Adi Parva: Chapter 54

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ: ಅಂಶಾವತರಣ ಪರ್ವ

೫೪

ಜನಮೇಜಯನ ಸರ್ಪಸತ್ರದಲ್ಲಿ ವ್ಯಾಸನ ಆಗಮನ (೧-೧೦). ಕುರುಪಾಂಡವರ ಕುರಿತು ಪ್ರಶ್ನಿಸಲು ವ್ಯಾಸನು ವೈಶಂಪಾಯನನಿಗೆ ಮಹಾಭಾರತ ಕಥೆಯನ್ನು ಹೇಳಲು ಅನುಮತಿಯನ್ನು ನೀಡಿದುದು (೧೧-೨೫).

01054001 ಸೂತ ಉವಾಚ

01054001a ಶ್ರುತ್ವಾ ತು ಸರ್ಪಸತ್ರಾಯ ದೀಕ್ಷಿತಂ ಜನಮೇಜಯ|

01054001c ಅಭ್ಯಾಗಚ್ಛದೃಷಿರ್ವಿದ್ವಾನ್ ಕೃಷ್ಣದ್ವೈಪಾಯನಸ್ತದಾ||

ಸೂತನು ಹೇಳಿದನು: “ಸರ್ಪಸತ್ರಕ್ಕೆ ಜನಮೇಜಯನು ದೀಕ್ಷಿತನಾಗಿದ್ದಾನೆಂದು ಕೇಳಿದ ಋಷಿವಿದ್ವಾಂಸ ಕೃಷ್ಣದ್ವೈಪಾಯನನು ಅಲ್ಲಿಗೆ ಬಂದನು.

01054002a ಜನಯಾಮಾಸ ಯಂ ಕಾಲೀ ಶಕ್ತೇಃ ಪುತ್ರಾತ್ಪರಾಶರಾತ್|

01054002c ಕನ್ಯೈವ ಯಮುನಾದ್ವೀಪೇ ಪಾಂಡವಾನಾಂ ಪಿತಾಮಹಂ||

ಪಾಂಡವ ಪಿತಾಮಹನು ಯಮುನಾನದಿಯ ಒಂದು ದ್ವೀಪದಲ್ಲಿ ಗುಪ್ತವಾಗಿ ಶಕ್ತಿಯ ಪುತ್ರ ಪರಾಶರನಿಗೆ ಕನ್ಯೆ ಕಾಲಿ (ಸತ್ಯವತಿ) ಯಲ್ಲಿ ಜನಿಸಿದ್ದನು.

01054003a ಜಾತಮಾತ್ರಶ್ಚ ಯಃ ಸದ್ಯ ಇಷ್ಟ್ಯಾ ದೇಹಮವೀವೃಧತ್|

01054003c ವೇದಾಂಶ್ಚಾಧಿಜಗೇ ಸಾಂಗಾನ್ಸೇತಿಹಾಸಾನ್ಮಹಾಯಶಾಃ||

ಹುಟ್ಟಿದ ತಕ್ಷಣವೇ ತನ್ನ ಇಷ್ಟಮಾತ್ರದಿಂದ ದೇಹವನ್ನು ಬೆಳೆಯಿಸಿಕೊಂಡ ಆ ಮಹಾಯಶನು ವೇದ-ವೇದಾಂಗಗಳನ್ನು ಮತ್ತು ಇತಿಹಾಸಗಳನ್ನು ಗೆದ್ದಿದ್ದನು.

01054004a ಯಂ ನಾತಿತಪಸಾ ಕಶ್ಚಿನ್ನ ವೇದಾಧ್ಯಯನೇನ ಚ|

01054004c ನ ವ್ರತೈರ್ನೋಪವಾಸೈಶ್ಚ ನ ಪ್ರಸೂತ್ಯಾ ನ ಮನ್ಯುನಾ||

ತಪಸ್ಸಿನಲ್ಲಿ, ವೇದಾಧ್ಯಯನದಲ್ಲಿ, ವ್ರತೋಪವಾಸಗಳಲ್ಲಿ, ಸಂತಾನದಲ್ಲಿ ಅಥವಾ ಸಿಟ್ಟಿನಲ್ಲಿ ಅವನನ್ನು ಮೀರಿದವರ್ಯಾರೂ ಇರಲಿಲ್ಲ.

01054005a ವಿವ್ಯಾಸೈಕಂ ಚತುರ್ಧಾ ಯೋ ವೇದಂ ವೇದವಿದಾಂ ವರಃ|

01054005c ಪರಾವರಜ್ಞೋ ಬ್ರಹ್ಮರ್ಷಿಃ ಕವಿಃ ಸತ್ಯವ್ರತಃ ಶುಚಿಃ||

ಶುಚಿಯೂ, ಸತ್ಯವ್ರತನೂ, ಕವಿಯೂ, ಬ್ರಹ್ಮರ್ಷಿಯೂ, ಪರಾವರಜ್ಞನೂ, ವೇದವಿದರಲ್ಲಿ ಶ್ರೇಷ್ಠನೂ ಆದ ಅವನು  ವೇದವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದನು.

01054006a ಯಃ ಪಾಂಡುಧೃತರಾಷ್ಟ್ರಂ ಚ ವಿದುರಂ ಚಾಪ್ಯಜೀಜನತ್|

01054006c ಶಂತನೋಃ ಸಂತತಿಂ ತನ್ವನ್ಪುಣ್ಯಕೀರ್ತಿರ್ಮಹಾಯಶಾಃ||

ಪಾಂಡು, ಧೃತರಾಷ್ಟ್ರ, ಮತ್ತು ವಿದುರರಿಗೆ ಜನ್ಮವಿತ್ತು ಅವನು ಮಹಾಯಶಸ್ವಿ ಪುಣ್ಯಕೀರ್ತಿಮಯ ಶಂತನು ಸಂತತಿಯನ್ನು ಮುಂದುವರಿಸಿದನು.

01054007a ಜನಮೇಜಯಸ್ಯ ರಾಜರ್ಷೇಃ ಸ ತದ್ಯಜ್ಞಸದಸ್ತದಾ|

01054007c ವಿವೇಶ ಶಿಷ್ಯೈಃ ಸಹಿತೋ ವೇದವೇದಾಂಗಪಾರಗೈಃ||

ತನ್ನ ವೇದವೇದಾಂಗಪಾರಂಗತ ಶಿಷ್ಯರೊಂದಿಗೆ ಅವನು ರಾಜರ್ಷಿ ಜನಮೇಜಯನ ಯಜ್ಞಶಾಲೆಯನ್ನು ಪ್ರವೇಶಿಸಿದನು.

01054008a ತತ್ರ ರಾಜಾನಮಾಸೀನಂ ದದರ್ಶ ಜನಮೇಜಯಂ|

01054008c ವೃತಂ ಸದಸ್ಯೈರ್ಬಹುಭಿರ್ದೇವೈರಿವ ಪುರಂದರಂ||

01054009a ತಥಾ ಮೂರ್ಧಾವಸಿಕ್ತೈಶ್ಚ ನಾನಾಜನಪದೇಶ್ವರೈಃ|

01054009c ಋತ್ವಿಗ್ಭಿರ್ದೇವಕಲ್ಪೈಶ್ಚ ಕುಶಲೈರ್ಯಜ್ಞಸಂಸ್ತರೇ||

ಅಲ್ಲಿ ಅವನು ದೇವತೆಗಳಿಂದ ಸುತ್ತುವರೆದ ಪುರಂದರನಂತೆ ಅನೇಕ ಸದಸ್ಯರಿಂದ, ಮೂರ್ಧಾವಸಿಕ್ತ ನಾನಾ ಜನಪದೇಶ್ವರರಿಂದ, ಮತ್ತು ಯಜ್ಞಕಾರ್ಯ ಕುಶಲ ದೇವಕಲ್ಪ ಋತ್ವಿಜರಿಂದ ಆವೃತನಾಗಿ ಕುಳಿತಿದ್ದ ರಾಜ ಜನಮೇಜಯನನ್ನು ಕಂಡನು.

01054010a ಜನಮೇಜಯಸ್ತು ರಾಜರ್ಷಿರ್ದೃಷ್ಟ್ವಾ ತಮೃಷಿಮಾಗತಂ|

01054010c ಸಗಣೋಽಬ್ಯುದ್ಯಯೌ ತೂರ್ಣಂ ಪ್ರೀತ್ಯಾ ಭರತಸತ್ತಮಃ||

ಭರತಸತ್ತಮ ರಾಜರ್ಷಿ ಜನಮೇಜಯನು ಆಗಮಿಸುತ್ತಿದ್ದ ಋಷಿಯನ್ನು ಕಂಡು ಅತ್ಯಂತ ಹರ್ಷಿತನಾಗಿ ತನ್ನ ಸಂಗಾತಿಗಳೊಂದಿಗೆ ಮುಂದೆಬಂದು ಬರಮಾಡಿಕೊಂಡನು.

01054011a ಕಾಂಚನಂ ವಿಷ್ಟರಂ ತಸ್ಮೈ ಸದಸ್ಯಾನುಮತೇ ಪ್ರಭುಃ|

01054011c ಆಸನಂ ಕಲ್ಪಯಾಮಾಸ ಯಥಾ ಶಕ್ರೋ ಬೃಹಸ್ಪತೇಃ||

ಸದಸ್ಯರ ಅನುಮತಿಯಂತೆ ಶಕ್ರನು ಬೃಹಸ್ಪತಿಗೆ ನೀಡುವ ಹಾಗೆ ಪ್ರಭು ಜನಮೇಜಯನು ಅವನಿಗೆ ಕಾಂಚನ ಆಸನವನ್ನಿತ್ತನು.

01054012a ತತ್ರೋಪವಿಷ್ಟಂ ವರದಂ ದೇವರ್ಷಿಗಣಪೂಜಿತಂ|

01054012c ಪೂಜಯಾಮಾಸ ರಾಜೇಂದ್ರಃ ಶಾಸ್ತ್ರದೃಷ್ಟೇನ ಕರ್ಮಣಾ||

ಅಲ್ಲಿ ಕುಳಿತುಕೊಂಡ ದೇವರ್ಷಿಗಣಪೂಜಿತ ವರದನನ್ನು ರಾಜೇಂದ್ರನು ಶಾಸ್ತ್ರೋಕ್ತ ಕರ್ಮಗಳಿಂದ ಪೂಜಿಸಿದನು.

01054013a ಪಾದ್ಯಮಾಚಮನೀಯಂ ಚ ಅರ್ಘ್ಯಂ ಗಾಂ ಚ ವಿಧಾನತಃ|

01054013c ಪಿತಾಮಹಾಯ ಕೃಷ್ಣಾಯ ತದರ್ಹಾಯ ನ್ಯವೇದಯತ್||

ಪಿತಾಮಹ ಕೃಷ್ಣನಿಗೆ ವಿಧಿವತ್ತಾಗಿ ಪಾದ್ಯ, ಆಚಮನೀಯ, ಅರ್ಘ್ಯ ಮತ್ತು ಗೋವುಗಳನ್ನು ನಿವೇದಿಸಿದನು.

01054014a ಪ್ರತಿಗೃಹ್ಯ ಚ ತಾಂ ಪೂಜಾಂ ಪಾಂಡವಾಜ್ಜನಮೇಜಯಾತ್|

01054014c ಗಾಂ ಚೈವ ಸಮನುಜ್ಞಾಯ ವ್ಯಾಸಃ ಪ್ರೀತೋಽಭವತ್ತದಾ||

ಸುಪ್ರೀತ ವ್ಯಾಸನು ಪಾಂಡವ್ಯ ಜನಮೇಜಯನ ಪೂಜೆ-ಗೋವುಗಳನ್ನು ಪ್ರತಿಗ್ರಹಿಸಿದನು.

01054015a ತಥಾ ಸಂಪೂಜಯಿತ್ವಾ ತಂ ಯತ್ನೇನ ಪ್ರಪಿತಾಮಹಂ|

01054015c ಉಪೋಪವಿಶ್ಯ ಪ್ರೀತಾತ್ಮಾ ಪರ್ಯಪೃಚ್ಛದನಾಮಯಂ||

ಪ್ರಪಿತಾಮಹನನ್ನು ಈ ರೀತಿ ಪೂಜಿಸಿ, ಅವನ ಕೆಳಗಿನ ಸ್ಥಾನದಲ್ಲಿ ಕುಳಿತುಕೊಂಡು ಅನಾಮಯನ ಕುಶಲವನ್ನು ವಿಚಾರಿಸಿದನು.

01054016a ಭಗವಾನಪಿ ತಂ ದೃಷ್ಟ್ವಾ ಕುಶಲಂ ಪ್ರತಿವೇದ್ಯ ಚ|

01054016c ಸದಸ್ಯೈಃ ಪೂಜಿತಃ ಸರ್ವೈಃ ಸದಸ್ಯಾನಭ್ಯಪೂಜಯತ್||

ಆ ಭಗವಾನನೂ ಕೂಡ ಅವನನ್ನು ನೋಡಿ ಕುಶಲವನ್ನು ವಿಚಾರಿಸಿ, ತನ್ನನ್ನು ಪೂಜಿಸಿದ ಸರ್ವ ಸದಸ್ಯರಿಗೆ ವಂದಿಸಿದನು.

01054017a ತತಸ್ತಂ ಸತ್ಕೃತಂ[1] ಸರ್ವೈಃ ಸದಸ್ಯೈರ್ಜನಮೇಜಯಃ|

01054017c ಇದಂ ಪಶ್ಚಾದ್ದ್ವಿಜಶ್ರೇಷ್ಠಂ ಪರ್ಯಪೃಚ್ಛತ್ಕೃತಾಂಜಲಿಃ||

ಎಲ್ಲ ಸದಸ್ಯರು ದ್ವಿಜಶ್ರೇಷ್ಠನನ್ನು ಸತ್ಕರಿಸಿದ ನಂತರ ಜನಮೇಜಯನು ಅಂಜಲೀಬದ್ಧನಾಗಿ ಕೇಳಿಕೊಂಡನು: 

01054018a ಕುರೂಣಾಂ ಪಾಂಡವಾನಾಂ ಚ ಭವಾನ್ಪ್ರತ್ಯಕ್ಷದರ್ಶಿವಾನ್|

01054018c ತೇಷಾಂ ಚರಿತಮಿಚ್ಛಾಮಿ ಕಥ್ಯಮಾನಂ ತ್ವಯಾ ದ್ವಿಜ||

“ಕುರುಗಳನ್ನೂ ಪಾಂಡವರನ್ನೂ ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ದ್ವಿಜ! ನಿನ್ನಿಂದ ಅವರ ಚರಿತ್ರೆಯನ್ನು ಕೇಳಲು ಬಯಸುತ್ತೇನೆ.

01054019a ಕಥಂ ಸಮಭವದ್ಭೇದಸ್ತೇಷಾಮಕ್ಲಿಷ್ಟಕರ್ಮಣಾಂ|

01054019c ತಚ್ಚ ಯುದ್ಧಂ ಕಥಂ ವೃತ್ತಂ ಭೂತಾಂತಕರಣಂ ಮಹತ್||

01054020a ಪಿತಾಮಹಾನಾಂ ಸರ್ವೇಷಾಂ ದೈವೇನಾವಿಷ್ಟಚೇತಸಾಂ|

01054020c ಕಾರ್ತ್ಸ್ನ್ಯೆನೈತತ್ಸಮಾಚಕ್ಷ್ವ ಭಗವನ್ಕುಶಲೋ ಹ್ಯಸಿ||

ಆ ಅಕ್ಲಿಷ್ಟಕರ್ಮಿಗಳಲ್ಲಿ ಭೇದವು ಹೇಗೆ ಉಂಟಾಯಿತು? ದೈವಪ್ರೇರಿತ ಆ ಸರ್ವ ಭೂತಾಂತಕಾರಕ ಆ ಮಹಾಯುದ್ಧವು ನನ್ನ ಪಿತಾಮಹ ಚೇತನರ ಮಧ್ಯೆ ಹೇಗೆ ನಡೆಯುವಂತಾಯಿತು? ಭಗವನ್! ಅವೆಲ್ಲವನ್ನೂ ನನಗೆ ಹೇಳು. ಯಾಕೆಂದರೆ ನಿನಗೊಬ್ಬನಿಗೇ ಇವೆಲ್ಲ ಚೆನ್ನಾಗಿ ತಿಳಿದಿವೆ.”

01054021a ತಸ್ಯ ತದ್ವಚನಂ ಶ್ರುತ್ವಾ ಕೃಷ್ಣದ್ವೈಪಾಯನಸ್ತದಾ|

01054021c ಶಶಾಸ ಶಿಷ್ಯಮಾಸೀನಂ ವೈಶಂಪಾಯನಮಂತಿಕೇ|||

ಅವನ ಆ ಮಾತುಗಳನ್ನು ಕೇಳಿದ ಕೃಷ್ಣದ್ವೈಪಾಯನನು ಅಲ್ಲಿಯೇ ಕುಳಿತಿದ್ದ ಶಿಷ್ಯ ವೈಶಂಪಾಯನನಿಗೆ ಆದೇಶವನ್ನಿತ್ತನು:

01054022a ಕುರೂಣಾಂ ಪಾಂಡವಾನಾಂ ಚ ಯಥಾ ಭೇದೋಽಭವತ್ಪುರಾ|

01054022c ತದಸ್ಮೈ ಸರ್ವಮಾಚಕ್ಷ್ವ ಯನ್ಮತ್ತಃ ಶ್ರುತವಾನಸಿ||

“ಹಿಂದೆ ಕುರು-ಪಾಂಡವರಲ್ಲಿ ಹೇಗೆ ಭೇದವುಂಟಾಯಿತು ಎನ್ನುವುದೆಲ್ಲವನ್ನೂ ನನ್ನಿಂದ ಕೇಳಿದ್ದ ಹಾಗೆ ಹೇಳು.”

01054023a ಗುರೋರ್ವಚನಮಾಜ್ಞಾಯ ಸ ತು ವಿಪ್ರರ್ಷಭಸ್ತದಾ|

01054023c ಆಚಚಕ್ಷೇ ತತಃ ಸರ್ವಮಿತಿಹಾಸಂ ಪುರಾತನಂ||

01054024a ತಸ್ಮೈ ರಾಜ್ಞೇ ಸದಸ್ಯೇಭ್ಯಃ ಕ್ಷತ್ರಿಯೇಭ್ಯಶ್ಚ ಸರ್ವಶಃ|

01054024c ಭೇದಂ ರಾಜ್ಯವಿನಾಶಂ ಚ ಕುರುಪಾಂಡವಯೋಸ್ತದಾ||

ಗುರುವಿನ ವಚನವನ್ನು ಸ್ವೀಕರಿಸಿದ ಆ ವಿಪ್ರರ್ಷಭನು ಕುರು-ಪಾಂಡವರಲ್ಲಾದ ಭೇದ ಮತ್ತು ನಂತರದ ರಾಜ್ಯವಿನಾಶದ ಸಹಿತ ಆ ಪುರಾತನ ಇತಿಹಾಸ ಸರ್ವವನ್ನೂ ಅಲ್ಲಿ ನೆರೆದಿದ್ದ ಸದಸ್ಯರು ಮತ್ತು ಕ್ಷತ್ರಿಯ ರಾಜರೆಲ್ಲರಿಗೆ ಹೇಳತೊಡಗಿದನು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಅಂಶಾವತರಣಪರ್ವಣಿ ಕಥಾನುಬಂಧೇ ಚತುಷ್ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಅಂಶಾವತರಣ ಪರ್ವದಲ್ಲಿ ಕಥಾನುಬಂಧ ಎನ್ನುವ ಐವತ್ನಾಲ್ಕನೆಯ ಅಧ್ಯಾಯವು.

[1] ಸಹಿತಃ ಎಂಬ ಪಾಠಾಂತರವಿದೆ (ನೀಲಕಂಠ).

Comments are closed.