ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 6: ಕಶ್ಯಪಾನ್ವಯಃ
ಸೂತ ಉವಾಚ । ಕಶ್ಯಪಸ್ಯ ಪ್ರವಕ್ಷ್ಯಾಮಿ ಪತ್ನೀಭ್ಯಃ ಪುತ್ರಪೌತ್ರಕಾನ್ । ಅದಿತಿರ್ದಿತಿರ್ದನುಶ್ಚೈವ ಅರಿಷ್ಟಾ ಸುರಸಾ ತಥಾ ।। 1 ।। ಸುರಭಿರ್ವಿನತಾ ತದ್ವತ್ತಾಮ್ರಾ ಕ್ರೋಧವಶಾ ಇರಾ । ಕದ್ರೂರ್ವಿಶ್ವಾ ಮುನಿಸ್ತದ್ವತ್ತಾಸಾಂ ಪುತ್ರಾನ್ನಿಬೋಧತ ।। 2 ।। ತುಷಿತಾ ನಾಮ ಯೇ ದೇವಾಶ್ಚಾಕ್ಷುಷಸ್ಯಾಂತರೇ ಮನೋಃ । ವೈವಸ್ವತೇಽಂತರೇ ಚೈತೇ ಹ್ಯಾದಿತ್ಯಾ ದ್ವಾದಶ ಸ್ಮೃತಾಃ ।। 3 ।। ಇಂದ್ರೋ ಧಾತಾ ಭಗಸ್ತ್ವಷ್ಟಾ ಮಿತ್ರೋಽಥ ವರುಣೋ ಯಮಃ । ವಿವಸ್ವಾನ್ಸವಿತಾ ಪೂಷಾ ಅಂಶುಮಾನ್ವಿಷ್ಣುರೇವ ಚ ।। 4 ।। ಏತೇ ಸಹಸ್ರಕಿರಣಾ ಆದಿತ್ಯಾ ದ್ವಾದಶ ಸ್ಮೃತಾಃ । ಮಾರೀಚಾತ್ಕಶ್ಯಪಾದಾಪ ಪುತ್ರಾನದಿತಿರುತ್ತಮಾನ್ ।। 5 ।। ಕೃಶಾಶ್ವಸ್ಯ ಋಷೇಃ ಪುತ್ರಾ ದೇವಪ್ರಹರಣಾಃ ಸ್ಮೃತಾಃ । ಏತೇ ದೇವಗಣಾ ವಿಪ್ರಾಃ ಪ್ರತಿಮನ್ವಂತರೇಷು ಚ ।। 6 ।। ಉತ್ಪದ್ಯಂತೇ ಪ್ರಲೀಯಂತೇ ಕಲ್ಪೇ ಕಲ್ಪೇ ತಥೈವ ಚ ।
ಸೂತನು ಹೇಳಿದನು: “ಕಶ್ಯಪನ ಪತ್ನಿಯರು ಮತ್ತು ಪುತ್ರ-ಪೌತ್ರರ ಕುರಿತು ಹೇಳುತ್ತೇನೆ. ಅದಿತಿ, ದಿತಿ, ದನು, ಅರಿಷ್ಟಾ, ಸುರಸಾ, ಸುರಭಿ, ವಿನತಾ, ತಾಮ್ರಾ, ಕ್ರೋಧವಶಾ, ಇರಾ, ಕದ್ರು, ವಿಶ್ವಾ ಮತ್ತು ಮುನಿ – ಈ ಹದಿಮೂರು ಮಂದಿ ಕಶ್ಯಪನ ಪತ್ನಿಯರು. ಅವರ ಪುತ್ರರ ಕುರಿತು ಕೇಳಿ. ಚಾಕ್ಷುಷ ಮನ್ವಂತರದಲ್ಲಿ ತುಷಿತಾ ಎಂಬ ಹೆಸರಿನ ಯಾವ ದೇವತೆಗಳಿದ್ದರೋ ಅವರೇ ವೈವಸ್ವತ ಮನ್ವಂತರದಲ್ಲಿ ದ್ವಾದಶ ಆದಿತ್ಯರೆನಿಸಿಕೊಂಡರು. ಇಂದ್ರ, ಧಾತ, ಭಗ, ತ್ವಷ್ಟೃ, ಮಿತ್ರ, ವರುಣ, ಯಮ, ವಿವಸ್ವಂತ, ಸವಿತೃ, ಪೂಷ, ಅಂಶುಮಂತ ಮತ್ತು ವಿಷ್ಣು – ಇವರೇ ಸಹಸ್ರಕಿರಣಗಳ ದ್ವಾದಶ ಆದಿತ್ಯರು. ಈ ಉತ್ತಮ ಪುತ್ರರು ಮರೀಚನ ಮಗ ಕಶ್ಯಪನಿಗೆ ಅದಿತಿಯಲ್ಲಿ ಹುಟ್ಟಿದರು. ಕೃಶಾಶ್ವ ಋಷಿಯ ಪುತ್ರರಿಗೆ ದೇವಪ್ರಹರಣರೆಂದು ಹೆಸರು. ವಿಪ್ರರೇ! ಈ ದೇವಗಣಗಳು ಪ್ರತಿಮನ್ವಂತರದಲ್ಲಿ ಹುಟ್ಟಿ ಲಯಹೊಂದುತ್ತಾರೆ. ಹಾಗೆಯೇ ಕಲ್ಪ ಕಲ್ಪದಲ್ಲಿಯೂ ಹುಟ್ಟುತ್ತಾರೆ ಮತ್ತು ಲಯಹೊಂದುತ್ತಾರೆ.
ದಿತಿಃ ಪುತ್ರದ್ವಯಂ ಲೇಭೇ ಕಶ್ಯಪಾದಿತಿ ನಃ ಶ್ರುತಮ್ ।। 7 ।। ಹಿರಣ್ಯಕಶಿಪುಂ ಚೈವ ಹಿರಣ್ಯಾಕ್ಷಂ ತಥೈವ ಚ । ಹಿರಣ್ಯಕಶಿಪೋಸ್ತದ್ವಜ್ಜಾತಂ ಪುತ್ರಚತುಷ್ಟಯಮ್ ।। 8 ।। ಪ್ರಹ್ಲಾದಶ್ಚಾನುಹ್ಲಾದಶ್ಚ ಸಂಹ್ಲಾದೋ ಹ್ಲಾದ ಏವ ಚ । ಪ್ರಹ್ಲಾದಪುತ್ರ ಆಯುಷ್ಮಾನ್ ಶಿಬಿರ್ಬಾಷ್ಕಲ ಏವ ಚ ।। 9 ।। ವಿರೋಚನಶ್ಚತುರ್ಥಶ್ಚ ಸ ಬಲಿಂ ಪುತ್ರಮಾಪ್ತವಾನ್ । ಬಲೇಃ ಪುತ್ರಶತಂ ತ್ವಾಸೀದ್ಬಾಣಜ್ಯೇಷ್ಠಂ ತತೋ ದ್ವಿಜಾಃ ।। 10 ।। ಧೃತರಾಷ್ಟ್ರಸ್ತಥಾ ಸೂರ್ಯಶ್ಚಂದ್ರಶ್ಚಂದ್ರಾಂಶುತಾಪನಃ । ನಿಕುಂಭನಾಭೋ ಗುರ್ವಕ್ಷಃ ಕುಕ್ಷಿಭೀಮೋ ವಿಭೀಷಣಃ ।। 11 ।। ಏವಮಾದ್ಯಾಸ್ತು ಬಹವೋ ಬಾಣಜ್ಯೇಷ್ಠಾ ಗುಣಾಧಿಕಾಃ । ಬಾಣಃ ಸಹಸ್ರಬಾಹುಶ್ಚ ಸರ್ವಾಸ್ತ್ರಗಣಸಂಯುತಃ ।। 12 ।। ತಪಸಾ ತೋಷಿತೋ ಯಸ್ಯ ಪುರೇ ವಸತಿ ಶೂಲಭೃತ್ । ಮಹಾಕಾಲತ್ವಮಗಮತ್ಸಾಮ್ಯಂ ಯಶ್ಚ ಪಿನಾಕಿನಃ ।। 13 ।।
ಕಶ್ಯಪನಿಂದ ದಿತಿಯು ಇಬ್ಬರು ಪುತ್ರರನ್ನು ಪಡೆದಳು ಎಂದು ಕೇಳಿದ್ದೇವೆ: ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷ. ಹಿರಣ್ಯಕಶಿಪುವಿಗೆ ನಾಲ್ವರು ಪುತ್ರರು ಜನಿಸಿದರು: ಪ್ರಹ್ಲಾದ, ಅನುಹ್ಲಾದ, ಸಂಹ್ಲಾದ ಮತ್ತು ಹ್ಲಾದ. ಪ್ರಹ್ಲಾದನ ಪುತ್ರರು ಆಯುಷ್ಮಾನ್, ಶಿಬಿ, ಬಾಷ್ಕಲ ಮತ್ತು ನಾಲ್ಕನೆಯ ವಿರೋಚನನು. ವಿರೋಚನನು ಬಲಿಯನ್ನು ಪುತ್ರನನ್ನಾಗಿ ಪಡೆದನು. ಬಲಿಗೆ ನೂರುಮಂದಿ ಪುತ್ರರಾದರು. ದ್ವಿಜರೇ! ಅವರಲ್ಲಿ ಬಾಣನು ಹಿರಿಯವನು. ಧೃತರಾಷ್ಟ್ರ, ಸೂರ್ಯ, ಚಂದ್ರ, ಚಂದ್ರಾಂಶುತಾಪನ, ನಿಕುಂಭ, ನಾಭ, ಗುರ್ವಕ್ಷ, ಕುಕ್ಷಿಭೀಮ ಮತ್ತು ವಿಭೀಷಣ ಮೊದಲಾದ ಅನೇಕರು ಬಾಣನ ಸಹೋದರರು. ಅವರಲ್ಲಿ ಬಾಣನು ಜ್ಯೇಷ್ಠನು ಮತ್ತು ಗುಣದಲ್ಲಿ ಅಧಿಕನು. ಬಾಣನಿಗೆ ಸರ್ವಾಸ್ತ್ರಗಣಗಳಿಂದ ಕೂಡಿದ್ದ ಸಹಸ್ರ ಬಾಹುಗಳಿದ್ದವು. ಅವನ ತಪಸ್ಸಿನಿಂದ ತೃಪ್ತನಾದ ಶೂಲಧಾರಿ ಶಂಕರನು ಅವನ ಪುರದಲ್ಲಿ ವಾಸಿಸಿರುವನು. ಬಾಣನೂ ಕೂಡ ಮಹಾಕಾಲ ರೂಪವನ್ನು ಪಡೆದು ಮಹೇಶ್ವರನ ಸಾಮ್ಯವನ್ನು ಪಡೆದನು.
ಹಿರಣ್ಯಾಕ್ಷಸ್ಯ ಪುತ್ರೋಽಭೂದುಲೂಕಃ ಶಕುನಿಸ್ತಥಾ । ಭೂತಸಂತಾಪನಶ್ಚೈವ ಮಹಾನಾಭಸ್ತಥೈವ ಚ ।। 14 ।। ಏತೇಭ್ಯಃ ಪುತ್ರಪೌತ್ರಾಣಾಂ ಕೋಟಯಃ ಸಪ್ತಸಪ್ತತಿಃ । ಮಹಾಬಲಾ ಮಹಾಕಾಯಾ ನಾನಾರೂಪಾ ಮಹೌಜಸಃ ।। 15 ।।
ಹಿರಣ್ಯಾಕ್ಷನಿಗೆ ಉಲೂಕ, ಶಕುನಿ, ಭೂತಸಂತಾಪನ ಮತ್ತು ಮಹಾನಾಭಿ ಎಂಬ ಮಕ್ಕಳಾದರು. ಇವರಿಂದ ಮಹಾಬಲರೂ, ಮಹಾಕಾಯರೂ, ನಾನಾರೂಪಧರರೂ, ಮಹೌಜಸರೂ ಆದ 77 ಕೋಟಿ ಪುತ್ರ-ಪೌತ್ರರು ಹುಟ್ಟಿದರು.
ದನುಃ ಪುತ್ರಶತಂ ಲೇಭೇ ಕಶ್ಯಪಾದ್ಬಲದರ್ಪಿತಮ್ । ವಿಪ್ರಚಿತ್ತಿಃ ಪ್ರಧಾನೋಽಭೂದ್ಯೇಷಾಂ ಮಧ್ಯೇ ಮಹಾಬಲಃ ।। 16 ।। ದ್ವಿಮೂರ್ಧಾ ಶಕುನಿಶ್ಚೈವ ತಥಾ ಶಂಕುಶಿರೋಧರಃ । ಅಯೋಮುಖಃ ಶಂಬರಶ್ಚ ಕಪಿಶೋ ವಾಮನಸ್ತಥಾ ।। 17 ।। ಮಾರೀಚಿರ್ಮೇಘವಾಂಶ್ಚೈವ ಇರಾಗರ್ಭಶಿರಾಸ್ತಥಾ । ವಿದ್ರಾವಣಶ್ಚ ಕೇತುಶ್ಚ ಕೇತುವೀರ್ಯಃ ಶತಹ್ರದಃ ।। 18 ।। ಇಂದ್ರಜಿತ್ಸಪ್ತಜಿಚ್ಚೈವ ವಜ್ರನಾಭಸ್ತಥೈವ ಚ । ಏಕಚಕ್ರೋ ಮಹಾಬಾಹುರ್ವಜ್ರಾಕ್ಷಸ್ತಾರಕಸ್ತಥಾ ।। 19 ।। ಅಸಿಲೋಮಾ ಪುಲೋಮಾ ಚ ಬಿಂದುರ್ಬಾಣೋ ಮಹಾಸುರಃ । ಸ್ವರ್ಭಾನುರ್ವೃಷಪರ್ವಾ ಚ ಏವಮಾದ್ಯಾ ದನೋಃ ಸುತಾಃ ।। 20 ।।
ಕಶ್ಯಪನಿಂದ ದನುವು ಬಲದರ್ಪಿತರಾದ ನೂರು ಪುತ್ರರನ್ನು ಪಡೆದಳು. ಅವರಲ್ಲಿ ಮಹಾಬಲ ವಿಪ್ರಚಿತ್ತಿಯು ಪ್ರಧಾನನಾಗಿದ್ದನು. ದ್ವಿಮೂರ್ಧ, ಶಕುನಿ, ಶಂಕುಶಿರೋಧರ, ಅಯೋಮುಖ, ಶಂಬರ, ಕಪಿಶ, ವಾಮನ, ಮಾರೀಚಿ, ಮೇಘವಂತ, ಇರಾಗರ್ಭ, ಶಿರಸ್ಸು, ವಿರಾವಣ, ಕೇತು, ಕೇತುವೀರ್ಯ, ಶತಹ್ರದ, ಇಂದ್ರಜಿತ್ತು, ಸಪ್ತಜಿತ್ತು, ವಜ್ರನಾಭ, ಏಕಚಕ್ರ, ಮಹಾಬಾಹು, ವಜ್ರಾಕ್ಷ, ತಾರಕ, ಅಸಿಲೋಮ, ಪುಲೋಮ, ಬಿಂದು, ಬಾಣ, ಸ್ವರ್ಭಾನು, ಮತ್ತು ವೃಷಪರ್ವ ಮೊದಲಾದವರು ದನುವಿನ ಮಕ್ಕಳು.
ಸ್ವರ್ಭಾನೋಸ್ತು ಪ್ರಭಾ ಕನ್ಯಾ ಶಚೀ ಚೈವ ಪುಲೋಮಜಾ । ಉಪದಾನವೀ ಮಯಸ್ಯಾಸೀತ್ತಥಾ ಮಂಡೋದರೀ ಕುಹೂಃ ।। 21 ।। ಶರ್ಮಿಷ್ಠಾ ಸುಂದರೀ ಚೈವ ಚಂದ್ರಾ ಚ ವೃಷಪರ್ವಣಃ । ಪುಲೋಮಾ ಕಾಲಕಾ ಚೈವ ವೈಶ್ವಾನರಸುತೇ ಹಿ ತೇ ।। 22 ।। ಬಹ್ವಪತ್ಯೇ ಮಹಾಸತ್ತ್ವೇ ಮಾರೀಚಸ್ಯ ಪರಿಗ್ರಹೇ । ತಯೋಃ ಷಷ್ಟಿಸಹಸ್ರಾಣಿ ದಾನವಾನಾಮಭೂತ್ಪುರಾ ।। 23 ।। ಪೌಲೋಮಾನ್ಕಾಲಕೇಯಾಂಶ್ಚ ಮಾರೀಚೋಽಜನಯತ್ಪುರಾ । ಅವಧ್ಯಾ ಯೇಽಮರಾಣಾಂ ವೈ ಹಿರಣ್ಯಪುರವಾಸಿನಃ ।। 24 ।। ಚತುರ್ಮುಖಾಲ್ಲಬ್ಧವರಾಸ್ತೇ ಹತಾ ವಿಜಯೇನ ತು । ವಿಪ್ರಚಿತ್ತಿಃ ಸೈಂಹಿಕೇಯಾನ್ ಸಿಂಹಿಕಾಯಾಮಜೀಜನತ್ ।। 25 ।।
ಪ್ರಭೆಯು ಸ್ವರ್ಭಾನುವಿನ ಮಗಳು. ಶಚಿಯು ಪುಲೋಮನ ಪುತ್ರಿಯು. ಮಯನಿಗೆ ಉಪದಾನವೀ, ಮಂಡೋದರಿ ಮತ್ತು ಕುಹು ಎಂಬ ಕನ್ಯೆಯರಾದರು. ಶರ್ಮಿಷ್ಠೆ, ಸುಂದರಿ ಮತ್ತು ಚಂದ್ರೆ ಇವರು ವೃಷಪರ್ವನ ಪುತ್ರಿಯರು. ಪುಲೋಮೆ ಮತ್ತು ಕಾಲಕೆಯರು ವೈಶ್ವಾನರನ ಸುತೆಯರು. ಮಾರೀಚಿನ ಇಬ್ಬರು ಪತ್ನಿಯರೂ ಮಹಾಸತ್ತ್ವಯುತರು ಮತ್ತು ಬಹು ಸಂತಾನವುಳ್ಳವರು. ಇವರಿಬ್ಬರಿಂದ ಹಿಂದೆ 60 ಸಾವಿರ ದಾನವರು ಜನಿಸಿದರು. ಮಾರೀಚಿಯು ಹಿಂದೆ ಪುಲೋಮೆಯಿಂದ ಪೌಲೋಮರನ್ನೂ, ಕಾಲಕೆಯಿಂದ ಕಾಲಕೇಯರನ್ನೂ ಪಡೆದನು. ಅವರು ಚತುರ್ಮುಖ ಬ್ರಹ್ಮನಿಂದ ವರವನ್ನು ಪಡೆದು ದೇವತೆಗಳಿಗೂ ಅವಧ್ಯರಾಗಿ ಹಿರಣ್ಯಪುರದಲ್ಲಿ ವಾಸಿಸುತ್ತಿದ್ದರು. ಅವರನ್ನು ವಿಜಯ ಅರ್ಜುನನು ಕೊಂದನು. ವಿಪ್ರಚಿತ್ತಿಗೆ ಸಿಂಹಿಕೆಯಲ್ಲಿ ಸೈಂಹಿಕೇಯರು ಹುಟ್ಟಿದರು.
ಹಿರಣ್ಯಕಶಿಪೋರ್ಯೇ ವೈ ಭಾಗಿನೇಯಾಸ್ತ್ರಯೋದಶ । ವ್ಯಂಸಃ ಕಲ್ಪಶ್ಚ ರಾಜೇಂದ್ರ[1] ನಲೋ ವಾತಾಪಿರೇವ ಚ ।। 26 ।। ಇಲ್ವಲೋ ನಮುಚಿಶ್ಚೈವ ಶ್ವಸೃಪಶ್ಚಾಜನಸ್ತಥಾ । ನರಕಃ ಕಾಲನಾಭಶ್ಚ ಸರಮಾಣಸ್ತಥೈವ ಚ ।। 27 ।। ಕಾಲವೀರ್ಯಶ್ಚ ವಿಖ್ಯಾತೋ ದನುವಂಶವಿವರ್ಧನಾಃ ।
ಹಿರಣ್ಯಕಶಿಪುವಿಗೆ ಹದಿಮೂರು ಮಂದಿ ಸೋದರಳಿಯಂದಿರು: ವ್ಯಂಸ, ಕಲ್ಪ, ನಲ, ವಾತಾಪಿ, ಇಲ್ವಲ, ನಮುಚಿ, ಶ್ವಸೃಪ, ಅಜನ, ನರಕ, ಕಾಲನಾಭ, ಸರಮಾಣ, ಕಾಲವೀರ್ಯ ಮತ್ತು ವಿಖ್ಯಾತ. ಇವರು ದನುವಂಶವನ್ನು ಬೆಳೆಸಿದರು.
ಸಂಹ್ಲಾದಸ್ಯ ತು ದೈತ್ಯಸ್ಯ ನಿವಾತಕವಚಾಃ ಸ್ಮೃತಾಃ ।। 28 ।। ಅವಧ್ಯಾಃ ಸರ್ವದೇವಾನಾಂ ಗಂಧರ್ವೋರಗರಕ್ಷಸಾಮ್ । ಯೇ ಹತಾ ಭರ್ಗಮಾಶ್ರಿತ್ಯ ತ್ವರ್ಜುನೇನ ರಣಾಜಿರೇ ।। 29 ।।
ದೈತ್ಯ ಸಂಹ್ಲಾದನ ಮಕ್ಕಳೇ ನಿವಾತಕವಚರು. ಅವರು ಸರ್ವದೇವತೆಗಳಿಗೂ, ಗಂಧರ್ವ-ಉರಗ-ರಾಕ್ಷಸರಿಗೂ ಅವಧ್ಯರಾಗಿದ್ದರು. ಈಶ್ವರನ ಸಹಾಯದಿಂದ ಅರ್ಜುನನು ರಣಾಂಗಣದಲ್ಲಿ ಅವರನ್ನು ಸಂಹರಿಸಿದನು.
ಷಟ್ಕನ್ಯಾ ಜನಯಾಮಾಸ ತಾಮ್ರಾ ಮಾರೀಚಬೀಜತಃ । ಶುಕೀ ಶ್ಯೇನೀ ಚ ಭಾಸೀ ಚ ಸುಗ್ರೀವೀ ಗೃಧ್ರಿಕಾ ಶುಚಿಃ ।। 30 ।। ಶುಕೀ ಶುಕಾನುಲೂಕಾಂಶ್ಚ ಜನಯಾಮಾಸ ಧರ್ಮತಃ । ಶ್ಯೇನೀ ಶ್ಯೇನಾಂಸ್ತಥಾ ಭಾಸೀ ಕುರರಾನಪ್ಯಜೀಜನತ್ ।। 31 ।। ಗೃಧ್ರೀ ಗೃಧ್ರಾನ್ಕಪೋತಾಂಶ್ಚ ಪಾರಾವತವಿಹಂಗಮಾನ್ । ಹಂಸಸಾರಸಕ್ರೌಂಚಾಂಶ್ಚ ಪ್ಲವಾಂಚ್ಛುಚಿರಜೀಜನತ್ ।। 32 ।। ಅಜಾಶ್ವಮೇಷೋಷ್ಟ್ರಖರಾನ್ ಸುಗ್ರೀವೀ ಚಾಪ್ಯಜೀಜನತ್ । ಏಷ ತಾಮ್ರಾನ್ವಯಃ ಪ್ರೋಕ್ತೋ ವಿನತಾಯಾಂ ನಿಬೋಧತ ।। 33 ।।
ಮಾರೀಚ ಕಶ್ಯಪನಿಂದ ತಾಮ್ರೆಯು ಆರು ಕನ್ಯೆಯರನ್ನು ಪಡೆದಳು: ಶುಕೀ, ಶ್ಯೇನೀ, ಭಾಸೀ, ಸುಗ್ರೀವೀ, ಗೃಧ್ರಿಕಾ ಮತ್ತು ಶುಚಿ. ಶುಕಿಯು ಧರ್ಮಪೂರ್ವಕವಾಗಿ ಗಿಳಿಗಳನ್ನೂ, ಗೂಬೆಗಳನ್ನೂ ಹುಟ್ಟಿಸಿದಳು. ಶ್ಯೇನಿಯು ಗಿಡುಗಗಳನ್ನೂ, ಭಾಸಿಯು ಟಿಟ್ಟಿಭಗಳನ್ನೂ ಪಡೆದರು. ಗೃಧ್ರಿಗೆ ಹದ್ದುಗಳೂ, ಕಪೋತಗಳೂ, ಪಾರಾವತಗಳೂ ಹುಟ್ಟಿದವು. ಹಂಸ, ಸಾರಸ, ಮತ್ತು ಕ್ರೌಂಚಗಳು ಶುಚಿಯಲ್ಲಿ ಹುಟ್ಟಿದವು. ಸುಗ್ರೀವಿಯು ಆಡು, ಕುದುರೆ, ಟಗರು, ಒಂಟೆ ಮತ್ತು ಕತ್ತೆಗಳನ್ನು ಹೆತ್ತಳು. ಇದೋ ತಾಮ್ರೆಯ ವಂಶವನ್ನು ಹೇಳಿದೆ. ಇನ್ನು ವಿನತೆಯಲ್ಲಿ ಹುಟ್ಟಿದವರ ಕುರಿತು ಕೇಳಿರಿ.
ಗರುಡಃ ಪತತಾಂ ನಾಥೋ ಅರುಣಶ್ಚ[2] ಪತತ್ರಿಣಾಮ್ । ಸೌದಾಮನೀ ತಥಾ ಕನ್ಯಾ ಯೇಯಂ ನಭಸಿ ವಿಶ್ರುತಾ ।। 34 ।। ಸಂಪಾತಿಶ್ಚ ಜಟಾಯುಶ್ಚ ಅರುಣಸ್ಯ ಸುತಾವುಭೌ । ಸಂಪಾತಿಪುತ್ರೋ ಬಭ್ರುಶ್ಚ ಶೀಘ್ರಗಶ್ಚಾಪಿ ವಿಶ್ರುತಃ ।। 35 ।। ಜಟಾಯುಷಃ ಕರ್ಣಿಕಾರಃ ಶತಗಾಮೀ ಚ ವಿಶ್ರುತೌ । ಸಾರಸೋ ರಜ್ಜುವಾಲಶ್ಚ ಭೇರುಂಡಶ್ಚಾಪಿ ತತ್ಸುತಾಃ ।। 36 ।। ತೇಷಾಮನಂತಮಭವತ್ಪಕ್ಷಿಣಾಂ ಪುತ್ರಪೌತ್ರಕಮ್ ।
ಪಕ್ಷಿಗಳಲ್ಲಿ ಶ್ರೇಷ್ಠನಾದ ಗರುಡನೂ, ಬಾಣದಂತೆ ಮಹಾವೇಗದಿಂದ ಹಾರುವುದರಲ್ಲಿ ಗಟ್ಟಿಗನಾದ ವರುಣನೂ, ಅಂತರಿಕ್ಷದಲ್ಲಿ ಬೆಳಗುವ ಸೌದಾಮನೀ (ಮಿಂಚು) ಎಂಬ ಕನ್ಯೆಯೂ ವಿನತೆಯಲ್ಲಿ ಹುಟ್ಟಿದರು. ಸಂಪಾತಿ ಮತ್ತು ಜಟಾಯು ಅರುಣನ ಮಕ್ಕಳು. ಸಂಪಾತಿ ಪುತ್ರ ಬಭ್ರುವು ಅತಿ ಶೀಘ್ರಗಾಮಿಯೆಂದು ಪ್ರಸಿದ್ಧನು. ಜಟಾಯುವಿನ ಮಕ್ಕಳಲ್ಲಿ ಕರ್ಣಿಕಾರ ಮತ್ತು ಶತಗಾಮಿಗಳು ಪ್ರಸಿದ್ಧರು. ಸಾರಸ, ರಜ್ಜುವಾಲ ಮತ್ತು ಭೇರುಂಡ – ಇವರೂ ಅವನ ಮಕ್ಕಳೇ. ಆ ಪಕ್ಷಿಗಳ ಪುತ್ರ-ಪೌತ್ರ ಸಂತತಿಯು ಅನಂತವಾಯಿತು.
ಸುರಸಾಯಾಃ ಸಹಸ್ರಂ ತು ಸರ್ಪಾಣಾಮಭವತ್ಪುರಾ ।। 37 ।। ಸಹಸ್ರಶಿರಸಾಂ ಕದ್ರೂಃ ಸಹಸ್ರಂ ಚಾಪಿ ಸುವ್ರತ । ಪ್ರಧಾನಾಸ್ತೇಷು ವಿಖ್ಯಾತಾಃ ಷಡ್ವಿಂಶತಿರರಿಂದಮ ।। 38 ।। ಶೇಷವಾಸುಕಿಕರ್ಕೋಟಶಂಖೈರಾವತಕಂಬಲಾಃ । ಧನಂಜಯಮಹಾನೀಲಪದ್ಮಾಶ್ವತರತಕ್ಷಕಾಃ ।। 39 ।। ಏಲಾಪತ್ರಮಹಾಪದ್ಮಧೃತರಾಷ್ಟ್ರಬಲಾಹಕಾಃ । ಶಂಖಪಾಲ ಮಹಾಶಂಖಪುಷ್ಪದಂಷ್ಟ್ರಶುಭಾನನಾಃ ।। 40 ।। ಶಂಕುರೋಮಾ ಚ ಬಹುಲೋ ವಾಮನಃ ಪಾಣಿನಸ್ತಥಾ । ಕಪಿಲೋ ದುರ್ಮುಖಶ್ಚಾಪಿ ಪತಂಜಲಿರಿತಿ ಸ್ಮೃತಾಃ ।। 41 ।। ಏಷಾಮನಂತಮಭವತ್ಸರ್ವೇಷಾಂ ಪುತ್ರಪೌತ್ರಕಮ್ । ಪ್ರಾಯಶೋ ಯತ್ಪುರಾ ದಗ್ಧಂ ಜನಮೇಜಯಮಂದಿರೇ ।। 42 ।।
ಸುರಸೆಗೆ ಹಿಂದೆ ಸಹಸ್ರಾರು ಸರ್ಪಗಳು ಹುಟ್ಟಿದವು. ಸುವ್ರತ! ಕದ್ರುವು ಸಾವಿರ ಹೆಡೆಗಳಿರುವ ಸಹಸ್ರ ಸರ್ಪಗಳನ್ನು ಹೆತ್ತಳು. ಅವುಗಳಲ್ಲಿ ಇಪ್ಪತ್ತಾರು ಮುಖ್ಯವಾದವರು: ಶೇಷ, ವಾಸುಕಿ, ಕರ್ಕೋಟಕ, ಶಂಖ, ಐರಾವತ, ಕಂಬಲ, ಧನಂಜಯ, ಮಹಾನೀಲ, ಪದ್ಮ, ಅಶ್ವತರ, ತಕ್ಷಕ, ಏಲಾಪತ್ರ, ಮಹಾಪದ್ಮ, ಧೃತರಾಷ್ಟ್ರ, ಬಲಾಹಕ, ಶಂಖಪಾಲ, ಮಹಾಶಂಖ, ಪುಷ್ಟದಂಷ್ಟ್ರ, ಶುಭಾನನ, ಶಂಕುರೋಮ, ಬಹುಲ, ವಾಮನ, ಪಾಣಿನ, ಕಪಿಲ, ದುರ್ಮುಖ ಮತ್ತು ಪತಂಜಲಿ. ಇವರೆಲ್ಲರ ಪುತ್ರ-ಪೌತ್ರರು ಲೆಕ್ಕವಿಲ್ಲದಷ್ಟಾದರು. ಹಿಂದೆ ಜನಮೇಜಯನ ಮಂದಿರದಲ್ಲಿ ಇವರು ಬಹುಮಟ್ಟಿಗೆ ಸುಟ್ಟುಹೋದರು.
ರಕ್ಷೋಗಣಂ ಕ್ರೋಧವಶಾ ಸ್ವನಾಮಾನಮಜೀಜನತ್ । ದಂಷ್ಟ್ರಿಣಾಂ ನಿಯುತಂ ತೇಷಾಂ ಭೀಮಸೇನಾದಗಾತ್ಕ್ಷಯಮ್ ।। 43 ।।
ಕ್ರೋಧವಶೆಯು ತನ್ನ ಹೆಸರಿಗೆ ತಕ್ಕಂತೆ ಇರುವ ಕೋಪಿಷ್ಠರಾದ ರಾಕ್ಷಸಗಣವನ್ನು ಹೆತ್ತಳು. ಲಕ್ಷಗಟ್ಟಲೆ ಇದ್ದ ಅವರನ್ನು ಭೀಮಸೇನನು ನಾಶಮಾಡಿದನು.
ರುದ್ರಾಣಾಂ ಚ ಗಣಂ ತದ್ವದ್ಗೋಮಹಿಷ್ಯೋ ವರಾಂಗನಾಃ । ಸುರಭಿರ್ಜನಯಾಮಾಸ ಕಶ್ಯಪಾತ್ಸಂಯತವ್ರತಾ ।। 44 ।। ಮುನಿರ್ಮುನೀನಾಂ ಚ ಗಣಂ ಗಣಮಪ್ಸರಸಾಂ ತಥಾ । ತಥಾ ಕಿನ್ನರಗಂಧರ್ವಾನರಿಷ್ಟಾಽಜನಯದ್ಬಹೂನ್ ।। 45 ।। ತೃಣವೃಕ್ಷಲತಾಗುಲ್ಮಮಿರಾ ಸರ್ವಮಜೀಜನತ್ । ವಿಶ್ವಾ ತು ಯಕ್ಷರಕ್ಷಾಂಸಿ ಜನಯಾಮಾಸ ಕೋಟಿಶಃ ।। 46 ।। ತತ ಏಕೋನಪಂಚಾಶನ್ಮರುತಃ ಕಶ್ಯಪಾದ್ದಿತಿಃ । ಜನಯಾಮಾಸ ಧರ್ಮಜ್ಞಾನ್ಸರ್ವಾನಮರವಲ್ಲಭಾನ್ ।। 47 ।।
ಸಂಯಮವ್ರತೆ ಸುರಭಿಯು ಕಶ್ಯಪನಿಂದ ರುದ್ರರ ಗಣವನ್ನೂ, ಹಸುಗಳನ್ನೂ, ಮತ್ತು ವರಾಂಗನೆಯರನ್ನೂ ಹುಟ್ಟಿಸಿದಳು. ಮುನಿಯು ಮುನಿಗಳ ಗಣವನ್ನೂ, ಅಪ್ಸರೆಯರ ಸಮುದಾಯವನ್ನೂ ಹೆತ್ತಳು. ಹಾಗೆಯೇ ಅರಿಷ್ಟೆಯಿಂದ ಅಸಂಖ್ಯಾತ ಕಿನ್ನರರೂ, ಗಂಧರ್ವರೂ ಹುಟ್ಟಿದರು. ಹುಲ್ಲು, ಮರ, ಬಳ್ಳಿ, ಪೊದೆಗಳೆಲ್ಲವೂ ಇರೆಯಿಂದ ಹುಟ್ಟಿದವು. ವಿಶ್ವೆಯಾದರೋ ಕೋಟಿಗಟ್ಟಲೆ ಯಕ್ಷರನ್ನೂ, ರಾಕ್ಷಸರನ್ನೂ ಪ್ರಸವಿಸಿದಳು. ನಂತರ ದಿತಿಯು ಕಶ್ಯಪನಿಂದ ಧರ್ಮಜ್ಞರೂ, ದೇವವಲ್ಲಭರೂ ಆದ 49 ಮರುತರ ಗಣವನ್ನು ಪಡೆದಳು.”
ಇತಿ ಶ್ರೀಮಾತ್ಸ್ಯೇ ಮಹಾಪುರಾಣೇ ಆದಿಸರ್ಗೇ ಕಶ್ಯಪಾನ್ವಯೋನಾಮ ಷಷ್ಠೋಽಧ್ಯಾಯಃ ।।
ಇದು ಶ್ರೀಮತ್ಸ್ಯಮಹಾಪುರಾಣದಲ್ಲಿ ಆದಿಸರ್ಗದಲ್ಲಿ ಕಶ್ಯಪಾನ್ವಯ ಎಂಬ ಆರನೇ ಅಧ್ಯಾಯವು.
[1] ಇದು ಸೂತಪುರಾಣಿಕನು ಮುನಿಗಳಿಗೆ ಹೇಳಿದ ವಿಷಯವಾದ್ದರಿಂದ ಇಲ್ಲಿ ರಾಜೇಂದ್ರ ಎಂಬ ಪದವು ಸರಿಯಾಗಿಲ್ಲ ಎಂದು ಎನಿಸುತ್ತದೆ. ಅಥವಾ ಈ ಕಶ್ಯಪವಂಶದ ವರ್ಣನೆಯನ್ನು ಮತ್ಸ್ಯರೂಪೀ ವಿಷ್ಣುವು ವೈವಸ್ವತ ಮನುವಿಗೆ ಹೇಳಿದ್ದಾದರೆ ಈ ಪದವು ಸರಿಯಾಗುತ್ತಿತ್ತು.
[2] ಅರಮನೆ ಪ್ರಕಾಶನದಲ್ಲಿ ವರುಣಶ್ಚ ಎಂದಿದೆ. ನಾನು ಪಾಠಾಂತರವಿರುವ ಅರುಣಶ್ಚ ಎಂದೇ ತೆಗೆದುಕೊಂಡಿದ್ದೇನೆ. ಏಕೆಂದರೆ, ಮಹಾಭಾರತದಲ್ಲಿ ಮತ್ತು ಇತರ ಪುರಾಣಗಳಲ್ಲಿ ಅರುಣಶ್ಚ ಎಂದೇ ಇದೆ. ಅರಮನೆ ಪ್ರಕಾಶನದಲ್ಲಿ ಮುಂದೆ 35ನೇ ಶ್ಲೋಕದಲ್ಲಿ ಅರುಣಸ್ಯ ಸುತಾವುಭೌ ಎಂದು ಬಂದಿರುವಿದರಿಂದಲೂ ಈ ಶ್ಲೋಕದಲ್ಲಿ ವರುಣಸ್ಯದ ಬದಲಿಗೆ ಅರುಣಸ್ಯ ಎನ್ನುವುದೇ ಸರಿಯೆಂದು ಪರಿಗಣಿಸಿದ್ದೇನೆ.