ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 5: ವಸುರುದ್ರಾನ್ವವಾಯಃ

 

ಋಷಯ ಊಚುಃ । ದೇವಾನಾಂ ದಾನವಾನಾಂ ಚ ಗಂಧರ್ವೋರಗಪಕ್ಷಿಣಾಮ್ । ಉತ್ಪತ್ತಿಂ ವಿಸ್ತರೇಣೈವ ಸೂತ ಬ್ರೂಹಿ ಯಥಾತಥಮ್ ।। 1 ।।

ಋಷಿಗಳು ಹೇಳಿದರು: “ಸೂತ! ದೇವತೆಗಳು, ದಾನವರು, ಗಂಧರ್ವರು, ಉರುಗರು ಮತ್ತು ರಾಕ್ಷಸರ ಉತ್ಪತ್ತಿಯನ್ನು ಯಥಾವತ್ತಾಗಿ ವಿಸ್ತಾರವಾಗಿ ಹೇಳು.”

ಸೂತ ಉವಾಚ । ಸಂಕಲ್ಪಾದ್ದರ್ಶನಾತ್ಸ್ಪರ್ಶಾತ್ಪೂರ್ವೇಷಾಂ ಸೃಷ್ಟಿರುಚ್ಯತೇ । ದಕ್ಷಾತ್ಪ್ರಾಚೇತಸಾದೂರ್ಧ್ವಂ ಸೃಷ್ಟಿರ್ಮೈಥುನಸಂಭವಾ ।। 2 ।। ಪ್ರಜಾಃ ಸೃಜೇತಿ ವ್ಯಾದಿಷ್ಟಃ ಪೂರ್ವಂ ದಕ್ಷಃ ಸ್ವಯಂಭುವಾ । ಯಥಾ ಸಸರ್ಜ ಚೈವಾದೌ ತಥೈವ ಶೃಣುತ ದ್ವಿಜಾಃ ।। 3 ।। ಯದಾ ತು ಸೃಜತಸ್ತಸ್ಯ ದೇವರ್ಷಿಗಣಪನ್ನಗಾನ್ । ನ ವೃದ್ಧಿಮಗಮಲ್ಲೋಕಸ್ತದಾ ಮೈಥುನಯೋಗತಃ । ದಕ್ಷಃ ಪುತ್ರಸಹಸ್ರಾಣಿ ಪಾಂಚಜನ್ಯಾಮಜೀಜನತ್ ।। 4 ।। ತಾಂಸ್ತು ದೃಷ್ಟ್ವಾ ಮಹಾಭಾಗಃ ಸಿಸೃಕ್ಷುರ್ವಿವಿಧಾಃ ಪ್ರಜಾಃ । ನಾರದಃ ಪ್ರಾಹ ಹರ್ಯಶ್ವಾನ್ ದಕ್ಷಪುತ್ರಾನ್ಸಮಾಗತಾನ್ ।। 5 ।। ಭುವಃ ಪ್ರಮಾಣಂ ಸರ್ವತ್ರ ಜ್ಞಾತ್ವೋರ್ಧ್ವಮಧ ಏವ ಚ । ತತಃ ಸೃಷ್ಟಿಂ ವಿಶೇಷೇಣ ಕುರುಧ್ವಮೃಷಿಸತ್ತಮಾಃ ।। 6 ।। ತೇ ತು ತದ್ವಚನಂ ಶ್ರುತ್ವಾ ಪ್ರಯಾತಾಃ ಸರ್ವತೋ ದಿಶಮ್ । ಅದ್ಯಾಪಿ ನ ನಿವರ್ತಂತೇ ಸಮುದ್ರಾದಿವ ಸಿಂಧವಃ ।। 7 ।।

ಸೂತನು ಹೇಳಿದನು: “ಹಿಂದಿನವರ ಸೃಷ್ಟಿಕಾರ್ಯವು ಸಂಕಲ್ಪದಿಂದಲೂ, ದರ್ಶನದಿಂದಲೂ, ಸ್ಪರ್ಶದಿಂದಲೂ ನಡೆಯುತ್ತಿತ್ತು ಎಂದು ಹೇಳುತ್ತಾರೆ. ಪ್ರಚೇತಸರ ಪುತ್ರ ದಕ್ಷನಿಂದ ಈಚೆಗೆ ಅದು ಸ್ತ್ರೀ-ಪುರುಷರ ಮೈಥುನದಿಂದ ಆಗುತ್ತದೆ. ದ್ವಿಜರೇ! ಸ್ವಯಂಭು ಬ್ರಹ್ಮನು “ಪ್ರಜೆಗಳನ್ನು ಸೃಷ್ಟಿಸು!” ಎಂದು ಆದೇಶವನ್ನಿತ್ತಾಗ ದಕ್ಷನು ಹೇಗೆ ಸೃಷ್ಟಿಸಿದನು ಎನ್ನುವುದನ್ನು ಹೇಳುತ್ತೇನೆ. ಕೇಳಿ. ಅವನು ದೇವರ್ಷಿಗಣಗಳನ್ನು ಮತ್ತು ಪನ್ನಗಗಳನ್ನು ಸೃಷ್ಟಿಸಿದರೂ ಲೋಕವು ವೃದ್ಧಿಯಾಗದಿರಲು ದಕ್ಷನು ಪಾಂಚಜನಿಯಲ್ಲಿ ಮೈಥುನಯೋಗದಿಂದ ಸಾವಿರ ಮಕ್ಕಳನ್ನು ಪಡೆದನು. ಅವರನ್ನು ನೋಡಿ ಮಹಾಭಾಗ ದಕ್ಷನು ವಿವಿಧ ಪ್ರಜೆಗಳನ್ನು ಸೃಷ್ಟಿಸಿ ಎನ್ನಲು ಒಟ್ಟಾಗಿ ಸೇರಿದ್ದ ದಕ್ಷಪುತ್ರರಾದ ಹರ್ಯಶ್ವರಿಗೆ ನಾರದನು “ಋಷಿಸತ್ತಮರೇ! ಮೇಲೂ, ಕೆಳಗೂ, ಎಲ್ಲಕಡೆಗೂ ಭೂಮಿಯ ಪ್ರಮಾಣವನ್ನು ಅರಿತು ನಂತರ ಸೃಷ್ಟಿಯನ್ನು ಮಾಡಿ” ಎಂದನು. ಅವನ ಮಾತನ್ನು ಕೇಳಿ ಅವರು ಎಲ್ಲ ದಿಕ್ಕುಗಳಲ್ಲಿ ಹೊರಟುಹೋದರು. ಸಮುದ್ರವನ್ನು ಸೇರಿದ ನದಿಗಳಂತೆ ಇಂದಿಗೂ ಅವರು ಹಿಂದಿರುಗಲಿಲ್ಲ.

ಹರ್ಯಶ್ವೇಷು ಪ್ರಣಷ್ಟೇಷು ಪುನರ್ದಕ್ಷಃ ಪ್ರಜಾಪತಿಃ । ವೈರಿಣ್ಯಾಮೇವ ಪುತ್ರಾಣಾಂ ಸಹಸ್ರಮಸೃಜತ್ಪ್ರಭುಃ ।। 8 ।। ಶಬಲಾ ನಾಮ ತೇ ವಿಪ್ರಾಃ ಸಮೇತಾಃ ಸೃಷ್ಟಿಹೇತವಃ । ನಾರದೋಽನುಗತಾನ್ಪ್ರಾಹ ಪುನಸ್ತಾನ್ಪೂರ್ವವತ್ಸತಾನ್ ।। 9 ।। ಭುವಃ ಪ್ರಮಾಣಂ ಸರ್ವತ್ರ ಜ್ಞಾತ್ವಾ ಭ್ರಾತೄನಥೋ ಪುನಃ । ಆಗತ್ಯ ಚಾಥ ಸೃಷ್ಟಿಂ ಚ ಕರಿಷ್ಯಥ ವಿಶೇಷತಃ ।। 10 ।। ತೇಽಪಿ ತೇನೈವ ಮಾರ್ಗೇಣ ಜಗ್ಮುರ್ಭ್ರಾತೃಪಥಾ ತದಾ । ತತಃ ಪ್ರಭೃತಿ ನ ಭ್ರಾತುಃ ಕನೀಯಾನ್ಮಾರ್ಗಮಿಚ್ಛತಿ । ಅನ್ವಿಷ್ಯನ್ ದುಃಖಮಾಪ್ನೋತಿ ತೇನ ತತ್ಪರಿವರ್ಜಯೇತ್ ।। 11 ।।

ಹರ್ಯಶ್ವರು ನಷ್ಟರಾಗಲು ಪ್ರಭು ದಕ್ಷ ಪ್ರಜಾಪತಿಯು ಪುನಃ ವೈರಿಣಿಯಲ್ಲಿ ಸಹಸ್ರ ಪುತ್ರರನ್ನು ಹುಟ್ಟಿಸಿದನು. ಶಬಲಾ ಎಂಬ ಹೆಸರಿನ ಆ ವಿಪ್ರರು ಸೃಷ್ಟಿಯನ್ನು ಮಾಡಲು ಸೇರಿಕೊಂಡಿದ್ದಾಗ ಅವರ ಬಳಿಹೋಗಿ ನಾರದನು “ಭೂಮಿಯ ಎಲ್ಲಕಡೆಯ ಪ್ರಮಾಣವನ್ನು ತಿಳಿದುಕೊಂಡು, ನಿಮ್ಮ ಸಹೋದರರನ್ನು ಹುಡುಕಿ, ಪುನಃ ಬಂದು ವಿಶೇಷವಾದ ಸೃಷ್ಟಿಯನ್ನು ಮಾಡಿ” ಎಂದು ಹಿಂದೆ ಹೇಳಿದುದನ್ನೇ ಪುನಃ ಅವರಿಗೆ ಹೇಳಿದನು. ಅವರೂ ಕೂಡ ತಮ್ಮ ಅಣ್ಣಂದಿರ ಮಾರ್ಗದಲ್ಲಿಯೇ ಹೋದರು. ಅಂದಿನಿಂದ ಅಣ್ಣನನ್ನು ಹುಡುಕಿಕೊಂಡು ಅವನ ಮಾರ್ಗದಲ್ಲಿ ತಮ್ಮಂದಿರು ಹೋಗುವುದಿಲ್ಲ. ಅದರಿಂದ ದುಃಖವೇ ಉಂಟಾಗುವುದರಿಂದ ಹಾಗೆ ಮಾಡುವುದನ್ನು ಬಿಟ್ಟುಬಿಡಬೇಕು.

ತತಸ್ತೇಷು ವಿನಷ್ಟೇಷು ಷಷ್ಟಿಂ ಕನ್ಯಾಃ ಪ್ರಜಾಪತಿಃ । ವೈರಿಣ್ಯಾಂ ಜನಯಾಮಾಸ ದಕ್ಷಃ ಪ್ರಾಚೇತಸಸ್ತಥಾ ।। 12 ।। ಪ್ರಾದಾತ್ಸ ದಶ ಧರ್ಮಾಯ ಕಶ್ಯಪಾಯ ತ್ರಯೋದಶ । ಸಪ್ತವಿಂಶತಿ ಸೋಮಾಯ ಚತಸ್ರೋಽರಿಷ್ಟನೇಮಯೇ ।। 13 ।। ದ್ವೇ ಚೈವ ಭೃಗುಪುತ್ರಾಯ ದ್ವೇ ಕೃಶಾಶ್ವಾಯ ಧೀಮತೇ । ದ್ವೇ ಚೈವಾಂಗಿರಸೇ ತದ್ವತ್ತಾಸಾಂ ನಾಮಾನಿ ವಿಸ್ತರಾತ್ ।। 14 ।। ಶೃಣುಧ್ವಂ ದೇವಮಾತೄಣಾಂ ಪ್ರಜಾವಿಸ್ತಾರಮಾದಿತಃ । ಮರುತ್ವತೀ ವಸುರ್ಯಾಮೀ ಲಂಬಾ ಭಾನುರರುಂಧತೀ ।। 15 ।। ಸಂಕಲ್ಪಾ ಚ ಮುಹೂರ್ತಾ ಚ ಸಾಧ್ಯಾ ವಿಶ್ವಾ ಚ ಭಾಮಿನೀ । ಧರ್ಮಪತ್ನ್ಯಃ ಸಮಾಖ್ಯಾತಾಸ್ತಾಸಾಂ ಪುತ್ರಾನ್ನಿಬೋಧತ ।। 16 ।।

ಅವರೂ ಕೂಡ ನಾಶರಾಗಲು ಪ್ರಜಾಪತಿ ಪ್ರಾಚೇತಸ ದಕ್ಷನು ವೈರಿಣಿಯಲ್ಲಿ 60 ಕನ್ಯೆಯರನ್ನು ಹುಟ್ಟಿಸಿದನು. ಅವರಲ್ಲಿ ಹತ್ತುಮಂದಿಯನ್ನು ಧರ್ಮನಿಗೆ, ಹದಿಮೂರನ್ನು ಕಶ್ಯಪನಿಗೆ, ಇಪ್ಪತ್ತೇಳನ್ನು ಸೋಮನಿಗೆ, ಅರಿಷ್ಟನೇಮಿಗೆ ನಾಲ್ಕು, ಇಬ್ಬರನ್ನು ಭೃಗುಪುತ್ರನಿಗೆ, ಇಬ್ಬರನ್ನು ಕೃಶಾಶ್ವನಿಗೆ, ಇಬ್ಬರನ್ನು ಅಂಗಿರಸನಿಗೆ ಕೊಟ್ಟನು. ಅವರ ಹೆಸರುಗಳನ್ನು ವಿಸ್ತಾರವಾಗಿ ಕೇಳಿರಿ. ಮೊದಲು ದೇವಮಾತೆಯರು ಮತ್ತು ಅವರ ಮಕ್ಕಳ ಕುರಿತು ವಿಸ್ತಾರವಾಗಿ ಕೇಳಿ. ಮರುತ್ವತೀ, ವಸು, ಯಾಮೀ, ಲಂಬಾ, ಭಾನು, ಅರುಂಧತೀ, ಸಂಕಲ್ಪಾ, ಮುಹೂರ್ತಾ, ಸಾಧ್ಯಾ, ವಿಶ್ವಾ ಮತ್ತು ಭಾಮಿನೀ – ಇವರು ಧರ್ಮನ ಪತ್ನಿಯರು. ಈಗ ಅವರ ಪುತ್ರರ ಕುರಿತು ಹೇಳುತ್ತೇನೆ. ಕೇಳಿ.

ವಿಶ್ವೇ ದೇವಾಸ್ತು ವಿಶ್ವಾಯಾ ಸಾಧ್ಯಾ ಸಾಧ್ಯಾನಜೀಜನತ್ । ಮರುತ್ವತ್ಯಾಂ ಮರುತ್ವಂತೋ ವಸೋಸ್ತು ವಸವಸ್ತಥಾ ।। 17 ।। ಭಾನೋಸ್ತು ಭಾನವಸ್ತದ್ವನ್ಮುಹೂರ್ತಾಯಾಂ ಮುಹೂರ್ತಕಾಃ । ಲಂಬಾಯಾಂ ಘೋಷನಾಮಾನೋ ನಾಗವೀಥೀ ತು ಯಾಮಿಜಾ ।। 18 ।। ಪೃಥಿವೀತಲಸಂಭೂತಮರುಂಧತ್ಯಾಮಜಾಯತ । ಸಂಕಲ್ಪಾಯಾಸ್ತು ಸಂಕಲ್ಪೋ ವಸುಸೃಷ್ಟಿಂ ನಿಬೋಧತ ।। 19 ।। ಜ್ಯೋತಿಷ್ಮಂತಸ್ತು ಯೇ ದೇವಾ ವ್ಯಾಪಕಾಃ ಸರ್ವತೋ ದಿಶಮ್ । ವಸವಸ್ತೇ ಸಮಾಖ್ಯಾತಾಸ್ತೇಷಾಂ ಸರ್ಗಂ ನಿಬೋಧತ ।। 20 ।।

ವಿಶ್ವೆಯಲ್ಲಿ ವಿಶ್ವೇದೇವರೂ ಮತ್ತು ಸಾಧ್ಯೆಯಲ್ಲಿ ಸಾಧ್ಯರೂ ಹುಟ್ಟಿದರು. ಮರುತ್ವತಿಯಲ್ಲಿ ಮರುತ್ವಂತರು ಜನಿಸಿದರು. ವಸುವಿನಿಂದ ವಸುಗಳೂ, ಭಾನುವಿನಿಂದ ಭಾನುಗಳೂ, ಮುಹೂರ್ತೆಯಲ್ಲಿ ಮುಹೂರ್ತಕರೂ, ಲಂಬೆಯಲ್ಲಿ ಘೋಷರೆನ್ನುವವರೂ ಹುಟ್ಟಿದರು. ನಾಗವೀಥಿಯು ಯಾಮಿಯ ಮಗಳು. ಭೂಮಿಯ ಮೇಲೆ ಹುಟ್ಟಿರುವುದೆಲ್ಲ ಅರುಂಧತಿಯಿಂದ ಉತ್ಪನ್ನವಾದುದು. ಸಂಕಲ್ಪೆಯಿಂದ ಸಂಕಲ್ಪನು ಜನಿಸಿದನು. ಇನ್ನು ವಸುಸೃಷ್ಟಿಯನ್ನು ಕೇಳಿರಿ. ಜ್ಯೋತಿಷ್ಮಂತರೆಂದು ಸರ್ವತಃ ದಿಕ್ಕುಗಳಲ್ಲಿ ಯಾವ ದೇವತೆಗಳು ವ್ಯಾಪಕರಾಗಿರುವರೋ ಆ ವಸುಗಳ ಸೃಷ್ಟಿಯನ್ನು ಕೇಳಿ.

ಆಪೋ ಧ್ರುವಶ್ಚ ಸೋಮಶ್ಚ ಧರಶ್ಚೈವಾನಿಲೋಽನಲಃ । ಪ್ರತ್ಯೂಷಶ್ಚ ಪ್ರಭಾಸಶ್ಚ ವಸವೋಽಷ್ಟೌ ಪ್ರಕೀರ್ತಿತಾಃ ।। 21 ।। ಆಪಸ್ಯ ಪುತ್ರಾಶ್ಚತ್ವಾರಃ ಶಾಂತೋ ವೈ ದಂಡ ಏವ ಚ । ಶಾಂಬೋಽಥ ಮಣಿವಕ್ತ್ರಶ್ಚ ಯಜ್ಞರಕ್ಷಾಧಿಕಾರಿಣಃ ।। 22 ।। ಧ್ರುವಸ್ಯ ಕಾಲಃ ಪುತ್ರಸ್ತು ವರ್ಚಾಃ ಸೋಮಾದಜಾಯತ । ದ್ರವಿಣೋ ಹವ್ಯವಾಹಶ್ಚ ಧರಪುತ್ರಾವುಭೌ ಸ್ಮೃತೌ ।। 23 ।। ಕಲ್ಯಾಣಿನ್ಯಾಂ ತತಃ ಪ್ರಾಣೋ ರಮಣಃ ಶಿಶಿರೋಽಪಿ ಚ । ಮನೋಹರಾ ಧರಾತ್ಪುತ್ರಾನವಾಪಾಥ ಹರೇಃ ಸುತಾ ।। 24 ।। ಶಿವಾ ಮನೋಜವಂ ಪುತ್ರಮವಿಜ್ಞಾತಗತಿಂ ತಥಾ । ಅವಾಪ ಚಾನಲಾತ್ಪುತ್ರಾವಗ್ನಿಪ್ರಾಯಗುಣೌ ಪುನಃ ।। 25 ।। ಅಗ್ನಿಪುತ್ರಃ ಕುಮಾರಸ್ತು ಶರಸ್ತಂಬೇ ವ್ಯಜಾಯತ । ತಸ್ಯ ಶಾಖೋ ವಿಶಾಖಶ್ಚ ನೈಗಮೇಯಶ್ಚ ಪೃಷ್ಠಜಾಃ ।। 26 ।। ಅಪತ್ಯಂ ಕೃತ್ತಿಕಾನಾಂ ತು ಕಾರ್ತಿಕೇಯಸ್ತತಃ ಸ್ಮೃತಃ । ಪ್ರತ್ಯೂಷಸ ಋಷಿಃ ಪುತ್ರೋ ವಿಭುರ್ನಾಮ್ನಾಥ ದೇವಲಃ । ವಿಶ್ವಕರ್ಮಾ ಪ್ರಭಾಸಸ್ಯ ಪುತ್ರಃ ಶಿಲ್ಪೀ ಪ್ರಜಾಪತಿಃ ।। 27 ।। ಪ್ರಾಸಾದಭವನೋದ್ಯಾನಪ್ರತಿಮಾಭೂಷಣಾದಿಷು । ತಡಾಗಾರಾಮಕೂಪೇಷು ಸ್ಮೃತಃ ಸೋಽಮರವರ್ಧಕಿಃ ।। 28 ।।

ಆಪ, ಧ್ರುವ, ಸೋಮ, ಧರ, ಅನಿಲ, ಅನಲ, ಪ್ರಯೂಷ, ಮತ್ತು ಪ್ರಭಾಸ ಇವರನ್ನು ಅಷ್ಟವಸುಗಳೆಂದು ಕರೆಯುತ್ತಾರೆ. ಆಪನ ಪುತ್ರರು ನಾಲ್ಕು: ಶಾತ, ದಂಡ, ಶಾಂಭ ಮತ್ತು ಮಣಿವಕ್ತ್ರ. ಇವರು ಯಜ್ಞದ ರಕ್ಷಣಾಧಿಕಾರಿಗಳು. ಧ್ರುವನ ಮಗನು ಕಾಲನು. ವರ್ಚನು ಸೋಮನಿಂದ ಹುಟ್ಟಿದನು. ದ್ರವಿಣ ಮತ್ತು ಹವ್ಯವಾಹರು ಕಲ್ಯಾಣಿಯಲ್ಲಿ ಹುಟ್ಟಿದ ಧರನ ಪುತ್ರರು. ಹರಿಯ ಮಗಳು ಮನೋಹರೆಯಲ್ಲಿ ಧರನು ಪ್ರಾಣ, ರಮಣ ಮತ್ತು ಶಿಶಿರರೆಂಬ ಮಕ್ಕಳನ್ನು ಪಡೆದನು. ಅನಲನ ಪತ್ನಿ ಶಿವೆಯು ಅಗ್ನಿಯಂತೆ ಪ್ರಕಾಶಮಾನರಾದ ಮನೋಜವ ಮತ್ತು ಅವಿಜ್ಞಾತಗತಿ ಎಂಬ ಪುತ್ರರನ್ನು ಪಡೆದಳು. ಅಗ್ನಿಪುತ್ರ ಕುಮಾರನಾದರೋ ಶರಸ್ತಂಬದಲ್ಲಿ ಜನಿಸಿದನು. ಅವನ ಹಿಂದೆಯೇ ಶಾಖ, ವಿಶಾಖ, ಮತ್ತು ನೈಗಮೇಯರು ಹುಟ್ಟಿದರು. ಕೃತ್ತಿಕೆಯರ ಸಾಕುಮಗನಾದ್ದರಿಂದ ಕುಮಾರನನ್ನು ಕಾರ್ತಿಕೇಯ ಎಂದೂ ಕರೆಯುತ್ತಾರೆ. ಪ್ರತ್ಯೂಷನ ಮಕ್ಕಳು ಋಷಿ, ವಿಭು ಮತ್ತು ದೇವಲ ಎನ್ನುವವರು. ಶಿಲ್ಪೀ ಪ್ರಜಾಪತಿ ವಿಶ್ವಕರ್ಮನು ಪ್ರಭಾಸನ ಮಗನು. ದೇವತೆಗಳ ಶಿಲ್ಪಿಯೆನಿಸಿದ ಅವನು ದೇವಾಲಯ, ಭವನ, ಉದ್ಯಾನ, ಪ್ರತಿಮೆಗಳು, ಭೂಷಣಗಳು, ಕೆರೆ, ಕೈದೋಟ ಮತ್ತು ಬಾವಿಗಳ ನಿರ್ಮಾಣಕಾರ್ಯದಲ್ಲಿ ಬಹು ಕುಶಲನು.

ಅಜೈಕಪಾದಹಿರ್ಬುಧ್ನ್ಯೋ ವಿರೂಪಾಕ್ಷೋಽಥ ರೈವತಃ । ಹರಶ್ಚ ಬಹುರೂಪಶ್ಚ ತ್ರ್ಯಂಬಕಶ್ಚ ಸುರೇಶ್ವರಃ ।। 29 ।। ಸಾವಿತ್ರಶ್ಚ ಜಯಂತಶ್ಚ ಪಿನಾಕೀ ಚಾಪರಾಜಿತಃ । ಏತೇ ರುದ್ರಾಃ ಸಮಾಖ್ಯಾತಾ ಏಕಾದಶ ಗಣೇಶ್ವರಾಃ ।। 30 ।। ಏತೇಷಾಂ ಮಾನಸಾನಾಂ ತು ತ್ರಿಶೂಲವರಧಾರಿಣಾಮ್ । ಕೋಟಯಶ್ಚತುರಶೀತಿಸ್ತತ್ಪುತ್ರಾಶ್ಚಾಕ್ಷಯಾ ಮತಾಃ ।। 31 ।। ದಿಕ್ಷು ಸರ್ವಾಸು ಯೇ ರಕ್ಷಾಂ ಪ್ರಕುರ್ವಂತಿ ಗಣೇಶ್ವರಾಃ । ಪುತ್ರಪೌತ್ರಸುತಾಶ್ಚೈತೇ ಸುರಭೀಗರ್ಭಸಂಭವಾಃ ।। 32 ।।

ಅಜೈಕಪಾದ, ಅಹಿರ್ಬುಧ್ನ್ಯ, ವಿರೂಪಾಕ್ಷ, ರೈವತ, ಹರ, ಬಹುರೂಪ, ತ್ರ್ಯಂಬಕ, ಸುರೇಶ್ವರ, ಸಾವಿತ್ರ, ಜಯಂತ, ಮತ್ತು ಅಪರಾಜಿತ ಪಿನಾಕೀ ಇವರು ಗಣಾಧಿಪರಾದ ಏಕಾದಶ ರುದ್ರರು. ಇವರ ಮಾನಸಪುತ್ರರು ಶ್ರೇಷ್ಠ ತ್ರಿಶೂಲಧಾರಿಗಳಾದ 84 ಕೋಟಿ ಮಂದಿ. ಅವರ ಮಕ್ಕಳು ಲೆಕ್ಕವಿಲ್ಲದಷ್ಟು ಜನ. ಈ ಮೊಮ್ಮಕ್ಕಳೂ ಮರಿಮಕ್ಕಳೂ ಸುರಭೀಗರ್ಭದಲ್ಲಿ ಹುಟ್ಟಿದರು. ಈ ಗಣೇಶ್ವರರು ಸರ್ವದಿಕ್ಕುಗಳನ್ನೂ ರಕ್ಷಿಸುತ್ತಾರೆ.”

ಇತಿ ಶ್ರೀಮಾತ್ಸ್ಯೇ ಮಹಾಪುರಾಣೇ ಆದಿಸರ್ಗೇ ವಸುರುದ್ರಾನ್ವವಾಯೋ ನಾಮ ಪಂಚಮೋಽಧ್ಯಾಯಃ ।।

ಇದು ಶ್ರೀಮತ್ಸ್ಯಮಹಾಪುರಾಣದಲ್ಲಿ ಆದಿಸರ್ಗದಲ್ಲಿ ವಸುರುದ್ರಾನ್ವಯ ಎಂಬ ಐದನೇ ಅಧ್ಯಾಯವು.

Leave a Reply

Your email address will not be published. Required fields are marked *