ಶ್ರೀ ಕೂರ್ಮಪುರಾಣ: ಅಧ್ಯಾಯ 7 - ಸೃಷ್ಟಿವರ್ಣನಮ್

ಕೂರ್ಮ ಉವಾಚ । ಸೃಷ್ಟಿಂ ಚಿಂತಯತಸ್ತಸ್ಯ ಕಲ್ಪಾದಿಷು ಯಥಾ ಪುರಾ । ಅಬುದ್ಧಿಪೂರ್ವಕಃ ಸರ್ಗಃ ಪ್ರಾದುರ್ಭೂತಸ್ತಮೋಮಯಃ ।। 1 ।। ತಮೋ ಮೋಹೋ ಮಹಾಮೋಹಸ್ತಾಮಿಸ್ತ್ರಶ್ಚಾಂಧಸಂಜ್ಞಿತಃ । ಅವಿದ್ಯಾ ಪಂಚಮೀ ತೇಷಾಂ ಪ್ರಾದುರ್ಭೂತಾ ಮಹಾತ್ಮನಃ ।। 2 ।। ಪಂಚಧಾವಸ್ಥಿತಃ ಸರ್ಗೋ ಧ್ಯಾಯತಃ ಸೋಽಭಿಮಾನಿನಃ । ಸಂವೃತಸ್ತಮಸಾ ಚೈವ ಬೀಜಕುಂಭವದಾವೃತಃ ।। 3 ।। ಬರ್ಹಿರಂತಶ್ಚಾಪ್ರಕಾಶಃ ಸ್ತಬ್ಧೋ ನಿಃಸಂಗ ಏವ ಚ । ಮುಕ್ಯಾ ನಗಾ ಇತಿ ಪ್ರೋಕ್ತಾ ಮುಖ್ಯಸರ್ಗಸ್ತು ಸ ಸ್ಮೃತಃ ।। 4 ।। ತಂ ದೃಷ್ಟ್ವಾಽಸಾಧಕಂ ಸರ್ಗಮಮನ್ಯದಪರಂ ಪ್ರಭುಃ । ತಸ್ಯಾಭಿಧ್ಯಾಯತಃ ಸರ್ಗಂ ತಿರ್ಯಕ್ಸ್ರೋತೋಽಭ್ಯವರ್ತತ ।। 5 ।। ಯಸ್ಮಾತ್ತಿರ್ಯಕ್ ಪ್ರವೃತ್ತಃ ಸ ತಿರ್ಯಕ್ಸ್ರೋತಸ್ತತಃ ಸ್ಮೃತಃ । ಪಶ್ವಾದಯಸ್ತೇ ವಿಖ್ಯಾತಾ ಉತ್ಪಥಗ್ರಾಹಿಣೋ ದ್ವಿಜಾಃ ।। 6 ।।

ಕೂರ್ಮನು ಹೇಳಿದನು: “ಪೂರ್ವಕಲ್ಪದಲ್ಲಿ ನಡೆದ ಸೃಷ್ಟಿಕ್ರಮವನ್ನು ಪರಮಾತ್ಮನು ಚಿಂತಿಸುತ್ತಿರುವಾಗ ಬುದ್ಧಿಪೂರ್ವಕವಲ್ಲದ ತಮೋಮಯವಾದ ಸೃಷ್ಟಿಯು ಪ್ರಾದುರ್ಭವಿಸಿತು. ಆಗ ಆ ಮಹಾತ್ಮನಿಂದ ತಮಸ್ಸು, ಮೋಹ, ಮಹಾಮೋಹ, ತಾಮಿಸ್ರ ಮತ್ತು ಅಂಧತಾಮಿಸ್ರವೆಂಬ ಐದು ಗ್ರಂಥಿಗಳಿಂದ ಕೂಡಿದ ಅವಿದ್ಯೆಯು[1] ಪ್ರಾದುರ್ಭವಿಸಿತು. ಸೃಷ್ಟಿಯ ಅಭಿಮಾನದಿಂದ ಧ್ಯಾನಾಸಕ್ತನಾಗಿದ್ದ ಅವನ ಸೃಷ್ಟಿಯು ಐದು ಬಗೆಯಾಗಿ ನಿಂತಿತು, ಮತ್ತು ತಮಸ್ಸಿನಿಂದ ಆವರಿಸಲ್ಪಟ್ಟು ಕುಂಭದಲ್ಲಿ ಅಡಗಿದ ಬೀಜದಂತೆ ಅಪ್ರಕಾಶವಾಯಿತು. ಕುಂಭಬೀಜದಂತೆ ಬಹಿರ್ಭಾಗ-ಅಂತರ್ಭಾಗಗಳಲ್ಲಿ ಅಪ್ರಕಾಶಪೂರ್ಣವೂ ಸ್ತಬ್ಧವೂ ನಿಃಸಂಗವೂ ಆಯಿತು. ಆಗ ಅವು ಮುಖ್ಯವಾದ ಪರ್ವತಗಳಾದವು. ಅದು ಮುಖ್ಯಸೃಷ್ಟಿ ಎಂದು ಸ್ಮರಿಸಲ್ಪಟ್ಟಿದೆ. ಆ ಸೃಷ್ಟಿಯು ಅಸಂಪೂರ್ಣವೆಂದು ಕಂಡು ಪ್ರಭುವು ಮತ್ತೊಂದು ಸೃಷ್ಟಿಯನ್ನು ಚಿಂತಿಸಿದನು. ಹಾಗೆ ಸೃಷ್ಟಿಯ ಕುರಿತು ಧ್ಯಾನಿಸುತ್ತಿದ್ದ ಪರಮಾತ್ಮನಿಂದ ತಿರ್ಯಕ್ ಸ್ರೋತೋರೂಪದ ಸೃಷ್ಟಿಯು ಉಂಟಾಯಿತು. ದ್ವಿಜರೇ! ಆ ಸೃಷ್ಟಿಯು ತಿರ್ಯಕ್ ಪ್ರವೃತ್ತಿಯುಳ್ಳದ್ದರಿಂದ ಅದು ತಿರ್ಯಕ್ಸ್ರೋತವೆಂದು ಸ್ಮರಿಸಲ್ಪಟ್ಟಿದೆ. ತಪ್ಪು ದಾರಿಯನ್ನು ಹಿಡಿಯುವ ಪಶ್ವಾದಿಗಳು ಈ ಸೃಷ್ಟಿಯಲ್ಲಿ ವಿಖ್ಯಾತವಾಗಿವೆ.

ತಮಪ್ಯಸಾಧಕಂ ಜ್ಞಾತ್ವಾ ಸರ್ಗಮನ್ಯಂ ಸಸರ್ಜ ಹ । ಊರ್ಧ್ವಸ್ರೋತ ಇತಿ ಪ್ರೋಕ್ತೋ ದೇವಸರ್ಗಸ್ತು ಸಾತ್ತ್ವಿಕಃ ।। 7 ।। ತೇ ಸುಖಪ್ರತಿಬಹುಲಾ ಬಹಿರಂತಸ್ತ್ವನಾವೃತಾಃ । ಪ್ರಕಾಶಾ ಬಹಿರಂತಶ್ಚ ಸ್ವಭಾವಾದ್ದೇವಸಂಜ್ಞಕಾಃ ।। 8 ।। ತತೋಽಬಿಧ್ಯಾಯತಸ್ತಸ್ಯ ಸತ್ಯಾಭಿಧ್ಯಾಯಿನಸ್ತದಾ । ಪ್ರಾದುರಾಸೀತ್ತದಾವ್ಯಕ್ತಾದರ್ವಾಕ್ಸ್ರೋತಸ್ತು ಸಾಧಕಃ ।। 9 ।। ತೇ ಚ ಪ್ರಕಾಶಬಹುಲಾಸ್ತಮೋದ್ರಿಕ್ತಾ ರಜೋಽಧಿಕಾಃ । ದುಃಖೋತ್ಕಟಾಃ ಸತ್ತ್ವಯುತಾ ಮನುಷ್ಯಾಃ ಪರಿಕೀರ್ತಿತಾ ।। 10 ।। ತಂ ದೃಷ್ಟ್ವಾ ಚಾಪರಂ ಸರ್ಗಮಮನ್ಯದ್ಭಗವಾನಜಃ । ತಸ್ಯಾಭಿಧ್ಯಾಯತಃ ಸರ್ಗಂ ಸರ್ಗೋ ಭೂತಾದಿಕೋಽಭವತ್ ।। 11 ।। ತೇ ಪರಿಗ್ರಹಿಣಃ ಸರ್ವೇ ಸಂವಿಭಾಗರತಾಃ ಪುನಃ । ಖಾದಿನಾಶ್ಚಾಪ್ಯಶಾಲಾಶ್ಚ ಭೂತಾದ್ಯಾಃ ಪರಿಕೀರ್ತಿತಾಃ ।। 12 ।।

ಅದೂ ಕೂಡ ಅಸಾಧಕವೆಂದು ತಿಳಿದು ಅವನು ಇನ್ನೊಂದು ಸೃಷ್ಟಿಯನ್ನು ಸೃಷ್ಟಿಸಿದನು. ಊರ್ಧ್ವಸ್ರೋತ, ಮತ್ತು ಸಾತ್ತ್ವಿಕವಾದ ದೇವಸೃಷ್ಟಿ ಎಂದು ಅದನ್ನು ಕರೆಯುತ್ತಾರೆ. ದೇವ ಎಂಬ ಸಂಕೇತವನ್ನು ಹೊಂದಿದ ಅವರು ಒಳಗೂ-ಹೊರಗೂ ಆವರಣಗಳಿಲ್ಲದೇ ಒಳಗೂ-ಹೊರಗೂ ಪ್ರಕಾಶಮಯರು. ಸತ್ಯಸಂಕಲ್ಪನಾದ ಅವನು ಸೃಷ್ಟಿಧ್ಯಾನಮಾಡಲು ಮತ್ತೊಂದು ಸೃಷ್ಟಿಯ ಆವಿರ್ಭಾವವಾಯಿತು. ಅವ್ಯಕ್ತತತ್ತ್ವದ ಮೂಲಕ ಆವಿರ್ಭವಿಸಿದ ಅದು ಸಾಧಕರ ಅರ್ವಾಕ್ಸ್ರೋತ ಸೃಷ್ಟಿಯಾಯಿತು. ಅವರು ಬಹುಪ್ರಕಾಶವಿರುವ, ತಮೋ ಗಣವು ಉದ್ರಿಕ್ತವಾದ, ಅಧಿಕ ರಜೋಗುಣದಿಂದ ಕೂಡಿದ, ಉತ್ಕಟ ದುಃಖ ಮತ್ತು ಸತ್ತ್ವಗುಣಸಂಪರ್ಕವಿರುವ ಮನುಷ್ಯರೆಂದು ಕೀರ್ತಿಸಲ್ಪಟ್ಟಿದೆ. ಅದನ್ನು ನೋಡಿ ಭಗವಾನ್ ಅಜನು ಬೇರೆ ಇನ್ನೊಂದು ಸೃಷ್ಟಿಯನ್ನು ಧ್ಯಾನಿಸಿದನು. ಆಗ ಆ ಸೃಷ್ಟಿಯಿಂದ ಭೂತಾದಿ ಸೃಷ್ಟಿಯು ಉಂಟಾಯಿತು. ಆ ಭೂತಾದಿಗಳು ಅನೇಕ ಪರಿಗ್ರಹವುಳ್ಳವರೂ, ದ್ರವ್ಯ ಸಂವಿಭಾಗದಲ್ಲಿ ಆಸಕ್ತರೂ, ಆಹಾರವನ್ನು ಭುಂಜಿಸುವವರೂ ಮತ್ತು ವಾಸಗೃಹವಿಲ್ಲದವರೂ ಎಂದು ಕೀರ್ತಿಸಲ್ಪಟ್ಟಿವೆ.

ಇತ್ಯೇತೇ ಪಂಚ ಕಥಿತಾಃ ಸರ್ಗಾ ವೈ ದ್ವಿಜಪುಂಗವಾಃ । ಪ್ರಥಮೋ ಮಹತಃ ಸರ್ಗೋ ವಿಜ್ಞೇಯೋ ಬ್ರಹ್ಮಣಸ್ತು ಸಃ ।। 13 ।। ತನ್ಮಾತ್ರಾಣಾಂ ದ್ವಿತೀಯಸ್ತು ಭೂತಸರ್ಗೋ ಹಿ ಸಂಸ್ಮೃತಃ । ವೈಕಾರಿಕಸ್ತೃತೀಯಸ್ತು ಸರ್ಗ ಐಂದ್ರಿಯಕಃ ಸ್ಮೃತಃ ।। 14 ।। ಇತ್ಯೇಷ ಪ್ರಾಕೃತಃ ಸರ್ಗಃ ಸಂಭೂತೋಽಬುದ್ಧಿಪೂರ್ವಕಃ । ಮುಖ್ಯಸರ್ಗಶ್ಚತುರ್ಥಸ್ತು ಮುಖ್ಯಾ ವೈ ಸ್ಥಾವರಾಃ ಸ್ಮೃತಾಃ ।। 15 ।। ತಿರ್ಯಕ್ಸ್ರೋತಸ್ತು ಯಃ ಪ್ರೋಕ್ತಸ್ತಿರ್ಯಗ್ಯೋನ್ಯಃ ಸಮಾಶ್ರಿತಃ । ತಥೋರ್ಧ್ವಸ್ರೋತಸಾಂ ಷಷ್ಠೋ ದೇವಸರ್ಗಸ್ತು ಸ ಸ್ಮೃತಃ ।। 16 ।। ತತೋಽರ್ವಾಕ್ಸ್ರೋತಸಾಂ ಸರ್ಗಃ ಸಪ್ತಮಃ ಸ ತು ಮಾನುಷಃ । ಅಷ್ಟಮೋ ಭೌತಿಕಃ ಸರ್ಗೋ ಭೂತಾದೀನಾಂ ಪ್ರಕೀರ್ತಿತಃ ।। 17 ।। ನವಮಶ್ಚೈವ ಕೌಮಾರಃ ಪ್ರಾಕೃತಾ ವೈಕೃತಾಸ್ತ್ವಿಮೇ । ಪ್ರಾಕೃತಾಸ್ತು ತ್ರಯಃ ಪೂರ್ವೇ ಸರ್ಗಾಸ್ತೇಽಬುದ್ಧಿಪೂರ್ವಕಾಃ ।। 18 ।। ಬುದ್ಧಿಪೂರ್ವಂ ಪ್ರವರ್ತಂತೇ ಮುಖ್ಯಾದ್ಯಾ ಮುನಿಪುಂಗವಾಃ

ದ್ವಿಜಪುಂಗವರೇ! ಹೀಗೆ ಈ ಐದು ಸೃಷ್ಟಿಗಳನ್ನು ಹೇಳಿದ್ದಾರೆ. ಮಹತ್ತತ್ತ್ವದ ಸೃಷ್ಟಿಯು ಬ್ರಹ್ಮನಿಂದಾದ ಮೊದಲನೇ ಸೃಷ್ಟಿಯೆಂದು ತಿಳಿಯಬೇಕು. ಭೂತತನ್ಮಾತ್ರೆಗಳ ಸೃಷ್ಟಿಯು ಎರಡನೆಯದು. ಅದು ಭೂತಸೃಷ್ಟಿಯೆಂದು ಸ್ಮರಿಸಲ್ಪಟ್ಟಿದೆ. ಇಂದ್ರಿಯಸಂಬಂಧವಾದ ಸೃಷ್ಟಿಯು ಮೂರನೆಯದು. ಅದನ್ನು ವೈಕಾರಿಕ ಎನ್ನುತ್ತಾರೆ. ಇವು ಅಬುದ್ಧಿಪೂರ್ವಕವಾದ ಪ್ರಾಕೃತ ಸೃಷ್ಟಿಗಳು. ಮುಖ್ಯಸೃಷ್ಟಿಯು ನಾಲ್ಕನೆಯ ಸೃಷ್ಟಿಯು. ಇಲ್ಲಿ ಸ್ಥಾವರಗಳು ಮುಖ್ಯ ಎಂದು ಸ್ಮರಿಸಲ್ಪಟ್ಟಿವೆ. ಹಿಂದೆ ಹೇಳಿದ ತಿರ್ಯಗ್ಯೋನಿಗಳನ್ನೊಳಗೊಂಡಿರುವ ತಿರ್ಯಕ್ಸ್ರೋತ ಸೃಷ್ಟಿಯು ಐದನೆಯದು. ಹಾಗೆಯೇ ದೇವಸೃಷ್ಟಿ ಎಂದು ಸ್ಮರಿಸಲ್ಪಟ್ಟಿರುವ ಊರ್ಧ್ವಸ್ರೋತ ಸೃಷ್ಟಿಯು ಆರನೆಯದು. ಮನುಷ್ಯರ ಸೃಷ್ಟಿಯಾದ ಅರ್ವಾಕ್ಸ್ರೋತ ಸೃಷ್ಟಿಯು ಏಳನೆಯದು. ಭೂತಾದಿಗಳ ಅಷ್ಟಮ ಸೃಷ್ಟಿಯು ಭೌತಿಕ ಎಂದು ಸ್ಮರಿಸಲ್ಪಟ್ಟಿದೆ. ಒಂಬತ್ತನೆಯ ಕೌಮಾರ ಸೃಷ್ಟಿಯು ಪ್ರಾಕೃತ-ವೈಕೃತ ಎರಡನ್ನೂ ಒಳಗೊಂಡಿವೆ. ಇವುಗಳಲ್ಲಿ ಮೊದಲ ಮೂರು ಸೃಷ್ಟಿಗಳು ಅಬುದ್ಧಿಪೂರ್ವಕವಾದ ಪ್ರಾಕೃತ ಸೃಷ್ಟಿಗಳು. ಮುನಿಪುಂಗವರೇ! ಮುಖ್ಯ ಮೊದಲಾದ ಮುಂದಿನ ಸೃಷ್ಟಿಗಳು ಬುದ್ಧಿಪೂರ್ವಕವಾಗಿ ಪ್ರವರ್ತಿಸುತ್ತವೆ.

ಅಗ್ರೇ ಸಸರ್ಜ ವೈ ಬ್ರಹ್ಮಾ ಮಾನಸಾನಾತ್ಮನಃ ಸಮಾನ್ ।। 19 ।। ಸನಕಂ ಸನಾತನಂ ಚೈವ ತಥೈವ ಚ ಸನಂದನಮ್ । ಕ್ರತುಂ ಸನತ್ಕುಮಾರಂ ಚ ಪೂರ್ವಮೇವ ಪ್ರಜಾಪತಿಃ ।। 20 ।। ಪಂಚೈತೇ ಯೋಗಿನೋ ವಿಪ್ರಾಃ ಪರಂ ವೈರಾಗ್ಯಮಾಶ್ರಿತಾಃ । ಈಶ್ವರಾಸಕ್ತಮನಸೋ ನ ಸೃಷ್ಟೌ ದಧಿರೇ ಮತಿಮ್ ।। 21 ।। ತೇಷ್ವೇವಂ ನಿರಪೇಕ್ಷೇಷು ಲೋಕಸೃಷ್ಟೌ ಪ್ರಜಾಪತಿಃ । ಮುಮೋಹ ಮಾಯಯಾ ಸದ್ಯೋ ಮಾಯಿನಃ ಪರಮೇಷ್ಠಿನಃ ।। 22 ।। ಸಂಬೋಧಯಾಮಾಸ ಚ ತಂ ಜಗನ್ಮಾಯೋ ಮಹಾಮುನಿಃ । ನಾರಾಯಣೋ ಮಹಾಯೋಗೀ ಯೋಗಿಚಿತ್ತಾನುರಂಜನಃ ।। 23 ।। ಬೋಧಿತಸ್ತೇನ ವಿಶ್ವಾತ್ಮಾ ತತಾಪ ಪರಮಂ ತಪಃ । ಸ ತಪ್ಯಮಾನೋ ಭಗವಾನ್ನ ಕಿಂಚಿತ್ಪ್ರತ್ಯಪದ್ಯತ ।। 24 ।। ತತೋ ದೀರ್ಘೇಣ ಕಾಲೇನ ದುಃಖಾತ್ಕ್ರೋಧೋಽಭ್ಯಜಾಯತ । ಕ್ರೋಧಾವಿಷ್ಟಸ್ಯ ನೇತ್ರಾಭ್ಯಾಂ ಪ್ರಾಪತನ್ನಶ್ರು ಬಿಂದವಃ ।। 25 ।। ಭ್ರುಕುಟೀಕುಟಿಲಾತ್ತಸ್ಯ ಲಲಾಟಾತ್ಪರಮೇಷ್ಠಿನಃ । ಸಮುತ್ಪನ್ನೋ ಮಹಾದೇವಃ ಶರಣ್ಯೋ ನೀಲಲೋಹಿತಃ ।। 26 ।।

ಪ್ರಜಾಪತಿ ಬ್ರಹ್ಮನು ಪೂರ್ವದಲ್ಲಿ ಮೊದಲು ತನ್ನ ಸಮಾನರಾದ ಮಾನಸಪುತ್ರರನ್ನು ಸೃಷ್ಟಿಸಿದನು: ಸನಕ, ಸನಾತನ, ಸನಂದನ, ಕ್ರತು ಮತ್ತು ಸನತ್ಕುಮಾರ. ವಿಪ್ರರೇ! ಈ ಐವರು ಯೋಗಿಗಳು ಪರಮ ವೈರಾಗ್ಯವನ್ನು ಆಶ್ರಯಿಸಿ, ಈಶ್ವರಾಸಕ್ತ ಮನಸ್ಕರಾಗಿ ಸೃಷ್ಟಿಯನ್ನು ಮುಂದುವರಿಸುವ ಮನಸ್ಸು ಮಾಡಲಿಲ್ಲ. ಹೀಗೆ ಅವರು ಲೋಕಸೃಷ್ಟಿಯಲ್ಲಿ ನಿರಪೇಕ್ಷರಾಗಿರಲು ಪ್ರಜಾಪತಿಯು ಪರಮೇಷ್ಠಿಯ ಮಾಯೆಯಿಂದ ಕೂಡಲೇ ಮೋಹಿತನಾದನು. ಜಗನ್ಮಾಯನೂ, ಮಹಾಮುನಿಯೂ, ಮಹಾಯೋಗಿಯೂ, ಯೋಗಿಗಳ ಚಿತ್ತಗಳನ್ನು ರಂಜಿಸುವವನೂ ಆದ ನಾರಾಯಣನು ಅವನನ್ನು ಎಚ್ಚರಿಸಿದನು. ನಾರಾಯಣನಿಂದ ಎಚ್ಚರಿಸಲ್ಪಟ್ಟ ವಿಶ್ವಾತ್ಮನು ಪರಮ ತಪಸ್ಸನ್ನು ತಪಿಸಿದನು. ತಪಿಸುತ್ತಿದ್ದ ಆ ಭಗವಂತನಿಗೆ ಏನೂ ಹೊಳೆಯಲಿಲ್ಲ. ದೀರ್ಘ ಕಾಲದ ನಂತರ ಅವನ ದುಃಖದಿಂದ ಕ್ರೋಧವುಂಟಾಯಿತು. ಕ್ರೋಧಾವಿಷ್ಟನಾಗಿದ್ದ ಅವನ ಕಣ್ಣುಗಳಿಂದ ಕಣ್ಣೀರಿನ ಹನಿಗಳು ಉದುರಿದವು. ಹುಬ್ಬುಗಂಟಿಕ್ಕಿದ್ದ ಆ ಪರಮೇಷ್ಠಿಯ ಹಣೆಯಿಂದ ಶರಣ್ಯ, ನೀಲಲೋಹಿತ, ಮಹಾದೇವನು ಉತ್ಪನ್ನನಾದನು.

ಸ ಏವ ಭಗವಾನೀಶಸ್ತೇಜೋರಾಶಿಃ ಸನಾತನಃ । ಯಂ ಪ್ರಪಶ್ಯಂತಿ ವಿದ್ವಾಂಸಃ ಸ್ವಾತ್ಮಸ್ಥಂ ಪರಮೇಶ್ವರಮ್ ।। 27 ।। ಓಂಕಾರಂ ಸಮನುಸ್ಮೃತ್ಯ ಪ್ರಣಮ್ಯ ಚ ಕೃತಾಂಜಲಿಃ । ತಮಾಹ ಭಗವಾನ್ ಬ್ರಹ್ಮಾ ಸೃಜೇಮಾ ವಿವಿಧಾಃ ಪ್ರಜಾಃ ।। 28 ।। ನಿಶಮ್ಯ ಭಗವದ್ವಾಕ್ಯಂ ಶಂಕರೋ ಧರ್ಮವಾಹನಃ । ಆತ್ಮನಾ ಸದೃಶಾನ್ ರುದ್ರಾನ್ ಸಸರ್ಜ ಮನಸಾ ಶಿವಃ । ಕಪರ್ದಿನೋ ನಿರಾತಂಕಾಂಸ್ತ್ರಿನೇತ್ರಾನ್ನೀಲಲೋಹಿತಾನ್ ।। 29 ।। ತಂ ಪ್ರಾಹ ಭಗವಾನ್ ಬ್ರಹ್ಮಾ ಜನ್ಮಮೃತ್ಯುಯುತಾಃ ಪ್ರಜಾಃ । ಸೃಜೇತಿ ಸೋಽಬ್ರವೀದೀಶೋ ನಾಹಂ ಮೃತ್ಯುಜರಾನ್ವಿತಾಃ ।। 30 ।। ಪ್ರಜಾಃ ಸ್ರಕ್ಷ್ಯೇ ಜಗನ್ನಾಥ ಸೃಜ ತ್ವಮಶುಭಾಃ ಪ್ರಜಾಃ । ನಿವಾರ್ಯ ಸ ತದಾ ರುದ್ರಂ ಸಸರ್ಜ ಕಮಲೋದ್ಭವಃ ।। 31 ।।

ತೇಜೋರಾಶಿಯೂ, ಸನಾತನನೂ ಆದ ಆ ಭಗವಾನ್ ಈಶನನ್ನೇ ವಿದ್ವಾಂಸರು ತಮ್ಮ ಆತ್ಮನಲ್ಲಿ ನೆಲೆಸಿರುವ ಪರಮೇಶ್ವರನೆಂದು ನೋಡುತ್ತಾರೆ. ಆಗ ಭಗವಾನ್ ಬ್ರಹ್ಮನು ಓಂಕಾರವನ್ನು ಸ್ಮರಿಸಿ, ಕೈಮುಗಿದು ನಮಸ್ಕರಿಸಿ “ವಿವಿಧ ಪ್ರಜೆಗಳನ್ನು ಸೃಷ್ಟಿಸು!” ಎಂದನು. ಭಗವಂತನ ಆ ಮಾತನ್ನು ಕೇಳಿ ಧರ್ಮವಾಹನ ಶಿವ ಶಂಕರನು ತನ್ನ ಸದೃಶರಾದ, ಜಟಾಜೂಟರೂ, ನಿರಾತಂಕರೂ ಮತ್ತು ತ್ರಿನೇತ್ರರೂ ಆದ ನೀಲಲೋಹಿತ ರುದ್ರರನ್ನು ಮನಸ್ಸಿನಿಂದಲೇ ಸೃಷ್ಟಿಸಿದನು. ಭಗವಾನ್ ಬ್ರಹ್ಮನು ಅವನಿಗೆ ಹೇಳಿದನು: “ಜನ್ಮ-ಮೃತ್ಯುಯುತರಾದ ಪ್ರಜೆಗಳನ್ನು ಸೃಷ್ಟಿಸು!” ಅದಕ್ಕೆ ಈಶನು ಹೇಳಿದನು: “ನಾನು ಮೃತ್ಯು-ಜರಾನ್ವಿತರಾದ ಪ್ರಜೆಗಳನ್ನು ಸೃಷ್ಟಿಸುವುದಿಲ್ಲ. ಜಗನ್ನಾಥ! ನೀನೇ ಅಂತಹ ಅಶುಭ ಪ್ರಜೆಗಳನ್ನು ಸೃಷ್ಟಿಸು!” ಆಗ ಕಮಲೋದ್ಭವ ಬ್ರಹ್ಮನು ರುದ್ರನ ಸೃಷ್ಟಿಯನ್ನು ನಿಲ್ಲಿಸಿ ತಾನೇ ಸೃಷ್ಟಿಮಾಡತೊಡಗಿದನು.

ಸ್ಥಾನಾಭಿಮಾನಿನಃ ಸರ್ವಾನ್ ಗದತಸ್ತಾನ್ನಿಬೋಧತ । ಅಪೋಽಗ್ನಿರಂತರಿಕ್ಷಂ ಚ ದ್ಯೌರ್ವಾಯುಃ ಪೃಥಿವೀ ತಥಾ ।। 32 ।। ನದ್ಯಃ ಸಮುದ್ರಾಃ ಶೈಲಾಶ್ಚ ವೃಕ್ಷಾ ವೀರುಧ ಏವ ಚ । ಲವಾಃ ಕಾಷ್ಠಾಃ ಕಲಾಶ್ಚೈವ ಮುಹೂರ್ತಾ ದಿವಸಾಃ ಕ್ಷಪಾಃ ।। 33 ।। ಅರ್ಧಮಾಸಾಶ್ಚ ಮಾಸಾಶ್ಚ ಅಯನಾಬ್ದಯುಗಾದಯಃ । ಸ್ಥಾನಾಬಿಮಾನಿನಃ ಸೃಷ್ಟ್ವಾ ಸಾಧಕಾನಸೃಜತ್ಪುನಃ ।। 34 ।। ಮರೀಚಿಭೃಗ್ವಂಗಿರಸಃ ಪುಲಸ್ತ್ಯಂ ಪುಲಹಂ ಕ್ರತುಮ್ । ದಕ್ಷಮತ್ರಿಂ ವಸಿಷ್ಠಂ ಚ ಧರ್ಮಂ ಸಂಕಲ್ಪಮೇವ ಚ ।। 35 ।। ಪ್ರಾಣಾದ್ಬ್ರಹ್ಮಾಽಸೃಜದ್ದಕ್ಷಂ ಚಕ್ಷುರ್ಭ್ಯಾಂ ಚ ಮರೀಚಿನಮ್ । ಶಿರಸೋಽಂಗಿರಸಂ ದೇವೋ ಹೃದಯಾದ್ಭೃಗುಮೇವ ಚ ।। 36 ।। ನೇತ್ರಾಭ್ಯಾಮತ್ರಿನಾಮಾನಂ ಧರ್ಮಂ ಚ ವ್ಯವಸಾಯತಃ । ಸಂಕಲ್ಪಂ ಚೈವ ಸಂಕಲ್ಪಾತ್ಸರ್ವಲೋಕಪಿತಾಮಹಃ ।। 37 ।। ಪುಲಸ್ತ್ಯಂ ಚ ತಥೋದಾನಾದ್ವ್ಯಾನಾಚ್ಚ ಪುಲಹಂ ಮುನಿಮ್ । ಅಪಾನಾತ್ಕ್ರತುಮವ್ಯಗ್ರಂ ಸಮಾನಾಚ್ಚ ವಸಿಷ್ಠಕಮ್ ।। 38 ।। ಇತ್ಯೇತೇ ಬ್ರಹ್ಮಣಾ ಸೃಷ್ಟಾಃ ಸಾಧಕಾ ಗೃಹಮೇಧಿನಃ । ಆಸ್ಥಾಯ ಮಾನವಂ ರೂಪಂ ಧರ್ಮಸ್ತೈಃ ಸಂಪ್ರವರ್ತಿತಃ ।। 39 ।।

ಬ್ರಹ್ಮನು ಸ್ಥಾನಾಭಿಮಾನಿಗಳಾದ ಎಲ್ಲರನ್ನೂ ಸೃಷ್ಟಿಸಿದನು. ಅದರ ಕುರಿತು ಹೇಳುತ್ತೇನೆ. ಕೇಳಿ. ಜಲ, ಅಗ್ನಿ, ಅಂತರಿಕ್ಷ, ದ್ಯುಲೋಕ, ವಾಯು ಮತ್ತು ಪೃಥ್ವಿಯ ದೇವತೆಗಳು ಆಯಾ ಸ್ಥಾನಾಭಿಮಾನಿಗಳಲ್ಲಿ ಸೇರಿದ್ದಾರೆ. ನದಿಗಳು, ಸಮುದ್ರಗಳು, ಪರ್ವತಗಳು, ವೃಕ್ಷಗಳು, ವೀರುಧಗಳು[2], ಲವ[3], ಕಾಷ್ಠಾ[4], ಕಲಾ[5], ಮುಹೂರ್ತಾ[6], ಹಗಲು, ರಾತ್ರಿ, ಪಕ್ಷ[7], ಮಾಸ[8], ಅಯನ[9], ವತ್ಸರ[10] ಮತ್ತು ಯುಗಾದಿಗಳನ್ನೂ[11] ಅವುಗಳ ಸ್ಥಾನಾಭಿಮಾನಿಗಳನ್ನೂ ಸೃಷ್ಟಿಸಿ ಮರೀಚಿ, ಭೃಗು, ಅಂಗಿರ, ಪುಲಹ, ಕ್ರತು, ದಕ್ಷ, ಅತ್ರಿ, ವಸಿಷ್ಠ, ಧರ್ಮ ಮತ್ತು ಸಂಕಲ್ಪ ಎಂಬ ಸಾಧಕ ಪುರುಷರನ್ನೂ ಸೃಷ್ಟಿಸಿದನು. ಬ್ರಹ್ಮದೇವನು ಪ್ರಾಣದಿಂದ ದಕ್ಷನನ್ನೂ, ಕಣ್ಣುಗಳಿಂದ ಮರೀಚಿ ಪ್ರಜಾಪತಿಯನ್ನೂ, ಶಿರಸ್ಸಿನಿಂದ ಅಂಗಿರ ಮುನಿಯನ್ನೂ, ಹೃದಯದಿಂದ ಭೃಗುವನ್ನೂ ಸೃಷ್ಟಿಸಿದನು. ಸಕಲಲೋಕಗಳಿಗೆ ಪಿತಾಮಹನಾದ ಬ್ರಹ್ಮನು ತನ್ನ ಸಂಕಲ್ಪದಿಂದ ಸಂಕಲ್ಪನನ್ನೂ, ಕಣ್ಣುಗಳಿಂದ ಅತ್ರಿಯನ್ನೂ, ಮತ್ತು ನಿಶ್ಚಯರೂಪವಾದ ಮನಸ್ಸಿನಿಂದ ಧರ್ಮನನ್ನೂ ಸೃಷ್ಟಿಸಿದನು. ಹಾಗೆಯೇ ಉದಾನ ವಾಯುವಿನಿಂದ ಪುಲಸ್ತ್ಯನನ್ನೂ, ವ್ಯಾನವಾಯುವಿನಿಂದ ಪುಲಹನನ್ನೂ, ಅಪಾನವಾಯುವಿನಿಂದ ವ್ಯಾಕುಲತೆಯಿಲ್ಲದ ಕ್ರತುವನ್ನೂ, ಮತ್ತು ಸಮಾನವಾಯುವಿನಿಂದ ವಸಿಷ್ಠನನ್ನೂ ಸೃಷ್ಟಿಸಿದನು. ಹೀಗೆ ಬ್ರಹ್ಮನ ಅವಯವಗಳಿಂದ ಸೃಷ್ಟಿಸಲ್ಪಟ್ಟ ಗೃಹಸ್ಥಧರ್ಮಿಗಳೂ, ಸಾಧಕೋತ್ತಮರೂ ಆದ ಈ ಮಹರ್ಷಿಗಳು ಮಾನವ ರೂಪವನ್ನು ಧರಿಸಿ ಸನಾತನ ಧರ್ಮವನ್ನು ಪ್ರಚಾರಗೊಳಿಸಿದರು.

ತತೋ ದೇವಾಸುರಪಿತೄನ್ಮನುಷ್ಯಾಂಶ್ಚ ಚತುಷ್ಟಯಮ್ । ಸಿಸೃಕ್ಷುರ್ಭಗವಾನೀಶಃ ಸ್ವಮಾತ್ಮಾನಮಯೋಜಯತ್ ।। 40 ।। ಯುಕ್ತಾತ್ಮನಸ್ತಮೋಮಾತ್ರಾ ಉದ್ರಿಕ್ತಾಭೂತ್ಪ್ರಜಾಪತೇಃ । ತತೋಽಸ್ಯ ಜಘನಾತ್ಪೂರ್ವಮಸುರಾ ಜಜ್ಞಿರೇ ಸುತಾಃ ।। 41 ।। ಉತ್ಸಸರ್ಜಾಸುರಾನ್ ಸೃಷ್ಟ್ವಾ ತಾಂ ತನುಂ ಪುರುಷೋತ್ತಮಃ । ಸಾ ಚೋತ್ಸೃಷ್ಟಾ ತನುಸ್ತೇನ ಸದ್ಯೋ ರಾತ್ರಿರಜಾಯತ ।। 42 ।। ಸಾ ತಮೋಬಹುಲಾ ಯಸ್ಮಾತ್ಪ್ರಜಾಸ್ತಸ್ಯಾಂ ಸ್ವಪಂತ್ಯತಃ

ನಂತರ ದೇವತೆಗಳು, ಅಸುರರು, ಪಿತೃಗಳು ಮತ್ತು ಮನುಷ್ಯರೆಂಬ ನಾಲ್ಕು ವಿಧದ ಪ್ರಜೆಗಳನ್ನು ಸೃಷ್ಟಿಸಬೇಕೆಂಬ ದೃಢಸಂಕಲ್ಪವನ್ನು ಮಾಡಿದ ಭಗವಾನ್ ಬ್ರಹ್ಮನು ತನ್ನ ಅಂತಃಕರಣವನ್ನು ಜ್ಞಾನಮಯ ಸಮಾಧಿಯಲ್ಲಿರಿಸಿದನು. ಹಾಗೆ ಸಮಾಧಿಯಲ್ಲಿದ್ದ ಅಂತಃಕರಣದಿಂದ ತಮೋಗುಣದ ಅಂಶವು ಉದ್ರೇಕಗೊಂಡು, ಪ್ರಜಾಪತಿಯ ಜಘನದಿಂದ ಮೊದಲು ಅಸುರರು ಸುತರಾಗಿ ಜನಿಸಿದರು. ಅಸುರರನ್ನು ಸೃಷ್ಟಿಸಿ ಪುರುಷೋತ್ತಮನು ಆ ಶರೀರವನ್ನು ತೊರೆದನು. ವಿಸರ್ಜಿಸಿದ ಅವನ ಆ ಶರೀರದಿಂದ ಕೂಡಲೇ ರಾತ್ರಿಯು ಹುಟ್ಟಿಕೊಂಡಿತು. ರಾತ್ರಿಯು ತಮೋಗುಣದ ಅಂಧಕಾರದಿಂದ ಪೂರ್ಣವಾದುದರಿಂದ ಆ ಸಮಯದಲ್ಲಿ ಸರ್ವಪ್ರಜೆಗಳೂ ನಿದ್ರಾಸುಖವನ್ನು ಅನುಭವಿಸುತ್ತಾರೆ.

ಸತ್ತ್ವಮಾತ್ರಾತ್ಮಿಕಾಂ ದೇವಸ್ತನುಮನ್ಯಾಂ ಗೃಹೀತವಾನ್ ।। 43 ।। ತತೋಽಸ್ಯ ಮುಖತೋ ದೇವಾ ದೀವ್ಯತಃ ಸಂಪ್ರಜಜ್ಞಿರೇ । ತ್ಯಕ್ತಾ ಸಾಪಿ ತನುಸ್ತೇನ ಸತ್ತ್ವಪ್ರಾಯಮಭೂದ್ದಿನಮ್ ।। 44 ।। ತಸ್ಮಾದಹೋ ಧರ್ಮಯುಕ್ತಾ ದೇವತಾಃ ಸಮುಪಾಸತೇ । ಸತ್ತ್ವಮಾತ್ರಾತ್ಮಿಕಾಮೇವ ತತೋಽನ್ಯಾಂ ಜಗೃಹೇ ತನುಮ್ ।। 45 ।। ಪಿತೃವನ್ಮನ್ಯಮಾನಸ್ಯ ಪಿತರಃ ಸಂಪ್ರಜಜ್ಞಿರೇ । ಉತ್ಸಸರ್ಜ ಪಿತೃನ್ ಸೃಷ್ಟ್ವಾ ತತಸ್ತಾಮಪಿ ವಿಶ್ವದೃಕ್ ।। 46 ।। ಸಾಪವಿದ್ಧಾ ತನುಸ್ತೇನ ಸದ್ಯಃ ಸಂಧ್ಯಾ ವ್ಯಜಾಯತ । ತಸ್ಮಾದಹರ್ದೇವತಾನಾಂ ರಾತ್ರಿಃ ಸ್ಯಾದ್ದೇವವಿದ್ವಿಷಾಮ್ ।। 47 ।। ತಯೋರ್ಮಧ್ಯೇ ಪಿತೄಣಾಂ ತು ಮೂರ್ತಿಃ ಸಂಧ್ಯಾ ಗರೀಯಸೀ । ತಸ್ಮಾದ್ದೇವಾಸುರಾಃ ಸರ್ವೇ ಮನವೋ ಮಾನವಾಸ್ತದಾ ।। 48 ।। ಉಪಾಸತೇ ಸದಾಯುಕ್ತಾ ರಾತ್ರ್ಯಹ್ನೋರ್ಮಧ್ಯಮಾಂ ತನುಮ್ । ರಜೋಮಾತ್ರಾತ್ಮಿಕಾಂ ಬ್ರಹ್ಮಾ ತನುಮನ್ಯಾಂ ತತೋಽಸೃಜತ್ ।। 49 ।। ತತೋಽಸ್ಯ ಜಜ್ಞಿರೇ ಪುತ್ರಾ ಮನುಷ್ಯಾ ರಜಸಾವೃತಾಃ । ತಾಮಥಾಶು ಸ ತತ್ಯಾಜ ತನುಂ ಸದ್ಯಃ ಪ್ರಜಾಪತಿಃ ।। 50 ।। ಜ್ಯೋತ್ಸ್ನಾ ಸಾ ಚಾಭವದ್ವಿಪ್ರಾಃ ಪ್ರಾಕ್ಸಂಧ್ಯಾ ಯಾಭಿಧೀಯತೇ

ನಂತರ ದೇವನು ಸತ್ತ್ವಮಾತ್ರಾತ್ಮಿಕವಾದ ಅನ್ಯ ಶರೀರವನ್ನು ಪರಿಗ್ರಹಿಸಿದನು. ಆಗ ಅವನ ಮುಖದಿಂದ ಪ್ರಕಾಶದಿಂದ ಬೆಳಗುತ್ತಿದ್ದ ದೇವತೆಗಳು ಹುಟ್ಟಿದರು. ಆ ಶರೀರವನ್ನೂ ತೊರೆಯಲು ಅದು ಸತ್ತ್ವಗುಣಪೂರ್ಣವಾದ ಹಗಲಾಯಿತು. ಆದ್ದರಿಂದ ಧರ್ಮಯುಕ್ತರು ಹಗಲಿನಲ್ಲಿಯೇ ದೇವತಾ ಉಪಾಸನೆಗಳನ್ನು ಮಾಡುತ್ತಾರೆ. ನಂತರ ಸತ್ತ್ವಗುಣದಿಂದಲೇ ಕೂಡಿದ ಇನ್ನೊಂದು ದೇಹವನ್ನು ಪರಿಗ್ರಹಿಸಿದನು. ಪಿತನೆಂಬ ಭಾವವನ್ನು ಹೊಂದಿದುದರಿಂದ ಆ ಶರೀರದಿಂದ ಪಿತೃಗಳು ಹುಟ್ಟಿದರು. ಪಿತೃಗಳನ್ನು ಸೃಷ್ಟಿಸಿ ವಿಶ್ವದೃಕ್ ಬ್ರಹ್ಮನು ಆ ಶರೀರವನ್ನೂ ತೊರೆದನು. ಬಿಸಾಡಿದ ಆ ತನುವು ಕೂಡಲೇ ಸಂಧ್ಯೆಯಾಗಿ ಪರಿಣಮಿಸಿತು. ಆದ್ದರಿಂದ ಹಗಲು ದೇವತೆಗಳದ್ದೂ, ರಾತ್ರಿಯು ದೇವಶತ್ರುಗಳದ್ದೂ, ಮತ್ತು ಅವುಗಳ ಮಧ್ಯದ ಸಂಧ್ಯಾಕಾಲವು ಪಿತೃಗಳಿಗೆ ಪೂಜನೀಯ ಮೂರ್ತಿಯಾಯಿತು. ಆದ್ದರಿಂದ ದೇವತೆ, ಅಸುರ, ಮಹರ್ಷಿ, ಮತ್ತು ಮಾನವರೆಂಬ ಸಮಸ್ತ ಪ್ರಜೆಗಳಿಗೆ ಆ ಸಂಧ್ಯಾ ಸಮಯವು ವಂದನೀಯವಾಗಿದೆ. ರಾತ್ರಿ-ಹಗಲುಗಳ ಮಧ್ಯಕಾಲದ ಮೂರ್ತಿಯನ್ನು ಪ್ರಜೆಗಳು ಸತತವಾಗಿ ಚಿತ್ತದ ಏಕಾಗ್ರತೆಯಿಂದ ಕೂಡಿ ಉಪಾಸನೆ ಮಾಡುತ್ತಾರೆ. ನಂತರ ಬ್ರಹ್ಮನು ರಜೋಗುಣಾತ್ಮಕವಾದ ಇನ್ನೊಂದು ಶರೀರವನ್ನು ಸೃಷ್ಟಿಸಿದನು. ಅದರಿಂದ ರಜಸಾವೃತರಾದ ಮನುಷ್ಯಪುತ್ರರು ಜನಿಸಿದರು. ಕೂಡಲೇ ಪ್ರಜಾಪತಿಯು ಆ ಶರೀರವನ್ನೂ ತ್ಯಜಿಸಿದನು. ವಿಪ್ರರೇ! ಅದು ಬೆಳದಿಂಗಳ ರೂಪವನ್ನು ತಾಳಿತು. ಅದನ್ನೇ ಪೂರ್ವಸಂಧ್ಯೆ ಎಂದು ಕರೆಯುತ್ತಾರೆ.

ತತಃ ಸ ಭಗವಾನ್ ಬ್ರಹ್ಮಾ ಸಂಪ್ರಾಪ್ಯ ದ್ವಿಜಪುಂಗವಾಃ ।। 51 ।। ಮೂರ್ತಿಂ ತಮೋರಜಃಪ್ರಾಯಾಂ ಪುನರೇವಾಭ್ಯಪೂಜಯತ್ । ಅಂಧಕಾರೇ ಕ್ಷುಧಾವಿಷ್ಟಾ ರಾಕ್ಷಸಾಸ್ತಸ್ಯ ಜಜ್ಞಿರೇ ।। 52 ।। ಪುತ್ರಾಸ್ತಮೋರಜಃಪ್ರಾಯಾ ಬಲಿನಸ್ತೇ ನಿಶಾಚರಾಃ । ಸರ್ಪಾ ಯಕ್ಷಾಸ್ತಥಾ ಭೂತಾ ಗಂಧರ್ವಾಃ ಸಂಪ್ರಜಜ್ಞಿರೇ ।। 53 ।। ರಜಸ್ತಮೋಽಭ್ಯಾಮಾವಿಷ್ಟಾಂಸ್ತತೋಽನ್ಯಾನಸೃಜತ್ಪ್ರಭುಃ । ವಯಾಂಸಿ ವಯಸಃ ಸೃಷ್ಟ್ವಾ ಅವೀನ್ವೈ ವಕ್ಷಸೋಽಸೃಜತ್ ।। 54 ।। ಮುಖತೋಽಜಾನ್ಸಸರ್ಜಾನ್ಯಾನುದರಾದ್ಗಾಶ್ಚ ನಿರ್ಮಮೇ । ಪದ್ಭ್ಯಾಂಚಾಶ್ವಾನ್ಸಮಾತಂಗಾನ್ರಾಸಭಾನ್ಗವಯಾನ್ಮೃಗಾನ್ ।। 55 ।। ಉಷ್ಟ್ರಾನಶ್ವತರಾಂಶ್ಚೈವ ಅರತ್ನೇಶ್ಚ ಪ್ರಜಾಪತಿಃ । ಓಷಧ್ಯಃ ಫಲಮೂಲಾನಿ ರೋಮಭ್ಯಸ್ತಸ್ಯ ಜಜ್ಞಿರೇ ।। 56 ।।

ದ್ವಿಜಪುಂಗವರೇ! ನಂತರ ಭಗವಾನ್ ಬ್ರಹ್ಮನು ತಮೋಗುಣ-ರಜೋಗುಣಗಳ ಸಂಸರ್ಗವಿದ್ದ ಇನ್ನೊಂದು ದೇಹವನ್ನು ಸ್ವೀಕರಿಸಿದನು. ಅದರಿಂದಾದ ಸೃಷ್ಟಿಯಿಂದ ಅಂಧಕಾರದಲ್ಲಿ ಹಸಿವೆಯಿಂದ ಪೀಡಿತರಾದ ರಾಕ್ಷಸರು ಜನಿಸಿದರು. ತಮಸ್ಸು ಮತ್ತು ರಜೋಗುಣಗಳಿಂದ ಪೂರ್ಣರೂ ಬಲಿಷ್ಠರೂ ಆದ ನಿಶಾಚರರು, ಸರ್ಪಗಳು, ಯಕ್ಷರು, ಭೂತಗಳು ಮತ್ತು ಗಂಧರ್ವರೆಂಬ ಅನೇಕ ವಿಧದ ಪುತ್ರರು ಜನಿಸಿದರು. ಮತ್ತು ಪ್ರಭುವು ರಜೋಗುಣ-ತಮೋಗುಣಗಳಿಂದ ಕೂಡಿದ ಇತರ ಪ್ರಜೆಗಳನ್ನೂ ಸೃಷ್ಟಿಸಿದನು. ತನ್ನ ವಯಸ್ಸಿನಿಂದ ಪಕ್ಷಿಗಳನ್ನೂ, ವಕ್ಷಸ್ಥಳದಿಂದ ಕುರಿಗಳನ್ನೂ ಸೃಷ್ಟಿಸಿದನು. ಮುಖದಿಂದ ಆಡುಗಳನ್ನೂ, ಉದರದಿಂದ ಗೋವುಗಳನ್ನೂ, ಕಾಲುಗಳಿಂದ ಆನೆ-ಕುದುರೆ-ಕತ್ತೆ-ಗವಯ ಮತ್ತು ಜಿಂಕೆಗಳೆಂಬ ಅನೇಕ ಪ್ರಾಣಿಗಳನ್ನೂ ನಿರ್ಮಿಸಿದನು. ಪ್ರಜಾಪತಿಯು ತನ್ನ ಮುಷ್ಟಿಯಿಂದ ಒಂಟೆ, ಹೇಸರಗತ್ತೆಗಳನ್ನು ಸೃಷ್ಟಿಮಾಡಿದನು. ಬ್ರಹ್ಮನ ರೋಮಗಳಿಂದ ಓಷಧಿ, ಸಸ್ಯ, ಫಲ-ಮೂಲಗಳು ಹುಟ್ಟಿದವು.

ಗಾಯತ್ರಂ ಚ ಋಚಂ ಚೈವ ತ್ರಿವೃತ್ಸ್ತೋಮಃ ರಥಂತರಮ್ । ಅಗ್ನಿಷ್ಟೋಮಂ ಚ ಯಜ್ಞಾನಾಂ ನಿರ್ಮಮೇ ಪ್ರಥಮಾನ್ಮುಖಾತ್ ।। 57 ।। ಯಜೂಂಷಿ ತ್ರೈಷ್ಟುಭಂ ಛಂದಃ ಸ್ತೋಮಂ ಪಂಚದಶಂ ತಥಾ । ಬೃಹತ್ಸಾಮ ತಥೋಕ್ಥಂ ಚ ದಕ್ಷಿಣಾದಸೃಜನ್ಮುಖಾತ್ ।। 58 ।। ಸಾಮಾನಿ ಜಾಗತಂ ಛಂದಃ ಸ್ತೋಮಂ ಸಪ್ತದಶಂ ತಥಾ । ವೈರೂಪಮತಿರಾತ್ರಂ ಚ ಪಶ್ಚಿಮಾದಸೃಜನ್ಮುಖಾತ್ ।। 59 ।। ಏಕವಿಂಶಮಥರ್ವಾಣಮಾಪ್ತೋರ್ಯಾಮಣಮೇವ ಚ । ಅನುಷ್ಟುಭಂ ಸವೈರಾಜಮುತ್ತರಾದಸೃಜನ್ಮುಖಾತ್ ।। 60 ।।

ಬ್ರಹ್ಮನು ತನ್ನ ಮೊದಲನೇ ಮುಖದಿಂದ[12] ಯಜ್ಞಗಳಿಗೆ ಸಂಬಂಧಿಸಿದ ಗಾಯತ್ರೀ ಛಂದಸ್ಸನ್ನೂ[13], ರುಕ್ ಮಂತ್ರಗಳನ್ನೂ, ತ್ರಿವೃತಸ್ತೋಮವನ್ನೂ[14], ರಥಂತರ ಸಾಮವನ್ನೂ[15], ಅಗ್ನಿಷ್ಟೋಮ[16] ಯಾಗವನ್ನೂ ಸೃಷ್ಟಿಸಿದನು. ತನ್ನ ದಕ್ಷಿಣ ಮುಖದಿಂದ ಯಜುರ್ವೇದ, ತ್ರಿಷ್ಟುಪ್ ಛಂದಸ್ಸು, ಪಂಚದಶ ಸ್ತೋಮ, ಬೃಹತ್ ಸಾಮ, ಮತ್ತು ಉಕ್ಥ್ಯ ಯಾಗವನ್ನು[17] ಸೃಷ್ಟಿಸಿದನು. ತನ್ನ ಪಶ್ಚಿಮ ಮುಖದಿಂದ ಸಾಮವೇದ, ಜಗತೀ ಛಂದಸ್ಸು, ಸಪ್ತದಶ ಸ್ತೋಮ, ವೈರೂಪ ಸಾಮ ಮತ್ತು ಅತಿರಾತ್ರ ಯಾಗಗಳನ್ನು ಸೃಷ್ಟಿಸಿದನು. ಉತ್ತರದ ಮುಖದಿಂದ ಅಥರ್ವವೇದ, ಏಕವಿಂಶ ಸ್ತೋಮ, ಆಪ್ತೋರ್ಯಾಮ, ಅನುಷ್ಟುಭ್ ಛಂದಸ್ಸು, ವೈರಾಜಸಾಮಗಳನ್ನು ಸೃಷ್ಟಿಸಿದನು.

ಉಚ್ಚಾವಚಾನಿ ಭೂತಾನಿ ಗಾತ್ರೇಭ್ಯಸ್ತಸ್ಯ ಜಜ್ಞಿರೇ । ಬ್ರಹ್ಮಣೋ ಹಿ ಪ್ರಜಾಸರ್ಗಂ ಸೃಜತಸ್ತು ಪ್ರಜಾಪತೇಃ ।। 61 ।। ಯಕ್ಷಾನ್ ಪಿಶಾಚಾನ್ ಗಂಧರ್ವಾಂಸ್ತಥೈವಾಪ್ಸರಸಃ ಶುಭಾಃ । ಸೃಷ್ಟ್ವಾ ಚತುಷ್ಟಯಂ ಸರ್ಗಂ ದೇವರ್ಷಿಪಿತೃಮಾನುಷಮ್ ।। 62 ।। ತತೋಽಸೃಜಚ್ಚ ಭೂತಾನಿ ಸ್ಥಾವರಾಣಿ ಚರಾಣಿ ಚ । ನರಕಿನ್ನರರಕ್ಷಾಂಸಿ ವಯಃ ಪುಶುಮೃಗೋರಗಾನ್ ।। 63 ।। ಅವ್ಯಯಂ ಚ ವ್ಯಯಂ ಚೈವ ದ್ವಯಂ ಸ್ಥಾವರಜಂಗಮಮ್ । ತೇಷಾಂ ಯೇ ಯಾನಿ ಕರ್ಮಾಣಿ ಪ್ರಾಕ್ಸೃಷ್ಟೇಃ ಪ್ರತಿಪೇದಿರೇ ।। 64 ।। ತಾನ್ಯೇವ ತೇ ಪ್ರಪದ್ಯಂತೇ ಸೃಜ್ಯಮಾನಾಃ ಪುನಃ ಪುನಃ । ಹಿಂಸ್ರಾಹಿಂಸ್ರೇ ಮೃದುಕ್ರೂರೇ ಧರ್ಮಾಧರ್ಮಾವೃತಾನೃತೇ ।। 65 ।। ತದ್ಭಾವಿತಾಃ ಪ್ರಪದ್ಯಂತೇ ತಸ್ಮಾತ್ತತ್ತಸ್ಯ ರೋಚತೇ । ಮಹಾಭೂತೇಷು ನಾನಾತ್ವಮಿಂದ್ರಿಯಾರ್ಥೇಷು ಮೂರ್ತಿಷು ।। 66 ।।

ಪ್ರಜಾಪತಿ ಬ್ರಹ್ಮನ ಈ ಪ್ರಜಾಸೃಷ್ಟಿಯಲ್ಲಿ ಉಚ್ಚ-ನೀಚ ಶರೀರಗಳಿರುವ ಅನೇಕ ಭೂತಗಳು ಹುಟ್ಟಿದವು. ಯಕ್ಷ-ಪಿಶಾಚ-ಗಂಧರ್ವ ಮತ್ತು ಅಪ್ಸರೆಯರೆಂಬ ಶುಭ ಸೃಷ್ಟಿಯನ್ನು ನೆರವೇರಿಸಿ, ದೇವ-ಋಷಿ-ಪಿತೃ-ಮನುಷ್ಯರೆಂಬ ನಾಲ್ಕುವಿಧದ ಸೃಷ್ಟಿಯನ್ನೂ ರಚಿಸಿದನು. ನಂತರ ಸ್ಥಾವರ-ಜಂಗಮ ಪ್ರಾಣಿಗಳನ್ನೂ, ಕಿನ್ನರ-ರಾಕ್ಷಸರನ್ನೂ, ಪಕ್ಷಿ-ಪಶು-ಮೃಗ-ಸರ್ಪಗಳನ್ನು ಸೃಷ್ಟಿಸಿದನು. ಬ್ರಹ್ಮನ ಸೃಷ್ಟಿಯಲ್ಲಿಯ ಸ್ಥಾವರ-ಜಂಗಮಗಳು ವ್ಯಯ (ಬೇಗ ನಾಶಗೊಳ್ಳುವವು) ಮತ್ತು ಅವ್ಯಯ (ತಡವಾಗಿ ನಾಶವಾಗುವವು) ಎಂಬ ಎರಡೂ ಬಗೆಯವಿವೆ. ಅವುಗಳಲ್ಲಿನ ಪ್ರತಿಯೊಂದೂ ಹಿಂದಿನ ಸೃಷ್ಟಿಯಲ್ಲಿ ಯಾವ್ಯಾವ ಕರ್ಮಗಳನ್ನು ಪಡೆದಿದ್ದರೋ ಅವನ್ನೇ ಈ ಸೃಷ್ಟಿಯಲ್ಲೂ ಪಡೆದುಕೊಂಡವು. ಪುನಃ ಪುನಃ ಸೃಷ್ಟಿಸಲ್ಪಡುವ ಆ ಜೀವಿಗಳು ಹಿಂಸಾಮಯ-ಹಿಂಸಾರಹಿತ, ಮೃದು-ಕ್ರೂರ, ಧರ್ಮ-ಅಧರ್ಮ ಹಾಗೂ ಸತ್ಯ-ಅನೃತರೂಪವಾದ ಹಿಂದಿನ ಸೃಷ್ಟಿಯಲ್ಲಿದ್ದ ಕರ್ಮಗಳನ್ನೇ ಮತ್ತೆ ಹೊಂದುತ್ತವೆ. ಆ ಜೀವಿಗಳು ಪೂರ್ವಕರ್ಮದ ವಾಸನಾಮಯರಾಗಿ ಉತ್ಪತ್ತಿಯನ್ನು ಹೊಂದುವುದರಿಂದ ಆಯಾಯಾ ಸಂಸ್ಕಾರವನ್ನು ಅನುಸರಿಸಿ ಆಯಾಯ ಕರ್ಮವು ಆಯಾಯಾ ಪ್ರಾಣಿಗೆ ರುಚಿಸುತ್ತದೆ. ಹೀಗೆ ಮಹಾಭೂತಗಳಲ್ಲಿ ಅನೇಕ ಪಂಗಡಗಳೂ, ಇಂದ್ರಿಯ ವಿಷಯಗಳಲ್ಲಿ ಅನೇಕ ಸಂಖ್ಯೆಯೂ ಬ್ರಹ್ಮಸೃಷ್ಟಿಯಿಂದ ಬಂದಿದೆ.

ವಿನಿಯೋಗಂ ಚ ಭೂತಾನಾಂ ಧಾತೈವ ವ್ಯದಧಾತ್ ಸ್ವಯಮ್ । ನಾಮರೂಪಂ ಚ ಭೂತಾನಾಂ ಪ್ರಾಕೃತಾನಾಂ ಪ್ರಪಂಚನಮ್ ।। 67 ।। ವೇದಶಬ್ದೇಭ್ಯ ಏವಾದೌ ನಿರ್ಮಮೇ ಸ ಮಹೇಶ್ವರಃ । ಆರ್ಷಾಣಿ ಚೈವ ನಾಮಾನಿ ಯಾಶ್ಚ ವೇದೇಷು ಸೃಷ್ಟಯಃ ।। 68 ।। ಶರ್ವರ್ಯಂತೇ ಪ್ರಸೂತಾನಾಂ ತಾನ್ಯೇವೈಭ್ಯೋ ದದಾತ್ಯಜಃ । ಯಾವಂತಿ ಪ್ರತಿಲಿಂಗಾನಿ ನಾನಾರೂಪಾಣಿ ಪರ್ಯಯೇ ।। 69 ।। ದೃಶ್ಯಂತೇ ತಾನಿ ತಾನ್ಯೇವ ತಥಾ ಭಾವಾ ಯುಗಾದಿಷು ।। 70 ।। 

ಪ್ರಾಣಿಯು ತನ್ನ ಕರ್ಮಾನುಸಾರವಾಗಿ ಆಯಾಯಾ ವಿಷಯಾನುಭವವನ್ನು ಹೊಂದಬೇಕೆಂದು ಸ್ವಯಂ ಬ್ರಹ್ಮನೇ ನಿಯಮಿಸಿದ್ದಾನೆ. ಹೀಗೆ ಭೂತಗಳ ನಾಮ-ರೂಪಗಳನ್ನೂ, ಪ್ರಕೃತಿವಶ್ಯವಾದ ಅವುಗಳ ಪ್ರಸಾರವನ್ನೂ ಬ್ರಹ್ಮನೇ ಮಾಡಿದ್ದಾನೆ. ಮಹೇಶ್ವರನು ಮಹರ್ಷಿಗಳ ದರ್ಶನ ವಿಶೇಷ ಸ್ಮರಣಗಳನ್ನೂ, ವೇದಗತವಾದ ಅನೇಕ ಸೃಷ್ಟಿಗಳನ್ನೂ, ವೇದ ಶಬ್ದಗಳ ಮೂಲಕವಾಗಿಯೇ ನಿರ್ಮಾಣಮಾಡಿದನು. ಜನ್ಮ-ಮರಣ ರಹಿತನಾದ ಬ್ರಹ್ಮನು ಕಲ್ಪಾಂತದಲ್ಲಿ ಲಯಹೊಂದಿ ಪುನಃ ಸೃಷ್ಟಿಯಲ್ಲಿ ಹುಟ್ಟಿದ ಆಯಾಯಾ ಭೂತಗಳಿಗೆ ಅಸಾಧಾರಣವಾದ ನಾನಾ ರೂಪ-ನಾಮಗಳನ್ನು ಕೊಟ್ಟಿದ್ದಾನೆ. ಹಿಂದಿನ ಕಲ್ಪದಲ್ಲಿ ಯಾವ ಪ್ರಾಣಿಗೆ ಯಾವ ವಿಧದ ನಾಮ-ರೂಪ-ಭಾವನೆಗಳು ಇದ್ದವೋ ಈ ಕಲ್ಪದ ಆದಿಯಲ್ಲಿ ಜನಿಸಿದ ಪ್ರಾಣಿಗಳಿಗೆ ಅದೇ ನಾಮ-ರೂಪ-ಭಾವನೆಗಳು ಕಾಣುತ್ತವೆ.”

ಇತಿ ಶ್ರೀಕೂರ್ಮಪುರಾಣೇ ಸಪ್ತಮೋಽಧ್ಯಾಯಃ ।।

ಇದು ಶ್ರೀಕೂರ್ಮಪುರಾಣದಲ್ಲಿ ಏಳನೇ ಅಧ್ಯಾಯವು.

[1] ಅಜ್ಞಾನದ ಈ ಐದು ವೃತ್ತಿಗಳು (ಪಂಚತಮಸ್ಸುಗಳು) ಉಪನಿಷತ್ತು, ಪುರಾಣ ಮತ್ತು ತತ್ವಶಾಸ್ತ್ರಗಳಲ್ಲಿ ಅಜ್ಞಾನದಿಂದ ಉಂಟಾಗುವ ಮಾನಸಿಕ-ಆಧ್ಯಾತ್ಮಿಕ ಮೋಹಗಳ ಐದು ಮಟ್ಟಗಳು ಎಂದು ವಿವರಿಸಲ್ಪಟ್ಟಿವೆ. (1) ತಮಸ್ಸು – ಅಂದರೆ ಮೂಲ ಅಜ್ಞಾನ, ತತ್ತ್ವವನ್ನು ತಿಳಿಯದೇ ಇರುವುದು. ಇದು ಐದರಲ್ಲಿ ಅತ್ಯಂತ ಮೂಲ ಮಟ್ಟ. ಸತ್ಯ, ತತ್ತ್ವ, ಧರ್ಮ, ಆತ್ಮ – ಇವುಗಳ ಬಗ್ಗೆ ಅರಿವಿಲ್ಲದ ಸ್ಥಿತಿ. ಮನಸ್ಸು ನಿದ್ರೆ, ಜಡತೆ, ಆಲಸ್ಯ ಮತ್ತು ಅಪ್ರಕಾಶ ರೂಪದಲ್ಲಿರುತ್ತದೆ. “ನಾನು ಯಾರು>” ಎನ್ನುವ ಜಿಜ್ಞಾಸೆಯೇ ಇರದ ಮೂಲ ಅಂಧಕಾರ. ಉದಾಸೀನತೆ, ಜಡತೆ, ನಿರ್ಗುಣ ಸ್ಥಿತಿ, ಚೈತನ್ಯಕ್ಕೆ ಮರೆಮಾಚಿಕೆ – ಇವು ಈ ಮಟ್ಟದ ಲಕ್ಷಣಗಳು. (2) ಮೋಹ – ತಪ್ಪಾಗಿ ಗುರುತಿಸುವುದು, ಅಸತ್ಯವನ್ನು ಸತ್ಯವೆಂದು ಕಾಣುವುದು. ಇಲ್ಲಿ ವ್ಯಕ್ತಿಯು ಅಸತ್ಯಕ್ಕೆ ಆಕರ್ಷಿತನಾಗುತ್ತಾನೆ. ದೇಹವನ್ನು “ನಾನೇ” ಎಂದು ಭ್ರಮಿಸುತ್ತಾನೆ. ಸಂಬಂಧಗಳು, ವಸ್ತುಗಳು, ಭೋಗಗಳಲ್ಲಿ ಅತಿಯಾದ ಆಸಕ್ತಿಯನ್ನು ಇಟ್ಟುಕೊಂಡಿರುತ್ತಾನೆ. ಅತಿಸ್ನೇಹ, ಅತಿಭಾವ, ಅರ್ಥರಹಿತ ಆಸಕ್ತಿ, ಋಜುವಾದ ವಿವೇಕದ ಅಭಾವ – ಇವು ಈ ಮಟ್ಟದ ಲಕ್ಷಣಗಳು. (3) ಮಹಾಮೋಹ – ಗಾಢ ಮಮಕಾರ, ವಿಷಯಾಸಕ್ತಿ ಅತಿಯಾಗಿರುವುದು. ಇಲ್ಲಿ ಮೋಹವು ತೀವ್ರವಾಗಿರುತ್ತದೆ. ಈ ಮಟ್ಟದಲ್ಲಿರುವ ವ್ಯಕ್ತಿಯು ವಿಷಯವಾಸನೆಗಳಲ್ಲಿ ಸಂಪೂರ್ಣ ಮುಳುಗಿರುತ್ತಾನೆ. ಧರ್ಮ-ಅಧರ್ಮದ ಜ್ಞಾನವು ಇಲ್ಲವೇ ಇಲ್ಲ ಎಂದು ಹೇಳಬಹುದು. ಅಭಿಲಾಷೆ, ಕಾಮ, ಕ್ರೋಧ, ಲೋಭಗಳ ಹೆಚ್ಚಳ, ಮತ್ತಿನಲ್ಲಿರುವಂತೆ ಜೀವನವನ್ನು ನಡೆಸುವ ಸ್ಥಿತಿ – ಇವು ಈ ಮಟ್ಟದ ಲಕ್ಷಣಗಳು. (4) ತಾಮಿಸ್ರ – ಕೋಪ-ಸ್ಪರ್ಧೆ, ಬಯಕೆಗೆ ಬಂದ ಅಡ್ಡಿಗೆ ರೋಷ. ಬಯಸಿದ ವಸ್ತುವು ಸಿಕ್ಕದ್ಗ ಹುಟ್ಟುವ ಹಗೆ, ಕೋಪ, ಸ್ಪರ್ಧೆ, ದುರುದ್ದೇಶ. ಇತರರಿಗೆ ಹಾನಿಮಾಡಲು ಮನಸ್ಸು ಸಿದ್ಧವಾಗಿರುತ್ತದೆ. ಸ್ವಾರ್ಥಪರ ಅತಿ ವಿಕಾರ. ಕೋಪ, ದ್ವೇಷ, ಹಿಂಸೆ, ಸ್ಪರ್ಧಾಭಾವ – ಇವು ಈ ಮಟ್ಟದ ಲಕ್ಷಣಗಳು. (5) ಅಂಧತಾಮಿಸ್ರ – ಸಂಪೂರ್ಣ ಆತ್ಮವಿಮೋಹ. ಆತ್ಮವನ್ನೇ ಕಳೆದುಕೊಂಡಂತಿರುವ ಸ್ಥಿತಿ. ಇದು ಅಜ್ಞಾನದ ಅತಿ ಗಾಢ ಮತ್ತು ಅತಿ ಅಪಾಯಕಾರೀ ರೂಪ. ಇಲ್ಲಿ ವ್ಯಕ್ತಿಯು ತನ್ನ ಆತ್ಮಸ್ವರೂಪ, ಕರ್ತವ್ಯ, ನೀತಿ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಪರಿಗ್ರಹ, ದುರಾಶೆ, ದುರಾಕ್ಷರ, ಕ್ರೂರತೆಯ ಉನ್ನತ ಸ್ಥಿತಿ. ಅತಿಯಾದ ಭಯ, ಅತಿಯಾದ ಹಗೆ, ಸಂಪೂರ್ಣ ಅನೈತಿಕತೆ, ಕೈಂಕರ್ಯದಿಂದ ವಿಮುಖನಾಗುವುದು – ಇವು ಈ ಮಟ್ಟದ ಲಕ್ಷಣಗಳು. ಇವು ಕ್ರಮವಾಗಿ ಹೆಚ್ಚುತ್ತಾ ಹೋಗುವ ಅಜ್ಞಾನದ ಹಂತಗಳು. ಸಂಕ್ಷಿಪ್ತವಾಗಿ ಹೇಳುವುದಾದರೆ:

ವೃತ್ತಿ ಕನ್ನಡ ಅರ್ಥ ಮುಖ್ಯ ಲಕ್ಷಣ ಸ್ಥಿತಿ
1.    ತಮಸ್ಸು ಮೂಲ ಅಜ್ಞಾನ ಜಡತೆ, ನಿದ್ರೆ, ಅಲಸ್ಯ, ಅಪ್ರಕಾಶ ಸತ್ಯತತ್ತ್ವ ತಿಳಿಯದೆ ಕತ್ತಲೆಯಲ್ಲಿ ಇರುವ ಸ್ಥಿತಿ
2.    ಮೋಹ ತಪ್ಪು ಅರಿವು ಅಸತ್ಯಕ್ಕೆ ಆಸಕ್ತಿ, ದೇಹವನ್ನು ‘ನಾನು’ ಎಂದು ಭ್ರಮೆ ವಸ್ತು-ವಿಷಯಗಳಲ್ಲಿ ಅತಿಯಾದ ಮೋಹ
3.    ಮಹಾಮೋಹ ಗಾಢ ವಾಸನೆ ಭೋಗಾಸಕ್ತಿ, ಕಾಮ-ಕ್ರೋಧ-ಲೋಭ ಹೆಚ್ಚಳ ಧರ್ಮ–ಅಧರ್ಮ ಭೇದ ಅಳಿದು ಹೋಗುವುದು
4.    ತಾಮಿಸ್ರ ಕೋಪ-ಸ್ಪರ್ಧೆ ಬಯಕೆ ಸಿಗದಾಗ ಕೋಪ, ದ್ವೇಷ, ಹಿಂಸೆ ಸ್ವಾರ್ಥದ ದೌರ್ಜನ್ಯ—ಇತರರಿಗೆ ಹಾನಿ ಮಾಡುವ ಮಟ್ಟ
5.    ಅಂಧತಾಮಿಸ್ರ ಸಂಪೂರ್ಣ ಅಂಧತೆ ಆತ್ಮವಿಮೋಹ, ಅತಿ ದ್ವೇಷ, ಅತಿ ಕ್ರೂರತೆ ನೀತಿ-ಪಾಲನೆ ಕಳೆದು ಸಂಪೂರ್ಣ ಅಧರ್ಮದಲ್ಲಿ ಬೀಳುವುದು

 

[2] ವೀರುಧಗಳು = ಔಷಧೀಯ ಮತ್ತು ಗಿಡಮದ್ದಿನ ಗುಣ ಹೊಂದಿರುವ ಸಸ್ಯಗಳು, ಚಿಕ್ಕ ಗಿಡಗಳು, ಲತೆಗಳು, ಬಳ್ಳಿ ಮೊದಲಾದವು. ವೀರುಧ ಶಬ್ದವನ್ನು ಏರುವುದು, ಹತ್ತುವುದು, ಮತ್ತು ಆವರಿಸುವ ಸ್ವಭಾವದ ಸಸ್ಯ-ಲತೆಗಳು ಎಂಬ ಅರ್ಥದಲ್ಲಿಯೂ ಬಳಸಲಾಗುತ್ತದೆ.

[3] ಲವ = ಕಾಲದ ಅತಿ ಸೂಕ್ಷ್ಮ ಪ್ರಮಾಣ. ಅಣುರ್ದ್ವೌ ಪರಮಾಣೂ ಸ್ಯಾತ್ತ್ರಸರೇಣುಸ್ತ್ರಯಃ ಸ್ಮೃತಃ ಜಾಲಾರ್ಕರಶ್ಮ್ಯವಗತಃ ಖಮೇವಾನುಪತನ್ನಗಾತ್ ।। 5 ।। ತ್ರಸರೇಣುತ್ರಿಕಂ ಭುಂಕ್ತೇ ಯಃ ಕಾಲಃ ಸ ತ್ರುಟಿಃ ಸ್ಮೃತಃ ಶತಭಾಗಸ್ತು ವೇಧಃ ಸ್ಯಾತ್ತೈಸ್ತ್ರಿಭಿಸ್ತು ಲವಃ ಸ್ಮೃತಃ ।। 6 ।। ಅರ್ಥಾತ್: ಎರಡು ಪರಮಾಣುಗಳು ಸೇರಿ ಒಂದು ಅಣುವಾಗುತ್ತದೆ. ಮೂರು ಅಣುಗಳು ಸೇರಿ ತ್ರಸರೇಣು ಎಂದು ಕರೆಯಲ್ಪಡುವ ಕಣ ಉಂಟಾಗುತ್ತದೆ. ಈ ತ್ರಸರೇಣು ಸೂರ್ಯಕಿರಣಗಳಲ್ಲಿ ಕಾಣುವ ಧೂಳಿನ ಕಣದಂತೆ ಗಾಳಿಯಲ್ಲಿ ತೇಲುತ್ತಾ ಬೀಳುವಂತೆ ಕಾಣುತ್ತದೆ. ಮೂರು ತ್ರಸರೇಣುಗಳ ಚಲನೆಯಷ್ಟಿರುವ ಕಾಲವನ್ನು ತ್ರುಟಿ ಎಂದು ಕರೆಯುತ್ತಾರೆ. ತ್ರುಟಿಯ ನೂರು ಪಟ್ಟು ಕಾಲವನ್ನು ವೇಧ ಎಂದು, ಮತ್ತು ಮೂರು ವೇಧಗಳು ಸೇರಿ ಲವ ಎಂದು ಕರೆಯುತ್ತಾರೆ. (ಶ್ರೀಮದ್ಭಾಗವತಮಹಾಪುರಾಣ, ತೃತೀಯಸ್ಕಂಧ, ಅಧ್ಯಾಯ 11)

[4] ಮೂರು ಲವಗಳಿಗೆ ಒಂದು ನಿಮೇಷ ಮತ್ತು ಮೂರು ನಿಮೇಷಗಳಿಗೆ ಒಂದು ಕ್ಷಣ ಎಂದೂ, ಐದು ಕ್ಷಣಗಳಿಗೆ ಒಂದು ಕಾಷ್ಠಾ ಎಂದು ಹೇಳುತ್ತಾರೆ. ನಿಮೇಷಸ್ತ್ರಿಲವೋ ಜ್ಞೇಯ ಆಮ್ನಾತಸ್ತೇ ತ್ರಯಃ ಕ್ಷಣಃ । ಕ್ಷಣಾನ್ಪಂಚ ವಿದುಃ ಕಾಷ್ಠಾಂ ಲಘು ತಾ ದಶ ಪಂಚ ಚ ।। 7 ।। (ಶ್ರೀಮದ್ಭಾಗವತಮಹಾಪುರಾಣ, ತೃತೀಯಸ್ಕಂಧ, ಅಧ್ಯಾಯ 11) ಅಂದರೆ 45 ಲವಗಳಿಗೆ ಒಂದು ಕಾಷ್ಠಾ ಎಂದಾಯಿತು.

[5] ಕಲಾಸ್ತ್ರಿಂಶಚ್ಚ ವೈ ಕಾಷ್ಠಾ । ಅರ್ಥಾತ್: 1 ಕಲಾ=30 ಕಾಷ್ಠಾ (ಶ್ರೀಮಾರ್ಕಂಡೇಯಮಹಾಪುರಾಣ, ಅಧ್ಯಾಯ 43, ಶ್ಲೋಕ 27).

[6] 1 ಮುಹೂರ್ತ=30 ಕಲಾ (ಶ್ರೀಮಾರ್ಕಂಡೇಯಮಹಾಪುರಾಣ, ಅಧ್ಯಾಯ 43, ಶ್ಲೋಕ 27)

[7] 1 ಪಕ್ಷ=15 ಅಹೋರಾತ್ರಿಗಳು.

[8] 1 ಮಾಸ=2 ಪಕ್ಷಗಳು.

[9] 1 ಅಯನ-6 ಮಾಸಗಳು.

[10] 1 ವತ್ಸರ=2 ಅಯನಗಳು.

[11] ನಾಲ್ಕು ಯುಗಗಳು: ಕೃತ, ತ್ರೇತಾ, ದ್ವಾಪರ ಮತ್ತು ಕಲಿ.

[12] ಪ್ರಥಮಾನ್ಮುಖಾತ್ ಎನ್ನುವುದಕ್ಕೆ ಬ್ರಹ್ಮನ ಪೂರ್ವದಿಕ್ಕಿನ ಮುಖ ಎಂದೂ ಅನುವಾದಿಸಿದ್ದಾರೆ.

[13] ಛಂದಸ್ಸು ಎಂದರೆ ಋಕ್ಕಿನ ಛಂದೋವಿನ್ಯಾಸ, ಅಂದರೆ ಅದರ ಓಟ, ಲಯ, ಅಕ್ಷರಸಂಖ್ಯೆಯ ಕ್ರಮಬದ್ಧ ವಿನ್ಯಾಸ. ಸಾಧಾರಣವಾಗಿ ಹೇಳುವುದಾದರೆ ಛಂದಸ್ಸು ಎಂದರೆ ಪದ್ಯದ ಲಯ ಅಥವಾ ಛಂದೋಮಾಪನ (metrical pattern or rhythm). ಛಾದನ ಎಂಬ ಧಾತುವಿನಿಂದ ಛಂದಸ್ಸು ಎಂಬ ಪದವು ಬಂದಿದೆ. ಆವರಣ ಅಥವಾ ಸುಂದರವಾದ ವಿನ್ಯಾಸ ಎಂದರ್ಥ. ಋಕ್ಕಿನ ಛಂದಸ್ಸು ಅದರ ಸೌಂದರ್ಯವನ್ನು ಆವರಿಸುತ್ತದೆ. ಆದ್ದರಿಂದ ಅದು ಛಂದಸ್ಸು ಎನ್ನುತ್ತಾರೆ. ಋಕ್ಕುಗಳು ಅಥವಾ ವೇದಮಂತ್ರಗಳು ಎಲ್ಲವೂ ಒಂದೊಂದು ಛಂದಸ್ಸಿನಲ್ಲಿ (metre) ರಚಿಸಲ್ಪಟ್ಟಿವೆ. ಋಗ್ವೇದದ ಮಂತ್ರಗಳು ಬಹುತೇಕ ಗಾಯತ್ರಿ, ತ್ರಿಷ್ಟುಪ್, ಜಗತಿ ಇತ್ಯಾದಿ ಛಂದಸ್ಸಿನಲ್ಲಿವೆ. ಯಜುರ್ವೇದದಲ್ಲಿ ಕೆಲವು ಮಿಶ್ರಛಂದಸ್ಸುಗಳಿವೆ. ಸಾಮವೇದದಲ್ಲಿ ಗಾನಕ್ಕೆ ಹೊಂದುವ ಛಂದಸ್ಸುಗಳಿವೆ. ವೇದಗಳಲ್ಲಿ ಅನೇಕ ಛಂದಸ್ಸುಗಳಿವೆ. ಅವುಗಳಲ್ಲಿ ಮುಖ್ಯವಾಗಿ ಋಗ್ವೇದದಲ್ಲಿ ಉಲ್ಲೇಖವಾಗಿರುವ ಏಳು ಪ್ರಮುಖ ಛಂದಸ್ಸುಗಳು ವೇದಾಧ್ಯಯನದ ಆಧಾರವಾಗಿವೆ.

ಛಂದಸ್ಸಿನ ಹೆಸರು ಪ್ರತಿ ಪಾದದ ಅಕ್ಷರಸಂಖ್ಯೆ ಒಟ್ಟು ಅಕ್ಷರಗಳು ವೇದದ ಉದಾಹರಣೆ
ಗಾಯತ್ರಿ 8 24 ಅಗ್ನಿಮೀಳೇ ಪುರೋಹಿತಮ್... (ಋಗ್ವೇದ 1.1.1)
ಉಷ್ಣಿಕ್ 8,8,12 28 ಇಂದ್ರಂ ವೋ ವೀರಂ ಹವಾಮಹೇ...
ಅನುಷ್ಟುಪ್ 8,8,8,8 32 ಪುರಾಣ ಇತಿಹಾಸಗಳಲ್ಲಿ ಸಾಮಾನ್ಯವಾಗಿ ಇರುವ ಶ್ಲೋಕಗಳು
ಬೃಹತೀ 8,8,12,8 36 ಇಂದ್ರಂ ಮದೇಶೂ...
ಪಂಕ್ತಿ 8,8,8,8,8 40 ಅಗ್ನಯೇ ಸ್ವಾಹಾ...
ತ್ರಿಷ್ಟುಪ್ 11 44 ಇಂದ್ರಂ ವೃತ್ರಹರಣಂ ವಜ್ರಿಣಂ...
ಜಗತೀ 12 48 ಅಗ್ನಿರ್ಮೂರ್ಧಾ ದಿವಃ ಕಕುದ್

ಇವೂ ಅಲ್ಲದೇ ವೇದ, ಪುರಾಣ, ಇತಿಹಾಸಗಳಲ್ಲಿ ಇನ್ನೂ ಹಲವು ವಿಶೇಷ ಛಂದಸ್ಸುಗಳಿವೆ. ಉದಾಹರಣೆಗೆ ಹೆಚ್ಚು ಅಕ್ಷರಗಳಿರುವ ಅತಿಜಗತೀ, ಅತಿಶಕ್ವರೀ, ಮೊದಲಾದವುಗಳು; ವಿಭಿನ್ನ ಗಾನ ಅಥವಾ ಪ್ರಯೋಗಶೈಲಿಗಳಿರುವ ಮಹಾತಿ, ದ್ವಿಪದಾ, ಆರ್ಷ, ರಥಂತರೀ, ಪವಮಾನೀ ಮೊದಲಾದವು. ಛಂದಸ್ಸುಗಳು ದೇವತೆಗಳ ರೂಪಕ ಎಂದು ವೇದಗಳು ಹೇಳುತ್ತವೆ. ಉದಾಹರಣೆಗೆ, ಛಂದೋಭ್ಯೋ ಹ ವ್ಯಾಹೃತಯಃ । ವ್ಯಾಹೃತಿಭ್ಯೋ ಲೋಕಾಃ । ಅರ್ಥಾತ್: ಛಂದಸ್ಸಿನಿಂದಲೇ ಬ್ರಹ್ಮಾಂಡದ ವ್ಯವಹಾರವು ಉಂಟಾಗಿದೆ.

[14] ಸ್ತೋಮವು ವೇದಯಜ್ಞಗಳಲ್ಲಿ, ವಿಶೇಷವಾಗಿ ಸೋಮಯಾಗಗಳಲ್ಲಿ, ಸ್ತೋತ್ರಗಳ ವಿನ್ಯಾಸ (pattern)  ಅಥವಾ ಗಾನಪದ್ಧತಿ ಅಥವಾ ಹಾಡಿನ ವಿನ್ಯಾಸ. ಸೋಮಯಾಗದಲ್ಲಿ ಋಗ್ವೇದ ಮಂತ್ರಗಳನ್ನು ಸ್ತೋತ್ರವಾಗಿ ಪಠಿಸಲ್ಪಡುತ್ತವೆ. ಅವುಗಳನ್ನು ಸಾಮಗಾನ ರೂಪದಲ್ಲಿ ಹಾಡಲಾಗುತ್ತದೆ. ಈ ಗಾಯನದ ವಿಧಾನಗಳನ್ನು ಸ್ತೋಮಗಳು ಎನ್ನುತ್ತಾರೆ. ಅತ್ಸ್ಯವ ಸ್ತೋಮವು ಸಾಮಗಾನದ ಒಂದು ನಿರ್ದಿಷ್ಟ ವಿಧವಾದ ಸ್ತುತಿ ಕ್ರಮವು. ಕೆಲವೊಂದು ವ್ಯಾಖ್ಯಾನಗಳಲ್ಲಿ “ಅತ್ಸ್ಯವ” ಎಂಬ ಪದವು “ಅತಿ-ಶ್ರುತಿ-ಸಾಮ” ಅಥವಾ “ಅತಿ-ಸ್ವರ-ಗಾನ” ಎಂಬ ಅರ್ಥದಲ್ಲಿಯೂ ವಿವರಿಸಲಾಗುತ್ತದೆ — ಅಂದರೆ ಗಾನದ ವಿಶಿಷ್ಟ ಉಚ್ಚಾರ / ಉನ್ನತಸ್ವರ ವಿಧಾನ. ವೇದಗಳಲ್ಲಿ ಅನೇಕ ಸ್ತೋಮಗಳು ಉಲ್ಲೇಖವಾಗಿವೆ. ಉದಾಹರಣೆಗೆ: (1) ಏಕವಿಂಶ ಸ್ತೋಮ – 21 ಸ್ತೋತ್ರಗಳಿರುವುದು (2) ತ್ರಿವಿಂಶಸ್ತೋಮ – 33 ಸ್ತೋತ್ರಗಳಿರುವವು (3) ಪಂಚದಶಸ್ತೋಮ – 15 ಸ್ತೋತ್ರಗಳಿರುವವು (4) ಸಪ್ತದಶಸ್ತೋಮ – 17 ಸ್ತೋತ್ರಗಳಿರುವವು (5) ಚತುರ್ವಿಂಶ ಸ್ತೋಮ – 24 ಸ್ತೋತ್ರಗಳಿರುವವು (6) ಶೋಧಶಿ ಸ್ತೋಮ (7)  ಏಕತ್ರಿಂಶಸ್ತೋಮ – 31 ಸ್ತೋತ್ರಗಳಿರುವವು. ಪ್ರತಿ ಸ್ತೋಮದಲ್ಲಿ ನಿರ್ದಿಷ್ಟ ಸಂಖ್ಯೆ ಅಥವಾ ಕ್ರಮದ ಸ್ತೋತ್ರಗಳು (chants) ಇರುತ್ತವೆ. ಪ್ರತಿ ಯಜ್ಞದಲ್ಲಿ ಯಾವ ಸ್ತೋಮವನ್ನು ಉಪಯೋಗಿಸಬೇಕು ಎನ್ನುವುದನ್ನು ಶ್ರೌತಸೂತ್ರಗಳು ನಿಯಮಿಸುತ್ತವೆ. ಸಂಗೀತದಲ್ಲಿ ರಾಗವು ಹೇಗೆ ಭಿನ್ನವಾಗಿದೆಯೋ ಹಾಗೆ ಯಜ್ಞಗಳಲ್ಲಿ ಸ್ತೋಮಗಳು ವಿಭಿನ್ನ ಸ್ತೋತ್ರಗಾನಶೈಲಿಗಳನ್ನು ಹೊಂದಿವೆ.

[15] ಸಾಮ ಎಂದರೆ ಗಾನರೂಪದ ಋಕ್ ಅಥವಾ ಮಂತ್ರ. ಅಂದರೆ ಹಾಡಿನ ಶೈಲಿಯಲ್ಲಿ ಉಚ್ಚರಿಸುವ ಸ್ತೋತ್ರ. ಇದು ಸಂಗಾನಂ ಎಂಬ ಮೂಲದಿಂದ ಬಂದಿದ್ದು, ಅರ್ಥ “ಸುಮಧುರವಾಗಿ ಹಾಡುವುದು”. ಋಗ್ವೇದಗಳಲ್ಲಿನ ಋಕ್ಕುಗಳನ್ನೇ ಸಾಮವೇದದಲ್ಲಿ ಗಾನರೂಪದಲ್ಲಿ ಪರಿವರ್ತಿಸಿ ಬಳಸಲಾಗುತ್ತದೆ. ಸಾಮಗರು (ಸಾಮವೇದದ ಪಂಡಿತರು) ಯಜ್ಞದಲ್ಲಿ ಸ್ತೋತ್ರಗಾನ ಮಾಡುತ್ತಾರೆ. ಉದಾಹರಣೆಗೆ: ಸಾಮಗಾನದಲ್ಲಿ “ಓಂ ಅಗ್ನಾಯೇ ಸ್ವಾಹಾ” ಎಂಬ ಋಕ್ಕನ್ನು ಸಂಗೀತಮಯವಾಗಿ “ಓಂಮಾ ಅಘ್ನಾಯೇಯೇ ಸ್ವಾಹಾ” ಎಂದು ಗಾನರೂಪದಲ್ಲಿ ಉಚ್ಚರಿಸುತ್ತಾರೆ. ವೇದಗಳಲ್ಲಿ ಕೆಲವು ಪ್ರಮುಖ ಸಾಮಗಳು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿವೆ. ಅವುಗಳಲ್ಲಿ ಕೆಲವುಗಳ ಹೆಸರು ಮತ್ತು ಅರ್ಥ/ದೇವತೆಗಳು ಹೀಗಿವೆ: (1) ರಥಂತರ ಸಾಮ – ಸೂರ್ಯ/ಪ್ರಜಾಪತಿ – ಪ್ರಾಣಸ್ವರೂಪ (2) ಬೃಹತ್ ಸಾಮ – ಇಂದ್ರ/ವಿಶ್ವದ ವ್ಯಾಪಕತೆಯ ಪ್ರತೀಕ (3) ವಾಮದೇವ್ಯ ಸಾಮ – ವಾಮದೇವ ಋಷಿಯು ಪಠಿಸಿದ ಸಾಮ (4) ಆರ್ಯ ಸಾಮ – ಆರ್ಯ ಋಷಿಗಳಿಂದ ಪ್ರಸಿದ್ಧವಾದ ಸಾಮ (5) ದೇವರಥ ಸಾಮ – ದೇವತೆಯ ಸ್ತುತಿಗಾನ (6) ವೈರೂಪ ಸಾಮ (7) ವೈಶ್ವದೇವ ಸಾಮ (8) ಅಘಮರ್ಷಣ ಸಾಮ, ಮೊದಲಾದವುಗಳು. “ಬೃಹತ್” ಎಂದರೆ “ಮಹತ್ತರ, ವಿಶಾಲ”. “ಸಾಮ” ಎಂದರೆ “ಗಾನ” ಅಥವಾ “ಸ್ತುತಿ”. ಆದ್ದರಿಂದ ಬೃಹತ್ ಸಾಮ ಎಂದರೆ “ಮಹೋನ್ನತ ಸಾಮಗಾನ” — ಅತ್ಯಂತ ಉನ್ನತ ಶ್ರೇಣಿಯ ವೇದಗಾನ. ಬೃಹತ್ ಸಾಮವು ಸಾಮವೇದದ ಉದ್ಗೀತ ಭಾಗಕ್ಕೆ ಸೇರಿದೆ ಮತ್ತು ಸಾಮಾನ್ಯವಾಗಿ ರಥಂತರ ಸಾಮದ ಜೊತೆಯಲ್ಲಿ ಉಲ್ಲೇಖಿತವಾಗುತ್ತದೆ. ಈ ಎರಡನ್ನೂ “ಸಾಮಗಳ ಜೋಡಿ” ಎಂದು ಪರಿಗಣಿಸುತ್ತಾರೆ.

[16] ಅಗ್ನಿಷ್ಟೋಮ ಯಾಗವು ಏಳು ವಿಧದ ಸೋಮಯಾಗಗಳ ಮೂಲಯಾಗ. ಅಂದರೆ ಇತರ ಸೋಮಯಾಗಗಳೆಲ್ಲವೂ ಇದರ ಆಧಾರದಿಂದಲೇ ರೂಪಗೊಂಡಿವೆ. ಅಗ್ನಿ ಎಂದರೆ ಅಗ್ನಿ ದೇವತೆ. ಷ್ಟೋಮ ಎಂದರೆ ಸ್ತುತಿ ಅಥವಾ ಸ್ತೋತ್ರಗಾನ (ಗಾನರೂಪದ ಸ್ತುತಿ). ಹೀಗಾಗಿ ಅಗ್ನಿಷ್ಟೋಮ ಎಂದರೆ ಅಗ್ನಿದೇವನಿಗೆ ಸ್ತುತಿಗಾನಮಾಡುವ ಯಜ್ಞ ಅಥವಾ ಅಗ್ನಿಯ ಸ್ತುತಿಯೊಂದಿಗೆ ನಡೆಯುವ ಸೋಮಯಾಗ. ಅಗ್ನಿಷ್ಟೋಮವು ಒಂದು ಸೋಮಯಾಗ. ಸೋಮಯಾಗ ಎಂದರೆ ಸೋಮಲತೆಯಿಂದ ಪಡೆದ ಸೋಮರಸವನ್ನು ದೇವತೆಗಳಿಗೆ ಅರ್ಪಿಸುವ ಯಜ್ಞ. ಏಳು ವಿಧದ ಸೋಮಯಾಗಳು: (1) ಅಗ್ನಿಷ್ಟೋಮ (2) ಅತ್ಯಗ್ನಿಷ್ಟೋಮ (3) ಉಕ್ಥ್ಯ (4) ಶೋದಶೀ (5) ವಾಜಪೇಯ (6) ಅತಿರಾತ್ರ (7) ಅಪ್ತೋರ್ಯಾಮ. ಈ ಎಲ್ಲ ಸೋಮಯಾಗಗಳಲ್ಲಿ ಅಗ್ನಿಷ್ಟೋಮವು ಪ್ರಥಮ ಮತ್ತು ಮೂಲರೂಪ. ಇದಕ್ಕಿಂತಲೂ ದೊಡ್ಡದಾಗಿರುವ ಉಕ್ಥ್ಯ, ಶೋದಶೀ, ವಾಜಪೇಯೀ, ಅತಿರಾತ್ರ ಮೊದಲಾದ ಎಲ್ಲವೂ ಅಗ್ನಿಷ್ಟೋಮದ ವಿಸ್ತಾರರೂಪಗಳೇ. ವೇದಸಾರದಲ್ಲಿ ಅಗ್ನಿಷ್ಟೋಮಯಾಗವನ್ನು ಜೀವನದ ಪರಿವರ್ತನೆಯ ಯಜ್ಞ ಎಂದು ಹೇಳುತ್ತಾರೆ. ಇದು ಮನಸ್ಸು, ಪ್ರಾಣ, ವಚನ, ಕ್ರಿಯೆ, ಜ್ಞಾನ ಇವುಗಳನ್ನು ದೇವತ್ವದತ್ತ ಏರಿಸುವ ಒಂದು ಉಪಚಾರ. ಬ್ರಹ್ಮಸೂತ್ರ ಮತ್ತು ಉಪನಿಷತ್ತುಗಳು ಹೇಳುವಂತೆ ಅಗ್ನಿಷ್ಟೋಮೇನ ಸ್ವರ್ಗಕಾಮೋ ಯಜೇತ । ಅರ್ಥಾತ್: ಸ್ವರ್ಗಕಾಮಿಯು ಅಗ್ನಿಷ್ಟೋಮದಿಂದ ಯಜ್ಞಮಾಡಲಿ.

[17] ಉಕ್ಥ್ಯ ಎಂಬ ಪದವು ಉಕ್ತ (ಉಚ್ಚರಿಸು, ಪಠಿಸು) ಎಂಬ ಧಾತುವಿನಿಂದ ಬಂದಿದೆ. ಏಳು ವಿಧದ ಸೋಮಯಾಗಗಳಲ್ಲಿ ಉಕ್ಥ್ಯ ಎನ್ನುವ ಯಾಗವು ಮೂರನೆಯದು. ಅಗ್ನಿಷ್ಟೋಮಯಾಗದಂತೆಯೇ ಇರುವ ಉಕ್ಥ್ಯ ಯಾಗದಲ್ಲಿ ಮೂರು ಉಕ್ತಿಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ. ಉಕ್ಥ್ಯ ಯಾಗವು ಸಾಮಾನ್ಯವಾಗಿ ದೇವತಾಪ್ರೀತ್ಯರ್ಥಂ, ಸ್ವರ್ಗಲಾಭ ಅಥವಾ ಪುಣ್ಯವರ್ಧನೆಗಾಗಿ ಮಾಡಲಾಗುತ್ತದೆ.

Leave a Reply

Your email address will not be published. Required fields are marked *