Adi Parva: Chapter 59

ಆದಿ ಪರ್ವ: ಅಂಶಾವತರಣ ಪರ್ವ

೫೯

ಆದಿತ್ಯಾದಿವಂಶಕಥನ

ಆದಿವಂಶಾವಳಿ (೧-೫೪).

01059001 ವೈಶಂಪಾಯನ ಉವಾಚ

01059001a ಅಥ ನಾರಾಯಣೇನೇಂದ್ರಶ್ಚಕಾರ ಸಹ ಸಂವಿದಂ|

01059001c ಅವತರ್ತುಂ ಮಹೀಂ ಸ್ವರ್ಗಾದಂಶತಃ ಸಹಿತಃ ಸುರೈಃ||

ವೈಶಂಪಾಯನನು ಹೇಳಿದನು: “ಆಗ ಇಂದ್ರನು ನಾರಾಯಣನಲ್ಲಿ “ಸುರರೊಂದಿಗೆ ಸ್ವರ್ಗದಿಂದ ಭೂಮಿಗಿಳಿದು ನಮ್ಮ ನಮ್ಮ ಅಂಶಗಳಿಂದ ಅವತರಿಸಿತೋಣ!” ಎಂದು ಒಪ್ಪಂದ ಮಾಡಿಕೊಂಡನು.

01059002a ಆದಿಶ್ಯ ಚ ಸ್ವಯಂ ಶಕ್ರಃ ಸರ್ವಾನೇವ ದಿವೌಕಸಃ|

01059002c ನಿರ್ಜಗಾಮ ಪುನಸ್ತಸ್ಮಾತ್ ಕ್ಷಯಾನ್ನಾರಾಯಣಸ್ಯ ಹ||

ಸ್ವಯಂ ಶಕ್ರನೇ ಸರ್ವ ದಿವೌಕಸರಿಗೆ ಆದೇಶವನ್ನಿತ್ತು ನಾರಾಯಣನ ನಿವಾಸದಿಂದ ಹಿಂದಿರುಗಿದನು.

01059003a ತೇಽಮರಾರಿವಿನಾಶಾಯ ಸರ್ವಲೋಕಹಿತಾಯ ಚ|

01059003c ಅವತೇರುಃ ಕ್ರಮೇಣೇಮಾಂ ಮಹೀಂ ಸ್ವರ್ಗಾದ್ದಿವೌಕಸಃ||

ಅಮರ ಶತ್ರುಗಳ ವಿನಾಶಕ್ಕಾಗಿ ಮತ್ತು ಸರ್ವಲೋಕಹಿತಕ್ಕಾಗಿ ದಿವೌಕಸರು ಕ್ರಮೇಣವಾಗಿ ಸ್ವರ್ಗದಿಂದ ಭೂಮಿಗಿಳಿದರು. 

01059004a ತತೋ ಬ್ರಹ್ಮರ್ಷಿವಂಶೇಷು ಪಾರ್ಥಿವರ್ಷಿಕುಲೇಷು ಚ|

01059004c ಜಜ್ಞಿರೇ ರಾಜಶಾರ್ದೂಲ ಯಥಾಕಾಮಂ ದಿವೌಕಸಃ||

ರಾಜಶಾರ್ದೂಲ! ದಿವೌಕಸರು ಅವರಿಗಿಷ್ಟವಾದಂತೆ ಬ್ರಹ್ಮರ್ಷಿ ವಂಶಗಳಲ್ಲಿ ಮತ್ತು ರಾಜರ್ಷಿ ಕುಲಗಳಲ್ಲಿ ಜನ್ಮತಾಳಿದರು.

01059005a ದಾನವಾನ್ರಾಕ್ಷಸಾಂಶ್ಚೈವ ಗಂಧರ್ವಾನ್ಪನ್ನಗಾಂಸ್ತಥಾ|

01059005c ಪುರುಷಾದಾನಿ ಚಾನ್ಯಾನಿ ಜಘ್ನುಃ ಸತ್ತ್ವಾನ್ಯನೇಕಶಃ||

ಅವರು ಅನೇಕ ಸಂಖ್ಯೆಗಳಲ್ಲಿ ದಾನವ, ರಾಕ್ಷಸ, ಗಂಧರ್ವ, ನಾಗ ಮತ್ತು ಇತರ ನರಭಕ್ಷಕರನ್ನು ಸಂಹರಿಸಿದರು.

01059006a ದಾನವಾ ರಾಕ್ಷಸಾಶ್ಚೈವ ಗಂಧರ್ವಾಃ ಪನ್ನಗಾಸ್ತಥಾ|

01059006c ನ ತಾನ್ಬಲಸ್ಥಾನ್ಬಾಲ್ಯೇಽಪಿ ಜಘ್ನುರ್ಭರತಸತ್ತಮ||

ಭರತಸತ್ತಮ! ದಾನವರಿಗಾಗಲೀ ರಾಕ್ಷಸರಿಗಾಗಲೀ ಗಂಧರ್ವರಿಗಾಗಲೀ ಅಥವಾ ನಾಗಗಳಿಗಾಗಲೀ ಬಲಶಾಲಿಗಳಾದ ಅವರನ್ನು ಬಾಲ್ಯದಲ್ಲಿಯೂ ಕೊಲ್ಲಲಿಕ್ಕಾಗಲಿಲ್ಲ.”

01059007 ಜನಮೇಜಯ ಉವಾಚ

01059007a ದೇವದಾನವಸಂಘಾನಾಂ ಗಂಧರ್ವಾಪ್ಸರಸಾಂ ತಥಾ|

01059007c ಮಾನವಾನಾಂ ಚ ಸರ್ವೇಷಾಂ ತಥಾ ವೈ ಯಕ್ಷರಕ್ಷಸಾಂ||

01059008a ಶ್ರೋತುಮಿಚ್ಛಾಮಿ ತತ್ತ್ವೇನ ಸಂಭವಂ ಕೃತ್ಸ್ನಮಾದಿತಃ|

01059008c ಪ್ರಾಣಿನಾಂ ಚೈವ ಸರ್ವೇಷಾಂ ಸರ್ವಶಃ ಸರ್ವವಿದ್ಧ್ಯಸಿ||

ಜನಮೇಜಯನು ಹೇಳಿದನು: “ದೇವದಾನವರ ಗುಂಪುಗಳ, ಗಂಧರ್ವ-ಅಪ್ಸರೆಯರ, ಮಾನವರ, ಯಕ್ಷರಾಕ್ಷಸರ ಮತ್ತು ಸರ್ವ ಪಾಣಿಗಳೆಲ್ಲರ ಹುಟ್ಟನ್ನು ಪ್ರಾರಂಭದಿಂದ - ಎಲ್ಲರ ಎಲ್ಲವನ್ನೂ ತಿಳಿದ ನಿನ್ನಿಂದ ಕೇಳಲು ಬಯಸುತ್ತೇನೆ.”

01059009 ವೈಶಂಪಾಯನ ಉವಾಚ

01059009a ಹಂತ ತೇ ಕಥಯಿಷ್ಯಾಮಿ ನಮಸ್ಕೃತ್ವಾ ಸ್ವಯಂಭುವೇ|

01059009c ಸುರಾದೀನಾಮಹಂ ಸಮ್ಯಗ್ಲೋಕಾನಾಂ ಪ್ರಭವಾಪ್ಯಯಂ||

ವೈಶಂಪಾಯನನು ಹೇಳಿದನು: “ಸ್ವಯಂಭುವಿಗೆ ನಮಸ್ಕರಿಸಿ ಸುರರೇ ಮೊದಲಾಗಿ ಲೋಕದ ಎಲ್ಲರ ಹುಟ್ಟನ್ನು ಹೇಳುತ್ತೇನೆ.

01059010a ಬ್ರಹ್ಮಣೋ ಮಾನಸಾಃ ಪುತ್ರಾ ವಿದಿತಾಃ ಷಣ್ಮಹರ್ಷಯಃ|

01059010c ಮರೀಚಿರತ್ರ್ಯಂಗಿರಸೌ ಪುಲಸ್ತ್ಯಃ ಪುಲಹಃ ಕ್ರತುಃ||

ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ ಮತ್ತು ಕ್ರತು ಈ ಆರು ಮಹರ್ಷಿಗಳು ಬ್ರಹ್ಮನ ಮಾನಸಪುತ್ರರೆಂದು ಹೇಳುತ್ತಾರೆ.

01059011a ಮರೀಚೇಃ ಕಶ್ಯಪಃ ಪುತ್ರಃ ಕಶ್ಯಪಾತ್ತು ಇಮಾಃ ಪ್ರಜಾಃ|

01059011c ಪ್ರಜಜ್ಞಿರೇ ಮಹಾಭಾಗಾ ದಕ್ಷಕನ್ಯಾಸ್ತ್ರಯೋದಶ||

ಮರೀಚಿಯ ಪುತ್ರ ಕಶ್ಯಪ. ಕಶ್ಯಪನಿಂದ ಮಹಾಭಾಗ ದಕ್ಷನ ಹದಿಮೂರು ಕನ್ಯೆಯರಲ್ಲಿ ಎಲ್ಲ ಪ್ರಜೆಗಳೂ ಹುಟ್ಟಿದರು.

01059012a ಅದಿತಿರ್ದಿತಿರ್ದನುಃ ಕಾಲಾ ಅನಾಯುಃ ಸಿಂಹಿಕಾ ಮುನಿಃ|

01059012c ಕ್ರೋಧಾ ಪ್ರಾವಾ ಅರಿಷ್ಟಾ[1] ಚ ವಿನತಾ ಕಪಿಲಾ ತಥಾ||

01059013a ಕದ್ರೂಶ್ಚ ಮನುಜವ್ಯಾಘ್ರ ದಕ್ಷಕನ್ಯೈವ ಭಾರತ|

01059013c ಏತಾಸಾಂ ವೀರ್ಯಸಂಪನ್ನಂ ಪುತ್ರಪೌತ್ರಮನಂತಕಂ||

ಮನುಜವ್ಯಾಘ್ರ! ಭಾರತ! ಅದಿತಿ, ದಿತಿ, ದನು, ಕಾಲಾ, ಅನಾಯು, ಸಿಂಹಿಕಾ, ಮುನಿ, ಕ್ರೋಧಾ, ಪ್ರಾವಾ, ಅರಿಷ್ಟಾ, ವಿನತಾ, ಕಪಿಲ, ಮತ್ತು ಕದ್ರು ಇವರು ಕಶ್ಯಪ ಪತ್ನಿಯರಾದ ದಕ್ಷಕನ್ಯೆಯರು[2]. ಇವರಲ್ಲಿ ಅನಂತ ಸಂಖ್ಯೆಗಳಲ್ಲಿ ವೀರ್ಯಸಂಪನ್ನ ಪುತ್ರ ಪೌತ್ರರಾದರು.

01059014a ಅದಿತ್ಯಾಂ ದ್ವಾದಶಾದಿತ್ಯಾಃ ಸಂಭೂತಾ ಭುವನೇಶ್ವರಾಃ|

01059014c ಯೇ ರಾಜನ್ನಾಮತಸ್ತಾಂಸ್ತೇ ಕೀರ್ತಯಿಷ್ಯಾಮಿ ಭಾರತ||

ಹನ್ನೆರಡು ಭುವನೇಶ್ವರ ಆದಿತ್ಯರು ಅದಿತಿಯಲ್ಲಿ ಜನಿಸಿದರು. ಭಾರತ! ರಾಜನ್! ಅವರ ಹೆಸರುಗಳನ್ನು ಹೇಳುತ್ತೇನೆ.

01059015a ಧಾತಾ ಮಿತ್ರೋಽರ್ಯಮಾ ಶಕ್ರೋ ವರುಣಶ್ಚಾಂಶ ಏವ ಚ|

01059015c ಭಗೋ ವಿವಸ್ವಾನ್ಪೂಷಾ ಚ ಸವಿತಾ ದಶಮಸ್ತಥಾ||

ಮೊದಲ ಹತ್ತು ಮಂದಿ - ಧಾತ, ಮಿತ್ರ, ಯಮ, ಶಕ್ರ, ವರುಣ, ಅಂಶ, ಭಗ, ವಿವಸ್ವತ, ಪೂಷ ಮತ್ತು ಸವಿತ.

01059016a ಏಕಾದಶಸ್ತಥಾ ತ್ವಷ್ಟಾ ವಿಷ್ಣುರ್ದ್ವಾದಶ ಉಚ್ಯತೇ|

01059016c ಜಘನ್ಯಜಃ ಸ ಸರ್ವೇಷಾಮಾದಿತ್ಯಾನಾಂ ಗುಣಾಧಿಕಃ||

ಹನ್ನೊಂದನೆಯವನು ತ್ವಷ್ಟ ಮತ್ತು ಹನ್ನೆರಡನೆಯವನು ವಿಷ್ಣು ಎಂದು ಹೇಳುತ್ತಾರೆ. ಕೊನೆಯವನು ಸರ್ವ ಆದಿತ್ಯರಲ್ಲಿ ಅಧಿಕ ಗುಣವಂತನು.

01059017a ಏಕ ಏವ ದಿತೇಃ ಪುತ್ರೋ ಹಿರಣ್ಯಕಶಿಪುಃ ಸ್ಮೃತಃ|

01059017c ನಾಮ್ನಾ ಖ್ಯಾತಾಸ್ತು ತಸ್ಯೇಮೇ ಪುತ್ರಾಃ ಪಂಚ ಮಹಾತ್ಮನಃ||

ದಿತಿಗೆ ಹಿರಣ್ಯಕಶಿಪುವೆಂಬ ಹೆಸರಿನಿಂದ ಖ್ಯಾತ ಒಬ್ಬನೇ ಮಗನಿದ್ದನೆಂದು ಕೇಳಿದ್ದೇವೆ. ಆ ಮಹಾತ್ಮನಿಗೆ ಐವರು ಪುತ್ರರಿದ್ದರು.

01059018a ಪ್ರಹ್ರಾದಃ[3] ಪೂರ್ವಜಸ್ತೇಷಾಂ ಸಂಹ್ರಾದಸ್ತದನಂತರಂ|

01059018c ಅನುಹ್ರಾದಸ್ತೃತೀಯೋಽಭೂತ್ತಸ್ಮಾಚ್ಚ ಶಿಬಿಬಾಷ್ಕಲೌ||

ಅವರಲ್ಲಿ ಮೊದಲನೆಯವನು ಪ್ರಹ್ರಾದ, ಅವನ ನಂತರ ಸಂಹ್ಲಾದ, ಮೂರನೆಯವನು ಅನುಹ್ಲಾದ, ಮತ್ತು ನಂತರ ಶಿಬಿ ಮತ್ತು ಬಾಷ್ಕಲ.

01059019a ಪ್ರಹ್ರಾದಸ್ಯ[4] ತ್ರಯಃ ಪುತ್ರಾಃ ಖ್ಯಾತಾಃ ಸರ್ವತ್ರ ಭಾರತ|

01059019c ವಿರೋಚನಶ್ಚ ಕುಂಭಶ್ಚ ನಿಕುಂಭಶ್ಚೇತಿ ವಿಶ್ರುತಾಃ||

ಭಾರತ! ಪ್ರಹ್ರಾದನ ಮೂರೂ ಪುತ್ರರೂ ಎಲ್ಲೆಲ್ಲಿಯೂ ಖ್ಯಾತರಾಗಿದ್ದರು: ವಿರೋಚನ, ಕುಂಭ, ನಿಕುಂಭರೆಂದು ವಿಶೃತರಾಗಿದ್ದರು.

01059020a ವಿರೋಚನಸ್ಯ ಪುತ್ರೋಽಭೂದ್ಬಲಿರೇಕಃ ಪ್ರತಾಪವಾನ್|

01059020c ಬಲೇಶ್ಚ ಪ್ರಥಿತಃ ಪುತ್ರೋ ಬಾಣೋ ನಾಮ ಮಹಾಸುರಃ[5]||

ಪ್ರತಾಪಿ ಬಲಿಯೊಬ್ಬನೇ ವಿರೋಚನನ ಪುತ್ರ. ಬಾಣ ಎಂಬ ಹೆಸರಿನ ಮಹಾಸುರನು ಬಲಿಯ ಪುತ್ರನೆಂದು ಪ್ರಥಿತದಲ್ಲಿದೆ.

01059021a ಚತ್ವಾರಿಂಶದ್ದನೋಃ[6] ಪುತ್ರಾಃ ಖ್ಯಾತಾಃ ಸರ್ವತ್ರ ಭಾರತ|

01059021c ತೇಷಾಂ ಪ್ರಥಮಜೋ ರಾಜಾ ವಿಪ್ರಚಿತ್ತಿರ್ಮಹಾಯಶಾಃ||

ಭಾರತ! ದನುವಿನ ನಲವತ್ತು ಪುತ್ರರೂ ಸರ್ವತ್ರ ಖ್ಯಾತರಾಗಿದ್ದಾರೆ. ಅವರಲ್ಲಿ ಮೊದಲು ಹುಟ್ಟಿದವನು ಮಹಾಯಶಸ್ವಿ ರಾಜಾ ವಿಪ್ರಚಿತ್ತಿ.

01059022a ಶಂಬರೋ ನಮುಚಿಶ್ಚೈವ ಪುಲೋಮಾ ಚೇತಿ ವಿಶ್ರುತಃ|

01059022c ಅಸಿಲೋಮಾ ಚ ಕೇಶೀ ಚ ದುರ್ಜಯಶ್ಚೈವ ದಾನವಃ||

01059023a ಅಯಃಶಿರಾ ಅಶ್ವಶಿರಾ ಅಯಃಶಂಕುಶ್ಚ[7] ವೀರ್ಯವಾನ್|

01059023c ತಥಾ ಗಗನಮೂರ್ಧಾ ಚ ವೇಗವಾನ್ಕೇತುಮಾಂಶ್ಚ ಯಃ||

01059024a ಸ್ವರ್ಭಾನುರಶ್ವೋಽಶ್ವಪತಿರ್ವೃಷಪರ್ವಾಜಕಸ್ತಥಾ|

01059024c ಅಶ್ವಗ್ರೀವಶ್ಚ ಸೂಕ್ಷ್ಮಶ್ಚ ತುಹುಂಡಶ್ಚ ಮಹಾಸುರಃ||

01059025a ಇಸೃಪಾ ಏಕಚಕ್ರಶ್ಚ[8] ವಿರೂಪಾಕ್ಷೋ ಹರಾಹರೌ|

01059025c ನಿಚಂದ್ರಶ್ಚ ನಿಕುಂಭಶ್ಚ ಕುಪಠಃ ಕಾಪಠಸ್ತಥಾ||

01059026a ಶರಭಃ ಶಲಭಶ್ಚೈವ ಸೂರ್ಯಾಚಂದ್ರಮಸೌ ತಥಾ|

01059026c ಇತಿ ಖ್ಯಾತಾ ದನೋರ್ವಂಶೇ ದಾನವಾಃ ಪರಿಕೀರ್ತಿತಾಃ|

01059026e ಅನ್ಯೌ ತು ಖಲು ದೇವಾನಾಂ ಸೂರ್ಯಾಚಂದ್ರಮಸೌ ಸ್ಮೃತೌ||

ಶಂಬರ, ನಮುಚಿ, ಪುಲೋಮ, ಅಸಿಲೋಮ. ಕೇಶಿ, ದುರ್ಜಯ, ಅಯಃಶಿರ, ಅಶ್ವಶಿರ, ಅಯಃಶಂಕು, ಗಗನಮೂರ್ಧಾ, ವೇಗವಾನ, ಕೇತುಮಾನ್, ಸ್ವರ್ಭಾನು, ಅಶ್ವ, ಅಶ್ವಪತಿ, ವೃಶಪರ್ವ, ಅಜಕ, ಅಶ್ವಗ್ರೀವ, ಸೂಕ್ಷ್ಮ, ತುಹುಂಡ, ಇಸೃಪ, ಏಕಚಕ್ರ, ವಿರೂಪಾಕ್ಷ, ಹರ, ಅಹರ, ನಿಚಂದ್ರ, ನಿಕುಂಭ, ಕುಪಠ, ಕಾಪಠ, ಶರಭ, ಶಲಭ, ಸೂರ್ಯ, ಚಂದ್ರ, ಇವರೆಲ್ಲರೂ ದಾನವ ವಂಶದಲ್ಲಿ ಖ್ಯಾತರೆಂದು ಹೇಳುತ್ತಾರೆ. ದೇವತೆಗಳಾದ ಸೂರ್ಯ ಮತ್ತು ಚಂದ್ರರೇ ಬೇರೆ ಎಂದೂ ಕೇಳಿದ್ದೇವೆ.

01059027a ಇಮೇ ಚ ವಂಶೇ ಪ್ರಥಿತಾಃ ಸತ್ತ್ವವಂತೋ ಮಹಾಬಲಾಃ|

01059027c ದನುಪುತ್ರಾ ಮಹಾರಾಜ ದಶ ದಾನವಪುಂಗವಾಃ||

ಮಹಾರಾಜ! ಇವು ಸತ್ವವಂತ ಮತ್ತು ಮಹಾಬಲ ದಾನವ ವಂಶಗಳೆಂದು ಪ್ರಥಿತಗೊಂಡಿವೆ. ದನುವಿನ ವಂಶದಲ್ಲಿ ಹುಟ್ಟಿದ ಈ ಹತ್ತು ದಾನವರು ಮುಖ್ಯರು.

01059028a ಏಕಾಕ್ಷೋ ಮೃತಪಾ ವೀರಃ ಪ್ರಲಂಬನರಕಾವಪಿ|

01059028c ವಾತಾಪಿಃ ಶತ್ರುತಪನಃ ಶತಶ್ಚೈವ ಮಹಾಸುರಃ||

01059029a ಗವಿಷ್ಠಶ್ಚ ದನಾಯುಶ್ಚ[9] ದೀರ್ಘಜಿಹ್ವಶ್ಚ ದಾನವಃ|

01059029c ಅಸಂಖ್ಯೇಯಾಃ ಸ್ಮೃತಾಸ್ತೇಷಾಂ ಪುತ್ರಾಃ ಪೌತ್ರಾಶ್ಚ ಭಾರತ||

ಭಾರತ! ಏಕಾಕ್ಷ, ವೀರ ಮೃತಪ, ಪ್ರಲಂಬ, ನರಕ, ವಾತಾಪಿ, ಶತ್ರುತಪನ, ಮಹಾಸುರ ಶಠ, ಗವಿಷ್ಠ, ದನಾಯು, ದಾನವ ದೀರ್ಘಜಿಹ್ವ, ಮತ್ತು ಇವರ ಪುತ್ರ-ಪೌತ್ರರು ಅಸಂಖ್ಯರು ಎಂದು ಕೇಳಿದ್ದೇವೆ!

01059030a ಸಿಂಹಿಕಾ ಸುಷುವೇ ಪುತ್ರಂ ರಾಹುಂ ಚಂದ್ರಾರ್ಕಮರ್ದನಂ|

01059030c ಸುಚಂದ್ರಂ ಚಂದ್ರಹಂತಾರಂ ತಥಾ ಚಂದ್ರವಿಮರ್ದನಂ||

ಸಿಂಹಿಕೆಯು ಚಂದ್ರ ಮತ್ತು ಸೂರ್ಯರ ಮಾನಮರ್ದನ ರಾಹು, ಹಾಗೂ ಸುಚಂದ್ರ, ಚಂದ್ರಹಂತಾರ ಹಾಗೂ ಚಂದ್ರವಿಮರ್ದನರೆಂಬ ಪುತ್ರರಿಗೆ ಜನ್ಮವಿತ್ತಳು.

01059031a ಕ್ರೂರಸ್ವಭಾವಂ ಕ್ರೂರಾಯಾಃ ಪುತ್ರಪೌತ್ರಮನಂತಕಂ|

01059031c ಗಣಃ ಕ್ರೋಧವಶೋ ನಾಮ ಕ್ರೂರಕರ್ಮಾರಿಮರ್ದನಃ||

ಕ್ರೂರಳ ಅಸಂಖ್ಯ ಪುತ್ರ ಪೌತ್ರರು ಕ್ರೂರ ಸ್ವಭಾವದವರಾಗಿದ್ದರು. ಆ ಕ್ರೂರ ಕರ್ಮಿ ಅರಿಮರ್ದನ ಗುಂಪಿಗೆ ಕ್ರೋಧವಶ ಎನ್ನುವ ಹೆಸರಿದೆ. 

01059032a ಅನಾಯುಷಃ ಪುನಃ ಪುತ್ರಾಶ್ಚತ್ವಾರೋಽಸುರಪುಂಗವಾಃ|

01059032c ವಿಕ್ಷರೋ ಬಲವೀರೌ ಚ ವೃತ್ರಶ್ಚೈವ ಮಹಾಸುರಃ||

ಅನಾಯುವಿಗೆ ನಾಲ್ವರು ಅಸುರಪುಂಗವ ಪುತ್ರರಾದರು: ವಿಕ್ಷರ, ಬಲ, ವೀರ, ಮತ್ತು ಮಹಾಸುರ ವೃತ್ರ.

01059033a ಕಾಲಾಯಾಃ ಪ್ರಥಿತಾಃ ಪುತ್ರಾಃ ಕಾಲಕಲ್ಪಾಃ ಪ್ರಹಾರಿಣಃ|

01059033c ಭುವಿ ಖ್ಯಾತಾ ಮಹಾವೀರ್ಯಾ ದಾನವೇಷು ಪರಂತಪಾಃ||

ಕಾಲಾಳ ಪುತ್ರರು ಕಾಲನಂತೆ ಪ್ರಹಾರಿಗಳಿದ್ದರೆಂದು ಹೇಳುತ್ತಾರೆ. ಅವರು ಭೂಮಿಯ ದಾನವರಲ್ಲಿಯೇ ಮಹಾವೀರ ಶತ್ರುತಾಪನರೆಂದು ಖ್ಯಾತರಾದರು.

01059034a ವಿನಾಶನಶ್ಚ ಕ್ರೋಧಶ್ಚ ಹಂತಾ ಕ್ರೋಧಸ್ಯ ಚಾಪರಃ|

01059034c ಕ್ರೋಧಶತ್ರುಸ್ತಥೈವಾನ್ಯಃ ಕಾಲೇಯಾ[10] ಇತಿ ವಿಶ್ರುತಾಃ||

ಈ ನಾಲ್ವರ ಹೆಸರು: ವಿನಾಶನ, ಕ್ರೋಧ, ಹಂತ, ಕ್ರೋಧಶತ್ರು. ಕಾಲೇಯರೆಂದು ವಿಶೃತ ಅನ್ಯರೂ ಕ್ರೋಧಳ ವಂಶದವರೇ.

01059035a ಅಸುರಾಣಾಮುಪಾಧ್ಯಾಯಃ ಶುಕ್ರಃಸ್ತ್ವ ಋಷಿಸುತೋಽಭವತ್|

01059035c ಖ್ಯಾತಾಶ್ಚೋಶನಸಃ ಪುತ್ರಾಶ್ಚತ್ವಾರೋಽಸುರಯಾಜಕಾಃ||

ಅಸುರರ ಉಪಾಧ್ಯಾಯ ಶುಕ್ರನು ಭೃಗುಋಷಿಯ ಮಗನು. ಅವನು ಉಶನ ಎಂದೂ ಖ್ಯಾತನಾಗಿದ್ದನು. ಅವನ ನಾಲ್ವರು ಪುತ್ರರೂ ಅಸುರ ಯಾಜಕರಾಗಿದ್ದರು. 

01059036a ತ್ವಷ್ಟಾವರಸ್ತಥಾತ್ರಿಶ್ಚ ದ್ವಾವನ್ಯೌ ಮಂತ್ರಕರ್ಮಿಣೌ|

01059036c ತೇಜಸಾ ಸೂರ್ಯಸಂಕಾಶಾ ಬ್ರಹ್ಮಲೋಕಪ್ರಭಾವನಾಃ||

ಇವರಲ್ಲದೇ ಅವನಿಗೆ ತ್ವಷ್ಟಾವರ ಮತ್ತು ಅತ್ರಿ ಎಂಬ ಇಬ್ಬರು ಮಂತ್ರಕರ್ಮಿ ಪುತ್ರರಾದರು. ತೇಜದಲ್ಲಿ ಅವರು ಸೂರ್ಯಸಂಕಾಶರೂ ಬ್ರಹ್ಮಲೋಕ ಪ್ರಭಾವನರೂ ಆಗಿದ್ದರು.

01059037a ಇತ್ಯೇಷ ವಂಶಪ್ರಭವಃ ಕಥಿತಸ್ತೇ ತರಸ್ವಿನಾಂ|

01059037c ಅಸುರಾಣಾಂ ಸುರಾಣಾಂ ಚ ಪುರಾಣೇ ಸಂಶ್ರುತೋ ಮಯಾ||

ಈ ರೀತಿ ಪುರಾಣಗಳಿಂದ ನಾನು ಕೇಳಿದ ಹಾಗೆ ಅಸುರರು ಮತ್ತು ಸುರರ ವಂಶೋತ್ಮತ್ತಿ ಮತ್ತು ಕುಲಗಳನ್ನು ಹೇಳಿದ್ದೇನೆ.

01059038a ಏತೇಷಾಂ ಯದಪತ್ಯಂ ತು ನ ಶಕ್ಯಂ ತದಶೇಷತಃ|

01059038c ಪ್ರಸಂಖ್ಯಾತುಂ ಮಹೀಪಾಲ ಗುಣಭೂತಮನಂತಕಂ||

ಇವರಲ್ಲಿ ಜನಿಸಿದ ಪೀಳಿಗೆಗಳೆಲ್ಲವನ್ನೂ ಎಣಿಸುವುದು ಅಶಕ್ಯ. ಮಹೀಪಾಲ! ಅವರ ಸಂಖ್ಯೆ ಅನಂತ.

01059039a ತಾರ್ಕ್ಷ್ಯಶ್ಚಾರಿಷ್ಟನೇಮಿಶ್ಚ ತಥೈವ ಗರುಡಾರುಣೌ|

01059039c ಆರುಣಿರ್ವಾರುಣಿಶ್ಚೈವ ವೈನತೇಯಾ ಇತಿ ಸ್ಮೃತಾಃ||

ತಾರ್ಕ್ಷ್ಯ, ಅರಿಷ್ಟನೇಮಿ, ಗರುಡ, ಅರುಣ, ಆರುಣಿ ಮತ್ತು ವಾರುಣಿಯರು ವಿನತೆಯ ಮಕ್ಕಳೆಂದು ಕೇಳಿದ್ದೇವೆ.

01059040a ಶೇಷೋಽನಂತೋ ವಾಸುಕಿಶ್ಚ ತಕ್ಷಕಶ್ಚ ಭುಜಂಗಮಃ|

01059040c ಕೂರ್ಮಶ್ಚ ಕುಲಿಕಶ್ಚೈವ ಕಾದ್ರವೇಯಾ ಮಹಾಬಲಾಃ||

ಶೇಷ, ಅನಂತ, ವಾಸುಕಿ, ತಕ್ಷಕ, ಕೂರ್ಮ, ಕುಲಿಕ ಈ ಎಲ್ಲ ಮಹಾ ಬಲಶಾಲಿ ನಾಗಗಳು ಕದ್ರುವಿನ ಮಕ್ಕಳು.

01059041a ಭೀಮಸೇನೋಗ್ರಸೇನೌ ಚ ಸುಪರ್ಣೋ ವರುಣಸ್ತಥಾ|

01059041c ಗೋಪತಿರ್ಧೃತರಾಷ್ಟ್ರಶ್ಚ ಸೂರ್ಯವರ್ಚಾಶ್ಚ ಸಪ್ತಮಃ||

01059042a ಪತ್ರವಾನರ್ಕಪರ್ಣಶ್ಚ[11] ಪ್ರಯುತಶ್ಚೈವ ವಿಶ್ರುತಃ|

01059042c ಭೀಮಶ್ಚಿತ್ರರಥಶ್ಚೈವ ವಿಖ್ಯಾತಃ ಸರ್ವವಿದ್ವಶೀ||

01059043a ತಥಾ ಶಾಲಿಶಿರಾ ರಾಜನ್ ಪ್ರದ್ಯುಮ್ನಶ್ಚ[12] ಚತುರ್ದಶಃ|

01059043c ಕಲಿಃ ಪಂಚದಶಶ್ಚೈವ ನಾರದಶ್ಚೈವ ಷೋಡಶಃ|

01059043e ಇತ್ಯೇತೇ ದೇವಗಂಧರ್ವಾ ಮೌನೇಯಾಃ ಪರಿಕೀರ್ತಿತಾಃ||

ಭೀಮಸೇನ, ಉಗ್ರಸೇನ, ಸುಪರ್ಣ, ವರುಣ, ಗೋಪತಿ, ಧೃತರಾಷ್ಟ್ರ, ಮತ್ತು ಏಳನೆಯವನು ಸೂರ್ಯವರ್ಚ; ಪತ್ರವಾನ, ಅರ್ಕಪರ್ಣ, ಪ್ರಖ್ಯಾತ ಪ್ರಯುತ, ವಿಖ್ಯಾತ ಮತ್ತು ಸರ್ವವನ್ನು ತಿಳಿದ ಭೀಮ ಮತ್ತು ಚಿತ್ರರಥರು; ಶಾಲಿಶಿರ ಮತ್ತು ಹದಿನಾಲ್ಕನೆಯವನು ಪ್ರದ್ಯುಮ್ನ, ಹದಿನೈದನೆಯವನು ಕಲಿ, ಹದಿನಾರನೆಯವನು ನಾರದ, ಇವರೆಲ್ಲ ದೇವ-ಗಂಧರ್ವರೂ ಮುನಿಯ ಮಕ್ಕಳೆಂದು ಹೇಳಿದ್ದಾರೆ. 

01059044a ಅತಸ್ತು ಭೂತಾನ್ಯನ್ಯಾನಿ ಕೀರ್ತಯಿಷ್ಯಾಮಿ ಭಾರತ|

01059044c ಅನವದ್ಯಾಮನುವಶಾಮನೂನಾಮರುಣಾಂ ಪ್ರಿಯಾಂ|

01059044e ಅನೂಪಾಂ ಸುಭಗಾಂ ಭಾಸೀಮಿತಿ ಪ್ರಾವಾ ವ್ಯಜಾಯತ[13]||

ಭಾರತ! ಈಗ ನಾನು ಅನ್ಯ ಜೀವಿಗಳ ಕುರಿತು ಹೇಳುತ್ತೇನೆ. ಅನವದ್ಯ, ಅಮನು, ಅವಶ, ಅನೂನಾ, ಅರುಣಾ, ಪ್ರಿಯಾ, ಅನೂಪಾ, ಸುಭಗಾ ಮತ್ತು ಭಾಸೀ ಇವರು ದಕ್ಷಕನ್ಯೆ ಪ್ರಾವಳಲ್ಲಿ ಜನಿಸಿದರು.

01059045a ಸಿದ್ಧಃ ಪೂರ್ಣಶ್ಚ ಬರ್ಹೀ ಚ ಪೂರ್ಣಾಶಶ್ಚ ಮಹಾಯಶಾಃ|

01059045c ಬ್ರಹ್ಮಚಾರೀ ರತಿಗುಣಃ ಸುಪರ್ಣಶ್ಚೈವ ಸಪ್ತಮಃ||

01059046a ವಿಶ್ವಾವಸುಶ್ಚ ಭಾನುಶ್ಚ ಸುಚಂದ್ರೋ ದಶಮಸ್ತಥಾ|

01059046c ಇತ್ಯೇತೇ ದೇವಗಂಧರ್ವಾಃ ಪ್ರಾವೇಯಾಃ ಪರಿಕೀರ್ತಿತಾಃ||

ಸಿದ್ಧ, ಪೂರ್ಣ, ಬರ್ಹಿ, ಮಹಾಯಶ ಪೂರ್ಣಾಶ, ಬ್ರಹ್ಮಚಾರೀ, ರತಿಗುಣ, ಏಳನೆಯವನು ಸುಪರ್ಣ, ವಿಶ್ವಾವಸು, ಭಾನು, ಮತ್ತು ಹತ್ತನೆಯವನು ಸುಚಂದ್ರ ಈ ಎಲ್ಲ ದೇವ-ಗಂಧರ್ವರೂ ಪ್ರಾವಳ ಮಕ್ಕಳೆಂದು ಹೇಳುತ್ತಾರೆ.

01059047a ಇಮಂತ್ವಪ್ಸರಸಾಂ ವಂಶಂ ವಿದಿತಂ ಪುಣ್ಯಲಕ್ಷಣಂ|

01059047c ಪ್ರಾವಾಸೂತ ಮಹಾಭಾಗಾ ದೇವೀ ದೇವರ್ಷಿತಃ ಪುರಾ||

01059048a ಅಲಂಬುಸಾ ಮಿಶ್ರಕೇಷೀ ವಿದ್ಯುತ್ಪರ್ಣಾ ತುಲಾನಘಾ|

01059048c ಅರುಣಾ ರಕ್ಷಿತಾ ಚೈವ ರಂಭಾ ತದ್ವನ್ಮನೋರಮಾ||

01059049a ಅಸಿತಾ ಚ ಸುಬಾಹುಶ್ಚ ಸುವ್ರತಾ ಸುಭುಜಾ ತಥಾ|

01059049c ಸುಪ್ರಿಯಾ ಚಾತಿಬಾಹುಶ್ಚ ವಿಖ್ಯಾತೌ ಚ ಹಹಾಹುಹೂ|

01059049e ತುಂಬುರುಶ್ಚೇತಿ ಚತ್ವಾರಃ ಸ್ಮೃತಾ ಗಂಧರ್ವಸತ್ತಮಾಃ||

ಈ ಮಹಾಭಾಗೆ ದೇವಿಯಿಂದ ಹಿಂದೆ ದೇವರ್ಷಿಯಿಂದ ಪುಣ್ಯಲಕ್ಷಣಗಳಿಂದೊಡಗೂಡಿದ ಅಪ್ಸರೆಯರ ವಂಶವು ಉತ್ಪನ್ನವಾಯಿತೆಂದು ಹೇಳುತ್ತಾರೆ. ಅಲಂಬುಸಾ, ಮಿಶ್ರಕೇಶೀ, ವಿದ್ಯುತ್ಪರ್ಣಾ, ಅನಘೆ ತುಲಾ, ಅರುಣಾ, ರಕ್ಷಿತಾ, ರಂಭಾ, ಮನೋರಮಾ, ಅಸಿತ, ಸುಬಾಹು, ಸುವ್ರತಾ, ಸುಭುಜಾ, ಸುಪ್ರಿಯಾ. ಅತಿಬಾಹು, ವಿಖ್ಯಾತರಾದ ಹಾಹಾ, ಹುಹು, ತುಂಬುರು ಈ ನಾಲ್ವರು ಗಂಧರ್ವಸತ್ತಮರೂ ಕೂಡ ಪ್ರಾಹಾಳ ಮಕ್ಕಳು.

01059050a ಅಮೃತಂ ಬ್ರಾಹ್ಮಣಾ ಗಾವೋ ಗಂಧರ್ವಾಪ್ಸರಸಸ್ತಥಾ|

01059050c ಅಪತ್ಯಂ ಕಪಿಲಾಯಾಸ್ತು ಪುರಾಣೇ ಪರಿಕೀರ್ತಿತಂ||

ಅಮೃತ, ಬ್ರಾಹ್ಮಣ, ಗೋವುಗಳು, ಗಂಧರ್ವರು ಮತ್ತು ಅಪ್ಸರೆಯರು ಕಪಿಲಳ ಮಕ್ಕಳೆಂದು ಪುರಾಣಗಳು ಹೇಳುತ್ತವೆ.

01059052a ಭುಜಗಾನಾಂ ಸುಪರ್ಣಾನಾಂ ರುದ್ರಾಣಾಂ ಮರುತಾಂ ತಥಾ|

01059052c ಗವಾಂ ಚ ಬ್ರಾಹ್ಮಣಾನಾಂ ಚ ಶ್ರೀಮತಾಂ ಪುಣ್ಯಕರ್ಮಣಾಂ||

01059051a ಇತಿ ತೇ ಸರ್ವಭೂತಾನಾಂ ಸಂಭವಃ ಕಥಿತೋ ಮಯಾ|

01059051c ಯಥಾವತ್ಪರಿಸಂಖ್ಯಾತೋ ಗಂಧರ್ವಾಪ್ಸರಸಾಂ ತಥಾ||

ಈ ರೀತಿ ನಾನು ಸರ್ವಭೂತಗಳ - ಅಪ್ಸರೆಯರ, ಗಂಧರ್ವರ, ಸರ್ಪಗಳ, ಪಕ್ಷಿಗಳ, ರುದ್ರರ, ಮರುತರ, ಗೋವುಗಳ ಮತ್ತು ಪುಣ್ಯಕರ್ಮಿ ಸುಮತಿ ಬ್ರಾಹ್ಮಣರ - ಹುಟ್ಟಿನ ಕುರಿತು ಯಥಾವತ್ತಾಗಿ, ಸಾಕಷ್ಟು ಹೇಳಿದ್ದೇನೆ.

01059053a ಆಯುಷ್ಯಶ್ಚೈವ ಪುಣ್ಯಶ್ಚ ಧನ್ಯಃ ಶ್ರುತಿಸುಖಾವಹಃ|

01059053c ಶ್ರೋತವ್ಯಶ್ಚೈವ ಸತತಂ ಶ್ರಾವ್ಯಶ್ಚೈವಾನಸೂಯತಾ||

ಇದನ್ನು ಸತತವಾಗಿ ಕೇಳುವವರು, ಯಾವ ಅಸೂಯೆಯೂ ಇಲ್ಲದೇ ಕೇಳುವವರು ಮತ್ತು ಸುಖಮನಸಿನಿಂದ ಕೇಳುವವರು ಆಯುಷ್ಯ-ಪುಣ್ಯಗಳನ್ನು ಹೊಂದಿ ಧನ್ಯರಾಗುತ್ತಾರೆ.

01059054a ಇಮಂ ತು ವಂಶಂ ನಿಯಮೇನ ಯಃ ಪತೇನ್

         ಮಹಾತ್ಮನಾಂ ಬ್ರಾಹ್ಮಣದೇವಸಂನಿಧೌ|

01059054c ಅಪತ್ಯಲಾಭಂ ಲಭತೇ ಸ ಪುಷ್ಕಲಂ

         ಶ್ರಿಯಂ ಯಶಃ ಪ್ರೇತ್ಯ ಚ ಶೋಭನಾಂ ಗತಿಂ||

ಮಹಾತ್ಮ ಬ್ರಾಹ್ಮಣ ಮತ್ತು ದೇವಸನ್ನಿಧಿಗಳಲ್ಲಿ ಯಾರು ಈ ವಂಶಾವಳಿಯನ್ನು ನಿಯಮದಿಂದ ಪಠಿಸುತ್ತಾರೋ ಅವರಿಗೆ ಪುಷ್ಕಲ ಸಂಪತ್ತು, ಯಶಸ್ಸು, ಶುಭ ಗತಿ ಮತ್ತು ಸಂತಾನಲಾಭವು ದೊರೆಯುತ್ತದೆ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಅಂಶಾವತರಣಪರ್ವಣಿ ಆದಿತ್ಯಾದಿವಂಶಕಥನೇ ಏಕೋನಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಅಂಶಾವತರಣ ಪರ್ವದಲ್ಲಿ ಆದಿತ್ಯಾದಿವಂಶಕಥನ ಎನ್ನುವ ಐವತ್ತೊಂಭತ್ತನೆಯ ಅಧ್ಯಾಯವು.

[1] ಪ್ರಾಧಾ ಚ ವಿಶ್ವಾ ಚ ಎಂಬ ಪಾಠಾಂತರವಿದೆ (ನೀಲಕಂಠ).

[2]

ಕಶ್ಯಪನನ್ನು ವಿವಾಹವಾದ ದಕ್ಷನ ಹದಿಮೂರು ಪುತ್ರಿಗಳ ಹೆಸರುಗಳ ಹಲವು ಪಾಠಾಂತರಗಳಿವೆ. ಉದಾಹರಣೆಗೆ, ಪದ್ಮಪುರಾಣದ ಪ್ರಕಾರ ಈ ಹದಿಮೂರು ದಕ್ಷಕನ್ಯೆಯರ ಹೆಸರುಗಳು ಈ ರೀತಿ ಇವೆ: ಅದಿತಿ, ದಿತಿ, ದನು, ಅರಿಷ್ಟೆ, ಸುರಸಾ, ಸುರಭಿ, ವಿನತಾ, ತಾಮ್ರ, ಕ್ರೋಧವಶಾ, ಈರೆ, ಕದ್ರು, ಶುಕ್ರಿ ಮತ್ತು ಶುನಿ. ಮಹಾಭಾರತ ಖಿಲಭಾಗ ಹರಿವಂಶದ ಹರಿವಂಶಪರ್ವದ ಮೂರನೇ ಅಧ್ಯಾಯದಲ್ಲಿ ಕಶ್ಯಪ ಪತ್ನಿಯರ ಕುರಿತಾದ ಈ ಶ್ಲೋಕಗಳಿವೆ: ಲೋಕಾ ಭರತಶಾರ್ದೂಲ  ಕಶ್ಯಪಸ್ಯ ನಿಬೋಧ ಮೇ | ಅದಿತಿರ್ದಿತಿರ್ದನುಶ್ಚೈವ ಅರಿಷ್ಟಾ ಸುರಸಾ ಖಶಾ || ಸುರಭಿರ್ವಿನತಾ ಚೈವ ತಾಮ್ರಾ ಕ್ರೋಧವಶಾ ಇರಾ |ಕದ್ರುರ್ಮುನಿಶ್ಚ ರಾಜೇಂದ್ರ  ತಾಸ್ವಪತ್ಯಾನಿ ಮೇ ಶೃಣು || ಅರ್ಥಾತ್: ಭರತಶಾರ್ದೂಲ! ಈಗ ಕಶ್ಯಪನ ಪತ್ನಿಯರ ಕುರಿತು ನನ್ನಿಂದ ಕೇಳು. ಅದಿತಿ, ದಿತಿ, ದನು, ಅರಿಷ್ಟಾ, ಸುರಸಾ, ಖಶಾ, ಸುರಭಿ, ವಿನತಾ, ತಾಮ್ರಾ, ಕ್ರೋಧವಶಾ, ಇರಾ ಕದ್ರು ಮತ್ತು ಮುನಿ ಇವರು ಕಶ್ಯಪನ ಪತ್ನಿಯರು. ಅವರ ಸಂತಾನಗಳ ಕುರಿತು ನನ್ನಿಂದ ಕೇಳು.

[3] ಪ್ರಹ್ಲಾದಃ ಎಂಬ ಪಾಠಾಂತರವಿದೆ (ನೀಲಕಂಠ).

[4] ಪ್ರಹ್ಲಾದಸ್ಯ ಎಂಬ ಪಾಠಾಂತರವಿದೆ (ನೀಲಕಂಠ).

[5] ನೀಲಕಂಠೀಯದಲ್ಲಿ ಇದರ ನಂತರ ಈ ಶ್ಲೋಕಾರ್ಧವಿದೆ: ರುದ್ರಭ್ಯಾನುಚರಃ ಶ್ರೀಮಾನ್ಮಹಾಕಾಲೇತಿ ಯಂ ವಿದುಃ|

[6] ಚತುಸ್ತ್ರಿಂಶದ್ದನೋಃ ಎಂಬ ಪಾಠಾಂತರವಿದೆ (ನೀಲಕಂಠ). ವಿಪ್ರಚಿತ್ತಿ ಮತ್ತು ಮುಂದಿನ ಶ್ಲೋಕಗಳಲ್ಲಿ ಹೇಳಿರುವ ದಾನವರ ಒಟ್ಟು ಸಂಖ್ಯೆ ಮೂವತ್ನಾಲ್ಕು.

[7] ಅಶ್ವಶಂಕುಶ್ಚ ಎಂಬ ಪಾಠಾಂತರವಿದೆ (ನೀಲಕಂಠ).

[8] ಈಷುಪಾದೇಕಚಕ್ರಶ್ಚ ಎಂಬ ಪಾಠಾಂತರವಿದೆ (ನೀಲಕಂಠ).

[9] ವನಾಯುಶ್ಚ ಎಂಬ ಪಾಠಾಂತರವಿದೆ (ನೀಲಕಂಠ).

[10] ಕಾಲಕೇಯಾ ಎಂಬ ಪಾಠಾಂತರವಿದೆ (ನೀಲಕಂಠ).

[11] ಸತ್ಯವಾಗರ್ಕಪರ್ಣಶ್ಚ ಎಂಬ ಪಾಠಾಂತರವಿದೆ (ನೀಲಕಂಠ).

[12] ಪರ್ಜನ್ಯಶ್ಚ ಎಂಬ ಪಾಠಾಂತರವಿದೆ (ನೀಲಕಂಠ).

[13] ಅನವದ್ಯಾಂ ಮನುಂ ವಂಶಾಮಸುರಾಂ ಮಾರ್ಗಣಪ್ರಿಯಾಮ್| ಅರೂಪಾಂ ಸುಭಗಾಂ ಭಾಸೀಮಿತಿ ಪ್ರಾಧಾ ವ್ಯಜಾಯತ|| ಎಂಬ ಪಾಠಾಂತರವಿದೆ (ನೀಲಕಂಠ).

 

Comments are closed.