ಶ್ರೀಬ್ರಹ್ಮಾಂಡಮಹಾಪುರಾಣ ಅಧ್ಯಾಯ 6: ಕಲ್ಪಮನ್ವಂತರಾಖ್ಯಾನವರ್ಣನಂ

 

ಸೂತ ಉವಾಚ । ಇತ್ಯೇವಂ ಪ್ರಥಮಂ ಪಾದಂ ಪ್ರಕೃತ್ಯರ್ಥಂ ಪ್ರಕೀರ್ತಿತಮ್ । ಶ್ರುತ್ವಾ ತು ಸಂಹೃಷ್ಟಮನಾಃ ಕಾಪೇಯಃ ಸಂಶಯಾಯತಿ ।। 1 ।। ಆರಾಧ್ಯ ವಚಸಾ ಸೂತಂ ತಸ್ಯಾರ್ಥಂ ತ್ವಪರಾಂ ಕಥಾಮ್ । ಅಥ ಪ್ರಭೃತಿ ಕಲ್ಪಜ್ಞಃ ಪ್ರತಿಸಂಧಿಃ ಪ್ರಚಕ್ಷತೇ ।। 2 ।। ಸಮತೀತಸ್ಯ ಕಲ್ಪಸ್ಯ ವರ್ತಮಾನಸ್ಯ ಚಾನಯೋಃ । ಕಲ್ಪಯೋರಂತರಂ ಯತ್ರ ಪ್ರತಿಸಂಧಿಶ್ಚಯಸ್ತಯೋಃ ।। 3 ।। ಏತದ್ವೇದಿತುಮಿಚ್ಛಾಮಿ ಯಥಾವತ್ಕುಶಲೋ ಹ್ಯಸಿ । ಕಾಪೇಯೇನೈವಮುಕ್ತಸ್ತು ಸೂತಃ ಪ್ರವದತಾಂ ವರಃ ।। 4 ।। ತ್ರೈಲೋಕ್ಯಸ್ಯೋದ್ಭವಂ ಕೃತ್ಸ್ನಮಾಖ್ಯಾತುಮುಪಚಕ್ರಮೇ ।। 5 ।।

ಸೂತನು ಹೇಳಿದನು: “ಹೀಗೆ ಪ್ರಕೃತಿಯ ಕುರಿತಾದ ಮೊದಲನೇ ಪಾದವನ್ನು ಕೇಳಿ ಕಾಪೇಯನು ಸಂತೋಷಗೊಂಡು ಸಂಶಯವನ್ನು ಕೇಳಿದನು. ಸೂತನನ್ನು ಮಾತಿನಿಂದ ಆರಾಧಿಸಿ, ಮುಂದೆ ತಾನು ಕೇಳಬಯಸಲಿರುವ ವಿಷಯವನ್ನು ಸೂಚಿಸಿದನು. “ಇನ್ನು ಮುಂದೆ ಕಲ್ಪಜ್ಞರು ತಿಳಿದ ಪ್ರತಿಸಂಧಿಯ ಕುರಿತು ಹೇಳು. ಹಿಂದೆ ಆಗಿಹೋದ ಮತ್ತು ಈಗ ನಡೆಯುತ್ತಿರುವ ಕಲ್ಪಗಳ ಮಧ್ಯಕಾಲವನ್ನು ಪ್ರತಿಸಂಧಿ ಎಂದು ಕರೆಯುತ್ತಾರೆ. ಇದರ ಕುರಿತು ಕೇಳಬಯಸುತ್ತೇನೆ. ನೀನು ಯಥಾವತ್ತಾಗಿ ಹೇಳುವುದರಲ್ಲಿ ಕುಶಲನಾಗಿದ್ದೀಯೆ.” ಕಾಪೇಯನು ಹೀಗೆ ಕೇಳಿಕೊಳ್ಳಲು ಮಾತನಾಡುವವರಲ್ಲಿ ಶ್ರೇಷ್ಠ ಸೂತನು ತ್ರೈಲೋಕ್ಯವು ಉದ್ಭವಿಸಿದುದರ ಕುರಿತು ಸಂಪೂರ್ಣವಾಗಿ ಹೇಳಲು ಪ್ರಾರಂಭಿಸಿದನು.

ಸೂತ ಉವಾಚ । ಅತ್ರ ವೈ ವರ್ಣಯಿಷ್ಯಾಮಿ ಯಾಥಾತಥ್ಯೇನ ಸುವ್ರತಾಃ । ಕಲ್ಪಂ ಭೂತಂ ಭವಿಷ್ಯಂ ಚ ಪ್ರತಿಸಂಧಿಶ್ಚಯಸ್ತಯೋಃ ।। 6 ।। ಮನ್ವಂತರಾಣಿ ಕಲ್ಪೇಷು ಯಾನಿ ಯಾನಿ ಚ ಸುವ್ರತಾಃ । ಯಶ್ಚಾಯಂ ವರ್ತತೇ ಕಲ್ಪೋ ವಾರಾಹಃ ಸಾಂಪ್ರತಃ ಶುಭಃ ।। 7 ।। ಅಸ್ಮಾತ್ಕಲ್ಪಾತ್ತು ಯಃ ಪೂರ್ವಃ ಕಲ್ಪೋಽತೀತಃ ಸನಾತನಃ । ತಸ್ಯ ಚಾಸ್ಯ ಚ ಕಲ್ಪಸ್ಯ ಮಧ್ಯಾವಸ್ಥಾಂ ನಿಬೋಧತ ।। 8 ।। ಪ್ರತ್ಯಾಗತೇ ಪೂರ್ವಕಲ್ಪೇ ಪ್ರತಿಸಂಧಿಂ ವಿನಾನಘಾಃ । ಅನ್ಯಃ ಪ್ರವರ್ತ್ತತೇ ಕಲ್ಪೋ ಜನಲೋಕಾದಯಃ ಪುನಃ ।। 9 ।। ವ್ಯುಚ್ಛಿನ್ನಪ್ರತಿಸಂಧಿಸ್ತು ಕಲ್ಪಾತ್ಕಲ್ಪಃ ಪರಸ್ಪರಮ್ । ವ್ಯುಚ್ಛಿದ್ಯಂತೇ ಪ್ರಜಾಃ ಸರ್ವಾಃ ಕಲ್ಪಾಂತೇ ಸರ್ವಶಸ್ತದಾ । ತಸ್ಮಾತ್ಕಲ್ಪಾತ್ತು ಕಲ್ಪಸ್ಯ ಪ್ರತಿಸಂಧಿರ್ನವಿದ್ಯತೇ ।। 10 ।। ಮನ್ವಂತರೇ ಯುಗಾಖ್ಯಾನಾಮವಿಚ್ಛಿನ್ನಾಸ್ತು ಸಂಧಯಃ । ಪರಸ್ಪರಾತ್ಪ್ರವರ್ತಂತೇ ಮನ್ವಂತರಯುಗೈಃ ಸಹ ।। 11 ।।

ಸೂತನು ಹೇಳಿದನು: “ಸುವ್ರತರೇ! ಭೂತ-ಭವಿಷ್ಯ ಕಲ್ಪಗಳನ್ನೂ, ಅವುಗಳ ಪ್ರತಿಸಂಧಿಯನ್ನೂ ಯಥಾವತ್ತಾಗಿ ವರ್ಣಿಸುತ್ತೇನೆ. ಸುವ್ರತರೇ! ಕಲ್ಪಗಳಲ್ಲಿ ಯಾವ ಯಾವ ಮನ್ವಂತರಗಳಿವೆ? ಈಗ ನಡೆಯುತ್ತಿರುವ ಶುಭ ವಾರಾಹ ಕಲ್ಪವು ಹೇಗಿರುವುದು? ಎನ್ನುವುದನ್ನೂ ಹೇಳುತ್ತೇನೆ. ಈ ಕಲ್ಪದ ಮೊದಲು ಯಾವ ಸನಾತನ ಕಲ್ಪವು ಆಗಿಹೋಯಿತೋ ಅದರ ಮತ್ತು ಈ ಕಲ್ಪದ ಮಧ್ಯಾವಸ್ಥೆಯನ್ನು ಕೇಳಿ. ಅನಘರೇ! ಹಿಂದಿನ ಕಲ್ಪವು ಸಂಪೂರ್ಣವಾಗಿ ಕಳೆದ ನಂತರ ಪ್ರತಿಸಂಧಿಯಿಲ್ಲದೇ ಅಂದರೆ ನೇರ ಸಂಪರ್ಕ ಅಥವಾ ನಿರಂತರತೆ ಇಲ್ಲದೆ, ಮತ್ತೊಂದು ಹೊಸ ಕಲ್ಪವು ಪ್ರಾರಂಭವಾಗುತ್ತದೆ. ಆ ಹೊಸ ಕಲ್ಪದಲ್ಲಿ ಜನಲೋಕಾದಿ ಲೋಕಗಳು ಪುನಃ ಉಂಟಾಗುತ್ತವೆ — ಅಂದರೆ ಸೃಷ್ಟಿಯು ಹೊಸದಾಗಿ ನಡೆಯುತ್ತದೆ. ಒಂದು ಕಲ್ಪದ ಅಂತ್ಯದಲ್ಲಿ (ಪ್ರಳಯಕಾಲದಲ್ಲಿ) ಎಲ್ಲಾ ಜೀವಿಗಳೂ ನಾಶವಾಗುತ್ತವೆ. ಆದ್ದರಿಂದ ಒಂದು ಕಲ್ಪ ಮತ್ತು ಮತ್ತೊಂದು ಕಲ್ಪದ ನಡುವೆ ಯಾವುದೇ ಪ್ರತಿಸಂಧಿ (continuation, link) ಇರುವುದಿಲ್ಲ. ಪ್ರತಿ ಕಲ್ಪವೂ ಹೊಸ ಸೃಷ್ಟಿಯೊಂದಿಗೆ ಪ್ರಾರಂಭವಾಗುತ್ತದೆ. ಹಿಂದಿನ ಕಲ್ಪದ ಜೀವಿಗಳು ಅಥವಾ ಸ್ಥಿತಿಗಳ ನೇರ ನಿರಂತರತೆ ಇಲ್ಲ. ಮನ್ವಂತರಗಳಲ್ಲಿ ಯುಗಗಳ ಕ್ರಮ (ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ) ನಿರಂತರವಾಗಿಯೇ ಮುಂದುವರಿಯುತ್ತದೆ. ಯುಗಗಳ ನಡುವೆಯೂ ಅಥವಾ ಮನ್ವಂತರಗಳ ನಡುವೆಯೂ ಯಾವುದೇ ವ್ಯತ್ಯಯ (ಮುರಿತ) ಇರುವುದಿಲ್ಲ. ಒಂದು ಯುಗ ಅಥವಾ ಮನ್ವಂತರ ಮುಗಿದ ಕೂಡಲೇ ಮತ್ತೊಂದು ಪ್ರಾರಂಭವಾಗುತ್ತದೆ.[1]

ಉಕ್ತಾ ಯೇ ಪ್ರಕ್ರಿಯಾರ್ಥೇನ ಪೂರ್ವಕಲ್ಪಾಃ ಸಮಾಸತಃ । ತೇಷಾಂ ಪರಾರ್ಧಂಕಲ್ಪಾನಾಂ ಪೂರ್ವೇ ಯಸ್ಮಾತ್ತು ಯಃ ಪರಃ ।। 12 ।। ಆಸೀತ್ಕಲ್ಪೇ ವ್ಯತೀತೇ ವೈ ಪರಾರ್ಧಾತ್ಪರಮಸ್ತು ಯಃ । ಕಲ್ಪಾಸ್ತ್ವನ್ಯೇ ಭವಿಷ್ಯಾ ಯೇ ಹ್ಯಪರಾರ್ದ್ಧಗುಣೀಕೃತಾಃ ।। 13 ।। ಪ್ರಥಮಃ ಸಾಂಪ್ರತಸ್ತೇಷಾಂ ಕಲ್ಪೋಂ ಯೋ ವರ್ತತೇ ದ್ವಿಜಾಃ । ಅಸ್ಮಿನ್ಪೂರ್ವೇ ಪರಾರ್ಧೇ ತು ದ್ವಿತೀಯಃ ಪರ ಉಚ್ಯತೇ ।। 14 ।। ಏಷ ಸಂಸ್ಥಿತಕಾಲಸ್ತು ಪ್ರತ್ಯಾಹಾರಸ್ತತಃ ಸ್ಮೃತಃ । ಅಸ್ಮಾತ್ಕಲ್ಪಾತ್ತತಃ ಪೂರ್ವಂ ಕಲ್ಪೋಽತೀತಃ ಪುರಾತನಃ ।। 15 ।। ಚತುರ್ಯುಗಸಹಸ್ರಾಂತೇ ಸಹ ಮನ್ವಂತರೈಃ ಪುರಾ ।। 16 ।।

ಹಿಂದಿನ ಪ್ರಕ್ರಿಯಾಪಾದದಲ್ಲಿ ಪೂರ್ವಕಲ್ಪಗಳ ಕುರಿತು ಸಂಕ್ಷಿಪ್ತವಾಗಿ ಹೇಳಿಯಾಗಿದೆ. ಅವುಗಳು ಪೂರ್ವಾರ್ಧಕಲ್ಪಗಳು. ನಂತರದ ಕಲ್ಪಗಳು ಪರಾರ್ಧಕಲ್ಪಗಳು. ಪೂರ್ವಕಲ್ಪ (ಪೂರ್ವಾರ್ಧ) ಮತ್ತು ಪರಾರ್ಧಕಲ್ಪಗಳು ಕಳೆದನಂತರ ಅಂದರೆ ಪರಾರ್ಧದ ಬಳಿಕ ಬರುವ ಹೊಸ ಕಲ್ಪಗಳನ್ನು ಅಪರಾರ್ಧಕಲ್ಪಗಳು ಎಂದು ಕರೆಯುತ್ತಾರೆ. ಇವು ಮುಂದಿನ ಬ್ರಹ್ಮಾಯುಷ್ಯದ ಚಕ್ರದಲ್ಲಿ ಅಥವಾ ಮುಂದಿನ ಸೃಷ್ಟಿಚಕ್ರದಲ್ಲಿ ಸಂಭವಿಸುತ್ತವೆ. [2]  ದ್ವಿಜರೇ! ಈಗ ನಡೆಯುತ್ತಿರುವ ಕಲ್ಪವು ಬ್ರಹ್ಮನ ದ್ವಿತೀಯ ಪರಾರ್ಧದಲ್ಲಿ ಮೊದಲನೇ ಕಲ್ಪವೆಂದು ಹೇಳುತ್ತಾರೆ.[3] ಈಗಿರುವ ಸೃಷ್ಟಿಸ್ಥಿತಿಯು ತನ್ನ ಕ್ರಮದಲ್ಲಿ ನಡೆಯುತ್ತಿದೆ. ಇದರ ನಂತರ ಪ್ರತ್ಯಾಹಾರ[4]ವುಂಟಾಗುತ್ತದೆ. ಈಗಿನ ಕಲ್ಪಕ್ಕಿಂತ ಹಿಂದೆ ನಡೆದ ಪುರಾತನ ಕಲ್ಪದ ಅಂತ್ಯದಲ್ಲಿ ಸಾವಿರ ಚತುರ್ಯುಗಗಳ ಬ್ರಹ್ಮನ ಹಗಲಿನ ಕೊನೆಯಲ್ಲಿ ಮನ್ವಂತರಗಳೊಂದಿಗೆ ಪ್ರಳಯವು ಸಂಭವಿಸಿತ್ತು.

ನಕ್ಷತ್ರಗ್ರಹತಾರಾಶ್ಚ ಚಂದ್ರಸೂರ್ಯಾದಯಸ್ತು ತೇ । ಅಷ್ಟಾವಿಂಶತಿರೇವೈತಾಃ ಕೋಟ್ಯಸ್ತು ಸುಕೃತಾತ್ಮನಾಮ್ ।। 17 ।। ಮನ್ವಂತರೇ ಯಥೈಕಸ್ಮಿನ್ ಚತುರ್ದ್ದಶಸು ವೈ ತಥಾ । ತ್ರೀಣಿ ಕೋಟಿಶತಾನ್ಯಾಸನ್ ಕೋಟ್ಯೋ ದ್ವಿನವತಿಸ್ತಥಾ ।। 18 ।। ಅಥಾಧಿಕಾಸಪ್ತತಿಶ್ಚ ಸಹಸ್ರಾಣಾಂ ಪುರಾ ಸ್ಮೃತಾ । ಏಕೈಕಸ್ಮಿಂಸ್ತು ಕಲ್ಪೇ ವೈ ದೇವಾ ವೈಮಾನಿಕಾಃ ಸ್ಮೃತಾಃ ।। 19 ।। ಅಥ ಮನ್ವಂತರೇಷ್ವಾಸಂಶ್ಚತುರ್ದಶಸು ಖೇ ದಿವಿ । ದೇವಾಶ್ಚ ಪಿತರಶ್ಚೈವ ಋಷಯೋಽಮೃತಪಾಸ್ತಥಾ ।। 20 ।। ತೇಷಾಮನುಚರಾಶ್ಚೈವ ಪತ್ನ್ಯಃ ಪುತ್ರಾಸ್ತಥೈವ ಚ । ವರ್ಣಾಶ್ರಮಾತಿರಿಕ್ತಾಶ್ಚ ತಸ್ಮಿನ್ಕಾಲೇ ತು ಖೇ ಸುರಾಃ ।। 21 ।। ತೈಸ್ತೈಃ ಸಾಯುಜ್ಯಗೈಃ ಸಾರ್ದ್ಧ ಪ್ರಾಪ್ತೇ ವಸ್ತುಮಯೇ ತದಾ । ತುಲ್ಯನಿಷ್ಠಾಭವನ್ಸರ್ವೇ ಪ್ರಾಪ್ತೇ ಹ್ಯಾಭೂತಸಂಪ್ಲವೇ ।। 22 ।।

ನಕ್ಷತ್ರಗಳು, ಗ್ರಹಗಳು, ತಾರೆಗಳು, ಚಂದ್ರ ಮತ್ತು ಸೂರ್ಯ ಮೊದಲಾದ 28 ಕೋಟಿ ಸುಕೃತಾತ್ಮರಿದ್ದಾರೆ. ಪ್ರತಿ ಮನ್ವಂತರದಲ್ಲಿ 28 ಕೋಟಿ ದೇವತೆಗಳಿರುತ್ತಾರೆ. ಹೀಗೆ 14 ಮನ್ವಂತರಗಳಲ್ಲಿ ಒಟ್ಟು 392ಕೋಟಿ (28x14=392) ದೇವತೆಗಳು ಇರುತ್ತಾರೆ. ಅದಕ್ಕೂ ಹೆಚ್ಚಾಗಿ ಸುಮಾರು 70,000 ದೇವತೆಗಳು ಒಂದು ಕಲ್ಪದಲ್ಲಿ ಇರುತ್ತಾರೆ. ಅಂದರೆ 1 ಕಲ್ಪದಲ್ಲಿ ಒಟ್ಟು ದೇವತೆಗಳ ಸಂಖ್ಯೆ 392ಕೋಟಿ 70 ಸಾವಿರ. ಪ್ರತಿಕಲ್ಪದಲ್ಲಿಯೂ ಈ ದೇವತೆಗಳನ್ನು ವೈಮಾನಿಕ ದೇವತೆಗಳು ಎನ್ನುತ್ತಾರೆ. ಮತ್ತು 14 ಮನ್ವಂತರಗಳಲ್ಲಿಯೂ ದೇವತೆ-ಪಿತೃ-ಋಷಿ ಮತ್ತು ಅಮೃತಪಾನವಂತರು ವಿಮಾನಾರೂಢರಾಗಿ ಇರುತ್ತಾರೆ. ಅವರ ಅನುಚರರೂ, ಪತ್ನೀ-ಪುತ್ರರೂ ಕೂಡ ವರ್ಣಾಶ್ರಮಧರ್ಮಗಳನ್ನು ಮೀರಿ ದೇವಮಂಡಲಕ್ಕೆ ಸಾರಿ ಆಕಾಶದಲ್ಲಿ ಇರುತ್ತಾರೆ. ಪರಸ್ಪರ ಸಾಯುಜ್ಯ ಹೊಂದಿದ ದೇವವ್ಯಕ್ತಿಗಳಿಂದ ದೇವಲೋಕವು ಪೂರ್ಣವಾಗಲು ಬರುವ ಪ್ರಳಯಕಾಲದಲ್ಲಿ ಎಲ್ಲರೂ ಸಮಾನ ಸ್ಥಿತಿಯುಳ್ಳವರಾಗುತ್ತಾರೆ.

ತತಸ್ತೇಽವಶ್ಯಭಾವಿತ್ವಾದ್ಬುದ್ಧ್ಯಾಃ ಪರ್ಯಾಯಮಾತ್ಮನಃ । ತ್ರೈಲೋಕ್ಯವಾಸಿನೋ ದೇವಾ ಇಹ ತಾನಾಭಿಮಾನಿನಃ ।। 23 ।। ಸ್ಥಿತಿಕಾಲೇ ತದಾ ಪೂರ್ಣೇ ಆಸನ್ನೇ ಪಶ್ಚಿಮೋತ್ತರೇ । ಕಲ್ಪಾವಸಾನಿಕಾ ದೇವಾಸ್ತಸ್ಮಿನಪ್ರಾಪ್ತೇ ಹ್ಯುಪಪ್ಲವೇ ।। 24 ।। ತದೋತ್ಸುಕಾ ವಿಷಾದೇನ ತ್ಯಕ್ತಸ್ಥಾನಾನಿ ಭಾಗಶಃ । ಮಹರ್ಲೋಕಾಯ ಸಂವಿಗ್ನಾಸ್ತತಸ್ತೇ ದಧಿರೇ ಮನಃ ।। 25 ।। ತೇ ಯುಕ್ತಾನುಪಪದ್ಯಂತೇ ಮಹತೀಂ ಚ ಶರೀರಿಕೇ । ವಿಶುದ್ಧಿಬಹುಲಾಃ ಸರ್ವೇ ಮಾನಸೀಂ ಸಿದ್ಧಿಮಾಸ್ಥಿತಾಃ ।। 26 ।। ತೈಃ ಕಲ್ಪವಾಸಿಭಿಃ ಸಾರ್ಧಂ ಮಹಾನಾಸಾದಿತಸ್ತದಾ । ಬ್ರಾಹ್ಮಣೈಃ ಕ್ಷತ್ರಿಯೈರ್ವೈಶ್ಯೈಸ್ತದ್ಭವೈಶ್ಚಾಪರೈರ್ಜನೈಃ ।। 27 ।। ಗತ್ವಾ ತು ತೇ ಮಹಾರ್ಲೋಕಂ ದೇವಸಂಘಾಶ್ಚತುರ್ದ್ದಶ । ಸ್ತತಸ್ತೇ ಜನಲೋಕಾಯ ಸೋದ್ವೇಗಾ ದಧಿರೇ ಮನಃ ।। 28 ।। ಏತೇನ ಕ್ರಮಯೋಗೇನ ಯಯುಸ್ತೇ ಕಲ್ಪವಾಸಿನಃ । ಏವಂ ದೇವಯುಗಾನಾಂ ತು ಸಹಸ್ರಾಣಿ ಪರಸ್ಪರಮ್ ।। 29 ।। ವಿಶುದ್ಧಿಬಹುಲಾಃ ಸರ್ವೇ ಮಾನಸೀಂ ಸಿದ್ಧಿಮಾಸ್ಥಿತಾಃ । ತೈಃ ಕಲ್ಪವಾಸಿಭಿಃ ಸಾರ್ಧಂ ಜನ ಆಸಾದಿತಸ್ತು ವೈ ।। 30 ।।

ಆಗ ತ್ರಿಲೋಕವಾಸಿ ದೇವತೆಗಳು ಸೃಷ್ಟ್ಯಾದಿ ಪರ್ಯಾಯಗಳು ಮುಂದೆ ಅವಶ್ಯವಾಗಿ ಆಗಬೇಕಾಗಿರುವುದರಿಂದ ಅದಕ್ಕೆ ತಕ್ಕಂತೆ ತಮ್ಮ ಅಧಿಕಾರಪರ್ಯಾಯದ ಅಭಿಮಾನವುಳ್ಳವರಾಗುತ್ತಾರೆ[5]. ಆಗ ಇದ್ದ ಕಲ್ಪವು ಪೂರ್ಣಗೊಂಡು ಕಲ್ಪದ ಆದಿ-ಅಂತವೆಂಬ ಪರಿಚ್ಛೇದಕಾಲವು ನಿಶ್ಚಿತವಾಗಿ ಪ್ರಳಯದ ನಾನಾವಿಧದ ಉಪಪ್ಲವಗಳು ತೋರಿಕೊಳ್ಳಲು, ದೇವತೆಗಳೇ ಕಲ್ಪಾವಸಾನಕ್ಕೆ ಸಾಕ್ಷಿಗಳಾಗಿರುತ್ತಾರೆ. ಆಗ ತಮ್ಮ ಅಭಿಮಾನಿಕ ಸ್ಥಾನಗಳನ್ನು ವಿಷಾದದಿಂದ ಬಿಟ್ಟು, ಮುಂದೆ ತಮಗೆ ದೊರಕುವ ಭಾಗಗಳನ್ನು ನೆನೆಪಿಸಿಕೊಂಡು ಉತ್ಸುಕರಾಗಿ ಅವರು ಮಹರ್ಲೋಕವನ್ನು ಸೇರಲು ಮನಸ್ಸುಮಾಡಿದರು. ಅವರು ಶರೀರಾಂತವರ್ತಿಯಾದ ಆತ್ಮನಲ್ಲಿ ಮಹಾ ಯೋಗಧಾರಣೆಯ ಮೂಲಕ ಪಡೆಯಲು ಯೋಗ್ಯವಾದ ಅತಿಶಯ ಶುದ್ಧಿಯನ್ನೂ ಮಾನಸ-ಸಂಕಲ್ಪ ಸಿದ್ಧಿಯನ್ನೂ ಪಡೆದಿದ್ದರು. ಆ ಕಲ್ಪವಾಸಿಗಳಾದ ಬ್ರಾಹ್ಮಣ-ಕ್ಷತ್ರಿಯ-ವೈಶ್ಯರು ಮತ್ತು ಅವರಿಂದ ಹುಟ್ಟಿದ ಇತರ ಸಮಸ್ತ ಪ್ರಜೆಗಳಿಂದ ಮಹರ್ಲೋಕವು ತುಂಬಿಹೋಯಿತು. ಆ ಮಹರ್ಲೋಕಕ್ಕೆ ಹೋಗಿದ್ದ 14 ದೇವಸಂಘಗಳು ಅದರ ಮುಂದಿನ ಲೋಕವಾದ ಜನಲೋಕವನ್ನು ಸೇರಲು ಮನಸ್ಸುಮಾಡಿದರು. ಹಿಂದಿನ ಕಲ್ಪವಾಸಿಗಳು ಈ ಕ್ರಮದಲ್ಲಿ ದೇವಮಾನದ ಸಹಸ್ರ ಯುಗಗಳ ಪರ್ಯಂತ ಪರಸ್ಪರ ಬಹಳ ವಿಶುದ್ಧಿಯನ್ನು ಹೊಂದಿ ಮಾನಸೀ ಸಿದ್ಧಿಯನ್ನು ಪಡೆದು ಒಟ್ಟಿಗೇ ಜನಲೋಕದಲ್ಲಿ ವಾಸಿಸುತ್ತಾರೆ.

ತತ್ರ ಕಲ್ಪಾಂದಶ ಸ್ಥಿತ್ವಾ ಸತ್ಯಂ ಗಚ್ಛಂತಿ ವೈ ಪುನಃ । ಗತ್ವಾ ತೇ ಬ್ರಹ್ಮಲೋಕಂ ವೈ ಅಪರಾವರ್ತಿನೀಂ ಗತಿಮ್ ।। 31 ।। ಆಧಿಪತ್ಯಂ ವಿಮಾನೇ ವೈ ಐಶ್ವರ್ಯೇಣ ತು ತತ್ಸಮಾಃ । ಭವಂತಿ ಬ್ರಹ್ಮಣಾ ತುಲ್ಯಾ ರೂಪೇಣ ವಿಷಯೇಣ ಚ ।। 32 ।। ತತ್ರ ತೇ ಹ್ಯವತಿಷ್ಠಂತೇ ಪ್ರೀತಿಯುಕ್ತಾಶ್ಚ ಸಂಯಮಾನ್ । ಆನಂದಂ ಬ್ರಹ್ಮಣಃ ಪ್ರಾಪ್ಯ ಮುಚ್ಯಂತೇ ಬ್ರಹ್ಮಣಾ ಸಹ ।। 33 ।। ಅವಶ್ಯಭಾವಿನಾಽರ್ಥೇನ ಪ್ರಾಕೃತೇನೈವ ತೇ ಸ್ವಯಮ್ । ಮಾನಾರ್ಚನಾಭಿಃ ಸಂಬದ್ಧಾಸ್ತದಾ ತತ್ಕಾಲಭಾವಿತಾಃ ।। 34 ।। ಸ್ವಪತೋಽಬುದ್ಧಿಪೂರ್ವಂ ತು ಬೋಧೋ ಭವತಿ ವೈ ಯಥಾ । ತಥಾ ತು ಭಾವಿತೇ ತೇಷಾಂ ತಥಾನಂದಃ ಪ್ರವರ್ತತೇ ।। 35 ।। ಪ್ರತ್ಯಾಹಾರೈಸ್ತು ಭೋದಾನಾಂ ಯೇಷಾಂ ಭಿನ್ನಾನಿ ಶುಷ್ಮಿಣಾಮ್ । ತೈಃ ಸಾರ್ಧಂ ವರ್ಧತೇ ತೇಷಾಂ ಕಾರ್ಯಾಣಿ ಕರಣಾನಿ ಚ ।। 36 ।। ನಾನಾತ್ವದರ್ಶಿನಾಂ ತೇಷಾಂ ಬ್ರಹ್ಮಲೋಕನಿವಾಸಿನಾಮ್ । ವಿನಿವೃತ್ತಾಧಿಕಾರಣಾಂ ಸ್ವೇನ ಧರ್ಮೇಣ ತಿಷ್ಠತಾಮ್ ।। 37 ।। ತೇ ತುಲ್ಯಲಕ್ಷಣಾಃ ಸಿದ್ಧಾಃ ಶುದ್ಧಾತ್ಮಾನೋ ನಿರಂಜನಾಃ । ಪ್ರಾಕೃತೇ ಕರಣೋಪೇತಾಃ ಸ್ವಾತ್ಮನ್ಯೇವ ವ್ಯವಸ್ಥಿತಾಃ ।। 38 ।। ಪ್ರಖ್ಯಾಪಯಿತ್ವಾ ಚಾತ್ಮಾನಂ ಪ್ರಕೃತಿಸ್ತ್ವೇಷ ತತ್ತ್ವತಃ । ಪುರುಷಾನ್ಯಬಹುತ್ವೇನ ಪ್ರತೀತಾ ನಪ್ರವರ್ತತೇ ।। 39 ।।

ಅಲ್ಲಿ ಹತ್ತು ಕಲ್ಪಗಳ ಕಾಲ ನೆಲೆಸಿ, ಪುನಃ ಸತ್ಯ ಲೋಕಕ್ಕೆ ಹೋಗುತ್ತಾರೆ. ಆ ಬ್ರಹ್ಮಲೋಕಕ್ಕೆ ಹೋದ ಅವರು ಪುನಃ ಸಂಸಾರಪಥಕ್ಕೆ ಹಿಂದಿರುಗುವುದಿಲ್ಲ. ಅಲ್ಲಿ ಅವರಿಗೆ ಬ್ರಹ್ಮನ ಸಮಾನವಾದ ವಿಮಾನದ ಅಧಿಪತ್ಯ-ಐಶ್ವರ್ಯಗಳು ಹಾಗೆಯೇ ಬ್ರಹ್ಮತುಲ್ಯವಾದ ರೂಪ-ಸುಖಭೋಗಗಳು ದೊರೆಯುತ್ತವೆ. ಅಲ್ಲಿ ಅವರು ಪ್ರಸನ್ನಚಿತ್ತರಾಗಿಯೂ ಜಿತೇಂದ್ರಿಯರಾಗಿಯೂ ಇದ್ದು ಬ್ರಹ್ಮಾನಂದವನ್ನು ಸಾಕ್ಷಾತ್ಕರಿಸಿ ಬ್ರಹ್ಮನೊಡನೆ ಪರಮ ಮುಕ್ತಿಯನ್ನು ಹೊಂದುತ್ತಾರೆ. ಬ್ರಹ್ಮಲೋಕದಲ್ಲಿ ವಾಸಿಸುವಾಗ ಅವರು ಪ್ರಕೃತಿಸ್ವಭಾವಯುಕ್ತರಾಗಿಯೂ ಅವಶ್ಯಭಾವಿಗಳೂ ಆಗಿದ್ದು ಭೋಗಗಳಿಂದಲೂ, ಮಾನ-ಸತ್ಕಾರಗಳಿಂದಲೂ ಕೂಡಿ, ಆ ಕಾಲಭಾವಿತರಾಗಿರುತ್ತಾರೆ. ನಿದ್ರಿಸುತ್ತಿದ್ದವನಿಗೆ ನಿದ್ರೆಯು ಮುಗಿದ ನಂತರ ತನ್ನ ಕರ್ತವ್ಯಬುದ್ಧಿ-ಸಂಕಲ್ಪಗಳಿಲ್ಲದೇ ತಾನಾಗಿಯೇ ಆಕಸ್ಮಿಕವಾಗಿ ಎಚ್ಚರಾವಾಗುವಂತೆ ಬ್ರಹ್ಮಲೋಕವಾಸಿಗಳಿಗೆ ಬ್ರಹ್ಮಾನಂದದ ಅನುಭವವಾಗುತ್ತದೆ. ಇಂದ್ರಿಯ ಚಪಲತೆಯಿಂದ ಕಾರ್ಯಕರಣ ಸಂಘಾತವನ್ನು ಶೋಷಣ ಮಾಡುವ ಸಕಲ ವಿಷಯಗಳನ್ನು ಪರಿತ್ಯಜಿಸಿ, ಅವುಗಳ ವಾಸನಾ ಸಂಸ್ಕಾರರೂಪದ ರಸದಿಂದಲೂ ವರ್ಜಿತರಾಗಿ ಅವರು ಬ್ರಹ್ಮಾನಂದವನ್ನು ಅನುಭವಿಸುತ್ತಾರೆ. ಪ್ರಕೃತಿ-ಪುರುಷರ ನಾನಾತ್ವ ದರ್ಶನವೆಂಬ ಸಮ್ಯಗ್ ಜ್ಞಾನವಿರುವ ಬ್ರಹ್ಮಲೋಕವಾಸಿಗಳು ಬ್ರಹ್ಮಾನಂದ ಸಾಕ್ಷಾತ್ಕಾರದ ನಂತರ ಅಧಿಕಾರ ವಿನಿರ್ಮುಕ್ತರಾಗಿ ಸ್ವಸ್ವರೂಪಧರ್ಮವಾದ ಆನಂದಾದಿಗಳಲ್ಲಿ ವಿರಾಜಿಸುತ್ತಾರೆ. ಆ ಶುದ್ಧಾತ್ಮ ಸಿದ್ಧರು ಎಲ್ಲರೂ ಒಂದೇ ವಿಧದ ಲಕ್ಷಣಗಳಿಂದಲೂ, ಪವಿತ್ರ ಮಾನಸರಾಗಿಯೂ, ಪ್ರಾಕೃತ ಕರಣಗಳಿಂದ ಕೂಡಿ, ಯಾವ ವಿಧದ ದೋಷಸಂಪರ್ಕವೂ ಇಲ್ಲದೇ, ಸ್ವಸ್ವರೂಪದಲ್ಲಿಯೇ ವ್ಯವಸ್ಥಿತರಾಗಿರುತ್ತಾರೆ. ಗುಣಮಯವಾದ ಪ್ರಕೃತಿಯು ಈ ಆತ್ಮನಿಷ್ಠರಿಗೆ ಮೋಕ್ಷಸಾಧನೆಗಾಗಿ ತನಗಿಂತಲೂ ಬೇರೆಯಾದ ಆತ್ಮ (ಪುರುಷ)ನ ಯಥಾತ್ಮ್ಯವನ್ನು ಪ್ರಕಾಶಪಡಿಸಿ ತಾನು ನಿವೃತ್ತವಾಗುತ್ತದೆ.

ಪ್ರವರ್ತಿತೇ ಪುನಃ ಸರ್ಗೇ ತೇಷಾಂ ಸಾ ಕಾರಣಾತ್ಮನಾಮ್ । ಸಂಯೋಗೇ ಪ್ರಕೃತಿರ್ಜ್ಞೇಯಾ ಮುಕ್ತಾನಾಂ ತತ್ತ್ವದರ್ಶಿನಾಮ್ ।। 40 ।। ತತ್ರಾಪವರ್ಗಿಣಾಂ ತೇಷಾಂ ನ ಪುನರ್ಮಾರ್ಗಗಾಮಿನಾಮ್ । ಅಭಾವಃ ಪುನರುತ್ಪನ್ನಃ ಶಾಂತಾನಾಮರ್ಚಿಷಾಮಿವ ।। 41 ।। [6]ತತಸ್ತೇಷು ಗತೇಷೂರ್ಧ್ವಂ ತ್ರೈಲೋಕ್ಯೇಷು ಮಹಾತ್ಮಸು । ಏತೈಃ ಸಾರ್ಧಂ ಮಹರ್ಲೋಕಸ್ತದಾನಾಸಾದಿತಸ್ತು ವೈ ।। 42 ।। ತಚ್ಛಿಷ್ಯಾ[7] ವೈ ಭವಿಷ್ಯಂತಿ ಕಲ್ಪದಾಹ ಉಪಸ್ಥಿತೇ । ಗಂಧರ್ವಾದ್ಯಾಃ ಪಿಶಾಚಾಶ್ಚ ಮಾನುಷಾ ಬ್ರಾಹ್ಮಣಾದಯಃ ।। 43 ।। ಪಶವಃ ಪಕ್ಷಿಣಸ್ಚೈವ ಸ್ಥಾವರಾಶ್ಚ ಸರೀಸೃಪಾಃ । ತಿಷ್ಠತ್ಸು ತೇಷು ತತ್ಕಾಲಂ ಪೃಥಿವೀತಲವಾಸಿಷು ।। 44 ।।

ಪುನಃ ಸೃಷ್ಟಿಯು ಪ್ರಾರಂಭವಾಗುವಾಗ ಮುಕ್ತರೂ ತತ್ತ್ವಜ್ಞರೂ ಆದ ಅಧಿಕಾರಿಕ ಪುರುಷರಿಗೆ ಪ್ರಕೃತಿಯು ಐಕ್ಯರೂಪದಿಂದ ಸಂಬಂಧಿಸಿ ಕಾರಣ ಸ್ವರೂಪವನ್ನು ಕೊಡುತ್ತದೆ. ಅಂಥವರು ಪುನರಾವೃತ್ತಿಯಿಲ್ಲದ ಮುಕ್ತಿಸಾಮ್ರಾಜ್ಯವನ್ನು ಹೊಂದಿ ಜ್ವಾಲೆಯು ಶಾಂತವಾದ ನಿರ್ವಿಕಾರ ತೇಜಃಪುಂಜದಂತೆ ಪ್ರಕಾಶಿಸುತ್ತಾರೆ. ವಿಕಾರಸ್ವರೂಪಗಳೆಲ್ಲವೂ ಲಯವಾಗುವುದರಿಂದ ಆ ಸ್ವರೂಪದಿಂದ ಅದೃಶ್ಯರಾಗುತ್ತಾರೆ. ಹೀಗೆ ಜ್ಞಾನೀ ಮಹಾತ್ಮರು ತ್ರಿಲೋಕಗಳನ್ನು ಅತಿಕ್ರಮಿಸಿ ಊರ್ಧ್ವಗತಿಯ ಮುಕ್ತಿಯನ್ನು ಹೊಂದಲು, ಯೋಗಸಿದ್ಧಿಯ ತಾರತಮ್ಯದಿಂದ ಅವರೊಡನೆ ಮಹರ್ಲೋಕವನ್ನು ಸೇರದೇ ಇರುವ ಅವರ ಶಿಷ್ಯರು ಕೆಲವರಿರುತ್ತಾರೆ. ಕಲ್ಪಾವಸಾನದ ದಾಹವು ಏಕಪ್ರಕಾರವಾಗಿ ಪ್ರಾಪ್ತವಾಗಲು ಗಂಧರ್ವ-ಪಿಶಾಚ-ಮನುಷ್ಯ ಬ್ರಾಹ್ಮಣಾದಿಗಳು, ಪಶುಗಳು, ಪಕ್ಷಿಗಳು, ಸ್ಥಾವರಗಳು, ಸರೀಸೃಪ ಮೊದಲಾದ ಎಲ್ಲ ಪ್ರೃಥ್ವೀತಲ ವಾಸಿಗಳಿಗೆ ಪ್ರಳಯದ ಕಷ್ಟ ಪರಿಣಾಮವು ಒದಗುತ್ತದೆ.

ಸಹಸ್ರಂ ಯತ್ತು ರಶ್ಮೀನಾಂ ಸ್ವಯಮೇವ ವಿಭಾವ್ಯತೇ । ತತ್ಸಪ್ತರಶ್ಮಯೋ ಭೂತ್ವಾ ಏಕೈಕೋ ಜಾಯತೇ ರವಿಃ ।। 45 ।। ಕ್ರಮೇಣೋತ್ತಿಷ್ಠಮಾನಾಸ್ತೇ ತ್ರೀಂಲ್ಲೋಕಾನ್ಪ್ರದಹಂತ್ಯುತ । ಜಂಗಮಾಃ ಸ್ಥಾವರಾಶ್ಚೈವ ನದ್ಯಃ ಸರ್ವೇ ಚ ಪರ್ವತಾಃ ।। 46 ।। ಶುಷ್ಕಾಃ ಪೂರ್ವಮನಾವೃಷ್ಟ್ಯಾ ಸೂರ್ಯ್ಯೈಸ್ತೇ ಚ ಪ್ರಧೂಪಿತಾಃ । ತದಾ ತು ವಿವಶಾಃ ಸರ್ವೇ ನಿರ್ದಗ್ಧಾಃ ಸೂರ್ಯರಶ್ಮಿ ಭಿಃ ।। 47 ।। ಜಂಗಮಾಃ ಸ್ಥಾವರಾಶ್ಚೈವ ಧರ್ಮಾಧರ್ಮಾತ್ಮಕಾಸ್ತು ವೈ । ದಗ್ಧದೇಹಾಸ್ತದಾ ತೇ ತು ಧೂತಪಾಪಾ ಯುಗಾಂತರೇ ।। 48 ।। ಖ್ಯಾತಾತಪಾ ವಿನಿರ್ಮುಕ್ತಾಃ ಶುಭಯ ಚಾತಿಬಂಧಯಾ । ತತಸ್ತೇ ಹ್ಯುಪಪದ್ಯಂತೇ ತುಲ್ಯರೂಪೈರ್ಜನೈರ್ಜನಾಃ ।। 49 ।।

ಸೂರ್ಯನ ಸಹಸ್ರಕಿರಣಗಳೂ ಒಟ್ಟಾಗಿ ಸೇರಿದರೆ ಆಗುವಷ್ಟು ತಾಪದಿಂದ ಕೂಡಿದ ಅತಿತೀಕ್ಷ್ಣ ಕಿರಣಗಳಿಂದ ಕೂಡಿದ ಏಳು ಸೂರ್ಯರು ಉದಯಿಸುತ್ತಾರೆ. ಅವು ಕ್ರಮೇಣವಾಗಿ ತ್ರಿಲೋಕವೇ ಮೊದಲಾದ ಸ್ಥಾವರ-ಜಂಗಮಗಳೂ, ನದಿಗಳೂ, ಪರ್ವತಗಳೂ ಸೇರಿ ಸಕಲ ವಸ್ತುಗಳನ್ನೂ ಭಸ್ಮಮಾಡುತ್ತವೆ. ಮೊದಲೇ ಅನಾವೃಷ್ಟಿಯಿಂದ ಒಣಗಿಹೋಗಿದ್ದ ಅವೆಲ್ಲವೂ ಆ ಸೂರ್ಯರಿಂದ ಸುಟ್ಟು ವಿವಶರಾಗಿ ಭಸ್ಮವಾಗಿಹೋಗುತ್ತವೆ. ಕಲ್ಪದ ಅಂತ್ಯದಲ್ಲಿ ಧರ್ಮ-ಅಧರ್ಮಾತ್ಮಕವಾದ ಸ್ಥಾವರ-ಜಂಗಮಗಳೂ ಪಾಪವನ್ನು ತೊಳೆದುಕೊಂಡು ಸುಟ್ಟು ಭಸ್ಮವಾಗಿಬಿಡುತ್ತವೆ. ಆ ಧರ್ಮಾದಿಗಳು ಸುಟ್ಟುಹೋದ ದೇಹವನ್ನು ತ್ಯಜಿಸಿ ಯುಗಾವಸಾನಕಾಲದಲ್ಲಿ ಪಾಪಸಂಪರ್ಕವಿಲ್ಲದವರಾಗಿ, ಬಂಧಮುಕ್ತರಾಗಿ, ಶುಭಕರ ತಪೋಲೋಕದಲ್ಲಿ ನೆಲೆಸುತ್ತಾರೆ.

ಉಷಿತ್ವಾ ರಜನೀಂ ತತ್ರ ಬ್ರಹ್ಮಣೋಽವ್ಯಕ್ತಜನ್ಮನಃ । ಪುನಃ ಸರ್ಗೇ ಭವಂತೀಹ ಮಾನಸಾ ಬ್ರಹ್ಮಣಃ ಸುತಾಃ ।। 50 ।। ತತಸ್ತೇಷೂಪಪನ್ನೇಷು ಜನೈಸ್ತ್ರೈಲೋಕ್ಯವಾಸಿಷು । ನಿರ್ದಗ್ಧೇಷು ಚ ಲೋಕೇಷು ತದಾ ಸೂರ್ಯೈಸ್ತು ಸಪ್ತಭಿಃ ।। 51 ।। ವೃಷ್ಟ್ಯಾ ಕ್ಷಿತೌ ಪ್ಲಾವಿತಾಯಾಂ ವಿಜನೇಷ್ವರ್ಣವೇಷು ಚ । ಸಾಮುದ್ರಾಶ್ಚೈವ ಮೇಘಾಶ್ಚ ಆಪಃ ಸರ್ವಾಶ್ಚ ಪಾರ್ಥಿವಾಃ ।। 52 ।। ಶೀರ್ಯಮಾಣಾ ವ್ರಜಂತ್ಯೇವ ಸಲಿಲಾಖ್ಯಾಸ್ತಥಾ ನುಗಾಃ । ಆಗತಾಗತಿಕಂ ಚೈವ ಯದಾ ತತ್ಸಲಿಲಂ ಬಹು ।। 53 ।। ಸಂಛಾದ್ಯೇಮಾಂ ಸ್ಥಿತಾಂ ಭೂಮಿಮರ್ಣವಾಖ್ಯಂ ತದಾಭವತ್

ನಂತರ ಅವ್ಯಕ್ತದಿಂದ ಆವಿರ್ಭೂತನಾದ ಸತ್ಯಲೋಕವಾಸಿಯಾದ ಬ್ರಹ್ಮನೊಡನೆ ಪ್ರಲಯಕಾಲವೆಂಬ ಒಂದು ರಾತ್ರಿಯಲ್ಲಿ ಉಳಿದು ಪುನಃ ಜನರ ರೂಪವನ್ನು ಅನುಕರಿಸುವ ಆಕಾರವನ್ನು ಧರಿಸಿದ ಜನರಾಗಿ ಪರಿಣಮಿಸುತ್ತಾರೆ. ಮತ್ತೆ ಪುನಃ ಸೃಷ್ಟಿಯಲ್ಲಿ ಬ್ರಹ್ಮನ ಮಾನಸಪುತ್ರರಾಗಿ ಜನಿಸುತ್ತಾರೆ. ಬ್ರಹ್ಮನ ಮಾನಸಪುತ್ರರು ಹುಟ್ಟಿದ್ದಾಗ ತ್ರಿಲೋಕಗಳಲ್ಲಿ ವಾಸಿಸುವ ಸಮಸ್ತ ಪ್ರಜೆಗಳೂ, ಲೋಕಗಳೂ, ಏಳು ಸೂರ್ಯರಿಂದ ಸುಟ್ಟುಹೋಗಿರುತ್ತವೆ. ಆಗ ಜಗತ್ಪ್ರಳಯವನ್ನುಂಟು ಮಾಡುವ ವೃಷ್ಟಿಯು ಸುರಿಯಲು ಪ್ರಾರಂಭಿಸಿ, ಭೂಮಿಯೆಲ್ಲವೂ ನೀರಿನಲ್ಲಿ ತೇಲಿಹೋಗಿ, ಜನಶೂನ್ಯವಾದ ಜಗತ್ತೆಲ್ಲವೂ ಏಕಾರ್ಣವವಾಗುತ್ತದೆ. ಆಗ ಸಮುದ್ರಗಳು, ಮೇಘಗಳು, ಜಲ, ಪಾರ್ಥಿವಾಂಶ, ಪರ್ವತ ಎಲ್ಲವೂ ನೀರಿನ ಭರಕ್ಕೆ ಸಿಲುಕಿ ಜಲಮಯವಾಗಿ ಜೀರ್ಣವಾಗಿ ಬಿಡುತ್ತವೆ. ಸಂಪೂರ್ಣ ಜಲಮಯವಾಗಿರುವ ಆ ಅವಸ್ಥೆಯಲ್ಲಿ ಎಲ್ಲೆಡೆಯಲ್ಲೂ ವಿಸ್ತಾರವಾಗಿ ಹರಡಿದ ನೀರು ಗತಿ-ಅಗತಿಗಳಿಂದ ಚಲಿಸುತ್ತಾ, ಈ ಸಮಸ್ತ ಭೂಮಿಯನ್ನೂ ಮುಳುಗಿಸಿ, ಅಚ್ಛಾದನೆ ಮಾಡಿ ಅರ್ಣವವೆಂಬ ಸಂಜ್ಞೆಯನ್ನು ಪಡೆಯುತ್ತದೆ.

ಆಭಾತಿ ಯಸ್ಮಾತ್ ಸ್ವಾಭಾಸೋ ಭಾಶಬ್ದೋ ವ್ಯಾಪ್ತಿದೀಪ್ತಿಷು ।। 54 ।। ಸರ್ವತಃ ಸಮನುಪ್ರಾಪ್ತ್ಯಾ ತಾಸಾಂ ಚಾಂಭೋ ವಿಭಾವ್ಯತೇ । ತದಂತಸ್ತನುತೇ ಯಸ್ಮಾತ್ಸರ್ವಾಂ ಪೃಥ್ವೀಂ ಸಮಂತತಃ ।। 55 ।। ಧಾತುಸ್ತನೋತಿ ವಿಸ್ತಾರೇ ನಚೈತಾಸ್ತನವಃ ಸ್ಮೃತಾಃ । ಶರ ಇತ್ಯೇಷ ಶೀರ್ಣೇ ತು ನಾನಾರ್ಥೋ ಧಾತುರುಚ್ಯತೇ ।। 56 ।। ಏಕಾರ್ಣವೇ ಭವತ್ಯಾಪೋ ನ ಶೀರ್ಣಾಸ್ತೇನ ತೇ ನರಾಃ । 

“ಭಾ” ಎಂಬ ಧಾತುವು ಕಾಂತಿ ಅಥವಾ ದೀಪ್ತಿ ಎಂಬ ಅರ್ಥದ್ಲಲಿ ಧಾತುಪಾಠದಲ್ಲಿ ಪಠಿತವಾಗಿದೆ. ಆ ಅರ್ಥವನ್ನು ಅನುಸರಿಸಿ, “ಆಭಾತಿ ಯಸ್ಮಾತ್” – ಯಾವುದರಿಂದ ಸಕಲವೂ ಪ್ರಕಾಶಿತಗೊಳ್ಳುತ್ತದೆಯೋ ಎಂಬ ವ್ಯುತ್ಪತ್ತಿಯಿಂದ ಮತ್ತೊಂದನ್ನು ಪ್ರಕಾಶಗೊಳಿಸುವ ಶಕ್ತಿಯಿಂದ ಆಭಾಸ ಎಂದಾಗುತ್ತದೆ. ಪ್ರಳಯಕಾಲದ ಜಲದ ಕಾಂತಿಗಳಿಂದ ಜಲದಲ್ಲಿ ಅಡಗಿದ ಪ್ರತಿಯೊಂದು ವಸ್ತುವೂ ಪ್ರಕಾಶಿತಗೊಂಡು ತೋರುತ್ತಿರುತ್ತದೆ. ಅಂತಹ ಜಲದೊಳಗೆ, ಸುತ್ತಮುತ್ತಲೂ ಸಮಸ್ತ ಪೃಥ್ವಿಯನ್ನೂ ವಿಸ್ತಾರವಾಗಿಟ್ಟುಕೊಂಡಿರುವುದರಿಂದ ವಿಸ್ತಾರವೆಂಬ ಅರ್ಥದಲ್ಲಿ “ತನು” ಎಂಬ ಧಾತು ಸಂಬಂಧದಿಂದ “ಅಪತನ” ಎಂಬ ಸಂಜ್ಞೆಯಿಂದ ಜಲಗಳು ಕರೆಯಲ್ಪಡುತ್ತವೆ. ಹೀಗೆಯೇ ಜಲಗಳಿಗೆ ನರಾ ಎಂಬ ಇನ್ನೊಂದು ಹೆಸರಿದೆ. ಆ ಸಂಜ್ಞೆಯಲ್ಲಿ ಸೇರಿದ “ರ” ಎನ್ನುವುದು “ಶಾರ” ಧಾತುವಿಗೆ ಸಂಬಂಧಿಸಿದೆ. ಶಾರಧಾತುವು ಶೀರ್ಣ=ಶಿಥಿಲವಾದುದು ಎಂಬ ಅರ್ಥದಿಂದ ಕೂಡಿದೆ. ಏಕಾರ್ಣವ ರೂಪವಾದ ಜಲರಾಶಿಯಲ್ಲಿ ಜಲಗಳು ಶಿಥಿಲವಾಗಿಲ್ಲದೇ ಇರುವುದರಿಂದ ನ+ಶೀರ್ಣಾಃ ಸೇರಿ ನರಾ ಎಂದು ಕರೆಯಲ್ಪಡುತ್ತವೆ.

ತಸ್ಮಿನ್ ಯುಗಸಹಸ್ರಾಂತೇ ಸಂಸ್ಥಿತೇ ಬ್ರಹ್ಮಣೋಽಹನಿ ।। 57 ।। ತಾವತ್ಕಾಲೇ ರಜನ್ಯಾಂ ಚ ವರ್ತಂತ್ಯಾಂ ಸಲಿಲಾತ್ಮನಾ । ತತಸ್ತು ಸಲಿಲೇ ತಸ್ಮಿನ್ನಷ್ಟಾಗ್ನೌ ಪೃಥವೀತಲೇ ।। 58 ।। ಪ್ರಶಾಂತವಾತೇಽಂಧಕಾರೇ ನಿರಾಲೋಕೇ ಸಮಂತತಃ । ಏತೇನಾಧಿಷ್ಠಿತಂ ಹೀದಂ ಬ್ರಹ್ಮಾ ಸ ಪುರುಷಃ ಪ್ರಭುಃ ।। 59 ।। ವಿಭಾಗಮಸ್ಯ ಲೋಕಸ್ಯ ಪ್ರಕರ್ತುಂ ಪುನರೈಚ್ಛತ । ಏಕಾರ್ಣವೇ ತದಾ ತಸ್ಮಿನ್ನಷ್ಟೇ ಸ್ಥಾವರಜಂಗಮೇ ।। 60 ।। ತದಾ ಭವತಿ ಸ ಬ್ರಹ್ಮಾ ಸಹಸ್ರಾಕ್ಷಃ ಸಹಸ್ರಪಾತ್ । ಸಹಸ್ರಶೀರ್ಷಾ ಪುರುಷೋ ರುಕ್ಮವರ್ಣೋ ಜಿತೇಂದ್ರಿಯಃ ।। 61 ।।

ಸಹಸ್ರ ಯುಗಗಳ ಬ್ರಹ್ಮನ ಒಂದು ಹಗಲು ಕಳೆದಾಗ ಅಷ್ಟೇ ಮರಿಮಾಣದ ರಾತ್ರಿಯಲ್ಲಿ ಎಲ್ಲವೂ ಪೂರ್ಣವಾದ ಜಲಾತ್ಮಕವಾಗಿರುತ್ತದೆ. ಸಲಿಲ ರೂಪದಿಂದ ಅಷ್ಟು ರಾತ್ರಿ ಸಮಯವು ಕಳೆಯುವ ವೇಳೆಯಲ್ಲಿ, ಪೃಥ್ವಿ, ಅಗ್ನಿ, ಎಲ್ಲವೂ ಜಲದಲ್ಲಿ ನಷ್ಟವಾಗಿ, ವಾಯುವು ಶಾಂತನಾಗಿ, ಸ್ವಲ್ಪವೂ ತೇಜಸ್ಸಿಲ್ಲದೇ, ಮಹಾಂಧಕಾರವು ಎಲ್ಲೆಲ್ಲಿಯೂ ವ್ಯಾಪ್ತವಾಗಿರುತ್ತದೆ. ಹೀಗಿರುವಾಗ ಪ್ರಭು ಪರಮಾತ್ಮನು ಪರಿಗ್ರಹಿಸಿದ ಪುರುಷಾಕಾರದ ಬ್ರಹ್ಮನು ಹಿಂದೆ ಎಲ್ಲವನ್ನೂ ನಡೆಸಿಕೊಂಡು ಬಂದಂತೆ ಮತ್ತೆ ಈ ಲೋಕಗಳನ್ನು ವಿಭಜಿಸಲು ಬಯಸುತ್ತಾನೆ. ಸ್ಥಾವರ-ಜಂಗಮ ಪ್ರಾಣಿಗಳೆಲ್ಲವೂ ನಾಶಹೊಂದಿ ಎಲ್ಲೆಲ್ಲಿಯೂ ವ್ಯಾಪಿಸಿರುವ ಈ ಏಕಾರ್ಣವದಲ್ಲಿ ಸಹಸ್ರನೇತ್ರ, ಪಾದ, ಶಿರಸ್ಸುಗಳಿಂದ ಕೂಡಿದ, ಚಿನ್ನದ ಬಣ್ಣದ, ಇಂದ್ರಿಯಗಳಿಗೆ ಗೋಚರನಾಗದ, ಪುರುಷರೂಪೀ ಬ್ರಹ್ಮನು ಇರುತ್ತಾನೆ.

ಇಮಂ ಚೋದಾಹರಂತ್ಯತ್ರ ಶ್ಲೋಕಂ ನಾರಾಯಣಂ ಪ್ರತಿ । ಆಪೋ ನಾರಾಸ್ತತ್ತನವ ಇತ್ಯರ್ಥಾನನುಶುಶ್ರುಮ ।। 62 ।। ಆಪೂರ್ಯಮಾಣಾಸ್ತತ್ರಾಸ್ತೇ ತೇನ ನಾರಾಯಣಃ ಸ್ಮೃತಃ ।। 63 ।। ಸಹಸ್ರಶೀರ್ಷಾ ಸುಮನಾಃ ಸಹಸ್ರಪಾತ್ ಸಹಸ್ರಚಕ್ಷುರ್ವದನಃ ಸಹಸ್ರಕೃತ್ । ಸಹಸ್ರಬಾಹುಃ ಪ್ರಥಮಃ ಪ್ರಜಾಪತಿಸ್ತ್ರಯೀಮಯೋಽಯಂ ಪುರುಷೋ ನಿರುಚ್ಯತೇ ।। 64 ।। ಆದಿತ್ಯವರ್ಣೋ ಭುವನಸ್ಯ ಗೋಪ್ತಾ ಏಕೋ ಹ್ಯಮೂರ್ತಃ ಪ್ರಥಮಸ್ತ್ವಸೌ ವಿರಾಟ್ । ಹಿರಣ್ಯ ಗರ್ಭಃ ಪುರುಷೋ ಮಹಾತ್ಮಾ ಸಂಪದ್ಯತೇ ವೈ ಮನಸಃ ಪರಸ್ತಾತ್ ।। 65 ।। ಕಲ್ಪಾದೌ ರಜಸೋದ್ರಿಕ್ತೋ ಬ್ರಹ್ಮಾ ಭೂತ್ವಾಽಸೃಜತ್ಪ್ರಜಾಃ । ಕಲ್ಪಾಂತೇ ತಮಸೋದ್ರಿಕ್ತಃ ಕಾಲೋ ಭೂತ್ವಾಽಗ್ರಸತ್ಪುನಃ ।। 66 ।। ಸ ವೈ ನಾರಾಯಣೋ ಭೂತ್ವಾ ಸತ್ತ್ವೋದ್ರಿಕ್ತೋ ಜಲಾಶಯೇ । ತ್ರಿಧಾ ವಿಭಜ್ಯ ಚಾತ್ಮಾನಂ ತ್ರೈಲೋಕ್ಯೇ ಸಂಪ್ರವರ್ತತೇ ।। 67 ।। ಸೃಜತಿ ಗ್ರಸತೇ ಚೈವ ವೀಕ್ಷ್ಯತೇ ಚ ತ್ರಿಭಿಃ ಸ್ವಯಮ್

ಇಲ್ಲಿ ನಾರಾಯಣ ಕುರಿತಾಗಿ ಈ ಶ್ಲೋಕವನ್ನು ಉದಾಹರಿಸುತ್ತಾರೆ: ಪ್ರಳಯದಲ್ಲಿ ಏಕಾರ್ಣವಪ್ರಾಯವಾದ ಜಲರಾಶಿಯಲ್ಲಿ ಅಧಿಷ್ಠಾನದಿಂದ ಇರುವುದರಿಂದ ನಾರಾ=ಜಲ, ಅಯನ=ಅಧಿಷ್ಠಾನ – ಈ ಎರಡು ಶಬ್ದಗಳು ಸೇರಿ ನಾರಾಯಣ ಎಂಬ ಸಂಕೇತವು ಬಂದಿದೆ. ಸಕಲವನ್ನೂ ತನ್ನಲ್ಲಿ ಉಪಸಂಹರಿಸಿಕೊಂಡು ವಿರಾಟ್ ರೂಪದಿಂದಲೂ, ಪುರುಷಾಕಾರದಿಂದಲೂ ಇರುವ ಪರಮಾತ್ಮನು ಸಹಸ್ರ ಶಿರಸ್ಸು, ಪಾದ, ನೇತ್ರ, ಮುಖ, ಬಾಹುಗಳಿಂದ ಕೂಡಿದವನೂ, ಒಳ್ಳೆಯ ಮನಸ್ಸುಳ್ಳವನೂ, ಸಹಸ್ರವ್ಯಾಪಾರವುಳ್ಳವನೂ, ಸೃಷ್ಟಿಕರ್ತನಿಗೆ ಸೃಷ್ಟಿಕರ್ತನೂ, ವೇದತ್ರಯಾತ್ಮಕನೂ ಆಗಿದ್ದಾನೆಂದು ಪ್ರಾಜ್ಞರು ಹೇಳುತ್ತಾರೆ. ಆದಿತ್ಯನಂತೆ ವರ್ಣವುಳ್ಳವನೂ, ಸಕಲಭುವನ ರಕ್ಷಕನೂ, ಅದ್ವಿತೀಯನೂ, ತಾತ್ತ್ವಿಕಾಕಾರಶೂನ್ಯನೂ, ಮೊದಲನೆಯವನೂ, ವಿರಾಡ್ರೂಪನೂ, ಮಹಾತ್ಮನೂ, ಪೂರ್ಣಸ್ವರೂಪವುಳ್ಳವನೂ ಆದ ಹಿರಣ್ಯಗರ್ಭನು ಮನಸ್ಸಿನಿಂದ ಗ್ರಹಿಸಲು ಅಶಕ್ಯನು. ಅವನೇ ಕಲ್ಪದ ಆದಿಯಲ್ಲಿ ರಾಜಸ ಗುಣದಿಂದ ಉದ್ರಿಕ್ತನಾಗಿ ಬ್ರಹ್ಮನಾಗಿದ್ದುಕೊಂಡು ಪ್ರಜೆಗಳನ್ನು ಸೃಷ್ಟಿಸುತ್ತಾನೆ. ಕಲ್ಪದ ಅಂತ್ಯದಲ್ಲಿ ಅವನೇ ತಮೋಗುಣದಿಂದ ಉದ್ರಿಕ್ತನಾಗಿ ಕಾಲನಾಗಿ ಪುನಃ ಸೃಷ್ಟಿಯನ್ನು ನುಂಗುತ್ತಾನೆ. ಅವನೇ ಸತ್ತ್ವಗುಣದಿಂದ ಉದ್ರಿಕ್ತನಾಗಿ ಜಲಾಶಯದಲ್ಲಿ ನಾರಾಯಣನಾಗುತ್ತಾನೆ. ಹೀಗೆ ತನ್ನನ್ನು ತಾನೇ ಮೂರು ರೂಪಗಳಲ್ಲಿ ವಿಭಜಿಸಿಕೊಂಡು ಮೂರೂ ಲೋಕಗಳನ್ನು ನಡೆಸುತ್ತಾನೆ. ಸ್ವಯಂ ತಾನೇ ಸೃಷ್ಟಿಸುತ್ತಾನೆ, ನುಂಗುತ್ತಾನೇ ಮತ್ತು ವೀಕ್ಷಿಸುತ್ತಾನೆ ಕೂಡ.

ಏಕಾರ್ಣವೇ ತದಾ ತಸ್ಮಿನ್ನಷ್ಟೇ ಸ್ಥಾವರಜಂಗಮೇ ।। 68 ।। ಚತುರ್ಯುಗಸಹಸ್ರಾಂತೇ ಸರ್ವತಃ ಸ ಜಲಾವೃತೇ । ಬ್ರಹ್ಮಾಂ ನಾರಾಯಣಾಖ್ಯಸ್ತು ಸ ಚಕಾಶೇ ಭವೇ ಸ್ವಯಮ್ ।। 69 ।। ಚತುರ್ವಿಧಾಃ ಪ್ರಜಾಃ ಸರ್ವಾ ಬ್ರಹ್ಮಶಕ್ತ್ಯಾ ತಮೋವೃತಾಃ । ಪಶ್ಯಂತಿ ತಂ ಮಹರ್ಲೋಕೇ ಕಾಲಂ ಸುಪ್ತಂ ಮಹರ್ಷಯಃ ।। 70 ।। ಭೃಗ್ವಾದಯೋ ಯಥೋದ್ದಿಷ್ಟಾಸ್ತಸ್ಮಿನ್ ಕಾಲೇ ಮಹರ್ಷಯಃ । ಸತ್ಯಾದಯಸ್ತಥಾತ್ವಷ್ಟೌ ಕಲ್ಪೇ ಲೀನೇ ಮಹರ್ಷಯಃ । ತದಾ ವಿವರ್ತ್ಯಮಾನೈಸ್ತೈರ್ಮಹತ್ಪರಿಗತಂ ಪರಾಮ್ ।। 71 ।। ಗತ್ಯರ್ಥಾದೃಷತೇರ್ಧಾತೋರ್ನಾಮನಿಷ್ಪತ್ತಿರುಚ್ಯತೇ । ಯಸ್ಮಾದೃಷತಿ ಸತ್ತ್ವೇನ ಮಹತ್ತಸ್ಮಾನ್ಮಹರ್ಷಯಃ ।। 72 ।। ಮಹರ್ಲೋಕಸ್ಥಿತೈರ್ದೃಷ್ಟಃ ಕಾಲಃ ಸುಪ್ತಸ್ತದಾ ಚ ತೈಃ । ಸತ್ತ್ವಾದ್ಯಾಃ ಸಪ್ತ ಯೇ ತ್ವಾಸನ್ಕಲ್ಪೇಽತೀತೇ ಮಹರ್ಷಯಃ ।। 73 ।।

ಸ್ಥಾವರ-ಜಂಗಮಗಳು ನಷ್ಟವಾಗಿ ಏಕಾರ್ಣವವಾಗಿ ಒಂದು ಸಾವಿರ ಚತುರ್ಯುಗಗಳು ಕಳೆಯಲು ಅವನು ಜಲರಾಶಿಯಲ್ಲಿ ನಾರಾಯಣನೆಂದು ಸ್ವಯಂ ಪ್ರಕಾಶಿತನಾಗಿರುತ್ತಾನೆ. ಜರಾಯುಜ, ಸ್ವೇದಜ, ಅಂಡಜ ಮತ್ತು ಉದ್ಭಿಜ್ಜವೆಂಬ ನಾಲ್ಕು ವಿಧದ ಪ್ರಜೆಗಳು ಬ್ರಹ್ಮನ ಶಕ್ತಿಸ್ವರೂಪವಾದ ಅಜ್ಞಾನವೆಂಬ ಕತ್ತಲೆಯಿಂದ ಆವರಿಸಲ್ಪಟ್ಟು ಪ್ರಕಾಶಹೀನವಾಗಿವೆ. ಮಹರ್ಲೋಕದಲ್ಲಿ ಮಹರ್ಷಿಗಳು ಸಕಲ ವ್ಯಾಪಾರಗಳನ್ನು ತ್ಯಜಿಸಿ ಕಾಲಾತ್ಮಕನ ತಾತ್ತ್ವಿಕ ರೂಪಗಳನ್ನು ಸಾಕ್ಷಾತ್ಕರಿಸುತ್ತಾರೆ. ಭೃಗು ಮೊದಲಾಅದ ಮಹರ್ಷಿಗಳು ಸತ್ಯಾದಿ ಎಂಟು ಮಂದಿಗಳೂ ಕಲ್ಪಾವಸಾನದಲ್ಲಿ ಮಹರ್ಷಿಗಳಿಂದ ಸುತ್ತುವರಿಯಲ್ಪಟ್ಟ ನಿರ್ವ್ಯಾಪರ ಸ್ಥಿತಿಯಲ್ಲಿರುವ ಶ್ರೀಮನ್ನಾರಾಯಣನನ್ನು ಸೇವಿಸುತ್ತಿರುತ್ತಾರೆ. ಗತಿ ಅಥವಾ ಜ್ಞಾನವೆಂಬ ಅರ್ಥದಲ್ಲಿ ಋಷಿ ಧಾತುವಿನ ನಿಷ್ಪತ್ತಿಯಾಗಿದೆ ಎನ್ನುತ್ತಾರೆ. ಸತ್ತ್ವಗುಣದ ಆಧಿಕ್ಯದಿಂದ ಮಹಾತತ್ತ್ವದ ಜ್ಞಾನವುಂಟಾಗಿರುವುದರಿಂದ ಅವರು ಮಹರ್ಷಿಗಳು. ಹಿಂದಿನ ಕಲ್ಪದಲ್ಲಿದ್ದ ಸತ್ತ್ವ ಮೊದಲಾದ ಸಪ್ತರ್ಷಿಗಳು ಮಹರ್ಲೋಕದಲ್ಲಿ ನಿರ್ವ್ಯಾಪಾರನಾಗಿ ಸುಪ್ತನಾಗಿರುವ ಕಾಲಾತ್ಮನನ್ನು ಸಾಕ್ಷಾತ್ಕರಿಸುತ್ತಾರೆ.

ಏವಂ ಬ್ರಹ್ಮಾ ತಾಸು ತಾಸು ರಜನೀಷು ಸಹಸ್ರಶಃ । ದೃಷ್ಟವಂತಸ್ತದಾನೀತಾಃ ಕಾಲಂ ಸುಪ್ತಂ ಮಹರ್ಷಯಃ ।। 74 ।। ಕಲ್ಪಸ್ಯಾದೌ ಸುಬಹುಲಾ ಯಸ್ಮಾತ್ಸಂಸ್ಥಾಶ್ಚತುರ್ದ್ದಶ । ಕಲ್ಪಯಾಮಾಸ ವೈ ಬ್ರಹ್ಮಾ ತಸ್ಮಾತ್ಕಲ್ಪೋ ನಿರುಚ್ಯತೇ ।। 75 ।। ಸ ಸ್ರಷ್ಟಾ ಸರ್ವಭೂತಾನಾಂ ಕಲ್ಪಾದಿಷು ಪುನಃ ಪುನಃ । ವ್ಯಕ್ತಾವ್ಯಕೋ ಮಹಾದೇವಸ್ತಸ್ಯ ಸರ್ವಮಿದಂ ಜಗತ್ ।। 76 ।। ಇತ್ಯೇಷ ಪ್ರತಿಸಂಬಂಧಃ ಕೀರ್ತಿತಃ ಕಲ್ಪಯೋರ್ದ್ವಯೋಃ । ಸಾಂಪ್ರತಂ ಹಿ ತಯೋರ್ಮಧ್ಯೇ ಪ್ರಾಗವಸ್ಥಾ ಬಭೂವ ಹ ।। 77 ।। ಕೀರ್ತಿತಸ್ತು ಸಮಾಸೇನ ಪೂರ್ವಕಲ್ಪೇ ಯಥಾತಥಮ್ । ಸಾಂಪ್ರತಂ ಸಂಪ್ರವಕ್ಷ್ಯಾಮಿ ಕಲ್ಪಮೇತಂ ನಿಬೋಧತ ।। 77 ।।

ಹೀಗೆ ಆದಿಕಾರಣನಾದ ಬ್ರಹ್ಮನು ಆಗಾಗ ಬರುವ ಪ್ರತಿ ರಾತ್ರಿಯಲ್ಲಿಯೂ ಸಮಸ್ತವನ್ನೂ ಲಯಮಾಡಿ ಸ್ವಯಂ ಪ್ರಕಾಶಮಾನನಾಗಿ ಇರುತ್ತಾನೆ. ಆಗ ಅಲ್ಲಿದ್ದ ಮಹರ್ಷಿಗಳು ಆ ಪರಮಾತ್ಮನನ್ನು ಸಾಕ್ಷಾತ್ಕರಿಸಿ ಧನ್ಯರಾಗುತ್ತಾರೆ. ಕಲ್ಪಾದಿಯಲ್ಲಿ ಪರಮಾತ್ಮನು  ಅತಿ ವಿಸ್ತಾರವಾದ 14  ಸಂಸ್ಥೆ (ಕಾಲವಿಭಾಗ) ಗಳನ್ನು ಏರ್ಪಡಿಸಿರುವುದರಿಂದ ಆ ಪ್ರತಿಯೊಂದು ವಿಭಾಗಕ್ಕೆ ಕಲ್ಪ ಎಂಬ ಹೆಸರು ಬಂದಿದೆ. ಆ ಪರಮಾತ್ಮನು ಪ್ರತಿ ಕಲ್ಪದಲ್ಲಿಯೂ ಮತ್ತೆ ಮತ್ತೆ ಭೂತಗಳನ್ನು ಸೃಷ್ಟಿಸುತ್ತಾ, ಸರ್ವಾತ್ಮಕವಾದ ವಿಶ್ವರೂಪದಿಂದ ವ್ಯಕ್ತನೂ, ಸ್ವರೂಪದಿಂದ ಅವ್ಯಕ್ತನೂ ಆಗಿ ಪ್ರಕಾಶಮಾತ್ರ ರೂಪನಾಗಿರುತ್ತಾನೆ. ಈ ಜಗತ್ತೆಲ್ಲವೂ ಅವನಿಂದಲೇ ಅಸ್ತಿತ್ವವನ್ನು ಹೊಂದಿರುವುದು. ಹೀಗೆ ಎರಡು ಕಲ್ಪಗಳ ಸಂಧಿಯನ್ನು ನಿಮಗೆ ವಿವರಿಸಿದ್ದೇನೆ. ಆ ಸಂಧಿಕಾಲದಲ್ಲಿ ಜಗತ್ತಿನ ಪ್ರಾಗವಸ್ಥೆಯು ಮಾತ್ರ ಇರುತ್ತದೆ.”

ಇತಿ ಶ್ರೀಬ್ರಹ್ಮಾಂಡೇ ಮಹಾಪುರಾಣೇ ವಾಯುಪ್ರೋಕ್ತೇ ಪೂರ್ವಭಾಗೇ ದ್ವಿತೀಯೇ ಅನುಷಂಗಾಪಾದೇ ಕಲ್ಪಮನ್ವಂತರಾಖ್ಯಾನವರ್ಣನಂ ನಾಮ ಷಷ್ಠೋಽಧ್ಯಾಯಃ ।।

ಇದು ಶ್ರೀಬ್ರಹ್ಮಾಂಡ ಮಹಾಪುರಾಣದಲ್ಲಿ ವಾಯುಪ್ರೋಕ್ತ ಪೂರ್ವಭಾಗದಲ್ಲಿ ಎರಡನೇ ಅನುಷಂಗಾಪಾದದಲ್ಲಿ ಕಲ್ಪಮನ್ವಂತರಾಖ್ಯಾನ ವರ್ಣನೆ ಎಂಬ ಆರನೇ ಅಧ್ಯಾಯವು.

[1] ಈ ಶ್ಲೋಕಗಳು ಕಾಲಚಕ್ರದಲ್ಲಿ ಸೃಷ್ಟಿಯ ನಿರಂತರತೆಯನ್ನು ವಿವರಿಸುತ್ತವೆ: ಕಲ್ಪಗಳ ಮಧ್ಯೆ ವ್ಯುಚ್ಛಿನ್ನ ಪ್ರತಿಸಂಧಿ (ಸಂಪರ್ಕ ಇಲ್ಲ). ಆದರೆ ಕಲ್ಪದೊಳಗಿನ ಮನ್ವಂತರಗಳು ಮತ್ತು ಮನ್ವಂತರಗಳೊಳಗಿನ ಯುಗಗಳು ಅವಿಚ್ಛಿನ್ನ ಪ್ರತಿಸಂಧಿಯಿಂದ (ಅವಿಚ್ಛಿನ್ನವಾಗಿ, ನಿರಂತರವಾಗಿ) ಸಾಗುತ್ತವೆ. ಅಂದರೆ — ಕಲ್ಪಾಂತರದಲ್ಲಿ ಪ್ರಳಯ ಉಂಟಾಗುತ್ತದೆ (ನಿರಂತರತೆ ಕಡಿತ). ಮನ್ವಂತರ–ಯುಗಾಂತರದಲ್ಲಿ ಪ್ರಳಯವಿಲ್ಲ, ನಿರಂತರ ಕಾಲಪ್ರವಾಹ ಮಾತ್ರ. ಕಲ್ಪದಿಂದ ಕಲ್ಪಕ್ಕೆ ವ್ಯುಚ್ಛಿನ್ನ (ಸಂಪರ್ಕ ಮುರಿಯುತ್ತದೆ). ಮನ್ವಂತರದಿಂದ ಮನ್ವಂತರವು ಅವಿಚ್ಛಿನ್ನ (ಸಂಪರ್ಕ ಮುರಿಯುವುದಿಲ್ಲ). ಯುಗದಿಂದ ಯುಗವು ಅವಿಚ್ಛಿನ್ನ (ನಿರಂತರ).

[2] ಬ್ರಹ್ಮನ ಆಯುಷ್ಯವನ್ನು ಪುರಾಣಗಳು ಮೂರು ಮುಖ್ಯ ಭಾಗಗಳಾಗಿ ಪರಿಗಣಿಸುತ್ತವೆ: (1) ಪೂರ್ವಾರ್ಧಕಲ್ಪಗಳು — ಬ್ರಹ್ಮನ ಜೀವನದ ಮೊದಲಾರ್ಧದಲ್ಲಿ ನಡೆಯುವ ಸೃಷ್ಟಿಗಳು. (2) ಪರಾರ್ಧಕಲ್ಪಗಳು — ಎರಡನೇ ಅರ್ಧದಲ್ಲಿ ನಡೆಯುವ ಕಲ್ಪಗಳು. (3) ಅಪರಾರ್ಧಕಲ್ಪಗಳು — ಮುಂದಿನ ಬ್ರಹ್ಮನ ಚಕ್ರದಲ್ಲಿ ನಡೆಯುವ ಕಲ್ಪಗಳು (ಅಂದರೆ ಹೊಸ ಬ್ರಹ್ಮನ ಹೊಸ ಸೃಷ್ಟಿಚಕ್ರ). ಇದು ಬ್ರಹ್ಮನ ಆಯುಷ್ಯದ ಕಾಲಚಕ್ರದ ಅಂತ್ಯದಿಂದ ಹೊಸ ಚಕ್ರದ ಪ್ರಾರಂಭದ ನಡುವೆ ಇರುವ ಮಹಾ-ಪ್ರಳಯವನ್ನು ಸೂಚಿಸುತ್ತದೆ.

[3] ನಿತ್ಯ ದೇವಪೂಜಾ ಸಂಕಲ್ಪದಲ್ಲಿ ಹೇಳುವ ಕಾಲನಿರ್ಣಯ ಶ್ಲೋಕಗಳು “ಬ್ರಹ್ಮಣೋ ದ್ವಿತೀಯ ಪರಾರ್ಧೇ…” ಎಂದು ಪ್ರಾರಂಭವಾಗುವುದನ್ನು ಗಮನಿಸಬೇಕು.

[4] ಸಮಗ್ರ ಸಂಹಾರ ಅಥವಾ ಪ್ರಳಯ.

[5] Thereafter, due to the inevitability of the recurrence of the intellect of the soul (?) the Devas, the residents of the three worlds, become persons idenfifying with and taking pride in the different positions here. (Banarsidas)

[6] ಇಲ್ಲಿ ಬಂದಿರುವ 42-61 ಶ್ಲೋಕಗಳು ಹಿಂದಿನ ಅಧ್ಯಾಯದ 121-138 ಶ್ಲೋಕಗಳಿಗೆ ಹೋಲುತ್ತವೆ.

[7] ಬಹುಷಃ ಇದು ಶಿಷ್ಯಾಃ=ಶಿಷ್ಯರು ಎನ್ನುವ ಬದಲು ಶಿಷ್ಟಾಃ= ಉಳಿದಿರುವವರು ಎಂದಿರಬೇಕು. ಆದರೆ ಅರಮನೆ ಪ್ರಕಾಶನದ ಮೂಲಶ್ಲೋಕಗಳಲ್ಲಿ ಶಿಷ್ಯಾಃ ಎಂದಿರುವುದನ್ನೇ ಇಲ್ಲಿ ಇಟ್ಟುಕೊಂಡು ಅನುವಾದಮಾಡಿದ್ದೇನೆ.

Leave a Reply

Your email address will not be published. Required fields are marked *