ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 1: ಮನುವಿಷ್ಣುಸಂವಾದಃ
ಪ್ರಚಂಡತಾಂಡವಾಟೋಪೇ ಪ್ರಕ್ಷಿಪ್ತಾ ಯೇನ ದಿಗ್ಗಜಾಃ । ಭವಂತು ವಿಘ್ನಭಂಗಾಯ ಭವಸ್ಯ ಚರಣಾಂಬುಜಾಃ ।। 1 ।।
ಪ್ರಚಂಡವಾದ ತಾಂಡವನರ್ತನದ ರಭಸದಲ್ಲಿ ದಿಗ್ಗಜಗಳನ್ನು ಎತ್ತಿ ಬಿಸಾಡಿದ ಪರಮೇಶ್ವರನ ಅಡಿದಾವರೆಗಳು ವಿಘ್ನಗಳನ್ನು ಪರಿಹರಿಸಲಿ.
ಪಾತಾಲಾದುತ್ಪತಿಷ್ಣೋರ್ಮಕರವಸತಯೋ ಯಸ್ಯ ಪುಚ್ಚಾಭಿಘಾತಾದೂರ್ಧ್ವಂ ಬ್ರಹ್ಮಾಂಡಖಂಡವ್ಯತಿಕರವಿಹಿತವ್ಯತ್ಯಯೇನಾಪತಂತಿ । ವಿಷ್ಣೋರ್ಮತ್ಸ್ಯಾವತಾರೇ ಸಕಲವಸುಮತೀ ಮಂಡಲಂ ವ್ಯಶ್ನುವಾನಸ್ತಸ್ಯಾಸ್ಯೋದೀರಿತಾನಾಂ ಧ್ವನಿರಪಹರತಾದಶ್ರಿಯಂ ವಃ ಶ್ರುತೀನಾಮ್ ।। 2 ।।
ಮತ್ಸ್ಯಾವತಾರವೆತ್ತಿದ ಮಹಾವಿಷ್ಣುವು ಪಾತಾಳದಿಂದ ಮೇಲಕ್ಕೆ ನೆಗೆಯುವಾಗ ಬಾಲದ ಬಡಿತದಿಂದ ಸಮುದ್ರಗಳು ಮೇಲಕ್ಕೆ ಚಿಮ್ಮಿ, ಬ್ರಹ್ಮಾಂಡದ ತುದಿಯ ಚಿಪ್ಪಿಗೆ ಬಡಿದು, ಅದರ ಅಡ್ಡಿಯಿಂದ ಕೆಳಗೆ ಬೀಳುತ್ತಿರುವಾಗ, ಅವನ ಮುಖದಿಂದ ಹೊರಟು ಭೂಮಂಡಲವನ್ನೆಲ್ಲವನ್ನೂ ತುಂಬಿದ ವೇದಧ್ವನಿಯು ನಿಮ್ಮ ಅಮಂಗಳವನ್ನು ಕಳೆಯಲಿ.
ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ । ದೇವೀಂ ಸರಸ್ವತೀಂ ಚೈವ ತತೋ ಜಯಮುದೀರಯೇತ್ ।। 3 ।।
ನಾರಾಯಣನನ್ನೂ, ಮನುಜರಲ್ಲಿ ಉತ್ತಮನಾದ ನರಮುನಿಯನ್ನೂ, ಸರಸ್ವತೀ ದೇವಿಯನ್ನೂ, ವ್ಯಾಸಮಹರ್ಷಿಯನ್ನೂ ನಮಿಸಿ, ಬಳಿಕ ಮತ್ಸ್ಯಪುರಾಣವನ್ನು ಪಠಿಸಬೇಕು.
ಅಜೋಽಪಿ ಯಃ ಕ್ರಿಯಾಯೋಗಾನ್ನಾರಾಯಣ ಇತಿ ಸ್ಮೃತಃ । ತ್ರಿಗುಣಾಯ ತ್ರಿವೇದಾಯ ನಮಸ್ತಸ್ಮೈ ಸ್ವಯಂಭುವೇ ।। 1 ।।
ಜನ್ಮವಿಲ್ಲದಿದ್ದರೂ ಕರ್ಮವಶನಾಗಿ ಸ್ವೇಚ್ಛೆಯಿಂದ ವಿಧ ವಿಧದ ರೂಪಗಳನ್ನು ಧರಿಸಿ, ಸ್ಥಾವರಜಂಗಮಾತ್ಮಕವಾದ ಜಗತ್ತನ್ನು ನಿರ್ಮಿಸಿ, ಅದರ ಅಂತರಾತ್ಮನೂ ಧಾರಕನೂ ಆಗಿ, ನಾರಾಯಣನೆಂದೆನಿಸಿಕೊಂಡಿರುವ ಸತ್ತ್ವರಜಸ್ತಮಗಳೆಂಬ ಗುಣತ್ರಯಾತ್ಮಕನೂ, ಋಗ್ಯಜುಸ್ಸಾಮಗಳೆಂಬ ವೇದತ್ರಯ ರೂಪನೂ ಆದ ವಿಷ್ಣುವಿಗೆ ನಮಸ್ಕಾರ.
ಸೂತಮೇಕಾಗ್ರಮಾಸೀನಂ ನೈಮಿಷಾರಣ್ಯವಾಸಿನಃ । ಮುನಯೋ ದೀರ್ಘಸತ್ರಾಂತೇ ಪಪ್ರಚ್ಚುರ್ದೀರ್ಘಸಂಹಿತಾಮ್ ।। 2 ।। ಪ್ರವೃತ್ತಾಸು ಪುರಾಣೇಷು ಧರ್ಮ್ಯಾಸು ಲಲಿತಾಸು ಚ । ಕಥಾಸು ಶೌನಕಾದ್ಯಾಸ್ತು ಅಭಿನಂದ್ಯ ಮುಹುರ್ಮುಹುಃ ।। 3 ।। ಕಥಿತಾನಿ ಪುರಾಣಾನಿ ಯಾನ್ಯಸ್ಮಾಕಂ ತ್ವಯಾನಘ । ತಾನ್ಯೇವಾಮೃತಕಲ್ಪಾನಿ ಶ್ರೋತುಮಿಚ್ಛಾಮಹೇ ಪುನಃ ।। 4 ।। ಕಥಂ ಸಸರ್ಜ ಭಗವಂಲ್ಲೋಕನಾಥಶ್ಚರಾಚರಮ್ । ಕಸ್ಮಾಚ್ಚ ಭಗವಾನ್ವಿಷ್ಣುರ್ಮತ್ಸ್ಯರೂಪತ್ವಮಾಶ್ರಿತಃ ।। 5 ।। ಭೈರವತ್ವಂ ಭವಸ್ಯಾಪಿ ಪುರಾರಿತ್ವಂ ಚ ಕೇನ ಹಿ । ಕಸ್ಯ ಹೇತೋಃ ಕಪಾಲಿತ್ವಂ ಜಗಾಮ ವೃಷಭಧ್ವಜಃ ।। 6 ।। ಸರ್ವಮೇತತ್ಸಮಾಚಕ್ಷ್ವ ಸೂತ ವಿಸ್ತರಶಃ ಕ್ರಮಾತ್ । ತ್ವದ್ವಾಕ್ಯೇನಾಮೃತಸ್ಯೇವ ನ ತೃಪ್ತಿರಿಹ ಜಾಯತೇ ।। 7 ।।
ದೀರ್ಘಕಾಲದ ಯಾಗವು ಸಮಾಪ್ತಿಯಾಗಲು, ಏಕಾಗ್ರಚಿತ್ತನಾಗಿ ಕುಳಿತಿದ್ದ ಸೂತ ಪೌರಾಣಿಕನನ್ನು ನೈಮಿಷಾರಣ್ಯವಾಸೀ ಮುನಿಗಳು ದೀರ್ಘ ವೃತ್ತಾಂತದ ಕುರಿತು ಪ್ರಶ್ನಿಸಿದರು. ಮನೋಹರವೂ, ಧರ್ಮಮಯವೂ ಆದ ಪುರಾಣ ಕಥೆಗಳು ನಡೆಯುತ್ತಿರಲು, ಶೌನಕಾದಿಗಳು ಸೂತ ಪೌರಾಣಿಕನನ್ನು ಪುನಃ ಪುನಃ ಶ್ಲಾಘಿಸಿ, “ಅನಘ! ನೀನು ಹೇಳಿದ ಅಮೃತಸಮಾನ ಪುರಾಣಗಳನ್ನೇ ಮತ್ತೆ ಕೇಳಬಯಸುತ್ತೇವೆ. ಭಗವಾನ್ ಲೋಕನಾಥನು ಚರಾಚರಗಳನ್ನು ಹೇಗೆ ಸೃಷ್ಟಿಸಿದನು? ಭಗವಾನ್ ವಿಷ್ಣುವು ಏಕೆ ಮತ್ಸ್ಯರೂಪವನ್ನು ತಾಳಿದನು? ಭವ ಪರಶಿವನು ಭೈರವತ್ವವನ್ನು ಮತ್ತು ಪುರಾರಿತ್ವವನ್ನು ಏಕೆ ಪಡೆದುಕೊಂಡನು? ವೃಷಭದ್ವಜ ಶಿವನು ಯಾವ ಕಾರಣಕ್ಕಾಗಿ ಕಪಾಲಿತ್ವವನ್ನು ಪಡೆದುಕೊಂಡನು? ಇವೆಲ್ಲವನ್ನೂ ಕ್ರಮವಾಗಿ ವಿಸ್ತರಿಸಿ ಹೇಳು. ಅಮೃತವನ್ನು ಸವಿದಂತೆ ನಿನ್ನ ಮಾತುಗಳನ್ನು ಎಷ್ಟುಕೇಳಿದರೂ ತೃಪ್ತಿಯಾಗುತ್ತಿಲ್ಲ” ಎಂದರು.
ಸೂತ ಉವಾಚ । ಪುಣ್ಯಂ ಪವಿತ್ರಮಾಯುಷ್ಯಮಿದಾನೀಂ ಶೃಣುತ ದ್ವಿಜಾಃ । ಮಾತ್ಸ್ಯಂ ಪುರಾಣಮಖಿಲಂ ಯಜ್ಜಗಾದ ಗದಾಧರಃ ।। 8 ।। ಪುರಾ ರಾಜಾ ಮನುರ್ನಾಮ ಚೀರ್ಣವಾನ್ವಿಪುಲಂ ತಪಃ । ಪುತ್ರೇ ರಾಜ್ಯಂ ಸಮಾರೋಪ್ಯ ಕ್ಷಮಾವಾನ್ರವಿನಂದನಃ ।। 9 ।। ಮಲಯಸ್ಯೈಕದೇಶೇ ತು ಸರ್ವಾತ್ಮಗುಣಸಂಯುತಃ । ಸಮದುಃಖಸುಖೋ ವೀರಃ ಪ್ರಾಪ್ತವಾನ್ಯೋಗಮುತ್ತಮಮ್ ।। 10 ।। ಬಭೂವ ವರದಶ್ಚಾಸ್ಯ ವರ್ಷಾಯುತಶತೇ ಗತೇ । ವರಂ ವೃಣೀಷ್ವ ಪ್ರೋವಾಚ ಪ್ರೀತಃ ಸ ಕಮಲಾಸನಃ ।। 11 ।। ಏವಮುಕ್ತೋಽಬ್ರವೀದ್ರಾಜಾ ಪ್ರಣಮ್ಯ ಸ ಪಿತಾಮಹಮ್ । ಏಕಮೇವಾಹಮಿಚ್ಛಾಮಿ ತ್ವತ್ತೋ ವರಮನುತ್ತಮಮ್ ।। 12 ।। ಭೂತಗ್ರಾಮಸ್ಯ ಸರ್ವಸ್ಯ ಸ್ಥಾವರಸ್ಯ ಚರಸ್ಯ ಚ । ಭವೇಯಂ ರಕ್ಷಣಾಯಾಲಂ ಪ್ರಲಯೇ ಸಮುಪಸ್ಥಿತೇ ।। 13 ।। ಏವಮಸ್ತ್ವಿತಿ ವಿಶ್ವಾತ್ಮಾ ತತ್ರೈವಾಂತರಧೀಯತ । ಪುಷ್ಪವೃಷ್ಟಿಃ ಸುಮಹತೀ ಖಾತ್ಪಪಾತ ಸುರಾರ್ಪಿತಾ ।। 14 ।।
ಸೂತನು ಹೇಳಿದನು: “ದ್ವಿಜರೇ! ಗದಾಧರ ವಿಷ್ಣುವು ಹೇಳಿದ, ಪುಣ್ಯಪ್ರದವೂ, ಪವಿತ್ರವೂ, ಆಯುಷ್ಯವನ್ನು ವೃದ್ಧಿಸುವ ಮತ್ಸ್ಯಪುರಾಣವನ್ನು ಸಂಪೂರ್ಣವಾಗಿ ಕೇಳಿ. ಹಿಂದೆ ಕ್ಷಮಾವಂತನೂ, ರವಿನಂದನನೂ ಆದ ಮನುವೆಂಬ ರಾಜನು ತನ್ನ ಮಗನಿಗೆ ರಾಜ್ಯವನ್ನು ಒಪ್ಪಿಸಿ, ವಿಪುಲ ತಪಸ್ಸನ್ನು ತಪಿಸಿದನು. ಸರ್ವಾತ್ಮಗುಣಸಂಯುತನಾಗಿದ್ದ ಮತ್ತು ಸುಖ-ದುಃಖಗಳಲ್ಲಿ ಸಮಾನನಾಗಿದ್ದ ಆ ವೀರನು ಮಲಯಪರ್ವತದಲ್ಲಿ ಒಂದುಕಡೆ ಉತ್ತಮ ಯೋಗದಲ್ಲಿ ತೊಡಗಿದ್ದನು. ಹತ್ತು ಲಕ್ಷ ವರ್ಷಗಳು ಕಳೆಯಲು ಅವನ ತಪಸ್ಸಿಗೆ ಮೆಚ್ಚಿ ವರವನ್ನು ಕೊಡಲಿಚ್ಛಿಸಿದ ಕಮಲಾಸನ ಬ್ರಹ್ಮನು “ವರವನ್ನು ಕೇಳು” ಎಂದನು. ಹೀಗೆ ಹೇಳಲು ರಾಜನು ಪಿತಾಮಹನಿಗೆ ನಮಸ್ಕರಿಸಿ “ನಾನು ನಿನ್ನಿಂದ ಒಂದೇ ಒಂದು ಅನುತ್ತಮ ವರವನ್ನು ಇಚ್ಛಿಸುತ್ತೇನೆ. ಪ್ರಳಯಕಾಲವು ಬಂದಾಗ ನಾನು ಸರ್ವಜೀವರಾಶಿಗಳ, ಸ್ಥಾವರ-ಜಂಗಮಗಳ ರಕ್ಷಣೆಮಾಡಲು ಸಮರ್ಥನಾಗಬೇಕು.” “ಹಾಗೆಯೇ ಆಗುತ್ತದೆ” ಎಂದು ಹೇಳಿ ವಿಶ್ವಾತ್ಮಾ ಬ್ರಹ್ಮನು ಅಲ್ಲಿಯೇ ಅಂತರ್ಧಾನ ನಾದನು. ಆಕಾಶದಿಂದ ಸುರರು ಸುರಿಸಿದ ಮಹಾ ಪುಷ್ಪವೃಷ್ಟಿಯು ಬಿದ್ದಿತು.
ಕದಾಚಿದಾಶ್ರಮೇ ತಸ್ಯ ಕುರ್ವತಃ ಪಿತೃತರ್ಪಣಮ್ । ಪಪಾತ ಪಾಣ್ಯೋರುಪರಿ ಶಫರೀ ಜಲಸಂಯುತಾ ।। 15 ।। ದೃಷ್ಟ್ವಾ ತಚ್ಛಫರೀರೂಪಂ ಸ ದಯಾಲುರ್ಮಹೀಪತಿಃ । ರಕ್ಷಣಾಯಾಕರೋದ್ಯತ್ನಂ ಸ ತಸ್ಮಿನ್ಕರಕೋದರೇ ।। 16 ।। ಅಹೋರಾತ್ರೇಣ ಚೈಕೇನ ಷೋಡಶಾಂಗುಲವಿಸ್ತೃತಃ । ಸೋಽಭವನ್ಮತ್ಸ್ಯರೂಪೇಣ ಪಾಹಿ ಪಾಹೀತಿ ಚಾಬ್ರವೀತ್ ।। 17 ।। ಸ ತಮಾದಾಯ ಮಣಿಕೇ ಪ್ರಾಕ್ಷಿಪಜ್ಜಲಚಾರಿಣಮ್ । ತತ್ರಾಪಿ ಚೈಕರಾತ್ರೇಣ ಹಸ್ತತ್ರಯಮವರ್ಧತ ।। 18 ।। ಪುನಃ ಪ್ರಾಹಾರ್ತನಾದೇನ ಸಹಸ್ರಕಿರಣಾತ್ಮಜಮ್ । ಸ ಮತ್ಸ್ಯಃ ಪಾಹಿ ಪಾಹೀತಿ ತ್ವಾಮಹಂ ಶರಣಂ ಗತಃ ।। 19 ।। ತತಃ ಸ ಕೂಪೇ ತಂ ಮತ್ಸ್ಯಂ ಪ್ರಾಹಿಣೋದ್ರವಿನಂದನಃ । ಯದಾ ನ ಮಾತಿ ತತ್ರಾಪಿ ಕೂಪೇ ಮತ್ಸ್ಯಃ ಸರೋವರೇ ।। 20 ।। ಕ್ಷಿಪ್ತೋಽಸೌ ಪೃಥುತಾಮಾಗಾತ್ಪುನರ್ಯೋಜನಸಂಮಿತಾಮ್ । ತತ್ರಾಪ್ಯಾಹ ಪುನರ್ದೀನಃ ಪಾಹಿ ಪಾಹಿ ನೃಪೋತ್ತಮ ।। 21 ।।
ಅವನು ಒಮ್ಮೆ ಆಶ್ರಮದಲ್ಲಿ ಪಿತೃತರ್ಪಣವನ್ನು ಕೊಡುತ್ತಿರುವಾಗ ನೀರಿನೊಡನೆ ಹೆಣ್ಣು ಮೀನೊಂದು ಬಂದು ಅವನ ಕೈಸೇರಿತು. ದಯಾಲು ಮಹೀಪತಿಯು ಆ ಮೀನನ್ನು ಕಂಡು ಅದನ್ನು ತನ್ನ ಕಮಂಡಲುವಿನಲ್ಲಿಟ್ಟು ರಕ್ಷಿಸಲು ಪ್ರಯತ್ನಿಸಿದನು. ಅದು ಒಂದೇ ದಿನದಲ್ಲಿ ಹದಿನಾರು ಅಂಗುಲ ಉದ್ದ ಬೆಳೆದು “ನನ್ನನ್ನು ಕಾಪಾಡು! ಕಾಪಾಡು!” ಎಂದು ಮತ್ಸ್ಯರೂಪದಿಂದಲೇ ಹೇಳಿತು. ಅವನು ಆ ಜಲಚರವನ್ನು ಎತ್ತಿ ಹಂಡೆಯಲ್ಲಿ ಇರಿಸಿದನು. ಅಲ್ಲೂ ಅದು ಒಂದೇ ರಾತ್ರಿಯಲ್ಲಿ ಮೂರು ಮೊಳ ಉದ್ದ ಬೆಳೆಯಿತು. ಪುನಃ ಆ ಮೀನು “ನಿನ್ನನ್ನೇ ಶರಣು ಬಂದಿದ್ದೇನೆ. ನನ್ನನ್ನು ಕಾಪಾಡು! ಕಾಪಾಡು!” ಎಂದು ಆರ್ತನಾದದಿಂದ ಸಹಸ್ರಕಿರಣಾತ್ಮಜನಿಗೆ ಹೇಳಿತು. ನಂತರ ರವಿನಂದನನು ಆ ಮೀನನ್ನು ಬಾವಿಗೆ ಕೊಂಡೊಯ್ದನು. ಅಲ್ಲಿಯೂ ಅದು ಹಿಡಿಸದಿರಲು, ಅದನ್ನು ಸರೋವರದಲ್ಲಿ ಬಿಟ್ಟನು. ಸರೋವರದಲ್ಲಿ ಅದು ಮತ್ತೆ ಒಂದು ಯೋಜನ ಉದ್ದವಾಗಿ ಬೆಳೆದು ಪುನಃ ದೀನಸ್ವರದಲ್ಲಿ “ನೃಪೋತ್ತಮ! ಪಾಹಿ! ಪಾಹಿ!” ಎಂದು ಹೇಳಿತು.
ತತಃ ಸ ಮನುನಾ ಕ್ಷಿಪ್ತೋ ಗಂಗಾಯಾಮಪ್ಯವರ್ಧತ । ಯದಾ ತದಾ ಸಮುದ್ರೇ ತಂ ಪ್ರಾಕ್ಷಿಪನ್ಮೇದಿನೀಪತಿಃ ।। 22 ।। ಯದಾ ಸಮುದ್ರಮಖಿಲಂ ವ್ಯಾಪ್ಯಾಸೌ ಸಮುಪಸ್ಥಿತಃ । ತದಾ ಪ್ರಾಹ ಮನುರ್ಭೀತಃ ಕೋಽಪಿ ತ್ವಮಸುರೇಶ್ವರಃ ।। 23 ।। ಅಥವಾ ವಾಸುದೇವಸ್ತ್ವಮನ್ಯ ಈದೃಕ್ಕಥಂ ಭವೇತ್ । ಯೋಜನಾಯುತವಿಂಶತ್ಯಾ ಕಸ್ಯ ತುಲ್ಯಂ ಭವೇದ್ವಪುಃ ।। 24 ।। ಜ್ಞಾತಸ್ತ್ವಂ ಮತ್ಸ್ಯರೂಪೇಣ ಮಾಂ ಖೇದಯಸಿ ಕೇಶವ । ಹೃಷೀಕೇಶ ಜಗನ್ನಾಥ ಜಗದ್ಧಾಮ ನಮೋಽಸ್ತು ತೇ ।। 25 ।।
ಮನುವು ಅದನ್ನು ಗಂಗಾನದಿಯಲ್ಲಿ ಬಿಡಲು ಅಲ್ಲಿಯೂ ಅದು ಬೆಳೆಯಿತು. ಆಗ ರಾಜನು ಅದನ್ನು ಸಮುದ್ರದಲ್ಲಿ ಬಿಟ್ಟನು. ಅದು ಸಂಪೂರ್ಣ ಸಮುದ್ರವನ್ನೂ ವ್ಯಾಪಿಸಿ ಮೇಲೇಳಲು, ಮನುವು ಭೀತನಾಗಿ ಹೇಳಿದನು: “ನೀನು ಯಾರೋ ಅಸುರೇಶ್ವರ ನಾಗಿರಬೇಕು ಅಥವಾ ವಾಸುದೇವನೇ ಆಗಿರಬೇಕು. ಬೇರೆ ಯಾರು ತಾನೇ ಹೀಗೆ ಆದಾನು? ಯಾರ ದೇಹವು ಲಕ್ಷಗಟ್ಟಲೆ ಯೋಜನವಾದೀತು? ಕೇಶವ! ನೀನೇ ಮತ್ಸ್ಯರೂಪದಿಂದ ನನ್ನನ್ನು ಖೇದಿಸುವಂತೆ ಮಾಡುತ್ತಿದ್ದೀಯೆ ಎಂದು ತಿಳಿದಿದೆ. ಹೃಷೀಕೇಶ! ಜಗನ್ನಾಥ! ಜಗದ್ಧಾಮ! ನಿನಗೆ ನಮಸ್ಕಾರ!”
ಏವಮುಕ್ತಃ ಸ ಭಗವಾನ್ಮತ್ಸ್ಯರೂಪೀ ಜನಾರ್ದನಃ । ಸಾಧು ಸಾಧ್ವಿತಿ ಚೋವಾಚ ಸಮ್ಯಗ್ಜ್ಞಾತಸ್ತ್ವಯಾನಘ ।। 26 ।। ಅಚಿರೇಣೈವ ಕಾಲೇನ ಮೇದಿನೀ ಮೇದಿನೀಪತೇ । ಭವಿಷ್ಯತಿ ಜಲೇ ಮಗ್ನಾ ಸಶೈಲವನಕಾನನಾ ।। 27 ।। ನೌರಿಯಂ ಸರ್ವದೇವಾನಾಂ ನಿಕಾಯೇನ ವಿನಿರ್ಮಿತಾ । ಮಹಾಜೀವನಿಕಾಯಸ್ಯ ರಕ್ಷಣಾರ್ಥಂ ಮಹೀಪತೇ ।। 28 ।। ಸ್ವೇದಾಂಡಜೋದ್ಭಿದೋ ಯೇ ವೈ ಯೇ ಚ ಜೀವಾ ಜರಾಯುಜಾಃ । ಅಸ್ಯಾಂ ನಿಧಾಯ ಸರ್ವಾಂಸ್ತಾನನಾಥಾನ್ಪಾಹಿ ಸುವ್ರತ ।। 29 ।। ಯುಗಾಂತವಾತಾಭಿಹತಾ ಯದಾ ಭವತಿ ನೌ ನೃಪ । ಶೃಂಗೇಽಸ್ಮಿನ್ಮಮ ರಾಜೇಂದ್ರ ತದೇಮಾಂ ಸಂಯಮಿಷ್ಯಸಿ ।। 30 ।। ತತೋ ಲಯಾಂತೇ ಸರ್ವಸ್ಯ ಸ್ಥಾವರಸ್ಯ ಚರಸ್ಯ ಚ । ಪ್ರಜಾಪತಿಸ್ತ್ವಂ ಭವಿತಾ ಜಗತಃ ಪೃಥಿವೀಪತೇ ।। 31 ।। ಏವಂ ಕೃತಯುಗಸ್ಯಾದೌ ಸರ್ವಜ್ಞೋ ಧೃತಿಮಾನ್ನೃಪಃ । ಮನ್ವಂತರಾಧಿಪಶ್ಚಾಪಿ ದೇವಪೂಜ್ಯೋ ಭವಿಷ್ಯಸಿ ।। 32 ।।
ಅವನು ಹೀಗೆ ಹೇಳಲು ಮತ್ಸ್ಯರೂಪೀ ಭಗವಾನ್ ಜನಾರ್ದನನು “ಸಾಧು! ಸಾಧು! ಅನಘ! ನೀನು ನನ್ನಾಗಿ ಸರಿಯಾಗಿ ಗುರುತಿಸಿದೆ. ಮೇದಿನೀಪತೇ! ಸ್ವಲ್ಪವೇ ಸಮಯದಲ್ಲಿ ಪರ್ವತ-ವನ-ಕಾನನಗಳೊಂದಿಗೆ ಮೇದಿನಿಯು ನೀರಿನಲ್ಲಿ ಮುಳುಗಿಹೋಗುತ್ತದೆ. ಮಹೀಪತೇ! ಸರ್ವದೇವತೆಗಳನ್ನು ರಕ್ಷಿಸಲು ಮತ್ತು ಮಹಾಜೀವಗಳನ್ನು ರಕ್ಷಿಸಲು ಈ ನೌಕೆಯು ನಿರ್ಮಿತವಾಗಿದೆ. ಸುವ್ರತ! ಸ್ವೇದಜ, ಅಂಡಜ, ಉದ್ಭಿದ, ಮತ್ತು ಜರಾಯುಜ ಜೀವರಾಶಿಗಳನ್ನು ಈ ದೋಣಿಯಲ್ಲಿರಿಸಿ ಅನಾಥರಾದ ಅವರನ್ನು ರಕ್ಷಿಸು. ನೃಪ! ದೋಣಿಯು ಯುಗಾಂತದ ಚಂಡಮಾರುತದ ಹೊಡೆತಕ್ಕೆ ಸಿಕ್ಕಿದಾಗ ಅದನ್ನು ನನ್ನ ಈ ಕೊಂಬಿಗೆ ಕಟ್ಟಿಹಾಕು. ಪೃಥ್ವೀಪತೇ! ಪ್ರಳಯದ ಅಂತ್ಯದಲ್ಲಿ ನೀನು ಜಗತ್ತಿನ ಸರ್ವ ಸ್ಥಾವರ-ಜಂಗಮಗಳ ಪ್ರಜಾಪತಿಯಾಗುತ್ತೀಯೆ. ನೃಪ! ಹೀಗೆ ಕೃತಯುಗದ ಆದಿಯಲ್ಲಿ ನೀನು ಸರ್ವಜ್ಞನೂ, ಧೈರ್ಯಶಾಲಿಯೂ ಆದ ಮನ್ವಂತರಾಧಿಪತಿಯಾಗಿ ದೇವತೆಗಳಿಗೂ ಪೂಜ್ಯನಾಗುತ್ತೀಯೆ.””
ಇತಿ ಶ್ರೀಮಾತ್ಸ್ಯೇ ಮಹಾಪುರಾಣೇ ಆದಿಸರ್ಗೇ ಮನುವಿಷ್ಣುಸಂವಾದೇ ಪ್ರಥಮೋಽಧ್ಯಾಯಃ ।।
ಇದು ಶ್ರೀಮತ್ಸ್ಯಮಹಾಪುರಾಣದಲ್ಲಿ ಆದಿಸರ್ಗದಲ್ಲಿ ಮನುವಿಷ್ಣುಸಂವಾದದಲ್ಲಿ ಮೊದಲನೇ ಅಧ್ಯಾಯವು.