ಶ್ರೀ ಕೂರ್ಮಪುರಾಣ: ಅಧ್ಯಾಯ 10 - ರುದ್ರಸೃಷ್ಟಿಃ

 

ಕೂರ್ಮ ಉವಾಚ । ಗತೇ ಮಹೇಶ್ವರೇ ದೇವೇ ಭೂಯ ಏವ ಪಿತಾಮಹಃ । ತದೇವ ಸುಮಹತ್ಪದ್ಮಂ ಭೇಜೇ ನಾಭಿಸಮುತ್ಥಿತಮ್ ।। 1 ।। ಅಥ ದೀರ್ಘೇಣ ಕಾಲೇನ ತತ್ರಾಪ್ರತಿಮಪೌರುಷೌ । ಮಹಾಸುರೌ ಸಮಾಯಾತೌ ಭ್ರಾತರೌ ಮಧುಕೈಟಭೌ ।। 2 ।। ಕ್ರೋಧೇನ ಮಹತಾವಿಷ್ಟೌ ಮಹಾಪರ್ವತವಿಗ್ರಹೌ । ಕರ್ಣಾಂತರಸಮುದ್ಭೂತೌ ದೇವದೇವಸ್ಯ ಶಾರ್ಙ್ಗ್ರಿಣಃ ।। 3 ।। ತಾವಾಗತೌ ಸಮೀಕ್ಷ್ಯಾಹ ನಾರಾಯಣಮಜೋ ವಿಭುಃ । ತ್ರೈಲೋಕ್ಯಕಂಟಕಾವೇತಾವಸುರೌ ಹಂತುಮರ್ಹಸಿ ।। 4 ।। ತದಸ್ಯ ವಚನಂ ಶ್ರುತ್ವಾ ಹರಿರ್ನಾರಾಯಣಃ ಪ್ರಭುಃ । ಆಜ್ಞಾಪಯಾಮಾಸ ತಯೋರ್ವಧಾರ್ಥಂ ಪುರುಷಾವುಭೌ ।। 5 ।। ತದಾಜ್ಞಯಾ ಮಹದ್ಯುದ್ಧಂ ತಯೋಸ್ತಾಭ್ಯಾಮಭೂದ್ದ್ವಿಜಾಃ । ವ್ಯಜಯತ್ಕೈಟಭಂ ಜಿಷ್ಣುಃ ವಿಷ್ಣುಶ್ಚ ವ್ಯಜಯನ್ಮಧುಮ್ ।। 6 ।। ತತಃ ಪದ್ಮಾಸನಾಸೀನಂ ಜಗನ್ನಾಥಃ ಪಿತಾಮಹಮ್ । ಬಭಾಷೇ ಮಧುರಂ ವಾಕ್ಯಂ ಸ್ನೇಹಾವಿಷ್ಟಮನಾ ಹರಿಃ ।। 7 ।। ಅಸ್ಮಾನ್ಮಯೋಚ್ಯಮಾನಸ್ತ್ವಂ ಪದ್ಮಾದವತರ ಪ್ರಭೋ । ನಾಹಂ ಭವಂತಂ ಶಕ್ನೋಮಿ ವೋಢುಂ ತೇಜೋಮಯಂ ಗುರುಮ್ ।। 8 ।।

ಕೂರ್ಮನು ಹೇಳಿದನು: “ದೇವ ಮಹೇಶ್ವರನು ಹೊರಟುಹೋಗಲು ಪಿತಾಮಹ ಬ್ರಹ್ಮನು ವಿಷ್ಣುವಿನ ನಾಭಿಯಲ್ಲಿ ಹುಟ್ಟಿದ ಆ ಮಹಾಪದ್ಮವನ್ನು ಭಜಿಸಿದನು. ದೀರ್ಘ ಕಾಲದ ನಂತರ ಅಲ್ಲಿಗೆ ಅಪ್ರತಿಮ ಪೌರುಷಯುಕ್ತರಾದ ಮಧು-ಕೈಟಭರೆಂಬ ಸಹೋದರ ಮಹಾಸುರರು ಬಂದರು. ದೇವದೇವ ಶಾರ್ಙ್ಗ್ರಧಾರೀ ವಿಷ್ಣುವಿನ ಕಿವಿಗಳಿಂದ ಹುಟ್ಟಿದ್ದ ಮತ್ತು ಮಹಾಪರ್ವತಗಳಂತಿದ್ದ ಶರೀರವಿದ್ದ ಅವರಿಬ್ಬರೂ ಮಹಾ ಕ್ರೋಧದಿಂದ ಆವಿಷ್ಟರಾಗಿದ್ದರು. ಅವರಿಬ್ಬರೂ ಬರುತ್ತಿರುವುದನ್ನು ನೋಡಿ ಅಜ ವಿಭು ಬ್ರಹ್ಮನು “ಈ ಇಬ್ಬರು ಅಸುರರು ತ್ರೈಲೋಕ್ಯಕಂಟಕರು. ಅವರನ್ನು ಕೊಲ್ಲಬೇಕು” ಎಂದು ನಾರಾಯಣನಿಗೆ ಹೇಳಿದನು. ಅವನ ಮಾತನ್ನು ಕೇಳಿ ಪ್ರಭು ಹರಿ ನಾರಾಯಣನು ಆ ಇಬ್ಬರು ಪುರುಷರ ವಧೆಯನ್ನು ಆಜ್ಞಾಪಿಸಿದನು. ದ್ವಿಜರೇ! ಆ ಆಜ್ಞೆಯಂತೆ ಅವರೊಂದಿಗೆ ಮಹಾ ಯುದ್ಧವು ನಡೆಯಿತು. ಜಿಷ್ಣುವು ಕೈಟಭನನ್ನೂ ವಿಷ್ಣುವು ಮಧುವನ್ನೂ ಸೋಲಿಸಿದರು.[1] ನಂತರ ಜಗನ್ನಾಥ ಹರಿಯು ಸ್ನೇಹಾವಿಷ್ಟನಾಗಿ ಪದ್ಮಾಸನದಲ್ಲಿ ಕುಳಿತಿದ್ದ ಪಿತಾಮಹನಿಗೆ ಮಧುರ ಮಾತನ್ನಾಡಿದನು: “ಪ್ರಭೋ! ತೇಜೋಮಯನೂ ಭಾರವುಳ್ಳವನೂ ಆದ ನಿನ್ನನ್ನು ನಾನು ಹೊತ್ತುಕೊಂಡಿರಲಾರೆ. ನನ್ನ ಮೇಲಿರುವ ಈ ಪದ್ಮದಿಂದ ಕೆಳಗಿಳಿ.”

ತತೋಽವತೀರ್ಯ ವಿಶ್ವಾತ್ಮಾ ದೇಹಮಾವಿಶ್ಯ ಚಕ್ರಿಣಃ । ಅವಾಪ್ಯ ವೈಷ್ಣವೀಂ ನಿದ್ರಾಮೇಕೀಭೂತೋಽಥ ವಿಷ್ಣುನಾ ।। 9 ।। ಸಹ ತೇನ ತಥಾವಿಶ್ಯ ಶಂಖಚಕ್ರಗದಾಧರಃ । ಬ್ರಹ್ಮಾ ನಾರಾಯಣಾಖ್ಯೋಽಸೌ ಸುಷ್ವಾಪ ಸಲಿಲೇ ತದಾ ।। 10 ।। ಸೋಽನುಭೂಯ ಚಿರಂ ಕಾಲಮಾನಂದಂ ಪರಮಾತ್ಮನಃ । ಅನಾದ್ಯನಂತಮದ್ವೈತಂ ಸ್ವಾತ್ಮಾನಂ ಬ್ರಹ್ಮಸಂಜ್ಞಿತಮ್ ।। 11 ।।

ನಂತರ ವಿಶ್ವಾತ್ಮಾ ಬ್ರಹ್ಮನು ಕೆಳಗಿಳಿದು ಚಕ್ರಧಾರಿ ವಿಷ್ಣುವಿನ ದೇಹವನ್ನು ಪ್ರವೇಶಿಸಿ, ವಿಷ್ಣುವಿನಲ್ಲಿ ಐಕ್ಯನಾಗಿ ವೈಷ್ಣವೀ ನಿದ್ರೆಯನ್ನು ಹೊಂದಿದನು. ಹಾಗೆ ಶಂಖಚಕ್ರಗದಾಧರನನ್ನು ಆವೇಶಿಸಿ ಬ್ರಹ್ಮನು ನಾರಾಯಣನೆಂಬ ನಾಮಾಂಕಿತನಾಗಿ ಆ ಜಲರಾಶಿಯ ಮೇಲೆ ನಿದ್ರಿಸಿದನು. ಆಗ ಆ ಬ್ರಹ್ಮನು ಅನಾದಿಯೂ, ಅನಂತವೂ, ಅದ್ವೈತವೂ, ಸ್ವಸ್ವರೂಪವೂ ಆದ ಪರಬ್ರಹ್ಮಾನಂದವನ್ನು ದೀರ್ಘಕಾಲ ಅನುಭವಿಸಿದನು.

ತತಃ ಪ್ರಭಾತೇ ಯೋಗಾತ್ಮಾ ಭೂತ್ವಾ ದೇವಶ್ಚತುರ್ಮುಖಃ । ಸಸರ್ಜ ಸೃಷ್ಟಿಂ ತದ್ರೂಪಾಂ ವೈಷ್ಣವಂ ಭಾವಮಾಶ್ರಿತಃ ।। 12 ।। ಪುರಸ್ತಾದಸೃಜದ್ದೇವಃ ಸನಂದಂ ಸನಕಂ ತಥಾ । ಋಭುಂ ಸನತ್ಕುಮಾರಂ ಚ ಪೂರ್ವಜಂ ತಂ ಸನಾತನಮ್ ।। 13 ।। ತೇ ದ್ವಂದ್ವಮೋಹನಿರ್ಮುಕ್ತಾಃ ಪರಂ ವೈರಾಗ್ಯಮಾಸ್ಥಿತಾಃ । ವಿದಿತ್ವಾ ಪರಮಂ ಭಾವಂ ಜ್ಞಾನೇ ವಿದಧಿರೇ ಮತಿಮ್ ।। 14 ।। ತೇಷ್ವೇವಂ ನಿರಪೇಕ್ಷೇಷು ಲೋಕಸೃಷ್ಟೌ ಪಿತಾಮಹಃ । ಬಭೂವ ನಷ್ಟಚೇತಾ ವೈ ಮಾಯಯಾ ಪರಮೇಷ್ಠಿನಃ ।। 15 ।। ತತಃ ಪುರಾಣಪುರುಷೋ ಜಗನ್ಮೂರ್ತಿರ್ಜನಾರ್ದನಃ । ವ್ಯಾಜಹಾರಾತ್ಮನಃ ಪುತ್ರಂ ಮೋಹನಾಶಾಯ ಪದ್ಮಜಮ್ ।। 16 ।।

ನಂತರ ಪ್ರಭಾತಸಮಯದಲ್ಲಿ ಚತುರ್ಮುಖ ಬ್ರಹ್ಮದೇವನು ಯೋಗಾತ್ಮನಾಗಿ ವೈಷ್ಣವೀ ಭಾವವನ್ನು ಆಶ್ರಯಿಸಿ ಅದೇ ರೂಪದ ಸೃಷ್ಟಿಯನ್ನು ರಚಿಸಿದನು. ಮೊಟ್ಟಮೊದಲು ಬ್ರಹ್ಮದೇವನು ಸನಂದ, ಸನಕ, ಋಭು[2] ಸನತ್ಕುಮಾರ ಮತ್ತು ಅಗ್ರಜ ಸನಾತನ ಎನ್ನುವವರನ್ನು ಸೃಷ್ಟಿಸಿದನು. ಅವರು ದ್ವಂದ್ವಮೋಹಗಳಿಂದ ಮುಕ್ತರಾಗಿ ಪರಮ ವೈರಾಗ್ಯವನ್ನು ಹೊಂದಿದ್ದರು. ಪರಮ ಭಾವವನ್ನು ತಿಳಿದು ತಮ್ಮ ಬುದ್ಧಿಯನ್ನು ತತ್ತ್ವಜ್ಞಾನದಲ್ಲಿ ಇರಿಸಿದರು. ಲೋಕಸೃಷ್ಟಿಯಲ್ಲಿ ಅವರು ಅನಾಸಕ್ತರಾದುದನ್ನು ನೋಡಿ ಪಿತಾಮಹನು ಪರಮೇಷ್ಠಿಯ ಮಾಯೆಯಿಂದ ನಷ್ಟಚೇತನನಾದನು. ಆಗ ಪುರಾಣಪುರುಷ, ಜಗನ್ಮೂರ್ತಿ, ಜನಾರ್ದನನು ತನ್ನ ಮಗ ಪದ್ಮಜನ ಮೋಹವನ್ನು ನಾಶಗೊಳಿಸಲು ಈ ಮಾತನ್ನಾಡಿದನು.

ವಿಷ್ಣುರುವಾಚ । ಕಚ್ಚಿನ್ನು ವಿಸ್ಮೃತೋ ದೇವಃ ಶೂಲಪಾಣಿಃ ಸನಾತನಃ । ಯದುಕ್ತೋ ವೈ ಪುರಾ ಶಂಭುಃ ಪುತ್ರತ್ವೇ ಭವ ಶಂಕರ ।। 17 ।। ಪ್ರಯುಕ್ತವಾನ್ಮನೋ ಯೋಽಸೌ ಪುತ್ರತ್ವೇನ ತು ಶಂಕರಃ । ಅವಾಪ ಸಂಜ್ಞಾಂ ಗೋವಿಂದಾತ್ಪದ್ಮಯೋನಿಃ ಪಿತಾಮಹಃ ।। 18 ।। ಪ್ರಜಾಃ ಸ್ರಷ್ಟುಂ ಮನಶ್ಚಕ್ರೇ ತಪಃ ಪರಮದುಸ್ತರಮ್ । ತಸ್ಯೈವಂ ತಪ್ಯಮಾನಸ್ಯ ನ ಕಿಂಚಿತ್ಸಮವರ್ತತ ।। 19 ।। ತತೋ ದೀರ್ಘೇಣ ಕಾಲೇನ ದುಃಖಾತ್ಕ್ರೋಧೋಽಭ್ಯಜಾಯತ । ಕ್ರೋಧಾವಿಷ್ಟಸ್ಯ ನೇತ್ರಾಭ್ಯಾಂ ಪ್ರಾಪತನ್ನಶ್ರುಬಿಂದವಃ ।। 20 ।। ತತಸ್ತೇಭ್ಯಃ ಸಮುದ್ಭೂತಾಃ ಭೂತಾಃ ಪ್ರೇತಾಸ್ತದಾಭವನ್ । ಸರ್ವಾಂಸ್ತಾನಗ್ರತೋ ದೃಷ್ಟ್ವಾ ಬ್ರಹ್ಮಾತ್ಮಾನಮನಿಂದತ ।। 21 ।। ಜಹೌ ಪ್ರಾಣಾಂಶ್ಚ ಭಗವಾನ್ ಕ್ರೋಧಾವಿಷ್ಟಃ ಪ್ರಜಾಪತಿಃ । ತದಾ ಪ್ರಾಣಮಯೋ ರುದ್ರಃ ಪ್ರಾದುರಸೀತ್ ಪ್ರಭೋರ್ಮುಖಾತ್ ।। 22 ।।

ವಿಷ್ಣುವು ಹೇಳಿದನು: “ಶೂಲಪಾಣಿ ಸನಾತನ ದೇವನನ್ನು ಮರೆತುಬಿಟ್ಟೆಯೇ? ಹಿಂದೆ ನೀನು ಶಂಕರನಿಗೆ ನಿನ್ನ ಪುತ್ರನಾಗೆಂದು ಕೇಳಿಕೊಂಡಿರಲಿಲ್ಲವೇ? ಆಗ ಶಂಕರನು ನಿನ್ನ ಪುತ್ರನಾಗಲು ಮನಸ್ಸುಮಾಡಿದ್ದನು.” ಗೋವಿಂದನ ಈ ಮಾತಿನಿಂದ ಪದ್ಮಯೋನಿ ಪಿತಾಮಹನು ನೆನಪಿಸಿಕೊಂಡನು. ಪ್ರಜೆಗಳನ್ನು ಸೃಷ್ಟಿಸುವ ಮನಸ್ಸುಮಾಡಿ ಅವನು ಪರಮ ದುಸ್ತರವಾದ ತಪಸ್ಸನ್ನು ತಪಿಸಿದನು. ಆದರೂ ತಪಿಸುತ್ತಿದ್ದ ಅವನಿಂದ ಯಾವುದೊಂದೂ ಹುಟ್ಟಲಿಲ್ಲ. ದೀರ್ಘ ಕಾಲದ ನಂತರ ಅವನಿಗೆ ದುಃಖದಿಂದ ಕ್ರೋಧವುಂಟಾಯಿತು. ಕ್ರೋಧಾವಿಷ್ಟನಾಗಿದ್ದ ಅವನ ಕಣ್ಣುಗಳಿಂದ ಕಣ್ಣೀರಿನ ಹನಿಗಳು ಬಿದ್ದವು. ಅವುಗಳಿಂದ ಭೂತ-ಪ್ರೇತಗಳು ಹುಟ್ಟಿಕೊಂಡವು. ತನ್ನ ಮುಂದಿರುವ ಅವುಗಳೆಲ್ಲವನ್ನೂ ನೋಡಿ ಬ್ರಹ್ಮನು ತನ್ನನ್ನು ತಾನೇ ನಿಂದಿಸಿಕೊಂಡನು. ಕ್ರೋಧಾವಿಷ್ಟನಾದ ಭಗವಾನ್ ಪ್ರಜಾಪತಿಯು ತನ್ನ ಪ್ರಾಣಗಳನ್ನು ತ್ಯಜಿಸಿದನು. ಆಗ ಪ್ರಭುವಿನ ಮುಖದಿಂದ ಪ್ರಾಣಮಯನಾದ ರುದ್ರನು ಪ್ರಾದುರ್ಭವಿಸಿದನು.

ಸಹಸ್ರಾದಿತ್ಯಸಂಕಾಶೋ ಯುಗಾಂತದಹನೋಪಮಃ । ರುರೋದ ಸುಸ್ವರಂ ಘೋರಂ ದೇವದೇವಃ ಸ್ವಯಂ ಶಿವಃ ।। 23 ।। ರೋದಮಾನಂ ತತೋ ಬ್ರಹ್ಮಾ ಮಾರೋದೀರಿತ್ಯಭಾಷತ । ರೋದನಾದ್ರುದ್ರ ಇತ್ಯೇವಂ ಲೋಕೇ ಖ್ಯಾತಿಂ ಗಮಿಷ್ಯಸಿ ।। 24 ।। ಅನ್ಯಾನಿ ಸಪ್ತ ನಾಮಾನಿ ಪತ್ನೀಃ ಪುತ್ರಾಂಶ್ಚ ಶಾಶ್ವತಾನ್ । ಸ್ಥಾನಾನಿ ತೇಷಾಮಷ್ಟಾನಾಂ ದದೌ ಲೋಕಪಿತಾಮಹಃ ।। 25 ।। ಭವಃ ಶರ್ವಸ್ತಥೇಶಾನಃ ಪಶೂನಾಂ ಪತಿರೇವ ಚ । ಭೀಮಶ್ಚೋಗ್ರೋ ಮಹಾದೇವಸ್ತಾನಿ ನಾಮಾನಿ ಸಪ್ತ ವೈ ।। 26 ।। ಸೂರ್ಯೋ ಜಲಂ ಮಹೀ ವಹ್ನಿರ್ವಾಯುರಾಕಾಶಮೇವ ಚ । ದೀಕ್ಷಿತೋ ಬ್ರಾಹ್ಮಣಶ್ಚಂದ್ರ ಇತ್ಯೇತಾ ಅಷ್ಟಮೂರ್ತಯಃ ।। 27 ।। ಸ್ಥಾನೇಷ್ವೇತೇಷು ಯೇ ರುದ್ರಾನ್ ಧ್ಯಾಯಂತಿ ಪ್ರಣಮಂತಿ ಚ । ತೇಷಾಮಷ್ಟತನುರ್ದೇವೋ ದದಾತಿ ಪರಮಂ ಪದಮ್ ।। 28 ।। ಸುವರ್ಚಲಾ ತಥೈವೋಮಾ ವಿಕೇಶೀ ಚ ಶಿವಾ ತಥಾ । ಸ್ವಾಹಾ ದಿಶಶ್ಚ ದೀಕ್ಷಾ ಚ ರೋಹಿಣೀ ಚೇತಿ ಪತ್ನಯಃ ।। 29 ।। ಶನೈಶ್ಚರಸ್ತಥಾ ಶುಕ್ರೋ ಲೋಹಿತಾಂಗೋ ಮನೋಜವಃ । ಸ್ಕಂದಃ ಸರ್ಗೋಽಥ ಸಂತಾನೋ ಬುಧಶ್ಚೈಷಾಂ ಸುತಾಃ ಸ್ಮೃತಾಃ ।। 30 ।। ಏವಂಪ್ರಕಾರೋ ಭಗವಾನ್ ದೇವದೇವೋ ಮಹೇಶ್ವರಃ । ಪ್ರಜಾ ಧರ್ಮಂ ಚ ಕಾಮಂ ಚ ತ್ಯಕ್ತ್ವಾ ವೈರಾಗ್ಯಮಾಶ್ರಿತಃ ।। 31 ।।

ಸಹಸ್ರ ಸೂರ್ಯರಂತೆ ಪ್ರಕಾಶಮಾನನಾಗಿದ್ದ, ಯುಗಾಂತದ ಅಗ್ನಿಯಂತೆ ಸುಡುತ್ತಿದ್ದ ದೇವದೇವ ಸ್ವಯಂ ಶಿವನು ಸುಸ್ವರವಾಗಿ ಘೋರವಾಗಿ ರೋದಿಸಿದನು. ರೋದಿಸುತ್ತಿದ್ದ ಅವನಿಗೆ ಬ್ರಹ್ಮನು “ರೋದಿಸಬೇಡ! ರೋದಿಸುತ್ತಿರುವುದರಿಂದ ನೀನು ಲೋಕದಲ್ಲಿ ರುದ್ರನೆಂದು ಖ್ಯಾತನಾಗುತ್ತೀಯೆ” ಎಂದು ಹೇಳಿದನು. ಲೋಕಪಿತಾಮಹ ಬ್ರಹ್ಮನು ಅವನಿಗೆ ಅನ್ಯ ಏಳು ಹೆಸರುಗಳನ್ನೂ, ಶಾಶ್ವತರಾದ ಪತ್ನೀ-ಪುತ್ರರನ್ನೂ, ಮತ್ತು ಆ ಎಂಟು ಮಂದಿಗೆ ಸ್ಥಾನಗಳನ್ನೂ ಕೊಟ್ಟನು. ಭವ, ಶರ್ವ, ಈಶಾನ, ಪಶುಪತಿ, ಭೀಮ, ಉಗ್ರ ಮತ್ತು ಮಹಾದೇವ – ಇವೇ ಆ ಏಳು ಮಂದಿಗಳ ಹೆಸರುಗಳು. ಸೂರ್ಯ, ಜಲ, ಪೃಥ್ವಿ, ಅಗ್ನಿ, ವಾಯು, ಆಕಾಶ, ದೀಕ್ಷಿತ ಬ್ರಾಹ್ಮಣ ಮತ್ತು ಚಂದ್ರರು ಕ್ರಮವಾಗಿ ಈ ಅಷ್ಟಮೂರ್ತಿಗಳ ಸ್ಥಾನಗಳು. ಈ ಸ್ಥಾನಗಳಲ್ಲಿರುವ ರುದ್ರರನ್ನು ಯಾರು ಧ್ಯಾನಿಸಿ ನಮಸ್ಕರಿಸುತ್ತಾರೋ ಅವರಿಗೆ ಈ ಅಷ್ಟಶರೀರಗಳ ದೇವನು ಪರಮ ಪದವನ್ನು ಕೊಡುತ್ತಾನೆ. ಸುವರ್ಚಲಾ, ಉಮಾ, ವಿಕೇಶೀ, ಶಿವಾ, ಸ್ವಾಹಾ, ದಿಶಾ, ದೀಕ್ಷಾ, ರೋಹಿಣೀ – ಇವರು ಅವರ ಪತ್ನಿಯರು. ಶನೈಶ್ಚರ, ಶುಕ್ರ, ಲೋಹಿತಾಂಗ, ಮನೋಜವ, ಸ್ಕಂದ, ಸರ್ಗ, ಸಂತಾನ ಮತ್ತು ಬುಧ – ಇವರು ಇವರ ಸುತರೆಂದು ಸ್ಮರಿಸಲ್ಪಟ್ಟಿದ್ದಾರೆ. ಈ ಪ್ರಕಾರ ಭಗವಾನ್ ದೇವದೇವ ಮಹೇಶ್ವರನು ಪ್ರಜೆಗಳು, ಧರ್ಮ, ಮತ್ತು ಕಾಮಗಳನ್ನು ತ್ಯಜಿಸಿ ವೈರಾಗ್ಯವನ್ನು ಆಶ್ರಯಿಸಿದನು.

ಆತ್ಮನ್ಯಾಧಾಯ  ಚಾತ್ಮಾನಮೈಶ್ವರಂ ಭಾವಮಾಸ್ಥಿತಃ । ಪೀತ್ವಾ ತದಕ್ಷರಂ ಬ್ರಹ್ಮ ಶಾಶ್ವತಂ ಪರಮಾಮೃತಮ್ ।। 32 ।। ಪ್ರಜಾಃ ಸೃಜೇತಿ ಚಾದಿಷ್ಟೋ ಬ್ರಹ್ಮಣಾ ನೀಲಲೋಹಿತಃ । ಸ್ವಾತ್ಮನಾ ಸದೃಶಾನ್ ರುದ್ರಾನ್ ಸಸರ್ಜ ಮನಸಾ ಶಿವಃ ।। 33 ।। ಕಪರ್ದಿನೋ ನಿರಾತಂಕಾನ್ನೀಲಕಂಠಾನ್ ಪಿನಾಕಿನಃ । ತ್ರಿಶೂಲಹಸ್ತಾನುದ್ರಿಕ್ತಾನ್ ಸದಾನಂದಾಂಸ್ತ್ರಿಲೋಚನಾನ್ ।। 34 ।। ಜರಾಮರಣನಿರ್ಮುಕ್ತಾನ್ಮಹಾವೃಷಭವಾಹನಾನ್ । ವೀತರಾಗಾಂಶ್ಚ ಸರ್ವಜ್ಞಾನ್ ಕೋಟಿಕೋಟಿಶತಾನ್ ಪ್ರಭುಃ ।। 35 ।। ತಾನ್ ದೃಷ್ಟ್ವಾ ವಿವಿಧಾನ್ರುದ್ರಾನ್ನಿರ್ಮಲಾನ್ನೀಲಲೋಹಿತಾನ್ । ಜರಾಮರಣನಿರ್ಮುಕ್ತಾನ್ ವ್ಯಾಜಹಾರ ಹರಂ ಗುರುಃ ।। 36 ।। ಮಾ ಸ್ರಾಕ್ಷೀರೀದೃಶೀರ್ದೇವ ಪ್ರಜಾ ಮೃತ್ಯುವಿವರ್ಜಿತಾಃ । ಅನ್ಯಾಃ ಸೃಜಸ್ವ ಭೂತೇಶ ಜನ್ಮಮೃತ್ಯು ಸಮನ್ವಿತಾಃ ।। 37 ।।

ತನ್ನಲ್ಲಿ ಪರಬ್ರಹ್ಮನ ಐಕ್ಯಭಾವವನ್ನು ಹೊಂದಿದವನಾಗಿ, ತನ್ನ ಚಿತ್ತವನ್ನು ಆ ಬ್ರಹ್ಮತತ್ತ್ವದಲ್ಲಿ ಇರಿಸಿ, ಅವ್ಯಯವೂ ಶಾಶ್ವತವೂ ಪರಮಾಮೃತಪ್ರಾಯವೂ ಆದ ಬ್ರಹ್ಮವಸ್ತುವನ್ನು ಅನುಭವಿಸಿದನು. ಬ್ರಹ್ಮನು “ಪ್ರಜೆಗಳನ್ನು ಸೃಷ್ಟಿಸು!” ಎಂದು ಆದೇಶವನ್ನು ನೀಡಲು ನೀಲಲೋಹಿತ ಶಿವನು ಮನಸಾ ತನ್ನ ಸದೃಶರಾದ ರುದ್ರರನ್ನು ಸೃಷ್ಟಿಸಿದನು. ಪ್ರಭು ರುದ್ರನು ಸೃಷ್ಟಿಸಿದ ಕೋಟಿ ಕೋಟಿ ಸಂಖ್ಯೆಯ ರುದ್ರರು ಜಟಾಮಂಡಲಧಾರಿಗಳೂ, ನಿರಾತಂಕರೂ, ನೀಲಕಂಠರೂ, ಪಿನಾಕ-ತ್ರಿಶೂಲಗಳನ್ನು ಹಿಡಿದವರೂ, ಸದಾನಂದರೂ, ತ್ರಿಲೋಚನರೂ, ಜರಾಮರಣ ವರ್ಜಿತರೂ, ಮಹಾವೃಷಭ ವಾಹನರೂ, ವೀತರಾಗರೂ, ಸರ್ವಜ್ಞರೂ ಆಗಿದ್ದರು. ಆ ನಿರ್ಮಲ, ನೀಲಲೋಹಿತ, ಜರಾಮರಣಮುಕ್ತರಾದ ವಿವಿಧ ರುದ್ರರನ್ನು ನೋಡಿ ಗುರು ಬ್ರಹ್ಮನು ಹರನಿಗೆ ಹೇಳಿದನು: “ದೇವ! ಮೃತ್ಯುವಿವರ್ಜಿತರಾದ ಇಂತಹ ಶಾಶ್ವತ ಪ್ರಜೆಗಳನ್ನು ಸೃಷ್ಟಿಸಬೇಡ. ಭೂತೇಶ! ಜನ್ಮ-ಮೃತ್ಯು ಸಮನ್ವಿತರಾದ ಅನ್ಯ ಪ್ರಜೆಗಳನ್ನು ಸೃಷ್ಟಿಸು!”

ತತಸ್ತಮಾಹ ಭಗವಾನ್ ಕಪರ್ದೀ ಕಾಮಶಾಸನಃ । ನಾಸ್ತಿ ಮೇ ತಾದೃಶಃ ಸರ್ಗಃ ಸೃಜ ತ್ವಂ ವಿವಿಧಾಃ ಪ್ರಜಾಃ ।। 38 ।। ತತಃ ಪ್ರಭೃತಿ ದೇವೋಽಸೌ ನ ಪ್ರಸೂತೇಽಶುಭಾಃ ಪ್ರಜಾಃ । ಸ್ವಾತ್ಮಜೈರೇವ ತೈ ರುದ್ರೈರ್ನಿವೃತ್ತಾತ್ಮಾ ಹ್ಯತಿಷ್ಠತ ।। 39 ।। ಸ್ಥಾಣುತ್ವಂ ತೇನ ತಸ್ಯಾಸೀದ್ದೇವದೇವಸ್ಯ ಶೂಲಿನಃ । ಜ್ಞಾನಂ ವೈರಾಗ್ಯಮೈಶ್ವರ್ಯಂ ತಪಃ ಸತ್ಯಂ ಕ್ಷಮಾ ಧೃತಿಃ ।। 40 ।। ದ್ರಷ್ಟೃತ್ವಮಾತ್ಮಸಂಬೋಧೋ ಹ್ಯಧಿಷ್ಠಾತೃತ್ವಮೇವ ಚ । ಅವ್ಯಯಾನಿ ದಶೈತಾನಿ ನಿತ್ಯಂ ತಿಷ್ಠಂತಿ ಶಂಕರೇ ।। 41 ।। ಏವಂ ಸ ಶಂಕರಃ ಸಾಕ್ಷಾತ್ ಪಿನಾಕೀ ಪರಮೇಶ್ವರಃ । ತತಃ ಸ ಭಗವಾನ್ ಬ್ರಹ್ಮಾ ವೀಕ್ಷ್ಯ ದೇವಂ ತ್ರಿಲೋಚನಮ್ ।। 42 ।। ಸಹೈವ ಮಾನಸೈ ರುದ್ರೈಃ ಪ್ರೀತಿವಿಸ್ಫಾರಲೋಚನಃ । ಜ್ಞಾತ್ವಾ ಪರತರಂ ಭಾವಮೈಶ್ವರಂ ಜ್ಞಾನಚಕ್ಷುಷಾ ।। 43 ।। ತುಷ್ಟಾವ ಜಗತಾಮೇಕಂ ಕೃತ್ವಾ ಶಿರಸಿ ಚಾಂಜಲಿಮ್

ಆಗ ಭಗವಾನ್ ಕಪರ್ದೀ ಕಾಮಶಾಸನನು ಅವನಿಗೆ ಹೇಳಿದನು: “ಅಂತಹ ಸೃಷ್ಟಿಯು ನನ್ನಿಂದ ಆಗಲಾರದು. ಅಂತಹ ವಿವಿಧ ಪ್ರಜೆಗಳನ್ನು ನೀನೇ ಸೃಷ್ಟಿಸು!” ಅಂದಿನಿಂದ ದೇವನು ಅದೂವರೆಗೆ ಉತ್ಪನ್ನರಾದ ತನ್ನ ಪುತ್ರರಾದ ರುದ್ರರೊಂದಿಗೆ ನಿವೃತ್ತಿಮಾರ್ಗವನ್ನು ಹೊಂದಿದ ಮನಸ್ಸುಳ್ಳವನಾಗಿ ಶುಭ ಪ್ರಜೆಗಳನ್ನು ಸೃಷ್ಟಿಸದೇ ಸುಮ್ಮನಾದನು. ತ್ರಿಶೂಲಧಾರಿಯೂ ದೇವೋತ್ತಮನೂ ಆದ ಶಂಕರನು ಸೃಷ್ಟಿಯ ವ್ಯಾಪಾರವನ್ನು ಬಿಟ್ಟು ಸುಮ್ಮನೇ ನಿಂತಿದ್ದುದರಿಂದ “ಸ್ಥಾಣು” ಎಂದು ಪ್ರಸಿದ್ಧನಾದನು. ಜ್ಞಾನ, ವೈರಾಗ್ಯ, ಐಶ್ವರ್ಯ, ತಪಸ್ಸು, ಸತ್ಯ, ಕ್ಷಮೆ ಮತ್ತು ಧೃತಿಗಳು ಹಾಗೂ ದೃಷ್ಟೃತ್ವಶಕ್ತಿ, ಆತ್ಮಜ್ಞಾನ ಮತ್ತು ನಿಯಾಮಕತ್ವ ಎಂಬ ಮೂರು ಗುಣವಿಶೇಷಗಳು ಸೇರಿ ಒಟ್ಟಾರೆ ಹತ್ತು ಅವ್ಯಯ ಗುಣಗಳು ಶಂಕರನಲ್ಲಿ ಸತತವಾಗಿ ಪ್ರಕಾಶಿಸುತ್ತವೆ. ಹೀಗೆ ಪಿನಾಕೀ ಪರಮೇಶ್ವರ ಶಂಕರನು ಗೋಚರಿಸಿದನು. ಮಾನಸ ರುದ್ರರೊಡನೆ ಆ ದೇವ ತ್ರಿಲೋಚನನನ್ನು ಪ್ರೀತಿಯಿಂದ ಅರಳಿದ ಕಣ್ಣುಗಳಿಂದ ನೋಡಿ ಭಗವಾನ್ ಬ್ರಹ್ಮನು, ಜ್ಞಾನದೃಷ್ಟಿಯಿಂದ ಈಶ್ವರನ ಪರತರ ಭಾವವನ್ನು ಅರಿತುಕೊಂಡನು. ಶಿರದ ಮೇಲೆ ಕೈಮುಗಿದು ಜಗತ್ತಿನ ಆ ಏಕನನ್ನು ಸ್ತುತಿಸಿದನು.

ಬ್ರಹ್ಮೋವಾಚ । ನಮಸ್ತೇಽಸ್ತು ಮಹಾದೇವ ನಮಸ್ತೇ ಪರಮೇಶ್ವರ ।। 44 ।। ನಮಃ ಶಿವಾಯ ದೇವಾಯ ನಮಸ್ತೇ ಬ್ರಹ್ಮರೂಪಿಣೇ । ನಮೋಽಸ್ತು ತೇ ಮಹೇಶಾಯ ನಮಃ ಶಾಂತಾಯ ಹೇತವೇ ।। 45 ।। ಪ್ರಧಾನಪುರುಷೇಶಾಯ ಯೋಗಾಧಿಪತಯೇ ನಮಃ । ನಮಃ ಕಾಲಾಯ ರುದ್ರಾಯ ಮಹಾಗ್ರಾಸಾಯ ಶೂಲಿನೇ ।। 46 ।। ನಮಃ ಪಿನಾಕಹಸ್ತಾಯ ತ್ರಿನೇತ್ರಾಯ ನಮೋ ನಮಃ । ನಮಸ್ತ್ರಿಮೂರ್ತಯೇ ತುಭ್ಯಂ ಬ್ರಹ್ಮಣೋ ಜನಕಾಯ ತೇ ।। 47 ।। ಬ್ರಹ್ಮವಿದ್ಯಾಧಿಪತಯೇ ಬ್ರಹ್ಮವಿದ್ಯಾಪ್ರದಾಯ ತೇ । ನಮೋ ವೇದರಹಸ್ಯಾಯ ಕಾಲಕಾಲಾಯ ತೇ ನಮಃ ।। 48 ।। ವೇದಾಂತಸಾರಸಾರಾಯ ನಮೋ ವೇದಾತ್ಮಮೂರ್ತಯೇ । ನಮೋ ಬುದ್ಧಾಯ ರುದ್ರಾಯ ಯೋಗಿನಾಂ ಗುರವೇ ನಮಃ ।। 49 ।।

ಬ್ರಹ್ಮನು ಹೇಳಿದನು: “ಮಹಾದೇವ! ನಿನಗೆ ನಮಸ್ಕಾರ! ಪರಮೇಶ್ವರ! ನಿನಗೆ ನಮಸ್ಕಾರ! ಶಿವನಿಗೆ ದೇವನಿಗೆ ನಮಸ್ಕಾರ! ಬ್ರಹ್ಮರೂಪಿಣೇ! ನಿನಗೆ ನಮಸ್ಕಾರ! ಮಹೇಶ! ನಿನಗೆ ನಮಸ್ಕಾರ! ಶಾಂತನಿಗೆ, ಕಾರಣನಿಗೆ ನಮಸ್ಕಾರ! ಪ್ರಧಾನಪುರುಷ ಈಶ ಯೋಗಾಧಿಪತಿಗೆ ನಮಸ್ಕಾರ! ಕಾಲ, ರುದ್ರ, ಮಹಾಗ್ರಾಸ, ಶೂಲಿನಿಗೆ ನಮಸ್ಕಾರ! ಪಿನಾಕಹಸ್ತನಿಗೆ, ತ್ರಿನೇತ್ರನಿಗೆ ನಮೋನಮಃ. ತ್ರೀಮೂರ್ತಿಗೆ ಮತ್ತು ಬ್ರಹ್ಮನ ಜನಕನಾದ ನಿನಗೆ ನಮಸ್ಕಾರ! ಬ್ರಹ್ಮವಿದ್ಯೆಯ ಅಧಿಪತಿಯೇ, ಬ್ರಹ್ಮವಿದ್ಯಾ ಪ್ರದಾಯಕನೇ, ನಿನಗೆ ನಮಸ್ಕಾರ! ವೇದರಹಸ್ಯನೇ, ಕಾಲಕಾಲನೇ, ನಿನಗೆ ನಮಸ್ಕಾರ! ವೇದಾಂತ ಸಾರಗಳ ಸಾರ, ವೇದಾತ್ಮಮೂರ್ತಿಗೆ ನಮಸ್ಕಾರ. ಬುದ್ಧ, ರುದ್ರ, ಯೋಗಿಗಳ ಗುರುವಿಗೆ ನಮೋನಮಃ.

ಪ್ರಹೀಣಶೋಕೈರ್ವಿವಿಧೈರ್ಭೂತೈಃ ಪರಿವೃತಾಯ ತೇ । ನಮೋ ಬ್ರಹ್ಮಣ್ಯದೇವಾಯ ಬ್ರಹ್ಮಾಧಿಪತಯೇ ನಮಃ ।। 50 ।। ತ್ರ್ಯಂಬಕಾಯಾದಿದೇವಾಯ ನಮಸ್ತೇ ಪರಮೇಷ್ಠಿನೇ । ನಮೋ ದಿಗ್ವಾಸಸೇ ತುಭ್ಯಂ ನಮೋ ಮುಂಡಾಯಾ ದಂಡಿನೇ ।। 51 ।। ಅನಾದಿಮಲಹೀನಾಯ ಜ್ಞಾನಗಮ್ಯಾಯ ತೇ ನಮಃ । ನಮಸ್ತಾರಾಯ ತೀರ್ಥಾಯ ನಮೋ ಯೋಗರ್ಧಿಹೇತವೇ ।। 52 ।। ನಮೋ ಧರ್ಮಾಧಿಗಮ್ಯಾಯ ಯೋಗಗಮ್ಯಾಯ ತೇ ನಮಃ । ನಮಸ್ತೇ ನಿಷ್ಪ್ರಪಂಚಾಯ ನಿರಾಭಾಸಾಯ ತೇ ನಮಃ ।। 53 ।। ಬ್ರಹ್ಮಣೇ ವಿಶ್ವರೂಪಾಯ ನಮಸ್ತೇ ಪರಮಾತ್ಮನೇ । ತ್ವಯೈವ ಸೃಷ್ಟಮಖಿಲಂ ತ್ವಯ್ಯೇವ ಸಕಲಂ ಸ್ಥಿತಮ್ ।। 54 ।। ತ್ವಯಾ ಸಂಹ್ರಿಯತೇ ವಿಶ್ವಂ ಪ್ರಧಾನಾದ್ಯಂ ಜಗನ್ಮಯ । ತ್ವಮೀಶ್ವರೋ ಮಹಾದೇವಃ ಪರಂ ಬ್ರಹ್ಮ ಮಹೇಶ್ವರಃ ।। 55 ।। ಪರಮೇಷ್ಠೀ ಶಿವಃ ಶಾಂತಃ ಪುರುಷೋ ನಿಷ್ಕಲೋ ಹರಃ । ತ್ವಮಕ್ಷರಂ ಪರಂ ಜ್ಯೋತಿಸ್ತ್ವಂ ಕಾಲಃ ಪರಮೇಶ್ವರಃ ।। 56 ।। ತ್ವಮೇವ ಪುರುಷೋಽನಂತಃ ಪ್ರಧಾನಂ ಪ್ರಕೃತಿಸ್ತಥಾ । ಭೂಮಿರಾಪೋಽನಲೋ ವಾಯುರ್ವ್ಯೋಮಾಹಂಕಾರ ಏವ ಚ ।। 57 ।।

ಶೋಕವನ್ನು ತ್ಯಜಿಸಿರುವ ವಿವಿಧ ಭೂತಗಣಗಳಿಂದ ಪರಿವೃತನಾದ, ಬ್ರಹ್ಮಣ್ಯ, ಬ್ರಹ್ಮಾಧಿಪತಿ ದೇವನಿಗೆ ನಮೋನಮಃ. ತ್ರ್ಯಂಬಕ, ಆದಿದೇವ, ಪರಮೇಷ್ಠಿನೇ – ನಿನಗೆ ನಮಸ್ಕಾರ. ದಿಗಂಬರ, ಶಿರೋಮುಂಡನ-ದಂಡಧಾರಣಾದಿ ಯತಿಗಳ ವ್ರತವನ್ನು ಧರಿಸಿದ ನಿನಗೆ ನಮೋನಮಃ. ಅನಾದಿಯಾಗಿ ಮಲಹೀನನೂ, ಜ್ಞಾನಗಮ್ಯನೂ ಆದ ನಿನಗೆ ನಮಸ್ಕಾರ! ಸಂಸಾರದುಃಖ ತಾರಕನೂ, ಪರಮಪೂಜ್ಯನೂ, ಯೋಗಬುದ್ಧಿಗೆ ಕಾರಣನೂ ಆದ ನಿನಗೆ ನಮಸ್ಕಾರ! ಧರ್ಮಾದಿಗಳಿಂದ ಗಮ್ಯನೂ, ಯೋಗದಿಂದ ಗಮ್ಯನೂ ಆದ ನಿನಗೆ ನಮೋನಮಃ! ನಿಷ್ಪ್ರಪಂಚನೂ, ನಿರಾಭಾಸನೂ ಆದ ನಿನಗೆ ನಮಸ್ಕಾರ! ವಿಶ್ವರೂಪ ಬ್ರಹ್ಮ! ಪರಮಾತ್ಮ! ನಿನಗೆ ನಮಸ್ಕಾರ! ಅಖಿಲವೂ ನಿನ್ನಿಂದಲೇ ಸೃಷ್ಟಿಸಲ್ಪಟ್ಟಿದೆ. ಸಕಲವೂ ನಿನ್ನಲ್ಲಿಯೇ ನೆಲೆಸಿವೆ. ಜಗನ್ಮಯ! ಪ್ರಧಾನವೇ ಮೊದಾದ ಈ ವಿಶ್ವವೆಲ್ಲವೂ ನಿನ್ನಿಂದಲೇ ಸಂಹಾರಗೊಳ್ಳುತ್ತವೆ. ಮಹಾದೇವ! ನೀನೇ ಈಶ್ವರ. ಪರಬ್ರಹ್ಮ ಮತ್ತು ಮಹೇಶ್ವರ! ನೀನು ಪರಮೇಷ್ಟಿ, ಶಿವ, ಶಾಂತ, ಪುರುಷ, ನಿಷ್ಕಲ ಮತ್ತು ಹರ. ನೀನು ಅಕ್ಷರ, ಪರಂಜ್ಯೋತಿ, ಕಾಲ ಮತ್ತು ಪರಮೇಶ್ವರ. ನೀನೇ ಪುರುಷ, ಅನಂತ, ಪ್ರಧಾನ ಮತ್ತು ಪ್ರಕೃತಿ. ಭೂಮಿ-ಆಪ-ಅನಲ-ವಾಯು-ವ್ಯೋಮ-ಅಹಂಕಾರಗಳೂ ನೀನೇ.

ಯಸ್ಯ ರೂಪಂ ನಮಸ್ಯಾಮಿ ಭವಂತಂ ಬ್ರಹ್ಮಸಂಜ್ಞಿತಮ್ । ಯಸ್ಯ ದ್ಯೌರಭವನ್ಮೂರ್ಧಾ ಪಾದೌ ಪೃಥ್ವೀ ದಿಶೋ ಭುಜಾಃ ।। 58 ।। ಆಕಾಶಮುದರಂ ತಸ್ಮೈ ವಿರಾಜೇ ಪ್ರಣಮಾಮ್ಯಹಮ್ । ಸಂತಾಪಯತಿ ಯೋ ನಿತ್ಯಂ ಸ್ವಭಾಭಿರ್ಭಾಸಯನ್ ದಿಶಃ ।। 59 ।। ಬ್ರಹ್ಮತೇಜೋಮಯಂ ವಿಶ್ವಂ ತಸ್ಮೈ ಸೂರ್ಯಾತ್ಮನೇ ನಮಃ । ಹವ್ಯಂ ವಹತಿ ಯೋ ನಿತ್ಯಂ ರೌದ್ರೀ ತೇಜೋಮಯೋ ತನುಃ ।। 60 ।। ಕವ್ಯಂ ಪಿತೃಗಣಾನಾಂ ಚ ತಸ್ಮೈ ವಹ್ನ್ಯಾತ್ಮನೇ ನಮಃ । ಆಪ್ಯಾಯಯತಿ ಯೋ ನಿತ್ಯಂ ಸ್ವಧಾಮ್ನಾ ಸಕಲಂ ಜಗತ್ ।। 61 ।। ಪೀಯತೇ ದೇವತಾಸಂಘೈಸ್ತಸ್ಮೈ ಚಂದ್ರಾತ್ಮನೇ ನಮಃ । ವಿಭರ್ತ್ಯಶೇಷಭೂತಾನಿ ಯೋಽಂತಶ್ಚರತಿ ಸರ್ವದಾ ।। 62 ।। ಶಕ್ತಿರ್ಮಾಹೇಶ್ವರೀ ತುಭ್ಯಂ ತಸ್ಮೈ ವಾಯ್ವಾತ್ಮನೇ ನಮಃ । ಸೃಜತ್ಯಶೇಷಮೇವೇದಂ ಯಃ ಸ್ವಕರ್ಮಾನುರೂಪತಃ ।। 63 ।। ಆತ್ಮನ್ಯವಸ್ಥಿತಸ್ತಸ್ಮೈ ಚತುರ್ವಕ್ತ್ರಾತ್ಮನೇ ನಮಃ । ಯಃ ಶೇತೇ ಶೇಷಶಯನೇ ವಿಶ್ವಮಾವೃತ್ಯ ಮಾಯಯಾ ।। 64 ।। ಸ್ವಾತ್ಮಾನುಭೂತಿಯೋಗೇನ ತಸ್ಮೈ ವಿಶ್ವಾತ್ಮನೇ ನಮಃ

ಬ್ರಹ್ಮ ಎಂದು ನಾಮಾಂಕಿತವಾಗಿರುವ ನಿನ್ನ ರೂಪಕ್ಕೆ ನಮಸ್ಕರಿಸುತ್ತೇನೆ. ಯಾರ ಶಿರವು ದ್ಯುಲೋಕವೋ, ಪಾದವು ಪೃಥ್ವಿಯೋ, ಭುಜಗಳು ದಿಕ್ಕುಗಳೋ, ಉದರವು ಆಕಾಶವೋ ಆ ವಿರಾಟ್ ಪುರುಷನಿಗೆ ನಮಸ್ಕರಿಸುತ್ತೇನೆ. ನಿತ್ಯವೂ ತನ್ನ ಕಿರಣಗಳಿಂದ ದಿಕ್ಕುಗಳನ್ನು ಬೆಳಗಿಸುವ ಬ್ರಹ್ಮತೇಜೋಮಯ ವಿಶ್ವರೂಪ ಸೂರ್ಯಾತ್ಮನೇ, ನಿನಗೆ ನಮಸ್ಕಾರ! ನಿತ್ಯವೂ ದೇವತೆಗಳಿಗೆ ಹವ್ಯಗಳನ್ನು ಮತ್ತು ಪಿತೃಗಣಗಳಿಗೆ ಕವ್ಯವನ್ನು ಕೊಂಡೊಯ್ಯುವ ತೇಜೋಮಯ ಶರೀರದ ರೌದ್ರಿ ವಹ್ನ್ಯಾತ್ಮನಿಗೆ ನಮಸ್ಕಾರ! ತನ್ನ ಅಮೃತಮಯ ತೇಜಸ್ಸಿನಿಂದ ನಿತ್ಯವೂ ಸಕಲ ಜಗತ್ತನ್ನೂ ಆಪ್ಯಾಯನಗೊಳಿಸುವ, ದೇವತೆಗಳ ಸಂಘಗಳು ಯಾವ ಅಮೃತವನ್ನು ಕುಡಿಯುತ್ತಾರೋ ಆ ಸ್ವಧೆಯನ್ನು ಹೊಂದಿರುವ ಚಂದ್ರಾತ್ಮನಿಗೆ ನಮಸ್ಕಾರ. ಸರ್ವದಾ ಸರ್ವಭೂತಗಳ ಒಳಗೆ ಸಂಚರಿಸುತ್ತಾ ಪೋಷಿಸುವ, ಮಹೇಶ್ವರನ ಶಕ್ತಿಯಾದ ವಾಯ್ವಾತ್ಮನಿಗೆ ನಮಸ್ಕಾರ. ತಮ್ಮ ತಮ್ಮ ಕರ್ಮಗಳಿಗೆ ಅನುರೂಪವಾಗಿ ಇವೆಲ್ಲವನ್ನೂ ಸೃಷ್ಟಿಸುವ, ಆತ್ಮನಲ್ಲಿಯೇ ವ್ಯವಸ್ಥಿತನಾಗಿರುವ ಚತುರ್ಮುಖ ಬ್ರಹ್ಮಾತ್ಮನಿಗೆ ನಮಸ್ಕಾರ. ಯಾರು ವಿಶ್ವವನ್ನು ಮಾಯೆಯಿಂದ ಆವರಿಸುವಂತೆ ಮಾಡಿ ಸ್ವ ಆತ್ಮದ ಅನುಭೂತಿಯೋಗದಿಂದ ಕೂಡಿ ಶೇಷಶಯನನಾಗಿ ಮಲಗುತ್ತಾನೋ ಆ ವಿಶ್ವಾತ್ಮನಿಗೆ ನಮಸ್ಕಾರ!

ಬಿಭರ್ತಿ ಶಿರಸಾ ನಿತ್ಯಂ ದ್ವಿಸಪ್ತಭುವನಾತ್ಮಕಮ್ ।। 65 ।। ಬ್ರಹ್ಮಾಂಡಂ ಯೋಽಖಿಲಾಧಾರಸ್ತಸ್ಮೈ ಶೇಷಾತ್ಮನೇ ನಮಃ । ಯಃ ಪರಾಂತೇ ಪರಾನಂದಂ ಪೀತ್ವಾ ದೇವ್ಯೈಕಸಾಕ್ಷಿಕಮ್ ।। 66 ।। ನೃತ್ಯತ್ಯನಂತಮಹಿಮಾ ತಸ್ಮೈ ರುದ್ರಾತ್ಮನೇ ನಮಃ । ಯೋಽಂತರಾ ಸರ್ವಭೂತಾನಾಂ ನಿಯಂತಾ ತಿಷ್ಠತೀಶ್ವರಃ ।। 67 ।। ಯಸ್ಯ ಕೇಶೇಷು ಜೀಮೂತಾ ನದ್ಯಃ ಸರ್ವಾಂಗಸಂಧಿಷು । ಕುಕ್ಷೌ ಸಮುದ್ರಾಶ್ಚತ್ವಾರಸ್ತಸ್ಮೈ ತೋಯಾತ್ಮನೇ ನಮಃ ।। 68 ।। ತಂ ಸರ್ವಸಾಕ್ಷಿಣಂ ದೇವಂ ನಮಸ್ಯೇ ವಿಶ್ವತಸ್ತನುಮ್ । ಯಂ ವಿನಿದ್ರಾ ಜಿತಶ್ವಾಸಾಃ ಸಂತುಷ್ಟಾಃ ಸಮದರ್ಶಿನಃ ।। 69 ।। ಜ್ಯೋತಿಃ ಪಶ್ಯಂತಿ ಯುಂಜಾನಾಸ್ತಸ್ಮೈ ಯೋಗಾತ್ಮನೇ ನಮಃ । ಯಯಾ ಸಂತರತೇ ಮಾಯಾಂ ಯೋಗೀ ಸಂಕ್ಷೀಣಕಲ್ಮಷಃ ।। 70 ।। ಅಪಾರತರಪರ್ಯಂತಾಂ ತಸ್ಮೈ ವಿದ್ಯಾತ್ಮನೇ ನಮಃ । ಯಸ್ಯ ಭಾಸಾ ವಿಭಾತ್ಯರ್ಕೋ ಮಹೋ ಯತ್ತಮಸಃ ಪರಮ್ ।। 71 ।। ಪ್ರಪದ್ಯೇ ತತ್ಪರಂ ತತ್ತ್ವಂ ತದ್ರೂಪಂ ಪಾರಮೇಶ್ವರಮ್ । ನಿತ್ಯಾನಂದಂ ನಿರಾಧಾರಂ ನಿಷ್ಕಲಂ ಪರಮಂ ಶಿವಮ್ ।। 72 ।। ಪ್ರಪದ್ಯೇ ಪರಮಾತ್ಮಾನಂ ಭವಂತಂ ಪರಮೇಶ್ವರಮ್

ನಿತ್ಯವೂ ಹದಿನಾಲ್ಕು ಲೋಕಗಳನ್ನೊಳಗೊಂಡ ಬ್ರಹ್ಮಾಂಡವನ್ನು ತಲೆಯ ಮೇಲೆ ಹೊತ್ತಿರುವ ಅಖಿಲಾಧಾರ ಶೇಷಾತ್ಮನಿಗೆ ನಮಸ್ಕಾರ! ಪರಾಂತಕಾಲದಲ್ಲಿ[3] ಪರಮಾನಂದವನ್ನು ಕುಡಿದು, ಸಾಕ್ಷೀಸ್ವರೂಪನಾಗಿ ನರ್ತನ ಮಾಡುವ ಏಕೈಕ ದೇವ, ಅನಂತಮಹಿಮ ರುದ್ರಾತ್ಮನಿಗೆ ನಮಸ್ಕಾರ. ಸರ್ವಭೂತಗಳ ಒಳಗಿದ್ದು ಈಶ್ವರನಾಗಿ ನಿಯಂತ್ರಿಸುವ, ಯಾರ ಕೇಶಗಳಲ್ಲಿ ಮೇಘಗಳೂ, ಸರ್ವಾಂಗಗಳ ಸಂಧಿಗಳಲ್ಲಿ ನದಿಗಳೂ, ಉದರದಲ್ಲಿ ನಾಲ್ಕು ಸಮುದ್ರಗಳೂ ವಾಸಿಸಿವೆಯೋ ಆ ತೋಯಾತ್ಮನಿಗೆ ನಮಸ್ಕಾರ! ನಿದ್ರೆಯನ್ನು ತ್ಯಜಿಸಿ, ಶ್ವಾಸಗಳನ್ನು ಗೆದ್ದು ಸಂತುಷ್ಟರಾದ ಸಮದರ್ಶಿ ಯೋಗಿಗಳು ಯಾವ ಜ್ಯೋತಿಯನ್ನು ಕಾಣುತ್ತಾರೋ ಆ ಸರ್ವಸಾಕ್ಷಿ, ವಿಶ್ವತೋರೂಪೀ ದೇವ ಯೋಗಾತ್ಮನಿಗೆ ನಮಸ್ಕರಿಸುತ್ತೇನೆ. ಯಾರಿಂದ ಯೋಗಿಯು ಪಾಪಗಳನ್ನು ಕಳೆದುಕೊಂಡು ಮಾಯೆಯನ್ನು ದಾಟುತ್ತಾನೋ ಆ ವಿದ್ಯಾತ್ಮನಿಗೆ ನಮಸ್ಕಾರ! ಯಾರ ಪ್ರಕಾಶದಿಂದ ಸೂರ್ಯನೂ ಪ್ರಕಾಶಿಸುತ್ತಾನೋ, ಮತ್ತು ಯಾರು ತಮಸ್ಸಿಗಿಂತಲೂ ಪರನೋ, ಆ ತತ್ಪರಮ ತತ್ತ್ವ ಪರಮೇಶ್ವರನ ರೂಪವನ್ನು ನಮಸ್ಕರಿಸುತ್ತೇನೆ. ನಿತ್ಯಾನಂದನೂ, ನಿರಾಧಾರನೂ, ನಿಷ್ಕಲನೂ ಆದ ಪರಮಶಿವನಿಗೆ ನಮಸ್ಕರಿಸುತ್ತೇನೆ. ಪರಮಾತ್ಮಾ! ಪರಮೇಶ್ವರ! ನಿನಗೆ ನಮಸ್ಕರಿಸುತ್ತೇನೆ!”

ಏವಂ ಸ್ತುತ್ವಾ ಮಹಾದೇವಂ ಬ್ರಹ್ಮಾ ತದ್ಭಾವಭಾವಿತಃ ।। 73 ।। ಪ್ರಾಂಜಲಿಃ ಪ್ರಣತಸ್ತಸ್ಥೌ ಗೃಣನ್ ಬ್ರಹ್ಮ ಸನಾತನಮ್ । ತತಸ್ತಸ್ಯ ಮಹಾದೇವೋ ದಿವ್ಯಂ ಯೋಗಮನುತ್ತಮಮ್ ।। 74 ।। ಐಶ್ವರಂ ಬ್ರಹ್ಮ ಸದ್ಭಾವಂ ವೈರಾಗ್ಯಂ ಚ ದದೌ ಹರಃ । ಕರಾಭ್ಯಾಂ ಕೋಮಲಾಭ್ಯಾಂ ಚ ಸಂಸ್ಪೃಶ್ಯ ಪ್ರಣತಾರ್ತಿಹಾ ।। 75 ।। ವ್ಯಾಜಹಾರ ಸ್ಮಯನ್ನೇವ ಸೋಽನುಗೃಹ್ಯ ಪಿತಾಮಹಮ್ । ಯತ್ತ್ವಯಾಭ್ಯರ್ಥಿತಂ ಬ್ರಹ್ಮನ್ ಪುತ್ರತ್ವೇ ಭವತಾ ಮಮ ।। 76 ।। ಕೃತಂ ಮಯಾ ತತ್ಸಕಲಂ ಸೃಜಸ್ವ ವಿವಿಧಂ ಜಗತ್ । ತ್ರಿಧಾ ಭಿನ್ನೋಽಸ್ಮ್ಯಹಂ ಬ್ರಹ್ಮನ್ ಬ್ರಹ್ಮವಿಷ್ಣುಹರಾಖ್ಯಯಾ ।। 77 ।। ಸರ್ಗರಕ್ಷಾಲಯಗುಣೈರ್ನಿಷ್ಕಲಃ ಪರಮೇಶ್ವರಃ । ಸ ತ್ವಂ ಮಮಾಗ್ರಜಃ ಪುತ್ರಃ ಸೃಷ್ಟಿಹೇತೋರ್ವಿನಿರ್ಮಿತಃ ।। 78 ।। ಮಮೈವ ದಕ್ಷಿಣಾದಂಗಾದ್ವಾಮಾಂಗಾತ್ ಪುರುಷೋತ್ತಮಃ । ತಸ್ಯ ದೇವಾಧಿದೇವಸ್ಯ ಶಂಭೋರ್ಹೃದಯದೇಶತಃ ।। 79 ।। ಸಂಬಭೂವಾಥ ರುದ್ರೋ ವಾ ಸೋಽಹಂ ತಸ್ಯ ಪರಾ ತನುಃ । ಬ್ರಹ್ಮವಿಷ್ಣುಶಿವಾ ಬ್ರಹ್ಮನ್ ಸರ್ಗಸ್ಥಿತ್ಯಂತಹೇತವಃ ।। 80 ।। ವಿಭಜ್ಯಾತ್ಮಾನಮೇಕೋಽಪಿ ಸ್ವೇಚ್ಚಯಾ ಶಂಕರಃ ಸ್ಥಿತಃ

ಹೀಗೆ ಬ್ರಹ್ಮನು ಸ್ತೋತ್ರದ ಭಾವವನ್ನೇ ಭಾವಿಸುತ್ತಾ ಮಹಾದೇವನನ್ನು ಸ್ತುತಿಸಿ, ಸನಾತನ ಬ್ರಹ್ಮನಿಗೆ ತಲೆಬಾಗಿ ಕೈಮುಗಿದು ನಿಂತನು. ಆಗ ಭಕ್ತರ ದುಃಖವನ್ನು ದೂರಮಾಡುವ ಮಹಾದೇವ ಹರನು ತನ್ನ ಕೋಮಲ ಕರಗಳಿಂದ ಸ್ಪರ್ಶಿಸಿ ಅವನಿಗೆ ದಿವ್ಯ ಅನುತ್ತಮ ಯೋಗವನ್ನೂ, ಯೋಗೈಶ್ವರ್ಯಗಳನ್ನೂ, ಬ್ರಹ್ಮಸದ್ಭಾವವನ್ನೂ, ವೈರಾಗ್ಯವನ್ನೂ ಕರುಣಿಸಿದನು. ಪಿತಾಮಹನಿಗೆ ಹೀಗೆ ಅನುಗ್ರಹಿಸಿ ಮುಗುಳ್ನಗುತ್ತಾ ಹೇಳಿದನು: “ಬ್ರಹ್ಮನ್! ನೀನು ಪ್ರಾರ್ಥಿಸಿಕೊಂಡಂತೆ ನಾನು ನಿನ್ನ ಪುತ್ರತ್ವವನ್ನು ಹೊಂದಿದ್ದೇನೆ. ನಿನ್ನ ಪ್ರಾರ್ಥನೆಯನ್ನು ಪೂರ್ಣಗೊಳಿಸಿದ್ದೇನೆ. ಇನ್ನು ನೀನು ವಿವಿಧ ಜಗತ್ತನ್ನು ಸೃಷ್ಟಿಸು. ಬ್ರಹ್ಮನ್! ಬ್ರಹ್ಮ, ವಿಷ್ಣು, ಶಿವ ಎಂಬ ಹೆಸರುಗಳಿಂದ ಮೂರು ವಿಧಗಳಲ್ಲಿ ಭಿನ್ನನಾಗಿರುವ ನಾನು ಒಬ್ಬನೇ! ನಿರ್ಗುಣ ಪರಮೇಶ್ವರನಾದ ನಾನು ಸೃಷ್ಟಿ-ರಕ್ಷೆ-ಲಯದ ಗುಣಗಳನ್ನು ಹೊಂದಿದ್ದೇನೆ. ಸೃಷ್ಟಿಗೋಸ್ಕರ ನಿರ್ಮಿತನಾದ ನೀನು ನನ್ನ ಹಿರಿಯ ಮಗನು. ನನ್ನ ದಕ್ಷಿಣಭಾಗ[4]ದಿಂದ ನೀನು ಜನಿಸಿದ್ದೀಯೆ. ವಾಮಭಾಗ[5]ದಿಂದ ಪುರುಷೋತ್ತಮ ವಿಷ್ಣುವು ಜನಿಸಿದ್ದಾನೆ. ಆ ದೇವಾಧಿದೇವ ಶಂಭುವಿನ ಹೃದಯ ಪ್ರದೇಶದಿಂದ ರುದ್ರನು ಜನಿಸಿದ್ದಾನೆ. ಆದ್ದರಿಂದ ನಾನು ಅವನ ಪರಮಶರೀರವು. ಬ್ರಹ್ಮನ್! ಸ್ವ-ಇಚ್ಛೆಯಿಂದ ಜಗತ್ತಿನ ಸ್ವರ್ಗ-ಸ್ಥಿತಿ-ಅಂತ್ಯವನ್ನುಂಟುಮಾಡಲೋಸುಗ ನನ್ನನ್ನೇ ನಾನು ಬ್ರಹ್ಮ-ವಿಷ್ಣು-ಶಿವರನ್ನಾಗಿ ವಿಭಜಿಸಿಕೊಂಡು ಶಂಕರನಾಗಿ ಸ್ಥಿತನಾಗಿದ್ದೇನೆ.

ತಥಾನ್ಯಾನಿ ಚ ರೂಪಾಣಿ ಮಮ ಮಾಯಾಕೃತಾನಿ ಚ ।। 81 ।। ಅರೂಪಃ ಕೇವಲಃ ಸ್ವಸ್ಥೋ ಮಹಾದೇವಃ ಸ್ವಭಾವತಃ । ಯ ಏಭ್ಯಃ ಪರತೋ ದೇವಸ್ತ್ರಿಮೂರ್ತಿಃ ಪರಮಾ ತನುಃ ।। 82 ।। ಮಾಹೇಶ್ವರೀ ತ್ರಿನಯನಾ ಯೋಗಿನಾಂ ಶಾಂತಿದಾ ಸದಾ । ತಸ್ಯಾ ಏವ ಪರಾಂ ಮೂರ್ತಿಂ ಮಾಮವೇಹಿ ಪಿತಾಮಹ ।। 83 ।। ಶಾಶ್ವತೈಶ್ವರ್ಯವಿಜ್ಞಾನಂ ತೇಜೋಯೋಗಸಮನ್ವಿತಮ್ । ಸೋಽಹಂ ಗ್ರಸಾಮಿ ಸಕಲಮಧಿಷ್ಠಾಯ ತಮೋಗುಣಮ್ ।। 84 ।। ಕಾಲೋ ಭೂತ್ವಾ ನ ಮನಸಾ ಮಾಮನ್ಯೋಽಭಿಭವಿಷ್ಯತಿ । ಯದಾ ಯದಾ ಹಿ ಮಾಂ ನಿತ್ಯಂ ವಿಚಿಂತಯಸಿ ಪದ್ಮಜ ।। 85 ।। ತದಾ ತದಾ ಮೇ ಸಾನ್ನಿಧ್ಯಂ ಭವಿಷ್ಯತಿ ತವಾನಘ । ಏತಾವದುಕ್ತ್ವಾ ಬ್ರಹ್ಮಾಣಂ ಸೋಽಭಿವಂದ್ಯ ಗುರುಂ ಹರಃ ।। 86 ।। ಸಹೈವ ಮಾನಸೈಃ ಪುತ್ರೈಃ ಕ್ಷಣಾದಂತರಧೀಯತ । 

ಆದ್ದರಿಂದ ಅನ್ಯ ಎಲ್ಲ ರೂಪಗಳೂ ನಾನು ರಚಿಸಿದ ಮಾಯೆಯು. ಸ್ವಭಾವತಃ ಮಹಾದೇವನು ಅರೂಪನು, ಅದ್ವಿತೀಯನು ಮತ್ತು ತನ್ನಲ್ಲಿಯೇ ನೆಲೆಸಿರುವವನು. ಕಲ್ಪಿತ ಶರೀರಗಳಲ್ಲಿ ಈ ತ್ರಿಮೂರ್ತಿಗಳೇ ಹೆಚ್ಚಿನವರು. ಪಿತಾಮಹ! ಆ ಮೂವರಲ್ಲಿ ಯೋಗಿಗಳಿಗೆ ಸದಾ ಶಾಂತಿಯನ್ನು ನೀಡುವ ತ್ರಿನಯನ ಮಹೇಶ್ವರನ ಪರಮ ಮೂರ್ತಿಯು ನಾನೇ ಎಂದು ತಿಳಿ. ದಿವ್ಯ ತೇಜಸ್ಸಿನ ಸಂಯೋಜನೆಯಿಂದ ಕೂಡಿದ, ನಿತ್ಯವಾದ ಜ್ಞಾನ, ಶಕ್ತಿ ಮತ್ತು ಐಶ್ವರ್ಯಗಳಿಂದ ನಾನು ತಮೋಗುಣದ ಅಧಿಷ್ಠಾನ[6]ನಾಗಿ ಸಕಲವನ್ನೂ ನುಂಗುತ್ತೇನೆ. ನಾನು ಕಾಲನಾದಾಗ ಮನಸ್ಸಿನ ಮೂಲಕ ನನ್ನನ್ನು ಯಾರೂ ಅತಿಕ್ರಮಿಸಲು ಅಥವಾ ಜಯಿಸಲು ಸಾಧ್ಯವಿಲ್ಲ.[7] ಪದ್ಮಜ! ಅನಘ! ನೀನು ನನ್ನನ್ನು ಸ್ಮರಿಸಿದಾಗಲೆಲ್ಲಾ ನನ್ನ ಸಾನ್ನಿಧ್ಯವನ್ನು ಹೊಂದುತ್ತೀಯೆ!” ಬ್ರಹ್ಮನಿಗೆ ಹೀಗೆ ಹೇಳಿ ಗುರುವಿಗೆ ವಂದಿಸಿ ಕ್ಷಣದಲ್ಲಿಯೇ ಹರನು ತನ್ನ ಮಾನಸಪುತ್ರರೊಂದಿಗೆ ಅಂತರ್ಧಾನನಾದನು.

ಸೋಽಪಿ ಯೋಗಂ ಸಮಾಸ್ಥಾಯ ಸಸರ್ಜ ವಿವಿಧಂ ಜಗತ್ ।। 87 ।। ನಾರಾಯಣಾಖ್ಯೋ ಭಗವಾನ್ಯಥಾಪೂರ್ವಂ ಪ್ರಜಾಪತಿಃ । ಮರೀಚಿಭೃಗ್ವಂಗಿರಸಃ ಪುಲಸ್ತ್ಯಂ ಪುಲಹಂ ಕ್ರತುಮ್ ।। 88 ।। ದಕ್ಷಮತ್ರಿಂ ವಸಿಷ್ಠಂ ಚ ಸೋಽಸೃಜದ್ಯೋಗವಿದ್ಯಯಾ । ನವ ಬ್ರಹ್ಮಾಣ ಇತ್ಯೇತೇ ಪುರಾಣೇ ನಿಶ್ಚಯೋ ಮತಃ । ಸರ್ವೇ ತೇ ಬ್ರಹ್ಮಣಾ ತುಲ್ಯಾಃ ಸಾಧಕಾ ಬ್ರಹ್ಮವಾದಿನಃ ।। 89 ।। ಸಂಕಲ್ಪಂ ಚೈವ ಧರ್ಮಂ ಚ ಯುಗಧರ್ಮಾಂಶ್ಚ ಶಾಶ್ವತಾನ್ । ಸ್ಥಾನಾಭಿಮಾನಿನಃ ಸರ್ವಾನ್ಯಥಾ ತೇ ಕಥಿತಂ ಪುರಾ ।। 90 ।।

ನಾರಾಯಣನೆಂಬ ಹೆಸರಿರುವ ಭಗವಾನ್ ಪ್ರಜಾಪತಿ ಬ್ರಹ್ಮನೂ ಯೋಗವನ್ನು ಆಶ್ರಯಿಸಿ ಹಿಂದೆ ಕೂಡ ಮಾಡಿದ್ದಂತೆ ವಿವಿಧ ಜಗತ್ತುಗಳನ್ನು ಸೃಷ್ಟಿಸಿದನು. ಅವನು ತನ್ನ ಯೋಗವಿದ್ಯೆಯಿಂದ ಮರೀಚಿ, ಭೃಗು, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು, ದಕ್ಷ, ಅತ್ರಿ, ಮತ್ತು ವಸಿಷ್ಠರನ್ನು ಸೃಷ್ಟಿಸಿದನು. ಬ್ರಹ್ಮನಿಗೆ ಸಮನಾದ ಸಾಧಕರಾಗಿದ್ದ, ಬ್ರಹ್ಮವಾದಿಗಳಾಗಿದ್ದ ಅವರೆಲ್ಲರೂ ನವಬ್ರಹ್ಮರು ಎಂದು ಪುರಾಣಗಳಲ್ಲಿ ನಿಶ್ಚಿತವಾಗಿವೆ. ನಂತರ ಬ್ರಹ್ಮನು, ಹಿಂದೆ ನಾನು ಹೇಳಿದಂತೆ, ಸಂಕಲ್ಪ ಮತ್ತು ಧರ್ಮರನ್ನೂ  ಶಾಶ್ವತ ಯುಗಧರ್ಮಗಳನ್ನೂ, ಸ್ಥಾನಾಭಿಮಾನಿಗಳನ್ನೂ, ಎಲ್ಲವನ್ನೂ ಸೃಷ್ಟಿಸಿದನು.”

ಇತಿ ಶ್ರೀಕೂರ್ಮಪುರಾಣೇ ದಶಮೋಽಧ್ಯಾಯಃ ।।

ಇದು ಶ್ರೀಕೂರ್ಮಪುರಾಣದಲ್ಲಿ ಹತ್ತನೇ ಅಧ್ಯಾಯವು.

[1] ಮಧುಕೈಟಭರ ವಧೆಯ ಕುರಿತು ಶ್ರೀಮಹಾಭಾರತದ ಆರಣ್ಯಕ ಪರ್ವದಲ್ಲಿ, ಮಾರ್ಕಂಡೇಯಸಮಸ್ಯಾಪರ್ವದ ದುಂಧುಮಾರ ಚರಿತೆಯಲ್ಲಿ ಅಧ್ಯಾಯ 194ರಲ್ಲಿ ಮಾರ್ಕಂಡೇಯನು ಮಧು-ಕೈಟಭರು ವಿಷ್ಣುವಿನಿಂದ ವಧಿಸಲ್ಪಟ್ಟಿದ್ದುದನ್ನು ವರ್ಣಿಸುವುದು ಬರುತ್ತದೆ. ಶ್ರೀಮಾರ್ಕಂಡೇಯಮಹಾಪುರಾಣದ ದೇವೀಮಹಾತ್ಮೆಯಲ್ಲಿ ಕೂಡ ಮಧು-ಕೈಟಭರ ವಧೆಯ ಕುರಿತು ಬಂದಿದೆ.

[2] ಋಭು=ಜ್ಞಾನಿ

[3] ಪರಾಂತಕಾಲ=ಬ್ರಹ್ಮನಿಗೆ ಅವನ ಮಾನದಲ್ಲಿ ನೂರು ವರ್ಷಗಳಾದಾಗ

[4] ದಕ್ಷಿಣಭಾಗ=ಬಲಭಾಗ

[5] ವಾಮಭಾಗ=ಎಡಭಾಗ

[6] ಅಧಿಷ್ಠಾಯ: ಸಂಸ್ಕೃತದಲ್ಲಿ “ಅಧಿ + ಷ್ಠಾ” ಧಾತುಗಳಿಂದ ಬಂದಿರುವ ಈ ಪದಕ್ಕೆ ಸಾಮಾನ್ಯವಾಗಿ “ಆಧಾರವಾಗಿ ನಿಂತು”, “ನಿಯಂತ್ರಣವಾಗಿ”, “ಆಧಾರ ಮಾಡಿಕೊಂಡು”, “ಆಧಿಪತ್ಯದಿಂದ”, “ಅಧಿಷ್ಠಾನವಾಗಿ” ಎಂಬ ಅರ್ಥಗಳು ಬರುತ್ತವೆ. ಅಂದರೆ — ಯಾವುದನ್ನಾದರೂ ನಿಭಾಯಿಸಿ, ಆಧಾರವಾಗಿ ಧರಿಸಿ, ಅಥವಾ ಅದನ್ನು ತನ್ನ ಆಧಾರವಾಗಿ ತೆಗೆದುಕೊಂಡು ಕಾರ್ಯ ಮಾಡುವಾಗ “ಅಧಿಷ್ಠಾಯ” ಎಂಬ ಪದವನ್ನು ಬಳಸುತ್ತಾರೆ.

[7] ಕಾಲಸ್ವರೂಪನಾದ ಪರಮಶಕ್ತಿ ಶಂಕರನು ಹೇಳುತ್ತಾನೆ: ನಾನು ಕಾಲವಾಗಿದ್ದಾಗ, ಬೇರೆ ಯಾವುದೇ ಶಕ್ತಿ, ಜೀವಿ ಅಥವಾ ಮನೋಬಲವೂ ನನ್ನನ್ನು ಮೀರಲಾರದು.

Leave a Reply

Your email address will not be published. Required fields are marked *