ಶ್ರೀಬ್ರಹ್ಮಾಂಡಮಹಾಪುರಾಣ ಅಧ್ಯಾಯ 3: ಹಿರಣ್ಯಗರ್ಭೋತ್ಪತ್ತಿವರ್ಣನಂ

 

ಸೂತ ಉವಾಚ । ಶೃಣು ತೇಷಾಂ ಕಥಾಂ ದಿವ್ಯಾಂ ಸರ್ವಪಾಪಪ್ರಮೋಚನೀಮ್ । ಕಥ್ಯಮಾನಾಂ ಮಯಾ ಚಿತ್ರಾಂ ಬಹ್ವರ್ಥಾಂ ಶ್ರುತಿಸಮ್ಮತಾಮ್ ।। 1 ।। ಯ ಇಮಾಂ ಧಾರಯೇನ್ನಿತ್ಯಂ ಶೃಣುಯಾದ್ವಾಪ್ಯಭೀಕ್ಷ್ಣಶಃ । ಸ್ವವಂಶಂ ಧಾರಣಂ ಕೃತ್ವಾ ಸ್ವರ್ಗಲೋಕೇ ಮಹೀಯತೇ ।। 2 ।। ವಿಶ್ವತಾರಾಯಾ ಚ ಪಂಚ ಯಥಾವೃತ್ತಂ ಯಥಾಶ್ರುತಮ್ । ಕೀರ್ತ್ಯಮಾನಂ ನಿಬೋಧಾರ್ಥಂ ಪೂರ್ವೇಷಾಂ ಕೀರ್ತಿವರ್ಧನಮ್ ।। 3 ।। ಧನ್ಯಂ ಯಶಸ್ಯಮಾಯುಷ್ಯಂ ಸ್ವರ್ಗ್ಯಂ ಶತ್ರುಘ್ನಮೇವ ಚ । ಕೀರ್ತನಂ ಸ್ಥಿರಕೀರ್ತೀನಾಂ ಸರ್ವೇಷಾಂ ಪುಣ್ಯಕರ್ಮಣಾಮ್ ।। 4 ।।

ಸೂತನು ಹೇಳಿದನು: “ಸರ್ವಪಾಪಗಳನ್ನೂ ಕಳೆಯುವ, ದಿವ್ಯವೂ, ವಿಚಿತ್ರವೂ, ಬಹ್ವರ್ಥಗರ್ಭಿತವೂ, ವೇದಗಳಿಗೆ ತುಲ್ಯವೂ ಆದ ಈಗ ನಾನು ಹೇಳುವ ಆ ಪುಣ್ಯಾತ್ಮರ ಕಥೆಯನ್ನು ಕೇಳು. ಯಾರು ಇದನ್ನು ನಿತ್ಯವೂ ಮನಸ್ಸಿನಲ್ಲಿಟ್ಟುಕೊಳ್ಳುತ್ತಾನೋ ಅಥವಾ ಮತ್ತೆ ಮತ್ತೆ ಕೇಳುತ್ತಾನೋ ಅವನು ತನ್ನ ವಂಶವನ್ನು ಶಾಶ್ವತಗೊಳಿಸಿ ಸ್ವರ್ಗದಲ್ಲಿ ಪೂಜ್ಯನಾಗುತ್ತಾನೆ. ಇದು ಪ್ರಾಪಂಚಿಕ ಕಷ್ಟಗಳಿಂದ ಪಾರುಮಾಡುತ್ತದೆ. ಈ ಪುಣ್ಯಶ್ಲೋಕರ ಕೀರ್ತಿದಾಯಕ ಚರಿತ್ರೆಯು ಹಿಂದೆ ನಡೆದಂತೆಯೂ ನಾನು ಕೇಳಿರುವಂತೆಯೂ ಹೇಳುವುದನ್ನು ಕೇಳು. ಸ್ಥಿರಕೀರ್ತಿಗಳನ್ನು ಗಳಿಸಿದ ಪುಣ್ಯಾತ್ಮರೆಲ್ಲರ ಚರಿತ್ರಶ್ರವಣವು ಧನ, ಯಶಸ್ಸು, ಆಯಸ್ಸು, ಸ್ವರ್ಗ ಮೊದಲಾದ ಉತ್ತಮ ಫಲಗಳನ್ನು ಕೊಡುವುದಲ್ಲದೇ ಶತ್ರುಗಳನ್ನು ನಿಗ್ರಹಿಸುತ್ತದೆ.

ಯಸ್ಮಾತ್ಕಲ್ಪಾಯತೇ ಕಲ್ಪಃ ಸಮಗ್ರಂ ಶುಚಯೇ ಶುಚಿಃ । ತಸ್ಮೈ ಹಿರಣ್ಯಗರ್ಭಾಯ ಪುರುಷಾಯೇಶ್ವರಾಯ ಚ ।। 5 ।। ಅಜಾಯ ಪ್ರಥಮಾಯೈವ ವರಿಷ್ಠಾಯ ಪ್ರಜಾಸೃಜೇ । ಬ್ರಹ್ಮಣೇ ಲೋಕತಂತ್ರಾಯ ನಮಸ್ಕೃತ್ಯ ಸ್ವಯಂಭುವೇ ।। 6 ।। ಮಹದಾದ್ಯಂ ವಿಶೇಷಾಂತಂ ಸವೈರೂಪ್ಯಂ ಸಲಕ್ಷಣಮ್ । ಪಂಚಪ್ರಮಾಣಂ ಷಟ್ ಶ್ರಾಂತಃ ಪುರುಷಾಧಿಷ್ಠಿತಂ ಚ ಯತ್ ।। 7 ।। ಆಸಂಯಮಾತ್ಪ್ರವಕ್ಷ್ಯಾಮಿ ಭೂತಸರ್ಗಮನುತ್ತಮಮ್ । ಅವ್ಯಕ್ತಂ ಕಾರಣಂ ಯತ್ತನ್ನಿತ್ಯಂ ಸದಸದಾತ್ಮಕಮ್ ।। 8 ।।

ಲೋಕತತ್ತ್ವಗಳನ್ನು ವರ್ಣಿಸುವ ಮೊದಲು ಹಿರಣ್ಯಗರ್ಭನಿಗೆ ನಮಸ್ಕರಿಸುತ್ತೇನೆ. ಹಿರಣ್ಯಗರ್ಭನಿಂದ ಕಲ್ಪಕಾಲವು ಕಲ್ಪವೆನಿಸಿರುವುದು ಮತ್ತು ಪವಿತ್ರ ವಸ್ತುಗಳಿಗೆ ಪಾವಿತ್ರ್ಯವು ಬಂದಿರುವುದು. ಅಂತಹ ಹಿರಣ್ಯಗರ್ಭನು ಪುರುಷರೂಪಿಯೂ, ಸಕಲ ಪ್ರಪಂಚ ನಿಯಾಮಕನೂ, ಜನ್ಮರಹಿತನೂ, ಸೃಜ್ಯವಸ್ತುಗಳಿಗೆಲ್ಲ ಮೊದಲನೆಯವನೂ, ಶ್ರೇಷ್ಠನೂ, ಪ್ರಜೆಗಳನ್ನು ಸೃಷ್ಟಿಮಾಡುವವನೂ, ಸಾಕ್ಷಾತ್ತಾಗಿ ಬ್ರಹ್ಮದೇವನೂ, ಲೋಕಗಳ ಸೃಷ್ಟಿಯೆಂಬ ತಂತ್ರದಲ್ಲಿ ಮುಳುಗಿದವನೂ ಆಗಿದ್ದಾನೆ. ಇವನನ್ನು ನಮಸ್ಕರಿಸಿ ಲೋಕತತ್ತ್ವಗಳಲ್ಲಿ ಮಹತ್ತತ್ತ್ವವೇ ಮೊದಲಾಗಿ ವಿಕಾರಪರ್ಯಂತವಾದ, ಪರಸ್ಪರ ಸಾಮ್ಯ-ವೈಷಮ್ಯಗಳಿಂದ ಕೂಡಿದ, ಪಂಚ ಪ್ರಮಾಣ[1]ಗಳಿಂದ ಹಾಗೂ ಜನ್ಮಾದಿ ಆರು ವಿಕಾರ[2]ಗಳಿಂದ ಕೂಡಿದ ಪುರುಷರೂಪದಿಂದ ನಿಯಮಿಸಲ್ಪಟ್ಟ ಭೂತ ಸೃಷ್ಟಿಯನ್ನು ಪ್ರಲಯ ಪರ್ಯಂತವಾಗಿ ವರ್ಣಿಸುತ್ತೇನೆ.

ಪ್ರಧಾನಂ ಪ್ರಕೃತಿಂ ಚೈವ ಯಮಾಹುಸ್ತತ್ತ್ವಚಿಂತಕಾಃ । ಗಂಧರೂಪರಸೈರ್ಹೀನಂ ಶಬ್ದಸ್ಪರ್ಶವಿವರ್ಜಿತಮ್ ।। 9 ।। ಜಗದ್ಯೋನಿಂ ಮಹಾಭೂತಂ ಪರಂ ಬ್ರಹ್ಮ ಸನಾತನಮ್ । ವಿಗ್ರಹಂ ಸರ್ವಭೂತಾನಾಮವ್ಯಕ್ತಮಭವತ್ಕಿಲ ।। 10 ।। ಅನಾದ್ಯಂತಮಜಂ ಸೂಕ್ಷ್ಮಂ ತ್ರಿಗುಣಂ ಪ್ರಭವಾಪ್ಯಯಮ್ । ಅಸಾಂಪ್ರತಿಕಮಜ್ಞೇಯಂ ಬ್ರಹ್ಮ ಯತ್ಸದಸತ್ಪರಮ್ ।। 11 ।। ತಸ್ಯಾತ್ಮನಾ ಸರ್ವಮಿದಂ ವ್ಯಾಪ್ತಮಾಸೀತ್ತಮೋಮಯಮ್ । ಗುಣಸಾಮ್ಯೇ ತದಾ ತಸ್ಮಿನ್ನವಿಭಾತಂ ತಮೋಮಯಮ್ ।। 12 ।।

ಈ ಪ್ರಪಂಚವು ಹುಟ್ಟುವ ಮೊದಲು ಸರ್ಗಾದಿಯಲ್ಲಿ ಅವ್ಯಕ್ತವೆಂಬ ಕಾರಣವು ಇದ್ದಿತೆಂದು ತತ್ತ್ವಜ್ಞಾನಿಗಳು ಹೇಳುತ್ತಾರೆ. ಆ ಅವ್ಯಕ್ತವು ನಿತ್ಯವಾದುದೂ, ವ್ಯಕ್ತ-ಅವ್ಯಕ್ತ ದಶೆಗಳನ್ನು ಅನುಭವಿಸುವಂತಹುದೂ, ಪ್ರಧಾನ-ಪ್ರಕೃತಿ ಮೊದಲಾದ ಶಬ್ದಗಳಿಂದ ಕರೆಯಲ್ಪಡುವಂತಹುದೂ, ಗಂಧ-ರೂಪ-ರಸ-ಶಬ್ದ-ಸ್ಪರ್ಶಗಳೆಂಬ ಭೌತಿಕಗುಣಗಲ್ಲಿದ್ದಾಗಿಯೂ, ಜಗತ್ತಿಗೆಲ್ಲ ಉಪಾದಾನ ಕಾರಣವೂ, ಮಹಾಭೂತಗಳೆಲ್ಲವಕ್ಕೂ ಆಧಾರಭೂತವಾಗಿಯೂ ಇದೆ. ಅದು ಆದಿ-ಅಂತಗಳಿಲ್ಲದ್ದೂ, ಜನ್ಮಾದಿ ವಿಕಾರಗಳಿಲ್ಲದ್ದೂ, ಸೂಕ್ಷ್ಮವೂ, ಗುಣತ್ರಯ ಸಂಘಾತ ಸ್ವರೂಪವೂ, ತನ್ನಿಂದ ಹುಟ್ಟಿದ ಕಾರ್ಯ-ವಸ್ತುಗಳ ಉತ್ಪತ್ತಿ-ಲಯಗಳಿಗೆ ಅಧಿಷ್ಠಾನವೂ, ಸನಾತನವೂ, ಗಹನವೂ, ಸತ್-ಅಸತ್ ಎಂಬ ವಿಭಾಗಾವಸ್ಥೆಯುಳ್ಳದ್ದೂ, ಬ್ರಹ್ಮವಸ್ತುವಿನಂತೆ ವ್ಯಾಪಕವೂ ಆಗಿದೆ. ಅಂತಹ ಪ್ರಧಾನವು ಕಾರಣವಾದ್ದರಂದ ಸೃಷ್ಟಿಯಲ್ಲಿ ಕಾಣುವ ಕಾರ್ಯ-ವಸ್ತುಗಳೆಲ್ಲವೂ ಪ್ರಧಾನ ಸ್ವರೂಪದಿಂದ ವ್ಯಾಪಿಸಲ್ಪಟ್ಟು, ಕತ್ತಲೆಯಂತೆ ಗಹನವಾದ ಸ್ವರೂಪದಿಂದಿದೆ. ಸತ್ತ್ವ-ರಜಸ್ಸು-ತಮಸ್ಸುಗಳೆಂಬ ಗುಣಗಳು ಸಮ ಪರಿಮಾಣದಲ್ಲಿದ್ದಾಗ ಕಾರ್ಯಜಾಲವು ಲೀನವಾಗಿ ಅದೃಶ್ಯವಾಗುತ್ತದೆ.

ಸರ್ಗಕಾಲೇ ಪ್ರಧಾನಸ್ಯ ಕ್ಷತ್ರಜ್ಞಾಧಿಷ್ಠಿತಸ್ಯ ವೈ । ಗುಣಭಾವಾದ್ಭಾಸಮಾನೇ ಮಹಾತತ್ತ್ವಂ ಬಭೂವ ಹ ।। 13 ।। ಸೂಕ್ಷ್ಮಃ ಸ ತು ಮಹಾನಗ್ರೇ ಅವ್ಯಕ್ತೇನ ಸಮಾವೃತಃ । ಸತ್ತ್ವೋದ್ರೇಕೋ ಮಹಾನಗ್ರೇ ಸತ್ತ್ವಮಾತ್ರಪ್ರಕಾಶಕಃ ।। 14 ।। ಸತ್ತ್ವಾನ್ಮಹಾನ್ಸ ವಿಜ್ಞೇಯ ಏಕಸ್ತತ್ಕಾರಣಃ ಸ್ಮೃತಃ । ಲಿಂಗಮಾತ್ರಂ ಸಮುತ್ಪನ್ನಂ ಕ್ಷೇತ್ರಜ್ಞಾಧಿಷ್ಠಿತಂ ಮಹತ್ ।। 15 ।। ಸಂಕಲ್ಪೋಽಧ್ಯವಸಾಯಶ್ಚ ತಸ್ಯ ವೃತ್ತಿದ್ವಯಂ ಸ್ಮೃತಮ್ । ಮಹಾಸೃಷ್ಟಿಂ ಚ ಕುರುತೇ ವೀತಮಾನಃ ಸಿಸೃಕ್ಷಯಾ ।। 16 ।। ಧರ್ಮಾದೀನಿ ಚ ಭೂತಾನಿ ಲೋಕತತ್ತ್ವಾರ್ಥಹೇತವಃ । ಮನೋ ಮಹಾನ್ಮತಿರ್ಬ್ರಹ್ಮಾ ದುರ್ಬುದ್ಧಿಖ್ಯಾತಿರೀಶ್ವರಾತ್ ।। 17 ।। ಪ್ರಜ್ಞಾಸಂಧಿಶ್ಚ ಸರ್ವಸ್ವಂ ಸಂಖ್ಯಾಯತನರಶ್ಮಿಭಿಃ । ಮನುತೇ ಸರ್ವಭೂತಾನಾಂ ತಸ್ಮಾಚ್ಚೇಷ್ಟಫಲೋ ವಿಭುಃ ।। 18 ।।

ಸೃಷ್ಟಿಪ್ರಾರಂಭದಲ್ಲಿ ಕ್ಷೇತ್ರಜ್ಞನೆಂಬ ಚೇತನಾಂಶದಿಂದ ಪ್ರಧಾನವು ನಿಯಮಿತವಾಗಿ ಆ ಗುಣತ್ರಯಗಳಲ್ಲಿ ಕ್ಷೋಭೆಯುಂಟಾಗಿ ಪರಿಮಾಣ ವೈಷ್ಯಮ್ಯವು ಹುಟ್ಟಲು ಮಹತ್ತತ್ವವೆಂಬ ಮೊದಲನೆಯ ವಿಕಾರವು ಜನಿಸಿತು. ಮಹತ್ತತ್ವವೆಂಬ ವಿಕಾರವು ಆದಿಯಲ್ಲಿ ಅತ್ಯಂತ ಸೂಕ್ಷ್ಮವಾಗಿಯೂ, ಕಾರಣವಾದ ಅವ್ಯಕ್ತದಿಂದ ಆವೃತವಾಗಿಯೂ ಜನಿಸಿತು. ಅಲ್ಲಿ ಸಾತ್ತ್ವಿಕ ವಸ್ತುಗಳನ್ನು ಪ್ರಕಾಶಪಡಿಸುವ ಸತ್ತ್ವಗುಣದ ಉದ್ರೇಕವಿತ್ತು. ಸತ್ತ್ವಗುಣವು ಅತಿಯಾಗಿ ಸೇರಿದ ವಿಕಾರವಾದ್ದರಿಂದ ಸತ್ತ್ವವೊಂದೇ ಕಾರಣವೆಂದು ಹೇಳುವಂತೆ ಆ ಮಹತ್ತತ್ವವು ಪ್ರಕಾಶಿಸಿತು. ಅದು ಕ್ಷೇತ್ರಜ್ಞನಿಂದ ನಿಯಮಿತವಾಗಿ ಸಂಕಲ್ಪ[3]-ಅಧ್ಯವಸಾಯ[4]ವೆಂಬ ಎರಡು ವೃತ್ತಿಗಳನ್ನು ಹೊಂದಿದ ತತ್ತ್ವವು. ಅಪರಿಚ್ಛಿನ್ನನಾದ ಪರಮಾತ್ಮನು ಪ್ರಧಾನದಿಂದ ಸೃಷ್ಟಿಯನ್ನು ವಿಸ್ತರಿಸಲು ಬಯಸಿ ಲೋಕದ ತತ್ತ್ವಕ್ಕೆ ಕಾರಣಗಳಾದ ಧರ್ಮ ಮೊದಲಾದ ಸೂಕ್ಷ್ಮವಸ್ತುಗಳನ್ನು ಸೃಷ್ಟಿಸಿ ಮಹಾಸೃಷ್ಟಿಯನ್ನು ಮಾಡುತ್ತಾನೆ. ವಿಭುವಾದ ಪರಮಾತ್ಮನು ಸಮಷ್ಟಿರೂಪದಿಂದ ಮಹತ್ತತ್ವವನ್ನು ಹುಟ್ಟಿಸಿ, ಅದರ ವ್ಯಷ್ಟಿರೂಪಗಳಲ್ಲಿ ಮನಸ್ಸು, ಮಹತ್, ಮತಿ, ಅಧೋಗತಿಯನ್ನು ಹೊಂದಿಸುವ ಬುದ್ಧಿವೃತ್ತಿ ಭ್ರಾಂತಿ, ಸಂಧಿಸ್ವರೂಪವಾದ ಪ್ರಜ್ಞೆ, ಸರ್ವಸ್ವ – ಈ ರೂಪಗಳನ್ನು. ರಶ್ಮಿಗಳಿಂದ ಮಾಡುವವನಾದ್ದರಿಂದ ಸರ್ವಪ್ರಾಣಿಗಳಲ್ಲಿಯೂ ಬೇರೆ ಬೇರೆಯಾದ ಚೇತನಾಂಶಗಳಿಂದ ಮನನವೃತ್ತಿಯನ್ನು ಸೃಷ್ಟಿಸಿ ತಾನೂ ಕೃತಕೃತ್ಯನಾಗುತ್ತಾನೆ. ಆ ಮನಸ್ಸು ಫಲಾನುಭವದಿಂದ ಕೂಡಿದುದೂ, ರಕ್ಷಕವೂ, ಪರಿಚ್ಛಿನ್ನವಾದ ಸ್ವರೂಪವುಳ್ಳದ್ದೂ ಆಗಿ ಮನಸ್ಸೆಂಬ ಹೆಸರನ್ನು ಹೊಂದಿದೆ. ಮುಂದಿನ ಸಕಲ ತತ್ತ್ವಗಳು ಸೂಕ್ಷ್ಮರೂಪದಿಂದ ತನ್ನಲ್ಲಿ ಅಡಗಿರುವುದರಿಂದ ತಾನು ಮಹಾಪರಿಮಾಣದಿಂದ ಕೂಡಿರುವುದರಿಂದ ಮಹತ್ತತ್ವವೆಂಬ ಸಂಜ್ಞೆಯನ್ನು ಹೊಂದಿದೆ.

ಭೋಕ್ತಾ ತ್ರಾತಾ ವಿಭಕ್ತಾತ್ಮಾ ವರ್ತನಂ ಮನ ಉಚ್ಯತೇ । ತತ್ತ್ವಾನಾಂ ಸಂಗ್ರಹೇ ಯಸ್ಮಾನ್ಮಹಾಂಶ್ಚ ಪರಿಮಾಣತಃ ।। 19 ।। ಶೇಷೇಭ್ಯೋ ಗುಣತತ್ತ್ವೇಭ್ಯೋ ಮಹಾನಿವ ತನುಃ ಸ್ಮೃತಃ । ವಿಭಕ್ತಿಮಾನಂ ಮನುತೇ ವಿಭಾಗಂ ಮನ್ಯತೇಽಪಿ ವಾ ।। 20 ।। ಪುರುಷೋ ಭೋಗಸಂಬಂಧಾತ್ತೇನ ಚಾಸೌ ಸತಿ ಸ್ಮೃತಃ । ಬೃಹತ್ತ್ವಾದ್ವೃಂಹಣತ್ವಾಚ್ಚ ಭಾವಾನಾಮಖಿಲಾಶ್ರಯಾತ್ ।। 21 ।। ಯಸ್ಮಾದ್ವೃಂಹಯತ ಭಾವಾನ್ ಬ್ರಹ್ಮಾ ತೇನ ನಿರುಚ್ಯತೇ । ಆಪೂರಯತಿ ಯಸ್ಮಾಚ್ಚ ಸರ್ವಾನ್ ದೇಹಾನನುಗ್ರಹೈಃ ।। 22 ।। ಬುಧ್ಯತೇ ಪುರುಷಶ್ಚಾತ್ರ ಸರ್ವಾನ್ ಭಾವಾನ್ಪೃಥಕ್ ಪೃಥಕ್ । ತಸ್ಮಿಂಸ್ತು ಕಾರ್ಯಕರಣಂ ಸಂಸಿದ್ಧಂ ಬ್ರಹ್ಮಣಃ ಪುರಾ ।। 23 ।। ಪ್ರಾಕೃತಂ ದೇವಿ ವರ್ತಂ ಮಾಂ ಕ್ಷೇತ್ರಜ್ಞೋ ಬ್ರಹ್ಮಸಂಮಿತಃ । ಸ ವೈ ಶರೀರೀ ಪ್ರಥಮಃ ಪುರಾ ಪುರುಷ ಉಚ್ಯತೇ ।। 24 ।। ಆದಿಕರ್ತಾ ಸ ಭೂತಾನಾಂ ಬ್ರಹ್ಮಾಗ್ರೇ ಸಮವರ್ತಿನಾಮ್ । ಹಿರಣ್ಯಗರ್ಭಃ ಸೋಽಂಡೇಽಸ್ಮಿನ್ಪ್ರಾದುರ್ಭೂತಶ್ಚತುರ್ಮುಖಃ ।। 25 ।। ಸರ್ಗೇ ಚ ಪ್ರತಿಸರ್ಗೇ ಚ ಕ್ಷೇತ್ರಜ್ಞೋ ಬ್ರಹ್ಮಸಮ್ಮಿತಃ । ಕರಣೈಃ ಸಹ ಪೃಚ್ಛಂತೇ ಪ್ರತ್ಯಾಹಾರೇಸ್ತ್ಯಜಂತಿ ಚ ।। 26 ।। ಭಜಂತೇ ಚ ಪುನರ್ದೇಹಾಂಸ್ತೇ ಸಮಾಹಾರಸಂಧಿಸು

ಸರ್ವಸಮಷ್ಟಿರೂಪವಾದ ಈ ತತ್ತ್ವವು ಔಪಾಧಿಕವಾದ[5] ಭೋಕ್ತೃತ್ವಾದಿ ಧರ್ಮಗಳ ಸಂಪರ್ಕದಿಂದ “ಭೋಕ್ತಾ, ತ್ರಾತಾ” ಮೊದಲಾದ ಅನೇಕ ವಿಧದ ವ್ಯವಹಾರಗಳಿಗೆ ಭಾಗಿಯಾಗಿದೆ. ಉಳಿದ ಎಲ್ಲಾ ಗುಣತತ್ತ್ವಗಳಿಗಿಂತ ಈ ತತ್ತ್ವದ ಆಕಾರವು ಅತಿ ದೊಡ್ಡದು. ಇದು ತನ್ನ ಪರಿಮಾಣ ವಿಭಾಗ ಅಥವಾ ತನ್ನ ಸ್ವರೂಪ ವಿಭಾಗವನ್ನು ಅರಿತಿದೆ. ಇದು ಇದೆ ಎನ್ನುವುದರಿಂದಲೇ ಪುರುಷನು ಭೋಗಿಯಾಗುತ್ತಾನೆ. ಇದಕ್ಕೆ ಬ್ರಹ್ಮ ಎಂಬ ಹೆಸರು ಅನ್ವರ್ಥವಾದುದು. ಬೃಹ್ ಎಂಬ ಧಾತುವು ದೊಡ್ಡದು ಅಥವಾ ಪೋಷಣ ಎಂಬ ಅರ್ಥವನ್ನು ತಿಳಿಸುತ್ತದೆ. ನಿಖಿಲ ಭಾವವಸ್ತುಗಳಿಗೆ ಆಧಾರವಾಗಿ ಪರಿಪೋಷಿತವಾದ್ದರಿಂದ ಇದು ಬ್ರಹ್ಮ. ಇದು ಸಕಲೇಂದ್ರಿಯಗಳನ್ನು ಅನುಗ್ರಹಿಸಿ ಅವುಗಳನ್ನು ತನ್ನ ಅಂಶದಿಂದ ತುಂಬಿಕೊಂಡು ಸರ್ವಭಾವಗಳನ್ನೂ ಬೇರೆ ಬೇರೆ ರೂಪದಿಂದ ತಿಳಿಯುತ್ತದೆ ಎನ್ನುವ ಕಾರಣದಿಂದ ಇದು ಪುರುಷ ಎಂಬ ಶಬ್ದದಿಂದಲೂ ಕರೆಯಲರ್ಹವು. ಆ ತತ್ತ್ವದಲ್ಲಿ ಕಾರ್ಯಕರಣ ಸಂಘಾತ[6]ವು ಸಮಷ್ಟಿರೂಪದಿಂದ ಮೊದಲು ಸೃಷ್ಟಿಯಾದುದರಿಂದ ಪ್ರಥಮ ಶರೀರಿಯಾದ, ಬ್ರಹ್ಮವಸ್ತು ತುಲ್ಯನಾದ ಕ್ಷೇತ್ರಜ್ಞನು ಪ್ರಕೃತಿಯ ಮೊದಲನೆಯ ಶ್ರೇಷ್ಠ ವಿಕಾರವು. ಈಗಿರುವ ಸಮಸ್ತ ಶರೀರಿ ಮತ್ತು ಅಧಿಕಾರಿಕರಾದ ಶ್ರೇಷ್ಠ ಚೇತನರಿಗೆ ಪ್ರಥಮ ಶರೀರಿಯಾಗಿಯೂ, ಪೂರ್ಣರೂಪದಿಂದ ಪುರುಷಸ್ವರೂಪನಾಗಿಯೂ, ಭೂತಗಳಿಗೆ ಆದಿಕರ್ತೃವಾಗಿಯೂ ಇರುವ ಬ್ರಹ್ಮನು ತತ್ತ್ವರೂಪದಿಂದ ಮೊದಲು ಜನಿಸಿದನು. ಬ್ರಹ್ಮಾಂಡವೆಂಬ ಮೊಟ್ಟೆಯಲ್ಲಿ ನಾಲ್ಕುಮುಖಗಳಿಂದ ಕೂಡಿದ ಹಿರಣ್ಯಗರ್ಭನು ಸೃಷ್ಟಿ-ಪ್ರಲಯಕಾಲಗಳಲ್ಲಿ ಪರಮಾತ್ಮ ಸಮಾನನಾದ ಕ್ಷೇತ್ರಜ್ಞನಾಗಿ ಜನಿಸಿದನು. ಹೀಗೆ ಅನೇಕ ಪುರುಷರು ಕರಣಗಳನ್ನು ಪರಿಗ್ರಹಿಸುವುದು, ಅವುಗಳನ್ನು ಉಪಸಂಹರಿಸಿ ತ್ಯಜಿಸುವುದು, ಮತ್ತು ಕಲ್ಪಗಳ ಸಂಧಿಗಳಲ್ಲಿ ಮತ್ತೆ ದೇಹಗಳನ್ನು ಧರಿಸುವುದು ಹೀಗೆ ಕ್ರಿಯಾವೃತ್ತಿಯನ್ನು ಮಾಡುತ್ತಿರುತ್ತಾರೆ.

ಹಿರಣ್ಮಯಸ್ತು ಯೋ ಮೇರುಸ್ತಸ್ಯೋದ್ಧರ್ತುರ್ಮಹಾತ್ಮನಃ ।। 27 ।। ಗರ್ತೋದಕಂ ಸಂಬುದಾಸ್ತು ಹರೇಯುಶ್ಚಾಪಿ ಪಂಚತಾಃ । ಯಸ್ಮಿನ್ನಂಡ ಇಮೇ ಲೋಕಾಸ್ಸಪ್ತ ವೈ ಸಂಪ್ರತಿಷ್ಠಿತಾಃ ।। 28 ।। ಪೃಥಿವೀ ಸಪ್ತಭಿರ್ದ್ವೀಪೈಃ ಸಮುದ್ರೈಸ್ಸಹ ಸಪ್ತಭಿಃ । ಪರ್ವತೈಃ ಸುಮಹದ್ಭಿಶ್ಚ ನದೀಭಿಶ್ಚ ಸಹಸ್ರಶಃ ।। 29 ।। ಅಂತಃಸ್ಥಸ್ಯ ತ್ವಿಮೇ ಲೋಕಾ ಅಂತರ್ವಿಶ್ವಮಿದಂ ಜಗತ್ । ಚಂದ್ರಾದಿತ್ಯೌ ಸನಕ್ಷತ್ರೌ ಸಂಗ್ರಹಃ ಸಹ ವಾಯುನಾ ।। 30 ।। ಲೋಕಾಲೋಕಂ ಚ ಯತ್ಕಿಂಚಿದಂಡೇ ತಸ್ಮಿನ್ಪ್ರತಿಷ್ಟಿತಮ್

ಈ ಬ್ರಹ್ಮಾಂಡದಲ್ಲಿ ಸುವರ್ಣಮಯವಾದ ಮೇರು ಪರ್ವತವು ಪ್ರಸಿದ್ಧವಾಗಿದೆ. ಅದು ಅಂಡದಿಂದ ಜನಿಸಿದ ವಸ್ತು. ಆ ಅಂಡರೂಪಿಯಾದ ಮಹಾತ್ಮ ಬ್ರಹ್ಮನಿಗೆ ಅಧಾರವಾದ ಗಂಭೀರ ಜಲಾಶಯದ ನೀರು ಮತ್ತು ನೊರೆಗಳು ಮರಣವನ್ನು ಅಪಹರಿಸುತ್ತವೆ. ಭೂಃ, ಭುವಃ, ಸುವಃ, ಮಹಃ, ಜನಃ, ತಪಃ, ಸತ್ಯಗಳೆಂಬ ಸಪ್ತಲೋಕಗಳು ಯಾವುದರಲ್ಲಿ ಪ್ರತಿಷ್ಠವಾಗಿವೆಯೋ ಆ ಬ್ರಹ್ಮಾಂಡದಲ್ಲಿ ಸಪ್ತದ್ವೀಪ-ಸಪ್ತಸಮುದ್ರ, ಮಹಾಪರ್ವತ ಮತ್ತು ಸಾವಿರಾರು ಮಹಾನದಿಗಳು ಕೂಡಿದ ಪೃಥ್ವಿಯು ಅಡಗಿದೆ. ಈಗ ಕಾಣಿಸುವ ಸಕಲ ಲೋಕಗಳೂ, ವಿಶ್ವವೂ, ಚಂದ್ರ-ಸೂರ್ಯ-ನಕ್ಷತ್ರಗಳೂ, ವಾಯುವೂ, ಲೋಕಾಲೋಕಪರ್ವತವೂ, ಸಕಲ ವಸ್ತುಗಳೂ ಕೂಡ ಆದಿಯಲ್ಲಿದ್ದ ಈ ಬ್ರಹ್ಮಾಂಡದಲ್ಲಿ ಪ್ರತಿಷ್ಠಿತವಾಗಿವೆ.

ಆಪೋ ದಶಗುಣೇನೈವ ತೇಜಸಾ ಬಾಹ್ಯತೋ ವೃತಾಃ ।। 31 ।। ತೇಜೋ ದಶಗುಣೇನೈವ ಬಾಹ್ಯತೋ ವಾಯುನಾ ವೃತಮ್ । ವಾಯುರ್ದಶಗುಣೇನೈವ ಬಾಹ್ಯತೋ ನಭಸಾ ವೃತಃ ।। 32 ।। ಆಕಾಶಮಾವೃತಂ ಸರ್ವಂ ಬಹಿರ್ಭೂತಾದಿನಾ ತಥಾ । ಭೂತಾದಿರ್ಮಹತಾ ಚೈವ ಪ್ರಧಾನೇನಾವೃತೋ ಮಹಾನ್ ।। 33 ।। ಏಭಿರಾವರಣೈರಂಡಂ ಸಪ್ತಭಿಃ ಪ್ರಾಕೃತೈರ್ವೃತಮ್ । ಇಚ್ಛಯಾ ವೃತ್ಯ ಚಾನ್ಯೋನ್ಯಮರಣೇ ಪ್ರಕೃತಯಃ ಸ್ಥಿತಾಃ ।। 34 ।। ಪ್ರಸರ್ಗಕಾಲೇ ಸ್ಥಿತ್ವಾ ಚ ಗ್ರಸಂತಸ್ಚ ಪರಸ್ಪರಮ್

ಇಂತಹ ಪೃಥ್ವೀಗುಣದ ಬ್ರಹ್ಮಾಂಡಕ್ಕೆ ಅದರ ಹತ್ತರಷ್ಟು ವಿಸ್ತಾರದ ಆಪದ ಆವರಣವಿದೆ. ಆಪಕ್ಕೆ ಅದರ ಹತ್ತುಗುಣ ತೇಜಸ್ಸು, ತೇಜಸ್ಸಿಗೆ ಹತ್ತುಗುಣ ವಾಯು, ವಾಯುವಿಗೆ ಹತ್ತುಗುಣ ಆಕಾಶ, ಆಕಾಶಕ್ಕೆ ಅಹಂಕಾರ, ಅಹಂಕಾರಕ್ಕೆ ಮಹತ್ತತ್ವ, ಮಹತ್ತತ್ವಕ್ಕೆ ಪ್ರಧಾನ – ಹೀಗೆ ಒಂದಕ್ಕೆ ಮತ್ತೊಂದು ದಶಗುಣ ಪರಿಮಾಣದಲ್ಲಿ ಹೊರಭಾಗದ ವಲಯದ ಆವರಣ ರೂಪದಲ್ಲಿವೆ. ಪೃಕೃತಿಯಿಂದ ಹುಟ್ಟಿದ ಈ ಏಳು ಆವರಣಗಳಿಂದ ಅಂಡವು ವ್ಯಾಪಿಸಲ್ಪಟ್ಟಿದೆ. ಪರಮಾತ್ಮನ ಸಂಕಲ್ಪಾನುಗುಣವಾಗಿ ಇವೆಲ್ಲವೂ ಪರಸ್ಪರಾವಲಂಬನೆಯಿಂದ ಇರುವುದಲ್ಲದೇ ಸೃಷ್ಟಿಕಾಲದಲ್ಲಿ ಸ್ಥಿತಿಯನ್ನೂ ಪ್ರಲಯದಲ್ಲಿ ಒಂದನ್ನೊಂದು ಗ್ರಾಸಮಾಡಿ ಲಯವನ್ನು ಮಾಡುತ್ತವೆ.

ಏವಂ ಪರಸ್ಪರೈಶ್ಚೈವ ಧಾರಯಂತಿ ಪರಸ್ಪರಮ್ ।। 35 ।। ಆಧಾರಾಧೇಯಭಾವೇನ ವಿಕಾರಾಸ್ತೇ ವಿಕಾರಿಷು । ಅವ್ಯಕ್ತಂ ಕ್ಷೇತ್ರಮಿತ್ಯುಕ್ತಂ ಬ್ರಹ್ಮ ಕ್ಷೇತ್ರಜ್ಞಮುಚ್ಯತೇ ।। 36 ।। ಇತ್ಯೇವಂ ಪ್ರಾಕೃತಃ ಸರ್ಗಃ ಕ್ಷೇತ್ರಜ್ಞಾಧಿಷ್ಠಿತಸ್ತು ಸಃ । ಅಬುದ್ಧಿಪೂರ್ವಃ ಪ್ರಥಮಃ ಪ್ರಾದುರ್ಭೂತಸ್ತಡಿದ್ಯಥಾ ।। 37 ।। ಏತದ್ಧಿರಣ್ಯಗರ್ಭಸ್ಯ ಜನ್ಮ ಯೋ ವೇತ್ತಿ ತತ್ತ್ವತಃ । ಆಯುಷ್ಮಾನ್ಕೀರ್ತಿಮಾನ್ ಧನ್ಯಃ ಪ್ರಜ್ಞಾವಾಂಶ್ಚ ನ ಸಂಶಯಃ ।। 38 ।।

ಹೀಗೆ ಹುಟ್ಟಿದ ಪ್ರತಿಯೊಂದು ವಿಕಾರವೂ ಅನ್ಯೋನ್ಯ ಅವಲಂಬನದಿಂದ ಒಂದನ್ನೊಂದು ಧರಿಸುತ್ತವೆ. ಆದ್ದರಿಂದ ವಿಕಾರವಸ್ತುಗಳಿಗೆ ಕಾರಣವಾದ ವಿಕಾರಿ ತತ್ತ್ವಗಳಲ್ಲಿ ವಿಕಾರವಸ್ತುಗಳು ಆಧಾರ-ಆಧೇಯಭಾವದಿಂದ[7] ಇವೆ. ಮೂಲಬೀಜರೂಪವಾದ ಅವ್ಯಕ್ತವನ್ನು ಕ್ಷೇತ್ರವೆಂದೂ ಬ್ರಹ್ಮವಸ್ತುವನ್ನು ಕ್ಷೇತ್ರಜ್ಞವೆಂದೂ ಹೇಳುತ್ತಾರೆ. ಕ್ಷೇತ್ರಜ್ಞನ ಅಧಿಷ್ಠಾನದಿಂದ ಪ್ರೇರಿತವಾದ ಪ್ರಕೃತಿಯಿಂದ ಅಬುದ್ಧಿಪೂರ್ವಕವಾದ ಮೊದಲನೆಯ ಸೃಷ್ಟಿಯು ಮೋಡದಲ್ಲಿ ಮಿಂಚು ಹುಟ್ಟುವಂತೆ ಪ್ರಾದುರ್ಭವಿಸಿತು. ಹಿರಣ್ಯಗರ್ಭನ ಈ ಜನ್ಮವನ್ನು ಇಲ್ಲಿ ವಿವರಿಸಿದ ಹಾಗೆ ತಾತ್ತ್ವಿಕವಾಗಿ ತಿಳಿಯುವವನು ಆಯಸ್ಸು-ಧನ-ಪ್ರಜ್ಞೆ ಮೊದಲಾದ ಮಹಾಫಲಗಳಿಗೆ ಭಾಗಿಯಾಗುತ್ತಾನೆ.”

ಇತಿ ಶ್ರೀಬ್ರಹ್ಮಾಂಡೇ ಮಹಾಪುರಾಣೇ ವಾಯುಪ್ರೋಕ್ತೇ ಪೂರ್ವಭಾಗೇ ಪ್ರಥಮೇ ಪ್ರಕ್ರಿಯಾಪಾದೇ ಹಿರಣ್ಯಗರ್ಭೋತ್ಪತ್ತಿವರ್ಣನಂ ನಾಮ ತೃತೀಯೋಽಧ್ಯಾಯ ।।

ಇದು ಶ್ರೀಬ್ರಹ್ಮಾಂಡಮಹಾಪುರಾಣದಲ್ಲಿ ವಾಯುವು ಹೇಳಿದ ಪೂರ್ವಭಾಗದ ಪ್ರಥಮ ಪ್ರಕ್ರಿಯಾಪಾದದಲ್ಲಿ ಹಿರಣ್ಯಗರ್ಭೋತ್ಪತ್ತಿವರ್ಣನೆ ಎಂಬ ಮೂರನೆಯ ಅಧ್ಯಾಯವು.

[1] ಪಂಚಪ್ರಮಾಣಗಳು ಎಂದರೆ ತತ್ತ್ವಶಾಸ್ತ್ರಗಳಲ್ಲಿ ಜ್ಞಾನವನ್ನು ಪಡೆಯುವ ಐದು ಯುಕ್ತವಾದ ಮಾರ್ಗಗಳು ಅಥವಾ ಪ್ರಮಾಣಗಳು. ಪ್ರಮಾಣ ಎಂದರೆ ಯಥಾರ್ಥ ಜ್ಞಾನವನ್ನು ನೀಡುವ ಉಪಾಯ. ಅಂದರೆ ಯಾವ ಮಾರ್ಗದಿಂದ ನಾವು ಸತ್ಯ ಜ್ಞಾನವನ್ನು ಪಡೆಯುತ್ತೇವೆಯೋ ಅದು ಪ್ರಮಾಣ. ಭಾರತೀಯ ತತ್ತ್ವಶಾಸ್ತ್ರಗಳಲ್ಲಿ, ವಿಶೇಷವಾಗಿ ನ್ಯಾಯ, ವೈಶೇಷಿಕ, ಸಾಂಖ್ಯ, ವೇದಾಂತ, ಇತ್ಯಾದಿಗಳಲ್ಲಿ, ಈ ಐದು ಪ್ರಮಾಣಗಳನ್ನು ಸ್ವೀಕರಿಸಲಾಗಿದೆ:

ಪ್ರಮಾಣ ಅರ್ಥವಿವರಣೆ
(1)   ಪ್ರತ್ಯಕ್ಷ ಸಾಕ್ಷಾತ್ ಅನುಭವದಿಂದ. ಇಂದ್ರಿಯಗಳ ಮೂಲಕ ಪಡೆದ ಜ್ಞಾನ. ಕಣ್ಣಿಗೆ ಕಾಣುವುದು, ಕಿವಿಗೆ ಕೇಳುವುದು ಇತ್ಯಾದಿ.
(2)   ಅನುಮಾನ ತರ್ಕದಿಂದ ಅಥವಾ ನಿರ್ಣಯದಿಂದ, ಒಂದು ವಿಷಯದಿಂದ ಇನ್ನೊಂದು ವಿಷಯವನ್ನು ಊಹಿಸುವುದು. ಉದಾಹರಣೆಗೆ, ಹೊಗೆಯನ್ನು ಕಂಡು ಬೆಂಕಿಯಿದೆ ಎಂದು ತಿಳಿಯುವುದು
(3)   ಉಪಮಾನ ಉಪಮೆಯಿಂದ ತಿಳಿಯುವುದು. ಒಂದು ಹೊಸ ವಸ್ತುವನ್ನು ಮೊದಲೇ ಇದ್ದ ಜ್ಞಾನದೊಂದಿಗೆ ಹೋಲಿಸಿ ಅರಿಯುವುದು. ಉದಾಹರಣೆಗೆ, “ಗವಯ” ಎಮ್ಮೆಯನ್ನು ಹೋಲುವ ಪ್ರಾಣಿ
(4)   ಅರ್ಥಾಪತ್ತಿ ಸಂಶಯ ನಿವಾರಣೆಗೆ ತರ್ಕಪೂರಕ ನಿರ್ಣಯ. ಕಂಡುಬರುವ ಘಟನೆಗಳಿಂದ ನೋಡಿರದ ಘಟನೆಗಳನ್ನು ಊಹಿಸಿ ಅರ್ಥಮಾಡಿಕೊಳ್ಳುವುದು. ಉದಾಹರಣೆಗೆ ಹಗಲಿನ ಹೊತ್ತು ಊಟಮಾಡದೇ ಇರುವವನೂ ದಪ್ಪನಾಗಿಯೇ ಇದ್ದಾನೆಂದರೆ, ಅವನು ರಾತ್ರಿಯ ಹೊತ್ತು ಊಟಮಾಡುತ್ತಾನೆ ಎಂದು ತಿಳಿದುಕೊಳ್ಳುವುದು.
(5)   ಅನುಪಲಬ್ಧಿ ಅನಸ್ತಿತ್ವದಿಂದ ಅರಿತುಕೊಳ್ಳುವುದು. ಯಾವುದೋ ವಸ್ತುವು ಇಲ್ಲದಿರುವುದನ್ನು ತಿಳಿಯುವುದು. ಉದಾಹರಣೆಗೆ, ಇಲ್ಲಿ ಕುರ್ಚಿಯು ಇಲ್ಲ ಎಂದು ಅರಿತುಕೊಳ್ಳುವುದು.

 

[2] ಜನ್ಮಾದಿ ಷಡ್ವಿಕಾರ ಶ್ರಾಂತಿಗಳು ಎಂದರೆ ಸೃಷ್ಟಿಯಾದ ಪ್ರತಿಯೊಂದು ಜೀವಿ ಅಂಥವಾ ದೇಹಿಯು ಅನುಭವಿಸುವ ಆರು ಹಂತಗಳ ಪರಿವರ್ತನೆಗಳು ಅಥವಾ ವಿಕಾರಗಳು. ಈ ಕಲ್ಪನೆ ಉಪನಿಷತ್ತುಗಳು, ಸಾಂಖ್ಯತತ್ತ್ವ ಮತ್ತು ಆಯುರ್ವೇದಗಳಲ್ಲಿ ಪ್ರಸಿದ್ಧವಾಗಿವೆ. ಈ ಆರು ವಿಕಾರಗಳು – ಅಸ್ತಿ ಜಾಯತೇ ವರ್ಧತೇ ವಿಪರಿಣಮತೇ ಅಪಕ್ವೀಯತೇ ವಿನಶ್ಯತೇ । (1) ಅಸ್ತಿ (ಅಸ್ತಿತ್ವ/ಸತ್ಯ): ಜೀವ ಅಥವಾ ಪದಾರ್ಥದ ಉತ್ಪತ್ತಿಯ ಪೂರ್ವ ಸ್ಥಿತಿ. ಅಸ್ತಿತ್ವದ ಬೀಜರೂಪ. (2) ಜಾಯತೇ (ಜನನ): ಸೃಷ್ಟಿಯಾಗುವುದು ಅಥವಾ ಜನ್ಮ ಪಡೆಯುವುದು. ಜೀವಿ-ವಸ್ತುವು ಉಂಟಾಗುವುದು. (3) ವರ್ಧತೇ (ವೃದ್ಧಿ) – ಬೆಳವಣಿಗೆ – ದೇಹಶ್ಕತಿ, ಮನಸ್ಸು ಬೆಳೆಯುವ ಹಂತ (4) ವಿಪರಿಣಮತೇ (ಪರಿಣಾಮ/ಪರಿವರ್ತನೆ) – ಪರಿಪಕ್ವತೆ, ಯೌವನಾವಸ್ಥೆ, ಸಂಪೂರ್ಣ ಶಕ್ತಿ, ಪ್ರೌಢಾವಸ್ಥೆ (5) ಅಪಕ್ವೀಯತೇ (ಕ್ಷಯ) – ಕುಗ್ಗುವುದು, ಶಕ್ತಿ ಕುಂದುವುದು, ವೃದ್ಧಾಪ್ಯ, ನಾಶದ ಪ್ರಾರಂಭ (6) ವಿನಶ್ಯತೇ (ನಾಶ) – ಸಂಪೂರ್ಣ ಲಯ, ಮರಣ ಅಥವಾ ದೇಹದ ವಿಲಯ.

[3] ಸಂಕಲ್ಪ ಎಂದರೆ ಮನಸ್ಸಿನ ಇಚ್ಛಾಶಕ್ತಿಯ ಮೂಲ. ಇದೇ ವೃತ್ತಿಯು ಕರ್ಮವನ್ನು ಪ್ರಾರಂಭಿಸುತ್ತದೆ.

[4] ಸಂಸ್ಕೃತ ಮೂಲ ಅಧಿ+ವಸ+ಅಯ = ಅಧ್ಯವಸಾಯ ಅರ್ಥಾತ್ ನಿಶ್ಚಯದಿಂದ ಗ್ರಹಿಸುವುದು ಅಥವಾ ದೃಢನಿರ್ಧಾರದ ಅರಿವು. ನಿಶ್ಚಯ, ನಿರ್ಣಯ, ಸ್ಪಷ್ಟ ಬುದ್ಧಿ ಗ್ರಹಿಕೆ ಅಥವಾ “ತತ್ತ್ವವನ್ನು ಖಚಿತವಾಗಿ ಅರಿಯುವ ಮನೋಕ್ರಿಯೆ.” ಸಾಂಖ್ಯದರ್ಶನದ್ಲ್ಲಿ ಅಧ್ಯವಸಾಯವು ಮಹತ್ತತ್ತ್ವ (ಬುದ್ಧಿ)ದ ಕಾರ್ಯವು. ಅರ್ಥಾತ್, ಮನಸ್ಸು ಬಾಹ್ಯ ವಸ್ತುಗಳನ್ನು ಗ್ರಹಿಸಿದ ನಂತರ ಬುದ್ಧಿಯು ಅವುಗಳ ಕುರಿತು ನಿಶ್ಚಯಾತ್ಮಕ ಜ್ಞಾನವನ್ನು ನೀಡುತ್ತದೆ. ಅದೇ ಅಧ್ಯವಸಾಯವು. ಉದಾಹರಣೆಗೆ, ಕಣ್ಣು ರೂಪವನ್ನು ನೋದುತ್ತದೆ. ಮನಸ್ಸು ಗಮನ ಕೊಡುತ್ತದೆ. ಬುದ್ಧಿಯು “ಇದು ಹೂವು” ಎಂದು ದೃಢವಾಗಿ ನಿರ್ಧರಿಸಿ ಹೇಳುತ್ತದೆ. ಇದೇ ಅಧ್ಯವಸಾಯವು. ಆಧುನಿಕ ಮನಃಶಾಸ್ತ್ರದಲ್ಲಿ seeing, attention, and perception ಎಂದು ಹೇಳಬಹುದು.

[5] ಔಪಾಧಿಕ ಎಂಬ ಪದವು ವೇದಾಂತ, ಮೀಮಾಂಸ ಮತ್ತು ತತ್ತ್ವಶಾಸ್ತ್ರಗಳಲ್ಲಿ ಅತ್ಯಂತ ಸೂಕ್ಷ್ಮವಾದ ತತ್ತ್ವವನ್ನು ಸೂಚಿಸುತ್ತದೆ. ಉಪಾಧಿಯಿಂದ ಉಂಟಾದುದು ಔಪಾಧಿಕವು. ವೇದಾಂತದ ಪ್ರಕಾರ, ಬ್ರಹ್ಮವು ಸ್ವತಃ ನಿರ್ಗುಣವೂ, ನಿರಾಕಾರವೂ, ನಿಷ್ಕಳಂಕವೂ ಆದ ತತ್ತ್ವವು. ಆದರೆ ಮಾಯೆಯ ಉಪಾಧಿಯಿಂದ ಅದು ಸಗುಣ ಬ್ರಹ್ಮ ಅಥವಾ ಈಶ್ವರನಾಗಿ ಕಾಣುತ್ತದೆ. ಹಾಗೆಯೇ ಅವಿದ್ಯೆಯ ಉಪಾಧಿಯಿಂದ ಅದು ಜೀವವಾಗಿ ಕಾಣುತ್ತದೆ. ಈ ಎರಡೂ – “ಜೀವತ್ವ” ಮತ್ತು “ಈಶ್ವರತ್ವ” – ಔಪಾಧಿಕಗಳು. ಅಂದರೆ ಉಪಾಧಿಯಿಂದ ಉಂಟಾದ ತಾತ್ಕಾಲಿಕ ಸ್ಥಿತಿಗಳು. ನಿಜವಾಗಿ ಪರಮಾರ್ಥದಲ್ಲಿ ಅಖಂಡ ಅಭಿನ್ನ ಬ್ರಹ್ಮಸ್ವರೂಪ ಒಂದೇ. ಉದಾಹರಣೆಗೆ ಕನ್ನಡಿಯಲ್ಲಿ ತೋರುವ ಮುಖವು ಕನ್ನಡಿ ಎಂಬ ಉಪಾಧಿಯಿಂದ ಆಗಿರುವ ಪ್ರತಿಬಿಂಬವೇ ಹೊರತು ನಿಜವಲ್ಲ. ಆದರೆ ನಿಜವಾಗಿ ಕಾಣುತ್ತದೆ. ಹಾಗೆಯೇ ನೀರಿನೊಳಗಿನ ಚಂದ್ರ ಅಥವಾ ನೀರಿನಲ್ಲಿ ಚಂದ್ರನು ಕಾಣುವುದು ಔಪಾಧಿಕ. ಇಲ್ಲಿ ನೀರು ಉಪಾಧಿ. ಹಾಗೆಯೇ ಜೀವನಲ್ಲಿರುವ “ನಾನು” ಎಂಬ ಭಾವವು ಔಪಾಧಿಕವು. ಇಲ್ಲಿ ದೇಹ ಮತ್ತು ಮನಸ್ಸುಗಳು ಉಪಾಧಿ. ಆತ್ಮವು ಸೀಮಿತವಾಗಿ ಕಾಣುತ್ತದೆ. ಉಪಾಧಿನಿಮಿತ್ತೋ ಭೇದಃ, ನ ತತ್ತ್ವತಃ । ಅರ್ಥಾತ್: ಉಪಾದಿಯ ಕಾರಣದಿಂದ ಮಾತ್ರ ಬೇದವು. ನಿಜವಾಗಿ ಯಾವುದೇ ಭೇದವಿಲ್ಲ. ಜೀವ-ಈಶ್ವರ ಭೇದವು ಔಪಾಧಿಕ ಮಾತ್ರ. (ಶ್ರೀಶಂಕರಾಚಾರ್ಯ, ಬ್ರಹ್ಮಸೂತ್ರಭಾಷ್ಯ)

[6] ಕಾರ್ಯ ಎಂದರೆ ಫಲಿತವಾದುದು. ಕ್ರಿಯೆಯ ಪರಿಣಾಮ. ಕರಣ ಎಂದರೆ ಸಾಧನ, ಉಪಕರಣ, ಕ್ರಿಯೆ ಮಾಡಲು ಕಾರಣವಾದುದು. ಸಂಘಾತ ಎಂದರೆ ಗುಂಪು, ಸಂಯೋಜನೆ ಅಥವಾ ಸಂಗ್ರಹ. ಆದ್ದರಿಂದ ಕಾರ್ಯಕರಣಸಂಘಾತ ಎಂದರೆ ಕಾರ್ಯಗಳೂ-ಸಾಧನಗಳೂ ಒಟ್ಟು ಸೇರಿದ ಸಂಯೋಗ. ತತ್ತ್ವಶಾಸ್ತ್ರಗಳಲ್ಲಿ ಕಾರ್ಯಕರಣಸಂಘಾತ ಎನ್ನುವ ಪದವನ್ನು ಸಾಮಾನ್ಯವಾಗಿ ದೇಹ-ಇಂದ್ರಿಯ-ಮನಸ್ಸುಗಳ ಸಂಘಾತ ಎಂದು ಪರಿಗಣಿಸಲಾಗುತ್ತದೆ. ಅರ್ಥಾತ್: ಜೀವಿಯು ಅನುಭವಿಸುವ ಪ್ರಪಂಚವು ಈ ದೇಹ ಮತ್ತು ಅದರ ಇಂದ್ರಿಯಗಳ ಸಾಧನಗಳ ಮೂಲಕವೇ ಸಾಧ್ಯವಾಗುತ್ತದೆ. ಉದಾಹರಣೆಗೆ ಸಾಂಖ್ಯದರ್ಶನದಲ್ಲಿ ಜೀವಿಯನ್ನು ಎರಡು ಭಾಗಗಳಲ್ಲಿ ಪರಿಗಣಿಸಲಾಗುತ್ತದೆ: (1) ಪುರುಷ – ಶುದ್ಧ ಚೇತನ (ಸಾಕ್ಷಿ, ಆತ್ಮ). (2) ಪ್ರಕೃತಿ — ಅಚೇತನ ದ್ರವ್ಯದಿಂದ ಉತ್ಪನ್ನವಾದ ಬುದ್ಧಿ (ಮಹತ್), ಅಹಂಕಾರ, ಮನಸ್ಸು, ಇಂದ್ರಿಯಗಳು, ದೇಹ ಇತ್ಯಾದಿ. ಈ ಪ್ರಕೃತಿಯ ಉತ್ಪನ್ನಗಳು ಸೇರಿಕೊಂಡಿರುವ ವ್ಯವಸ್ಥೆಯೇ ಕಾರ್ಯ–ಕರಣ–ಸಂಘಾತ ಎಂದು ಕರೆಯಲಾಗುತ್ತದೆ. ಪುರುಷನು ಇದರ ಸಾಕ್ಷಿ ಮಾತ್ರ; ಆತನೇ ಅನುಭವಿಯು, ಆದರೆ ಅವನು ನಿಜವಾಗಿ ಕ್ರಿಯೆಗೈಯುವುದಿಲ್ಲ. ವೇದಾಂತದ ದೃಷ್ಟಿಯಲ್ಲಿ ದೇಹ–ಇಂದ್ರಿಯ–ಮನಸ್ಸುಗಳ ವ್ಯವಸ್ಥೆಯನ್ನು “ಜೀವನ ಅನುಭವ ಮಾಡುವ ಉಪಾಧಿ” ಎಂದು ಪರಿಗಣಿಸಲಾಗುತ್ತದೆ. ಈ ಉಪಾಧಿಯೇ ಕಾರ್ಯಕರಣಸಂಘಾತ — ಅಂದರೆ, ಆತ್ಮದ ಸುತ್ತಲೂ ನಿರ್ಮಿತವಾದ ಸಾಧನ–ಸಂಘಟನೆಯು. ಅತ್ಮವು ಪ್ರಪಂಚದ ಅನುಭವಕ್ಕೆ ಬಳಸುವ ವ್ಯವಸ್ಥೆ. "ಕಾರ್ಯಕರಣಸಂಘಾತೋ ಯೋಗ್ಯೋ ಭೋಗಾಪವರಗಾರ್ಥಂ ಪುರುಷಃ" ಅರ್ಥಾತ್: ಕಾರ್ಯ–ಕರಣ–ಸಂಘಾತವು (ದೇಹ–ಇಂದ್ರಿಯ–ಮನಸ್ಸುಗಳ ಗುಂಪು) ಭೋಗ (ಅನುಭವ) ಮತ್ತು ಅಪವರ್ಗ (ಮೋಕ್ಷ) ಗಳಿಗಾಗಿ ಯೋಗ್ಯವಾದ ಸಾಧನ. (ಸಾಂಖ್ಯಕಾರಿಕಾ ಶ್ಲೋಕ 21)

[7] ಆಧಾರ-ಆಧೇಯ ಭಾವ ಎಂದರೆ ಆಧಾರ ಮತ್ತು ಆಧೇಯಗಳ ನಡುವಿನ ಪರಸ್ಪರ ಸಂಬಂಧ. ಒಂದು ವಸ್ತುವು ಮತ್ತೊಂದು ವಸ್ತುವಿನ ಮೇಲೆ ನಿಂತಿದೆ. ಅಥವಾ ಅದರ ಅಧಾರದ ಮೂಲಕ ಅಸ್ತಿತ್ವವನ್ನು ಪಡೆದಿದೆ ಎಂದು ಹೇಳುವಾಗ ಅಲ್ಲಿ ಇರುವ ಸಂಬಂಧವೇ ಆಧಾರ-ಅಧೇಯ ಭಾವ. ಉದಾಹರಣೆಗೆ ಪಾತ್ರೆಯಲ್ಲಿರುವ ನೀರು. ಇಲ್ಲಿ ಪಾತ್ರೆ ಆಧಾರ. ನೀರು ಆಧೇಯ ಅಥವಾ ಆಧರಿತವಾದುದು. ವೇದಾಂತದಲ್ಲೀ ಈ ಭಾವವನ್ನು ಅತ್ಯಂತ ಸೂಕ್ಷ್ಮವಾಗಿ ವಿವರಿಸುತ್ತಾರೆ. ಬ್ರಹ್ಮನು ಆಧಾರ. ಅದು ಎಲ್ಲವಕ್ಕೂ ಮೂಲ. ನಿಲುವು. ಜಗತ್ತು ಆಧೇಯ. ಅದು ಬ್ರಹ್ಮನ ಮೇಲೆಯೇ ಅವಲಂಬಿತವಾಗಿ ತೋರುತ್ತದೆ. ಅಂದರೆ, ಜಗತ್ತು ಬ್ರಹ್ಮನಲ್ಲಿಯೇ ಸ್ಥಿತವಾಗಿದೆ. ಆದರೆ ಬ್ರಹ್ಮನು ಜಗತ್ತಿನಲ್ಲಿ ಸ್ಥಿತನಲ್ಲ. ಇದು “ಆಧಾರ-ಆಧೇಯ ಭಾವ” ಎನ್ನುವ ಸಂಬಂಧ. ಯಥಾ ಘಟಾಕಾಶೋ ಮಹಾಕಾಶಾಧೀನಃ ಅರ್ಥಾತ್ ಘಟದೊಳಗಿನ ಆಕಾಶವು ಆಕಾಶತತ್ತ್ವದ ಮೇಲೆ ಅವಲಂಬಿತವಾಗಿದೆ. ಮಹಾಕಾಶವೇ ಆಧಾರ. ಘಟಾಕಾಶವು ಆಧೇಯ. ಇದೇ ರೀತಿಯಲ್ಲಿ ಜಗತ್ತು ಬ್ರಹ್ಮಾಧೀನವಾಗಿದೆ.

Leave a Reply

Your email address will not be published. Required fields are marked *