ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 7: ಮರುದುತ್ಪತ್ತೌ ಮದನದ್ವಾದಶೀವ್ರತಂ
ಋಷಯ ಊಚುಃ । ದಿತೇಃ ಪುತ್ರಾಃ ಕಥಂ ಜಾತಾ ಮರುತೋ ದೇವವಲ್ಲಭಾಃ । ದೇವೈರ್ಜಗ್ಮುಶ್ಚ ಸಾಪತ್ನೈಃ ಕಸ್ಮಾತ್ತೇ ಸಖ್ಯಮುತ್ತಮಮ್ ।। 1 ।।
ಋಷಿಗಳು ಹೇಳಿದರು: “ದಿತಿಯ ಪುತ್ರರಾದ ಮರುತರು ಹೇಗೆ ದೇವವಲ್ಲಭರಾಗಿ ಹುಟ್ಟಿದರು? ತಮ್ಮ ಶತ್ರುಗಳಾದ ದೇವತೆಗಳೊಂದಿಗೆ ಅವರಿಗೆ ಉತ್ತಮ ಸಖ್ಯವುಂಟಾಗಲು ಕಾರಣವೇನು?”
ಸೂತ ಉವಾಚ । ಪುರಾ ದೇವಾಸುರೇ ಯುದ್ಧೇ ಹೃತೇಷು ಹರಿಣಾ ಸುರೈಃ । ಪುತ್ರಪೌತ್ರೇಷು ಶೋಕಾರ್ತಾ ಗತ್ವಾ ಭೂಲೋಕಮುತ್ತಮಮ್ ।। 2 ।। ಸ್ಯಮಂತಪಂಚಕೇ ಕ್ಷೇತ್ರೇ ಸರಸ್ವತ್ಯಾಸ್ತಟೇ ಶುಭೇ । ಭರ್ತುರಾರಾಧನಪರಾ ತಪ ಉಗ್ರಂ ಚಚಾರ ಹ ।। 3 ।। ತದಾ ದಿತಿರ್ದೈತ್ಯಮಾತಾ ಋಷಿರೂಪೇಣ ಸುವ್ರತಾ[1] । ಫಲಾಹಾರಾ ತಪಸ್ತೇಪೇ ಕೃಚ್ಛ್ರಂ ಚಾಂದ್ರಾಯಣಾದಿಕಮ್ ।। 4 ।। ಯಾವದ್ವರ್ಷಶತಂ ಸಾಗ್ರಂ ಜರಾಶೋಕಸಮಾಕುಲಾ । ತತಃ ಸಾ ತಪಸಾ ತಪ್ತಾ ವಸಿಷ್ಠಾದೀನಪೃಚ್ಛತ ।। 5 ।। ಕಥಯಂತು ಭವಂತೋ ಮೇ ಪುತ್ರಶೋಕವಿನಾಶನಮ್ । ವ್ರತಂ ಸೌಭಾಗ್ಯಫಲದಮಿಹ ಲೋಕೇ ಪರತ್ರ[2] ಚ ।। 6 ।। ಊಚುರ್ವಸಿಷ್ಠಪ್ರಮುಖಾ ಮದನದ್ವಾದಶೀವ್ರತಮ್ । ಯಸ್ಯಾಃ ಪ್ರಭಾವಾದಭವತ್ಸುತಶೋಕವಿವರ್ಜಿತಾ ।। 7 ।।
ಸೂತನು ಹೇಳಿದನು: “ಹಿಂದೆ ದೇವಾಸುರ ಯುದ್ಧದಲ್ಲಿ ಹರಿ ಮತ್ತು ಸುರರಿಂದ ಪುತ್ರ-ಪೌತ್ರರು ಹತರಾದಾಗ ಶೋಕಾರ್ತಳಾದ ದಿತಿಯು ಉತ್ತಮ ಭೋಲೋಕಕ್ಕೆ ಹೋಗಿ, ಶುಭ ಸರಸ್ವತೀ ತೀರದಲ್ಲಿ, ಸ್ಯಮಂತಪಂಚಕ ಕ್ಷೇತ್ರದಲ್ಲಿ, ಪತಿಯ ಆರಾಧನೆಯಲ್ಲಿ ತೊಡಗಿ ಉಗ್ರ ತಪಸ್ಸನ್ನು ಆಚರಿಸಿದಳು. ಸುವ್ರತೆ ದೈತ್ಯಮಾತಾ ದಿತಿಯು ಋಷಿರೂಪದಲ್ಲಿ ಫಲಾಹಾರವನ್ನೇ ಸೇವಿಸುತ್ತಾ, ಕೃಚ್ಛ್ರ[3], ಚಾಂದ್ರಾಯಣ[4] ಮೊದಲಾದ ವ್ರತಗಳನ್ನು ಮಾಡುತ್ತಾ ತಪಸ್ಸನ್ನು ತಪಿಸಿದಳು. ನೂರು ವರ್ಷಗಳು ಹೀಗೆ ಜರಾಶೋಕಸಮನ್ವಿತಳಾಗಿ ತಪಸ್ಸನ್ನು ತಪಿಸಿದ ನಂತರ ಅವಳು ವಸಿಷ್ಠಾದಿ ಮಹರ್ಷಿಗಳನ್ನು “ಪುತ್ರಶೋಕವನ್ನು ಕಳೆದು ಇಹದಲ್ಲಿಯೂ ಪರದಲ್ಲಿಯೂ ಸೌಭಾಗ್ಯ ಫಲವನ್ನು ಕೊಡುವಂಥಹ ವ್ರತವನ್ನು ಹೇಳಿ” ಎಂದು ಕೇಳಿದಳು. ವಸಿಷ್ಠನೇ ಮೊದಲಾದ ಋಷಿಗಳು ಅವಳಿಗೆ ಮದನದ್ವಾದಶೀವ್ರತವನ್ನು ಹೇಳಿದರು. ಅದರ ಪ್ರಭಾವದಿಂದ ಅವಳ ಪುತ್ರಶೋಕವು ತೊಲಗಿತು.”
ಋಷಯ ಊಚುಃ । ಶ್ರೋತುಮಿಚ್ಚಾಮಹೇ ಸೂತ ಮದನದ್ವಾದಶೀವ್ರತಮ್ । ಸುತಾನೇಕೋನಪಂಚಾಶದ್ಯೇನ ಲೇಭೇ ದಿತಿಃ ಪುನಃ ।। 8 ।।
ಋಷಿಗಳು ಹೇಳಿದರು: “ಸೂತ! ಯಾವ ವ್ರತದಿಂದ ದಿತಿಯು ಪುನಃ 49 ಪುತ್ರರನ್ನು ಪಡೆದಳೋ ಆ ಮದನದ್ವಾದಶೀವ್ರತದ ಕುರಿತು ಕೇಳ ಬಯಸುತ್ತೇವೆ.”
ಸೂತ ಉವಾಚ । ಯದ್ವಸಿಷ್ಠಾದಿಭಿಃ ಪೂರ್ವಂ ದಿತೇಃ ಕಥಿತಮುತ್ತಮಮ್ । ವಿಸ್ತರೇಣ ತದೇವೇದಂ ಮತ್ಸಕಾಶಾನ್ನಿಬೋಧತ ।। 9 ।। ಚೈತ್ರೇ ಮಾಸಿ ಸಿತೇ ಪಕ್ಷೇ ದ್ವಾದಶ್ಯಾಂ ನಿಯತವ್ರತಃ । ಸ್ಥಾಪಯೇದವ್ರಣಂ ಕುಂಭಂ ಸಿತತಂಡುಲಪೂರಿತಮ್ ।। 10 ।। ನಾನಾಫಲಯುತಂ ತದ್ವದಿಕ್ಷುದಂಡಸಮನ್ವಿತಮ್ । ಸಿತವಸ್ತ್ರಯುಗಚ್ಛನ್ನಂ ಸಿತಚಂದನಚರ್ಚಿತಮ್ ।। 11 ।। ನಾನಾಭಕ್ಷ್ಯಸಮೋಪೇತಂ ಸಹಿರಣ್ಯಂ ತು ಶಕ್ತಿತಃ । ತಾಮ್ರಪಾತ್ರಂ ಗುಡೋಪೇತಂ ತಸ್ಯೋಪರಿ ನಿವೇಶಯೇತ್ ।। 12 ।। ತಸ್ಮಾದುಪರಿ ಕಾಮಂ ತು ಕದಲೀದಲಸಂಸ್ಥಿತಮ್ । ಕುರ್ಯಾಚ್ಛರ್ಕರಯೋಪೇತಾಂ ರತಿಂ ತಸ್ಯ ಚ ವಾಮತಃ ।। 13 ।। ಗಂಧಂ ಧೂಪಂ ತತೋ ದದ್ಯಾದ್ಗೀತಂ ವಾದ್ಯಂ ಚ ಕಾರಯೇತ್ । ತದಭಾವೇ ಕಥಾಂ ಕುರ್ಯಾತ್ಕಾಮಕೇಶವಯೋರ್ನರಃ ।। 14 ।। ಕಾಮನಾಮ್ನೋ ಹರೇರರ್ಚಾಂ ಸ್ನಾಪಯೇದ್ಗಂಧವಾರಿಣಾ । ಶುಕ್ಲಪುಷ್ಪಾಕ್ಷತತಿಲೈರರ್ಚಯೇನ್ಮಧುಸೂದನಮ್ ।। 15 ।।
ಸೂತನು ಹೇಳಿದನು: “ಹಿಂದೆ ವಸಿಷ್ಠಾದಿ ಮುನಿಗಳು ದಿತಿಗೆ ಹೇಳಿದ ಉತ್ತಮ ವ್ರತದ ಕುರಿತು ವಿಸ್ತಾರವಾಗಿ ನಾನು ಹೇಳುವುದನ್ನು ಕೇಳಿ. ಚೈತ್ರಮಾಸದ ಶುಕ್ಲಪಕ್ಷದ ದ್ವಾದಶಿಯಂದು ವ್ರತನಿಷ್ಠನಾಗಿ, ನಾನಾ ಫಲಯುಕ್ತವಾದ, ಕಬ್ಬಿನ ಸಸಿಯಿಂದ ಅಲಂಕೃತವಾದ, ಬಿಳಿಯ ಅಕ್ಕಿಯನ್ನು ತುಂಬಿಸಿದ, ತೂತು-ಬಿರುಕುಗಳಿಲ್ಲದ ಕುಂಭವನ್ನು ಸ್ಥಾಪಿಸಬೇಕು. ಅದಕ್ಕೆ ಬಿಳಿಯ ವಸ್ತ್ರಗಳೆರಡನ್ನು ಹೊದಿಸಿ, ಬಿಳಿಯ ಗಂಧವನ್ನು ಅನುಲೇಪಿಸಿ, ನಾನಾ ಭಕ್ಷ್ಯಗಳನ್ನು ನೈವೇದ್ಯಕ್ಕಿಟ್ಟು, ಯಥಾಶಕ್ತಿ ದಕ್ಷಿಣೆಯನ್ನು ಸಮರ್ಪಿಸಬೇಕು. ಅದರ ಮೇಲೆ ಬೆಲ್ಲದೊಡನೆ ತಾಮ್ರದ ಪಾತ್ರೆಯನ್ನು ಇರಿಸಬೇಕು. ಅದರ ಮೇಲೆ ಬಾಳೇ ಎಲೆಯ ಮೇಲೆ ಮನ್ಮಥನನ್ನೂ ಅವನ ಎಡಗಡೆ ಸಕ್ಕರೆಯೊಂದಿಗೆ ರತಿಯನ್ನೂ ಇಡಬೇಕು. ಗಂಧ-ಧೂಪಗಳನ್ನಿತ್ತು, ಗೀತ-ವಾದ್ಯಗಳನ್ನು ಮಾಡಿಸಬೇಕು. ಅದಿಲ್ಲದಿದ್ದರೆ ಮನ್ಮಥ-ಕೇಶವರ ಕಥೆಯನ್ನು ಹೇಳಿಸಬೇಕು. ಕಾಮನ ಹೆಸರಿನಿಂದ ಹರಿಯನ್ನು ಅರ್ಚಿಸಬೇಕು. ಪರಿಮಳ ಯುಕ್ತ ಜಲದಿಂದ ಅಭಿಷೇಕ ಮಾಡಿ, ಹೂ-ಅಕ್ಷತೆ-ಎಳ್ಳುಗಳಿಂದ ಮಧುಸೂದನನ್ನು ಅರ್ಚಿಸಬೇಕು.
ಕಾಮಾಯ ಪಾದೌ ಸಂಪೂಜ್ಯ ಜಂಘೇ ಸೌಭಾಗ್ಯದಾಯ ಚ । ಊರೂ ಸ್ಮರಾಯೇತಿ ಪುನರ್ಮನ್ಮಥಾಯೇತಿ ವೈ ಕಟಿಮ್ ।। 16 ।। ಸ್ವಚ್ಛೋದರಾಯೇತ್ಯುದರಮನಂಗಾಯೇತ್ಯುರೋ ಹರೇಃ । ಮುಖಂ ಪದ್ಮಮುಖಾಯೇತಿ ಬಾಹೂ ಪಂಚಶರಾಯ ವೈ ।। 17 ।। ನಮಃ ಸರ್ವಾತ್ಮನೇ ಮೌಲಿಮರ್ಚಯೇದಿತಿ ಕೇಶವಮ್ । ತತಃ ಪ್ರಭಾತೇ ತಂ ಕುಂಭಂ ಬ್ರಾಹ್ಮಣಾಯ ನಿವೇದಯೇತ್ ।। 18 ।।
ಕಾಮಾಯ ನಮಃ ಎಂದು ಕೇಶವನ ಪಾದಗಳನ್ನೂ, ಸೌಭಾಗ್ಯದಾಯ ನಮಃ ಎಂದು ಮೊಣಕಾಲುಗಳನ್ನೂ, ಸ್ಮರಾಯ ನಮಃ ಎಂದು ತೊಡೆಗಳನ್ನೂ, ಮನ್ಮಥಾಯ ನಮಃ ಎಂದು ಸೊಂಟವನ್ನೂ, ಸ್ವಚ್ಛೋದರಾಯ ನಮಃ ಎಂದು ಉದರವನ್ನೂ, ಅನಂಗಾಯ ನಮಃ ಎಂದು ಎದೆಯನ್ನೂ, ಪದ್ಮಮುಖಾಯ ನಮಃ ಎಂದು ಮುಖವನ್ನೂ, ಪಂಚಶರಾಯ ನಮಃ ಎಂದು ಬಾಹುಗಳನ್ನೂ, ಸರ್ವಾತ್ಮನೇ ನಮಃ ಎಂದು ಶಿರವನ್ನೂ ಅರ್ಚಿಸಬೇಕು. ನಂತರ ಬೆಳಿಗ್ಗೆ ಆ ಕುಂಭವನ್ನು ಬ್ರಾಹ್ಮಣನಿಗೆ ಸಮರ್ಪಿಸಬೇಕು.
ಬ್ರಾಹ್ಮಣಾನ್ಭೋಜಯೇದ್ಭಕ್ತ್ಯಾ ಸ್ವಯಂ ಚ ಲವಣಾದೃತೇ । ಭುಕ್ತ್ಯಾತು ದಕ್ಷಿಣಾಂ ದದ್ಯಾದಿಮಂ ಮಂತ್ರಮುದೀರಯೇತ್ ।। 19 ।। ಪ್ರೀಯತಾಮತ್ರ ಭಗವಾನ್ಕಾಮರೂಪೀ ಜನಾರ್ದನಃ । ಹೃದಯೇ ಸರ್ವಭೂತಾನಾಂ ಯ ಆನಂದೋಽಭಿಧೀಯತೇ ।। 20 ।। ಅನೇನ ವಿಧಿನಾ ಸರ್ವಂ ಮಾಸಿ ಮಾಸಿ ವ್ರತಂ ಚರೇತ್ । ಉಪವಾಸೀ ತ್ರಯೋದಶ್ಯಾಮರ್ಚಯೇದ್ವಿಷ್ಣುಮವ್ಯಯಮ್ ।। 21 ।। ಫಲಮೇಕಂ ಚ ಸಂಪ್ರಾಶ್ಯ ದ್ವಾದಶ್ಯಾಂ ಭೂತಲೇ ಸ್ವಪೇತ್ । ತತಸ್ತ್ರಯೋದಶೇ ಮಾಸಿ ಧೃತಧೇನುಸಮನ್ವಿತಾಮ್ ।। 22 ।। ಶಯ್ಯಾಂ ದದ್ಯಾದನಂಗಾಯ ಸರ್ವೋಪಸ್ಕರಸಂಯುತಾಮ್ । ಕಾಂಚನಂ ಕಾಮದೇವಂ ಚ ಶುಕ್ಲಾಂ ಗಾಂ ಚ ಪಯಸ್ವಿನೀಮ್ ।। 23 ।। ವಾಸೋಭಿರ್ದ್ವಿಜದಾಂಪತ್ಯಂ ಪೂಜ್ಯಂ ಶಕ್ತ್ಯಾ ವಿಭೂಷಣೈಃ । ಶಯ್ಯಾಗಂಧಾದಿಕಂ ದದ್ಯಾತ್ಪ್ರೀಯತಾಮಿತ್ಯುದೀರಯೇತ್ ।। 24 ।।
ಬ್ರಾಹ್ಮಣರಿಗೆ ಭಕ್ತಿಯಿಂದ ಭೋಜನ ಮಾಡಿಸಿ, ತಾನೂ ಕೂಡ, ಉಪ್ಪು ಇಲ್ಲದ ಊಟವನ್ನು ಮಾಡಿ, ದಕ್ಷಿಣೆ ಕೊಟ್ಟು, ಸರ್ವಭೂತಗಳ ಹೃದಯದಲ್ಲಿದ್ದುಕೊಂಡು ಆನಂದ ಎನಿಸಿಕೊಂಡಿರುವ ಕಾಮರೂಪೀ ಭಗವಾನ್ ಜನಾರ್ದನನು ಪ್ರೀತನಾಗಲಿ ಎಂಬ ಮಂತ್ರವನ್ನು ಹೇಳಬೇಕು. ಈ ವಿಧಿಯಿಂದ ಪ್ರತಿ ತಿಂಗಳೂ ವ್ರತವನ್ನು ಆಚರಿಸಬೇಕು. ತ್ರಯೋದಶಿಯಂದು ಉಪವಾಸಮಾಡಿ ಅವ್ಯಯ ವಿಷ್ಣುವನ್ನು ಅರ್ಚಿಸಬೇಕು. ದ್ವಾದಶಿಯ ದಿನ ಒಂದು ಹಣ್ಣನ್ನು ತಿಂದು ನೆಲದ ಮೇಲೆ ಮಲಗಬೇಕು. ನಂತರ ಹದಿಮೂರನೆಯ ತಿಂಗಳು ಗಟ್ಟಿ ತುಪ್ಪದಲ್ಲಿ ಹಸುವಿನ ಪ್ರತಿಮೆಯನ್ನು ಬರೆದು ಅದನ್ನೂ, ಸಕಲ ಪರಿಕರಗಳಿಂದ ಒಡಗೂಡಿದ ಶಯನವನ್ನೂ ಮನ್ಮಥನಿಗೆ ಒಪ್ಪಿಸಬೇಕು. ಬ್ರಾಹ್ಮಣ ದಂಪತಿಗಳನ್ನು ಯಥಾಶಕ್ತಿ ವಸ್ತ್ರಾಲಂಕಾರಗಳಿಂದ ಪೂಜಿಸಿ, ಕಾಮದೇವನ ಚಿನ್ನದ ಪ್ರತಿಮೆಯನ್ನೂ, ಚೆನ್ನಾಗಿ ಹಾಲುಕೊಡುವ ಬಿಳಿಯ ಹಸುವನ್ನೂ, ಶಯನವನ್ನೂ, ಗಂಧಾದಿಗಳನ್ನೂ, “ಭಗವಂತನು ಪ್ರೀತನಾಗಲಿ” ಎಂದು ದಾನಮಾಡಬೇಕು.
ಹೋಮಃ ಶುಕ್ಲತಿಲೈಃ ಕಾರ್ಯಃ ಕಾಮನಾಮಾನಿ ಕೀರ್ತಯೇತ್ । ಗವ್ಯೇನ ಹವಿಷಾ ತದ್ವತ್ಪಾಯಸೇನ ಚ ಧರ್ಮವಿತ್ ।। 25 ।। ವಿಪ್ರೇಭ್ಯೋ ಭೋಜನಂ ದದ್ಯಾದ್ವಿತ್ತಶಾಠ್ಯಂ ವಿವರ್ಜಯೇತ್ । ಇಕ್ಷುದಂಡಾನಥೋ ದದ್ಯಾತ್ಪುಷ್ಪಮಾಲಾಶ್ಚ ಶಕ್ತಿತಃ ।। 26 ।। ಯಃ ಕುರ್ಯಾದ್ವಿಧಿನಾನೇನ ಮದನದ್ವಾದಶೀಮಿಮಾಮ್ । ಸ ಸರ್ವಪಾಪನಿರ್ಮುಕ್ತಃ ಪ್ರಾಪ್ನೋತಿ ಹರಿಸಾಮ್ಯತಾಮ್ ।। 27 ।। ಇಹಲೋಕೇ ವರಾನ್ ಪುತ್ರಾನ್ ಸೌಭಾಗ್ಯಫಲಮಶ್ನುತೇ । ಯಃ ಸ್ಮರಃ ಸಂಸ್ಮೃತೋ ವಿಷ್ಣುರಾನಂದಾತ್ಮಾ ಮಹೇಶ್ವರಃ ।। 28 ।। ಸುಖಾರ್ಥೀ ಕಾಮರೂಪೇಣ ಸ್ಮರೇದಂಗಜಮೀಶ್ವರಮ್ । ಏತಚ್ಛ್ರುತ್ವಾ ಚಕಾರಾಸೌ ದಿತಿಃ ಸರ್ವಮಶೇಷತಃ ।। 29 ।।
ಹಸುವಿನ ತುಪ್ಪದಿಂದಲೂ, ಪಾಯಸದಿಂದಲೂ, ಬಿಳಿಯ ಎಳ್ಳಿನಿಂದಲೂ ಮನ್ಮಥನ ಹೆಸರುಗಳನ್ನು ಹೇಳುತ್ತಾ ಹೋಮಮಾಡಬೇಕು. ಬ್ರಾಹ್ಮಣರಿಗೆ ಊಟ ಹಾಕಿಸಬೇಕು. ದ್ರವ್ಯವನ್ನು ವೆಚ್ಚಮಾಡಲು ಜಿಪುಣತನವನ್ನು ತೋರಿಸಬಾರದು. ಕಬ್ಬನ್ನೂ, ಹೂವಿನ ಮಾಲೆಗಳನ್ನೂ, ಯಥಾಶಕ್ತಿ ದಾನಮಾಡ ಬೇಕು. ಈ ಮದನದ್ವಾದಶೀ ವ್ರತವನ್ನು ಹೀಗೆ ಹೇಳಿದ ವಿಧಿಯಿಂದ ಮಾಡುವವನು ಸರ್ವಪಾಪಗಳಿಂದ ವಿಮುಕ್ತನಾಗಿ ಹರಿಯ ಸಾಮ್ಯವನ್ನು ಪಡೆಯುತ್ತಾನೆ. ಈ ಲೋಕದಲ್ಲಿ ಒಳ್ಳೆಯ ಮಕ್ಕಳನ್ನು ಪಡೆದು ಸೌಭಾಗ್ಯ ಫಲವನ್ನು ಅನುಭವಿಸುತ್ತಾನೆ. ಮನ್ಮಥನನ್ನು ಸ್ಮರಿಸಿದರೆ ಆನಂದಾತ್ಮ ಮಹೇಶ್ವರ ವಿಷ್ಣುವನ್ನು ಸ್ಮರಿಸಿದಂತೆಯೇ ಆಗುತ್ತದೆ. ಆದ್ದರಿಂದ ಸುಖವನ್ನು ಬಯಸುವವನು ಈಶ್ವರನನ್ನು ಅಂಗಜ ಕಾಮನ ರೂಪದಿಂದ ಸ್ಮರಿಸಬೇಕು. ಇದನ್ನು ಕೇಳಿ ದಿತಿಯು ಎಲ್ಲವನ್ನೂ ಸಾಂಗವಾಗಿ ನೆರವೇರಿಸಿದಳು.
ಕಶ್ಯಪೋ ವ್ರತಮಾಹಾತ್ಮ್ಯಾದಾಗತ್ಯ ಪರಯಾ ಮುದಾ । ಚಕಾರ ಕರ್ಕಶಾಂ ಭೂಯೋ ರೂಪಯೌವನಶಾಲಿನೀಮ್ ।। 30 ।। ವರೈರಾಚ್ಛಂದಯಾಮಾಸ ಸಾ ತು ವವ್ರೇ ತತೋ ವರಮ್ । ಪುತ್ರಂ ಶಕ್ರವಧಾರ್ಥಾಯ ಸಮರ್ಥಮಮಿತೌಜಸಮ್ ।। 31 ।। ವರಯಾಮಿ ಮಹಾತ್ಮಾನಂ ಸರ್ವಾಮರನಿಷೂದನಮ್ । ಉವಾಚ ಕಶ್ಯಪೋ ವಾಕ್ಯಮಿಂದ್ರಹಂತಾರಮೂರ್ಜಿತಮ್ ।। 32 ।। ಪ್ರದಾಸ್ಯಾಮ್ಯಹಮೇವೇಹ ಕಿಂತ್ವೇತತ್ಕ್ರಿಯತಾಂ ಶುಭೇ । ಆಪಸ್ತಂಬಃ ಕರೋತ್ವಿಷ್ಟಿಂ ಪುತ್ರೀಯಾಮದ್ಯ ಸುವ್ರತೇ ।। 33 ।। ವಿಧಾಸ್ಯಾಮಿ ತತೋ ಗರ್ಭಮಿಂದ್ರಶತ್ರುನಿಷೂದನಮ್ ।
ವ್ರತದ ಮಹಿಮೆಯಿಂದ ಕಶ್ಯಪನು ಪರಮ ಸಂತೋಷದಿಂದ ಬಂದು, ಕಾಯಕ್ಲೇಶದಿಂದ ಬಾಡಿ ಒಣಗಿದ್ದ ತನ್ನ ಪತ್ನಿಯನ್ನು ಮತ್ತೆ ರೂಪಯೌವನಶಾಲಿನಿಯನ್ನಾಗಿ ಮಾಡಿದನು. ಅವನು ವರವನ್ನು ಕೊಡಲು, ಅವಳು ಇಂದ್ರನನ್ನು ಕೊಲ್ಲಲು ಶಕ್ತನಾದ, ಮಹಾ ಪರಾಕ್ರಮಶಾಲಿಯಾದ, ಸಮಸ್ತ ದೇವತೆಗಳನ್ನೂ ಸಂಹರಿಸಬಲ್ಲ, ಮಹಾತ್ಮ ಪುತ್ರನನ್ನು ಬೇಡಿದಳು. ಆಗ ಕಶ್ಯಪನು ಹೇಳಿದನು: “ಶುಭೇ! ತೇಜಸ್ವಿಯಾದ ಇಂದ್ರಹಂತಾರನನ್ನು ನಾನೇ ಕೊಡುತ್ತೇನೆ. ಆದರೂ ನೀನು ಈ ಕೆಲಸವನ್ನು ಮಾಡಬೇಕು. ಸುವ್ರತೇ! ಆಪಸ್ತಂಬ[5]ನು ನಿನಗಾಗಿ ಪುತ್ರಪ್ರದವಾದ ಇಷ್ಟಿಯನ್ನು ನಡೆಸಲಿ. ನಂತರ ನಾನು ಶತ್ರು ಇಂದ್ರನನ್ನು ಕೊಲ್ಲಬಲ್ಲವನನ್ನು ನಿನ್ನ ಗರ್ಭದಲ್ಲಿ ಹುಟ್ಟಿಸುತ್ತೇನೆ.”
ಆಪಸ್ತಂಬಸ್ತತಶ್ಚಕ್ರೇ ಪುತ್ರೇಷ್ಟಿಂ ದ್ರವಿಣಾಧಿಕಾಮ್ ।। 34 ।। ಇಂದ್ರಶತ್ರುರ್ಭವಸ್ವೇತಿ ಜುಹಾವ ಚ ಸವಿಸ್ತರಮ್ । ದೇವಾ ಮುಮುದಿರೇ ದೈತ್ಯಾ ವಿಮುಖಾಃ ಸ್ಯುಶ್ಚ ದಾನವಾಃ ।। 35 ।। ದಿತ್ಯಾಂ ಗರ್ಭಮಥಾಧತ್ತ ಕಶ್ಯಪಃ ಪ್ರಾಹ ತಾಂ ಪುನಃ । ತ್ವಯಾ ಯತ್ನೋ ವಿಧಾತವ್ಯೋ ಹ್ಯಸ್ಮಿನ್ಗರ್ಭೇ ವರಾನನೇ ।। 36 ।। ಸಂವತ್ಸರಶತಂ ತ್ವೇಕಮಸ್ಮಿನ್ನೇವ ತಪೋವನೇ । ಸಂಧ್ಯಾಯಾಂ ನೈವ ಭೋಕ್ತವ್ಯಂ ಗರ್ಭಿಣ್ಯಾ ವರವರ್ಣಿನಿ ।। 37 ।। ನ ಸ್ಥಾತವ್ಯಂ ನ ಗಂತವ್ಯಂ ವೃಕ್ಷಮೂಲೇಷು ಸರ್ವದಾ । ನೋಪಸ್ಕಾರೇಷೂಪವಿಶೇನ್ಮುಸಲೋಲೂಖಲಾದಿಷು ।। 38 ।। ಜಲೇ ಚ ನಾವಗಾಹೇತ ಶೂನ್ಯಾಗಾರಂ ಚ ವರ್ಜಯೇತ್ । ವಲ್ಮೀಕಾಯಾಂ ನ ತಿಷ್ಠೇತ ನ ಚೋದ್ವಿಗ್ನಮನಾ ಭವೇತ್ ।। 39 ।। ವಿಲಿಖೇನ್ನ ನಖೈರ್ಭೂಮಿಂ ನಾಂಗಾರೇಣ ನ ಭಸ್ಮನಾ । ನ ಶಯಾಲುಃ ಸದಾ ತಿಷ್ಠೇದ್ವ್ಯಾಯಾಮಂಚ ವಿವರ್ಜಯೇತ್ ।। 40 ।। ನ ತುಷಾಂಗಾರಭಸ್ಮಾಸ್ಥಿಕಪಾಲೇಷು ಸಮಾವಿಶೇತ್ । ವರ್ಜಯೇತ್ಕಲಹಂ ಲೋಕೈರ್ಗಾತ್ರಭಂಗಂ ತಥೈವ ಚ ।। 41 ।।
ನಂತರ ಆಪಸ್ತಂಬನು ಅಧಿಕ ದ್ರವ್ಯಗಳ ಪುತ್ರೇಷ್ಟಿಯನ್ನು ಮಾಡಿ “ಇಂದ್ರ ಶತ್ರುವಾಗು” ಎಂದು ವಿಸ್ತರದಿಂದ ಹೋಮಮಾಡಿದನು. ದೇವತೆಗಳು ಮುದಿತರಾದರು ಮತ್ತು ದೈತ್ಯರು ವಿಮುಖ ರಾದರು.[6] ಆಗ ದಿತಿಗೆ ಗರ್ಭವನ್ನಿತ್ತು ಕಶ್ಯಪನು ಅವಳಿಗೆ ಪುನಃ ಹೇಳಿದನು: “ವರಾನನೇ! ಈ ಗರ್ಭವನ್ನು ನೀನು ಪ್ರಯತ್ನಪಟ್ಟು ನೂರು ವರ್ಷಗಳ ಪರ್ಯಂತ ಈ ತಪೋವನದಲ್ಲಿ ಧಾರಣೆ ಮಾಡಿಕೊಂಡಿರು. ವರವರ್ಣಿನಿ! ಗರ್ಭಿಣಿಯಾದವಳು ಸಂಜೆ ಊಟಮಾಡಬಾರದು. ಸರ್ವದಾ ಮರದ ಕೆಳಗೆ ನಿಲ್ಲಬಾರದು ಅಥವಾ ನಡೆಯಬಾರದು. ಘಾಟಿನ ಪದಾರ್ಥಗಳನ್ನು ಸೇವಿಸ ಬಾರದು. ಕುಟ್ಟಬಾರದು ಮತ್ತು ಅರೆಯಬಾರದು. ನೀರಿನಲ್ಲಿ ಇಳಿಯಬಾರದು. ಜನರಹಿತವಾದ ಮನೆಯಲ್ಲಿ ಇರಬಾರದು. ಹುತ್ತದ ಮೇಲೆ ನಿಲ್ಲಬಾರದು. ಗಾಬರಿಗೊಳ್ಳಬಾರದು. ಉಗುರಿನಿಂದ ನೆಲ ಕೆರೆಯಬಾರದು. ಇದ್ದಿಲು-ಬೂದಿಗಳಿಂದಲೂ ಬರೆಯಬಾರದು. ಯಾವಾಗಲೂ ಮಲಗಿಕೊಂಡೇ ಇರಬಾರದು. ಆಯಾಸಕರ ವ್ಯಾಯಾಮವನ್ನೂ ಮಾಡಬಾರದು. ಹೊಟ್ಟು, ಇದ್ದಿಲು, ಬೂದಿ, ಮೂಳೆ ಮತ್ತು ಮಡಿಕೆಯ ಚೂರುಗಳ ಮೇಲೆ ನಡೆಯಬಾರದು. ಇತರರೊಡನೆ ಜಗಳವಾಡಬಾರದು. ಮೈಮುರಿಯಬಾರದು.
ನ ಮುಕ್ತಕೇಶಾ ತಿಷ್ಠೇತ ನಾಶುಚಿಃ ಸ್ಯಾತ್ಕದಾಚನ । ನ ಶಯೀತೋತ್ತರಶಿರಾ ನ ಚಾಪರಶಿರಾಃ ಕ್ವಚಿತ್ ।। 42 ।। ನ ವಸ್ತ್ರಹೀನಾ ನೋದ್ವಿಗ್ನಾ ನ ಚಾರ್ದ್ರಚರಣಾ ಸತೀ । ನಾಮಂಗಲ್ಯಾಂ ವದೇದ್ವಾಚಂ ನ ಚ ಹಾಸ್ಯಾಧಿಕಾ ಭವೇತ್ ।। 43 ।। ಕುರ್ಯಾತ್ತು ಗುರುಶುಶ್ರೂಷಾಂ ನಿತ್ಯಂ ಮಾಂಗಲ್ಯತತ್ಪರಾ । ಸರ್ವೌಷಧೀಭಿಃ ಕೋಷ್ಣೇನ ವಾರಿಣಾ ಸ್ನಾನಮಾಚರೇತ್ ।। 44 ।। ಕೃತರಕ್ಷಾ ಸುಭೂಷಾ ಚ ವಾಸ್ತುಪೂಜನತತ್ಪರಾ । ತಿಷ್ಠೇತ್ಪ್ರಸನ್ನವದನಾ ಭರ್ತುಃ ಪ್ರಿಯಹಿತೇ ರತಾ ।। 45 ।। ದಾನಶೀಲಾ ತೃತೀಯಾಯಾಂ ಪಾರ್ವಣ್ಯಂ ನಕ್ತಮಾಚರೇತ್ । ಇತಿವೃತ್ತಾ ಭವೇನ್ನಾರೀ ವಿಶೇಷೇಣ ತು ಗರ್ಭಿಣೀ ।। 46 ।।
ತಲೆಯನ್ನು ಕೆದರಿಕೊಂಡಿರಬಾರದು. ಎಂದೂ ಅಶುಚಿಯಾಗಿರ ಬಾರದು. ಉತ್ತರಕ್ಕೂ ಪಶ್ಚಿಮಕ್ಕೂ ತಲೆಹಾಕಿ ಮಲಗಬಾರದು. ಸತಿಯಾದವಳು ನಗ್ನಳಾಗಿಯೂ, ಕಳವಳದಿಂದ ಕೂಡಿಯೂ, ಒದ್ದೆಯಾದ ಕಾಲನ್ನು ಒರೆಸಿಕೊಳ್ಳದೆಯೂ ಇರಬಾರದು. ಅಮಂಗಲ ಮಾತನ್ನಾಡಬಾರದು. ಮಿತಿಮೀರಿದ ಹಾಸ್ಯವನ್ನೂ ಮಾಡಬಾರದು. ಗುರುಹಿರಿಯರ ಸೇವೆಯನ್ನು ಮಾಡಬೇಕು. ಯಾವಾಗಲೂ ಶುಭಕಾರ್ಯದಲ್ಲಿ ಆಸಕ್ತಳಾಗಿರಬೇಕು. ಸರ್ವ ಓಷಧಿಗಳನ್ನು ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಸ್ನಾನಮಾಡಬೇಕು. ರಕ್ಷಣೆಮಾಡಿಕೊಂಡು, ಭೂಷಣಗಳಿಂದ ಅಲಂಕೃತಳಾಗಿ, ಗೃಹದೇವತೆಯ ಪೂಜೆಯಲ್ಲಿ ತತ್ಪರಳಾಗಿರಬೇಕು. ಪ್ರಸನ್ನವದನ ಳಾಗಿ, ಪತಿಯ ಪ್ರಿಯಹಿತದಲ್ಲಿಯೇ ಆಸಕ್ತಳಾಗಿರಬೇಕು. ಉದಾರಸ್ವಭಾವದವಳಾಗಿ ಮೂರನೆಯ ತಿಂಗಳ ಹುಣ್ಣಿಮೆಯಲ್ಲಿ ರಾತ್ರಿ ಭೋಜನ ವ್ರತವನ್ನು ಕೈಗೊಳ್ಳಬೇಕು. ನಾರಿ, ವಿಶೇಷವಾಗಿ ಗರ್ಭಿಣಿಯು ಹೀಗೆ ನಡೆದುಕೊಳ್ಳಬೇಕು.
ಯಸ್ತು ತಸ್ಯಾ ಭವೇತ್ಪುತ್ರಃ ಶೀಲಾಯುರ್ವೃದ್ಧಿಸಂಯುತಃ । ಅನ್ಯಥಾ ಗರ್ಭಪತನಮವಾಪ್ನೋತಿ ನ ಸಂಶಯಃ ।। 47 ।। ತಸ್ಮಾತ್ತ್ವಮನಯಾ ವೃತ್ತ್ಯಾ ಗರ್ಭೇಽಸ್ಮಿನ್ಯತ್ನಮಾಚರ । ಸ್ವಸ್ತ್ಯಸ್ತು ತೇ ಗಮಿಷ್ಯಾಮಿ ತಥೇತ್ಯುಕ್ತಸ್ತಯಾ ಪುನಃ ।। 48 ।। ಪಶ್ಯತಾಂ ಸರ್ವಭೂತಾನಾಂ ತತ್ರೈವಾಂತರಧೀಯತ । ತತಃ ಸಾ ಕಶ್ಯಪೋಕ್ತೇನ ವಿಧಿನಾ ಸಮತಿಷ್ಠತ ।। 49 ।।
ಹೀಗಿರುವವಳಲ್ಲಿ ಹುಟ್ಟುವ ಮಗನು ಉತ್ತಮ ಶೀಲವುಳ್ಳವನೂ, ದೀರ್ಘಾಯುವೂ ಆಗುತ್ತಾನೆ. ಅನ್ಯಥಾ ಗರ್ಭಪತನವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ನೀನು ಹೀಗೆ ನಡೆದುಕೊಂಡು ಈ ಗರ್ಭವನ್ನು ಪ್ರಯತ್ನಪಟ್ಟು ರಕ್ಷಿಸಿಕೋ. ನಿನಗೆ ಮಂಗಳವಾಗಲಿ. ನಾನು ಹೋಗಿಬರುತ್ತೇನೆ.” ಹೀಗೆ ಹೇಳಿ ಸರ್ವಭೂತಗಳೂ ನೋಡುತ್ತಿದ್ದಂತೆಯೇ ಅವನು ಅಲ್ಲಿಯೇ ಅಂತರ್ಧಾನನಾದನು. ಆಗ ಅವಳು ಕಶ್ಯಪನು ಹೇಳಿದ ವಿಧದಲ್ಲಿಯೇ ಇರತೊಡಗಿದಳು.
ಅಥ ಭೀತಸ್ತಥೇಂದ್ರೋಽಪಿ ದಿತೇಃ ಪಾರ್ಶ್ವಮುಪಾಗಮತ್ । ವಿಹಾಯ ದೇವಸದನಂ ತಚ್ಚುಶ್ರೂಷುರವಸ್ಥಿತಃ ।। 50 ।। ದಿತೇಶ್ಚಿದ್ರಾಂತರಪ್ರೇಪ್ಸುರಭವತ್ಪಾಕಶಾಸನಃ । ವಿನೀತೋಽಭವದವ್ಯಗ್ರಃ ಪ್ರಶಾಂತವದನೋ ಬಹಿಃ ।। 51 ।। ಅಜಾನಾತ್ಕಿಲ ತತ್ಕಾರ್ಯಮಾತ್ಮನಃ ಶುಭಮಾಚರನ್ ।
ಆಗ ಭೀತನಾದ ಇಂದ್ರನಾದರೋ ದೇವಸದನವನ್ನು ಬಿಟ್ಟು ದಿತಿಯ ಬಳಿಬಂದು ಅವಳ ಶುಶ್ರೂಷೆಯಲ್ಲಿ ತೊಡಗಿದನು. ದಿತಿಯ ಲೋಪದೋಷಗಳ ಸಮಯವನ್ನೇ ಕಾಯುತ್ತಾ ಜಾಗರೂಕನಾಗಿದ್ದ ಆ ಪಾಕಶಾಸನ ಇಂದ್ರನು ಹೊರಗಡೆ ಪ್ರಶಾಂತಮುಖದಿಂದ ವಿನೀತನಾಗಿದ್ದನು. ತನ್ನ ಏಳಿಗೆಯನ್ನು ಸಾಧಿಸಲಿಚ್ಛಿಸಿದ್ದ ಅವನಿಗೆ ಅವಳಿಗೆ ಏನು ಮಾಡಬೇಕೆಂದು ಚೆನ್ನಾಗಿ ಗೊತ್ತಿದ್ದಿತು.
ತತೋ ವರ್ಷಶತಾಂತೇ ಸಾ ನ್ಯೂನೇ ತು ದಿವಸೈಸ್ತ್ರಿಭಿಃ ।। 52 ।। ಮೇನೇ ಕೃತಾರ್ಥಮಾತ್ಮಾನಂ ಪ್ರೀತ್ಯಾ ವಿಸ್ಮಿತಮಾನಸಾ । ಅಕೃತ್ವಾ ಪಾದಯೋಃ ಶೌಚಂ ಪ್ರಸುಪ್ತಾ ಮುಕ್ತಮೂರ್ಧಜಾ ।। 53 ।। ನಿದ್ರಾಭರಸಮಾಕ್ರಾಂತಾ ದಿವಾಪರಶಿರಾಃ ಕ್ವಚಿತ್ । ತತಸ್ತದಂತರಂ ಲಬ್ಧ್ವಾ ಪ್ರವಿಷ್ಟಸ್ತು ಶಚೀಪತಿಃ ।। 54 ।। ವಜ್ರೇಣ ಸಪ್ತಧಾ ಚಕ್ರೇ ತಂ ಗರ್ಭಂ ತ್ರಿದಶಾಧಿಪಃ । ತತಃ ಸಪ್ತೈವ ತೇ ಜಾತಾಃ ಕುಮಾರಾಃ ಸೂರ್ಯವರ್ಚಸಃ ।। 55 ।। ರುದಂತಃ ಸಪ್ತ ತೇ ಬಾಲಾ ನಿಷಿದ್ಧಾ ಗಿರಿದಾರಿಣಾ । ಭೂಯೋಽಪಿ ರುದತಶ್ಚೈತಾನೇಕೈಕಂ ಸಪ್ತಧಾ ಹರಿಃ ।। 56 ।। ಚಿಚ್ಛೇದ ವೃತ್ರಹಂತಾ ವೈ ಪುನಸ್ತದುದರೇ ಸ್ಥಿತಃ । ಏವಮೇಕೋನಪಂಚಾಶದ್ಭೂತ್ವಾ ತೇ ರುರುದುರ್ಭೃಶಮ್ ।। 57 ।।
ನಂತರ ನೂರು ವರ್ಷಗಳು ಮುಗಿಯಲು ಮೂರು ದಿನಗಳು ಮಾತ್ರವೇ ಉಳಿದಿದ್ದವು. ಅವಳು ತಾನು ಕೃತಾರ್ಥಳಾದೆನೆಂದು ತಿಳಿದು, ವ್ರತವು ಸಂಪೂರ್ಣವಾಗುತ್ತಿರುವುದನ್ನು ನೋಡಿ ಮನಸ್ಸಿನಲ್ಲೇ ಆಶ್ಚರ್ಯಪಟ್ಟು, ಪ್ರೀತಿಯಿಂದ ಎಲ್ಲೋ ಒಂದು ಬಾರಿ ಕಾಲುಗಳನ್ನು ತೊಳೆಯದೇ, ಹಗಲಿನಲ್ಲಿ, ನಿದ್ರಾವಶದಿಂದ ಕೂದಲನ್ನು ಗಂಟುಹಾಕಿಕೊಳ್ಳದೆ. ಪಶ್ಚಿಮಕ್ಕೆ ತಲೆಯಿಟ್ಟು ಮಲಗಿದಳು. ಆ ಸಮಯವು ಸಿಗಲು, ತ್ರಿದಶಾಧಿಪ ಶಚೀಪತಿಯು ದಿತಿಯ ಗರ್ಭವನ್ನು ಪ್ರವೇಶಿಸಿ, ತನ್ನ ವಜ್ರಾಯುಧದಿಂದ ಅದನ್ನು ಏಳು ಪಾಲು ಮಾಡಿದನು. ಆಗ ಆ ಏಳು ಚೂರುಗಳೂ ಸೂರ್ಯವರ್ಚಸ ಏಳು ಮಕ್ಕಳೇ ಆಗಿ ಹುಟ್ಟಿದವು. ಅಳುತ್ತಿರುವ ಆ ಏಳು ಮಕ್ಕಳನ್ನೂ ಇಂದ್ರನು ತಡೆದನು. ಅವು ಮತ್ತೂ ಅಳುತ್ತಿರಲು ಅವನು ಒಂದೊಂದನ್ನೂ, ಅವಳ ಉದರದಲ್ಲಿ ನಿಂತು, ಏಳೇಳು ಭಾಗವಾಗಿ ಕತ್ತರಿಸಿದನು. ಹೀಗೆ 49 ಪಾಲುಗಳಾಗಲು ಅವು ಜೋರಾಗಿ ಅತ್ತವು.
ಇಂದ್ರೋ ನಿವಾರಯಾಮಾಸ ಮಾಂ ರೋದಿಷ್ಟ ಪುನಃ ಪುನಃ । ತತಃ ಸ ಚಿಂತಯಾಮಾಸ ಕಿಮೇತದಿತಿ ವೃತ್ರಹಾ ।। 58 ।। ಧರ್ಮಸ್ಯ ಕಸ್ಯ ಮಾಹಾತ್ಮ್ಯಾತ್ಪುನಃ ಸಂಜೀವಿತಾಸ್ತ್ವಮೀ । ವಿದಿತ್ವಾ ಧ್ಯಾನಯೋಗೇನ ಮದನದ್ವಾದಶೀಫಲಮ್ ।। 59 ।। ನೂನಮೇತತ್ಪರಿಣತಮಧುನಾ ಕೃಷ್ಣಪೂಜನಾತ್ । ವಜ್ರೇಣಾಪಿ ಹತಾಃ ಸಂತೋ ನ ವಿನಾಶಮವಾಪ್ನುಯುಃ ।। 60 ।। ಏಕೋಽಪ್ಯನೇಕತಾಮಾಪ ಯಸ್ಮಾದುದರಗೋಽಪ್ಯಲಮ್ । ಅವಧ್ಯಾ ನೂನಮೇತೇ ವೈ ತಸ್ಮಾದ್ದೇವಾ ಭವಂತ್ವಿತಿ ।। 61 ।। ಯಸ್ಮಾನ್ಮಾ ರುದತೇತ್ಯುಕ್ತಾ ರುದಂತೋ ಗರ್ಭಸಂಸ್ಥಿತಾಃ । ಮರುತೋ ನಾಮ ತೇ ನಾಮ್ನಾ ಭವಂತು ಮಖಭಾಗಿನಃ ।। 62 ।।
“ಮಾ ರೋದಿಷ್ಟ!” ಎಂದು ಇಂದ್ರನು ಅವರನ್ನು ಪುನಃ ಪುನಃ ತಡೆದನು. ಆಗ ವೃತ್ರಹ ಇಂದ್ರನು “ಇದೇನು? ಯಾವ ಧರ್ಮದ ಮಹಿಮೆಯಿಂದ ಇವು ಮತ್ತೆ ಬದುಕಿದವು?” ಎಂದು ಯೋಚಿಸಿದನು. ಧ್ಯಾನಬಲದಿಂದ ಮದನದ್ವಾದಶೀ ವ್ರತದ ಫಲವನ್ನು ಅರಿತು “ಶ್ರೀಕೃಷ್ಣನ ಪೂಜೆಯಿಂದ ಹೀಗಾಯಿತು. ವಜ್ರಾಯುಧದಿಂದ ಹೊಡೆದರೂ ಇವು ಸಾಯಲಿಲ್ಲ. ಉದರದಲ್ಲಿದ್ದಾಗಲೇ ಈ ಒಂದು ಗರ್ಭವು ಹಲವು ಭಾಗವಾಯಿತು. ನನ್ನ ವಜ್ರಾಯುಧದ ಪ್ರಹಾರದಿಂದಲೂ ಅವಧ್ಯರಾದ ಕಾರಣ ಈ ಮಕ್ಕಳು ನಿಜವಾಗಿ ದೇವತೆಗಳಾಗಲಿ. ಅಳಬೇಡಿರೆಂದು ನಾನು ಹೇಳಿದರೂ ಗರ್ಭದಲ್ಲಿ ಅಳುತ್ತಲೇ ಇದ್ದ ಕಾರಣ ಇವರು ಮರುತರೆಂಬ ಹೆಸರನ್ನು ಪಡೆದು ಯಾಗಗಳಲ್ಲಿ ಹವಿರ್ಭಾಗವನ್ನು ಹೊಂದಲಿ” ಎಂದು ಇಂದ್ರನು ವರವನ್ನಿತ್ತನು.
ತತಃ ಪ್ರಸಾದ್ಯ ದೇವೇಶಃ ಕ್ಷಮಸ್ವೇತಿ ದಿತಿಂ ಪುನಃ । ಅರ್ಥಶಾಸ್ತ್ರಂ ಸಮಾಸ್ಥಾಯ ಮಯೈತದ್ದುಷ್ಕೃತಂ ಕೃತಮ್ ।। 63 ।। ಕೃತ್ವಾ ಮರುದ್ಗಣಂ ದೇವೈಃ ಸಮಾನಮಮರಾಧಿಪಃ । ದಿತಿಂ ವಿಮಾನಮಾರೋಪ್ಯ ಸಸುತಾಮನಯದ್ದಿವಮ್ ।। 64 ।। ಯಜ್ಞಭಾಗಭುಜೋ ಜಾತಾ ಮರುತಸ್ತೇ ತತೋ ದ್ವಿಜಾಃ । ನ ಜಗ್ಮುರೈಕ್ಯಮಸುರೈರತಸ್ತೇ ಸುರವಲ್ಲಭಾಃ ।। 65 ।।
ನಂತರ ದೇವೇಶನು ದಿತಿಗೆ “ಕ್ಷಮಸ್ವ” ಎಂದು ಪ್ರಸನ್ನಗೊಳಿಸಿ, ಪುನಃ “ಅರ್ಥಶಾಸ್ತ್ರದಲ್ಲಿ ಮನಸ್ಸಿಟ್ಟು ನಾನು ದುಷ್ಕಾರ್ಯವನ್ನು ಎಸಗಿದೆನು. ಕ್ಷಮಿಸು” ಎಂದು ಬೇಡಿಕೊಂಡನು. ಅಮರಾಧಿಪ ಇಂದ್ರನು ಮರುದ್ಗಣವನ್ನು ದೇವತೆಗಳಿಗೆ ಸಮಾನವನ್ನಾಗಿ ಮಾಡಿ, ದಿತಿಯನ್ನು ಅವಳ ಮಕ್ಕಳೊಡನೆ ವಿಮಾನದಲ್ಲಿ ಕುಳ್ಳಿರಿಸಿ, ಸ್ವರ್ಗಕ್ಕೆ ಕರೆದೊಯ್ದನು. ದ್ವಿಜರೇ! ನಂತರ ಆ ಮರುತ್ತುಗಳು ಯಜ್ಞಭಾಗಾರ್ಹರಾದರು. ಅವರು ರಾಕ್ಷಸರೊಂದಿಗೆ ಸಮಾನತೆಯನ್ನು ಪಡೆಯಲಿಲ್ಲ. ಆದ್ದರಿಂದಲೇ ಅವರು ದೇವವಲ್ಲಭರೆನಿಸಿಕೊಂಡರು.”
ಇತಿ ಶ್ರೀಮಾತ್ಸ್ಯೇ ಮಹಾಪುರಾಣೇ ಆದಿಸರ್ಗೇ ಮರುದುತ್ಪತ್ತೌ ಮದನದ್ವಾದಶೀವ್ರತಂ ನಾಮ ಸಪ್ತಮೋಽಧ್ಯಾಯಃ ।।
ಇದು ಶ್ರೀಮತ್ಸ್ಯಮಹಾಪುರಾಣದಲ್ಲಿ ಆದಿಸರ್ಗದಲ್ಲಿ ಮರುತ್ತುತ್ಪತ್ತಿಯಲ್ಲಿ ಮದನದ್ವಾದಶೀವ್ರತ ಎನ್ನುವ ಏಳನೇ ಅಧ್ಯಾಯವು.
[1] ಅರಮನೆ ಪ್ರಕಾಶನದಲ್ಲಿ ಸುವ್ರತ ಎಂದಿದೆ. ನಾನು ಇಲ್ಲಿ ಪಾಠಾಂತರದಲ್ಲಿರುವಂತೆ ಸುವ್ರತಾ ಎಂದೇ ತೆಗೆದುಕೊಂಡಿದ್ದೇನೆ. ಬಹುಷಃ ಇದು ದಿತಿಯನ್ನು ಅವಳು ಸುವ್ರತೆಯಾಗಿದ್ದಳು ಎಂದು ಸೂಚಿಸುವುದಕ್ಕಾಗಿರಬಹುದೇ ಹೊರತು ಅನ್ಯ ಅರ್ಥವನ್ನು ಕೊಡುವುದಕ್ಕೆ ಇರಲಿಕ್ಕಿಲ್ಲ ಎಂದು ಭಾವಿಸುತ್ತೇನೆ.
[2] ಅರಮನೆ ಪ್ರಕಾಶನದಲ್ಲಿ ಪರತ ಎಂದಿದೆ. ನಾನು ಇಲ್ಲಿ ಪಾಠಾಂತರದಲ್ಲಿರುವಂತೆ ಪರತ್ರ ಎಂದೇ ತೆಗೆದುಕೊಂಡಿದ್ದೇನೆ.
[3] ಕೃಚ್ಛ್ರ ಎಂದರೆ ಕಷ್ಟಕರವಾದ, ದೇಹ-ಮನಸ್ಸನ್ನು ಶುದ್ಧಿಗೊಳಿಸುವ, ಪ್ರಾಯಶ್ಚಿತ್ತ ವ್ರತ. ಧರ್ಮಶಾಸ್ತ್ರಗಳಲ್ಲಿ ಪ್ರಾಜಾಪತ್ಯ ಕೃಚ್ಛ್ರ, ತಪ್ತಕೃಚ್ಛ್ರ, ಸಾಂತಪನ ಕೃಚ್ಛ್ರ, ಮತ್ತು ಅತಿ ಕೃಚ್ಛ್ರ ಎಂಬ ಹಲವು ವಿಧದ ಕೃಚ್ಛ್ರಗಳ ಕುರಿತು ಇವೆ. ಇವೆಲ್ಲವುಗಳ ಸಾಮಾನ್ಯ ಲಕ್ಷಣಗಳು: (1) ದಿನಕ್ಕೆ ಅಲ್ಪ ಆಹಾರ – ಕೆಲವೊಮ್ಮೆ ಕೇವಲ ಹಾಲು ಅಥವಾ ಜಲ ಮಾತ್ರ (2) ಇಂದ್ರಿಯ ನಿಗ್ರಹ (3) ಬ್ರಹ್ಮಚರ್ಯ (4) ಮಂತ್ರಜಪ-ಧ್ಯಾನ (5) ಅಗ್ನಿ-ಸೂರ್ಯ-ವಿಷ್ಣು ಪೂಜೆ.
[4] ಚಂದ್ರನ ಕಲೆಗೆ ಅನುಗುಣವಾಗಿ ಆಹಾರವನ್ನು ಕಡಿಮೆ-ಹೆಚ್ಚು ಮಾಡುವ ವ್ರತವೇ ಚಾಂದ್ರಾಯಣ. ಶುಕ್ಲಪಕ್ಷದಲ್ಲಿ ಪ್ರತಿದಿನ ಒಂದೊಂದು ಗ್ರಾಸ ಹೆಚ್ಚಿಸಬೇಕು ಮತ್ತು ಕೃಷ್ಣಪಕ್ಷದಲ್ಲಿ ಪ್ರತಿದಿನ ಒಂದೊಂದು ಗ್ರಾಸ ಕಡಿಮೆ ಮಾಡಬೇಕು. ಮತ್ತು ಅಮವಾಸ್ಯೆಯೆಂದು ಕೇವಲ ಜಲೋಪವಾಸ ಮಾಡಬೇಕು. ಪಾಪಕ್ಷಯ, ದೇಹ-ಮನಃಶುದ್ಧಿ, ಮತ್ತು ಇಂದ್ರಿಯ ಸಂಯಮಗಳು ಚಾಂದ್ರಾಯಣ ವ್ರತದ ಉದ್ದೇಶ.
[5] ಇಲ್ಲಿ ಹೇಳಿರುವ ಆಪಸ್ತಂಬನು ಕಶ್ಯಪನ ಸಂಬಂಧಿಯಾರೂ ಅಲ್ಲ. ಅಥವಾ ತೈತ್ತಿರೀಯ ಯಜುರ್ವೇದ ಶಾಖೆಗೆ ಸೇರಿದ ಸೂತ್ರಕಾರ ಆಪಸ್ತಂಬನೂ ಅಲ್ಲ. ಪುತ್ರೇಷ್ಟಿ ಯಾಗವನ್ನು ಮಾಡಿಸುವ ಋತ್ವಿಜ ಋಷಿಯಾಗಿರಬೇಕು.
[6] ದೇವತೆಗಳು ಹರ್ಷಿತರಾದ ವಿಷಯವು ಇಲ್ಲಿ ಸಮಂಜಲವಲ್ಲವೆಂದು ತೋರುತ್ತದೆ. ಆದರೂ ಮೂಲ ಕೃತಿಯಲ್ಲಿ ಇರುವಂತೆಯೇ ಅನುವಾದಿಸಿದ್ದೇನೆ.