ಶ್ರೀ ಕೂರ್ಮಪುರಾಣ: ಅಧ್ಯಾಯ 6 - ಪೃಥಿವ್ಯುದ್ಧಾರಃ
ಕೂರ್ಮ ಉವಾಚ । ಆಸೀದೇಕಾರ್ಣವಂ ಘೋರಮವಿಭಾಗಂ ತಮೋಮಯಮ್ । ಶಾಂತವಾತಾದಿಕಂ ಸರ್ವಂ ನ ಪ್ರಜ್ಞಾಯತ ಕಿಂಚನ ।। 1 ।। ಏಕಾರ್ಣವೇ ತದಾ ತಸ್ಮಿನ್ನಷ್ಟೇ ಸ್ಥಾವರಜಂಗಮೇ । ತದಾ ಸಮಭವದ್ಬ್ರಹ್ಮಾ ಸಹಸ್ತ್ರಾಕ್ಷಃ ಸಹಸ್ತ್ರಪಾತ್ ।। 2 ।। ಸಹಸ್ತ್ರಶೀರ್ಷಾ ಪುರುಷೋ ರುಕ್ಮವರ್ಣೋ ಹ್ಯತೀಂದ್ರಿಯಃ । ಬ್ರಹ್ಮಾನಾರಾಯಣಾಖ್ಯಸ್ತು ಸುಷ್ವಾಪ ಸಲಿಲೇ ತದಾ ।। 3 ।। ಇಮಂ ಚೋದಾಹರಂತ್ಯತ್ರ ಶ್ಲೋಕಂ ನಾರಾಯಣಂ ಪ್ರತಿ । ಬ್ರಹ್ಮಸ್ವರೂಪಿಣಂ ದೇವಂ ಜಗತಃ ಪ್ರಭವಾಪ್ಯಯಮ್ ।। 4 ।। ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ । ಅಯನಂ ತಸ್ಯ ತಾ ಯಸ್ಮಾತ್ತೇನ ನಾರಾಯಣಃ ಸ್ಮೃತಃ ।। 5 ।। ತುಲ್ಯಂ ಯುಗಸಹಸ್ರಸ್ಯ ನೈಶಂ ಕಾಲಮುಪಾಸ್ಯ ಸಃ । ಶರ್ವರ್ಯಂತೇ ಪ್ರಕುರುತೇ ಬ್ರಹ್ಮತ್ವಂ ಸರ್ಗಕಾರಣಾತ್ ।। 6 ।।
ಕೂರ್ಮನು ಹೇಳಿದನು: “ಆಗ ಏನೂ ತೋರದೇ, ಘೋರವೂ, ಅವಿಭಾಗವೂ, ತಮೋಮಯವೂ, ಮತ್ತು ಶಾಂತವಾದ ಗಾಳಿಬೀಸುತ್ತಿದ್ದ ಏಕಾರ್ಣವವಿತ್ತು. ಸ್ಥಾವರ-ಜಂಗಮಗಳೆಲ್ಲವೂ ಆ ಏಕಾರ್ಣವದಲ್ಲಿ ನಷ್ಟವಾಗಿದ್ದವು. ಆಗ ಸಹಸ್ರನೇತ್ರ ಸಹಸ್ರಪಾದಗಳ ಬ್ರಹ್ಮನು ಆವಿರ್ಭವಿಸಿದನು. ಸಹಸ್ರ ಶಿರಗಳಿಂದ ಕೂಡಿದ, ಸುವರ್ಣದ ಬಣ್ಣವಿದ್ದ ಮತ್ತು ಅತೀಂದ್ರಿಯನಾಗಿದ್ದ ಪುರುಷಕಾರದ ನಾರಾಯಣನೆಂಬ ಹೆಸರಿನ ಬ್ರಹ್ಮನು ಆ ನೀರಿನಲ್ಲಿ ಮಲಗಿದನು. ಬ್ರಹ್ಮಸ್ವರೂಪಿಯಾದ, ಜಗತ್ತಿನ ಸೃಷ್ಟಿ-ಲಯಗಳಿಗೆ ಕಾರಣನಾದ ದೇವ ನಾರಾಯಣನ ಕುರಿತು ಈ ಶ್ಲೋಕವನ್ನು ಉದಾಹರಿಸುತ್ತಾರೆ: ಜಲವು ನಾರಾ ಎಂದು ಕರೆಯಲ್ಪಡುತ್ತದೆ. ಏಕೆಂದರೆ ಜಲವು ನರರೂಪಿಯಾದ ಪರಮಾತ್ಮನಿಂದ ಹುಟ್ಟಿದೆ. ಆ ನಾರವೆಂಬ ಜಲವು ಯಾರಿಗೆ ಅಯನ ಅಥವಾ ಹಾಸಿಗೆಯಾಗಿದೆಯೋ ಅವನು ನಾರಾಯಣನೆಂದು ಸ್ಮರಿಸಲ್ಪಟ್ಟಿದ್ದಾನೆ. ಅವನು ಸಹಸ್ರ ದೇವಯುಗಗಳಿಗೆ ಸಮಾನವಾದ ರಾತ್ರಿಯನ್ನು ಕಳೆದು, ರಾತ್ರಿಯು ಅಂತ್ಯವಾಗಲು ಸೃಷ್ಟಿಗೋಸ್ಕರವಾಗಿ ಬ್ರಹ್ಮತ್ವ ಕರ್ಮವನ್ನು ಕೈಗೊಳ್ಳುತ್ತಾನೆ.
ತತಸ್ತು ಸಲಿಲೇ ತಸ್ಮಿನ್ವಿಜ್ಞಾಯಾಂತರ್ಗತಾಂ ಮಹೀಮ್ । ಅನುಮಾನಾತ್ತದುದ್ಧಾರಂ ಕರ್ತುಕಾಮಃ ಪ್ರಜಾಪತಿಃ ।। 7 ।। ಜಲಕ್ರೀಡಾಸು ರುಚಿರಂ ವಾರಾಹಂ ರೂಪಮಾಸ್ಥಿತಃ । ಅಧೃಷ್ಯಂ ಮನಸಾಪ್ಯನ್ಯೈಃ ವಾಙ್ಮಯಂ ಬ್ರಹ್ಮಸಂಜ್ಞಿತಮ್ ।। 8 ।। ಪೃಥಿವ್ಯುದ್ಧರಣಾರ್ಥಾಯ ಪ್ರವಿಶ್ಯ ಚ ರಸಾತಲಮ್ । ದಂಷ್ಟ್ರಯಾಭ್ಯುಜ್ಜಹಾರೈನಾಮಾತ್ಮಾಧಾರೋ ಧರಾಧರಃ ।। 9 ।। ದೃಷ್ಟ್ವಾ ದಂಷ್ಟ್ರಾಗ್ರವಿನ್ಯಸ್ತಾಂ ಪೃಥಿವೀಂ ಪ್ರಥಿತಪೌರುಷಮ್ । ಅಸ್ತುವಂಜನಲೋಕಸ್ಥಾ ಸಿದ್ಧಾ ಬ್ರಹ್ಮರ್ಷಯೋ ಹರಿಮ್ ।। 10 ।।
ಪ್ರಜಾಪತಿಯು ಆಗ ಭೂಮಿಯು ಜಲರಾಶಿಯಲ್ಲಿ ಮುಳುಗಿಹೋಗಿರುವುದನ್ನು ಅನುಮಾನಿಸಿ ತಿಳಿದು ಆ ಭೂಮಿಯನ್ನು ಉದ್ಧರಿಸಲು ಇಚ್ಛಿಸಿದನು. ಅನ್ಯರು ಮನಸ್ಸಿನಲ್ಲಿ ಕೂಡ ಯೋಚಿಸಲಿಕ್ಕಾಗದ, ವಾಙ್ಮಯ ಬ್ರಹ್ಮರೂಪವಾದ, ಜಲಕ್ರೀಡೆಯಲ್ಲಿ ರುಚಿಯಿರುವ ವಾರಾಹ ರೂಪವನ್ನು ಅವನು ಧರಿಸಿದನು. ಧರಾಧರ ಆತ್ಮಾಧಾರನು ಪೃಥ್ವಿಯನ್ನು ಉದ್ಧರಿಸಲೋಸುಗ ರಸಾತಲವನ್ನು ಪ್ರವೇಶಿಸಿ ತನ್ನ ಕೋರೆದಾಡೆಗಳಿಂದ ಭೂಮಿಯನ್ನು ಮೇಲೆತ್ತಿದನು. ಕೋರೆದಾಡೆಗಳ ಮೇಲೆ ಇರಿಸಿಕೊಂಡಿದ್ದ ಪೃಥ್ವಿಯನ್ನು ನೋಡಿ ಜನಲೋಕದಲ್ಲಿದ್ದ ಸಿದ್ಧ ಬ್ರಹ್ಮರ್ಷಿಗಳು ಪ್ರಸಿದ್ಧ ಪೌರುಷನಾದ ಹರಿಯನ್ನು ಸ್ತುತಿಸಿದರು.
ಋಷಯ ಊಚುಃ । ನಮಸ್ತೇ ದೇವದೇವಾಯ ಬ್ರಹ್ಮಣೇ ಪರಮೇಷ್ಠಿನೇ । ಪುರುಷಾಯ ಪುರಾಣಾಯ ಶಾಶ್ವತಾಯ ಜಯಾಯ ಚ ।। 11 ।। ನಮಃ ಸ್ವಯಂಭುವೇ ತುಭ್ಯಂ ಸ್ರಷ್ಟ್ರೇ ಸರ್ವಾರ್ಥವೇದಿನೇ । ನಮೋ ಹಿರಣ್ಯಗರ್ಭಾಯ ವೇಧಸೇ ಪರಮಾತ್ಮನೇ ।। 12 ।।
ಋಷಿಗಳು ಹೇಳಿದರು: “ದೇವದೇವ, ಬ್ರಹ್ಮ, ಪರಮೇಷ್ಠಿ! ನಿನಗೆ ನಮಸ್ಕಾರವು. ಪುರುಷ, ಪುರಾಣ, ಶಾಶ್ವತ, ಮತ್ತು ಜಯನಿಗೆ ನಮಸ್ಕಾರ. ಸ್ವಯಂಭುವೇ! ಸೃಷ್ಟಿಕರ್ತ! ಸರ್ವಾರ್ಥಗಳನ್ನು ತಿಳಿದಿರುವವನೇ! ನಿನಗೆ ನಮಸ್ಕಾರ! ಹಿರಣ್ಯಗರ್ಭನಿಗೆ, ವೇಧಸಿಗೆ[1], ಪರಮಾತ್ಮನಿಗೆ ನಮಸ್ಕಾರ. ವಾಸುದೇವನಿಗೆ, ವಿಷ್ಣುವಿಗೆ, ವಿಶ್ವಯೋನಿಗೆ, ನಾರಾಯಣನಿಗೆ, ದೇವನಿಗೆ, ದೇವತೆಗಳ ಹಿತಕಾರಣಿಗೆ ನಮಸ್ಕಾರ!
ನಮಸ್ತೇ ವಾಸುದೇವಾಯ ವಿಷ್ಣವೇ ವಿಶ್ವಯೋನಯೇ । ನಾರಾಯಣಾಯ ದೇವಾಯ ದೇವಾನಾಂ ಹಿತಕಾರಿಣೇ ।। 13 ।। ನಮೋಽಸ್ತು ತೇ ಚತುರ್ವಕ್ತ್ರ ಶಾರ್ಙ್ಗ್ರಚಕ್ರಾಸಿಧಾರಿಣೇ । ಸರ್ವಭೂತಾತ್ಮಭೂತಾಯ ಕೂಟಸ್ಥಾಯ ನಮೋ ನಮಃ ।। 14 ।। ನಮೋ ವೇದರಹಸ್ಯಾಯ ನಮಸ್ತೇ ವೇದಯೋನಯೇ । ನಮೋ ಬುದ್ಧಾಯ ಶುದ್ಧಾಯ ನಮಸ್ತೇ ಜ್ಞಾನರೂಪಿಣೇ ।। 15 ।। ನಮೋಽಸ್ತ್ವಾನಂದರೂಪಾಯ ಸಾಕ್ಷಿಣೇ ಜಗತಾಂ ನಮಃ । ಅನಂತಾಯಾಪ್ರಮೇಯಾಯ ಕಾರ್ಯಾಯ ಕಾರಣಾಯ ಚ ।। 16 ।।
ಚತುರ್ಮುಖ, ಶಾರ್ಙ್ಗ್ರ-ಚಕ್ರ-ಖಡ್ಗಧಾರಿಗೆ ನಮಸ್ಕಾರ. ಸರ್ವಭೂತಾತ್ಮಭೂತ, ಕೂಟಸ್ಥನಿಗೆ ನಮೋ ನಮಃ! ವೇದರಹಸ್ಯನಿಗೆ ನಮಸ್ಕಾರ! ವೇದಯೋನಿಗೆ ನಮಸ್ಕಾರ! ಬುದ್ಧ, ಶುದ್ಧ, ಜ್ಞಾನರೂಪಿಣಿಗೆ ನಮಸ್ಕಾರ! ಆನಂದರೂಪೀ, ಜಗತ್ತಿನ ಸಾಕ್ಷಿಗೆ ನಮಸ್ಕಾರ! ಅನಂತ, ಅಪ್ರಮೇಯ, ಕಾರ್ಯ-ಕಾರಣ ಸ್ವರೂಪನಿಗೆ ನಮಸ್ಕಾರ!
ನಮಸ್ತೇ ಪಂಚಭೂತಾಯ ಪಂಚಭೂತಾತ್ಮನೇ ನಮಃ । ನಮೋ ಮೂಲಪ್ರಕೃತಯೇ ಮಾಯಾರೂಪಾಯ ತೇ ನಮಃ ।। 17 ।। ನಮೋಽಸ್ತು ತೇ ವರಾಹಾಯ ನಮಸ್ತೇ ಮತ್ಸ್ಯರೂಪಿಣೇ । ನಮೋ ಯೋಗಾಧಿಗಮ್ಯಾಯ ನಮಃ ಸಂಕರ್ಷಣಾಯ ತೇ ।। 18 ।। ನಮಸ್ತ್ರಿಮೂರ್ತಯೇ ತುಭ್ಯಂ ತ್ರಿಧಾಮ್ನೇ ದಿವ್ಯತೇಜಸೇ । ನಮಃ ಸಿದ್ಧಾಯ ಪೂಜ್ಯಾಯ ಗುಣತ್ರಯವಿಭಾಗಿನೇ ।। 19 ।। ತಮೋಽಸ್ತ್ವಾದಿತ್ಯರೂಪಾಯ ನಮಸ್ತೇ ಪದ್ಮಯೋನಯೇ । ನಮೋಽಮೂರ್ತಾಯ ಮೂರ್ತಾಯ ಮಾಧವಾಯ ನಮೋ ನಮಃ ।। 20 ।। ತ್ವಯೈವ ಸೃಷ್ಟಮಖಿಲಂ ತ್ವಯ್ಯೇವ ಸಕಲಂ ಸ್ಥಿತಮ್ । ಪಾಲಯೈತಜ್ಜಗತ್ಸರ್ವಂ ತ್ರಾತಾ ತ್ವಂ ಶರಣಂ ಗತಿ ।। 21 ।।
ಪಂಚಭೂತಸ್ವರೂಪಿಗೆ ನಮಸ್ಕಾರ! ಪಂಚಭೂತಾತ್ಮನಿಗೆ ನಮಸ್ಕಾರ! ಮೂಲಪ್ರಕೃತಿಗೆ ನಮಸ್ಕಾರ! ಮಾಯಾರೂಪಿಯಾದ ನಿನಗೆ ನಮಸ್ಕಾರ! ವರಾಹರೂಪಿಗೆ ನಮಸ್ಕಾರ! ಮತ್ಸ್ಯರೂಪಿಗೆ ನಮಸ್ಕಾರ! ಯೋಗದಿಂದ ಮಾತ್ರ ತಿಳಿಯಬಲ್ಲವನಾದ ನಿನಗೆ ನಮಸ್ಕಾರ! ಸಂಕರ್ಷಣನಿಗೆ ನಮಸ್ಕಾರ! ಧಾಮತ್ರಯದಿಂದ ಮತ್ತು ದಿವ್ಯ ತೇಜಸ್ಸಿನಿಂದ ಕೂಡಿದ ತ್ರಿಮೂರ್ತಿಸ್ವರೂಪನಾದ ನಿನಗೆ ನಮಸ್ಕಾರವು! ಸಿದ್ಧನೂ, ಪೂಜ್ಯನೂ, ಗುಣತ್ರಯ ವಿಭಜನೆಯುಳ್ಳವನೂ ಆದ ನಿನಗೆ ನಮಸ್ಕಾರ! ಆದಿತ್ಯ ರೂಪನಿಗೆ ನಮಸ್ಕಾರ! ಪದ್ಮಯೋನಿಗೆ ನಮಸ್ಕಾರ! ಅಮೂರ್ತನೂ, ಮೂರ್ತನೂ ಆದವನಿಗೆ ನಮಸ್ಕಾರ! ಮಾಧವನಿಗೆ ನಮೋ ನಮಃ. ಅಖಿಲವೆಲ್ಲವೂ ನಿನ್ನಿಂದಲೇ ಸೃಷ್ಟಿಸಲ್ಪಟ್ಟಿದೆ. ಸಕಲವೂ ನಿನ್ನಲ್ಲಿಯೇ ನೆಲೆಸಿವೆ. ಈ ಜಗತ್ತೆಲ್ಲವನ್ನೂ ನೀನೇ ಪಾಲಿಸುತ್ತೀಯೆ. ನೀನೇ ತ್ರಾತಾರನು. ನೀನೇ ಶರಣಾಗತಿಯು.”
ಇತ್ಥಂ ಸ ಭಗವಾನ್ವಿಷ್ಣುಃ ಸನಕಾದ್ಯೈರಭಿಷ್ಟುತಃ । ಪ್ರಸಾದಮಕರೋತ್ತೇಷಾಂ ವರಾಹವಪುರೀಶ್ವರಃ ।। 22 ।। ತತಃ ಸ್ವಸ್ಥಾನಮಾನೀಯ ಪೃಥಿವೀಂ ಪೃಥಿವೀಧರಃ । ಮುಮೋಚ ರೂಪಂ ಮನಸಾ ಧಾರಯಿತ್ವಾ ಧರಾಧರಃ ।। 23 ।। ತಸ್ಯೋಪರಿ ಜಲೌಘಸ್ಯ ಮಹತೀ ನೌರಿವ ಸ್ಥಿತಾ । ವಿತತತ್ವಾಚ್ಚ ದೇಹಸ್ಯ ನ ಮಹೀ ಯಾತಿ ಸಂಪ್ಲವಮ್ ।। 24 ।। ಪೃಥಿವೀಂ ಸ ಸಮೀಕೃತ್ಯ ಪೃಥಿವ್ಯಾಂ ಸೋಽಚಿನೋದ್ಗಿರೀನ್ । ಪ್ರಾಕ್ಸರ್ಗದಗ್ಧಾನಖಿಲಾನ್ ತತಃ ಸರ್ಗೇಽದಧನ್ಮನಃ ।। 25 ।।
ಹೀಗೆ ಭಗವಾನ್ ವಿಷ್ಣುವನ್ನು ಸನಕಾದಿಗಳು ಸ್ತುತಿಸಲು, ವರಾಹರೂಪಧಾರೀ ಈಶ್ವರನು ಅವರ ಮೇಲೆ ಪ್ರಸನ್ನನಾದನು. ನಂತರ ಪೃಥಿವೀಧರನು ಪೃಥ್ವಿಯನ್ನು ಸ್ವಸ್ಥಾನಕ್ಕೆ ತಂದಿರಿಸಿ ತನ್ನ ವರಾಹರೂಪವನ್ನು ತೊರೆದನು. ಮನಸ್ಸಿನಲ್ಲಿಯೇ ಭೂಮಿಯನ್ನು ಧರಿಸಿಕೊಂಡ ಧರಾಧರನು, ಅದನ್ನು ಜಲರಾಶಿಯ ಮೇಲೆ ಮಹಾ ನೌಕೆಯಂತೆ ಇರಿಸಿದನು. ವಿಸ್ತಾರವಾದ ದೇಹವಿರುವುದರಿಂದ ಭೂಮಿಯು ಮುಳುಗುವುದಿಲ್ಲ. ನಂತರ ಪೃಥ್ವಿಯನ್ನು ಸಮತಟ್ಟನ್ನಾಗಿ ಮಾಡಿ, ಪೂರ್ವಸೃಷ್ಟಿಯಲ್ಲಿ ಸುಟ್ಟುಹೋಗಿದ್ದ ಸಕಲ ಗಿರಿಗಳನ್ನು ಸಂಗ್ರಹಿಸಿಟ್ಟು, ಸೃಷ್ಟಿಯ ಸಂಕಲ್ಪವನ್ನು ಮಾಡಿದನು.”
ಇತಿ ಶ್ರೀಕೂರ್ಮಪುರಾಣೇ ಷಷ್ಠೋಽಧ್ಯಾಯಃ ।।
ಇದು ಶ್ರೀಕೂರ್ಮಪುರಾಣದಲ್ಲಿ ಆರನೇ ಅಧ್ಯಾಯವು.
[1] ವೇಧಸೇ ಎಂಬ ಶಬ್ದಕ್ಕೆ ಅರಮನೆ ಪ್ರಕಾಶನದಲ್ಲಿ ಸರ್ವವನ್ನೂ ವಿಧಿಸುವವನು ಎಂಬ ಅರ್ಥಕೊಡುವ ಅನುವಾದವಿದೆ. “ವೇಧಸೇ” ಎಂಬ ಈ ಸಂಸ್ಕೃತ ಶಬ್ದವು “ವೇಧಸ್” ಎಂಬ ಪದದ ಸ್ಥಿತಿಪ್ರತ್ಯಯ ರೂಪ (ಚತುರ್ಥೀ/ಸಪ್ತಮೀ). ವೇಧಸ್ = ಸೃಷ್ಟಿಕರ್ತ, ವಿಧಾತೃ, ಬ್ರಹ್ಮಾ, ರಚನೆಗಾರ, ಸೃಷ್ಟಿಕಾರಕ, ಜ್ಞಾನಿ, ಪಂಡಿತ (ಕೆಲವು ಸಂದರ್ಭಗಳಲ್ಲಿ). “ವೇಧಸೇ” = ವೇಧಸಿಗೆ, ಸೃಷ್ಟಿಕರ್ತನಿಗೆ, ಬ್ರಹ್ಮನಿಗೆ ಎನ್ನುವ ದತ್ತಿವಿಭಕ್ತಿ ರೂಪ. ವಿಶೇಷವಾಗಿ ದೇವರಿಗೆ ಉದ್ದೇಶಿಸಿ ಮಾಡಿರುವ ಮಂತ್ರಗಳಲ್ಲಿ “ವೇಧಸೇ ನಮಃ” = ಸೃಷ್ಟಿಕರ್ತನಿಗೆ ನಮಸ್ಕಾರ. ಎಂದು ಬರುತ್ತದೆ.