ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 2: ಬ್ರಹ್ಮಾಂಡದಲನಂ
ಸೂತ ಉವಾಚ । ಏವಮುಕ್ತೋ ಮನುಸ್ತೇನ ಪಪ್ರಚ್ಚ ಮಧುಸೂದನಮ್ । ಭಗವನ್ಕಿಯದ್ಭಿರ್ವರ್ಷೈರ್ಭವಿಷ್ಯತ್ಯಂತರಕ್ಷಯಃ ।। 1 ।। ಸತ್ತ್ವಾನಿ ಚ ಕಥಂ ನಾಥ ರಕ್ಷಿಷ್ಯೇ ಮಧುಸೂದನ । ತ್ವಯಾ ಸಹ ಪುನರ್ಯೋಗಃ ಕಥಂ ವಾ ಭವಿತಾ ಮಮ ।। 2 ।।
ಸೂತನು ಹೇಳಿದನು: “ಮಧುಸೂದನನು ಹೀಗೆ ಹೇಳಲು ಮನುವು ಅವನಲ್ಲಿ ಕೇಳಿದನು: “ಭಗವನ್! ಎಷ್ಟು ವರ್ಷಗಳಲ್ಲಿ ಅವಾಂತರ ಪ್ರಳಯವಾಗುತ್ತದೆ? ನಾಥ! ಮಧುಸೂದನ! ಜೀವರಾಶಿಗಳನ್ನು ನಾನು ಹೇಗೆ ರಕ್ಷಿಸಲಿ? ಪುನಃ ನಿನ್ನೊಡನೆ ನನ್ನ ಸಮಾಗಮವು ಹೇಗಾಗುತ್ತದೆ?”
ಮತ್ಸ್ಯ ಉವಾಚ । ಅದ್ಯಪ್ರಭೃತ್ಯನಾವೃಷ್ಟಿರ್ಭವಿಷ್ಯತಿ ಮಹೀತಲೇ । ಯಾವದ್ವರ್ಷಶತಂ ಸಾಗ್ರಂ ದುರ್ಭಿಕ್ಷಮಶುಭಾವಹಮ್ ।। 3 ।। ತತೋಽಲ್ಪಸತ್ತ್ವಕ್ಷಯದಾ ರಶ್ಮಯಃ ಸಪ್ತ ದಾರುಣಾಃ । ಸಪ್ತಸಪ್ತೇರ್ಭವಿಷ್ಯಂತಿ ಪ್ರತಪ್ತಾಂಗಾರವರ್ಷಿಣಃ ।। 4 ।। ಔರ್ವಾನಲೋಽಪಿ ವಿಕೃತಿಂ ಗಮಿಷ್ಯತಿ ಯುಗಕ್ಷಯೇ । ವಿಷಾಗ್ನಿಶ್ಚಾಪಿ ಪಾತಾಲಾತ್ಸಂಕರ್ಷಣಮುಖಚ್ಯುತಃ ।। 5 ।। ಭವಸ್ಯಾಪಿ ಲಲಾಟೋತ್ಥಸ್ತೃತೀಯನಯನಾನಲಃ । ತ್ರಿಜಗನ್ನಿರ್ದಹನ್ಕ್ಷೋಭಂ ಸಮೇಷ್ಯತಿ ಮಹಾಮುನೇ ।। 6 ।। ಏವಂ ದಗ್ಧಾ ಮಹೀ ಸರ್ವಾ ಯದಾ ಸ್ಯಾದ್ಭಸ್ಮಸನ್ನಿಭಾ । ಆಕಾಶಮೂಷ್ಮಣಾ ತಪ್ತಂ ಭವಿಷ್ಯತಿ ಪರಂತಪ । ತತಃ ಸದೇವನಕ್ಷತ್ರಂ ಜಗದ್ಯಾಸ್ಯತಿ ಸಂಕ್ಷಯಮ್ ।। 7 ।।
ಮತ್ಸ್ಯವು ಹೇಳಿತು: “ಇಂದಿನಿಂದ ನೂರುವರ್ಷಗಳಲ್ಲಿ ಭೂಮಿಯಲ್ಲಿ ಅನಾವೃಷ್ಟಿಯಾಗುತ್ತದೆ. ಮೊದಲು ಅದು ದುರ್ಭಿಕ್ಷ ಮತ್ತು ಅಶುಭಗಳನ್ನುಂಟುಮಾಡುತ್ತದೆ. ದಾರುಣವಾಗುವ ಸೂರ್ಯನ ಸಪ್ತಕಿರಣಗಳಿಂದ ಅಲ್ಪಸತ್ತ್ವದ ಜೀವಿಗಳು ನಾಶವಾಗುತ್ತವೆ. ಆ ಏಳು ರಶ್ಮಿಗಳು ಏಳು ಸೂರ್ಯಗಳಾಗುತ್ತವೆ, ಮತ್ತು ಕೆಂಡದ ಮಳೆಗಳನ್ನು ಸುರಿಸುತ್ತವೆ. ಯುಗಕ್ಷಯದಲ್ಲಿ ಔರ್ವಾಗ್ನಿ[1]ಯೂ ಕೂಡ ಉಗ್ರರೂಪವನ್ನು ತಾಳುತ್ತದೆ. ಪಾತಾಳದಿಂದ ಸಂಕರ್ಷಣನ ಮುಖದಿಂದ ವಿಷಾಗ್ನಿಯೂ ಉಲ್ಬಣಿಸುತ್ತದೆ. ಮಹಾಮುನೇ! ಭವ ಶಂಕರನ ಲಲಾಟದಲ್ಲಿರುವ ಮೂರನೇ ಕಣ್ಣಿನಿಂದ ಹೊರಟ ಅಗ್ನಿಯೂ ಮೂರುಲೋಕಗಳನ್ನು ಸುಡುತ್ತಾ ಕ್ಷೋಭೆಯನ್ನುಂಟುಮಾಡುತ್ತದೆ. ಪರಂತಪ! ಹೀಗೆ ಭೂಮಿಯೆಲ್ಲವೂ ಸುಟ್ಟು ಭಸ್ಮದಂತಾದಾಗ, ಆಕಾಶವು ಹಬೆಯಿಂದ ಕಾಯುತ್ತದೆ. ಆಗ ದೇವ-ನಕ್ಷತ್ರ ಸಹಿತವಾದ ಜಗತ್ತು ನಾಶವಾಗುತ್ತದೆ.
ಸಂವರ್ತೋ ಭೀಮನಾದಶ್ಚ ದ್ರೋಣಶ್ಚಂಡೋ ಬಲಾಹಕಃ । ವಿದ್ಯುತ್ಪತಾಕಃ ಶೋಣಸ್ತು ಸಪ್ತೈತೇ ಲಯವಾರಿದಾಃ । ಅಗ್ನಿಪ್ರಸ್ವೇದಸಂಭೂತಾಃ ಪ್ಲಾವಯಿಷ್ಯಂತಿ ಮೇದಿನೀಮ್ ।। 8 ।। ಸಮುದ್ರಾಃ ಕ್ಷೋಭಮಾಗತ್ಯ ಚೈಕತ್ವೇನ ವ್ಯವಸ್ಥಿತಾಃ । ಏತದೇಕಾರ್ಣವಂ ಸರ್ವಂ ಕರಿಷ್ಯಂತಿ ಜಗತ್ತ್ರಯಮ್ ।। 9 ।। ವೇದನಾವಮಿಮಾಂ ಗೃಹ್ಯ ಸತ್ತ್ವಬೀಜಾನಿ ಸರ್ವಶಃ ।। 10 ।। ಆರೋಪ್ಯ ರಜ್ಜುಯೋಗೇನ ಮತ್ಪ್ರದತ್ತೇನ ಸುವ್ರತ । ಸಂಯಮ್ಯ ನಾವಂ ಮಚ್ಚೃಂಗೇ ಮತ್ಪ್ರಭಾವಾಭಿರಕ್ಷಿತಃ ।। 11 ।। ಏಕಃ ಸ್ಥಾಸ್ಯಸಿ ದೇವೇಷು ದಗ್ಧೇಷ್ವಪಿ ಪರಂತಪ । ಸೋಮಸೂರ್ಯಾವಹಂ ಬ್ರಹ್ಮಾ ಚತುರ್ಲೋಕಸಮನ್ವಿತಃ ।। 12 ।। ನರ್ಮದಾ ಚ ನದೀ ಪುಣ್ಯಾ ಮಾರ್ಕಂಡೇಯೋ ಮಹಾನೃಷಿಃ । ಭವೋ ವೇದಾಃ ಪುರಾಣಾನಿ ವಿದ್ಯಾಭಿಃ ಸರ್ವತೋವೃತಮ್ ।। 13 ।। ತ್ವಯಾ ಸಾರ್ಧಮಿದಂ ವಿಶ್ವಂ ಸ್ಥಾಸ್ಯತ್ಯಂತರಸಂಕ್ಷಯೇ । ಏವಮೇಕಾರ್ಣವೇ ಜಾತೇ ಚಾಕ್ಷುಷಾಂತರಸಂಕ್ಷಯೇ ।। 14 ।। ವೇದಾನ್ಪ್ರವರ್ತಯಿಷ್ಯಾಮಿ ತ್ವತ್ಸರ್ಗಾದೌ ಮಹೀಪತೇ । ಏವಮುಕ್ತ್ವಾ ಸ ಭಗವಾಂಸ್ತತ್ರೈವಾಂತರಧೀಯತ ।। 15 ।।
ಸಂವರ್ತ, ಭೀಮನಾದ, ದ್ರೋಣ, ಚಂಡ, ಬಲಾಹಕ, ವಿದ್ಯುತ್ಪತಾಕ ಮತ್ತು ಶೋಣ ಎಂಬ ಪ್ರಳಯ ಮೇಘಗಳು ಅಗ್ನಿದಗ್ಧವಾದ ಭೂಮಿಯನ್ನು ಜಲಮಯವನ್ನಾಗಿ ಮಾಡುತ್ತವೆ. ಸಮುದ್ರಗಳು ಅಲ್ಲೋಲಕಲ್ಲೋಲವಾಗಿ ಒಂದಾಗಿ ಈ ಮೂರೂ ಲೋಕಗಳನ್ನೂ ಏಕಾರ್ಣವವನ್ನಾಗಿ ಮಾಡುತ್ತದೆ. ಸುವ್ರತ! ವೇದರೂಪವಾದ ಈ ದೋಣಿಯನ್ನು ತೆಗೆದುಕೊಂಡು, ಜೀವರಾಶಿಯ ಬೀಜಗಳನ್ನು ಅದರಲ್ಲಿರಿಸಿ, ನಾನು ಕೊಟ್ಟ ಹಗ್ಗವನ್ನು ಸೇರಿಸಿ ಅದನ್ನು ನನ್ನ ಕೋಡಿಗೆ ಕಟ್ಟಿಹಾಕು. ಪರಂತಪ! ನನ್ನ ಪ್ರಭಾವದಿಂದ ರಕ್ಷಿತನಾಗಿ, ದೇವತೆಗಳು ಸುಟ್ಟುಹೋದರೂ, ನೀನೊಬ್ಬನು ಮಾತ್ರ ಉಳಿಯುತ್ತೀಯೆ. ಮನ್ವಂತರ ಪ್ರಳಯದಲ್ಲಿ ಚಂದ್ರ-ಸೂರ್ಯರು, ನಾನು, ಚತುರ್ಲೋಕಸಮನ್ವಿತನಾದ ಬ್ರಹ್ಮ, ಪುಣ್ಯ ನದಿ ನರ್ಮದಾ, ಮಹಾನೃಷಿ ಮಾರ್ಕಂಡೇಯ, ಭವ (ಶಿವ), ವೇದಗಳು, ಪುರಾಣಗಳು, ಮತ್ತು ಎಲ್ಲಕಡೆಗಳಿಂದ ಆವೃತವಾಗಿರುವ ವಿದ್ಯಾದಿಗಳು – ಈ ಎಲ್ಲ ವಿಶ್ವವೂ – ನಿನ್ನ ಜೊತೆಗಿರುತ್ತದೆ.[2] ಮಹೀಪತೇ! ಹೀಗೆ ಚಾಕ್ಷುಷ ಮನ್ವಂತರದ ಅಂತ್ಯದಲ್ಲಿ ಜಗತ್ತೆಲ್ಲಾ ಏಕಾರ್ಣವವಾದ ನಂತರ, ವೈವಸ್ವತ ಮನ್ವಂತರದ ಆದಿಯಲ್ಲಿ ನಾನು ವೇದಗಳನ್ನು ನಡೆಸುತ್ತೇನೆ.” ಹೀಗೆ ಹೇಳಿ ಭಗವಂತನು ಅಲ್ಲಿಯೇ ಅಂತರ್ಧಾನನಾದನು.
ಮನುರಪ್ಯಾಸ್ಥಿತೋ ಯೋಗಂ ವಾಸುದೇವಪ್ರಸಾದಜಮ್ । ಅಭ್ಯಸನ್ಯಾವದಾಭೂತಸಂಪ್ಲವಂ ಪೂರ್ವಸೂಚಿತಮ್ ।। 16 ।। ಕಾಲೇ ಯಥೋಕ್ತೇ ಸಂಜಾತೇ ವಾಸುದೇವಮುಖೋದ್ಗತೇ । ಶೃಂಗೀ ಪ್ರಾದುರ್ಬಭೂವಾಥ ಮತ್ಸ್ಯರೂಪೀ ಜನಾರ್ದನಃ ।। 17 ।। ಭುಜಂಗೋ ರಜ್ಜುರೂಪೇಣ ಮನೋಃ ಪಾರ್ಶ್ವಮುಪಾಗಮತ್ । ಭೂತಾನ್ಸರ್ವಾನ್ಸಮಾಕೃಷ್ಯ ಯೋಗೇನಾರೋಪ್ಯ ಧರ್ಮವಿತ್ ।। 18 ।। ಭುಜಂಗರಜ್ಜ್ವಾ ಮತ್ಸ್ಯಸ್ಯ ಶೃಂಗೇ ನಾವಮಯೋಜಯತ್ । ಉಪರ್ಯುಪಸ್ಥಿತಸ್ತಸ್ಯಾಃ ಪ್ರಣಿಪತ್ಯ ಜನಾರ್ದನಮ್ ।। 19 ।। ಆಭೂತಸಂಪ್ಲವೇ ತಸ್ಮಿನ್ನತೀತೇ ಯೋಗಶಾಯಿನಾ । ಪೃಷ್ಟೇನ ಮನುನಾ ಪ್ರೋಕ್ತಂ ಪುರಾಣಂ ಮತ್ಸ್ಯರೂಪಿಣಾ । ತದಿದಾನೀಂ ಪ್ರವಕ್ಷ್ಯಾಮಿ ಶೃಣುಧ್ವಮೃಷಿಸತ್ತಮಾಃ ।। 20 ।। ಯದ್ಭವದ್ಭಿಃ ಪುರಾ ಪೃಷ್ಟಃ ಸೃಷ್ಟ್ಯಾದಿಕಮಹಂ ದ್ವಿಜಾಃ । ತದೇವೈಕಾರ್ಣವೇ ತಸ್ಮಿನ್ಮನುಃ ಪಪ್ರಚ್ಚ ಕೇಶವಮ್ ।। 21 ।।
ಮನುವಾದರೋ ವಾಸುದೇವನ ಅನುಗ್ರಹದಿಂದ ಲಭ್ಯವಾದ ಧ್ಯಾನಯೋಗದಲ್ಲಿ ತೊಡಗಿ, ಹಿಂದೆ ಹೇಳಿದಂತೆ, ಪ್ರಳಯಕಾಲದವರೆಗೂ ಅದರಲ್ಲಿಯೇ ಮಗ್ನನಾಗಿದ್ದನು. ವಾಸುದೇವನು ಹೇಳಿದ್ದ ಕಾಲವು ಬರಲು, ಜನಾರ್ದನನು ಕೊಂಬುಮೀನಿನ ರೂಪದಲ್ಲಿ ಪ್ರತ್ಯಕ್ಷನಾದನು. ಮಹಾಸರ್ಪವು ಹಗ್ಗದ ರೂಪದಲ್ಲಿ ಮನುವಿನ ಬಳಿ ಬಂದಿತು. ಧರ್ಮವಿದು ಮನುವು ತನ್ನ ಯೋಗದಿಂದ ಸರ್ವಭೂತಗಳನ್ನೂ ಆಕರ್ಷಿಸಿ ಅವುಗಳನ್ನು ದೋಣಿಯಲ್ಲಿರಿಸಿ, ಸರ್ಪದ ಹಗ್ಗವನ್ನು ನಾವೆಗೆ ಕಟ್ಟಿ, ಅದನ್ನು ಮತ್ಸ್ಯದ ಕೋಡಿಗೆ ಬಿಗಿದನು. ಜನಾರ್ದನನನ್ನು ನಮಸ್ಕರಿಸಿ ಆ ನಾವೆಯಲ್ಲಿ ಕುಳಿತುಕೊಂಡನು. ಋಷಿಸತ್ತಮರೇ! ಕಳೆದ ಆ ಅವಾಂತರ ಪ್ರಳಯದಲ್ಲಿ ಮನುವು ಕೇಳಿದುದಕ್ಕೆ ಮತ್ಸ್ಯರೂಪೀ ಯೋಗಶಾಯೀ ಭಗವಂತನು ಹೇಳಿದ ಪುರಾಣವನ್ನು ಇಗೋ ನಿಮಗೆ ಹೇಳುತ್ತೇನೆ. ದ್ವಿಜರೇ! ಈ ಮೊದಲು ಸೃಷ್ಟಿ ಮೊದಲಾದವುಗಳ ಕುರಿತಾಗಿ ನೀವು ನನ್ನನ್ನು ಹೇಗೆ ಕೇಳಿದಿರೋ ಹಾಗೆಯೇ ಆ ಏಕಾರ್ಣವದಲ್ಲಿ ಮನುವು ಕೇಶವನನ್ನು ಕೇಳಿದನು.
ಮನುರುವಾಚ । ಉತ್ಪತ್ತಿಂ ಪ್ರಲಯಂ ಚೈವ ವಂಶಾನ್ಮನ್ವಂತರಾಣಿ ಚ । ವಂಶ್ಯಾನುಚರಿತಂ ಚೈವ ಭುವನಸ್ಯ ಚ ವಿಸ್ತರಮ್ ।। 22 ।। ದಾನಧರ್ಮವಿಧಿಂ ಚೈವ ಶ್ರಾದ್ಧಕಲ್ಪಂ ಚ ಶಾಶ್ವತಮ್ । ವರ್ಣಾಶ್ರಮವಿಭಾಗಂ ಚ ತಥೇಷ್ಟಾಪೂರ್ತಸಂಜ್ಞಿತಮ್ ।। 23 ।। ದೇವತಾನಾಂ ಪ್ರತಿಷ್ಠಾದಿ ಯಚ್ಚಾನ್ಯದ್ವಿದ್ಯತೇ ಭುವಿ । ತತ್ಸರ್ವಂ ವಿಸ್ತರೇಣ ತ್ವಂ ಧರ್ಮಂ ವ್ಯಾಖ್ಯಾತುಮರ್ಹಸಿ ।। 24 ।।
ಮನುವು ಹೇಳಿದನು: “ವಿಶ್ವದ ಉತ್ಪತ್ತಿ-ಪ್ರಳಯ, ವಂಶಗಳು-ಮನ್ವಂತರಗಳು, ವಂಶಗಳು ಮುಂದುವರೆದ ಚರಿತ್ರೆ, ಭುವನದ ವಿಸ್ತಾರ, ದಾನ-ಧರ್ಮ ವಿಧಿ, ಶ್ರಾದ್ಧಕಲ್ಪ, ಶಾಶ್ವತವಾದ ವರ್ಣಾಶ್ರಮವಿಭಾಗ, ಇಷ್ಟಾಪೂರ್ತ[3] ಎಂದು ಕರೆಯಲ್ಪಡುವ ಧರ್ಮಗಳನ್ನು, ದೇವತೆಗಳ ಪ್ರತಿಷ್ಠಾಪನೆ ಮೊದಲಾದವುಗಳು, ಮತ್ತು ಭೂಮಿಯಲ್ಲಿ ತಿಳಿದಿರುವ ಸರ್ವ ಧರ್ಮವನ್ನೂ ವಿಸ್ತಾರವಾಗಿ ನನಗೆ ಹೇಳಬೇಕು.”
ಮತ್ಸ್ಯ ಉವಾಚ । ಮಹಾಪ್ರಲಯಕಾಲಾಂತ ಏತದಾಸೀತ್ತಮೋಮಯಮ್ । ಪ್ರಸುಪ್ತಮಿವ ಚಾತರ್ಕ್ಯಮಪ್ರಜ್ಞಾತಮಲಕ್ಷಣಮ್ ।। 25 ।। ಅವಿಜ್ಞೇಯಮವಿಜ್ಞಾತಂ ಜಗತ್ಸ್ಥಾಸ್ನು ಚರಿಷ್ಣು ಚ । ತತಃ ಸ್ವಯಂಭೂರವ್ಯಕ್ತಃ ಪ್ರಭವಃ ಪುಣ್ಯಕರ್ಮಣಾಮ್ ।। 26 ।। ವ್ಯಂಜಯನ್ನೇತದಖಿಲಂ ಪ್ರಾದುರಾಸೀತ್ತಮೋನುದಃ । ಯೋಽತೀಂದ್ರಿಯಃ ಪರೋ ವ್ಯಕ್ತಾದಣುರ್ಜ್ಯಾಯಾನ್ ಸನಾತನಃ । ನಾರಾಯಣ ಇತಿ ಖ್ಯಾತಃ ಸ ಏಕಃ ಸ್ವಯಮುದ್ಬಭೌ ।। 27 ।। ಯಃ ಶರೀರಾದಭಿಧ್ಯಾಯ ಸಿಸೃಕ್ಷುರ್ವಿವಿಧಂ ಜಗತ್ । ಅಪ ಏವ ಸಸರ್ಜಾದೌ ತಾಸು ವೀರ್ಯಮವಾಸೃಜತ್ ।। 28 ।। ತದೇವಾಂಡಂ ಸಮಭವದ್ಧೇಮರೂಪ್ಯಮಯಂ ಮಹತ್ । ಸಂವತ್ಸರಸಹಸ್ರೇಣ ಸೂರ್ಯಾಯುತಸಮಪ್ರಭಮ್ ।। 29 ।। ಪ್ರವಿಶ್ಯಾಂತರ್ಮಹಾತೇಜಾಃ ಸ್ವಯಮೇವಾತ್ಮಸಂಭವಃ । ಪ್ರಭಾವಾದಪಿ ತದ್ವ್ಯಾಪ್ತ್ಯಾ ವಿಷ್ಣುತ್ವಮಗಮತ್ಪುನಃ ।। 30 ।।
ಮತ್ಸ್ಯವು ಹೇಳಿತು: “ಮಹಾಪ್ರಳಯದ ಅಂತ್ಯದಲ್ಲಿ ಇವೆಲ್ಲವೂ ತಮೋಮಯವಾಗಿತ್ತು. ಆಗ ಇದು ಗಾಢನಿದ್ರೆಯಲ್ಲಿರುವಂತೆ ತೋರುತ್ತಿತ್ತು ಮತ್ತು ಊಹೆ-ತರ್ಕಗಳಿಗೆ ನಿಲುಕದೂ, ಪ್ರಜ್ಞಾಶೂನ್ಯವಾಗಿಯೂ, ಲಕ್ಷಣರಹಿತವೂ ಆಗಿತ್ತು. ನಂತರ ಅವಿಜ್ಞೇಯನೂ, ಅವಿಜ್ಞಾತನೂ, ಪುಣ್ಯಕರ್ಮಗಳ ಮೂಲನೂ, ಅವ್ಯಕ್ತನೂ ಆದ ಸ್ವಯಂಭುವು ಕತ್ತಲೆಯನ್ನು ಹೋಗಲಾಡಿಸಿ ಇವೆಲ್ಲವನ್ನೂ ಪ್ರಕಾಶಗೊಳಿಸುತ್ತಾ ತಾನಾಗಿಯೇ ಮೈದೋರಿದನು. ಆ ಅತೀಂದ್ರಿಯನೇ, ಸೂಕ್ಷ್ಮಪ್ರಕೃತಿಗಿಂತಲೂ ಸೂಕ್ಷ್ಮನಾದ, ಸನಾತನ ಅದ್ವಿತೀಯ ನಾರಾಯಣನೆಂದು ಖ್ಯಾತನಾದನು. ಅವನು ತಾನೇ ತಾನಾಗಿ ಉದ್ಭವಿಸಿದನು. ತನ್ನ ಶರೀರದಿಂದಲೇ ವಿವಿಧ ಜಗತ್ತನ್ನು ಸೃಷ್ಟಿಸಲು ಬಯಸಿ ಅವನು ಮೊಟ್ಟಮೊದಲು ನೀರನ್ನು ಸೃಷ್ಟಿಸಿ ಅದರಲ್ಲಿ ತನ್ನ ವೀರ್ಯವನ್ನು ಬಿಟ್ಟನು. ಆ ಬೀಜವೇ ಸಾವಿರ ಸಂವತ್ಸರಗಳ ನಂತರ ಹತ್ತುಸಾವಿರ ಸೂರ್ಯರ ಪ್ರಭೆಯುಳ್ಳ ಹೇಮರೂಪದ ಅವ್ಯಯ ಮಹಾ ಅಂಡವಾಯಿತು. ತಾನೇ ತಾನಾಗಿ ಸಂಭವಿಸಿದ ಆ ಮಹಾತೇಜಸ್ವೀ ನಾರಾಯಣನು ಆ ಅಂಡವನ್ನು ಪ್ರವೇಶಿಸಿ ತನ್ನ ಪ್ರಭಾವದಿಂದ ಅದನ್ನು ವ್ಯಾಪಿಸಿ ಪುನಃ ವಿಷ್ಣುತ್ವವನ್ನು ಪಡೆದುಕೊಂಡನು.
ತದಂತರ್ಭಗವಾನೇಷ ಸೂರ್ಯಃ ಸಮಭವತ್ಪುರಾ । ಆದಿತ್ಯಶ್ಚಾದಿಭೂತತ್ವಾದ್ಬ್ರಹ್ಮಾ ಬ್ರಹ್ಮ ಪಠನ್ನಭೂತ್ ।। 31 ।। ದಿವಂ ಭೂಮಿಂ ಸಮಕರೋತ್ತದಂಡಶಕಲದ್ವಯಮ್ । ಸ ಚಾಕರೋದ್ದಿಶಃ ಸರ್ವಾ ಮಧ್ಯೇ ವ್ಯೋಮ ಚ ಶಾಶ್ವತಮ್ ।। 32 ।। ಜರಾಯುರ್ಮೇರುಮುಖ್ಯಾಶ್ಚ ಶೈಲಾಸ್ತಸ್ಯಾಭವಂಸ್ತದಾ । ಯದುಲ್ಬಂ ತದಭೂನ್ಮೇಘಸ್ತಡಿತ್ಸಂಘಾತಮಂಡಲಮ್ ।। 33 ।। ನದ್ಯೋಽಂಡನಾಮ್ನಃ ಸಂಭೂತಾಃ ಪಿತರೋ ಮನವಸ್ತಥಾ । ಸಪ್ತ ಯೇಽಮೀ ಸಮುದ್ರಾಶ್ಚ ತೇಽಪಿ ಚಾಂತರ್ಜಲೋದ್ಭವಾಃ ।। 34 ।। ಲವಣೇಕ್ಷುಸುರಾದ್ಯಾಶ್ಚ ನಾನಾರತ್ನಸಮನ್ವಿತಾಃ । ಸ ಸಿಸೃಕ್ಷುರಭೂದ್ದೇವಃ ಪ್ರಜಾಪತಿರರಿಂದಮ । ತತ್ತೇಜಸಶ್ಚ ತತ್ರೈಷ ಮಾರ್ತಂಡಃ ಸಮಜಾಯತ ।। 35 ।। ಮೃತೇಽಂಡೇ ಜಾಯತೇ ಯಸ್ಮಾನ್ಮಾರ್ತಂಡಸ್ತೇನ ಸಂಸ್ಮೃತಃ । ರಜೋಗುಣಮಯಂ ಯತ್ತದ್ರೂಪಂ ತಸ್ಯ ಮಹಾತ್ಮನಃ ।। 36 ।। ಚತುರ್ಮುಖಃ ಸ ಭಗವಾನಭೂಲ್ಲೋಕಪಿತಾಮಹಃ । ಯೇನ ಸೃಷ್ಟಂ ಜಗತ್ಸರ್ವಂ ಸದೇವಾಸುರಮಾನುಷಮ್ । ತಮವೇಹಿ ರಜೋರೂಪಂ ಮಹತ್ಸತ್ತ್ವಮುದಾಹೃತಮ್ ।। 37 ।।
ಅದರೊಳಗೆ ಈ ಭಗವಂತನೇ ಹಿಂದೆ ಸೂರ್ಯನಾದನು, ಮೊಟ್ಟಮೊದಲನೇ ಜೀವವಾದ್ದರಿಂದ ಆದಿತ್ಯನೆಂದೂ, ವೇದವನ್ನು ಹೇಳಿದ ಕಾರಣ ಬ್ರಹ್ಮನೆಂದೂ ಆದನು. ಆ ಅಂಡವನ್ನು ದಿವ-ಭೂಮಿಗಳೆಂಬ ಎರಡು ಸಮಭಾಗಗಳನ್ನಾಗಿ ಮಾಡಿದನು. ಮಧ್ಯದಲ್ಲಿ ಶಾಶ್ವತವಾದ ಆಕಾಶವನ್ನೂ ಮತ್ತು ಸರ್ವ ದಿಕ್ಕುಗಳನ್ನೂ ನಿರ್ಮಿಸಿದನು. ಮೇರುವೇ ಮೊದಲಾದ ಪರ್ವತಗಳು ಅದರ ಗರ್ಭಕೋಶವಾದವು. ಮಿಂಚಿನ ಬಳ್ಳಿಗಳಿಂದ ಬೆಳಗುವ ಮೇಘವು ಗರ್ಭಾವರಣವಾಯಿತು. ನದಿಗಳು, ಪಿತೃಗಳು, ಮನ್ವಂತರಾಧಿಪತಿಗಳೂ ಆ ಅಂಡದಿಂದಲೇ ಹುಟ್ಟಿದರು. ಅದರ ಒಳಗೇ ಜಲದಿಂದ ಉದ್ಭವವಾದ ಮತ್ತು ನಾನಾರತ್ನಗಳಿಂದ ತುಂಬಿದ ಲವಣ-ಇಕ್ಷು-ಸುರಾದಿ ಏಳು ಸಮುದ್ರಗಳು[4] ಇವೆ. ಅರಿಂದಮ! ಸೃಷ್ಟಿಯನ್ನು ಮಾಡಲು ಬಯಸಿದ ಆ ದೇವನು ಪ್ರಜಾಪತಿ ಬ್ರಹ್ಮನಾದನು. ಅವನ ತೇಜಸ್ಸಿನಿಂದ ಅಲ್ಲಿಯೇ ಮಾರ್ತಂಡ ಸೂರ್ಯನು ಹುಟ್ಟಿದನು. ಮೃತವಾದ ಅಥವಾ ನಿರ್ಜೀವವಾಗಿದ್ದ ಅಂಡದಿಂದ ಹುಟ್ಟಿದುದರಿಂದ ಅವನು ಮಾರ್ತಂಡನೆಂದಾದನು. ಆ ಮಹಾತ್ಮನ ರೂಪವು ರಜೋಗುಣಮಯವಾದುದು. ದೇವ-ಅಸುರ-ಮನುಷ್ಯರಿಂದೊಡಗೂಡಿದ ಸರ್ವ ಜಗತ್ತನ್ನೂ ಸೃಷ್ಟಿಸಿದ ಆ ಲೋಕಪಿತಾಮಹ ಭಗವಾನ್ ಬ್ರಹ್ಮನು ಚತುರ್ಮುಖನು. ಅವನನ್ನೇ ರಜೋರೂಪವಾದ ಮಹತ್ ಸತ್ತ್ವ ಎಂದು ಕರೆಯುತ್ತಾರೆ.”
ಇತಿ ಶ್ರೀಮಾತ್ಸ್ಯೇ ಮಹಾಪುರಾಣೇ ಆದಿಸರ್ಗೇ ಬ್ರಹ್ಮಾಂಡದಲನಂ ನಾಮ ದ್ವಿತೀಯೋಽಧ್ಯಾಯಃ ।।
ಇದು ಶ್ರೀಮತ್ಸ್ಯ ಮಹಾಪುರಾಣದಲ್ಲಿ ಆದಿಸರ್ಗದಲ್ಲಿ ಬ್ರಹ್ಮಾಂಡದಲನಂ ಎನ್ನುವ ಎರಡನೇ ಅಧ್ಯಾಯವು.
[1] ಔರ್ವಾಗ್ನಿ ಎಂದರೆ ಸಮುದ್ರದ ಅಂತರಾಳದಲ್ಲಿ ಇರುವ ಅಗ್ನಿ. ಔರ್ವ = ಊರುವನ್ನು ಸೀಳಿ ಹೊರಬಂದ ಭಾರ್ಗವ ವಿಪ್ರರ್ಷಿ ಸತ್ತಮ; ಅಗ್ನಿ = ಬೆಂಕಿ ಅಂದರೆ ಔರ್ವನಿಂದ ಹುಟ್ಟಿದ ಅಗ್ನಿಯೇ ಔರ್ವಾಗ್ನಿ. ಮಹಾಭಾರತದ ಆದಿಪರ್ವದ ಚೈತ್ರರಥಪರ್ವದಲ್ಲಿ ಅಧ್ಯಾಯ 169-172 ರಲ್ಲಿ ಬರುವ ವಸಿಷ್ಠನು ಪರಾಶರನಿಗೆ ಹೇಳಿದ ಔರ್ವೋಪಾಖ್ಯಾನದ ಪ್ರಕಾರ: ಕೃತವೀರ್ಯನ ವಂಶದವರು ಸಂಪತ್ತಿಗಾಗಿ ಭಾರ್ಗವಕುಲದವರನ್ನು ನಾಶಗೊಳಿಸುತ್ತಾರೆ. ಆಗ ಗರ್ಭಿಣಿಯಾಗಿದ್ದ ಓರ್ವ ಭಾರ್ಗವಿಯ ತೊಡೆಯನ್ನು ಸೀಳಿಬಂದ ಮಗುವು ತನ್ನ ತೇಜಸ್ಸಿನಿಂದ ಕ್ಷತ್ರಿಯರನ್ನು ಕುರುಡುಮಾಡುತ್ತದೆ. “ಸ ಔರ್ವ ಇತಿ ಪಿಪ್ರರ್ಷಿರೂರುಂ ಭಿತ್ತ್ವಾ ವ್ಯಜಾಯತ” ಅರ್ಥಾತ್: ಊರುವನ್ನು ಸೀಳಿ ಹೊರಬಂದ ಆ ವಿಪ್ರರ್ಷಿಸತ್ತಮನು ಔರ್ವನೆಂದಾದನು. ಲೋಕವಿನಾಶಕ್ಕೆ ತಪಸ್ಸನ್ನು ತಪಿಸುತ್ತಿದ್ದ ಔರ್ವವನ್ನು ಪಿತೃಗಳು ಬಂದು “ನಿನ್ನಲ್ಲಿರುವ ಕ್ರೋಧವನ್ನು ಕಿತ್ತುಹಾಕು” ಎಂದು ಹೇಳುತ್ತಾರೆ. ತನ್ನಲ್ಲಿದ್ದ ಕೋಪವನ್ನು ಎಲ್ಲಿ ಹಾಕಬೇಕೆಂದು ಔರ್ವನು ಕೇಳಲು ಪಿತೃಗಳು “ಈ ಕ್ರೋಧಾಗ್ನಿಯನ್ನು ನೀರಿನಲ್ಲಿಯೇ ಬಿಟ್ಟಬಿಡು” ಎನ್ನುತ್ತಾರೆ. ನಂತರ ಔರ್ವನು ಕ್ರೋಧದಿಂದ ಜನಿಸಿದ ಆ ಅಗ್ನಿಯನ್ನು ವರುಣಾಲಯದಲ್ಲಿ ವಿಸರ್ಜಿಸುತ್ತಾನೆ. ಅದು ಒಂದು ಮಹಾ ಹಯಶಿರವಾಗಿ (ಅದ್ದರಿಂದ ಅದಕ್ಕೆ ವಡವಾಗ್ನಿ ಅಥವಾ ಬಡವಾಗ್ನಿ ಎಂಬ ಹೆಸರೂ ಇದೆ), ಬಾಯಿಯಿಂದ ಅಗ್ನಿಯನ್ನು ಉಗುಳುತ್ತಾ ಸಮುದ್ರದ ನೀರನ್ನು ಕುಡಿಯುತ್ತದೆ ಎಂದು ಹೇಳಿದ್ದಾರೆ (ವಡವಾಮುಖದೀಪ್ತಾಗ್ನೇಸ್ತೋಯಹವ್ಯಪ್ರದಂ ಶುಭಂ ಎಂದು ಶ್ರೀಮಹಾಭಾರತದ ಆದಿಪರ್ವದ ಆಸ್ತೀಕಪರ್ವದ ಅಧ್ಯಾಯ 19ರಲ್ಲಿ ಶ್ಲೋಕ 14ರಲ್ಲಿ ಇದೆ).
ಈ ಔರ್ವಮುನಿಯೇ ಹುಟ್ಟಿದಾಗಿನಿಂದ ಸಗರನನ್ನು ರಕ್ಷಿಸಿದನು (ಹರಿವಂಶ, ಅಧ್ಯಾಯ 10, ಶ್ಲೋಕ 25), ಮತ್ತು ಮುಂದೆ ಸಗರ ಚಕ್ರವರ್ತಿಗೆ ಮಕ್ಕಳಾಗುವಂತೆ ವರವನ್ನಿತ್ತನು (ಹರಿವಂಶ, ಅಧ್ಯಾಯ 10, ಶ್ಲೋಕ 55-56; ಲಿಂಗಮಹಾಪುರಾಣ, ಅಧ್ಯಾಯ 66, ಶ್ಲೋಕ 15-16).
ಶ್ರೀಮಹಾಭಾರತದ ಖಿಲಪರ್ವ ಹರಿವಂಶದಲ್ಲಿ ಔರ್ವನು ಸ್ವಾರೋಚಿಷ ಮನ್ವಂತರದಲ್ಲಿ ವಸಿಷ್ಠನ ಮಗನಾಗಿ ಸಪ್ತರ್ಷಿಗಳಲ್ಲಿ ಒಬ್ಬನಾಗಿದ್ದನು ಎಂದಿದೆ (ಹರಿವಂಶ, ಅಧ್ಯಾಯ 7, ಶ್ಲೋಕ 12).
ಹರಿವಂಶದ ಅಧ್ಯಾಯ 35ರಲ್ಲಿ ಬರುವ ಔರ್ವಾಗ್ನಿಯ ಉತ್ಪತ್ತಿಯ ವಿಷಯವು ಆದಿಪರ್ವದ ಔರ್ವೋಪಾಖ್ಯಾನದಲ್ಲಿ ಬಂದಿರುವುದಕ್ಕಿಂತ ಭಿನ್ನವಾಗಿದೆ. ಇಲ್ಲಿ ದೇವಾಸುರಸಂಗ್ರಾಮದ ವೇಳೆಯಲ್ಲಿ ವರುಣನು ಇಂದ್ರನಿಗೆ ಔರ್ವಾಗ್ನಿಯ ಕುರಿತು ಹೇಳುತ್ತಾನೆ. ಇದರ ಪ್ರಕಾರ: ಬ್ರಹ್ಮರ್ಷಿ ಭೃಗುವಿನ ಮಗನಾದ ಔರ್ವನು ಅತಿ ದಾರುಣ ತಪಸ್ಸನ್ನು ತಪಿಸುತ್ತಿದ್ದಾಗ ಬ್ರಹ್ಮರ್ಷಿಗಳೊಂದಿಗೆ ದೇವ ಮುನಿಗಣಗಳು ಹೋಗಿ ಅವನಿಗೆ “ವಂಶದ ವೃದ್ಧಿಗಾಗಿ ಪ್ರಯತ್ನಿಸು. ನಿನ್ನನ್ನು ನೀನೇ ಬೆಳೆಯಿಸಿಕೋ. ನಿನ್ನ ಓಜಸ್ಸಿನ ತೇಜಸ್ಸನ್ನು ನೀಡಿ ನಿನ್ನ ಎರಡನೇ ಶರೀರವನ್ನು ಪ್ರಕಟಗೊಳಿಸು” ಎನ್ನುತ್ತಾರೆ. ತಪಸ್ಸಿನಿಂದ ಆವಿಷ್ಟನಾಗಿದ್ದ ಊರ್ವನಾದರೋ ತನ್ನ ತೊಡೆಯನ್ನು ಅಗ್ನಿಯಲ್ಲಿ ಹಾಕಿದನು ಮತ್ತು ಪುತ್ರನ ಉತ್ಪತ್ತಿಗಾಗಿ ಅರಣಿರೂಪದಲ್ಲಿದ್ದ ಆ ತೊಡೆಯನ್ನು ದರ್ಭೆಯಿಂದ ಮಥಿಸತೊಡಗಿದನು. ಆಗ ಒಮ್ಮೆಲೇ ಅವನ ತೊಡೆಯನ್ನು ಸೀಳಿಕೊಂಡು ಓರ್ವ ಅಗ್ನಿಸ್ವರೂಪ ಪುತ್ರನು ಉತ್ಪನ್ನನಾದನು. ಜಗತ್ತನ್ನೇ ಅಂತ್ಯಗೊಳಿಸಲು ಬಯಸುತ್ತಿದ್ದ ಅವನು ಇಂಧನವಿಲ್ಲದೇ ಜ್ವಾಲಾಮಾಲಿಯಾಗಿ ಉರಿಯುತ್ತಿದ್ದನು. ಊರ್ವನ ತೊಡೆಯನ್ನು ಸೀಳಿ ಹುಟ್ಟಿದ ಮೂರುಲೋಕಗಳನ್ನೂ ಸುಟ್ಟುಬಿಡುವಂಥಹ ಪರಮ ಕೋಪನನಾದ ಅಂತಕ ಅನಲನಂತಿದ್ದ ಅವನ ಹೆಸರು ಔರ್ವ ಎಂದಾಯಿತು. ಬ್ರಹ್ಮನು ಅವನಿಗೆ ಜಲವಾಸವನ್ನೂ, ಯುಗಾಂತದ ಸಂವರ್ತಕಾಗ್ನಿಯ ರೂಪವನ್ನೂ ಔರ್ವಾಗ್ನಿಗೆ ವರವನ್ನಾಗಿತ್ತನು.
ಸಮುದ್ರದೊಳಗಿದ್ದರೂ ಎಂದಿಗೂ ನಂದದ ಅಗ್ನಿ ಮತ್ತು ಇದಕ್ಕೆ ಭೂಮಿಯನ್ನೆಲ್ಲಾ ನಾಶಮಾಡುವ ಶಕ್ತಿಯಿದೆ. ಹಿಂದೆ ಪಾತಾಲದಲ್ಲಿದ್ದ ಔರ್ವನೇ ಸಂವರ್ತಕ ಅಗ್ನಿಯಾಗಿ ನೀರನ್ನೇ ಹವಿಸ್ಸನ್ನಾಗಿ ಕುಡಿದು ಜಲಮಯನಾಗುತ್ತಾನೆ ಎಂದು ಹರಿವಂಶದ ಅಧ್ಯಾಯ 30ರ ಶ್ಲೋಕ 14ರಲ್ಲಿ ಬಂದಿದೆ.
[2] ಪ್ರಳಯದಲ್ಲಿ ದೈನಂದಿನ ಪ್ರಳಯ, ಅವಾಂತರಪ್ರಳಯ, ಮತ್ತು ಮಹಾಪ್ರಳಯ ಎಂಬ ಮೂರು ಭೇದಗಳು. ರೋಗಾದ್ಯುಪದ್ರವಗಳಿಂದ ಆಗುವ ಪ್ರಾಣನಾಶವು ಮೊದಲನೆಯದು. ಎರಡು ಮನ್ವಂತರಗಳ ಸಂಧಿಕಾಲದಲ್ಲಿ ಆಗುವುದು ಎರಡನೆಯದು. ಬ್ರಹ್ಮನ ಆಯುರ್ಮಾನದ ಅವಸಾನದಲ್ಲಿ ಬರುವುದು ಮಹಾಪ್ರಳಯವು. ಇದರಲ್ಲಿ ಪಂಚಭೂತಗಳೂ, ಅವುಗಳ ತನ್ಮಾತ್ರಗಳೂ ಸಹ ಲಯವಾಗುತ್ತವೆ. (ಅರಮನೆ ಪ್ರಕಾಶನ)
[3] ಇಷ್ಟಾಪೂರ್ತ = ಸ್ವರ್ಗಪ್ರದವಾದ ಬಾವಿ, ಹೊಂಡ ಮತ್ತು ಸರೋವರಗಳ ನಿರ್ಮಾಣ
[4] ಸಪ್ತಸಮುದ್ರಗಳು: (1) ಲವಣೋದ (2) ಇಕ್ಷುರಸೋದ (3) ಸುರೋದ (4) ಘೃತೋದ( 5) ಕ್ಷೀರೋದ (6) ದಧಿಮಂಧೋದ (7) ಸ್ವಾದೂದಕ (ನೋಡಿ: ಅನುಬಂಧ 8, “ಪುರಾಣಸಂಗ್ರಹ ಲೋಕಗಳು”).