ಶ್ರೀ ಕೂರ್ಮಪುರಾಣ: ಅಧ್ಯಾಯ 11
ಕೂರ್ಮ ಉವಾಚ । ಏವಂ ಸೃಷ್ಟ್ವಾ ಮರೀಚ್ಯಾದೀನ್ ದೇವದೇವಃ ಪಿತಾಮಹಃ । ಸಹೈವ ಮಾನಸೈಃ ಪುತ್ರೈಸ್ತತಾಪ ಪರಮಂ ತಪಃ ।। 1 ।। ತಸ್ಯೈವ ತಪತೋ ವಕ್ತ್ರಾದ್ರುದ್ರಃ ಕಾಲಾಗ್ನಿಸಂಭವಃ । ತ್ರಿಶೂಲಪಾಣಿರೀಶಾನಃ ಪ್ರಾದುರಾಸೀತ್ತ್ರಿಲೋಚನಃ ।। 2 ।। ಅರ್ಧನಾರೀನರವಪುಃ ದುಷ್ಪ್ರೇಕ್ಷ್ಯೋಽತಿಭಯಂಕರಃ । ವಿಭಜಾತ್ಮಾನಮಿತ್ಯುಕ್ತ್ವಾ ಬ್ರಹ್ಮಾ ಚಾಂತರ್ದಧೇ ಭಯಾತ್ ।। 3 ।। ತಥೋಕ್ತೋಽಸೌ ದ್ವಿಧಾ ಸ್ತ್ರೀತ್ವಂ ಪುರುಷತ್ವಂ ತಥಾಕರೋತ್ । ಬಿಭೇದ ಪುರುಷತ್ವಂ ಚ ದಶಧಾ ಚೈಕಧಾ ಪುನಃ ।। 4 ।। ಏಕಾದಶೈತೇ ಕಥಿತಾ ರುದ್ರಾಸ್ತ್ರಿಭುವನೇಶ್ವರಾಃ । ಕಪಾಲೀಶಾದಯೋ ವಿಪ್ರಾ ದೇವಕಾರ್ಯೇ ನಿಯೋಜಿತಾಃ ।। 5 ।।
ಕೂರ್ಮನು ಹೇಳಿದನು: “ದೇವದೇವ ಪಿತಾಮಹನು ಹೀಗೆ ಮರೀಚಿ ಮೊದಲಾದವರನ್ನು ಸೃಷ್ಟಿಸಿ, ತನ್ನ ಮಾನಸ ಪುತ್ರರೊಂದಿಗೆ ಪರಮ ತಪಸ್ಸನ್ನು ತಪಿಸಿದನು. ಅವನು ತಪಸ್ಸನ್ನು ತಪಿಸುತ್ತಿದ್ದಾಗ ಅವನ ಮುಖದಿಂದ ಪ್ರಳಯಾಗ್ನಿಯಿಂದ ಹುಟ್ಟಿದಂತಿದ್ದ, ತ್ರಿಶೂಲಪಾಣಿ, ತ್ರಿಲೋಚನ ಈಶಾನ ರುದ್ರನು ಪ್ರಾದುರ್ಭವಿಸಿದನು[1]. ಅರ್ಧ ನಾರೀ ಮತ್ತು ಅರ್ಧ ನರ ರೂಪದಿಂದಿದ್ದ ಅವನು ನೋಡಲಾಗದಂತೆ ಅತಿ ಭಯಂಕರನಾಗಿದ್ದನು. “ನಿನ್ನನ್ನು ನೀನೇ ವಿಭಜನೆಮಾಡಿಕೋ!” ಎಂದು ಹೇಳಿ ಬ್ರಹ್ಮನು ಭಯದಿಂದ ಅಂತರ್ಧಾನನಾದನು. ಹಾಗೆ ಹೇಳಲು ರುದ್ರನು ಸ್ತ್ರೀ-ಪುರುಷ ರೂಪಗಳನ್ನು ಬೇರೆಯಾಗಿ ವಿಂಗಡಿಸಿದನು. ಆ ಪುರುಷನನ್ನು ಪುನಃ ಹನ್ನೊಂದಾಗಿ ವಿಭಾಗಿಸಿದನು. ವಿಪ್ರರೇ! ಆ ಹನ್ನೊಂದು ಪುರುಷರು ತ್ರಿಭುವನೇಶ್ವರರಾದ ಕಪಾಲೀ, ಈಶ ಮೊದಲಾದ ಏಕಾದಶ ರುದ್ರರೆಂದು ದೇವಕಾರ್ಯದಲ್ಲಿ ನಿಯೋಜಿತರಾದರು.
ಸೌಮ್ಯಾಸೌಮ್ಯೈಸ್ತಥಾ ಶಾಂತಾಶಾಂತೈಃ ಸ್ತ್ರೀತ್ವಂ ಚ ಸ ಪ್ರಭುಃ । ಬಿಭೇದ ಬಹುಧಾ ದೇವಃ ಸ್ವರೂಪೈರಸಿತೈಃ ಸಿತೈಃ ।। 6 ।। ತಾ ವೈ ವಿಭೂತಯೋ ವಿಪ್ರಾ ವಿಶ್ರುತಾಃ ಶಕ್ತಯೋ ಭುವಿ । ಲಕ್ಷ್ಮ್ಯಾದಯೋ ಯದ್ವಪುಷಾ ವಿಶ್ವಂ ವ್ಯಾಪ್ನೋತಿ ಶಾಂಕರೀ ।। 7 ।। ವಿಭಜ್ಯ ಪುನರೀಶಾನೀ ಸ್ವಾತ್ಮಾಂಶಮಕರೋದ್ದ್ವಿಜಾಃ । ಮಹಾದೇವನಿಯೋಗೇನ ಪಿತಾಮಹಮುಪಸ್ಥಿತಾ ।। 8 ।। ತಾಮಾಹ ಭಗವಾನ್ ಬ್ರಹ್ಮಾ ದಕ್ಷಸ್ಯ ದುಹಿತಾ ಭವ । ಸಾಪಿ ತಸ್ಯ ನಿಯೋಗೇನ ಪ್ರಾದುರಾಸೀತ್ ಪ್ರಜಾಪತೇಃ ।। 9 ।। ನಿಯೋಗಾದ್ಬ್ರಹ್ಮಣೋ ದೇವೀಂ ದದೌ ರುದ್ರಾಯ ತಾಂ ಸತೀಮ್ । ದಾಕ್ಷೀಂ ರುದ್ರೋಽಪಿ ಜಗ್ರಾಹ ಸ್ವಕೀಯಾಮೇವ ಶೂಲಭೃತ್ ।। 10 ।।
ನಂತರ ಆ ಪ್ರಭು ದೇವನು ಸ್ತ್ರೀತ್ವವನ್ನು ಸೌಮ್ಯ-ಅಸೌಮ್ಯ, ಶಾಂತ-ಅಶಾಂತ, ಬಿಳಿ-ಕಪ್ಪು ಮೊದಲಾದ ಅನೇಕ ರೂಪಗಳಾಗಿ ವಿಭಜಿಸಿದನು. ವಿಪ್ರರೇ! ಅವರು ಪರಮಾತ್ಮನ ವಿಭೂತಿಗಳೆಂದೂ, ಭುವಿಯಲ್ಲಿ ವಿಖ್ಯಾತವಾದ ಲಕ್ಮೀ ಮೊದಲಾದ ಶಕ್ತಿಗಳೆಂದೂ ಸ್ಮರಿಸಲ್ಪಟ್ಟಿವೆ. ಆ ರೂಪಗಳಿಂದಲೇ ಶಾಂಕರಿಯು ವಿಶ್ವವನ್ನು ವ್ಯಾಪಿಸಿದ್ದಾಳೆ. ದ್ವಿಜರೇ! ಆ ಈಶಾನಿಯು ತನ್ನನ್ನು ಪುನಃ ಅಂಶವನ್ನಾಗಿ ವಿಭಜಿಸಿಕೊಂಡು ಮಹಾದೇವನ ನಿಯೋಗದಂತೆ ಪಿತಾಮಹನ ಸನ್ನಿಧಿಯನ್ನು ಸೇರಿದಳು. ಆಗ ಭಗವಾನ್ ಬ್ರಹ್ಮನು “ದಕ್ಷನ ಪುತ್ರಿಯಾಗು!” ಎಂದು ಅವಳಿಗೆ ಹೇಳಿದನು. ಅವನ ನಿಯೋಗದಂತೆ ಅವಳೂ ಕೂಡ ಪ್ರಜಾಪತಿ ದಕ್ಷನ ಪುತ್ರಿಯಾದಳು. ಬ್ರಹ್ಮನ ನಿಯೋಗದಂತೆ ದಕ್ಷನು ಮಗಳು ಸತಿಯನ್ನು ರುದ್ರನಿಗೆ ಕೊಟ್ಟನು. ಶೂಲಧಾರೀ ರುದ್ರನೂ ಕೂಡ ಆ ದಕ್ಷಪುತ್ರಿಯನ್ನು ತನಗಾಗಿ ಸ್ವೀಕರಿಸಿದನು.
ಪ್ರಜಾಪತಿವಿನಿರ್ದೇಶಾತ್ ಕಾಲೇನ ಪರಮೇಶ್ವರೀ । ವಿಭಜ್ಯ ಪುನರೀಶಾನೀ ಆತ್ಮಾನಂ ಶಂಕರಾದ್ವಿಭೋಃ ।। 11 ।। ಮೇನಾಯಾಮಭವತ್ ಪುತ್ರೀ ತದಾ ಹಿಮವತಃ ಸತೀ । ಸ ಚಾಪಿ ಪರ್ವತವರೋ ದದೌ ರುದ್ರಾಯ ಪಾರ್ವತೀಮ್ ।। 12 ।। ಹಿತಾಯ ಸರ್ವದೇವಾನಾಂ ತ್ರಿಲೋಕಸ್ಯಾತ್ಮನೋ ದ್ವಿಜಾಃ । ಸೈಷಾ ಮಾಹೇಶ್ವರೀ ದೇವೀ ಶಂಕರಾರ್ಧಶರೀರಿಣೀ ।। 13 ।। ಶಿವಾ ಸತೀ ಹೈಮವತೀ ಸುರಾಸುರನಮಸ್ಕೃತಾ । ತಸ್ಯಾಃ ಪ್ರಭಾವಮತುಲಂ ಸರ್ವೇ ದೇವಾಃ ಸವಾಸವಾಃ ।। 14 ।। ವದಂತಿ ಮುನಯೋ ವೇತ್ತಿ ಶಂಕರೋ ವಾ ಸ್ವಯಂ ಹರಿಃ । ಏತದ್ವಃ ಕಥಿತಂ ವಿಪ್ರಾಃ ಪುತ್ರತ್ವಂ ಪರಮೇಷ್ಠಿನಃ । ಬ್ರಹ್ಮಣಃ ಪದ್ಮಯೋನಿತ್ವಂ ಶಂಕರಸ್ಯಾಮಿತೌಜಸಃ ।। 15 ।।
ಪ್ರಜಾಪತಿ ಬ್ರಹ್ಮನ ನಿರ್ದೆಶನದಂತೆ ಪರಮೇಶ್ವರೀ ಈಶಾನಿಯು ಪುನಃ ವಿಭು ಶಂಕರನಿಂದ ಆತ್ಮಾಂಶವನ್ನು ವಿಭಜಿಸಿದಳು. ನಂತರ ಸತಿಯು ಹಿಮವಂತನ ಪತ್ನಿ ಮೇನೆಯಲ್ಲಿ ಪುತ್ರಿಯಾಗಿ ಜನಿಸಿದಳು. ಪರ್ವತಶ್ರೇಷ್ಠ ಹಿಮವಂತನೂ ಕೂಡ ಪುತ್ರಿ ಪಾರ್ವತಿಯನ್ನು ರುದ್ರನಿಗೆ ಕೊಟ್ಟನು. ದ್ವಿಜರೇ! ಸರ್ವದೇವತೆಗಳ ಮತ್ತು ಮೂರುಲೋಕಗಳ ಹಿತಕ್ಕಾಗಿ ಹೀಗೆ ಶಂಕರನ ಆ ಅರ್ಧಶರೀರಿಣೀ ದೇವೀ ಮಾಹೇಶ್ವರಿಯು ತಾನೇ ವಿವಿಧ ರೂಪಗಳನ್ನು ಗ್ರಹಿಸಿದ್ದಾಳೆ. ಸುರಾಸುರನಮಸ್ಕೃತಳಾದ ಆ ಶಿವೆ, ಸತೀ, ಹೈಮವತಿಯ ಪ್ರಭಾವವು ಕೇವಲ ಶಂಕರ ಅಥವಾ ಸ್ವಯಂ ಹರಿಗೆ ತಿಳಿದಿದೆ ಎಂದು ವಾಸವ ಇಂದ್ರನೊಂದಿಗೆ ಸರ್ವ ದೇವತೆಗಳೂ ಮತ್ತು ಮುನಿಗಳೂ ಹೇಳುತ್ತಾರೆ. ವಿಪ್ರರೇ! ಇದೋ ಅಮಿತೌಜಸ ಶಂಕರ ಶಿವನು ಪರಮೇಷ್ಠಿಯ ಪುತ್ರನಾದ ಮತ್ತು ಬ್ರಹ್ಮನ ಪದ್ಮಯೋನಿತ್ವದ ಕುರಿತು ಹೇಳಿದ್ದೇನೆ.”
ಇತಿ ಶ್ರೀಕೂರ್ಮಪುರಾಣೇ ಏಕಾದಶೋಽಧ್ಯಾಯಃ ।।
ಇದು ಶ್ರೀಕೂರ್ಮಪುರಾಣದಲ್ಲಿ ಹನ್ನೊಂದನೇ ಅಧ್ಯಾಯವು.
[ಈ ಅಧ್ಯಾಯದ ನಂತರ ಸೂತನು ಋಷಿಗಳಿಗೆ ಹೇಳಿದ ದೇವೀಮಹಾತ್ಮ್ಯವು ಬರುತ್ತದೆ.]
[1] ಮತ್ತೆ ಇಲ್ಲಿ ರುದ್ರಸೃಷ್ಟಿ!