ಶ್ರೀಬ್ರಹ್ಮಾಂಡಮಹಾಪುರಾಣ ಅಧ್ಯಾಯ 4: ಲೋಕಕಲ್ಪನಂ
ಸೂತ ಉವಾಚ । ಆತ್ಮನ್ಯವಸ್ಥಿತೇಽವ್ಯಕ್ತೇ ವಿಕಾರೇ ಪ್ರತಿಸಂಹೃತೇ । ಸಾಧರ್ಮ್ಯೇಣಾವತಿಷ್ಠೇತೇ ಪ್ರಧಾನಪುರುಷೌ ತದಾ ।। 1 ।। ತಮಃಸತ್ತ್ವಗುಣಾವೇತೌ ಸಮತ್ವೇನ ವ್ಯವಸ್ಥಿತೌ । ಅನುದ್ರಿಕ್ತಾವನುಚರೌ ತೇನ ಪ್ರೋಕ್ತೌ ಪರಸ್ಪರಮ್ ।। 2 ।। ಗುಣಸಾಮ್ಯೇ ಲಯೋ ಜ್ಞೇಯ ಆಧಿಕ್ಯೇ ಸೃಷ್ಟಿರುಚ್ಯತೇ । ಸತ್ತ್ವವೃದ್ಧೌ ಸ್ಥಿತಿರಭೂದ್ಧ್ರುವಂ ಪದ್ಮ ಶಿಖಾಸ್ಥಿತಮ್ ।। 3 ।। ಯದಾ ತಮಸಿ ಸತ್ತ್ವೇ ಚ ರಜೋಽಪ್ಯನುಗತಂ ಸ್ಥಿತಮ್ । ರಜಃ ಪ್ರವರ್ತಕಂ ತಚ್ಚ ಬೀಜೇಷ್ವಿವ ಯಥಾ ಜಲಮ್ ।। 4 ।।
ಸೂತನು ಹೇಳಿದನು: “ಪ್ರಳಯಕಾಲದಲ್ಲಿ ವಿಕಾರಗಳೆಲ್ಲವೂ ಲಯಹೊಂದಿ ಆತ್ಮಾಧೀನವಾಗಿ ಅವ್ಯಕ್ತತತ್ತ್ವ ಮಾತ್ರವೇ ಉಳಿಯುವುದರಿಂದ ಆ ಪ್ರಧಾನ ಮತ್ತು ಪುರುಷರು ಸಾಮ್ಯದಿಂದ ಇರುತ್ತಾರೆ. ಆಗ ಪ್ರಧಾನದ ಅವಯವಗಳಾದ ಸತ್ತ್ವ-ರಜಸ್ಸು-ತಮಸ್ಸು ಎಂಬ ಮೂರು ಗುಣಗಳು ಉದ್ರೇಕವಿಲ್ಲದೇ ಒಂದನ್ನೊಂದು ಹೊಂದಿಕೊಂಡು ಸಮ ಪರಿಮಾಣದಿಂದ ಇರುತ್ತವೆ. ಹೀಗೆ ಗುಣಗಳು ಸಾಮ್ಯದಿಂದಿದ್ದಾಗ ಸಮಸ್ತ ಭೂತಲಯವೂ, ಅವುಗಳಲ್ಲಿ ನ್ಯೂನಾಧಿಕ ಭಾವದಿಂದ ವೈಷಮ್ಯವುಂಟಾದಾಗ ಸೃಷ್ಟಿಯೂ ಆಗುತ್ತದೆ. ಸತ್ತ್ವಗುಣದ ವೃದ್ಧಿಯು ಪದ್ಮಶಿಖಾಗ್ರದಂತೆ ಸೂಕ್ಷ್ಮವಾದ ಮತ್ತು ಚಂಚಲವಸ್ತುವನ್ನು ಕೂಡ ಶಾಶ್ವತವಾಗಿರುವಂತಹ ಸ್ಥಿತಿಯನ್ನುಂಟುಮಾಡುತ್ತದೆ. ಯಾವಾಗ ತಮಸ್ಸು ಮತ್ತು ಸತ್ತ್ವಗುಣಗಳ ಮುಂದೆ ರಜೋಗುಣವು ನಿಂತು ತನ್ನ ಪ್ರಭಾವವನ್ನು ಬೀರುತ್ತದೆಯೋ ಆಗ ನೀರು ಬೀಜದಲ್ಲಿ ಸೇರಿ ಅಂಕುರವನ್ನು ಪ್ರೇರೇಪಿಸುವಂತೆ ಪ್ರವೃತ್ತಿಯನ್ನುಂಟುಮಾಡುತ್ತದೆ.
ಗುಣಾವೈಷಮ್ಯಮಾಸಾದ್ಯ ಪ್ರಸಂಗೇನ ಪ್ರತಿಷ್ಠಿತಾಃ । ಗುಣೇಭ್ಯಃ ಕ್ಷೋಭ್ಯಮಾಣೇಭ್ಯಃ ತ್ರಯೋ ಜ್ಞೇಯಾಪಿ ಸಾದರೇ ।। 5 ।। ಶಾಶ್ವತಾಃ ಪರಮಾ ಗುಹ್ಯಾಃ ಸರ್ವಾತ್ಮಾನಃ ಶರೀರಿಣಃ । ಸತ್ತ್ವಂ ವಿಷ್ಣೂ ರಜೋ ಬ್ರಹ್ಮಾ ತಮೋ ರುದ್ರಃ ಪ್ರಜಾಪತಿಃ ।। 6 ।। ರಜಃಪ್ರಕಾಶಕೋವಿಷ್ಣುರ್ಬ್ರಹ್ಮಸ್ರಷ್ಟೃತ್ವಮಾಪ್ನುಯಾತ್ । ಜಾಯತೇ ಚ ಯತಶ್ಚಿತ್ರಾ ಲೋಕಸೃಷ್ಟಿರ್ಮಹೌಜಸಃ ।। 7 ।। ತಮಃಪ್ರಕಾಶಕೋ ರುದ್ರಃ ಕಾಲತ್ವೇನ ವ್ಯವಸ್ಥಿತಃ । ಸತ್ತ್ವಪ್ರಕಾಶಕೋ ವಿಷ್ಣುಃ ಸ್ಥಿತಿತ್ವೇನ ವ್ಯವಸ್ಥಿತಃ ।। 8 ।। ಏತ ಏವ ತ್ರಯೋ ಲೋಕಾ ಏತ ಏವ ತ್ರಯೋ ಗುಣಾಃ । ಏತ ಏವ ತ್ರಯೋ ವೇದಾ ಏತ ಏವ ತ್ರಯೋಽಗ್ನಯಃ ।। 9 ।।
ಸಮಭಾವದಿಂದ ಗುಣಗಳು ಸೃಷ್ಟಿಪ್ರಸಂಗದಲ್ಲಿ ವೈಷಮ್ಯವನ್ನು ಹೊಂದಿ ಆ ಗುಣಕ್ಷೋಭೆಯಿಂದ ಒಂದೊಂದು ಗುಣದ ಆಧಿಕ್ಯ ನಿಮಿತ್ತದಿಂದ ತ್ರಿಮೂರ್ತಿಗಳು ಹುಟ್ಟುತ್ತಾರೆ. ಆ ತ್ರಿಮೂರ್ತಿಗಳು ಶಾಶ್ವತರೂ, ಶ್ರೇಷ್ಠರೂ, ಅರಿಯದ ಜನರಿಗೆ ಗೂಢರೂಪರೂ, ಸರ್ವಾತ್ಮಕ ದೇಹಧಾರಿಗಳೂ ಆಗಿದ್ದಾರೆ. ವಿಷ್ಣುವಿಗೆ ಸತ್ತ್ವಗುಣ, ಬ್ರಹ್ಮನಿಗೆ ರಜೋಗುಣ, ಮತ್ತು ರುದ್ರನಿಗೆ ತಮೋಗುಣ – ಹೀಗೆ ಒಂದೊಂದು ಮೂರ್ತಿಯಲ್ಲಿ ಒಂದೊಂದು ಗುಣವು ಉಪಾಧಿಯು. ತ್ರಿಮೂರ್ತಿಗಳಲ್ಲಿ ಅಂತರ್ಯಾಮಿ ಪರಮಾತ್ಮನು ಒಬ್ಬನೇ ಆಗಿರುವನು. ರಜೋಗುಣವನ್ನು ಪ್ರಕಾಶಪಡಿಸುವಾಗ ವಿಚಿತ್ರ ಲೋಕಸೃಷ್ಟಿಯನ್ನು ನಿರ್ವಹಿಸುವ ಮಹಾಬಲಶಾಲೀ ಬ್ರಹ್ಮನಾಗಿ ಅಧಿಕಾರವನ್ನು ನಿರ್ವಹಿಸುತ್ತಾನೆ. ಅದೇ ರೀತಿ ತಮೋಗುಣವನ್ನು ಪ್ರಕಾಶಪಡಿಸುವಾಗ ಸಂಹಾರ ನಿರ್ವಾಹಕನಾದ ರುದ್ರನೂ ಸತ್ತ್ವಗುಣ ಪ್ರಕಾಶದಿಂದ ಸ್ಥಿತಿ ವ್ಯವಸ್ಥಾಪಕನಾದ ವಿಷ್ಣುವೂ ಆಗುತ್ತಾನೆ. ಲೋಕದಲ್ಲಿ ವಸ್ತುತ್ರಯರೂಪದಿಂದಿರುವ ಸಂಘಾತಗಳಲ್ಲಿ ಲೋಕತ್ರಯ, ಗುಣತ್ರಯ, ವೇದತ್ರಯ, ಅಗ್ನಿತ್ರಯ ಇವೆಲ್ಲವೂ ತ್ರಿಮೂರ್ತಿ ಸ್ವರೂಪವಾಗಿವೆ.
ಪರಸ್ಪರಾನ್ವಯಾ ಹ್ಯೇತೇ ಪರಸ್ಪರಮನುವ್ರತಾಃ । ಪರಸ್ಪರೇಣ ವರ್ತಂತೇ ಪ್ರೇರಯಂತಿ ಪರಸ್ಪರಮ್ ।। 10 ।। ಅನ್ಯೋನ್ಯಂ ಮಿಥುನಂ ಹ್ಯೇತೇ ಅನ್ಯೋನ್ಯಮುಪಜೀವಿನಃ । ಕ್ಷಣಂ ವಿಯೋಗೋ ನ ಹ್ಯೇಷಾಂ ನ ತ್ಯಜಂತಿ ಪರಸ್ಪರಮ್ ।। 11 ।।
ಈ ತ್ರಿಮೂರ್ತಿಗಳು ಒಬ್ಬರನ್ನೊಬ್ಬರು ಆಶ್ರಯಿಸಿದವರೂ, ಪರಸ್ಪರ ಅನುವ್ರತರೂ ಆಗಿ ಅವರವರ ಕಾರ್ಯಗಳಲ್ಲಿ ಪರಸ್ಪರ ಪ್ರೇರೇಪಣೆ ಮಾಡುತ್ತಾ ಅನುಕೂಲಭಾವದಿಂದ ಇರುತ್ತಾರೆ. ಇವರೆಲ್ಲರೂ ಒಬ್ಬರನ್ನೊಬ್ಬರು ಒಳಗೊಂಡು, ಅನ್ಯೋನ್ಯ ಆಲಂಬವನ್ನು ಉಪಜೀವಿಸುತ್ತಾ ಜೊತೆಯಾಗಿಯೇ ಇರುತ್ತಾರೆ. ಇವರಿಗೆ ಕ್ಷಣಕಾಲವೂ ವಿಯೋಗವಿಲ್ಲ. ಒಬ್ಬರನ್ನೊಬ್ಬರು ಬಿಟ್ಟಿರುವುದಿಲ್ಲ.
ಪ್ರಧಾನಗುಣವೈಷಮ್ಯಾತ್ಸರ್ಗಕಾಲೇ ಪ್ರವರ್ತತೇ । ಅದೃಷ್ಟಾಧಿಷ್ಠಿತಾತ್ಪೂರ್ವೇ ತಸ್ಮಾತ್ಸದಸದಾತ್ಮಕಾತ್ ।। 12 ।। ಬ್ರಹ್ಮಾಬುದ್ಧಿತ್ವಮಿಥುನಂ ಯುಗಪತ್ಸರಬಂಭೂವ ಹ । ತಸ್ಮಾತ್ತಮೋಽವ್ಯಕ್ತಮಯಂ ಕ್ಷೇತ್ರಜ್ಞೋ ಬ್ರಹ್ಮಸಂಜ್ಞಕಃ ।। 13 ।। ಸಂಸಿದ್ಧಕಾರ್ಯಕರಣೋ ಬ್ರಹ್ಮಾಗ್ರೇ ಸಮವರ್ತತ । ತೇಜಸಾಽಪ್ರತಿಮೋ ಧೀಮಾನವ್ಯಕ್ತಃ ಸಂಪ್ರಕಾಶಕಃ ।। 14 ।। ಸ ವೈ ಶರೀರಪ್ರಥಮೋ ಧಾರಣತ್ವವ್ಯವಸ್ಥಿತಃ । ಜ್ಞಾನೇನಾಪ್ರತಿಮೇನೇಹ ವೈರಾಗ್ಯೇಣ ಚ ಸತ್ಪತಿಃ ।। 15 ।। ಅವ್ಯಕ್ತತ್ವಾಯ ತೇನಾಸ್ಯ ಮನಸಾ ಯದ್ಯದಿಚ್ಛತಿ । ವಶೀಕೃತತ್ವಾತ್ತ್ರೈಗುಣ್ಯಾತ್ಸಾಪೇಕ್ಷತ್ವಾಚ್ಚ ಭಾವತಃ ।। 16 ।।
ಸೃಷ್ಟಿಕಾಲದಲ್ಲಿ ಪ್ರಧಾನದ ಗುಣಗಳ ವೈಷಮ್ಯದಿಂದ ಮತ್ತು ಸೃಜ್ಯವಸ್ತುಗಳ ಅದೃಷ್ಟ ಪರಿಪಾಕದಿಂದ[1] ವ್ಯಕ್ತಾವ್ಯಕ್ತರೂಪದ ಪ್ರಕೃತಿಯಲ್ಲಿ ಈ ಮಿಥುನವು ಏರ್ಪಡುತ್ತದೆ. ಪ್ರಕೃತಿಯ ಗುಣಾಧಿಕ್ಯವುಳ್ಳ ಒಂದು ರೂಪದ ಬುದ್ಧಿಯೂ ಬ್ರಹ್ಮ ಎಂಬ ತತ್ತ್ವವೂ ಸೇರಿ ಮಿಥುನವಾಗಿ ಒಂದೇಸಲ ಜನಿಸುತ್ತದೆ. ಆ ಮಿಥುನದಲ್ಲಿ ಜಡವಾದ ಪ್ರಧಾನವು ಅವ್ಯಕ್ತವೆಂದೂ ಚೇತನವು ಕ್ಷೇತ್ರಜ್ಞನೆಂದೂ ಕರೆಯಲ್ಪಟ್ಟಿದೆ. ಹೀಗೆ ಮೊದಲು ಹುಟ್ಟಿದ ಬ್ರಹ್ಮನು ದೇಹೇಂದ್ರಿಯ ಸಂಘಾತಸಿದ್ಧಿಯುಳ್ಳವನೂ, ನಿರಪಮತೇಜಸ್ವಿಯೂ, ಪ್ರಜ್ಞಾವಂತನೂ, ಸೂಕ್ಷ್ಮನೂ ಮತ್ತು ಪರಮ ಪ್ರಕಾಶನೂ ಆಗಿದ್ದಾನೆ. ಶರೀರಧಾರಕ ಚೇತನವರ್ಗದಲ್ಲಿ ಮೊದಲನೆಯವನಾದ ಈ ಬ್ರಹ್ಮನು ಯಥಾಪೂರ್ವವಾಗಿ ಕಾರ್ಯಸೃಷ್ಟಿಯನ್ನು ಮಾಡುವ ವ್ಯವಸ್ಥೆಯುಳ್ಳವನಾಗಿ ಮತ್ತು ನಿರುಪಮ ಪ್ರಜ್ಞಾ-ವೈರಾಗ್ಯಗಳಿಂದ ಕೂಡಿರುವ ಸತ್ಕಾರ್ಯಗಳ ಅಧಿಪತಿಯಾಗಿದ್ದಾನೆ. ಅವ್ಯಕ್ತತತ್ತ್ವಕ್ಕೆ ಅಧೀನವಾದ ಈಕ್ಷಣರೂಪದಿಂದ ಯಾವ ಯಾವ ವಸ್ತುವನ್ನು ಅಪೇಕ್ಷಿಸುತ್ತಾನೋ ಅವೆಲ್ಲವನ್ನೂ ತ್ರಿಗುಣಾತ್ಮಕ ಪ್ರಕೃತಿ ನಿಯಮ್ಯನಾಗಿ ಭಾವವಸ್ತುಗಳ ಕರ್ಮಾದಿ ನಿಮಿತ್ತ ಕಾರಣಾಪೇಕ್ಷೆಯಿಂದ ಸೃಷ್ಟಿಸುತ್ತಾನೆ.
ಚತುರ್ಮುಖಸ್ತು ಬ್ರಹ್ಮತ್ವೇ ಕಾಲತ್ವೇ ಚಾಂತಕೃದ್ಭವಃ । ಸಹಸ್ರಮೂರ್ಧಾ ಪುರುಷಸ್ತಿಸ್ರೋಽವಸ್ಥಾಃ ಸ್ವಯಂಭುವಃ ।। 17 ।। ಸರ್ವಂ ರಜಶ್ಚ ಬ್ರಹ್ಮತ್ವೇ ಕಾಲತ್ವೇ ಚ ರಜಸ್ತಮಃ । ಸಾತ್ತ್ವಿಕಃ ಪುರುಷತ್ವೇ ಚ ಗುಣವೃತಂ ಸ್ವಯಂಭುವಃ ।। 18 ।। ಬ್ರಹ್ಮತ್ವೇ ಸೃಜತೇ ಲೋಕಾನ್ ಕಾಲತ್ವೇ ಸಂಕ್ಷಯತ್ಯಪಿ । ಪುರುಷತ್ವೇ ಉದಾಸೀನಸ್ತಿಸ್ರೋಽವಸ್ಥಾಃ ಸ್ವಯಂಭುವಃ ।। 19 ।। ಬ್ರಹ್ಮಾ ಕಮಲಪತ್ರಾಭಃ ಕಾಲೋ ಜಾತ್ಯಂಜನಪ್ರಭಃ । ಪುರುಷಃ ಪುಂಡರೀಕಾಕ್ಷೋ ರೂಪೇಣ ಪರಮಾತ್ಮನಃ ।। 20 ।। ಏಕಧಾ ಸ ದ್ವಿಧಾ ಚೈವ ತ್ರಿಧಾ ಚ ಬಹುಧಾ ಪುನಃ । ಯೋಗೀಶ್ವರಃ ಶರೀರಾಣಿ ಕರೋತಿ ವಿಕರೋತಿ ಚ ।। 21 ।। ನಾನಾಕೃತಿಕ್ರಿಯಾರೂಪಮಾಶ್ರಯಂತಿ ಸ್ವಲೀಲಯಾ । ತ್ರಿಧಾ ಯದ್ವರ್ತತೇ ಲೋಕೇ ತಸ್ಮಾತ್ರ್ರಿಗುಣ ಉಚ್ಯತೇ ।। 22 ।।
ಬ್ರಹ್ಮನ ಅಧಿಕಾರದಲ್ಲಿರುವಾಗ ಚತುರ್ಮುಖನೂ, ಸಂಹಾರಾಧಿಕಾರದಲ್ಲಿರುವಾಗ ಕಾಲರೂಪಿಯೂ ಆಗುತ್ತಾನೆ. ಸಾವಿರಾರು ಶಿರಸ್ಸು ಮೊದಲಾದ ವಿಶ್ವರೂಪಾಕಾರಧಾರಿಯಾದ ಸ್ವಯಂಭುವಿಗೆ ಈ ಮೂರು ಅವಸ್ಥೆಗಳು. ಬ್ರಹ್ಮನಿಗೆ ಅವನ ಅಧಿಕಾರ ನಿರ್ವಾಹಕ್ಕೆ ಉಪಕರಣವೆಲ್ಲವೂ ರಜೋಗುಣವು. ಕಾಲಮೂರ್ತಿಗೆ ತಮೋಗುಣವು. ಪುರುಷರೂಪದಲ್ಲಿ ಸತ್ಯಾಧಿಕ್ಯವು. ಹೀಗೆ ಸ್ವಯಂಭುವಿಗೆ ಗುಣಗಳ ತಾರತಮ್ಯವಿದೆ. ಬ್ರಹ್ಮನಾಗಿದ್ದುಕೊಂಡು ಲೋಕಗಳನ್ನು ಸೃಷ್ಟಿಸುತ್ತಲೂ, ಕಾಲರೂಪದಿಂದ ಸಂಹರಿಸುತ್ತಲೂ, ಪೂರ್ಣರೂಪದ ಪುರುಷಾಕಾರದಿಂದ ಉದಾಸೀನನಾಗಿಯೂ ಇರುವುದರಿಂದ ಒಬ್ಬನಿಗೇ ಈ ಮೂರು ಅವಸ್ಥೆಗಳು ಪ್ರಾಪ್ತವಾಗುತ್ತವೆ. ಬ್ರಹ್ಮನು ಕಮಲದಳದಂತೆ ಕೆಂಪಾದ ಕಾಂತಿಯುಳ್ಳವನೂ, ರುದ್ರನು ಉತ್ತಮ ಕಾಡಿಗೆಯಂತೆ ಕಪ್ಪು ಕಾಂತಿಯುಳ್ಳವನೂ, ವಿಷ್ಣುವು ಕಮಲದಂತೆ ಸುಂದರ ಕಣ್ಣುಗಳುಳ್ಳವನೂ ಆಗಿರುವುದರಿಂದ ಪರಮಾತ್ಮನೊಬ್ಬನಿಗೇ ಗುಣೋಪಾಧಿಯಿಂದ ಈ ಭಿನ್ನ ರೂಪಗಳುಂಟಾಗುತ್ತವೆ. ಪರಮಾತ್ಮನೆಂಬ ಅಷ್ಟೈಶ್ವರ್ಯ ಸಿದ್ಧಿಯಿರುವ ಯೋಗೀಶ್ವರನು ತನ್ನ ಸತ್ಯಸಂಕಲ್ಪಾನುಸಾರವಾಗಿ ಒಂದು, ಎರಡು, ಮೂರು ಅಥವಾ ಅನೇಕ ಸ್ವರೂಪಗಳಿರುವ ಶರೀರಗಳನ್ನು ಪಡೆದುಕೊಳ್ಳುತ್ತಾ ವಿಕಾರಾವಸ್ಥೆಗಳಿಂದ ಅವುಗಳನ್ನು ತೊರೆಯುತ್ತಾ ಇರುತ್ತಾನೆ. ಮತ್ತು ಅವನ ಲೀಲೆಯಿಂದ ದ್ವಿತೀಯ ವಸ್ತುಗಳೆಲ್ಲವೂ ವಿವಿಧ ಆಕಾರ-ಕ್ರಿಯಾ-ರೂಪಗಳನ್ನು ಹೊಂದುತ್ತವೆ. ಲೋಕ ವಸ್ತುಗಳನ್ನು ಮೂರು ಜಾತಿಗಳನ್ನಾಗಿ ವಿಂಗಡಿಸುವನಾದ್ದರಿಂದ ಅದಕ್ಕೆ ಕಾರಣವಾದ ಗುಣತ್ರಯಗಳ ಸಂಪರ್ಕದಿಂದ ತ್ರಿಗುಣಸ್ವರೂಪಿಯಾಗುತ್ತಾನೆ.
ಚತುರ್ಧಾ ಪ್ರವಿಭಕ್ತತ್ವಾಚ್ಚತುರ್ವ್ಯೂಹಃ ಪ್ರಕೀರ್ತಿತಃ । ಯದಾ ಶೇತೇ ತದಾರ್ಧಾಂತೇ ಯದ್ಭುಂಕ್ತೇ ವಿಷಯಾನ್ಪ್ರಭುಃ ।। 23 ।। ಯತ್ಸ್ವಸ್ಥಾಃ ಸತತಂ ಭಾವಸ್ತಸ್ಮಾದಾತ್ಮಾ ನಿರುಚ್ಯತೇ । ಋಷಿಃ ಸರ್ವಗತಶ್ಚಾತ್ರ ಶರೀರೇ ಸೋಽಭ್ಯಯಾತ್ಪ್ರಭುಃ ।। 24 ।। ಸ್ವಾಮೀ ಸರ್ವಸ್ಯ ಯತ್ಸರ್ವಂ ವಿಷ್ಣುಃ ಸರ್ವಪ್ರವೇಶನಾತ್ । ಭಗವಾನಗ್ರಸದ್ಭಾವಾನ್ನಾಗೋ ನಾಗಸ್ವಸಂಶ್ರಯಾತ್ ।। 25 ।। ಪರಮಃ ಸಂಪ್ರಹೃಷ್ಟತ್ವಾದ್ದೇವತಾದೋಮಿತಿ ಸ್ಮೃತಿಃ । ಸರ್ವಜ್ಞಃ ಸರ್ವವಿಜ್ಞಾನಾತ್ಸರ್ವಃ ಸರ್ವಯತಸ್ತತಃ ।। 26 ।। ನರಾಣಾಂ ಸ್ವಾಪನಂ ಬ್ರಹ್ಮಾ ತಸ್ಮಾನ್ನಾರಾಯಣಃ ಸ್ಮೃತಃ । ತ್ರಿಧಾ ವಿಭಜ್ಯ ಚಾತ್ಮಾನಂ ಸಕಲಃ ಸಂಪ್ರವರ್ತತೇ ।। 27 ।।
ಸಂಕರ್ಷಣ-ವಾಸುದೇವ-ಪ್ರದ್ಯುಮ್ನ-ಅನಿರುದ್ಧರೆಂಬ ನಾಲ್ಕು ವ್ಯೂಹಗಳನ್ನು ರಚಿಸಿದುದರಿಂದ ಚತುರ್ವ್ಯೂಹನೆಂದು ಪ್ರಸಿದ್ಧನಾಗಿದ್ದಾನೆ. ತನ್ನ ನಿದ್ರಾಸಮಯದಲ್ಲಿ ಸಮಸ್ತವನ್ನೂ ತನ್ನಲ್ಲಿ ಲಯಮಾಡಿಕೊಳ್ಳುವುದರಿಂದಲೂ, ಜೀವಸ್ವರೂಪನಾಗಿ ವಿಷಯಗಳನ್ನು ಅನುಭವಿಸುವುದರಿಂದಲೂ, ಸ್ವಸ್ವರೂಪದಿಂದ ಸಂತತ ಕಾಲದಲ್ಲಿರುವುದರಿಂದಲೂ “ಆತ್ಮಾ” ಎಂದೆನಿಸಿಕೊಂಡಿದ್ದಾನೆ. ಸ್ವಪ್ರಕಾಶನೂ, ಸರ್ವವ್ಯಾಪಕನೂ ಆದ ಪರಮಾತ್ಮನು ತಾನೇ ಸೃಷ್ಟಿಸಿದ ಈ ಶರೀರದಲ್ಲಿ ಸ್ವಾಮಿಯಾಗಿ ಜೀವರೂಪದಿಂದ ಪ್ರವೇಶಿಸಿದ್ದಾನೆ. ಸರ್ವವಸ್ತುಗಳಿಗೂ ಸ್ವಾಮಿಯಾದ್ದರಿಂದ ಪ್ರಭುವೂ, ಸರ್ವವನ್ನೂ ಪ್ರವೇಶಿಸಿರುವುದರಿಂದ ವಿಷ್ಣುವೂ, ನಾಗ (ಶೇಷ) ಸ್ವರೂಪವನ್ನು ಪಡೆದಿರುವುದರಿಂದ ನಾಗನೂ ಆಗಿದ್ದಾನೆ. ಇಂಥಹ ಭಗವಂತನು ಸಂಹಾರಕಾಲದಲ್ಲಿ ಭಾವವಸ್ತುಗಳನ್ನು ಗ್ರಸನ ಮಾಡುತ್ತಾನೆ. ಸತತವೂ ಸಂತೋಷದಿಂದಿರುವವನಾಗಿ ಪರಮನೂ, ಸಕಲವನ್ನೂ ರಕ್ಷಿಸುವವನಾಗಿ ಓಂಕಾರ ರೂಪನೂ, ಸರ್ವವನ್ನೂ ಅರಿತವನಾಗಿ ಸರ್ವಜ್ಞನೂ, ಎಲ್ಲೆಲ್ಲಿಯೂ ವ್ಯಾಪಿಸಿದವನಾಗಿ ಸರ್ವಾತ್ಮಕನೂ ಆಗಿದ್ದಾನೆ. ಬ್ರಹ್ಮನು ನರರ ನಿದ್ರಾವಸ್ಥೆಯಲ್ಲಿ ಆಯನ ಅಥವಾ ಆಧಾರರೂಪನಾಗಿರುವುದರಿಂದ ನಾರಾಯಣನೆಂದು ಕರೆಯಲ್ಪಡುತ್ತಾನೆ. ತಾನು ಮೂರು ಆಕಾರವಾಗಿ ವಿಭಕ್ತನಾಗಿ ಪ್ರತಿಯೊಂದು ಕರ್ತವ್ಯದಲ್ಲಿಯೂ ಪ್ರವರ್ತಿಸುತ್ತಾನೆ. ಭಗವಂತನ ಪ್ರತಿಯೊಂದು ನಾಮಗಳೂ ಅವನಿಗೆ ಅನ್ವರ್ಥವಾದವುಗಳು.
ಸೃಜತೇ ಗ್ರಸತೇ ಚೈವ ಪಾಲ್ಯತೇ ಚ ತ್ರಿಭಿಃ ಸ್ವಯಮ್ । ಸೋಽಗ್ರೇ ಹಿರಣ್ಯಗರ್ಭಃ ಸನ್ಪ್ರಾದುರ್ಭೂತಃ ಸ್ವಯಂ ಪ್ರಭುಃ ।। 28 ।। ಆದ್ಯೋ ಹಿ ಸ್ವವಶಶ್ಚೈವ ಅಜಾತತ್ವಾದಜಃ ಸ್ಮೃತಃ । ತಸ್ಮಾದ್ಧಿರಣ್ಯಗರ್ಭಶ್ಚ ಪುರಾಣೇಷು ನಿರುಚ್ಯತೇ ।। 29 ।। ಸ್ವಯಂಭುವೋ ನಿವೃತ್ತಸ್ಯ ಕಾಲೋ ವರ್ಣಾಗ್ರತಸ್ತು ಯಃ । ನ ಶಕ್ಯಃ ಪರಿಸಂಖ್ಯಾತುಂ ಮನುವರ್ಷಶತೈರಪಿ ।। 30 ।। ಕಲ್ಪಸಂಖ್ಯಾನಿವೃತ್ತಸ್ತು ಪರಾರ್ಧೋ ಬ್ರಹ್ಮಣಃ ಸ್ಮೃತಃ । ತಾವತ್ತ್ವೇ ಸೋಽಸ್ಯ ಕಾಲೋಽನ್ಯಸ್ತಸ್ಯಾಂತೇ ಪ್ರತಿಬುದ್ಧ್ಯತೇ ।। 31 ।।
ಪರಮಾತ್ಮನು ತ್ರಿಮೂರ್ತಿ ಸ್ವರೂಪದಿಂದ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಗಳನ್ನು ರಚಿಸಿದ್ದಾನೆ. ಅವನು ಆದಿಯಲ್ಲಿ ಹಿರಣ್ಯಗರ್ಭನ ರೂಪದಿಂದ ಪ್ರಾದುರ್ಭವಿಸಿದನು. ಪರಮಾತ್ಮನು ಕಾಲಾಧೀನನಲ್ಲದೇ ಸ್ವತಂತ್ರನಾದ್ದರಿಂದ ಆದ್ಯನು. ಜನ್ಮವಿಲ್ಲದ್ದರಿಂದ ಅಜನು. ಅವನಿಂದಲೇ ಹಿರಣ್ಯಗರ್ಭನೆಂಬ ಪ್ರಥಮ ಶರೀರಿಯು ಹುಟ್ಟಿರುವನಾದ್ದರಿಂದ ಪುರಾಣಗಳಲ್ಲಿ ಪ್ರಸಿದ್ಧನು. ನಾಮ-ರೂಪ ಸೃಷ್ಟಿಯ ಮೊದಲು ನಿವೃತ್ತಿಶೀಲನಾಗಿದ್ದ ಸ್ವಯಂಭುವಿಗೆ ಕಳೆದುಹೋದ ಕಾಲದ ಪರಿಮಾಣವನ್ನು ಮಾನವರ ವರ್ಷಶತಗಳಿಂದ ಎಣಿಸಲೂ ಕೂಡ ಸಾಧ್ಯವಿಲ್ಲ. ಅವನಿಂದ ಆದ ಕಲ್ಪಗಳ ಸಂಖ್ಯಾನುಗುಣವಾಗಿ ಬ್ರಹ್ಮನಿಗೆ ಕಳೆದುಹೋದ ಕಾಲವನ್ನು ಅದರ ಪರಿಮಾಣದಿಂದ ಪರಾರ್ಧವೆಂದು ಹೇಳುತ್ತಾರೆ. ಕಲ್ಪದ ಅವಸಾನವೂ ಅಷ್ಟೇ ಪ್ರಮಾಣದ ಕಾಲವುಳ್ಳದ್ದು. ಅದರ ಸಮಾಪ್ತಿಯಲ್ಲಿ ಮತ್ತೆ ಎಚ್ಚರಗೊಳ್ಳುತ್ತಾನೆ.
ಕೋಟಿವರ್ಷಸಹಸ್ರಾಣಿ ಗೃಹಭೂತಾನಿ ಯಾನಿ ಚ । ಸಮತೀತಾನಿ ಕಲ್ಪಾನಾಂ ತಾವಚ್ಛೇಷಾತ್ಪರೇತು ಯೇ ।। 32 ।। ಯತ್ಸ್ವಯಂ ವರ್ತತೇ ಕಲ್ಪೋ ವಾರಾಹಸ್ತಂ ನಿಬೋಧತ । ಪ್ರಥಮಂ ಸಾಂಪ್ರತಸ್ತೇಷಾಂ ಕಲ್ಪೋ ವೈ ವರ್ತತೇ ಚ ಯಃ । ಪೂರ್ಣೇ ಯುಗಸಹಸ್ರೇ ತು ಪರಿಪಾಲ್ಯಂ ನರೇಶ್ವರೈಃ ।। 33 ।।
ಹಿಂದೆ ಅನೇಕಾನೇಕ ಕಲ್ಪಗಳು ಕಳೆದುಹೋದ್ದರಿಂದ ಆ ಕಲ್ಪಗಳಿಗೆ ಸಾವಿರಾರು ಕೋಟಿ ವರ್ಷ ಪರಿಮಿತ ಕಾಲವು ಆಧಾರವಾಗಿತ್ತು. ಆ ಅವಧಿಯಿಂದ ಈಚೆಗೆ ಕೆಲವು ಕಲ್ಪಗಳು ನಡೆಯಲಿವೆ. ಈ ಕಲ್ಪ ಪ್ರವಾಹಗಳಲ್ಲಿ ಒಂದಾದ ವಾರಾಹ ಕಲ್ಪವು ತಾನಾಗಿ ನಡೆಯುತ್ತಿದೆ. ಅದರ ವರ್ಣನೆಯನ್ನು ಕೇಳಿ. ಮುಂದೆ ನಡೆಯಲಿರುವ ಕಲ್ಪಗಳಲ್ಲಿ ಈಗಿನ ವಾರಾಹ ಕಲ್ಪವು ಮೊದಲನೆಯದು. ಈ ಕಲ್ಪದ ಸಾವಿರ ಯುಗಗಳು ಪೂರ್ತಿಯಾಗುವ ಪರ್ಯಂತ ಕ್ಷತ್ರಿಯವಂಶಸಂಭೂತರಾದ ನರೇಶ್ವರರು ಪಾಲಿಸುತ್ತಾರೆ.”
ಇತಿ ಶ್ರೀಬ್ರಹ್ಮಾಂಡೇ ಮಹಾಪುರಾಣೇ ವಾಯುಪ್ರೋಕ್ತೇ ಪೂರ್ವಭಾಗೇ ಪ್ರಥಮೇ ಪ್ರಕ್ರಿಯಾಪದೇ ಲೋಕಕಲ್ಪನಂ ನಾಮ ಚತುರ್ಥೋಽಧ್ಯಾಯಃ ।।
ಇದು ಶ್ರೀಬ್ರಹ್ಮಾಂಡಮಹಾಪುರಾಣದಲ್ಲಿ ವಾಯುವು ಹೇಳಿದ ಪೂರ್ವಭಾಗದ ಪ್ರಥಮ ಪ್ರಕ್ರಿಯಾಪಾದದಲ್ಲಿ ಲೋಕಕಲ್ಪನೆ ಎನ್ನುವ ನಾಲ್ಕನೇ ಅಧ್ಯಾಯವು.
[1] ಅದೃಷ್ಟಪರಿಪಾಕ ಎಂದರೆ ಹಿಂದಿನ ಕರ್ಮದಿಂದ ಉಂಟಾದ ಅದೃಶ್ಯ ಶಕ್ತಿಯು ಫಲ ನೀಡಲು ಪಕ್ವಗೊಂಡ ಸ್ಥಿತಿ. ನ್ಯಾಯ-ವೈಶೇಷಿಕ ದರ್ಶನಗಳ ಪ್ರಕಾರ ನ್ಯಾಯ–ವೈಶೇಷಿಕ ದರ್ಶನದ ಪ್ರಕಾರ: ಪ್ರತಿಯೊಬ್ಬನಿಗೂ ಕರ್ಮಗಳ ಮೂಲಕ ಒಂದು “ಅದೃಷ್ಟ” ಶಕ್ತಿ ಸಂಚಯವಾಗುತ್ತದೆ. ಈ ಅದೃಷ್ಟವು ಅದೃಶ್ಯ, ಅಂದರೆ ತಕ್ಷಣ ಕಾಣುವುದಿಲ್ಲ, ಆದರೆ ಸಮಯ ಬಂದಾಗ ಅದು ಫಲ ನೀಡುತ್ತದೆ. ಅದೃಷ್ಟವು ಪಕ್ವವಾದಾಗ (ಅಥವಾ ಅದರ ಪರಿಪಾಕ ಉಂಟಾದಾಗ), ಅದರ ಪರಿಣಾಮವಾಗಿ ಸಂಪಾದನೆ, ಸುಖ–ದುಃಖ, ಜನ್ಮ–ಮರಣ, ಇತ್ಯಾದಿ ಘಟನೆಗಳು ಸಂಭವಿಸುತ್ತವೆ. ಸರಳವಾಗಿ ಹೇಳುವುದಾದರೆ ಹಿಂದಿನ ಕರ್ಮದ ಅದೃಶ್ಯ ಬಲವು ಫಲ ನೀಡಲು ತಯಾರಾದ ಸ್ಥಿತಿ = ಅದೃಷ್ಟಪರಿಪಾಕ.