ಶ್ರೀ ಕೂರ್ಮಪುರಾಣ: ಅಧ್ಯಾಯ 8 - ಮುಖ್ಯಾದಿಸರ್ಗಕಥನಮ್

ಕೂರ್ಮ ಉವಾಚ । ಏವಂ ಭೂತಾನಿ ಸೃಷ್ಟಾನಿ ಸ್ಥಾವರಾಣಿ ಚರಾಣಿ ಚ । ಯದಾಸ್ಯ ತಾಃ ಪ್ರಜಾಃ ಸೃಷ್ಟಾ ನ ವ್ಯವರ್ಧಂತ ಧೀಮತಃ ।। 1 ।। ತಮೋಮಾತ್ರಾವೃತೋ ಬ್ರಹ್ಮಾ ತದಾಽಶೋಚತ ದುಃಖಿತಃ । ತತಃ ಸ ವಿದಧೇ ಬುದ್ಧಿಮರ್ಥನಿಶ್ಚಯಗಾಮಿನೀಮ್ ।। 2 ।। ಅಥಾತ್ಮನಿ ಸಮದ್ರಾಕ್ಷೀತ್ತಮೋಮಾತ್ರಾಂ ನಿಯಾಮಿಕಾಮ್ । ರಜಃ ಸತ್ತ್ವಂ ಚ ಸಂವೃತ್ತಂ ವರ್ತಮಾನಂ ಸ್ವಧರ್ಮತಃ ।। 3 ।। ತಮಸ್ತು ವ್ಯನುದತ್ಪಶ್ಚಾತ್ರಜಃಸತ್ತ್ವೇನ ಸಂಯುತಃ । ತತ್ತಮಃ ಪ್ರತಿನುನ್ನಂ ವೈ ಮಿಥುನಂ ಸಮಜಾಯತ ।। 4 ।। ಅಧರ್ಮಾಚರಣೋ ವಿಪ್ರಾ ಹಿಂಸಾ ಚಾಶುಭಲಕ್ಷಣಾ । ಸ್ವಾಂ ತನುಂ ಸ ತತೋ ಬ್ರಹ್ಮಾ ತಾಮಪೋಹತ ಭಾಸ್ವರಾಮ್ ।। 5 ।। ದ್ವಿಧಾಕರೋತ್ಪುನರ್ದೇಹಮರ್ಧೇನ ಪುರುಷೋಽಭವತ್ । ಅರ್ಧೇನ ನಾರೀ ಪುರುಷೋ ವಿರಾಜಮಸೃಜತ್ ಪ್ರಭುಃ ।। 6 ।।

ಕೂರ್ಮನು ಹೇಳಿದನು: “ಹೀಗೆ ಸ್ಥಾವರ-ಚರ ಭೂತಗಳನ್ನು ಸೃಷ್ಟಿಸಿದರೂ ಧೀಮತ ಬ್ರಹ್ಮನು ಬಯಸಿದಂತೆ ಆ ಪ್ರಜೆಗಳು ವೃದ್ಧಿಯನ್ನು ಹೊಂದಲಿಲ್ಲ. ಆಗ ಬ್ರಹ್ಮನು ತಮೋಗುಣದಿಂದ ಆವೃತನಾಗಿ ದುಃಖಿತನಾಗಿ ಶೋಕಿಸಿದನು. ಆಗ ಅವನು ಕರ್ತವ್ಯಾರ್ಥದ ನಿರ್ಣಯವನ್ನು ಸೂಚಿಸುವ ಒಂದು ಬುದ್ಧಿವೃತ್ತಿಯನ್ನು ಹೊಂದಿದನು. ಅವನು ತನ್ನ ಚಿತ್ತದಲ್ಲಿ ರಜ ಮತ್ತು ಸತ್ತ್ವಗುಣಗಳು ತಮ್ಮ ತಮ್ಮ ಧರ್ಮಕ್ಕನುಗುಣವಾಗಿ ನಡೆಯದಂತೆ ಮಾಡಿ ಅವುಗಳನ್ನು ಆವರಿಸಿ ತಮೋಗುಣವು ನಿಯಂತ್ರಿಸುತ್ತಿರುವುದನ್ನು ಕಂಡನು. ಆಗ ರಜೋಗುಣ-ಸತ್ತ್ವಗುಣಗಳ ಆಧಿಕ್ಯದಿಂದ ಕೂಡಿ ತಮೋಗುಣವನ್ನು ಹಿಮ್ಮೆಟ್ಟಿಸಿದನು. ಹಿಂದಕ್ಕೆ ನೂಕಲ್ಪಟ್ಟ ತಮೋಗುಣವು ಮಿಥುನ ರೂಪವನ್ನು ತಾಳಿತು. ವಿಪ್ರರೇ! ಅಧರ್ಮಾಚರಣೆಯು ಹಿಂಸೆಯು ಮತ್ತು ಅಶುಭವಾದುದು. ಆಗ ಬ್ರಹ್ಮನು ಪ್ರಾಕಾಶಮಾನವಾದ ತನ್ನ ಆ ದೇಹವನ್ನು ಪ್ರವೇಶಿಸಿದನು. ಆ ದೇಹವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿ ಒಂದು ಅರ್ಧಭಾಗದಿಂದ ಪುರುಷಸ್ವರೂಪನೂ, ಮತ್ತೊಂದು ಅರ್ಧಭಾಗದಿಂದ ಸ್ತ್ರೀಸ್ವರೂಪನೂ ಆಗಿ ಪ್ರಭುವು ವಿರಾಟ್ ಪುರುಷನನ್ನು ಸೃಷ್ಟಿಸಿದನು.

ನಾರೀಂ ಚ ಶತರೂಪಾಖ್ಯಾಂ ಯೋಗಿನೀಂ ಸಸೃಜೇ ಶುಭಾಮ್ । ಸಾ ದಿವಂ ಪೃಥಿವೀಂ ಚೈವ ಮಹಿಮ್ನಾ ವ್ಯಾಪ್ಯ ಸಂಸ್ಥಿತಾ ।। 7 ।। ಯೋಗೈಶ್ವರ್ಯಬಲೋಪೇತಜ್ಞಾನವಿಜ್ಞಾನಸಂಯುತಾ । ಯೋಽಭವತ್ಪುರುಷಾತ್ಪುತ್ರೋ ವಿರಾಡವ್ಯಕ್ತಜನ್ಮನಃ ।। 8 ।। ಸ್ವಾಯಂಭುವೋ ಮನುರ್ದೇವಃ ಸೋಽಭವತ್ಪುರುಷೋ ಮುನಿಃ । ಸಾ ದೇವೀ ಶತರೂಪಾಖ್ಯಾ ತಪಃ ಕೃತ್ವಾ ಸುದುಶ್ಚರಮ್ ।। 9 ।। ಭರ್ತಾರಂ ದೀಪ್ತಯಶಸಂ ಮನುಮೇವಾನ್ವಪದ್ಯತ । ತಸ್ಮಾಚ್ಚ ಶತರೂಪಾ ಸಾ ಪುತ್ರದ್ವಯಮಸೂಯತ ।। 10 ।। ಪ್ರಿಯವ್ರತೋತ್ತಾನಪಾದೌ ಕನ್ಯಾದ್ವಯಮನುತ್ತಮಮ್ । ತಯೋಃ ಪ್ರಸೂತಿಂ ದಕ್ಷಾಯ ಮನುಃ ಕನ್ಯಾಂ ದದೇ ಪುನಃ ।। 11 ।। ಪ್ರಜಾಪತಿರಥಾಕೂತಿಂ ಮಾನಸೋ ಜಗೃಹೇ ರುಚಿಃ । ಆಕೂತ್ಯಾಂ ಮಿಥುನಂ ಜಜ್ಞೇ ಮಾನಸಸ್ಯ ರುಚೇಃ ಶುಭಮ್ ।। 12 ।। ಯಜ್ಞಶ್ಚ ದಕ್ಷಿಣಾಂ ಚೈವ ಯಾಭ್ಯಾಂ ಸಂವರ್ಧಿತಂ ಜಗತ್ । ಯಜ್ಞಸ್ಯ ದಕ್ಷಿಣಾಯಾಂ ಚ ಪುತ್ರಾ ದ್ವಾದಶ ಜಜ್ಞಿರೇ ।। 13 ।। ಯಾಮಾ ಇತಿ ಸಮಾಕ್ಯತಾ ದೇವಾಃ ಸ್ವಾಯಂಭುವೇಽಂತರೇ

ದ್ಯಾವಾಪೃಥ್ವಿಗಳನ್ನು ವ್ಯಾಪಿಸಿ ನಿಂತಿದ್ದ ಯೋಗಿನೀ, ಮಹಿಮಾಯುಕ್ತ, ಶುಭೆ ಶತರೂಪೆ ಎಂಬ ನಾರಿಯನ್ನು ಸೃಷ್ಟಿಸಿದನು. ಅವಳು ಯೋಗಮಹಿಮೆ, ಈಶ್ವರತ್ವ ಶಕ್ತಿ ಮತ್ತು ಜ್ಞಾನ-ವಿಜ್ಞಾನಗಳಿಂದ ಕೂಡಿದ್ದಳು. ಅವ್ಯಕ್ತದಿಂದ ಹುಟ್ಟಿದ ಬ್ರಹ್ಮನಿಂದ ವಿರಾಟ್ ಪುರುಷನು ಪುತ್ರನಾಗಿ ಜನಿಸಿದನು. ಅವನು ಸ್ವಯಂಭು ಬ್ರಹ್ಮನ ಪುತ್ರ ಮನುವಾಗಿ ಜನಿಸಿ ಮುನಿಯಾದನು. ದೇವೀ ಶತರೂಪೆಯು ಅತ್ಯಂತ ಕಠಿಣ ತಪಸ್ಸನ್ನು ಮಾಡಿ ದೀಪ್ತಯಶಸ್ವೀ ಮನುವನ್ನೇ ಪತಿಯನ್ನಾಗಿ ಪಡೆದುಕೊಂಡಳು. ಅವನಿಂದ ಶತರೂಪೆಯು ಪ್ರಿಯವ್ರತ-ಉತ್ತಾನಪಾದರೆಂಬ ಇಬ್ಬರು ಪುತ್ರರನ್ನು ಪಡೆದಳು. ಅವಳಿಗೆ ಇಬ್ಬರು ಅನುತ್ತಮ ಕನ್ಯೆಯರೂ ಆದರು. ಅವರಲ್ಲಿ ಪ್ರಸೂತಿ ಎಂಬ ಕನ್ಯೆಯನ್ನು ಮನುವು ದಕ್ಷನಿಗೆ ಕೊಟ್ಟನು. ಬ್ರಹ್ಮಮಾನಸ ಪುತ್ರನಾದ ರುಚಿ ಪ್ರಜಾಪತಿಯು ಅಕೂತಿಯನ್ನು ಪರಿಗ್ರಹಿಸಿದನು. ಮಾನಸಪುತ್ರ ರುಚಿಗೆ ಅಕೂತಿಯಲ್ಲಿ ಶುಭ ಅವಳೀ ಮಕ್ಕಳು ಹುಟ್ಟಿದರು. ಯಜ್ಞ ಮತ್ತು ದಕ್ಷಿಣೆ ಎಂಬ ಆ ಇಬ್ಬರು ಜಗತ್ತನ್ನು ವೃದ್ಧಿಗೊಳಿಸಿದರು. ಯಜ್ಞನಿಗೆ ದಕ್ಷಿಣೆಯಲ್ಲಿ ಹನ್ನೆರಡು ಪುತ್ರರು ಜನಿಸಿದರು. ಸ್ವಾಯಂಭುವ ಮನ್ವಂತರದಲ್ಲಿ ಇವರು ಯಾಮಾ ಎಂದು ಖ್ಯಾತರಾಗಿದ್ದರು.

ಪ್ರಸೂತ್ಯಾಂ ಚ ತಥಾ ದಕ್ಷಶ್ಚತಸ್ರೋ ವಿಂಶತಿಂ ತಥಾ ।। 14 ।। ಸಸರ್ಜ ಕನ್ಯಾನಾಮಾನಿ ತಾಸಾಂ ಸಮ್ಯಕ್ ನಿಬೋಧತ । ಶ್ರದ್ಧಾ ಲಕ್ಷ್ಮೀರ್ಧೃತಿಸ್ತುಷ್ಟಿಃ ಪುಷ್ಟಿರ್ಮೇಧಾ ಕ್ರಿಯಾ ತಥಾ ।। 15 ।। ಬುದ್ಧಿರ್ಲಜ್ಜಾವಪುಃ ಶಾಂತಿಃ ಸಿದ್ಧಿಃ ಕೀರ್ತಿಸ್ತ್ರಯೋದಶೀ । ಪತ್ನ್ಯರ್ಥಂ ಪ್ರತಿಜಗ್ರಾಹ ಧರ್ಮೋ ದಾಕ್ಷಾಯಣೀಃ ಶುಭಾಃ ।। 16 ।।

ಹಾಗೆಯೇ ದಕ್ಷನು ಪ್ರಸೂತಿಯಲ್ಲಿ 24 ಕನ್ಯೆಯರನ್ನು ಸೃಷ್ಟಿಸಿದನು. ಅವರ ಹೆಸರುಗಳ ತಿಳಿಯಿರಿ: ಶ್ರದ್ಧಾ, ಲಕ್ಷ್ಮೀ, ಧೃತಿ, ತುಷ್ಟಿ, ಪುಷ್ಟಿ, ಮೇಧಾ, ಕ್ರಿಯಾ, ಬುದ್ಧಿ, ಲಜ್ಜಾ, ವಪು, ಶಾಂತಿ, ಸಿದ್ಧಿ ಮತ್ತು ಹದಿಮೂರನೆಯವಳು ಕೀರ್ತಿ. ಈ ಶುಭ ದಾಕ್ಷಾಯಣಿಯರನ್ನು ಧರ್ಮನು ಪತ್ನಿಯರನ್ನಾಗಿ ಸ್ವೀಕರಿಸಿದನು.

ತಾಭ್ಯಃ ಶಿಷ್ಟಾ ಯವೀಯಸ್ಯ ಏಕಾದಶ ಸುಲೋಚನಾಃ । ಖ್ಯಾತಿಃ ಸತ್ಯಾಥ ಸಂಭೂತಿಃ ಸ್ಮೃತಿಃ ಪ್ರೀತಿಃ ಕ್ಷಮಾ ತಥಾ ।। 17 ।। ಸಂತತಿಶ್ಚಾನಸೂಯಾ ಚ ಊರ್ಜಾ ಸ್ವಾಹಾ ಸ್ವಧಾ ತಥಾ । ಭೃಗುರ್ಭವೋ ಮರೀಚಿಶ್ಚ ತಥಾ ಚೈವಾಂಗಿರಾ ಮುನಿಃ ।। 18 ।। ಪುಲಸ್ತ್ಯಃ ಪುಲಹಶ್ಚೈವ ಕ್ರತುಃ ಪರಮಧರ್ಮವಿತ್ । ಅತ್ರಿರ್ವಸಿಷ್ಠೋ ವಹ್ನಿಶ್ಚ ಪಿತರಶ್ಚ ಯಥಾಕ್ರಮಮ್ ।। 19 ।। ಖ್ಯಾತ್ಯಾದ್ಯಾ ಜಗೃಹುಃ ಕನ್ಯಾ ಮುನಯೋ ಮುನಿಸತ್ತಮಾಃ

ಖ್ಯಾತಿ, ಸತಿ, ಸಂಭೂತಿ, ಸ್ಮೃತಿ, ಪ್ರೀತಿ ಮತ್ತು ಕ್ಷಮಾ, ಸಂತತಿ, ಅನಸೂಯಾ, ಊರ್ಜಾ, ಸ್ವಾಹಾ ಮತ್ತು ಸ್ವಧಾ – ಇವರು ಉಳಿದ, ಅವರಿಗೆ ಕಿರಿಯವರಾಗಿದ್ದ ಹನ್ನೊಂದು ಸುಲೋಚನೆಯರು. ಮುನಿಸತ್ತಮರೇ! ಖ್ಯಾತಿ ಮೊದಲಾದ ಈ ಕನ್ಯೆಯರನ್ನು ಕ್ರಮವಾಗಿ ಭೃಗು, ಭವ, ಮರೀಚಿ, ಮುನಿ ಅಂಗಿರ, ಪುಲಸ್ತ್ಯ, ಪುಲಹ, ಪರಮ ಧರ್ಮವಿದು ಕ್ರತು, ಅತ್ರಿ, ವಸಿಷ್ಠ, ವಹ್ನಿ ಮತ್ತು ಪಿತೃಗಳು ಸ್ವೀಕರಿಸಿದರು. 

[1]ಶ್ರದ್ಧಾಯಾ ಆತ್ಮಜಃ ಕಾಮೋ ದರ್ಪೋ ಲಕ್ಷ್ಮೀಸುತಃ ಸ್ಮೃತಃ ।। 20 ।। ಧೃತ್ಯಾಸ್ತು ನಿಯಮಃ ಪುತ್ರಸ್ತುಷ್ಟ್ಯಾಃ ಸಂತೋಷ ಉಚ್ಯತೇ । ಪುಷ್ಟ್ಯಾ ಲಾಭಃ ಸುತಶ್ಚಾಪಿ ಮೇಧಾಪುತ್ರಃ ಶಮಸ್ತಥಾ ।। 21 ।। ಕ್ರಿಯಾಯಾಶ್ಚಾಭವತ್ಪುತ್ರೋ ದಂಡಶ್ಚ ನಯ ಏವ ಚ । ಬುದ್ಧ್ಯಾ ಬೋಧಃ ಸುತಸ್ತದ್ವದಪ್ರಮಾದೋ ವ್ಯಽಪ್ಯಜಾಯತ ।। 22 ।। ಲಜ್ಜಾಯಾ ವಿನಯಃ ಪುತ್ರೋ ವಪುಷೋ ವ್ಯವಸಾಯಕಃ । ಕ್ಷೇಮಃ ಶಾಂತಿಸುತಶ್ಚಾಪಿ ಸುಖಂ ಸಿದ್ಧೇರಜಾಯತ ।। 23 ।। ಯಶಃ ಕೀರ್ತಿಸುತಸ್ತದ್ವದಿತ್ಯೇತೇ ಧರ್ಮಸೂನವಃ । ಕಾಮಸ್ಯ ಹರ್ಷಃ ಪುತ್ರೋಽಭೂದ್ದೇವಾನಂದೋಽಪ್ಯಜಾಯತ ।। 24 ।। ಇತ್ಯೇಷ ವೈ ಸುಖೋದರ್ಕಃ ಸರ್ಗೋ ಧರ್ಮಸ್ಯ ಕೀರ್ತಿತಃ

ಕಾಮನು ಶ್ರದ್ಧೆಯ ಮಗನೆಂದೂ, ದರ್ಪನು ಲಕ್ಷ್ಮೀಸುತನೆಂದೂ ಸ್ಮರಿಸಲ್ಪಟ್ಟಿದ್ದಾರೆ. ನಿಯಮನು ಧೃತಿಯ ಪುತ್ರನೆಂದೂ, ಸಂತೋಷನು ತುಷ್ಟಿಯ ಪುತ್ರನೆಂದೂ, ಲಾಭನು ಪುಷ್ಟಿಯ ಮಗನೆಂದೂ, ಶಮೆಯು ಮೇಧೆಯ ಪುತ್ರನೆಂದೂ ಹೇಳುತ್ತಾರೆ. ಕ್ರಿಯೆಗೆ ದಂಡ ಮತ್ತು ನಯ ಎಂಬ ಇಬ್ಬರು ಪುತ್ರರಾದರು. ಬುದ್ಧಿಯಲ್ಲಿ ಬೋಧನೆ-ಅಪ್ರಮಾದ ಎಂಬ ಪುತ್ರರು ಜನಿಸಿದರು. ಲಜ್ಜೆಗೆ ವಿನಯ, ವಪುವಿಗೆ ವ್ಯವಸಾಯ, ಶಾಂತಿಗೆ ಕ್ಷಮೆ ಮತ್ತು ಸಿದ್ಧಿಗೆ ಸಿದ್ಧ ಎಂಬ ಉತ್ತಮ ಪುತ್ರರು ಕ್ರಮವಾಗಿ ಜನಿಸಿದರು. ಹಾಗೆಯೇ ಯಶನು ಕೀರ್ತಿಯ ಮಗನಾಗಿ ಜನಿಸಿದನು. ಇವರೆಲ್ಲರೂ ಧರ್ಮನ ಮಕ್ಕಳೆಂದು ಹೇಳುತ್ತಾರೆ. ಕಾಮನಿಗೆ ಹರ್ಷ ಮತ್ತು ದೇವಾನಂದ ಎಂಬ ಪುತ್ರರು ಜನಿಸಿದರು. ಇವರೆಲ್ಲರೂ ಸುಖವನ್ನೇ ಪರಿಣಾಮವನ್ನಾಗುಳ್ಳ ಧರ್ಮನ ಸೃಷ್ಟಿಯೆಂದು ಹೇಳುತ್ತಾರೆ.

ಜಜ್ಞೇ ಹಿಂಸಾ ತ್ವಧರ್ಮಾದ್ವೈ ನಿಕೃತಿಂ ಚಾನೃತಂ ಸುತಮ್ ।। 25 ।। ನಿಕೃತೇಸ್ತನಯೋ ಜಜ್ಞೇ ಭಯಂ ನರಕಮೇವ ಚ । ಮಾಯಾ ಚ ವೇದನಾ ಚೈವ ಮಿಥುನಂ ತ್ವಿದಮೇತಯೋಃ ।। 26 ।। ಭಯಾಜ್ಜಜ್ಞೇಽಥ ವೈ ಮಾಯಾ ಮೃತ್ಯುಂ ಭೂತಾಪಹಾರಿಣಮ್ । ವೇದನಾ ಚ ಸುತಂ ಚಾಪಿ ದುಃಖಂ ಜಜ್ಞೇಽಥ ರೌರವಾತ್ ।। 27 ।। ಮೃತ್ಯೋರ್ವ್ಯಾಧಿಜರಾಶೋಕೌ ತೃಷ್ಣಾಕ್ರೋಧಾಶ್ಚ ಜಜ್ಞಿರೇ । ದುಃಖೋತ್ತರಾಃ ಸ್ಮೃತಾ ಹ್ಯೇತೇ ಸರ್ವೇ ಚಾಧರ್ಮಲಕ್ಷಣಾಃ ।। 28 ।। ನೈಷಾಂ ಭಾರ್ಯಾಸ್ತಿ ಪುತ್ರೋ ವಾ ಸರ್ವೇ ತೇ ಹ್ಯೂರ್ಧ್ವರೇತಸಃ । ಇತ್ಯೇಷ ತಾಮಸಃ ಸರ್ಗೋ ಜಜ್ಞೇ ಧರ್ಮನಿಯಾಮಕಃ ।। 29 ।। ಸಂಕ್ಷೇಪೇಣ ಮಯಾ ಪ್ರೋಕ್ತಾ ವಿಸೃಷ್ಟಿರ್ಮುನಿಪುಂಗವಾಃ ।। 30 ।।

ಅಧರ್ಮನಿಂದ ಹಿಂಸೆಯು ನಿಕೃತಿ ಮತ್ತು ಅನೃತ ಎಂಬ ಇಬ್ಬರು ಸುತರನ್ನು ಹುಟ್ಟಿಸಿದಳು. ನಿಕೃತಿಗೆ ಭಯ ಮತ್ತು ನರಕರೆಂಬ ಪುತ್ರರು ಹುಟ್ಟಿದರು ಮತ್ತು ಹಾಗೆಯೇ ಮಾಯಾ ಮತ್ತು ವೇದನಾ ಎಂಬ ಇನ್ನೊಂದು ಅವಳಿ ಮಕ್ಕಳು ಹುಟ್ಟಿದರು. ಮಾಯೆಯು ಭಯನಿಂದ ಸರ್ವಭೂತಗಳನ್ನು ಕೊನೆಗಾಣಿಸುವ ಮೃತ್ಯುವನ್ನು ಪ್ರಸವಿಸಿದಳು. ಹಾಗೆಯೇ ವೇದನೆಯು ರೌರವ ನರಕನಿಂದ ದುಃಖ ಎಂಬ ಪುತ್ರರನ್ನು ಪಡೆದಳು. ಮೃತ್ಯುವಿಗೆ ವ್ಯಾಧಿ, ಜರಾ, ಶೋಕ, ತೃಷ್ಣಾ, ಮತ್ತು ಕ್ರೋಧರು ಹುಟ್ಟಿದರು. ಇವರೆಲ್ಲರು ದುಃಖವನ್ನೇ ಪರಿಣಾಮವನ್ನಾಗುಳ್ಳ ಅಧರ್ಮಲಕ್ಷಣರೆಂದು ಸ್ಮರಿಸಲ್ಪಟ್ಟಿದ್ದಾರೆ. ಊರ್ಧ್ವರೇತಸರಾದ ಇವರೆಲ್ಲರಿಗೂ ಭಾರ್ಯೆಯರಾಗಲೀ ಪುತ್ರರಾಗಲೀ ಇರಲಿಲ್ಲ. ಹೀಗೆ ಧರ್ಮನಿಯಾಮಕವಾದ ತಾಮಸ ಸೃಷ್ಟಿಯು ಉಂಟಾಯಿತು. ಮುನಿಪುಂಗವರೇ! ಇದೋ ಸಂಕ್ಷೇಪವಾಗಿ ನಾನು ವಿಸೃಷ್ಟಿಯ ಕುರಿತು ಹೇಳಿದ್ದೇನೆ.””

ಇತಿ ಶ್ರೀಕೂರ್ಮಪುರಾಣೇ ಅಷ್ಟಮೋಽಧ್ಯಾಯಃ ।।

ಇದು ಶ್ರೀಕೂರ್ಮಪುರಾಣದಲ್ಲಿ ಎಂಟನೇ ಅಧ್ಯಾಯವು.

[1] ಮುಂದಿನ 10 ಶ್ಲೋಕಗಳಲ್ಲಿ ಧರ್ಮ ಮತ್ತು ಅಧರ್ಮ ಎಂಬ ಎರಡೂ ಶಕ್ತಿಗಳಿಂದ ಏನೇನು ಗುಣಗಳು ಅಥವಾ ಪರಿಣಾಮಗಳು ಲೋಕದಲ್ಲಿ ಉಂಟಾಗುತ್ತವೆ ಎನ್ನುವುದನ್ನು ಹೇಳಿದೆ. ದರ್ಮದಿಂದ ಶ್ರದ್ಧೆ, ನಿಯಮ, ಸಂತೋಷ, ಜ್ಞಾನ, ಶಾಂತಿ, ವಿನಯ, ಯಶಸ್ಸು, ಕೀರ್ತಿ, ಆನಂದ ಇತ್ಯಾದಿಗಳು ಹುಟ್ಟುತ್ತವೆ. ಇವೆಲ್ಲವೂ ಮನುಷ್ಯನ ಜೀವನದಲ್ಲಿ ಸುಖ, ಸಮೃದ್ಧಿ, ಶಾಂತಿಗಳನ್ನು ತರಬಲ್ಲ ಶುದ್ಧ ಗುಣಗಳು. ಧರ್ಮವನ್ನು ಮನಸ್ಸಿನಲ್ಲಿ ಬೆಳೆಸಿದರೆ ಜೀವನದಲ್ಲಿ ಸುಖ, ಶಾಂತಿಗಳು ನಿಜವಾಗಿ ಸಂತತಿಯಂತೆ ಬೆಳೆಯುತ್ತವೆ ಎನ್ನುವುದು ಮೊದಲ ಐದು ಶ್ಲೋಕಗಳ ತಾತ್ಪರ್ಯ. ಅಧರ್ಮವು ದುಃಖದ ಮೂಲವು. ಅದರಿಂದ ದುಶ್ಶೀಲ-ದುರುದ್ದೇಶಗಳು ಹುಟ್ಟುತ್ತವೆ. ಅಧರ್ಮದಿಂದ  ಹಿಂಸೆ, ಕಪಟ, ಸುಳ್ಳು, ಭಯ, ನರಕಯಾತನೆ, ತೃಷ್ಣೆ, ಮೃತ್ಯು, ರೋಗ, ವೃದ್ಧಾಪ್ಯ, ಶೋಕ, ಕ್ರೋಧ, ದುಃಖ ಇತ್ಯಾದಿಗಳು ಹುಟ್ಟುತ್ತವೆ. ಇವೆಲ್ಲವೂ ಜೀವನದಲ್ಲಿ ದುಃಖ, ಅಶಾಂತಿ ಮತ್ತು ಅಸ್ಥಿರತೆಗಳನ್ನು ತರಬಲ್ಲ ದುಷ್ಟತತ್ತ್ವಗಳು. ತಾತ್ಪರ್ಯ: ಅಧರ್ಮವನ್ನು ಅನುಸರಿಸಿದರೆ ಅವು ಕ್ರಮೇಣ ಮತ್ತೊಂದು ದುಃಖದ ಕಾರಣವನ್ನು ಹುಟ್ಟಿಸುತ್ತಾ ಹೋಗುತ್ತವೆ. ದುಃಖ ತನ್ನ ಮೂಲವನ್ನು ಇದೇ ಸರಪಳಿಯ ಮೂಲಕ ಪಡೆಯುತ್ತದೆ. ಧರ್ಮ=ಸುಖದ ಚಕ್ರ; ಅಧರ್ಮ=ದುಃಖದ ಚಕ್ರ.

Leave a Reply

Your email address will not be published. Required fields are marked *