಯಾಸ್ತ್ರಂ ಸೃಜತಾ ರಣೇ||

ಬ್ರಹ್ಮನ್! ರೋಷಾವಿಷ್ಟ ಚೇತನದಿಂದ ರಣದಲ್ಲಿ ಪಾರ್ಥರನ್ನು ವಧೆಮಾಡಲು ನಿಶ್ಚಯಿಸಿ ಈ ಅಸ್ತ್ರವನ್ನು ಸೃಷ್ಟಿಸಿದ ನಾನು ಪಾಪವನ್ನೆಸಗಿದ್ದೇನೆ!”

10015019 ವ್ಯಾಸ ಉವಾಚ|

10015019a ಅಸ್ತ್ರಂ ಬ್ರಹ್ಮಶಿರಸ್ತಾತ ವಿದ್ವಾನ್ಪಾರ್ಥೋ ಧನಂಜಯಃ|

10015019c ಉತ್ಸೃಷ್ಟವಾನ್ನ ರೋಷೇಣ ನ ವಧಾಯ ತವಾಹವೇ||

ವ್ಯಾಸನು ಹೇಳಿದನು: “ಮಗೂ! ಪಾರ್ಥ ಧನಂಜಯನೂ ಕೂಡ ಬ್ರಹ್ಮಶಿರ ಅಸ್ತ್ರವನ್ನು ತಿಳಿದಿದ್ದಾನೆ. ಆದರೆ ರೋಷದಿಂದ ಯುದ್ಧದಲ್ಲಿ ನಿನ್ನ ವಧೆಗೆಂದು ಇದನ್ನು ಅವನು ಪ್ರಯೋಗಿಸಲಿಲ್ಲ.

10015020a ಅಸ್ತ್ರಮಸ್ತ್ರೇಣ ತು ರಣೇ ತವ ಸಂಶಮಯಿಷ್ಯತಾ|

10015020c ವಿಸೃಷ್ಟಮರ್ಜುನೇನೇದಂ ಪುನಶ್ಚ ಪ್ರತಿಸಂಹೃತಂ||

ರಣದಲ್ಲಿ ನಿನ್ನ ಅಸ್ತ್ರವನ್ನು ಅಸ್ತ್ರದಿಂದ ಪ್ರತಿಶಮನಗೊಳಿಸುವ ಸಲುವಾಗಿ ಅರ್ಜುನನು ಇದನ್ನು ಪ್ರಯೋಗಿಸಿ ಪುನಃ ಪ್ರತಿಸಂಹಾರಗೊಳಿಸಿದ್ದಾನೆ.

10015021a ಬ್ರಹ್ಮಾಸ್ತ್ರಮಪ್ಯವಾಪ್ಯೈತದುಪದೇಶಾತ್ಪಿತುಸ್ತವ|

10015021c ಕ್ಷತ್ರಧರ್ಮಾನ್ಮಹಾಬಾಹುರ್ನಾಕಂಪತ ಧನಂಜಯಃ||

ನಿನ್ನ ತಂದೆಯ ಉಪದೇಶದಿಂದ ಬ್ರಹ್ಮಾಸ್ತ್ರವನ್ನು ಪಡೆದುಕೊಂಡಿದ್ದರೂ ಮಹಾಬಾಹು ಧನಂಜಯನು ಕ್ಷತ್ರಧರ್ಮದಿಂದ ವಿಚಲಿತನಾಗಲಿಲ್ಲ.

10015022a ಏವಂ ಧೃತಿಮತಃ ಸಾಧೋಃ ಸರ್ವಾಸ್ತ್ರವಿದುಷಃ ಸತಃ|

10015022c ಸಭ್ರಾತೃಬಂಧೋಃ ಕಸ್ಮಾತ್ತ್ವಂ ವಧಮಸ್ಯ ಚಿಕೀರ್ಷಸಿ||

ಇಂತಹ ಧೃತಿಮತನಾದ, ಸಾಧುವಾದ, ಸರ್ವಾಸ್ತ್ರವಿದುವಾದ, ಸತ್ಪುರುಷನಾದ ಅರ್ಜುನನನ್ನು ಭ್ರಾತೃ-ಬಂಧುಗಳೊಂದಿಗೆ ವಧಿಸಲು ನೀನು ಏಕೆ ಬಯಸುತ್ತಿರುವೆ?

10015023a ಅಸ್ತ್ರಂ ಬ್ರಹ್ಮಶಿರೋ ಯತ್ರ ಪರಮಾಸ್ತ್ರೇಣ ವಧ್ಯತೇ|

10015023c ಸಮಾ ದ್ವಾದಶ ಪರ್ಜನ್ಯಸ್ತದ್ರಾಷ್ಟ್ರಂ ನಾಭಿವರ್ಷತಿ||

ಯಾವದೇಶದಲ್ಲಿ ಬ್ರಹ್ಮಶಿರವು ಇನ್ನೊಂದು ಪರಮಾಸ್ತ್ರದಿಂದ ನಾಶಗೊಳ್ಳುತ್ತದೆಯೋ ರಾಷ್ಟ್ರದಲ್ಲಿ ಹನ್ನೆರಡು ವರ್ಷಗಳ ಪರ್ಯಂತ ಮಳೆಯು ಸುರಿಯುವುದಿಲ್ಲ.

10015024a ಏತದರ್ಥಂ ಮಹಾಬಾಹುಃ ಶಕ್ತಿಮಾನಪಿ ಪಾಂಡವಃ|

10015024c ನ ವಿಹಂತ್ಯೇತದಸ್ತ್ರಂ ತೇ ಪ್ರಜಾಹಿತಚಿಕೀರ್ಷಯಾ||

ಇದೇ ಕಾರಣದಿಂದ ಮಹಾಬಾಹು ಪಾಂಡವನು ಶಕ್ತಿವಂತನಾಗಿದ್ದರೂ ಪ್ರಜಾಹಿತವನ್ನು ಬಯಸಿ ನಿನ್ನ ಅಸ್ತ್ರವನ್ನು ವಿನಾಶಗೊಳಿಸಲಿಲ್ಲ.

10015025a ಪಾಂಡವಾಸ್ತ್ವಂ ಚ ರಾಷ್ಟ್ರಂ ಚ ಸದಾ ಸಂರಕ್ಷ್ಯಮೇವ ನಃ|

10015025c ತಸ್ಮಾತ್ಸಂಹರ ದಿವ್ಯಂ ತ್ವಮಸ್ತ್ರಮೇತನ್ಮಹಾಭುಜ||

ಮಹಾಭುಜ! ಪಾಂಡವರನ್ನು, ರಾಷ್ಟ್ರವನ್ನು ಮತ್ತು ನಿನ್ನನ್ನು ಕೂಡ ಸದಾ ಸಂರಕ್ಷಿಸಲೋಸುಗ ದಿವ್ಯಾಸ್ತ್ರವನ್ನು ಉಪಸಂಹರಿಸು!

10015026a ಅರೋಷಸ್ತವ ಚೈವಾಸ್ತು ಪಾರ್ಥಾಃ ಸಂತು ನಿರಾಮಯಾಃ|

10015026c ನ ಹ್ಯಧರ್ಮೇಣ ರಾಜರ್ಷಿಃ ಪಾಂಡವೋ ಜೇತುಮಿಚ್ಚತಿ||

ನಿನ್ನ ರೋಷವು ತಣಿಯಲಿ. ಪಾರ್ಥರು ನಿರಾಮಯರಾಗಲಿ. ರಾಜರ್ಷಿ ಪಾಂಡವನು ಅಧರ್ಮದಿಂದ ಯಾರನ್ನೂ ಜಯಿಸಲು ಇಚ್ಛಿಸುವವನಲ್ಲ.

10015027a ಮಣಿಂ ಚೈತಂ ಪ್ರಯಚ್ಚೈಭ್ಯೋ ಯಸ್ತೇ ಶಿರಸಿ ತಿಷ್ಠತಿ|

10015027c ಏತದಾದಾಯ ತೇ ಪ್ರಾಣಾನ್ಪ್ರತಿದಾಸ್ಯಂತಿ ಪಾಂಡವಾಃ||

ನಿನ್ನ ಶಿರಸ್ಸಿನಲ್ಲಿ ಇರುವ ಮಣಿಯನ್ನು ಇವರಿಗೆ ಕೊಟ್ಟುಬಿಡು. ಇದನ್ನು ತೆಗೆದುಕೊಂಡು ಪ್ರತಿಯಾಗಿ ಪಾಂಡವರು ನಿನ್ನ ಪ್ರಾಣವನ್ನು ನೀಡುತ್ತಾರೆ.”

10015028 ದ್ರೌಣಿರುವಾಚ|

10015028a ಪಾಂಡವೈರ್ಯಾನಿ ರತ್ನಾನಿ ಯಚ್ಚಾನ್ಯತ್ಕೌರವೈರ್ಧನಂ|

10015028c ಅವಾಪ್ತಾನೀಹ ತೇಭ್ಯೋಽಯಂ ಮಣಿರ್ಮಮ ವಿಶಿಷ್ಯತೇ||

ದ್ರೌಣಿಯು ಹೇಳಿದನು: “ಇದೂವರೆಗೆ ಪಾಂಡವರು ಸಂಗ್ರಹಿಸಿಟ್ಟಿಕೊಂಡಿರುವ ರತ್ನಗಳಿಗಿಂತ ಮತ್ತು ಕೌರವ್ಯನ ಸಂಪತ್ತಿಗಿಂತ ನನ್ನ ಈ ಮಣಿಯು ಹೆಚ್ಚಿನ ಮೌಲ್ಯದ್ದಾಗಿದೆ.

10015029a ಯಮಾಬಧ್ಯ ಭಯಂ ನಾಸ್ತಿ ಶಸ್ತ್ರವ್ಯಾಧಿಕ್ಷುಧಾಶ್ರಯಂ|

10015029c ದೇವೇಭ್ಯೋ ದಾನವೇಭ್ಯೋ ವಾ ನಾಗೇಭ್ಯೋ ವಾ ಕಥಂ ಚನ||

10015030a ನ ಚ ರಕ್ಷೋಗಣಭಯಂ ನ ತಸ್ಕರಭಯಂ ತಥಾ|

10015030c ಏವಂವೀರ್ಯೋ ಮಣಿರಯಂ ನ ಮೇ ತ್ಯಾಜ್ಯಃ ಕಥಂ ಚನ||

ಮಣಿಯನ್ನು ಧರಿಸಿದವನಿಗೆ ಶಸ್ತ್ರ-ವ್ಯಾಧಿ-ಹಸಿವೆ ಮತ್ತು ಆಶ್ರಯಗಳ ಭಯವಿರುವುದಿಲ್ಲ. ದೇವತೆಗಳ, ದಾನವರ, ನಾಗಗಳ ಅಥವಾ ಯಾರ ಭಯವೂ ಇರುವುದಿಲ್ಲ. ರಾಕ್ಷಸರ ಭಯವಿರುವುದಿಲ್ಲ ಮತ್ತು ತಸ್ಕರಭಯವಿರುವುದಿಲ್ಲ. ಇಂತಹ ವೀರ್ಯವುಳ್ಳ ಮಣಿಯನ್ನು ನಾನು ಎಂದೂ ಬಿಟ್ಟುಕೊಡುವುದಿಲ್ಲ!

10015031a ಯತ್ತು ಮೇ ಭಗವಾನಾಹ ತನ್ಮೇ ಕಾರ್ಯಮನಂತರಂ|

10015031c ಅಯಂ ಮಣಿರಯಂ ಚಾಹಮಿಷೀಕಾ ನಿಪತಿಷ್ಯತಿ|

10015031e ಗರ್ಭೇಷು ಪಾಂಡವೇಯಾನಾಮಮೋಘಂ ಚೈತದುದ್ಯತಂ||

ಹೀಗಿದ್ದರೂ ಭಗವಾನನಾದ ನೀನು ಹೇಳಿದ ಕಾರ್ಯವನ್ನು ಮಾಡಬೇಕಾಗಿದೆ. ನಾನು ಮತ್ತು ನನ್ನ ಮಣಿಯು ಇಲ್ಲಿವೆ. ಆದರೆ ಈ ಜೊಂಡುಹುಲ್ಲು ಮಾತ್ರ ಪಾಂಡವೇಯರ ಗರ್ಭಗಳ ಮೇಲೆ ಬೀಳುತ್ತದೆ. ಇದನ್ನು ಅಮೋಘಗೊಳಿಸಲು ನನಗೆ ಸಾಧ್ಯವಿಲ್ಲ!”

10015032 ವ್ಯಾಸ ಉವಾಚ|

10015032a ಏವಂ ಕುರು ನ ಚಾನ್ಯಾ ತೇ ಬುದ್ಧಿಃ ಕಾರ್ಯಾ ಕದಾ ಚನ|

10015032c ಗರ್ಭೇಷು ಪಾಂಡವೇಯಾನಾಂ ವಿಸೃಜ್ಯೈತದುಪಾರಮ||

ವ್ಯಾಸನು ಹೇಳಿದನು: “ಹಾಗೆಯೇ ಮಾಡು! ಎಂದೂ ನಿನ್ನ ಬುದ್ಧಿಯನ್ನು ಬೇರೆ ಕಾರ್ಯಗಳಲ್ಲಿ ತೊಡಗಿಸಬೇಡ. ಪಾಂಡವೇಯರ ಗರ್ಭಗಳಲ್ಲಿ ಇದನ್ನು ವಿಸರ್ಜಿಸಿ ಶಾಂತನಾಗು!””

10015033 ವೈಶಂಪಾಯನ ಉವಾಚ|

10015033a ತತಃ ಪರಮಮಸ್ತ್ರಂ ತದಶ್ವತ್ಥಾಮಾ ಭೃಶಾತುರಃ|

10015033c ದ್ವೈಪಾಯನವಚಃ ಶ್ರುತ್ವಾ ಗರ್ಭೇಷು ಪ್ರಮುಮೋಚ ಹ||

ವೈಶಂಪಾಯನನು ಹೇಳಿದನು: “ದ್ವೈಪಾಯನನ ಮಾತನ್ನು ಕೇಳಿ ತುಂಬಾ ಆತುರದಲ್ಲಿದ್ದ ಅಶ್ವತ್ಥಾಮನು ಆ ಪರಮಾಸ್ತ್ರವನ್ನು ಪಾಂಡವರ ಗರ್ಭಗಳ ಮೇಲೆ ಪ್ರಯೋಗಿಸಿದನು.”

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಬ್ರಹ್ಮಶಿರೋಽಸ್ತ್ರಸ್ಯ ಪಾಂಡವೇಯಗರ್ಭಪ್ರವೇಶನೇ ಪಂಚದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಬ್ರಹ್ಮಶಿರೋಽಸ್ತ್ರಸ್ಯ ಪಾಂಡವೇಯಗರ್ಭಪ್ರವೇಶನ ಎನ್ನುವ ಹದಿನೈದನೇ ಅಧ್ಯಾಯವು.

Comments are closed.