ಶ್ರೀವಿಷ್ಣುಮಹಾಪುರಾಣ
ಪ್ರಥಮಾಂಶ
ಅಧ್ಯಾಯ 1
ಪರಾಶರಂ ಮುನಿವರಂ ಕೃತಪೂರ್ವಾಹ್ಣಿಕಕ್ರಿಯಮ್ । ಮೈತ್ರೇಯಃ ಪರಿಪಪ್ರಚ್ಚ ಪ್ರಣಿಪತ್ಯಾಭಿವಾದ್ಯ ಚ ।। 1 ।। ತ್ವತ್ತೋ ಹಿ ವೇದಾಧ್ಯಯನಮಧೀತಮಖಿಲಂ ಗುರೋ । ಧರ್ಮಶಾಸ್ತ್ರಾಣಿ ಸರ್ವಾಣಿ ತಥಾಂಗಾನಿ ಯಥಾಕ್ರಮಮ್ ।। 2 ।। ತ್ವತ್ಪ್ರಸಾದಾನ್ಮುನಿಶ್ರೇಷ್ಠ ಮಾಮನ್ಯೇ ನಾಕೃತಶ್ರಮಮ್ । ವಕ್ಷ್ಯಂತಿ ಸರ್ವಶಾಸ್ತ್ರೇಷು ಪ್ರಾಯಶೋ ಯೇಽಪಿ ತದ್ವಿದಃ ।। 3 ।।
ಪೂರ್ವಾಹ್ಣಿಕ ಕ್ರಿಯೆಗಳನ್ನು ಮುಗಿಸಿದ ಮೈತ್ರೇಯನು ಮುನಿವರ ಪರಾಶರನಿಗೆ ಸಾಷ್ಟಾಂಗ ನಮಸ್ಕಾರಮಾಡಿ, ಗೋತ್ರಪ್ರವರ ಪೂರ್ವಕವಾಗಿ ಪಾದಕ್ಕೆ ನಮಸ್ಕರಿಸಿ ಪ್ರಶ್ನಿಸಿದನು: “ಗುರೋ! ನಿನ್ನಿಂದ ನಾನು ಅಖಿಲ ವೇದಾಧ್ಯಯವನ್ನೂ, ಸರ್ವ ಧರ್ಮಶಾಸ್ತ್ರಗಳನ್ನೂ, ವೇದಾಂಗಗಳನ್ನೂ ಯಥಾಕ್ರಮವಾಗಿ ಕಲಿತಿದ್ದೇನೆ. ಮುನಿಶ್ರೇಷ್ಠ! ನಿನ್ನ ಅನುಗ್ರಹದಿಂದ ಅನ್ಯರು ನನ್ನನ್ನು ಶಾಸ್ತ್ರಜ್ಞನಲ್ಲವೆಂದು ಹೇಳುವುದಿಲ್ಲ. ಇವನೂ ಕೂಡ ಸರ್ವ ಶಾಸ್ತ್ರಗಳನ್ನು ತಿಳಿದಿದ್ದಾನೆ ಎಂದು ಹೇಳಬಹುದು.
ಸೋಽಹಮಿಚ್ಛಾಮಿ ಸರ್ವಜ್ಞ ಶ್ರೋತುಂ ತ್ವತ್ತೋ ಯಥಾ ಜಗತ್ । ಬಭೂವ ಭೂಯಶ್ಚ ಯಥಾ ಮಹಾಭಾಗ ಭವಿಷ್ಯತಿ ।। 4 ।। ಯನ್ಮಯಂ ಚ ಜಗದ್ಬ್ರಹ್ಮನ್ಯತಶ್ಚೈತಚ್ಚರಾಚರಮ್ । ಲೀನಮಾಸೀದ್ಯಥಾ ಯತ್ರ ಲಯಮೇಷ್ಯತಿ ಯತ್ರ ಚ ।। 5 ।। ಯತ್ಪ್ರಮಾಣಾನಿ ಭೂತಾನಿ ದೇವಾದೀನಾಂ ಚ ಸಂಭವಮ್ । ಸಮುದ್ರಪರ್ವತಾನಾಂ ಚ ಸಂಸ್ಥಾನಂ ಚ ತಥಾ ಭುವಃ ।। 6 ।। ಸೂರ್ಯಾದೀನಾಂ ಚ ಸಂಸ್ಥಾನಂ ಪ್ರಮಾಣಂ ಮುನಿಸತ್ತಮ । ದೇವಾದೀನಾಂ ತಥಾ ವಂಶಾನ್ಮನೂನ್ಮನ್ವಂತರಾಣಿ ಚ ।। 7 ।। ಕಲ್ಪಾನ್ಕಲ್ಪವಿಕಲ್ಪಾಂಶ್ಚ ಚತುರ್ಯುಗವಿಕಲ್ಪಿತಾನ್ । ಕಲ್ಪಾಂತಸ್ಯ ಸ್ವರೂಪಂ ಚ ಯುಗಧರ್ಮಾಂಶ್ಚ ಕೃತ್ಸ್ನಶಃ ।। 8 ।।
ಸರ್ವಜ್ಞ! ಮಹಾಭಾಗ! ಈ ಜಗತ್ತು ಹೇಗಾಯಿತು ಮತ್ತು ಮುಂದೆ ಇದು ಹೇಗಾಗುತ್ತದೆ ಎನ್ನುವುದನ್ನು ನಿನ್ನಿಂದ ಕೇಳ ಬಯಸುತ್ತೇನೆ. ಬ್ರಹ್ಮನ್! ಈ ಜಗತ್ತು ಯಾವುದರಿಂದ ಮಾಡಲ್ಪಟ್ಟಿದೆ? ಈ ಚರಾಚರ ಜಗತ್ತು ಎಲ್ಲಿಂದ ಬಂದಿತು? ಇದು ಯಾವುದರಲ್ಲಿ ಲೀನವಾಗಿತ್ತು ಮತ್ತು ಇದು ಯಾವುದರಲ್ಲಿ ಲಯಹೊಂದಿತ್ತದೆ? ಭೂತಗಳ ಪ್ರಮಾಣಗಳೇನು? ದೇವತೆಗಳು ಹೇಗೆ ಹುಟ್ಟಿದರು? ಮುನಿಸತ್ತಮ! ಸಮುದ್ರ ಪರ್ವತಗಳ ಸ್ಥಾನ-ಪ್ರಮಾಣಗಳನ್ನೂ, ಸೂರ್ಯಾದಿಗಳ ಸ್ಥಾನ-ಪ್ರಮಾಣಗಳನ್ನೂ ಹೇಳು. ದೇವತೆಗಳ ವಂಶ, ಮನುಗಳು ಮತ್ತು ಮನ್ವಂತರಗಳು, ಕಲ್ಪಗಳು ಮತ್ತು ಕಲ್ಪಭೇದಗಳು, ಚತುರ್ಯುಗದ ಪ್ರಮಾಣ, ಕಲ್ಪದ ಅಂತ್ಯದ ಸ್ವರೂಪ, ಮತ್ತು ಸಂಪೂರ್ಣವಾಗಿ ಯುಗಧರ್ಮಗಳ ಕುರಿತು ಹೇಳು.
ದೇವರ್ಷಿಪಾರ್ಥಿವಾನಾಂ ಚ ಚರಿತಂ ಯನ್ಮಹಾಮುನೇ । ವೇದಶಾಖಾಪ್ರಣಯನಂ ಯಥಾವದ್ವ್ಯಾಸಕರ್ತೃಕಮ್ ।। 9 ।। ಧರ್ಮಾಂಶ್ಚ ಬ್ರಾಹ್ಮಣಾದೀನಾಂ ತಥಾ ಚಾಶ್ರಮವಾಸಿನಾಮ್ । ಶ್ರೋತುಮಿಚ್ಛಾಮ್ಯಹಂ ಸರ್ವಂ ತ್ವತ್ತೋ ವಾಸಿಷ್ಠನಂದನ ।। 10 ।। ಬ್ರಹ್ಮನ್ ಪ್ರಸಾದಪ್ರವಣಂ ಕುರುಷ್ವ ಮಯಿ ಮಾನಸಮ್ । ಯೇನಾಹಮೇತಜ್ಜಾನೀಯಾಂ ತ್ವತ್ಪ್ರಸಾದಾನ್ಮಹಾಮುನೇ ।। 11 ।।
ಮಹಾಮುನೇ! ವಾಸಿಷ್ಠನಂದನ[1]! ದೇವರ್ಷಿ-ಪಾರ್ಥಿವರ ಚರಿತೆಯನ್ನೂ, ವ್ಯಾಸನು ವೇದಶಾಖೆಗಳನ್ನು ಹೇಗೆ ವಿಂಗಡಿಸಿದರು ಎನ್ನುವುದನ್ನು, ಬ್ರಾಹ್ಮಣಾದಿಗಳ ಧರ್ಮಗಳು, ಆಶ್ರಮವಾಸಿಗಳ ಧರ್ಮಗಳು ಇವೆಲ್ಲವನ್ನೂ ನಿನ್ನಿಂದ ಕೇಳಬಯಸುತ್ತೇನೆ. ಮಹಾಮುನೇ! ಬ್ರಹ್ಮನ್! ನಿನ್ನ ಮನಸ್ಸು ನನ್ನಮೇಲಿನ ಅನುಗ್ರಹದಿಂದ ಕೂಡಿದ್ದರೆ ಅದರಿಂದ ಇವೆಲ್ಲವನ್ನೂ ತಿಳಿದುಕೊಳ್ಳುತ್ತೇನೆ.”
ಪರಾಶರ ಉವಾಚ । ಸಾಧು ಮೈತ್ರೇಯ ಧರ್ಮಜ್ಞ ಸ್ಮಾರಿತೋಽಸ್ಮಿ ಪುರಾತನಮ್ । ಪಿತುಃಪಿತಾ ಮೇ ಭಗವಾನ್ವಸಿಷ್ಠೋ ಯದುವಾಚ ಹ ।। 12 ।। ವಿಶ್ವಾಮಿತ್ರಪ್ರಯುಕ್ತೇನ ರಕ್ಷಸಾ ಭಕ್ಷಿತಃ ಪುರಾ । ಶ್ರುತಸ್ತಾತಸ್ತತಃ ಕ್ರೋಧೋ ಮೈತ್ರೇಯಾಸೀನ್ಮಮಾತುಲಃ ।। 13 ।। ತತೋಽಹಂ ರಕ್ಷಸಾಂ ಸತ್ರಂ ವಿನಾಶಾಯ ಸಮಾರಭಮ್ । ಭಸ್ಮೀಕೃತಾಶ್ಚ ಶತಶಸ್ತಸ್ಮಿನ್ಸತ್ರೇ ನಿಶಾಚರಾಃ ।। 14 ।।
ಪರಾಶರನು ಹೇಳಿದನು: “ಧರ್ಮಜ್ಞ! ಮೈತ್ರೇಯ! ಒಳ್ಳೆಯದಾಯಿತು. ನನ್ನ ತಂದೆ ಭಗವಾನ್ ವಸಿಷ್ಠನು ಏನು ಹೇಳಿದ್ದನೋ ಆ ಪುರಾತನ ವಿಷಯವನ್ನು ಜ್ಞಾಪಿಸಿ ಕೊಟ್ಟಿದ್ದೀಯೆ. ಅಯ್ಯಾ ಮೈತ್ರೇಯ! ವಿಶ್ವಾಮಿತ್ರನ ಪ್ರಯುಕ್ತವಾಗಿ ರಾಕ್ಷಸನೋರ್ವನು ನನ್ನ ತಂದೆಯನ್ನು ಭಕ್ಷಿಸಿದನು ಎಂದು ಕೇಳಿ ನನಗೆ ಮಹಾಕೋಪವುಂಟಾಯಿತು. ಆಗ ನಾನು ರಾಕ್ಷಸರ ವಿನಾಶಕ್ಕಾಗಿ ಒಂದು ಸತ್ರವನ್ನು ಪ್ರಾರಂಭಿಸಿದೆನು. ಆ ಸತ್ರದಲ್ಲಿ ಅನೇಕ ರಾಕ್ಷಸರನ್ನು ಭಸ್ಮಮಾಡಿದೆನು.
ತತಸ್ಸಂಕ್ಷೀಯಮಾಣೇಷು ತೇಷು ರಕ್ಷಸ್ಸ್ವಶೇಷತಃ । ಮಾಮುವಾಚ ಮಹಾಭಾಗೋ ವಸಿಷ್ಠೋಽಸ್ಮತ್ಪಿತಾಮಹಃ ।। 15 ।। ಅಲಮತ್ಯಂತಕೋಪೇನ ತಾತ ಮನ್ಯುಮಿಮಂ ಜಹಿ । ರಾಕ್ಷಸಾನಾಪರಾಧ್ಯಂತೇ ಪಿತುಸ್ತೇ ವಿಹಿತಂ ಹಿ ತತ್ ।। 16 ।। ಮೂಢಾನಾಮೇವ ಭವತಿ ಕ್ರೋಧೋ ಜ್ಞಾನವತಾಂ ಕುತಃ । ಹನ್ಯತೇ ತಾತ ಕಃ ಕೇನ ಯತಸ್ಸ್ವಕೃತಭುಕ್ಪುಮಾನ್ ।। 17 ।। ಸಂಚಿತಸ್ಯಾಪಿ ಮಹತಾ ವತ್ಸ ಕ್ಲೇಶೇನ ಮಾನವೈಃ । ಯಶಸಸ್ತಪಸಶ್ಚೈವ ಕ್ರೋಧೋ ನಾಶಕರಃ ಪರಃ ।। 18 ।। ಸ್ವರ್ಗಾಪವರ್ಗವ್ಯಾಸೇಧಕಾರಣಂ ಪರಮರ್ಷಯಃ । ವರ್ಜಯಂತಿ ಸದಾ ಕ್ರೋಧಂ ತಾತ ಮಾ ತದ್ವಶೋ ಭವ ।। 19 ।। ಅಲಂ ನಿಶಾಚರೈರ್ದಗ್ಧೈರ್ದೀನೈರನಪರಾಧಿಭಿಃ । ಸತ್ರಂ ತೇ ವಿರಮತ್ವೇತತ್ಕ್ಷಮಾಸಾರಾ ಹಿ ಸಾಧವಃ ।। 20 ।।
ಅಲ್ಲಿ ರಾಕ್ಷಸರು ನಿಃಶೇಷವಾಗಿ ನಾಶವಾಗುತ್ತಿರಲು ನನ್ನ ಪಿತಾಮಹ ಮಹಾಭಾಗ ವಸಿಷ್ಠನು ನನಗೆ ಹೇಳಿದನು: “ಮಗೂ! ಅತ್ಯಂತ ಕುಪಿತನಾಗಬೇಡ! ಈ ಕೋಪವನ್ನು ಬಿಡು. ರಾಕ್ಷಸರು ನಿನ್ನ ತಂದೆಯ ವಿಷಯದಲ್ಲಿ ಯಾವ ಅಪರಾಧವನ್ನೂ ಮಾಡಿಲ್ಲ. ಅದು ಹಾಗೆಯೇ ವಿಧಿವಿಹಿತವಾಗಿತ್ತು. ಮೂಢರಿಗೆ ಕೋಪವುಂಟಾಗುತ್ತದೆ. ಜ್ಞಾನಿಗಳಿಗೆ ಹೇಗೆ? ಮನುಷ್ಯನು ತನ್ನ ಕರ್ಮಫಲವನ್ನು ತಾನೇ ಅನುಭವಿಸುತ್ತಾನೆ. ಹೀಗಿರುವಾಗ ಯಾರು ಯಾರನ್ನು ಕೊಲ್ಲುತ್ತಾರೆ? ವತ್ಸ! ಬಹಳ ಕಷ್ಟದಿಂದ ಸಂಪಾದಿಸಿದ ಕೀರ್ತಿಯನ್ನೂ, ತಪಸ್ಸನ್ನೂ, ಕೋಪವು ನಾಶಮಾಡಿಬಿಡುತ್ತದೆ. ಸ್ವರ್ಗ-ಮೋಕ್ಷಗಳಿಗೆ ಅಡ್ಡಿಯನ್ನುಂಟುಮಾಡುವ ಕೋಪವನ್ನು ಪರಮಋಷಿಗಳು ತ್ಯಜಿಸುತ್ತಾರೆ. ಮಗೂ! ನೀನು ಆ ಕೋಪಕ್ಕೆ ವಶನಾಗಬೇಡ. ದೀನರೂ ಅನಪರಾಧಿಗಳೂ ಆದ ನಿಶಾಚರರನ್ನು ಸುಟ್ಟಿದ್ದು ಸಾಕು. ನಿನ್ನ ಸತ್ರವನ್ನು ಇಲ್ಲಿಗೇ ನಿಲ್ಲಿಸು. ಕ್ಷಮೆಯೇ ಸಜ್ಜನರ ಸಾರವು.”
ಏವಂ ತಾತೇನ ತೇನಾಹಮನುನೀತೋ ಮಹಾತ್ಮನಾ । ಉಪಸಂಹೃತವಾನ್ಸತ್ರಂ ಸದ್ಯಸ್ತದ್ವಾಕ್ಯಗೌರವಾತ್ ।। 21 ।। ತತಃ ಪ್ರೀತಸ್ಸ ಭಗವಾನ್ವಸಿಷ್ಠೋ ಮುನಿಸತ್ತಮಃ । ಸಂಪ್ರಾಪ್ತಶ್ಚ ತದಾ ತತ್ರ ಪುಲಸ್ತ್ಯೋ ಬ್ರಹ್ಮಣಸ್ಸುತಃ ।। 22 ।। ಪಿತಾಮಹೇನ ದತ್ತಾರ್ಘ್ಯಃ ಕೃತಾಸನಪರಿಗ್ರಹಃ । ಮಾಮುವಾಚ ಮಹಾಭಾಗೋ ಮೈತ್ರೇಯ ಪುಲಹಾಗ್ರಜಃ ।। 23 ।।
ಹೀಗೆ ಮಹಾತ್ಮಾ ಅಜ್ಜನು ನನ್ನನ್ನು ಒಪ್ಪಿಸಲು ಅವನ ಮಾತಿನ ಗೌರವಕ್ಕೆ ನಾನು ಅ ಕ್ಷಣದಲ್ಲಿಯೇ ಸತ್ರವನ್ನು ಉಪಸಂಹರಿಸಿ ದೆನು. ನಂತರ ಮುನಿಸತ್ತಮ ಭಗವಾನ್ ವಸಿಷ್ಠನು ಪ್ರೀತನಾದನು. ಆಗ ಅಲ್ಲಿಗೆ ಬ್ರಹ್ಮನ ಪುತ್ರ ಪುಲಸ್ತ್ಯನು ತಲುಪಿದನು. ಮೈತ್ರೇಯ! ಪಿತಾಮಹನಿತ್ತ ಅರ್ಘ್ಯವನ್ನು ಸ್ವೀಕರಿಸಿ ಮಾಡಿಕೊಟ್ಟ ಆಸನವನ್ನು ಪರಿಗ್ರಹಿಸಿ ಪುಲಹಾಗ್ರಜ ಮಹಾಭಾಗ ಪುಲಸ್ತ್ಯನು ನನಗೆ ಹೇಳಿದನು.
ಪುಲಸ್ತ್ಯ ಉವಾಚ । ವೈರೇ ಮಹತಿ ಯದ್ವಾಕ್ಯಾದ್ಗುರೋರಸ್ಯಾಶ್ರಿತಾ ಕ್ಷಮಾ । ತ್ವಯಾ ತಸ್ಮಾತ್ಸಮಸ್ತಾನಿ ಭವಾನ್ ಶಾಸ್ತ್ರಾಣಿ ವೇತ್ಸ್ಯತಿ ।। 24 ।। ಸಂತತೇರ್ನ ಮಮ ಚ್ಛೇದಃ ಕ್ರುದ್ಧೇನಾಪಿ ಯತಃ ಕೃತಃ । ತ್ವಯಾ ತಸ್ಮಾನ್ಮಹಾಭಾಗ ದದಾಮ್ಯನ್ಯಂ ಮಹಾವರಮ್ ।। 25 ।। ಪುರಾಣಸಂಹಿತಾ ಕರ್ತಾ ಭವಾನ್ವತ್ಸ ಭವಿಷ್ಯತಿ । ದೇವತಾಪಾರಮಾರ್ಥ್ಯಂ ಚ ಯಥಾವದ್ವೇತ್ಸ್ಯತೇ ಭವಾನ್ ।। 26 ।। ಪ್ರವೃತ್ತೇ ಚ ನಿವೃತ್ತೇ ಚ ಕರ್ಮಣ್ಯಸ್ತಮಲಾ ಮತಿಃ । ಮತ್ಪ್ರಸಾದಾದಸಂದಿಗ್ಧಾ ತವ ವತ್ಸ ಭವಿಷ್ಯತಿ ।। 27 ।।
ಪುಲಸ್ತ್ಯನು ಹೇಳಿದನು: “ಮಹಾ ವೈರವಿದ್ದರೂ ಗುರುವಿನ ಮಾತಿನಂತೆ ಕ್ಷಮಾಗುಣವನ್ನು ಆಶ್ರಯಿಸಿದ್ದೀಯೆ. ಆದ್ದರಿಂದ ನಿನಗೆ ಸಮಸ್ತ ಶಾಸ್ತ್ರಗಳೂ ತಿಳಿಯುತ್ತವೆ. ಮಹಾಭಾಗ! ಕ್ರುದ್ಧನಾಗಿದ್ದರೂ ನನ್ನ ವಂಶವನ್ನು ನಾಶಮಾಡದೇ ಇದ್ದುದರಿಂದ ನಿನಗೆ ಅನ್ಯ ಮಹಾವರವೊಂದನ್ನು ನೀಡುತ್ತೇನೆ. ವತ್ಸ! ನೀನು ಪುರಾಣ-ಸಂಹಿತೆಗಳ ಕರ್ತನಾಗುತ್ತೀಯೆ. ದೇವತೆಗಳ ಪರಮಾರ್ಥ ತತ್ತ್ವವನ್ನು ನೀನು ತಿಳಿದುಕೊಳ್ಳುತ್ತೀಯೆ. ವತ್ಸ! ನನ್ನ ಪ್ರಸಾದದಿಂದ ನಿನಗೆ ಪ್ರವೃತ್ತಿ-ನಿವೃತ್ತಿ ಕರ್ಮಗಳ ವಿಷಯದಲ್ಲಿ ಸಂದೇಹವಿಲ್ಲದ ದೋಷರಹಿತ ಬುದ್ಧಿಯುಂಟಾಗುತ್ತದೆ.”
ತತಶ್ಚ ಪ್ರಾಹ ಭಗವಾನ್ ವಸಿಷ್ಠೋ ಮೇ ಪಿತಾಮಹಃ । ಪುಲಸ್ತ್ಯೇನ ಯದುಕ್ತಂ ತೇ ಸರ್ವಮೇತದ್ಭವಿಷ್ಯತಿ ।। 28 ।। ಇತಿ ಪೂರ್ವಂ ವಸಿಷ್ಠೇನ ಪುಲಸ್ತ್ಯೇನ ಚ ಧೀಮತಾ । ಯದುಕ್ತಂ ತತ್ಸ್ಮೃತಿಂ ಯಾತಿ ತ್ವತ್ಪ್ರಶ್ನಾದಖಿಲಂ ಮಮ ।। 29 ।। ಸೋಽಹಂ ವದಾಮ್ಯಶೇಷಂ ತೇ ಮೈತ್ರೇಯ ಪರಿಪೃಚ್ಛತೇ । ಪುರಾಣಸಂಹಿತಾಂ ಸಮ್ಯಕ್ತಾಂ ನಿಬೋಧ ಯಥಾತಥಮ್ ।। 30 ।। ವಿಷ್ಣೋಃ ಸಕಾಶಾದುದ್ಭೂತಂ ಜಗತ್ತತ್ರೈವ ಚ ಸ್ಥಿತಮ್ । ಸ್ಥಿತಿಸಂಯಮಕರ್ತಾಸೌ ಜಗತೋಽಸ್ಯ ಜಗಚ್ಚ ಸಃ ।। 31 ।।
ಆಗ ನನ್ನ ಪಿತಾಮಹ ಭಗವಾನ್ ವಸಿಷ್ಠನೂ “ಪುಲಸ್ತ್ಯನು ಹೇಳಿದುದೆಲ್ಲವೂ ಹಾಗೆಯೇ ಆಗುತ್ತದೆ” ಎಂದನು. ಹೀಗೆ ಪೂರ್ವಕಾಲದಲ್ಲಿ ಧೀಮತ ವಸಿಷ್ಠ ಮತ್ತು ಪುಲಸ್ತ್ಯರು ನನಗೆ ಏನು ಹೇಳಿದ್ದರೋ ಅವೆಲ್ಲವನ್ನೂ ನಿನ್ನ ಪ್ರಶ್ನೆಯಿಂದ ನೆನಪಿಸಿಕೊಟ್ಟಿದ್ದೀಯೆ. ಮೈತ್ರೇಯ! ನೀನು ಕೇಳಿದ ಪ್ರಶ್ನೆಗೆ ಪುರಾಣ-ಸಂಹಿತೆ ಸಂಯುಕ್ತವಾದುದನ್ನು ಸಂಪೂರ್ಣವಾಗಿ ಯಥಾವತ್ತಾಗಿ ಹೇಳುತ್ತೇನೆ. ಕೇಳು. ವಿಷ್ಣುವಿನಲ್ಲಿಯೇ ಈ ಜಗತ್ತೆಲ್ಲವೂ ಹುಟ್ಟಿಕೊಂಡಿದೆ. ಅವನಲ್ಲಿಯೇ ಸ್ಥಿತವಾಗಿದೆ. ಈ ಜಗತ್ತಿನ ಸ್ಥಿತಿ-ಸಂಯಮಕರ್ತನೂ ಅವನು. ಅವನೇ ಈ ಜಗತ್ತು.”
ಇತಿ ಶ್ರೀವಿಷ್ಣುಪುರಾಣೇ ಪ್ರಥಮೇಽಂಶೇ ಪ್ರಥಮೋಽಧ್ಯಾಯಃ ।।
ಇದು ಶ್ರೀವಿಷ್ಣುಪುರಾಣದ ಪ್ರಥಮಾಂಶದಲ್ಲಿ ಮೊದಲನೇ ಅಧ್ಯಾಯವು.
[1] ವಾಸಿಷ್ಠ = ವಸಿಷ್ಠನ ಮಗ ಶಕ್ತಿ, ನಂದನ=ಮಗ; ವಾಸಿಷ್ಠನಂದನ=ಶಕ್ತಿಯ ಮಗ ಪರಾಶರ.