ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 7
ಪರಾಶರ ಉವಾಚ । ತತೋಽಭಿಧ್ಯಾಯತಸ್ತಸ್ಯ ಜಜ್ಞಿರೇ ಮಾನಸಾಃ ಪ್ರಜಾಃ । ತಚ್ಛರೀರಸಮುತ್ಪನ್ನೈಃ ಕಾರ್ಯೈಸ್ತತ್ಕರಣೈಃ ಸಹ । ಕ್ಷೇತ್ರಜ್ಞಾಸ್ಸಮವರ್ತಂತ ಗಾತ್ರೇಭ್ಯಸ್ತಸ್ಯ ಧೀಮತಃ ।। 1 ।। ತೇ ಸರ್ವೇ ಸಮವರ್ತಂತ ಯೇ ಮಯಾ ಪ್ರಾಗುದೀರಿತಾಃ । ದೇವಾದ್ಯಾಃ ಸ್ಥಾವರಾಂತಾಶ್ಚ ತ್ರೈಗುಣ್ಯವಿಷಯೇ ಸ್ಥಿತಾಃ ।। 2 ।। ಏವಂ ಭೂತಾನಿ ಸೃಷ್ಟಾನಿ ಚರಾಣಿ ಸ್ಥಾವರಾಣಿ ಚ ।। 3 ।। ಯದಾಸ್ಯ ತಾಃ ಪ್ರಜಾಸ್ಸರ್ವಾ ನ ವ್ಯವರ್ಧಂತ ಧೀಮತಃ । ತದಾನ್ಯಾನ್ಮಾನಸಾನ್ಪುತ್ರಾನ್ಸದೃಶಾನಾತ್ಮನೋಽಸೃಜತ್ ।। 4 ।। ಭೃಗುಂ ಪುಲಸ್ತ್ಯಂ ಪುಲಹಂ ಕ್ರತುಮಂಗಿರಸಂ ತಥಾ । ಮರೀಚಿಂ ದಕ್ಷಮತ್ರಿಂ ಚ ವಸಿಷ್ಠಂ ಚೈವ ಮಾನಸಾನ್ ।। 5 ।। ನವ ಬ್ರಹ್ಮಾಣ ಇತ್ಯೇತೇ ಪುರಾಣೇ ನಿಶ್ಚಯಂ ಗತಾಃ ।। 6 ।। ಖ್ಯಾತಿಂ ಭೂತಿಂ ಚ ಸಂಭೂತಿಂ ಕ್ಷಮಾಂ ಪ್ರೀತಿಂ ತಥೈವ ಚ । ಸನ್ನತಿಂ ಚ ತಥೈವೋರ್ಜಾಮನಸೂಯಾಂ ತಥೈವ ಚ ।। 7 ।। ಪ್ರಸೂತಿಂ ಚ ತತಸ್ಸೃಷ್ಟ್ವಾ ದದೌ ತೇಷಾಂ ಮಹಾತ್ಮನಾಮ್ । ಪತ್ನ್ಯೋ ಭವಧ್ವಮಿತ್ಯುಕ್ತ್ವಾ ತೇಷಾಮೇವ ತು ದತ್ತವಾನ್ ।। 8 ।। ಸನಂದನಾದಯೋ ಯೇ ಚ ಪೂರ್ವಂ ಸೃಷ್ಟಾಸ್ತು ವೇಧಸಾ । ನ ತೇ ಲೋಕೇಷ್ವಸಜ್ಜಂತ ನಿರಪೇಕ್ಷಾಃ ಪ್ರಜಾಃ ಪ್ರತಿ ।। 9 ।। ಸರ್ವೇ ತೇಽಭ್ಯಾಗತಜ್ಞಾನಾಃ ವೀತರಾಗಾ ವಿಮತ್ಸರಾಃ । ತೇಷ್ವೇವಂ ನಿರಪೇಕ್ಷೇಷು ಲೋಕಸೃಷ್ಟೌ ಮಹಾತ್ಮನಃ ।। 10 ।।
ಪರಾಶರನು ಹೇಳಿದನು: “ಬ್ರಹ್ಮನ ಧ್ಯಾನದ ಫಲವಾಗಿ, ಅವನ ಮನಸ್ಸಿನಿಂದ ಮಾನಸ ಸೃಷ್ಟಿಗಳು (ಚೈತನ್ಯಜೀವಿಗಳು) ಹುಟ್ಟಿದವು. ಅವನ ದೇಹದಿಂದ ಉತ್ಪನ್ನವಾದ ಇಂದ್ರಿಯಗಳು ಹಾಗೂ ಅಂಗಗಳ ಸಹಿತವಾಗಿ, ಚೈತನ್ಯರೂಪದ ಕ್ಷೇತ್ರಜ್ಞರು (ಜೀವಾತ್ಮರು) ಅವನ ಅಂಗಗಳಿಂದ ಪ್ರಕಟವಾದರು. ನಾನು ಮೊದಲೇ ಹೇಳಿದಂತೆ ದೇವಾದಿ ಸ್ಥಾವರಾದಿ ಈ ಎಲ್ಲ ಸೃಷ್ಟಿಗಳೂ ತ್ರಿಗುಣಾತ್ಮಿಕ ವಿಷಯಗಳಲ್ಲಿ ನೆಲೆಸಿ ವರ್ತಿಸುತ್ತಿದ್ದವು. ಅವನಿಂದ ಹುಟ್ಟಿದ ಈ ಎಲ್ಲ ಪ್ರಜೆಗಳೂ – ಸ್ಥಾವರ-ಚರ ಭೂತಗಳೂ, ವೃದ್ಧಿಹೊಂದಲಿಲ್ಲ. ಇದನ್ನು ನೋಡಿ ಅವನು ತನಗೆ ಸಮಾನರಾದ ಅನ್ಯ ಮಾನಸ ಪುತ್ರರನ್ನು ಸೃಷ್ಟಿಸಿದನು: ಭೃಗು, ಪುಲಸ್ತ್ಯ, ಪುಲಹ, ಕ್ರತು, ಅಂಗಿರಸ, ಮರೀಚಿ, ದಕ್ಷ, ಅತ್ರಿ, ಮತ್ತು ವಸಿಷ್ಠ. ಈ ಮಾನಸಪುತ್ರರು ಪುರಾಣಗಳಲ್ಲಿ ನವಬ್ರಹ್ಮರು ಎಂದು ಪ್ರಖ್ಯಾತರಾಗಿದ್ದಾರೆ. ಖ್ಯಾತಿ, ಭೂತಿ, ಸಂಭೂತಿ, ಕ್ಷಮಾ, ಪ್ರೀತಿ, ಸನ್ನತಿ, ಊರ್ಜಾ, ಅನಸೂಯ ಮತ್ತು ಪ್ರಸೂತಿ ಎಂಬ ಒಂಬತ್ತು ಸ್ತ್ರೀಯರನ್ನು ಸೃಷ್ಟಿಸಿ ಬ್ರಹ್ಮನು ಕ್ರಮವಾಗಿ ನೀವು ನವಬ್ರಹ್ಮರ ಪತ್ನಿಯಾಗಿರಿ ಎಂದು ಹೇಳಿ ಅವರಿಗೆ ಕೊಟ್ಟನು. ಬ್ರಹ್ಮನು ಮೊದಲೇ ಸೃಷ್ಟಿಸಿದ್ದ ಸನಂದಾದಿಗಳು ಪ್ರಜೆಗಳನ್ನು ಅಪೇಕ್ಷಿಸದೇ ಲೋಕದಲ್ಲಿ ಮಕ್ಕಳನ್ನು ಸೃಷ್ಟಿಸಲಿಲ್ಲ. ಅವರೆಲ್ಲರಿಗೂ ಹುಟ್ಟಿನೊಡನೆಯೇ ಜ್ಞಾನೋದಯವಾಯಿತು. ವೀತರಾಗರಾಗಿ, ವಿಮತ್ಸರಾಗಿದ್ದ ಆ ಮಹಾತ್ಮರು ಲೋಕಸೃಷ್ಟಿಯಲ್ಲಿ ಅನಾಸಕ್ತರಾದರು.
ಬ್ರಹ್ಮಣೋಽಭೂನ್ಮಹಾನ್ಕ್ರೋಧಸ್ತ್ರೈಲೋಕ್ಯದಹನಕ್ಷಮಃ । ತಸ್ಯ ಕ್ರೋಧಸಮುದ್ಭೂತ ಜ್ವಾಲಾಮಾಲಾವಿದೀಪಿತಮ್ । ಬ್ರಹ್ಮಣೋಭೂತ್ತದಾ ಸರ್ವಂ ತ್ರೈಲೋಕ್ಯಮಖಿಲಂ ಮುನೇ ।। 11 ।। ಭ್ರುಕುಟೀಕುಟಿಲಾತ್ತಸ್ಯ ಲಲಾಟಾತ್ಕ್ರೋಧದೀಪಿತಾತ್ । ಸಮುತ್ಪನ್ನಸ್ತದಾ ರುದ್ರೋ ಮಧ್ಯಾಹ್ನಾರ್ಕಸಮಪ್ರಭಃ ।। 12 ।। ಅರ್ಧನಾರೀನರವಪುಃ ಪ್ರಚಂಡೋತಿಶರೀರವಾನ್ । ವಿಭಜಾತ್ಮಾನಮಿತ್ಯುಕ್ತ್ವಾ ತಂ ಬ್ರಹ್ಮಾಂತರ್ದಧೇ ತತಃ ।। 13 ।। ತಥೋಕ್ತೋಽಸೌ ದ್ವಿಧಾ ಸ್ತ್ರೀತ್ವಂ ಪುರುಷತ್ವಂ ತಥಾಕರೋತ್ । ಬಿಭೇದ ಪುರುಷತ್ವಂ ಚ ದಶಧಾ ಚೈಕಧಾ ಚ ಸಃ ।। 14 ।। ಸೌಮ್ಯಾಸೌಮ್ಯೈಸ್ತಥಾ ಶಾಂತಾಶಾಂತೈಃ ಸ್ತ್ರೀತ್ವಂ ಚ ಸ ಪ್ರಭುಃ । ಬಿಭೇದ ಬಹುಧಾ ದೇವಸ್ಸ್ವರೂಪೈರಸಿತೈಃ ಸಿತೈಃ ।। 15 ।।
ಅದನ್ನು ನೋಡಿ ಬ್ರಹ್ಮನಿಗೆ ಮೂರುಲೋಕಗಳನ್ನು ಸುಡುವ ಸಾಮರ್ಥ್ಯವಿದ್ದ ಮಹಾಕ್ರೋಧವುಂಟಾಯಿತು. ಬ್ರಹ್ಮನ ಕೋಪದಿಂದ ಹುಟ್ಟಿದ ಬೆಂಕಿಯ ಜ್ವಾಲಾಮಾಲೆಯು ಮೂರು ಲೋಕಗಳನ್ನು ಸುಟ್ಟುಬಿಟ್ಟಿತು. ಕೋಪದಿಂದ ಹುಬ್ಬು ಗಂಟುಕಟ್ಟಿದ್ದ ಬ್ರಹ್ಮನ ಹಣೆಯಿಂದ ಮಧ್ಯಾಹ್ನದ ಸೂರ್ಯನಂತೆ ಜ್ವಲಿಸುತ್ತಿದ್ದ, ಅರ್ಧ ಶರೀರವು ನಾರಿ ಮತ್ತು ಇನ್ನು ಅರ್ಧ ಶರೀರವು ನರನಾಗಿದ್ದ, ಅತಿ ದೊಡ್ಡ ಕಾಯದ ಪ್ರಚಂಡ ರುದ್ರನು ಉತ್ಪನ್ನನಾದನು. “ನಿನ್ನನ್ನು ನೀನೇ ವಿಭಜನೆ ಮಾಡಿಕೋ!” ಎಂದು ಹೇಳಿ ಬ್ರಹ್ಮನು ಅಂತರ್ಧಾನನಾದನು. ಹೀಗೆ ಹೇಳಲು ಅವನು ತನ್ನನ್ನು ಸ್ತ್ರೀ-ಪುರುಷರೆಂದು ಎರಡು ಭಾಗವನ್ನಾಗಿ ಮಾಡಿಕೊಂಡನು. ನಂತರ ಅವನು ಪುರುಷತ್ವವನ್ನು ಇನ್ನೂ ಹನ್ನೊಂದು ಭಾಗಗಳನ್ನಾಗಿ ಮಾಡಿಕೊಂಡನು. ಮತ್ತು ಆ ಪ್ರಭುವು ಶಾಂತವಾಗಿದ್ದ ಸ್ತ್ರೀಶರೀರವನ್ನು ಕಪ್ಪು-ಬಿಳಿಪು ಮೊದಲಾದ ನಾನಾ ಬಣ್ಣಗಳಿರುವ ಸೌಮ್ಯ-ಕ್ರೂರ ಮೊದಲಾದ ಅನೇಕ ರೂಪಗಳನ್ನಾಗಿ ವಿಭಜಿಸಿದನು.
ತತೋ ಬ್ರಹ್ಮಾತ್ಮಸಂಭೂತಂ ಪೂರ್ವಂ ಸ್ವಾಯಂಭುವಂ ಪ್ರಭುಮ್ । ಆತ್ಮಾನಮೇವ ಕೃತವಾನ್ ಪ್ರಾಜಾಪತ್ಯೇ ಮನುಂ ದ್ವಿಜ ।। 16 ।। ಶತರೂಪಾಂ ಚ ತಾಂ ನಾರೀಂ ತಪೋನಿರ್ಧೂತಕಲ್ಮಷಾಮ್ । ಸ್ವಾಯಂಭುವೋ ಮನುರ್ದೇವಃ ಪತ್ನೀತ್ವೇ ಜಗೃಹೇ ವಿಭುಃ ।। 17 ।। ತಸ್ಮಾಚ್ಚ ಪುರುಷಾದ್ದೇವೀ ಶತರೂಪಾ ವ್ಯಜಾಯತ । ಪ್ರಿಯವ್ರತೋತ್ತಾನಪಾದೌ ಪ್ರಸೂತ್ಯಾಕೂತಿಸಂಜ್ಞಿತಮ್ ।। 18 ।। ಕನ್ಯಾದ್ವಯಂ ಚ ಧರ್ಮಜ್ಞ ರೂಪೌದಾರ್ಯಗುಣಾನ್ವಿತಮ್ । ದದೌ ಪ್ರಸೂತಿಂ ದಕ್ಷಾಯ ಆಕೂತಿಂ ರುಚಯೇ ಪುರಾ ।। 19 ।। ಪ್ರಜಾಪತಿಸ್ಸ ಜಗ್ರಾಹ ತಯೋರ್ಜಜ್ಞೇ ಸದಕ್ಷಿಣಃ । ಪುತ್ರೋ ಯಜ್ಞೋ ಮಹಾಭಾಗ ದಮ್ಪತ್ಯೋರ್ಮಿಥುನಂ ತತಃ ।। 20 ।। ಯಜ್ಞಸ್ಯ ದಕ್ಷಿಣಾಯಾಂ ತು ಪುತ್ರಾ ದ್ವಾದಶ ಜಜ್ಞಿರೇ । ಯಾಮಾ ಇತಿ ಸಮಾಖ್ಯಾತಾ ದೇವಾಃ ಸ್ವಾಯಂಭುವೇ ಮನೌ ।। 21 ।।
ನಂತರ ಬ್ರಹ್ಮನು ತನ್ನಿಂದಲೇ ಉತ್ಪನ್ನನಾದ ಸ್ವಾಯಂಭುವ ಪ್ರಭು ಮನುವನ್ನು ಪ್ರಜಾಪತಿಯ ಅಧಿಕಾರದಲ್ಲಿ ನಿಯಮಿಸಿದನು. ಪ್ರಭು ಸ್ವಾಯಂಭುವ ಮನುವು ತಪಸ್ಸಿನಿಂದ ಪಾಪಕಲ್ಮಷಗಳನ್ನು ತೊಳೆದುಕೊಂಡಿದ್ದ ಶತರೂಪಾ ಎಂಬ ನಾರಿಯನ್ನು[1] ಪತ್ನಿಯನ್ನಾಗಿ ಸ್ವೀಕರಿಸಿದನು. ಆಗ ಪುರುಷನಿಂದ ಆ ದೇವಿಯಲ್ಲಿ ಸ್ವರೂಪರಾದ ನಾಲ್ವರು ಪುತ್ರರು ಜನಿಸಿದರು: ಪ್ರಿಯವ್ರತ, ಉತ್ತಾನಪಾದ, ಪ್ರಸೂತಿ ಮತ್ತು ಅಕೂತಿ. ಹಿಂದೆ ಪ್ರಸೂತಿಯನ್ನು ದಕ್ಷನಿಗೂ ಅಕೂತಿಯನ್ನು ರುಚನಿಗೂ ಕೊಟ್ಟರು. ಪ್ರಜಾಪತಿಯು ಸ್ವೀಕರಿಸಿದ ಶತರೂಪೆಯಲ್ಲಿ ಯಜ್ಞನೆಂಬ ಮಗನೂ, ದಕ್ಷಿಣೆಯೆಂಬ ಮಗಳೂ ಹುಟ್ಟಿದರು. ಅವರಿಬ್ಬರೂ ಗಂಡ-ಹೆಂಡಿರಾದರು. ಯಜ್ಞನಿಗೆ ದಕ್ಷಿಣೆಯಲ್ಲಿ ಹನ್ನೆರಡು ಪುತ್ರರು ಹುಟ್ಟಿದರು. ಇವರೆಲ್ಲರೂ ಯಾಮಾ ಎಂದು ಖ್ಯಾತರಾದ ದೇವತೆಗಳು – ಸ್ವಾಯಂಭುವ ಮನುವಿನ ಸಂತಾನಗಳು.
ಪ್ರಸೂತ್ಯಾಂ ಚ ತಥಾ ದಕ್ಷಶ್ಚತಸ್ರೋ ವಿಂಶತಿಂ ತಥಾ । ಸಸರ್ಜ ಕನ್ಯಾಸ್ತಾಸಾಂ ತು ಸಮ್ಯಙ್ನಾಮಾನಿ ಮೇ ಶೃಣು ।। 22 ।। ಶ್ರದ್ಧಾ ಲಕ್ಷ್ಮೀರ್ಧೃತಿಸ್ತುಷ್ಟಿರ್ಪುಷ್ಟಿರ್ಮೇಧಾ ಕ್ರಿಯಾ ತಥಾ । ಬುದ್ಧಿರ್ಲಜ್ಜಾ ವಪುಃ ಶಾಂತಿಃ ಸಿದ್ಧಿಃ ಕೀರ್ತಿಸ್ತ್ರಯೋದಶೀ ।। 23 ।। ಪತ್ನ್ಯರ್ಥಂ ಪ್ರತಿಜಗ್ರಾಹ ಧರ್ಮೋ ದಾಕ್ಷಾಯಣೀಃ ಪ್ರಭುಃ । ತಾಭ್ಯಃ ಶಿಷ್ಟಾ ಯವೀಯಸ್ಯ ಏಕಾದಶ ಸುಲೋಚನಾಃ ।। 24 ।। ಖ್ಯಾತಿಸ್ಸತ್ಯಥ ಸಂಭೂತಿಃ ಸ್ಮೃತಿಃ ಪ್ರೀತಿಃ ಕ್ಷಮಾ ತಥಾ । ಸನ್ನತಿಶ್ಚಾನಸೂಯಾ ಚ ಊರ್ಜಾ ಸ್ವಾಹಾ ಸ್ವಧಾ ತಥಾ ।। 25 ।। ಭೃಗುರ್ಭವೋ ಮರೀಚಿಶ್ಚ ತಥಾ ಚೈವಾಂಗಿರಾ ಮುನಿಃ । ಪುಲಸ್ತ್ಯಃ ಪುಲಹಶ್ಚೈವ ಕ್ರತುಶ್ಚರ್ಷಿವರಸ್ತಥಾ ।। 26 ।। ಅತ್ರಿರ್ವಸಿಷ್ಠೋ ವಹ್ನಿಶ್ಚ ಪಿತರಶ್ಚ ಯಥಾಕ್ರಮಮ್ । ಖ್ಯಾತ್ಯಾದ್ಯಾ ಜಗೃಹುಃ ಕನ್ಯಾ ಮುನಯೋ ಮುನಿಸತ್ತಮ ।। 27 ।।
ಪ್ರಸೂತಿಯಲ್ಲಿ ದಕ್ಷನಿಂದ ಇಪ್ಪತ್ನಾಲ್ಕು ಕನ್ಯೆಯರು ಹುಟ್ಟಿದರು. ಅವರ ಹೆಸರುಗಳನ್ನು ಕೇಳು. ಶ್ರದ್ಧಾ, ಲಕ್ಷ್ಮಿ, ಧೃತಿ, ಪುಷ್ಟಿ, ತುಷ್ಟಿ, ಮೇಧಾ, ಕ್ರಿಯಾ, ಬುದ್ಧಿ, ಲಜ್ಜಾ, ವಪು, ಶಾಂತಿ, ಸಿದ್ಧಿ, ಮತ್ತು ಹದಿಮೂರನೆಯವಳು ಕೀರ್ತಿ. ದಕ್ಷನ ಮಕ್ಕಳಾದ ಈ ಹದಿಮೂರು ದಾಕ್ಷಾಯಣಿಯರನ್ನು ಪ್ರಭು ಧರ್ಮನು ಪತ್ನಿಯರನ್ನಾಗಿ ಸ್ವೀಕರಿಸಿದನು. ಕಿರಿಯವಳಾದ ಕೀರ್ತಿಯಲ್ಲಿ ಹನ್ನೊಂದು ಸುಲೋಚನ ಕನ್ಯೆಯರು ಹುಟ್ಟಿದರು: ಖ್ಯಾತಿ, ಶಾಂತಿ, ಸಂಭೂತಿ, ಸ್ಮೃತಿ, ಪ್ರೀತಿ, ಕ್ಷಮಾ, ಸನ್ನತಿ, ಅನಸೂಯಾ, ಊರ್ಜಾ, ಸ್ವಾಹಾ ಮತ್ತು ಸ್ವಧಾ. ಮುನಿಸತ್ತಮ! ಋಷಿಶ್ರೇಷ್ಠರಾದ ಭೃಗು, ಭಗ, ಮರೀಚಿ, ಅಂಗೀರಸ ಮುನಿ, ಪುಲಸ್ತ್ಯ, ಪುಲಹ, ಕ್ರತು, ಅತ್ರಿ, ವಸಿಷ್ಠ, ವಹ್ನಿ ಮತ್ತು ಪಿತೃಗಳು – ಈ ಮುನಿಗಳು ಯಥಾಕ್ರಮವಾಗಿ ಖ್ಯಾತಿಯೇ ಮೊದಲಾದ ಕನ್ಯೆಯರನ್ನು ಪತ್ನಿಯರನ್ನಾಗಿ ಸ್ವೀಕರಿಸಿದರು.[2]
ಶ್ರದ್ಧಾ ಕಾಮಂ ಚಲಾ ದರ್ಪಂ ನಿಯಮಂ ಧೃತಿರಾತ್ಮಜಮ್ । ಸಂತೋಷಂ ಚ ತಥಾ ತುಷ್ಟಿರ್ಲೋಭಂ ಪುಷ್ಟಿರಸೂಯತ ।। 28 ।। ಮೇಧಾ ಶ್ರುತಂ ಕ್ರಿಯಾ ದಂಡಂ ನಯಂ ವಿನಯಮೇವ ಚ । ಬೋಧಂ ಬುದ್ಧಿಸ್ತಥಾ ಲಜ್ಜಾ ವಿನಯಂ ವಪುರಾತ್ಮಜಮ್ । ವ್ಯವಸಾಯಂ ಪ್ರಜಜ್ಞೇ ವೈ ಕ್ಷೇಮಂ ಶಾಂತಿರಸೂಯತ ।। 29 ।। ಸುಖಂ ಸಿದ್ಧಿರ್ಯಶಃ ಕೀರ್ತಿರಿತ್ಯೇತೇ ಧರ್ಮಸೂನವಃ ।
ಶ್ರದ್ಧೆಯಲ್ಲಿ ಕಾಮನೂ, ಲಕ್ಷ್ಮಿಯಲ್ಲಿ ದರ್ಪನೂ, ಧೃತಿಯಲ್ಲಿ ನಿಯಮನೂ, ತುಷ್ಟಿಯಲ್ಲಿ ಸಂತೋಷನೂ, ಪುಷ್ಟಿಯಲ್ಲಿ ಲೋಭನೂ ಹುಟ್ಟಿದರು. ಮೇಧೆಯು ಶ್ರೀಯನ್ನೂ, ಕ್ರಿಯೆಯು ಉತ್ತಮನೂ ವಿನಯಸಂಪನ್ನನೂ ಆದ ದಂಡನನ್ನೂ, ಬುದ್ಧಿಯು ಬೋಧನನ್ನೂ, ಲಜ್ಜೆಯು ವಿನಯನನ್ನೂ, ವಪುವು ವ್ಯವಸಾಯನೆಂಬ ಮಗನನ್ನೂ, ಶಾಂತಿಯು ಕ್ಷೇಮನನ್ನೂ, ಸಿದ್ಧಿಯು ಸುಖನನ್ನೂ, ಕೀರ್ತಿಯು ಯಶಸ್ಸನ್ನೂ ಪಡೆದರು. ಇವರೇ ಧರ್ಮನ ಪುತ್ರರು.
ಕಾಮಾದ್ರತಿಃ ಸುತಂ ಹರ್ಷಂ ಧರ್ಮಪೌತ್ರಮಸೂಯತ ।। 30 ।। ಹಿಂಸಾ ಭಾರ್ಯಾ ತ್ವಧರ್ಮಸ್ಯ ತಯೋರ್ಜಜ್ಞೇ ತಥಾನೃತಮ್ । ಕನ್ಯಾ ಚ ನಿಕೃತಿಸ್ತಾಭ್ಯಾಂ ಭಯಂ ನರಕಮೇವ ಚ ।। 31 ।। ಮಾಯಾ ಚ ವೇದನಾ ಚೈವ ಮಿಥುನಂ ತ್ವಿದಮೇತಯೋಃ । ತಯೋರ್ಜಜ್ಞೇಽಥ ವೈ ಮಾಯಾ ಮೃತ್ಯುಂ ಭೂತಾಪಹಾರಿಣಮ್ ।। 32 ।। ವೇದನಾ ಸ್ವಸುತಂ ಚಾಪಿ ದುಃಖಂ ಜಜ್ಞೇಽಥ ರೌರವಾತ್ । ಮೃತ್ಯೋರ್ವ್ಯಾಧಿಜರಾಶೋಕತೃಷ್ಣಾಕ್ರೋಧಾಶ್ಚ ಜಜ್ಞಿರೇ ।। 33 ।। ದುಃಖೋತ್ತರಾ ಸ್ಮೃತಾ ಹ್ಯೇತೇ ಸರ್ವೇ ಚಾಧರ್ಮಲಕ್ಷಣಾಃ । ನೈಷಾಂ ಭಾರ್ಯಾಸ್ತಿ ಪುತ್ರೋ ವಾ ತೇ ಸರ್ವೇ ಹ್ಯೂರ್ಧ್ವರೇತಸಃ ।। 34 ।। ರೌದ್ರಾಣ್ಯೇತಾನಿ ರೂಪಾಣಿ ವಿಷ್ಣೋರ್ಮುನಿವರಾತ್ಮಜ । ನಿತ್ಯಪ್ರಲಯಹೇತುತ್ವಂ ಜಗತೋಽಸ್ಯ ಪ್ರಯಾಂತಿ ವೈ ।। 35 ।।
ಕಾಮನು ರತಿಯಲ್ಲಿ ಹರ್ಷನೆಂಬ ಮಗನನ್ನು ಪಡೆದನು. ಇವನು ಧರ್ಮನ ಮೊಮ್ಮಗನು. ಅಧರ್ಮನಿಗೆ ಹಿಂಸೆಯು ಪತ್ನಿಯು. ಅವಳಲ್ಲಿ ಅನೃತನು ಹುಟ್ಟಿದನು. ಅಧರ್ಮನ ಪತ್ನಿ ಹಿಂಸೆಯಲ್ಲಿಯೇ ನಿಕೃತಿ ಎಂಬ ಕನ್ಯೆಯೂ, ಭಯ-ನರಕರೆಂಬ ಇನ್ನಿಬ್ಬರು ಪುತ್ರರೂ ಹುಟ್ಟಿದರು. ಇವರಿಗೆ ಕ್ರಮವಾಗಿ ಮಾಯಾ ಮತ್ತು ವೇದನಾ ಎನ್ನುವವರು ಪತ್ನಿಯರಾದರು. ನಂತರ ಭಯನಿಂದ ಮಾಯೆಯಲ್ಲಿ ಪ್ರಾಣಿಗಳನ್ನು ನಾಶಮಾಡುವ ಮೃತ್ಯುವು ಹುಟ್ಟಿದನು. ನರಕನಿಂದ ವೇದನೆಯು ರೌರವ ದುಃಖನೆನ್ನುವವನನ್ನು ಪಡೆದಳು. ಮೃತ್ಯುವಿಗೆ ವ್ಯಾಧಿ, ಜರಾ, ಶೋಕ, ತೃಷ್ಣಾ, ಮತ್ತು ಕ್ರೋಧ ಎಂಬ ಮಕ್ಕಳಾದರು. ಇವರೆಲ್ಲರೂ ದುಃಖವನ್ನು ಕೊಡುವವರು. ಅಧರ್ಮದ ಲಕ್ಷಣವುಳ್ಳವರು. ಮುನಿಪುತ್ರ! ಊರ್ಧ್ವರೇತಸರಾದ ಇವರಿಗೆ ಹೆಂಡತಿ-ಮಕ್ಕಳು ಯಾರೂ ಇಲ್ಲ. ಇವರೆಲ್ಲರೂ ಬ್ರಹ್ಮನ ರೌದ್ರರೂಪಗಳು. ಇವರು ನಿತ್ಯವೂ ಜಗತ್ತಿನ ಪ್ರಲಯಕ್ಕೆ ಕಾರಣರಾಗಿರುತ್ತಾರೆ.
ದಕ್ಷೋ ಮರೀಚಿರತ್ರಿಶ್ಚ ಭೃಗ್ವಾದ್ಯಾಶ್ಚ ಪ್ರಜೇಶ್ವರಾಃ । ಜಗತ್ಯತ್ರ ಮಹಾಭಾಗ ನಿತ್ಯಸರ್ಗಸ್ಯ ಹೇತವಃ ।। 36 ।। ಮನವೋ ಮನುಪುತ್ರಾಶ್ಚ ಭೂಪಾ ವೀರ್ಯಧನಾಶ್ಚ ಯೇ । ಸನ್ಮಾರ್ಗಾಭಿರತಾಃ ಶೂರಾಸ್ತೇ ನಿತ್ಯಸ್ಥಿತಿಕಾರಿಣಃ ।। 37 ।।
ಮಹಾಭಾಗ! ದಕ್ಷ, ಮರೀಚಿ, ಅತ್ರಿ, ಭೃಗು ಮೊದಲಾದ ಪ್ರಜೇಶ್ವರರು ಈ ಜಗತ್ತಿನಲ್ಲಿ ನಿತ್ಯಸೃಷ್ಟಿಗೆ ಕಾರಣರಾಗಿದ್ದಾರೆ. ಮನುಗಳೂ, ಮನುಪೂತ್ರರೂ, ವೀರ್ಯವೇ ಧನವಾಗಿರುವ, ಸನ್ಮಾರ್ಗದಲ್ಲಿ ನಡೆಯುವ, ಶೂರ ರಾಜರು ನಿತ್ಯಸ್ಥಿತಿಗೆ ಕಾರಣರಾಗಿದ್ದಾರೆ.”
ಮೈತ್ರೇಯ ಉವಾಚ । ಯೇ ಯಂ ನಿತ್ಯಸ್ಥಿತಿರ್ಬ್ರಹ್ಮನ್ನಿತ್ಯಸರ್ಗಸ್ತಥೇರಿತಃ । ನಿತ್ಯಾಭಾವಶ್ಚ ತೇಷಾಂ ವೈ ಸ್ವರೂಪಂ ಮಮ ಕಥ್ಯತಾಮ್ ।। 38 ।।
ಮೈತ್ರೇಯನು ಹೇಳಿದನು: “ಬ್ರಹ್ಮನ್! ನಿತ್ಯಸೃಷ್ಟಿ, ನಿತ್ಯಸ್ಥಿತಿ, ನಿತ್ಯ ಪ್ರಳಯ ಎಂದರೇನು? ಅವುಗಳ ಸ್ವರೂಪವನ್ನು ನನಗೆ ಹೇಳಬೇಕು.”
ಪರಾಶರ ಉವಾಚ । ಸರ್ಗಸ್ಥಿತಿವಿನಾಶಾಂಶ್ಚ ಭಗವಾನ್ಮಧುಸೂದನಃ । ತೈಸ್ತೈ ರೂಪೈರಚಿಂತ್ಯಾತ್ಮಾ ಕರೋತ್ಯವ್ಯಾಹತೋ ವಿಭುಃ ।। 39 ।। ನೈಮಿತ್ತಿಕಃ ಪ್ರಾಕೃತಿಕಸ್ತಥೈವಾತ್ಯಂತಿಕೋ ದ್ವಿಜ । ನಿತ್ಯಶ್ಚ ಸರ್ವಭೂತಾನಾಂ ಪ್ರಲಯೋಽಯಂ ಚತುರ್ವಿಧಃ ।। 40 ।। ಬ್ರಾಹ್ಮೋ ನೈಮಿತ್ತಿಕಸ್ತತ್ರ ಯಚ್ಛೇತೇ ಜಗತೀಪತಿಃ । ಪ್ರಯಾತಿ ಪ್ರಾಕೃತಶ್ಚೈವ ಬ್ರಹ್ಮಾಂಡಂ ಪ್ರಕೃತೌ ಲಯಮ್ ।। 41 ।। ಜ್ಞಾನಾದಾತ್ಯಂತಿಕಃ ಪ್ರೋಕ್ತೋ ಯೋಗಿನಃ ಪರಮಾತ್ಮನಿ । ನಿತ್ಯಸ್ಸದೈವ ಜಾತಾನಾಂ ಯೋ ವಿನಾಶೋ ದಿವಾನಿಶಮ್ ।। 42 ।।
ಪರಾಶರನು ಹೇಳಿದನು: “ಅಚಿಂತ್ಯಾತ್ಮನೂ ಸರ್ವವ್ಯಾಪಿಯೂ ಆಗಿರುವ ಭಗವಾನ್ ಮಧುಸೂದನನು ದಕ್ಷಾದಿ ರೂಪಗಳಿಂದ ಸೃಷ್ಟಿ-ಸ್ಥಿತಿ-ಸಂಹಾರಗಳನ್ನು ಮಾಡುತ್ತಾನೆ. ದ್ವಿಜ! ಸರ್ವ ಭೂತಗಳಿಗೂ ನೈಮಿತ್ತಕ, ಪ್ರಾಕೃತಿಕ, ಆತ್ಯಂತಿಕ ಮತ್ತು ನಿತ್ಯ ಎಂಬ ನಾಲು ವಿಧದ ಪ್ರಳಯಗಳಿವೆ. ಜಗತ್ಪತಿ ಬ್ರಹ್ಮನು ತನ್ನ ರಾತ್ರಿಯಲ್ಲಿ ನಿದ್ದೆಮಾಡುವ ಕಾಲವನ್ನು ನೈಮಿತ್ತಿಕ[3] ಪ್ರಳಯವೆಂದೂ, ಬ್ರಹ್ಮಾಂಡವು ಪ್ರಕೃತಿಯಲ್ಲಿ ಲಯವಾಗಿರುವ ಕಾಲವನ್ನು ಪ್ರಾಕೃತಪ್ರಳಯವೆಂದೂ, ಯೋಗಿಗಳು ಜ್ಞಾನಪ್ರಾಪ್ತಿಯಿಂದ ಪರಮಾತ್ಮನಲ್ಲಿ ಐಕ್ಯವಾಗುವುದನ್ನು ಆತ್ಯಂತಿಕ ಪ್ರಳಯವೆಂದೂ, ಹುಟ್ಟಿದ ಪ್ರಾಣಿಗಳು ಹಗಲೂ-ರಾತ್ರಿಯೂ ನಾಶವಾಗುವುದು ನಿತ್ಯಪ್ರಳಯವೆಂದೂ ಹೇಳುತ್ತಾರೆ.
ಪ್ರಸೂತಿಃ ಪ್ರಕೃತೇರ್ಯಾತು ಸಾ ಸೃಷ್ಟಿಃ ಪ್ರಾಕೃತಾ ಸ್ಮೃತಾ । ದೈನಂದಿನೀ ತಥಾ ಪ್ರೋಕ್ತಾ ಯಾಂತರಪ್ರಲಯಾದನು ।। 43 ।। ಭೂತಾನ್ಯನುದಿನಂ ಯತ್ರ ಜಾಯಂತೇ ಮುನಿಸತ್ತಮ । ನಿತ್ಯಸರ್ಗೋ ಹಿ ಸ ಪ್ರೋಕ್ತಃ ಪುರಾಣಾರ್ಥವಿಚಕ್ಷಣೈಃ ।। 44 ।।
ಪ್ರಕೃತಿಯಿಂದ ಮಹತ್ತತ್ತ್ವವೇ ಮೊದಲಾದವುಗಳ ಸೃಷ್ಟಿಯು ಪ್ರಾಕೃತ ಸೃಷ್ಟಿಯು. ಬ್ರಹ್ಮನ ಹಗಲಿನ ಕೊನೆಯಲ್ಲಿ ಅವಾಂತರ ಪ್ರಳಯವಾದ ನಂತರ ಮತ್ತೆ ಹಗಲಿನ ಪ್ರಾರಂಭದಲ್ಲಿ ಆಗುವ ಸೃಷ್ಟಿಯು ದೈನಂದಿನ ಸೃಷ್ಟಿಯು. ಮುನಿಸತ್ತಮ! ಅನುದಿನವೂ ಭೂತಗಳು ಹುಟ್ಟುವುದು ನಿತ್ಯಸರ್ಗ ಎಂದು ಪುರಾಣಾರ್ಥಗಳನ್ನು ತಿಳಿದವರು ಹೇಳುತ್ತಾರೆ. ಹೀಗೆ ಸೃಷ್ಟಿಯು ಮೂರು ಬಗೆಯಾಗಿದೆ.
ಏವಂ ಸರ್ವಶರೀರೇಷು ಭಗವಾನ್ ಭೂತಭಾವನಃ । ಸಂಸ್ಥಿತಃ ಕುರುತೇ ವಿಷ್ಣುರುತ್ಪತ್ತಿಸ್ಥಿತಿಸಂಯಮಾನ್ ।। 45 ।। ಸೃಷ್ಟಿಸ್ಥಿತಿವಿನಾಶಾನಾಂ ಶಕ್ತಯಃ ಸರ್ವದೇಹಿಷು । ವೈಷ್ಣವ್ಯಃ ಪರಿವರ್ತಂತೇ ಮೈತ್ರೇಯಾಹರ್ನಿಶಂ ಸಮಾಃ ।। 46 ।। ಗುಣತ್ರಯಮಯಂ ಹ್ಯೇತದ್ಬ್ರಹ್ಮನ್ ಶಕ್ತಿತ್ರಯಂ ಮಹತ್ । ಯೋಽತಿಯಾತಿ ಸ ಯಾತ್ಯೇವ ಪರಂ ನಾವರ್ತತೇ ಪುನಃ ।। 47 ।।
ಹೀಗೆ ಭಗವಾನ್ ಭೂತಭಾವನ ವಿಷ್ಣುವು ಸರ್ವಶರೀರಗಳಲ್ಲಿ ಇದ್ದುಕೊಂಡು ಉತ್ಪತ್ತಿ-ಸ್ಥಿತಿ-ಸಂಹಾರಗಳನ್ನು ಮಾಡುತ್ತಾನೆ. ಮೈತ್ರೇಯ! ವಿಷ್ಣುವಿನ ಸೃಷ್ಟಿ-ಸ್ಥಿತಿ-ಸಂಹಾರ ಶಕ್ತಿಗಳು ಸರ್ವದೇಹಿಗಳಲ್ಲಿಯೂ ಹಗಲೂ-ರಾತ್ರಿ ಯಾವಾಗಲೂ ಸಂಚರಿಸುತ್ತಿರುತ್ತವೆ. ಬ್ರಹ್ಮನ್! ಗುಣತ್ರಯಾತ್ಮಕವಾದ ಈ ಮೂರು ಶಕ್ತಿಗಳನ್ನು ಯಾರು ಅತಿಕ್ರಮಿಸುತ್ತಾನೋ ಅವನು ಪರಬ್ರಹ್ಮನಲ್ಲಿ ಐಕ್ಯನಾಗುತ್ತಾನೆ. ಅವನಿಗೆ ಪುನರ್ಜನ್ಮವಿರುವುದಿಲ್ಲ.”
ಇತಿ ಶ್ರೀವಿಷ್ಣುಪುರಾಣೇ ಪ್ರಥಮಾಂಶೇ ಸಪ್ತಮೋಽಧ್ಯಾಯಃ ।।
ಇದು ಶ್ರೀವಿಷ್ಣುಪುರಾಣದಲ್ಲಿ ಪ್ರಥಮಾಂಶದಲ್ಲಿ ಏಳನೇ ಅಧ್ಯಾಯವು.
[1] ರುದ್ರನು ಸೃಷ್ಟಿಸಿದ ನಾರಿಯರಲ್ಲಿ ಶತರೂಪೆಯೂ ಒಬ್ಬಳೇ?
[2] ಖ್ಯಾತಿ-ಭೃಗು, ಶಾಂತಿ-ಭಗ, ಸಂಭೂತಿ-ಮರೀಚಿ, ಸ್ಮೃತಿ-ಅಂಗಿರಸ, ಪ್ರೀತಿ-ಪುಲಸ್ತ್ಯ, ಕ್ಷಮಾ-ಪುಲಹ, ಸನ್ನತಿ-ಕ್ರತು, ಅನಸೂಯ-ಅತ್ರಿ, ಊರ್ಜಾ-ವಸಿಷ್ಠ, ಸ್ವಾಹಾ-ಅಗ್ನಿ, ಮತ್ತು ಸ್ವಧಾ-ಪಿತೃಗಳು.
[3] ಇದಕ್ಕೆ ಆವಾಂತರ ಪ್ರಳಯ ಎಂಬ ಹೆಸರೂ ಇದೆ.