ಆದಿ ಪರ್ವ: ಆಸ್ತೀಕ ಪರ್ವ
Contents
Toggle೪೯
ಜರತ್ಕಾರು-ಆಸ್ತೀಕರ ಸಂವಾದ (೧-೧೫). ಆಸ್ತೀಕನು ಜನಮೇಜಯನ ಯಾಗಶಾಲೆಗೆ ಪ್ರವೇಶವನ್ನು ಯಾಚಿಸುವುದು (೧೬-೨೫).
01049001 ಸೂತ ಉವಾಚ
01049001a ತತ ಆಹೂಯ ಪುತ್ರಂ ಸ್ವಂ ಜರತ್ಕಾರುರ್ಭುಜಂಗಮಾ|
01049001c ವಾಸುಕೇರ್ನಾಗರಾಜಸ್ಯ ವಚನಾದಿದಮಬ್ರವೀತ್||
ಸೂತನು ಹೇಳಿದನು: “ಆಗ ಭುಜಂಗಮೆ ಜರತ್ಕಾರುವು ತನ್ನ ಪುತ್ರನನ್ನು ಕರೆದು ನಾಗರಾಜ ವಾಸುಕಿಯ ಈ ಮಾತುಗಳನ್ನು ತಿಳಿಸಿದಳು.
01049002a ಅಹಂ ತವ ಪಿತುಃ ಪುತ್ರ ಭ್ರಾತ್ರಾ ದತ್ತಾ ನಿಮಿತ್ತತಃ|
01049002c ಕಾಲಃ ಸ ಚಾಯಂ ಸಂಪ್ರಾಪ್ತಸ್ತತ್ಕುರುಷ್ವ ಯಥಾತಥಂ||
“ಯಾವ ಉದ್ದೇಶಕ್ಕಾಗಿ ನನ್ನ ಅಣ್ಣನು ನನ್ನನ್ನು ನಿನ್ನ ತಂದೆಗೆ ಕೊಟ್ಟಿದ್ದನೋ ಅದನ್ನು ಪೂರೈಸುವ ಕಾಲವು ಪ್ರಾಪ್ತವಾಗಿದೆ. ಆದುದರಿಂದ ಏನಾಗಬೇಕೋ ಅದನ್ನು ಮಾಡಬೇಕಾಗಿದೆ.”
01049003 ಆಸ್ತೀಕ ಉವಾಚ
01049003a ಕಿಂನಿಮಿತ್ತಂ ಮಮ ಪಿತುರ್ದತ್ತಾ ತ್ವಂ ಮಾತುಲೇನ ಮೇ|
01049003c ತನ್ಮಮಾಚಕ್ಷ್ವ ತತ್ತ್ವೇನ ಶ್ರುತ್ವಾ ಕರ್ತಾಸ್ಮಿತತ್ತಥಾ||
ಆಸ್ತೀಕನು ಹೇಳಿದನು: “ನನ್ನ ಸೋದರ ಮಾವನು ಯಾವ ಕಾರಣಕ್ಕಾಗಿ ನಿನ್ನನ್ನು ನನ್ನ ತಂದೆಗೆ ಕೊಟ್ಟನು? ಅದನ್ನೆಲ್ಲ ನನಗೆ ಹೇಳು. ಅದನ್ನು ಕೇಳಿ ನಾನು ಬೇಕಾದುದನ್ನು ಮಾಡುತ್ತೇನೆ.””
01049004 ಸೂತ ಉವಾಚ
01049004a ತತ ಆಚಷ್ಟ ಸಾ ತಸ್ಮೈ ಬಾಂಧವಾನಾಂ ಹಿತೈಷಿಣೀ|
01049004c ಭಗಿನೀ ನಾಗರಾಜಸ್ಯ ಜರತ್ಕಾರುರವಿಕ್ಲವಾ||
ಸೂತನು ಹೇಳಿದನು: “ಬಾಂಧವಹಿತೈಷಿಣಿ ನಾಗರಾಜನ ತಂಗಿ ಜರತ್ಕಾರುವು ಅವರಿಗಿದ್ದ ಶಾಂತಚಿತ್ತನಾಗಿದ್ದ ಆಸ್ತೀಕನಿಗೆ ಹೇಳಿದಳು:
01049005a ಭುಜಗಾನಾಮಶೇಷಾಣಾಂ ಮಾತಾ ಕದ್ರೂರಿತಿ ಶ್ರುತಿಃ|
01049005c ತಯಾ ಶಪ್ತಾ ರುಷಿತಯಾ ಸುತಾ ಯಸ್ಮಾನ್ನಿಬೋಧ ತತ್||
“ಮಗನೇ! ಎಲ್ಲಾ ನಾಗಗಳ ತಾಯಿ ಕದ್ರುವೆಂದು ಖ್ಯಾತಳಾಗಿದ್ದಾಳೆ. ಅವಳು ರೋಷಗೊಂಡು ತನ್ನ ಮಕ್ಕಳಿಗೆ ಶಾಪವನ್ನಿತ್ತಳು. ಅದಕ್ಕೆ ಕಾರಣವನ್ನು ಕೇಳು.
01049006a ಉಚ್ಛೈಃಶ್ರವಾಃ ಸೋಽಶ್ವರಾಜೋ ಯನ್ಮಿಥ್ಯಾ ನ ಕೃತೋ ಮಮ|
01049006c ವಿನತಾನಿಮಿತ್ತಂ ಪಣಿತೇ ದಾಸಭಾವಾಯ ಪುತ್ರಕಾಃ||
01049007a ಜನಮೇಜಯಸ್ಯ ವೋ ಯಜ್ಞೇ ಧಕ್ಷ್ಯತ್ಯನಿಲಸಾರಥಿಃ|
01049007c ತತ್ರ ಪಂಚತ್ವಮಾಪನ್ನಾಃ ಪ್ರೇತಲೋಕಂ ಗಮಿಷ್ಯಥ||
“ಮಕ್ಕಳೇ! ನಾನು ವಿನತಳೊಂದಿಗೆ ದಾಸತ್ವದ ಪಣತೊಟ್ಟಾಗ ನೀವು ಅಶ್ವರಾಜ ಉಚ್ಛೈಶ್ರವನ ಬಣ್ಣವನ್ನು ಸುಳ್ಳುಮಾಡಲು ಒಪ್ಪಲಿಲ್ಲ. ಆದುದರಿಂದ ಜನಮೇಜಯನ ಯಜ್ಞದಲ್ಲಿ ಅನಿಲಸಾರಥಿಯು ನಿಮ್ಮನ್ನು ಸುಟ್ಟುಹಾಕುತ್ತಾನೆ. ಈ ರೀತಿ ನೀವು ಪಂಚಭೂತಗಳಲ್ಲಿ ಒಂದಾಗಿ ಪ್ರೇತಲೋಕವನ್ನು ಸೇರುವಿರಿ.”
01049008a ತಾಂ ಚ ಶಪ್ತವತೀಮೇವಂ ಸಾಕ್ಷಾಲ್ಲೋಕಪಿತಾಮಹಃ|
01049008c ಏವಮಸ್ತ್ವಿತಿ ತದ್ವಾಕ್ಯಂ ಪ್ರೋವಾಚಾನುಮುಮೋದ ಚ||
ಹೀಗೆ ಅವಳು ಶಪಿಸುತ್ತಿರುವಾಗ ಸಾಕ್ಷಾತ್ ಲೋಕಪಿತಾಮಹನೂ “ಹಾಗೆಯೇ ಆಗಲಿ!” ಎಂದು ಆ ವಾಖ್ಯಗಳನ್ನು ಅನುಮೋದಿಸಿದನು.
01049009a ವಾಸುಕಿಶ್ಚಾಪಿ ತಚ್ಛ್ರುತ್ವಾ ಪಿತಾಮಹವಚಸ್ತದಾ|
01049009c ಅಮೃತೇ ಮಥಿತೇ ತಾತ ದೇವಾನ್ ಶರಣಮೀಯಿವಾನ್||
ಇದನ್ನು ಮತ್ತು ಪಿತಾಮಹನ ಮಾತುಗಳನ್ನು ಕೇಳಿದ ವಾಸುಕಿಯು ಅಮೃತ ಮಂಥನದ ನಂತರ ದೇವತೆಗಳಲ್ಲಿ ಶರಣುಹೋದನು.
01049010a ಸಿದ್ಧಾರ್ಥಾಶ್ಚ ಸುರಾಃ ಸರ್ವೇ ಪ್ರಾಪ್ಯಾಮೃತಮನುತ್ತಮಂ|
01049010c ಭ್ರಾತರಂ ಮೇ ಪುರಸ್ಕೃತ್ಯ ಪ್ರಜಾಪತಿಮುಪಾಗಮನ್||
ಆಗ ಅನುತ್ತಮ ಅಮೃತವನ್ನು ಪಡೆದ ಸರ್ವ ಸುರರೂ ನನ್ನ ಅಣ್ಣನನ್ನು ಪುರಸ್ಕರಿಸಿ ಪ್ರಜಾಪತಿಯ ಬಳಿ ಬಂದರು.
01049011a ತೇ ತಂ ಪ್ರಸಾದಯಾಮಾಸುರ್ದೇವಾಃ ಸರ್ವೇ ಪಿತಾಮಹಂ|
01049011c ರಾಜ್ಞಾ ವಾಸುಕಿನಾ ಸಾರ್ಧಂ ಸ ಶಾಪೋ ನ ಭವೇದಿತಿ||
ಅವನು ಮತ್ತು ಎಲ್ಲ ದೇವತೆಗಳು ಪಿತಾಮಹನಲ್ಲಿ ಕೇಳಿಕೊಂಡರು: “ಈ ಶಾಪವು ರಾಜ ವಾಸುಕಿಗೆ ತಗುಲದೇ ಇರಲಿ!
01049012a ವಾಸುಕಿರ್ನಾಗರಾಜೋಽಯಂ ದುಃಖಿತೋ ಜ್ಞಾತಿಕಾರಣಾತ್|
01049012c ಅಭಿಶಾಪಃ ಸ ಮಾತ್ರಾಸ್ಯ ಭಗವನ್ನ ಭವೇದಿತಿ||
ನಾಗರಾಜ ಈ ವಾಸುಕಿಯು ತನ್ನ ಜಾತಿಗೋಸ್ಕರವಾಗಿ ದುಃಖಿತನಾಗಿದ್ದಾನೆ. ಭಗವನ್! ಹೇಗೆ ಆ ತಾಯಿಯ ಶಾಪವು ತಗಲದಂತೆ ಮಾಡಬಹುದು?”
01049013 ಬ್ರಹ್ಮೋವಾಚ
01049013a ಜರತ್ಕಾರುರ್ಜರತ್ಕಾರುಂ ಯಾಂ ಭಾರ್ಯಾಂ ಸಮವಾಪ್ಸ್ಯತಿ|
01049013c ತತ್ರ ಜಾತೋ ದ್ವಿಜಃ ಶಾಪಾದ್ಭುಜಗಾನ್ಮೋಕ್ಷಯಿಷ್ಯತಿ||
ಬ್ರಹ್ಮನು ಹೇಳಿದನು: “ಜರತ್ಕಾರುವು ಜರತ್ಕಾರುವೆನ್ನುವವಳನ್ನು ಪತ್ನಿಯನ್ನಾಗಿ ಸ್ವೀಕರಿಸುವನು. ಅವರಲ್ಲಿ ಹುಟ್ಟಿದ ದ್ವಿಜನು ನಾಗಗಳನ್ನು ಶಾಪದಿಂದ ಮುಕ್ತಿಗೊಳಿಸುವನು.””
01049014 ಜರತ್ಕಾರುರುವಾಚ
01049014a ಏತಚ್ಛ್ರುತ್ವಾ ತು ವಚನಂ ವಾಸುಕಿಃ ಪನ್ನಗೇಶ್ವರಃ|
01049014c ಪ್ರಾದಾನ್ಮಾಮಮರಪ್ರಖ್ಯ ತವ ಪಿತ್ರೇ ಮಹಾತ್ಮನೇ|
01049014e ಪ್ರಾಗೇವಾನಾಗತೇ ಕಾಲೇ ತತ್ರ ತ್ವಂ ಮಯ್ಯಜಾಯಥಾಃ||
ಜರತ್ಕಾರುವು ಹೇಳಿದಳು: “ಈ ಮಾತುಗಳನ್ನು ಕೇಳಿದ ಪನ್ನಗೇಶ್ವರ ವಾಸುಕಿಯು ನನ್ನನ್ನು ನಿನ್ನ ತಂದೆ ಮಹಾತ್ಮನಿಗೆ ಕೊಟ್ಟನು ಮತ್ತು ಸಮಯಾನುಸಾರವಾಗಿ ನೀನು ನನ್ನಲ್ಲಿ ಜನಿಸಿದೆ.
01049015a ಅಯಂ ಸ ಕಾಲಃ ಸಂಪ್ರಾಪ್ತೋ ಭಯಾನ್ನಸ್ತ್ರಾತುಮರ್ಹಸಿ|
01049015c ಭ್ರಾತರಂ ಚೈವ ಮೇ ತಸ್ಮಾತ್ತ್ರಾತುಮರ್ಹಸಿ ಪಾವಕಾತ್||
ಈಗ ಸಮಯವು ಪ್ರಾಪ್ತವಾಗಿದೆ. ನಮ್ಮನ್ನು ಈ ಭಯದಿಂದ ರಕ್ಷಿಸು! ನನ್ನ ಅಣ್ಣನನ್ನು ಪಾವಕನಿಂದ ರಕ್ಷಿಸು!
01049016a ಅಮೋಘಂ ನಃ ಕೃತಂ ತತ್ಸ್ಯಾದ್ಯದಹಂ ತವ ಧೀಮತೇ|
01049016c ಪಿತ್ರೇ ದತ್ತಾ ವಿಮೋಕ್ಷಾರ್ಥಂ ಕಥಂ ವಾ ಪುತ್ರ ಮನ್ಯಸೇ||
ನನ್ನನ್ನು ನಿನ್ನ ತಂದೆಗೆ ಕೊಟ್ಟಿದ್ದುದು ನಿಷ್ಫಲವಾಗುವಂತೆ ಮಾಡಬೇಡ. ಅಥವಾ ಮಗು! ನಿನ್ನ ಯೋಚನೆ ಬೇರೆ ಏನಾದರೂ ಇದೆಯೇ?””
01049017 ಸೂತ ಉವಾಚ
01049017a ಏವಮುಕ್ತಸ್ತಥೇತ್ಯುಕ್ತ್ವಾ ಸೋಽಸ್ತೀಕೋ ಮಾತರಂ ತದಾ|
01049017c ಅಬ್ರವೀದ್ದುಃಖಸಂತಪ್ತಂ ವಾಸುಕಿಂ ಜೀವಯನ್ನಿವ||
ಸೂತನು ಹೇಳಿದನು: “ಇದನ್ನು ಕೇಳಿದ ಆಸ್ತೀಕನು “ಹಾಗೆಯೇ ಆಗಲಿ!” ಎಂದು ತನ್ನ ತಾಯಿಗೆ ಹೇಳಿ, ದುಃಖಸಂತಪ್ತ ವಾಸುಕಿಗೆ ಪುನರ್ಜೀವವನ್ನು ನೀಡುವಂತಹ ಈ ಮಾತುಗಳನ್ನು ಹೇಳಿದನು:
01049018a ಅಹಂ ತ್ವಾಂ ಮೋಕ್ಷಯಿಷ್ಯಾಮಿ ವಾಸುಕೇ ಪನ್ನಗೋತ್ತಮ|
01049018c ತಸ್ಮಾಚ್ಛಾಪಾನ್ಮಹಾಸತ್ತ್ವ ಸತ್ಯಮೇತದ್ಬ್ರವೀಮಿ ತೇ||
“ಪನ್ನಗೋತ್ತಮ ವಾಸುಕಿ! ನಾನು ನಿನ್ನನ್ನು ಆ ಶಾಪದಿಂದ ವಿಮುಕ್ತಗೊಳಿಸುತ್ತೇನೆ. ನಾನು ಸತ್ಯವನ್ನು ಹೇಳುತ್ತಿದ್ದೇನೆ.
01049019a ಭವ ಸ್ವಸ್ಥಮನಾ ನಾಗ ನ ಹಿ ತೇ ವಿದ್ಯತೇ ಭಯಂ|
01049019c ಪ್ರಯತಿಷ್ಯೇ ತಥಾ ಸೌಮ್ಯ ಯಥಾ ಶ್ರೇಯೋ ಭವಿಷ್ಯತಿ|
01049019e ನ ಮೇ ವಾಗನೃತಂ ಪ್ರಾಹಸ್ವೈರೇಷ್ವಪಿ ಕುತೋಽನ್ಯಥಾ||
ನಾಗ! ಸ್ವಸ್ಥಮನಸ್ಕನಾಗಿರು. ನಿನಗೆ ಯಾವ ಭಯವೂ ಇಲ್ಲ. ಸೌಮ್ಯ! ನಿನ್ನ ಶ್ರೇಯಸ್ಸಿಗೇ ಪ್ರಯತ್ನಿಸುತ್ತೇನೆ. ಚೇಷ್ಟೆಯಲ್ಲಿಯೂ ಕೂಡ ಎಂದೂ ನನ್ನ ಮಾತು ಸುಳ್ಳಾಗಲಾರದು.
01049020a ತಂ ವೈ ನೃಪವರಂ ಗತ್ವಾ ದೀಕ್ಷಿತಂ ಜನಮೇಜಯಂ|
01049020c ವಾಗ್ಭಿರ್ಮಂಗಲಯುಕ್ತಾಭಿಸ್ತೋಷಯಿಷ್ಯೇಽದ್ಯ ಮಾತುಲ|
01049020e ಯಥಾ ಸ ಯಜ್ಞೋ ನೃಪತೇರ್ನಿರ್ವರ್ತಿಷ್ಯತಿ ಸತ್ತಮ||
ಸತ್ತಮ! ಮಾವ! ದೀಕ್ಷೆಯಲ್ಲಿರುವ ಆ ನೃಪವರ ಜನಮೇಜಯನಲ್ಲಿ ಹೋಗಿ ಮಂಗಲಯುಕ್ತ ಮಾತುಗಳಿಂದ ಅವನನ್ನು ತೃಪ್ತಿಗೊಳಿಸಿ ನೃಪತಿಯ ಯಜ್ಞವು ಕೊನೆಗೊಳ್ಳುವಹಾಗೆ ಮಾಡುತ್ತೇನೆ.
01049021a ಸ ಸಂಭಾವಯ ನಾಗೇಂದ್ರ ಮಯಿ ಸರ್ವಂ ಮಹಾಮತೇ|
01049021c ನ ತೇ ಮಯಿ ಮನೋ ಜಾತು ಮಿಥ್ಯಾ ಭವಿತುಮರ್ಹತಿ||
ಮಹಾಮತಿ ನಾಗೇಂದ್ರ! ನಿನ್ನ ಎಲ್ಲ ವಿಶ್ವಾಸವನ್ನೂ ನನ್ನಲ್ಲಿ ಇಡು ಮತ್ತು ನನ್ನಲ್ಲಿ ನೀನಿಟ್ಟ ವಿಶ್ವಾಸವು ಎಂದೂ ಸುಳ್ಳಾಗುವುದಿಲ್ಲ.”
01049022 ವಾಸುಕಿರುವಾಚ
01049022a ಆಸ್ತೀಕ ಪರಿಘೂರ್ಣಾಮಿ ಹೃದಯಂ ಮೇ ವಿದೀರ್ಯತೇ|
01049022c ದಿಶಶ್ಚ ನ ಪ್ರಜಾನಾಮಿ ಬ್ರಹ್ಮದಂಡನಿಪೀಡಿತಃ||
ವಾಸುಕಿಯು ಹೇಳಿದನು: “ಆಸ್ತೀಕ! ಈ ಬ್ರಹ್ಮದಂಡ ಪೀಡಿತನಾದ ನಾನು ನಡುಗುತ್ತಿದ್ದೇನೆ ಮತ್ತು ನನ್ನ ಹೃದಯವು ಒಡೆಯುತ್ತಿದೆ. ನನಗೆ ದಿಕ್ಕೇ ತೋಚದಂತಾಗಿದೆ.”
01049023 ಆಸ್ತೀಕ ಉವಾಚ
01049023a ನ ಸಂತಾಪಸ್ತ್ವಯಾ ಕಾರ್ಯಃ ಕಥಂ ಚಿತ್ಪನ್ನಗೋತ್ತಮ|
01049023c ದೀಪ್ತಾದಗ್ನೇಃ ಸಮುತ್ಪನ್ನಂ ನಾಶಯಿಷ್ಯಾಮಿ ತೇ ಭಯಂ||
ಆಸ್ತೀಕನು ಹೇಳಿದನು: “ಪನ್ನಗೋತ್ತಮ! ನೀನು ಯಾವುದಕ್ಕೂ ಭಯ ಪಡಬೇಡ. ಉರಿಯುತ್ತಿರುವ ಅಗ್ನಿಯಿಂದ ನಿನಗುಂಟಾಗಿರುವ ಈ ಭಯವನ್ನು ನಾಶಪಡಿಸುತ್ತೇನೆ.
01049024a ಬ್ರಹ್ಮದಂಡಂ ಮಹಾಘೋರಂ ಕಾಲಾಗ್ನಿಸಮತೇಜಸಂ|
01049024c ನಾಶಯಿಷ್ಯಾಮಿ ಮಾತ್ರ ತ್ವಂ ಭಯಂ ಕಾರ್ಷೀಃ ಕಥಂ ಚನ||
ಕಾಲಾಗ್ನಿಯಂತೆ ಉರಿಯುತ್ತಿರುವ ಈ ಮಹಾಘೋರ ಬ್ರಹ್ಮದಂಡವನ್ನು ನಾಶಪಡಿಸುತ್ತೇನೆ. ಯಾವುದೇ ರೀತಿಯ ಭಯಪಡಬೇಡ.””
01049025 ಸೂತ ಉವಾಚ
01049025a ತತಃ ಸ ವಾಸುಕೇರ್ಘೋರಮಪನೀಯ ಮನೋಜ್ವರಂ|
01049025c ಆಧಾಯ ಚಾತ್ಮನೋಽನ್ಗೇಷು ಜಗಾಮ ತ್ವರಿತೋ ಭೃಶಂ||
01049026a ಜನಮೇಜಯಸ್ಯ ತಂ ಯಜ್ಞಂ ಸರ್ವೈಃ ಸಮುದಿತಂ ಗುಣೈಃ|
01049026c ಮೋಕ್ಷಾಯ ಭುಜಗೇಂದ್ರಾಣಾಮಾಸ್ತೀಕೋ ದ್ವಿಜಸತ್ತಮಃ||
ಸೂತನು ಹೇಳಿದನು: “ನಂತರ, ವಾಸುಕಿಯ ಘೋರ ಮನೋಜ್ಚರವನ್ನು ಕಿತ್ತು ತನ್ನ ಭುಜದಮೇಲೆತ್ತಿಕೊಂಡು ಆ ದ್ವಿಜಸತ್ತಮ ಆಸ್ತೀಕನು ತ್ವರೆಯಲ್ಲಿ ಹೊರಟು ಭುಜಗೇಂದ್ರರ ಮೋಕ್ಷಾರ್ಥವಾಗಿ ಸರ್ವಗುಣ ಸಮುದಿತ ಆ ಜನಮೇಜಯನ ಯಜ್ಞದಲ್ಲಿಗೆ ಧಾವಿಸಿದನು.
01049027a ಸ ಗತ್ವಾಪಶ್ಯದಾಸ್ತೀಕೋ ಯಜ್ಞಾಯತನಮುತ್ತಮಂ|
01049027c ವೃತಂ ಸದಸ್ಯೈರ್ಬಹುಭಿಃ ಸೂರ್ಯವಹ್ನಿಸಮಪ್ರಭೈಃ||
ಅಲ್ಲಿ ಹೋಗಿ ಆಸ್ತೀಕನು ಅನೇಕ ಸೂರ್ಯವಹ್ನಿಸಮಪ್ರಭ ಸದಸ್ಯರಿಂದ ಆವೃತಗೊಂಡ ಉತ್ತಮ ಯಜ್ಞಾಯತವನ್ನು ಕಂಡನು.
01049028a ಸ ತತ್ರ ವಾರಿತೋ ದ್ವಾಃಸ್ಥೈಃ ಪ್ರವಿಶನ್ದ್ವಿಜಸತ್ತಮಃ|
01049028c ಅಭಿತುಷ್ಟಾವ ತಂ ಯಜ್ಞಂ ಪ್ರವೇಶಾರ್ಥೀ ದ್ವಿಜೋತ್ತಮಃ||
ಆ ದ್ವಿಜಸತ್ತಮನು ಅಲ್ಲಿಗೆ ಪ್ರವೇಶಿಸುತ್ತಿರಲು ದ್ವಾರಪಾಲಕರು ಅವನನ್ನು ತಡೆಗಟ್ಟಿದರು. ಆದರೆ ಆ ಪ್ರವೇಶಾರ್ಥಿ ದ್ವಿಜೋತ್ತಮನು ಉಚ್ಛ ಧ್ವನಿಯಲ್ಲಿ ಆ ಯಜ್ಞವನ್ನು ಪ್ರಶಂಸಿಸತೊಡಗಿದನು[1].
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸರ್ಪಸತ್ರೇ ಆಸ್ತೀಕಾಗಮನೇ ಏಕೋನಪಂಚಾಶತ್ತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸರ್ಪಸತ್ರದಲ್ಲಿ ಆಸ್ತೀಕಾಗಮನದಲ್ಲಿ ನಲವತ್ತೊಂಭತ್ತನೆಯ ಅಧ್ಯಾಯವು.
[1] ನೀಲಕಂಠೀಯದಲ್ಲಿ ಇದರ ನಂತರ ಈ ಒಂದು ಶ್ಲೋಕವಿದೆ: ಸ ಪ್ರಾಪ್ಯ ಯಜ್ಞಾಯತನಂ ವರಿಷ್ಠಂ ದ್ವಿಜೋತ್ತಮಃ ಪುಣ್ಯಕೃತಾಂ ವರಿಷ್ಠಃ| ತುಷ್ಟಾವ ರಾಜಾನಮನಂತಕೀರ್ತಿಮೃತ್ವಿಕ್ಸದಸ್ಯಾಂಶ್ಚ ತಥೈವ ಚಾಗ್ನಿಮ್|| ಅರ್ಥಾತ್ ಈ ರೀತಿ ಆ ಪರಮ ಶ್ರೇಷ್ಠ ಯಜ್ಞಮಂಡಲದ ಹತ್ತಿರ ಹೋಗಿ ಪುಣ್ಯಕೃತರಲ್ಲಿ ಶ್ರೇಷ್ಠ ಆಸ್ತೀಕನು ಅಕ್ಷಯ ಕೀರ್ತಿಗಳಿಂದ ಸುಶೋಭಿತ ಯಜಮಾನ ರಾಜಾ ಜನಮೇಜಯ, ಋತ್ವಿಜರು, ಸದಸ್ಯರು ಮತ್ತು ಹಾಗೆಯೇ ಅಗ್ನಿದೇವನ ಸ್ತವನವನ್ನು ಆರಂಭಿಸಿದನು.
